ತನ್ನ ವಾದ್ಯದ ಇತಿಹಾಸ ಹೇಳುವಾಗ ಅವರ ಕಣ್ಣಲ್ಲಿ ಭಾವುಕತೆ ಹಾಗೂ ತನ್ಮಯತೆ ಇತ್ತು. ಮುಳುಗುವ ಗುಣ ಇಲ್ಲದಿದ್ದರೆ ತಾಳ ಮೇಳದಲ್ಲಿ ಹೊಂದಾಣಿಕೆ ಇರಲು ಸಾಧ್ಯ ಇರೋದಿಲ್ಲ. ಅವರು ತಮಟೆ ನೆಲಕ್ಕೆ ಇಡುವಾಗಿನ ಅವರ ಬೆರಳಿನ ನವಿರು, ಮುಟ್ಟಿ ತೋರುವಾಗ ಕಲಾಕಾರನ ಹೆಮ್ಮೆ ತುಂಬಿ ತುಳುಕುತಿತ್ತು. ಮುತ್ತಾತನ ಕಾಲದಿಂದಲೂ ಇರುವ ಅರ್ಧ ಎಕರೆ ನೆಲ ಕೆರೆದು ಬೀಜ ಬಿತ್ತನೆ ಮಾಡುವುದನ್ನ ಬಿಟ್ಟರೆ ಈ ಕಾಯಕ ನಮ್ಮನ್ನು, ನಮ್ಮ ಕಲೆಯನ್ನು ಈ ಭೂಮಿ ಮೇಲೆ ನೆಲೆಯಾಗಿ ಉಳಿಸಿದೆ.
ಸುಜಾತಾ ತಿರುಗಾಟ ಕಥನ

 

ನಾಗೇಗೌಡರ ಕನಸು ಜಾನಪದ ಲೋಕದ ಒಳಗೆ ಆಗಾಗ ಭೇಟಿ ಕೊಡುವ ಚಟವಿದೆ ನಮಗೆ. ಬದುಕಿದ್ದಾಗ ಆಗಾಗ ನಮ್ಮೂರಿನಲ್ಲಿ ಬಂದುಳಿಯುತ್ತಿದ್ದ ಅವರು ಜಾನಪದದ ಅಭಿರುಚಿಯ ಬೀಜವನ್ನು ನಮ್ಮ ಕುಟುಂಬದಲ್ಲಿ ಬಿತ್ತಿ ಹೋದರೆಂದರೆ ಸುಳ್ಳಾಗಲಾರದು. ಅದರ ಗಟ್ಟಿತನವನ್ನು ಹಳ್ಳಿಗಳ ಸಾರವನ್ನು ಪರಿಚಯಿಸಿದ ಆ ದೊಡ್ಡ ಜೀವಕ್ಕೆ ಶರಣು.

ಹೀಗೆ ಒಂದು ದಿನ ಜಾನಪದ ಲೋಕದ ಒಳ ಹೋದಾಗ ನಮ್ಮ ತಮಟೆ ಕರಿಯಪ್ಪನವರು ಅವರ ಜೀವನದ ಕಥೆಯ ವಿವರವನ್ನು ಹೇಳತೊಡಗಿದಾಗ ಅದು ನನ್ನ ನೆನಪುಗಳೊಂದಿಗೆ ದಾಖಲಾಗುತ್ತಾ ಹೋಯಿತು.

ಆಜ್ಜಯ್ಯ ಸತ್ತು ಮಲಗಿದ್ದಾರೆ. ಹಿರೀ ಜೀವ ನೆಲಕ್ಕುರುಳಿದೆ. ತಳವಾರ, ಕುಳುವಾಡಿಗಳು ಬಂದು ನಿಂತರು. ಅಡ್ಡ ಪಂಚೆ. ತಲೆಗೊಂದು ವಸ್ತ್ರ, ಹೆಗಲ ಮೇಲೊಂದು ಕಂಬಳಿ. ಕೈಯ್ಯಲೊಂದು ಉದ್ದದ ಗಟ್ಟಿಮುಟ್ಟಾದ ದೊಣ್ಣೆ. ಇದು ಕುಳುವಾಡಿಗಳ ದಿರಿಸಿನ ರಿವಾಜು. ಸುದ್ದಿ ತಿಳಿದು ಬಂದು ಬಂದವರೇ ತಮಟೆ ಹೆಗಲಿಗೆ ಹಾಕಿ ಎದೆಯ ಮೇಲೆ ಅದನ್ನು ಒರಗಿಸಿಕೊಂಡು ತಮ್ಮ ಎದೆ ಬಡಿತದ ಸದ್ದಂತೆ ಅದನ್ನು ನುಡಿಸಹತ್ತಿದರು. ತಮಟೆ ಸದ್ದಿಗೆ ಊರು ಎಚ್ಚೆತ್ತು ಕಣ್ಣುಬಿಟ್ಟು ಮುಂದಿನ ಕೆಲಸಕ್ಕೆ ಅಣಿಯಾಗತೊಡಗಿತು. ಮಕ್ಕಳು ಸದ್ದಿನ ಹಿಂದೆ ಮೆರವಣಿಗೆ ಹೊರಟರು.

ತಮಟೆ ನುಡಿ ಎನ್ನುವುದು ಊರಿನ ಎಚ್ಚರಿಕೆಯ ದನಿ. ಅದು ಊರ ಎದೆಬಡಿತ. ಮೂವತ್ತು ನಲವತ್ತು ವರುಷದ ಹಿಂದಿನ ಈ ಜಗತ್ತು ಇಂದು ಸಂಪೂರ್ಣ ಕಣ್ಮರೆ ಆಗಿ ಹೋಗಿದೆ. ಈ ನೋಟ ಇಂದು ಜಾನಪದ ಸಂಗತಿಗಳ ಹಾಗೂ ಬಡದೇವರುಗಳ ಹಾಗೂ ಕೆಳವರ್ಗದ ಸಾವುಗಳಲ್ಲಿ, ಹಾಗೂ ದುಡ್ಡಿರುವ ದೊಡ್ಡಪ್ಪರ ಮೆರವಣಿಗೆಗಳಲ್ಲಿ ಮಾತ್ರ ಕಾಣಸಿಗುತ್ತದೆ.

ಸಾವು, ನೋವು, ನ್ಯಾಯ, ಜಗಳ, ದೇವರ ನಡೆ, ಆಗಂತುಕರ ದಾಳಿ, ಅತಿಥಿಗಳ ಆಗಮನ, ಮದುವೆ ಮುಂಜಿ, ಎಲ್ಲದರಲ್ಲೂ ಇದರ ದನಿ ನುಡಿದ ಮೇಲೆಯೇ ಗ್ರಾಮ ಅದರ ಹಿಂದೆ ಸಾಗುತಿತ್ತು. ಇದೊಂದು ಸಾಮೂಹಿಕ ಪ್ರಜ್ಞೆ. ದೇವರ ಗುಡಿಯಲ್ಲಿ ಇಷ್ಟದೇವರು ಅಥವ ಮೂಲ ದೇವರ ಮುಂದೆ ದೀಪ ಹಚ್ಚಿಟ್ಟು, ಮೆರೆಯೋ ದೇವರ ಮೆರವಣಿಗೆ ಅಥವಾ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಹೊತ್ತು ಸಾಗುವ ಜನರಂತೆ ಇದರ ನಡೆ. ಹಬ್ಬ ಹರಿದಿನಗಳಲ್ಲಿ… ತಟ್ಟನೆರಗುವ ವಿದ್ಯಮಾನಗಳಲ್ಲಿ…. ಇಂದಿನ ಟೆಲಿವಿಷನ್ ಮಾಧ್ಯಮದಂತೆ ತಮಟೆ ಎನ್ನುವುದು ನುಡಿದು ಸುತ್ತಮುತ್ತದವರನ್ನು ತಲುಪಿ ಬಡಿದೆಬ್ಬಿಸುತಿತ್ತು.

ಸಾಮೂಹಿಕ ನುಡಿಗಳನ್ನು ತನ್ನ ಎದೆಬಡಿತದಲ್ಲಿ ನುಡಿದು ಎಲ್ಲರನ್ನೂ ಕರೆಯುತ್ತಿದ್ದ ತಮಟೆ ಎನ್ನುವ ಈ ಚರ್ಮವಾದ್ಯವನ್ನು ನುಡಿಸುವವರು ಇಂದಿಗೂ ಕೆಳಸ್ತರದ ಜನಗಳೇ. ಜಾತೀ ಕಾರಣಗಳು… ವಾದ್ಯಗಳನ್ನೂ ಹಂಚಿಕೊಂಡುಬಿಟ್ಟಿವೆ. ತಮಟೆ ಹಾಗೂ ಜೋರಾಗಿ ಮೊಳಗುವಂಥ ವಾದ್ಯಗಳು ನಮ್ಮ ಹಳ್ಳಿಗರ ಒರಟು ಕೈಗಳಲ್ಲಿ ಮೊಳಗಿದರೆ ತಬಲ ಮೃದಂಗಗಳು ಮೇಲ್ವರ್ಗದ ನಾಜೂಕು ಜನರ ಕೈಲಾಡುತ್ತವೆ. ನಾಜೂಕಿನ ವಾದ್ಯಗಳು ಸ್ವರ ಸ್ಥಾಯೀ ಭಾವಗಳನ್ನು ಕೇಳಿದರೆ ಜನಪದ ಚರ್ಮವಾದ್ಯಗಳೆಂದು ಗುರುತಿಸಿಕೊಳ್ಳುವ ಹಳ್ಳಿಗರ ಅಥವಾ ಕೆಳವರ್ಗದವರ ವಾದ್ಯಗಳು ಕೇವಲ ಅನುಭವದಿಂದ, ಕುಣಿಯುವವರ ಹೊಂದಾಣಿಕೆಯಿಂದ ಅಂತೆಯೇ ಕಲೆಗಾರರ ತನ್ಮಯತೆಯನ್ನು ಮಾತ್ರ ಬೇಡಿ ನುಡಿಯುತ್ತವೆ.

ಇಂದಿಗೂ ಇವು ಸಮೂಹವನ್ನು ಜೊತೆಗೇ ಕೊಂಡೊಯ್ಯುತ್ತಿವೆ ಎನ್ನುವುದು ಎಲ್ಲರೂ ಗಮನಿಸಬೇಕಾದ ಅಂಶ. ಇಲ್ಲಿ ತಾಳಮೇಳದ ಗುಂಪು ಒಡೆದು ಎಂದಿಗೂ ವೈಯಕ್ತಿಕವಾಗಲಿಲ್ಲ ಎನ್ನುವುದು ಇಂಥ ವಾದ್ಯಗಳ ಹೆಚ್ಚುಗಾರಿಕೆಯೇ ಆಗಿದೆ. ಬಹುತ್ವವನ್ನು ಏಕ ರೂಪದಲ್ಲಿ ಕೊಂಡೊಯ್ಯವುದೇ ಜಗತ್ತಿನ ಕಲೆಗಾರಿಕೆ. ಏಕ ರೂಪದ ವಿಶಿಷ್ಟತೆಯನ್ನು ಬಹುತ್ವದಲ್ಲಿ ಕಾಪಾಡಿಕೊಂಡದ್ದು ಕೂಡ ಕಲೆಗಾರಿಕೆಯೇ. ಆದರೆ… ಒಡೆದು ಆಳುವ ನೀತಿ, ಶ್ರೇಷ್ಠತೆಯ ವ್ಯಸನವನ್ನು ಗಮನಿಸಿ ಜಾತಿ ಕುಲಗಳನ್ನು ಮಾಡಿ ವೈಯಕ್ತಿಕ ಹಿತಾಸಕ್ತಿಯನ್ನು ತಣಿಸಲು ಇಂದು ವೈಯಕ್ತಿಕ ಪ್ರದರ್ಶನಗಳನ್ನು ಹೆಚ್ಚಿಸಿವೆ. ಇದು ಇತ್ತೀಚಿನ ಹುನ್ನಾರದ ವಿದ್ಯಮಾನ. ಹಿಂದಿನಿಂದಲೂ ಹಾಡುಹಸೆ, ಕುಣಿತ ಮೆರೆತಗಳು ಒಬ್ಬರನ್ನೊಬ್ಬರು ಹಬ್ಬಿಕೊಂಡೇ ಇದ್ದವು. ಇದರಿಂದ ಆಯಾ ಬುಡಕಟ್ಟಿನ ಸಂತೋಷದಲ್ಲಿ ಎಲ್ಲರೂ ಪಾಲುದಾರರಾಗಿ, ವ್ಯಸನಗಳು ಎಲ್ಲರೊಂದಿಗೆ ಹಂಚಿಹೋಗುತ್ತಿದ್ದವು. ಒಡನಾಟದಲ್ಲಿ ಮನಸ್ಸು ಗಟ್ಟಿಯಾಗುತ್ತಿತ್ತು. ಕಲೆ ತನ್ನನ್ನು ತಾನು ಗುಂಪಲ್ಲಿ ಗುರುತಿಸಿಕೊಳ್ಳುತ್ತ ಕಲೆಯುತ್ತ ಕಲೆಯಾಗುತಿತ್ತು.

ಸ್ವರ ಪ್ರಜ್ಞೆಯ ಜನರ ವಾದ್ಯಗಳು ತಮ್ಮ ಪಕ್ಕ ವಾದ್ಯಗಳನ್ನು ಸ್ವರದಲ್ಲಿ ಒಗ್ಗಿದಂತೆಯೇ ತಮಟೆ ವಾದ್ಯಗಳೂ ತಮ್ಮ ಪಕ್ಕವಾದ್ಯಗಳಿಗೆ ತಮ್ಮ ಮಟ್ಟುಗಳನ್ನು ಹಿಡಿದು ಸ್ಪಂದಿಸುತ್ತವೆ. ಸರಸೋತಿ ನುಡಿತಾಳೆ ಎಂಬ ಭಯ ಭಕ್ತಿಯ ನುಡಿ ಇವರದ್ದೂ ಕೂಡ. ಇಂಥ ಸರಸೋತಿಯ ನುಡಿಯನ್ನು ನುಡಿಸುತ್ತಾ… ತಮ್ಮ ಸಮೂಹದ ಇಷ್ಟಾನಿಷ್ಟ ಕಾರ್ಯಗಳ ಮುಂದೆ ಮುಗ್ಧವಾಗಿ ಸಾಗಿ ಹೋಗುವ ತಮ್ಮಟೆ ನುಡಿಯಲ್ಲಿ…. ಸರಸೊತಿಯನ್ನು ಇವರು ತಮ್ಮ ದುಡಿಗೆ ಹೇಗೆ ಕರೆತರುತ್ತಾರೆ ಎನ್ನುವುದನ್ನು ಅವರ ಅನುಭವದ ಮೂಲಕ ಕಂಡುಕೊಳ್ಳೋಣ.

ಈ ಮಾಹಿತಿಯನ್ನು ತಮಟೆ ಕಲಾವಿದರ ಮೂಲಕ ಪಡೆದಿದ್ದು, ಇದರಿಂದ ಮಾನವನ ಆವಿಷ್ಕಾರಗಳು ಹೇಗೆ ಹುಟ್ಟಿಕೊಂಡು ಹಾಗೆಯೇ…. ರಕ್ತದಲ್ಲಿ ಕರಗತವಾಗುತ್ತವೆ ಅಂತೆಯೇ ಜನಸಮೂಹದಲ್ಲಿ ಹಾಗೂ ಅವರ ಬದುಕಲ್ಲಿ ಎಂತು ವಿಸ್ತರಣೆಗೊಳ್ಳುತ್ತವೆ ಎಂಬುದು ಒಂದು ವಿಸ್ಮಯದ ಹಾಗೂ ಗಟ್ಟಿಯಾದ ಹೆಜ್ಜೆ ಮೂಡಿದ ಹಾದಿ.

ಕೆಳಸ್ತರವೆಂದು ಜಾತಿವಿಂಗಡಣೆಯಲ್ಲಿ ಇವರನ್ನು ಗುರುತಿಸಿದರೂ ದ್ರಾವಿಡ ನೆಲಮೂಲ ನಿವಾಸಿಗಳಾಗಿರುವ ಇವರ ಬಳಿ ಒಂದೊಂದಕ್ಕೂ ಒಂದು ಜಾನಪದ ಕಥೆಯಿದೆ. ಮೂಲನಿವಾಸಿಗಳು ಕೆಳವರ್ಗದವರೆಂದು ವಿಂಗಡಣೆಯಾದದ್ದೂ ಅಲ್ಲದೆ, ಅದರೊಳಗೂ ಒಂದು ವಿಂಗಡಣೆಯ ಗೆರೆ ಹೇಗೆ ಮೂಡಿತು ಎಂಬುದನ್ನು ತಮಟೆ ಕರಿಯಪ್ಪ ಅವರ ಬಾಯಲ್ಲೇ ಕೇಳೋಣ:

“ನಮ್ಮ ನೆಲದ ಜನರು ನೋಡಿ; ಪ್ರತಿಯೊಂದು ವಾದ್ಯ ನುಡಿಸೋದ್ರಲ್ಲೂ ಎತ್ತಿದ ಕೈ. ಇಂಥದ್ದು ಬರೊದಿಲ್ಲ ಅನ್ನದು ಅವರಿಗೆ ಗೊತ್ತಿರ್ನಿಲ್ಲ. ಡೊಳ್ಳು, ನಗಾರಿ, ತಮಟೆ, ದಮ್ಮಡಿ ಹಿಂಗೆ ಪ್ರತಿ ಒಂದೂವೆ…. ಒಂದ್ಸಲ ಏನಾಯ್ತು? ಒಡ್ಡೋಲಗ ನಡಿತಿತ್ತು. ಅಂಥದ್ರಲ್ಲಿ ದೇವೇಂದ್ರನ ಒಡ್ಡೋಲಗವ ನುಡಿಸೋ ಜನವೂ ನಮ್ಮೋರೆ. ಎಲ್ಲ ಒಟ್ಟಿಗೆ ಹೋಯ್ತಿದ್ರಂತೆ. ಇವ್ರು ಪ್ರತಿ ಒಂದು ಸರಕನೂ ಹೊತ್ಕಂದು ತಕಹೋಯ್ತಿದ್ರಂತೆ ಅಲ್ಲಿಗೆ ಯಾಕಂದ್ರೆ, ದೇವೇಂದ್ರ ಕೇಳುದ್ದುನ್ನೆ ನುಡುಸ್ಬೇಕಲ್ಲ! ಆಗ ಏನಾಯ್ತು? ಇದೇನಪ್ಪ! ಇವ್ರು, ಹಿಂಗೆ ಈ ಪಾಟಿ ಸರಕ ಹೊತ್ಕಂಬತ್ತ ಕೂತವ್ರಲ್ಲ ಅಂಥವ, ದೇವೇಂದ್ರನ ಆಳು….

“ಇದೇನ್ರಾ? ಈ ಪಾಟಿ ಸರಕು” ಅಂತವ ಮೂಗಿನ ಮೇಲೆ ಬೆರಳಿಟ್ಕಂಡು ಕೇಳುದನಂತೆ…. ನಮ್ಮೋನು “ಸ್ವಾಮೀ ನಾವು ನೂರೊಂದು ಆಯುದ್ಧೋರು ಸ್ವಾಮಿ” ಅಂಥ ಹೇಳುದನಂತೆ. “ತಡೆಯಪ್ಪಾ ವಸಿಯ….. ಅಲ್ಲಿ ಈ ನೂರೊಂದು ಆಯುಧವಾ ಇಡಕ್ಕೆ ತಾವಿಲ್ಲ. ಅಲ್ಲೇ ಹತ್ತು ನಿಮಿಷ ನಿಂತ್ಕಳಪ್ಪ” ಅಂತಂದ್ರು.

ಇವ್ರು ಹೊತ್ಕಹೋದೋರು, ಎಡಚರಕ್ಕೆ ಅಷ್ಟು ಜನ, ಬಲಚರಕ್ಕೆ ಅಷ್ಟು ಜನ ಹತಾರ ಹಿಡ್ಕಂದು ನಿಂತ್ಕಂದ್ರು. ಇದೆಲ್ಲನೂ ಬಲ್ಲಂಥ ಕಲಗಾರ್ರೇ ಅಲ್ವೇ ಇವ್ರು? ಪ್ರತಿ ಒಂದ್ ಪದಾರ್ಥನೂ ಪ್ರತಿಯೊಬ್ರೂ ನುಡ್ಸದ ಕಲ್ತಿರೋರೆ. ಆಗ ದೇವೆಂದ್ರ ಬಂದೋನು ಎಡಚರಕ್ಕೆ ಇರರ ಎಡಗೈನೋರು ಬನ್ನಿ, ಬಲಚರಕ್ಕೆ ಇರೋರ ಬಲಗೈನರು ಬನ್ನಿ, ಅಂತ ಕರ್ದುಬಿಟ್ಟ. ಇಬ್ರೂ ಕಲೆಗಾರ್ರರೇ ಇವತ್ಗೂವೆ. ನಡುವೆ ಭೇದಭಾವ ಏನೂ ಇಲ್ಲ. ಹಾರ್ಮೋನಿಯಂ ತಾವಿಂದ, ನಗಾರಿ, ಕಾಳೆ, ಕಂಜರದ ತಾವಿಂದ ಇಂಥದ್ದು ಬರದಿಲ್ಲ ಅನ್ನಂಗಿಲ್ಲ.

ಶಿವನ್ನ ಆರಾಧ್ಯ ತಾವಿಂದ ಹಿಡದು ಅವ್ನಿಗ ಸಂಬಂಧಪಟ್ಟದ್ದು, ನಾರಾಯಣಂಗೆ ಸಂಬಂಧಪಟ್ಟದ್ದು, ಬ್ರಹ್ಮಂಗೆ ಸಂಬಂಧಪಟ್ಟದ್ದು, ಯಾರ್ಯಾರಿಗೆ ಏನೇನು ನುಡುಸ್ಬೇಕು?ಅನ್ನೋ ಲೆಕ್ಕಾಚಾರೆಲ್ಲ ಇಬ್ರೀಗೂ ತಿಳದದೆ. ಈಗ ಸರಕಾರೀ ಸವಲತ್ತಿಗೆ ಸಲುವಾಗಿ ಇಬ್ಬಗೆ ಇನ್ನೂ ಹೆಚ್ಚಾಗೇ ಹುಟ್ಕಂಬುಡತು ಅನ್ನಿ.

ಹಿಂಗೆ ಸರಳವಾಗಿ ಜಾತಿ ಇಬ್ಭಾಗದ ಪುರಾಣವನ್ನು ತನ್ನ ಕಳ್ಳುಬಳ್ಳಿಯ ಮಮತೆಯ ಕಕ್ಕುಲ್ಲಾತಿಯ ಕಥೆಯೊಂದಿಗೆ ನಮ್ಮಿಬ್ಬರಿಗೂ ಭೇದವಿಲ್ಲ ಎಂದು ತಿಳುವಳಿಕೆ ಮೂಡಿಸಿ ಮುಗಿಸಿದರು.

ಚಿಕ್ಕನರಸಯ್ಯನವರ ತಮ್ಮಟೆ ವಾದ್ಯದ ಹಿನ್ನೆಲೆ; ಅವರ ಮಾತಿನ ವರಸೆಯಲ್ಲಿ…..

ಇವರ ಊರು ರಾಮನಗರ ಜಿಲ್ಲೆಯ ಢಣಾಯಕನಪುರ. ಊರಿನಲ್ಲಿ ತಮಟೆ ಕರಿಯಪ್ಪ ಅನ್ನುವ ಅನ್ವರ್ಥನಾಮ. ಇವರು ಕಾಲಕಾಲದಿಂದಲೂ ತೋಟಿ ತಳವಾರರಾಗಿ ಊರಿನಲ್ಲಿ ನೆಲೆಸಿದವರು. ಅವರೇ ಹೇಳುವಂತೆ ಅವರ ತಾತ ಕಂಚಿ ವರದಯ್ಯ, ಅಪ್ಪ ಬಳ್ಳೆ ವರದಯ್ಯ. ೧೯೬೨ರಲ್ಲಿ ಇಂದಿರಗಾಂಧಿ ಇನ್ನೂ ಗದ್ದಿಗೆ ಏರಕ್ಕೆ ಮುಂದಲೆ ಅವ್ರ ಮುಂದೆ ನುಡ್ಸಿ ಫೋಟೊ ತೆಗುಸ್ಕಬಂದೋರು ಅವ್ರು. ಅದೂ ಡೆಲ್ಲಿ ವಳಗೆ.

ಅವ್ರು ತಲೆಗೆ ಮುಂಡಾಸು ಸುತ್ತಿ ಕಂಬಳಿ ಹೊದ್ದು, ಕಚ್ಚೆ ಕಟ್ಟಿ ಊರಿಗೆ ಮುಂಚಿನ ತಲೆಬಾಗಿಲಲ್ಲಿ ಅಮಲ್ದಾರರನ್ನು ಕಾಯ್ದು…. ಕರೆತರಕೆ ಅಣಿಯಾಗರು. ಇವರ ಕಯ್ಯಲ್ಲಿನ ದಂಡಕ್ಕೆ ಊರ ಮಕ್ಕಳು ದೂರದಿಂದಲೇ ಬಯಬಿದ್ದು ಹೋಗಬುಡರು. ಹಿಂಗೆ ತಲೆತಲೆಯಿಂದ ಊರುಸ್ತುವಾರಿ, ಜೊತೆಗೆ ಊರನ್ನು ಎಚ್ಚರಿಸಿ ಕಾಪಾಡುವ ಕೆಲಸವೂ ಇವರದ್ದೇ ಆಗಿತ್ತು. ಅದನ್ನು ಸಾರುತಿದ್ದುದು ಇವರ ತಮಟೆ ವಾದ್ಯ. ಐದನೇ ತಲೆಮಾರಿನಿಂದ ವಂಶಪರಂಪರೆಯ ಕಲೆಯನ್ನು ಇವರು, ತಮ್ಮ ಜೀವನ ವಿಧಾನವಾಗಿ ಇಂದಿಗೂ ಕಾಪಾಡಿಕೊಂಡು ಬಂದವರು.

ತಾಳಮೇಳದ ಗುಂಪು ಒಡೆದು ಎಂದಿಗೂ ವೈಯಕ್ತಿಕವಾಗಲಿಲ್ಲ ಎನ್ನುವುದು ಇಂಥ ವಾದ್ಯಗಳ ಹೆಚ್ಚುಗಾರಿಕೆಯೇ ಆಗಿದೆ. ಬಹುತ್ವವನ್ನು ಏಕ ರೂಪದಲ್ಲಿ ಕೊಂಡೊಯ್ಯವುದೇ ಜಗತ್ತಿನ ಕಲೆಗಾರಿಕೆ. ಏಕ ರೂಪದ ವಿಶಿಷ್ಟತೆಯನ್ನು ಬಹುತ್ವದಲ್ಲಿ ಕಾಪಾಡಿಕೊಂಡದ್ದು ಕೂಡ ಕಲೆಗಾರಿಕೆಯೇ.

“ನೋಡಬೇಕಾಗಿತ್ತು ನಮ್ಮಪ್ಪಾಜಿಯೋರ್ನ ನೀವು, ತಮಟೆಗೆ ಕಾಲು ಒಂದಿನಿಕೂ ಸೋಕಂಗೆ ಇರ್ನಿಲ್ಲ. ಸಿಟ್ಟು ನೆತ್ತಿಗ್ ಹೋಗ್ಬಿಡೋದು. ಎಲ್ಲಿದ್ರೂ ನಮ್ಮ ಜೀವ ಕಾಪಾಡೋ ಈ ಸರಸತಿಯಿಂದಲೇ ಸಕಲವೂ ಅಂತ ನಮಸ್ಕಾರ ಮಾಡೇ ಅವ್ರು ಮುಂದುವರ್ಯೋರು. ಅಂಥ ನಮ್ಮ ತಾಯಿ ಆ ಕಾಲದಿಂದ್ಲೂ ನಮ್ಮನ್ನ ಮಡ್ಲಿಗೆ ಹಾಕ್ಕಂಡು ನಮ್ಮವ್ವನಂಗೆ ಈ ಹೊಟ್ಟೆಯ ಕಾದೋಳು.

ಈಗ ಒಂದು ಹೇಳಕ್ಕೆ ಇಚ್ಚೆಪಡ್ತೀನಿ ನೋಡಿ. ಎಲ್ಲೋ ದೇವ್ರ ಮಾಡತಾ ಇರ್ತಾರೆ. ಮಾದೇಸ್ವಾಮೀನೋ…. ವೆಂಕಟರಮಣ ಸ್ವಾಮೀನೋ… ನರಸಿಂಹಸ್ವಾಮೀನೋ… ಮಾಡತಿರ್ತಾರೆ. ಅಲ್ಲಿಗೆ ನಮ್ಮ ಕರ್ದಿರ್ತಾರೆ. ನಾವು ನುಡಿಸ್ತಿರ್ತಿವಿ. ಆಗ ಆ ದೇವ್ರು, ನಮಗೆ ಒಲಿದಂಗಾಯ್ತು. ಅವ್ರ ನೋಡದಂಗೆ ಆತು. ಮೇನಾಗಿ ಈ ಶರೀರ ಅನ್ನದು ಒಂದು ತಂತಿ ಇದ್ದಂಗೆ.

ಆಗ ಈಯಮ್ಮನ ಮೈಮೇಲೆ ಕಂಕುಳಿಗೆ ಹಾಕ್ಕಂದು ಎರಡು ಗಂಟೆ ನುಡುಸುದೆ ಅಂದ್ರೆ ಮೈ ಮನಸೆಲ್ಲ ತಂತಿ ಆಡದಂಗೆ ಆಡದಂಗಾಯ್ತಾ? ನಮ್ಮ ಮೈನೋವು ಹರಿತಾ? ಊಟ ಆಯ್ತ್ರಾ? ನಮಗೆ ಅಷ್ಟೋ ಇಷ್ಟೋ ಸಂಪಾದನೆನೂ ಆಯ್ತು. ಅಲ್ಲಿ ಇಲ್ಲಿ ಜನಕ್ಕೆ ನಮ್ಮ ಗುರುತಿನ ಹೆಸ್ರೂ ಆಯ್ತು. ನಮಗೊಂದು ಗುರುತೂ ಸಿಕ್ತು. ಯಾವೂರು ಅಂತ ನಮ್ಮೂರು ಗುರುತು ಆಯ್ತಾ? ಹಿಂಗೆ ನಮ್ಮ ಆರೋಗ್ಯ, ಜೀವ್ನವಾ ತಮ್ಮಟೆ ಕಾಪಾಡಕಂತೈತೆ”. ಈ ಮಾತು ಪುರಾಣದ ಪ್ರಸಂಗವೊಂದನ್ನು ಎಚ್ಚರಿಸಿತು.

ತಮಟೆ ಮಾಡುವುದೆಂದರೆ ಜೀವ ಜೀವದ ತಂತನ್ನು ಬಿಗಿವುದು

ಶಿವ ತನ್ನ ವಾದ್ಯವನ್ನು ತನ್ನ ಚರ್ಮ ಹಾಗೂ ಮೂಳೆಗಳಿಂದ ಮಾಡಿ ನುಡಿಸುತಿದ್ದ ಎಂದು ಅವನ ಡಮರುಗಕ್ಕೆ ಜಗತ್ತನ್ನೇ ಎಚ್ಚರಿಸುವ ಹಾಗೂ ಕಾಪಾಡುವ ಶಕ್ತಿಯಿದೆ ಎಂದು ಪುರಾಣಗಳು ಹೇಳುತ್ತವೆ. ಆದರೆ ಈ ವಾದ್ಯಗಾರರೂ ಪರಶಿವನಂತೆ ಬಡವರಾಗಿರುವುದರಿಂದ ತಮ್ಮ ವಾದ್ಯಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ದೇವರಂತೆ ಪುನರ್ಜನ್ಮದ ಅರಿವಿಲ್ಲದ ಜನಸಾಮಾನ್ಯರಾದ ಇವರು ಇಂಥ ಕಲೆಯನ್ನು ಅರಳಿಸಲು ಪ್ರಾಣಿಗಳ ಚರ್ಮವನ್ನು ಅವಲಂಬಿಸಿದ್ದಾರೆ.

ಮೊದಲಿಗೆ ಒಂದು ಕಬ್ಬಿಣದ ಸರಳನ್ನು ಚಕ್ರದಂತೆ ಬಗ್ಗಿಸಿ ದೊಡ್ಡ ಸೊನ್ನೆಯನ್ನಾಗಿಸುತ್ತಾರೆ. ಕುರಿ ಹಳ್ಳಿ ಭಾಷೆಯಲ್ಲಿ ಮರಿ, ಇದನ್ನು ಕುಯ್ಯುವವರಿಗೆ ಇವರು ಮೊದಲೇ ಮಾಹಿತಿ ಕೊಟ್ಟಿರುತ್ತಾರೆ. ಎರಡು ಅಥವಾ ಮೂರು ಮರಿ ಹಾಕಿದ ಆಡಿನ ಚರ್ಮವೇ ಇದಕ್ಕೆ ಆಗಬೇಕು. ಅಂಥ ಮರಿ ಬಂದಾಗ ವಿಶ್ವಾಸದಿಂದ ಕುರಿ ಕುಯ್ಯುವವರು ಅದರ ಚರ್ಮವನ್ನು ಇವರಿಗೆ ಮೀಸಲಿಟ್ಟು ಕೊಡುತ್ತಾರೆ. ಅದನ್ನು ತಂದು ನೆಲಕ್ಕೆ ಹರವಿ ಮೂರುದಿನ ಸುಡು ಬಿಸಿಲಲ್ಲಿ ಎಳ್ಳಷ್ಟೂ ಹರಿಯದಂತೆ ಮೊಳೆ ಹೊಡೆದು, ಕುಂತು ಜತನದಿಂದ…. ಹದ್ದು ಕಾಗೆಗಳಿಂದ, ನಾಯಿ ನರಿಗಳಿಂದ, ಹುಳು ಹುಪ್ಪಟೆಗಳಿಂದ, ಕಾಪಾಡಿ ಒಣಗಿಸುತ್ತಾರೆ. ಒಣಗಿದ ಚರ್ಮ ನಿರಿಗೆ ಮಾಡಿ ಸುತ್ತಿಡಲು ಅಥವಾ ಮಡಿಸಿಡಲು ಬರುವಂತಿರಬೇಕು.

ಆ ನಂತರ ಅದನ್ನು ಕೆಲಕಾಲ ನೀರಲ್ಲಿ ನೆನೆಸಿ ಇಡುವ ಕಾರ್ಯ. ಅವರವರ ಹದಕ್ಕೆ ಬೇಕಾದಷ್ಟು ಸಮಯವನ್ನು ನೆನಕೆ ತೆಗೆದುಕೊಳ್ಳುತ್ತದೆ. ನೆಂದ ಚರ್ಮವನ್ನು ಹರವಿ ಅದರ ಒಳಹೊರಗೆ ಕೊಳೆಯನ್ನು ವೈನ ಮಾಡಿ ತೆಗಿಯಬೇಕು. “ಆಡಿಗೇನು ಸ್ನಾನ ಮಾಡುಸ್ತರ? ಕೊಳೆ ಉಳುದ್ರೆ ಸಿಮೆಂಟು ಗೋಡೇನ ಬಿಗಿ ಹಿಡದಂಗೆ ಅದು ಹಿಡುದ್ಬುಡುತ್ತೆ. ಆಗ ನಾದ ಅನ್ನದು ಮೆಟ್ಟಿಕೊಂಡುಬಿಡುತ್ತೆ”. ಅನ್ನುವ ಅವರ ಎಚ್ಚರಿಕೆಯ ಮಾತು ನಗೆ ತರುವಂಥದ್ದು. ಸಿಕ್ಕಿದಾಗ ಇಂಥ ಚರ್ಮವನ್ನು ತೆಗೆದು ಹದ ಮಾಡಿ ಇವರ ಬಳಿ ಸಂಗ್ರಹಿಸಿ ಇಟ್ಕೊಂಡಿರ್ತಾರೆ. ಯಾವಾಗಲೂ ತಮಟೆಯ ಮೂರುಪಟ್ಟು ಅಳತೆಯಷ್ಟು ಅಗಲವಾದ ಚರ್ಮ ಇದಕ್ಕೆ ಬೇಕಾಗುತ್ತದೆ.

ಇಂತು ನೆಂದ ಚರ್ಮದ ಕೂದಲನ್ನು ಸಣ್ಣ ಹರಿತ ಚೂರಿ ಅಥವಾ ರಂಪಿಯಿಂದ (ಕಬ್ಬಿಣದ ಸಣ್ಣ ತಗಡಿನಿಂದ) ತೆಗೆಯಬೇಕು. ಹಿಂದೆ ಮುಂದೆ ಎರಡೂ ಕಡೆ ನಯ ಮಾಡಿ ಅಂಟಿಕೊಂಡ ಕಸರನ್ನು ತೆಗೆದಾಗ ಅದು ಚರ್ಮದ ರೂಪವನ್ನು ಬಿಟ್ಟುಕೊಟ್ಟು, ಅದು ಕೇವಲ ಒಂದು ಬಿಳಿಯ ಚಿತ್ರ ಬಿಡಿಸುವ ಹಾಳೆಯಂತಾಗುತ್ತದೆ. ಆ ಹಾಳೆಯನ್ನು ಏಕಾಂತದಲ್ಲಿ… ಧ್ಯಾನದಿಂದ, ಮೊದಲೇ ಸಿದ್ಧ ಮಾಡಿಟ್ಟುಕೊಂಡ ದುಂಡನೆಯ ಕಬ್ಬಿಣದಾಕಾರಕ್ಕೆ ಬಟ್ಟೆ ತೊಡಿಸುವಂತೆ ಕೊರೆದು ಹರಿಯಲಾಗುತ್ತದೆ. ಕಬ್ಬಿಣ ಗಡುಸಾಗುತ್ತೆ ಅಂತ ಈಗ ಸ್ಟೀಲ್ ರಿಂಗ್ ಅನ್ನ ಉಪಯೋಗಿಸುತ್ತಾರೆ.

ಇಂಥ ಹರಿದ ಹಾಳೆಯ ತುದಿಯನ್ನು ಮಡಿಸಿ ಹಸುವಿನ ಚರ್ಮದ ದಾರದ ಲಾಡಿಯಿಂದ ಹಿಂಭಾಗವನ್ನು ಎಳೆದು ಕಟ್ಟಿಕೊಳ್ಳಲಾಗುತ್ತದೆ. ಆ ನಂತರ ಇಂಥ ಲಾಡಿಯನ್ನು ಇನ್ನಷ್ಟು ತೆಗೆದುಕೊಂಡು ಅದನ್ನು ಸುತ್ತ ಹತ್ತಾರು ದಿಕ್ಕಿನ ಬಾರುಗಳಿಂದ ಎಳೆದು ತಂದು ಬಿಗಿ ಮಾಡಲಾಗುತ್ತದೆ. ಇದನ್ನು ಏಕಾಂತದಲ್ಲಿ ಧ್ಯಾನಸ್ಥರಾಗಿಯೇ ಮಾಡಿದರೆ ಕೆಲಸ ಅಚ್ಚುಕಟ್ಟು. ಜೊತೆಗೆ ಇದು ತಮಟೆಯ ನುಡಿ ಕಟ್ಟುವ ಕೊನೆಯ ಭಾಗ. ಆದ್ದರಿಂದಲೇ ಈ ಕೊನೆ ಹಂತವನ್ನು ಏಕಾಂತದಲ್ಲಿ ಧ್ಯಾನದಿಂದ ಮಾಡುವ ಅಗತ್ಯವಿದೆ.

ಕಟ್ಟಿ ಮುಗಿಸಿದ ನಾದಕ್ಕೆ ಸಿದ್ಧವಾದ ಮುಖ ಭಾಗವನ್ನು ನೋಡಿದರೆ, ಸಪಾಟಾದ ಚಂದ್ರನ ಮುಖದಂತಿದ್ದು, ಕಟ್ಟಿ ಮುಗಿಸಿದ ತಮಟೆಯನ್ನು ಹಿಂದೆ ತಿರುಗಿಸಿ ನೋಡಿದರೆ ಜೇಡನ ಬಲೆಯ ದಪ್ಪ ಎಳೆಗಳಂತೆ ಅದರ ಹೆಣೆಕೆ ಕಾಣುತ್ತಿರುತ್ತದೆ. ಇದು ಪೂರ್ತಿಯಾಗಲು ಇಂದಿನ ವೆಚ್ಚ ಸುಮಾರು ೧೩೦೦ ರೂ ಆಗುತ್ತದೆ ಎಂದು ಚಿಕ್ಕನರಸಯ್ಯನವರ ಅಂದಾಜು. ಜೋಪಾನವಾಗಿ ಇಟ್ಟುಕೊಂಡಷ್ಟು ಕಾಲ ವರುಷಗಟ್ಟಳೆ ತಮಟೆ ಬಾಳುತ್ತದೆ. ಕಾಪಾಡಿಕೊಳ್ಳುವ ಗುಣ ಇಲ್ಲದೆ ಮಣೆ ಬದಲಾಯಿಸಿ ಅಡ್ಡಾದಿಡ್ಡಿ ಉಪ್ಯೋಗಿಸಿದರೆ ಅಂದಿನ ಸಂಜೆಗೇ ತೀರಿ ಹೋಗಬಹುದು.

ಹೀಗೆ ಗ್ರಾಮೀಣ ಭಾಗದ ಜನಗಳಿಗೆ ಸ್ಥಳದಲ್ಲಿ ಕೈಗೆ ಸಿಗುವ ವಸ್ತುಗಳಿಂದಲೇ ತಮ್ಮ ನಿತ್ಯದ ಅನಿವಾರ್ಯತೆಯನ್ನು ಪೂರ್ಣಗೊಳಿಸಿಕೊಳ್ಳುವ ಕಲೆ ಸಿದ್ಧಿಸಿದೆ. ಹೊರಗಿನಿಂದ ಬರುವ ವಸ್ತುಗಳಿಗೆ ತಗಲುವ ವೆಚ್ಚ, ಅವರ ಆರ್ಥಿಕ ಸಾಧ್ಯತೆಯನ್ನು ಮೀರುತ್ತಿದ್ದುದರಿಂದಲೇ… ಹಿಂದೆ ಪ್ರತಿಯೊಬ್ಬ ಹಳ್ಳಿಗರೂ ಕುಶಲ ಕಲೆಗಾರರೇ ಆಗಿದ್ದು, ತಮ್ಮ ವಸ್ತುವಿಗೆ ತಮ್ಮ ಅನುಕೂಲಕ್ಕೆ ತಕ್ಕ ರೂಪವನ್ನು ಅವರು ಕೊಟ್ಟುಕೊಳ್ಳುತ್ತಿದ್ದರು. ಆಗಿನ ಆರ್ಥಿಕ ಪಡಿಪಾಟಲಿಗೊಂದು ಉದಾಹರಣೆ:

“ಹಿಂದೆ ಎರಡು ರೂ. ಮೂರು ರೂ. ಕೊಟ್ಟು ತಗಳಕೆ ಕೈಬಲ ಇಲ್ದೇನೆ ಎಮ್ಮೆಕರಿನ ಚರ್ಮವ ನಮ್ಮ ಹತ್ರನೇ ಈತಲ್ಲ ಅಂತ ತಮಟೆ ಕಟ್ಟಕೆ ಉಪಯೋಗ್ಸವ್ರು. ಅದಕ್ಕೆ ಒಂದೇ ಮಣೆ. ಬದ್ಲಸಕ್ಕೆ ಆಗಲ್ಲ. ಏನೋ ಊರು ಸಮಾಚಾರ ಸಾರಕ್ಕೆ ಆಗೋದು ಅಷ್ಟೇಯಾ…” ಎಂದು ಅಂದಿನ ಪಾಡನ್ನು ನೆನೆದರು.

“ನಂಗೆ, ೨೦೦, ೨೫೦ ಜನ ಶಿಷ್ಯರು ಅವ್ರೆ. ಆದ್ರೂ ಈಗಿನ ಅಶಿಸ್ತು ನಂಗೆ ಹಿಡ್ಯದಿಲ್ಲ. ಅವ್ರಗೂ ಅಷ್ಟೆ! “ಇವ್ನೇನು ದೇವ್ರಾ? ಇವ್ನು ಹೇಳದಂಗೆ ನಡಿಯಕೆ ಅಂತರೆ”. ಏನೋ ಹೊಟ್ಟೆ ಹೊರ್ಯೋ ಕೆಲ್ಸ ಕಲ್ಸಿಕೊಟ್ಟೆ. ಮರ್ತುಬಿಡಬೇಕು ಉಳುದುದ್ದ. ಸ್ಕೂಲು ಮಕ್ಕಳಿಗೂ ಕಲ್ಸಿಕೊಟ್ಟಿದೀನಿ. ಅವು ಆಗಾಗ ನೆನಪಿಗೆ ಬರತಿರತವೆ. ಮಕ್ಕಳಲ್ಲವ್ರ? ಅವು ಬಲೇ ಚುರುಕು. ಬೇಗ ರುಚಿ ಹತ್ಸಕಂಬುಡತವೆ ಸಣ್ಣವಾಗಿದ್ದಾಗ.”

ಇತ್ತೀಚಿನ ಜಾಗತೀಕರಣದಿಂದಾಗಿ ಗೊಂದಲದ ಗೋಲದಂತಾಗಿರುವ ಜಗತ್ತು ಎಲ್ಲಿ ಹೋದರೂ ಒಂದೇ ರುಚಿ, ನಡೆನುಡಿ ರೂಢಿಯಾಗುತ್ತಿದೆ. ಹಾಗಾಗಿ ತಮಟೆ ಕಲೆಗಾರ ನಮ್ಮ ಚಿಕ್ಕನರಸಯ್ಯನವರ ಮಾತಿನಲ್ಲೆ ಅವರ ಈಗಿನ ತೊಂದರೆಗಳನ್ನು ಕೇಳೋಣ.

“ನನಗೆ ಇರೋನು ಒಬ್ಬನೇ ಮಗ. ಅವ್ನು ನಾಜೂಕಯ್ಯನ ಮಗ. ಕಾಲೇಜಲ್ಲಿ ಓದುತಿದ್ದಾನೆ. ಸುಖವಾಗಿ ಬೆಳೆದ ಹುಡುಗ. ಈ ಸರಸೋತಿ ನಮ್ಮನ್ನ ಚೆನ್ನಾಗೇ ಕೈ ಹಿಡಿದು ಇಂದಿಗೂ ಕಾಪಾಡಿಕೊಂಡು ಬಂದಿದ್ದಾಳೆ. ಅದ್ರ ಫಲ! ಮಗನ್ನ ಸುಖವಾಗೇ ಸಾಕ್ದೆ. ನಾನು ಚರ್ಮ ನೆನೆಸಿರೋದನ್ನ ಕಂಡ್ರೆ ಮೂಗು ಮುಚ್ಕೊಳ್ತಾನೆ. “ಆ ಹಳೆ ಮನೇಲಿ ಇಟ್ಕೊ. ಕೆಟ್ಟ ವಾಸನೆ ಕಣಪ್ಪ, ಇಲ್ಲಿ ತರಬೇಡ ಅಂತನೆ”. ನಾನು ನಿಧಾನಕ್ಕೆ ಹೇಳಕೊಡತಿದೀನಿ. “ನಾವು ಭೂಮಿ ಮೇಲೆ ಕಣ್ಬಿಟ್ಟಗಿಂದ, ನಮ್ಮ ತಾತನ ಕಾಲದಿಂದ ಈ ಅಮ್ಮನಿಂದ ಬದುಕಿದ್ವಿ. ತಾಸಾರ ಮಾಡಬೇಡ ಕನಪ್ಪಾಂತೀನಿ. ಸುಮ್ನೆ ಮಗ್ಗಲಲ್ಲಿ ಕುಂತು ನೋಡ್ಕಳಪ್ಪ. ನನ್ನ ತಲಿಗೆ ನಿಂತು ಹೋಗಬಾರದು, ಈ ಥರಕ್ಕೆ…. ಒಂದಪ ಗದರಿಸಿ, ಒಂದಪ ಮುದ್ದು ಮಾಡಿ ಹೇಳಕೊಡತಿದೀನಿ. ನಿಧಾನಕ್ಕೆ ಅವನ್ನ ತಿದ್ದಕತಿದೀನಿ. ಏನ್ ಮಾಡತೀರಿ?”

“೨೦ ವರ್ಷಕ್ಕೆ ಏನು ಅನುಭೋಗ ಇದೆ ಅವ್ರಿಗೆ? ಹೇಳಿ. ನಿಧಾನಕ್ಕೆ ಕಲಿತರೆ. ನಮ್ಮ ಹತ್ರದೋರಿಗೆ ಒಬ್ಬಿಬ್ರಿಗೆ ಈ ವಿದ್ಯೆನ ಗೊತ್ತು ಮಾಡಿಕೊಟ್ಟಿದೀನಿ. ನಾವು ಚಪ್ಪಲಿ ಹಾಕ್ಕಂಡು ಈ ನಮ್ಮಮ್ಮನ್ನ ನುಡಿಸಿದ್ದು ಗೊತ್ತಿಲ್ಲ. ಈಗಿನೋರು ಅಂಥ ಶಿಸ್ತಿಗೆ ಒಗ್ಗದಿಲ್ಲ. ಈಗ ಅವರು ನುಡ್ಸೋ ಪ್ಲಾಸ್ಟಿಕ್ ತಮಟೆಯ ನಾನು ದಿನಕ್ಕೆ ಹತ್ತು ಕಟ್ಟಬುಡತೀನಿ. ಅದ್ರಲ್ಲಿ ಶಬ್ದ ದಬದಬನೆ ಬರ್ತದೆ. ಕಿವಿಗೆ ಕಷ್ಟ.

ಇದು ಹಂಗಲ್ಲ. ನನ ತಾಯಿ ತಮ್ಮಟೆಯ ಕಟ್ಟಿ ನಮ್ಮ ಮನೆದೇವ್ರ ಮುಂದೆ ನುಡಿಸಿ ಆಮೇಲೆ ತಮ್ಮಟೆ ಎಲ್ಲಿಗಾದರೂ ತಕ ಹೋಗಿ…. ಅವಳೇ ಅದ್ರೊಳಗೆ ಬಂದು ಕುಂತು ನಮ್ಮ ಕೈನ ನುಡಿಸ್ತಳೆ. ಬೇರೇರ ನಾದಕ್ಕೆ ಕಿವಿ ಕೊಟ್ಟು ನಿಧಾನಕ್ಕೆ ಇದ್ರಲ್ಲಿ ಮಟ್ಟು ಹಿಡಿಬೇಕು. ಚಿಟಿಗೆ ಏಟು ಎಲ್ಲಿ ಹದವಾಗಬೇಕು? ಎಲ್ಲಿ ತಗ್ಗಬೇಕು? ಎಲ್ಲಿ ವೇಗ ತಗಬೇಕು? ಎಲ್ಲಿ ತಾಳ ಬದಲಾಗಬೇಕು? ಎಲ್ಲಿ ಹುಸಿ ನುಡಿಬೇಕು? ಕಡ್ಡಿನ ಇನ್ನೊಬ್ಬರ ಜೊತೆ ಹೆಂಗೆ ಕೈಗೂಡಿಸಿ, ತಾಳ್ಮೆಯಿಂದ ಬಡದು ಕಲಿಬೇಕು? ಅಂಥ ವಿದ್ಯೆ ಇದು..

ನಾವು ಜಾನಪದ ಲೋಕದ ನಾಗೇಗೌಡ್ರು ಕಾಲದಿಂದ್ಲೂ ಮೇಕನಲ್ಲಿ ಈ ತಮಟೆ ಹಿಡದು ಈ ಕಲೆ ನಂಬಿ ಬದುಕ್ದೋರು. ಇಲ್ಲಿಗೆ ಬರಬೇಕು ಅಂದ್ರೆ ನಮಗೆ ರಾತ್ರೆಲ್ಲ ನಿದ್ದೆ ಹತ್ತದಿಲ್ಲ ಇವತ್ಗೂವೆ. ಹಾಲು ಅನ್ನ ಹರೀಲಿ ಇಲ್ಲಿ. ಇವತ್ತಿಗೂ ಈ ತಾಯಿ ನಮ್ಮ ಚೆನ್ನಾಗಿ ಮಡ್ಗಿದಾಳೆ. ಮುಂದಿನ ತಲೆಮಾರು ಇದ್ರಿಂದ ವಸಿ ಕೈಕಾಸು ಕಂಡ್ರೆ ಅವರೂ ಇದನ್ನ ಕಲಿತಾರೆ. ಆದ್ರೆ ನಮ್ಮ ಪರಿಶ್ರಮ ಅವ್ರ ಕೈಲಿ ಆಗುತ್ತಾ? ಅದ ನೋಡಬೇಕು. ಈಗ, ಎಲ್ಲವೂ ಸುಲಭದ ಕಾಲ ಅಲ್ಲವ್ರಾ? ಹಿಂದೆ ನಾವೂ ನಮ್ಮಪ್ಪಜಿ ಕೊಡೋ ಹತ್ತು ಪೈಸೆ ಆಸೆಗೆ ಅವರಿಗೆ ಹುರಿ, ಸೂಜಿ ಕೇಳಿದ್ದನ್ನ ತಂದುಕೊಡತಲೇ ನೋಡಕತಾ ಇದರ ನಾಡಿ ಹಿಡಯಾದ ಕಲ್ತ್ವಿ. ಹಂಗೇ ನಿಧಾನಕ್ಕೆ ಈಗನೋರು ಕಲಿತರೆ. ವಯಸ್ಸು ಬೆಳಿತಾ ಅದರ ಬೆಲೆನೂ ತಿಳ್ಯುತ್ತೆ.”

ಇದನ್ನೆಲ್ಲ ಹೇಳುವಾಗಲೇ ಹೆಬ್ಬಾರಿಯಂಥದ್ದನ್ನು ಕಟ್ಟಿ ನುಡಿಸುವ ಅಭ್ಯಾಸ ತಮಗೆ ಇದೆಯೆಂದು ನರಸಪ್ಪ ಹೇಳಿದರು. “ಅದು ಮಹಾನ್ ಪವಿತ್ರವಾದ್ದು. ಅದು ಆ ಮಾರಮ್ಮನ ನುಡಿ. ಅವ್ಳು ತೀರು ಏನು ಹೇಳತೀರ? ವರ್ಷಕ್ಕೊಂದಪ ಅವ್ಳು ಗುಡ್ದಪ್ಪನ ಮೈ ಏರಿ ಬರಬೇಕಾದ್ರೆ ಸಾಮಾನ್ಯ ಅಲ್ಲ. ಬಡದು ಬಡದು ನಗಾರೀನೆ ಹರದುಹೋಗಬೇಕು. ಆಗ, ಇವ್ಳು ಮೈ ಒಲಿಬೇಕು. ಈ ವರ್ಷಕ್ಕೆ ಅದ ಹಂಗೆ ಅತ್ತಲಾಗೇ ತಕಹೋಗಿ ದೇವಸ್ಥಾನದಲ್ಲಿ ಇಟ್ಟು ಬುಡತಾರೆ, ಅವ್ಳನ ಊರು ತುಂಬಸ್ಕಂದ ಮೇಲೆ…. ಇನ್ನ ಮುಂದ್ಲ ವರುಷವೇ ಬರಬೇಕು. ಹರದುಹೋಗಿರೋ ನಾಕಾರು ನಗಾರಿಗಳ ಕಟ್ಬೇಕಾದ್ರೆ. ಅದನ್ನೂ ಹೇಳತೀನಿ… ಹೆಂಗೆ ಅಂತೀರಾ…”.

“ಇಂಥ ದಿಸ ಹಬ್ಬ ಅನ್ನಕಂದು ಊರೋರು ಸೇರಿ ತೀರ್ಮಾನ ಮಾಡಿ ಊರಿಗೆ ಹಬ್ಬದ ದಿನವ ಸಾರಸ್ಬುಡತಾರೆ. ಅಮೇಕೆ… ಮಾರಮ್ಮನ ಗುಡ್ಡಪ್ಪದೀರು….. ಈ ಹೆಬ್ಬಾರಿ ಕಟ್ಟೋ ಗುಡ್ದಪ್ಪದೀರ… ಕಾಸೆ, ಕನ್ನಡಿ, ಕಳಸ ಜತೀಗೆ ತಕಹೋಗಿ ಕರಕಬರಬೇಕು. ಇನ್ನು ಅವ್ರು ಮನಿಗೆ ಹೋಗಂಗಿಲ್ಲ. ಮಡಿ ಮಾಡಕಂಡು ದೇವ್ರ ಹೊರೋರು, ಹೆಬ್ಬಾರ್ಯೋರು ಇಬ್ರೂ ಸೇರಿ ಹೆಬ್ಬಾರಿ ಮರಿನ ಹೊಡದು, ಆ ಕುರಿಯ ನಾ ಮೊದಲು ಹೇಳಿದ್ ಥರಕ್ಕೆ ಹದ ಮಾಡಿ ಆಮೇಲೆ ಹಬ್ಬದೊತ್ತಿಗೆ ಹೆಬ್ಬಾರಿ ಬಾಯಿಗೆ ಕಟ್ಕಂದು ಆಯಮ್ಮನ ಊರೊಳಕೆ ಕರ್ಕಬರಬೇಕು. ಹುಡುಗಾಟ ಅಲ್ಲ. ಇವತ್ಗೂ ನಮ್ಮ ದಿಕ್ಕಲ್ಲಿ ಹಿಂಗೇ ನಡಿಬೇಕು ಊರಹಬ್ಬ”.

“ನಾನು ಜಗ್ಗಲಿಗೆ, ನಗಾರಿನೂ ಕಟ್ಟತೀನಿ. ಆದ್ರೆ ಆದಕ್ಕೆ ಕುರಿಚರ್ಮ ಸಾಕಾಗದಿಲ್ಲ. ಎರಡು ಅಥವಾ ಮೂರು ಕರು ಹಾಕಿದ ಹಸು ಚರ್ಮ ಬೇಕು. ಅದೂ ಕೆಚ್ಚಲಿರೋ ತಳಭಾಗದ್ದು. ಯಾಕಂದ್ರೆ ಮೇಲಿಂದು ಬಿಸಿಲಿಗೆ ವಣಗಿ, ಏಟುತಿಂದು, ನಾನಾ ಕಾರಣಕ್ಕೆ ಒರಟಾಗಿರುತ್ತೆ. ಕೆಳಗಿಂದು ಕರ ಹಾಲು ಎಳುದು ಕುಡದು ಮೈ ಸಡಲ ಬಂದಿರತ್ತೆ. ನಾರಾಗಿರ್ತದೆ. ಹರಿಯದಿಲ್ಲ. ಅದನ್ನೂ ಮೇಲೆ ಹೇಳಿದ ಕುರಿ ಚರ್ಮದಂಗೆಯೇ ಸಂಸ್ಕರಣೆ ಮಾಡಿ, ಹದವಾದ್ದನ್ನು ದೊಡ್ಡ ವಾದ್ಯಕ್ಕೆ ಉಪಯೋಗಿಸಿಕೊಂಡು ಉಳಿದ ಗಟ್ಟಿ ಭಾಗನ ಸೀಳಿ ಲಾಡಿ ಮಾಡಕಂಡು ತಮಟೆನ ಬಿಗಿ ಮಾಡ ಹುರಿಗಳ ಮಾಡಕಂತೀವಿ. ಹಿಂಗೆ ಗಟ್ಟಿಯಾಗಿರೋ ಅದರ ಭಾಗೆಲ್ಲವೂ ನಮಗೆ ಉಪಯೋಗಕ್ಕೆ ಬರ್ತವೆ” ಎಂದು ತೋರಿದರು.

“ಎರಡು ಅಥವಾ ಮೂರು ಕರುಮರಿ ಈದ ದನಕುರಿಯ ಚರ್ಮದ ವಿಶೇಷತೆ ಏನು?” ಎಂದು ಕೇಳಿದೆ. ಅದಕ್ಕವರು ಕೊಟ್ಟ ಉತ್ತರ ನನ್ನನ್ನು ಕೊಂಚ ಹೊತ್ತು ಮಾತನ್ನಾಡದಂತೆ ಮಾಡಿತು.

“ಯಾಕೆ ಅಂದ್ರೆ, ಬರಡು ದನಗಳಿಗೆ ಮೈ ಮೃದು ಬಂದಿರೋದಿಲ್ಲ. ಕರುಗೆ ಹಾಲು ಕುಡಿಸಿದ ತಾಯ ಚರ್ಮಕ್ಕೆ ಒಂದು ಮೃದು ಹದ ಬಂದಿರುತ್ತೆ. ಕರು ಹಾಲನ್ನ ಜಗ್ಗಿ ಜಗ್ಗಿ ಎಳೆದು ಕುಡದಾಗ ತಾಯಿಮಮತೆ ಅನ್ನೋದು ಉಕ್ಕಿ ಹರಿದು ಅದರ ನರನರಕ್ಕೂ ಹರಿದುಕೊಳ್ಳದೇ ಇರೋಂಥ ಒಂದು ಚೈತನ್ಯ ಬಂದಿರುತ್ತೆ. ಅದರಲ್ಲಿ ಮಾಡಿದ ತಮಟೇಲಿ ಆ ತಾಯಿ ಯಾವ ಹದಕ್ಕೆ ಬೇಕಾದರೂ ನುಡಿತಾಳೆ. ಅದ್ರಲ್ಲಿ ಕೊಬ್ಬು ಅನ್ನೋದು ಒಂದೀಟು ಇರಲ್ಲ. ಕರಗ್ ಹೋಗಿರುತ್ತೆ. ಒಂದಿನಕು ಕೊಬ್ಬಿದ್ರೂ…. ಬಿಸಿ ಮಾಡುವಾಗ ತಮಟೆ ತೂತು ಬಿದ್ದುಬಿಡ್ತವೆ. ಚರ್ಮ ತೆಳುವಾಗಿ ನಾದಕ್ಕೆ ಮಯ್ಯಿರಲ್ಲ.”

ಅಲ್ಲಿದ್ದ ವೀರಭದ್ರನ ವೇಷಧಾರಿಯನ್ನು ತೋರಿ “ಅವ್ರು ದೇಶ ಸುತ್ತೋ ವೀರಭದ್ರ, ಗಡಿ ವೀರಭದ್ರ ಅಂತ ಇನ್ನೊಬ್ರು ಅವ್ರೆ, ಅವ್ರು ಪ್ರತಿ ಊರನ್ನೂ ಕಾಯಕಳತಾರೆ. ಅವ್ರೂರಿಗೆ ಯಾರು ಬತಾರೆ. ಹೋತರೆ ಅಂತ… ಅದೇ ಮಾದೇಸ್ವುರ ಬರಲಿ, ಬೋರೇದೇವ್ರು ಬರಲಿ, ಯಾರು ಬಂದ್ರೂ ಈ ಗಡಿ ವೀರಭದ್ರ ಕಾಯಕಬೇಕು. ಬೇರೆ ದೇವ್ರು ಇವ್ರ ಅಪ್ಪಣೆ ತಗಂಡು ಒಳಗೆ ಬರಬೇಕು. ಅಂಥವ್ರುನ್ನ ಸೈತ ನಾವು ಎಂಥ ಕೆಂಡದ ಕೊಂಡನಾದ್ರೂ ಹಾಯ್ಸಿಬಿಡತೀವಿ. ಇಬ್ಬರಾಳು ಈರಭದ್ರರು, ಕಾಸೆ ಕಟ್ಟಿ ರಂಗಸ್ಥಳಕ್ಕೆ ಬರಬೇಕಾದ್ರೆ ಇವಳು ಬೇಕೆ ಬೇಕು. ಅವ್ರ್ನ ಹೆಂಗೆ ರಂಗೇಳ್ಸಿ ಹುರುದುಂಬುಸ್ಬೇಕು? ಹೆಂಗೆ ಹೆಜ್ಜೆ ಗತಿ ಬಲಾಸಬೇಕು? ಅವ್ರ ರೋಷಾವೇಷವ ಹೆಂಗೆ ತಣುಸ್ಬೇಕು? ಎಲ್ಲ ಈ ತಾಯಿಗೆ ತಿಳದದೆ. ಅವನೆಂಥ ಸೋಮಾರೀನೆ ಆಗಿದ್ರೂ ಇವಳ್ನ ಕಂಕ್ಳಿಗೆ ಇರಿಕ್ಕಂಡ ಅಂದ್ರೆ ಮುಗೀತು. ಒಳಗೆ ಕಿಡಿ ಹತ್ಕಳ್ಳಲೇ ಬೇಕು. ಹುಮ್ಮಸ್ಸು ಹುಟ್ಕಳ್ಳಲೇ ಬೇಕು. ಸುಮ್ಮನೆ ಕೂರಕ್ಕೆ ಬಿಡ್ತಾಳಾ ಇವ್ಳು?”

ಇದಿಲ್ದೆ ಕೆಂಡ ಹಾಯದು ಬಲು ಕಷ್ಟ. ಆ ಸ್ವಾಮಿ ನಿಜರೂಪವಾಗಿ ಮೈತುಂಬತನೋ? ಬಿಡತನೋ? ಏಕಾಂಗಿ ಆಗಿರ್ತನೋ? ನಮಗ್ಗೊತ್ತಿಲ್ಲ. ಆದ್ರೆ ಈ ತಾಯಿ…. ಅವ್ರ ನಿಂತ್ಕಣಕ್ಕೆ ಮಾತ್ರ ಬಿಡಲ್ಲ. ಸುಮ್ಮಗ್ ನಿಂತಿದ್ರೂವೆ ತನ್ನ ದನೀಲಿ ಅಂಥಾ ಚಲನ ಕೊಟ್ಟುಬುಡತಾಳೆ. ಕೆಂಡ ಹಾಯಸಬುಡತಳೆ. ನಾವೂ ಅಷ್ಟೆ. ಅವಳಿಗೆ ನಮನ ಸಲ್ಲುಸುದ್ರೆ ಮುಗೀತು. ಯಾರನ್ನದ್ರೂ ದಿನಗಟ್ಲೆ ಕುಣುಸ್ತೀವಿ. ಅವ್ರ ಹೆಜ್ಜೆಗೆ ಸರ್ಯಾಗಿ ನಾವು ಏಟ ಹಾಕಬೇಕು. ಎರಡೂ ಹೊಂದಾಣಿಕೆ ಆಗಬೇಕು. ಈ ಮಟ್ಟಲ್ಲಿ ನೋಡಿ ಪಟದಮ್ಮ ಅನ್ನೋಳು ನಮ್ಮ ಜೊತೆ ಊರೂರು ತಿರಕಬತಾಳೆ. ನಂದಿಕೋಲ ಬೀಳದಂಗೆ ಎತ್ತಿ ಕುಣುಸಕೆ ನೋಡಿ, ಬೇರೇದೆ ಮಟ್ಟು ಹಿಡಿಬೇಕು. ಸತ್ತರೋನ ಸ್ವರ್ಗಕ್ಕೆ ಸೇರ್ಸುದಕ್ಕೆ ಒಂದು ಲಯ, ಪಡ್ಡಗಳನ್ನ ಗಂಟೆಗಟ್ಲೆ ಕುಣುಸಕೆ ಇನ್ನೊಂದು ಲಯ.

ಮುಂದಿನ ತಲೆಮಾರು ಇದ್ರಿಂದ ವಸಿ ಕೈಕಾಸು ಕಂಡ್ರೆ ಅವರೂ ಇದನ್ನ ಕಲಿತಾರೆ. ಆದ್ರೆ ನಮ್ಮ ಪರಿಶ್ರಮ ಅವ್ರ ಕೈಲಿ ಆಗುತ್ತಾ? ಅದ ನೋಡಬೇಕು. ಈಗ, ಎಲ್ಲವೂ ಸುಲಭದ ಕಾಲ ಅಲ್ಲವ್ರಾ? ಹಿಂದೆ ನಾವೂ ನಮ್ಮಪ್ಪಜಿ ಕೊಡೋ ಹತ್ತು ಪೈಸೆ ಆಸೆಗೆ ಅವರಿಗೆ ಹುರಿ, ಸೂಜಿ ಕೇಳಿದ್ದನ್ನ ತಂದುಕೊಡತಲೇ ನೋಡಕತಾ ಇದರ ನಾಡಿ ಹಿಡಯಾದ ಕಲ್ತ್ವಿ.

ಹಿಂಗೇನೆ….ಊರು ದೇವ್ರ ದಿನಗಟ್ಲೆ….ಮದ್ವೆಮನೇನ ವಾರಗಟ್ಲೆ ನಿಭಾಯ್ಸ್ತೀವಿ. ಒಂದಪ ಈ ನಮ್ಮಮ್ಮನ್ನ ಕಣ್ಣಿಗೊತ್ತಿ ಕತ್ತಿಗೆ ನೇತು ಹಾಕ್ಕಂಡು ಕಂಕುಳಿಗೆ ಸಿಗುಸ್ಕಂಡ್ರೆ ಆಯ್ತು. ಆ ಕರಿನ ತಾಯಿ, ಈ ತಾಯಿ ಮಯ್ಯಿ ಎರಡೂ ಒಲಿದುಬಿಡತಾವೆ ನಮ್ಮ ಕಯ್ಯಿ ಮಯ್ಯಿಗೆ. ಅವ್ರೆ ನಮ್ಮ ಕೈಗೆ ಹಾಲಂಗೆ ಹರ್ದು ಬಂದುಬಿಡತಾರೆ.” ಅಂತ ಕೆಲವು ಮಟ್ಟುಗಳನ್ನು ನುಡಿಸಿ ತೋರಿದರು. ಕಥೆ ಮುಂದುವರೆಯಿತು.

“ಇನ್ನೊಂದು, ಈ ತಾಯಿ ಇದಳಲ್ಲ ಇವಳದು ರಾಕ್ಷಸಗಣ. ಅಂಥ! ಕುಂಭಕರ್ಣನ್ನ ಎಚ್ಚರ ಮಾಡದೋಳು ಇವ್ಳು. ಅವ್ನಿಗೆ ಗೊತ್ತಲ್ಲ! ಆರು ತಿಂಗ್ಳು ನಿದ್ದೆ. ಆರು ತಿಂಗ್ಳು ಎಚ್ಚರ ಅಂತೆ. ಅಂಥಾ ಲಂಕಾಪಟ್ನಕ್ಕೆ ಬೆಂಕಿ ಬಿದ್ದಾಗ ಯಾವುದ್ರಲ್ಲೂ ಅವ್ನ್ನ ಎಬ್ಸಕ್ಕಾಗ್ಲಿಲ್ಲ. ಢಕ್ಕೆ, ಢಮರು, ಡೋಲು, ದಬ್ಬಾಣ್ಕೆ, ಜಗ್ಗಳಿಕೆ ಎಲ್ಲ ಬಂದು ಹೋದ್ವು. ಏನು ನುಡುದ್ರೂ ಆಗ್ನಿಲ್ಲ. ಕೊಣಿಗೆ ಈ ರಾಕ್ಷಸಗಣ ತಂದುದ್ದೆ ಒಬ್ಬ ಕಣ್ಣಿಗೊತ್ಕಂಡಿದ್ದೆ ರಬರಬರಬನೆ ಅವನ ಕಿವಿಲಿ ಬಡುದೇಟ್ಗೆ ಊರೇ ಗಡಗಡನೆ ನಡುಗಿ ಇವ್ನು ಎದ್ದು ಕುಂತ್ಕಬುಟ್ನಂತೆ. ಆಗ ಒಟ್ಟಿಗೆ ನೂರಾನೆ ಎದ್ದಂಗಾಯ್ತಂತೆ. ಅಂಥ ರಾಕ್ಷಸ ಗಣ ಇವಳು ಸಾಮಾನ್ದೋಳಲ್ಲ. ಆ ಕುಂಭಕರ್ಣನ್ನೇ ಅಳ್ಳಾಡ್ಸದೋಳು.”

“ನೋಡಿ, ಇನ್ನೊಂದು ಮಾತ ಕೇಳ್ಕಳ್ಳಿ, ಸಣ್ಣ ಗರಿ ಅಥವಾ ಹುಲ್ಲು ಬೆಂಕಿನೇ ಆಗಬೇಕು ತಮ್ಮಟೆ ಬಿಸಿ ಮಾಡಕ್ಕೆ. ಯಾಕಂತೀರಾ? ಅವು ಮೇಯೋ ಹುಲ್ಲೆ ಅವ್ರ ಮೈ ಬಿಸಿಗೂ ಬೇಕು. ಸತ್ತ ಜೀವಕ್ಕೂ ಇದ್ದ ಜೀವಕ್ಕೂ ಇರ ಸಂಬಂಧ ನೋಡಿ ಇಲ್ಲಿ. ಅವ್ಳು ಹುಲ್ಲುಬಿಸಿಲಿ ಗರಿಗೆದರಿ ನುಡಿತಾಳೆ ಅಂದ್ರೆ, ಜೀವ ಎಲ್ಲೈತೆ? ಇಲ್ಲಿ ನಮ್ಮಮ್ಮನ ನುಡೀಲಿ. ಇದೇನು ಸಾಮಾನ್ಯನೇ…. ಸತ್ತದ್ರಲ್ಲಿ ಹೊಸದಾಗಿ ಹುಟ್ಟು ಬಂದಂಗೇ ಆಯ್ತಲ್ಲ ಅವಳು ಅಲ್ಲಿಗೇ….. ಜಗತ್ತಿನ ಮಹಿಮೆ ನೋಡಿ ಯಾವ ಥರಕ್ಕೆ ಈತೆ ಅನ್ನದು. ಹುಲ್ಲು ಹದದಲ್ಲಿ ಇವಳನ್ನ ದೂರದಿಂದ ಬಿಸಿ ಮಾಡಕಂಡ್ರೆ ಸಾಕು. ಯಾಥರಕ್ಕಾದ್ರೂ ಇವಳ ಕಣಿಕಣಿನೆ ನುಡಿಸ್ಬೈದು”

ತನ್ನ ವಾದ್ಯದ ಇತಿಹಾಸ ಹೇಳುವಾಗ ಅವರ ಕಣ್ಣಲ್ಲಿ ಭಾವುಕತೆ ಹಾಗೂ ತನ್ಮಯತೆ ಇತ್ತು. ಮುಳುಗುವ ಗುಣ ಇಲ್ಲದಿದ್ದರೆ ತಾಳ ಮೇಳದಲ್ಲಿ ಹೊಂದಾಣಿಕೆ ಇರಲು ಸಾಧ್ಯ ಇರೋದಿಲ್ಲ. ಅವರು ತಮಟೆ ನೆಲಕ್ಕೆ ಇಡುವಾಗಿನ ಅವರ ಬೆರಳಿನ ನವಿರು, ಮುಟ್ಟಿ ತೋರುವಾಗ ಕಲಾಕಾರನ ಹೆಮ್ಮೆ ತುಂಬಿ ತುಳುಕುತಿತ್ತು. ಮುತ್ತಾತನ ಕಾಲದಿಂದಲೂ ಇರುವ ಅರ್ಧ ಎಕರೆ ನೆಲ ಕೆರೆದು ಬೀಜ ಬಿತ್ತನೆ ಮಾಡುವುದನ್ನ ಬಿಟ್ಟರೆ ಈ ಕಾಯಕ ನಮ್ಮನ್ನು, ನಮ್ಮ ಕಲೆಯನ್ನು ಈ ಭೂಮಿ ಮೇಲೆ ನೆಲೆಯಾಗಿ ಉಳಿಸಿದೆ. ಸಂಸ್ಕೃತಿ ಮೂಲಾಧಾರನ ಸ್ವಲ್ಪ ಮಟ್ಟಿಗಾದ್ರೂ ನಮ್ಮ ಕೈಲಿ ಆದಷ್ಟೂ ಉಳಸ್ಕಳನ ಅಂತ ಇದನ್ನ ಹಂಗೆ ಉಳಸ್ಕಂಡಿದೀವಿ. ಈಗಿನ ಪ್ಲಾಸ್ಟಿಕ್ ತಮಟೇನ್ನ ದಿನಕ್ಕೆ ಇದೇ ದುಡ್ಡಲ್ಲಿ ಹತ್ತು ಕಟ್ಬಹುದು. ಏನ್ ಮಾಡಕ್ಕೆ ಅವು?” ಎಂದು ತಮ್ಮ ಚರ್ಮವಾದ್ಯವನ್ನ ತೋರಿ ಹೆಮ್ಮೆಯಿಂದ ಹೇಳಿದರು.

ಅವರು ಮಗನಿಗೆ ತಮ್ಮ ತಿಳುವಳಿಕೆಯನ್ನು ಹೇಳಿಕೊಡುವ ಪಡಿಪಾಟಲು ಹೇಳುವುದರ ಜೊತೆಗೇ… ಮೂಡಿಗೆರೆಯಲ್ಲಿ ತಮಟೆ ಕಲಿಸಿಕೊಂಡ ಚುರುಕು ಮಕ್ಕಳಲ್ಲಿ “ತಮ್ಮ ಕಲೆನ ಮುಂದುವರೆಸುವ ಜಾಣ್ಮೆ ಭವಿಷ್ಯ ಕಾಣಿಸ್ತೂ” ಎಂಬ ಅಭಿಮಾನದಿಂದ ಗುರುವಿನ ಗುರುತು ಹಿಡಿದು ನುಡಿದರು.

ತಮಟೆ ನುಡಿಯ ಪ್ರಾಯೋಗಿಕತೆ:

ತಮಟೆ ನುಡಿಯುವುದು ಚಿಟಿಕೆ ಕಡ್ಡಿಯ ಸಣ್ಣ ಹೊಡೆತದಿಂದ. ಇದು ಹುಸಿ ನುಡಿಯಾದರೂ ಕುಣಿವ ಕಾಲುಗಳ ಹೊಂದಾಣಿಕೆ ಹಾಗೂ ಮುಂದುವರಿಕೆಯನ್ನು ಜೋಡಿಸುವುದೂ ಕೂಡ ಇದೆ ಅಗಿದೆ. ಗುಣುಕು ಅಥವಾ ಕೋಲಿನ ಪೆಟ್ಟು ಇದನ್ನು ಅಧಿಕೃತಗೊಳಿಸುತ್ತದೆ. ವೀರಭದ್ರನ ನುಡಿ ಹುಲಿ ವೇಷದ ಕುಣಿತದ ವೇಗದಲ್ಲಿ ರಂಗಕ್ಕಿಳಿಯುತ್ತೆ. “ಧಗಡುದ್ಹಗಡು ಧಂಗ್, ಧಂಗ್, ಧಗಡುಧಗಡು…. ಹೀಗೆ ಮುಂದಕ್ಕೆ ಹೋಗಿ ಹಿಂದಕ್ಕೆ ಬಂದು ವೇಗ ತಗೊಳ್ಳುವ ಆವೇಗ ಆ ಮಟ್ಟಿಗಿರುತ್ತದೆ. ಪೂಜಾ ಕುಣಿತದ ಮಟ್ಟಿನ ವಿನಯದಲ್ಲಿ ಅವನು ಮಡ್ಕೆ ಹತ್ತಿ ಕುಣಿತಾನಾ? ಏಣಿ ಹತ್ತಿ ಕುಣಿತಾನಾ? ಬಾಯಲ್ಲಿಡದು ತಿರುಗುತಾನಾ? ಸಾವಧಾನದ ಬಡಿತಕ್ಕಿರುತ್ತೆ. ಅದೇ ಪಟದ ಕುಣಿತದಲ್ಲಿ ಎತ್ತರದ ನಂದಿಕೋಲು ಹಾಗೂ ಪಟಗಳನ್ನ ಗಾಳಿಗೆ ತೇಲಿಸುವ ಹಿಡಿತವಿರುತ್ತೆ….

ತಮಟೆ ಪೆಟ್ಟುಗಳಿಗೆ ಮುಗಿಯದ ಲಯ ಗತ್ತು, ಕಾಲಿನ ಗುರುತಿದೆ.

ಚಿಕ್ಕನರಸಯ್ಯನವರ ಸಂಚಾರ ಜಂಗಮದ ತಿಳುವಳಿಕೆ…. ಅವರ ತಮಟೆಯ ಒಡನಾಟ….. ಪಾರಂಪರಿಕವಾಗಿ ನಂಬಿದ ಬದುಕು, ಅವರ ಮುಖದ ಮೇಲೆ ಒಂದು ಸ್ಥಿತ ಪ್ರಜ್ಞೆಯ ಕಾಂತಿಯಂತೆ ತಂಗಿ ಹೊಳೆಯುತಿತ್ತು. ಅಲ್ಲಿ ಒಂದು ವಿನಯವೂ ಮನೆಮಾಡಿತ್ತು. ಇದು ಮಣ್ಣಗುಣ. ಎಡಗೈ ಬಲಗೈ ಚಲನೆಯಲ್ಲಿ ಕಣಿ- ಮದ ಶ್ರುತಿ- ಮಣೆ, ನುಡಿಗಳನ್ನ ಬದಲಾಯಿಸಿಕೊಂಡು ಎಲ್ಲ ಚರ್ಮವಾದ್ಯಗಳನ್ನು ನುಡಿಸುವ ಕಲೆಗಾರರಾದ ಇವರು ಕರೆದ ಯಾವುದೇ ಕಾರ್ಯಕ್ರಮ, ಮದುವೆ ಮುಂಜಿ, ಊರು, ಮನೆ ಸಾರು, ಸಾವು, ದೇವ್ರ ಮೆರವಣಿಗೆ ಎಲ್ಲಿಗಾದ್ರೂ ಹೋಗಿ ಇವರು ನಡೆಸಿಕೊಟ್ಟು ಬರುತ್ತಾರೆ.

ಯಾವುದೇ ಹೆಚ್ಚುಗಾರಿಕೆಯಿಲ್ಲದ ನಿತ್ಯ ಕರ್ಮ ಅವರದ್ದು. ಸರ್ಕಾರದ ಧನ ಸಹಾಯದಿಂದ ಹಿಂದಿನ ದಿನಗಳಿಗಿಂತ ಇಂದು ಮನೆಮಠ ಮಾಡಿಕೊಂಡು ಅಚ್ಚುಕಟ್ಟಾಗಿ ಸಮಾಧಾನವಾಗಿ ಬದುಕುತ್ತಿದ್ದೇವೆ ಎನ್ನುತ್ತ ತಮಟೆ ಹಿಡಿದು ಆ ಕಲೆಗಾರ ಜನಸಾಮಾನ್ಯನ ಗತಿಯಲ್ಲಿ ಸಾಗಿ ಹೋದರು.