ಒಂದು ದಿನ, ನನ್ನ ತಮ್ಮ ಕಲೀಮ, ‘ಮೂಡಿಗೆರೆಗೆ  ಹೋಗಿ ರಾಜೇಶ್ವರಿಯವರನ್ನು ಮಾತನಾಡಿಸಿಕೊಂಡು ಬರೋಣ, ಬಾ’ ಎಂದು ಕರೆದ. ಅವನು ತೇಜಸ್ವಿ ಅಭಿಮಾನಿ. ಅವನಿಗೆ ತಾನು ಸಂಗ್ರಹಿಸಿದ ತೇಜಸ್ವಿ ಲೇಖನಗಳನ್ನು ರಾಜೇಶ್ವರಿಯವರಲ್ಲಿ ಹಂಚಿಕೊಳ್ಳುವ ಕೆಲಸವೂ ಇತ್ತು. ಅವನ ಜತೆ ಅವನ ಮಡದಿ ಡಾ.ನುಸ್ರತ್ ಹಾಗೂ ನನ್ನ ಹಳೆಯ ವಿದ್ಯಾರ್ಥಿ ಡಾ.ಪ್ರೀತಂ ಹೊರಟಿದ್ದರು. ವೈದ್ಯರಾದ ಇವರಿಬ್ಬರೂ ತೇಜಸ್ವಿ ಪ್ರಿಯರು. ಅದರಲ್ಲೂ ಪ್ರೀತಂ ಅಭಿಮಾನ ಎಷ್ಟೆಂದರೆ, ತಮಗೆ ಮಗ ಹುಟ್ಟಿದರೆ ತೇಜಸ್ವಿಯೆಂದೂ ಮಗಳು ಹುಟ್ಟಿದರೆ ಗೌರಿ (‘ಜುಗಾರಿಕ್ರಾಸಿ’ನ ಪಾತ್ರ) ಎಂದೂ ಹೆಸರಿಡಲು ನಿರ್ಧರಿದ್ದರು. ಕೊನೇ ಗಳಿಗೆಯಲ್ಲಿ ಪ್ರೀತಮ್‌ಗೆ ತಮ್ಮ ತುಂಬು ಗರ್ಭಿಣಿ ಮಡದಿಯ ಬಳಿ ಇರಬೇಕಾಗಿ ಬಂದು ಬರಲಾಗಲಿಲ್ಲ.

ವೈದ್ಯರೊ, ಇಂಜಿನಿಯರೊ, ಅಧ್ಯಾಪಕರೊ ಆಗಿರುವ ಇಂತಹ ಎಷ್ಟೋ ಜನರು, ಒಂದು ಕಾಲಕ್ಕೆ ಪಠ್ಯವಾಗಿದ್ದ ‘ಕರ್ವಾಲೊ’ ಕಾದಂಬರಿ ಓದಿ ತೇಜಸ್ವಿ ಹುಚ್ಚು ಹತ್ತಿಸಿಕೊಂಡವರು. ಏನೊ ರಾಜಕೀಯ ಮಾಡಿ ಪಠ್ಯಕ್ರಮದಲ್ಲಿ ನುಸುಳಿಕೊಳ್ಳುವ ಕೆಲವು ಪುಸ್ತಕಗಳು ‘ಈ ಸಾಹಿತ್ಯದ ಸಹವಾಸವೇ ಬೇಡಪ್ಪ’ ಎಂಬಂತಹ ವೈರಾಗ್ಯ ಹುಟ್ಟಿಸುತ್ತವೆ. ಆದರೆ ಯಾವ ಪುಣ್ಯಾತ್ಮ ‘ಕರ್ವಾಲೊ’ ಸೂಚಿಸಿದನೊ, ಅದನ್ನು ಓದಿದ ಲಕ್ಷಾಂತರ ವಿದ್ಯಾರ್ಥಿಗಳು ಸಾಹಿತ್ಯ ಪ್ರೀತಿ ಬೆಳೆಸಿಕೊಂಡರು. ಆಗತಾನೆ ಮೇಷ್ಟರಾಗಿ ಸೇರಿದ್ದ ನನ್ನಂತಹವರು ವಿದ್ಯಾರ್ಥಿಗಳ ತುಸು ವಿಶ್ವಾಸ ಪಡೆಯಲು ಕೂಡ ‘ಕರ್ವಾಲೊ’ ಕಾರಣವಾಯಿತು. ತೇಜಸ್ವಿ ಬರೆಹದ ಲಕ್ಷಣವೇ ಹಾಗೆ. ಹೊಸತಲೆಮಾರಿನ ತರುಣ ಮನಸ್ಸುಗಳ ಜತೆ ಸ್ಪಂದಿಸುವ ಮತ್ತು ಅವರನ್ನು ಮರುಳುಗೊಳಿಸಿ ಕೈವಶ ಮಾಡಿಕೊಳ್ಳುವ ಯಾವುದೊ ಶಕ್ತಿ ಅದಕ್ಕಿದೆ. ಸಾಂಪ್ರದಾಯಿಕ ಸಮಾಜ ವಿಧಿಸುವ ಕಟ್ಟುಪಾಡುಗಳನ್ನು ಹರಿದು ನಿಸರ್ಗದೊಳಗಿನ ಗೂಢವನ್ನೊ ಬದುಕಿನೊಳಗಿನ ಚೈತನವನ್ನೊ ಬಗೆಯಲು ತುಡುಕುವ ಸಾಹಸಿ ತರುಣರೇ ಅವರ ಕಥನದ ನಾಯಕರು. ಇದು ಆಕಸ್ಮಿಕವಲ್ಲ.

ಇಷ್ಟಾಗಿ, ಲೇಖಕರನ್ನು ಭೇಟಿಮಾಡುವ ವಿಷಯದಲ್ಲಿ ನನಗೆ ಅಷ್ಟು ಉತ್ಸಾಹವಿಲ್ಲ. ಕೃತಿಗಳ ಮೂಲಕವೇ ಅವರ ಸಂಬಂಧ ಇಟ್ಟುಕೊಳ್ಳುವುದಕ್ಕೆ ಬಯಸುತ್ತೇನೆ. ಆದರೂ ತೇಜಸ್ವಿಯವರನ್ನು ಒಮ್ಮೆ ಸಂದರ್ಶನ ಮಾಡುವ ಆಸಕ್ತಿ ನನಗಿತ್ತು. ಅವರೂ ತಮ್ಮ ಆಪ್ತರಾದ ಡಾ. ಶಿವಾರೆಡ್ಡಿಯವರ ಮೂಲಕ ನನಗೆ ಬರಹೇಳಿದ್ದರು. ಬಾಬಾಬುಡನಗಿರಿ ಕುರಿತು ನಾನು ಬರೆದ ಲೇಖನ ಓದಿ ಮೆಚ್ಚಿಕೊಂಡು ಬರೆದಿದ್ದರು. (ಅವರಿಗೆ ಆ ಲೇಖನ ಇಷ್ಟವಾಗಿದ್ದು ನನ್ನ ಸಂಶೋಧನ ‘ಪ್ರತಿಭೆ’ಯಿಂದಲ್ಲ; ದತ್ತಾತ್ರೇಯನ ಸುತ್ತ ನಾಲ್ಕು ನಾಯಿಗಳೇಕಿವೆ ಎಂಬ ಚರ್ಚೆಯಿಂದ ಎಂದು ಈಗಲೂ ನನಗೆ ಅನುಮಾನ.) ಅವರ ಆಹ್ವಾನ ಸಂತೋಷ ಕೊಟ್ಟಿತ್ತು. ಆದರೆ ತೇಜಸ್ವಿ ಹೇಗೆ ವರ್ತಿಸುತ್ತಾರೊ ಎಂಬ ಹಿಂಜರಿಕೆಯಿಂದ ದಿನ ದೂಡಿಕೊಂಡಿದ್ದೆ. ಅಷ್ಟರಲ್ಲೇ ಸಾವಿನ ಸುದ್ದಿ ಬಂದು ಬಡಿಯಿತು. ಮನಸ್ಸು ಕಲ್ಲಿನೇಟು ಬಿದ್ದ ಹಕ್ಕಿಯಂತೆ ತೇಜಸ್ವಿ ತೇಜಸ್ವಿ ಎಂದು ಚಡಪಡಿಸಿತು.

ಈಗ ಅವರ ಮನೆಗೆ ಹೋಗುವ ಅವಕಾಶ ಅನಿರೀಕ್ಷಿತವಾಗಿ ಬಂದಿದೆ. ಆದರೆ ತೇಜಸ್ವಿಯವರಿಲ್ಲ. ವಿಚಿತ್ರವೆಂದರೆ, ನಾನು ಮೊಟ್ಟಮೊದಲು ಅವರನ್ನು ನೋಡಿದ್ದೇ ಸಾವಿನ ಸಂದರ್ಭವೊಂದರಲ್ಲಿ. ಅದು ನಾನು ಮೈಸೂರಿನಲ್ಲಿ ಎಂ.ಎ. ಓದುತ್ತಿದ್ದ ಕಾಲ (೧೯೮೨). ಆಗ ತೇಜಸ್ವಿಯವರ ತಾಯಿ ಹೇಮಾವತಿಯವರು ನಿಧನರಾಗಿದ್ದರು. ವಿದ್ಯಾರ್ಥಿಗಳಾದ ನಮಗೆ ‘ಕುವೆಂಪು ಅವರಿಗೆ ಈ ಸ್ಥಿತಿ ಬಂತಲ್ಲ’ ಎಂದು ದು:ಖ ಉಮ್ಮಳಿಸಿತು. ಕೂಡಲೆ ಕೆಲವರು ಕೂಡಿಕೊಂಡು ಕುವೆಂಪು ಅವರಿಗೆ ಸಂತಾಪ ಸೂಚಿಸಬೇಕೆಂದು ಭಾವಾವೇಶದಿಂದ ಉದಯರವಿಗೆ ಹೋದೆವು. ಅಲ್ಲಿ ಸಾವಿನ ಮನೆಯ ಗೌಜು ಇರಲಿಲ್ಲ. ಪರಿಸರ ನಿರ್ಜನವಾಗಿತ್ತು. ಚಂದಾ ಕೇಳಲು ಬಂದ ಅನಾಥಾಶ್ರಮದ ವಿದ್ಯಾರ್ಥಿಗಳಂತೆ ಗೇಟಿನ ಬಳಿ ನಿಂತಿದ್ದ ನಮ್ಮನ್ನು ನೋಡಿ, ಒಳಗಿದ್ದ ಯಾರೊ ಬಂದರು. ಕನ್ನಡ ಅಧ್ಯಯನ ಸಂಸ್ಥೆ ವಿದ್ಯಾರ್ಥಿಗಳು ಎಂಬ ಸುದ್ದಿ ಹೋಯಿತು. ಒಳಗೆ ಬರಲು ಅನುಮತಿ ಸಿಕ್ಕಿತು. ಅಲ್ಲಿ ಹೋದರೆ, ಹಜಾರದಲ್ಲಿ ಕುವೆಂಪು ಹಾಗೂ ತೇಜಸ್ವಿಯವರು ಬೆತ್ತದ ಕುರ್ಚಿಗಳಲ್ಲಿ ಅಕ್ಕಪಕ್ಕ ಗಂಭೀರವಾಗಿ ಮೌನವಾಗಿ ಕುಳಿತಿದ್ದರು. ಬಹುಶಃ ಒಬ್ಬರು ತಮ್ಮ ನಿಡುಗಾಲದ ಸಂಗಾತಿಯ, ಮತ್ತೊಬ್ಬರು ತಮ್ಮ ಹಡೆದಮ್ಮನ ಅಗಲಿಕೆಯನ್ನು ಏಕಾಂತದಲ್ಲಿ ಪರಿಭಾವಿಸುತ್ತಿದ್ದರು. ಈ ಯಾವ ಸೂಕ್ಷ್ಮತೆಯೂ ಇಲ್ಲದೆ ನುಗ್ಗಿದ ನಮಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಕುವೆಂಪು ಅವರಿಗೆ ಕೈಮುಗಿದು ಗೋಡೆಬದಿ ಸುಮ್ಮನೆ ಸಾಲಾಗಿ ನಿಂತೆವು. ಅವರಿಗೆ ಸಮಾಧಾನ ಹೇಗೆ ಹೇಳುವುದು? ಯಾಕಾದರೂ ಬಂದೆವೊ ಅನಿಸಿ ಉಸಿರುಗಟ್ಟತೊಡಗಿತು. ಸನ್ನಿವೇಶದ ಮುಜುಗರ ತಪ್ಪಿಸಲೆಂಬಂತೆ ತೇಜಸ್ವಿ ಎದ್ದು ತಣ್ಣಗೆ ಒಳಗೆ ಹೋದರು. ತಮ್ಮನ್ನೆ ಮಿಕಮಿಕ ನೋಡುತ್ತಿದ್ದ ನಮ್ಮತ್ತ ಕುವೆಂಪು ಒಮ್ಮೆ ಕರುಣೆಯಿಂದ ನೋಡಿ, ನೀವಿನ್ನು ಹೊರಡಬಹುದು ಎಂಬಂತೆ ಕೈಮುಗಿದರು.

ಎರಡನೇ ಸಲ ತೇಜಸ್ವಿಯವರನ್ನು ಕಂಡಿದ್ದು, ಕುಪ್ಪಳಿಯಲ್ಲಿ. ಕುವೆಂಪು ಜನ್ಮ ಶತಮಾನೋತ್ಸವದಲ್ಲಿ. ಆದಿನ ನನಗೆ ಚೆನ್ನಾಗಿ ನೆನಪಿದೆ. ಕುವೆಂಪು ಟ್ರಸ್ಟಿನವರು ಕುವೆಂಪು ಸಮಾಧಿಯನ್ನು ರಾಜಘಾಟ್‌ನ ಸಮಾಧಿಯಂತೆ ಹೂಗಳಿಂದ ಸಿಂಗರಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಅತಿಥಿಗಳು ಬಿಡಿಹೂವನ್ನು ಸಮಾಧಿಯ ಮೇಲೆ ಚೆಲ್ಲಿ ಶ್ರದ್ಧಾಂಜಲಿ ಸೂಚಿಸುವುದಿತ್ತು. ನಾವು ಹಾಗೆ ಮಾಡುವಾಗ, ತೇಜಸ್ವಿ ಮತ್ತು ರಾಜೇಶ್ವರಿ ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ದೂರ ನಿಂತು ನಮ್ಮಲ್ಲಿ ಗಿಲ್ಟ್ ಹುಟ್ಟಿಸುತ್ತಿದ್ದರು. ಇವರಿಬ್ಬರೂ ಕುವೆಂಪು ಶತಮಾನೋತ್ಸವ ಕಾರ್ಯಕ್ರಮಕ್ಕೆ ಹಂಪಿಗೆ ಬಂದಾಗಲೂ ಅಷ್ಟೆ. ಸಭೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಹೆಚ್ಚಾಗಿ ಕ್ಯಾಂಪಸ್ಸಿನಲ್ಲಿ ಅಡ್ಡಾಡಿಕೊಂಡಿದ್ದರು. ಯಾವಾಗಲಾದರೂ ಒಮ್ಮೆ ಸಭಾಂಗಣದ ಕಿಟಕಿಯಲ್ಲಿ ತಲೆಕಾಣಿಸಿ, ಕುರಿಕಾಯುವ ಹುಡುಗರು ಶಾಲೆಯಲ್ಲಿ ನಡೆಯವ ಪಾಠವನ್ನು ಕುತೂಹಲದಿಂದ ಇಣುಕುವಂತೆ ಇಣುಕಿ, ಮತ್ತೆ ಅಡ್ಡಾಡಲು ಹೋಗುತ್ತಿದ್ದರು. ಎಲ್ಲ ಫಾರ್ಮಾಲಿಟಿಗಳನ್ನು ತಮ್ಮ ವರ್ತನೆಗಳಿಂದ ಗೇಲಿಗೊಳಿಸುವ ಗುಣ ತೇಜಸ್ವಿಗಿತ್ತು.

ಈಗ ಹಾಗೆ ಮಾಡಬಹುದಾದ ತೇಜಸ್ವಿಯವರಿಲ್ಲ ಎಂಬುದು ಧೈರ್ಯವಾದರೆ, ಅವರಿಲ್ಲದ ಮನೆಗೆ ಹೋಗುವುದು ಸಂಕಟ ಅನಿಸುತ್ತಿದೆ. ವರ್ಷ ಕಳೆದರೂ ಸೂತಕದ ಭಾವ ಇನ್ನೂ ಹೋಗಿಲ್ಲ. ಲೇಖಕರಿಗೆ ಜಾತಿಮತಗಳಾಚೆ ನಿರ್ಮಾಣಗೊಳ್ಳುವ ಈ ಬಂಧುತ್ವ ರಕ್ತ ಸಂಬಂಧಕ್ಕಿಂತ ಗಾಢವಾದುದೇನೊ? ಮೂಡಿಗೆರೆಯಲ್ಲಿ ಬಸ್ಸಿಳಿದು, ಬಸ್‌ಸ್ಟ್ಯಾಂಡಿನಲ್ಲಿ ತೇಜಸ್ವಿಯವರ ಮನೆಯಿರುವ ಕೈಮರ ಎಲ್ಲಿದೆ ಎಂದು ವಿಚಾರಿಸಿದೆವು. ನಿಲ್ದಾಣದ ಮೇಲ್ವಿಚಾರಕನು “ಯಾವ ತೇಜಸ್ವಿ? ಗೊತ್ತಿಲ್ಲವಲ್ಲ. ಹ್ಯಾಂಡ್‌ಪೋಸ್ಟಾದರೆ ಎರಡು ಬಾಗಿಲಿರೊ ಬಸ್ಸು ಬರುತ್ತೆ. ನೋಡಿ ಹತ್ತಿಕೊಳ್ಳಿ” ಎಂದನು. ಆಟೋಸ್ಟ್ಯಾಂಡಿಗೆ ಬಂದು ಕೇಳಿದೆವು. ಅವರೆಲ್ಲರೂ ಕೂಡಲೇ “ತೇಜಸ್ವಿಯವರ ಮನೆಗಾ ಸಾರ್? ಏ ಯಾರು ಹೋಗ್ತೀರೊ ತೇಜಸ್ವಿ ಮನೆಗೆ?” ಎಂದು ಪರಸ್ಪರ ಮಾತಾಡಿಕೊಂಡರು. ಕಡೆಗೆ ಒಬ್ಬನು ಮುಂದೆ ಬಂದ. ನಾವು ಹತ್ತಿ ಕೂತಮೇಲೆ ಆತ ಒಂದು ಜಾಗತೋರಿಸಿ ‘ಸಾರ್ ಇದೇ ತೇಜಸ್ವಿ ಸ್ಕೂಟರ್ ನಿಲ್ಲಿಸುತ್ತಿದ್ದ ಜಾಗ. ಅವರಿಗಾಗಿ ನಾವು ಇಷ್ಟು ಜಾಗ ಖಾಲಿ ಯಾವಾಗಲೂ ಬಿಟ್ಟಿರುತ್ತಿದ್ದೆವು’ ಎಂದ. ಮೂಡಿಗೆರೆ ತುಂಬ ತೇಜಸ್ವಿ ನೆನಪುಗಳು ಹರಡಿಕೊಂಡಂತೆ ಅನಿಸಿತು. “ತೇಜಸ್ವಿಯವರ ಯಾವ ಪುಸ್ತಕ ಓದಿದಿಯಾ?” ಎಂದು ಕೇಳಿದರೆ ಯಾವುದೂ ಓದಿಲ್ಲವೆಂದ. ಆತ ಪ್ರತಿಯಾಗಿ ನಮ್ಮನ್ನೇ ವಿಚಾರಿಸತೊಡಗಿದ- ‘ತೇಜಸ್ವಿಯವರಿಗೆಷ್ಟು ಮಕ್ಕಳು? ಅವರ ಮಕ್ಕಳು ಎಲ್ಲಿದ್ದಾರೆ? ನಿಮಗೆಷ್ಟು ಮಕ್ಕಳು?’ ಇತ್ಯಾದಿ. ಜನ ಅಪರಿಚಿತರ ಜಾತಿಯನ್ನೊ ಊರನ್ನೊ ಉದ್ಯೋಗವನ್ನೊ ವಿಚಾರಿಸುವುದುಂಟು. ಅಂತಹುದರಲ್ಲಿ ಈತ ಜನರ ಸಂತಾನಶಕ್ತಿಯ ಬಗ್ಗೆ ವಿಚಾರಿಸುತ್ತಿದ್ದುದು ವಿಶೇಷವಾಗಿತ್ತು. ತೇಜಸ್ವಿಗೆ ಗೊತ್ತಾಗಿದ್ದರೆ ಇವನನ್ನು ತಮ್ಮ ಕಾದಂಬರಿಗೆ ಪಾತ್ರವಾಗಿ ಎಳೆದುಕೊಂಡು ಹೋಗಿರುತ್ತಿದ್ದರು.

ಆಟೋ ಬೇಲೂರು ರಸ್ತೆಯಲ್ಲಿ ಚಲಿಸಿ, ಕೈಮರದ ಬಳಿ ತಿರುವಿಕೊಂಡು, ಒಂದು ಎಸ್ಟೇಟಿನ ಗೇಟಿನ ಮುಂದೆ ನಿಂತಿತು. ಎಸ್ಟೇಟಿಗೆ ಹೆಸರಿರಲಿಲ್ಲ. ಮನೆಯೂ ಕಾಣಲಿಲ್ಲ. ಗೇಟುತೆಗೆದು ಒಳ ಬಂದೆವು. ಇಳಿಜಾರು. ತಾನೇ ದಬ್ಬಿಕೊಂಡು ಹೋಗುವಷ್ಟು ಇಳಿಜಾರು. ಸೊಕ್ಕಿಬೆಳೆದ ಕಾಫಿಗಿಡಗಳ ನಡುವೆ ಜೀಪುದಾರಿಯ ಎರಡು ಪಟ್ಟೆಗಳು ಮೂಡಿದ್ದವು. ಕಾಫಿಗಿಡಗಳು ಚಾಚಿದ ತೋಳಗೆಲ್ಲುಗಳಲ್ಲಿ ಕೆಂಪು-ಹಸಿರು ಹಣ್ಣನ್ನು ಪೋಣಿಸಿಕೊಂಡು ನಿಂತಿದ್ದವು. ಇಡೀ ತೋಟವೇ ಹಕ್ಕಿಗಳ ಜಾತ್ರೆಯಂತಾಗಿ ಕಲರವ ಹೊಮ್ಮುತ್ತಿತ್ತು. ಕೊಂಚ ದೂರ ನಡೆದ ಬಳಿಕ ಕೆಂಪುಹಂಚಿನ ಮನೆಮಾಡು ಕಾಣಿಸಿತು. ಇನ್ನೂ ಕೆಳಗೆ ಇಳಿದಬಳಿಕ ಮಟ್ಟಸವಾದ ಚಿಕ್ಕಮೈದಾನದಲ್ಲಿ ಇಡೀ ಮನೆ ಮೈದೋರಿತು. ಮನೆಯ ಸುತ್ತ ನೀಟಾಗಿ ಕತ್ತರಿಸಿ ಬೆಳೆಸಿದ ಅಲಂಕಾರದ ಗಿಡಗಳು. ಹುಲ್ಲುಹಾಸು. ಮನೆಯೊಳಗಿಂದ ಮಹಿಳೆಯೊಬ್ಬರ ಮಾತಿನ ಸದ್ದು ಜೋರಾಗಿ ಕೇಳಿಸುತ್ತಿತ್ತು. ರಾಜೇಶ್ವರಿಯವರದೇ ಇರಬಹುದು. ಯಾರೊ ಅತಿಥಿಗಳು ಬಂದಿರಬೇಕು. ಅವರು ಹೊರಬಂದ ಮೇಲೆ ಹೋಗೋಣ ಎಂದು, ಪಕ್ಕದಲ್ಲಿದ್ದ ಒಂದು ಶೆಡ್ಡಿನತ್ತ ಹೋದೆವು. ಅಲ್ಲಿ ಸೌದೆ ಒಟ್ಟಲಿತ್ತು. ಅದರ ಪಕ್ಕ ತೇಜಸ್ವಿಯವರ ಸುಪ್ರಸಿದ್ಧ ಸ್ಕೂಟರ್ ನಿಂತಿತ್ತು. ರೈಲಿನಲ್ಲಿ ಪಾರ್ಸೆಲ್ ಮಾಡಲು ಪ್ಯಾಕ್ ಮಾಡಿದಂತೆ, ಅದು ಗೋಣಿಯ ಬ್ಯಾಂಡೇಜನ್ನು ಬಿಗಿಸಿಕೊಂಡಿತ್ತು. ಧೂಳುಹಿಡಿದ ಅದರ ಹ್ಯಾಂಡಲನ್ನು ನವಿರಾಗಿ ಮುಟ್ಟಿದೆ. ಅದು ಅಲುಗಾಡಿತು.

ಶೆಡ್ಡಿನ ಪಕ್ಕದಲ್ಲಿ ಒಂದು ಕಣ. ಅದರಲ್ಲಿ ಬೇರೆಬೇರೆ ಬಣ್ಣದ ಕಾಫಿಬೀಜ ಒಣ ಹಾಕಿದ್ದರು. ದೂರದಲ್ಲಿ ಕೆಲಸಗಾರನೊಬ್ಬ ಹೊಸ ಕಣ ಕೆತ್ತುತ್ತಿದ್ದ. ಒಬ್ಬ ಹೆಂಗಸು, ಸೀರೆಯ ಮೇಲೆ ಹಳೆಯ ತುಂಬುತೋಳಿನ ಶರಟು ತೊಟ್ಟು, ಕಣಕೆತ್ತಿದ ಮಣ್ಣನ್ನು ದೂರ ಚೆಲ್ಲಿಬರುತ್ತಿದ್ದಳು. ಇವನ್ನೆಲ್ಲ ನೋಡುತ್ತ ಅಡ್ಡಾಡಿಕೊಂಡಿರುವಾಗ ನಮ್ಮ ಸುಳಿದಾಟ ಕಂಡ ರಾಜೇಶ್ವರಿ ತಟ್ಟನೆ ಹೊರ ಬಂದು ಸ್ವಾಗತಿಸಿದರು. ೭೧ ವರ್ಷವಾದರೂ ಚಟುವಟಿಕೆಯಿಂದ ತುಡಿಯುತ್ತಿದ್ದರು. ನಾವು ಬರುವ ವರ್ತಮಾನ ಅವರಿಗೆ ಮೊದಲೇ ಇತ್ತು. ಕುಪ್ಪಳಿಯಲ್ಲಿ ನಡೆದ ಕುವೆಂಪು ಕಾರ್ಯಕ್ರಮದಲ್ಲಿ ನನ್ನ ನೋಡಿದ್ದನ್ನು ನೆನಪಿಸಿಕೊಂಡರು. ಅಲ್ಲಿದ್ದ ಸಸ್ಯವಿಜ್ಞಾನಿ ಮಲಿಕ್ ಅವರನ್ನು ಪರಿಚಯಿಸಿದರು. ಅವರ ಚರ್ಚೆಯಿನ್ನೂ ಮುಗಿದಂತಿರಲಿಲ್ಲ. ‘ನಾವು ತೋಟ ಅಡ್ಡಾಡಿ ಬರುತ್ತೇವೆ’ ಎಂದು ಹೊರಟೆವು.

ಮನೆ ಪಕ್ಕದ ಸಣ್ಣಕೆರೆಗೆ ಮೇಲಿಂದ ಸಣ್ಣಗಿನ ಝರಿ ಜುಳುಜುಳು ಹರಿದು ಸೇರುತ್ತಿತ್ತು. ಮಲೆನಾಡು ಕರಾವಳಿಗಳಲ್ಲಿ ಹೊಂಡಕ್ಕೂ ಕೆರೆ ಎನ್ನುತ್ತಾರೆ. ಬೆಟ್ಟದ ಮೇಲಿಂದ ಹರಿದು ಬರುವ ಝರಿಯನ್ನು ತಡೆದು ನೀರು ನಿಲ್ಲಿಸಲಾಗಿತ್ತು. ಸಣ್ಣಕೆರೆ ತುಂಬಿ ನೀರು ದೊಡ್ಡಕೆರೆಗೆ ಹರಿಯುತ್ತಿತ್ತು. ಅದರಲ್ಲಿ ದೊಡ್ಡ ಮೀನುಗಳು ಕಪ್ಪನೆ ನೆರಳುಗಳಂತೆ ಮೆಲ್ಲಗೆ ಚಲಿಸುತ್ತಿದ್ದವು. ಸಣ್ಣಾಳದ ನೀರಿನಲ್ಲಿ ಅವುಗಳ ಬೆನ್ನೇಣು ಕಾಣುತ್ತಿತ್ತು. ಮೀನು ತಪ್ಪಿಸಿಕೊಳ್ಳದಂತೆ ಝರಿಯ ಹೊರಚಾಚಿಗೆ ಜಾಲರಿಯಿತ್ತು. ಕೆರೆದಂಡೆಗೆ ಅಂಚುಕಟ್ಟಿದಂತೆ ದಟ್ಟವಾಗಿ ಹುಲ್ಲು ತೇಜಸ್ವಿಯ ಗಡ್ಡದಂತೆ ಎರ್ರಾಬಿರ್ರಿ ಬೆಳೆದಿತ್ತು. ಅದರ ಮೇಲೆ ಬಣ್ಣಬಣ್ಣದ ಹೆಲಿಕ್ಯಾಪ್ಟರ್ ಚಿಟ್ಟೆಗಳು. ದಡದಲ್ಲಿ ಕೆಲಸಗಾರರಿಗೆ ಕಟ್ಟಿಸಿದ ಗೂಡಿನಂತಹ ಕಿರುಮನೆಗಳ ಲೈನು. ತೋಟದ ತುಂಬ ಕಳೆಯಂತೆ ಬೆಳೆದ ಸುವಾಸನೆಯ ದವನ. ಸಂಪಿಗೆ ಮರದಡಿ ಹಕ್ಕಿಫೋಟೊ ತೆಗೆಯಲು ಕಟ್ಟಿಕೊಂಡ ಸೊಳ್ಳೆಪರದೆಯಂತಹ ಮರಸು. ಕೆಳಗೆ ಜಿಗ್ಗಿನಲ್ಲಿ ಅಡಕೆ ತೋಟ.

ಇವುಗಳಲ್ಲೆಲ್ಲ ಆಕರ್ಷಕವಾಗಿದ್ದುದು ಚಕ್ಕೋತದ ಮರ. ಹಚ್ಚಹಸುರಿನಿಂದ ಕೂಡಿದ್ದ ಅದು ಬಂಗಾರಬಣ್ಣದ ಫುಟ್‌ಬಾಲ್ ಗಾತ್ರದ ಹಣ್ಣುಗಳನ್ನು ಜಗ್ಗಿಸಿಕೊಂಡು ನಿಂತಿತ್ತು. ಅದರ ಹಿಂದೆ ಬಾಳೆಯ ಗಿಡವೊಂದು ಮಕ್ಕಳು ಮರಿ ಜತೆ ಗ್ರೂಪ್‌ಫೋಟೊಗೆ ನಿಂತಂತೆ ನಿಂತಿತ್ತು. ಕಿಟಕಿ ಪಕ್ಕದಲ್ಲಿ ಬೆಳೆದಿದ್ದ ಫರ್ನ್ ಜಾತಿಯ ಗಿಡದ ತುದಿಗೆ ಹಕ್ಕಿಯೊಂದು ಗೂಡುಕಟ್ಟುತ್ತಿತ್ತು. ಕಾಮಗಾರಿ ಇನ್ನೂ ಮುಗಿದಿರಲಿಲ್ಲ. ಝರಿ, ಕೆರೆ, ಕಾಡು, ಉದ್ಯಾನ, ತೋಟ, ಅಂಗಳ, ಕಣ, ಮನೆ ಎಲ್ಲವೂ ಒಂದು ಬಗೆಯ ಎಕಾಲಜಿಕಲ್ ಅದ್ವೈತದಲ್ಲಿ ಗಡಿಗಳನ್ನು ಕಲಸಿಕೊಂಡು ಒಂದಾಗಿದ್ದವು. ಇವನ್ನೆಲ್ಲ ನೋಡುತ್ತ ನಮಗೆ ಮನೆಯೊಳಗೆ ಹೋಗುವ ಖಬರೇ ಇಲ್ಲ.

ಮಲಿಕರನ್ನು ಕಳಿಸಿದ ಬಳಿಕ, ರಾಜೇಶ್ವರಿ ನಮ್ಮನ್ನು ಕರೆಯಲು ಬಂದರು. ಹೋಗಿ ಹಾಲಲ್ಲಿ ಕುಳಿತೆವು. ಅಲ್ಲಿ ಕುಳಿತರೆ ಮನೆಯಲ್ಲಿದ್ದೇವೆಂದೇ ಅನಿಸುವುದಿಲ್ಲ. ಗಾಜಿನ ಮನೆಯೊಂದನ್ನು ಅನಾಮತ್ತಾಗಿ ತಂದು ದಟ್ಟಕಾಡಿನಲ್ಲಿಟ್ಟಿರುವಂತೆ ಭಾಸವಾಗುತ್ತದೆ. ನಾನು ಚಕ್ಕೋತ ಮರಕ್ಕೆ ಮುಖಮಾಡಿ ಕುಳಿತುಕೊಂಡೆ. ರಾಜೇಶ್ವರಿ ಪ್ರೀತಿಯಿಂದ “ಏನು ಕೊಡಲಿ?” ಎಂದರು. ‘ಕಾಫಿ’ ಎಂದೆವು. “ತರ್ತೇನೆ. ಅಲ್ಲೀತನಕ ಈ ಹಣ್ಣು ತಿನ್ನಿ. ಇದು ತೇಜಸ್ವಿ ನಟ್ಟಮರದ್ದು” ಎಂದು ಹೇಳಿ ಕಿತ್ತಳೆಯ ಬುಟ್ಟಿಯನ್ನು ಮುಂದಿಟ್ಟರು. ಹಸಿರು ಉಂಡೆಗಳಂತಿದ್ದ ಅವನ್ನು ಸುಲಿದು ತಿಂದೆವು. ತೊಳೆ ಕೊಂಚ ಹುಳಿಯಾಗಿದ್ದವು.

ತೇಜಸ್ವಿ ಕೆಲಸ ಮಾಡುತ್ತಿದ್ದ ರೂಮನ್ನೂ, ಮಹಡಿಯನ್ನೂ ನೋಡಿದೆವು. ನೂರಾರು ಯೋಜನೆಗಳನ್ನು ತಲೆಯಲ್ಲಿ ತುಂಬಿಕೊಂಡಿದ್ದ ಅವರು, ಮಾಡುತ್ತಿದ್ದ ಕೆಲಸಗಳನ್ನು ಅಷ್ಟಷ್ಟಕ್ಕೆ ಬಿಟ್ಟು ಸಾವಿನ ಕರೆಗೆ ಓಗೊಟ್ಟು ಹೋದಂತಿತ್ತು. ಕಿಟಕಿ ಪಕ್ಕದಲ್ಲೇ ಒಂದು ಒಣಕೊಂಬೆ ಸಿಕ್ಕಿಸಿ, ಅಲ್ಲಿ ಕಾಳು ನೀರು ಇಟ್ಟು ಹಕ್ಕಿಗಳು ಬರುವಂತೆ ಉಪಾಯ ಮಾಡಿಕೊಂಡಿದ್ದರು. ಹಕ್ಕಿ ಬಂದರೂ ತೆಗೆಯುವ ಚಿತ್ರಕಾರನಿಲ್ಲ. ಅಲ್ಲಿಂದ ಒಂದು ಕಣಿವೆಯಂತಹ ದಟ್ಟಕಾಡಿನ ಭಾಗ ಕಾಣುತ್ತದೆ. ಅಲ್ಲೊಂದು ಝರಿಯಿದೆ. ಒಂದು ಝರಿಯ ಜಾಡಿನ ಕತೆಗೆ ಕಾರಣವಾದ ಝರಿ ಇದೇನಾ ಎಂದು ಶಿವಾರೆಡ್ಡಿಯವರಿಗೆ ಕೇಳಿದೆ. ಹೌದೆಂದರು. ಕೃತಿಯ ಮೂಲಕ ನನ್ನಲ್ಲಿ ರೂಪುಗೊಂಡಿದ್ದ ಝರಿಯ ಚಿತ್ರ ಅಲುಗಿದಂತಾಯಿತು. ತೇಜಸ್ವಿಯವರ ಬರಹದಲ್ಲಿರುವ ವ್ಯಕ್ತಿಗಳ ಇಲ್ಲವೇ ತಾಣಗಳ ಮೂಲ ಪತ್ತೆಮಾಡಬಾರದು ಎಂದು ನಿರ್ಧರಿಸಿದೆ.

ತೇಜಸ್ವಿ ದಂಪತಿ ಮಗಳು ಸುಸ್ಮಿತಳೊಂದಿಗೆ ಕಾಫಿಯ ಜತೆ ಬಂದ ರಾಜೇಶ್ವರಿ ಮಾತಿಗೆ ಕೂತರು. ನಿರಂತರ ಮಾತಾಡುತ್ತ ಹೋದರು. ನಾವು ಕೇಳಿಸಿಕೊಳ್ಳುತ್ತ ಹೋದೆವು. ಅರ್ಧಶತಮಾನದ ನೆನಪುಗಳು ಉಕ್ಕಿಉಕ್ಕಿ ಬರುತ್ತಿದ್ದವು. ರಾಜೇಶ್ವರಿ ಎಲ್ಲವನ್ನು ಇಸವಿ ಸಮೇತ ಕರಾರುವಾಕ್ಕಾಗಿ ಹೇಳುತ್ತಿದ್ದರು. ಸಿರಿವಂತ ಕುಟುಂಬದಲ್ಲಿ ಹುಟ್ಟಿಬೆಳೆದ ತೇಜಸ್ವಿಯವರ ಸರಳತೆ ಬಗ್ಗೆ ರಾಜೇಶ್ವರಿಯವರಿಗೆ ಬಹಳ ಅಭಿಮಾನ. ಒಮ್ಮೆ ಮದುವೆಗೆ ಮುಂಚೆ ತಮ್ಮ ಮನೆಗೆ ತೇಜಸ್ವಿಯವರು ಬಂದಾಗ, ಅಲ್ಯುಮಿನಿಯಂ ತಟ್ಟೆಯಲ್ಲಿ ಊಟಕೊಟ್ಟರಂತೆ. ಅದರ ಬಗ್ಗೆ ಗಮನವೇ ಇಲ್ಲದೆ ತೇಜಸ್ವಿ ಉಂಡರಂತೆ. ಅದನ್ನು ಕಂಡು ರಾಜೇಶ್ವರಿಯವರಿಗೆ ಇವರಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಅನಿಸಿಬಿಟ್ಟಿತಂತೆ.

ತೇಜಸ್ವಿ ಸಾಹಿತ್ಯದ ಗಂಭೀರ ವಿದ್ಯಾರ್ಥಿನಿಯಂತಿದ್ದ ರಾಜೇಶ್ವರಿ ಸಾಲುಗಳನ್ನೆಲ್ಲ ನೆನಪಿಟ್ಟುಕೊಂಡಿದ್ದರು. ಕೆಲವು ಸಾಲನ್ನು ಉಲ್ಲೇಖಿಸಿ, ‘ಹೀಗೆ ಯೋಚಿಸಲು ಯಾರಿಗೆ ಬರುತ್ತೆ? ನಿಮಗಾಗುತ್ತಾ? ನನಗಾಗುತ್ತಾ?’ ಎಂದು ಕೇಳುತ್ತ ತಮ್ಮ ತೇಜಸ್ವಿ ಎಷ್ಟು ಅನನ್ಯ ಎಂದು ಹೇಳುತ್ತಿದ್ದರು. ಜಗತ್ತಿನ ಎಲ್ಲವನ್ನು ತೇಜಸ್ವಿಗೆ ಲಗತ್ತಿಸಿ ಮಾತಾಡುತ್ತಿದ್ದರು. ಮನೆಯ ಪ್ರೀತಿಯ ನಾಯಿ, ಲಾರಿಗೆ ಸಿಕ್ಕಿ ಪ್ರಾಣ ಬಿಡುವಾಗ, ತೇಜಸ್ವಿಯವರು ಅದನ್ನು ಮಗುವಿನಂತೆ ತಬ್ಬಿಕೊಂಡು ತೋಟದ ಮೂಲೆಮೂಲೆಗೆ ಒಯ್ದು, ‘ನೋಡೊ ನೋಡು, ಇದು ನೀನು ಓಡಾಡಿದ ನೆಲ. ಕೊನೆಯ ಸಲ ನೋಡಿಕೊ’ ಎಂದು ಹುಚ್ಚರಂತೆ ಓಡಾಡಿದ್ದನ್ನು ನೆನೆದರು. ಕೂಡಲೇ ಅವರ ಕಂಠ ತುಂಬಿಬಂದು ಮಾತು ನಿಂತಿತು. ತಮ್ಮೆರಡೂ ತೋರುಬೆರಳುಗಳನ್ನು ಕನ್ನಡಕದೊಳಗೆ ತೂರಿಸಿ ಕಣ್ಣುಗಳನ್ನು ಮುಚ್ಚಿಕೊಂಡು ಸುಮ್ಮನಾದರು. ಅವಕ್ಕೆ ಹರಿವ ಕಂಬನಿಯನ್ನು ತಡೆಯಲಾಗಲಿಲ್ಲ. ತೇಜಸ್ವಿಯವರ ಅಗಲಿಕೆಯ ನೋವು ಎಷ್ಟು ಹಸಿಯಾಗಿದೆ- ವರ್ಷ ತುಂಬಿದರೂ. ಬಹುಶಃ ಅದು ಮಾಯದ ಗಾಯ. ತೇಜಸ್ವಿ ತಮ್ಮನ್ನು ಅಲೆಮಾರಿ ಅಂದುಕೊಂಡಿರಬಹುದು. ಆದರೆ ಅವರಂತಹ ‘ಗೃಹಸ್ಥ’ ಬೇರಿಲ್ಲ. ತೋಟಮನೆ ಬಿಟ್ಟು ಹೊರಗೆ ಹೆಚ್ಚು ಹೋಗುತ್ತಿರಲಿಲ್ಲ. ಅರ್ಧಶತಮಾನ ಕಾಲ ತಾನು ಪ್ರೀತಿಸಿ ಮದುವೆಯಾದ ವ್ಯಕ್ತಿಯ ಜತೆ ನಿರಂತರವಾಗಿ ಸಮಯ ಕಳೆದ ಈ ಜೀವ, ಇದ್ದಕ್ಕಿದ್ದಂತೆ ಅದರಿಂದ ಅಗಲಿ ವೇದನೆ ಅನುಭವಿಸುತ್ತಿದೆ-ರಾಮಾಯಣದ ಕ್ರೌಂಚದಂತೆ.

ಹಕ್ಕಿ ಫೋಟೊಗಾಗಿ ಮರಸಿನಲ್ಲಿ ಕೂತಿದ್ದ ತೇಜಸ್ವಿಗೆ ಊಟಕ್ಕೆ ಕೂಗಿ ಕರೆದೊ, ಒಗ್ಗರಣೆಗೆ ಕರಿಬೇವಿನಸೊಪ್ಪು ತರಲೆಂದು ಹೋಗಿ ಹಕ್ಕಿ ಓಡಿಸಿಯೊ ಬೈಸಿಕೊಂಡಿದ್ದನ್ನು ರಾಜೇಶ್ವರಿ ಪ್ರೀತಿಯಿಂದ ನೆನೆದರು- ಹಾಗೆ ಬೈಯುವವರಿಲ್ಲವಲ್ಲ ಎಂಬ ಕೊರಗಿನಲ್ಲಿ. ಮಧ್ಯಾಹ್ನವಾಗುತ್ತಿತ್ತು. ಹೊರಗೆ ಹಕ್ಕಿಗಳ ದನಿಯಿಲ್ಲ. ಅವು ಎಲ್ಲೋ ಅಡಗಿ, ಇಡೀ ವಾತಾವರಣ ಮೌನದಿಂದ ನಿರುತ್ತರವಾಗಿತ್ತು. ಊಟವಾದ ಬಳಿಕ, ಮತ್ತೆ ಮಾತು. ಮತ್ತೆ ಕಾಫಿ. ಹಗಲು ಇಳಿಯತೊಡಗಿತು. ಮಧ್ಯಾಹ್ನದ ನೀರವವನ್ನು ಮುರಿವಂತೆ, ಮತ್ತೆ ಚಟುವಟಿಕೆ ಆರಂಭ. ಮನೆಯಲ್ಲಿ ೨೦ ವರ್ಷಗಳಿಂದ ಕೆಲಸಕ್ಕಿರುವ ದೇವಕಿ ಗಿಡಗಳಿಗೆ ನೀರುಣಿಸತೊಡಗಿದಳು. ಅವಳ ಜತೆ ಮಾತಾಡಲು ಹೊರಗೆ ಹೋದೆ. ‘ತೇಜಸ್ವಿ ಅಯ್ಯ ಭಾಳ ನಗಿಸುತ್ತಿದ್ದರು’ ಎಂದು ನೆನೆದಳು. ಚಕ್ಕೋತದ ಮರದ ಕೆಳಗೆ ಬಂದು ನಿಂತೆ. ಅದನ್ನು ಕಂಡು ರಾಜೇಶ್ವರಿ ಮನೆಯೊಳಗೆ ಕತ್ತಲಮೂಲೆಯಲ್ಲಿ ಇಟ್ಟಿದ್ದ ಮಾಗಿದ ಚಕ್ಕೋತವನ್ನು ಸುಲಿದು ಎಲ್ಲರಿಗೂ ಕೊಡುವಂತೆ ದೇವಕಿಗೆ ಕೊಟ್ಟರು. ದೇವಕಿ ಬಾಗುಗತ್ತಿ ತೆಗೆದುಕೊಂಡು, ಗೊಮ್ಮಟನನ್ನು ಕಟೆದು ತೆಗೆವ ಶಿಲ್ಪಿಯಂತೆ, ಚಕ್ಕೋತದ ಹಳದಿ ಸಿಪ್ಪೆಯನ್ನೂ, ಅದಕ್ಕೆ ಹತ್ತಿಕೊಂಡಿದ್ದ ಗುಲಾಬಿಬಣ್ಣದ ಕೆಂಚಾದ ಹತ್ತಿಯಂತಹ ದಪ್ಪನಾದ ಮೆತ್ತೆಯನ್ನೂ ಕತ್ತರಿಸಿ, ಒಳಗೆ ಒಂದಕ್ಕೊಂದು ತಬ್ಬಿಕೊಂಡು ಸುಖವಾಗಿ ಪವಡಿಸಿದ್ದ ತಿಳಿಗುಲಾಬಿ ತೊಳೆಗಳನ್ನು ಅನಾವರಣಗೊಳಿಸಿದಳು. ಅವು ತೇಜಸ್ವಿ ತರಹ ಒಗರಿನಿಂದ ತುಂಬಿದ್ದವು. ಚಕ್ಕೋತವನ್ನು ಗಿಡದಿಂದ ಕಿತ್ತಕೂಡಲೇ ತಿನ್ನಬಾರದಂತೆ. ಅದನ್ನು ಕೆಲವು ದಿನ ಕತ್ತಲಮೂಲೆಯಲ್ಲಿ ಕಳಿಯಲು ಬಿಡಬೇಕಂತೆ.

ರಾಜೇಶ್ವರಿ ತೇಜಸ್ವಿಯವರೊಂದಿಗೆ ಲೇಖಕರು ಅನುಭವದಿಂದ ಮಾಗಿರುವ ರಾಜೇಶ್ವರಿ, ತೇಜಸ್ವಿ ತೀರಿಕೊಂಡ ಬಳಿಕ ಲೇಖಕಿಯಾಗಿ ಹೊಮ್ಮುತ್ತಿದ್ದಾರೆ. ತಾರಿಣಿಯವರು ಕುವೆಂಪು ಅವರ ಇನ್ನೊಂದು ಮುಖವನ್ನು ಕಟ್ಟಿಕೊಟ್ಟಂತೆ ರಾಜೇಶ್ವರಿ ತೇಜಸ್ವಿಯವರನ್ನು ಕಟ್ಟಿಕೊಡುತ್ತಿದ್ದಾರೆ. ಅವರ ಸರಳ ಅಮಾಯಕ ಬರಹ ಆಪ್ತವಾಗಿದೆ. ತೇಜಸ್ವಿಯಂತಹ ಕಣ್ಕೋರೈಸುವ ಬೆಳಕಿನ ಜತೆ ಬದುಕಿದ ರಾಜೇಶ್ವರಿಯವರಲ್ಲಿ ಸಹಜವಾಗಿ ಅಭಿಮಾನ ತುಳುಕುತ್ತಿದೆ. ಆದರೆ ಅದುವೇ ತೇಜಸ್ವಿ ಚಿತ್ರವು ತನ್ನ ಮಾನುಷ ಸಹಜ ಮಿತಿಗಳ ಸಮೇತ ಮೂಡದಂತೆ ತಡೆದಿದೆ.

ಜೀವಮಾನವೆಲ್ಲ ತೇಜಸ್ವಿಯ ಓದುಗರಿಗೂ, ಗೆಳೆಯರಿಗೂ ಉಪಚರಿಸಿ ದಣಿದಿರುವ ರಾಜೇಶ್ವರಿ ಅವರಿಗೆ ಈಗಲೂ ನಮ್ಮಂತಹವರ ಕಾಟ ತಪ್ಪಿಲ್ಲ. ತನ್ನ ನಲ್ಲನನ್ನು ಪ್ರೀತಿಸುವ ಜನ ಇರುವೆಯಂತೆ ಬರುತ್ತಿದ್ದಾರೆ. ಅವರ ಬರವನ್ನು ತಡೆಯಲಾರರು. ಹಾಗೆಂದು ಬಂದವರಿಗೆಲ್ಲ ಉಪಚರಿಸಿಕೊಂಡೂ ಇರಲಾರರು. ಸಂದರ್ಶಕರ ಭೇಟಿಯಿಂದ ತಮಗೆ ಬರಹ ಮುಗಿಸಲು ಆಗುತ್ತಿಲ್ಲ ಎಂದು ಸಣ್ಣಗೆ ಅವರು ಚಡಪಡಿಸುತ್ತಿರುವಂತೆ ತೋರಿತು. ಇವತ್ತಂತೂ ಅವರು ಬಹಳ ಮಾತಾಡಿ ಸುಸ್ತಾಗಿದ್ದರು. ಹೊರಳು ಸೂರ್ಯನ ಬೆಳಕಲ್ಲಿ ನಿಂತಿದ್ದ ಅವರಿಗೆ ನಮಸ್ಕರಿಸಿ ಹೊರಟೆವು.

ಮನೆಗೆ ಬರಲು ಸಾಧ್ಯವಾಗದ ಡಾ.ಪ್ರೀತಮ್ ಮಗುವಿಗೆ ಕೊಡಲೆಂದು ರಾಜೇಶ್ವರಿ ಒಂದು ಪುಟ್ಟ ಸರವನ್ನೂ, ನಾಲ್ಕೈದು ನವಿಲುಗರಿಗಳನ್ನೂ ಕೊಟ್ಟರು. ನಾನೊಂದು ಬಳ್ಳಿಯ ಚೂರನ್ನು ಹಿತ್ತಲಲ್ಲಿ ನೆಡಲು ಕೇಳಿ ಪಡೆದುಕೊಂಡೆ.

[ಚಿತ್ರಗಳು – ಕಲೀಂ ಮತ್ತು ಸಂಗ್ರಹದಿಂದ]