ಶಿವಮೊಗ್ಗೆಯಿಂದ ಹೊಸಪೇಟೆಗೆ ಬಂದಾಗ, ಊರೊಳಗೆ ಒಂದು ಮನೆ ಸಿಕ್ಕಿತು. ಮನೆಯ ಮಾಲಕರು, ಆಂಧ್ರ ಕಡೆಯ ಕೋಮಟಿಗರು. ಒಳ್ಳೆಯವರು. ನಮ್ಮ, ಅವರ ಸಂಬಂಧ ಮಧುರವಾಗಿತ್ತು. ಇದಕ್ಕೆ ತಕ್ಕಂತೆ ಅವರ ಸಂಪಿಗೆಮರವು, ತನ್ನ ಕೊಂಬೆಯನ್ನು ನಮ್ಮ ಕಿಟಕಿವರೆಗೂ ಚಾಚಿತ್ತು. ಈ ಸಂಬಂಧಕ್ಕೆ ಹುಳಿ ಹಿಂಡಿದ್ದು ನಮ್ಮ ಫಿಶ್‌ಫ್ರೈ ಸುವಾಸನೆ. ಅದರ ಘಾಟಿಗೆ ಬೆಚ್ಚಿಬಿದ್ದ ಮಾಲಕರು ‘ಮನೆಬಿಡಿ’ ಎಂದೇನೂ ಹೇಳಲಿಲ್ಲ. ಮನೆ ತಮ್ಮ ಸ್ವಂತ ಬಳಕೆಗೆ ಬೇಕಾಗಿದೆ ಎನ್ನತೊಡಗಿದರು. ಸಾಹಿತ್ಯದಲ್ಲಿ ಧ್ವನಿಪ್ರಸ್ಥಾನ ಓದಿರುವ ನನಗಿದು ಅರ್ಥವಾಯಿತು. ಹೊಸಮನೆ ಹುಡುಕತೊಡಗಿದೆ. ಮಾಂಸಾಹಾರಿಗಳಿಗೆ ಕೇಳಿದ ಕಡೆಯಲ್ಲೆಲ್ಲ ಮನೆ ಸಿಗುವುದಿಲ್ಲವಷ್ಟೆ. ಆದರೆ ಸಂಸಾರಸ್ಥರು ಹೋಗಲು ಹಿಂಜರಿವ ಜಾಗದಲ್ಲಿ ನನಗೆ ಸುಲಭವಾಗಿ ಒಂದು ಮನೆ ಸಿಕ್ಕಿತು.

ಅದು ಊರ ಹೊರಗೆ ಇನ್ನೂ ಕಣ್ಬಿಡುತ್ತಿದ್ದ ಹೊಸ ಬಡಾವಣೆಯಲ್ಲಿತ್ತು. ಮನೆ ಸಾಧಾರಣವಾಗಿದ್ದರೂ ಆಸುಪಾಸಿನ ಪರಿಸರ ಅಪೂರ್ವವಾಗಿತ್ತು. ಊರಿಗೆ ಪಡುವಣ ದಿಸೆಯಿಂದ ನಮ್ಮದೇ ಮೊದಲ ಮನೆ. ಸೂರ್ಯನ ಪ್ರಥಮ ಕಿರಣಗಳು ನಮ್ಮಲ್ಲಿ ಹೊಕ್ಕ ಬಳಿಕವೇ ಊರೊಳಗೆ ತೆರಳಬೇಕಿತ್ತು. ಬಾಗಿಲ ತೆರೆದರೆ, ಮುಂದೆ ಪಚ್ಚೆಯ ಚಾಪೆಯಂತೆ ಹರಡಿದ ಹೊಲಗಳು. ಅವುಗಳ ನಡುವೆ ಸಣ್ಣನದಿಯಂತೆ ಹರಿವ ತುಂಗಭದ್ರಾ ಕಾಲುವೆ. ಅದನ್ನು ದಾಟಿದರೆ ಕಬ್ಬಿನ ಗದ್ದೆ. ಅವಕ್ಕಂಟಿಕೊಂಡು ತೆಂಗಿನತೋಟ. ಮನೆಯ ಮುಂದಿನ ಬಯಲಿಗೆ ತಮ್ಮ ಕುರಿ ತಂದು ಮಂದೆ ಕೂರಿಸುತ್ತಿದ್ದ ಬೆಳಗಾವಿ ಕಡೆಯ ಕುರುಬರು. ಆ ಮಂದೆ ಕಾಯುತ್ತಿದ್ದ ಹುಲಿಯಂತಹ ಅವರ ನಾಯಿಗಳು. ಚಳಿಗಾಲದಲ್ಲಿ ನೆಲಕ್ಕೆ ಸಹಸ್ರ ನತ್ತುಗಳನ್ನು ಜೋಡಿಸುತ್ತಿದ್ದ ಹುಲ್ಲಿನೆಸಳ ಇಬ್ಬನಿ. ಹುಲ್ಲುಬೀಜ ತಿನ್ನಲು ಬರುವ ಪುಟ್ಟಹಕ್ಕಿಗಳು. ರಾತ್ರಿಹೊತ್ತು ಸಣ್ಣ ಸಪ್ಪಳವಾದರೂ ‘ಹುತ್ತೀತ್ ತಿತ್’ ಎಂದು ಅರಚುವ ಟಿಟ್ಟಿಭಗಳು. ಇಲ್ಲೇ ಇದ್ದರೆ ನಾನೊಬ್ಬ ಕವಿಯಾಗುವೆ ಅನಿಸಿತು.

ಆದರೆ ಅಲ್ಲೊಂದು ಸಣ್ಣ ಸಮಸ್ಯೆಯಿತ್ತು. ಕಳ್ಳತನಕ್ಕೆ ಸದರಿ ಬಡಾವಣೆ ಖ್ಯಾತವಾಗಿತ್ತು. ಅಲ್ಲಿ ಬೆಳಗಾದರೆ ಕಳೆದ ರಾತ್ರಿ ಯಾರಮನೆಗೆ ನುಗ್ಗಿದ್ದರು, ಹೇಗೆ ದೋಚಿದರು ಎಂಬುದೇ ಚರ್ಚೆಯ ವಿಷಯ. ಪ್ರಾಣಕೊಡಲು ಇಷ್ಟು ದೂರಬರಬೇಕಾಯಿತೇ ಎಂದು ಪರೇಶಾನಾಯಿತು. ಕಳವಳದಿಂದ ಚಿಕ್ಕದಾದ ನಮ್ಮ ಮುಖ ನೋಡಿದ ಮನೆಯೊಡೆಯ, ಕರುಣೆಯಿಂದ ಬಾಗಿಲಿಗೆ ಕೊಲ್ಯಾಪ್ಸಬಲ್ ಗೇಟ್ ಹಾಕಿಸಿದನು. ಅದನ್ನು ಫಿಟ್ಟಿಸಲು ಬಂದ ಕೆಲಸಗಾರರು, ಗೇಟನ್ನು ಹೇಗೆ ಕ್ಷಣಾರ್ಧದಲ್ಲಿ ಭೇದಿಸಿ ಒಳನುಗ್ಗಬಹುದು ಎಂಬ ಸತ್ಯವನ್ನು ಹೇಳದೆ ಬಿಡಲಿಲ್ಲ.

ವಿರಾಮದ ಗಳಿಗೆಹೀಗಿರುತ್ತ, ಬಡಾವಣೆಯ ಮತ್ತೊಂದು ತುದಿಯಲ್ಲಿ ಒಬ್ಬ ನಿವೃತ್ತ ಶಿಕ್ಷಕರ ಮನೆಯಿತ್ತು. ಅವರ ಹೆಸರು ಭೀಮಸೇನಾಚಾರ್. ಆಚಾರ್ಯರು ಪೆನ್‌ಶನ್ ಹಣದಲ್ಲಿ ಸಣ್ಣದೊಂದು ಮನೆ ಕಟ್ಟಿಕೊಂಡು ಮೊಂಡು ಧೈರ್ಯದಿಂದ ನೆಲೆಸಿದ್ದರು. ಅವರ ಧೈರ್ಯಕ್ಕೆ ೨ ಕಾರಣವಿದ್ದವು. ೧. ಮಾರ್ಕ್ಸ್‌ವಾದಿಯಾದ ಅವರಲ್ಲಿ ದೋಚುವಷ್ಟು ಸಂಪತ್ತಿರಲಿಲ್ಲ. ೨. ಬಳ್ಳಾರಿ ಸೀಮೆಯ ಬಹುತೇಕ ಕಾಮ್ರೇಡರಿಗೆ ಗುರುಗಳಾಗಿದ್ದ ಅವರಿಗೆ, ಕೂಗಿದರೆ ಓಗೊಡುವ ಸಾವಿರಾರು ಶಿಷ್ಯರು ಊರಲ್ಲಿದ್ದರು.

ಇದನ್ನೆಲ್ಲ ಲೆಕ್ಕಿಸದೆ ಒಮ್ಮೆ ಕಳ್ಳರು ದೊಡ್ಡಸೈಜುಗಲ್ಲಿಂದ ಬಾಗಿಲ ನಡುವನ್ನು ಮುರಿದು ಆಚಾರ್ಯರ ಗೃಹಪ್ರವೇಶ ಮಾಡಿದರು. ಸಾಲದಕ್ಕೆ ಅವರ ಸೊಸೆಗೆ ಹೇಳಿ ಟೀ ಮಾಡಿಸಿ ಕುಡಿದರು. ಸಪ್ಪಳಕ್ಕೆ ಎದ್ದ ಕೂಸನ್ನು ಒಬ್ಬನು ಎತ್ತಿಕೊಂಡು ರಮಿಸಿದನು. (ಅವರೂ ಸಂಸಾರಸ್ಥರು ತಾನೇ?) ಮತ್ತೊಬ್ಬನು ಮನೆಯಲ್ಲಿದ್ದ ಅಲ್ಪಸ್ವಲ್ಪ ಆಭರಣ ನಗದು ನಿರಾಳವಾಗಿ ಕೈಚೀಲಕ್ಕೆ ತುಂಬಿಕೊಂಡನು. ಅವರು ಕೆಲಸ ಮುಗಿಸಿ ಹೊರಡುವಾಗ, ಆಚಾರ್ಯರು ‘ಜೀವವೊಂದು ಬಿಟ್ರಿ. ನಮಸ್ಕಾರ’ ಎಂದು ದುಗುಡದಿಂದ ಕೈಮುಗಿದರು. ಆಗ ಅವರ ಬೆರಳಲ್ಲಿದ್ದ ಹೊನ್ನುಂಗುರ, ತನ್ನ ಹರಳ ಬೆಳಕಿನಿಂದ ಫಳಾರನೆ ಮಿನುಗಿಬಿಟ್ಟಿತು. ಆಚಾರ್ಯರು ನಿವೃತ್ತರಾದಾಗ ಹಳೆಯ ಶಿಷ್ಯರೆಲ್ಲ ಸೇರಿ ತೊಡಿಸಿದ್ದ ಅಭಿಜ್ಞಾನ ಮುದ್ರಿಕೆಯದು. ಕಳ್ಳರು ಕೂಲಾಗಿ ಅದನ್ನು ತೆಗೆದುಕೊಡಲು ಹೇಳಿದರು. ಆಚಾರ್ಯರಿಗೆ ಆಗಲಿಲ್ಲ. ಅದು ಬಿಗಿಯಾಗಿ ಕುಳಿತಿತ್ತು. ವಾರದ ಹಿಂದೆ, ಹಾಲುಮಾರುವ ಅಜ್ಜಿಯ ಮನೆಗೆ ಆಗಮಿಸಿದ್ದ ಚೋರರು, ಆಕೆಯ ಬೆಂಡೋಲೆ ತಿರುಪು ಬಿಚ್ಚಲು ಕಷ್ಟವಾದಾಗ, ಕಿವಿಯನ್ನೇ ಹರಿದಿದ್ದರು. ಈ ಕಳ್ಳರು ಅಷ್ಟು ನಿಷ್ಕರುಣಿಗಳಲ್ಲ. ಸೋಪಿನ ನೊರೆ ಹಾಕಿ ಬೆರಳ ನುಣುಪು ಮಾಡಿ ಸಾವಕಾಶ ಉಂಗುರ ತೆಗೆದರು. ಇಷ್ಟೆಲ್ಲ ಘಟಿಸಿದರೂ ದೂರದೂರ ಮನೆಗಳಿದ್ದ ಕಾರಣ, ಯಾರಿಗೂ ಗೊತ್ತಾಗಲಿಲ್ಲ. ಆಚಾರ್ಯರೂ ಕೂಗುಹಾಕಲಿಲ್ಲ. ಹಾಕಿದ್ದರೂ ತಾನೇ ಅದನ್ನು ಕೇಳಿ ಬರುವ ಗುಂಡಿಗೆ ಯಾರಿಗಿತ್ತು?

ನಾನು ಆಚಾರ್ಯರಿಗೆ ಸಂತೈಸಲು ಬೆಳಿಗ್ಗೆ ಹೋದೆ. ಒಂದರ್ಥದಲ್ಲಿ ನಮ್ಮ ಮನೆಗೆ ಅಭ್ಯಾಗತರಾಗಿ ಆಗಮಿಸಲಿರುವ ನಿಶಾಚರರ ಚಹರೆ, ಕಾರ್ಯಾಚರಣೆ ಇತ್ಯಾದಿ ತಿಳಿದುಕೊಳ್ಳಲೆಂದೂ ಹೋಗಿದ್ದೆ. ಮಾತೆಲ್ಲ ಪೂರೈಸಿದ ಬಳಿಕ ಹೇಳಿದೆ: ‘ಸಾರ್, ನೀವೊಂದು ನಾಯಿ ಸಾಕಿದ್ದರೆ ಹೀಗಾಗುತ್ತಿರಲಿಲ್ಲ’. ಇದ್ದ ಚೂರುಪಾರನ್ನು ಕಳಕೊಂಡಿದ್ದ ಅವರು ಅಯ್ಯೋ ಎಳಸೇ ಎಂಬಂತೆ ನನ್ನತ್ತ ಕಟುವಿಷಾದದ ನಸುನಗು ಬೀರಿದರು.

ರಸ್ತೆಯಲ್ಲೇ ನಿದ್ದೆಮಾರನೇ ರಾತ್ರಿ ಕಳ್ಳರು ಮತ್ತೊಂದು ಮನೆಗೆ ಬಂದರು. ಮನೆಯವರು ಆಚಾರ್ಯರಂತೆ ಸುಲಭಕ್ಕೆ ಮಣಿಯಲಿಲ್ಲ. ಬೀರುವಿನ ಬೀಗದಕೈ ಎಲ್ಲೋ ಕಳೆದಿದೆ ಎಂದು ಹುಡುಕಾಟ ಮಾಡಿದರು. ಕಳ್ಳರು ಬೇರೆದಾರಿಯಿಲ್ಲದೆ ದೊಣ್ಣೆಯಿಂದ ಹೊಡೆದು-ಅದೂ ಕೆನ್ನೆಯ ಮೇಲೆ-ಬೀಗದ ಕೈ ಪಡೆಯಬೇಕಾಯಿತು. ಪೊಲೀಸರು ಮಹಜರು ಮಾಡಲು ಬಂದಾಗ ಅವರಿಗೆ ವಿವರಿಸುವುದಕ್ಕೂ ಸಾಧ್ಯವಾಗಲಿಲ್ಲ. ದವಡೆ ಅಲ್ಲಾಡದಂತೆ ಕೆನ್ನೆತುಂಬ ಬ್ಯಾಂಡೇಜು ಹಾಕಲಾಗಿತ್ತು. ಕಡೆಗವರು ಪೇಪರಿನಲ್ಲಿ ಬರೆದು ಕಳ್ಳರ ಚಹರೆ ಇತ್ಯಾದಿ ತಿಳಿಸಿದರು.

ಇದನ್ನೆಲ್ಲ ಕೇಳಿ-ಕಂಡು ಮನೆಯ ಪರಿಸರದ ಬಗ್ಗೆಯಿದ್ದ  ನನ್ನ ಸೌಂದರ್ಯ ಪ್ರಜ್ಞೆಯೆಲ್ಲ, ತುಂಬುಗಡಿಗೆಗೆ ಕಲ್ಲುಬಿದ್ದಂತೆ, ಬಳ್ಳನೆ ಸೋರಿಹೋಯಿತು. ಕ್ಷೇತ್ರಕಾರ್ಯ, ಭಾಷಣ ಎಂದು ಕಂಡಕಂಡ ಊರು ತಿರುಗುವವನು ನಾನು. ನನ್ನ ಮಡದಿ, ಎರಡು ಎಳೆಗೂಸ ತಾಯಿ, ಒಬ್ಬಳೇ ಇದ್ದಾಗ ಕಳ್ಳರು ನುಗ್ಗಿ… ಊಹೆಯಿಂದಲೇ ಗಡಗಡ ನಡುಗಿದೆ. ದವಡೆಗೆ ಹೊಡೆತ ಬಿದ್ದರೆ ಪಾಠ ಮಾಡುವುದಕ್ಕೂ ಆಗುತ್ತಿರಲಿಲ್ಲ. ಪಾಪದ ವಿದ್ಯಾರ್ಥಿಗಳ ಗತಿ?

ಆತ್ಮರಕ್ಷಣೆಗೆ ಏನಾದರೂ ಕ್ರಮ ಕೈಗೊಳ್ಳಲೇಬೇಕಿತ್ತು. ರಾತ್ರಿ ಬೀಟ್ ಪೊಲೀಸರು ಬಂದಾಗ, ‘ಸಾರ್ ನಮ್ಮದು ಕೊನೆ ಮನೆ. ಇಲ್ಲೇ ಅಡ್ಡಾಡ್ತ ಇರಿ’ ಎಂದು ವಿನಂತಿಸಿದೆವು. ಅದಕ್ಕವರು “ನೋಡ್ರೀ, ನಾವು ರೂಲ್ಸ್ ಪ್ರಕಾರ ಡ್ಯೂಟಿ ಮಾಡೋರು. ರಾತ್ರೆಲ್ಲ ನಿಮ್ಮ ಮನೆಮುಂದೇನೇ ಇರೋಕಾಗಲ್ಲ. ಒಂಟಿ ಮನೆ ಮಾಡೀರಿ ಅಂದಮ್ಯಾಗ ಒಂದು ಬಂದೂಕನಾನಾ ಇಟ್ಕೊಳ್ಳಿ. ನಾಯೀನಾ ಸಾಕ್ಕೊಳ್ಳಿ. ಕಾರದ ಪುಡಿಯಾನಾ ಇಟ್ಕೊಂಡು ಕಳ್ಳರು ಬಂದಾಗ ಮುಖಕ್ಕೆ ಎರಚರಿ” ಎಂದರು. ಅಪ್ಪ ಸಾಯುವ ಮುನ್ನ ತನ್ನ ಬಂದೂಕನ್ನು ನನ್ನ ಹೆಸರಿಗೆ ವರ್ಗಾಯಿಸಲು ಬಂದಾಗ ಬೇಡವೆಂದ ಉದ್ದಟತನವನ್ನು ನೆನೆದು ಪರಿತಪಿಸಿದೆ. ಕೋವಿ ಕೊಂಡು, ಗುಂಡು ಹಾರಿಸುವುದಕ್ಕಿಂತ ಕಾರದಪುಡಿ ಎರಚುವುದು ಸುಲಭ. ಖರ್ಚೂ ಕಡಿಮೆ. ಆದರೆ ಎರಚಿಸಿಕೊಳ್ಳುವ ತನಕ ಸುಮ್ಮನಿರಲು ಪುಡಿಯೇನು ಪಾಂಡ್ಸ್ ಪೌಡರೇ? ಕಳ್ಳರೇನು ಸ್ಕೂಲುಮಕ್ಕಳೇ? ನಾಯಿ ಸಾಕುವುದೇ ವಾಸಿ. ಆದರೆ ನಾಯಿ ಎಲ್ಲಿ ಸಿಗಬೇಕು?

ಈ ನಡುವೆ, ಪೊಲೀಸರು ಬೀಟಿನ ನೆಪದಲ್ಲಿ ನಡುರಾತ್ರಿಗೆ ಎಬ್ಬಿಸಿ ಟೀಮಾಡಿಸಿ ಕುಡಿಯತೊಡಗಿದರು. ಎಂದೊ ಬರಬಹುದಾದ ಕಳ್ಳರಿಗಿಂತ ನಿತ್ಯ ಬರುವ ಇವರ ಆತಿಥ್ಯವೇ ಭಾರವಾಯಿತು. ಅವರು ಸುಮ್ಮನೆ ಟೀ ಕುಡಿಯುತ್ತಿರಲಿಲ್ಲ. ಜಗಲಿಯ ಮೇಲೆ ಕೂತು ಗಂಟೆಗಟ್ಟಲೆ ಮಾತಾಡುತ್ತಿದ್ದರು. ಅಪರಾತ್ರಿಯ ನೀರವದಲ್ಲಿ ಮಾತು ತೀಕ್ಷ್ಣವಾಗಿರುತ್ತಿತ್ತು. ಒಮ್ಮೆ ಅವರಲ್ಲಿ ಜಗಳವೂ ಆಯಿತು. ಕಾರಣವಿಷ್ಟೇ. ಅವರಲ್ಲೊಬ್ಬನಿಗೆ ಹೊಸದಾಗಿ ಲಗ್ನವಾಗಿತ್ತು. ಅವನಿಗೆ ನೈಟ್‌ಡೂಟಿ ಹಾಕಿದ್ದರು. ಅವನು ಕೆರಳಿ ‘ಯಾವ ಸೂಳೆಮಗನಿಗೆ ಬೇಕಣ್ಣ ಈ ಕೆಲಸ? ಮುದುಕರೆಲ್ಲ ಹೆಂಡ್ತಿ ಜತೀಗಿ ಬೆಚ್ಚಗ ಮಕ್ಕಂತಾರ. ನಾನಿಲ್ಲಿ ನಾಯಿತರ ತಿರಗಬೇಕು. ಈ ದರಿದ್ರ ಡೂಟೀನೇ ಬ್ಯಾಡ. ರಿಜೈನ್ ಮಾಡಿ ಹೋಗ್ತೀನಿ’ ಎಂದು ತನ್ನ ಮೇಲಧಿಕಾರಿಗೆ ಸಿಕ್ಕಾಪಟ್ಟೆ ಬೈದನು. ಅವರಲ್ಲಿ  ಹಿರಿಯನಾದವನು ‘ಏ, ಹಂಗ ಮಾಡ್‌ಗೀಡಿಯೋ. ಹುಡುಗ ಬುದ್ಧಿಬಿಡು. ನಿಮ್ಮಪ್ಪ ಹೊಲಮಾರಿ ಕೆಲಸ ಕೊಡಸ್ಯಾನ. ಹೆಣಮಕ್ಕಳ ಜತಿಗೆ ಮಕ್ಕಳಕೆ  ಅವಸರ ಮಾಡಬ್ಯಾಡ. ಒಂದೆರಡು ವರ್ಷ ಕಷ್ಟಪಡು. (ನನ್ನತ್ತ ತಿರುಗಿ) ಇವನಿಗೆ ನೀವಾನ ಬುದ್ಧಿಹೇಳ್ರೀ ಸಾರ್’ ಎಂದನು. ಸ್ವತಃ ರಿಜೈನ್ ಮಾಡಿ ಊರತ್ತ ಹೋಗಬೇಕೆಂದು ಯೋಚಿಸುತ್ತಿದ್ದ ನಾನಾದರೂ ಏನು ಹೇಳಲಿ?

ಒಂದೇ ತಿಂಗಳಲ್ಲಿ ಪೊಲೀಸರಿಗೆ ಟೀ ಸೋಸಿಸೋಸಿ ನನ್ನ ಹೆಂಡತಿ ಕ್ಯಾಂಟಿನ್ ಇಡುವಷ್ಟು ಅನುಭವಸ್ಥಳಾದಳು. ಒಂದು ರಾತ್ರಿ, ಪೊಲೀಸರು ಟೀಋಣ ತೀರಿಸಲೆಂಬಂತೆ, ತಮ್ಮದೊಂದು ಹಳೆಯ ವಿಶಲ್ ಕೊಟ್ಟು ‘ಇದನ್ನ ಇಟ್ಟುಕೊಳ್ಳಿ. ಕಳ್ಳರು ಬಂದ್ರೆ ಊದಿ. ನಾವೆಲ್ಲಿದ್ರೂ ಬರ್ತೀವಿ’ ಎಂದರು. ಆ ವಿಶಲ್ ಸಣ್ಣಪುಟ್ಟ ಉಸಿರಿಗೆ ಶಬ್ದ ಹೊರಡಿಸುತ್ತಿರಲಿಲ್ಲ. ದಮ್ಮುಕಟ್ಟಿ ಊದಿದರೆ  ಕೀಚಲುದನಿಯ ನಾದ ಹೊರಡಿಸುತ್ತಿತ್ತು. ಕಳ್ಳರು ಬಂದು ನಿಂತಾಗ, ನಮ್ಮ ಶ್ವಾಸಕ್ಕೆ ಬೇಕಾದ ಗಾಳಿಯೇ ಒದಗುತ್ತೊ ಇಲ್ಲವೊ? ಇನ್ನು ಇದಕ್ಕೆಲ್ಲಿಂದ ತರುವುದು? ನನಗಿದು ಉಪಯುಕ್ತ ಅನಿಸಲಿಲ್ಲ. ಪೊಲೀಸರು ಶಾಸ್ತ್ರಕ್ಕೆ ಒಂದು ಬೀಟುಹಾಕಿ ಗಣಪ್ಪನ ಗುಡಿಯಲ್ಲಿ ಗಡದ್ದಾದ ನಿದ್ದೆ ತೆಗೆಯತೊಡಗಿದರು.

ನಾನು ಅಡಕತ್ತರಿಯಲ್ಲಿ ಸಿಕ್ಕಿದೆ. ಹಳ್ಳಕ್ಕೆ ಬಿದ್ದವನ ಮೇಲೆ ಬಾನ ಕಲ್ಲು ಒಗೆಯುತ್ತ ಹೇಳಿದಳು: ‘ಗಿಳಿಗೆ ಹೇಳಿದಂತೆ ಹೇಳಿದೆ. ಶಿವಮೊಗ್ಗ ಒಳ್ಳೇ ಊರು. ಕಾಲೇಜು ಕೆಲಸ ಬಿಟ್ಟು ಕಾಣದ ದೇಶಕ್ಕೆ ಹೋಗೋದು ಬ್ಯಾಡ ಅಂತ. ನೀನೆಲ್ಲಿ ಕೇಳಿದೆ? ಅನುಭವಿಸು’.

ಪೆಜತ್ತಾಯರ ರಕ್ಷಾ, ಮಗಳು ರಚನಾ ಜೊತೆಈಗ ನಾಯಿಯ ತಲಾಶು ಆರಂಭಿಸಿದೆ. ನನಗೆ ಬೀದಿನಾಯಿ ಸಾಕುವ ಮನಸ್ಸಿರಲಿಲ್ಲ. ಜಾತಿನಾಯಿ ಇರುವ ಕೆಲವು ಮನೆಗೆ ಹೋಗಿ, ‘ನಾಯಿಮರಿ ಇದೆಯಾ?’ ಎಂದು ವಿಚಾರಿಸಿದೆ. ಅವರು ‘ನಮ್ಮದು ಗಂಡುನಾಯಿ ಕಂಡ್ರೀ. ಅದಕ್ಕೇ ಇನ್ನೂ ಜೊತೆ ಸಿಕ್ಕಿಲ್ಲ. ನಿಮಗೆಲ್ಲಿಂದ ಕೊಡಲಿ ಕುನ್ನಿ?’ ಎಂದರು. ಹೀಗಿರುತ್ತ ಒಂದು ಸಂಜೆ ತಿರುಗಾಡುವಾಗ, ಒಂದು ಮನೆಯ ಕಾಮಗಾರಿ ನಡೆದಿತ್ತು. ಅದರ ವಾಚ್‌ಮನ್ ಶೆಡ್ಡಿನ ಮುಂದೆ ಕುಳಿತಿದ್ದನು. ಅವನ ಸುತ್ತ ಪುಟ್ಟ ಬೀದಿಮರಿ ಆಡಿಕೆಂಡಿತ್ತು. ‘ಕೊಡ್ತೀಯೇನಪ್ಪಾ’ ಎನ್ನಲು ‘ತಗೊಂಡ್ಹೋಗು ಧಣಿ. ಯಾರೋ ಬಿಟ್ಟುಹೋಗ್ಯಾರ. ಅದಕ್ಕೆ ಸರಾಪು ಕುಡಿಯೊ ಅಭ್ಯಾಸ ಬಿದ್ದೈತೆ. ಹಾಲುಹಾಕು. ಬಿಟ್ಟುಬಿಡುತ್ತೆ’ ಎಂದು ಎತ್ತಿಕೊಟ್ಟನು. ನಂತರ ‘ಚಾ ಕುಡಿಯೋಕೆ..’ ಎಂದು ಮುಖ ಬಿಂಗ ಮಾಡಿದನು. ನೂರು ರೂಪಾಯಿ ಭಕ್ಷೀಸು ಕೊಟ್ಟು ತಂದೆ.

ಅದು ಹೆಣ್ಣುಕುನ್ನಿ. ನಾಯಿ ಸಿಕ್ಕ ಸಂತೋಷದಲ್ಲಿ ಲಿಂಗದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಒಟ್ರಾಸಿ ಕಳ್ಳರನ್ನು ಹಿಡಿದರೆ ಸಾಕು ಎಂದುಕೊಂಡು ಸಾಕಲಾರಂಭಿಸಿದೆವು. ಅದಕ್ಕೆ ಮಕ್ಕಳು ಮಿಟ್ಟು ಎಂದು ಹೆಸರಿಟ್ಟವು. ಕಪ್ಪನೆ ಮರಿ ಚೆಂದಾಗಿತ್ತು. ಮೈಮೇಲೆ ಮಕಮಲ್ಲಿನ ಹೊದಿಕೆಯಂತಹ ನುಣುಪಾದ ರೋಮ. ಮೂತಿಯ ಕಪ್ಪಾದ ಹೊಳೆಯುವ ಭಾಗ  ಮುದ್ದು ಹುಟ್ಟಿಸುವಂತಿತ್ತು. ಕಣ್ಣು ಫಳಫಳ ಹೊಳೆಯುತ್ತಿದ್ದವು. ತಲೆತಗ್ಗಿಸಿಕೊಂಡು ಪುಟಪುಟ ಓಡಾಡುತ್ತಿತ್ತು. ತಟ್ಟೆಯಲ್ಲಿ ಹಾಲು ಹಾಕಿದರೆ ಪಚಪಚ ನೆಕ್ಕುತ್ತಿತ್ತು. ಎಲುಬನ್ನು ದವಟೆಗಿಟ್ಟು ಅಗಿಯುತ್ತ ಕರಕರ ನಾದ ಹೊರಡಿಸುತ್ತಿತ್ತು. ಬಾಗಿಲ ಪರದೆ ಅಥವಾ ನನ್ನ ಲುಂಗಿಪಂಚೆ ಗಾಳಿಗೆ ಅಲುಗಿದರೆ ಸಾಕು, ಚುಂಗನ್ನು ಬಾಯಲ್ಲಿ ಕಚ್ಚಿ ಗುರ್‌ಗುರ್ ಶಬ್ದಮಾಡುತ್ತ ಎಳೆಯುತ್ತಿತ್ತು. ಹೊರಗೆ ಹೊರಟರೆ, ನಾನೂ ಬರ‍್ತೀನಿ ಎಂದು ಹಠಮಾಡುತ್ತಿತ್ತು. ಹುಲ್ಲಲ್ಲಿ ಓಡಾಡುವಾಗ ಹಾರುವ ಮಿಡತೆಗಳನ್ನು ನೆಗೆದು ಗಪ್ಪನೆ ಹಿಡಿಯುತ್ತಿತ್ತು. ದೊಡ್ಡನಾಯಿ ಬಂದರೆ ಮಕ್ಕಳಂತೆ ಅಡಗಿಕೊಳ್ಳುತ್ತಿತ್ತು. ರಾತ್ರಿ ಸಣ್ಣ ಸದ್ದಾದರೂ ಬೊಗಳುತ್ತಿತ್ತು.

ಬರಬರುತ್ತ ಅದು ಮನೆಯ ಚಟುವಟಿಕೆಯ ಕೇಂದ್ರವಾಯಿತು. ಎಲ್ಲದಕ್ಕೂ ನಾಯಿಯ ನೆಪ. ಉದಾ.ಗೆ, ನಂಟರು ಕರೆದರೆ, ಅಯ್ಯೋ ನಾಯಿ ಬಿಟ್ಟು ಹೆಂಗೆ ಬರೋಕಾಗುತ್ತೆ ಎನ್ನುವುದು; ಬಜಾರಿಗೆ ಹೋದರೆ, ನಾಯಿ ಒಂಟಿಯಿದೆ ಎಂದು ಕಳವಳ ಪಡುವುದು; ಹೋಟೆಲಿಗೆ ಹೋದರೆ ರೊಟ್ಟಿ ಪಾರ್ಸಲು ಮಾಡಿಸುವುದು-ಇತ್ಯಾದಿ. ಸಣ್ಣಪುಟ್ಟ ಕೆಲಸಕ್ಕೆ ಕೂಗಿದರೂ ಜಪ್ಪೆನ್ನದ ಮಕ್ಕಳಿಬ್ಬರೂ ಸ್ಪರ್ಧೆಯ ಮೇಲೆ ಅದನ್ನು ಉಪಚರಿಸತೊಡಗಿದರು. ಶ್ವಾನಸೇವೆಗೆಂದೇ ಜನ್ಮತಳೆದವರು ಎಂಬಂತಿತ್ತು ನಮ್ಮ ಚಟುವಟಿಕೆ. ಕಳ್ಳರು ಮನಃಪಟಲದಿಂದ ನಿಧಾನವಾಗಿ ದೂರ ಸರಿದರು.

ಅಷ್ಟರಲ್ಲಿ ಶಾಲೆ ಆರಂಭವಾದಾಗ ಮಕ್ಕಳು ಪಾಟಿಪುಸ್ತಕ ಕೊಳ್ಳುವಂತೆ ಬಡಾವಣೆಯ ಜನ ನಾಯಿಗಳನ್ನು ಎಲ್ಲೆಲ್ಲಿಂದಲೊ ತಂದಿದ್ದರು. ಆರತಿಗೊಬ್ಬ ಮಗಳು ಕೀರುತಿಗೊಬ್ಬ ಮಗನೆಂಬಂತೆ,  ನಮ್ಮ ಬಡಾವಣೆಯಲ್ಲಿ ಮನೆಗೊಂದು ನಾಯಿ. ಬೆಳಿಗ್ಗೆ ಸಂಜೆ ಎಲ್ಲರೂ ನಾಯಿ ಕರಕೊಂಡು ತಿರುಗುವವರೇ. ನಮ್ಮ ಏರಿಯಾದ ಜನಸಂಖ್ಯೆಯನ್ನು ನಾಯಿಗಳು ಹಿಂದಕ್ಕೆ ಹಾಕಿದವು. ಇಲ್ಲಿ ಭಿಕ್ಷುಕರು ಸುಳಿಯಲು ಅಂಜುತ್ತಿದ್ದರು. ಬೀದಿವ್ಯಾಪಾರಿಗಳು ನಾಯಿ ಹೊಡೆಯಲೆಂದು ಒಂದು ಕೋಲನ್ನು ತರುತ್ತಿದ್ದರು. ಯಾರೊ ಕಿಡಿಗೇಡಿಗಳು ಬಡಾವಣೆಗೆ ಅಡ್ಡಹೆಸರೂ ಇಟ್ಟರು:‘ನಾಯಿನಗರ!’

ಇತ್ತ ಮಿಟ್ಟು ಕೃಷ್ಣಪಕ್ಷದ ಆಗಸದಂತೆ ಬೆಳೆಯತೊಡಗಿತು. ಹೊರಗಿಂದ ಬಂದರೆ ಕಟ್ಟಿದ ಜಾಗದಲ್ಲೇ ತಕತಕ ಕುಣಿಯುತ್ತಿತ್ತು. ಹತ್ತಿರ ಹೋದರೆ ಎದೆಗೆ ಕಾಲುಕೊಟ್ಟು ನಿಲ್ಲುತ್ತಿತ್ತು. ತಲೆಸವರುತ್ತಿದ್ದರೆ ಅರೆಗಣ್ಣು ಮುಚ್ಚಿ ಸುಖವನ್ನು ಅನುಭವಿಸುತ್ತಿತ್ತು. ಊರಿಂದ ಬರುತ್ತಿದ್ದ ಅಪ್ಪನಿಗೆ ನಾವು ಸಾಕಿದ್ದು ಚೂರೂ ಇಷ್ಟವಾಗಲಿಲ್ಲ. ಅದು ನಮ್ಮಿಂದ ಪಡೆವ ಸೇವೆಯಂತೂ ಅವನಲ್ಲಿ ವಿಚಿತ್ರ ಅಸಮಾಧಾನ ಹುಟ್ಟಿಸಿತು. ಅಪ್ಪನ ಶ್ವಾನದ್ವೇಷಕ್ಕೆ ಕಾರಣವಿತ್ತು. ಅವನು ಹಿಂದೆ ಊರಲ್ಲಿ ಸೈಕಲನ್ನು ಮಲಗಿದ ನಾಯಿಯ ಬಾಲದ ಮೇಲೆ ಓಡಿಸಿ, ಅದು ಅವನ ಕಾಲನ್ನು ಕಚ್ಚಿತ್ತು. ಅಪ್ಪ ಹೊಕ್ಕಳ ಸುತ್ತ ೧೫ ಇಂಜೆಕ್ಷನ್ ತೆಗೆದುಕೊಳ್ಳಬೇಕಾಯಿತು. ಮನೆಯೊಳಗೆ ಬರ್ತಾ ಹೋಗ್ತಾ ಅದರ ಹೊಟ್ಟೆಗೆ ಕುಯಿಂಕ್ ಎನ್ನುವಂತೆ ಅವನು ಜಾಡಿಸುತ್ತಿದ್ದ. ಟೈಮಿಗೆ ಸರಿಯಾಗಿ ಟೀ ಮಾಡಿಕೊಡದ ಸೊಸೆ ಮೇಲಿನ ಸಿಟ್ಟನ್ನು ಅದರ ಮೇಲೆ ತೀರಿಸಿಕೊಳ್ಳುತ್ತಿದ್ದನೊ ಏನೊ? ‘ಅತ್ತೆ ಸಿಟ್ಟು ಕೊತ್ತಿ ಮೇಲೆ’ ಅಂತ ಹಳೇ ಗಾದೆ; ಇದೀಗ ಹೊಸಗಾದೆ: ‘ಮಾವನ ಸಿಟ್ಟು ನಾಯಿ ಮೇಲೆ’.

ಮಿಟ್ಟುವಿನ ಜೊತೆಗೆ ಲೇಖಕರ ಮಕ್ಕಳುನಾನು ಹೊರಗಿನಿಂದ ಬಂದಾಗಲೆಲ್ಲ ಬಾಗಿಲಲ್ಲೇ ನಿಂತು ‘ಏ ನಾಯಿಗೆ ಅನ್ನ ಹಾಕಿದಿರೇನೇ?’ ಎಂದು ಕೇಳುತ್ತಿದ್ದೆ. ನನಗೆ ಸರಿಯಾಗಿ ನೋಡಿಕೊಂಡಿಲ್ಲ ಎಂದು ಚಾಡಿಹೇಳುವಂತೆ ಮಿಟ್ಟು ವಿಚಿತ್ರ ಶಬ್ದ ಹೊರಡಿಸುತ್ತ ಮೈನುಲಿಯುತ್ತಿತ್ತು. ಮುದ್ದಾಡಿ ಬೆನ್ನುತಟ್ಟಿದ ಬಳಿಕವೇ ಮನೆಯೊಳಗೆ ಹೋಗಲು ಅನುಮತಿ. ಇದೆಲ್ಲ ನಾಟಕ ನೋಡುತ್ತಿದ್ದ ಅಪ್ಪ ನನ್ನೆದುರು ಏನೂ ಅನ್ನಲಿಲ್ಲ. ಬೀಡಿಸೇದಲು ಜತೆಗೂಡುತ್ತಿದ್ದ ತನ್ನ ಸ್ನೇಹಿತನ ಜತೆ ಹರಟುತ್ತ ನನಗೆ ಹರಸಿದ್ದು ಮಾತ್ರ ಕಿವಿಗೆ ಬಿತ್ತು: “ಸಾವಿರಾರು ರೂಪಾಯಿ ಖರ್ಚುಮಾಡಿ ಓದಿಸಿದೆ ಸ್ವಾಮಿ. ಅಪ್ಪನಿಗೆ ಟೀ ಕುಡಿದೆಯಾ ಅಂತ ಕೇಳಲ್ಲ. ನಾಯಿಗೆ ಹಾಲುಹಾಕಿದಿರಾ ಅಂತ ವಿಚಾರಿಸ್ತಾನೆ. ನಾಲಾಯಕ್ ನನ್ಮಗ’!

ಪೊಲೀಸರು ಬಂದೋಬಸ್ತು ಮಾಡಿದರೊ, ನಮ್ಮ ಶ್ವಾನದಳ ಕಂಡು ಕಳ್ಳರೇ ಅಂಜಿದರೊ ಗೊತ್ತಿಲ್ಲ, ಕಳ್ಳರಕಾಟ ಏಕಾಏಕಿ ನಿಂತಿತು. ಅಷ್ಟರಲ್ಲಿ ಮಿಟ್ಟು ಮನೆಯ ಸದಸ್ಯನಾಗಿತ್ತು. ಅದನ್ನು ಹೊರಹಾಕುವ ಪ್ರಶ್ನೆಯೇ ಇಲ್ಲ. ಅದಿಲ್ಲದೆ ನಮ್ಮ ಬದುಕಿಗೆ ಏನರ್ಥ ಎಂಬಂತೆ ಸಂಬಂಧ ಬೆಳೆದುಹೋಗಿತ್ತು.

ಮಿಟ್ಟು ಪ್ರಾಯಕ್ಕೆ ಬಂದು ದುಂಡಾಗಿ ಬೆಳೆದ ಮಿರಮಿರ ಮಿಂಚತೊಡಗಿತು. ನಮ್ಮ ಅಗ್ನಿಪರೀಕ್ಷೆ ಶುರುವಾಗಿದ್ದೇ ಆಗ. ಮನೆಯ ಸುತ್ತ ಬೀದಿಯ ಗಂಡುನಾಯಿಗಳು ಸುಳಿಯತೊಡಗಿದವು. ಹೊಸಪೇಟೆಯ ನಾಯಿಗಳಿಗೆ ಸಾಮಾನ್ಯವಾಗಿ ಪಂದ್ರಾ ಆಗಸ್ಟಿನ ಆಸುಪಾಸೇ ಬೆದೆ ಬರುತ್ತದೆ. ಆಗವು ನಡೆಸುವ ಕಾಮಕೇಳಿ ನೋಡಿದರೆ, ಸ್ವಾತಂತ ಬಂದ್ದಿದ್ದು ನಮಗಲ್ಲ ಅನಿಸುತ್ತದೆ. ಮನೆ ನಾಯಿಗಳ ಜಾತ್ರೆಯಾಗತೊಡಗಿತು. ಅವಕ್ಕೆ ಕಲ್ಲು ಹೊಡೆದು ಓಡಿಸುವುದೇ ಕೆಲಸವಾಯಿತು. ಮಕ್ಕಳು ಬೀದಿಯ ಕಲ್ಲನ್ನೆಲ್ಲ ತಂದು ರಾಶಿಹಾಕಿದವು. ನಾನು ಬೀಸಿಬೀಸಿ ಬೋಲರನಾದೆ.  ಅವಾದರೊ ಎತ್ತರದ ಕಾಂಪೌಂಡನ್ನು ಆರಾಮಾಗಿ ನೆಗೆದು ಓಡುತ್ತಿದ್ದವು. ಕಾಮಾತುರಾಣಾಂ ನ ಗೋಡೆ ನ ಬೇಲಿ. ರಾತ್ರಿಯಿಡೀ ಕಹಳೆ ಬಾರಿಸಿದಂತೆ ಹುಯಿಲು.  ಹೊರಗೆ ತವಕದಿಂದ ಕಾಯುವ ಪ್ರಿಯತಮರಲ್ಲಿ ಭೀಕರ ಸಂಘರ್ಷ. ಕೆಲವು ಕಿಟಕಿಯನ್ನು ಕೆರೆದು ಮಿಟ್ಟುವಿಗೆ ಪ್ರೇಮಸಂದೇಶ ರವಾನಿಸುತ್ತಿದ್ದವು. ರಾತ್ರಿಯಿಡೀ ನಿದ್ದೆಯಿಲ್ಲ. ಪಕ್ಕದ ಮನೆಯವರು ಸೌಮ್ಯವಾಗಿ ಕಟುವಾಗಿ ಕೇಳಿದರು: ‘ನಿಮ್ಮ ನಾಯಿ ಕಡಿಂದ ನಮಿಗೆ ರಾತ್ರೆಲ್ಲ ನಿದ್ದಿಲ್ಲ ಕಂಡ್ರಿ. ಏನಾದರೂ ಮಾಡಿ”.

ಹಾಳಾಗಿ ಹೋಗಲಿ ಎಂದು ಮಿಟ್ಟುವನ್ನು ಬಿಡುಗಡೆ ಮಾಡಿದೆವು. ಅದು ಎರಡು ದಿನ ಕಣ್ಮರೆಯಾಯಿತು. ಮೂರನೇ ದಿನ ನಾಯಿಗಳ ಆಕ್ರಮಣ ತಾಳಲಾರದೆ ಓಡಿಬಂದು ಮನೆಯಲ್ಲಿ ಬಚ್ಚಿಟ್ಟುಕೊಳ್ಳತೊಡಗಿತು. ಮತ್ತೆ ಮನೆಯ ಮುಂದೆ ವಿಟರ ನೆರವಿ. ರೋಸಿಹೋಯಿತು. ದಿಕ್ಕು ತೋಚದೆ, ಬಾನು ಅದನ್ನು ಒಂದು ಆಟೋದಲ್ಲಿ ಕೂರಿಸಿಕೊಂಡು ಬಸ್‌ನಿಲ್ದಾಣದಲ್ಲಿ ಬಿಟ್ಟುಬಂದಳು. ಮನೆಗೆ ಬಂದಾಗ ಮಕ್ಕಳು ಅಳುತ್ತ ವರದಿ ಮಾಡಿದವು. ನನಗೆ ಒಂಥರಾ ನಿರಾಳತೆ. ಇನ್ನೊಂಥರಾ ಬೇಸರ. ಅವಳು ಮಾಡಿದ್ದು ಸರಿ ಒಳೊಳಗೇ ಅನಿಸುತ್ತಿದ್ದರೂ ‘ಛೇ! ನೀನು ಇಷ್ಟು ಕಠೋರ ಅಂದು ಕೊಂಡಿರಲಿಲ್ಲ’ ಎಂದು ಗೊಣಗಿದೆ.

ಮರುದಿನ ಮನೆಯೆಲ್ಲ ಭಣಭಣ. ಮನೆಯಲ್ಲಿ ಮಕ್ಕಳು ಊಟ ಮಾಡಲಿಲ್ಲ. ಬಾನು ನಾಯಿ ಹುಡುಕಿ ಹೊರಟಳು. ನಾನೂ ಬಾಲಂಗೋಸಿಯಂತೆ ಜತೆಗೆ ಹೋದೆ-ಸಿಗದಿರಲಿ ಎಂದು ಹಾರೈಸುತ್ತ. ಬೀದಿಬೀದಿ ತಿರುಗಿದೆವು. ಒಂದು ವರ್ಷದಿಂದ ಅನ್ನ ಹಾಕಿ ಸಾಕಿದ್ದ ಅವಳು ಸಿಟ್ಟಿನ ಭರದಲ್ಲಿ ಮಾಡಿದ ಕೆಲಸಕ್ಕೀಗ ಪರಿತಪಿಸುತ್ತಿದ್ದಳು. ನಾಯಿಯನ್ನೇ ಸಾಕಬಾರದು. ಅವು ಎಷ್ಟು ಪ್ರೀತಿಕೊಡುತ್ತವೆ? ಅಗಲಿದರೆ ಎಷ್ಟು ನೋವು? ಅವಕ್ಕೆ ಶಿಕ್ಷಿಸಿದರೆ ಮನಸ್ಸಿಗೆ ಎಷ್ಟೊಂದು ಹಿಂಸೆ? ಮಿಟ್ಟು ಸಿಗಲಿಲ್ಲ.

ಅಷ್ಟರಲ್ಲಿ ದೆಹಲಿ ವಿವಿಯಲ್ಲಿದ್ದ ಪ್ರೊ.ಸತ್ಯನಾಥ್ ಎರಡು ವರ್ಷಕ್ಕೆಂದು ಕನ್ನಡ ವಿವಿಗೆ ಬಂದರು. ನಮ್ಮ ಏರಿಯಾದಲ್ಲೇ ಮನೆಮಾಡಿದರು. ಮಾಡುವಾಗ ‘ಹೇ! ಏನ್ರೀ ಇದು ಇಲ್ಲಿ ಇಷ್ಟೊಂದು ನಾಯಿ!’ ಎಂದು ಸೋಜಿಗಪಟ್ಟರು. ಕಾರಣ, ಕಳ್ಳರ ಕಾಟವಿಲ್ಲವೆಂದು, ತಮ್ಮ ಧಣಿಗಳಿಂದ ಸ್ವತಂತ್ರಗೊಂಡ ನೂರಾರು ನಾಯಿಗಳಿಂದಲೂ ಅವುಗಳ ಮಕ್ಕಳು ಮೊಮ್ಮೊಕ್ಕಳಿಂದಲೂ ನಮ್ಮ ಏರಿಯಾ ಗಿಜಿಗುಡುತ್ತಿತ್ತು. ಒಂದು ದಿನ, ಸತ್ಯ ಅವರು ಶಾಲೆಗೆ ಹೋಗದೆ ಪೋಲಿ ತಿರುಗುವ ಸ್ಕೂಲು ಮಗುವಿನಂತಿದ್ದ ಒಂದು ಮರಿಗೆ, ಒಮ್ಮೆ ರಾತ್ರಿ ಉಳಿದ ಅನ್ನಹಾಕಿದರು. ಅದು ಅವರನ್ನು ಗಟ್ಟಿಹಿಡಿಯಿತು. ಹೋದೆಡೆಗೆ ಹೋಗತೊಡಗಿತು. ‘ಹೋದಜನ್ಮದಲ್ಲಿ ನಿಮ್ಮ ಪ್ರೇಯಸಿ ಇರಬೇಕು ಸತ್ಯಾ. ಬಿಡಬೇಡಿ, ಸಾಕಿ’ ಎಂದೆ.

ಶ್ವಾನ ನೋಟಸತ್ಯ ಅದಕ್ಕೆ ಬುರ್ರಿ ಹೆಸರಿಟ್ಟರು. ರೇಬಿಸ್ ಇಂಜಕ್ಷನ್ ಕೊಡಿಸಿದರು. ಸಣ್ಣಕ್ಕಿ ಅನ್ನ, ಹಾಲು ಬಡಿಸಿದರು. ವಾರಕ್ಕೊಮ್ಮೆ ನಂಬರ್ ಟೆನ್ ಬಿರಿಯಾನಿ ಕೊಡುತ್ತಿದ್ದರು. ಅವಳಿಗೆ ಸಿಗುತ್ತಿದ್ದ ಉಪಚಾರವು ಅಸೂಯೆ ಹುಟ್ಟಿಸುವಂತಿತ್ತು. ಪತ್ರಕರ್ತರೊಬ್ಬರು ಬೀದಿನಾಯಿಗಳಿಗೆ ಚಿಕನ್ ಕಬಾಬ್ ಬಡಿಸುವುದನ್ನು ಕಂಡು ನಾಯಿಜನ್ಮ ಬಯಸಿದ ಗೆಳೆಯರನ್ನು ನಾನು ಬಲ್ಲೆ. ಸತ್ಯನ ಷೋಡಷೋಪಚಾರಗಳಿಂದ ಬುರ್ರಿ ‘ಬುರಬುರ ಊದಿ ಗರಗರ ತಿರುಗುವ ಬೋಂಡವಾದಳು’; ಆಕೆಯದು ಊರುಮಂಜನ ಕೆಂಗುಬಣ್ಣ. ಅದರ ಕಪ್ಪುಮೂತಿ ಕೆಂಗೆಂಪು ದೇಹದಲ್ಲಿ ಎದ್ದು ಕಾಣುತ್ತಿತ್ತು. ಕಾಮನಬಿಲ್ಲಿಗೆ ಚವರಿ ಕಟ್ಟಿದಂತಹ ಬಾಲ. ಮೈ ಆರೋಗ್ಯದಿಂದ ಹೊಳೆಯುತ್ತಿತ್ತು. ಕಛೇರಿಯಿಂದ ಸತ್ಯ ಬರುವುದನ್ನು ದೂರದಿಂದ ಕಂಡೊಡನೆ, ಬಾಣದಂತೆ ಓಡೋಡಿ ಬಂದು, ಮೈಮೇಲೆಲ್ಲ ಎಗರಿ, ಏದುಸಿರುಬಿಡುತ್ತ ಪ್ರೀತಿ ಪ್ರಕಟಿಸುತ್ತಿತ್ತು. ಸತ್ಯನ ಶರ್ಟೆಲ್ಲ ಅದರ ಕಾಲ್ಗುರುತಿನ ಠಸ್ಸೆಯಿಂದ ಚಿತ್ರಮಯವಾಗುತ್ತಿತ್ತು. ಬುರ್ರಿ ಕುಣಿದಾಡಿ ಎಗರಾಡಿ ಆವೇಶವೆಲ್ಲ ಇಳಿದು, ಕಾಲುಗಳ ನಡುವೆ ಉಜ್ಜಿಕೊಂಡು ಸುಳಿದಾಡುತ್ತ ಸೌಮ್ಯವಾದ ಬಳಿಕ ಸತ್ಯ ತನ್ನ ಇತರೆ ಕೆಲಸಕ್ಕೆ ತೊಡಗಬೇಕಿತ್ತು.

ಹೀಗಿರುತ್ತ ಶ್ರಾವಣ ಬಂತು. ಬುರ್ರಿ ಬೆದೆಗೆ ಬಂದಳು. ಸತ್ಯನ ಮನೆಯ ಸುತ್ತ ಇಡೀ ಪ್ರಾಂತ್ಯದ ಪುರುಷಸಿಂಹಗಳು ಸುಳಿದಾಡತೊಡಗಿದವು. ಜನ್ನನ ರಾಣಿ ಅಮೃತಮತಿಯಂತೆ ಸುಖವಾಗಿ ಬೆಳೆದ ಬುರ್ರಿಯ ಸ್ವಯಂವರಕ್ಕೆ ಬಂದವರು, ಅಷ್ಟಾವಂಕನಂತೆ ಅಕರಾಳ ವಿಕರಾಳವಾಗಿದ್ದರು. ಬಾಲತುಂಡಾದ, ಮೆಳ್ಳೆಗಣ್ಣಿನ, ಕಾಲುಸೊಟ್ಟಾದ, ನೋಡಲು ಕಳ್ಳನಂತಿರುವ, ತಲೆಗೂದಲು ಮೇಲಕ್ಕೆದ್ದ ರೌಡಿಗಳಂತಹ ಬಗೆಬಗೆಯ ಪ್ರಿಯಕರರು. ‘ಸತ್ಯ, ನೀವು ಲೈಂಗಿಕ ಹಕ್ಕಿನ ಮೇಲೆ ಮಾತಾಡುವವರು, ಹೀಗೆ ತಡೆಯುವುದು ಉಚಿತವಲ್ಲ’ ಎಂದೆ. ಸತ್ಯನಿಗೆ ಬುರ್ರಿಯ ಶೀಲರಕ್ಷಿಸುವ ಉದ್ದೇಶವೇನೂ ಇರಲಿಲ್ಲ. ಆದರೆ ಬೀದಿ ನಾಯಿಗಳ ಕಾಯಿಲೆ ಇದಕ್ಕೆ ತಗುಲಬಾರದೆಂದು ಬುರ್ರಿ ಸೇರದಂತೆ ನಾನಾ ಉಪಾಯ ಹೂಡಿದರು. ಕೆಲವು ದಿನ ಪ್ರತಿದಿನ ಮನೆಯಲ್ಲಿ ಕೂಡಿ ಬೀಗಹಾಕಿಕೊಂಡು ವಿವಿಗೆ ಹೋಗುವುದು. ಸಂಜೆ ಬಂದಬಳಿಕ ಹೊರಗೆ ಕರೆದುಕೊಂಡು ಹೋಗುವುದು ಮಾಡಿದರು. ಬುರ್ರಿ ಪ್ರತಿಭಟಿಸಿದಳು. ಮನೆಯೊಳಗಿಂದಲೇ  ‘ನಾನಿಲ್ಲಿ ಸೆರೆಯಲ್ಲಿದ್ದೇನೆ. ಏನಾದರೂ ಮಾಡಿ ಬಿಡಿಸಿ’ ಎಂದು ಹೊರಗಿನವರಿಗೆ ಸೂಚನೆ ಕೊಡುತ್ತಿದ್ದಳು.

ಕೊನೆಗೊಂದು ದಿನ ಸತ್ಯ ಬುರ್ರಿಯನ್ನು ಟೆರೇಸಿನ ಮೇಲೆ ಬಿಟ್ಟು, ಗೇಟಿಗೆ ಬೀಗ ಹಾಕಿ ವಿವಿಗೆ ಬಂದರು. ಸಂಜೆ ನಾವು ಬರುವಾಗ, ನಾಯಿಗಳ ದಂಡೇ ಮನೆಯ ಸುತ್ತ ನೆರೆದಿತ್ತು. ಅದರಲ್ಲಿ ರೌಡಿಯಂತಿದ್ದ ಒಂದು ನಾಯಿ, ಕಾಂಪೌಂಡು ಗೋಡೆಯ ಮೇಲಿಂದ ಕಿಟಕಿಯ ಶೆಜ್ಜಕ್ಕೆ ಹಾರಿ ಅಲ್ಲಿಂದ ವೆಂಟಿಲೇಟರ್ ಮೇಲೆ ಕಾಲಿಟ್ಟು ಟೆರೇಸನ್ನು ತಲುಪಿಬಿಟ್ಟಿತ್ತು. ಪ್ರಿಯತಮೆಯನ್ನ ಕೂಡಲು ಉಪ್ಪರಿಗೆಯಿಂದ ಇಳಿಬಿದ್ದಿದ್ದ ಹೆಬ್ಬಾವನ್ನು ಹಗ್ಗವೆಂದು ತಿಳಿದು ಹತ್ತಿಹೋಗಿದ್ದ ಪ್ರೇಮಿಯ ಜನಪದ ಕತೆ ಉತ್ಪ್ರೇಕ್ಷೆಯಲ್ಲ. ಬುರ್ರಿ ಅಲ್ಲಿಂದಲೇ ತನ್ನ ಧಣಿಗೆ ಕೂಗುತ್ತ, ‘ನೋಡಿಲ್ಲಿ ನನ್ನ ಫ್ರೆಂಡು’ ಎಂದು ಮುಗ್ಧ ಸಂತೋಷದಿಂದ ಬಾಲವಲ್ಲಾಡಿಸುತ್ತ ಕುಂಯ್ಞ್‌ಕುಂಯ್ಞ್ ಮುಲುಕಿದಳು- ಎಳೆಯ ಮಕ್ಕಳು ಗಾಜಿನ ಲೋಟವನ್ನು ಒಡೆದು ಅಮ್ಮನಿಗೆ ತಮ್ಮ ಸಾಹಸ ತೋರುವಂತೆ.

‘ಥೂ ಸೂಳೆ’ ಎಂದು ಸತ್ಯ, ಬಾಗಿ ಕಲ್ಲು ಹೆಕ್ಕಿದರು. ಕಲ್ಲನ್ನೂ ಅವರ ಮುಖದಲ್ಲಿದ್ದ ಕೋಪವನ್ನು ಕಂಡು ಸ್ವಯಂವರಕ್ಕೆ ಬಂದವರೆಲ್ಲ ಹೈಜಂಪ್ ಲಾಂಗ್‌ಜಂಪ್  ಮಾಡಿ ದಿಕ್ಕಾಪಾಲಾದರು. ಶೀಲಭಂಗ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ್ದ ರೌಡಿಯೂ ಪರಾರಿಯಾಯಿತು. ಸರಿ, ಬುರ್ರಿ ಕೆಲವೇ ದಿನಗಳಲ್ಲಿ ಗರ್ಭವತಿಯಾದಳು. ಆದರೆ ಸತ್ಯ ನಮ್ಮಂತೆ  ನಡುನೀರಲ್ಲಿ ಕೈಬಿಡಲಿಲ್ಲ. ಬದಲಿಗೆ ಬುರ್ರಿಗೆ ಹೆಚ್ಚಿನ ಉಪಚಾರ ಶುರುಮಾಡಿದರು. ಬುರ್ರಿಗೆ ಸಿಗುತ್ತಿದ್ದ ಉಪಚಾರ ನಮ್ಮ ಬಳ್ಳಾರಿ ಜಿಲ್ಲೆಯ ಯಾವ ಗರ್ಭಿಣಿಗೂ ಸಿಕ್ಕಿರಲಿಕ್ಕಿಲ್ಲ.

ಶುಭಮುಹೂರ್ತದಲ್ಲಿ ಬುರ್ರಿ ಹಡೆದಳು. ಸತ್ಯ ಬಾಣಂತಿ ಉಪಚಾರಕ್ಕೆ ಬೇಕಾದ ಬ್ರೆಡ್ಡು, ಅವಳ ಮಕ್ಕಳಿಗೆ ಹಾರ್ಲಿಕ್ಸ್ ತಂದರು. ಇದು ಹೀಗೇ ನಡೆದರೆ, ನಮ್ಮ ಏರಿಯಾದ ನಾಯಿಗಳಿಗೆ, ಪ್ರತಿದಿನ ಲಾರಿಗಳು, ಹಾಲು ಮಾಂಸ ಬ್ರೆಡ್ಡುಗಳು ಹೊತ್ತು ತರುವುದನ್ನು ಕಲ್ಪಿಸಿಕೊಂಡು ಬೆದರಿದೆವು. ಸದ್ಯ ಹಾಗಾಗಲಿಲ್ಲ. ಸತ್ಯ ಮರಳಿ ದೆಹಲಿ ವಿವಿಗೆ ಹೋಗಬೇಕಾಯಿತು. ಬುರ್ರಿಯನ್ನೂ ಜತೆಗೆ ಒಯ್ಯಲು ಸತ್ಯ ನಿರ್ಧರಿಸಿದರು. ಆಕೆಯನ್ನು ಸಾಗಿಸುವ ಆಪರೇಶನ್ ಡೆಲ್ಲಿ ಸುರುವಾಯಿತು. ಸಾವಿರಾರು ರೂಪಾಯಿ ಕೊಟ್ಟು ಮರದ ಒಂದು ಪಂಜರ ಮಾಡಿಸಲಾಯಿತು. ಅದರಲ್ಲಿ ಬುರ್ರಿಗೆ ಬೇಕಾದ ತಿಂಡಿತೀರ್ಥ ಇಡಲಾಯಿತು. ನೀರಿಟ್ಟರು. ರೈಲಿನಲ್ಲಿ ಬುರ್ರಿ ಬಜಾರಿಗೆ ಹೋಗಿಬರುವಂತೆ ನಗುನಗುತ್ತ ತವರನ್ನು ಬಿಟ್ಟು ಮೊಗಲರ ರಾಜಧಾನಿಗೆ ಹೋದಳು.

ಬಹುಶಃ ಅಲ್ಲಿಗೆ ಹೋದಮೇಲೆ ಬುರ್ರಿಗೆ ಹೊಸಜಾಗದಲ್ಲಿ ಚಡಪಡ ಆರಂಭವಾಗಿರಬೇಕು; ನಾನೆಲ್ಲಿ ಬಂದೆ ಎಂದು ಕಂಗಾಲಾಗಿರಬೇಕು. ಸತ್ಯ ವಿವಿಗೆ ಹೋದಹೊತ್ತಲ್ಲಿ, ತಪ್ಪಿಸಿಕೊಂಡು ಸತ್ಯನನ್ನು ಹುಡುಕಿಯೊ ಹೊಸಪೇಟೆಗೆ ಹೋಗುತ್ತೇನೆಂದೊ ದೆಹಲಿಯ ರಸ್ತೆಗಳಿಗೆ ಧುಮುಕಿದಳು. ಸತ್ಯ ಕಂಗೆಟ್ಟರು. ಟ್ಯಾಕ್ಸಿ ಮಾಡಿಕೊಂಡು ದೆಹಲಿಯ ತುಂಬ ಹುಡುಕಿದರು. ಆಕೆಯ ಫೋಟೊಹಾಕಿ ಜಾಹಿರಾತು ಕೊಟ್ಟರು. ಗಾಬರಿಯಿಂದ ಯಾವ ಗಾಲಿಗೆ ಸಿಕ್ಕಿದಳೋ, ಯಾವುದಾದರೂ ಬೀದಿಯ ನಾಯಿಯ ಜತೆ ಸೇರಿ ಕಾರ್ಪೊರೇಶನ್ನಿನವರು ಹಿಡಿದು ಎತ್ತಿಹಾಕಿಕೊಂಡು ಹೋದರೊ, ದೆಹಲಿಯ ಯಾವುದಾದರೂ ಬೀದಿಯಲ್ಲಿ ನೆಲೆಸಿದಳೊ, ಗೊತ್ತಾಗಲಿಲ್ಲ. ಒಂದು ದಿನ ಸತ್ಯ ಫೋನಿನಲ್ಲಿ ಅಕ್ಷರಶಃ ಅತ್ತರು. ಸತ್ಯನಿಗೆ ಅದರ ಜತೆ ನಾವು ಊಹಿಸಲಾಗದಷ್ಟು ಆತ್ಮೀಯತೆಯಿತ್ತು.

ನಾಯಿ ಸಾಕಬಾರದು ಎಂಬ ನಮ್ಮ ಪ್ರತಿಜ್ಞೆ ಮತ್ತಷ್ಟು ಗಟ್ಟಿಯಾಯಿತು. ಅದನ್ನು ಈಗಲೂ ಪಾಲಿಸಿಕೊಂಡು ಬಂದಿದ್ದೇವೆ. ಆದರೂ ಅವನ್ನು ಕಂಡಾಗ ತಲೆ ಸವರಬೇಕು ಅನಿಸುತ್ತದೆ. ಅವು ಮೈಮೇಲೆ ಪ್ರೀತಿಯಿಂದ ಎಗರಿದರೆ ಬೆನ್ನು ತಟ್ಟಬೇಕು ಅನಿಸುತ್ತದೆ. ಮೊನ್ನೆ ವಾಕಿಂಗಿಗೆ ಹೋಗಿ ನಾನು ಬಾನು ಬರುತ್ತಿದ್ದೆವು. ಪಕ್ಕದ ಪೊದೆಯಲ್ಲಿ ಎಳೆಯನಾಯಿ ಥಂಡಿ ತಡೆಯದೆ ಕುರುಕುರು ಅನ್ನುತ್ತಿತ್ತು. ಯಾರೋ ಆಗತಾನೆ ಅದನ್ನು ಅಲ್ಲಿ ಬಿಟ್ಟುಹೋಗಿದ್ದರು. ತಂದಿದ್ದ ಪ್ಲಾಸ್ಟಿಕ್ ಕವರು ಕೂಡ ಅಲ್ಲೇ ಇತ್ತು. ಸ್ವಲ್ಪಹೊತ್ತು ಹಾಗೇ ಇದ್ದರೆ ಚಳಿಗೆ ಅದು ಸಾಯುತ್ತಿತ್ತು. ಬಾನು ಅದನ್ನು ಎತ್ತಿಕೊಂಡಳು. ಹೆಣ್ಣುಕುನ್ನಿ. ಮುಖದಲ್ಲಿ ಆರ್ತತೆಯಿತ್ತು. ನಾನು ‘ಪ್ಲೀಸ್ ಅದನ್ನ ಅಲ್ಲೇ ಬಿಟ್ಟುಬಿಡು. ಅವುಗಳ ಸಹವಾಸ ಸಾಕು’ ಎಂದು ಜೋರಾಗಿ ಕೂಗಿದೆ. ಅವಳು ಕೇಳಿಸದವಳಂತೆ ಅದನ್ನು ಅಲ್ಲಿದ್ದ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಹಾಕಿಕೊಂಡು ಕಟ್ಟುತ್ತಿದ್ದ ಒಂದು ಮನೆಗೆ ತಂದುಬಿಟ್ಟಳು. ಮನೆಗೆ ಬಂದು ಸಣ್ಣಬಾಟಲಿಯಲ್ಲಿ ಹಾಲನ್ನೂ ತೆಂಗಿನ ಕರಟವನ್ನೂ ತೆಗೆದುಕೊಂಡು  ಹೋದಳು. ಅಷ್ಟರಲ್ಲಿ ಅದನ್ನು ವಾಚ್‌ಮನ್ ಮಕ್ಕಳು ಸೇರಿಕೊಂಡು ಅದಕ್ಕೆ ಉಪಚಾರ ಮಾಡುತ್ತಿದ್ದರಂತೆ. ‘ನೀವೇಏನು ಬಿಟ್ಟುಹೋದವರು?’ ಎಂದು ಕೇಳಬಹುದು ಎಂದು ಬಾನು ಅಂಜಿದ್ದಳು. ಆದರೆ ವಾಚ್‌ಮನ್ ಮಕ್ಕಳು ‘ಆಂಟಿ ಇದು ನಿಮ್ದಾ? ನಮಗಿರಲಿ’ ಎಂದರಂತೆ. ಬಂದವಳೇ ‘ಆ ಮರಿ ಬದುಕಿದೆ ಕಣೋ’ ಎಂದಳು. ಅವಳ ಕಣ್ಣಲ್ಲಿದ್ದ ಭಾವನೆಯನ್ನು ಅರಿಯಲು ಯತ್ನಿಸಿದೆ. ಅರ್ಥವಾಗದಷ್ಟು ಆಳವಾಗಿದ್ದವು.

ಮೊನ್ನೆ, ಇಂಟರ್‌ನೆಟ್ಟಿನಲ್ಲಿ ಸತ್ಯ ಸೆಮಿನಾರಿಗೆಂದು ಮಂಡಿಸಿದ ಒಂದು ಪ್ರಬಂಧ ನೋಡುತ್ತಿದ್ದೆ. ಅದು ಬುರ್ರಿಗೆ ಅರ್ಪಣೆಯಾಗಿದೆ!  ಇವರೆಲ್ಲರ ಮುಂದೆ ನಾನೆಷ್ಟು ಸಣ್ಣವನು ಅನಿಸಿತು.

[ಚಿತ್ರಗಳು-ಸಂಗ್ರಹ,ಪೆಜತ್ತಾಯ ಮತ್ತು ಲೇಖಕರದು]

[ಮುಂದುವರಿಯುವುದು]