ನಾನು ಪ್ರತಿವರ್ಷವೂ ಮೊಹರಮ್ಮಿನ ಖತಲ ರಾತ್ರಿಯ ದಿನವನ್ನು ಕರ್ನಾಟಕದ ಯಾವುದಾದರೂ ಒಂದು ಗ್ರಾಮದಲ್ಲಿ ಕಳೆಯುವ ಪದ್ಧತಿ ಇಟ್ಟುಕೊಂಡಿದ್ದೇನೆ. ಅಲಾವಿ ದೇವರ ಮುಂದಿರುವ ಕೊಂಡದಲ್ಲಿ ಝಗಝಗಿಸುವ ಬೆಂಕಿಯ ಸುತ್ತ ಅಪಾರ ಜನ ಸೇರಿ ಗೀಗಿಪದ, ರಿವಾಯತ್ ಪದ, ಕರ್ಬಲಾ ಪದ, ಹೆಜ್ಜೆಮಜಲಿನ ಪದ, ಸವಾಲು ಪದ ಎಂಬ ವಿವಿಧ ಪ್ರಕಾರದ ಹಾಡುಗಳನ್ನು ಹಾಡುತ್ತಾರೆ. ಅಚೊಳ್ಳಿ ಬಿಚೊಳ್ಳಿ ಎಂಬ ವೇಷ ಹಾಕಿ ಕುಣಿಯುತ್ತಾರೆ; ಮೈಗೆಲ್ಲ ಪಟ್ಟೆಪಟ್ಟೆ ಬಣ್ಣ ಬಳಿದುಕೊಂಡು ಹುಲಿಯಾಟ ಆಡುತ್ತಾರೆ. ಅದೊಂದು ಇಡೀ ಊರಿಗೆ ಊರು ಎಚ್ಚರಗೊಳ್ಳುವ ಮತ್ತು ಕ್ರಿಯೇಟಿವ್ ಆಗುವ ದಿನ. ಕರ್ನಾಟಕದಲ್ಲಿ ಸಾವಿರಾರು ಹಳ್ಳಿಗಳು ಮೊಹರಮ್ಮಿನ ದಿನಗಳಲ್ಲಿ ಸ್ವಯಂ ರಂಗಭೂಮಿಗಳಾಗಿಬಿಡುತ್ತವೆ. ವರ್ಷಕ್ಕೊಂದು ಹಳ್ಳಿಯಲ್ಲಿ ಕಾಲ ಕಳೆಯುತ್ತೇನೆಂದರೂ ಸಾವಿರಾರು ವರ್ಷ ಬೇಕು. ಕರ್ನಾಟಕದಲ್ಲಿ ಸಾಂಸ್ಕೃತಿಕ ರಾತ್ರಿಗಳು ಅನಂತವಾಗಿವೆ. ನಮ್ಮ ಆಯುಷ್ಯ ಕಿರಿದಾಗಿದೆ.

ನಾನು ಒಂದು ಮೊಹರಮನ್ನು ಹೊಸಪೇಟೆ ತಾಲೂಕಿನ ಚಿತ್ತವಾಡಿಗಿಯಲ್ಲಿ ನೋಡಿದೆ. ಮತ್ತೊಮ್ಮೆ ಲಿಂಗಸುಗೂರು ತಾಲೂಕಿನ ಮುದುಗಲ್ಲಿನಲ್ಲಿ ಕಳೆದೆ. ಇನ್ನೊಮ್ಮೆ ಚಿಂಚೋಳಿ ತಾಲೂಕಿನ ನಿಡಗುಂದದಲ್ಲಿ ಆಯಿತು. ಹೋದಸಲ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿದ್ದೆ. ಒಂದೊಂದು ಸಲವೂ ಒಂದೊಂದು ವಿಶಿಷ್ಟ ಅನುಭವ. ಈ ಸಲ ಬದಾಮಿ ತಾಲೂಕಿನ ಕೆರೂರಿನಲ್ಲಿ ಕಳೆಯುವುದು ಎಂದು ನಿರ್ಧರಿಸಿದೆ. ಕಾರಣ ಕೆರೂರು ನೂರಾರು ರಿವಾಯತ ಗಾಯಕರು ಇರುವ ಊರು. ಜತೆಗೆ ಅಲ್ಲಿ ಸುತ್ತಮುತ್ತಲ ಹಳ್ಳಿಗಳಿಂದ ಹಾಡುಗಾರರ ಮೇಳಗಳು ಯಾರ ಆಹ್ವಾನವಿಲ್ಲದೆಯೂ ಬರುತ್ತವೆ. ಪಾಳಿಹಚ್ಚಿ ಇಡೀ ದಿನ ಹಾಡುತ್ತವೆ. ಈ ಹಾಡುಗಾರರಿಗೆಲ್ಲ ಗುರುವಾಗಿದ್ದ ಕವಿ ಮತ್ತು ಹಾಡುಗಾರರಾದ ಕಾಸಿಂಸಾಬ್ ನದಾಫ್ ಆ ಊರಿನಲ್ಲಿದ್ದರು.

ಕೆರೂರು ಹುಬ್ಬಳ್ಳಿ-ಬಿಜಾಪುರದ ಹೆದ್ದಾರಿಯಲ್ಲಿರುವ ಕೊಂಚ ದೊಡ್ಡ ಹಳ್ಳಿ. ನಾನು ಬಸ್ಸಿನಿಂದ ಇಳಿದಾಗ ಸಂಜೆಯಾಗುತ್ತಿತ್ತು. ಊರ ತುಂಬ ದೊಡ್ಡದೊಡ್ಡ ಕೇಸರಿಧ್ವಜಗಳು ಹಾರಾಡುತ್ತಿದ್ದವು. ಸರ್ಕಲ್ಲಿನ ನಡುವೆ ಇರುವ ದೊಡ್ಡಸ್ಥಂಭಕ್ಕೆ ಕಟ್ಟಿದ ಧ್ವಜವಂತೂ ‘ಬಾನಿನಗಲ’ ಪಟಪಟ ಎನ್ನುತ್ತಿತ್ತು. ಯಾವುದೊ ಹಿಂದೂ ಸಮಾಜೋತ್ಸವ ಆಗಿರಬೇಕು. ತಾರು ಮತ್ತು ಲೈಟು ಕಂಬಗಳಿಗೆ ಕಟ್ಟಿದ ಬಂಟಿಂಗುಗಳು ಹಾಗೇ ಇದ್ದವು. ಈ ಭಾಗದ ಊರುಗಳು ಕೋಮುಗಲಭೆಯ ದೃಷ್ಟಿಯಿಂದ ಬಹಳ ಸೂಕ್ಷ್ಮವಾದ ಜಾಗಗಳಾಗಿವೆ. ಕೆಲವು ವರ್ಷಗಳ ಹಿಂದೆ ಇಲ್ಲಿಗೆ ಸಮೀಪದ ಬೀಳಗಿಯಲ್ಲಿ ಒಂದು ಗಲಭೆ ಆಯಿತು. ಬೀಳಗಿ ಎಂತಹ ಊರೆಂದರೆ, ಅಲ್ಲಿ ಇರುವ ಡೋಂಗ್ರಿಸಾಹೇಬನ ದರ್ಗಾದಲ್ಲಿ ಫಾತೆಹಾ ಮಾಡುವುದು ಕ್ಷತ್ರಿಯರು. ಆದರೂ ಈ ಭಾಗದಲ್ಲಿ ಮತೀಯ ಕಲಹಗಳೂ ಸಾಮಾನ್ಯವಾಗುತ್ತಿವೆ. ಇಂತಹ ಪರಿಸರದಲ್ಲಿ ಮೊಹರಂ ಸಂಪ್ರದಾಯ ಮತ್ತು ರಿವಾಯತ ಹಾಡುಗಳು ಉಳಿದಿವೆಯೆ ಎಂಬ ಅನುಮಾನ ನನಗೆ ಬಂದಿತು. ಅನುಮಾನ ಮಾಡುತ್ತ ಊರೊಳಗೆ ಕಾಸಿಂ ಸಾಹೇಬರನ್ನು ಹುಡುಕಿಕೊಂಡು ಹೊರಟೆ.

ಕಾಸಿಂ ಸಾಹೇಬರು ಬಹಳ ಜನಪ್ರಿಯ ವ್ಯಕ್ತಿ. ಯಾರು ಕೇಳಿದರೂ ಅವರ ಮನೆ ಇಲ್ಲವೇ ಅಂಗಡಿ ತೋರಿಸುತ್ತಾರೆ. ಇದಕ್ಕೆ ಕಾರಣ, ಅವರು ಮೊಹರಂ ಗಾಯಕರಾಗಿರುವುದು, ದೊಡ್ಡಾಟದ ನಟನಾಗಿರುವುದು ಮಾತ್ರವಲ್ಲ, ಅವರು ಕೆರೂರಿನ ಪಂಚಾಯತಿಯ ಚೇರ್ಮನ್ ಆಗಿದ್ದವರು. ಚೇರ್ಮನರಾಗಿ ಒಳ್ಳೆಯ ಕೆಲಸ ಮಾಡಿದವರು. ಪ್ರಾಮಾಣಿಕರು. ಇದಕ್ಕೆ ಸಾಕ್ಷಿ ಅವರ ಈಗಿನ ಬಡತನ. ಕಾಸಿಂಸಾಬರು ಮೂಲತಃ ಒಬ್ಬ ಟೈಲರು. ಈಗ ಮಿಶನ್ನಿನ ಚಕ್ರ ತುಳಿಯಲು ಆಗುವುದಿಲ್ಲ. ವಯಸ್ಸು ಎಂಬತ್ತೆರಡಾಗಿದೆ. ಹೀಗಾಗಿ ಮುನಿಸಿಪಾಲಿಟಿಯ ಸಣ್ಣ ಮಳಿಗೆಯಲ್ಲಿ ಕೆಲವು ಬಟ್ಟೆ ಥಾನುಗಳನ್ನು ಇಟ್ಟುಕೊಂಡು ಗಜಕಡ್ಡಿ ಮತ್ತು ಕತ್ತರಿಯ ಜತೆ ಕುಳಿತಿದ್ದರು. ಯಾರೂ ಗಿರಾಕಿಗಳು ಇರಲಿಲ್ಲ. ನಮಸ್ಕಾರ ಮಾಡಿ ಹೋಗಿ ಕುಳಿತೆ. ಕಚ್ಚೆಪಂಚೆ. ಬಿಳಿಯ ಜುಬ್ಬ.ಬಣಜಿಗ ಶೆಟ್ಟರು ಹಾಕುವಂತಹ ಕರಿಯ ಟೋಪಿ. ಗಡ್ಡ. ದುರ್ಬಲವಾದ ದೇಹ. ಸೊಂಟ ಬಿದ್ದುಹೋಗಿ ಕೂತರೆ ಏಳಲು ಬಹಳ ಕಷ್ಟ ಪಡುತ್ತಿದ್ದರು. ಒಂದು ಕಾಲಕ್ಕೆ ಹನುಮಂತನ ಪಾತ್ರಧಾರಿಯಾಗಿ ಕುಳಿದು ಕುಪ್ಪಣಿಸುತ್ತಿದ್ದ ನದಾಫ್, ಈಗ ಕೂತಲ್ಲೇ ತೆವಳುತ್ತಿದ್ದರು. ಅವರ ಒಬ್ಬ ಮಗ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಇದ್ದಕ್ಕಿದ್ದಂತೆ ಕಾಣೆಯಾಗಿದ್ದನು. ಕಲಾವಿದರ ಪೆನ್‌ಶನ್ ಎಂದು ಸಾವಿರ ರೂಪಾಯಿ ಬರುತ್ತದೆ. ನಿತ್ಯದ ಜೀವನಕ್ಕೆ ಹೋರಾಟ ಮಾಡುತಿದ್ದರು.

ಸಂಜೆ ಆವರಿಸುತ್ತಿತ್ತು. ಅವರ ಅಂಗಡಿಯಲ್ಲಿ ಲೈಟಿರಲಿಲ್ಲ. ಬಿಲ್ ಕಟ್ಟಿಲ್ಲವೆಂದು ಕರೆಂಟಿನವರು ಕನೆಕ್ಷನ್ ಕಿತ್ತಿದ್ದರು. ನಾನು ಅವರನ್ನು ನೋಡಲು ಮತ್ತು ಅವರ ಹಾಡು ಕೇಳಲು ಹಂಪಿಯಿಂದ ಬಂದಿದ್ದೇನೆಂದೂ ತಿಳಿಸಿದೆ. ಕೂಡಲೇ ಮುದಿದೇಹದಲ್ಲಿ ಇದ್ದಕ್ಕಿದ್ದಂತೆ ಎಲ್ಲಿಲ್ಲದ ಚೈತನ್ಯ ಬಂದುಬಿಟ್ಟಿತು. ಅವರಿಂದ ಹಾಡು ಬರೆಯಿಸಿಕೊಂಡು ಹೋಗಲು ಪಕ್ಕದ ಹಳ್ಳಿಯಿಂದ ಬಂದ ಶಿಷ್ಯರನ್ನು ಆಮೇಲೆ ಬರುವಂತೆ ಹೇಳಿದರು. ತಾವು ಒರಗಿ ಕುಳಿತಿದ್ದ ದಿಂಬಿನ ಪಕ್ಕವಿದ್ದ ಹಳೆಯ ಕಾಗದದ ಗಂಟೊಂದನ್ನು ಎತ್ತಿಕೊಂಡು ನನ್ನ ಜತೆ ಮಾತುಕತೆ ಆರಂಭಿಸಿದರು. ಗಂಟಿನ ತುಂಬ ಅವರು ಕಳೆದ ಅರ್ಧ ಶತಮಾನದಿಂದ ಬರೆದ ರಿವಾಯತ್ ಪದಗಳಿದ್ದವು. ಅವುಗಳಲ್ಲಿ ಕೆಲವನ್ನು ತೆಗೆದು ಸಣ್ಣಗೆ ಹಾಡತೊಡಗಿದರು. ಇನ್ನು ಅಕ್ಷರ ಕಾಣುವುದಿಲ್ಲ ಎಂಬಷ್ಟು ಕತ್ತಲಾದ ಬಳಿಕ ನನ್ನನ್ನು  ಮನೆಗೆ ಕರೆದುಕೊಂಡು ಹೊರಟರು. ಸೊಂಟ ಉಳುಕಿದವರಂತೆ ಬಳುಕಾಡುತ್ತ ಕೋಲು ಹಿಡಿದು ನಡೆಯುವ ನದಾಫರಿಗೆ ಊರಲ್ಲಿ ಅಪಾರ ಗೌರವವಿರುವುದು ತಿಳಿಯಿತು. ದಾರಿಯಲ್ಲಿ ಸಿಕ್ಕವರೆಲ್ಲ ಅವರಿಗೆ ನಮಸ್ಕರಿಸುತ್ತಿದ್ದರು. ಅವರು ಸೊಂಟದ ನೋವಿಗೆ ಸರ್ಕಾರಿ ದವಾಖಾನೆಗೆ ಸೇರಿದಾಗ, ಅವರ ಪರವಾಗಿ ಡಾಕ್ಟರಿಗೆ ಹೇಳಲು ನೂರಾರು ಜನ ಬಂದಿದ್ದರಂತೆ.

ಮನೆಯಲ್ಲಿ ಅವರ ಮಡದಿ ಗಟ್ಟಿಮುಟ್ಟಾಗಿದ್ದಾರೆ. ನದಾಫರು ಮಡದಿಗೆ ಒಳ್ಳೆಯ ಚಹ ಮಾಡಲು ಹೇಳಿದರು. ಚಹ ಆಗುವ ತನಕ ತಮಗೆ ಬಂದಿರುವ ಸನ್ಮಾನ ಪತ್ರಗಳನ್ನು ಮತ್ತು ಅವರ ಕಾರ್ಯಕ್ರಮದ ಪೇಪರ್ ವರದಿಗಳನ್ನು ತೋರಿಸಿದರು. ಗೋಡೆಯ ಮೇಲೆ ಗರೂಡ ಸದಾಶಿವರಾವ್ ಕಂಪನಿಯಲ್ಲಿ ನಟನಾಗಿದ್ದಾಗ ಹಾಕಿದ್ದ ಹನುಮಂತನ ಪಾತ್ರದ ಚಿತ್ರವಿತ್ತು. ತನ್ನ ಕಲೆಗೆ ಸಂಬಂಧಿಸಿದ ಎಲ್ಲವನ್ನು ಕಾಸಿಂಸಾಬರು ಅಮೂಲ್ಯ ಆಸ್ತಿಯಂತೆ ಕಾಪಾಡಿಕೊಂಡಿರುವರು. ಚಹಾ ಕುಡಿದ ಬಳಿಕ ನನ್ನನ್ನು ಊರೊಳಗೆ ಕರೆದುಕೊಂಡು ಹೊರಟರು.

ಕೆರೂರು ಆದಿಲಶಾಹಿ ರಾಜ್ಯದ ಒಂದು ಮುಖ್ಯ ಪಟ್ಟಣವಾಗಿತ್ತು. ಇಲ್ಲೊಬ್ಬ ಅಧಿಕಾರಿಯಿದ್ದ. ಅವನೊಂದು ಕೋಟೆ ಕಟ್ಟಿಸಿದ್ದಾನೆ. ಅದನ್ನು ಕಿಲ್ಲೆ ಎನ್ನುತ್ತಾರೆ. ಊರೊಳಗೆ ಲಿಂಗಾಯತರು, ಕುರುಬರು, ದಲಿತರು, ನಾಯಕ ಜನಾಂಗದವರು, ಬ್ರಾಹ್ಮಣರು ಹಾಗೂ ಮುಸ್ಲಿಮರಿದ್ದಾರೆ. ಇಲ್ಲಿನ ಮುಸ್ಲಿಮರ ಮನೆಮಾತು ಕನ್ನಡ. ಉರ್ದು ಆಡಳಿತ ಭಾಷೆಯಾಗಿದ್ದರೂ ಹೈದರಾಬಾದ್ ಪ್ರಾಂತ್ಯದ ಅನೇಕ ಮುಸ್ಲಿಮರ ಮನೆಮಾತು ಕನ್ನಡವಾಗಿದೆ. ಹೀಗಾಗಿ ಫಾರಸಿ ಮತ್ತು ಮರಾಠಿಗಳನ್ನು ಆಡಳಿತ ಭಾಷೆಯಾಗಿಸಿಕೊಂಡು ಆದಿಲಶಾಹಿಗಳು ಮುನ್ನೂರು ವರ್ಷ ಆಳಿದರೂ ಇಲ್ಲಿನ ಮುಸ್ಲಿಮರ ಮನೆಮಾತು ಕನ್ನಡವಾಗಿಯೇ ಉಳಿದಿರುವುದು ಸೋಜಿಗವಾಗಲಿಲ್ಲ. ಇಲ್ಲಿನ ಹಿರಿಯ ತಲೆಮಾರಿನ ಮುಸ್ಲಿಮರ ವೇಷ ಕಚ್ಚೆಪಂಚೆ. ವೇಷ ಊಟ ಮಾತು ವೃತ್ತಿ ಯಾವುದರಲ್ಲೂ ಜನರನ್ನು ಧರ್ಮದ ಹೆಸರಲ್ಲಿ ಗುರುತಿಸುವುದು ಕಷ್ಟ.

ಕಾಸಿಂ ಸಾಬರು ಹಂಪಿಯಿಂದ ನಮ್ಮೂರ ಮೊಹರಂ ನೋಡೋಕೆ ಒಬ್ಬ ಪ್ರೊಫೆಸರ್  ಬಂದಿದ್ದಾರೆ ಎಂದು ನನ್ನನ್ನು ದಾರಿಯಲ್ಲಿ ಸಿಕ್ಕವರಿಗೆಲ್ಲ ಪರಿಚಯಿಸುತ್ತ ಡಂಗುರ ಸಾರುತ್ತ ಹೊರಟರು. ನಾನಿದನ್ನು ಬಯಸಿರಲಿಲ್ಲ. ಅನಾಮಿಕನಾಗಿದ್ದುಕೊಂಡು ಅಲ್ಲಿನ ಆಚರಣೆಯನ್ನೆಲ್ಲ ನೋಡಲು ಬಯಸಿದ್ದ ನನಗೆ ಇದರಿಂದ ಮುಜುಗರ ಆಗುತ್ತಿತ್ತು. ಕೆರೂರಿನ ತುಂಬ ಬೀದಿಗೊಂದರಂತೆ ಮೊಹರಂ ದೇವರನ್ನು ಕೂರಿಸಲಾಗಿತ್ತು. ಅವನ್ನೆಲ್ಲ ತೋರಿಸುತ್ತ ಕಾಸಿಂಸಾಬರು ಹೊರಟರು. ಒಂದುಕಡೆ ಮೊಹರಂ ದೇವರ ಮಂಟಪವು ಬಹಳ ವಿಶಿಷ್ಟವಾಗಿತ್ತು. ಅದರ ಸುತ್ತ ಫ್ರೇಮು ಹಾಕಿದಂತೆ ಹಲವಾರು ದೇವರ ಪಟಗಳನ್ನು ಜೋಡಿಸಿ, ಬಣ್ಣದ ಕಾಗದಗಳಿಂದ ಅಲಂಕರಿಸಲಾಗಿತ್ತು. ಅವು ವೆಂಕಟೇಶ, ಗಣೇಶ, ಶಿವ, ರಾಮ, ಲಕ್ಷ್ಮಿ ಮುಂತಾದ ದೇವತೆಗಳ ಫೋಟೊಗಳು. ಜತೆಗೆ ಸಂವಿಧಾನವನ್ನು ಹಿಡಿದು ನಿಂತಿರುವ ಅಂಬೇಡ್ಕರ್ ಫೋಟೊ ಮತ್ತು ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿಯ ಫೋಟೊಗಳೂ ಇದ್ದವು.

ನಡುರಾತ್ರಿಗೆ ಹಾಡುಗಾರಿಕೆ ಆರಂಭ. ಅಲ್ಲಿಯ ತನಕ ದಣಿದಿದ್ದ ನಾನು ಕಿಲ್ಲೆಗೆ ಹೋಗಿ ಅಲ್ಲಿ ಮೇಲುಮುದ್ದೆ ಹಾಕಿದ ಮನೆಯ ಮಾಳಿಗೆ ಹತ್ತಿ ಮಲಗಿದೆ. ಬೆಳಗಿನ ಜಾವ ದೇವರನ್ನು ಎಬ್ಬಿಸಿ ಊರೊಳಗೆ ಮೆರವಣಿಗೆ ಆರಂಭಿಸುವ ಹೊತ್ತು. ಶಹನಾಯಿ ಮತ್ತು ಹಲಗೆಯ ಶಬ್ದ ಶುರುವಾಯಿತು. ದೇವರುಗಳನ್ನು ಮೆರವಣಿಗೆಗೆ ಎಬ್ಬಿಸಲಾಯಿತು. ದೇವರನ್ನು ಹೊತ್ತ ಸವಾರಿಗಳು ಶರವೇಗದಲ್ಲಿ ಜನಸಂದಣಿಯಲ್ಲಿ ಗೂಳಿಯಂತೆ ನುಗ್ಗುತ್ತವೆ. ಅವನ್ನು ಹಿಡಿಯುವುದಕ್ಕೆ ಬಲಿಷ್ಠರಾದ ಐದಾರು ತರುಣರು ಹಿಂದಿಂದೆ ಓಡುತ್ತ ಇರುತ್ತಾರೆ. ಎಲ್ಲ ದೇವರು ಕುಣಿದು ಹಾರಾಡಿ ಅಲಾವಿಯ ಸುತ್ತ ತಿರುಗಾಡಿ ಸುಸ್ತಾದ ಬಳಿಕ ಊರೊಳಗೆ ಹೊರಟವು. ಆದರೆ ಒಂದು ದೇವರು ಮಾತ್ರ ಅಲಾವಿ ಮಸೀದಿಯ ಪಕ್ಕದಲ್ಲಿದ್ದ ಬೇವಿನ ಮರದ ಬಳಿ ಹೋಗಿ ನಿಂತುಬಿಟ್ಟಿತು. ಏನು ಮಾಡಿದರೂ ಬರಲೊಲ್ಲದು. ನಾನು ಕುತೂಹಲದಿಂದ ಅಲ್ಲಿ ಹೋಗಿ ಪಿಸುಮಾತಿನಲ್ಲಿ ಏನೆಂದು ಒಬ್ಬ ಹಿರಿಯರಿಗೆ ಕೇಳಿದೆ. ಅದಕ್ಕೆ ಅವರು  “ಆಕಿ ಲಕ್ಷ್ಮವ್ವ. ಕಾಸಿಂ ದೇವರಿಗೆ ತಂಗಿಯಾಗಬೇಕು. ಪ್ರತಿವರ್ಷವೂ ಅಣ್ಣ-ತಂಗಿಯರು ಮಾತಾಡ್ತಾರ” ಎಂದು ಹೇಳಿದರು. ನೂರಾರು ಜನ ಸುಮ್ಮನೆ ಈ ಅಣ್ಣತಂಗಿಯರ ಸಂವಾದ ಅಥವಾ ಮಿಲನವನ್ನು ನೋಡುತ್ತ ಕಾಯುತ್ತ ಭಕ್ತಿಯಿಂದ ನಿಂತರು.

ಎಷ್ಟೊ ಹೊತ್ತಿನ ಬಳಿಕ ತಂಗಿಯಿಂದ ಅಣ್ಣನಿಗೆ ಊರೊಳಗೆ ಹೋಗಲು ಅನುಮತಿ ಸಿಕ್ಕಿತು. ಸಿಕ್ಕೊಡನೆ ಕಾಸಿಂ ದೇವರು ಊರೊಳಗೆ ಓಡತೊಡಗಿತು. ಓಡಿಓಡಿ ಮುಂದೆ ಹೋಗಿ ಅಗಸಿ ಬಾಗಿಲಲ್ಲಿ ನಿಂತಿದ್ದ ದೇವರುಗಳನ್ನು ಕೂಡಿಕೊಂಡಿತು. ಬೇರೆಬೇರೆ ಕಡೆಯಿಂದ ಬಂದಿದ್ದ ದೇವರುಗಳೆಲ್ಲ ಒಂದು ಚೌಕದಲ್ಲಿ ನಿಂತು ಪರಸ್ಪರ ಭೇಟಿಮಾಡುತ್ತವೆ. ಈ ಭೇಟಿಯಾದ ಬಳಿಕ, ದೇವರು ಪ್ರತಿಮನೆಯ ಮುಂದೆ ನಿಂತು, ಮನೆಯವರು ಕೊಟ್ಟ ಸಕ್ಕರೆ ಓದಿಕೆ ಮಾಡಿಸಿಕೊಳ್ಳುತ್ತಿತ್ತು. ಲಿಂಗಾಯತರು ಬ್ರಾಹ್ಮಣರ ಮನೆಯವರೂ ಸಕ್ಕರೆ ಓದಿಸುತ್ತಿದ್ದರು. ಮನೆಯಲ್ಲಿರುವ ಎಲ್ಲ ಮಕ್ಕಳುಮರಿಗಳೂ ಜಗಲಿಯಲ್ಲಿ ಬಂದು ಕಣ್ಣುಜ್ಜಿಕೊಂಡು ನಿಂತು ದೇವರನ್ನು ನೋಡುತ್ತಿದ್ದವು. ದೇವರು ಮರಳಿ ಮಸೂತಿಗೆ ಹತ್ತುಗಂಟೆಯ ಹೊತ್ತಿಗೆ ಬಂದು ಕೂರುತ್ತವೆ. ಮತ್ತೆ ಏಳುವುದು ಸಂಜೆಗೆ. ಹೊಳೆಗೆ ಹೋಗುವುದಕ್ಕೆ.

ಈ ಹತ್ತು ಮತ್ತು ಐದರ ನಡುವೆ ಇಡೀ ದಿನ ಕೆರೂರಿನಲ್ಲಿ ಹಾಡುಗಳ ಹೊಳೆಯೇ ಹರಿಯುತ್ತದೆ. ಚಕ್ಕಡಿಗಳಲ್ಲಿ ಬಸ್ಸುಗಳಲ್ಲಿ ಟ್ಯಾಕ್ಟರುಗಳಲ್ಲಿ ನಾನಾ ಊರುಗಳಿಂದ ಗಾಯಕರ ಮೇಳಗಳು ಬಂದಿಳಿಯುತ್ತವೆ. ಬಂದೊಡನೆ ಕಾಸಿಂ ಸಾಹೇಬರ ಹತ್ತಿರ ಹೆಸರು ಬರೆಯಿಸಿ ಕಾಯುತ್ತವೆ. ಒಬ್ಬೊಬ್ಬರನ್ನೇ ಕಾಸಿಂಸಾಬರು ಮೈಕಿನಲ್ಲಿ ಕರೆಯುತ್ತಾರೆ. ಎಷ್ಟೊ ಮೇಳಗಳಿಗೆ ಸಂಜೆತನ ಹಾಡಲು ಅವಕಾಶವೇ ಸಿಗುವುದಿಲ್ಲ. ಒಂದು ಮೇಳವು ತನಗಿಂತ ಹಿಂದೆ ಬಂದವರಿಗೆ ಅವಕಾಶ ಕೊಡಲಾಯಿತು ಎಂದು ಮುನಿಸಿಕೊಂಡು ಹೊರಟಿತು. ಅದನ್ನು ತಡೆದು ಒಲಿಸಿ ಟ್ಯಾಕ್ಟರಿನಿಂದ ಇಳಿಸಿ ಕಾಸಿಂಸಾಬರು ಮತ್ತೆ ಕರೆದುತಂದರು. ಒಂದೊಂದು ಮೇಳವೂ ತನ್ನ ಹೆಚ್ಚುಗಾರಿಕೆ ಮೆರೆಯಲು ಯತ್ನಿಸುತ್ತದೆ. ಒಂದು ತಂಡವಂತೂ ಶಾಲೆಯ ಮಕ್ಕಳದು. ಹೂವಿನ ಕೊಲ್ಲಿಗಳನ್ನು ಹಿಡಿದು ಹಸಿರುವಸ್ತ್ರ ಕಟ್ಟಿಕೊಂಡು ಅವು ಕುಣಿದು ಹಾಡಿದವು. ಇನ್ನೊಂದು ಮೇಳ ತರುಣರದು. ತಲೆಗೆ ಕೇಸರಿ ಪಟ್ಟಿ ಕಟ್ಟಿಕೊಂಡಿದ್ದ ಈ ತರುಣರು ಚೌಕಬಾರದ ಮನೆಗಳಂತಿರುವ ಬಿದಿರಿನ ಹಂದರಕ್ಕೆ ಪಾಪಾಸುಕಳ್ಳಿಯನ್ನು ಕಟ್ಟಿ, ಅದರೊಳಗೆ ಹುಶಾರಾಗಿ ಹೆಜ್ಜೆ ಹಾಕಿ ಕುಣಿದರು. ಸೊಂಟ ಊನವಾಗಿ ಕುಂಟುತ್ತಿದ್ದ ಕಾಸಿಂಸಾಬರು ಇಪ್ಪತ್ತರ ತರುಣನಂತೆ ಓಡಾಡುತ್ತಿದ್ದರು.

ಕೆರೂರಿನಲ್ಲಿ ಹಾಡು ಕೇಳಿಕೇಳಿ ಮನಸ್ಸು ದಣಿಯುತ್ತದೆ. ಕುಣಿತ ನೋಡಿನೋಡಿ ಕಣ್ಣು ದಣಿಯುತ್ತದೆ. ರಾಜಕೀಯ ಆಗಸವನ್ನು ಯಾವುದೇ ಬಣ್ಣವು ಆವರಿಸಿರಲಿ, ಚುನಾವಣೆಯ ಫಲಿತಾಂಶಗಳು ಏನೇ ಆಗಿರಲಿ, ನೆಲದ ಮೇಲೆ ಮಾತ್ರ ಕರ್ನಾಟಕದ ಜನರು ಕಟ್ಟಿರುವ ಮತಾತೀತ ಸಂಸ್ಕೃತಿಯು ಇನ್ನೂ ಬಹುವರ್ಣಿಯಾಗೇ ಉಳಿದಿದೆ, ಅದು ತನ್ನದೇ ಆದ ಲಯದಲ್ಲಿ ಬದುಕಿದೆ ಅನಿಸಿತು. ಈ ಬಹುಧರ್ಮಿಯ ಮೊಹರಂ ಪರಂಪರೆ ಹಿಂದಿನಷ್ಟು ವೈಭವದಲ್ಲಿ ನಡೆಯುತ್ತಿಲ್ಲ ಎಂದು ನನಗೆ ಅನುಭವಕ್ಕೆ ಬಂದಿದೆ. ಆದರೂ ಅನೇಕ ಊರುಗಳಲ್ಲಿ ಅದು ಹೊಸ ತಲೆಮಾರಿನ ಹಾಡುಗಾರರನ್ನೂ ಕುಣಿತಗಾರರನ್ನೂ ಸೇರಿಸಿಕೊಂಡು ಬತ್ತದ ತೊರೆಯಾಗಿ ಮತ್ತೆ ಹರಿಯುತ್ತಿದೆ. ಇಂತಹ ಊರುಗಳಲ್ಲಿ ಕೆರೂರು ಸಹ ಒಂದು. ನಾನು ಮನಸ್ಸಿನ ಜೋಳಿಗೆ ತುಂಬ ಹಾಡು ತುಂಬಿಕೊಂಡು ಹಂಪಿಗೆ ಮರಳಿದೆ.

ಚಿತ್ರಗಳು-ಲೇಖಕರದು]