ನಾನು ನನ್ನ ತಮ್ಮನೂ ಬಾಲ್ಯದಲ್ಲಿ ಸ್ಲೇಟು ಮತ್ತು ಎಕ್ಸೈಜ್ ಪುಸ್ತಕಗಳಲ್ಲಿ ಕ್ಷಣಾರ್ಧದಲ್ಲಿ ಆನೆಚಿತ್ರ ಬಿಡಿಸುವುದರಲ್ಲಿ ಕುಶಲತೆ ಪಡೆದಿದ್ದೆವು. ಮೇಲೊಂದು ಕಮಾನುಗೆರೆ ಎಳೆದು, ಅದಕ್ಕೆ ತಲೆಯ ಎರಡು ಉಬ್ಬುಗೆರೆ ಜೋಡಿಸಿ, ಅಲ್ಲಿಂದ ಕೆಳಕ್ಕೆ ಸೊಂಡಿಲ ರೇಖೆಯನ್ನು ಇಳಿಸಿ, ಕೆಳಗಿನಿಂದ ಹೊಟ್ಟೆಯ ಗೆರೆಯನ್ನು ಸೇರಿಸಿ, ಅದಕ್ಕೆ ನಾಲ್ಕುಕಾಲು ಮೂಡಿಸಿ, ಕೊನೆಗೆ ಬಾಲದ ಗೆರೆಗೆ ಕುಚ್ಚು ಕಟ್ಟಿದರೆ ಆನೆ ಆಗಿಬಿಡುತ್ತಿತ್ತು. ಮನೆಯ ಗೋಡೆಯ ಮೇಲೆಲ್ಲ ಸ್ಪರ್ಧೆಯಿಂದ ಆನೆ ಬರೆದು ಅಮ್ಮನ ಕೈಲಿ ಬೈಸಿಕೊಳ್ಳುತ್ತಿದ್ದೆವು. ಆನೆಗಳ ಮೇಲೆ ನಮ್ಮ ಮೋಹಕ್ಕೆ ಕಾರಣ, ಅ=ಅಂಜೂರ ಆ=ಆನೆ ಅಂ=ಅಂಕುಶದ ಮಗ್ಗಿಪುಸ್ತಕದ ಚಿತ್ರಗಳೋ ನಮ್ಮೂರಿಗೆ ಸರ್ಕೀಟು ಬರುತ್ತಿದ್ದ ಮಠದ ಆನೆಗಳೋ ತಿಳಿಯದು.

ಮಠದ ಆನೆಯು ‘ಓಂಶಿವ’ ಎಂಬ ಹೆಸರುಳ್ಳ ಕೆಂಪುಹಳದಿ ಹೊದಿಕೆಯನ್ನು ಹೊಟ್ಟೆಯ ಮೇಲೆ ಹೊದ್ದುಕೊಂಡು ಹಣೆಗೆ ವಿಭೂತಿಯನ್ನು ಧರಿಸಿ, ಮೊರದಂತಹ ಕಿವಿಚಟ್ಟೆಗಳ ಮೇಲೆ ಸೀಮೆಸುಣ್ಣದಲ್ಲಿ ಶ್ರೀ ಬರೆಸಿಕೊಂಡು ಬರುತ್ತಿತ್ತು. ಅದರ ಮೇಲೊಬ್ಬ ಕೂತು ನಗಾರಿಯನ್ನು ಬಾರಿಸುತ್ತಿದ್ದನು. ಕೊರಳಿಗೆ ಕಟ್ಟಿದ ಗಂಟೆಯು, ಕರಿಜಾಲಿ ಕಂಬದಂತಹ ಕಾಲುಗಳಿಂದ ಆನೆ ನಡೆದಂತೆಲ್ಲ ಢಣ್‌ಢಣ್ ಎಂದು ಲಯಬದ್ಧವಾಗಿ ಸದ್ದುಗೈಯ್ಯುತ್ತಿತ್ತು. ದೊಣ್ಣೆಯ ತುದಿಗೆ ಸಣ್ಣತಂತಿಗಳು ಮೊಳಕೆ ಒಡೆದಂತೆ ಅನಾಕರ್ಷಕ ಮೋಟುಬಾಲವಿತ್ತು; ಎರಡು ಹಲಸಿನ ಕಾಯಿಗಳನ್ನು ಜೋಡಿಸಿದಂತಹ ತಲೆಯಿತ್ತು; ಖಡ್ಗದ ಏಣಿನಂತಹ ಬೆನ್ನಮೂಳೆ, ಹುಡುಕಿದರೂ ಕಾಣದ ಸಣ್ಣಕಣ್ಣು, ಕೊಳಕು ಕಂಬಳಿ ಹೊದಿಸಿದಂತಹ ನಿರಿಗೆಚರ್ಮ ಮತ್ತು ಬಿಳಿಖಡ್ಗಗಳು ಚಾಚಿದಂತಹ ದಂತಗಳು ಇದ್ದವು. ನೋಡಲು ಸುಂದರವಲ್ಲದ ಆದರೆ ಸೋಜಿಗ ಭಯ ಪ್ರೀತಿ ಹುಟ್ಟಿಸುವ ಆನೆಗಳು ವಿಚಿತ್ರ ಸೆಳೆತ ಉಂಟುಮಾಡುತ್ತಿದ್ದವು.

ಆನೆಗಳು ಊರಿಗೆ ಬಂದದಿನ ನಾವು ಶಾಲೆಗೆ ಸ್ವಯಂ ರಜೆ ಘೋಷಿಸಿ, ಅದು ಊರುಬಿಟ್ಟು ಹೋಗುವ ತನಕ ಅದರ ಹಿಂಬಾಲಕರಾಗಿ ಹೋಗುತ್ತಿದ್ದೆವು. ಅದು ಮನೆಮನೆಯ ಮುಂದೆ ನಿಂತು, ಅವರು ಭಕ್ತಿಯಿಂದಲೊ ಇಷ್ಟು ದೊಡ್ಡ ಪ್ರಾಣಿ ಮನೆತನಕ ಬಂದಿದೆ ಎಂಬ ಹಮ್ಮಿನಿಂದಲೋ ತಟ್ಟೆಯಲ್ಲಿಟ್ಟು ಕೊಡುತ್ತಿದ್ದ ಅಕ್ಕಿಯನ್ನು ತಿಂದು, ಬಾಳೆಚಿಪ್ಪನ್ನು ಪೆಪ್ಪರಮೆಂಟಿನಂತೆ ಬಾಯಲ್ಲಿ ಹಾಕಿಕೊಂಡು, ತೆಂಗಿನಕಾಯನ್ನು ಕಾಲಲ್ಲಿ ಅಪ್ಪಚ್ಚಿ ಮಾಡಿ ಕೊಬ್ಬರಿಯನ್ನು ಸೊಂಡಿಲಿನ ತುದಿಯಿಂದ ಹೇಗೊ ಎಬ್ಬಿ ಮೆಲ್ಲುತ್ತಿತ್ತು. ಚಮತ್ಕಾರವೆಂದರೆ, ಅಕ್ಕಿತಟ್ಟೆಯಲ್ಲಿದ್ದ ನಾಕಾಣೆ ಎಂಟಾಣೆ ಕಾಸನ್ನು ಸೊಂಡಿಲಲ್ಲಿ ಎತ್ತಿ ಮೇಲೆ ಕುಳಿತಿದ್ದ ಮಾವುತನಿಗೆ ಕೊಡುತ್ತಿದ್ದುದು.

ಆನೆ ಯಾವುದಾದರೂ ಕಾರಣಕ್ಕೆ ಹಿಂದೆ ತಿರುಗಿದಾಗ ಹೋ ಎಂದು ದೂರ ಓಡುತ್ತಿದ್ದೆವು. ಅದರ ಮೂಗಿನೊಳಗೆ ಒಂದು ಇರುವೆ ಹೋದರೂ ಸಾಕು ಅದು ಸತ್ತುಹೋಗುತ್ತದೆ ಎಂದೂ, ಬೇಲದಹಣ್ಣು ತಿಂದರೆ ಅದರ ಒಳಗಿನ ತಿರುಳನ್ನೆಲ್ಲ ಖಾಲಿ ಮಾಡಿ ಖಾಲಿ ಗೊರಟವನ್ನು ಲದ್ದಿಯಲ್ಲಿ ಮರಳಿ ಹೊರಹಾಕುತ್ತದೆ ಎಂದೂ ಅಮ್ಮ ಹೇಳುತ್ತಿದ್ದಳು. ಆ ಆನೆಯೋ ಅಂಡುಗಳನ್ನು ಲಯಬದ್ಧವಾಗಿ ಅಲ್ಲಾಡಿಸುತ್ತ, ಎರಡು ಮಣ ದೊಡ್ಡದೊಡ್ಡ ಉಂಡೆಯಂತಹ ಹಬೆಯಾಡುವ ಲದ್ದಿಗಳನ್ನು ಒಂದೊಂದಾಗಿ ಹಾಕುತ್ತಿತ್ತು. ನಾವು ‘ಒಂದೂ.. .ಎರಡೂ..’ ಎಣಿಸುತ್ತಿದ್ದೆವು. ಅದರ ದೊಡ್ಡ ಶಿಶ್ನವು ನಿಷ್ಕಾರಣವಾಗಿ ಹೊರಬಂದು ಚಿಕ್ಕಸೊಂಡಿಲಂತೆ ತೂಗಾಡುವಾಗ ಕಿಸಿಕಿಸಿ ಮಾಡುತ್ತಿದ್ದೆವು. ಅದು ಕೆಲವೊಮ್ಮೆ ಮಳೆಗಾಲದಲ್ಲಿ ಮನೆಯ ಮಾಡಿನ ನೀರು ಭಳಾರನೆ ಸುರಿಯುವಂತೆ ಮೂತ್ರ ಸುರಿಸುತ್ತಿತ್ತು. ಆನೆ ಲದ್ದಿಹಾಕಿದರೆ ತಿಪ್ಪೆ. ಮೂತ್ರ ಮಾಡಿದರೆ ಜಲಪ್ರಳಯ!

ಅಂಡು ತಿರುಗಿಸಿ ನಿಂತ ಆನೆನಾನು ಮೈಸೂರಿನಲ್ಲಿ ಓದುವಾಗ, ಜಂಬೂಸವಾರಿ ನೋಡಲು ತಪ್ಪದೆ ಹೋಗುತ್ತಿದ್ದೆ. ಅಲ್ಲಿ ಆನೆಯ ಮೇಲಿನ ಅಂಬಾರಿಯಲ್ಲಿ ಸರ್ವಾಲಂಕಾರ ಭೂಷಿತನಾಗಿ ಕುಳಿತ ಮಾವುತನಿಗಿಂತ ಹೆಚ್ಚಾಗಿ ಸೆಳೆಯುತ್ತಿದ್ದುದು, ಆನೆಯ ಕುಂಡೆಯ ಕೆಳಗೆ ದೊಡ್ಡದೊಂದು ಬುಟ್ಟಿ ಹಿಡಿದುಕೊಂಡು, ಅದು ಹಾಕುವ ಲದ್ದಿಯನ್ನು ಸಂಗ್ರಹಿಸುವವನು. ಅವನ ಪರದಾಟ ನೋಡಲಾಗದು. ಅವನ ಕೆಲಸ ಬಹಳ ಮಹತ್ವದ್ದು ಯಾಕೆಂದರೆ, ಲದ್ದಿಯೇನಾದರೂ ರಸ್ತೆಗೆ ಬಿದ್ದು ಹಾಗೆಯೇ ಉಳಿದರೆ, ಹಿಂದಿಂದ ಬರುವ ಎಲ್ಲರೂ ಅದನ್ನು ತುಳಿದುಕೊಂಡು ಕವಾಯತೆಲ್ಲ ವಾಸನೆ ಆಗುತ್ತಿತ್ತು.

ನಮಗೆ ವಿಸ್ಮಯವಾಗುತ್ತಿದ್ದುದು ಇಷ್ಟು ದೊಡ್ಡ ಪ್ರಾಣಿಯನ್ನು ಒಬ್ಬ ತೆಳ್ಳನೆಯ ಸಣಕಲು ಮನುಷ್ಯ ಹತೋಟಿ ಮಾಡುತ್ತಿದ್ದುದು. ನಮ್ಮ ಪ್ರಕಾರ ಜಗತ್ತಿನ ಅತಿ ಬಲಿಷ್ಠ ವ್ಯಕ್ತಿ ಅವನೇ. ಮಕ್ಕಳು ಬಸ್ಸಲ್ಲಿ ಮುಂದಿನ ಅಡ್ಡಸೀಟಲ್ಲಿ ಕುಳಿತು ಡ್ರೈವರನನ್ನೇ ಮೆಚ್ಚುಗೆ ಅಸೂಯೆಯಿಂದ ನೋಡುವಂತೆ, ಮಾವುತನನ್ನು ನಾವು ನೋಡುತ್ತಿದ್ದೆವು. ಅವನು ಆನೆಕಿವಿಯ ಹಿಂದೆ ಕಾಲನ್ನು ಮೆಟ್ಟಿಕೊಂಡು, ಅದರ ಚಟ್ಟೆಗೆ ಅಂಕುಶವನ್ನು ಪಿಗ್ಮಿ ಕಲೆಕ್ಟರನು ಕಿವಿಗೆ ಪೆನ್ನಿಟ್ಟುಕೊಳ್ಳುವಂತೆ ಸಿಕ್ಕಿಸಿ, ಚಲ್‌ಚಲ್, ಹತ್‌ಹತ್ ಎಂಬ ಯಾವುದೋ ಭಾಷೆಯಲ್ಲಿ ಆದೇಶ ಕೊಡುತ್ತಿದ್ದನು.

ಮಾವುತರ ಜತೆಗೆ ಹೆಚ್ಚಿನ ಸಂಪರ್ಕ ನನಗೆ ಏರ್ಪಟ್ಟಿದ್ದು ನಮ್ಮೂರಿಗೆ ‘ನ್ಯೂ ಗ್ರ್ಯಾಂಡ್ ಸರ್ಕಸ್’ ಬಂದಾಗ. ಸರ್ಕಸ್ಸು ನಮ್ಮ ಮನೆಯ ಮುಂದಿನ ಚಿಕ್ಕೆರೆ ಕೆಳಗಿನ ಗದ್ದೆಬಯಲಲ್ಲಿ, ಮೂರು ತಿಂಗಳ ಕ್ಯಾಂಪ್ ಹಾಕಿತು. ಸರ್ಕಸ್ಸಿನವರು ಹುಲಿ ಸಿಂಹ ಕರಡಿಗಳನ್ನು ಕಾಣದಂತೆ ಒಳಗೆ ಇರಿಸಿದ್ದರು. ಒಂಟೆ ಮತ್ತು ಆನೆಗಳನ್ನು ಮಾತ್ರ ಸೊಪ್ಪು ಹಾಕಿ ಹೊರಗೆ ಕಟ್ಟಿರುತ್ತಿದ್ದರು. ಆನೆಗಳು ತೆಕ್ಕೆಯಷ್ಟು ಹುಲ್ಲನ್ನು ಸೊಂಡಿಲಲ್ಲಿ ಹಿಡಿದು, ತನ್ನ ಎರಡೂ ಕಾಲಿಗೆ ಒಂದೊಂದು ಸಲ ಬಡಿದು ಕೊಡವಿ, ತನ್ನ ಬಾಯೊಳಗೆ ಇಟ್ಟುಕೊಳ್ಳುವುದನ್ನೂ, ಕೊಂಬೆಗಳ ತೊಗಟೆಯನ್ನು ಹುಶಾರಾಗಿ ಸುಲಿದು ತಿನ್ನುವುದನ್ನೂ ನೋಡುತ್ತ ನಾವು ಗಂಟೆಗಟ್ಟಲೆ ನಿಲ್ಲುತ್ತಿದ್ದೆವು. ಅಪ್ಪ ಸರ್ಕಸ್ಸಿನವರಿಗೆ ಬೇಕಾದ ಸ್ಥಳೀಯ ಸೌಲಭ್ಯ ಒದಗಿಸುವ ಗುತ್ತಿಗೆ ಹಿಡಿದಿದ್ದನು. ಇದರಿಂದ ನಮಗೆ ಹಗಲು ಹೊತ್ತು ಕೂಡ ಸರ್ಕಸ್ಸಿನ ಆವರಣದಲ್ಲಿ ಯಾವಾಗ ಬೇಕಾದರೂ ಅಡ್ಡಾಡುವ ಅನುಮತಿ ಸಿಕ್ಕಿತ್ತು. ಸರ್ಕಸ್ಸಿನ ತಿಪ್ಪೆಯ ಹರಾಜನ್ನೂ ಅಪ್ಪ ಹಿಡಿದಿದ್ದನು. ಮೂರು ತಿಂಗಳಿಗೆ ಐದು ಆನೆಗಳಿಂದ ಒಂದು ಲಾರಿ ಗೊಬ್ಬರ ಶೇಖರವಾಗುತ್ತಿತ್ತು.

ಸಕ್ರೆಬೈಲಿನಲ್ಲಿ ಆನೆ ಸವಾರಿಆನೆಗಳು ಹಗಲಲ್ಲಿ ನ್ಯೂಗ್ರ್ಯಾಂಡ್ ಸರ್ಕಸ್ ಎಂಬ ಬರೆಹವುಳ್ಳ ಹೊದಿಕೆ ಹೊತ್ತು ಊರು ಸುತ್ತುತ್ತಿದ್ದವು. ಬೆಳಬೆಳಗ್ಗೆ ಆನೆಗಳಿಗೆ ಬೇಕಾದ ಗೋಣಿ, ಬಸರಿ, ಅರಳಿ ಮರಗಳ ಸೊಪ್ಪಿನ ಹೊರೆ ತರಲು ಮಾವುತರು ಹೊರಡುತ್ತಿದ್ದರು. ಪರಸ್ಥಳದ ಅವರಿಗೆ ನಮ್ಮ ನೆರವು ಬೇಕಿತ್ತು. ಆ ಮರಗಳಿರುವ ಜಾಗ ತೋರಿಸಲು ಮಾವುತರು ನಮ್ಮನ್ನು ಆನೆ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದರು. ಹಗಲು ಹೊತ್ತು ಮಾವುತರು ಅಪ್ಪನ ಜತೆ ಬೀಡಿಕುಡಿಯುತ್ತ ಉರ್ದುವಿನಲ್ಲಿ ಮಾತಾಡಿಕೊಂಡು ಕೂರುತ್ತಿದ್ದರು. ತಮಗೆ ಬಹಳ ಕಡಿಮೆ ಸಂಬಳ ಕೊಡಲಾಗುತ್ತಿದೆ; ಕೆಲಸ ಬಿಟ್ಟುಹೋಗಬೇಕೆಂದರೆ ಬೇರೆಕೆಲಸ ಗೊತ್ತಿಲ್ಲ. ಇದರಿಂದ ನಿರ್ವಾಹವಿಲ್ಲದೆ ಇರಬೇಕಾಗಿದೆ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಒಬ್ಬ ಮಾವುತನ ಹೆಂಡತಿ ಸರ್ಕಸ್ಸಿನ ಪಕಾತಿಯಾಗಿದ್ದು ಮಗಳು ಚಿಕ್ಕಚಡ್ಡಿ ಹಾಕಿಕೊಂಡು ಹಗ್ಗದ ಬಲೆಯ ಮೇಲೆ ಜೋಕಾಲಿ ಕಸರತ್ತು ಮಾಡುತ್ತಿದ್ದಳು. ಅವರಿಬ್ಬರು ಬಿಟ್ಟುಬರಲು ಒಪ್ಪುತ್ತಿಲ್ಲವಾಗಿ ತಾನು ಇರಬೇಕಾಗಿದೆಯೆಂದು ಆತನು ಹೇಳುತ್ತಿದ್ದನು. ಹಿಂದೆ ಮೈಸೂರ ಅರಮನೆಯಲ್ಲಿ ದಸ್ತಗಿರ್ ಎಂಬ ಆನೆಕಾರನಿದ್ದನೆಂದೂ, ಅವನನ್ನು ವಿದೇಶದಿಂದ ಬಂದ ಒಬ್ಬಳು ಬಿಳಿಯ ಹುಡುಗಿ ಮೋಹಿಸಿ, ಲಗ್ನವಾಗಿ ತನ್ನ ದೇಶಕ್ಕೆ ಕರೆದುಕೊಂಡು ಹೋದಳೆಂದೂ, ಅವನ ಮೇಲೆ ‘ಎಲಿಫಂಟ್ ಬಾಯ್’ ಎಂಬ ಇಂಗ್ಲಿಷ್ ಸಿನಿಮಾ ಬಂದಿದೆಯೆಂದೂ ಕತೆಗಳನ್ನು ನಾವು ಕೇಳುತ್ತಿದ್ದೆವು.

ನಮ್ಮೂರು ಇತ್ತ ಮಲೆನಾಡೂ ಅಲ್ಲದ ಬಯಲಸೀಮೆಯೂ ಅಲ್ಲದ ಸೆರಗು ಪ್ರದೇಶ. ಭದ್ರಾ ಅಭಯಾರಣ್ಯಕ್ಕೆ ಹತ್ತಿಕೊಂಡಿರುವ ನಮ್ಮೂರ ಆಸುಪಾಸಿನ ಗದ್ದೆ ತೋಟಗಳಿಗೆ ಕಾಡಾನೆ ಬರುತ್ತಿದ್ದವು. ಅವು ಅನೇಕ ದಿನಗಳ ಕಾಲ ತೋಟ ಗದ್ದೆಗಳನ್ನು ಧ್ವಂಸ ಮಾಡಿಕೊಂಡು ಸುತ್ತಾಡುತ್ತಿದ್ದವು. ಆಗ ಕಾಡಾನೆ ಹಿಡಿಯುವವರು ಬಂದು ಖೆಡ್ಡಾ ಮಾಡುತ್ತಿದ್ದರು. ನಾನು ನೋಡಿದ ಮೊದಲನೆಯ ಖೆಡ್ಡಾ ಹುಣಸೆಘಟ್ಟದ ಬಳಿಯದು. ದೊಡ್ಡ ಸಲಗವನ್ನು ಹೆಣ್ಣಾನೆ ನೆರವಿನಿಂದ ಗುಂಡಿಯಲ್ಲಿ ಬೀಳಿಸಿ ಉಪವಾಸ ಕೆಡವಿ, ದಪ್ಪನೆಯ ಸರವಿಗಳಿಂದ ಬಿಗಿದು, ದಿಮ್ಮಿಗಳ ರೊಪ್ಪದಲ್ಲಿ ಎಷ್ಟೋ ದಿನ ಕೂಡಿ ಹಾಕಲಾಗಿತ್ತು. ನಾವು ಬುತ್ತಿಕಟ್ಟಿಕೊಂಡು ಎಂಟು ಕಿ.ಮಿ. ದೂರ ಅಲ್ಲಿಗೆ ನಡೆದುಹೋಗಿ ನೋಡಿ ಬಂದಿದ್ದೆವು. ಕಾಡಿನಲ್ಲಿ ಜೀವಂತ ಆನೆಗಳನ್ನು ನಾವು ಕಂಡಿದ್ದು ಬಂಡಿಪುರದ ಕಾಡಿನಲ್ಲಿರುವ ಗೋಪಾಲಸ್ವಾಮಿ ಬೆಟ್ಟದಲ್ಲಿ. ಅವನ್ನು ಕಂಡು ಆನೆಗಳ ಬಗ್ಗೆ ನನಗಿದ್ದ ಭಯಭಕ್ತಿಯೇ ಕಡಿಮೆಯಾಯಿತು. ಅವು ಎಲ್ಲಿ ಬೇಕಲ್ಲಿ, ಬಿಡಾಡಿ ದನದಂತೆ, ಗುಡ್ಡದ ಇಳುಕಲಿನಲ್ಲಿ ಎಳೆಯಾನೆಗಳನ್ನು ಕಟ್ಟಿಕೊಂಡು ಮೇಯುತ್ತಿದ್ದವು.

ಶಿವಮೊಗ್ಗದಲ್ಲಿ ಅಷ್ಟು ವರ್ಷವಿದ್ದರೂ ನನಗೆ ಸಕ್ರೆಬೈಲಿನ ಆನೆಕ್ಯಾಂಪಿಗೆ ಹೋಗುವುದಕ್ಕೇ ಆಗಿರಲಿಲ್ಲ. ಹಂಪಿ ಉತ್ಸವದ ಮೆರವಣಿಗೆಗೆ ಸಕ್ರೆಬೈಲಿನ ಆನೆಗಳು ಬರುತ್ತಿದ್ದವು. ಆನೆ ನೋಡಲು ಮಕ್ಕಳ ಜತೆ ಹೋದಾಗ ಮಾವುತರ ಜತೆ ಹೇಗೊ ಸ್ನೇಹ ಸಂಪಾದಿಸಿ ಮಾತಾಡುತ್ತಿದ್ದೆ. ಮೈಸೂರು ಸೀಮೆಯ ಮಾವುತರು ಕಾಡು ಜೇನು ಕುರುಬರಾದರೆ, ಸಕ್ರೆಬೈಲಿನ ಮಾವುತರು ಮುಸ್ಲಿಮರು. ಅವರು ಯಾವಾಗ ಈ ಕಸುಬಿಗೆ ಯಾವಾಗ ಬಂದರೊ ಯಾಕೆ ಬಂದರೊ ಗೊತ್ತಿಲ್ಲ. ಆದರೆ ಅವರು ಬಂಗಾಳದ ಮೂಲದವರು ಮತ್ತು ಆನೆಗಳ ಜತೆ ಸಂಪರ್ಕ ಭಾಷೆಯಾಗಿ ಬಂಗಾಳಿ ಬಳಸುತ್ತಾರೆ ಎನ್ನುವುದು ಕುತೂಹಲ ಹುಟ್ಟಿಸಿತ್ತು. ಉದಾ.ಗೆ, ಧರ್ (ಎತ್ತು) ಚಯ್ (ತಿರುಗು) ತಿರೆ (ಮಲಗು) ಭಲ್ (ನಡೆ) ಇತ್ಯಾದಿ. ಶಬ್ದವಿಲ್ಲದ ಇನ್ನೊಂದು ಆನೆಭಾಷೆಯೂ ಇದೆ. ಅದು ಅಂಕುಶ ಮತ್ತು ಕೈಕಾಲುಗಳಿಂದ ತಿವಿದು ಹೇಳುವಂತಹದ್ದು. ಅದರಲ್ಲೂ ಕಾಡಾನೆಗಳ ಜತೆಯಲ್ಲಿರುವಾಗ ಎಲ್ಲ ಬಗೆಯ ಸೂಚನೆಗಳನ್ನು ಮಾವುತರು ಕಾಲಿನ ತಿವಿತದಲ್ಲಿಯೆ ಕೊಡುವರು. ಬಹುಶಃ ಶಬ್ದದ ಭಾಷೆಗಿಂತ ಸ್ಪರ್ಶದ ಭಾಷೆಯೇ ಬಹಳ ಪರಿಣಾಮಕಾರಿ ಇದ್ದೀತು ಅನಿಸಿತು. ಇದರ ಬಗ್ಗೆ ಚರ್ಚಿಸಲು ಯತ್ನಿಸಿದಾಗ, ‘ಸಕ್ರೆಬೈಲಿಗೆ ಬನ್ನಿ. ಪುರುಸೊತ್ತಾಗಿ ಮಾತಾಡಬಹುದು. ಇಲ್ಲಿ ಕಷ್ಟ’ ಎಂದು ನನ್ನನ್ನು ಅವರು ಸಾಗಹಾಕುತ್ತಿದ್ದರು.

ಜಳಕದ ನೀರಲ್ಲೇ ಆನೆಯ ಮೂತ್ರ ವಿಸರ್ಜನೆಒಂದು ಬೇಸಿಗೆಯಲ್ಲಿ ಶಿವಮೊಗ್ಗೆಗೆ ಹೋದಾಗ ಸಕ್ರೆಬೈಲಿನ ಆನೆಕ್ಯಾಂಪಿಗೆ ಹೋದೆ. ಅಲ್ಲಿ ಬೆಳಬೆಳಗ್ಗೆ ಮಾವುತರು ಆನೆಗಳನ್ನು ತುಂಗಾಹೊಳೆಗೆ ನಡೆಸಿಕೊಂಡು ಹೋಗಿ ಮೀಯಿಸುತ್ತಾರೆ. ಅವನ್ನು ನೀರಲ್ಲಿ ಮಲಗಿಸಿ ಸುಕ್ಕುಹಿಡಿದ ಚರ್ಮವನ್ನು ಗಸಗಸ ಉಜ್ಜುತ್ತಾರೆ. ಆನೆಗಳು ಉಜ್ಜಿದಂತೆಲ್ಲ ತಮ್ಮ ದೇಹದ ಬೇರೆಬೇರೆ ಭಾಗಗಳನ್ನು ಒಡ್ಡುತ್ತ ನೀರಿನಲ್ಲಿ ಹಿತವಾಗಿ ಮಲಗಿರುತ್ತವೆ. ಆದರೂ ಅವು ತಾವೇ ಕುಡಿಯುವ ಜಳಕ ಮಾಡುವ ನೀರಲ್ಲೇ ಮೂತ್ರಮಾಡುತ್ತ ಲದ್ದಿಹಾಕುತ್ತ  ಇದ್ದುದು ಸಹ್ಯವಾಗಲಿಲ್ಲ. ಆಮೇಲೆ ಅವನ್ನು ನೀರಿನಿಂದ ಹೊರಹೊರಡಿಸಿ ಅಕ್ಕಿ ಮತ್ತು ಬೆಲ್ಲವನ್ನು ಭತ್ತದ ಹುಲ್ಲಿನಲ್ಲಿಟ್ಟು ಗಂಟುಕಟ್ಟಿ ಕಡುಬಿನಂತೆ ಮಾಡಿ ಅವುಗಳ ಬಾಯಲ್ಲಿ ಇಡುವ ಕೆಲಸವನ್ನು ಮಾವುತರು ಮಾಡುತ್ತಾರೆ. ಬಳಿಕ ಕಾಡಿಗೆ ಅಟ್ಟುವ ಕೆಲಸ.

ಆನೆ ನಡೆಯುವುದು ನೋಡಲು ಚಂದ. ಆದರೆ ಅದು ಕೂರುವುದನ್ನು ನೋಡಲಾಗದು. ಸರ್ಕಸ್ಸಿನಲ್ಲೂ ಅದು ಕಷ್ಟಪಟ್ಟು ಮರದ ಸ್ಟೂಲುಗಳ ಮೇಲೆ ಎರಡು ಕಾಲಲ್ಲಿ ನಿಂತು, ಇನ್ನೆರಡು ಕಾಲನ್ನು ಎತ್ತಿ ಸೊಂಡಿಲನ್ನು ಔತ್ವಾಕಾರದಲ್ಲಿ ಬಾಗಿಸಬೇಕಿತ್ತು. ಹಾಗೆ ಮಾಡಲು ಆಗದಾಗ ಮಾವುತನು ಚಾಟಿ ಬಾರಿಸಿ ಹೆದರಿಸುತ್ತಿದ್ದನು. ಆನೆ ಮತ್ತೆ ಯತ್ನಿಸುತ್ತಿತ್ತು. ಈ ಸಲವಾದರೂ ಆಗಿಬಿಡಲಪ್ಪಾ ಎಂದು ನಾವು ಬೇಡಿಕೊಳ್ಳುತ್ತಿದ್ದವು. ಒಮ್ಮೆ ಮಾವುತನು ನಮ್ಮನ್ನು ಹತ್ತಿಸಿಕೊಳ್ಳಲು ಆನೆಯನ್ನು ಮುಂಗಾಲು ಮಡಿಚಿ ಕೂರಲು ಹೇಳಿದನು. ಅದು ಕೂರಲಿಲ್ಲ. ಬಾಗಿ ನೋಡಿದರೆ ನೆಲದ ಮೇಲೆ ರಸ್ತೆಯಿಂದ ಎದ್ದ ಜಲ್ಲಿಕಲ್ಲೊಂದು ಇತ್ತು. ದೊಡ್ಡದೇಹವು ಚೂಪಾದ ಕಲ್ಲಿನ ಮೇಲೆ ಕೂತರೆ ಒತ್ತುತ್ತದೆ. ಆನೆ ಅದನ್ನು ಗಮನಿಸಿತ್ತು. ಮಾವುತ ಗಮನಿಸಿರಲಿಲ್ಲ.

ಸಿಂಗರಿಸಿ ನಿಂತ ಆನೆಗಳುಆದರೆ ಮಕ್ಕಳಂತಿರುವ ಆನೆಗಳಿಗೆ ಮದ ಬಂದಾಗ ಸುಪ್ತವಾಗಿರುವ ಅದರ ಪಾಶವಿಶಕ್ತಿಯು ಹುಚ್ಚನಕೈಯ ಕಲ್ಲಿನಂತೆ ಯಾರ ಮೇಲಾದರೂ ಎರಗಲು ಕಾಯುತ್ತಿರುತ್ತದೆ. ಆಗ ತಮ್ಮನ್ನು ಸಾಕಿದ ಮಾವುತ ಸಿಕ್ಕರೆ ಅವನೂ ಖಲಾಸ್. ಪ್ರತಿಮಾವುತನ ವಂಶದಲ್ಲಿ ಯಾರಾದರೂ ಒಬ್ಬ ಆನೆಯ ಕೈಲಿ ಪ್ರಾಣ ಕಳೆದುಕೊಂಡಿರುವುದುಂಟು. ಸಕ್ರೆಬೈಲಿನಲ್ಲಿ ಒಂದು ಆನೆ ತೀರ್ಥಹಳ್ಳಿ ರಸ್ತೆಯಲ್ಲಿ ಬಾಳೆಕಾಯಿ ವ್ಯಾನನ್ನು ತಡೆದು ಗ್ಲಾಸನ್ನು ಒಡೆದು ಅದರೊಳಗಿಂದ ಡ್ರೈವರನ್ನು ಎಳೆದು ಕೊಂದುಹಾಕಿತ್ತು. ಮತ್ತೊಮ್ಮೆ ಸುಮ್ಮನೆ ರಸ್ತೆಗೆ ಅಡ್ಡನಿಂತು ಇಡೀದಿನ ಟ್ರಾಫಿಕ್ ಜಾಂ ಮಾಡಿತ್ತು. ಆದರೆ ಮದವಿಳಿದಾಗ ಇದೇ ಆನೆ ಆಡಾಗುತ್ತದೆ. ಗುಲಾಮನಾಗುತ್ತದೆ. ಈ ದ್ವಿಪಾತ್ರಾಭಿನಯ ವಿಚಿತ್ರವಾಗಿದೆ. ಯಾವಾಗಲಾದರೂ ಅದರ ಕೈಯಲ್ಲಿ ಸಿಕ್ಕಿ ಸಾಯುವ ಸಾಧ್ಯತೆಯಿದ್ದರೂ ಅದರೊಂದಿಗೆ ಬದುಕುತ್ತಿರುವ ಮಾವುತರು, ಜಗತ್ತಿನ ಅತಿಸಾಹಸಿ ವ್ಯಕ್ತಿಗಳೆನಿಸಿತು.

ಸ್ವತಂತ್ರವಾಗಿ ಕಾಡಿನಲ್ಲಿ ಅಲೆದಾಡಿಕೊಂಡಿದ್ದ ಆನೆ ಮನುಷ್ಯರ ಕೈಗೆ ಸಿಕ್ಕು ತನ್ನ ಮೂಲಶಕ್ತಿಯನ್ನು ಮರೆತು ಆಡಿನಂತೆ ಪಳಗಿಬಿಟ್ಟಿದೆ. ನಿಯಂತ್ರಿಸಲು ಕಿವಿಚಟ್ಟೆಗೆ ಅಂಕುಶದಿಂದ ತಿವಿಯುವುದು ಅದಕ್ಕೂ ಬಗ್ಗದಿದ್ದರೆ, ಕಣ್ಣಿನ ರೆಪ್ಪೆಯ ಚರ್ಮಕ್ಕೆ ಅಂಕುಶ ಹಾಕಿ ಎಳೆಯುತ್ತಾರಂತೆ. ನಾವು ಸ್ಲೇಟಿನಲ್ಲಿ ಬರೆಯುವಾಗ, ಅದರ ದೇಹಕ್ಕೆ ಬೇಕಾದ ರೇಖೆಗಳನ್ನು ಹೇಗೆಬೇಕೊ ಹಾಗೆ ಬಳುಕಿಸುತ್ತಿದ್ದಂತೆ, ಮಾವುತರು ಅದನ್ನು ಪಳಗಿಸಿದ್ದರು. ಯುದ್ಧದಲ್ಲಿ, ಲಾರಿಗೆ ನಾಟ ಲೋಡುಮಾಡುವುದಕ್ಕೆ, ಗುಡಿಯಲ್ಲಿ ಅಲಂಕಾರಕ್ಕೆ, ಮಠಗಳಲ್ಲಿ ಅವುಗಳ ದೊಡ್ಡಸ್ತಿಕೆಗೆ, ಸರ್ಕಸ್ಸಿನಲ್ಲಿ ನೂರಾರು ಜನರ ಊಟಕ್ಕೆ, ಆನೆ ಉಪಕರಣವಾಗುತ್ತ ಬಂದಿದೆ.

ಇದು ಆನೆಗಳ ಸ್ಥಿತಿ ಮಾತ್ರವಲ್ಲ, ಎಲ್ಲಿಂದಲೋ ಹೇಗೊ ಬಂದು ಮಾವುತರ ಕೆಲಸದೊಳಗೆ ಸಿಕ್ಕಿಕೊಂಡಿರುವ ಈ ಬಂಗಾಳಿಗಳೂ ತಮ್ಮ ಮೂಲಸ್ಮೃತಿಗಳನ್ನೆಲ್ಲ ಮರೆತು, ಈ ನೆಲಕ್ಕೆ ಪಳಗಿಬಿಟ್ಟಿದ್ದಾರೆ. ಆನೆಯೂ ಮೂಲಕಾಡಿಗೆ ಮರಳುವಂತಿಲ್ಲ. ಇವರೂ ಬಂಗಾಳಕ್ಕೆ ಹೋಗುವಂತಿಲ್ಲ. ಆನೆಗಳನ್ನು ಕಾಡಿಗೆ ಬಿಟ್ಟರೂ, ಕಾಡಾನೆಗಳ ಜತೆ ಅವು ಕೆಲಹೊತ್ತು ಕೂಡಿದರೂ ಮರಳಿ ಬರುತ್ತವೆ. ಬಾರದಿದ್ದರೆ ಅವಕ್ಕೆ ಕಟ್ಟಿದ ಸರಪಳಿ ಗುರುತು ಹಿಡಿದುಕೊಂಡು ಹೋಗಿ ವಾಪಾಸು ಕರೆದುಕೊಂಡು ಬರಲಾಗುತ್ತದೆ. ಇವರನ್ನು ಹಾಗೆ ಮೂಲಸಂಸ್ಕೃತಿಗೆ ಬಿಡುವ ಪ್ರಶ್ನೆಯೇ ಇಲ್ಲ.
ಊರಾನೆ ಬಂಧಿಯಂತೆ ಕಂಡರೂ ಕಾಡಾನೆಯೇನು ಬಹಳ ಸ್ವತಂತ್ರವಲ್ಲ. ಕರ್ನಾಟಕದಲ್ಲಿ ಕಾಡಂಚಿನ ರೈತರು ಆನೆಗಳನ್ನು ಬೀದಿನಾಯಿ ತರಹ ಕೊಲ್ಲುತ್ತಿರುವುದನ್ನು ನೋಡಿದರೆ, ಅವು ಕೈದಿಯಾಗಿ ಆನೆಕ್ಯಾಂಪಿನಲ್ಲಿರುವುದೇ ಕ್ಷೇಮವೆನಿಸುತ್ತದೆ. ಆನೆ ಗಣಪತಿಯಾಗಿ ಎಷ್ಟಾದರೂ ಪೂಜೆಗೊಳ್ಳಬಹುದು. ಆದರೆ ಅದು ಗದ್ದೆಗೆ ಬಂದರೆ ಮಾತ್ರ ಸರಿಯಾಗಿ ಪೂಜೆಯೇ ಆಗುತ್ತದೆ.

ಸಕ್ರೆಬೈಲಿನ ಮಾವುತರೊಂದಿಗೆ ಲೇಖಕರುಸಕ್ರೆಬೈಲಿನ ಮಾವುತರು ದಿನಗೂಲಿ ನೌಕರರಾದ ತಮಗೆ ಸರ್ಕಾರದ ಸಂಬಳ ಯಾತಕ್ಕೂ ಸಾಲುವುದಿಲ್ಲವೆಂದೂ, ಇಲ್ಲಿ ಮೇಸ್ತ್ರಿ ಮಾತ್ರ ಖಾಯಮ್ಮೆಂದೂ,  ತಮಗೆ ಏನಾದರೂ ಮಾಡಿ ಖಾಯಂ ಮಾಡಿಸಿದರೆ ಕೊಂಚ ಬದುಕಲು ಸಾಧ್ಯವೆಂದೂ ಹೇಳಿದರು. ಹಂಪಿಯಲ್ಲಿ ಪರಿಚಯವಾಗಿದ್ದ ಖಲೀಲ್ ಎಂಬ ಮಾವುತ ಸಕ್ರೆಬೈಲಿನಲ್ಲಿ ತುಂಬ ಉಪಚರಿಸಿದನು; ತನ್ನ ಮನೆಗೆ ಕರೆದುಕೊಂಡು ಹೋಗಿ, ನೀರುಕೊಟ್ಟು, ತನ್ನ ತಂದೆ ಕರ್ನಾಟಕದಿಂದ ಯೂರೋಪು ದೇಶಗಳಿಗೆ ಆನೆಯನ್ನು ಕಳಿಸುವಾಗ ಹಡಗಿನಲ್ಲಿ ಆನೆ ಜತೆ ಹೋಗಿದ್ದ ಫೋಟೊಗಳನ್ನು ತೋರಿಸಿದನು. ಕಡೆಗೆ ತನ್ನ ಮಗಳ ಹಲ್ಲು ಉಬ್ಬಿರುವುದರಿಂದ ಲಗ್ನಮಾಡುವುದು ಕಷ್ಟವಾಗಬಹುದು, ಅದನ್ನು ಸರಿಪಡಿಸಲು ಹಲ್ಲಿನ ಡಾಕ್ಟರ ಹತ್ತಿರ ಹೋಗಬೇಕಾಗಿದೆಯೆಂದು ಹೇಳಿದನು. ಕಾಡಿನಲ್ಲೇ ಇರಬೇಕಾಗಿರುವುರಿಂದ ಅವರ ಮಕ್ಕಳ ವಿದ್ಯಾಭ್ಯಾಸ ಕೊಂಚ ಕಷ್ಟ. ಅದರೊಳಗೂ ಇನ್ನೊಬ್ಬ ಮಾವುತನ ಮಗಳು ಎಸ್‌ಎಸ್‌ಎಲ್‌ಸಿ ಪಾಸಾಗಿದ್ದಳು. ಅವಳಿಗೆ ಡೋನೇಶನ್ ಕಡಿಮೆ ಇರುವ ಯಾವುದಾದರೂ ಕಾಲೇಜಿನಲ್ಲಿ ಸೀಟುಕೊಡಿಸಲು ಸಹಕರಿಸಿ ಎಂದು ಆತ ಕೋರಿದನು. ಆಕೆ ಕಾಲೇಜಿಗೆ ಹೋದರೆ, ಬಂಗಾಳಿ ಮಾವುತರ ಸಮುದಾಯದಲ್ಲಿ ಆಕೆಯೇ ಮೊದಲನೇ ಪದವೀಧರೆ. ಆಗ ಶಿವಮೊಗ್ಗೆಯಲ್ಲಿ ಕಾಲೇಜಿನಲ್ಲಿ ಅಧ್ಯಾಪಕನಾಗಿರುವ ನನ್ನ ತಮ್ಮನೂ ವೈದ್ಯೆಯಾಗಿರುವ ಅವನ ಶ್ರೀಮತಿಯೂ ಅವರಿಗೆ ನೆರವಾಗುವುದಾಗಿ ಭರವಸೆ ಕೊಟ್ಟರು.

ಆನೆಯನ್ನು ಕಾಡಿಗೆ ಬಿಡಲು ಹೊರಟ ಮಾವುತರು, ಆನೆಯ ಮೇಲಿನಿಂದಲೇ ತಮ್ಮ ಮಕ್ಕಳಿಗೆ ಆಸ್ಪತ್ರೆಗೂ ಕಾಲೇಜಿಗೂ ಸೇರಿಸಲು ಸಹಾಯ ಮಾಡಬೇಕೆಂದು ಮತ್ತೊಮ್ಮೆ ವಿನಂತಿಸಿದರು. ಜಗತ್ತಿನ ಶಕ್ತಿಶಾಲಿ ಪ್ರಾಣಿಯನ್ನು ಸ್ಕೂಲುಮಕ್ಕಳಂತೆ ಪಳಗಿಸಿರುವ ಅವರು ಜಗತ್ತಿನ ಅತಿ ದುರ್ಬಲ ವ್ಯಕ್ತಿಗಳಂತೆ ತೋರಿದರು.

(ಸ್ಟೋನ್‌ಹಿಲ್ ಡೈರಿಯಲ್ಲಿ ಅಬ್ದುಲ್ ರಶೀದ್, ಮಾವುತರ ಮೇಲೆ ಬರೆದಿದ್ದು ಆನೆಗಳ ಬಗ್ಗೆ ನನ್ನ ನೆನಪುಗಳನ್ನೂ ಕೆರಳಿಸಿತು.)

[ಚಿತ್ರಗಳು-ಲೇಖಕರದು]