ನಾ ಸಣ್ಣವ ಇದ್ದಾಗ ನನಗ ನಮ್ಮ ಮನಿ ಕುಲದೇವರ ಬನಶಂಕರಿ ಅಂತ ಗೋತ್ತಾಗಿದ್ದ ನಮ್ಮವ್ವಾ  ಹಗಲಗಲಾ “ಸಾಕವಾ ನಮ್ಮವ್ವಾ… ಈ ಮಕ್ಕಳ ಸಂಬಂಧ ಸಾಕಾಗಿ ಹೋಗೇದ, ತಾಯಿ ಬನಶಂಕರೀ, ಶಾಕಾಂಭರೀ.. ಲಗೂನ ಕರಕೊಳ್ಳವಾ” ಅಂತ ಅನ್ನೋದನ್ನ ಕೇಳಿ – ಕೇಳಿ. ಮೊದಲ ನನಗ ‘ಯಾಕ ಇಕಿ ಇಷ್ಟೆಲ್ಲಾ ದೇವರನ ಬಿಟ್ಟ ಬನಶಂಕರೀಗೆ ಗಂಟ ಬಿದ್ದಾಳ’ ಅಂತ ಅನಸ್ತಿತ್ತು ಆಮೇಲೆ ಗೊತ್ತಾತು ಶ್ರೀಬನಶಂಕರಿ ನಮ್ಮನಿ ಕುಲ ದೇವರು ಅದಕ್ಕ ನಮ್ಮವ್ವಾ ‘ನಾವ ಅಕಿ ಜೀವಾ ತಿನ್ನೊದ’ ತಾಳಲಾರದಕ್ಕ ‘ಅಕಿ ದೇವರ ಜೀವಾ ತಿನ್ನಲಿಕತ್ತಾಳ’ ಅಂತ. ಪಾಪಾ ನಮ್ಮವಂದೂ ಏನ ಹಣೆಬರಾನೋ ಏನೋ.. ಮನ್ಯಾಗ ಗಂಡಾ, ಮಕ್ಕಳು ಇಷ್ಟ ಅಕಿ ಮಾತ ಕೇಳಗಿಲ್ಲಾಂದರ ಆ ಮನಿ ದೇವರು ಸಹಿತ ಅಕಿ ಮಾತ ಕೇಳಂಗಿಲ್ಲಾ, ಏನಿಲ್ಲಾ ಅಂದರೂ ಒಂದ ಮೂವತ್ತ ವರ್ಷ ಆತ ನಾ ಆಕಿ ಬಾಯಾಗ ‘ತಾಯಿ ಬನಶಂಕರೀ… ಲಗೂನ ಕರಕೊಳ್ಳವಾ’ ಅನ್ನೋದನ್ನ ಕೇಳಲಿಕ್ಕತ್ತ, ಅಷ್ಟಾದರೂ ಆ ಬನಶಂಕರಿ ಮಾತ್ರ ಇವತ್ತಿಗೂ ಅಕಿ ಮಾತ ಕೀವಿಮ್ಯಾಲೆ ಹಾಕ್ಕೊಳ್ಳಿಕತ್ತಿಲ್ಲಾ, ನಂದ ಲಗ್ನ ಆದ ಮ್ಯಾಲೆ ಅಂತೂ ನಮ್ಮವ್ವಂದು ದೇವರಿಗೆ ‘ಕರಕೋಳ್ಳವಾ..’ ಅಂತ ದೈನಾಸ ಪಡೋದ ಜಾಸ್ತಿನ ಆಗೇದ ಅಂದರೂ ಅಡ್ಡಿಯಿಲ್ಲ.

ಮೊನ್ನೆ ನನ್ನ ಹೆಂಡತಿ “ನಾ ಒಂದ ಮಾತ ಬನಶಂಕರೀಗೆ ಕೇಳಿ ನೋಡ್ಲೇನ್ರಿ?” ಅಂದ್ಲು.
ನಾ ಇಕಿಗೂ ಲಗೂನ ಹೋಗೋ ಆಶಾ ಇರಬೇಕ ತಡಿ ಅಂತ ಖುಶೀಲೇ ” ಏನ ಕೇಳೋಕಿ ?” ಅಂದೆ.
“ತಾಯಿ ಬನಶಂಕರೀ… ನಮ್ಮ ಅತ್ತೀನ್ನ  ಲಗೂನ ಕರಕೊಳ್ಳವಾ ಅಂತ ” ಅಂದ್ಲು.
ನಾ ಒಂದ ಸಲಾ ಅಕಿ ‘ಮಾರಿ’ಹಂತಾ ಮಾರಿ ನೋಡಿ ಮನಸ್ಸಿನಾಗ ‘ತಾಯಿ ಬನಶಂಕರೀ… ಸುಮ್ಮನ ನನ್ನ ಲಗೂನ ಕರಕೊಳ್ಳವಾ’ ಅಂತ ಕೈ ಮುಗದೆ.

ಹಂಗ ನಮ್ಮವ್ವನ ಬಿಟ್ಟರ ಹಗಲಗಲ ಬನಶಂಕರಿಗೆ ಮರ್ಜಿ ಕಾಯೋಕಿ ಅಂದ್ರ ನಮ್ಮ ತಿಪ್ಪಕ್ಕಜ್ಜಿ, ಅಕಿ ಅಂತು ದಿವಸಕ್ಕ ಒಂದ ಇಪ್ಪತ್ತ ಸಲಾ ‘ನನ್ನ ಕರಕೋಳವಾ ನಮ್ಮವ್ವಾ… ಬನಶಂಕರೀ ಲಗೂನ ಕರಕೋ .. ಈ ‘ಶಕ್ಕು’ನ ಕಾಲಾಗ ಜೀವಾ ಹಣ್ಣ ಹಣ್ಣ ಆಗಿ ಹೋಗೇದ ಅಂತ’  ಬೇಡ್ಕೊಂಡ ಬೇಡ್ಕೋಳ್ಳೊಕಿ.  ಈ ‘ಶಕ್ಕು’ ತಿಪ್ಪಕ್ಕಜ್ಜಿ ಖಾಸ ಮಗ ‘ತಮ್ಮಣ್ಣ’ನ ಖಾಸ ಹೆಂಡತಿ. ಅಕಿದ ತವರಮನ್ಯಾಗಿನ ಹೆಸರು ‘ದುರ್ಗಿ’, ‘ಕಾಳಿ’ ಅಂತ ಏನರ ಇತ್ತೋ ಏನೋ, ನಮ್ಮಜ್ಜಿ ಮಾತ್ರ ನನ್ನ ಸೊಸಿ ಸಾಕ್ಷಾತ ಬನಶಂಕರಿ ಇದ್ದಂಗ ಇದ್ದಾಳ ಅಂತ ಅಕಿಗೆ ‘ಶಾಕಾಂಭರಿ’ ಅಂತ ಹೆಸರ ಇಟ್ಟ, ಹೊಚ್ಚಲ ಮ್ಯಾಲೆ ಚಟಾಕ ತುಂಬ ರೇಶನ್ ಅಕ್ಕಿ ಇಟ್ಟ ‘ಝಾಡಿಸಿ’ ಮನಿ ತುಂಬ ಒದಿಸಿಸಿ ಮನಿ ತುಂಬಿಸಿಕೊಂಡಿದ್ದಳು. ಅವತ್ತ ಭಿಡೆ ಬಿಟ್ಟ ‘ಕಾಲ ಬಿಚ್ಚಿ’ ಝಾಡಿಸಿ ಒದ್ದ ನಮ್ಮ ತಿಪ್ಪಕ್ಕನ ‘ಶಕ್ಕು’ ಮುಂದ ವರ್ಷ ತುಂಬೋದ್ರಾಗ ಒಂದೊಂದ ಬಿಚ್ಚಿ, ಅಂದರ ಮನಸ್ಸು, ಬಾಯಿ, ಕೈ ಎಲ್ಲಾ ಬಿಚ್ಚಿ, ಮನ್ಯಾಗ ಎಲ್ಲಾರನ್ನು ಝಾಡಸಿಕೋತ ಸಂಸಾರ ಮನಿತುಂಬ ಹರವಿಕೊಂಡಳು. ನಮ್ಮ ತಮ್ಮಣ್ಣ ಕಾಕಾಂದ ಅಡಕೊತ್ತ ನಾಗ ಸಿಕ್ಕ ಅಡಿಕಿ ಜೀವನ  ಶುರು ಆತು.

ಈ ತಿಪ್ಪಕ್ಕಜ್ಜಿ ನಮ್ಮಪ್ಪಗ ದೂರಿಂದ ಅಬಚಿ ಆಗಬೇಕ. ಹಿಂಗಾಗಿ ಅಕಿ ಮಗಾ ತಮ್ಮಣ್ಣಾ ನಂಗ ಕಾಕಾ. ಅವನ ಏಕಮೇವ ಸುಪುತ್ರ ಅಪ್ಪಣ್ಣಾ ನನಗ ತಮ್ಮ ಇದ್ದಂಗ. ತಿಪ್ಪಕ್ಕಗ ಮದಿವ್ಯಾಗಿ ವರ್ಷದಾಗ ತಮ್ಮಣ್ಣ ಹುಟ್ಟಿದ್ದಾ. ಮುಂದ ತಿಪ್ಪಕ್ಕಗ ಇನ್ನೂ ಮಕ್ಕಳಾಗ್ತಿದ್ವೋ ಏನೋ ಆದರ ಚಂದ್ರಾಂಭಟ್ಟರು ಮಗಗ ಜವಳಾ ಮಾಡಿಸಿ, ತಮ್ಮ ಭೂಮಿ ಋಣಾ ತೀರಿಸಿ ತಿಪ್ಪಕ್ಕನ ತಲಿ ಬೋಳಿಸಿ ಹೋಗಿ ಬಿಟ್ಟರು. ಪಾಪ, ತಿಪ್ಪಕ್ಕ ಗಟ್ಟಿ ಹೆಣ್ಣ ಮಗಳು ನಾಲ್ಕ ಮನಿ ಅಡಗಿ -ಭಾಂಡೆ ಕೆಲಸಾ ಮಾಡ್ಕೊಂಡ ಮಗಗ ಓದಿಸಿ  ಸರ್ಕಾರಿ ನೌಕರಿಗೆ ಸೇರಿಸಿದ್ದಳು.

ಮನ್ಯಾಗ ದಿನಾ ಬೆಳಗಾದರ  ತಿಪ್ಪಕ್ಕಂದು, ಅಕಿ ಸೊಸಿ ಶಕ್ಕುಂದ ಸಂಗ್ರಾಮ ಶುರು ಆತು. ಪಾಪಾ ತಿಪ್ಪಕ್ಕಜ್ಜಿ ಮಡಿ ಹೆಂಗಸು, ಒದ್ದಿ ಮೈ-ಇದ್ದಲಿ ವಲಿ ಸಂಸಾರ, ಸೊಸಿ ಮಾಡಿದ್ದ ಒಂದು ಮನಸ್ಸಿಗೆ ಬರತಿದ್ದಿಲ್ಲಾ, ಮಾತ ಮಾತಿಗೆ ಮಹಾಭಾರತ. ನಮ್ಮ ತಮ್ಮಣ್ಣ ಕಾಕಾ ಮಾತ್ರ ‘ಶಿರ್ಶಿ ಮಾರಿಕಾಂಬಾ ಗುಡ್ಯಾಗ ಕಟ್ಟಿ ಹಾಕಿದ್ದ ಕೋಣನ ಗತೆ ಮನ್ಯಾಗ ಒಂದ ಮೂಲ್ಯಾಗ ಮೇಯಕೋತ’ ಇದ್ದ ಬಿಟ್ಟಾ, ಯಾರಿಗೂ ಹಾಯಲಿಲ್ಲಾ, ಯಾರಿಗೂ ಒದಿಲಿಲ್ಲಾ.  ಕೌಲೆತ್ತಿನ ಗತೆ ಅತ್ತಿ- ಸೊಸಿ ಇಬ್ಬರಿಗೂ ಗೊಣ ಹಾಕ್ಕೋತ ಇದ್ದ ಬಿಟ್ಟಾ.ಹಗಲ ಹೊತ್ತನಾಗ ಅವರವ್ವನ ಬಾಲಾ ಬಡಿತಿದ್ದಾ ರಾತ್ರಿ ಆದಂಗ ಹೆಂಡತಿ ಕಚ್ಚಿ ಹಿಡಿತಿದ್ದಾ.  ಹಿಂತಾ ವಾತಾವರಣದಾಗ ನಮ್ಮ ಅಪ್ಪಣ್ಣ ಹುಟ್ಟಿ, ತಿಪ್ಪಕ್ಕಜ್ಜಿ ಅಚ್ಛಚ್ಛಾದಾಗ ಅಳ್ಳಿಟ್ಟು ತಿಂದು ತಂಬಿಟ್ಟನಂಗ  ಬೆಳದಾ. ತಮ್ಮಣ್ಣ ಕಾಕಾನ ಸಂಸಾರ ಹೀಂಗ ದಿನಾ ಒಂದಕ್ಕೂ ಸಂಹಾರ ಆಕ್ಕೋತ ಹೊಂಟತು. ಅತ್ತಿ – ಸೊಸಿ ಒಳಗ ಒಬ್ಬರೂ ಬಗ್ಗಂಗಿಲ್ಲಾ, ಎದ್ದ ಕೂಡಲೇನ ಶುರು.

“ಏನ ರಂಗೋಲಿ ಹಾಕೀಯ ಮಾರೈತಿ, ಹೆಂತಾ ಪರಿ ಎಡವಿದೆ” ಅಂತ ತಿಪ್ಪಕ್ಕಜ್ಜಿ ಶುರು ಹಚ್ಚಿದಳಂದರ
“ಇಕಾ, ನಿಮಗ ವಯಸ್ಸಾತೂ ರಂಗೋಲಿಯಾವುದು ಹೊಚ್ಚಲಾ ಯಾವುದು ಕಾಣಂಗಿಲ್ಲಾ” ಅಂತ ‘ಶಕ್ಕು’ವದರೋಕಿ.
“ಅಯ್ಯ ನಮ್ಮವ್ವ… ಶಗಣಿ ಕುಳ್ಳ ಬಡದಂಗ ರಂಗೋಲಿ ಹಾಕಿದರ ಎಡವಲಾರದ ಇನ್ನೇನ್”. ತೊಗೊ ಇಬ್ಬರದು ಶುರು .
ಮದುವಿ ಆದ ಹೊಸದಾಗಿ ಸೊಸಿ ಭಾಂಡಿ ತಿಕ್ಕಿ ಕೊಟ್ಟರ, ತಿಪ್ಪಕ್ಕಜ್ಜಿ ತೋಳಿತಿದ್ಲು, ಬರ-ಬರತ ಸೊಸಿ ತಿಕ್ಕಿ-ತೊಳದದ್ದನ್ನು ಇನ್ನೋಮ್ಮೆ ತೊಳದ ಗಲಬರಿಸಿ
“ಏನ ಸುಡಗಾಡ ಭಾಂಡಿ ತಿಕ್ಕತೀವಾ ನಮ್ಮವ್ವಾ ,ಅನ್ನದ ಅಗಳ ತಳದಾಗ ಹಂಗ ಹತ್ತೇದ, ನಿಮ್ಮವ್ವಾ ಇದನ್ನ ಕಲಿಸ್ಯಾಳೇನ್? ” ಅಂತ ತಿಪ್ಪಕ್ಕ ಅನ್ನೋಕಿ
“ಇಕಾ, ನೀವ ನಮ್ಮವ್ವನ ಊಸಾಬರಿ ಬರಬ್ಯಾಡರಿ ಮತ್ತ, ನಾ ಏನ ನಿಮ್ಮಂಗ ಮೊದಲ ಒಂದ ನಾಲ್ಕ ಮನಿ ಭಾಂಡೆ ಕೆಲಸಾ ಮಾಡಿ  ಬಂದಿಲ್ಲಾ” ಅಂತ ಸೊಸಿ ಅನ್ನೋಕಿ, ತೊಗೊ ತಿಪ್ಪಕ್ಕನ ರಂಭಾಟ ಶುರು.
“ಯಾ ಜನ್ಮದಾಗ ಪಾಪ ಮಾಡಿದ್ದೆ ಅಂತ ಹೀಂತಾ ಸೊಸಿನ ಕೊಟ್ಟೆವಾ ಬನಶಂಕರೀ, ಇನ್ನೂ ಎಷ್ಟ ಅನಭವಿಸ ಬೇಕವಾ ಈಕಿ ಕೈಯಾಗ, ಸಾಕವಾ ಜೀವಾ, ತಾಯಿ ಬನಶಂಕರೀ.. ಲಗೂನ ಕರಕೊಳ್ಳವಾ”.

ಮುಂಜಾನೆ ಎದ್ದ ಕೂಡಲೇನ ತಿಪ್ಪಕ್ಕಜ್ಜಿ ದೇವರಿಗೆ ಕಿವ್ಯಾಗ ಶಂಖಾ ಊದಿ ಎಬಸೋದ ತನ್ನ ಲಗೂನ ಕರಕೊಳ್ಳವಾ ಅಂತ ಹೇಳಲಿಕ್ಕೆ.

ಮನ್ಯಾಗ ಭಾಂಡೆ ಯಾರರ ತಿಕ್ಕಲೀ, ಯಾರರ ತೋಳಿಲಿ ಆದರ ಡಬ್ಬ ಹಾಕೋದ ಮಾತ್ರ ನಮ್ಮ ಕಾಕಾನ. ಒಂದಂತೂ ಖರೇ ಗಂಡಸರಿಗೆ ಮತ್ತ ಈ ಭಾಂಡೆ ಡಬ್ಬ ಹಾಕೋದಕ್ಕ ನಮ್ಮ ಮನೆತನದಾಗ ಏನೋ ಭಾರಿ ಸಂಬಂಧನ ಅದ. ನಮ್ಮ ಮನ್ಯಾಗ  ಇವತ್ತೂ ನಮ್ಮಪ್ಪನ ತೊಳದದ್ದ ಭಾಂಡೆ ಡಬ್ಬ ಹಾಕೋದು. ಹಂಗ ಭಾಳೊತ್ತನಾ ಅವನ್ನ ಅಡಗಿ ಮನ್ಯಾಗ ಬಿಟ್ಟರ ಒಂದ ಎರಡ ತುಂಬಿದ್ದ ಡಬ್ಬಿ / ತಪ್ಪೇಲಿನೂ ಡಬ್ಬ ಹಾಕಿ ಬಿಡತಾನ ಆ ಮಾತ ಬ್ಯಾರೆ. ಹಿಂಗಾಗಿ ನಾ ಮಾತ್ರ ಅಡಗಿ ಮನಿ ಉಸಾಬರಿಗೆ ಹೋಗಂಗಿಲ್ಲಾ. ಏನಿದ್ದರೂ  ನಾನು, ನನ್ನ ಬೆಡ್ ರೂಮ್. ಅಲ್ಲೇ ನಾ ಏನ ಸುಡಗಾಡ ಡಬ್ಬ ಹಾಕಿದರೂ ನೋಡೋರಿಲ್ಲಾ, ಕೇಳೊರಿಲ್ಲಾ.  ಸುಡಗಾಡ ಅಂದರ ನನ್ನ ಹೆಂಡತಿ ಅಲ್ಲ ಮತ್ತ, ನೀವೇನ ಎಲ್ಲೇರ ನನ್ನ ಹೆಂಡತಿಗೆ ‘ನಿನ್ನ ಗಂಡ ನಿನಗ ಲೇಖನದಾಗ ಸುಡಗಾಡ ಅಂತ ಬರದಿದ್ದಾ’ ಅಂತ ಹೇಳಿ ಬೆಂಕಿ ಹಚ್ಚಿ ನನಗೂ ‘ತಾಯಿ ಬನಶಂಕರೀ…’ ಅನ್ನೋ ಹಂಗ ಮಾಡಿ -ಗಿಡೀರಿ.

ಇತ್ತಲಾಗ ಬರ-ಬರತ ತಿಪ್ಪಕ್ಕ ಅಜ್ಜಿಗೆ ವಯಸ್ಸಾಗಲಿಕ್ಕ ಹತ್ತು, ತನ್ನ ಕೈಯಾಗ ಕೆಲಸ ನೀಗಲಾರದಾಂಗ, ಸೊಸಿ ಮಾಡಿದ್ದಂತೂ ಅಜಿಬಾತ ಸೇರಲಾರದಂಗ ಆತು. ಇವರಿಬ್ಬರ ನಡುಕ ನಮ್ಮ ಅಪ್ಪಣ್ಣನು ಸಿಕ್ಕೋಳಿಕ್ಕತ್ತಾ, ಅಜ್ಜಿ ಪ್ರೀತಿಮಾಡಿದಾಗ ಅವ್ವಾ ಬಯೋಕಿ, ಅವ್ವಾ ಪ್ರೀತಿ ಮಾಡಿದರ ಅಜ್ಜಿ ಬಯ್ಯೋಕಿ, ಹಿಂಗ ಇಂವಾ ಬೆಳದ ದೊಡ್ಡಾಂವ ಆದಾ. ತಿಪ್ಪಕ್ಕ ತನ್ನ ಆಟ ನಡೆಯೋ ಮಟಾ ನಡಿಸಿದ್ಲು, ಮುಂದ ಸೊಸಿ ಆಟ ಶುರು ಆತು. ಮಾತ ಮಾತಿಗೆ ತಿಪ್ಪಕ್ಕಜ್ಜಿದ

“ತಾಯಿ ಬನಶಂಕರಿ , ಸಾಕವಾ ಜೀವಾ… ಲಗೂನ ಕರಕೋಳ್ಳವಾ” ನಡದ ಇತ್ತು.

“ಯಾಕ ಹಗಲಗಲಾ ಬನಶಂಕರೀ.. ಶಾಕಾಂಬರೀ ಅಂತ ದೇವರನ ನೆನಿಸಿ, ನೆನಿಸಿ.. ನಿಮ್ಮ  ಆಯುಷ್ಯ ಜಾಸ್ತಿ ಮಾಡ್ಕೋಳ್ತೀರಿ… ಹಂಗ ಬನಶಂಕರಿಗೆ ನಿಮ್ಮ ಮ್ಯಾಲೇ,  ಹೋಗಲಿ ನನ್ನ ಮ್ಯಾಲೇರ ಪ್ರೀತಿ ಇದ್ದರ ಇಷ್ಟೋತ್ತಿಗೆ ನಿಮ್ಮವು ಎಷ್ಟ ಶ್ರಾದ್ಧ  ಆಗಿರ್ತಿದ್ದವೋ  ಏನೋ” ಅಂತ ಸೊಸಿ ಅನ್ನೋಕಿ. ಹೀಂಗ ತಮ್ಮಣ್ಣ ಕಾಕಾನ ಸಂಸಾರ ಸಾಗತು, ನಮ್ಮ ಅಪ್ಪಣ್ಣ ಕಲತ ಶಾಣ್ಯಾ ಆಗಿ ದೂಡ್ಡ ನೌಕರಿ ಹಿಡದ ಮುಂಬಯಿಕ್ಕ ಹೋದಾ. ಮುಂದ ಎರಡ ವರ್ಷಕ್ಕ ಅವನ ಲಗ್ನನೂ ಆತು. ಆ ಮನಿಗೆ ಮತ್ತೊಂದ ಹೆಣ್ಣ ಜಮಾ ಆತು. ನಮ್ಮ ತಿಪ್ಪಕ್ಕಗ ವೃಧ್ಯಾಪದಾಗ ಸೊಸಿ ವಿರುದ್ಧ ಒಂದ ಹೋಸಾ ಅಸ್ತ್ರ ಸಿಕ್ಕಂಗ ಅನಸ್ತು. ” ಅವ್ವಾ ಬಂಗಾರದಂತಾ ಕೂಸ ಅದವಾ ನಮ್ಮ ಅಪ್ಪಣ್ಣನ ಹೆಂಡತಿ” ಅಂತ ಅಕಿನ್ನ ತನ್ನ ಸೊಸಿ ವಿರುದ್ಧ ತಯಾರಮಾಡ್ಲಿಕತ್ತಳು. ಆದರ ಅಪ್ಪಣ್ಣಾ ಮುಂಬಯಿದಾಗ ಮನಿ ಮಾಡಿ ಈ ಜಂಜಾಟದಿಂದ ಹೆಂಡತಿ ಕಟಗೊಂಡ ದೂರಾದ, ಏನಿದ್ದರೂ ಹಬ್ಬ-ಹುಣ್ಣವಿ ಇದ್ದಾಗ ಇಷ್ಟ ಹುಬ್ಬಳ್ಳಿ ಕಡೆ ಹಾಯ್ತಿದ್ದಾ. ಇತ್ಲಾಗ ಮನಿಗೆ ಭಾರ ಆಗಿದ್ದ ತಿಪ್ಪಕ್ಕಜ್ಜಿ ಹಾಸಿಗಿಗೂ ಭಾರ ಆದ್ಲು, ವಯಸ್ಸು ಎಂಬತ್ತ ದಾಟಿತ್ತು. ಮ್ಯಾಲಿಂದ ಮ್ಯಾಲೇ ಆರೋಗ್ಯ ಕೆಡಕೋತ ಹೊಂಟತು, ಆದರ ಏನ ಮಾಡೋದು ಸೊಸಿ ಕಡೆ ಕೂತ ಮಾಡಿಸಿಗೊಂಡ ತಿನ್ನೊ ಭಾಗ್ಯ ಇಕಿಗೆ ಬರಲಿಲ್ಲ. ವಯಸ್ಸಾದಂಗ ಮಡಿ ಮೈಲಿಗಿನೂ ಜೋರ ಆತು. ದಿನಂ ಪ್ರತಿ ರಗಳೆ ಇದ್ದ ಇದ್ದವು. ತಮ್ಮಣ್ಣ  ಕಾಕಾಗ ಹಿಂತಾ ಕಹಿ ವಾತಾವರಣದಾಗೂ ‘ಸಿಹಿ’ ರೋಗ ಬಂತು. ಕಡಿಕೆ ಒಂದ ದಿವಸ ಗಂಡಾ-ಹೆಂಡತಿ ತಾವು ಮಗನ ಕಡೆ ಮುಂಬಯಿದಾಗ ಹೋಗಿ ಇರೋದು ಅಂತ ನಿರ್ಣಯ ಮಾಡಿದರು. ತಿಪ್ಪಕ್ಕನ ಏನ ಮಾಡೋದು ಅಂತ ವಿಚಾರ ಮಾಡಲಿಕತ್ತರು.

‘ಅತ್ತಿ-ಸೊಸಿ ಜಗಳ ಅತ್ತಿ ಇರೋತನಕ’ ಅಂತಾರ ಆದರ  ಎನ ಮಾಡೋದು ತಿಪ್ಪಕ್ಕಂದ ಸುಡಗಾಡ ಹಳೇ ಜೀವಾ ಇವತ್ತ ಹೋಗತದ ನಾಳೆ ಹೋಗತದ ಅಂತ ಇವರೂ ದಾರಿ ನೋಡೆ ನೋಡಿದ್ರು. ಆ ತಾಯಿ ಬನಶಂಕರಿಗೆ ಇವರ ಮ್ಯಾಲೆ ಕನಿಕರ ಇರಲಿಲ್ಲ. ಸ್ವತ: ತಿಪ್ಪಕ್ಕಜ್ಜಿ ” ತಾಯಿ ಬನಶಂಕರಿ, ನನ್ನ ಲಗೂನ ಕರಕೋಳವಾ” ಅಂತ ಎಣ್ಣಿ ಹಚ್ಚಿ ಹೋಯ್ಕೋಂಡರು ದೇವರು ಕಿವಿ ಮ್ಯಾಲೆ ಹಾಕ್ಕೊಳ್ಳಿಲ್ಲಾ. ಕಡಿಕೆ ಮನ್ನೆ ಭಡಾ-ಭಡಾ ತಿಪ್ಪಕ್ಕಜ್ಜಿನ ಧಾರವಾಡಕ್ಕ ಕರಕೊಂಡ ಹೋಗಿ  ಐವತ್ತ ಸಾವಿರ ಡಿಪಾಸಿಟ್ ತಿಂಗಳಿಗೆ ಐದ ಸಾವಿರ ರೂಪಾಯಿ ಕೊಟ್ಟ,’ಬನಶಂಕರಿ ವಾನಪ್ರಸ್ಠಾಶ್ರಮ’ದಾಗ ತಮ್ಮಣ್ಣಾ ಬಿಟ್ಟ ಬಂದಾ. ಮಾತ ಮಾತಿಗೆ ” ತಾಯಿ ಬನಶಂಕರಿ , ನನ್ನ ಲಗೂನ ಕರಕೋಳವಾ” ಅಂತಿದ್ದ ತಿಪ್ಪಕ್ಕನ ಕಡಿಕೂ ಧಾರವಾಡದ ಬನಶಂಕರಿ ಕರಕೊಂಡಳು . ಪಾಪಾ ಹಣ್ಣ – ಹಣ್ಣ ಮುದುಕಿ ಮತ್ತ  “ತಾಯಿ … ಬನಶಂಕರೀ.. ನನ್ನ ಲಗೂನ ಕರಕೋಳವಾ.” ಅಂತ ಅನ್ನಕೋತ ಈಗ ಧಾರವಾಡ ಪುರವಾಸಿನಿ ಆಗ್ಯಾಳ.

“ನಿಮ್ಮಜ್ಜಿ ಕಡೆ ಸ್ವಲ್ಪ ಲಕ್ಷ ಇರಲಿಪಾ, ಹಂಗೇನರ ಆದರ ನಮಗ ತಿಳಸು. ಅಲ್ಲೇ ವೃದ್ಧಾಶ್ರಮದಾಗ ಲೋಕಲ ಕಂಟ್ಯಾಕ್ಟ ನಂಬರ ಅಂತ ನಿಂದ ಕೊಟ್ಟೇವಿ ಮತ್ತ…” ಅಂತ ನಮ್ಮ ತಮ್ಮಣ್ಣ ಕಾಕಾ ಹೇಳಿದಾ.
“ಆದ್ರೂ ತಿಂಗಳಿಗೆ  ಐದ ಸಾವಿರ, ಅದೂ ಒಬ್ಬರಿಗೆ ಭಾಳ ಆತ ಅನಸ್ತದ ಕಾಕಾ” ಅಂತ ಅಂದೆ,
“ನೀ ಇಟಗೋಲೆ ಮುದಕೀನ ಅಷ್ಟ ಕಾಳಜಿ ಇದ್ದರ, ತಿಂಗಳಿಗೆ ಹತ್ತಸಾವಿರ ಕೊಡತೇನಿ” ಅಂದಾ.
“ಏ, ಹಂಗಲ್ಲ ಕಾಕಾ, ಸ್ವಲ್ಪ ನೋಡಿ ಹಿಡಿರಿ, ನಮ್ಮ ಖಾಸ ಅವ್ವಾ ಅಂತ ಹೇಳ್ಬೆಕ್ಕಿತ್ತೀಲ್ಲೊ?” ಅಂದೆ. ನನ್ನ ಮಾರಿ ಕೆಟ್ಟ ಗಣ್ಣಲೇ ನೋಡಿದಾ.
“ಅಲ್ಲಾ, ಇಬ್ಬರನ ಇಟ್ಟರ, ಮೂರನೇದವರನ ಫ್ರೀ ಇಟಗೋತಾರಿನ ಕೇಳ್ಭೇಕಿತ್ತು?” ಅಂದೆ. ‘ಯಾಕ ನಿಮ್ಮ ಅವ್ವಾ ಅಪ್ಪನ್ನೂ ಏನರ ಕಳಸೊ ವಿಚಾರ ಅದ ಏನ?’ ಅಂದಾ.
“ಇಲ್ಲಪಾ, ಹೆಂಗಿದ್ದರೂ ಇನ್ನೊಂದ ಐದ – ಆರ ವರ್ಷಕ್ಕ ನಿಮ್ಮನ್ನೂ ನಿಮ್ಮ ಮಗ ಇಲ್ಲೆ ಸೆಟಲ್ ಮಾಡತಾನ, ಅದಕ್ಕ ಏನರ ಡಿಸ್ಕೌಂಟ – ಫ್ರೀ ಸ್ಕೀಮ ಅದ ಇನ ಅಂತ ಈಗ ಕೇಳ್ಬೇಕಿತ್ತು” ಅಂದೆ. ” ನೀ ಭಾಳ ಅಧಿಕ ಪ್ರಸಂಗಿ ಇದ್ದಿ ” ಅಂತ ಅಂದ ತಮ್ಮಣ್ಣ ಕಾಕಾ ತನ್ನ ದಾರಿ ಹಿಡದಾ.

ಅಲ್ಲಾ ನಮ್ಮ ಅವ್ವಾ-ಅಪ್ಪಂದು ಇಬ್ಬರದೂ ಖರ್ಚ ಸೇರಿ ತಿಂಗಳಿಗೆ ನಾಲ್ಕ ಸಾವಿರ ಬರತದ, ಅದರಾಗ ಗುಳಿಗಿ – ಔಷಧ ಎಲ್ಲಾ ಬಂತ.  ನಾ ಯಾಕ ಒಬ್ಬರಿಗೆ ಐದ -ಐದ ಸಾವಿರ ಕೊಟ್ಟ  ವೃದ್ಧಾಶ್ರಮದಾಗ ಇಡಲಿ, ನಂಗೇನ ರೊಕ್ಕ ಜಾಸ್ತಿ ಆಗ್ಯಾವ ಏನ್? ಅದರಾಗ ನಮ್ಮವ್ವ ಮನ್ಯಾಗ ಸುಮ್ಮನ  ಕೂಡೋಕಿನೂ ಅಲ್ಲಾ,  ಸಣ್ಣ ಪುಟ್ಟ ಕೈ-ಕಾಲಾಗಿನ ಕಸಾ, ಒಗ್ಯಾಣ, ಅಡಗಿ, ಭಾಂಡಿ ಅಂತ ಕೆಲಸ ಮಾಡ್ಕೋತನ ಇರತಾಳ. ಇನ್ನ ನಮ್ಮಪ್ಪ, ಇಷ್ಟ ವಯಸ್ಸಾದರೂ  ಭಾಂಡೆ ಡಬ್ಬ ಹಾಕೋದು, ಅರಬಿ ಒಣಾ ಹಾಕೋದು , ಒಣಗಿದ್ದ ಅರಬಿ ತಂದ ಮಡಚಿ ಇಡೊದು, ಇಷ್ಟ ಯಾರ ಕಡೆಗೂ ಹೇಳಿಸಿಗೊಳ್ಳಾರದ ಮಾಡತಾನ. ಪಾಪಾ ಅವರಿಗೂ ಹೊತ್ತ ಹೊಗಂಗಿಲ್ಲಾ. ಮತ್ತ ಇನ್ನೇನ ಬೇಕ ನನ್ನ ಹರೇದ ಹೆಂಡತಿಗೆ, ಅಕಿಗೂ ಅಷ್ಟ ಮನಿಗೆಲಸದಾಗ ಹಗರ ಆಗತಾದ. ಅಲ್ಲಾ  ಅವರೂ ಕೈ ಕಾಲಾಗ ತ್ರಾಣ ಇರೋ ಮಟಾ ಮಾಡ್ತಾರ ಅನ್ರಿ, ಮುಂದ ಇದ್ದಾಳಲ್ಲ ‘ತಾಯಿ … ಬನಶಂಕರೀ, ಶಾಕಾಂಬರೀ’ ಅಕಿ ಎಲ್ಲಾ ನೋಡ್ಕೋತಾಳ ಇಲ್ಲಾ ತನ್ನ ಕಡೆ ಕರಕೋತಾಳ. ಒಂದ ವೇಳೆ ಅಕಿ ಇಲ್ಲಾಂದರೂ ನಮ್ಮ ಧಾರವಾಡದ ಬನಶಂಕರಿ ಅಂತೂ ಇದ್ದ ಇದ್ದಾಳ.

ನಮ್ಮ ಅಪ್ಪಣ್ಣ ಇದನ್ನೆಲ್ಲಾ ನೋಡಿನೂ ಎನ ಮಾಡಲಾರದವರಗತೆ ಇದ್ದಾ. ಅವಂಗ ಅವ್ವಾ-ಅಪ್ಪನ ತಪ್ಪ ಅನಬೇಕೋ, ಅಜ್ಜಿದ ತಪ್ಪ ಅನ್ನಬೇಕೋ ಒಂದೂ ತಿಳಿಲಾರದಂಗ ಆಗಿತ್ತು. ತಮ್ಮಣ್ಣಗ ತಿಪ್ಪವ್ವಾ ಹಡದತಾಯಿ, ಎಷ್ಟ ಕಷ್ಟ ಪಟ್ಟ ಬೆಳಿಸಿ ಇವನ್ನ ಇಷ್ಟ ದೂಡ್ಡ ಮನಷ್ಯಾನ ಮಾಡಿದ್ಲು, ಮುಪ್ಪಿನ ಕಾಲಕ್ಕ ಆಸರ ಆಗಬೇಕಾಗಿದ್ದ ಮಗಾ ಆಶ್ರಮಕ್ಕ ಅಟ್ಟಿದಾ. ಏನಂದರೂ ತಾಯಿ – ತಾಯಿನ ಅಲಾ, ಅಕಿ ಹೆಂಗ ಇರಲಿ, ಹೊಂದಕೊಂಡ ಹೋಗ ಬೇಕಾದವರು ನಾವೋ  ಇಲ್ಲಾ ಅರುವು-ಮರುವು ಆದಂತಹ ಅವರೋ? ಅವರ ಬದುಕಿ, ಬೆಳದ ಬಂದಂತಹ ಕಾಲಕ್ಕೂ, ಈ ನಮ್ಮ ಕಾಲಕ್ಕೂ ಭಾಳ ಫರಕ ಅದ. ಇದನ್ನ ಅರ್ಥಾ ಮಾಡ್ಕೋಂಡ ಸಂಭಾಳಸಿಗೊಂಡ ಹೋಗೋದು ನಮ್ಮ ಶಾಣ್ಯಾತನ ಅಲಾ.  ಐವತ್ತ ಸಾವಿರ ಡಿಪಾಸಿಟ್ ,ತಿಂಗಳಾ ಐದ ಸಾವಿರ ಕೊಟ್ಟ, ನಮ್ಮ ಅವ್ವಾ-ಅಪ್ಪನ ವೃದ್ಧಾಶ್ರಮಕ್ಕ ಕಳಸೋ ಅಷ್ಟ ನಾವ ಇವತ್ತ ಗಳಸಿರಬಹುದು, ಆದರ ಇವತ್ತ ನಮ್ಮನ್ನ ಹಡದ ಅಷ್ಟ ಗಳಸೋ ಹಂಗ ಮಾಡಿದವರು  ಇವರ ಅನ್ನೋದನ್ನ ಮರಿಬಾರದು.

“ನೀ ಫ್ರೀ ಇದ್ದಾಗ, ಆ ಕಡೆ ಹೋದಾಗ ನಮ್ಮಜ್ಜಿ ನೋಡ್ಕೋಂಡ ಬಾ” ಅಂತ ಅಪ್ಪಣ್ಣ ಹೇಳ್ಯಾನ.

ಏನೋ ನನ್ನ ಪುಣ್ಯಾಕ್ಕ ನಮ್ಮ ಮನ್ಯಾಗ ತಿಪ್ಪಕ್ಕಜ್ಜಿನ ಬಿಟ್ಟ ಹೋಗಲಿಲ್ಲಾ ಅಂತ ನಾ ಸುಮ್ಮನ ” ನಾ ಎಲ್ಲಾ ನೋಡ್ಕೊಳ್ಳತೇನಿ, ನೀವೇನ ಕಾಳಜಿ ಮಾಡಬ್ಯಾಡರಿ. ಹಂಗ ಏನರ ಆದರ ಬ್ರಾಹ್ಮಣ ಸಂಘದವರ ಇದ್ದಾರಲ, ಅವರಿಗೂ ಒಂದ ಸ್ವಲ್ಪ ಅಡ್ವನ್ಸ ಕೊಟ್ಟ ಹೋಗರಿ” ಅಂತ ಹೇಳಿ ಅವರಿಗೆ ಎಳ್ಳು ನೀರ ಬಿಟ್ಟ ಕಳಿಸಿದೆ.

‘ತಾಯಿ… ಬನಶಂಕರೀ, ಶಾಕಾಂಬರೀ… ಸಾಕಾತವಾ ಜೀವಾ… ಹೆಂತಾ ಕಾಲ ಬಂತವಾ’

ಅನ್ನಂಗ  ನನ್ನ ಕಡೆ ವೃದ್ಧಾಶ್ರಮದ ಕಂಟ್ಯಾಕ್ಟ ನಂಬರ್ ಅದ, ನಿಮ್ಮ ಪೈಕಿ ಯಾರಿಗರ ಬೇಕಾದರ ಇಲ್ಲಾ ನಿಮಗ ಬೇಕಾದರ ಭಿಡೆ ಬಿಟ್ಟ ನನಗ ಕಂಟ್ಯಾಕ್ಟ  ಮಾಡರಿ ಮತ್ತ.