”ನಡುರಾತ್ರೆಗೆ ಸರಿಯಾಗಿ ದಂಡು ಜಮಾಲಗಡವನ್ನು ತಲಪಿತು. ತಿಂಗಳ ಬೆಳಕಿನಲ್ಲಿ ಎತ್ತರವಾದ ಗಡಾಯಿಕಲ್ಲು ಮಸಕು ಮಸಕಾಗಿ ಕಾಣಿಸುತ್ತಿದ್ದಿತು. ಕೋಟೆಯೊಳಗಿಂದ ಉರಿಯುತ್ತಿದ್ದ ಒಂದು ಪಂಜು ಏನೋ ಸಂಕೇತ ಮಾಡಿತು. ಗಡದ ಕೆಳಗಿನ ಜಮಾಲಬಾದು ನಗರವೆಲ್ಲ ನಿದ್ದೆಯಲ್ಲಿ ಮೈಮರೆತಿತ್ತು. ಸುತ್ತಲೂ ಬೆಟ್ಟಗಳು ಕ್ರರಗಾಗಿ ಕಾಣಿಸುತ್ತಿದ್ದುವು. ಕೆಳಗಿನ ಕೋಟೆಯ ಸುತ್ತಿನಲ್ಲಿ ಕುಂಪಣಿ ಸರದಾರರು ತಮ್ಮ ಚಾವಣಿಗಳಲ್ಲಿ ಮಲಗಿದ್ದರು. ತಿಮ್ಮನಾಯಕನು ಆ ಸರದಾರರನ್ನೆಲ್ಲ ಮಲಗಿದ್ದಲ್ಲೆ ಕಡಿದು ಹಾಕಿ, ತನ್ನ ದಂಡನ್ನು ಸುತ್ತಲೂ ಕಾವಲಿರಿಸಿ, ಸದ್ದಿಲ್ಲದೆ ಗಡವನ್ನೇರಿ ಸುಲ್ತಾನನ ಫೌಜನ್ನು ಸೇರಿದನು”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು‘ ಸರಣಿಯ ಆರನೆಯ ಕಥೆ. 

ಕುಂಪಣಿಯವರು ಕೊಡಿಯಾಲವನ್ನು ಹಿಡಿದು, ಆ ರೇವಿನಲ್ಲಿ ಠಾಣ್ಯ ಹಾಕಿ ನೀಲೇಶ್ವರದಿಂದ ಭಟ್ಕಳದವರೆಗಿನ ಕನ್ನಡ ಜಿಲ್ಲೆಯನ್ನು ವಶಪಡಿಸಿಕೊಂಡು ಆಳುವುದಕ್ಕೆ ತೊಡಗಿದ್ದರು. ಘಟ್ಟದ ಬಳಿಯಲ್ಲಿ ಜಮಾಲಗಡವು ಮಾತ್ರ ಅವರ ಕೈಸೇರಿರಲಿಲ್ಲ. ಕ್ರಿ.ಶ. 1799ನೇ ಅಕ್ಟೋಬರ್ ತಿಂಗಳಲ್ಲಿ ಕನ್ನಡ ಜಿಲ್ಲೆಯ ಮಿಲಿಟರಿ ಗವರ್ನರನಾಗಿದ್ದ ಕೇಪ್ಟನ್ ಮುನ್ರೋನು ಕೊಡಿಯಾಲದಿಂದ ಒಂದು ಫೌಜನ್ನು ತೆಗೆದುಕೊಂಡು ಹೋಗಿ, ಗಡಕ್ಕೆ ಮುತ್ತಿಗೆ ಹಾಕಿ, ಅಲ್ಲಿದ್ದ ಕಿಲ್ಲೆದಾರರನ್ನು ಕೆಳಗಿಳಿಸಿ, ಕೌಲು ಮಾಡಿಕೊಂಡು, ಗಡದ ಮೇಲೆ ಟಿಪ್ಪು ಸುಲ್ತಾನನ ಫೌಜನ್ನು ಇರಗೊಡಿಸಿದನು. ಗಡದ ಕೆಳಗೆ ಕೆಲವು ಕುಂಪಣಿ ಸರದಾರರು ಚಾವಣಿ ಮಾಡಿಕೊಂಡು ಕಾವಲು ನಿಂತರು.

ಆಗ ಬೇಕಲ ಕೋಟೆಯಲ್ಲಿ ಕುಂಪಣಿಯ ಒಂದು ಫೌಜು ಇತ್ತು. ಆ ಫೌಜಿನಲ್ಲಿ ತಿಮ್ಮನಾಯಕನೆಂಬ ಒಬ್ಬ ಜಮಾದಾರನಿದ್ದನು. ಅವನು ಕುಂಪಣಿಯ ಬೊಂಬಾಯಿ ಸೈನ್ಯಕ್ಕೆ ಜನಕೂಡಿಸುವ ಸೆರೆಗಾರಿಕೆಯನ್ನೂ ಮಾಡುತ್ತಿದ್ದನು. ಅವನು ಕ್ಷತ್ರಿಯನು; ಹೊಡೆವಂಗಡದವನು; ಹೆಸರು ಪಡೆದ ಮನೆತನದವನು. ಗರಡಿಸಾಧನೆಯಲ್ಲಿ ನುರಿತು, ಸುಲ್ತಾನರ ಕಾಲದಲ್ಲಿ ಹಲವು ಕಾಳಗಗಳಲ್ಲಿ ಕಾದಾಡಿ ತನ್ನ ಬೆಳಕನ್ನು ಬೀರಿದ್ದನು. ಈ ಸಣ್ಣ ಜಮಾದಾರಿಕೆಯು ಅವನ ಯೋಗ್ಯತೆಗೆ ತಕ್ಕುದಾಗಿರಲಿಲ್ಲ. ಆದರೆ ಕುಂಪಣಿ ಸರಕಾರದಲ್ಲಿ ಅವನಿಗೆ ದೊಡ್ಡ ಹುದ್ದೆ ದೊರೆಯುವ ಹಾಗಿರಲಿಲ್ಲ. ಯಾಕೆಂದರೆ ಸುಲ್ತಾನರ ಕೈಕೆಳಗಿದ್ದ ನೌಕರರಲ್ಲಿ ಅವರಿಗೆ ವಿಶ್ವಾಸವಿರಲಿಲ್ಲ. ಏನಾದರೊಂದು ಪ್ರಾಪ್ತಿ ಬೇಕಲ್ಲ ಎಂದು ಈ ಜಮಾದಾರಿಕೆಗೆ ಆಂತುಕೊಂಡಿದ್ದನಷ್ಟೆ. ಆದರೆ ಅವನ ಮನಸ್ಸು ದೊಡ್ಡ ಹುದ್ದೆಗಾಗಿ ಸದಾ ಹಂಬಲಿಸುತ್ತಿತ್ತು.
ಬೊಂಬಾಯಿ ಸೈನ್ಯಕ್ಕೆಂದು ಕೂಡಿಸಿದ್ದ ಇನ್ನೂರು ಮಂದಿ ಹೋರಾಟಗಾರರು ಅವನ ಬಳಿಯಲ್ಲಿದ್ದರು. ಅವರನ್ನು ಕಂಡಾಗಲೆಲ್ಲ ಅವನ ಮನಸ್ಸಿನಲ್ಲಿ ಆಸೆಯ ಕಿರಣವು ಹೊಳೆಯುತ್ತಿತ್ತು. ತಾನೊಬ್ಬ ದಂಡಿನ ದಳವಾಯಿ ಎಂದು ಹಿಗ್ಗುತ್ತಿದ್ದನು. ಆ ಜನಮಸ್ತಿನಿಂದ ಅವನ ತಲೆ ತಿರುಗಿತು. ಯಾವ ಕೋಟೆಯನ್ನು ಹಿಡಿಯಲಿ! ಯಾರನ್ನು ಸಿಗಿದು ತೋರಣ ಕಟ್ಟಲಿ! ಯಾರ ತಲೆ ತಂದು ತಲೆವಾಗಿಲಲ್ಲಿಡಲಿ! ಏನು ಮಾಡಲಿ! ಎಂದು ಕತಕತಿಸುತ್ತಿದ್ದನು ಎಂಥ ಗಂಡಾಂತರಗಳಲ್ಲಿ ನುಗ್ಗುವುದಕ್ಕೂ ತಯಾರಾಗಿದ್ದನು.

ಆ ಸಮಯಕ್ಕೆ ಕಣ್ಣಾನೂರಿನಿಂದ ಫತೆ ಹೈದರನೆಂಬವನು ತಾನು ಟಿಪ್ಪುಸುಲ್ತಾನನ ಉಪಪತ್ನಿಯ ಮಗನೆಂದೂ ಪಟ್ಟಕ್ಕೆ ಹಕ್ಕುದಾರನೆಂದೂ ಸಾರುತ್ತ ಎಡಬಲದ ಜನಗಳನ್ನು ತಲಬು ಕೊಡುತ್ತೇನೆ, ಸಂಬಳ ಕೊಡುತ್ತೇನೆ ಎಂದು ಮಾಪಿಳ್ಳೆ, ಮಲೆಯಾಳಿ ಮೊದಲಾದ ನೂರಾರು ಎಸಗೆ ಆಳುಗಳನ್ನು ಜಮಾಯಿಸಿಕೊಂಡು ಆದೂರ ಹತ್ತಿರ ಫಿತೂರಿ ನಡೆಸುತ್ತಿದ್ದನು. ಕೊಯಮುತ್ತೂರಲ್ಲಿ ಟಿಪ್ಪುವಿನ ಶಿರಸ್ತೆದಾರನಾಗಿದ್ದ ಪತ್ತುಮುಡಿ ಸುಬ್ರಾಯನೆಂಬವನೂ ಅವನೊಡನೆ ಸೇರಿಕೊಂಡು ಸಂಚು ಮಾಡುತ್ತಿದ್ದನು. ಕುಂಪಣಿಯವರ ವಿರೋಧಿಗಳು ಇವರಿಗೆ ಒಳಗೊಳಗೆ ಸಹಾಯಕಾರಿದ್ದರು.

ಕೆಲವು ದಿನಗಳಲ್ಲಿ ಫಿತೂರಿಗಾರರ ದಂಡು ಬೆಳೆಯಿತು. ಅವರು ಉಪ್ಪಿನಂಗಡಿ, ಪುತ್ತೂರುಗಳನ್ನು ಸುಲಿಗೆ ಮಾಡಿ ಜಮಾಲಗಡವನ್ನು ಹಿಡಿಯಬೇಕೆಂದು ಅಲ್ಲಿದ್ದ ಟಿಪ್ಪುಸುಲ್ತಾನನ ಫೌಜಿನೊಂದಿಗೆ ಸಂಚು ನಡೆಸುತ್ತಿದ್ದರು. ಆ ಸಂಧಿಯನ್ನು ನೋಡಿಕೊಂಡು ತಿಮ್ಮನಾಯಕನು ತನ್ನ ಇನ್ನೂರು ಮಂದಿ ಕಟ್ಟಾಳುಗಳೊಡನೆ ಸುಬ್ರಾಯನನ್ನು ಸೇರಿದನು. ತಕ್ಕ ಸಮಯದಲ್ಲಿ ಬಂದ ತಿಮ್ಮ ನಾಯಕನನ್ನು ಕಂಡು ಸುಬ್ರಾಯನಿಗೆ ಬಹಳ ಸಂತೋಷವಾಯಿತು. ಸುಲ್ತಾನರ ಕಾಲದಲ್ಲಿ ಅವನು ಮೆರೆದ ಸಾಹಸವನ್ನು ಸುಬ್ರಾಯನು ಸ್ವತಃ ತಿಳಿದಿದ್ದನು. ಸುಬ್ರಾಯನು ತಿಮ್ಮನಾಯಕನನ್ನು ಹೊಗಳಿ, ಹುರಿದುಂಬಿಸಿ, ತನ್ನ ಮಂದಿಯನ್ನೂ ಕೊಟ್ಟು ಜಮಾಲಗಡಕ್ಕೆ ಮುತ್ತಿಗೆ ಹಾಕಲು ಕಳುಹಿಸಿದನು. ತಿಮ್ಮನಾಯಕನು ದಂಡನ್ನು ನಡೆಸಿಕೊಂಡು ದಂಡಿನ ದಳವಾಯಿಯೆಂಬ ಆ ಹೊಸ ಠೀವಿಯಿಂದ ಜಮಾಲಗಡದ ದಾರಿಯನ್ನು ಹಿಡಿದನು.

ನಡುರಾತ್ರೆಗೆ ಸರಿಯಾಗಿ ದಂಡು ಜಮಾಲಗಡವನ್ನು ತಲಪಿತು. ತಿಂಗಳ ಬೆಳಕಿನಲ್ಲಿ ಎತ್ತರವಾದ ಗಡಾಯಿಕಲ್ಲು ಮಸಕು ಮಸಕಾಗಿ ಕಾಣಿಸುತ್ತಿದ್ದಿತು. ಕೋಟೆಯೊಳಗಿಂದ ಉರಿಯುತ್ತಿದ್ದ ಒಂದು ಪಂಜು ಏನೋ ಸಂಕೇತ ಮಾಡಿತು. ಗಡದ ಕೆಳಗಿನ ಜಮಾಲಬಾದು ನಗರವೆಲ್ಲ ನಿದ್ದೆಯಲ್ಲಿ ಮೈಮರೆತಿತ್ತು. ಸುತ್ತಲೂ ಬೆಟ್ಟಗಳು ಕ್ರರಗಾಗಿ ಕಾಣಿಸುತ್ತಿದ್ದುವು. ಕೆಳಗಿನ ಕೋಟೆಯ ಸುತ್ತಿನಲ್ಲಿ ಕುಂಪಣಿ ಸರದಾರರು ತಮ್ಮ ಚಾವಣಿಗಳಲ್ಲಿ ಮಲಗಿದ್ದರು. ತಿಮ್ಮನಾಯಕನು ಆ ಸರದಾರರನ್ನೆಲ್ಲ ಮಲಗಿದ್ದಲ್ಲೆ ಕಡಿದು ಹಾಕಿ, ತನ್ನ ದಂಡನ್ನು ಸುತ್ತಲೂ ಕಾವಲಿರಿಸಿ, ಸದ್ದಿಲ್ಲದೆ ಗಡವನ್ನೇರಿ ಸುಲ್ತಾನನ ಫೌಜನ್ನು ಸೇರಿದನು. ಆ ಫೌಜಿನಲ್ಲಿದ್ದ ಕೆಲವು ಫಿರಂಗಿ ಕೋವಿಗಳನ್ನು ಕಂಡು ಧೈರ್ಯಗೊಂಡನು. ಫೌಜಿನವರೊಡನೆ ವಿಶ್ವಾಸ ಬೆಳೆಸಿಕೊಳ್ಳುತ್ತ ಯುದ್ಧದ ತಂತ್ರಗಳನ್ನು ಚರ್ಚಿಸುತ್ತ ರಾತ್ರಿಯನ್ನು ಕಳೆದನು.

ಕೆಲವು ದಿನಗಳಲ್ಲಿ ಫಿತೂರಿಗಾರರ ದಂಡು ಬೆಳೆಯಿತು. ಅವರು ಉಪ್ಪಿನಂಗಡಿ, ಪುತ್ತೂರುಗಳನ್ನು ಸುಲಿಗೆ ಮಾಡಿ ಜಮಾಲಗಡವನ್ನು ಹಿಡಿಯಬೇಕೆಂದು ಅಲ್ಲಿದ್ದ ಟಿಪ್ಪುಸುಲ್ತಾನನ ಫೌಜಿನೊಂದಿಗೆ ಸಂಚು ನಡೆಸುತ್ತಿದ್ದರು. ಆ ಸಂಧಿಯನ್ನು ನೋಡಿಕೊಂಡು ತಿಮ್ಮನಾಯಕನು ತನ್ನ ಇನ್ನೂರು ಮಂದಿ ಕಟ್ಟಾಳುಗಳೊಡನೆ ಸುಬ್ರಾಯನನ್ನು ಸೇರಿದನು. ತಕ್ಕ ಸಮಯದಲ್ಲಿ ಬಂದ ತಿಮ್ಮ ನಾಯಕನನ್ನು ಕಂಡು ಸುಬ್ರಾಯನಿಗೆ ಬಹಳ ಸಂತೋಷವಾಯಿತು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಮರುದಿನವೇ ಸುದ್ದಿ ತಿಳಿದು ಕೇಪ್ಟನ್ ಮುನ್ರೋನು ದೊಡ್ಡ ಸೇನೆಯೊಡನೆ ಬಂದು ಗಡಕ್ಕೆ ಮುತ್ತಿಗೆ ಹಾಕಿದನು. ಕೆಳಗಿದ್ದ ತಿಮ್ಮನಾಯಕನ ದಂಡು ಅದನ್ನು ಎದುರಿಸಿತು. ಎರಡು ಪಡೆಗಳಿಗೂ ಕೈಗೆ ಕೈ ಹತ್ತಿತು. ಫಿರಂಗಿಗಳು ಸುಟ್ಟು ಸಿಡಿಯಲಾರಂಭಿಸಿದವು. ಕೋವಿಗಳು ಹಾರಿದುವು. ಎರಡು ಕಡೆಗಳಲ್ಲಿಯೂ ಹಲವು ವೀರರು ಹತರಾದರು. ಹಲವರು ಗಾಯಗೊಂಡರು. ಕುಂಪಣಿಯವರ ಒಂದು ದಳವು ಗಡವನ್ನೇರಲು ನೋಡಿತು. ಆದರೆ ಗಡಕ್ಕೇರುವ ಕಡಿದಾದ ಮಾರ್ಗದಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಹೇರಿದ್ದರು. ಅಲ್ಲಲ್ಲಿ ದಸಿಗೂಟಗಳನ್ನು ನೆಟ್ಟು, ಮುಳುವೇಲಿಗಳನ್ನು ಹರವಿ ಕಾಲಿಡಲು ಸಾಧ್ಯವಾಗದಂತೆ ಮಾಡಿದ್ದರು. ಕುಂಪಣಿ ಸೇನೆಯು ಕೆಳೆಗೆ ಕಾದಾಡುತ್ತಿದ್ದಂತೆ ಒಂದು ದಳವು ಗಡಕ್ಕೆ ಸರಿಯಾಗಿ ಎತ್ತರವಾಗಿ ಮಾರ್ಜೆ ಕಟ್ಟ ಹತ್ತಿತು. ಗಡದ ಮೇಲಿಂದ ಒಂದೇ ಸವನೆ ಕಲ್ಲುಗಳು ಕೆಳಕ್ಕುರುಳಿ ಹಲವರನ್ನು ಜಜ್ಜಿತು. ಕಾದಂಬಲಿ ಕಾದೆಣ್ಣೆ ಸುರಿದು ಹಲವರನ್ನು ಸುಟ್ಟಿತು. ಮೂರು ದಿನಗಳವರೆಗೆ ಹೀಗೆ ಕಗ್ಗೊಲೆಯ ಕಾಳಗ ನಡೆದು ಎರಡು ಕಡೆಯವರೂ ಕಂಗೆಟ್ಟರು.

ಅಷ್ಟರಲ್ಲಿ ಕೆಳಗೆ ಕುಂಪಣಿಯವರು ಮಾರ್ಜೆ ಮೇಲಿನಿಂದ ಕೋವಿ ಗುಂಡುಗಳನ್ನು ಹಾರಿಸತೊಡಗಿದರು. ಗಡದ ಮೇಲೆ ಕೋವಿ ಮದ್ದು ಕಡಿಮೆಯಾಗಿತ್ತು. ಕುಂಪಣಿಯ ಒಂದು ದಳವು ದಾರಿಯನ್ನು ಬಿಡಿಸಿಕೊಳ್ಳುತ್ತ ಗಡವನ್ನೇರ ಹತ್ತಿತು. ತಿಮ್ಮನಾಯಕನು ಫಿರಂಗಿ ಹಾರಿಸಿ ಅವರನ್ನೆಲ್ಲ ಸುಟ್ಟು ಲಯ ಮಾಡುತ್ತಿದ್ದನು. ಕುಂಪಣಿಯವರು ಮೇಲಿದ್ದ ಸಿಡಿ ಮದ್ದನ್ನೆಲ್ಲ ಮುಗಿಸಿ ಬಿಡಬೇಕೆಂದು ಕಾಳಗವನ್ನು ಮುಂದುವರಿಸುತ್ತಿದ್ದರು. ತಿಮ್ಮನಾಯಕನ ಬಳಿಯಿದ್ದ ಸಿಡಿಮದ್ದೆಲ್ಲ ನಿಜಕ್ಕೂ ಮುಗಿದುಹೋಯಿತು. ಅವನ ಫೌಜು ಅಂಜಿ ಹಿಂಜರಿಯಿತು. ಕುಂಪಣಿ ಸೇನೆಯು ಗಡವನ್ನೇರಿ, ನೆರೆಯ ನೀರು ನುಗ್ಗುವಂತೆ ತಿಳ್ಳಿಬಾಗಿಲನ್ನು ಹೊಕ್ಕಿತು. ಆ ಮಹಾ ರಭಸವು ನಾಯಕನ ಪಡೆಯನ್ನು ಕೊಚ್ಚಿಕೊಂಡು ಹೋಯಿತು. ಎಷ್ಟೋ ಮಂದಿ ಗುಂಡಿನ ಬಾಯಿಗೆ ಬಿದ್ದರು. ಹಲವರು ಕಂಗೆಟ್ಟು ಕನ್ನಗಂಡಿಗಳಿಂದ ಪಾರಾದರು.
ತಿಮ್ಮನಾಯಕನು ಕೆಲವೇ ಮಂದಿ ಸೈನಿಕರನ್ನು ಕೂಡಿಕೊಂಡು ಕೋವಿ ಹಾರಿಸುತ್ತ ಶತ್ರುಗಳನ್ನು ತಡೆದನು. ಅಷ್ಟರಲ್ಲಿ ಕೆಳಗಿದ್ದ ಕುಂಪಣಿ ಫೌಜು ಫಿತೂರಿಗಾರರನ್ನೆಲ್ಲ ಸೋಲಿಸಿ ದೆಸೆಗೆಡಿಸಿತ್ತು. ಒಂದೊಂದೇ ದಳವು ಸಾಲುಕಟ್ಟಿಕೊಂಡು ಸಜ್ಜಾಗಿ ಮೇಲಕ್ಕೇರುತ್ತಿದ್ದಿತು. ತಿಮ್ಮನಾಯಕನ ತೋಟೆ ಮದ್ದು ಎಲ್ಲ ತೀರುತ್ತ ಬಂತು. ಅವನ ಕೈಯಾಟ ಉಡುಗಿತು. ಅವನ ಆಳುಗಳು ಕನ್ನಗಂಡಿಗಳಿಂದ ಹಾರಿಹೋದರು. ಗತಿಗಾಣದೆ ತಿಮ್ಮನಾಯಕನೂ ಕನ್ನಗಂಡಿಯಿಂದ ಹಾರಿ ತಲೆತಪ್ಪಿಸಿಕೊಂಡನು. ಕೇಪ್ಟನ್ ಮುನ್ರೋನು ಜಮಾಲಗಡವನ್ನು ನಿರಾತಂಕವಾಗಿ ಕೈವಶಪಡಿಸಿಕೊಂಡನು. ಬಳಿಕ ಕುಂಪಣಿ ಸರಕಾರವು ಫಿತೂರಿಗಾರರನ್ನೆಲ್ಲ ಹಿಡಿದು ಶಿಕ್ಷಿಸಿತು. ಎಲ್ಲಿ ಹುಡುಕಿದರೂ ತಿಮ್ಮನಾಯಕನು ಮಾತ್ರ ಸಿಕ್ಕಲಿಲ್ಲ. ಅವನನ್ನು ಹಿಡಿದುಕೊಟ್ಟವರಿಗೆ 500 ರೂಪಾಯಿ ಬಹುಮಾನ ಕೊಡಲಾಗುವುದೆಂದು ಪ್ರಕಟಪಡಿಸಿತು. ಬಹುಮಾನದ ಆಸೆಯಿಂದ ಅವನನ್ನು ಕಂಡುಹಿಡಿಯಲು ಹಲವರು ಪ್ರಯತ್ನಿಸುತ್ತಿದ್ದರು.

*****
ಬೇಕಲ ಕೋಟೆಯ ಹೆಬ್ಬಾಗಿಲಿನೆದರು ಒಂದು ಗಳತೆಯ ದೂರದಲ್ಲಿ ಜಮಾತ್ ಮಸೀದಿಯು ಶಾಂತವಾಗಿ ನಿಂತಿದ್ದಿತು. ಅಂದವಾದ ಕಮಾನುಗಳಿಂದಲೂ, ಕಂಬಗಳಿಂದಲೂ ಕಂಗೊಳಿಸುತ್ತಿತ್ತು. ಅಂಗಳದ ಮಸಣದಲ್ಲಿ ಅಲ್ಲಲ್ಲಿ ಆಡಂಬರವಿಲ್ಲದ ಗೋರಿಕಲ್ಲುಗಳು ನೆಟ್ಟಿದ್ದುವು. ಆ ಜಾಗವೆಲ್ಲ ರಣರಣವೆನಿಸುತ್ತಿತ್ತು. ಮಸೀದಿಯ ಜಗಲಿಯ ಮೇಲೆ ಫಕೀರನೊಬ್ಬನು ಕುಳಿತುಕೊಂಡು ಏನೋ ವಿಚಾರದಲ್ಲಿ ಮುಳುಗಿದ್ದನು. ಅವನು ಚಿಂದಿಗಳಿಂದ ಹೊಲಿದು ಮಾಡಿದ ಒಂದು ನಿಲುವಂಗಿಯನ್ನು ತೊಟ್ಟಿದ್ದನು. ತಲೆ ಮೇಲೊಂದು ಕಾಂಗಿನ ವಸ್ತ್ರವನ್ನು ಮುಸುಕುಹಾಕಿಕೊಂಡು, ಅದು ಜಾರಿ ಬೀಳದಂತೆ ಮಣಿಸರದಿಂದ ಬಿಗಿದಿದ್ದನು. ಮುಸುಕಿ ನೆಡೆಯಿಂದ ಗಡ್ಡ ಬೆಳೆದ ಅವನ ಮುಖವು ಸ್ವಲ್ಪ ಕಾಣಿಸುತ್ತಿತ್ತು. ಅವನ ಕಣ್ಣುಗಳು ತೀಕ್ಷ್ಣವಾದ ಕಳೆಬೀರುತ್ತಿದ್ದುವು.

ಆಗ ಅದೇ ಕೋಟೆಯಲ್ಲಿದ್ದ ಒಬ್ಬ ನಾಯಿಮಾರ ಸಿಪಾಯಿಯು, ಆ ದಾರಿಯಾಗಿ ಕೋಟೆಗೆ ಬರುತ್ತಿದ್ದವನು ಅವನನ್ನು ಕಂಡನು. ಅವನು ಕುಳಿತ ಭಂಗಿಯು ಎಲ್ಲಿಯೋ ಕಂಡಂತೆ ತೋರುತ್ತಿದ್ದಿತು. ಹಾಗೆಯೇ ಹತ್ತಿರ ಹೋಗಲು ಅವನ ತೀಕ್ಷ್ಣ ದೃಷ್ಟಿಯೂ ಹಿಂದೆಲ್ಲಿಯೋ ಕಂಡಹಾಗಿತ್ತು. ಸಿಪಾಯಿಯ ಸಂದೇಹಗೊಂಡು – ಏನೇ ಆಗಲಿ ನೋಡೋಣವೆಂದು ಸಲಾಂ ಮಾಡಿದನು. ಆಲೇಕುಂ ಸಲಾಂ ಎಂದು ಫಕೀರನು ನುಡಿದನು. ಆ ಸ್ವರವು ಸಿಪಾಯಿಗೆ ಪರಿಚಯದ್ದಾಗಿತ್ತು. ಕೂಡಲೇ ಅವನು ಜಮಾದಾರ್ ಸಾಹೇಬ್! ಎಂದು ಮುಗುಳುನಕ್ಕನು. ಫಕೀರನು ಚಕಿತನಾದನು.

“ಫಕೀರಾಗಿ ಮಸೀದಿ ಸೇರಿಬಿಟ್ಟಿರಲಲಾ ನಾಯಕರೇ!”
“ಇಷ್ಟಾ! ಮಾತಾಡಬೇಡ. ನನ್ನ ಗುಟ್ಟು ಗೊತ್ತಾದರೆ ಗುಂಡಿನ ಬಾಯೇಗತಿ. ನನ್ನ ಪ್ರಾಣವೀಗ ನಿನ್ನ ಕೈಯಲ್ಲಿದೆ. ಯಾರಿಗೂ ನನ್ನ ಸುದ್ದಿ ಹೇಳಬೇಡ ಕಂಡ್ಯಾ.”
“ನಾಯಕರೇ! ನಾನು ನಿಮ್ಮ ತಾಬೆಯಲ್ಲಿದ್ದವನು. ನಿಮ್ಮನ್ನು ಬಿಟ್ಟು ಹಾಕುವೆನೇ? ಒಂದು ಪಿಳ್ಳೆಗಾದರೂ ನಿಮ್ಮ ಸುಳುವನ್ನು ಕೊಡಲಿಕ್ಕಿಲ್ಲ. ನಂಬಿರಿ. ತಾವು ಬಹಳ ದಣಿದಿರುವಂತೆ ತೋರುತ್ತದೆ. ಬಳಿಯಿಂದ ಎರಡು ಎಳನೀರು ತರಲೇ?”
“ಬೇಡ ನಾಯರೇ! ನಿನ್ನ ಪ್ರೀತಿಯೇ ಸಾಕು.”
“ಹಾಗಲ್ಲ. ಕ್ಷಣದಲ್ಲಿ ಬಂದೆ. ತಾವು ಇಲ್ಲೇ ಇರಿ.” ಎಂದು ನಾಯರನು ಎಳನೀರನ್ನು ತರುವುದಕ್ಕಾಗಿ ಅವಸರವಸರವಾಗಿ ನಡೆದನು. ಎಳನೀರ ಹೆಳೆಯಿಂದ ಹೋದ ನಾಯರನು ನೆಟ್ಟಗೆ ಕೋಟೆಗೆ ಹೋಗಿ ಕಿಲ್ಲೆದಾರನಿಗೆ ತಿಮ್ಮನಾಯಕನ ಸುಳುವನ್ನು ಕೊಟ್ಟನು. ಕೂಡಲೇ ಕಿಲ್ಲೆದಾರನು ಸೈನಿಕರೊಂದಿಗೆ ಬಂದು ಮಸೀದಿಯನ್ನು ಹೊಕ್ಕು ತಿಮ್ಮನಾಯಕನನ್ನು ಸೆರೆಹಿಡಿದನು. ಬಳಿಕ ಆಗಿನ ಮಿಲಿಟರಿ ಗವರ್ನರನಾಗಿದ್ದ ಕೇಪ್ಟನ್ ಮುನ್ರೋನು ಅವನ ವಿಚಾರಣೆ ನಡೆಸಿ ಅವನನ್ನು ದೇಕಲ ಕೋಟೆಯಲ್ಲಿ ಗಲ್ಲಿಗೇರಿಸಿದನು. ಡಾ|| ಬುಚನನ್ ಮತ್ತು ಸ್ಟರ್ ರೋಕರು ತಮ್ಮ ಗ್ರಂಥಗಳಲ್ಲಿ ಈ ವಿಷಯವನ್ನು ಉಲ್ಲೇಖಿಸಿರುವರು. ಆದರೆ ಈ ಫಿತೂರಿಗಾರನು ಚಂದ್ರಗಿರಿ ಕೃಷ್ಣನಾಯಕನೆಂಬವನೆಂದು ಕೆಲವರು ಹೇಳುತ್ತಾರೆ. ಕೋಟೆಯಿಂದ ಫೌಜು ಬರುವಷ್ಟರಲ್ಲಿ ತಿಮ್ಮನಾಯಕನು ಅದೇ ಮಸೀದಿಯಲ್ಲಿ ಎಲ್ಲಿಯೋ ಅವಿತುಕೊಂಡಿದ್ದನೆಂದೂ ಅವನನ್ನು ಹಿಡಿಯುವುದಕ್ಕೆ ಧೈರ್ಯ ಸಾಲದೆ ಮಸೀದಿಗೆ ಬೆಂಕಿ ಕೊಟ್ಟರೆಂದೂ ಅವನು ಅಲ್ಲಿ ಸುಟ್ಟುಹೋದನೆಂದೂ ಇನ್ನು ಕೆಲವರು ಹೇಳುವರು. ಈ ಘಟನೆ ನಡೆದುದು ಒಂದು ನರಕ ಚತುರ್ದಶಿಯ ದಿನವಾಗಿದ್ದುದರಿಂದ ಬೇಕಲದಲ್ಲಿರುವ ಅವನ ಸಂತತಿಯವರು ಆ ದಿನ ಆಚರಿಸಬೇಕಾದ ಹಬ್ಬವನ್ನು ಇಂದಿಗೂ ಆಚರಿಸುವುದಿಲ್ಲ. ಯಾಕೆ ಆಚರಿಸುವುದಿಲ್ಲವೆಂದು ಕೇಳಿದರೆ, ಈ ಮಸೀದಿಯಲ್ಲಾದ ದುರಂತವನ್ನು ಹೇಳುವುದಿದೆ. ಇದರಿಂದ ಫಿತೂರಿಗಾರನು ತಿಮ್ಮನಾಯಕನೆಂದೇ ಸ್ಪಷ್ಟವಾಗುತ್ತದೆ.

 

ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ:

ಬ್ರಿಟಿಷರು ಟಿಪ್ಪು ಸುಲ್ತಾನನನ್ನು ಸೋಲಿಸಿದ ಕಾರಣ ಅವನ ವಶದಲ್ಲಿದ್ದ ಕರಾವಳಿ ಜಿಲ್ಲೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆ ಸಂದರ್ಭದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಸರಕಾರವಿದ್ದು, ಮದ್ರಾಸ್ ಪ್ರಾಂತ್ಯದ ಅಡಿಯಲ್ಲಿ ದಕ್ಷಿಣ ಕನ್ನಡ ವಸಾಹತು ಆಡಳಿತಕ್ಕೆ ಒಳಪಟ್ಟಿತು. (ಇದರಿಂದಾಗಿ, ಮುಂದೆ ಸ್ವಾತಂತ್ರ್ಯ ಬಂದ ನಂತರವೂ ಕೆಲವು ವರ್ಷಗಳವರೆಗೆ, ಭಾಷಾವಾರು ಪ್ರಾಂತ್ಯಗಳ ರಚನೆ ಆಗುವವರೆಗೂ ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸ್ ರಾಜ್ಯಕ್ಕೆ ಸೇರಿತ್ತು). ದಕ್ಷ ಅಧಿಕಾರಿ ಸರ್ ಥಾಮಸ್ ಮನ್ರೋ ಇಲ್ಲಿಗೆ ಮೊದಲನೆಯ ಜಿಲ್ಲಾಧಿಕಾರಿಯಾಗಿ ಬಂದು ಆಡಳಿತವನ್ನು ಕೈಗೆತ್ತಿಕೊಂಡ. ಅವನ ಮುಂದಿದ್ದ ಕೆಲಸ ಅಗಾಧವಾಗಿತ್ತು. ಸಾಮಾನ್ಯ ಕೃಷಿಕರಿಗೆ ಧೈರ್ಯ ನೀಡಿ ಬೇಸಾಯದ ಕೆಲಸ ನಿರಾತಂಕವಾಗಿ ಆಗುವಂತೆ ನೋಡಿಕೊಳ್ಳಬೇಕಿತ್ತು. ಅದಕ್ಕಾಗಿ ಅವನು ಜಮೀನು ಒಡೆತನವನ್ನು ಗುರುತಿಸಿ ತೆರಿಗೆ ಸೆಟ್ಲ್ ಮೆಂಟ್ ಮಾಡುವ ಕಾರ್ಯವನ್ನು ಕೈಗೊಂಡ. ಗ್ರಾಮಗಳಲ್ಲಿ ಸರಕಾರಕ್ಕೆ ನಿಷ್ಠರಾಗಿರುವ ಪಟೇಲರನ್ನು ಮತ್ತು ಶಾನುಭೋಗರನ್ನು ಗುರುತಿಸಿ ಅವರಿಗೆ ಅಧಿಕಾರ ನೀಡಿದ. ಟಿಪ್ಪುವಿನ ಗ್ರಾಮಾಧಿಕಾರಿಗಳೇ ಬ್ರಿಟಿಷರ ಕಾಲದಲ್ಲಿಯೂ ಮುಂದುವರಿದರು. ತಮಗೆ ವಿರೋಧ ತೋರಿದ ಕೆಲವರನ್ನು ಬ್ರಿಟಿಷರು ನಿರ್ದಾಕ್ಷಿಣ್ಯವಾಗಿ ಬದಲಾಯಿಸಿದರು.
ಅದಕ್ಕಿಂತಲೂ ಮುಖ್ಯವಾಗಿ ಟಿಪ್ಪುವಿನ ಪತನಾನಂತರ ಕೆಲವು ಸಣ್ಣಪುಟ್ಟ ತುಂಡರಸರು ಸ್ವತಂತ್ರರಾಗಲು ಬ್ರಿಟಿಷರ ವಿರುದ್ಧ ದಂಗೆಯೆದ್ದು ತಾವೇ ನಿರಂಕುಶ ರಾಜರೆಂದು ಸಾರಿಕೊಂಡರು. ದರೋಡೆಗಾರರ ತಂಡಗಳೂ ಅರಾಜಕತೆಯ ವಾತಾವರಣವನ್ನು ಸೃಷ್ಟಿಸಿ ಲಾಭ ಮಾಡಿಕೊಳ್ಳಲು ಪ್ರಯತ್ನಿಸಿದರು. ಬ್ರಿಟಿಷರ ವಿರುದ್ಧ ದಂಗೆಯೆದ್ದವರಲ್ಲಿ ಮುಖ್ಯರಾದವರು ನೀಲೇಶ್ವರದ ರಾಜ (ಆಗ ಇದು ದಕ್ಷಿಣ ಕನ್ನಡಕ್ಕೆ ಸೇರಿತ್ತು), ವಿಟ್ಲದ ರಾಜ ಮತ್ತು ಕುಂಬಳೆಯ ರಾಜ. ಇತರ ಕೆಲವು ಸಣ್ಣಪುಟ್ಟ ನಾಯಕರು ಹಾಗೂ ಜಮೀನುದಾರರು ಕೂಡಾ ಪ್ರತಿರೋಧ ತೋರಿದ್ದಿದೆ. ಆದರೆ ಮನ್ರೋ ಅವರನ್ನು ನಿರ್ದಾಕ್ಷಿಣ್ಯವಾಗಿ ಸದೆ ಬಡಿದ.
ಈ ರಾಜರುಗಳ ಹೋರಾಟವನ್ನು ನಾವು ಈಗ ಸ್ವಾತಂತ್ರ್ಯ ಹೋರಾಟಗಳೆಂದು ಕರೆಯುತ್ತೇವೆ. ಉದಾಹರಣೆಗೆ ‘ಯುಗಪುರುಷ’ದ ಆಗಸ್ಟ್ 2010 ರ ಸಂಚಿಕೆಯಲ್ಲಿ ಬಿ. ಕೆ. ಶ್ರೀಮತಿ ರಾವ್ ಅವರು ವಿಟ್ಲದ ರಾಜನ ಜತೆಗೆ ಸೇರಿ ಬ್ರಿಟಿಷರಿಗೆ ಸಡ್ಡು ಹೊಡೆದಿದ್ದ ಪತ್ತುಮುಡಿ ಸುಬ್ರಾಯ ಕಾರಂತನ ಬಗ್ಗೆ ಒಂದು ಲೇಖನ ಬರೆದು ಅದನ್ನು ಸ್ವಾತಂತ್ರ್ಯ ಹೋರಾಟ ಎಂದೇ ಕರೆದಿದ್ದಾರೆ. ಸುಬ್ರಾಯ ಟಿಪ್ಪುವಿನ ಕೊಯಮುತ್ತೂರಿನ ಶಿರಸ್ತೇದಾರರಾಗಿದ್ದವನು. ಅವನು ಮತ್ತು ಬೇಕಲ ತಿಮ್ಮ ನಾಯಕರು ವಿಟ್ಲದ ಅರಸನ ಜತೆಗೆ ಸೇರಿಕೊಂಡು ಜಮಲಾಬಾದ್ ಕೋಟೆಯನ್ನು ವಶಪಡಿಸಿಕೊಂಡು, ಉಪ್ಪಿನಂಗಡಿ ದೇವಸ್ಥಾನವನ್ನು ದೋಚಿ, ಬಂಟ್ವಾಳ, ಪುತ್ತೂರುಗಳಲ್ಲಿ ತೆರಿಗೆ ಸಂಗ್ರಹಿಸತೊಡಗಿದ್ದರು. ಮನ್ರೋ ಧರ್ಮಸ್ಥಳದ ಪಟೇಲರೂ ಆಗಿದ್ದ ಧರ್ಮಾಧಿಕಾರಿ ಕುಮಾರ ಹೆಗ್ಗಡೆಯವರ ಸಹಾಯದಿಂದ, ಜತೆಗೆ ತನ್ನ ಸೈನ್ಯವನ್ನೂ ಕಳಿಸಿ ದಂಗೆಕೋರರನ್ನು ಹಿಡಿದು ಮಂಗಳೂರು ಹಾಗೂ ಕುಂದಾಪುರಗಳಲ್ಲಿ ಗಲ್ಲಿಗೇರಿಸಿದ. ಇಡೀ ಜಿಲ್ಲೆಯ ಜನರಲ್ಲಿ ಭಯ ಹುಟ್ಟಿಸಲು ಗಲ್ಲಿಗೇರಿಸುವ ಕಾರ್ಯಕ್ರಮವನ್ನು ವ್ಯಾಪಕ ಪ್ರಚಾರ ಕೊಟ್ಟು ನಡೆಸಲಾಗುತ್ತಿತ್ತು. ದಂಗೆಕೋರರಲ್ಲಿ ಕೆಲವರನ್ನು ಕುಂದಾಪುರದ ಜನರಲ್ಲಿ ಭಯ ಹುಟ್ಟಿಸುವ ಸಲುವಾಗಿ ಅಲ್ಲಿಗೆ ಕರೆದುಕೊಂಡು ಹೋಗಿ ಗಲ್ಲಿಗೇರಿಸಲಾಯಿತು ಎಂದು ಬ್ರಿಟಿಷರೇ ದಾಖಲಿಸಿದ್ದಾರೆ. ಇದರಿಂದ ಅರಾಜಕತೆ ಸೃಷ್ಟಿಸುತ್ತಿದ್ದವರು ಬ್ರಿಟಿಷರ ನ್ಯಾಯ ವ್ಯವಸ್ಥೆಗೆ ಬಹಳಷ್ಟು ಹೆದರಿ ತಣ್ಣಗಾದರು; ಶಾಂತಿ ನೆಲೆಸಿತು. ಜನರಿಗೆ ನೆಮ್ಮದಿ ಸಿಕ್ಕಿತು.
ಆ ಸಮಯದಲ್ಲಿ ಬೇಕಲ ತಿಮ್ಮ ನಾಯಕ, ವಿಟ್ಲದ ಡೊಂಬ ಹೆಗ್ಗಡೆ ಮತ್ತು ಪತ್ತುಮುಡಿ ಸುಬ್ರಾಯ ಕಾರಂತರ ಸಾಂಘಿಕ ಹೋರಾಟವನ್ನು ಧರ್ಮಸ್ಥಳದ ಹೆಗ್ಗಡೆಯವರ ಸಹಾಯದಿಂದ ಕಲೆಕ್ಟರ್ ಮನ್ರೋ ದಮನಿಸಿದ ಘಟನೆಯನ್ನು ಬೇಕಲ ರಾಮನಾಯಕರು ‘ತಿಮ್ಮನಾಯಕನ ಫಿತೂರಿ’ ಎಂಬ ಕತೆಯಲ್ಲಿ ವಿವರಿಸಿದ್ದಾರೆ. “ಕುಂಪಣಿಯವರು ಕೊಡಿಯಾಲವನ್ನು ಹಿಡಿದು, ಆ ರೇವಿನಲ್ಲಿ ಠಾಣ್ಯ ಹಾಕಿ, ನೀಲೇಶ್ವರದಿಂದ ಭಟ್ಕಳದವರೆಗಿನ ಕನ್ನಡ ಜಿಲ್ಲೆಯನ್ನು ವಶಪಡಿಸಿಕೊಂಡು ಆಳುವುದಕ್ಕೆ ತೊಡಗಿದ್ದರು. ಘಟ್ಟದ ಬಳಿಯಲ್ಲಿ ಜಮಲಾಗಡವು ಮಾತ್ರ ಅವರ ಕೈಸೇರಿರಲಿಲ್ಲ. ಕ್ರಿ. ಶ. 1799 ನೇ ಅಕ್ಟೋಬರ ತಿಂಗಳಲ್ಲಿ ಕನ್ನಡ ಜಿಲ್ಲೆಯ ಮಿಲಿಟರಿ ಗವರ್ನರನಾಗಿದ್ದ ಕೇಪ್ಟನ್ ಮುನ್ರೋನು ಕೊಡಿಯಾಲದಿಂದ ಒಂದು ಫೌಜನ್ನು ತೆಗೆದುಕೊಂಡು ಹೋಗಿ, ಅಲ್ಲಿದ್ದ ಕಿಲ್ಲೆದಾರರನ್ನು ಕೆಳಗಿಳಿಸಿ …..” ಹೀಗೆ ಈ ಐತಿಹ್ಯ ಕತೆ ಪ್ರಾರಂಭವಾಗುತ್ತದೆ. “ಬಳಿಕ ಕುಂಪಣಿ ಸರಕಾರವು ಫಿತೂರಿಗಾರರನ್ನೆಲ್ಲ ಹಿಡಿದು ಶಿಕ್ಷಿಸಿತು. ಎಲ್ಲಿ ಹುಡುಕಿದರೂ ತಿಮ್ಮನಾಯಕನು ಮಾತ್ರ ಸಿಕ್ಕಲಿಲ್ಲ. ಅವನನ್ನು ಹಿಡಿದುಕೊಟ್ಟವರಿಗೆ 500 ರೂಪಾಯಿ ಬಹುಮಾನ ಕೊಡಲಾಗುವುದೆಂದು ಪ್ರಕಟಪಡಿಸಿತು. ಬಹುಮಾನದ ಆಸೆಯಿಂದ ಹಲವರು ಅವನನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದರು….”
ತಿಮ್ಮ ನಾಯಕನು ಫಕೀರನ ವೇಷ ಧರಿಸಿಕೊಂಡು ಮಸೀದಿಯೊಂದರಲ್ಲಿ ಅಡಗಿ ಕುಳಿತಿದ್ದನು. ಅವನನ್ನು ಯಾರೋ ಗುರುತಿಸಿ ಕುಂಪಣಿ ಸರಕಾರದವರಿಗೆ ಸುಳಿವು ಕೊಡುತ್ತಾರೆ. “ಬಳಿಕ ಆಗಿನ ಮಿಲಿಟರಿ ಗವರ್ನರನಾಗಿದ್ದ ಕೇಪ್ಟನ್ ಮುನ್ರೋನು ಅವನ ವಿಚಾರಣೆ ನಡೆಸಿ ಅವನನ್ನು ಬೇಕಲ ಕೋಟೆಯಲ್ಲಿ ಗಲ್ಲಿಗೇರಿಸಿದನು.
“ಡಾ. ಬುಚನನ್ ಮತ್ತು ಸ್ಟರ್ರೋಕರು ತಮ್ಮ ಗ್ರಂಥಗಳಲ್ಲಿ ಈ ವಿಷಯವನ್ನು ಉಲ್ಲೇಖಿಸಿರುವರು” ಎಂದು ರಾಮ ನಾಯಕರು ಇತಿಹಾಸಕ್ಕೆ ಸಲ್ಲುವ ದಾಖಲೆಗಳನ್ನು ನೀಡುತ್ತಾರೆ.
ಇತಿಹಾಸದಲ್ಲಿ ದಾಖಲಾಗದ ಎಷ್ಟೋ ವಿವರಗಳನ್ನು ಐತಿಹ್ಯಕಾರ ರಾಮನಾಯಕರು ನೀಡುತ್ತಾರೆ. ಉದಾಹರಣೆಗೆ ಈ ಮಾಹಿತಿ: “ಆದರೆ ಈ ಫಿತೂರಿಗಾರನು ಚಂದ್ರಗಿರಿ ಕೃಷ್ಣ ನಾಯಕನೆಂಬವನೆಂದು ಕೆಲವರು ಹೇಳುತ್ತಾರೆ. ಕೋಟೆಯಿಂದ ಫೌಜು ಬರುವಷ್ಟರಲ್ಲಿ ತಿಮ್ಮ ನಾಯಕನು ಅದೇ ಮಸೀದಿಯಲ್ಲಿ ಎಲ್ಲಿಯೋ ಅವಿತುಕೊಂಡಿದ್ದನೆಂದೂ ಅವನನ್ನು ಹಿಡಿಯುವುದಕ್ಕೆ ಧೈರ್ಯ ಸಾಲದೆ ಮಸೀದಿಗೆ ಬೆಂಕಿ ಕೊಟ್ಟರೆಂದೂ ಅವನು ಅಲ್ಲಿ ಸುಟ್ಟುಹೋದನೆಂದೂ ಕೆಲವರು ಹೇಳುವರು. ಈ ಘಟನೆ ನಡೆದುದು ಒಂದು ನರಕ ಚತುರ್ದಶಿಯ ದಿನವಾಗಿದ್ದುದರಿಂದ ಬೇಕಲದಲ್ಲಿರುವ ಅವನ ಸಂತತಿಯವರು ಆ ದಿನ ಆಚರಿಸಬೇಕಾದ ಹಬ್ಬವನ್ನು ಇಂದಿಗೂ ಆಚರಿಸುವುದಿಲ್ಲ. ಏಕೆ ಆಚರಿಸುವುದಿಲ್ಲವೆಂದು ಕೇಳಿದರೆ ಮಸೀದಿಯಲ್ಲಾದ ಆ ದುರಂತವನ್ನು ಹೇಳುವುದಿದೆ. ಇದರಿಂದ ಫಿತೂರಿಗಾರನು ತಿಮ್ಮನಾಯಕನೆಂದೇ ಸ್ಪಷ್ಟವಾಗುತ್ತದೆ” ಎಂದು ಕತೆ ಕೊನೆಯಾಗುತ್ತದೆ. ಇದೇ ರೀತಿ, ಈ ಘಟನೆಗೆ ಸಂಬಂಧಿಸಿದ ಮತ್ತೊಬ್ಬ ಹೋರಾಟಗಾರ ಸುಬ್ರಾಯ ಕಾರಂತನ ಮನೆತನದಲ್ಲಿ ನಂತರ ಯಾರೂ ‘ಸುಬ್ರಾಯ’ ಎಂಬ ಹೆಸರಿಟ್ಟುಕೊಂಡಿಲ್ಲ ಎಂದು ಬಿ. ಕೆ. ಶ್ರೀಮತಿ ರಾವ್ ಅವರೂ ಪೂರ್ವೋಕ್ತ ಲೇಖನದಲ್ಲಿ ದಾಖಲಿಸಿದ್ದಾರೆ. ಒಂದು ದುರಂತ ಹೋರಾಟದ ನೆನಪು ಜನಮಾನಸದಲ್ಲಿ ಶತಮಾನಗಳ ಕಾಲ ಉಳಿಯುವುದಕ್ಕೆ ಇವು ಸಾಕ್ಷಿನುಡಿಯುತ್ತವೆ.
ಈ ಕತೆಯಲ್ಲಿರುವ ‘ಫಿತೂರಿಗಾರ’ ಎಂಬ ಶಬ್ದದಿಂದಲೇ ಕತೆಯ ನಿಲುವು ಸ್ಪಷ್ಟವಾಗುತ್ತದೆ. ಕತೆಯಲ್ಲಿ ತಿಮ್ಮ ನಾಯಕ ಮತ್ತು ಪತ್ತುಮುಡಿ ಸುಬ್ರಾಯ ಕಾರಂತ (ಇವನು ಟಿಪ್ಪುಸುಲ್ತಾನನ ಉತ್ತರಾಧಿಕಾರಿಯೆಂದು ಬಿಂಬಿಸಿಕೊಂಡ ಫತೇ ಹೈದರ್ ಎಂಬವನ ಪರವಾಗಿ ಬ್ರಿಟಿಷರ ವಿರುದ್ಧ ಸೈನ್ಯಕಟ್ಟಿದವನು) ವಿದ್ರೋಹಿಗಳೆಂದೇ ಪರಿಗಣಿಸಲಾಗಿದೆ ಹೊರತು ಸ್ವಾತಂತ್ರ್ಯ ಹೋರಾಟಗಾರರೆಂದಲ್ಲ. ಬೇಕಲ ರಾಮನಾಯಕರು ಈ ಕತೆಯಲ್ಲಿ ಡೊಂಬ ಹೆಗ್ಗಡೆಯನ್ನು ಉಲ್ಲೇಖಿಸುವುದಿಲ್ಲ. ಇಂತಹ ಐತಿಹ್ಯಗಳಲ್ಲಿ ಆ ಜನಸಮುದಾಯದ ಆಶೋತ್ತರಗಳು ಸಹಜವಾಗಿ ದಾಖಲಾಗಿರುತ್ತವೆ. ಹಾಗಾಗಿ ಈ ಕಥೆಗಳಲ್ಲಿ ಬ್ರಿಟಿಷರ ಸಮರ್ಥನೆ ಕಾಣಿಸಿಕೊಂಡರೆ ಜನಸಮುದಾಯಕ್ಕೆ ಅವರ ಆಳ್ವಿಕೆ ನೆಮ್ಮದಿಯನ್ನು ಕೊಟ್ಟಿತ್ತು, ಅವರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದವರ ಬಗ್ಗೆ ಜನಸಾಮಾನ್ಯರಿಗೆ ಒಳ್ಳೆಯ ಭಾವನೆ ಇರಲಿಲ್ಲ ಎಂದೇ ನಂಬಬೇಕಾಗುತ್ತದೆ.
ಬೇಕಲ ರಾಮನಾಯಕರು ಐತಿಹ್ಯಗಳ ಬಗ್ಗೆ ಹೇಳಿರುವ ಮಾತುಗಳು ಗಮನಿಸತಕ್ಕವು : “ಕಥೆಗಳೆಂದರೂ ಇವು ಕೇವಲ ಕಥೆಗಳಲ್ಲ. ನಮ್ಮ ನಾಡಿನ ಇತಿಹಾಸಕ್ಕೆ ಸಂಬಂಧಿಸಿದ ಕಥೆಗಳು – ಐತಿಹ್ಯಗಳು. ಐತಿಹ್ಯಗಳೆಂಬುದೇ ಈ ಕೃತಿಯ ವೈಶಿಷ್ಟ್ಯ. ಇವುಗಳೆಲ್ಲ ಜನಜನಿತವಾಗಿ ಬಂದಂಥವುಗಳಾದರೂ ಕೆಲವಕ್ಕೆ ಕೂಟ ರಿಕಾರ್ಡು, ಅಧಿಕಾರಿಗಳ ಕೈಫಿಯತ್ತು, ದಿನಚರಿ, ಸನದು ಮೊದಲಾದ ಆಧಾರಗಳಿವೆ. ಇನ್ನು ಕೆಲವಕ್ಕೆ ಕಟ್ಟೆ, ಕಲ್ಲು, ಕತ್ತಿ, ಮನೆತನ ಮೊದಲಾದ ಸಾಕ್ಷ್ಯಗಳಿವೆ.” ರಾಮ ನಾಯಕರು ಮತ್ತೂ ಮುಂದುವರಿದು ಹೇಳುತ್ತಾರೆ : “ಶ್ರೀಮಾನ್ ಉದ್ಯಾವರ ಭವಾನಿಶಂಕರ ರಾವ್, ಬಿಎ., ಎಲ್.ಟಿ. ಇವರ ಸಲಹೆ ಸಹಕಾರಗಳಿಲ್ಲದಿರುತ್ತಿದ್ದರೆ ಈ ಗ್ರಂಥವು ಈ ರೂಪವನ್ನು ತಳೆಯುತ್ತಿರಲಿಲ್ಲ. ಚರಿತ್ರೆಯ ಜ್ಞಾನ, ವ್ಯಾಸಂಗಗಳ ವಿಶೇಷ ಅನುಭವದಿಂದ ಇದರ ರಚನೆಗೆ ನೆರವಾದ ಆ ಹಿರಿಯರಿಗೂ …… ನಾನು ಕೃತಜ್ಞನು.” ಇತಿಹಾಸದ ಜ್ಞಾನವಿರುವವರೊಂದಿಗೆ ಸಮಾಲೋಚಿಸಿ ಅವರು ಐತಿಹ್ಯಗಳನ್ನು ನಿರೂಪಿಸಿರುವುದರಿಂದ ಅವರ ಕಥೆಗಳು ಇತಿಹಾಸವನ್ನು ಅರಿಯುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.