ಈ ಪೊಕ್ಕಣ್ಣ ಶತ ತುಂಟ, ಕಣ್ಣಲ್ಲೇ ಅವನ ತುಂಟತನ ಇಣಕುತ್ತಿತ್ತು. ಒಂದು ಕಿವಿ ನೆಟ್ಟಗೆ ಮಾಡಿ, ಮತ್ತೊಂದನ್ನು ಮಡಿಸಿದ ಅಂದರೆ ಅವನೇನೋ ತರಲೆ ಮಾಡುತ್ತಾನೆಂದು ನಮಗೆ ಖಾತ್ರಿಯಾಗಿತ್ತು. ಮಟ ಮಟ ಮಧ್ಯಾಹ್ನ ಎಣ್ಣೆ ಪಳಚಿಕೊಂಡು ಹಂಡೆತುಂಬಾ ಬೀಸಿನೀರನ್ನು ಸ್ನಾನ ಮಾಡಿ, ಒದ್ದೆ ಸೀರೆಯನ್ನುಟ್ಟು ಬರುವ ಅಜ್ಜಿಗೆ ಅಡ್ಡಲಾಗಿಯೇ ಮಲಗುತ್ತಿದ್ದ ಪೊಕ್ಕಣ್ಣ. ಅವನು ಮಲಗಬಾರದೆಂದು ಕೊಡಪಾನಗಟ್ಟಲೆ ನೀರು ಹೊಯ್ದಿಟ್ಟು ಸ್ನಾನಕ್ಕೆ ಹೋಗುತ್ತಿದ್ದರು. ಆದರೂ ಕಾಲು ಒರೆಸುವ ಗೋಣಿಚೀಲವನ್ನೆಳೆದುಕೊಂಡು ಬೇಕಂತಲೇ ಬಚ್ಚಲಮನೆ ಬುಡದಿ ಮಲಗಿ ಸತಾಯಿಸುತ್ತಿದ್ದ ಅಂವ.
ಶುಭಶ್ರೀ ಭಟ್ಟ ಲಲಿತ ಪ್ರಬಂಧಗಳ ಸಂಕಲನ “ಹಿಂದಿನ ನಿಲ್ದಾಣ” ದಿಂದ ಒಂದು ಪ್ರಬಂಧ ನಿಮ್ಮ ಓದಿಗೆ

ಬೆಳೆಗಾತ ನಸುಕಲ್ಲೆ ಎದ್ದು ಪ್ರಾತಃವಿಧಿ ಮುಗಿಸುವ ಅಜ್ಜಿಯ ಮೊದಲ ಕೆಲಸವೆಂದರೆ ಕೊಟ್ಟಿಗೆಗೆ ಹೋಗಿ ಒಂದಿಷ್ಟು ಗೋಮೂತ್ರವ ಮೈಗೂ ಹೊಟ್ಟೆಗೂ ಸಿಂಪಡಿಸಿಕೊಂಡು, ಆಕಳಿಗೆಲ್ಲಾ ಮೈದಡವಿ ಮಾತನಾಡಿಸಿ, ಒಂದು ಕಟ್ಟು ಹುಲ್ಲು ಹಾಕಿ, ಗೋಮಯ ತೆಗೆದುಕೊಂಡು ಬರುವುದು. ಗೋಮಯದಿಂದ ಒಲೆಕಟ್ಟೆಯನ್ನೆಲ್ಲಾ ಸಾರಿಸಿ, ನಿನ್ನೆಯ ಮುಸುರೆ ಪಾತ್ರಗಳನ್ನೆಲ್ಲಾ ಹೊರಗೆ ಹಾಕಿ, ನಂತರ ಒಲೆಹಚ್ಚಿ ಹೊಗೆಕಂಪಿನ ತಲೆ ತಿರುಗುವಷ್ಟು ಕುದಿಸಿದ ಚಾ ಮಾಡಿ ಮಗ-ಸೊಸೆಗೂ ಚೂರು ಕೊಟ್ಟು, ಶಿವ ಶಿವ ಎಂದು ಬಾಗಿಲ ಬಳಿ ಸ್ವಲ್ಪ ಹೊತ್ತು ಕುಳಿತುಕೊಳ್ಳುವುದು. ಆಕಳೆಂದರೆ ದೇವರೆಂಬಂತೆ ಕಾಣುವ ಅಜ್ಜಿಗೆ ಉಳಿದ ಪ್ರಾಣಿಗಳೆಂದರೆ ಅಷ್ಟಕಷ್ಟೆ. ಅದರಲ್ಲೂ ನಾಯಿ ಬೆಕ್ಕು ಕಂಡರೆ ಚೊಂಬಲ್ಲಿ ನೀರು ಹಿಡಿದುಕೊಂಡೇ ತಿರುಗುವಷ್ಟು ಕೋಪ, ತನ್ನ ಮಡಿ ಹಾಳು ಮಾಡುತ್ತವೆ ಅವು ಎಂದು. ಅದಕ್ಕೆ ಸರಿಯಾಗಿ ಬರುವ ಕಳ್ಳಬೆಕ್ಕೊಂದು ಹಾಲಿನ ಪಾತ್ರೆ ಬೀಳಿಸಿ ಹಾಲು ನೆಕ್ಕುವುದು, ಗೋಗ್ರಾಸಕ್ಕೆ ತೆಗೆದಿಟ್ಟ ಅನ್ನವನ್ನು ತಿನ್ನುವುದನ್ನೆಲ್ಲಾ ಮಾಡಿ ಪರಾರಿಯಾಗುತ್ತಿತ್ತು. ಹೊಂಚು ಹಾಕಿ ಹಿಡಿಯಲು ಪ್ರಯತ್ನಿಸಿದರೂ ಕೈಗೆ ಸಿಗದ ಕಳ್ಳಬೆಕ್ಕಿನಿಂದ ಇಡೀ ನಾಯಿ-ಬೆಕ್ಕು ಸಂಕುಲವೇ ಅಜ್ಜಿಯ ಶಾಪವನ್ನು ಕೇಳಿಸಿಕೊಳ್ಳಬೇಕಾಗಿತ್ತು. ಬೆಕ್ಕಿನ ತಲೆ ಕಂಡರೂ ಕಾಲಪ್ಪಳಿಸಿ ‘ತಲೆ ಕುಟ್ಟುಲೇ ತಂದಿ’ ಎಂದು ಬೊಬ್ಬರಿಯುತ್ತಿದ್ದಳು. ಪೇಟೆಂಟ್ ಇದ್ದ ಈ ಡೈಲಾಗ್ನ್ನು ಯಾರಾದರೂ ಗೇಲಿ ಮಾಡಿದರೆ ಅವರ ಗ್ರಹಚಾರ ಬಿಡಿಸುತ್ತಿದ್ದಳು.

(ಶುಭಶ್ರೀ ಭಟ್ಟ)

ಹೀಗಿರುವಾಗ ಮಾರುಮನೆ ಹಿತ್ಲಿನ ನಾಗ್ರಜಣ್ಣ ನಾಯಿಮರಿಯೊಂದನ್ನು ಸಾಕತೊಡಗಿದ. ಮೊದಲೇ ಶ್ವಾನ ಪ್ರೇಮಿಗಳಾಗಿದ್ದ ನಾನು ತಂಗಿ ರಜೆಯಿದ್ದಾಗಲೆಲ್ಲ ಅವರ ಮನೆಗೆ ಹೋಗಿ ನಾಯಿಯೊಟ್ಟಿಗೆ ಆಡಿ ಬರುವುದು ಮಾಡುತ್ತಿದ್ದೆವು. ಚೂರು ಸಲಿಗೆ ಆದ ನಂತರ ಎರಡನೇ ಸುತ್ತಿನ ಊಟಕ್ಕೆ ನಮ್ಮನೆಗೆ ಬಂದು ಉಂಡು, ಚೂರು ಮಲಗಿ ಚಾ ಸಮಯದಲ್ಲಿ ಹಾಕುವ ಕುರುಕು ತಿಂದು ಮನೆಗೆ ಹೋಗುವುದು ಅವನಿಗೆ ರೂಢಿಯಾಯ್ತು. ನಾಗ್ರಾಜಣ್ಣ ಚಂದನೆಯ ಹೆಸರಿಟ್ಟಿದ್ದರೂ, ಸತೀಶಣ್ಣ ಕೊಟ್ಟ ಪೊಕ್ಕ ಎಂಬ ಹೆಸರು ನಮ್ಮ ಮಕ್ಕಳಿಗೆ ಬಹಳವೇ ಸೊಗಸೆನಿಸಿ, ಪೊಕ್ಕಣ್ಣನೆಂದು ಮರಳಿ ನಾಮಕರಣವಾಯ್ತು. ಇತ್ತ ಜಯರಾಮಜ್ಜನ ಮನೆಯಲ್ಲೊಂದು ಪಂಡು ಎಂಬ ಮುದಿಯನಿದ್ದ. ಅವನು ಬೆಳಗಿನ ದೋಸೆ ಪಾಳಿಗಷ್ಟೆ ಬರುವವನು. ಪರಮ ವೈರಿಗಳಾದ ಪಂಡು & ಪೊಕ್ಕಣ್ಣನಿಗೆ ನಮ್ಮ ಮನೆಯೇ ಗಡಿ. ಅವನು ಬಂದಾಗ ಇವನು ಬರನು, ಇವನು ಬಂದಾಗ ಅವನು ಬರ. ಅದು ಹೇಗೆ ಲಿಖಿತವಿಲ್ಲದೇ ಅದ್ಯಾವ ಪಂಚಾಯ್ತದಲ್ಲಿ ಒಪ್ಪಂದ ಮಾಡಿಕೊಂಡರೋ ನಮಗಿನ್ನೂ ಗೊತ್ತಾಗಲೇ ಇಲ್ಲ.

ಈ ಪೊಕ್ಕಣ್ಣ ಶತ ತುಂಟ, ಕಣ್ಣಲ್ಲೇ ಅವನ ತುಂಟತನ ಇಣಕುತ್ತಿತ್ತು. ಒಂದು ಕಿವಿ ನೆಟ್ಟಗೆ ಮಾಡಿ, ಮತ್ತೊಂದನ್ನು ಮಡಿಸಿದ ಅಂದರೆ ಅವನೇನೋ ತರಲೆ ಮಾಡುತ್ತಾನೆಂದು ನಮಗೆ ಖಾತ್ರಿಯಾಗಿತ್ತು. ಮಟ ಮಟ ಮಧ್ಯಾಹ್ನ ಎಣ್ಣೆ ಪಳಚಿಕೊಂಡು ಹಂಡೆತುಂಬಾ ಬೀಸಿನೀರನ್ನು ಸ್ನಾನ ಮಾಡಿ, ಒದ್ದೆ ಸೀರೆಯನ್ನುಟ್ಟು ಬರುವ ಅಜ್ಜಿಗೆ ಅಡ್ಡಲಾಗಿಯೇ ಮಲಗುತ್ತಿದ್ದ ಪೊಕ್ಕಣ್ಣ. ಅವನು ಮಲಗಬಾರದೆಂದು ಕೊಡಪಾನಗಟ್ಟಲೆ ನೀರು ಹೊಯ್ದಿಟ್ಟು ಸ್ನಾನಕ್ಕೆ ಹೋಗುತ್ತಿದ್ದರು. ಆದರೂ ಕಾಲು ಒರೆಸುವ ಗೋಣಿಚೀಲವನ್ನೆಳೆದುಕೊಂಡು ಬೇಕಂತಲೇ ಬಚ್ಚಲಮನೆ ಬುಡದಿ ಮಲಗಿ ಸತಾಯಿಸುತ್ತಿದ್ದ ಅಂವ. ಅಜ್ಜಿ ಬಚ್ಚಲ ಮನೆ ಬಾಗಿಲು ತೆಗೆಯುವಷ್ಟರಲ್ಲಿ ಛಂಗನೆ ಜಿಗಿದು ನಾಲಗೆ ಅಣುಕಿಸಿ ಅವಳ ಕೋಪ ನೆತ್ತಿಗೇರುವಂತೆ ಮಾಡುತ್ತಿದ್ದ. ಒದ್ದೆ ಸೀರೆ ಕಳಚಿ ಮಡಿಸೀರೆಯನ್ನುಟ್ಟು ಮಡಿನೀರು ತೆಗೆದುಕೊಂಡು ಬರುವಾಗ ಗಿರಗುಟ್ಟುವ ಅವನ ಬಾಲವೇನಾದರೂ ಸೋಕಿತೋ, ಹಿಡಿಶಾಪ ಹಾಕುತ್ತ ಮತ್ತೆ ಸ್ನಾನ ಮಾಡಿ ಬರುತ್ತಿದ್ದಳು. ಮರುದಿನ ಪೊಕ್ಕಣ್ಣನ ಮೇಲಿನ ಸಿಟ್ಟೆಲ್ಲಾ ಪಂಡುವಿನ ಮೇಲಿನ ಪ್ರೀತಿಯಾಗಿ ಪರಿವರ್ತನೆಯಾಗುತ್ತಿದ್ದುದರ ಅರಿವು ಅವಳಿಗಿರಲೇ ಇಲ್ಲ.

ನಾವು ಕ್ಕೋ ಕ್ಕೋ, ಕಬ್ಬಡಿ, ಕುಂಟಾಬಿಲ್ಲೆಯಾಡುವಾಗ ನಾನು ಒಬ್ಬ ಆಟಗಾರನೆಂದು ತೋರಿಸಿಕೊಳ್ಳಲು ಮಧ್ಯ ನುಗ್ಗಿ ನಮ್ಮನ್ನು ಬೀಳಿಸಿಯೇ ಬಿಡುತ್ತಿದ್ದ. ಕಣ್ಣಾ ಮುಚ್ಚಾಲೆಯಾಡುವಾಗಲಂತೂ ನಾವು ಅಡಗಿದ್ದಲ್ಲಿಯೇ ಶ್ವಾಸ ಬಿಡುತ್ತಾ ಕುಳಿತು ಬೇಗ ಸೋಲುವಂತೆ ಮಾಡುತ್ತಿದ್ದ. ಮುಟ್ಟಾಟ ಆಡುವಾಗ ಕಿವಿಗೆ ಗಾಳಿಹೊಕ್ಕಿದ ಮಳ್ಳು ಪ್ರೇತದ ತರಹ ಎಲ್ಲೆಂದರಲ್ಲಿ ಓಡಾಡಿ ದಾಂಧಲೆಯಬ್ಬಿಸುತ್ತಿದ್ದ. ಪರೀಕ್ಷೆಗೆ ಓದಲೆಂದು ತೋಟದ ಪಾಗಾರದಲ್ಲಿ ಕುಳಿತಾಗ ಬಂದವನ ನಿರ್ಲಕ್ಷಿಸಿದೆವೆಂದು, ಬೇಕಂತಲೇ ಓಡೋಡಿ ಬಂದು ಗಕ್ಕನೆ ನಿಂತು ಗಮನ ಸೆಳೆಯಲು ನೋಡಿದ್ದಿದೆ. ಚೂ, ಹಾ ಎಂದು ಮಂಗನ ಓಡಿಸಿದರೆ ಇವನೂ ನಿಂತು ಗರ್ರಂದಿದ್ದಿದೆ. ಮಳೆಗಾಲದಲ್ಲಿ ಒಮ್ಮೊಮ್ಮೆ ರಾತ್ರಿ ಮನೆಗೆ ಹಿಂತಿರುಗಲೂ ಆಗದೇ ನಮ್ಮನೆಯಲ್ಲಿ ಇದ್ದಾಗ ನಮಗಂತೂ ಅವನ ಹಾಸಿಗೆ ಮಾಡುವ ಸಂಭ್ರಮ. ಗೋಣಿಯ ಮೇಲೆ ಸಿಮೆಂಟ್ ಚೀಲ, ಅದರ ಮೇಲೆ ತಿರುಗಿ ತಿರುಗಿ ಮುದುಡಿಕೊಂಡು ಮಲಗಿದ ಮೇಲೆ ಅವನ ಮೇಲೆ ಮತ್ತೊಂದು ದಿನಪತ್ರಿಕೆ,ಗೋಣಿಯನ್ನು ಹೊದೆಸಿ ಮಲಗುತ್ತಿದ್ದೆವು. ಮೈಮೇಲಿನ ಹೊದಿಕೆ ಬೆಳಗಾಗುವಷ್ಟರಲ್ಲಿ ಕೆಳಗಡೆಗೆ ಹಾಸಾಗಿರುತ್ತಿತ್ತು.

ನಾನು ಧಾರವಾಡದಿಂದ ಮನೆಗೆ ರಜೆಕ್ಕೆಂದು ಬಂದಾಗ ಕೈ ಕಾಲು ಮುಖ ತೊಳೆಯುವುದರಲ್ಲಿ ನಮ್ಮನೆಯಲ್ಲಿರುತ್ತಿದ್ದ. ತುಂಬಾ ದಿನಗಳ ನಂತರ ನೋಡಿದ ಖುಶಿಗೆ ಕುಸುಗುಟ್ಟುತ್ತಾ ಕಾಲು ಸುತ್ತಿ, ಮೈಮೇಲೆ ಹಾರಿ ಮುದ್ದಿಸುತ್ತಿದ್ದ. ಅವನಿಗೆ ನಾಮವಿಟ್ಟು ದುಪ್ಪಟ್ಟದ ಅಂಗಿ ಹಾಕಿ, ಎಲೆಯ ಕಿರೀಟ ಮಾಡಿ ಅಲಂಕರಿಸಿ ‘ರಾಜಾಧಿರಾಜ ಪೊಕ್ಕೇಶ್ವರ’ ಎಂದೆಲ್ಲಾ ನಾವು ನಗುವಾಗ ಅವನಿಗೂ ಖುಶಿಯಾಗಿ ಅಂಗಳದ ತುಂಬೆಲ್ಲಾ ಓಡಾಡಿ ದುಪ್ಪಟ್ಟಾವನ್ನು ಕೆಳಗೆ ಚೆಲ್ಲಿ ಕಚ್ಚಿಕೊಂಡು ಓಡುತ್ತಿದ್ದ. ಒಂದಿನ ಬೊಮ್ಮು ಬಂದು ‘ಪೊಕ್ಕಣ್ಣ ಹೋದ್ನಂತಲ್ರಾ’ ಎಂದಿದ್ದಾಗ ತಂಗಿ ಬಿಕ್ಕುತ್ತಾ ಫೋನ್ ಮಾಡಿದ್ದು ಎಲ್ಲವೂ ನಿನ್ನೆ ಮೊನ್ನೆಯ ಹಾಗಿದೆ. ಅವನಿಲ್ಲದೇ ಆರೇಳು ವರುಷವೀಗ.

(ಕೃತಿ: ಹಿಂದಿನ ನಿಲ್ದಾಣ (ಲಲಿತ ಪ್ರಬಂಧಗಳ ಸಂಕಲನ), ಲೇಖಕರು: ಶುಭಶ್ರೀ ಭಟ್ಟ, ಪ್ರಕಾಶಕರು: ವೀರಲೋಕ ಬುಕ್ಸ್‌, ಬೆಲೆ: 120/-)