ಕಾಂಗ್ರೆಸ್ ಇಬ್ಭಾಗವಾದಮೇಲೆ ವಿಧೇಯತೆಯೇ ಬಡ್ತಿಗೆ ರಾಜಮಾರ್ಗವಾಯಿತು. ಪ್ರತಿಭಟನೆ ತೋರಿದವರು ವೃತ್ತಿಯಲ್ಲಿ ಹಿನ್ನಡೆ ಅನುಭವಿಸುತ್ತಾರೆನ್ನುವ ನಂಬಿಕೆ ಗಟ್ಟಿಯಾಯಿತು. ತುರ್ತು ಪರಿಸ್ಥಿತಿಯಲ್ಲಿ ಈ ಎಲ್ಲವೂ ಮತ್ತೊಂದು ಸ್ತರಕ್ಕೆ ಹೋಯಿತು. ಯಾವುದೇ ಅಧಿಕೃತ ಅಥವಾ ಅನಧಿಕೃತ ಆದೇಶಗಳನ್ನು ಟೀಕಿಸಿವುದು, ಧಿಕ್ಕರಿಸುವುದು – ಉದ್ಯೋಗಕ್ಕೂ ದೇಹಕ್ಕೂ ಅಪಾಯಕಾರಿಯಾಗಿತ್ತು.
ಎಂ.ಎಸ್.‌ ಶ್ರೀರಾಮ್‌ ಅನುವಾದಿಸಿದ ವೈ.ವಿ. ರೆಡ್ಡಿಯವರ ಆತ್ಮಕಥನದ ಆಯ್ದ ಭಾಗದ ಎರಡನೆಯ ಕಂತು

 

ಸರ್ಕಾರಿ ಅಧಿಕಾರಿಗಳು ಅನೇಕ ದ್ವಂದ್ವಗಳನ್ನು ಎದುರಿಸಬೇಕು. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾಗಿ ಸರ್ಕಾರದ ಕಾರ್ಯವೈಖರಿ ಹೊಸದಾಗಿತ್ತು. ಅಧಿಕಾರಿಗಳಾಗಿ ನಾವೂ ಈ ಬದಲಾವಣೆಯ ನಡುವಿನಲ್ಲಿದ್ದೆವು. ನಮ್ಮ ಕಾರ್ಯವೈಖರಿ, ಕೆಲಸದ ಬಗ್ಗೆ ಯೋಚಿಸುವ ರೀತಿ, ದ್ವಂದ್ವದಲ್ಲಿತ್ತು. ಮೊದಲಿಗೆ ಉದ್ದೇಶ ಮತ್ತು ಅದನ್ನು ಸಾಧಿಸುವ ಮಾರ್ಗ ಯಾವುದೆನ್ನುವ ಪ್ರಶ್ನೆ. ಒಟ್ಟಾರೆ ಉದ್ದೇಶವು ಉನ್ನತಮಟ್ಟದ್ದಾಗಿದ್ದರೂ ಅದನ್ನು ಸಾಧಿಸಲು ಉಪಯೋಗಿಸಿದ್ದು ನಿರಂಕುಶದ ಮಾರ್ಗ. ಸಾಂಸ್ಥಿಕ ವ್ಯವಸ್ಥೆಯು ನಿರಂತರವಾಗಿ ಶಿಥಿಲವಾಗುತ್ತಿತ್ತು. ಆಡಳಿತಾರೂಢರು ತಮಗೆ ಬದ್ಧವಾಗಿರುವ ಅಧಿಕಾರವರ್ಗ, ನ್ಯಾಯಾಲಯದತ್ತ ಒಲವು ತೋರಿದರು. ಅವರು ಮೆಚ್ಚಿದವರಿಗೆ ಬಡ್ತಿ, ಉತ್ತಮ ಸ್ಥಾನದ ಪ್ರತಿಫಲವಿತ್ತಾದ್ದರಿಂದ ಅಧಿಕಾರಿಗಳೂ ರಾಜಕೀಯ ಒಲವುಗಳನ್ನು ತೋರುತ್ತಿದ್ದರು. ಐಎಎಸ್‌ ನ ತ್ರಿವಳಿ ಸಿದ್ಧಾಂತವಾದ – ವಸ್ತುನಿಷ್ಠತೆ, ಅನಾಮಿಕತೆ, ಮತ್ತು ತಟಸ್ಥ ನಿಲುವಿಗೆ ವಿರುದ್ಧವಾದ ಅಧಿಕಾರಿವರ್ಗವಿತ್ತು. ನಮ್ಮ ವ್ಯಕ್ತಿತ್ವವೇನೆನ್ನುವ ಬಿಕ್ಕಟ್ಟು ಎದುರಾಯಿತು. ತಕ್ಷಣಕ್ಕೆ ಹೆಚ್ಚೇನೂ ಅನ್ನಿಸಲಿಲ್ಲವಾದರೂ, ನಮ್ಮ ದೇಶ ಮುಂದೆ ಹಿಡಿವ ದಾರಿಯನ್ನು ಇದು ಸೂಚಿಸಿತ್ತು.

ಅಧಿಕಾರವರ್ಗದಲ್ಲಿ ಇದಕ್ಕೆ ಮಿಶ್ರ ಪ್ರತಿಕ್ರಿಯೆಯಿತ್ತು. ಕೆಲವರು ರಾಜಕೀಯದ ಪರಿವೆಯೇ ಇಲ್ಲದೇ ತಮ್ಮ ಕೆಲಸವನ್ನು ಮುಂದುವರೆಸಿದರು. ಕೆಲವರಿಗೆ ಇದು ಅಸಹನೀಯವಾಗಿತ್ತು. ಬಡವರ ಪರವಿದ್ದ ಎಡಪಂಥೀಯರಿಗೆ ಗರೀಬಿ ಹಠಾವೊ ಕರೆಯಿಂದಾಗಿ ಇಂದಿರಾಗಾಂಧಿ ಪ್ರಿಯರಾದರು. ಆಕೆ ತನ್ನ ಪಕ್ಷಕ್ಕೆ ವಾಮಪಂಥೀಯರನ್ನು ಸ್ವಾಗತಿಸಿದರು. ಬಲ ಮತ್ತು ನಡುಪಂಥೀಯ ರಾಜಕೀಯ ಪಕ್ಷಗಳನ್ನು ಒಳಗಿನಿಂದ ಆಕ್ರಮಿಸಿಕೊಳ್ಳಬೇಕೆಂಬ ವ್ಯೂಹದೊಂದಿಗೆ ವಾಮಪಂಥೀಯರು ಇಂದಿರಾ ಕಾಂಗ್ರೆಸ್ಸನ್ನು ಸೇರಿ ನೀತಿಗಳನ್ನು ಎಡಕ್ಕೆ ಎಳೆಯುವ ಹುನ್ನಾರ ಹೂಡಿದರು. ಬಡವರಿಗೆ ಆರ್ಥಿಕ ಸೇವೆಗಳನ್ನೊದಗಿಸುವ ಸಲುವಾಗಿ ದೊಡ್ಡ ಬ್ಯಾಂಕುಗಳನ್ನು ರಾಷ್ಟ್ರೀಕರಿಸಿದರು. ಕಲ್ಲಿದ್ದಲ ಗಣಿಗಳನ್ನು ರಾಷ್ಟ್ರೀಕರಿಸಿದ್ದರಿಂದ ಕೆಲಸಗಾರರಿಗೆ ಖುಷಿಯಾಯಿತು. ಏಕಸ್ವಾಮ್ಯತೆ ಮತ್ತು ಮಾರುಕಟ್ಟೆ ಉಲ್ಲಂಘನಾ ಕಾಯಿದೆಯನ್ನು ರೂಪಿಸಲಾಯಿತು.

ಪ್ರಗತಿಪರ ಬುದ್ಧಿಜೀವಿಗಳಾದ ಕುಮಾರಮಂಗಳಂ ಮತ್ತು ಕೆವಿ ರಘುನಾಥರೆಡ್ಡಿ ಪ್ರಾಮುಖ್ಯತೆಯನ್ನು ಪಡೆದರು. ಬಡತನದ ನಿರ್ಮೂಲನದ ಉತ್ಸಾಹವನ್ನು ನಾವೆಲ್ಲಾ ಸ್ವಾಗತಿಸಿದೆವಾದರೂ, ಪ್ರಗತಿಪರ ನೀತಿಗಳನ್ನು ಜಾರಿ ಮಾಡಲು ಬಳಸಿದ ವಿಧಾನದ ಬಗ್ಗೆ ತೀವ್ರ ಅಸಂತೃಪ್ತಿಯಿತ್ತು. ಕಾಂಗ್ರೆಸ್ಸು ಇಬ್ಭಾಗವಾಗುವುದರಿಂದ ಐಎಎಸ್‌ ನಲ್ಲಿದ್ದ ನಾವು ಅತಂತ್ರರಾಗುತ್ತಿದ್ದೇವೆ ಎನ್ನುತ್ತಿರುವಾಗ ತುರ್ತುಪರಿಸ್ಥಿತಿಯ ಅನಿರೀಕ್ಷಿತ ಪ್ರಹಾರವೂ ನಡೆಯಿತು.

ಜೂನ್ 25, 1975ರಂದು ಇಂದಿರಾಗಾಂಧಿ ತುರ್ತುಪರಿಸ್ಥಿತಿಯನ್ನು ಘೋಷಿಸಿದರು. ಅಂದು ಮುಖ್ಯ ಲೆಕ್ಕಿಗರ ಕಛೇರಿಯಲ್ಲಿ ಭಾಷಣವಿತ್ತು. ಯೋಜನೆಯ ವಿಷಯದ ಬಗ್ಗೆ ಮಾತಾಡಬೇಕಿದ್ದ ಭಾಷಣವನ್ನು ತಾಂತ್ರಿಕ ನೆಲೆಯಲ್ಲಿ ಪ್ರಾರಂಭಿಸಿದರೂ, ಒಂದು ಹಂತದಲ್ಲಿ ತಡೆಯಲಾಗದೇ – ತುರ್ತುಪರಿಸ್ಥಿತಿಯ ವಿರುದ್ಧ ಮಾತನಾಡಿಬಿಟ್ಟೆ. ಇದು ಪ್ರಜಾತಾಂತ್ರಿಕ ವ್ಯವಸ್ಥೆಯ ಅವಸಾನವೆಂದೂ, ದೇಶದಲ್ಲಿ ಈ ರೀತಿ ಆಗುತ್ತಿರುವುದನ್ನು ನಂಬುವುದಕ್ಕೆ ಆಗುತ್ತಿಲ್ಲವೆಂದೂ ಹೇಳಿದೆ.

ತುರ್ತುಪರಿಸ್ಥಿತಿಯು ಸ್ವತಂತ್ರ ಭಾರತದ ಆದರ್ಶಗಳಿಗೆ ವಿರುದ್ಧವಾಗಿತ್ತು. ಸರ್ಕಾರದ ಸೇವೆಗಳು ಶಿಸ್ತಿನಿಂದ, ಸಮಯಾನುಸಾರ ದಕ್ಷತೆಯಿಂದ ನಡೆಯುತ್ತಿದ್ದವು. ಸರ್ಕಾರಿ ಅಧಿಕಾರಿಗಳು ಹೆಚ್ಚು ಕೆಲಸ ಮಾಡುತ್ತಿದ್ದರು. ಲಂಚ ಕಡಿಮೆಯಾಯಿತು. ರೈಲುಗಳು ಸಮಾಯನುಸಾರ ಓಡುತ್ತಿದ್ದುವು. ಆದೇಶಗಳನ್ನು, ಅಧಿಕಾರವರ್ಗ ಪೂರ್ಣ ಬಲದೊಂದಿಗೆ ಕಾರ್ಯಗತಗೊಳಿಸುತ್ತಿತ್ತು. ದಕ್ಷತೆಯ ಕಾರಣಕ್ಕೇ ಅನೇಕರು ತುರ್ತುಪರಿಸ್ಥಿತಿಯನ್ನು ಸ್ವಾಗತಿಸಿದ್ದರು. ಕೆಲವರು ಯಾವುದನ್ನೂ ಹಚ್ಚಿಕೊಳ್ಳಲಿಲ್ಲ. ಮೇಲಿಂದ ಬಂದ ಆದೇಶ ಪಾಲಿಸುವುದೇ ಕರ್ತವ್ಯವೆಂದು ಸುಮ್ಮಗಿದ್ದರು. ನಾಯಕತ್ವ ಬದಲಾದಾಗ ಹೀಗಾಗುವುದು, ನಾಯಕತ್ವ ಮತ್ತೆ ಬದಲಾದರೆ ಪರಿಸ್ಥಿತಿಯೂ ಬದಲಾಗುತ್ತೆಂದು ನಂಬಿದ್ದರು. ನನ್ನಂಥವರು ವಿಚಲಿತಗೊಂಡರು. ಪತ್ರಿಕೆಗಳ ಬಾಯಿಕಟ್ಟಿಸಿ, ರಾಜಕೀಯ ನಾಯಕರನ್ನು ಬಂಧಿಸಿ ಸೆರೆಮನೆಗೆ ತಳ್ಳಿ, ಪ್ರತಿಭಟಿಸುವವರನ್ನು ನಾಪತ್ತೆಯಾಗಿಸಿ, ಸರ್ಕಾರದ ಕಾರ್ಯಕ್ರಮಗಳಿಗೆ ಬ್ಯಾಂಕುಗಳಿಂದ ದುಡ್ಡು ಒದಗಿಸಿದ್ದ ಈ ಪ್ರಕ್ರಿಯೆ ನೈತಿಕವಾಗಿಯೂ ಬೌದ್ಧಿಕವಾಗಿಯೂ ವಾಕರಿಕೆ ತರಿಸುತ್ತಿತ್ತು. ಗುಪ್ತದಳದವರು ಕಾರಿನ ಚಾಲಕರನ್ನು ಉಪಯೋಗಿಸಿ ಮಾಲೀಕರ ಮೇಲೆ ಕಣ್ಣಿಡುವುದು, ಖಾಲಿ ಹಾಳೆಯಲ್ಲಿ ಬಂಧನದ ವಾರೆಂಟುಗಳಿಗೆ ನ್ಯಾಯಾಧೀಶರಿಂದ ದಸ್ಕತ್ತು ಹಾಕಿಸುತ್ತಿದ್ದ ಕಥೆಗಳನ್ನು ಕೇಳಿದೆವು. ಅಧಿಕಾರಿಗಳು ಮತ್ತು ನಾಯಕರ ದೂರವಾಣಿಗಳ ಮೇಲೆ ಸರ್ಕಾರ ನಿಗಾ ಇಟ್ಟಿತ್ತು. ‘ನೀನು ದೂರವಾಣಿಯಲ್ಲಿ ಕಡಿಮೆ ಮಾತಾಡಿದರೆ ಒಳ್ಳೆಯದೇನೋ..’ ಅಂತ ಹಿಂಜರಿಯುತ್ತಲೇ ವಿಠಲ್ ಒಂದು ದಿನ ಹೇಳಿದರು. ಅದೇನು ಸರ್ ಅಂತ ಕೇಳಿದರೇ ಸ್ವತಃ ಮುಖ್ಯಮಂತ್ರಿಗಳೇ ‘ಆ ವೇಣುಗೋಪಾಲರೆಡ್ಡಿಗೆ ನೀನೇ ಹೇಳಯ್ಯಾ..’ ಅಂತ ವಿಠಲ್‌ ಗೆ ಹೇಳಿದ್ದರಂತೆ!

ಕಾಂಗ್ರೆಸ್ ಇಬ್ಭಾಗವಾದಮೇಲೆ ವಿಧೇಯತೆಯೇ ಬಡ್ತಿಗೆ ರಾಜಮಾರ್ಗವಾಯಿತು. ಪ್ರತಿಭಟನೆ ತೋರಿದವರು ವೃತ್ತಿಯಲ್ಲಿ ಹಿನ್ನಡೆ ಅನುಭವಿಸುತ್ತಾರೆನ್ನುವ ನಂಬಿಕೆ ಗಟ್ಟಿಯಾಯಿತು. ತುರ್ತು ಪರಿಸ್ಥಿತಿಯಲ್ಲಿ ಈ ಎಲ್ಲವೂ ಮತ್ತೊಂದು ಸ್ತರಕ್ಕೆ ಹೋಯಿತು. ಯಾವುದೇ ಅಧಿಕೃತ ಅಥವಾ ಅನಧಿಕೃತ ಆದೇಶಗಳನ್ನು ಟೀಕಿಸಿವುದು, ಧಿಕ್ಕರಿಸುವುದು – ಉದ್ಯೋಗಕ್ಕೂ ದೇಹಕ್ಕೂ ಅಪಾಯಕಾರಿಯಾಗಿತ್ತು. ತುರ್ತುಪರಿಸ್ಥಿತಿಯ ಕಾಲದಲ್ಲಿ ಏಕಪಕ್ಷೀಯವಾಗಿದ್ದ ಅಧಿಕೃತ ಆದೇಶಗಳನ್ನು ಪಾಲಿಸುವುದು ವಾಕರಿಕೆಯ ಕೆಲಸದಂತೆ ಕಾಣಿಸುತ್ತಿತ್ತು. ಆದರೆ ಐಎಎಸ್ ಅಧಿಕಾರಿಯೆಂಬ ನೆಲೆಯಲ್ಲಿ ಸರ್ಕಾರದ ಭಾಗವಾಗಿದ್ದರಿಂದ ಇವುಗಳನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿತ್ತು. ನಾವು ನೈತಿಕತೆ ಮತ್ತು ವೃತ್ತಿಯ ಕಾರ್ಯದಕ್ಷತೆಯ ನಡುವೆ ಒಂದನ್ನು ಆರಿಸಿಕೊಳ್ಳಬೇಕಿತ್ತು. ಆತ್ಮಸಾಕ್ಷಿಗೂ ಕರ್ತವ್ಯಕ್ಕೂ ನಡುವಿನ ಸಮತೋಲನವನ್ನು ಕಾಪಾಡುವ ಭಿನ್ನ ದಾರಿಯನ್ನು ಒಬ್ಬೊಬ್ಬರೂ ಕಂಡುಕೊಂಡರು.

ದೇಶದ ಭಿನ್ನ ಪ್ರಾಂತಗಳಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿ ಮಾಡಿದ ತೀವ್ರತೆಯಲ್ಲಿ ಭಿನ್ನತೆಯಿತ್ತು. ಕೆಲವು ರಾಜ್ಯಗಳಲ್ಲಿ ತುರ್ತುಪರಿಸ್ಥಿತಿಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಅಂದಿನ ನೀತಿಗಳನ್ನು ಯಾವ ಜವಾಬ್ದಾರಿಯ ಹಂಗಿಲ್ಲದೇ ಪಾಲಿಸಿದ್ದೂ ಆಯಿತು. ತುರ್ತು ಪರಿಸ್ಥಿತಿಯ ತಂತ್ರಗಳು ನಿಜಕ್ಕೂ ಖಂಡನೀಯವಾಗಿದ್ದುವು. ಆದರೆ ಅದರ ಉದ್ದೇಶದ ವಿರುದ್ಧ ವಾದಿಸುವುದು ಕಷ್ಟವಿತ್ತು. ರೈಲು ಸಮಯಕ್ಕೆ ಬರಲಿ, ಜನಸಂಖ್ಯೆ ನಿಯಂತ್ರಣದಲ್ಲಿರಲಿ, ಸರ್ಕಾರ ಶಿಸ್ತಿನಿಂದ ಕೆಲಸ ಮಾಡಲಿ ಎಂದು ಎಲ್ಲರೂ ಬಯಸುತ್ತೇವೆ. ಆಂಧ್ರಪ್ರದೇಶದಲ್ಲಿ ವೆಂಗಳರಾವು ಪ್ರಬುದ್ಧ ನಾಯಕರಾಗಿದ್ದರು. ಹೀಗಾಗಿ ತುರ್ತು ಪರಿಸ್ಥಿತಿಯನ್ನು ಅತಿರೇಕಕ್ಕೆ ಎಳೆಯದೇ ತಮ್ಮ ಆತ್ಮಸಾಕ್ಷಿಯನ್ನು ರಾಜಿ ಮಾಡಿಕೊಳ್ಳದೇ ಜಾರಿ ಮಾಡಿದರು. ವೆಂಗಳರಾವು ತೋರಿದ ಸಂಯಮದ ನೀತಿಯಿಂದಾಗಿಯೇ, ಆ ನಂತರ 1977ರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ಸು ದೇಶಾದ್ಯಂತ ಕೆಟ್ಟ ಸೋಲನ್ನನುಭವಿಸಿದರೂ ನಮ್ಮ ರಾಜ್ಯದಲ್ಲಿ ನಂದ್ಯಾಲ ಬಿಟ್ಟು ಮಿಕ್ಕೆಲ್ಲ ಸ್ಥಾನಗಳನ್ನೂ ಗಿಟ್ಟಿಸಿಕೊಂಡಿತ್ತು!

ಮುಖ್ಯಮಂತ್ರಿ ವೆಂಗಳರಾವು ನನ್ನನ್ನು ಕರೆಯಿಸಿ, ಹೈದರಾಬಾದಿನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲು ಹೇಳಿದರು. ಈಗ ಬಿಡಿಯಾಗಿರುವ ರಂಗಾರೆಡ್ಡಿ ಜಿಲ್ಲೆ ಕೂಡ ಆಗ ಹೈದರಾಬಾದಿನ ಭಾಗವೇ ಆಗಿತ್ತು. ‘ಸರ್ ನಿಮಗೆ ಗೊತ್ತೇ ಇದೆ. ನನಗೆ ಜಿಲ್ಲಾಧಿಕಾರಿಯಾಗಿ ಕೆಲಸಮಾಡಬೇಕು ಎಂಬ ಆಸೆಯೇನೂ ಇಲ್ಲ. ಈಗಾಗಲೇ ಒಮ್ಮೆ ಜಿಲ್ಲಾಧಿಕಾರಿಯಾಗಿದ್ದೆ. ಅಲ್ಲಿ ರಾಜಕೀಯದ ಒತ್ತಡ ಜಾಸ್ತಿ. ಆ ಸ್ಥಾನ ನನಗೆ ಹೇಳಿದ್ದಲ್ಲ…’ ಎಂದು ಉತ್ತರಿಸಿದೆ. ಮುಖ್ಯಮಂತ್ರಿ ಪಟ್ಟು ಬಿಡಲಿಲ್ಲ.

‘ಯೋಚನೆ ಬೇಡ. ಯಾವುದೇ ಪ್ರಭಾವಕ್ಕೆ ಬಗ್ಗಬೇಡಿ. ಈ ತರಹದ ಒತ್ತಡಗಳಿಗೆ ಮಣಿಯುವುದಿಲ್ಲ ಅಂತಲೇ ನಿಮ್ಮನ್ನು ಕರೆಸಿದ್ದೇನೆ. ಇಲ್ಲಿ ನಾನಿದ್ದೀನಿ…..’

‘ಮತ್ತೆ ಮಂತ್ರಿಗಳು ಒತ್ತಡ ಹೇರಿದರೆ?’

‘ಅವರು ಹೇಳಿದ್ದನ್ನೆಲ್ಲಾ ಕೇಳಿ. ಕೈಲಾದರೆ ಮಾಡಿ. ಆಗದ್ದನ್ನು ಮಾಡಬೇಡಿ..’

‘ನೀವೇ ಒತ್ತಡ ಹಾಕಿದರೆ?’

‘ಆಗಲೂ ಅಷ್ಟೇ. ಒಳ್ಳೆಯದಾದರೆ ಮಾಡಿ. ನಿಮಗೆ ಸರಿ ಅನ್ನಿಸದಿದ್ದರೆ ಅದನ್ನು ಮಾಡಬೇಡಿ. ಏನೇ ಕಷ್ಟಬಂದರೂ ತಕ್ಷಣ ಹೇಳಿ…’ ಎಂದು ಆಭಯ ನೀಡಿದರು. ಅವರ ಮಾತಿನಂತೆ ಹೈದರಾಬಾದ್ ಜಿಲ್ಲಾಧಿಕಾರಿಯಾದೆ. ಹೈದರಾಬಾದಿನ ಸುತ್ತಮುತ್ತಲಿದ್ದ ಹಳ್ಳಿಗಳ ಬಗ್ಗೆ ಹೆಚ್ಚು ಗಮನವನ್ನು ಕೊಡುತ್ತಿಲ್ಲ ಅನ್ನಿಸಿತ್ತು. ಹೈದರಾಬಾದ್ ಜಿಲ್ಲೆಯನ್ನು ನಗರ ಮತ್ತು ಗ್ರಾಮೀಣವೆಂದು ಇಬ್ಭಾಗ ಮಾಡಬೇಕೆಂದು ಪ್ರಸ್ತಾವನೆ ಮಂಡಿಸಿದೆ. ಅನೇಕ ವರ್ಷಗಳನಂತರ ಸರ್ಕಾರ ಅದನ್ನು ಒಪ್ಪಿ ರಂಗಾರೆಡ್ಡಿ ಜಿಲ್ಲೆಯನ್ನು ರಚಿಸಿತು!

ತುರ್ತುಪರಿಸ್ಥಿತಿಯಲ್ಲಿ ಗಂಡಸರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ಜಿಲ್ಲಾಧಿಕಾರಿಗಳ ಮೇಲೆ ಒತ್ತಡವಿತ್ತು. ಹೈದರಾಬಾದಿನಲ್ಲಿ ಮುಸಲ್ಮಾನರೇ ಹೆಚ್ಚಿದ್ದರು. ಅವರ ರಿವಾಜಿನ ಪ್ರಕಾರ ಇದು ಪಾಪ. ಹೀಗಾಗಿ ಕುಟುಂಬ ನಿಯಂತ್ರಣ ಯೋಜನೆಯನ್ನು ಜಾರಿ ಮಾಡಲು ಹಿಂಸೆಯಾಗುತ್ತಿತ್ತು.

‘ಬಲವಂತವಾಗಿ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಬಾರದು’ ಅಂತ ಎಲ್ಲ ಅಧಿಕಾರಿಗಳಿಗೂ ಹೇಳಿದ್ದೆ. ಒಮ್ಮೆ ರಾತ್ರಿಯಲ್ಲಿ ನನ್ನ ಮಗನನ್ನು ಉಸ್ಮಾನಿಯಾ ಆಸ್ಪತ್ರೆಗೆ, ಕರೆದೊಯ್ಯಬೇಕಾಯಿತು. ಮಗುವನ್ನು ಪರೀಕ್ಷೆ ಮಾಡದೇ ನನ್ನನ್ನು ನೋಡಿ ‘ನೀವು ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೀರಾ’ ಅಂತ ಕೇಳಿದರು. ‘ಮೊದಲಿಗೆ ಈ ಮಗುವನ್ನು ನೋಡಿ’ ಅಂದೆ. ಅಷ್ಟರಲ್ಲಿ ನಮ್ಮ ಸಿಬ್ಬಂದಿ ಬಂದು ನಾನು ಜಿಲ್ಲಾಧಿಕಾರಿ ಎಂದು ಹೇಳಿದಾಗ ಮಗನಿಗೆ ಚಿಕಿತ್ಸೆ ಮಾಡಿದರು! ಜಿಲ್ಲಾಧಿಕಾರಿಯ ಆದೇಶವನ್ನೂ ಜಾರಿಗೆ ತರದ ಕೆಲವು ವಿಷಯಗಳು ಇನ್ನೂ ಇವೆ ಎಂದಾಯಿತು.

ನಾನು ರಜೆ ಹಾಕಬಹುದಾದರೆ..
ನಾನು ಹೈದರಾಬಾದ್ ಜಿಲ್ಲಾಧಿಕಾರಿಯಾಗಿದ್ದಾಗ ಸಂಜಯ್ ಗಾಂಧಿ ಹೈದರಾಬಾದಿಗೆ ಬಂದರು. ವಿಮಾನ ನಿಲ್ದಾಣದಲ್ಲಿ ಆತನನ್ನು ಸ್ವಾಗತಿಸಬೇಕೆಂದು ಪ್ರೋಟೊಕಾಲ್ ವಿಭಾಗದ ಸೂಚನೆ ಬಂತು. ತಕ್ಷಣ ಮುಖ್ಯಮಂತ್ರಿಯನ್ನು ಭೇಟಿ ಮಾಡಿದೆ. ‘ಸರ್, ಅಧಿಕೃತವಾದ ಹುದ್ದೆಯಿಲ್ಲದ ವ್ಯಕ್ತಿಯನ್ನು ಹೇಗೆ ಸ್ವಾಗತಿಸಲಿ? ಇದರಿಂದ ಬಚಾವು ಮಾಡಿ, ಎಲ್ಲಿಗಾದರೂ ವರ್ಗ ಮಾಡಿ….’ ಅಂತ ಕೇಳಿದೆ.

‘ನಿಮ್ಮನ್ನು ಇಲ್ಲಿಂದ ವರ್ಗ ಮಾಡೋಲ್ಲ. ಆದರೆ ನಿಮ್ಮ ಕಷ್ಟ ಪರಿಹಾರವಾಗಬೇಕು ಅಂದರೆ ನೀವು ಆ ಹೊತ್ತಿಗೆ ರಜೆಯ ಮೇಲೆ ಹೊರಟುಹೋಗಿ’ ಎಂದರು. ಒಪ್ಪಿದೆ. ಆ ಕೋಣೆಯಿಂದ ಹೊರಬರುತ್ತಿರುವಾಗ ಅವರು… ‘ನಾನೂ ರಜೆ ಮೇಲೆ ಹೋಗೋಹಾಗಿದ್ದರೆ ಚೆನ್ನಾಗಿರುತ್ತಿತ್ತು…’ ಅಂದರು!

ಗುಪ್ತದಳದವರು ಕಾರಿನ ಚಾಲಕರನ್ನು ಉಪಯೋಗಿಸಿ ಮಾಲೀಕರ ಮೇಲೆ ಕಣ್ಣಿಡುವುದು, ಖಾಲಿ ಹಾಳೆಯಲ್ಲಿ ಬಂಧನದ ವಾರೆಂಟುಗಳಿಗೆ ನ್ಯಾಯಾಧೀಶರಿಂದ ದಸ್ಕತ್ತು ಹಾಕಿಸುತ್ತಿದ್ದ ಕಥೆಗಳನ್ನು ಕೇಳಿದೆವು. ಅಧಿಕಾರಿಗಳು ಮತ್ತು ನಾಯಕರ ದೂರವಾಣಿಗಳ ಮೇಲೆ ಸರ್ಕಾರ ನಿಗಾ ಇಟ್ಟಿತ್ತು.

ತುರ್ತು ಪರಿಸ್ಥಿತಿಯಲ್ಲಿ ವಿರೋಧಪಕ್ಷದ ನಾಯಕರನ್ನು ಬಂಧಿಸುವುದು ಸರ್ವೇಸಾಧಾರಣವಾಗಿತ್ತು. ಈ ಬಂಧನಗಳು ನನಗೆ ಇಷ್ಟವಿರಲಿಲ್ಲ, ಆದರೆ ಬಹಿರಂಗವಾಗಿ ಅದನ್ನು ವಿರೋಧಿಸಲೂ ಸಾಧ್ಯವಿರಲಿಲ್ಲ. ಇದಕ್ಕೆ ಬೇರೆ ತಂತ್ರವನ್ನು ಹುಡುಕಿದೆ. ಜಿಲ್ಲಾಧಿಕಾರಿಯಾಗಿ ನನ್ನ ಜಿಲ್ಲೆಯ ಅರೆಸ್ಟ್ ವಾರಂಟ್‌ ಗಳನ್ನು ನಾನೇ ಜಾರಿ ಮಾಡಬೇಕಿತ್ತು. ಅದು ನನಗೆ ಮುಜುಗರದ ಕೆಲಸವೆಂದು ಪೋಲಿಸು ಇಲಾಖೆಯವರಿಗೆ ಸ್ಪಷ್ಟವಾಗಿ ಹೇಳಿದ್ದೆ. ಆದರೆ ನನ್ನ ಮಾತನ್ನು ಗಂಭೀರವಾಗಿ ಅವರು ಪರಿಗಣಿಸಲಿಲ್ಲ ಅನ್ನಿಸುತ್ತದೆ. ನನ್ನ ತಮ್ಮ ರಮೇಶ ತನ್ನ ನಿಕಟ ಗೆಳೆಯ ಮತ್ತು ವಿರೋಧಪಕ್ಷದ ನಾಯಕರಾದ ವೆಂಕಯ್ಯನಾಯ್ಡು ಅವರನ್ನು ಬಂಧಿಸಲು ಹೈದರಾಬಾದ್ ಜಿಲ್ಲೆಯ ಪೋಲಿಸರು ಯೋಚಿಸುತ್ತಿದ್ದಾರೆಂದು ಹೇಳಿದ. ತಕ್ಷಣಕ್ಕೆ ಫೋನ್ ಮಾಡಿ ಈ ಬಗ್ಗೆ ಕೇಳಿದೆ. ಅವರು ಹಾಗೇನೂ ಇಲ್ಲ ಎಂದು ಹೇಳಿದರು. ನಾನು ನನ್ನ ನಿಲುವನ್ನು ಮತ್ತೆ ಸ್ಪಷ್ಟಪಡಿಸಿದೆ. ಇಂಥ ಪರಿಸ್ಥಿತಿಯಲ್ಲಿ ಈ ವಿಷಯಕ್ಕೆ ಮತ್ತಷ್ಟು ಗಮನವನ್ನು ನೀಡುತ್ತಿರಬೇಕೆನ್ನಿಸಿತು. ಆದರೂ, ವಾಸ್ತವದಲ್ಲಿ ಏನಾಗುತ್ತದೆಯೋ ಎಂದು ಊಹಿಸುವುದು ಕಷ್ಟ.

ಜೀತಪದ್ಧತಿ ಇಲ್ಲವೆಂದರೆ ಹೇಗೆ?

ತುರ್ತುಪರಿಸ್ಥಿತಿಯಲ್ಲಿ 1976ರ ಜೀತಪದ್ಧತಿ ರದ್ದತಿಯ ಕಾಯಿದೆಯನ್ನು ರೂಪಿಸಿದರು. ಹೈದರಾಬಾದ್ ಜಿಲ್ಲಾಧಿಕಾರಿಯಾಗಿದ್ದಾಗ ಇದರ ಬಗ್ಗೆ ನಾನು ಹೆಚ್ಚು ತಿಳಿದುಕೊಂಡೆ. ಹಳ್ಳಿಗಾಡಿನಲ್ಲಿರುವ ಎಲ್ಲಾ ಸೇವೆ ಮತ್ತು ಸವಲತ್ತುಗಳು ಪ್ರಬಲರು ಮತ್ತು ಶ್ರೀಮಂತರಿಗೆ ಸೀಮಿತವಾಗಿರುತ್ತದೆ. ಬೆಳೆ ನಾಶವಾದಾಗ, ಬರ ಬಾಧಿಸಿದಾಗ, ಆಸ್ಪತ್ರೆಯ ಖರ್ಚು ಬಂದಾಗ, ಮದುವೆ-ಮುಂಜಿಗಳಾದಾಗ ಬ್ಯಾಂಕಿನ ಸಾಲ ಪಡೆಯಲಾಗದೇ ಜಮೀನ್ದಾರರ ಮೊರೆ ಹೋಗುವುದು ಸಾಮಾನ್ಯ. ಸಾಲ ಪಡೆವಾಗ ಚೌಕಾಶಿ ಮಾಡಿ, ಚರ್ಚಿಸುವ ಶಕ್ತಿ ಸಾಲಗಾರರಿಗೆ ಇರುವುದಿಲ್ಲ. ಸಾಲ ಪಡೆದವರು ಆದಾಯವನ್ನು ಸಾಲದ ಕಂತುಗಳಾಗಿ ನೀಡುತ್ತಾ ಬರೇ ಆಹಾರ, ಒಂದು ಜೊತೆ ಚಪ್ಪಲಿ, ಒಂದು ಉಣ್ಣೆಯ ಹೊದಿಕೆಯನ್ನಷ್ಟೇ ಪಡೆದು ಜೀತ ಪದ್ಧತಿಯಲ್ಲಿ ಕೆಲಸಮಾಡುತ್ತಿದ್ದರು. ಸಾಲಗಾರ ಸತ್ತರೆ ಮುಂದಿನ ತಲೆಮಾರೂ ಜೀತವನ್ನು ಮುಂದುವರೆಸಿಕೊಂಡು ಹೋಗುತ್ತದೆ. ಒಪ್ಪಂದಗಳು ಹೆಚ್ಚಿನ ಸಂದರ್ಭಗಳಲ್ಲಿ ಮೌಖಿಕವಾಗಿಯೂ ಒಮ್ಮೊಮ್ಮೆ ಲಿಖಿತವಾಗಿಯೂ ಇರುತ್ತದೆ.

ದೇಶಾದ್ಯಂತ ಜೀತಪದ್ಧತಿಯ ಸಮೀಕ್ಷೆಯಾಯಿತು. ನಮ್ಮ ರಾಜ್ಯದ ಜೀತಪದ್ಧತಿಯ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳನ್ನು ಜಿಲ್ಲಾಧಿಕಾರಿಗಳು ವರದಿ ಮಾಡಬೇಕಿತ್ತು. ವಿಚಾರಿಸಿದೆ. ಜೀತಪದ್ಧತಿ ಎಲ್ಲೂ ಕಂಡಿಲ್ಲವೆಂದು ತಿಳಿಯಿತು. ಹಾಗೆಂದೇ ವರದಿಯನ್ನು ಕಳುಹಿಸಿದೆ. ಅದು ನಿಜವಲ್ಲವೆಂದು ಆಮೇಲೆ ತಿಳಿಯಿತು. ಒಮ್ಮೆ ಒಬ್ಬ ಕೃಷಿ ಕೂಲಿಕಾರನ ಜೊತೆ ಮಾತಿಗಿಳಿದಾಗ ಜಮೀನುದಾರನ ಬಳಿ ಸಾಲ ಮಾಡಿದ್ದೇ ತನಗೆ ಹೊರೆಯಾಗಿದೆಯೆಂದ.

‘ಸಾಲ ಹೇಗೆ ತೀರಿಸುತ್ತೀಯ’ ಕೇಳಿದೆ

“ಕೂಲಿ ಮಾಡಿ” ಎಂದ. ಸಾಲ ತೀರಿಸಿಲ್ಲವೆಂದು ಕೂಲಿಗಳಮೇಲೆ ದೌರ್ಜನ್ಯ ಮಾಡುತ್ತಾರೆ. ಸಾಲದ ಹೊರೆಯಿಂದ ಅವರು ಜೀವನದುದ್ದಕ್ಕೂ ದುಡಿಯುತ್ತಾರೆ! ಆದರೆ ಅದನ್ನು ಜೀತಪದ್ಧತಿ ಅಂತ ಕರೆಯೋದಿಲ್ಲ. ಹೀಗಾಗಿಯೇ ಈ ರೀತಿಯ ಘಟನೆ ವರದಿಯಾಗಿರಲಿಲ್ಲ!

ಮತ್ತೊಂದು ಆಯಾಮದಿಂದ ಕೆಲಸವನ್ನು ಪ್ರಾರಂಭಿಸಿದೆ. ಪ್ರತಿ ಹಳ್ಳಿಯಲ್ಲೂ ಸಾಲದಲ್ಲಿರುವವರ ಸಂಖ್ಯೆ, ಯಾರಿಂದ ಸಾಲ ಪಡೆದಿದ್ದಾರೆ. ಅದನ್ನು ಅವರು ಯಾವಾಗ ತೀರಿಸಬೇಕು, ಅವರು ಯಾರ ಹತ್ತಿರ ಕೆಲಸಮಾಡುತ್ತಿದ್ದಾರೆ. ಹೀಗೆ ಸಾಲದ ಮೂಲದ ವಿವರ ಶೇಖರಿಸಿದಾಗ ಜೀತಪದ್ಧತಿಯ ವಿಶ್ವರೂಪದರ್ಶನವಾಯಿತು!
ಇಡೀ ಜಿಲ್ಲೆಯ ಆಡಳಿತಾಂಗವನ್ನು ಜಾಗೃತಗೊಳಿಸಿದೆ. ಅಧಿಕಾರಿಗಳು ಊರು, ಮನೆ ಸುತ್ತಿದರು. ಜೀತದ ಸಾಲವೆಂದು ತಿಳಿದ ಕ್ಷಣವೇ
ಪತ್ರಗಳನ್ನು ನಾಶಮಾಡಿ ಜೀತವಿಮುಕ್ತಗೊಳಿಸುತ್ತಿದ್ದೆವು. ಮತ್ತೊಮ್ಮೆ ಆ ರೀತಿಯ ಒಪ್ಪಂದಕ್ಕೆ ಹೋಗುವುದಿಲ್ಲವೆಂದು ಜಮೀನುದಾರರ ಕೈಲಿ ಬರೆಸಿಕೊಳ್ಳುತ್ತಿದ್ದೆವು. ಯಾರಾದರೂ ಜೀತಪದ್ಧತಿಯಲ್ಲಿ ಜನರನ್ನಿಟ್ಟುಕೊಂಡಿದ್ದರೆ ಅವರನ್ನು ವಿಚಾರಣೆಗ ಒಳಪಡಿಸಬೇಕು. ಹಾಗೆ ಮಾಡಲಿಲ್ಲ. ಈ ಪದ್ಧತಿಗೆ ಬಲಿಯಾದವರು ಒಬ್ಬರಾ, ಇಬ್ಬರಾ? ಎಷ್ಟು ಜನರನ್ನು ವಿಚಾರಣೆ ಮಾಡುವುದು? ಅದಕ್ಕೆ ಸಮಯವೂ ಬೇಕಿತ್ತು. ಬದಲಿಗೆ ಹಳ್ಳಿಯವರೇ ಅದನ್ನು ಪರಿಹರಿಸುವಂತೆ ಮಾಡಿದ್ದು ಒಳ್ಳೆಯ ಫಲವನ್ನು ನೀಡಿತು. ಕೆಲಕಾಲ ಜಿಲ್ಲೆಯ ಜಮೀನುದಾರರು, ಬಡವರು, ಅಧಿಕಾರಿಗಳು – ಎಲ್ಲರೂ ಭಿನ್ನವಾಗಿ ಯೋಚಿಸುತ್ತಿದ್ದರು.

ಹೈದರಾಬಾದಿನ ಜಿಲ್ಲಾಧಿಕಾರಿಯಾಗಿ ಭೂ ಪರಿಮಿತಿ ಕಾಯಿದೆಯ ಅನುಷ್ಠಾನಕ್ಕೂ ಕೈಹಾಕಿದೆ. ಹಳ್ಳಿಗಳಲ್ಲಿ ಭೂಮಿಯೇ ಸರ್ವಸ್ವ. ಆ ದಿನಗಳಲ್ಲಿ ಭೂಮಿ ಇಲ್ಲದವರೆಂದರೆ ಜೀವನೋಪಾಯಕ್ಕೆ ಜಮೀನುದಾರರನ್ನೇ ಅವಲಂಬಿಸಬೇಕಾಗುತ್ತಿತ್ತು. ಸ್ವಂತ ಉದ್ಯೋಗ ಮಾಡುವುದು ಅಸಾಧ್ಯವಾಗಿತ್ತು. ಹಳ್ಳಿಯಲ್ಲಿನ ಎಲ್ಲ ಜಮೀನೂ ಕೆಲವೇ ಜಮೀನುದಾರರ ಕೈಯಲ್ಲಿತ್ತು. ಹೀಗಾಗಿ ಜಮೀನುದಾರರಿಗೆ ಅವಶ್ಯಕತೆಗಿಂತ ಜಾಸ್ತಿ ಪ್ರಾಬಲ್ಯವಿತ್ತು. ಭೂ ಪರಿಮಿತಿ ಕಾಯಿದೆಗೆ ಈ ಅಸಮತೋಲನವನ್ನು ತಡೆಯುವ ಉದ್ದೇಶವಿತ್ತು. ಒಂದು ಮಿತಿಗಿಂತ ಹೆಚ್ಚು ಭೂಮಿಯಿದ್ದರೆ ಅದನ್ನು ಸರ್ಕಾರ ವಶಪಡಿಸಿಕೊಂಡು ಭೂಹೀನರಿಗೆ ಹಂಚಿಕೊಡಬೇಕಿತ್ತು. ಈ ಕಾಯಿದೆಯನ್ನು ಜಾರಿ ಮಾಡುವುದರಲ್ಲಿ ಯಾವುದೇ ರಾಜಿ ಇರಬಾರದೆಂದು ನಿರ್ಧರಿಸಿದೆ. ಇದರಿಂದ ಹಳ್ಳಿಯ ಪ್ರಬಲರನ್ನು ಎದುರು ಹಾಕಿಕೊಳ್ಳುತ್ತೇನೆಂದು ಗೊತ್ತಿತ್ತು. ಆದರೆ ಭೂ ಪರಿಮಿತಿ ಕಾಯಿದೆಯನ್ನು ಕೆಲವರ ಮೇಲೆ ಜಾರಿ ಮಾಡಿ ಮಿಕ್ಕವರನ್ನು ಬಿಟ್ಟರೆ ಅದರಿಂದ ಪ್ರಯೋಜನವಿಲ್ಲ ಎನ್ನುವುದೂ ಗೊತ್ತಿತ್ತು. ಈ ವಿಷಯದಲ್ಲಿ ಗಂಭೀರವಾಗಿ ಯೋಚಿಸುತ್ತಿದ್ದೇನೆಂದೂ ಇದನ್ನು ನಿಜಕ್ಕೂ ಜಾರಿಮಾಡುತ್ತೇನೆಂದು ಸೂಚಿಸಬೇಕಿತ್ತು.

ಮೊದಲಿಗೆ ಮಾಜಿ ಅಥವಾ ಹಾಲಿ ವಿಧಾನಸಭಾ ಸದಸ್ಯರಿಗೆ, ಮತ್ತವರ ಬಂಧು ಮಿತ್ರರಿಗೆ ಸಂಬಂಧಿಸಿದ ದೊಡ್ಡ ಕೇಸುಗಳನ್ನು ತರಿಸಿಕೊಂಡೆ. ಇದನ್ನು ಪರಿಶೀಲಿಸಲು ಪ್ರಾರಂಭಿಸಿದ ಕೂಡಲೇ ಅಲ್ಲೋಲಕಲ್ಲೋಲವಾಯಿತು. ದೊಡ್ಡ ಜಮೀನುದಾರರ ಹಿಂದೆ ಬಿದ್ದಿದ್ದೇನೆಂದು ಅಪಾದನೆ ಬಂತು. ಅದು ಸರಿಯಾದದ್ದೇ? ಇದು ಆಡಳಿತದ ದ್ವಂದ್ವವೇ ಸರಿ. ಅಸಮಾನತೆಯಿರುವಾಗ ಎಲ್ಲರನ್ನೂ ಸಮಾನರಾಗಿ ನೋಡಬೇಕಲ್ಲವೇ? ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರಾದರೂ ಗ್ರಾಮಭಾರತದಲ್ಲಿ ಅಸಮಾನತೆ ತಾಂಡವವಾಡುತ್ತಿರುವಾಗ ಅಧಿಕಾರಿ ಕಣ್ಣುಮುಚ್ಚಿರಲು ಸಾಧ್ಯವೇ? ಮೇಲಾಗಿ ನನ್ನ ಕೆಲಸಗಳಲ್ಲಿ ಯಾವೊಂದೂ ವೈಯಕ್ತಿಕ ದ್ವೇಷದಿಂದ ಪ್ರೇರಿತವಾಗಿರಲಿಲ್ಲ. ನಾನು ಅತ್ಯಂತ ಪ್ರಭಾವೀ ಮಾರ್ಗವನ್ನು ಆಯ್ಕೆ ಮಾಡಿದ್ದೆ. ಹಳ್ಳಿಗಳ ಅತಿ ಹೆಚ್ಚು ಜಮೀನು ದೊಡ್ಡ ಜಮೀನುದಾರರ ಕೈಯ್ಯಲ್ಲಿತ್ತು. ಅವರ ಮೇಲೆ ಗುರಿಯಿಟ್ಟಾಗ ತುರ್ತಾಗಿ, ಸಶಕ್ತ ಫಲಿತಾಂಶಗಳು ಬಂದುವು.

ಕೆಲವು ಹಿರಿಯ ನಾಯಕರು ತಮ್ಮ ಭೂಮಿಯನ್ನು ಸರಿಯಾಗಿ ಘೋಷಿಸಿರಲಿಲ್ಲ. ಅದು ನನ್ನ ಗಮನಕ್ಕೆ ಬಂತು. ಅವರುಗಳ ಮೇಲೆ ಮೊಕದ್ದಮೆ ಹೂಡಿದರೆ ರಾಜಕೀಯ ಪರಿಣಾಮಗಳಿದ್ದುವು. ಹೀಗಾಗಿ ಅನೌಪಚಾರಿಕವಾಗಿ ಇದನ್ನು ಸರ್ಕಾರದ ಗಮನಕ್ಕೆ ತಂದೆ. ಜಿಲ್ಲಾಧಿಕಾರಿಯಾಗಿ ಮುಂದುವರೆದರೆ ಈ ಎಲ್ಲರ ಮೇಲೂ ಕ್ರಮ ಕೈಗೊಳ್ಳುವುದು ಅನಿವಾರ್ಯವೆಂದು ತಿಳಿಸಿದೆ. ನನ್ನನ್ನು ವರ್ಗಾಯಿಸಬಹುದು ಅನ್ನಿಸಿತ್ತಾದರೂ ಅಲ್ಲೇ ಮುಂದುವರೆಸಿದರು. ನಾನು ಕ್ರಮ ಕೈಗೊಂಡೆ. ಅದರ ರಾಜಕೀಯ ಪರಿಣಾಮಗಳನ್ನು ಆಗ ಸರಿಯಾಗಿ ಅಂದಾಜು ಮಾಡಿರಲಿಲ್ಲ. ಎರಡೇ ದಿನ ಸಂಜೆಯ ವೇಳೆಗೆ ಮುಖ್ಯಮಂತ್ರಿ ವೆಂಗಳರಾವು ಅವರಿಂದ ಕರೆಬಂತು. ಈ ಬಗ್ಗೆ ಸ್ವತಃ ಪ್ರಧಾನಮಂತ್ರಿಯವರು ವಿವರಣೆಯನ್ನು ಕೇಳಿದ್ದರು. ವೆಂಗಳರಾವು ತಮಗಾಗಿ ಈ ಬಗ್ಗೆ ಒಂದು ಟಿಪ್ಪಣಿಯನ್ನು ತಯಾರಿಸಿಕೊಡಲು ಹೇಳಿದರು.

ಈ ಕಾಯಿದೆ ದೊಡ್ಡ ಜಮೀನುದಾರರನ್ನು ಹೆಚ್ಚಾಗಿ ಕಾಡಿತ್ತು. ಇವರಲ್ಲಿ ಸಾಕಷ್ಟು ಜನ ರೆಡ್ಡಿ ಸಮುದಾಯದವರು. ನಾನೂ ರೆಡ್ಡಿಯಾದ್ದರಿಂದ ಅವರ ಬಗ್ಗೆ ಉದಾರವಾಗಿರುತ್ತೇನೆ ಎಂದುಕೊಂಡಿದ್ದರೇನೋ. ಅವರ ಪರಿಸ್ಥಿತಿಯೂ ನನಗೆ ಗೊತ್ತಿತ್ತು. ಶತಮಾನಗಳಿಂದ ಅದು ಅವರದೇ ಜಮೀನು. ಅದೇ ಅವರ ಸಾಮಾಜಿಕ ಮತ್ತು ಆರ್ಥಿಕ ಸ್ತರದ ಗುರುತು. ಅದೇ ಅವರ ಜೀವನ ವಿಧಾನ. ಆದರೆ ಸರ್ಕಾರಿ ಅಧಿಕಾರಿಗಳಾಗಿ ನಮಗೆ ನಮ್ಮದೇ ಆದ ಕರ್ತವ್ಯಗಳಿದ್ದುವು. ಜೀತ ಪದ್ಧತಿ ಮತ್ತು ಭೂ ಪರಿಮಿತಿಯ ವಿಷಯದಲ್ಲಿ ತೋರಿದ ಉತ್ಸಾಹ ಅನೇಕರನ್ನು ಅಲ್ಲಾಡಿಸಿತ್ತು. ತಮ್ಮ ವಿರುದ್ಧ ಕೆಲಸ ಮಾಡುವ ಅಧಿಕಾರಿ ಸರಿ, ಆದರೆ ಅವನು ತಮ್ಮ ಸಮುದಾಯದವನೇ ಆಗಿದ್ದಾನೆನ್ನುವ ವಿಷಯ ಅವರಿಗೆ ಹೆಚ್ಚು ನೋವುಂಟುಮಾಡಿತ್ತು. ಒಬ್ಬ ದೊಡ್ಡ ಜಮೀನುದಾರ ನಾನು ನಿಜಕ್ಕೂ ರೆಡ್ಡಿಯಾ ಎಂದು ಕೇಳಿದ್ದನಂತೆ. ಜೀತ ಪದ್ಧತಿಯ ವಿರುದ್ಧದ ನನ್ನ ಕೆಲಸ ಸ್ವಲ್ಪ ಮಟ್ಟಿಗಿನ ಫಲಿತಾಂಶ ಕೊಟ್ಟಿತ್ತು. ಆದರೆ ಭೂ ಪರಿಮಿತಿಯ ಕೆಲಸ ಅಷ್ಟೇನೂ ಸಫಲವಾಗಲಿಲ್ಲ.

ತುರ್ತು ಪರಿಸ್ಥಿತಿ ಮುಗಿಯಿತು. ಲೋಕಸಭಾ ಚುನಾವಣೆಗಳು ನಡೆದುವು. ಎಷ್ಟಾದರೂ ಸರ್ಕಾರ ಚೆನ್ನಾಗಿ ನಡೆದಿತ್ತು, ಹಣದುಬ್ಬರ ಹದ್ದುಬಸ್ತಿನಲ್ಲಿತ್ತು, ಸರ್ಕಾರದ ಸೇವೆಗಳು ದಕ್ಷತೆಯಿಂದ ಜನರಿಗೆ ತಲುಪುತ್ತಿದ್ದುವು, ಆರ್ಥಿಕ ಬೆಳವಣಿಗೆಯೂ ಚೆನ್ನಾಗಿತ್ತು. ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ರೈಲುಗಳು ಈಗಲೂ ಸಮಯಾನುಸಾರವಾಗಿ ಓಡುತ್ತಿದ್ದುವು. ತಾನು ಗೆಲ್ಲುವೆನೆಂಬ ಆತ್ಮವಿಶ್ವಾಸ ಇಂದಿರಾಗಾಂಧಿಗಿದ್ದರೂ ಅನೂಹ್ಯವಾದ ಸೋಲನ್ನನುಭವಿಸಿದರು. ಆಕೆ ಗರಬಡಿದವರಂತಾದರು. ಆಂಧ್ರಪ್ರದೇಶ ಮತ್ತು ಕರ್ನಾಟಕ ಬಿಟ್ಟರೆ ಮಿಕ್ಕೆಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷ ಸೋತಿತ್ತು. ತುರ್ತುಪರಿಸ್ಥಿತಿ ಮುಗಿದದ್ದನ್ನು ಕಂಡು ರಾಷ್ಟ್ರವೇ ನಿಟ್ಟುಸಿರು ಬಿಟ್ಟಿತು.

ಪ್ರಜಾತಂತ್ರದ ದಮನವನ್ನು ಜನ ನಿರಾಕರಿಸಿದ್ದನ್ನು ನೋಡಿ ನನಗೆ ಹೃದಯ ತುಂಬಿತ್ತು. ಸರ್ಕಾರದ ಸೇವೆ ದಕ್ಷತೆಯಿಂದಿರುವಂತೆ ನೋಡಿಕೊಂಡರೂ ನಾವು ದೂರಲಾಗದ ಪರಿಸ್ಥಿತಿಯಿಂದ ದೂರಾಗಿದ್ದೇ ಆಕೆ ಸೋತದಕ್ಕೆ ಕಾರಣವಾಯಿತೇನೊ. ನಾನಿವಿತ್ತು.. ಹೈದರಾಬಾದ್ ಜಿಲ್ಲಾಧಿಕಾರಿಯಾಗಿ ಕೇವಲ ಒಂದು ವರ್ಷ ಇದ್ದೆನಷ್ಟೇ. ಇಲ್ಲಿಂದ ಹೊರಬೀಳುವ ಸಮಯ ಬಂದಿತು.