ನೀರು, ಗಾಳಿ, ಬೆಳಕಿನಂತೆಯೇ ಎಷ್ಟೋ ವಿಧದ ಸಂಪತ್ತುಗಳು ನಮ್ಮಲ್ಲಿದ್ದರೂ, ಅವುಗಳ ಮಹತ್ವವನ್ನು ನಾವು ಅರಿತಿರುವುದಿಲ್ಲ. ಕಿಕ್ಕಿರಿದು ತುಂಬಿದ್ದ ಬಸ್ಸಿನಲ್ಲಿ ಹೇಗೋ ಜಾಗ ಮಾಡಿಕೊಂಡು ಕಚೇರಿ ತಲುಪುವ, ಜಾತ್ರೆಯಲ್ಲಿ ಸೇರಿದ ಜನಜಂಗುಳಿಯಲ್ಲಿ ತೇರಿನ ಕಳಸವನ್ನೇ ನೋಡುತ್ತಾ, ಜೈಕಾರ ಹಾಕುತ್ತ ಮುಂದೆ ಮುಂದೆ ಸಾಗುವ, ಮನೆಗೆ ಬರುವ ನೆಂಟರೊಡನೆ ಬಾಯಿತುಂಬಾ ಮಾತನಾಡುತ್ತಾ ಚಹಾಕುಡಿವ, ಆಪ್ತರನ್ನು ಭೇಟಿಯಾಗಬೇಕು ಎನಿಸಿದರೆ ಮುಕ್ತವಾಗಿ ತೆರಳಿ ಬಾಗಿಲಿನ ಬೆಲ್ ಒತ್ತುವ ಸಂದರ್ಭಗಳು ನೆನಪಿವೆಯೇ. ಅಂತಹ ಸಂದರ್ಭಗಳಲ್ಲಿ ವಿಶ್ವಾಸನಂಬಿಕೆಯ ಸೂತ್ರವೊಂದು ಎದೆಯಲ್ಲಿ ಎಷ್ಟು ಭದ್ರವಾಗಿತ್ತು! ಆದರೀಗ ಸೂತ್ರವೊಂದು ಹರಿದಿದೆ.
ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಲಹರಿ

ವರದಿಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಕೆಲವೊಮ್ಮೆ ಮುಂಜಾನೆ ಬೇಗನೆ ಎದ್ದು ಗಡಿಬಿಡಿಯಲ್ಲಿ ಓಡಬೇಕಾದ ಅಸೈನ್ ಮೆಂಟ್ ಗಳು ಇರುತ್ತಿದ್ದವು. ಹಿಂದಿನ ರಾತ್ರಿಯೇ ಎಲ್ಲ ಸಿದ್ಧತೆ ಮಾಡಿಕೊಂಡು, ಬೇಗನೇ ಏಳಲು ಅನುವಾಗುವಂತೆ ಮೂರ್ನಾಲ್ಕು ರೀತಿಯ ಅಲಾರ್ಮ್ಗಳನ್ನು ಸೆಟ್ ಮಾಡಿಕೊಳ್ಳುತ್ತಿದ್ದೆ. ಆದರೆ ಬೆಳಿಗ್ಗೆ ಎಲ್ಲ ಕೆಲಸಬೊಗಸೆ ಮುಗಿಸಿ ಇನ್ನೇನು, ಹೊರಡಬೇಕು ಎನ್ನುವಷ್ಟರಲ್ಲಿ ಆ ಅಸೈನ್ ಮೆಂಟ್ ರದ್ದಾಗಿದೆ ಎಂಬ ಮಾಹಿತಿ ಬಂದುಬಿಡುತ್ತಿತ್ತು. ‘ಅರೆ ತುಸು ಹೊತ್ತು ಬಿಡುವು ಸಿಕ್ಕಿತಲ್ಲ..’ ಎನ್ನುತ್ತ ಖುಷಿಯಾಗುತ್ತದೆ ಮನಸ್ಸು. ಆದರೆ, ‘ಬಿಡುವಾಗಿದ್ದಾಗ ಇವನ್ನೆಲ್ಲ ಮಾಡಬೇಕು’ ಎಂದು ಮನಸ್ಸಿನಲ್ಲೇ ಗುರುತು ಹಾಕಿಕೊಂಡ ಕೆಲಸಗಳನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದರೆ, ‘ಅರೆ.. ಉಹುಂ. ಏನೂ ನೆನಪಾಗುತ್ತಿಲ್ಲವಲ್ಲ ಶಿವನೇ…’ ಲಾಕ್ ಡೌನ್ ಹೇರಿದಾಗ, ಇದ್ದಕ್ಕಿದ್ದಂತೆಯೇ ಸಿಕ್ಕಿದ ಬಿಡುವಿನ ಸಂದರ್ಭದಲ್ಲಿಯೂ ಹೀಗೆಯೇ ಅನಿಸಿತು.

‘ಈ ವೃತ್ತಿಯ ಓಡಾಟ ಸಾಕಪ್ಪಾ ಶಿವನೇ.. ಇತರ ವೃತ್ತಿಗಳಂತೆ ನನ್ನ ವೃತ್ತಿಯಲ್ಲಿಯೂ ಸ್ವಲ್ಪ ಬಿಡುವಿದ್ದಿದ್ದರೆ ಹಾಗೆ ಮಾಡುತ್ತಿದ್ದೆ, ಹೀಗೆ ಮಾಡುತ್ತಿದ್ದೆ.. ಪರ್ವತವನ್ನೇ ಎತ್ತಿಡುತ್ತಿದ್ದೆ’ ಎಂಬಂತಹ ಎಷ್ಟೊಂದು ಮಾತುಗಳನ್ನು ನಾನು ಹೇಳಿಕೊಂಡಿದ್ದೇನೆ. ನಾನು ಯಾವುದಾದರೂ ದೊಡ್ಡದೊಂದು ಸಾಧನೆಯನ್ನು ಮಾಡದೇ ಇರಲು, ಈ ವೃತ್ತಿಯ ಗಡಿಬಿಡಿ -ಒತ್ತಡವೇ ಕಾರಣ ಎಂದು ನನ್ನ ಎಲ್ಲ ದೌರ್ಬಲ್ಯಗಳ ಮೇಲೆ ಒಂದು ಹೊದಿಕೆ ಎಳೆದುಬಿಟ್ಟು, ಎಷ್ಟೋಬಾರಿ ಅದಕ್ಕೆ ಮಾತಿನ ಶೃಂಗಾರ ಮಾಡಿಬಿಡುತ್ತಿದ್ದೆ. ಆದರೆ ಅನಿರೀಕ್ಷಿತವಾಗಿ ದೊರೆತ ಲಾಕ್ ಡೌನ್ ಮತ್ತು ನಂತರದ ಬಿಡುವು ನಿಜಕ್ಕೂ ತಬ್ಬಿಬ್ಬಾಗುವಂತೆ ಮಾಡಿತು. ಯಾವುದೋ ಪಥದಲ್ಲಿ ನಿರಂತರ ತಿರುಗುತ್ತಿದ್ದ ಗ್ರಹವೊಂದು ಗಕ್ಕನೆ ನಿಂತಂತೆ ಅನಿಸಿ, ಖುಷಿಪಡಬೇಕೋ ಬೇಸರಿಸಿಕೊಳ್ಳಬೇಕೋ ಗೊತ್ತಾಗದೇ, ಪೆಚ್ಚಾಗಿದ್ದ ಸಂದರ್ಭದಲ್ಲಿ ನಿಧಾನವಾಗಿ ಬೇಸರದ ಛಾಯೆಯೊಂದು ಕವಿಯಲಾರಂಭಿಸಿತು.

ಮುಂದಿನ ದಿನಗಳು ಹೇಗಿರಬೇಕು ಎಂಬ ಬಗ್ಗೆ ಮನುಷ್ಯರು ಎಷ್ಟೊಂದು ಲೆಕ್ಕಚಾರ ಹಾಕುತ್ತಾ, ಯೋಜನೆಗಳನ್ನು ರೂಪಿಸುತ್ತಾರೆ! ಅಂತಹ ಲೆಕ್ಕಾಚಾರಗಳಿಗೆ, ಮುಂದಾಲೋಚನೆಗಳಿಗೆ ಒಂಚೂರೂ ಅವಕಾಶವೇ ಕೊಡದೇ 2020 ಕಳೆದು ಹೋಯಿತು. ಒಂದಿಷ್ಟು ಕೊಟ್ಟು, ಒಂದಿಷ್ಟು ಪಡೆದುಕೊಂಡು – ನಡೆದುಬಿಟ್ಟಿತು.

ಕಳೆದ ಏಪ್ರಿಲ್, ಮೇ ತಿಂಗಳಲ್ಲಿ ಮನೆಯೊಳಗೆ ಕುಳಿತುಕೊಳ್ಳುವುದೇ ಕ್ಷೇಮ ಎಂಬ ಭಾವನೆಯಿದ್ದರೆ, ಜೂನ್ ತಿಂಗಳಲ್ಲಿ, ಭಯ ಆತಂಕಗಳ ನಡುವೆ ಮನೆಯಿಂದ ಹೊರಡಬೇಕಾಯಿತು. ಮತ್ತೆರಡು ತಿಂಗಳಲ್ಲಿ ಪ್ರಯಾಣಗಳೂ ಅನಿವಾರ್ಯವಾಯಿತು. ಆಗಲೇ ನಿಜಕ್ಕೂ ಅರಿವಾಗಿದ್ದು, ಲಾಕ್ ಡೌನ್ ನಡುವೆ ಮರುವಲಸೆ ಹೊರಟ ಆ ಬೃಹತ್ ಸಮುದಾಯ ಎಷ್ಟು ಆತಂಕ ಎದುರಿಸಿರಬಹುದು ಎಂದು! ಎಂಥ ಪರಿಸ್ಥಿತಿಯಲ್ಲಿಯೂ ಈ ಬದುಕನ್ನು ಯಾರು ಕೈ ಹಿಡಿದು ನಡೆಸುತ್ತಿದ್ದಾರೆ ಎಂದು ಪ್ರಶ್ನಿಸುವುದಾದರೆ “ಅನಿವಾಯತೆ” ಎನ್ನದೇ ಮತ್ತೇನು ಹೇಳಬಹುದು.

ಅಂತರಂಗ ಮತ್ತು ಬಹಿರಂಗವನ್ನು ಸಮಭಾವದಲ್ಲಿ ಇರಿಸಿಕೊಳ್ಳಬೇಕು ಎಂಬ ಹಿತನುಡಿಯನ್ನು ಹಿರಿಯರೇನೋ ಹೇಳಬಹುದು. ಆದರೆ ಆ ಸ್ಥಿತಿಯನ್ನು ತಲುಪುವ ಮುನ್ನ ಅಂತರಂಗ, ಬಹಿರಂಗದಲ್ಲಿ ಎದ್ದೇಳುವ ಭಾರೀ ಅಲೆಗಳನ್ನು ಸಂಭಾಳಿಸುವುದು ಸುಲಭವಿಲ್ಲತಾನೇ. ಲಾಕ್ ಡೌನ್ ಸಂದರ್ಭದಲ್ಲಿ ಅಂತಹ ಅಲೆಗಳಿಗೆ ನಗುವಿನ ತಡೆಗೋಡೆಯೊಡ್ಡಿ, ನಮ್ಮ ಫ್ಲಾಟ್ ನ ಎಲ್ಲರೂ ಶಟಲ್ ಬ್ಯಾಟ್ ಹಿಡಿದು ಸಂಜೆ ಕೆಳಕ್ಕಿಳಿಯುತ್ತಿದ್ದರು. ನಡಿಗೆ, ವ್ಯಾಯಾಮ, ಝುಂಬಾ ನೃತ್ಯ, ಪುಸ್ತಕ ಓದುವುದು, ಒಟ್ಟಾಗಿ ಸಿನಿಮಾ ನೋಡುವುದು… ಹೀಗೆ.

ಕೆಲಸ ಕಳೆದುಕೊಂಡವರು, ಇಎಂಐ ಕಟ್ಟಲಾಗದವರು, ವಿದೇಶದಲ್ಲಿರುವ ಮಕ್ಕಳ ಫೋನ್ ಗಾಗಿ ಕಾಯುವವರು, ಕೆಲಸ ಕಳೆದುಕೊಂಡು ವಾಪಸ್ಸಾಗುವ ಮಕ್ಕಳನ್ನು ಬರಮಾಡಿಕೊಳ್ಳುವವರು, ತಮ್ಮ ಹಳ್ಳಿಯ ಮನೆಗೆ ಬಂದಿರುವ ಮುಂಬೈ ಬಂಧುಗಳ ಗೌಜಿ ಗದ್ದಲಗಳ ನಡುವಿನಿಂದ ಪಾರಾಗಿ ಫ್ಲಾಟ್ ಗೆ ಮರಳಿ ಬಂದವರು.. ಎಲ್ಲರೂ ಏಕರೂಪದ ನಗುವೆಂಬ ಸಮವಸ್ತ್ರ ಧರಿಸಿಕೊಂಡು ಸಂಜೆವೇಳೆಗೆ ಮನೆಯಿಂದ ಹೊರಬೀಳುತ್ತಿದ್ದರು.

ಲಾಕ್ ಡೌನ್ ಘೋಷಣೆಯಾಗುವ ವೇಳೆಗೆ ನಮ್ಮ ಮನೆ ಪಕ್ಕದ ಮಾರಿಗುಡಿ ದೇವಸ್ಥಾನದಲ್ಲಿ ಜಾತ್ರೆ ಮುಗಿದಿತ್ತಷ್ಟೇ. ಜಾತ್ರೆಗೆಂದು ಮಾರಿಗುಡಿಯ ಬಯಲಿಗೆ ಬಂದಿದ್ದ ಟೊರಟೊರ, ಜಯಂಟ್ ವೀಲ್, ಸುತ್ತುವ ಕುದುರೆ, ಬಣ್ಣದ ಡ್ರಾಗನ್ ಮೂತಿಗಳು.. ಎಲ್ಲವೂ ಅದೇ ಜಾತ್ರೆಯ ಬಯಲಿನಲ್ಲಿ ಅನಿವಾರ್ಯವಾಗಿ ಬೇರೂರಿದವು. ಈಗ ನೋಡಿದರೆ ಡ್ರಾಗನ್ ಮೂತಿಯ ಸುತ್ತ ಹಸಿರು ಹುಲ್ಲುಬೆಳೆದಿದೆ. ಅಲ್ಲೇ ಪಕ್ಕದಲ್ಲಿ ಹಾಕಿಕೊಂಡ ಟೆಂಟುಗಳಲ್ಲಿ, ಗುಡಿಸಲುಗಳಲ್ಲಿ ವಾಸಿಸುತ್ತ ಈ ಡ್ರಾಗನ್- ಟೊರಟೊರಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು ತಮ್ಮ ಮಕ್ಕಳನ್ನು ವಿದ್ಯಾಗಮ ಕಲಿಕೆಗೆ ಕಳುಹಿಸಲು ಸಿದ್ಧತೆ ಮಾಡುತ್ತಿದ್ದಾರೆ. ಇಂದು ಬೆಳಿಗ್ಗೆ ನೋಡಿದರೆ ಅವರೆಲ್ಲ ಒಬ್ಬರಿಗೊಬ್ಬರು ಹ್ಯಾಪಿ ನ್ಯೂ ಇಯರ್ ವಿಡಿಯೊ ಕಳುಹಿಸಿಕೊಳ್ಳುತ್ತ ಶುಭಾಶಯ ಹೇಳುತ್ತಿದ್ದಾರೆ. ಕಡುಕಷ್ಟದ ದಿನಗಳನ್ನು ದಾಟಿ ಬಂದ ಅವರೆಲ್ಲ, ಜಾತ್ರೆಗಳ ಸುದ್ದಿಗಾಗಿ ಕಾಯುತ್ತಿದ್ದಾರೆ.

ಬದುಕಿನಲ್ಲಿ ಎಲ್ಲ ಕಷ್ಟಗಳೂ ಸುಖಗಳೂ ಆದ್ಯತೆಯ ಮೇಲೆಯೇ ಸಾಗುತ್ತವೆ. ಮನುಷ್ಯ ತನ್ನೊಳಗೆ ತಾನೇ ಕೊಟ್ಟುಕೊಳ್ಳುವ ಆದ್ಯತೆ ಒಂದಾದರೆ, ಲೋಕದ ಜನರೊಡನೆ ಹೋಲಿಸಿಕೊಂಡು ತನ್ನ ಜಾಗವನ್ನು ಪರಿಗಣಿಸುವ ಆದ್ಯತೆ ಮತ್ತೊಂದು. ಈ ಆದ್ಯತೆಗಳು ಬಹಳ ಬೇಗಬೇಗನೇ ಬದಲಾಗುವಂತೆ ಮಾಡಿದ ವರ್ಷ 2020.

ನೀರು, ಗಾಳಿ, ಬೆಳಕಿನಂತೆಯೇ ಎಷ್ಟೋ ವಿಧದ ಸಂಪತ್ತುಗಳು ನಮ್ಮಲ್ಲಿದ್ದರೂ, ಅವುಗಳ ಮಹತ್ವವನ್ನು ನಾವು ಅರಿತಿರುವುದಿಲ್ಲ. ಕಿಕ್ಕಿರಿದು ತುಂಬಿದ್ದ ಬಸ್ಸಿನಲ್ಲಿ ಹೇಗೋ ಜಾಗ ಮಾಡಿಕೊಂಡು ಕಚೇರಿ ತಲುಪುವ, ಜಾತ್ರೆಯಲ್ಲಿ ಸೇರಿದ ಜನಜಂಗುಳಿಯಲ್ಲಿ ತೇರಿನ ಕಳಸವನ್ನೇ ನೋಡುತ್ತಾ, ಜೈಕಾರ ಹಾಕುತ್ತ ಮುಂದೆ ಮುಂದೆ ಸಾಗುವ, ಮನೆಗೆ ಬರುವ ನೆಂಟರೊಡನೆ ಬಾಯಿತುಂಬಾ ಮಾತನಾಡುತ್ತಾ ಚಹಾಕುಡಿವ, ಆಪ್ತರನ್ನು ಭೇಟಿಯಾಗಬೇಕು ಎನಿಸಿದರೆ ಮುಕ್ತವಾಗಿ ತೆರಳಿ ಬಾಗಿಲಿನ ಬೆಲ್ ಒತ್ತುವ ಸಂದರ್ಭಗಳು ನೆನಪಿವೆಯೇ. ಅಂತಹ ಸಂದರ್ಭಗಳಲ್ಲಿ ವಿಶ್ವಾಸ -ನಂಬಿಕೆಯ ಸೂತ್ರವೊಂದು ಎದೆಯಲ್ಲಿ ಎಷ್ಟು ಭದ್ರವಾಗಿತ್ತು! ಆದರೀಗ ಆ ಸೂತ್ರವೊಂದು ಹರಿದಿದೆ. ಮಲಿನಗೊಂಡ ಜಲಮೂಲದಂತೆ, ಕಣ್ಕುಕ್ಕುವ ಬೆಳಕಿನಂತೆ, ಉಸಿರುಗಟ್ಟುವಷ್ಟುಕಪ್ಪಾದ ಹೊಗೆಯಂತೆ, ನಂಬಿಕೆ-ವಿಶ್ವಾಸಗಳ ಸೂತ್ರದ ಎಳೆಗಳು ಬಿಡಿಸಿಕೊಳ್ಳುತ್ತಿವೆಯೇನೋ.

ಯಾವುದೋ ಪಥದಲ್ಲಿ ನಿರಂತರ ತಿರುಗುತ್ತಿದ್ದ ಗ್ರಹವೊಂದು ಗಕ್ಕನೆ ನಿಂತಂತೆ ಅನಿಸಿ, ಖುಷಿಪಡಬೇಕೋ ಬೇಸರಿಸಿಕೊಳ್ಳಬೇಕೋ ಗೊತ್ತಾಗದೇ, ಪೆಚ್ಚಾಗಿದ್ದ ಸಂದರ್ಭದಲ್ಲಿ ನಿಧಾನವಾಗಿ ಬೇಸರದ ಛಾಯೆಯೊಂದು ಕವಿಯಲಾರಂಭಿಸಿತು.

ಹಿರಿಯ ಜೀವಗಳು ಇರುವ ಅವರ ಮನೆಗೆ ಬಸ್ಸಿನಲ್ಲಿ ಹೋಗಬಹುದೇ ಎಂಬ ಸಂಶಯ, ಈ ಮದುವೆಗೆ ಬರುವುದಿಲ್ಲ ಎಂದು ಹೇಳುವುದು ಹೇಗೆ ಎಂಬ ದಾಕ್ಷಿಣ್ಯ, ಪಕ್ಕದಲ್ಲೇ ಕುಳಿತು ಉಣ್ಣುತ್ತಿರುವವರು ಕೆಮ್ಮುತ್ತ ನೀರು ಕುಡಿಯುತ್ತಿದ್ದಾರಲ್ಲಾ ಎಂಬ ಆತಂಕ- ಹೀಗೆ ಎಲ್ಲ ಕ್ಷಣಗಳೂ ಕುಟುಕುತ್ತಿವೆ. ಮತ್ತೊಮ್ಮೆ ಗಮನಿಸಿದರೆ, ನಾಳೆಯ ಬಗ್ಗೆ ನಂಬಿಕೆಯೇ ಇಲ್ಲದೆ, ಇಂದೇ ಎಲ್ಲವನ್ನೂ ಸೂರೆಗೊಳ್ಳುವಂತೆ ಬಾಳುವ ಒರಟು ಕ್ಷಣಗಳು ಕೂಡ ಕಾಣಿಸಿ ಗಾಬರಿಯಾಗುತ್ತಿದೆ. ಕೊರೊನಾ ಎಂಬ ವೈರಸ್ ಜೀವಿತಾವಧಿ ಮುಗಿಸಿ ಈ ಜಗತ್ತಿನಿಂದ ಹೊರಟುಹೋಗಬಹುದು. ವಿಶ್ವಾಸದ ಮಾಲಿನ್ಯ, ನಮ್ಮ ಮೇಲೆ ಏನೆಲ್ಲ ಪರಿಣಾಮ ಬೀರಬಹುದೋ. ವಿಶ್ವಾಸವೆಂಬ ಈ ಮಾನಸಿಕ ಅಂತರ್ಜಲವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಇದೀಗ ನಮ್ಮಮೇಲಿದೆ.

ಈ ಜೀವಲೋಕ ಸೃಷ್ಟಿಯಾದಂದಿನಿಂದ ಜೀವನ ಎಂಬುದು ಅನಿಶ್ಚಿತವಾಗಿಯೇ ಇತ್ತು ಎನ್ನೋಣ. ಸಾವು ಎಂಬುದು ನಿಶ್ಚಿತವಾದರೂ, ಅದರ ವಿಲಾಸಗಳನ್ನು ಗಮನಿಸಿಯೂ ಗಮನಿಸಿದಂತೆ ಎಷ್ಟು ಸಂಭ್ರಮದಿಂದ ಬಾಳುತ್ತಿದ್ದೆವು! ಬದುಕಿನ ದೈನಂದಿನ ಅನಿವಾರ್ಯ ಹೋರಾಟಗಳಲ್ಲಿ, ಈ ಅನಿಶ್ಚಿತತೆಯನ್ನೂ ನಿರ್ಲಕ್ಷ್ಯ ಮಾಡಿ ಬದುಕ ಸಂಭ್ರಮಿಸುತ್ತಿದ್ದೆವು! ಈಗ ನೋಡಿದರೆ, ಸಂಭ್ರಮ- ವೈಭವಗಳನ್ನು ಕಂಡು ನಮ್ಮ ಮೇಲೆ ಸಿಟ್ಟುಗೊಂಡ ದೇವರು, ಈ ಅನಿಶ್ಚಿತತೆಗೇ ಸಿಂಗಾರ ಮಾಡಿ, ಅದರ ರಟ್ಟೆ ಹಿಡಿದು ನಮ್ಮ ಮುಂದೆ ನಿಲ್ಲಿಸಿದಂತೆ ಗೋಚರಿಸುತ್ತಿದೆ.

ಜಗತ್ತಿನತ್ತ ಮುಖಮಾಡಿ ನೋಡಿದರೆ ಈ ಅನಿಶ್ಚಿತತೆಯ ಭಯದಿಂದ ಪಾರಾಗಬೇಕಾದರೆ ಆರ್ಥಿಕತೆಯೇ ಪರಿಹಾರ ಎಂದು ಜಗತ್ತು ಬಡಬಡಿಸುತ್ತಿದೆ. ಅದು ನಿಜವೇ ಎಂದು ಪರಿಶೀಲಿಸುವ ವ್ಯವಧಾನವಾಗಲೀ, ತಾಳ್ಮೆಯಾಗಲೀ ಎಲ್ಲಿಯೂ ಕಾಣುತ್ತಿಲ್ಲ. ಯಾಕೆಂದರೆ ಆರ್ಥಿಕತೆಗೆ ಪರ್ಯಾಯವಾಗಿ ಯಾವುದೇ ಯೋಚನೆ ಮಾಡಬೇಕಿದ್ದರೂ, ಅಲ್ಲಿ ತ್ಯಾಗದ ಅವಶ್ಯಕತೆ ಕಾಣುತ್ತದೆ. ತ್ಯಾಗದ ವೇದಿಕೆಯನ್ನು ಅರಸುವುದಕ್ಕಿಂತ ಜಿಡಿಪಿಯ ಗುರಿಯನ್ನು ಮುಟ್ಟುವ ಭರಾಟೆಯೇ ಸದ್ಯಕ್ಕೆ ಉತ್ತಮವೆಂದು ಜಗತ್ತು ಭಾವಿಸಿದೆ ಎಂದು ಅನಿಸಲು ಶುರುವಾಗಿದೆ.

ಅನಿರೀಕ್ಷಿತವಾಗಿ ಜಗತ್ತಿನಲ್ಲಿ ಹೀಗೆ ಭಾರೀ ಬದಲಾವಣೆ ಸಾಧ್ಯ ಎಂಬುದನ್ನು ಕೊರೊನಾದ ದೆಸೆಯಿಂದಾಗಿ, ನೋಡುವುದು ಈ ತಲೆಮಾರಿನ ಜನರಿಗೆ ಸಾಧ್ಯವಾಗಿದೆ. ಅನಿರೀಕ್ಷಿತವಾದ ನಿಲುಗಡೆ, ನಷ್ಟ, ಬಿಕ್ಕಟ್ಟುಗಳನ್ನು ಕಂಡು ದಣಿಯುವಾಗ, ಮನದ ಮೂಲೆಯಲ್ಲಿ ಹಣತೆಯೊಂದು ಹೇಳುತ್ತಿದೆ, ‘ಹೀಗೇ ಅನಿರೀಕ್ಷಿತವಾಗಿ ಜಗತ್ತಿನಲ್ಲಿ ಒಳಿತೂ ಆಗಬಹುದಲ್ಲ..!’ ಮರದ ಕೆಳಗೆ ಬಿದ್ದ ಹೂವುಗಳನ್ನು ಒಂದೊಂದಾಗಿ ಆರಿಸಿಕೊಳ್ಳುವಂತೆ ನಾನು ಈ ಬೆಳಕಿನ ಹೂಗಳನ್ನು ಎತ್ತಿಕೊಂಡು ಪೋಣಿಸುತ್ತೇನೆ.

ನಾನಂತೂ 2021ನ್ನು ಹೊಸ ಭರವಸೆಯೊಂದಿಗೆ ನೋಡುವುದಕ್ಕೆ ಪ್ರಯತ್ನಿಸುತ್ತಿದ್ದೇನೆ. ಹಿಂದೆಯೂ ಜಗತ್ತು ಒಂದಲ್ಲ ಒಂದು ಬಿಕ್ಕಟ್ಟನ್ನು ಎದುರಿಸಿ, ಅದನ್ನು ದಾಟಿಕೊಂಡು ಬಂದಿದೆ. ‘ಆಕಾಶ ಬೀಳುವುದೆಂದು ಅಂಗೈ ಒಡ್ಡಲು ಸಾಧ್ಯವಿಲ್ಲ’ ಎಂದು ತಮಗೆ ತಾವೇ ಸಮಾಧಾನ ಹೇಳಿಕೊಳ್ಳುತ್ತ ನಮ್ಮ ಹಿರಿಯರು ಎಷ್ಟು ಕಡುಕಷ್ಟಗಳನ್ನು ದಾಟಿ ಬಂದಿದ್ದಾರೆ. ಹಿರಿಯರ ಮಾತುಗಳು, ಬೈಗುಳಗಳು, ಅನಿಸಿಕೆಗಳು, ಹಾಡುಪಾಡುಗಳಲ್ಲಿ- ಹೀಗೆ ಎಷ್ಟೊಂದು ಬೆಳಕಿನ ಹೂಗಳಿವೆ.

ಲಾಕ್ ಡೌನ್ ಎಂಬ ನೆಪಗಳು, ವೃತ್ತಿಯಲ್ಲಿ ದೊರೆತ ಬಿಡುವುಗಳು ನಮ್ಮನ್ನು ಅರಿಯುವುದಕ್ಕೆ ಅವಕಾಶ ಮಾಡಿಕೊಟ್ಟದ್ದಂತೂ ಹೌದು. ಜೊತೆಗೆ ಸಂತಸದ ಕ್ಷಣಗಳನ್ನು ಹೇಗೆ ಹೆಕ್ಕಿ ತೆಗೆಯಬೇಕು ಎಂಬ ಅರಿವನ್ನೂ ಅದು ಕೊಟ್ಟಿದೆ. ಲಾಕ್ ಡೌನ್ ವನವಾಸ ಮುಗಿಸಿ, ಇಸ್ತ್ರಿ ಮಾಡಿಟ್ಟ ಟಾಪ್, ದುಪ್ಪಟ್ಟಾ ಸೀರೆಗಳ ಮಡಿಕೆಯನ್ನು ಬಿಡಿಸುವಾಗ, ಲಿಪ್ ಸ್ಟಿಕ್ ನ ಟಾಪ್ ತೆಗೆದ ಕೂಡಲೇ ಬಣ್ಣವನ್ನು ಕಾಣುವಾಗ, ಬೆಳಿಗ್ಗೆ ಮಕ್ಕಳು ಸಮವಸ್ತ್ರ ಧರಿಸಿ ಬ್ಯಾಗ್ ಏರಿಸಿ ಹೊರಟಾಗ.. ಪಟ್ಟಿ ಮಾಡಿದರೆ ಇಂತಹ ಕ್ಷಣಗಳು ಅನೇಕ ಸಿಗಬಲ್ಲವು.

ಈ 2021 ಎಂಬ ವರ್ಷದ ಮೇಲೆ ಪಾಪ, ಎಲ್ಲರೂ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2020ರಲ್ಲಿ ಕಳೆದುಕೊಂಡಿರುವ ಎಲ್ಲವನ್ನೂ 21ರಲ್ಲಿ ಪಡೆಯುವ ಧಾವಂತದಲ್ಲಿ ಇರುವಂತೆ ಕಾಣಿಸುತ್ತಿದೆ. ನನ್ನೊಳಗಂತೂ ಅಂತಹ ಧಾವಂತದ ಕನಸೇನೂ ಮೂಡಿಲ್ಲ. ನನ್ನ ಇತಿಮಿತಿಯನ್ನು ಚೆನ್ನಾಗಿ ಪರಿಚಯಿಸಿದೆ 2020. ಈ ಹಿಂದೆಲ್ಲ ‘ಹಾಗೆ ಮಾಡಬೇಕಿತ್ತು, ಹೀಗಿರಬೇಕಿತ್ತು- ಸರಿಯಾಗಬೇಕಿತ್ತು’ ಎಂದೆಲ್ಲ ಗಾಸಿಪ್ ಮಾಡುತ್ತ ಹೇಳುತ್ತಿದ್ದ ಮಾತುಗಳು ಬಣ್ಣ ಕಳೆದುಕೊಂಡು ಕಣ್ಣ ಮುಂದೆ ಮೌನವಾಗಿ ಬಿದ್ದಿವೆ. ಓದು-ಬರಹ ಇರಬಹುದು, ಇತರ ಉದ್ದೇಶಿತ ಕೆಲಸಗಳಿರಬಹುದು, ಪ್ರವಾಸದ ಕನಸುಗಳಿರಬಹುದು, ಎಲ್ಲವೂ ಬಾಕಿ ಎಂಬ ಹಣೆಪಟ್ಟಿ ಹೊತ್ತು ರಾಶಿಯಾಗಿ ಬಿದ್ದಿವೆ.

ಬಹಳ ನೋಟ್ಸ್ ಬಾಕಿ ಇರಿಸಿಕೊಂಡ ವಿದ್ಯಾರ್ಥಿನಿಯಂತೆ ನಾನು, ಒಂದೊಂದೇ ಬಾಕಿಯನ್ನು ಕೈಗೆತ್ತಿಕೊಳ್ಳುತ್ತ ಹೊಸವರ್ಷವನ್ನು ಸ್ವಾಗತಿಸುತ್ತಿದ್ದೇನೆ. ಅಷ್ಟಕ್ಕೂ ಕಾಲದ ಲೆಕ್ಕಾಚಾರ ನಮ್ಮ ಮಾತಿನ ಅನುಕೂಲಕ್ಕಷ್ಟೇ ತಾನೇ. ಹಾಗಾಗಿ ಧಾವಂತದಿಂದ ಲಾಭವೇನೂ ಆಗದು ಎನಿಸುತ್ತದೆ. ಮಹಾ ಪ್ರವಾಹವೊಂದು ನದಿಯ ಪಾತ್ರವನ್ನು ಮೀರಿ ಹರಿದ ಬಳಿಕ ಶಾಂತವಾಗಿ, ಮತ್ತೆ ಆ ನದಿಯು ತನ್ನದೇ ಲಯದಲ್ಲಿ ಹರಿಯುತ್ತಿರುವಾಗ ತಳದಲ್ಲಿರುವ ಮರಳು ನಿಧಾನವಾಗಿ ಹೊರಳುತ್ತಿರುತ್ತದಲ್ಲ. ಹಾಗೆಯೇ ನಮ್ಮ ಜೀವನಗತಿಯೂ ನಿಧಾನವಾಗಿ ಈ ಬದಲಾವಣೆಗೆ ಹೊಂದಿಕೊಂಡು ಹೊಸ ಸವಾಲುಗಳಿಗೆ ಮುಖಮಾಡಿ ನಿಲ್ಲುವುದು ಸಾಧ್ಯವಾಗುತ್ತಿದೆ. ಆ ಮಟ್ಟಿಗೆ ಹೊಸ ಶತಮಾನದಲ್ಲಿ ಅತ್ಯಂತ ಸಕ್ರಿಯವಾದ ವರ್ಷ 2020 ಎನ್ನಬೇಕು.

ಕಳೆದ ವರ್ಷ ನಾವು ಕೆಲಸಗಳಿಂದ ವಿಮುಖರಾಗಿ ಮನೆಯಲ್ಲಿಯೇ ಕುಳಿತಿರಬಹುದು. ಆದರೆ ಜಗತ್ತು ಒಟ್ಟಾಗಿ, ಮನುಕುಲವೇ ಸಕ್ರಿಯವಾಗಿ ಜಾಗತಿಕ ಸವಾಲನ್ನು ಎದುರಿಸಲು ತಯಾರಿ ಮಾಡಿಕೊಂಡಿದೆ ಎಂಬುದನ್ನು ಮರೆಯುವಂತಿಲ್ಲ.

ಹೊಸ ವರ್ಷಕ್ಕೇ ಈಗ ಶಾಲೆ ಕಾಲೇಜುಗಳಲ್ಲಿ ಕಲರವ ತುಂಬಿರುವುದು ಮನಸ್ಸನ್ನು ಇನ್ನಷ್ಟು ಪ್ರಫುಲ್ಲಗೊಳಿಸಿದೆ. ಮಕ್ಕಳು, ಯುವಜನತೆಗೆ ಹೊಸ ಕನಸುಗಳೇ ಜೀವನದ ಕೇಂದ್ರಬಿಂದು. ಅಪ್ಪ ಅಮ್ಮಂದಿರಿಗೆ ಮಕ್ಕಳೇ ಕೇಂದ್ರಬಿಂದು. ಕೊರೊನಾ ಸೋಂಕಿನ ಸುದ್ದಿ ಹಬ್ಬುತ್ತಿದ್ದಂತೆಯೇ, ಬಾಗಿಲುಗಳನ್ನು ಮುಚ್ಚಿಕೊಂಡು ಗೂಡು ಸೇರಿದ್ದ ನಾವೆಲ್ಲರೂ, ಇಂದು ಬಾಗಿಲು ತೆರೆದು ಕೊರೊನಾದ ಜೊತೆಗೆ ಹೋರಾಡುತ್ತಲೇ ಬದುಕು ಕಟ್ಟಿಕೊಳ್ಳುವ ನಿರ್ಧಾರಕ್ಕೆ ಬರುವುದು ಸಾಧ್ಯವಾಗಿದೆ. ಎಂದರೆ ಏನನ್ನೇ ಆಗಲೀ ಎದುರಿಸಿ ಬದುಕುವುದು ಸಾಧ್ಯ ಎಂಬ ಭರವಸೆ ಮೂಡಿದೆಯಲ್ಲ. ಕೊರೊನಾ ಸೋಂಕು ತಡೆಯುವ ಲಸಿಕೆ ಸಿದ್ಧವಾಗಿರುವುದು ಈ ಯೋಚನೆಗೊಂದು ಪೂರಕ ಅಂಶ.

ಆದ್ದರಿಂದ 2020 ಕೊರೊನಾ ವರ್ಷ ಎಂದು ಹೇಳುವ ಬದಲು, ಅದೊಂದು ಹೋರಾಟದ ವರ್ಷ ಎಂದರೆ ಸರಿಯಾದೀತು. 2021 ಕೊರೊನಾ ರಹಿತ ವರ್ಷವೆಂದೇನೂ ಆಗದು. ಆದರೆ ಹೋರಾಟದ ಹಾದಿಯಲ್ಲಿ ನಾವು ಒಂದು ಹೆಜ್ಜೆ ಮುಂದೆ ಬಂದಿದ್ದೇವೆ. ಸ್ನೇಹ, ಭೇಟಿ, ಪರಸ್ಪರ ಕಾಳಜಿ, ಸಾಮಾಜಿಕ ಕೂಟಗಳು, ಪರಸ್ಪರ ದೀರ್ಘ ಮಾತುಕತೆಗಳು ನಮ್ಮ ಬದುಕಿಗೆ ಊಟೋಪಚಾರದಷ್ಟೇ ಅಗತ್ಯ ಎಂಬುದು ಈಗ ಸ್ಪಷ್ಟವಾಗಿದೆ.

ಮನುಷ್ಯರು ತಮ್ಮ ಜೀವನವನ್ನು ಇನ್ನಷ್ಟು ಪ್ರೀತಿಸಬೇಕು ಎಂದು ಹೇಳಿಕೊಟ್ಟ ವರ್ಷಕ್ಕೆ ನಾವು ವಿದಾಯ ಹೇಳುವಾಗ ಕೃತಜ್ಞತೆಯನ್ನೂ ಹೇಳಬೇಕಾಗಿದೆ. ಇಲ್ಲಿ ನಾವು ಬಾಳುವ ಪ್ರತಿದಿನವೂ ಅಮೂಲ್ಯ. ಇಲ್ಲಿರುವ ಎಲ್ಲರೂ, ಎಲ್ಲವೂ ಎಷ್ಟೊಂದು ಮುಖ್ಯ ಎಂಬುದನ್ನು 2020 ನಮಗೆ ಕಲಿಸಿದೆ. ಮುಂದಿನ ದಿನಗಳನ್ನು ರೂಪಿಸಿಕೊಳ್ಳಲು ಇದಕ್ಕಿಂತ ಭದ್ರ ಬುನಾದಿ ಮತ್ತೊಂದು ಬೇಕೇ.