ನಿನ್ನೆ ಹಳೆಯದನ್ನೆಲ್ಲಾ ಝಾಡಿಸುವ ಸಂಕಲ್ಪ ಮಾಡಿ ಒಂದೊಂದಾಗಿ ಹೊರದಬ್ಬಲು ಆರಂಭಿಸಿದೆ. ಯಾವಾಗಲೋ ಸಾವಿರಾರು ಕೊಟ್ಟು ಫ್ಯಾಬ್ ಇಂಡಿಯಾದಲ್ಲಿ ಕೊಂಡ ಟಾಪುಗಳು ನನ್ನ ಇಂದಿನ ‘ತೂಕದ ವ್ಯಕ್ತಿತ್ವ’ ವನ್ನು ಹಿಡಿದಿಡಲು ಸಾಧ್ಯವೇ ಇಲ್ಲ. ಸರಿ, ಆ ಕಡೆ ಇಡುವುದಾಯಿತು.  ಮತ್ತೆ ಮಣ ಭಾರವಿರುವ ಈ ಜೀನ್ಸುಗಳು ನನ್ನ ಈಗಿನ ಸೊಂಟದ ಅಳತೆ ನೋಡಿ ಎಲ್ಲಿ ಮುಖ ಮುಚ್ಚಿಕೊಳ್ಳುತ್ತವೋ ಅಂತ ನಾನೇ ಅತ್ತ ಸರಿಸಿಬಿಟ್ಟೆ.
‘ಕನಾರಳ್ಳಿ ಕಾರ್ನರ್‌’ನಲ್ಲಿ ವಸ್ತ್ರ ವಿಲಾಸದ ಕುರಿತು ಬರೆದಿದ್ದಾರೆ ಸುಕನ್ಯಾ ವಿಶಾಲ ಕನಾರಳ್ಳಿ

ಕಾಲೇಜಿನಲ್ಲಿ ಪಾಠ ಮಾಡುವ ಕೊನೆಯ ಐದು ವರ್ಷಗಳಲ್ಲಿ ಸೀರೆ ಎಂಬ ಫ್ಯಾನ್ಸಿ ಡ್ರೆಸ್ಸನ್ನೂ ಸಹ ಬಿಟ್ಟುಕೊಟ್ಟು ಹಗುರವಾಗಿದ್ದೆ.

ಹರಿ ದಿನಾ ಸೂಟು ಬೂಟು ಧರಿಸುವ ಕೆಲಸಕ್ಕೆ ಸೇರಿದ ಮೇಲಂತೂ ನನ್ನ ಲೇವಡಿ ಇನ್ನಷ್ಟು ಹೆಚ್ಚಾಗಿತ್ತು. ಬೆಳಗಿನ ಕಾಫಿ ಕುಡಿದ ಮೇಲೆ, ‘ಹೋಗು, ನಿನ್ನ ಸೀರೆ ಉಡುವುದಕ್ಕೆ ಹತ್ತು ನಿಮಿಷವಾದರೂ ಬೇಕು,’ ಅಂತ ರೇಗಿಸುತ್ತಿದ್ದೆ. ಮೊಜೊಪಪ್ಪಿ ಅವನ ಸೂಟುಬೂಟನ್ನು ನೋಡಿದ ತಕ್ಷಣ ಅವನ ಮೇಲೆ ಚಂಗನೆ ನೆಗೆಯುತ್ತಿತ್ತು. ‘ಅದರ ಕಣ್ಣಿಗೆ ಖಳನಾಯಕನ ತರಹ ಕಾಣಿಸುತ್ತೀಯೋ ಏನೋ,’ ಅಂತ ರೇಗಿಸಿದರೂ ಸಹ ಅವನ ಚೆಂದದ ಬಿಳಿ ಶರ್ಟು ಕೊಳೆಯಾಗದಿರಲಿ ಅಂತ ‘ ದುಶ್ಯಾಸನನನ್ನ ಹಿಡಿದುಕೊಂಡಿದ್ದೇನೆ ದ್ರೌಪದಿ, ನಿನ್ನ ವಸ್ತ್ರಾಪಹರಣವಾಗುವುದಿಲ್ಲʼ ಅಂತ ಭರವಸೆ ಕೊಡುತ್ತಿದ್ದೇನೆ. ಬೇಗ ಮನೆಯಿಂದ ಹೊರಡುವಂತವಳಾಗು,’ ಅಂತ ನಾಟಕೀಯವಾಗಿ ಹೇಳಿ ಅವನಿಗೆ ಇನ್ನಷ್ಟು ಕೋಪ ಬರಿಸುತ್ತಿದ್ದೆ.

ಶೂಗಳ ವಿಷಯದಲ್ಲಂತೂ ಹರಿ ಮಹಾ ಶೋಕಿಲಾಲ. ಪಾಪ ಅನಿವಾರ್ಯವೂ ಹೌದು. ಬಿಳಿ ತೊಗಲಿನವರ ಜೊತೆಯ ಬೋರ್ಡ್ ಮೀಟಿಂಗುಗಳಲ್ಲಿ ತನ್ನ ಮಾರುದ್ದ ಕಾಲುಗಳನ್ನು ಒಂದರ ಮೇಲೊಂದು ಹಾಕಿ ಧಿಮಾಕು ತೋರಿಸಬೇಕೆಂದರೆ ಒಳ್ಳೆಯ ಶೂಗಳನ್ನು ಹಾಕಿರಬೇಕು ಅಂತ ಅವನ ಥಿಯರಿ. ಪ್ರತಿ ಸಲ ಇಂಡಿಯಾದಿಂದ ಬರುವಾಗ ಅವನ ವಸ್ತುಗಳನ್ನು ಮೊದಲು ಪ್ಯಾಕಿಸಿ ನಂತರ ಜಾಗ ಉಳಿದಿದ್ದರೆ ನನ್ನದನ್ನು ಕೊಂಡೊಯ್ಯುತ್ತಿದ್ದೆ.

ಆದರೂ ಅದೆಷ್ಟು ಬಟ್ಟೆಗಳು ಪೇರಿಸಿಕೊಂಡಿದ್ದವೋ!

ನಿನ್ನೆ ಹಳೆಯದನ್ನೆಲ್ಲಾ ಝಾಡಿಸುವ ಸಂಕಲ್ಪ ಮಾಡಿ ಒಂದೊಂದಾಗಿ ಹೊರದಬ್ಬಲು ಆರಂಭಿಸಿದೆ. ಯಾವಾಗಲೋ ಸಾವಿರಾರು ಕೊಟ್ಟು ಫ್ಯಾಬ್ ಇಂಡಿಯಾದಲ್ಲಿ ಕೊಂಡ ಟಾಪುಗಳು ನನ್ನ ಇಂದಿನ ‘ತೂಕದ ವ್ಯಕ್ತಿತ್ವ’ ವನ್ನು ಹಿಡಿದಿಡಲು ಸಾಧ್ಯವೇ ಇಲ್ಲ. ಸರಿ, ಆ ಕಡೆ ಇಡು. ಮತ್ತೆ ಮಣ ಭಾರವಿರುವ ಈ ಜೀನ್ಸುಗಳು ನನ್ನ ಈಗಿನ ಸೊಂಟದ ಅಳತೆ ನೋಡಿ ಎಲ್ಲಿ ಮುಖ ಮುಚ್ಚಿಕೊಳ್ಳುತ್ತವೋ ಅಂತ ನಾನೇ ಅತ್ತ ಸರಿಸಿಬಿಟ್ಟೆ.

ನ್ಯೂಜಿಲ್ಯಾಂಡಿನಲ್ಲಿ ಚಳಿ ಜಾಸ್ತಿ ಅಂತ ಹೋದಲ್ಲೆಲ್ಲಾ ಕೊಂಡ ಸ್ವೆಟರು, ಪುಲ್ ಓವರು, ಜರ್ಕಿನ್ನು, ಕೋಟು… ಅಯ್ಯೋ ಕರ್ಮವೇ! ಹಾಕಿಕೊಳ್ಳುವುದು ಮಾತ್ರ ಮೂರು ಮತ್ತೊಂದು. ಅದಕ್ಕೆ ಇಷ್ಟೊಂದು ಅಟ್ಟಹಾಸ ಬೇಕಿತ್ತೆ?

ಮತ್ತೆ ಸ್ಕಾರ್ಫುಗಳು, ದುಪಟ್ಟಾಗಳು, ಶಾಲುಗಳು, ಬ್ಯಾಗುಗಳು, ಚಪ್ಪಲಿಗಳು, ಶೂಗಳು… ಕೆಲವು ಬೇರೆಯವರು ಕೊಟ್ಟಿದ್ದೇನೋ ಹೌದು. ಆದರೂ ವರ್ಷಾ ವರ್ಷಾ ಖಾಲಿ ಮಾಡಿ ಹಗುರಾಗುವುದು ಬಿಟ್ಟು ನನ್ನ ದೇಹದ ತೂಕ ಹೆಚ್ಚಿದಂತೆಯೇ ನನ್ನ ವಾರ್ಡ್ ರೋಬೂ ಹಿಗ್ಗಲಿಸುತ್ತಾ ಹೋಗಲಿಕ್ಕೆ ಯಾಕೆ ಬಿಟ್ಟೆನೋ!

ದಿನದ ಕೊನೆಯಲ್ಲಿ ಕರೋರಿಯ ಮೂಲೆಯಲ್ಲಿ ಇರುವ ಕ್ಲೊದಿಂಗ್ ಬಿನ್ ಒಳಗಡೆ ಹಾಕಲು ಐದು ಮೂಟೆಗಳು ತಯಾರಾಗಿದ್ದವು. ‘ಭೂಮಿ’ ಯಲ್ಲಿ ಅವುಗಳನ್ನೆಲ್ಲಾ ಹೊತ್ತು ಹಾಕಿಕೊಂಡು ಹೋದೆ. ಇಷ್ಟಗಲ ಬಾಯಿಯ ಬಿನ್ನು ಒಂದೊಂದಾಗಿ ಗಬಕ್ಕನೆ ನುಂಗಿಕೊಳ್ಳುತ್ತಾ ಹೋದಂತೆ ಯಾಕೋ ನನ್ನ ಮನಸ್ಸು, ಹೃದಯ, ಆತ್ಮಗಳೂ ಸಹ ಹಗುರಾಗುತ್ತಾ ಹೋದಂತೆ ಅನ್ನಿಸಿತು.


ನೆನಪುಗಳು ಮತ್ತು ಸಂಬಂಧಗಳೂ ಹೀಗೇ ಏನೋ! ಖಾಲಿ ಮಾಡಿಕೊಂಡಷ್ಟೂ ಹಗುರವಾಗಬಹುದು.
ಹೊರಲಾರದ ಗಾಳಿಭಾರದಲ್ಲಿ ನನ್ನ ವಾರ್ಡ್ ರೋಬು ಕಣ್ಣು ಹೊಡೆಯುತ್ತಿದೆ.