ದಕ್ಷಿಣ ಭಾರತದಲ್ಲಿ ಶತಶತಮಾನಗಳಿಂದ ಮೌಖಿಕವಾಗಿ ಪ್ರಸಾರವಾದ ಚಾಟು ಎಂದು ಕರೆಯಲ್ಪಡುವ ಕವನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಈ ಕೃತಿ ಅಂಥ ಕವನಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತದೆ. ಕವಿತೆಗಳಲ್ಲಿನ ಬೌದ್ಧಿಕತೆ ಮತ್ತು ನಿಖರತೆ, ಸಾಮಾನ್ಯ ಸಂಗತಿಗಳ ಕುರಿತ ಭಾವಗೀತಾತ್ಮಕ ಒಳನೋಟ, ಐಂದ್ರಿಯಕ ಅನುಭವದ ಮೇಲಿನ ಮೋಹ ಮತ್ತು ಭಾಷೆ ಮತ್ತು ಬಯಕೆಯ ನಡುವಿನ ಸಂಬಂಧದ ಅನ್ವೇಷಣೆ ಇವೇ ಮೊದಲಾದುವುಗಳಿಂದ ಈ ಕೃತಿ ಗಮನಾರ್ಹವಾಗಿವೆ. ಒಟ್ಟಿಗೆ ಪರಿಗಣಿಸಿದರೆ ಚಾಟುಗಳು ಆಳಕ್ಕಿಳಿಯುವ ವಿಮರ್ಶಾತ್ಮಕ ದೃಷ್ಟಿ ಹೊಂದಿವೆ ಹಾಗೂ ತೆಲುಗು, ತಮಿಳು ಮತ್ತು ಸಂಸ್ಕೃತದ ಶಾಸ್ತ್ರೀಯ ಸಂಪ್ರದಾಯಗಳ ಕುರಿತು ತಿಳುವಳಿಕೆಯೊಂದನ್ನು ನೀಡುತ್ತವೆ. ಇಲ್ಲಿ ಕೆಲವು ಚಾಟುಗಳನ್ನು ನೀವು ಓದಬಹುದು.
ಆರ್. ವಿಜಯರಾಘವನ್ ಬರೆದ ತೆಲುಗಿನ ಚಾಟು ಕವಿತೆಗಳ ಕುರಿತ ಲೇಖನ

 

ತೀರಾ ಇತ್ತೀಚಿನವರೆಗೂ, ತೆಲುಗು ಕಾವ್ಯಪ್ರೇಮಿಗಳು ಪರಸ್ಪರ ಕಲೆತಾಗಲೆಲ್ಲಾ ಚಾಟು ಕವಿತೆ ಎಂದು ಕರೆಯಲ್ಪಡುವ ಒಂದು ಬಗೆಯ ಮೌಖಿಕ ಪದ್ಯಗಳನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದರು. ಇವನ್ನು ಸಾಮಾನ್ಯವಾಗಿ ಪೂರ್ವಸೂರಿ ಕವಿಗಳಿಗೆ ಅನ್ವಯಿಸಲಾಗುತ್ತಿತ್ತು. ಬಹುಪಾಲು ಇವಕ್ಕೆ ಒಂದಿಲ್ಲೊಂದು ಕಥೆಯೊಂದಿಗೆ ಸಂಬಂಧವಿರುತ್ತದೆ. ಅಂತಹ ಕವನಗಳು ಅರಸರು, ಆಸ್ಥಾನ ಕಲಾವಿದೆಯರು, ಮಹಾಕವಿಗಳು ಮತ್ತು ವಿದ್ವಾಂಸರ ವ್ಯಕ್ತಿತ್ವಗಳನ್ನು ಮಾತಿನಲ್ಲಿ ಚಿತ್ರಿಸಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಾಹಿತ್ಯದ ಶಾಸ್ತ್ರೀಯ ಗ್ರಂಥ ಸಂಪ್ರದಾಯ ನೆಲೆಗೊಂಡಿರುವ ಇಡೀ ಸಾಹಿತ್ಯಕ ಸನ್ನಿವೇಶಗಳಿಲ್ಲಿ ಚಿತ್ರಿತವಾಗುತ್ತವೆ ಮತ್ತು ಲಘು ವಿಮರ್ಶೆಗೆ ಒಳಪಡುತ್ತವೆ.

ಕೆಲವು ವಿಧಗಳಲ್ಲಿ, ಈ ಮೌಖಿಕ ಪದ್ಯಗಳು ನಿರ್ದಿಷ್ಟವಾಗಿ ಸಾಹಿತ್ಯ ವಿಮರ್ಶೆಯ ಸ್ವರೂಪವನ್ನು ರೂಪಿಸುತ್ತವೆ. ಉದ್ದೇಶಿತ ಕವಿಗಳ ಶೈಲಿ ಮತ್ತು ವಿಷಯಾಧಾರಿತ ವೈಶಿಷ್ಟ್ಯಗಳನ್ನು ಅವು ಎತ್ತಿ ತೋರಿಸುತ್ತವೆ. ಆಳವಾದ ಅಂತಃಪಠ್ಯೀಯ ವಿಧಾನಗಳಲ್ಲಿ ಒಂದು ಕವಿಕಾವ್ಯ ಧ್ವನಿಯನ್ನು ಇನ್ನೊಂದರ ವಿರುದ್ಧ ಹೋಲಿಸಿ ನೋಡುತ್ತವೆ. ಪ್ರಬಲ ಕಾವ್ಯಸಂದರ್ಭಗಳನ್ನು ಸೂಚಿಸಿ ವಿವರಿಸುತ್ತವೆ. ಸಾಹಿತ್ಯ-ವಿಮರ್ಶಾತ್ಮಕ ಮತ್ತು ಮೆಟಾಪೊಯೆಟಿಕ್ ವಿವರಣೆಗಳ ಜೊತೆಗೆ ಈ ಪದ್ಯಗಳು ಪರಮಾಧಿಕಾರ ಕಲಾಪೋಷಕರು ಮತ್ತು ಗ್ರಂಥಸೀಮಿತ ಜ್ಞಾನದ ವ್ಯಕ್ತಿಗಳನ್ನು ಸಹ ಲೇವಡಿ ಮಾಡುತ್ತವೆ. ಹಾಗೆಯೇ ಸಾಮಾಜಿಕ ವಿಮರ್ಶೆಯನ್ನು ವಿವಿಧ ಹಾಗೂ ವ್ಯಾಪಕ ಸ್ವರೂಪಗಳಲ್ಲಿ ಮುಂದಿಡುತ್ತವೆ.

ಒಬ್ಬ ನಿರ್ದಿಷ್ಟ ಪ್ರಸಿದ್ಧ ಕವಿಗೆ ಚಾಟು ಪದ್ಯವನ್ನು ಅನ್ವಯಿಸುವುದು ಸಾಮಾನ್ಯವಾಗಿ ಪ್ರಸಿದ್ಧವಾದ ಕವಿತೆಯ ಹುಟ್ಟನ್ನು ಅದರ ತೊಟ್ಟಲಿನಲ್ಲಿಯೇ ಮರೆಮಾಡುತ್ತದೆ. ಇದರರ್ಥ ಆ ಕವಿ, ಅವರ ಶೈಲಿ ಮತ್ತು ಸಾಹಿತ್ಯ ಸಂಸ್ಕೃತಿಯಲ್ಲಿ ಅವರ ಪಾತ್ರದ ಬಗ್ಗೆ ಒಂದು ನಿರ್ದಿಷ್ಟ ತಿಳುವಳಿಕೆಯನ್ನು ವ್ಯಕ್ತಪಡಿಸುವುದು. ಹೆಚ್ಚಾಗಿ ಸಾಹಿತ್ಯದ ಇತಿಹಾಸಕಾರರು ಈ ಚಲನಶೀಲತೆಯನ್ನು, ಕ್ರಿಯಾತ್ಮಕತೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಈ ಕವಿತೆಗಳನ್ನು ಅಕ್ಷರಶಃ ಅದರ ಲೇಖಕರೇ ಬರೆದಿದ್ದಾರೆ. ಅಲ್ಲದೆ ಆ ಮೂಲಕ ಚಾಟು ತನ್ನ ಸಾಮಾಜಿಕ ಕಾರ್ಯ ಮತ್ತು ಸಾಂಘಿಕ ಕರ್ತೃತ್ವವನ್ನು ಕಳೆದುಕೊಂಡಿದೆ ಎಂದು ಅವರು ಭಾವಿಸಿದ್ದೇ ಇದಕ್ಕೆ ಕಾರಣ.

ಇದಲ್ಲದೆ ಈ ಕವನಗಳನ್ನುಒಟ್ಟಿಗೆ ಪರಿಶೀಲನೆಗೆ ತೆಗೆದುಕೊಂಡರೆ ಇವು ಆಂತರಿಕವಾಗಿ ಸಂಪ್ರದಾಯದಲ್ಲಿ ನೆಟ್ಟ ದಟ್ಟವಾದ ಸ್ವರೂಪವನ್ನು ಮತ್ತು ಪರಿಕಲ್ಪನಾತ್ಮಕವಾದ, ಪರಸ್ಪರ ಸಂಬಂಧ ಹೊಂದಿದ ವ್ಯವಸ್ಥಿತ ಗುಣವನ್ನು ಹೊಂದಿವೆ. ಹೀಗೆ ಒಂದು ಚಾಟು ಏಕಕಾಲಕ್ಕೆ ಒಂದೇ ಆಗಿಯೂ, ಪ್ರತ್ಯೇಕವೂ ಆಗಿರುವ ಕವಿತೆಯಂತೆ ತೋರುವುದರ ಮೂಲಕ ನಮ್ಮನ್ನು ಮೋಸಗೊಳಿಸುವಂತೆ ಕಾಣಿಸಬಹುದು. ಆದರೆ ವಾಸ್ತವವಾಗಿ ಇದು ಹೆಚ್ಚು ವಿಶಾಲವಾದ ವ್ಯವಸ್ಥೆಯ ಭಾಗವಾಗಿ ಅನುರಣಿಸುತ್ತದೆ. ಮೌಖಿಕ ಚಾಟುವಿನ ಅರ್ಥೈಸುವಿಕೆ ಹಾಗೂ ಅರಿಯುವಿಕೆಯ ದಿಕ್ಕಿನಲ್ಲಿ A Poem at the Right Moment: Remembered Verses from Pre Modern South India (Voices from Asia) Velcheru Narayana Rao, David Shulman ಎಂಬ ಕೃತಿ ಈ ದೆಸೆಯಲ್ಲಿ ಬಹಳ ಮುಖ್ಯವಾದುದು.

ದಕ್ಷಿಣ ಭಾರತದಲ್ಲಿ ಶತಶತಮಾನಗಳಿಂದ ಮೌಖಿಕವಾಗಿ ಪ್ರಸಾರವಾದ ಚಾಟು ಎಂದು ಕರೆಯಲ್ಪಡುವ ಕವನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಈ ಕೃತಿ ಅಂಥ ಕವನಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತದೆ. ಕವಿತೆಗಳಲ್ಲಿನ ಬೌದ್ಧಿಕತೆ ಮತ್ತು ನಿಖರತೆ, ಸಾಮಾನ್ಯ ಸಂಗತಿಗಳ ಕುರಿತ ಭಾವಗೀತಾತ್ಮಕ ಒಳನೋಟ, ಐಂದ್ರಿಯಕ ಅನುಭವದ ಮೇಲಿನ ಮೋಹ ಮತ್ತು ಭಾಷೆ ಮತ್ತು ಬಯಕೆಯ ನಡುವಿನ ಸಂಬಂಧದ ಅನ್ವೇಷಣೆ ಇವೇ ಮೊದಲಾದುವುಗಳಿಂದ ಈ ಕೃತಿ ಗಮನಾರ್ಹವಾಗಿವೆ. ಒಟ್ಟಿಗೆ ಪರಿಗಣಿಸಿದರೆ ಚಾಟುಗಳು ಆಳಕ್ಕಿಳಿಯುವ ವಿಮರ್ಶಾತ್ಮಕ ದೃಷ್ಟಿ ಹೊಂದಿವೆ ಹಾಗೂ ತೆಲುಗು, ತಮಿಳು ಮತ್ತು ಸಂಸ್ಕೃತದ ಶಾಸ್ತ್ರೀಯ ಸಂಪ್ರದಾಯಗಳ ಕುರಿತು ತಿಳುವಳಿಕೆಯೊಂದನ್ನು ನೀಡುತ್ತವೆ. ಇಲ್ಲಿ ಕೆಲವು ಚಾಟುಗಳನ್ನು ನೀವು ಓದಬಹುದು.

1.ಮತ್ತೆ ನನ್ನ ಬಳಿಗೆ

ಕಡುಗೆಂಪು ತುಟಿಗಳು, ಮೊಲೆಗಳು
ಮೈಯ ಬಾಗುಬಳುಕುಗಳು
ಹೃದಯ ಕದಿವ ಕೂರಂಬು ಕಂಗಳು
ಇವನ್ನು ನೀ ನನಗೆ ತೋರಿಸದಿದ್ದರೆ ಏನಂತೆ?
ನೀನು ಬೇರೆ ದಾರಿಯನ್ನು ತುಳಿದರೇನು?
ನಾನು ಅದನ್ನು ಮಾಡಲು ಸಾಧ್ಯವಿಲ್ಲವೇ?
ನಿನ್ನ ಬಾಗುಬಳುಕಿನ ನಿದ್ದೆಗೆಡಿಸುವ ಹಿಂಬದಿ
ಮತ್ತೆ ನಿನ್ನ ನಾಗಸುರುಳಿಯ ಆಕಾರದ ಜಡೆ!
ನದಿಯ ಒಂದು ಬದಿಯಲ್ಲಿ ಖುಷಿ
ಇನ್ನೊಂದು ಬದಿಯಲ್ಲಿ ಬೇಸರ ಇರುವುದೇ
ಹುಣ್ಣಿಮೆಯಂದು ಪೂರ್ಣ ಚಂದಿರ
ನೀರಿನಲ್ಲಿ ನಿನ್ನ ಮುಗುಳುನಗೆಯಂತೆ ಮಿನುಗಿದಾಗ?

ತೆನಾಲಿ ರಾಮಲಿಂಗಡು ಎಂಬುವವನಿಗೆ ಅನ್ವಯಿಸಿ ಇದನ್ನು ಹೇಳಲಾಗಿದೆ. ಅವನಿಲ್ಲಿ ಹಾಸಿಗೆಯಲ್ಲಿ ಅವನಿಂದ ದೂರ ಸರಿದ ಒಬ್ಬ ಮಹಿಳೆಯನ್ನು ಉದ್ದೇಶಿಸಿ ಮಾತನಾಡಿರುವಂತಿದೆ.

2. ಗೆಳೆಯರಿಗೆಲ್ಲ ಶುಭಾಶಯಗಳು

ದೇವಾಲಯದ ಗೋಡೆಯ ಮೇಲೆ ಮಂಗ
ಪೂಜಾರಿಯ ಸುಂದರ ಹೆಂಡತಿ
ಬೀದಿಯಲ್ಲಿ ಹೋಗುತ್ತಿರುವ ವೇಶ್ಯೆ
ಹೊರಗೆ ಊಳಿಡುವ ಆಷಾಢದ ಗಾಳಿ
ನೀನು ಹಳ್ಳಿಗೆ ಹೋಗುತ್ತಿರುವುದಿದ್ದರೆ
ಅವನಿಗೆ ಕೇಳಿದೆನೆಂದು ಹೇಳು, ನನಗಾಗಿ

ಆದಿಗೋಪ್ಪುಲ ಎಂಬ ಹಳ್ಳಿಯ ಕುರಿತು ನಾಸ್ಟಾಲ್ಜಿಕ್ ಆಗಿರುವ ಶ್ರೀನಾಥನಿಗೆ ಇದನ್ನು ಅನ್ವಯಿಸಿ ಹೇಳಲಾಗಿದೆ.

3. ತಪ್ಪಾಗಿದ್ದೇನು?

ಅವನು ಒಳ್ಳೆಯ ಪ್ರೇಮಿಯೇ?
ಅವನು ಅದ್ಭುತ ಪ್ರೇಮಿ
ಅವನು ಹಾಸಿಗೆಯಲ್ಲಿ ಹೊಸಹೊಸ ಪಟ್ಟು
ಹಾಕುವಂಥವನಾಗಿದ್ದಾನೆಯೇ?
ಅವನಿಗೆ ಬಹಳ ಸುಂದರ ಕಲ್ಪನೆಗಳಿವೆ
ಅವನು ಸುಂದರನೇ?
ಅವನು ಕಾಮನನ್ನೇ ಮೀರಿಸುತ್ತಾನೆ
ಆದರೆ ಅವನು ನಿನ್ನನ್ನು ಪ್ರೀತಿಸುತ್ತಾನೆಯೇ?
ಇತರರೆಲ್ಲರ ಮೀರಿಸುವಂತೆ
ಹಾಗಿದ್ದರೆ ನೀ ಯಾಕೆ
ಪರಪುರುಷರೊಂದಿಗೆ ಓಡಾಡುತ್ತಿದ್ದೀ?

ನೀನು ಧೈರ್ಯಶಾಲಿ, ನೀನು ಅನುಭವಿ
ನೀನು ಈ ವಿಷಯದ ಬಗ್ಗೆ ತಿಳಿದುಕೊಳ್ಳಲೇಬೇಕು
ಅವನಲ್ಲಿ ಒಂದೇ ಒಂದು ತಪ್ಪಿದೆ
ಅವನು ನನ್ನ ಗಂಡ.

ಶ್ರೀನಾಥನಿಗೆ ಇದನ್ನು ಅನ್ವಯಿಸಿ ಹೇಳಲಾಗಿದೆ.

ಸಂಪೂರ್ಣವಾಗಿ ಮರೆಮಾಚಲಾಗಿಲ್ಲ

ಸಂಪೂರ್ಣವಾಗಿ ಮರೆಮಾಚಲಾಗಿಲ್ಲ
ಆ ಗುಜರಾತಿ ಮಹಿಳೆಯ
ಅಗಾಧ ಸ್ತನಗಳಂತೆ

ತಮಿಳು ಹೆಣ್ಣ ಮೊಲೆಗಳಂತೆ
ವೀಕ್ಷಿಸಲು ಮುಕ್ತವಾಗಿಲ್ಲ

ಅದರ ಬದಲು ತೆಲುಗು ಬಾಲೆಯ
ಉಬ್ಬಿದ, ಅರೆತೆರೆದ ಮೊಲೆಗಳಂತೆ
ಮರೆಮಾಚಲಾಗಿಲ್ಲ
ಅಂತೇ ಬಹಿರಂಗಪಡುವುದಿಲ್ಲ

ಒಂದು ಕವಿತೆಯನ್ನು
ಬೇರೆ ಹೇಗೆ ಬರೆಯಬೇಕು
ಎನ್ನುವುದೊಂದು ತಮಾಷೆ.

ಪ್ರೇಮ ಪತ್ರ

ಆತ್ಮೀಯ ಓ..

ನಿನ್ನ ಆ ಸಣ್ಣ ಸೊಂಟ
(ಬಹುತೇಕ ಕಾಣುವುದೇ ಇಲ್ಲ)
ನಿನ್ನ ಭವ್ಯತೆ, ನೀನು ಕೋಮಲವಾಗಿ ನಡೆವ ದಾರಿ
ಅವೆಲ್ಲವಕ್ಕೂ ನನ್ನ ಆಶೀರ್ವಾದವಿದೆ

ನೀನು ಚೆನ್ನಾಗಿದ್ದೀ ಎಂಬ ಭಾವನೆ
ಅವೆಲ್ಲ ನಿನ್ನವೆ ಎಂಬ ಭಾವನೆ

ನಾನು ಸಾಕಷ್ಟು ಚೆನ್ನಾಗಿದ್ದೇನೆ
ದಯವಿಟ್ಟು ನನಗೆ ಸುದ್ದಿ ಕಳುಹಿಸು
ಸಿಹಿ ಸುದ್ದಿ

ಪ್ರತಿ ಕ್ಷಣ ನಾನು ನಿನ್ನನ್ನು
ಹೆಚ್ಚು ಬಯಸುತ್ತೇನೆ

ನಿನ್ನ ವಿಶ್ವಾಸಿ

***

ವ್ಯತ್ಯಾಸವೇನು?

ಕಾವ್ಯದ ಬಗ್ಗೆ ಅಭಿರುಚಿ ಇಲ್ಲದ ಜನರು
ಜಾನುವಾರುಗಳಿಗಿಂತ ಭಿನ್ನವಾಗಿಲ್ಲ

ಅವರು ಹುಲ್ಲು ಮೇಯುವುದಿಲ್ಲ
ಬದುಕಿದವು ಆ ಪ್ರಾಣಿಗಳು

ಮಡಿಕಿ ಸಿಂಗಣ್ಣ, ಸಕಲನೀತಿ ಸಮ್ಮತಮು, ಸಂ. ನಿದುದವೋಲು ವೆಂಕಟ ರಾವು ಮತ್ತು ಪೊನಂಗಿ ಶ್ರೀರಾಮ ಅಪ್ಪಾರಾವು (ಹೈದರಾಬಾದ್: ಆಂಧ್ರಪ್ರದೇಶ ಸಾಹಿತ್ಯ ಅಕಾಡೆಮಿ, 1970), 31

ಮುಳುಗುವುದು

ಮನ್ಮಥನು ತನ್ನ ಬಾಣಗಳ ಹೂಡಿ
ನನ್ನೆಡೆಗೆ ಗುರಿಯಿಡಲಿ
ನಾನು ಅಂಜುವುದಿಲ್ಲ

ಅವನು ತನ್ನ ಮದನ ಧ್ವಜವನ್ನು ಹಾರಿಸಿ
ಹಲ್ಲೆ ಮಾಡಲಿ ನನ್ನ ಮೇಲೆ

ನಾನು ಸತ್ಯವನ್ನು ಹೇಳುತ್ತೇನೆ
ಜೋರಾಗಿ ಸ್ಪಷ್ಟವಾಗಿ

ಆ ದೊಡ್ಡ ಕಣ್ಣಿನ ಹುಡುಗಿ
ನನ್ನ ನೋಡಿದಾಗಲೆಲ್ಲಾ

ಪ್ರವಾಹವುಕ್ಕುತ್ತದೆ
ಕಮಲಗಳು ಕುತ್ತಿಗೆಯ
ಮಟ್ಟ ನೀರಲ್ಲಿ ಮುಳುಗುತ್ತವೆ
ಮೀನುಗಳು ದಿಕ್ಕೆಟ್ಟಿವೆ.

ಸುಂದರವಾದ ಹೆಣ್ಣಿನ ಕಣ್ಣುಗಳನ್ನು ಸಾಂಪ್ರದಾಯಿಕವಾಗಿ ಕಮಲದ ಹೂವುಗಳಿಗೆ ಅಥವಾ ಚಂಚಲ ಮೀನುಗಳಿಗೆ ಹೋಲಿಸಲಾಗುತ್ತದೆ.

ಬುಗುರಿ:
ಒಂದು ದಿನ ಆಸ್ಥಾನ(ರಾಜ)ನರ್ತಕಿಯೊಬ್ಬಳು ಪ್ರಸಿದ್ಧ ಕವಿ ಕುಸ್ಸಿಮಂಚಿ ತಿಮ್ಮಕವಿಯನ್ನು ಬೀದಿಯ ಮಧ್ಯದಲ್ಲಿಯೇ ಅಪ್ಪಿಕೊಂಡುಬಿಟ್ಟಳು. ಮುಜುಗರಕ್ಕೊಳಗಾದ ತಿಮ್ಮಕವಿ ಅವಳಿಂದ ಮುಖ ತಿರುಗಿಸಿಕೊಂಡುಬಿಟ್ಟ.

ಅವಳು ಅವನನ್ನು ಕೇಳಿದಳು:

“ನೀವು ನನ್ನ ಪ್ರೇಮಿಗಳಲ್ಲೆಲ್ಲ ಉತ್ತಮರು
ಅದಕ್ಕಾಗಿಯೇ ನಾನು ನಿಮ್ಮನ್ನು ಅಪ್ಪಿಕೊಂಡೆ
ಹೀಗಿರುವಾಗ ನಿಮ್ಮ ಮುಖವನ್ನತ್ತ ತಿರುಗಿಸುವುದು
ನ್ಯಾಯೋಚಿತ ಎಂದು ನೀವು ಭಾವಿಸುತ್ತೀರಾ?
ನೀವು ಉತ್ತಮ ಅಭಿರುಚಿಯಿರುವವರು
ಎಂದು ನಾನು ಭಾವಿಸಿದ್ದೆ!”

ತಿಮ್ಮಕವಿ ಉತ್ತರಿಸಿದ:

“ಇಲ್ಲ, ಪ್ರಿಯೆ. ನಿನ್ನ ಈ ಎರಡು ಸ್ತನಗಳು
ಚಿನ್ನದಿಂದ ಮಾಡಿದ ಬುಗುರಿಗಳಂತೆ
ತಿರುತಿರುಗಿ ನನ್ನ ಎದೆಯ ಮೂಲಕ ತೂರಿ
ನನ್ನ ಬೆನ್ನ ಹಿಂದೆ ಬಂದುಬಿಟ್ಟಿವೆಯೋ
ಎಂದು ನೋಡಲು ನಾನು ಪ್ರಯತ್ನಿಸುತ್ತಿದ್ದೆ.”

ತತ್ವಜ್ಞಾನಿಗಳು

ಆ ರಾಜಮಂಡ್ರಿಯ ಮಹದದ್ಭುತ ವಿದ್ವಾಂಸರು
ಅವರ ಚರ್ಚೆಗಳಲ್ಲಿ ಅವರು ಬಗೆಯಲು
ಯತ್ನಿಸುವ ವಿಚಾರಗಳು ಆಳವಾದವು
ದಣಿವರಿಯದೆ ತೀರ್ಪು ನೀಡಲು
ಅವರು ಪ್ರಯತ್ನಿಸುತ್ತಿದ್ದಾರೆ

ಮೊದಲಿನಲ್ಲಿ ಅಸ್ತಿತ್ವವಿದ್ದದ್ದರ
ಅಥವಾ ಈ ಮೊದಲು ಅಸ್ತಿತ್ವದಲ್ಲಿಲ್ಲದ
ಮತ್ತದರ ಪರಿಣಾಮವಾಗಿ ಅಗೋಚರವಾದದ್ದರ
ಸಂಭಾವ್ಯ ವಿನಾಶದ ಮೂಲಕ

ಉದಾಹರಣೆಗೆ ಇಂಥ ಸಂದರ್ಭಗಳು:
ಹೂವುಗಳು ಆಕಾಶದಲ್ಲಿ ಬೆಳೆಯುವುದು

ಜೀವವೃಕ್ಷದ ಮೂಲದಲ್ಲಿ
ಅದಕೋ ಅದ್ಭುತ ಪ್ರಭೆಯ
ಬೇರುಗಳು ಕೊಂಬೆಗಳು ಎಲೆಗಳು
ಆನಂದದಾಯಕ ಹೆಣ್ಣ ಮೈಯಿಂದ
ಬಿಡಿಸಿಕೊಳ್ಳುತ್ತವೆ

ಅವಳಿಗೆ ಕೆಳಗೆ ಗುಹ್ಯರೋಮಗಳಿರುವುದಕ್ಕೆ
ಪುರಾವೆಗಳಿವೆಯೋ
ಇಲ್ಲವೋ!

ರಾಜಮಂಡ್ರಿಯ ಉದ್ದಾಮ ಪಂಡಿತರ ಬಗ್ಗೆ ಶ್ರೀನಾಥನಿಗೆ ಇತ್ತೆನ್ನಲಾದ ಅತೀವ ತಿರಸ್ಕಾರವನ್ನು ಈ ಕವಿತೆ ಹೇಳುವುದೆಂದು ಭಾವಿಸಲಾಗಿದೆ. ಆಂಧ್ರ ಮಹಿಳೆಯರು ತಮ್ಮ ಗುಪ್ತಾಂಗದ ಬಳಿಯ ಕೂದಲನ್ನು ಬೋಳಿಸಿಕೊಳ್ಳುತ್ತಿದ್ದರು. ಪದ್ಯವನ್ನು ವ್ಯಂಗ್ಯದ ಸುತ್ತಲೂ ಕಟ್ಟಲಾಗಿದೆ. ಔಪಚಾರಿಕ ತರ್ಕದ ನೆಲೆಯಲ್ಲಿ ತಾಂತ್ರಿಕ ಸಂಸ್ಕೃತ ಪದಗಳ ಬಳಕೆಯಾಗಿದೆ.

ಚೆಲ್ಲಿದ ಮೊಸರು

ಒಬ್ಬಾನೊಬ್ಬ ರಾಜಕುಮಾರನು ಕುದುರೆಯ
ಮೇಲೆ ಸಣ್ಣ ಪಟ್ಟಣಕ್ಕೆ ಬಂದ
ಅವನು ಬಂದುದ ನೋಡಿ
ಗೊಲ್ಲಭಾಮೆಯರ ಗುಂಪು ದಾರಿಯಿಂದ ಚದುರಿದರು
ಅವರ ಮೊಸರಿನ ಮಡಕೆಗಳು
ಕೆಳಗೆ ಬಿದ್ದು ಒಡೆದುಹೋದವು
ಒಬ್ಬಳನ್ನು ಹೊರತುಪಡಿಸಿ ಉಳಿದವವರೆಲ್ಲ
ಆದ ನಷ್ಟಕ್ಕೆ ದುಃಖಿತರಾಗಿ ಅಳತೊಡಗಿದರು
ಆದರೆ ಒಬ್ಬಳು ಮಾತ್ರ ನಗಲು ಪ್ರಾರಂಭಿಸಿದಳು
ರಾಜಕುಮಾರ ಏಕೆಂದು ಅವಳನ್ನು ಕೇಳಲು
ಅವಳು ತನ್ನ ಬದುಕಿನ ಕತೆಯ ಹೀಗೆ ಹೇಳಿದಳು
ಮೊದಲು ನಾನು ಆಳರಸನನ್ನು ಕೊಂದೆ
ಬಳಿಕ ನನ್ನ ಗಂಡ ಹಾವು ಕಡಿದು ಸತ್ತ
ಹಸಿವಿನಿಂದ ಕಾಡಿಸಲ್ಪಟ್ಟ ನಾನು ಬೇರೆ
ಪಟ್ಟಣಕ್ಕೆ ಹೋಗಿ ನನ್ನ ದೇಹವನ್ನು ಮಾರಿಕೊಂಡೆ
ರಾಶಿ ಪಾಪವನ್ನು ಸಂಗ್ರಹ ಮಾಡಿಕೊಂಡೆ
ಆದರೆ ನನ್ನ ಸ್ವಂತ ಮಗನೇ ಗಿರಾಕಿಯಾಗಿ
ನನ್ನ ಬಳಿಗೆ ಬರುವುದನ್ನು ಕಂಡಾಗ
ಸಹಿಸಲಾಗದೆ ಹೋದೆ
ನನ್ನನ್ನೇ ಸುಟ್ಟುಕೊಳ್ಳಲು ಪ್ರಯತ್ನಿಸಿ ವಿಫಲವಾದೆ
ಈಗ ನಾನು ಮೊಸರು ಮಾರುತ್ತೇನೆ, ರಾಜ
ಮೊಸರು ಚೆಲ್ಲಿದರೆ ಏಕೆ ಅಳಬೇಕು?

ಈ ಪದ್ಯವು ಸುದೀರ್ಘ ಜಾನಪದ ನಿರೂಪಣೆಯ ಕೇಂದ್ರ ಪಠ್ಯವಾಗಿದೆ. ಇದನ್ನು ಗೊಲ್ಲಭಾಮಾ ಎಂಬ ತೆಲುಗು ಚಲನಚಿತ್ರವಾಗಿಸಲಾಗಿದೆ.

***

ಸರಿಯಾದ ಕ್ಷಣದಲ್ಲಿ ನೆನಪಿಸಿಕೊಳ್ಳುವ ಕವಿತೆ
ಎಷ್ಟೇ ಸರಳವಾದರೂ, ಜೀವನದೊಂದಿಗೆ ಹೊಳೆಯುತ್ತದೆ
ಪ್ರಣಯದಲ್ಲಿ ಅಲಂಕರಿಸದ ಸೌಂದರ್ಯವು ಪರಿಪೂರ್ಣವಾಗಿದೆ

***

ಓ ಸೃಷ್ಟಿಕರ್ತನೇ
ನಾನು ಮಾಡಿದ ಎಲ್ಲಾ ಪಾಪಗಳಿಗೆ
ಸೂಕ್ತವೆಂದು ನೀವು ಭಾವಿಸುವ
ಯಾವುದೇ ಶಿಕ್ಷೆಗೆ ನನ್ನನ್ನು ಒಳಪಡಿಸಿ
ಆದರೆ ಅಭಿರುಚಿಹೀನರಿಗೆ ಕಾವ್ಯವೋದುವ
ನರಕವನ್ನಲ್ಲ, ಅಲ್ಲವೇ ಅಲ್ಲ!

ಕಾಮಸೂತ್ರ

ಅದು ಮೊಟ್ಟಮೊದಲ ರಾತ್ರಿ
ನವವಧು ಆಶ್ಚರ್ಯಕರ ಕೌಶಲ್ಯವನ್ನು
ಪ್ರೀತಿಯ ಕಲೆಗಳಲ್ಲಿ ತೋರಿಸಿದಳು
ಎಷ್ಟರಮಟ್ಟಿಗೆಂದರೆ ಚಿಂತಾಕ್ರಾಂತನಾದ
ಅವಳ ಪತಿ ತಲೆಗೆ ಕೈಹಚ್ಚಿಕೊಂಡ
ಅವಳು ಸುಮ್ಮನೆ ನಕ್ಕಳು
ಗೋಡೆಯ ಮೇಲೆ ಚಿತ್ರವೊಂದನ್ನು ಬಿಡಿಸಿದಳು
ಸಿಂಹ ಮರಿ, ಕೇವಲ ಅರ್ಧ ಹುಟ್ಟಿದೆ
ಆಗಲೇ ಆನೆಯತ್ತ ಹಾರಿದೆ.