ಹ್ಯಾಂಡ್ ಪೋಸ್ಟ್ ಅಂದರೆ ಪೋಸ್ಟು ಕೊಡುವ ವ್ಯವಸ್ಥೆ ಇರಬೇಕು ಅಂತ ತೇಜಸ್ವಿ ಪುಸ್ತಕಗಳ ಎರಡನೇ ಪುಟದ ವಿಳಾಸ ನೋಡಿ ಅಂದುಕೊಂಡಿದ್ದೆ. ಆ ಹೆದ್ದಾರಿಗಳ ಸಂಗಮದ ತೋರುಗಂಬದ ಬುಡದಿಂದ ತೇಜಸ್ವಿ ಮನೆಗೆ ನಾವು ದಾರಿ ಕೇಳುತ್ತಾ ನಡೆದೇ ಹೋದೆವು. ಮೂಡಿಗೆರೆಯಲ್ಲಿ ಮಸಾಲೆ ದೋಸೆ ತಿನ್ನುವಾಗಲೂ ಈ ಹೋಟೆಲಿಗೆ ತೇಜಸ್ವಿ ಬಂದಿರುತ್ತಾರೆಂದು ಜೊತೆಗಿದ್ದ ವಿಕ್ಟರಿನ  ತರ್ಕ. ಹಾಗಾಗಿ ದಾರಿಯಲ್ಲಿ ಸಿಗುವ ಸಂಶೋಧನಾಲಯಗಳ, ಕಚೇರಿಗಳ, ಬಿರಿಯಾನಿ ಹೋಟೆಲುಗಳ ಬೋರ್ಡುಗಳನ್ನು ತೇಜಸ್ವಿ  ಕಾದಂಬರಿಗಳ ಅರ್ಥದಲ್ಲೇ ಅವನು ಓದುತ್ತಿದ್ದ. ಹ್ಯಾಂಡ್ ಪೋಸ್ಟಿನಿಂದ ತೇಜಸ್ವಿ ಗೇಟಿನವರೆಗೆ ಐದು ಜನರಲ್ಲಿ ಬೇಕೆಂತಲೇ ದಾರಿ ಕೇಳಿ ಅವರೆಲ್ಲಾ ಸರಿಯಾಗಿಯೇ ಹೇಳಿದಾಗ `ನೋಡಯ್ಯಾ,ತೇಜಸ್ವಿ ಎಲ್ಲರಿಗೂ ಗೊತ್ತು’ ಅಂತ ತನ್ನನ್ನು ಸಮರ್ಥಿಸಿಕೊಂಡ.

ತೇಜಸ್ವಿಯನ್ನು ಎಂದೂ ಮಾತಾಡಿಸದಿದ್ದ, ಹೋಗಲಿ ಮೂಡಿಗೆರೆಯಲ್ಲಿ ಪಾಸ್ ಆಗಿ ಹೋಗದಿದ್ದ ನಾನೂ, ವಿಕ್ಟರ್ ಗೇಟಿನ ಎದುರು ಅಳುಕಿದೆವು. ಸೋಮಾರಿಗಳಿಗೆ ಬಯ್ಯಲು ತೇಜಸ್ವಿ ಇಲ್ಲ. ಅದೇನು ಅಲ್ಲಿಂದ ಬಂದು ಬೈದಾರಾ? ಡವಡವ ಆದ್ರಿಂದ ಇರ್ಬೇಕು ಗೇಟಿಗೆ ಬೀಗ ಹಾಕಿದಂತೆ ಕಂಡಿತು. ಹಾಗಿರಲಿಲ್ಲ. ತೆರೆದು ಮೆಲ್ಲನೆ ನಡೆದೂ ಮನೆ ಹತ್ತಿರಕ್ಕೆ ಬಂದರೆ ಅಲ್ಲಿ ಎರಡು ಕಾರು. ಕಿವಿ ಸತ್ತಿದ್ದು ಗೊತ್ತಿದ್ದರೂ ವಿಕ್ಟರಿಗೆ ನಾಯಿಯ ಭಯ. ಹಿಂದಕ್ಕೆ  ಹೋಗಿಯೇ ಬಿಡುವುದಾ?

ಹೊರಗಡೆ ಕೂತುಗೊಂಡು ಒಬ್ಬರು ಇದ್ದರು. ಅವರಿಗೆ ಇಬ್ಬರೂ ನಮಸ್ಕರಿಸಿದೆವು. ಅವರು ಬಂದಿದ್ದ ಅ ಕಾರುಗಳಲ್ಲೊಂದರ ಡ್ರೈವರ್ ಅಂತ ಆ ಮೇಲೆ ಗೊತ್ತಾಯ್ತು. ಬಾಗಿಲಿಂದ ಒಳಗೆ ಇಣುಕಿದರೆ ಬಿಳಿ ಗಡ್ಡದ ಹಿರಿಯರು- ಅರೇ ತೇಜಸ್ವಿ ಫ್ರೆಂಡು ಕಡಿದಾಳು ಶಾಮಣ್ಣ ! ಆಚೆ ಕುರ್ಚಿಯಲ್ಲಿ ಬಿಳಿಬಣ್ಣದ ಹಾಡುಗಾರ ಶಿವಮೊಗ್ಗ ಸುಬ್ಬಣ್ಣ! ರಾಜೇಶ್ವರಿ ಮೇಡಂ ಒಳಗಿದ್ದಿರಬೇಕು. ಬಡಜೀವವೇ -ಸಿಕ್ಕಿಹಾಕಿಕೊಂಡೆಯಲ್ಲ ಅನಿಸಿತು. ಹೊರಬಂದ ನಗುಮುಖದ ಯುವಕ ಸ್ನೇಹ ತೋರಿದಾಗ ಪರಿಚಯ ಹೇಳಿಕೊಂಡೆವು. ಮಂಗಳೂರಿನ ಪ್ರಖ್ಯಾತ ಕಾಲೇಜಿನ ಲೆಕ್ಚರುಗಳೆಂದು ಹೇಳಿ ಗೆದ್ದುಬಿಡಬಹುದೆಂಬ ಧೈರ್ಯ ಒಳಗಿತ್ತು. ಅವರು ತಮ್ಮನ್ನು ‘ಪ್ರದೀಪ್’ ಅಂತ ಸರಳವಾಗಿ ಪರಿಚಯಿಸಿದರೆ ಲೆಕ್ಚರರ್ ತಲೆಗೆ ವಾಸ್ತವ ಹೊಳೆಯಲೇ ಇಲ್ಲ.
‘ಹೀಗೇ ನೋಡಲು ಅಂತ ಬಂದೆವು’ ಅನ್ನುತ್ತಾ ನೀವು ತೇಜಸ್ವಿಗೆ ಏನಾಗಬೇಕು ಕೇಳಿದೆ.
‘ನಾನು ಪ್ರದೀಪ್ ಕೆಂಚಿಗೆ’
ಶಾಕಾಯಿತು! ತೇಜಸ್ವಿಯವರ ಬಲಗೈ ನಮಗೆ ಶೇಕ್ ಮಾಡಿದ್ದರು. ಅವರೆಲ್ಲ ತೇಜಸ್ವಿಯವರನ್ನು ನೆನಪಿಸಿಕೊಳ್ಳಲು ಮೂಡಿಗೆರೆಗೆ ಬಂದವರು ತೇಜಸ್ವಿ ಮನೆಗೂ ಬಂದಿದ್ದರು. ತಿರುಗಾಡಿಗಳಾದ ನಮಗೆ ತೇಜಸ್ವಿ ನಿಧನದ ದಿನ ನೆನಪಿರಲು ಸಾಧ್ಯವಿರಲಿಲ್ಲ.
ರಾಜೇಶ್ವರಿ ಮೇಡಂ ಹೊರಬಂದರು.
‘ಬನ್ನಿ ಕಾಫಿ ಕುಡಿಯಿರಿ.’
ಕಿಂ ಮಾತಾಡದೆ ತೆಪ್ಪಗೆ ಒಳ ಹೋಗಿ ಕೂತೆವು. ಲಡ್ಡು,ಚಕ್ಕುಲಿ ಮತ್ತು ಕಾಫಿ.
ಹೊರಟು ನಿಂತ ಸುಬ್ಬಣ್ಣನವರಲ್ಲಿ ಮೇಡಂ ನೀವು ಆ ಹಾಡು ಹಾಡಲೇ ಇಲ್ಲ ಅಂದಾಗ ಅವರು ಪುನಃ ಕೂತು,
‘ಒಂದು ಕಂಡೀಶನ್. ನೀವು ಇಲ್ಲೇ ಕೂತು ಕೇಳಬೇಕು’ ಎಂದರು.
ಹಾಗೆ ಆ ಹಾಡು ಶುರುವಾಯಿತು.

ಸರಿಯಾಗಿ  ಒಂದು ವರ್ಷದ ಹಿಂದೆ ಅದೇ ಹಾಲ್ ನಲ್ಲಿ ತೇಜಸ್ವಿಯವರು ಬದುಕಿನ ಮಹಾ ವಿಸ್ಮಯದಲ್ಲಿ ಕರಗಿ ಕಣ್ಣು ಮುಚ್ಚಿ ಮಲಗಿದ್ದರು. ವಿದಾಯಕ್ಕೆ  ಬಂದ, ಕಡಿದಾಳು, ಕ್ಲಾಸ್ ಮೇಟ್ ಸುಬ್ಬಣ್ಣ ಹೀಗೆಯೇ ಸರಳವಾಗಿ ಕುಳಿತು ಹಾಡಿದ್ದರು.
ಆಗು ನೀ ಅನಿಕೇತನಾ…
ಈ ಬಾರಿ
ಆನಂದಮಯಾ , ಈ ಜಗ ಹೃದಯಾ..ಏತಕೆ ಭಯ ಮಾಣೋ..
ಹಾಡುಗಾರನೂ, ಕೇಳುಗರೂ ಆವಾಹಿಸಿದ್ದು ಯಾವ ಕಣ್ಣು ತುಂಬುವ ಧನ್ಯತೆಯನ್ನೋ..ಧೀರತೆಯನ್ನೋ..! ದಪ್ಪ ಫ್ರೇಮಿನ, ಕುರುಚಲು ಗಡ್ಡದ ವ್ಯಕ್ತಿಯಲ್ಲಿದ್ದ ನಿಷ್ಠುರ ಮಾನವೀಯತೆಯನ್ನು ನೆನೆದು ಮನವು ಕಲಕಿತ್ತು. ಬಾಯಿಗಿಟ್ಟ ಚಕ್ಕುಲಿ ಗಟ್ಟಿ ಜಗಿದರೆ ಅಲ್ಲಿದ್ದ ಮೌನವು ಮುರಿಯಬಹುದಿತ್ತು.

ಕಡಿದಾಳು ಶಾಮಣ್ಣ ಮನೆಯಲ್ಲೇ ನಿಂತರು, ಹಾಡಿದ ಸುಬ್ಬಣ್ಣ ಕಾರು ಹತ್ತಿದ್ದರು. ಲೆಜೆಂಡರೀ ಸಿಂಗಲ್ ಸೀಟಿನ ಸ್ಕೂಟರ್, ತುಂಬು ನೀರಿನ ಕೆರೆ ನೋಡುತ್ತಾ ಮನೆಗೆ ಪ್ರದಕ್ಷಿಣೆ ಬಂದು ನಾವು ಹೊರಟು ನಿಂತಾಗ ವಿಕ್ಟರ್ ಕೇಳಿದ:
‘ಮನೆಯಲ್ಲಿ ಯಾರೆಲ್ಲಾ ಇರ್ತೀರಿ, ಮೇಡಂ?’
ಅವರೆಂದರು:
‘ಹಿಂದೆ ಬರುತ್ತಿದ್ದ, ಇರುತ್ತಿದ್ದ ಎಲ್ಲರೂ ಬರ್ತಾರೆ…ಇರ್ತಾರೆ. ತೇಜಸ್ವಿಯವರೂ ಇರ್ತಾರೆ.’  ಅವರು ನಕ್ಕರು.

ನಾವು ರಿಕ್ಷಾದಲ್ಲಿ ಮೂಡಿಗೆರೆಗೆ ಹೋಗುತ್ತಿದ್ದಾಗ, ಮಂಗಳೂರಿನಿಂದಲೇ ನಮ್ಮ ಜೊತೆ ತಪ್ಪಿದ್ದ ಬಲಿಷ್ಠ ಕಾಯದ ಗೆಳೆಯ  ದೇಶಪಾಂಡೆ -ಹ್ಯಾಂಡ್ ಪೋಸ್ಟ್‌ನಿಂದ ಮೂಡಿಗೆರೆಗೆ ಮೈಲುಗಟ್ಟಲೆ ನಡೆಯುತ್ತಾ ಇದ್ದವರು -ರಿಕ್ಷಾಗೆ ಹತ್ತಿಕೊಂಡರು.

ತೇಜಸ್ವಿ ಓಡಾಡಿದ ಜಾಗವಲ್ಲಾ, ಹಾಗೆ ಹ್ಯಾಂಡ್ ಪೋಸ್ಟ್ ನಲ್ಲಿ ಬಸ್ಸು ಇಳಿದು ಮೂಡಿಗೆರೆಗೆ ನಡೆಯುತ್ತಲೇ ಹೊರಟಿದ್ದೆ  ಅಂದರು ಆ ಧೃಢಕಾಯ.