ಇದು ತುಂಬ ಸೂಕ್ಷ್ಮ ಹಾಗೂ ಮಾರ್ಮಿಕ ಮಾತು. ಯಾರಾದರೊಬ್ಬರು ವಸ್ತುನಿಷ್ಠವಾಗಿ ಮಾತಾಡುತ್ತಿದ್ದರೆ ಅದನ್ನು ಗ್ರಹಿಸಿಕೊಳ್ಳಲು ಬಾರದಿದ್ದರೆ ಆ ಕಾಲ ತನ್ನ ಹದ ಕಳೆದುಕೊಳ್ಳುತ್ತದೆ. ಮತ್ತು ಕಲೆಯಲ್ಲಿ ರಾಜಕಾರಣ ತಲೆ ಹೊಗಿಸಲು ಆರಂಭಿಸುತ್ತದೆ. ಕಲೆಯನ್ನ ಹಿಂದಕ್ಕೆ ಸರಿಸಿ ಬಣಗಳು ತಮ್ಮ ಪೂರ್ವಗ್ರಹದ ಆಟ ಆಡಲು ಆರಂಭಿಸುತ್ತವೆ. ಒಂದು ಕಾಲದ ವಸ್ತುನಿಷ್ಠ ತತ್ವ ಮತ್ತು ಪ್ರತಿಪಾದನೆ ಮಾಯವಾಗಿ ಸಲ್ಲದ ವೈಭವೀಕರಣ ಆರಂಭವಾಗಿ ಕಲೆ ಭಯದಲ್ಲಿ ನಲುಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

 

ಈಗ ಕನ್ನಡ ರಂಗಭೂಮಿಯ ವಲಯದಲ್ಲಿ ಮೈಸೂರು ರಂಗಾಯಣದ ಪ್ರೊಡಕ್ಷನ್ ‘ಪರ್ವ’ ನಾಟಕದ್ದೇ ಮಾತು. ಏಳೂವರೆ ಗಂಟೆಯ ನಾಟಕ ಅಂತ ತಿಳಿಯುತ್ತಲೇ ಅದನ್ನು ನೋಡಲು ದಿನ ಮತ್ತು ಸಮಯ ಹೊಂದಿಸಿಕೊಳ್ಳುವ ಬಗ್ಗೆ ಯೋಚಿಸುತ್ತಲೇ ಇದ್ದೆ. ‘ನಾಟಕ ನೋಡಿದಿರಾ..?’ ಎಂದು ಹಲವರು ನನ್ನನ್ನ ಕೇಳುತ್ತಲೇ ಇದ್ದರು. ‘ಇಲ್ಲ’ ಎನ್ನುತ್ತ ನಾನು ನನ್ನ ಕೆಲಸಗಳಲ್ಲೇ ಮುಳುಗಿದ್ದೆ. ಮೈಸೂರಿನಲ್ಲಿ ಕೊರೋನ ಸೋಂಕು ಹೆಚ್ಚುತ್ತಿದೆ ಎಂದು ಸುದ್ದಿ ಬಿಂಬಿತವಾಗುತ್ತಿತ್ತು. ಮಾಸ್ಕ್ ಒಳಗೆ ಉಸಿರನ್ನು ಅರೆಬರೆ ನಿರ್ಬಂಧಿಸಿಕೊಂಡು ಕೂತು ಏಳೂವರೆ ಗಂಟೆಯ ನಾಟಕ ನೋಡುವ ಕಷ್ಟ ಯಾತಕ್ಕೆ ಎಂದು ಏನೇನೋ ಸಬೂಬು ಕೊಟ್ಟುಕೊಳ್ಳುತ್ತ ದಿನಗಳನ್ನ ದೂಡುತ್ತಲೇ ಇದ್ದೆ.

ಅಷ್ಟರಲ್ಲಿ ಖ್ಯಾತ ನಿರ್ದೇಶಕ ಎಂ.ಎಸ್. ಸತ್ಯು ಹಾಗೂ ಮೈಸೂರು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪನವರ ನಡುವೆ ‘ಪರ್ವ’ ನಾಟಕಕ್ಕೆ ಸಂಬಂಧಿಸಿದಂತೆ ಸಮಾರಂಭವೊಂದರಲ್ಲಿ ಮಾತಿನ ಚಕಮಕಿ ನಡೆಯಿತು. ಸತ್ಯು ‘ಬಿಜೆಪಿಯವರು ಇಷ್ಟೊಂದು ಖರ್ಚು ಮಾಡಿ ‘ಪರ್ವ’ ನಾಟಕವನ್ನ ಪರ್ವತವಾಗಿ ನಿಲ್ಲಿಸಬೇಕಿತ್ತಾ..? ನಾವು ಏನನ್ನು ಹೇಳಬೇಕು ಎಂಬುದನ್ನು ಸೂಕ್ಷ್ಮವಾಗಿ, ಒಂದು ಸೀಮಿತ ಚೌಕಟ್ಟಿನಲ್ಲಿ ಹೇಳಬೇಕು. ಸಮಯದ ಮಿತಿ ಇಟ್ಟುಕೊಂಡು ಕೆಲಸ ಮಾಡಿದರೆ ಪರಿಣಾಮ ಹೆಚ್ಚು. ಹಣ ಸಮಯ ಎರಡೂ ಉಳಿತಾಯ..’ ಎಂದಿದ್ದರು. ಅದಕ್ಕೆ ಅಡ್ಡಂಡ ಕಾರ್ಯಪ್ಪ ಪ್ರತಿಕ್ರಿಯಿಸುತ್ತ ‘ಪರ್ವ ನಾಟಕವನ್ನು ಬಿಜೆಪಿಯವರು ಮಾಡಿಲ್ಲ. ಎಸ್.ಎಲ್. ಭೈರಪ್ಪನವರು ನಲವತ್ತೆಂಟು ವರ್ಷಗಳ ಹಿಂದೆ ಬರೆದ ಬಹುಚರ್ಚಿತ ಪ್ರಗತಿಪರ ಕಾದಂಬರಿ ಅದು. ಸತ್ಯು ಅವರು ಅದನ್ನು ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. ಅಲ್ಲದೆ ಏಳೂವರೆ ಗಂಟೆಯ ನಾಟಕ ಬೇಕೇ ಬೇಡವೇ ಎಂಬುದನ್ನು ನಾನು ಅಥವಾ ನೀವು ನಿರ್ಧಾರ ಮಾಡುವುದಲ್ಲ. ಜನ ನಿರ್ಧರಿಸುತ್ತಾರೆ. ಅಷ್ಟು ಹೊತ್ತು ಕುಳಿತು ನಾಟಕ ನೋಡಲು ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ಸಂಶೋಧನೆ ನಡೆಸುವಂತೆ ಅವರನ್ನ ಕೇಳಿಕೊಳ್ಳುತ್ತೇನೆ…’ ಎಂದಿದ್ದರು.

ನಾನು ಈ ಇಬ್ಬರು ಹಿರಿಯರ ಮಾತುಗಳನ್ನ ಗೆಳೆಯರ ಜೊತೆ ಚರ್ಚಿಸುತ್ತ ‘ಇವರಿಗೆ ಸಮಯ ಇದ್ದರೆ ನೋಡಬೇಕು. ಇಲ್ಲ ಸುಮ್ಮನಿರಬೇಕು. ಅಥವಾ ನೋಡಿ ನಾಟಕ ಹೇಗಿದೆ ಎಂದು ತುಂಬ ವಸ್ತುನಿಷ್ಠವಾಗಿ ಹೇಳಬೇಕು. ಅದು ಬಿಟ್ಟು ಸರ್ಕಾರವನ್ನ ಎಳೆತಂದು ಮಾತಾಡಲಿಕ್ಕೆ ಆರಂಭಿಸಿದರೆ ನನ್ನಂಥ ನಾನ್ ಪೊಲಿಟಿಕಲ್ ಮೈಂಡ್ ನವರಿಗೆ ನಾಟಕ ನೋಡುವ ಮನಸ್ಸು ಹೊರಟು ಹೋಗುತ್ತೆ. ಒಂದು ರೀತಿ ಇದು ರೇಜಿಗೆ ಹುಟ್ಟಿಸಿಬಿಡುತ್ತೆ..’ ಅಂದೆ.

ನನ್ನ ಗೆಳೆಯರ ದೊಡ್ಡ ಬಳಗದಲ್ಲಿ ಕುವೆಂಪು ಅಭೀಮಾನಿಗಳು ಇದ್ದಾರೆ. ಹಾಗೇ ಭೈರಪ್ಪನವರ ಅಭಿಮಾನಿಗಳೂ ಕೂಡ ಇದ್ದಾರೆ. ಈ ಎರಡು ಬಣಗಳ ವಾಗ್ವಾದ ಆಗಾಗ ಕೇಳಿಸಿಕೊಳ್ಳುತ್ತ ನಾನು ನಗುತ್ತಾ ಕೂತಿರುತ್ತೇನೆ. ಇದಕ್ಕೆ ಕಾರಣ ಇದೆ. ನನ್ನ ಗೆಳೆಯರ ಒಂದು ಬಣ ಕುವೆಂಪು ಅವರ ವಿಚಾರಧಾರೆಯನ್ನ ಹೇಗೆ ಅರ್ಥೈಸಿಕೊಳ್ಳಬೇಕೊ ಅದಕ್ಕಿಂತ ತೀಕ್ಷ್ಣವಾಗಿ ಅವರನ್ನ ವಿವರಣೆಗೆ ಒಡ್ಡಿಕೊಂಡಿರುವಂತೆ ನನಗೆ ಕಂಡಿದ್ದಾರೆ. ಇದು ಹೀಗಾಗಿರುವುದರಿಂದ ಭೈರಪ್ಪನವರನ್ನ ಯಾಕೆ ಕಡೆಗಣಿಸದೆ ನೋಡಬೇಕು ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ. ಹಾಗೇ ಈ ಕಡೆ ಭೈರಪ್ಪನವರ ಫ್ಯಾನ್ ಫಾಲೋಯಿಂಗ್ ಗೆ ಭೈರಪ್ಪನವರು ಮಂಡಿಸುತ್ತಲೇ ಬರುತ್ತಿರುವ ವಾದವನ್ನು ನಿಕಷಕ್ಕೆ ಒಡ್ಡಿ ಅರ್ಥೈಸಿಕೊಳ್ಳಬೇಕು ಎಂಬುದನ್ನು ಮರೆತಂತೆ ವರ್ತಿಸಲು ಆರಂಭಿಸುತ್ತಾರೆ. ಎರಡೂ ಬಣಗಳ ಆರಾಧಕರಲ್ಲಿರುವ ಉಬ್ಬರ ಕಡಿಮೆ ಆಗುವವರೆಗೂ ಏನು ಹೇಳಿದರೂ ಅರ್ಥವಾಗುವುದಿಲ್ಲ ಎಂದು ನಾನು ಅರ್ಥೈಸಿಕೊಂಡಿರುವ ಕಾರಣ ನಗದೆ ಕೂರದೆ ವಿಧಿಯಿಲ್ಲ.

‘ಮಲೆಗಳಲ್ಲಿ ಮದುಮಗಳು ನಾಟಕ ರಾತ್ರಿಯಿಂದ ಬೆಳಗ್ಗೆವರೆಗೆ ಮಾಡಿದ್ರಲ್ಲ. ಆಗ ಯಾಕೆ ಯಾರೂ ಚಕಾರ ತೆಗೀಲಿಲ್ಲ? ಈಗ ಪರ್ವ ಮಾಡ್ತಿದ್ದ ಹಾಗೆ ಅಸಹನೆ ಶುರುವಾಗೋಯ್ತಾ..? ‘ರಾಮಾಯಣ ದರ್ಶನಂ’ ಐದು ಗಂಟೆ ಮೀರಿದ ನಾಟಕ. ಆಗ ಯಾರೂ ಚಕಾರ ತೆಗೀಲಿಲ್ಲ. ಈಗೇನಂತೆ ಅವರಿಗೆ..?’ ಎಂದು ಒಂದು ಬಣ ಮಾತು ಆರಂಭಿಸಿತು.

‘ಅವರ ಸರ್ಕಾರವಿದ್ದಾಗ ಗಿರೀಶ್ ಕಾರ್ನಾಡರ ನಾಟಕೋತ್ಸವ ಆಯೋಜನೆ ಮಾಡಿಕೊಂಡಿದ್ದರು. ಅದು ಶುರುವಾಗೋ ಮೊದಲು ನಮ್ಮ ಸರ್ಕಾರ ಬಂತು. ಅವರಿಗೆ ಬೇಕಾದವರ ನಾಟಕೋತ್ಸವ ಮಾಡಿಕೊಳ್ಳೋ ಹಾಗೆ ನಮಗೆ ಬೇಕಾದವರ ನಾಟಕ ನಾವು ಮಾಡಿಕೊಂಡರೆ ತಪ್ಪೇನು..’ ಮತ್ತೆ ಕೆಲವರು ಚಕಾರ ತೆಗೆದರು.

ಈ ಬಗ್ಗೆ ನನ್ನಲ್ಲೂ ಕೊಂಚ ಅರಿವಿತ್ತು. ಆದರೆ ಕಲೆಯ ವಿಚಾರದಲ್ಲಿ ಪಾಲಿಟಿಕ್ಸ್ ಪ್ರವೇಶವಾಗುತ್ತಿದ್ದಂತೆ ನನ್ನಲ್ಲಿ ಆಸಕ್ತಿ ಕಮರಿತ್ತು. ‘ತುಂಬ ಮುಕ್ತವಾಗಿ ನಾಟಕ ನೋಡಲಿಕ್ಕೂ ಇವರುಗಳು ಬಿಡೋದಿಲ್ಲ. ಹೋಗತ್ಲಾಗೆ..’ ಅಂದುಕೊಂಡು ಸುಮ್ಮನಾಗಿದ್ದೆ.

ಮೊದಲಿನಿಂದಲೂ ನನ್ನ ಮೈಂಡ್ ಸೆಟ್ ರೂಪುಗೊಂಡಿರುವುದೇ ಹಾಗೇ. ತುಂಬ ಚಿಕ್ಕಂದಿನಿಂದ ಕ್ರಿಕೆಟ್ ಆಟವನ್ನ ಇಷ್ಟಪಟ್ಟು ನೋಡುತ್ತಿದ್ದೆ. ಅದು ‘ಜಂಟಲ್ ಮೆನ್ಸ್ ಗೇಮ್’ ಹೇಗೆ ಎಂದು ಆಟಗಾರರು ಮೈದಾನದಲ್ಲಿ ಆಡುತ್ತಿದ್ದ ಬಗೆಯಿಂದಲೇ ಕಂಡುಕೊಳ್ಳುತ್ತಿದ್ದೆ. ಆದರೆ ಯಾವಾಗ ಬೆಟ್ಟಿಂಗ್ ಶುರುವಾಯಿತೋ ಮತ್ತು ಟಿಟ್ವೆಂಟಿಯಲ್ಲಿ ಬರೀ ಬಾರಿಸುವುದೇ ಕ್ರಾಫ್ಟ್ ಅಂತಾಯಿತೊ ಕ್ರಿಕೆಟ್ ನೋಡುವುದನ್ನೇ ಬಿಟ್ಟೆ. ನಿರ್ದಿಷ್ಟ ನಾಟಕದ ಮೇಲೆ ರಾಜಕಾರಣ ತನ್ನ ಹಿಡಿತ ಸಾಧಿಸುತ್ತಿದೆ ಅಂತನ್ನಿಸಿದ ನಾಟಕಗಳನ್ನ ನಾನು ನೋಡಲು ಮುಂದಾಗಿಲ್ಲ.

ಈಗ ಏನು ಹೇಳಿದರೂ ಅದನ್ನ ಸರಿಯಾಗಿ ಗ್ರಹಿಸಿ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಕಾಲ ಸೂಕ್ಷ್ಮ ಕಳೆದುಕೊಳ್ಳುತ್ತಿದೆಯೋ ಅಥವಾ ವಸ್ತುಸ್ಥಿತಿಯನ್ನು ಸಮರ್ಥವಾಗಿ ವಿಡಂಬನೆಯ ಭಾಷೆಯಲ್ಲಿ ಹೇಳುವವರ ಕೊರತೆ ಇದೆಯೋ ಎಂದು ಹಲವು ಸಲ ನನಗೆ ಅನಿಸಿದೆ.

(ಮಾಸ್ಟರ್ ಹಿರಣ್ಣಯ್ಯ)

ಈ ಆಲೋಚನೆ ನನ್ನಲ್ಲಿ ನುಸುಳುವಾಗಲೆಲ್ಲ ಅಜ್ಜ ಮಾಸ್ಟರ್ ಹಿರಣ್ಣಯ್ಯ ನೆನಪಾಗುತ್ತಾರೆ. ಲಂಚಾವತಾರ ನಾಟಕದಲ್ಲಿನ ಅವರ ‘ದತ್ತು’ ಪಾತ್ರವನ್ನು ಅವರು ವಿವರಣೆಗೆ ಒಡ್ಡಿಕೊಂಡಿದದ್ದು ಹೀಗೆ: ‘ಒಂದೂರಲ್ಲಿ ಒಬ್ಬ ಶ್ರೀಮಂತ ಇದ್ದ. ಅವನಲ್ಲಿ ಬಡವರ ಬಗ್ಗೆ ಕಿಂಚಿತ್ತೂ ಕನಿಕರ ಇರಲಿಲ್ಲ. ಕಷ್ಟಕ್ಕೆ ನೆರವಾಗುವ ಗುಣ ಇರಲಿಲ್ಲ. ಯಾರು ಬಂದು ಯಾಚಿಸಿದರೂ ಅವನ ಮನಸ್ಸು ಕರಗುವುದೇ ಇಲ್ಲ. ಜನರಿಗೆ ಅವನನ್ನ ಕಂಡರೆ ಸಿಟ್ಟು. ಆದರೆ ಅವನನ್ನ ನಿಂದಿಸಲು ಭಯ. ಅದೇ ಸಮಯಕ್ಕೆ ಆ ಶ್ರೀಮಂತನ ಮನೆ ಮುಂದೆ ಒಬ್ಬ ಹುಚ್ಚ ನಿಂತು ಶ್ರೀಮಂತನಿಗೆ ‘ಲೊ ಹೊಟ್ಟೆ ಹಸೀತಿದೆ ಅನ್ನ ಕೊಡೊ’ ಅನ್ನುತ್ತಾನೆ. ಶ್ರೀಮಂತ ಅದಕ್ಕೆ ಸ್ಪಂದಿಸುವುದಿಲ್ಲ. ಹುಚ್ಚ ಮತ್ತಷ್ಟು ಕೆರಳುತ್ತಾನೆ. ಅವಾಚ್ಯ ಶಬ್ದಗಳಲ್ಲಿ ಬೈಯುತ್ತಾನೆ. ಆದರೂ ಶ್ರೀಮಂತ ಕದಲುವುದಿಲ್ಲ. ಆದರೆ ಜನ ಹುಚ್ಚನ ಮಾತುಗಳನ್ನ ಕೇಳಿಸಿಕೊಂಡು ಒಳಗೊಳಗೇ ಖುಷಿ ಅನುಭವಿಸುತ್ತಾರೆ. ತಮಗಿರದ ಧೈರ್ಯ ಹುಚ್ಚನಿಗಿದೆ ಎಂದು ಕಂಡುಕೊಳ್ಳುತ್ತಾರೆ. ‘ನಿನಗೆ ದಿನಾ ಅನ್ನ ನಾವು ಹಾಕ್ತೀವಿ. ನೀನು ಮಾಡಬೇಕಿರೋ ಕೆಲಸ ಒಂದೇ. ದಿನಾ ಆ ಶ್ರೀಮಂತನನ್ನ ಹಿಗ್ಗಾಮುಗ್ಗಾ ಬೈತಿರು. ಜನ ಹಾಗೆ ನನ್ನನ್ನ ಬೈಯಲಿಕ್ಕೆ ನೇಮಿಸಿಕೊಂಡಿದ್ದಾರೆ..’ ಅನ್ನುವ ವಿವರಣೆ ಲಂಚಾವತಾರ ನಾಟಕದಲ್ಲಿ ಇದೆ.

ಮೊದಲು ರಾಜಕಾರಣದ ಮತ್ತು ರಾಜಕಾರಣಿಗಳ ಕುರಿತ ಬೈಗುಳಗಳಾಗಿ ತೆರೆದುಕೊಂಡ ಲಂಚಾವತಾರ ನಾಟಕ ನಂತರ ವಿಡಂಬನೆ ಕಡೆಗೆ ಹೊರಳಿತು. ಈ ಮೂಲಕ ನಾಟಕ ಸರಿಸುಮಾರು ಹನ್ನೊಂದು ಸಾವಿರ ಪ್ರದರ್ಶನಗಳನ್ನ ಕಾಣುವ ಮೂಲಕ ಇತಿಹಾಸ ಸೃಷ್ಟಿಸಿತು. ಅಜ್ಜನಿಗೆ ಅಂದಂದಿನ ರಾಜಕೀಯ ವಿದ್ಯಮಾನಗಳನ್ನ ಖುದ್ದು ರಾಜಕಾರಣಿಗಳೇ ಒದಗಿಸುತ್ತಿದ್ದರು. ಅದನ್ನ ವಿಡಂಬನೆಯ ಕಕ್ಷೆಗೆ ಸೆಳೆದುಕೊಂಡು ರಾಜಕಾರಣವನ್ನ ನಿಕಷಕ್ಕೆ ಒಡ್ಡುತ್ತಿದ್ದ ಪರಿಯ ಬಗ್ಗೆ ಹಿರಿಯರು ಬೆರಗಿನಲ್ಲಿ ಮಾತಾಡುವುದನ್ನು ಕೇಳಿಸಿಕೊಂಡಿದ್ದೇನೆ. ಲಂಚಾವತಾರದ ವಿಶೇಷವೆಂದರೆ ಅಂದಂದಿಗೆ ವಸ್ತುವಾಗಿರುತ್ತಿದ್ದ ರಾಜಕಾರಣಿಗಳನ್ನ ಕರೆಸಿ ಮೊದಲ ಸಾಲಲ್ಲಿ ಕೂರಿಸಿ ವಿಡಂಬಿಸುತ್ತಿದ್ದದ್ದು. ಅದು ಎಷ್ಟೇ ತೀಕ್ಷ್ಣವಾಗಿದ್ದರೂ ಅಂದಿನ ರಾಜಕಾರಣಿಗಳು ನಗುನಗುತ್ತಲೇ ಸ್ವೀಕರಿಸಿ ಎದ್ದು ನಡೆಯುತ್ತಿದ್ದರು. ಮತ್ತು ‘ಚೆನ್ನಾಗಿ ಬೈತೀರಿ ಹಿರಣ್ಣಯ್ಯನೋರೆ’ ಎಂದು ನಗುತ್ತಲೇ ಹೇಳುತ್ತಿದ್ದರು. ಅಂದು ವಿಡಂಬನೆ ಅನ್ನುವುದು ತಮ್ಮ ಒಳಗನ್ನು ಕಾಣಿಸುವ ಸರಕು ಎಂದು ಭಾವಿಸಲಾಗಿತ್ತು. ಅಂದರೆ ಒಂದು ಬಗೆಯಲ್ಲಿ ಆತ್ಮವಿಮರ್ಶೆಯನ್ನು ವಿಡಂಬನೆ ಹುಟ್ಟುಹಾಕುತ್ತಿತ್ತು.

ಆದರೆ ಯಾವುದು ಇಲ್ಲಿ ಸ್ಥಿರ? ವ್ಯಕ್ತಿಪೂಜೆ, ಭಂಡತನ, ಬೆಂಗಲಿಗರು ಹುಟ್ಟಿಕೊಳ್ಳುತ್ತಿದ್ದಂತೆ ಅಜ್ಜನ ವಿಡಂಬನೆಯ ತೀಕ್ಷ್ಣತೆ ಕೂಡ ಕಡಿಮೆ ಆಯಿತು. ವ್ಯವಸ್ಥೆಯ ಲೋಪಕ್ಕೆ ಹೇಗೆ ತಾವು ಕಾರಣ ಎಂಬುದನ್ನು ನಾಟಕದ ವಿಡಂಬನೆ ಹೇಗೆ ತಿಳಿಸುತ್ತಿದೆ ಎಂಬುದನ್ನು ಗ್ರಹಿಸಲಿಕ್ಕೆ ಬಾರದವರು ಹಿರಣ್ಣಯ್ಯ ತಮ್ಮನ್ನು ವೈಯಕ್ತಿಕವಾಗಿ ನಿಂದಿಸುತ್ತಿದ್ದಾರೆ ಎಂದು ತಮ್ಮ ಬೆಂಬಲಿಗರನ್ನ ಛೂ ಬಿಟ್ಟು ದಾಂಧಲೆ ಎಬ್ಬಿಸಿದ ನಂತರ ಅಜ್ಜನ ಮಾತಿನ ತೀವ್ರತೆ ಕೂಡ ತಗ್ಗಿತು.

ಆ ಸಮಯದಲ್ಲಿ ಮಾಜಿ ಪ್ರಧಾನಿಗಳಾದ ದೇವೇಗೌಡರು ಹೇಳಿದ್ದು ಹೀಗೆ: ‘ಹಿಂದೆ ರಾಜಕಾರಣಿಗಳು ತುಂಬ ಸೂಕ್ಷ್ಮ ಮನಸ್ಸಿನವರಾಗಿದ್ದರು. ಸೂಜಿಯಲ್ಲಿ ಚುಚ್ಚಿದರೂ ಸಾಕಿತ್ತು. ಆದರೆ ಮಾಸ್ಟರ್ ಹಿರಣ್ಣಯ್ಯನವರು ಆಗ ಅವರನ್ನ ಮಾತಿನ ದಬ್ಬಲದಲ್ಲಿ ಚುಚ್ಚುತ್ತಿದ್ದರು. ಈಗ ರಾಜಕಾರಣ ಮತ್ತು ರಾಜಕಾರಣಿಗಳು ಸೂಕ್ಷ್ಮತೆ ಕಳೆದುಕೊಂಡಿದ್ದಾರೆ. ಇಂಥ ಸಮಯದಲ್ಲಿ ಹಿರಣ್ಣಯ್ಯನವರು ದಬ್ಬಲದಲ್ಲಿ ಚುಚ್ಚುವ ಬದಲು ಸೂಜಿಯಲ್ಲಿ ಚುಚ್ಚುತ್ತಿದ್ದಾರೆ..’

ಇದು ತುಂಬ ಸೂಕ್ಷ್ಮ ಹಾಗೂ ಮಾರ್ಮಿಕ ಮಾತು. ಯಾರಾದರೊಬ್ಬರು ವಸ್ತುನಿಷ್ಠವಾಗಿ ಮಾತಾಡುತ್ತಿದ್ದರೆ ಅದನ್ನು ಗ್ರಹಿಸಿಕೊಳ್ಳಲು ಬಾರದಿದ್ದರೆ ಆ ಕಾಲ ತನ್ನ ಹದ ಕಳೆದುಕೊಳ್ಳುತ್ತದೆ. ಮತ್ತು ಕಲೆಯಲ್ಲಿ ರಾಜಕಾರಣ ತಲೆ ಹೊಗಿಸಲು ಆರಂಭಿಸುತ್ತದೆ. ಕಲೆಯನ್ನ ಹಿಂದಕ್ಕೆ ಸರಿಸಿ ಬಣಗಳು ತಮ್ಮ ಪೂರ್ವಗ್ರಹದ ಆಟ ಆಡಲು ಆರಂಭಿಸುತ್ತವೆ. ಒಂದು ಕಾಲದ ವಸ್ತುನಿಷ್ಠ ತತ್ವ ಮತ್ತು ಪ್ರತಿಪಾದನೆ ಮಾಯವಾಗಿ ಸಲ್ಲದ ವೈಭವೀಕರಣ ಆರಂಭವಾಗಿ ಕಲೆ ಭಯದಲ್ಲಿ ನಲುಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇಂದು ಅಜ್ಜ ಮಾಸ್ಟರ್ ಹಿರಣ್ಣಯ್ಯನವರ ಹಾಗೆ ‘ದತ್ತು’ ಪಾತ್ರವಾಗಿ ಬಂದು ಸಮಾಜದ ಓರೆಕೋರೆಗಳನ್ನ ತಿಳಿಸುವವರಿಲ್ಲ. ತಿಳಿಸಲು ಮುಂದಾದರೂ ಅದನ್ನ ಸಮರ್ಥ ರೀತಿಯಲ್ಲಿ ಅರ್ಥೈಸಿಕೊಳ್ಳುವವರಿಲ್ಲ. ಹಾಗಾಗಿ ಕಲೆ ಕೂಡ ರಾಜಿಗೆ ಬೀಳಬೇಕಾದ ವಾತಾವರಣ ನಿರ್ಮಾಣವಾಗುತ್ತಿದೆ.

ಇದಕ್ಕೆ ಪೂರಕ ಎನಿಸುವ ಒಂದು ಉದಾಹರಣೆ ಕೊಡುತ್ತೇನೆ. ವರ್ಷದ ಹಿಂದೆ ನಡೆದ ಘಟನೆ ಇದು. ನಮ್ಮ ತಂಡದ ನಟರೊಬ್ಬರು ಆಗಾಗ ಪೌರಾಣಿಕ ನಾಟಕಗಳಿಗೂ ತೆರಳಿ ಬಣ್ಣ ಹಚ್ಚುತ್ತಿರುತ್ತಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ರಂಗವಲಯದ ನಾಟಕಗಳು ಹೇಗಿವೆ ಎಂದು ಆಗಾಗ ಅವರಿಂದ ಒಂದು ಚಿತ್ರಣ ನನಗೆ ಸಿಗುತ್ತಿರುತ್ತದೆ. ಪೌರಾಣಿಕಕ್ಕೆ ಮನಸೋತವರಿಗೆ ಆಧುನಿಕ ಸಂವೇದನೆಯ ನಾಟಕದ ಮಾತು ಮತ್ತು ಮೌನ ಸಾಮಾನ್ಯವಾಗಿ ಅಷ್ಟು ರುಚಿಸುವುದಿಲ್ಲ. ಆದರೂ ಆ ನಟರಿಗೆ ಆಧುನಿಕ ಸಂವೇದನೆಯ ನಾಟಕಗಳ ಬಗ್ಗೆ ಉಡಾಫೆಯ ಧೋರಣೆಯೇನೂ ಇಲ್ಲ. ಆದರೆ ಪೌರಾಣಿಕ ನಾಟಕಗಳಲ್ಲಿನ ಮಾತಿನ ಬಿರುಸಿನ ಬಗ್ಗೆ ಒಲವು ಇದ್ದೇ ಇದೆ.

ಹೀಗೇ ಒಂದು ದಿನ ನಮ್ಮ ತಂಡ ಶೋ ಮುಗಿಸಿ ಮಾತಿಗೆ ನಿಂತಿದ್ದಾಗ ಅವರು ನನಗೆ ‘ ಒಂದು ಪೌರಾಣಿಕ ನಾಟಕ ಬರೀರಿ ಸರ್ ಮಾಡುವ.. ಚೆನ್ನಾಗಿರುತ್ತೆ’ ಅಂದರು. ನನಗೂ ಯಾಕಾಗಬಾರದು ಅನಿಸಿತು. ಮೊನಾಟನಿ ಬ್ರೇಕ್ ಮಾಡಿದ ಹಾಗಾಗುತ್ತದೆ ಅಂದುಕೊಂಡೆ. ಆದರೆ ನಾನು ಬೇರೆ ರೀತಿ ಯೋಚಿಸಿದೆ. ವಸ್ತು ಮತ್ತು ಮಾತಿನ ಧಾಟಿ ಪೌರಾಣಿಕವೇ ಆಗಿರಲಿ. ಆದರೆ ನಾಟಕದ ಒಳಗೆ ಕದಲುವ ವಿಚಾರ ಸಮಕಾಲೀನ ಚಿಂತನೆಗಳನ್ನ ಒಳಗೊಂಡಿರಲಿ ಅಂತೇನೊ ಅಂದುಕೊಂಡೆ. ಆ ಹೊತ್ತಿಗೂ ನನ್ನಲ್ಲಿನ್ನೂ ಬೀಚಿ ಅವರ ಸಾಹಿತ್ಯದ ಹ್ಯಾಂಗೋವರ್ ಕಳೆದಿರಲಿಲ್ಲ. ಬೀಚಿ ಅವರ ಸಾಹಿತ್ಯಕ ವಿಡಂಬನೆ ಆಧರಿಸಿಯೇ ನಮ್ಮ ತಂಡಕ್ಕೆ ರಂಗರೂಪಗಳನ್ನ ಸಿದ್ಧಮಾಡುವ ಅವಕಾಶ ಮತ್ತು ಪ್ರಮೇಯ ಒದಗಿತ್ತು.

ಇಂದು ಅಜ್ಜ ಮಾಸ್ಟರ್ ಹಿರಣ್ಣಯ್ಯನವರ ಹಾಗೆ ‘ದತ್ತು’ ಪಾತ್ರವಾಗಿ ಬಂದು ಸಮಾಜದ ಓರೆಕೋರೆಗಳನ್ನ ತಿಳಿಸುವವರಿಲ್ಲ. ತಿಳಿಸಲು ಮುಂದಾದರೂ ಅದನ್ನ ಸಮರ್ಥ ರೀತಿಯಲ್ಲಿ ಅರ್ಥೈಸಿಕೊಳ್ಳುವವರಿಲ್ಲ.

ಆದರೆ ಪೌರಾಣಿಕ ಅಂತಾದಾಗ ಯಾವ ವಸ್ತು ಆರಿಸಿಕೊಳ್ಳುವುದು ಅಂತ ಯೋಚಿಸುತ್ತಿದ್ದಾಗ ವೃತ್ತಿ ರಂಗಭೂಮಿಯ ಸಾರ್ವಕಾಲಿಕ ಹಿಟ್ ಡ್ರಾಮ ‘ರಾಮಾಯಣ’ ವೇ ಸರಿ ಅಂತ ತೋರಿತು. ಆವರೆಗೆ ಬಳಸಿಕೊಂಡಿದ್ದ ಬೀಚಿ ಅವರ ಸಾಹಿತ್ಯ ಹೊರತುಪಡಿಸಿ ಮಿಕ್ಕ ಸಾಹಿತ್ಯದಲ್ಲಿನ ಅವರ ಚಿಂತನೆಯ ಮಾತುಗಳನ್ನ ರಾಮಾಯಣದ ಹಿನ್ನೆಲೆಯಲ್ಲಿ ನೋಡುವ ಪ್ರಯತ್ನ ಮಾಡಿದೆ. ರಂಗರೂಪ ಸಿದ್ಧಪಡಿಸಬಹುದು ಅನಿಸಿತು. ಆದರೆ ಯಾವ ನೆಲೆಯಿಂದ ಪ್ರವೇಶಿಸೋಣ ಎಂದು ಯೋಚಿಸುತ್ತಿದ್ದಾಗ ‘ ವಿದೂಷಕನ’ ನೆಲೆಯಿಂದ ಸರಿ ಅನಿಸಿತು. ನಮ್ಮಲ್ಲಿ ರಾಮಾಯಣ ಎನ್ನುವುದು ಒಂದೇ? ಬಹಳಷ್ಟು ರಾಮಾಯಣಗಳು ಇವೆ. ಒಂದೊಂದರಲ್ಲಿ ಒಂದೊಂದು ದೃಷ್ಟಿಕೋನ ಮತ್ತು ಕಥೆ. ಜೈನ ಧರ್ಮದ ತತ್ವಗಳನುಸಾರ ನೋಡಿದಾಗ ರಾಮಾಯಣದ ಕಥೆ ಬದಲಾಗುತ್ತದೆ. ಕಂಬ ರಾಮಾಯಣದಲ್ಲಿ ಮತ್ತೊಂದು ಬಗೆ. ಆದರೆ ನಾನು ಆಲೋಚಿಸಿದಂತೆ ಮೂಲ ರಾಮಾಯಣ ವಾಲ್ಮೀಕಿಯದು ಸರಿ, ಆದರೆ ಮಿಕ್ಕ ರಾಮಾಯಣದ ಕಥೆಗಳು ಏನು ಹಾಗಾದರೆ?

ಇದನ್ನು ವಿದೂಷಕ ಉದ್ದಕ್ಕೂ ಪ್ರಶ್ನಿಸುತ್ತಾ ಹೋಗುವಂತೆ ಬೀಚಿಯವರು ರಾಮಾಯಣಕ್ಕೆ ಸಂಬಂಧಿಸಿದಂತೆ ಬರೆಯದ ಮಾತುಗಳನ್ನೂ ರಾಮಾಯಣಕ್ಕೆ ಅನ್ವಯ ಮಾಡುತ್ತಾ ಕಡೆಗೂ ರಂಗರೂಪ ಸಿದ್ಧಪಡಿಸಿದೆ. ಅದರಲ್ಲಿ ದಶರಥನಿಗೆ ರಾಮ ಮುಗ್ಧ ಮತ್ತು ಪೆದ್ದನ ಹಾಗೆ ಕಾಣುತ್ತಾನೆ. ವನವಾಸಕ್ಕೆ ಒಪ್ಪಿಕೊಬೇಡವೋ ಅಂದರೂ ರಾಮ ವನವಾಸಕ್ಕೆ ಸಿದ್ಧವಾಗುವಾಗ ದಶರಥನಿಗೆ ಸಹಜವಾಗಿ ರಾಮ ಪೆದ್ದ ಅನಿಸುತ್ತಾನೆ. ಹೀಗೆಯೇ ಅಹಲ್ಯಾ ಪ್ರಕರಣ. ಆಕೆಗೆ ಸಂಬಂಧಿಸಿದಂತೆ ಹಲವು ಕಥೆಗಳಿವೆ. ವಿದೂಷಕ ಅಹಲ್ಯಾಳಿಗೆ ‘ನಿನ್ನ ಅಸಲಿ ಕಥೆ ಏನು..?’ ಎಂದು ಕೇಳುತ್ತಾನೆ. ವಿದೂಷಕ ಹೀಗೆ ರಾಮಾಯಣ ಕೆದಕುತ್ತಾ ಹೋಗಿ ಅದೇ ಒಂದು ರಾಮಾಯಣವಾಗುತ್ತದೆ ಎನ್ನುವ ರೀತಿಯಲ್ಲಿ ರಂಗರೂಪ ಸಿದ್ಧಮಾಡಿದ್ದೆ.

ಸರಿ ನಾಟಕದ ತಾಲೀಮು ಕೂಡ ಆರಂಭವಾಯಿತು. ಆದರೆ ನಡುಮಧ್ಯೆ ಕೆಲವರಿಗೆ ನಾಟಕದ ಕುರಿತಂತೆ ಭಯ ಆರಂಭವಾಯಿತು. ಕಾರಣ ಇಷ್ಟೇ. ಕೇಂದ್ರ ಸರ್ಕಾರದ ರಾಮನ ಕುರಿತ ಭಕ್ತಿ ಎಂಥದ್ದು ಎಂದು ಎಲ್ಲರಿಗೂ ಗೊತ್ತಿತ್ತು. ರಾಜ್ಯ ಸರ್ಕಾರವೂ ಆ ಭಕ್ತಿಗೆ ಹೊರತಾಗಿರಲಿಲ್ಲ. ಇಂಥ ಸಮಯದಲ್ಲಿ ರಾಮನನ್ನು ಸೂಚ್ಯವಾಗಿಯಾದರೂ ‘ಮುಗ್ಧ ಮತ್ತು ಪೆದ್ದ’ ಅಂದರೆ ಪರಿಸ್ಥಿತಿ ಏನಾದೀತು? ಜನ ಹೇಗೆ ಸ್ವೀಕರಿಸುತ್ತಾರೆ?’ ಎಂಬ ಪ್ರಶ್ನೆಗಳನ್ನ ಎತ್ತಿ ನಾಟಕವನ್ನ ನಿಲ್ಲಿಸುವುದು ಉತ್ತಮ ಅಂತಂದರು. ನಾನು ಗೊಂದಲಗೊಳ್ಳುತ್ತ ‘ಅಲ್ಲಿ ನಾನು ರಾಮನನ್ನ ಪೆದ್ದ ಎಂದು ಯಾವ ಕಾಂಟೆಕ್ಸ್ಟ್ ನಲ್ಲಿ ಹೇಳಿಸಿದ್ದೇನೆ ಅದನ್ನ ನೋಡಬೇಕಲ್ಲವೆ?’ ಅಂತ ವಾದ ಮಾಡಿದೆ. ಆದರೂ ಭಯ ದೂರವಾಗಲಿಲ್ಲ. ‘ಇದು ಸೋಷಿಯಲ್ ಮೀಡಿಯಾಗಳ ಕಾಲ. ಯಾವೊನೊ ಒಬ್ಬ ‘ಅಮ್ಮ ಅಕ್ಕ..’ ಅಂತೆಲ್ಲ ಬೈತಾನೆ. ಸುಮ್ಮನೆ ಯಾಕೆ ಇವೆಲ್ಲ..’ ಅಂತ ಮಾತು ಬಂದಾಗ ನಾನು ಅನಿವಾರ್ಯವಾಗಿ ‘ವಿದೂಷಕನ ರಾಮಾಯಣ’ ನಾಟಕದ ತಾಲೀಮು ನಿಲ್ಲಿಸಿದೆ.

ನನಗೆ ಆ ಹೊತ್ತು ಯಾರನ್ನು ದೂಷಿಸಬೇಕು ಮತ್ತು ಹೊಣೆಗಾರರನ್ನಾಗಿ ಮಾಡಬೇಕು ಎಂದು ಅರ್ಥವಾಗಲಿಲ್ಲ. ಜನ ಇಷ್ಟೊಂದು ಅಸೂಕ್ಷ್ಮರಾದರೆ? ಕಾಂಟೆಕ್ಸ್ಟ್ ನೋಡಿ ಅರ್ಥೈಸಿಕೊಳ್ಳಲೂ ಬಾರದವರು ಹುಟ್ಟುಹಾಕುತ್ತಿರುವ ಭಯಕ್ಕೆ ನಾವೇಕೆ ಮಣಿಯಬೇಕು ಎಂಬ ಹಠ ಒಂದು ಕಡೆ. ಹಾಗೊಂದು ವೇಳೆ ಘರ್ಷಣೆ ಶುರುವಾದರೆ ವಾಗ್ವಾದಕ್ಕೆ ನಾನು ಸಿದ್ಧ ಅಂದರೂ ನಟರ ಮನಸ್ಸು ಕದಲಲಿಲ್ಲ.

ಸರಿ ನಾನು ಅಲ್ಲಿಂದಾಚೆಗೆ ನಿರ್ಲಿಪ್ತನಾದೆ. ಆದರೆ ನಾಟಕದಲ್ಲಿ ನಾನು ಚಿತ್ರಿಸಿರುವ ರಾಮನ ಕುರಿತು ಚಿಂತನ ಮಂಥನ ಮಾತ್ರ ನಿರಂತರ ನಡೆಯುತ್ತಲೇ ಇತ್ತು.
ಹಾಗೆ ನೋಡಿದರೆ ರಾಮಾಯಣದ ಬಗ್ಗೆ ನಾನು ಎಲ್ಲೂ ಗೇಲಿ ಮಾಡಿರಲಿಲ್ಲ. ಅವಹೇಳನ ಇಲ್ಲವೇ ಇರಲಿಲ್ಲ. ಇಷ್ಟಿದ್ದೂ ಜನರಲ್ಲಿ ಸೂಕ್ಷ್ಮತೆ ಈ ಪರಿ ಕಳೆದು ಹೋದರೆ ಮಾಡುವುದೇನು ಎಂದು ಯೋಚಿಸುತ್ತಲೇ ಇದ್ದೆ. ಹಾಗಿದ್ದರೆ ಅಜ್ಜ ಮಾಸ್ಟರ್ ಹಿರಣ್ಣಯ್ಯ ದಶಕಗಳ ಕಾಲ ರಂಗದ ಮೇಲೆ ದೃಢವಾಗಿ ನಿಂತು ಎಲ್ಲರ ತೀವ್ರ ವಿರೋಧ ಎದುರಿಸುತ್ತ ಮಾತಾಡಿದ್ದು ಏನು ಹಾಗಾದರೆ? ಆ ವಿಡಂಬನೆ ಮತ್ತು ಜನರ ಮನಸ್ಸಿನ ಹದ ಎಲ್ಲಿ ಹೇಗೆ ಕಳೆದು ಹೋಯಿತು ಎಂದು ಹುಡುಕಲು ಆರಂಭಿಸಿದೆ.

ಯಾಕೋ ನನ್ನಲ್ಲೂ ಹಠ ಹುಟ್ಟಿಬಿಟ್ಟಿತು. ಹಲವು ನಟರನ್ನ ಮತ್ತೆ ಒಪ್ಪಿಸಿ ಮತ್ತೆ ರಾಮಾಯಣದ ತಾಲೀಮು ಆರಂಭಿಸಿದೆ. ಮುಗ್ಧ ಪದ ಬಳಕೆ ಇರಿಸಿಕೊಂಡು ‘ಪೆದ್ದ’ ಪದ ತೆಗೆದೆ. ಹಾಗೂ ಹೀಗೂ ನಾಟಕ ಒಂದು ಹಂತಕ್ಕೆ ಬಂದು ಇನ್ನೇನು ನಾಡಿದ್ದು ಶೋ ಅನ್ನುವಾಗ ಲಾಕ್ ಡೌನ್ ಆಯಿತು. ಆ ಹೊತ್ತು ಯಾರು ಯಾರು ಸಮಾಧಾನದ ನಿಟ್ಟುಸಿರು ಬಿಟ್ಟು ಆರಾಮು ಅನುಭವಿಸಿದರೊ ನಾನು ಊಹಿಸುವ ಕೆಲಸಕ್ಕೂ ಹೋಗಲಿಲ್ಲ. ನಕ್ಕು ಸುಮ್ಮನಾಗದೆ ವಿಧಿ ಇರಲಿಲ್ಲ. ನಂತರದಲ್ಲಿ ನಕ್ಕೆ ಮತ್ತು ಮರೆತೆ ಕೂಡ.

ಲಾಕ್ ಡೌನ್ ಕಳೆದು, ಕೊರೋನ ಸೋಂಕು ಕೊಂಚ ತಗ್ಗಿ ಥಿಯೇಟರ್ ಗಳು ಮತ್ತೆ ತೆರೆಯಲು ಆರಂಭಿಸಿದಾಗ ಒಬ್ಬರು ಮಾತ್ರ ‘ಮತ್ತೆ ರಾಮಾಯಣ ಮಾಡ್ಸಿ ಸರ್’ ಅಂದರು. ನಾನು ನಕ್ಕು ಕೈಮುಗಿದೆ. ನನಗೆ ಒಂದು ವರ್ಷದ ಅಂತರದಲ್ಲಿ ಕಾಲದ ಹದ ಎಷ್ಟು ಕೆಟ್ಟಿದೆ ಎಂಬ ಅರಿವು ಬಂದಿತ್ತು.

ತೀರಾ ಈಚೆಗೆ ರಂಗ ನಿರ್ದೇಶಕರೊಬ್ಬರು ನನಗೆ ‘ಆ ವಿದೂಷಕನ ರಾಮಾಯಣ’ ನಾಟಕದ ಸ್ಕ್ರಿಪ್ಟ್ ಕಳಿಸಿ’ ಅಂದರು. ಸರಿ ಎಂದು ಕಳಿಸಿದೆ. ಓದಿದ ಅವರು ‘ಈ ಕಾಲದಲ್ಲಿ ಈ ನಾಟಕವನ್ನ ಹೇಗೆ ತಗೋತಾರೆ ಅಂತ ಹೇಳೋಕ್ಕಾಗಲ್ಲ. ತುಂಬ ಡೇಂಜರ್ ನಾಟಕ..’ ಅಂತಂದರು. ನನಗೇನೂ ಆಶ್ಚರ್ಯ ಅನಿಸಲಿಲ್ಲ. ನಾನು ಸುಮ್ಮನಾದೆ.

ಕಾಲ ಮಾಯಿಸುತ್ತದೆ ಮತ್ತು ಮಾಗಿಸುತ್ತದೆ ಅಂತನ್ನುವ ಮಾತನ್ನು ಕೇಳಿದ್ದೇನೆ. ನನಗೆ ಸ್ಪಷ್ಟ ನೆನಪಿದೆ. ಅದು ಮಾಸ್ಟರ್ ಹಿರಣ್ಣಯ್ಯನವರ ಮತ್ತೊಂದು ಜನಪ್ರಿಯ ನಾಟಕ. ಹೆಸರು- ‘ನಡುಬೀದಿ ನಾರಾಯಣ’. ಆ ನಾಟಕದಲ್ಲಿ ರಾಯ ಎನ್ನುವ ಪಾತ್ರ ತೀರ್ಥ ಎನ್ನುವ ಪಾತ್ರಕ್ಕೆ ಹೀಗೆ ಹೇಳುತ್ತದೆ: ‘ಹಾಗಲ್ಲಯ್ಯ… ಪಿತೃವಾಕ್ಯ ಪರಿಪಾಲನೆಯಲ್ಲಿ ಆ ತ್ರೇತಾಯುಗದ ಶ್ರೀರಾಮಚಂದ್ರನಿಗಿಂತ ಮೂರು ಸ್ಟಾಪ್ ಮುಂದಿದ್ದಾನೆ ನನ್ನ ಮಗ…’

ಅದಕ್ಕೆ ಅಜ್ಜ ಮಾಸ್ಟರ್ ಹಿರಣ್ಣಯ್ಯ ‘ತೀರ್ಥ’ ನಾಗಿ ರಾಮನ ಬಗ್ಗೆ ಆಡಿರುವ ಮಾತು ಹೀಗಿದೆ: “ಅಯ್ಯೋ ಬಡ್ಕೊಳ್ಳಿ ನಿಮಗೆ. ಆ ತ್ರೇತಾಯುಗದಲ್ಲೇ ಶ್ರೀರಾಮಚಂದ್ರ ಯಾವುದೋ ಕೆಲಸಕ್ಕೆಂತ ಹೊರಟೋನು.. ಜರ್ನಿ ಕಂಟಿನ್ಯೂ ಮಾಡಿ, ಜನಕನ ಆಸ್ಥಾನಕ್ಕೆ ಹೋಗಿ ಅಲ್ಲಿ ಬಿಲ್ಲುಬಾಣ ಮುರುದು, ಸೀತೆ ಕೈಯಲ್ಲಿ ಹಾರ ಹಾಕಿಸ್ಕೊಂಡು, ಅವಳ ಜೊತೇಲಿ ಸೆಕೆಂಡ್ ಷೋ ಸಿನಿಮಾ ನೋಡ್ಕೊಂಡು ಬಂದ ಮೇಲೆ ಅವರಪ್ಪನಿಗೆ ಹೇಳಿ ಕಳ್ಸಿದ. ಏನು ನಿಮ್ಮ ರಾಮ ಅವರಪ್ಪನಿಗೆ ಹೇಳಿಬಿಟ್ಟು ಹೋದ್ನಾ..? ನಾನು ಬಿಲ್ಲು ಮುರಿಯೋಕೆ ಹೋಯ್ತೀನಿ, ಬಸ್ ಚಾರ್ಜ್ಗೆ ದುಡ್ಡು ಕೊಡು ಅಂತ ಕೇಳಿ? ಅಯ್ಯೋ ಯಜಮಾನರೇ ಎಲ್ಲಾ ಗಂಡು ಮಕ್ಕಳ ಹಣೆ ಬರಹಾನೂ ಅಷ್ಟೇ ಕಣ್ರೀ.. ನಾವು ನಮ್ಮಪ್ಪನಿಗೆ ಏನು ಮಾಡಿದ್ವೋ ನಾಳೆ ನಮ್ಮ ಮಕ್ಕಳು ನಮಗೆ ಮಾಡೋದು ಅದೇ….”

‘ನಡುಬೀದಿ ನಾರಾಯಣ’ ನಾಟಕ ಸರಿಸುಮಾರು ಆರರಿಂದ ಏಳು ಸಾವಿರ ಪ್ರದರ್ಶನ ಕಂಡಿದೆ. ಎಲ್ಲ ಪ್ರದರ್ಶನದಲ್ಲೂ ರಾಮನ ಜರ್ನಿಯ ಕುರಿತ ಮೇಲಿನ ಮಾತು ಇದ್ದೇ ಇದೆ. ರಾಮನ ಬಗ್ಗೆ ಇಂಥ ಮಾತುಗಳನ್ನ ಆಗೆಲ್ಲ ಜನ ಸ್ವೀಕರಿಸಿದರು. ನಕ್ಕರು. ಅದಕ್ಕೆ ವಿಡಂಬನೆ ಅಂತಲೂ ಕರೆದರು. ರಾಮನ ಘನತೆ ಆ ಮಾತಿನಿಂದ ಕುಗ್ಗಿತೆ?

ಈ ಕಾಲಮಾನಕ್ಕೆ ಏನಾಗಿದೆ? ಗ್ರಹಿಕೆ ಯಾಕೆ ತಪ್ಪುತ್ತಿದೆ? ಮೊದಲಿಗೆ ನಮ್ಮಲ್ಲೇ ಭಯ ಯಾಕೆ ಹುಟ್ಟಿಕೊಳ್ಳುತ್ತಿದೆ? ನಡುಬೀದಿ ನಾರಾಯಣ ನಾಟಕದ ಮಾತು ಡೇಂಜರ್ ಆಗದೆ ಹೋದದ್ದು ನಾನು ಸಿದ್ಧಪಡಿಸಿದ ರಂಗರೂಪದಲ್ಲಿನ ಒಂದು ಪದ ಡೇಂಜರ್ ಆದದ್ದು ಹೇಗೆ? ಅಜ್ಜ ‘ನಡುಬೀದಿ ನಾರಾಯಣ’ ದಲ್ಲಿ ಬಳಸಿದ್ದು ದಬ್ಬಲವೋ ಅಥವಾ ನಾನು ವಿದೂಷಕನ ರಾಮಾಯಣದಲ್ಲಿ ಬಳಸಿದ್ದು ಸೂಜಿಯೋ? ಅಥವಾ ನಾನು ಬಳಸಿದ್ದು ದಬ್ಬಲವಾಗಿ ಕಂಡಿತೊ?

ಸರ್ಕಾರಗಳು ರಂಗಕೃತಿಗಳ ವೈಶಿಷ್ಟ್ಯತೆಗಳನ್ನೂ ತಮ್ಮ ಇಸಂಗಳ ಹಿನ್ನೆಲೆಯಲ್ಲಿ ಯೋಜನೆಗಳನ್ನು ಜಾರಿಗೆ ತಂದಂತೆ ತರುತ್ತಿರುವ ಕಾಲಮಾನದಲ್ಲಿ ವಿಡಂಬನೆ ಇರಲಿ, ನಾಟಕದ ಹಿನ್ನೆಲೆಗೆ ತಕ್ಕುದಾದ ಪದ ಬಳಕೆ ಮಾಡಲೂ ಅಂಜುತ್ತಿರುವ ‘ಪರ್ವ’ ಕಾಲದಲ್ಲಿ ನಾವಿದ್ದೇವೆ ಎಂದೇ ನನಗೆ ಅನಿಸುತ್ತಿದೆ…