ಕನ್ನಡಕ

ಸಣ್ಣವನಿದ್ದಾಗ ಜಾತ್ರೆಯಲ್ಲಿ
ಅಮ್ಮ
ಹಸಿರು ಕನ್ನಡಕ ಕೊಡಿಸಿದ್ದಳು
ಸುತ್ತಣವೆಲ್ಲಾ ಹಸಿರು ಹಸಿರಾಗಿ ಕಂಡಿತ್ತು

ಶಾಲೆಯ ಕನ್ನಡ ಮೇಷ್ಟ್ರ
ಮೆಚ್ಚಿನ ಮುನ್ನಾ
ಆಗಿದ್ದಾಗ ಅವರೊಂದು
ಒಂದು ಹೊಸ ಕನ್ನಡಕ ಕೊಟ್ಟಿದ್ದರು
ಅದರ ಹೊಳಪಲ್ಲಿ
ಒಳಗಿನ ಹೊರಗಿನ
ಅಳತೆಗಳೆಲ್ಲಾ
ಹಿಗ್ಗಿದಂತೆ ಅನಿಸಿದ್ದವು

ಪ್ರಾಯಕ್ಕೆ ಬಂದಾಗ
ಆನ್ ಲೈನಿನಲ್ಲಿ
ಬ್ರಾಂಡೆಡ್ ಕನ್ನಡಕವೊಂದನ್ನು
ಆರ್ಡರ್ ಮಾಡಿದ್ದೆ
ಪ್ರೀತಿಯ ಹಸಿವು ಬಿಡುಗಡೆಯ ಕೆಚ್ಚು
ಜಗತ್ತು ಕ್ರಾಂತಿಯ ಕಿಡಿಗಾಗಿ
ಕಾದು ಕೂತಿದೆ ಎನಿಸುತ್ತಿತ್ತು

ಕನಸು ನಿದ್ದೆಗೆಡಿಸುತ್ತಿತ್ತು
ಅಲ್ಲಿ
ಅಪ್ಪ ಅಮ್ಮ ತಲೆಮಾಸಿದ ತಲೆಮಾರು
ಕೂಡ
ಕನ್ನಡಕವನ್ನು ಧರಿಸಿದ್ದರು
ಬಣ್ಣ ಗುರುತಿಸಲಾಗಲಿಲ್ಲ
ಹಳದಿಯೋ? ಕೆಂಪೋ? ಕೇಸರಿಯೋ?
ಹಸಿರೋ? ಬಿಳಿಯೋ?
ಅಥವಾ
ಕಲಕಿದ ಬಣ್ಣಗಳೋ?
ಎಲ್ಲವೂ ಒಂದೇ ತರ ಕಾಣುತ್ತಿದ್ದವು

ಬೆಳಿಗ್ಗೆ ಎದ್ದಾಗ ಯಾರೋ ಹೇಳಿದರು
ಕನಸಿನಲ್ಲಿ ಎಲ್ಲಾ ಬಣ್ಣಗಳೂ ಕೂಡ
ಒಂದೇ ತರಹ ಕಾಣುತ್ತವೆ
ಡ್ರೀಮ್ ಈಸ್ ಮೊನೊಕ್ರೊಮಾಟಿಕ್
ನಾನು ಹೇಳಿದವರನ್ನೇ ಸಂದೇಹದಿಂದ ನೋಡಿದೆ.

 

ದಾದಾಪೀರ್ ಜೈಮನ್ ಯುವ ಲೇಖಕ
ವೃತ್ತಿಯಿಂದ ಅಧ್ಯಾಪಕ
ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಆಸಕ್ತಿಯ ಕ್ಷೇತ್ರಗಳು
ಇವರ ಹಲವಾರು ಕತೆ ಮತ್ತು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ