ಗಾಂಧಿಕ್ಲಾಸ್
ಸತ್ಯವನ್ನು ಮಾತ್ರ ಹೇಳುವ ಪುಟ್ಟಮಕ್ಕಳು
‘ಯಾವಾಗ ಜಾಣರಾಗುತ್ತೀರಿ?’
ಎಂಬ ಲೋಕದ ಪ್ರಶ್ನೆಗೆ ಬೆಚ್ಚಿಬೀಳುತ್ತವೆ
ಜಾಣರಾಗುವುದೆಂದರೆ?
ಜಗತ್ತಿನ ಅರ್ಥ ಬೇರೆಯದೇ ಇದೆಯಂತೆ…
ಬೆತ್ತದ ರುಚಿಗೆ ಹೆದರುವ ಮಕ್ಕಳು
ಕಾಪಿ ಹೊಡೆಯುತ್ತವೆ
ಸುಳ್ಳು ಹೇಳುತ್ತವೆ
ರಾಜಿ ಮಾಡಿಕೊಂಡು ಕೊನೆಗೆ ಜಾಣರಾಗಿಬಿಡುತ್ತವೆ
ಮುಂದೆ ಅವೇ ಮಕ್ಕಳು
ಹಿಂದೆ ಬಿದ್ದ ಉಳಿದಮಕ್ಕಳನ್ನು
ನಿನ್ನ ಹೆಸರಿನಿಂದಲೇ ಛೇಡಿಸುತ್ತವೆ
ಲೋಕಕ್ಕೆ ಸತ್ಯ ಅಪಥ್ಯವೆಂದು ಸಾಬೀತುಪಡಿಸುತ್ತವೆ
ಜಗದ ಪ್ರಯೋಗಾಲಯದಲ್ಲಿ ದಿಕ್ಕೆಟ್ಟು ಓಡುತ್ತವೆ
ಕಳೆದುಕೊಳ್ಳುತ್ತವೆ ಕ್ರಮೇಣ…
ಎದೆಯೊಳಗಿನ ಕರುಣೆಯ ಬೆಳಕನ್ನು
ಚರಕದೊಳಗಿಂದೆದ್ದು ಬರುವ ಖಾದಿಯ ಬಿಸುಪನ್ನು
ಸತ್ಯ ಮತ್ತು ಸರಳತೆಯ ದಿವ್ಯ ಸಖ್ಯವನ್ನು;
ಮರೆತುಬಿಡುತ್ತವೆ
ಸ್ವಾತಂತ್ರ್ಯಕ್ಕಿರುವ ಕಾವ್ಯದ ಆಯಾಮವನ್ನು
ಮುಂದೆ ಅವೇ ಮಕ್ಕಳು ಮುಂಚೂಣಿಯ ಚುಕ್ಕಾಣಿ ಹಿಡಿಯುತ್ತವೆ
ಕಟ್ಟಕಡೆಗೆ ನಿಂತ ಬಡವರ ರಕ್ತ ಬಸಿಯುವಾಗ
ಅವಕ್ಕೆ ಏನೂ ಅನ್ನಿಸುವುದಿಲ್ಲ
ಅವೇ ಮಕ್ಕಳು ಪ್ರತಿವರ್ಷದ ನಿನ್ನ ಹುಟ್ಟುಹಬ್ಬಕ್ಕೆ
ವೃತ್ತದಲ್ಲಿ ನಿಂತ ನಿನ್ನ ಪ್ರತಿಮೆಗೆ ಪುಷ್ಪಾರ್ಚನೆ ಮಾಡುತ್ತವೆ
ನಿನ್ನಂತೆ
ಸತ್ಯ ಹೇಳುವ
ಸರಳವಾಗಿ ಬದುಕುವ
ಕಾವ್ಯದ ಪಸೆಯಿರುವ ಸ್ವಾತಂತ್ರ್ಯವ
ಉಳಿಸಿಕೊಂಡಿರುವ ಮಕ್ಕಳು
ಅಲ್ಲಿಯೇ ಉಳಿದುಬಿಡುತ್ತವೆ
ಸಾಬರಮತಿಯಂತಹ ಆಶ್ರಮದಲ್ಲಿ
ಸತ್ಯಕ್ಕೆ ಆತುಕೊಂಡು
ಗಾಂಧೀ ಕ್ಲಾಸಿನಲ್ಲಿ…
ಅವರಿಗೆ ನಿನ್ನಂತೆ ಅಸಾಮಾನ್ಯರಲ್ಲಿ
ಅತಿ ಸಾಮಾನ್ಯರಾಗುವ
ಕನಸಿದೆ
ಸಂಕಟದ ಘಳಿಗೆಗಳಲ್ಲಿ ನೀನು ಬಿಟ್ಟು ಹೋದ
ಅಹಿಂಸೆ ಮತ್ತು ಸತ್ಯಾಗ್ರಹದ ಆಯುಧವಿದೆ
ಅವರು ಥೇಟ್ ನಿನ್ನಂತೆಯೇ ನಿಷ್ಠುರಿಗಳು
ಪ್ರತಿದಿನ ಆತ್ಮದ ಹೂವಿನ ದಿವ್ಯಗಂಧವನ್ನು
ಸೇವಿಸುತ್ತಾರೆ
ಆದರೆ ಹುಚ್ಚು ಪ್ರಪಂಚ ಅವರಿಗೆ ಮಹಾತ್ಮರೆಂಬ ಬಿರುದು
ಕೊಡಲು ಸಮಿತಿ ರಚಿಸಿಕೊಂಡು ಓಡಾಡುತ್ತದೆ
ಗಾಂಧಿಕ್ಲಾಸಿನ ಮಕ್ಕಳಿಗೆ ಅದ್ಯಾವುದೂ ಮುಖ್ಯವೆನಿಸುವುದಿಲ್ಲ!