ಅವರ ಕತೆಗಳಲ್ಲಿ ಸಂಭಾಷಣೆಗಿಂತ ನಿರೂಪಣೆಯೇ ಮುನ್ನೆಲೆಗೆ ಬರುತ್ತದೆ. ಹೀಗಾಗಿ ಕತೆಯ ಪೂರ್ಣ ಹೆಣಿಗೆ ಆಡುಮಾತಿನಲ್ಲೇ ಇರುತ್ತದೆ. ಆಡುವ ನುಡಿಯಂತೆಯೇ ಬರವಣಿಗೆಯೂ ಇರುತ್ತಾ, ನಿರೂಪಣೆಯಲ್ಲೇ ‘ಹ’ಕಾರ ‘ಅ’ಕಾರಗಳ ಅದಲು ಬದಲುಗಳೂ ಸೇರಿಕೊಂಡು ಇತರ ಸ್ಥಳೀಯ ಪದಗಳ ಬಳಕೆಯೂ ಹಾಗೇ ದಾಖಲಾಗುತ್ತದೆ. ಇದು ಕೆಲವೊಮ್ಮೆ ಭಾಷೆಯ ಬಳಕೆಯ ಬಗೆಗೆ ‘ಮಡಿವಂತಿಕೆ’ ಹೊಂದಿದ್ದು, ತಮ್ಮದೇ ಸರಿ ಕನ್ನಡ, ಇದೆಲ್ಲ ‘ಅಶುದ್ಧ’ ಕನ್ನಡ ಎಂದುಕೊಳ್ಳುವವರಿಗೆ ಇರಿಸು ಮುರಿಸು ಮಾಡಬಹುದು. ಆದರೆ ಇವು ಆಡುಕನ್ನಡದ ಒಂದು ಟಿಸಿಲು ಎಂದು ಅರಿತರೆ ಸಮಸ್ಯೆ ಅನ್ನಿಸದು.
ವಿಜಯಾ ಮೋಹನ್‌ ಕಥಾ ಸಂಕಲನ “ಮೇವು”ಗೆ ಡಾ. ಸಬಿತಾ ಬನ್ನಾಡಿ ಬರೆದ ಮುನ್ನುಡಿ

ಇಲ್ಲಿನ ಹಲವು ಕತೆಗಳು ಕೆಳ ಮಧ್ಯಮ ವರ್ಗದ ದಿನ ದಿನದ ಬದುಕಿನ ಮಂದ್ರ ಸ್ಥಾಯಿಯನ್ನು ನಮ್ಮ ಮುಂದಿಟ್ಟು ಮುಂದಕ್ಕೆ ಹೋಗುತ್ತದೆ. ಹೆಚ್ಚಿನವು ದಂದುಗ, ಬವಣೆ, ಒಂದು ನೋವಿನೆಳೆ, ಒಂದು ನಿಟ್ಟುಸಿರಿನಲ್ಲಿ ಮುಗಿಯುತ್ತದೆ. ಉತ್ತರವಿಲ್ಲದ ಈ ದಿನ ದಿನದ ಬದುಕಿನ ಪುಟಗಳು ವ್ಯಕ್ತಿಗಳ ಸಮಸ್ಯೆಯೋ, ವ್ಯವಸ್ಥೆಯ ಸಮಸ್ಯೆಯೋ ಎಂಬುದನ್ನು ಕತೆ ಹೆಚ್ಚು ಯೋಚಿಸುವುದಿಲ್ಲವಾದರೂ ಅವುಗಳಿಗೊಂದು ಕಿವಿಯಾಗಿ ಕತೆಯ ರೂಪ ಧರಿಸಿದೆ.

(ವಿಜಯಾ ಮೋಹನ್‌)

ಇದರಲ್ಲಿ ವ್ಯಕ್ತಿಗಳ ಸಮಸ್ಯೆಯೂ, ವ್ಯವಸ್ಥೆಯ ಅವ್ಯವಸ್ಥೆಯಿಂದಾಗಿ ಹುಟ್ಟಿದ ಸಮಸ್ಯೆಗಳೂ ಕತೆಗಳಾಗಿವೆ. ದನಗಳಿಗೆ ಮೇವು ಇಲ್ಲದಿರುವ ಸಮಸ್ಯೆ, ಕೋವಿಡ್‌ನ ಕಾಲದ ವಲಸೆ ಸಮಸ್ಯೆ, ಸರ್ಕಾರವೇ ಸಬ್ಸಿಡಿ ನೀಡಿದಾಗಲೂ ಹಣಹೊಡೆಯುವ ದುರಾಸೆಗೆ ಬಿದ್ದು ಶೌಚಾಲಯವನ್ನು ಕಟ್ಟಿಕೊಳ್ಳದೆ ಮನೆಯ ಸೊಸೆ ಬೀದಿಯಲ್ಲಿ ಹೆತ್ತ ಮಗು ಬೀದಿನಾಯಿಗಳ ಪಾಲಾಗುವ ದಾರುಣತೆ, ಹೀಗೆ ಹಲವು ಮುಖಗಳು ಇಲ್ಲಿವೆ. ವಿಜ್ಞಾನ ಓದಿಯೂ ಮೌಢ್ಯ ಪೊರೆವ, ಯಾವ ತಪ್ಪು ಮಾಡದೆಯೂ ಮತ್ತೆ ಮತ್ತೆ ತಪ್ಪಿತಸ್ಥನೆನಿಸಿಕೊಳ್ಳುವ ದುರಾದೃಷ್ಟಕ್ಕೆ ಒಳಗಾದ ವ್ಯಕ್ತಿನೆಲೆಯ ಕತೆಯ ಜೊತೆಗೆ ಸಂಬಂಧಗಳ ನಡುವೆ ಬಿರುಕು ಬಂದಿರುವ ಆಧುನಿಕ ಜೀವನಶೈಲಿಯ ಪರಿಣಾಮಗಳನ್ನು ಹೇಳುವ ಕತೆಗಳೆಡೆಗೆ ಲೇಖಕಿಯ ಗಮನವಿದೆ. ತಾಯಿಯನ್ನು ನೋಡಿಕೊಳ್ಳಲು ಲೆಕ್ಕಾಚಾರ ಹಾಕುವ ಮಕ್ಕಳು ಮತ್ತು ಕೊನೆಗೂ ಆ ಬಗ್ಗೆ ಅಪರಾಧಿ ಭಾವ ಹೊಂದಿ ತಾಯಿಗಾಗಿ ಮನೆಯನ್ನೇ ಬಿಡುವ ಮಗನ ಕತೆಯಾದ ‘ನಿರ್ಧಾರ’, ಜೀವನದುದ್ದಕ್ಕೂ ಊರಿನಲ್ಲಿ ಹಲವರಿಗೆ ಪಂಚಾಯಿತಿ ಮಾಡಿ ಪರಿಹಾರದ ಪರೋಪಕಾರ ಮಾಡುತ್ತಾ ಸಣ್ಣ ಮಟ್ಟದಲ್ಲಿ ನಾಯಕನಂತೆ ಬದುಕಿದ ರಂಗಣ್ಣನ ಈ ಗುಣವೇ ಅವನ ಜೀವನ ಸಂಜೆಯಲ್ಲಿ ಅಧಿಕಪ್ರಸಂಗಿತನವಾಗಿ ಸ್ವತಃ ಹೆತ್ತ ಮಗನಿಗೂ, ಊರಿನ ಹೊಸ ತಲೆಮಾರಿನವರಿಗೂ ಕಾಣಿಸುವ, ಸಂಪೂರ್ಣವಾಗಿ ಸಾಮುದಾಯಿಕ ಬದುಕೆಂಬುದು ಅಧಃಪತನಕ್ಕೆ ಹೋಗಿರುವ ಸನ್ನಿವೇಶದಲ್ಲಿ ಅದಕ್ಕಾಗಿ ಪದೇ ಪದೇ ಅವಮಾನಕ್ಕೆ ಒಳಗಾಗುವ ಹಾಗೂ ಅಂತಿಮವಾಗಿ ವೃದ್ಧಾಶ್ರಮಕ್ಕೆ ಆತನನ್ನು ಸೇರಿಸಲು ಅದೇ ನೆಪವಾಗುವ ದುರಂತವನ್ನು ‘ತಪ್ಪು ಕಥೆ’ ಹೇಳುತ್ತದೆ. ಇಲ್ಲೆಲ್ಲಾ ಗಮನಿಸಬೇಕಾದ ಸಂಗತಿಯೆಂದರೆ, ಭೌತಿಕ ಸವಲತ್ತಿನ ಬೆನ್ನು ಬಿದ್ದಿರುವ ಇಂದಿನ ಜೀವನದಲ್ಲಿ, ಮನುಷ್ಯ ಸಂಬಂಧಗಳ ಚೆಲುವಿನೆಡೆಗೆ ಇರುವ ಗಾಢ ಅವಜ್ಞೆಯು ಹೇಗೆ ತಮ್ಮ ಬದುಕುಗಳ ಸುಖವನ್ನು ನುಂಗುತ್ತಿದೆ ಎಂಬುದು ಸ್ವತಃ ಶೋಷಣೆ ಮಾಡುವವರಿಗೇ ತಿಳಿಯದೇ ಹೋಗುವುದು. ಎಲ್ಲೆಲ್ಲೂ ‘ಅನ್ಯತೆ’ ಎಂಬುದು ಮೌಲ್ಯವಾಗಿ ಬದುಕು ದಿಕ್ಕಾಪಾಲಾಗಿರುವುದು.

ವಿಜಯಾ ಮೋಹನ್ ಅವರು ಮಧುಗಿರಿಯ ಅಚ್ಚ ನುಡಿಯಲ್ಲಿ ಬರೆಯುವವರು. ಈ ಸಂಕಲನದಲ್ಲಿ ಸ್ವಲ್ಪ ಭಾಷೆಯನ್ನು ತಿಳಿಯಾಗಿಸಿ ಓದುಗರನ್ನು ತಲುಪುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಕೇವಲ ಸಂಭಾಷಣೆಗೆ ಮಾತ್ರ ಆಡುನುಡಿಯನ್ನು ಬಳಸಿಕೊಳ್ಳುವ ಒಂದು ಕ್ರಮ ಕನ್ನಡದಲ್ಲಿದೆ. ಆದರೆ ವಿಜಯಾ ಅವರು ಈ ಮಾದರಿಯಲ್ಲಿ ಬರೆಯುವವರಲ್ಲ. ಅವರ ಕತೆಗಳಲ್ಲಿ ಸಂಭಾಷಣೆಗಿಂತ ನಿರೂಪಣೆಯೇ ಮುನ್ನೆಲೆಗೆ ಬರುತ್ತದೆ. ಹೀಗಾಗಿ ಕತೆಯ ಪೂರ್ಣ ಹೆಣಿಗೆ ಆಡುಮಾತಿನಲ್ಲೇ ಇರುತ್ತದೆ. ಆಡುವ ನುಡಿಯಂತೆಯೇ ಬರವಣಿಗೆಯೂ ಇರುತ್ತಾ, ನಿರೂಪಣೆಯಲ್ಲೇ ‘ಹ’ಕಾರ ‘ಅ’ಕಾರಗಳ ಅದಲು ಬದಲುಗಳೂ ಸೇರಿಕೊಂಡು ಇತರ ಸ್ಥಳೀಯ ಪದಗಳ ಬಳಕೆಯೂ ಹಾಗೇ ದಾಖಲಾಗುತ್ತದೆ. ಇದು ಕೆಲವೊಮ್ಮೆ ಭಾಷೆಯ ಬಳಕೆಯ ಬಗೆಗೆ ‘ಮಡಿವಂತಿಕೆ’ ಹೊಂದಿದ್ದು, ತಮ್ಮದೇ ಸರಿ ಕನ್ನಡ, ಇದೆಲ್ಲ ‘ಅಶುದ್ಧ’ ಕನ್ನಡ ಎಂದುಕೊಳ್ಳುವವರಿಗೆ ಇರಿಸು ಮುರಿಸು ಮಾಡಬಹುದು. ಆದರೆ ಇವು ಆಡುಕನ್ನಡದ ಒಂದು ಟಿಸಿಲು ಎಂದು ಅರಿತರೆ ಸಮಸ್ಯೆ ಅನ್ನಿಸದು. ಹಾಗೆ ನೋಡಹೋದರೆ, ಅವರು ಬಳಸುವ ದಟ್ಟ ಮಧುಗಿರಿಯ ಭಾಷೆಯೇ ಅವರ ಕತೆಗಳ ವೈಶಿಷ್ಟ್ಯ ಅನ್ನುವುದು ಈ ಸಂಕಲನದ ಭಾಷೆಗೆ ಹೋಲಿಸಿದಾಗ ನಿಚ್ಚಳವಾಗುತ್ತದೆ. ಆದ್ದರಿಂದ ವಿಜಯಾ ಅವರಿಗೆ ಈ ಸವಾಲು ಅವರ ಮುಂದಿದೆ. ಅಂದರೆ, ಕತೆಯು ಬಯಸಿದ ಭಾಷೆಯನ್ನು ಬಳಸಬೇಕೋ, ನಮ್ಮ ಆಯ್ಕೆಯ ಭಾಷೆ ಬಳಸುವುದೇ ಆದರೆ ಕತೆಯ ತಂತ್ರ, ಆಶಯಗಳನ್ನು ಪುನರ್‍ನಿರ್ಮಿಸಿಕೊಳ್ಳಬೇಕೋ ಅನ್ನುವುದು ಆ ಸವಾಲು. ನನಗನಿಸುತ್ತದೆ, ವಿಜಯಾ ಅವರು ಇನ್ನು ಮುಂದೆ ಬದುಕಿನ ಇನ್ನಷ್ಟು ಮಗ್ಗುಲುಗಳನ್ನು ಶೋಧಿಸಬೇಕಾದ ಅನಿವಾರ್ಯತೆಗೆ ಸಿಲುಕುವಷ್ಟರ ಮಟ್ಟಿಗೆ ಈಗಾಗಲೇ ಬರೆದಿರುವ ಕತೆಗಳು ಒಂದು ಹಂತವನ್ನು ದಾಟಿವೆ ಅಂತ.

(ಡಾ. ಸಬಿತಾ ಬನ್ನಾಡಿ)

ಈ ಸಂಕಲನದಲ್ಲಿ ಅಂತಹದೊಂದು ಪ್ರಯತ್ನ ನನಗೆ ‘ಹಣೆ ಬರ’ ಕತೆಯಲ್ಲಿ ಕಂಡಿದೆ. ಈ ಕತೆಯಲ್ಲಿ ಎಂದಿನಂತೆ ಬವಣೆ, ಸಂಕಟಗಳಿಗೆ ಕಿವಿಯಾಗುವುದಷ್ಟೇ ಇಲ್ಲದೆ, ಜನಪದರು ಎಷ್ಟೋ ಸಲ ಸಿದ್ಧ ಚೌಕಟ್ಟುಗಳ ಬದುಕಿನ ಎಲ್ಲೆಯನ್ನು ಮೀರಿ ತಮ್ಮದೇ ಬದುಕು ಕಟ್ಟಿಕೊಳ್ಳುತ್ತಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಾರೆ ಎನ್ನುವುದರ ಚಿತ್ರಣ ಇದೆ. ಈಗ ನಳಿನಾ ಆಗಿರುವ ನಂಜಮ್ಮ, ಬಾಲ್ಯದಿಂದಲೇ ಕಷ್ಟದ ಬದುಕು ಕಂಡವಳು. ಮದುವೆಯಾಗಿ ಎರಡು ಮಕ್ಕಳಾದ ಮೇಲೂ ವಿಷಮ ದಾಂಪತ್ಯದ ಕಾಠಿಣ್ಯದ ದುಃಖದಲ್ಲಿಯೇ ಇರುವವಳು. ಹೀಗಿರುವಾಗ ಆಕಸ್ಮಿಕವಾಗಿ ಒದಗುವ ರುದ್ರಣ್ಣನ ಪ್ರೇಮ ನಿವೇದನೆಯನ್ನು ಒಪ್ಪಿ ಅವನೊಂದಿಗೆ ತನ್ನೆರಡು ಹೆಣ್ಣು ಮಕ್ಕಳನ್ನೂ ಕರೆದುಕೊಂಡು ಹೋಗಿ ಹೊಸಬದುಕು ಕಟ್ಟಿಕೊಳ್ಳುತ್ತಾಳೆ. ನಿಜ, ಅವನು ಅವಳ ನಂಬಿಕೆ ಮುರಿಯದೇ, ಕೊರತೆಯಾಗದಂತೆ ಅವಳನ್ನು ನಡೆಸಿಕೊಂಡ ಎಂಬುದು ಅವಳ ಅದೃಷ್ಟ ಎಂದೇ ನಂಬಬೇಕಾದ ಸಾಮಾಜಿಕ ವಾಸ್ತವ ನಮ್ಮ ನಡುವೆ ಇದೆ. ಹಾಗಿದ್ದೂ, ಯಾವುದೇ ಗಿಲ್ಟ್‌ಗಳಿಲ್ಲದೆ ಆಕೆ ತನ್ನ ಮಕ್ಕಳನ್ನು ಬೆಳೆಸುತ್ತಾ ಅವನೊಂದಿಗಿನ ಬದುಕಿನ ಸುಖ ಅನುಭವಿಸುತ್ತಾಳೆ ಎಂಬ ವಾಸ್ತವವೂ ಇಲ್ಲಿರುವುದರಿಂದಲೇ ನಿರೂಪಕಿಗೆ, “ಇಷ್ಟು ದಿನಕ್ಕಿಂತ ನನ್ನ ಮನಸ್ಸೆಂಬೋದು ಇವತ್ತು ಸೊಯ್ಯೆಂದು ಬೀಸುತ್ತಿದ್ದ ಗಾಳಿಯ ಜೊತೆ ಸರ ಸರನೆ ತೇಲಾಡಂಗಾಯಿತು.” ಎಂದೆನಿಸುವುದು – ಓದುಗರಿಗೂ ಚೇತೋಹಾರಿಯಾಗಿರುತ್ತದೆ.

ಈ ಚೇತೋಹಾರಿತನ, ಬದುಕಿನ ಕಟುತ್ವವನ್ನೂ ಮೀರಿ ನಲಿವನ್ನು ಅರಸುವ ಅಚ್ಚರಿಯ ಮುಖಗಳು, ಛಲದಿಂದ ಮುನ್ನಡೆಯುವ ಕಥನಗಳು, ಬದುಕಿನ ದುರಂತಗಳಿಗೆ ಇರುವ ಕಾರಣಗಳ ಆಳ ಶೋಧನೆ, ಹೀಗೆ ಭಿನ್ನ ಮಗ್ಗುಲುಗಳೆಡೆಗೆ ವಿಜಯಾ ಅವರ ಕಥಾ ಪ್ರಯಾಣ ಮುಂದುವರೆಯಲಿ ಎಂದು ಹಾರೈಸುತ್ತಾ ಶುಭಕೋರುವೆ.

(ಕೃತಿ: ಮೇವು (ಕಥಾ ಸಂಕಲನ), ಲೇಖಕರು: ವಿಜಯಾ ಮೋಹನ್, ಪ್ರಕಾಶಕರು: ಸ್ವರ ಪ್ರಕಾಶನ)