ವೀರಣ್ಣ ಮಡಿವಾಳರ

ಈಗಲಾದರೂ ಕವಿತೆ ಪವಿತ್ರವಾಗಲಿ

ಮೊದಲ ಬಾರಿಗೆ ನನ್ನ ಕವಿತೆಗೊಂದು ಉದ್ದೇಶ ದೊರೆತಿದೆ.
ಸಾಧ್ಯವಾದರೆ ನಿನ್ನನ್ನು ಅಮರವಾಗಿಸುವುದು, ಎಲ್ಲರ
ಹೃದಯಗಳಲ್ಲಿ ನಿನ್ನ ಹೂಹೃದಯ ಬಿತ್ತುವುದು. ಅದೀಗ ತಾನೆ ರೆಕ್ಕೆ
ಮೂಡಿದ ಹಕ್ಕಿ ಮರಿಯೊಂದು ಜಗವ ಸುತ್ತುವ ಬಯಕೆಯಂತೆ ಇದು
ಅನ್ನಿಸಬಹುದು. ನಾನು ಭಾವಿಸುತ್ತೇನೆ ರೆಕ್ಕೆ ಹೀಗೆಯೇ ಇರುವುದಿಲ್ಲ.

ನನಗೆ ನಂಬಿಕೆ ಇರುವುದು ರೆಕ್ಕೆಯ ಮೇಲಲ್ಲ, ನಿನ್ನ ಮೇಲೆ. ನೀನು ನನ್ನ
ಸತ್ತಂತಿರುವ ಚೇತನಕ್ಕೆ ತುಂಬುವ ಜೀವಂತಿಕೆಯ ಮೇಲೆ. ಜೊತೆಗಿರುವ
ಪ್ರತಿಕ್ಷಣ ನೀನು ಸೃಷ್ಟಿಸುವ ಬೆರಗುಗಳ ಮೇಲೆ. ಜೊತೆಗಿಲ್ಲದ
ಕ್ಷಣಗಳಲ್ಲಿಯೂ ಉಳಿಸಿಹೋಗುವ ಕುತೂಹಲದ ಮೇಲೆ ಮತ್ತು ಏನೆಲ್ಲ
ಭಾವಗಳ ಸೆಲೆಯಾದ ನಿನ್ನ ನಗುವಿನ ಸದ್ದಿನ ಮೇಲೆ. ಇದಾವುದೂ
ಆಗದಿದ್ದರೂ ನಿನ್ನೊಳಗೊಂದು ಸಂಭ್ರಮದ ಒಳಝರಿ ಹರಿವಂತೆ
ಮಾಡಲಾಗದಿದ್ದೀತೆ? ಈಗಲಾದರೂ ಕವಿತೆ ಪವಿತ್ರವಾಗಲಿ ನಿನ್ನ ನಗುವಿನ ಸಿಹಿ ಸೋಕಿ.

ಕವಿತೆಯ ಅಕ್ಷರಗಳು

ನನ್ನ ಕವಿತೆಯ ಅಕ್ಷರಗಳನ್ನು ಅವಳು ಮುತ್ತೆಂದು ಭಾವಿಸಿ ಒಂದೊಂದಾಗಿ
ಪೋಣಿಸಿಕೊಂಡು ಕೊರಳಹಾರ ಮಾಡಿಕೊಳ್ಳುತ್ತೇನೆ ಎನ್ನುತ್ತಾಳೆ.
ಕವಿತೆಯ ಸಾರ್ಥಕತೆ ಇದೇ ಇರಬೇಕು. ನನ್ನೊಳಗೆ ಹುಟ್ಟಿದ ಅನಂತ
ದುಃಖವನ್ನ ಪದಗಳಾಗಿ ಹರಿಯಬಿಡುತ್ತೇನೆ. ಹಾಗೆ ಬಿಟ್ಟೊಡನೆ ಅವು
ಯಾತನೆಯ ಸುವಾಸನೆ ಪಸತಿಸುತ್ತಾ ಸುಮ್ಮನೆ ಧೂಳಿನಂತೆ ಹಾರುತ್ತವೆ.
ಎಲ್ಲರೂ ಈ ಧೂಳಿನ ಕಣಗಳನ್ನು ಕಂಡು ಅಂಜಿ ದೂರ
ಸರಿಯುತ್ತಿರುವಾಗ ಅವಳದ್ಯಾಕೆ ಅವುಗಳನ್ನ ತನ್ನೊಳಗೆ ತೆಗದುಕೊಳ್ಳುತ್ತಾಳೊ

ಇರಲಿ ಬಿಡು, ಹೀಗಾದರೂ ನನ್ನೊಳಗೆ ಸತ್ತು ಒಳಗೊಳಗೆ
ಕುದಿಯಲಾಗದೆ ಕಾಗದದ ದೋಣಿಯಲಿ ಶವವಾಗಿ ತೇಲುತಿರುವ ಈ
ಅಕ್ಷರಗಳು ಅವಳ ಉಸಿರ ಗಂಧ ಸೋಕಿಸಿಕೊಂಡು ಮರುಜೀವ ಪಡೆದುಕೊಳ್ಳಲಿ ಮತ್ತೊಂದು ರೂಪದಲ್ಲಿ

ಯಾವಾಗಲೋ ಏಳಬೇಕಾಗಿದ್ದ ವಸಂತ ಇನ್ನೂ ಒಳಗೇ ಮಲಗಿರುವ
ಅವಳೆದೆಯ ಮೇಲೆ ಈ ಅಕ್ಷರಮಾಲೆ ತಾನೇ ಅಂದ
ಪಡೆದುಕೊಳ್ಳುವುದೋ, ಅವಳಂದಕ್ಕೆ ಅಂದವಾಗುವ ಶಕ್ತಿಯಂತೂ
ಇವುಗಳಿಗಿದೆಯೆಂದು ನಾನು ನಂಬುವುದಿಲ್ಲ.

ವೀರಣ್ಣ ಮಡಿವಾಳರ ಹೊಸತಲೆಮಾರಿನ ಪ್ರಮುಖ ಕವಿಗಳಲ್ಲೊಬ್ಬರು.
ರಾಯಬಾಗದಲ್ಲಿ ನೆಲೆಸಿರೋ ವೀರಣ್ಣ, ವೃತ್ತಿಯಲ್ಲಿ ಶಿಕ್ಷಕರು.
ಕನ್ನಡದ ಚೊಚ್ಚಲ ಕೇಂದ್ರ ಅಕಾಡೆಮಿ ಯುವ ಪುರಸ್ಕಾರದ ಜೊತೆಗೆ, ಹಲವಾರು ಪ್ರಶಸ್ತಿಗಳು ಇವರ ಸಾಹಿತ್ಯ ಕೃತಿಗಳಿಗೆ ದೊರಕಿವೆ.


ಭಾಗ್ಯ ಗುಡಗೇರಿ

ನೀಲಿ ಬೆಳಕು

ಬೆರಳ ಕಿಂಡಿಯಲ್ಲಿ ಇಣುಕುವ ಬೆಳಕು
ಹೊತ್ತು ತಂದಿದೆ ಸಾವಿರ ಕನಸು

ನನ್ನದೆನ್ನುವ ಭ್ರಮೆಯ ಬೆಳಕಿಗೆ
ಎಣ್ಣೆ ಉರುಳಿಸಿ ಜಾರುವ ಕಾಲಿಗೆ
ಆಸರೆಯಾಗಿಸುವಂತಾಗಿಸಿದೆ ಬತ್ತಿ

ಬೆಳಕಿನ ಕುಡಿಗೆ ಉಸುರುವ ಜೀವ
ಕಣ್ಮುಚ್ಚಿದೆ ನಕ್ಷತ್ರ ಕಂಡು

ನೀಲಿ ಮೈ ಉಟ್ಟವನ ಹಣೆಯ ಮಿಂಚು
ಎದೆಯ ಕಣ್ಣಿಗೆ ತಾಗಿ
ಉಂಡಂತಾಗಿದೆ ಬೆಳಕೂ ನೀಲಿಯನ್ನು

ಹೆರಳ ನಂಟಿಗೆ ಬೆಸೆದ ಬೆಳಕಿನ ಬೆರಳು
ಅಗಳು ಅನ್ನವನ್ನೂ ನೀಲಾಕ್ಷೆಯವಾಗಿಸಿದೆ

ನನಗೆ ನೆನಪಿದೆ ಹಾಲುನೆತ್ತರವೂ ನೀಲಿಯಾಗಿದ್ದು
ಇಂದು ಆಕಾಶಕ್ಕೂ ಸಂಭ್ರಮ
ಬೆಳಕಿನ ಹಬ್ಬ ಬದಲಾಯಿಸಿದ್ದಕ್ಕೆ ಬಣ್ಣ

ಭಾಗ್ಯಜ್ಯೋತಿ ಹಿರೇಮಠ ಹುಬ್ಬಳ್ಳಿಯ ಕೆ.ಎಲ್.ಇ. ಪಿ.ಸಿ.ಜಾಬೀನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿ
ಕೆ.ಎಲ್.ಇ. ಧ್ವನಿ 90.4 ಎಫ್ ಎಂ ರೇಡಿಯೋದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಕಾರ್ಯಕ್ರಮ ನಿರ್ವಹಣೆ.
ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಿನಿಮಾ ಹಾಡುಗಳ ಗೀತ ಮೀಮಾಂಸೆ ಎಂಬ ವಿಷಯದ ಕುರಿತು ಸಂಶೋಧನೆಯನ್ನು ಕೈಗೊಂಡಿದ್ದಾರೆ.
ಇವರಿಗೆ 2018ರ ಸಂಕ್ರಮಣ ಕಾವ್ಯ ಪ್ರಶಸ್ತಿ ಲಭಿಸಿದೆ.


ಪೂರ್ಣಿಮಾ ಸುರೇಶ್

ಅನೂಹ್ಯ ವಿಸ್ಮಯ

ನಿನ್ನೆ
ಸ್ವಲ್ಪ ಬಿಡುವು
ನನ್ನ ಪರೀಕ್ಷಿಸಿಕೊಂಡೆ
ಸತ್ತಿರುವುದು ಧೃಡವಾಯಿತು
ಅವನಿಗೆ ಸಂದೇಶ ರವಾನಿಸಿದೆ.

ದಿಗಿಲಾಗಿ
ವೈದ್ಯರ ಅಟ್ಟಿದ.

ವಿಶೇಷ ಪರಿಣಿತ ಪರೀಕ್ಷಿಸಿದ;
ನಾಡಿ ಮಿಡಿತವಿದೆ
ಕಣ್ಣು ತೇವವಿದೆ
ಎದೆ ಬಡಬಡಿಸುತ್ತಿದೆ
ನಾಲಗೆ ಒಣಗಿಲ್ಲ.

ಷರಾ ಬರೆದ: ಸತ್ತಿಲ್ಲ.

ನಾನೀಗ ನಡುರಾತ್ರಿ ಪ್ರೇತಗಳೊಡನೆ ಸಂಭಾಷಿಸುವೆ.
ದೇವಗಂಧರ್ವರು ನನ್ನ ಚುಂಬಿಸುವರು.
ಪಕ್ಷಿಗಳ ಭಾಷೆ ಕಲಿತಿರುವೆ.

ಉತ್ಪ್ರೇಕ್ಷೆ ಅನಿಸುವುದೇ?

ನೀವೂ
ಈ ಅನೂಹ್ಯ ವಿಸ್ಮಯಕೆ ತೆರೆದುಕೊಳ್ಳುವಿರಾದರೆ
ಈ ಬಾಗಿಲು ಮುಚ್ಚಿ
ಆ ಬಾಗಿಲು ತೆರೆದುಬಿಡಿ.

ದೇವರನ್ನು ಪ್ರೀತಿಸುವುದೆಂದರೆ..

ನಿನ್ನೆ ಪುರಾತನ ಗೆಳತಿಯ
ಭೇಟಿ
ಅಚ್ಚರಿಗೆ ಕುತೂಹಲದ ಅಪ್ಪುಗೆ
“ದೇವರ ಪ್ರೀತಿಸುವೆ”
ಅನ್ನುವ ನನ್ನ ಬಗ್ಗೆ
ಅವಳ ಕಣ್ಣಲ್ಲಿ ಪ್ರಶ್ನೆಗಳ ಮೂಟೆ.
ದೇವರು ಸಿಕ್ಕಿದನೇ?
ಮತ್ತೆ ದಕ್ಕಿದನೇ?
ಪ್ರೀತಿ ಬಣ್ಣವಾಯಿತೇ?
ಅವನು
ಹರಿಸಬಲ್ಲನೇ ಪ್ರೀತಿ
ಹೊನಲು? ಭಕ್ತಿ,ಪೂಜೆ,
ನೈವೇದ್ಯ, ಹರಕೆ ಅವನಿಗೆ ಸಹಜ.
ಕಲಕ್ಕೆ ಅವಶ್ಯಕತೆಗೆ ತಕ್ಕಂತೆ.

ಆದರೆ
ದೇವರನ್ನೇ ಪ್ರೀತಿಸಹೋದದ್ದು
ಹೇಗಿರುವ..! ನಮ್ಮಲ್ಲಿ ಕಪ್ಪು
ಉತ್ತರದಲ್ಲಿ
ಬಿಳಿಯಂತೆ ಹೌದೇ..
ಅವಳಿಗೆ ದೇವರನು ಪ್ರೀತಿಸುತ್ತಿರುವವಳ ಬಗ್ಗೆ
ಆರದ ಕುತೂಹಲ.
“ಹೇಳೇ, ಭಕ್ತರ ನಡುವೆ
ಸಿಲುಕಿದವನ
ಎಬ್ಬಿಸುವರು ಯಾರು?
ಏಕಾಂತಕ್ಕೆ..?
ಅವನಿಗೂ ಸುಸ್ತು ಅಡರುವುದೇ?
ನೈವೇದ್ಯದ ರುಚಿ
ನೀನು ಸವಿದೆಯಾ?
ನಿನ್ನವನ ಆಕ್ಷೇಪ?”

ನಾನು ನಕ್ಕೆ.

ಕಣ್ಣಲ್ಲಿ ಕಾರ್ತೀಕ ಇರುಳಿನ
ಸಾಲುದೀಪ

ದೇವರನು ಪ್ರೀತಿಸುವುದು ಸುಲಭವಲ್ಲ.
ಕಲ್ಲು ಕರಗುವ ಸಮಯಕೆ ಕಾಯಬೇಕು
ದೀಪದ ಬಿಸಿ ತಂಪಾಗಬೇಕು
ಅಭಿಷೇಕದ ಜಿಗುಟು
ಸಡಿಲವಾಗಬೇಕು.
ಆರತಿ ಹೊಗೆ ನಿವಾಳಿಸಬೇಕು
ಅವನ ಕಣ್ಣಲ್ಲಿ ಬಣ್ಣದ ಹಕ್ಕಿ
ಗೂಡು ಕಟ್ಟುವುದೇ
ಕಾಯ ಬೇಕು
ಮತ್ತೂ ಕಾಯಬೇಕು

ವರಬೇಕೇ ಎಂದಾಗಲೂ
ಅವನಿಗಾಗೇ ಲಬ್
ಡಬ್ ಬಿಗಿದಿಟ್ಟು
ತಪಿಸಬೇಕು ತಪಬೇಕು

ಭಾವ ಹದಗೊಳ್ಳಬೇಕು
ಅಮೃತದಂತೆ ಫಲಿಸಬೇಕು.

ಇವಳಿಗೆ ತಿಳಿಯದು
ದೇವರನು ಪ್ರೀತಿಸ ಹೊರಡುವುದೆಂದರೆ
ಪವನನ ಬೆನ್ನ ಏರಿ
ನಾದ ಬಿಂದುಗಳ
ಅರಸುವ ಕೆಲಸ

ನಾನು ಕಣ್ಣಲ್ಲಿ ಚುಕ್ಕಿ
ಸುರಿದುಕೊಂಡೆ.

ಗೆಳತಿ ಹೊಸ
ನಗೆ ನಗುವ ಮುಡಿದಳು..

ಕವಯತ್ರಿ ಪೂರ್ಣಿಮಾ ಸುರೇಶ್ ಅವರು ಮೂಲತಃ ಉಡುಪಿಯವರು
ರಂಗ ಮತ್ತು ಧಾರಾವಾಹಿಯ ಕಲಾವಿದೆಯೂ ಆಗಿರುವ ಪೂರ್ಣಿಮಾ ಅವರಿಗೆ ಸಾಹಿತ್ಯದಲ್ಲೂ ಅಪಾರ ಆಸಕ್ತಿ