ಹೆಬ್ಬೆರಳ ಹೂವು

ನಿನ್ನೊಲವ ತುಣುಕೊಂದು ಮೈಗೆ
ಮೆತ್ತಿದ ಕ್ಷಣ
ಬಾನೆತ್ತರ ಸಾಗಿ ಸಾಗಿ
ಮೋಡಗಳ
ಬೆನ್ನಿನಲಿ ನಮ್ಮಿಬ್ಬರ
ಹೆಸರು ಬರೆಯುತ್ತೇನೆ
ಅದು ಚಿಗುರ ನಾಭಿಯೊಳಗಿಳಿಯುತ್ತದೆ
ಅದರದಲಿ ಒಳಕುದಿಗಳ
ಹೆಕ್ಕಿಕೊಳ್ಳುತ್ತೇನೆ
ಕಣ್ಣಾಲಿ ಬಿಂಬ ಚಂದ್ರಮನ ಚೂರಿಗೆ
ಮೆಲ್ಲ ಡಿಕ್ಕಿ ಹೊಡೆಯುತ್ತದೆ
ಬೆರಳ ತುದಿಯಲ್ಲಿ ಬೆಳದಿಂಗಳ
ಕಡಲು
ಚಲಿಸುತ್ತೇನೆ
ಹೀಗೆ ಹೀಗೆ ಸರಿಯುತ್ತ
ನಿನ್ನ ತೇವದ ಬೊಗಸೆಗಳಿಗೆ
ಅಂಟಿ ನಿಲ್ಲುತ್ತೇನೆ
ಮರೆತ ಹೂವುಗಳು
ನಿನ್ನ ಕಾಲ ಹೆಬ್ಬೆರಳಿನಲಿ
ಅರಳುತ್ತವೆ.
ರೆಕ್ಕೆ ಸಿಕ್ಕಿಸಿ ತುಟಿ ಹಿಗ್ಗಿಸಿ
ಅನಾಮಿಕ ರಸ್ತೆಯಲಿ
ಅಲೆಯುತ್ತೇನೆ
ತೊನೆದ ಮಳೆಯಲ್ಲಿ
ಒಣ ಬೀಜ ಮಾತು ಹೆಕ್ಕುವಾಗ
ಓಹ್ ಓಲೆಕಾರನೇ ನಿನ್ನ
ಕದಂಬ ಬಾಹುಗಳಲಿ
ನನ್ನ ನಾ ದಾಖಲಿಸಿಕೊಳ್ಳಬೇಕೆಂದು
ಕೊಳ್ಳುತ್ತೇನೆ
ಜಡಿದ ಬೀಗ ತಲೆಗೆ ಬಡಿಯುತ್ತದೆ

 

ದೀಪ್ತಿ ಭದ್ರಾವತಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.
ಈಗ ಭದ್ರಾವತಿಯಲ್ಲಿದ್ದಾರೆ.
“ಅಹಲ್ಯೆಯ ಸ್ವಗತ” (ಕವನ ಸಂಕಲನ) ಗೀರು (ಕಥಾ ಸಂಕಲನ) ಪ್ರಕಟಿತ ಕೃತಿಗಳು