ಬೆಳಿಗ್ಗೆ ಫೋನು ಕಿಣಿಕಿಣಿ ಎಂದು ‘ನಾನು ಅಶೋಕರೀ’ ಎಂದಾಗ ಮಾಮೂಲಿನಂತೆ ‘ಹೊ. ತಂದೆ ಹೇಗಿದ್ದಾರೆ?’ ಅಂತ ಕೇಳಿದೆ. ಆತ ಎಂದಿನಂತಾದರೆ ಅವರಿಗೆ ಕೊಡುತ್ತಾನೆ, ಅವರು ‘ದೀಪಾವಳಿ, ಎಲ್ಲ ಒಳಿತಾಗಲಿ ಅವ್ವಾ’ ಅಂತ ಹರಸುತ್ತಾರೆ. ಮತ್ತೆ ನಮ್ಮ ಮಾತು ಮುಂದುವರಿಯುತ್ತದೆ. ಆದರೆ ಈಗ ಹಾಗಾಗಲಿಲ್ಲ. ಬದಲು ಸಿಕ್ಕ ಉತ್ತರ ‘ತಂದೆ ಹೋದರವ್ವಾ, ನಿನ್ನೆ ಸಂಜೆ’
‘ಹ್ಞ! ಅಯ್ಯೊ!’
ಸಂಗಣ್ಣನವರೂ ಹೋದರೆ! ಅವರು ‘ಹೋದರು’ ಎಂಬ ಸುದ್ದಿ ಹೇಗೆ ಒಳಗಿಳಿಸಿಕೊಳ್ಳಲಿ?

ವೈಯಕ್ತಿಕವಾಗಿ ನಮ್ಮ ಮನೆಮಂದಿಯಂತೂ ಅವರ ಪ್ರೀತಿವಾತ್ಸಲ್ಯದ ನಿರಂತರ ಋಣಿಗಳು. ನಮ್ಮ ಮನೆಯ ಆದರಣೀಯ ಹಿರಿಯರಲ್ಲೊಬ್ಬರು ಅವರು. ಉಡುಪಿಗೆ ಬಂದಾಗೆಲ್ಲ, ನಮ್ಮನೆಗೆ ಬಂದೇ ಬರುವ, ‘ಹೇಗಿದ್ದಿ ಅವ್ವಾ’ ಎನ್ನುತ್ತ ಒಳಬರುವ, ಸಮಯವಿದ್ದರೆ ಉಳಿದುಕೊಳ್ಳುವ, ಬೆಳಗಿನ ಜಾವ ನಾಕು ಗಂಟೆಗೇ ಎದ್ದು ತಮ್ಮಷ್ಟಕ್ಕೆ ತಾವೇ ಹೊರಹೋಗಿ ಸುತ್ತಾಡಿ ಬರುವ, ತಿಳಿಸಾರು ಮಾಡು ಸಾಕವ್ವಾ ಎನುವ, ರಾಗಿ ಮುದ್ದಿ ಮಾಡಕೆ ಬರ್‍ತದೇನವ್ವ ನಿಂಗೆ ಎಂದು ಅಕ್ಕರದಿಂದ ಅಚ್ಚರಿ ಪಡುವ ಮೂರ್ತಿಯವರಿಗೂ ನನಗೂ ತಂದೆಯ ಪ್ರೀತಿಯನ್ನೂ ಮಕ್ಕಳಿಗೆ ಸ್ವಂತ ಅಜ್ಜನ ಪ್ರೀತಿಯನ್ನೂ ಹಂಚಿದ, ದೀಪಾವಳಿಯಂದು ತಪ್ಪದೆ ಫೋನು ಮಾಡಿ ಹರಸುವ ಸಂಗಣ್ಣ ಅವರು. ಆದರೆ ಈ ದೀಪಾವಳಿಯಂದು, ಈಗ ಇದು ಬರೆಯುವ ಹೊತ್ತಿಗೆ, ಅವರು ಇಷ್ಟು ದಿನ ನೆಲೆಸಿದ ದೇಹವನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಒಪ್ಪಿಸಿಕೊಡುವ ಪ್ರಕ್ರಿಯೆ ನಡೆಯುತ್ತಿರುವುದು… ಎಲ್ಲ ವಿಚಿತ್ರವೆನಿಸುತ್ತಿದೆ.

ಸಂಗಣ್ಣನವರನ್ನು ಒಂದೇ ಸಾಲಿನಲ್ಲಿ ವರ್ಣಿಸಬೇಕೆಂದರೆ –
ಅವರು ನಮ್ಮ ಪೀಳಿಗೆ ಕಂಡ ಮಹಾನುಭಾವರಲ್ಲೊಬ್ಬರು. ಜಾನಪದವೊಂದು ತನ್ನ ನಿಜ ಸತ್ವವನ್ನು ಗಟ್ಟಿಯಾಗಿ ಇಟ್ಟುಕೊಂಡೇ ಆಧುನಿಕ ಜ್ಞಾನ-ವಿಜ್ಞಾನದ ಸಂಸ್ಕಾರ ಪುಷ್ಟಿ ಪಡೆದರೆ ಹೇಗೆ, ಹಾಗೆ ನಮ್ಮ ಮುದೇನೂರ ಸಂಗಣ್ಣನವರು. ೧೯೨೭ರಲ್ಲಿ ಬಳ್ಳಾರಿ ಜಿಲ್ಲೆಯ ಪುಟ್ಟ ಹಳ್ಳಿ ಚಿಗಟೇರಿಯಲ್ಲಿ ಜನಿಸಿದ ಸಂಗಣ್ಣನವರು ಬೆಳೆದದ್ದು ವ್ಯವಸಾಯದ ಮನೆಯಲ್ಲಿ. ಹೊಲಮನೆ ಕೆಲಸಗಳಲ್ಲಿ ಜನಪದ ಹಾಡುಗಳು ಜೊತೆಗೂಡಿಕೊಂಡೇ ಇರುತ್ತವಾಗಿ ಹಳ್ಳಿಗರ ಧ್ವನಿ ಬನಿ ಲಯಗಾರಿಕೆಗಳು ತನ್ನ ಮೇಲೆ ಸಹಜವಾಗಿ ತುಂಬ ಪ್ರಭಾವ ಬೀರಿದವು ಎಂದು ಅವರೇ ಒಂದೆಡೆ ಹೇಳಿಕೊಂಡಿದ್ದಾರೆ. ಮದನಪಲ್ಲಿಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದು, ಜೆ.ಕೆ. ವಿಚಾರಗಳಿಂದ ಪ್ರಭಾವಿತರಾಗಿ ಹಳ್ಳಿಗೆ ಮರಳಿದ ಸಂಗಣ್ಣನವರ ಮನಸ್ಸು ಸುತ್ತಣ ಜಗತ್ತಿನ ಎಲ್ಲವನ್ನೂ ಮುಕ್ತವಾಗಿ ನೋಡುತ್ತ ಸಾರಗ್ರಾಹಿಯಯಿತು. ಭಾವ ಶರಣತೆಯನ್ನೇ ಪ್ರಧಾನವಾಗಿ ಪಡೆದೂ ಭಾವೋದ್ವೇಗಕ್ಕೆ ಒಳಗಾಗದ, ತೋಲ ತಪ್ಪದೆ ಜೀವನವನ್ನು ‘ಕಾಣುವ’ ಅಪ್ಪಟ ಜಾನಪದ ವ್ಯಕ್ತಿತ್ವವಾಯಿತು.

ಚಿಗಟೇರಿಯಂಥ ಹಳ್ಳಿಯಲ್ಲಿದ್ದುಕೊಂಡು ಇಡೀ ನಾಡಿನ ಸಾಂಸ್ಕೃತಿಕ ಹವೆಗೆ ತನ್ನನ್ನು ಖುಲ್ಲಂಖುಲ್ಲ ಒಡ್ಡಿಕೊಂಡಿರುವ ಸಂಗಣ್ಣನವರು ಎಲ್ಲಿಯೂ ಬೇರೆ ನಿಲ್ಲದೆ ಗ್ರಾಮೀಣರೊಂದಿಗೆ ಗ್ರಾಮೀಣರಾಗಿದ್ದುಕೊಂಡೇ ಕೆಲಸಮಾಡುವ ‘ಯಜಮಾನರು’. ಸ್ವಂತದ್ದು ವ್ಯಾಪಾರೀರಂಗವಾದರೂ ‘ಕೇವಲ ವ್ಯವಹಾರ’ವನ್ನು ಸುತರಾಂ ಒಲ್ಲದವರು. ಕರ್ನಾಟಕದ ಜನಪದ ಪರಂಪರೆಯ ಬಗ್ಗೆ ಒಟ್ಟಾರೆ ಜನಪದ ಪರಂಪರೆಯ ಬಗ್ಗೆಯೇ ಅಧಿಕೃತವಾಗಿ ಮಾತಾಡಬಲ್ಲವರಲ್ಲಿ ಅಗ್ರಪಂಕ್ತಿಯಲ್ಲಿರುವ ಇವರು ತ್ರಿಕರಣಪೂರ್ವಕ ಪ್ರೀತಿಯಿಂದ ಜಾನಪದಕ್ಕಾಗಿ ಲಾಗಾಯ್ತಿನಿಂದಲೂ ದುಡಿಯುತ್ತ ಬಂದವರು. ಸಂಗಣ್ಣನವರ ಮನೆಯೆಂದರೆ ಅದೊಂದು ಜಾನಪದ ಸಾಹಿತ್ಯ ಸಂಗ್ರಹಾಲಯ. ಸಂಶೋಧಕರಿಗೆ ಆಕರಾಲಯ. ತನ್ನ ಅಪಾರ ಜಾನಪದ ಸಂಗ್ರಹದಿಂದ ಅವರು ಸ್ವಂತವಾಗಿ ಪ್ರಕಟಿಸಿರುವುದು ಕೆಲವೇ ಕೆಲ ಕೃತಿಗಳನ್ನು ಮಾತ್ರ. ಅವರೇ ನಾಟಕಕ್ಕಿಳಿಸಿಕೊಟ್ಟಿರುವ ‘ಶೀಲಾವತಿ’ ಈಗಾಗಲೇ ರಂಗಪ್ರಯೋಗವಾಗಿ ಜನಪ್ರಿಯವಾಗಿದೆ. ‘ಚಿಗಟೇರಿ ಪದಕೋಶ’ ಎಂಬುದು ಪ್ರಾದೇಶಿಕ ‘ಕನ್ನಡ ವಿಶೇಷ’ದ ಅಪೂರ್ವ ಪದಕೋಶ. ಸುಮ್ಮನೆ ಕೈಗೆತ್ತಿಕೊಂಡರೂ ಸಾಕು. ಕೆಳಗಿಡಲು ಮನಬಾರದಂತೆ ಸೆರೆ ಹಿಡಿಯುವ ಕೃತಿ. ತಾನು ವಾಸಿಸುವ ಪ್ರದೇಶದ ನುಡಿ, ನುಡಿಗಟ್ಟುಗಳು, ಅರ್ಥ, ಒಳಾರ್ಥ, ಮಾಧುರ್ಯ, ಧ್ವನಿ ಇವೆಲ್ಲವನ್ನೂ ಅದನಾಡುವ ಜನರ ಹಾವಭಾವವೂ ಕಣ್ಣೆದುರು ಕಟ್ಟುವಂತೆ ಪರಿಶ್ರಮದ ಧಾರೆ ಹರಿಸಿ ಅವರು ರಚಿಸಿ ಕೊಟ್ಟಿದ್ದಾರೆ. ಸೂಳೆ ಸಂಕವ್ವೆ ಮುಂತಾದ ನಾಟಕಗಳನ್ನೂ ಒಳಗೊಂಡು ಅನೇಕ ಸಂಪಾದನೆ, ಅನುವಾದಗಳನ್ನೂ ಮಾಡಿರುವ ಇವರು ಈಗಲೂ ತನ್ನ ಇಚ್ಛಾಕೃತಿಯೊಂದರ ರಚನೆಯ ಬಗ್ಗೆ ಚಿಂತಿಸುತ್ತ ಮಾಹಿತಿಗಾಗಿ ಶೋಧಿಸುತ್ತ ತಮ್ಮ ಅನಾರೋಗ್ಯದ ಕಷ್ಟವನ್ನು ಮರೆತುಕೊಳ್ಳುವವರು. ಇವರ ಹಲವು ಮಹತ್ವದ ಕೃತಿಗಳಲ್ಲೊಂದು – ‘ಗೊಂದಲಿಗರ ದೇವೇಂದ್ರಪ್ಪನವರ ಆಟಗಳು’. ಇದು ಸಂಗಣ್ಣನವರು ಸಂಗ್ರಹ ಕಾರ್ಯದಲ್ಲಿ ತೋರುವ ಶ್ರದ್ಧೆ, ಲಿಪಿಗಿಳಿಸುವಲ್ಲಿನ ಎಚ್ಚರ ಮತ್ತು ಅವರ ಅಧ್ಯಯನಶೀಲತೆ -ಈ ಎಲ್ಲದಕ್ಕೂ ಒಂದು ಮಾದರಿಯಂತಿದೆ.

ಇಂಗ್ಲಿಷ್, ಮರಾಠಿ ಮುಂತಾದ ಇತರ ಭಾಷೆಗಳನ್ನೂ ಬಲ್ಲ, ಭಾಷೆಯ ಬಗ್ಗೆ ಅನುಪಮ ಪ್ರೀತಿ ಮತ್ತು ಆಸಕ್ತಿ ಇರುವ ಸಂಗಣ್ಣನವರು ತರುಣ ಕಾಲದಲ್ಲಿ ಕವಿತೆಯನ್ನೂ ಬರೆಯುತ್ತಿದ್ದರು. ಸಂಕೋಚ ಸಜ್ಜನಿಕೆಯ ವ್ಯಕ್ತಿಯಾದ ಅವರು ಒಳ್ಳೆಯ ಚಿತ್ರಕಲಾವಿದರು ಕೂಡ ಎಂಬುದು ಅನೇಕರಿಗೆ ತಿಳಿದಿಲ್ಲ. ಜಲವರ್ಣ ಅವರಿಗೆ ಮೆಚ್ಚಿನ ಮಾಧ್ಯಮವಾಗಿತ್ತು. ಜಾನಪದ ಲೋಕಕ್ಕೇ ಸಂಪೂರ್ಣವಾಗಿ ತಮ್ಮನ್ನು ಮುಡಿಪಾಗಿಟ್ಟ ಫಲವಾಗಿ ಉಳಿದ ಸೃಜನಶೀಲ ರಂಗಕ್ಕೆ ತನ್ನ ಕೊಡುಗೆಯನ್ನು ಕನಿಷ್ಠಗೊಳಿಸಿದರು.

ಮೂಲತ: ಅವರದು ತಾಯಿ ಕರುಳು. ಮಿತ್ರತ್ವವೆನ್ನುವುದು ಅವರ ಜೀವದ್ರವ್ಯ, ಪ್ರಾಣಸಮಾನ. ಅನೇಕ ಜಾನಪದ ಕತೆಗಳಲ್ಲಿಯೂ ನಾವು ಕಾಣುವ ಗುಣವಷ್ಟೆ ಇದು? ಸಂಪೂರ್ಣವಾಗಿ ಮಿತ್ರಸಂಗ ಜೀವಿಯಾಗಿರುವ ಅವರಿಗೆ ಸಂಗಣ್ಣ ಎಂಬುದು ಅನ್ವರ್ಥನಾಮ.

ಸಂಗೀತವೆಂದರೆ ಅತೀವ ಪ್ರೀತಿಯ ಸಂಗಣ್ಣನವರು ಒಳ್ಳೆಯ ಕಚೇರಿ ಇದೆಯೆಂಬ ಸುದ್ದಿ ಕಿವಿಯ ಮೇಲೆ ಬಿದ್ದರೆ ಸಾಕು, ದೂರ ಲೆಕ್ಕಿಸದೆ ಎಲ್ಲಿಂದೆಲ್ಲಿಗೂ ಹೊರಟುಬಿಡುತಿದ್ದವರು. ತಾನು ಕಂಡರೆ ಕೇಳಿದರೆ ಸಾಲದು, ಆ ಸವಿಯ ವರ್ಣನೆಯನ್ನು ದೂರವಾಣಿಯ ಮೂಲಕವೋ ಪತ್ರಮುಖೇನವೋ ಮಿತ್ರರೊಂದಿಗೆ ಹಂಚಿಕೊಳ್ಳಬೇಕು. ಆಗಲೇ ಅವರ ಮಟ್ಟಿಗೆ ಕಚೇರಿ ಕೇಳಿ ಬಂದ ರಸಾನುಭವ ಸಂಪೂರ್ಣವಾಗುವುದು.

ದೂರದ ನಿಪ್ಪಾಣಿ ಕೊಲ್ಲಾಪುರ ಕಾಳಹಸ್ತಿ ಚೆನ್ನೈ ಅಂತ ಹೇಗೂ ಆಯಿತಲ್ಲ, ನಮ್ಮ ಉಡುಪಿಗಂತೂ ಅವರು ಪರಮಾಪ್ತರು. ಶ್ರೀ ಕು.ಶಿ. ಅವರ ಮಾತಿನಲ್ಲೇ ಹೇಳಬೇಕೆಂದರೆ ‘ಉಡುಪಿಯ ಜಾನಪದ ಕೇಂದ್ರದ ಹಿತೈಷಿಯಾಗಿ ಸಭಾಕಲಾಪಗಳಲ್ಲಿ ಭಾಗಿಯಾಗಿ ಅನೇಕ ಕರ್ತವ್ಯಗಳನ್ನೂ ನಿರ್ವಹಿಸಿದವರಾಗಿ ವರ್ಷಗಳ ಕಾಲ ನಮ್ಮ ಮೇಲೆ ಉಪಕಾರ ಮಾಡಿದವರು.’ ಸಂಗಣ್ಣನವರ ಮನೆಗೆ ಹೊಕ್ಕು ಬಳಕೆ ಇರಿಸಿಕೊಂಡಿದ್ದ ಡಾ. ಶಿವರಾಮ ಕಾರಂತರ ಪ್ರಕಾರ ‘ಅವರೊಬ್ಬ ಅಪ್ಪಟ ಚಿನ್ನ’. ಶ್ರೀ ಕೆ.ವಿ. ಸುಬ್ಬಣ್ಣನವರು ಕಂಡಂತೆ ಅವರದು ‘ಶುಭ್ರಾತಿಶುಭ್ರ ಅಂತ:ಕರಣ’. ಸುಬ್ಬಣ್ಣನವರಿಗೆ ಮ್ಯಾಗ್ಸೆಸೆ ಪುರಸ್ಕಾರ ಸಂದಾಗ ಸಂಗಣ್ಣನವರು ಸ್ನೇಹಿತ-ಬಂಧು ಬಳಗವನ್ನೆಲ್ಲ ಕರೆದು ತಮ್ಮ ಮನೆಯಲ್ಲಿ ತಮ್ಮೂರಿನ ಔತಣದ ವಿಶೇಷಗಳನ್ನೆಲ್ಲ ಮಾಡಿಸಿ ‘ದಾಸೋಹ’ ನಡೆಸಿದ್ದು, ಆ ಸಂತೋಷಾರ್ಥ ಸಂಜೆ ಏರ್ಪಡಿಸಿದ್ದ ಸುಭದ್ರಮ್ಮ ಮನಸೂರ ಅವರ ರಂಗಗೀತೆ ಗಾಯನ ಒಂದೊಂದು ನೆನಪೂ ಹೇಗೆ ಎದ್ದೆದ್ದು ಬರುತ್ತಿವೆ…

ಅವರ ಜೊತೆಗಾತಿಯಾಗಿ ಪತಿಗಿಂತ ಒಂದು ಕೈ ಮಿಗಿಲಾಗಿಯೇ ಸ್ನೇಹ ತೋರುವ ಸಂಪನ್ನ ಪತ್ನಿ ಶ್ರೀಮತಿ ಶಾರದಮ್ಮ. ‘ಅಪ್ಪಾಜಿ’ಗೆ ತಕ್ಕ ಸಭ್ಯನಾದ ಏಕೈಕ ಮಗ ಅಶೋಕ, ಸೊಸೆ, ಮಗಳಂದಿರು ಅಳಿಯಂದಿರು ಮೊಮ್ಮಕ್ಕಳು ಇರುವ ತುಂಬು ಕುಟುಂಬ ಅವರದು. ಅಂದಿನ ಆರೋಗ್ಯವಂತ ಸಂಗಣ್ಣನವರು ಹೊರಟರೆಂದರೆ ಅವರೊಂದಿಗೆ ಆಪ್ತರಿಗೆಂದು ಅಪರೂಪದ ಸಂಗೀತ ಕ್ಯಾಸೆಟ್ಟುಗಳು, ಪುಸ್ತಕಗಳು… ಒಮ್ಮೊಮ್ಮೆ ಶಾರದಮ್ಮ ಮುದ್ದಾಂ ಕಳಿಸುವ ವಿಶೇಷ ತಿಂಡಿಗಳು, ತೊಕ್ಕು ಉಪ್ಪಿನಕಾಯಿಗಳೂ ಹೊರಡುತ್ತಿದ್ದವು. ಬಗಲಲ್ಲಿ ಚೀಲ ಹಾಕಿಕೊಂಡು ಶಾಲು ಹೊದ್ದುಕೊಂಡು ಎರಡು ಮೂರು ಬಸ್ಸು ಬದಲಿಸಿಕೊಂಡು ನಮ್ಮೂರಿಗೆ ಬಂದು ತಲುಪುವ ಸಂಗಣ್ಣನವರು ನಡೆದು ಬರುವುದೇ ಪ್ರೀತಿ ವಿಶ್ವಾಸ ಸೌಹಾರ್ದದ ಹರಿಕಾರನಂತೆ.

ಒಟ್ಟಿನಲ್ಲಿ- ಜಾನಪದವೆಂದು, ಅದರ ಗುಣಗಳು ಹೀಗೆಹೀಗೆಂದು ಬಲ್ಲವರು ಏನು ಹೇಳುವರೋ ಅವೆಲ್ಲವೂ ಒಂದೆಡೆ ಕೇಂದ್ರೀಕೃತವಾಗಿದ್ದರೆ ಹೇಗೆ – ಹಾಗಿದ್ದರು ನಮ್ಮ ಸಂಗಣ್ಣನವರು, ನನ್ನ ಮಕ್ಕಳ ಸಂಗಣ್ಣಜ್ಜ.

ಅವರನ್ನೂ ನಾವಿಂದು ಕಳೆದುಕೊಳ್ಳುವ ಮೂಲಕ ಋಜುತ್ವದ ಓರ್ವ ಮಾದರಿ ವ್ಯಕ್ತಿಯನ್ನು ಕಳೆದು ಕೊಂಡೆವು.
ಭೂಮಿ ಬರಿದಾಗುತ್ತ ಬರುವುದು ಎಂದರೆ ಹೀಗೇಯೇನು?