ಬನ್ನಿಕುಪ್ಪೆ ಎಂಬ ಊರು ಮೈಸೂರು-ಹುಣಸೂರು ರಸ್ತೆಯಲ್ಲಿ ನಿಂತು ನೋಡಿದಾಗ ಬಹಳ ಸಂತೃಪ್ತವಾಗಿರುವಂತೆ ಕಾಣುತ್ತದೆ. ಹಸುರಾಗಿರುವ ಊರಿನ ಒಳಹೊಕ್ಕು ಹರಿಜನರು ಮತ್ತು ನಾಯಕ ಕೋಮಿನ ಬೀದಿಗಳಿದಾಗಲೇ ಬಡತನ ಮತ್ತು ಕೊಳಕುತನ ನಮ್ಮ ಕಣ್ಣಿಗೆ ರಾಚುವುದು. ಹರಿಜನ ಮತ್ತು ನಾಯಕಕೋಮಿನ ಬೀದಿಗಳು ಗಲೀಜು ತುಂಬಿಕೊಂಡು ವಕ್ರವಾಗಿದ್ದು, ಕೆಲವು ಮನೆಗಳೋ ಅರ್ಧಕುಸಿದು ಪೂರ್ತಕುಸಿಯಲು ಕಾಯುತ್ತಿರುವಂತೆ ಕಾಣಿಸುವುದು ಮತ್ತು ಪುರಾತನ ಕಾಲದಿಂದಲೂ ಆ ಮನೆಗಳು ಜೀವಿಸಿದ್ದು, ಗಾಳಿ, ಮಳೆ ಬಿಸಿಲಿನ ಹೊಡೆತವನ್ನು ಸಹಿಸೀ ಸಹಿಸೀ ಈಗ ಅವೇ ಬೇಯುತ್ತಾ ಉರಿಯುತ್ತಾ ನಿಂತಂತೆ ಕಾಣುತ್ತವೆ.

ಮೇಲಿನಂತಹುದೇ ಒಂದು ಮನೆಯಲ್ಲಿ ಹರಿಜನರ ಬೀದಿಯಲ್ಲಿ ಬಿ.ನಿಂಗಯ್ಯ ಇರುವರು. ವಯಸ್ಸು ಅರವತ್ತನ್ನು ಮುಟ್ಟುತ್ತಲಿದೆ. ಹೆಂಡತಿ ಮಾದಮ್ಮನಿಗೆ ವಯಸ್ಸು ನಲವತ್ತೈದು ಇರಬಹುದು. ಇವರಿಗೆ ಅದೃಷ್ಟಕ್ಕೆ ಇಬ್ಬರೇ ಮಕ್ಕಳು. ಆದರೂ ಸಣ್ಣವು. ಒಬ್ಬಜವರ ಸ್ಕೂಲ್‌ಗೆ ಹೋದವನಲ್ಲ. ಇವನನ್ನು ಜೀತಕ್ಕೆ ಇರಿಸಿದ್ದು ಬಿಡಿಸಿಬಿಟ್ಟರು. ಇನ್ನೊಂದು ಹುಡುಗ ಐದು ವರ್ಷದ ಸ್ವಾಮಿಯನ್ನು ಶಿಶುವಿಹಾರಕ್ಕೆ ಕಳಿಸುತ್ತಿರುವರು.

ಈ ಸಂಸಾರ ಜೀವಿಸುತ್ತಿದ್ದ ಮನೆ ತುಂಬಾ ಒಂದ್ಸಲ ಕಣ್ಣಾಡಿಸಿದೆ. ಒಂದೇ ನೋಟಕ್ಕೆ ಇಡೀ ಹಟ್ಟಿ ಒಳಗಲವನ್ನು ನೋಡಬಹುದಿತ್ತು. ರಾತ್ರಿಯಾಗಿದ್ದರಿಂದ ಒಂದು ಸೀಮೆ ಎಣ್ಣೆ ದೀಪ ಉರಿಯುತ್ತಿದ್ದು ಒಂದು ಅಂಕಣದಷ್ಟಿದ್ದ ಆ ರೂಮಿಗೆ ಆ ಬೆಳಕೇ ಸಾಕಾಗುವಷ್ಟಿತ್ತು. ಅಂದರೆ ಆ ರೂಮು ಅಷ್ಟಗಲವಿತ್ತು. ಆ ರೂಮಿನ ನಡು ಭಾಗದಲ್ಲಿ ಒಂದು ಮಂಡಿ ಎತ್ತರದ ತುಂಡುಗೋಡೆಯೊಂದನ್ನು ಎತ್ತರಿಸಿದ್ದು ಆ ಕಡೆ ಅಡುಗೆ ಕೋಣೆ, ಈ ಕಡೆ ಮಲಗುವ ಕೂರುವ ಇನ್ನಿತರ ಅನುಕೂಲಕ್ಕೆ ಇದ್ದಂಥ ಜಾಗವಿತ್ತು. ಆ ಅಡುಗೆ ಕೋಣೆಯಲ್ಲಿ ನಾಕಾರು ಮಣ್ಣಿನ ಮಡಿಕೆ ಒಂದು ಬಿಂದಿಗೆ, ಒಂದು ಚೊಂಬು, ಒಂದೆರಡು ಅಲ್ಯೂಮಿನಿಯಂ ಲೋಟ, ಸೌದೆ ಕಡ್ಡಿ ಇಟ್ಟಿದ್ದರು. ಇದಕ್ಕಿಂತಲೂ ಹೆಚ್ಚಿಗೆ ಏನೂ ಕಂಡುಬರಲಿಲ್ಲ. ಹಾಗೂ ಆ ಮಡಿಕೆಗಳ ಒಳಗೆ ಏನಿದ್ದವು ಎಂಬುದೂ ಗೊತ್ತಾಗಲಿಲ್ಲ. ಆ ಕೋಣೆಯಲ್ಲಿ ಒಲೆ ಮುಂದೆ ಉರುಬುತ್ತಾ ಮನೆಯ ಯಜಮಾನಿ ಕೂತಿದ್ದಳು. ಆಕೆ ಸಣ್ಣಗೆ ಕಡ್ಡಿಯಂತಿದ್ದಳು. ಆಕೆಯ ಮಾತು ನೆನಪಲ್ಲಿ ಉದ್ದಕ್ಕೂ ಉಂಡಂತಹ ಕಷ್ಟ ಸಾಗರದ ಸಾಲುಗಳೇ ಇದ್ದವು. ಆಕೆ ಅಂದಳು ‘ಈಗ ಕೂಲಿ ಸಿಗೋ ಕಾಲವಾದ್ದರಿಂದ ನಮ್ಮ ಒಲೆ ಉರೀತಾ ಇದೆಕನ್ನಿ ಸ್ವಾಮಿ’.

ನಾನು ಮತ್ತು ಮನೆಯ ಯಜಮಾನ ಈ ಕಡೆ ಜಾಗದಲ್ಲಿ ಕೂತಿದೆವು. ನಾನು ಕೂರಲು ಒಂದು ಚಾಪೆಯನ್ನು ಹಾಸಿದ್ದರು. ಏನಾದರೂ ಇನ್ನೊಂದು ಚಾಪೆ ಇದೆಯಾ ಎಂದು ನಾನು ಪ್ರಜ್ಞಾಪೂರ್ವಕವಾಗಿ ನೋಡೂ ಕಂಡುಬರಲಿಲ್ಲ. ಗೋಡೆಯ ಹಗ್ಗದುರಿಯು ಒಂದೆರಡು ಅಂಗಿ ಚೆಡ್ಡಿ, ಬಹುಶಃ ಅರ್ಧದಷ್ಟಿದ್ದ ಸೀರೆ, ಎರಡು ರವುಕೆ ಒಂದು ದುಪ್ಪಟ, ಒಂದು ಗೋಣೀ ಚೀಲವನ್ನು ಈಜಿಯಾಗಿ ಹೊತ್ತುಕೊಂಡಿತ್ತು. ಬಚ್ಚಲು ಇದ್ದು ಅಲ್ಲೇನಾದರೂ ಇರಬಹುದಾ ಅನ್ನಿಸಿ ನಾನು ಮೇಲಕ್ಕೆ ನೋಡಿದೆ. ಹೆಂಚುಗಳು ನಕ್ಕವು. ನನ್ನ ಪಕ್ಕದಲ್ಲಿದ್ದ ಟೇಪ್‌ರೆಕಾರ್ಡರ್ ನೋಡ್ತಾ ಅವರ ಮಕ್ಕಳಿಬ್ಬರೂ ಕೂತಿದ್ದವು. ಅವು ಹಾಕಿದ್ದ ಅಂಗಿ ಚೆಡ್ಡಿ ಅನ್ನುವುವು ಅವರ ಅಪ್ಪನವುಗಳಂತೆಯೇ ಹರಿದಿದ್ದು ಹೊಲೆದು ತೇಪೆ ಹಾಕಲಾಗಿತ್ತು. ಅವಕ್ಕೆ ಬೇರೆ ಇನ್ನೊಂದು ಜೊತೆ ಇತ್ತೊ ಇಲ್ಲವೋ ಕೇಳಲು ನನಗೆ ಸಂಕೋಚವಾಯ್ತು. ಶ್ರೀ ನಿಂಗಯ್ಯನವರಿಗೆ ಈ ಮನೆ ಬಿಟ್ಟು ಬೇರೇನು ಆಸ್ತಿ ಎಂದು ಪ್ರಶ್ನಿಸಿದೆ. ಅದಕ್ಕವರ ಉತ್ತರ.
‘ಈ ಮನೇನೂ ನನ್ನದಲ್ಲ ಸ್ವಾಮಿ’
‘ಅಂದ್ರೆ ನಿಮ್ಮದು ಮನೆ ಇಲ್ಲ’
‘ಇಲ್ಲ ಸ್ವಾಮಿ, ನಾವು ಬೇರೆಯವರ ಮನೇಲಿ ಇದ್ಕೊಂಡು ಬಂದಿದ್ದೀವಿ’
‘ಬಾಡಿಗೆ ಕೊಡ್ತಾ ಇದ್ದೀರಾ?’
‘ಬಾಡಿಗೆ ಕೊಡೋಕೆ ನಮಗೆಲ್ಲಾಯ್ತುದೆ ಸ್ವಾಮಿ ಊರಿಗೊಂದು ಒಕ್ಕಲು ಬಂದವರಲ್ಲ ಅಂತ ಕೇರಿ ಮುಖ್ಯಸ್ಥರು ಮಫತ್ತು ಕೊಡಿಸಿ ಕೊಟ್ಟವರೆ . . . .’

ಬನ್ನಿಕುಪ್ಪೆಯ ದಾರಿಯಲ್ಲಿಆಗಲೇ ನನಗೆ ತಿಳಿದದ್ದು ಇವರು ಬನ್ನಿಕೊಪ್ಪೆಯವರಲ್ಲ, ಮೂಲತಃ ಮೈಸೂರಿನ ಅಶೋಕಪುರಂನವರು. ಅವರು ಇಲ್ಲಿಗೆ ಬಂದು ನೆಲೆಗೊಂಡು ಆರೇಳು ವರ್ಷಗಳಾದಿದ್ದವು. ಸಣ್ಣವರಿದ್ದಾಗ ಕುಸ್ತಿ ಎಂದು ನಿಂತು ಸ್ಕೂಲಿಗೆ ಹೋಗಲಿಲ್ಲ. ರುಜುಮಾಡಲು ಬಾರದಿದ್ದರೂ ಅವರ ಹೆಸರ ಮುಂದೆ ಕೆ.ಇನಿಶಿಯಲ್ ನಿಂತಿದೆ. ಮೈಸೂರು ಹುಟ್ಟೂರಿರಬಹುದು. ಮೈಸೂರಿನಲ್ಲಿ ಜೀವನ ನಡೆಸಲು ದುಸ್ತರವಾದಾಗ ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಬನ್ನಿಕುಪ್ಪೆಗೆ ಹೋಗಿ ಕುಸ್ತಿ ಮಾಡಿ ಜೀವನ ಸಾಗಿಸುವ ಅಂದುಕೊಂಡು ಬಂದರು. ನಿಂಗಯ್ಯ ಕುಸ್ತಿಯ ಉಸ್ತಾದ್ ಆಗಿದ್ದವರು. ಅವರ ಅಂಗಾಂಗಗಳನ್ನು ಉದ್ದೇಶ ಪೂರ್ವಕವಾಗಿ ನೋಡಿದೆ. ಅವರ ಯಾವ ಅಂಗವೂ ಅವರು ಒಂದಾನೊಂದು ಕಾಲದಲ್ಲಾದರೂ ಕುಸ್ತಿಯ ಪಟುವಾಗಿದ್ದರು ಎಂಬುದನ್ನು ನನಗೆ ರುಜುವಾತು ಪಡಿಸಲಿಲ್ಲ. ಬಡತನವು ಅವರ ಕುಸ್ತಿಯ ಅಂಗಾಂಗಗಳನ್ನು ನಿರ್ದಯವಾಗಿ ಊಟಮಾಡಿದ್ದಿರಬಹುದು. ಆ ಮಾಜಿ ಕುಸ್ತಿಯ ದೇಹದಲ್ಲಿ ಈಗ ದೈನ್ಯತೆ ಮತ್ತು ನಿಟ್ಟುಸಿರು ಉಲಿದಿದ್ದವು. ನಾನು ನಿಟ್ಟುಸಿರು ಬಿಟ್ಟುಒಂದು ಸ್ಟುಪಿಡ್ ಪ್ರಶ್ನೆ ಹಾಕಿದೆ. ‘ಈಗಲೂ ನೀವು ಯಾಕೆ ಕುಸ್ತಿ ಕಲ್ಸಿಯೇ ಜೀವನ ಸಾಗಿಸಬಾರದು?’ ದೇವರ ದಯೆಯಿಂದ ಅವರು ನಗಲಿಲ್ಲ. ಅವರು ಅಂದರು ‘ಈಗ ನನ್ನ ಕೈಲಿ ಸಾಗಬೇಡ್ವಾ ಸ್ವಾಮಿ, ಶಕ್ತಿ ಸಾಲಲ್ಲ, ಜನರೂ ಕೂಡಾ ನಿಮಗೇನೇ ಏಟು ಪಾಟು ಬಿದ್ದಾತು ಸುಮ್ಮಿರಿ ಅಂತಾರೆ’ ಅಂದರು. ಇನ್ನೊಂದು ನಿಟ್ಟುಸಿರು ಬಿಡುವುದು ನನ್ನ ಪಾಲಿಗಾಯ್ತು. ಅವರು ತಾವು ಹಿಂದೆ ಕಲಿಸುತ್ತಿದ್ದ ಕುಸ್ತಿ ನೆನಪಿಗೆ ಬಿದ್ದರೇನೋ ನನಗೆ ಮಾತಾಡಲು ಬಾಯಿ ನಿಂತೋಗಿತ್ತು.

ಅವರು ಮಿಕ ಮಿಕ ಕಣ್ಬಿಡುತ್ತಾ ಕೂತಿದ್ದರು. ಕುಸ್ತಿ ಕಲಿಸುತ್ತಿದ್ದಾಗ ಅವರು ಹೊಟ್ಟೆಗೆ ಬಟ್ಟೆಗೆ ನೇರವಾಗಿದ್ದರು. ಜನಗಳೂ ಸಹಾ ಇವರನ್ನು ಗುರುಗಳು ಎಂದು ಪರಿಗಣಿಸಿ ಎರಡು ಹೊತ್ತಿನ ಊಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಕುಸ್ತಿ ಕಲಿಸಲು ಕೈ ಸೋತುಹೋದಾಗ ಗಂಡಹೆಂಡತಿ ಕೂಲಿಗೆ ಇಳಿದರು. ಕೂಲಿ ಮತ್ತು ಎರಡು ಸಣ್ಣ ಮಕ್ಕಳನ್ನು ಬಿಟ್ಟರೆ ಇವರಿಗೆ ಬೇರೇನೂ ಇಲ್ಲ. ಇವರ ಹೆಂಡ್ತಿ ಮಾದಮ್ಮನ ಮಾತುಗಳಲ್ಲೇ ಹೇಳುವುದಾದರೆ ‘ಕೂಲಿಗೆ ಹೋದ ಜೀನ ಇಟ್ಟು, ಇಲ್ಲದಿದ್ದ ಜೀನ ಇಲ್ಲ…..’

ನನ್ನ ಪ್ರಶ್ನೆ: ‘ಹಾಂಗಾದ್ರೆ ಕೂಲಿ ಸಿಗದ ದಿನಗಳಲ್ಲಿ ಏನ್ಮಾಡ್ತೀರಿ….’
‘ಅದೇ ಕಷ್ಟ…..’
‘ಇದುವರ್‍ಗೂ ಏನ್ಮಾಡಿಕೊಂಡು ಬಂದಿ…..?’
ಅವರ ಹೆಂಡತಿ ಉತ್ತರಿಸಿದರು: ‘ನಾವು ಏನಾತಾನೇ ಮಾಡಾಕಾದ್ದು ಸ್ವಾಮಿ…. ಹಸ್ಕಂಡು ಇರೋರು ಯಾರಾರು ಪುಣ್ಯಾತ್ಮರ ಮನೇಲಿ ಹಿಟ್ಟು ಗಿಟ್ಟು ಇಸ್ಕ ಬಂದು ಕಾಲ ತಳ್ಳೋದು……’
ಗಂಡ ಮುಂದುವರಿಸಿದರು: ‘ಹಿಂದೆ ನಮ್ಮ ಗುರುಗಳಾಗಿದ್ದವರು ಅಂದುಕೊಂಡು ಸ್ವಲ್ಪ ಗಟ್ಟಿ ಮಟ್ಟಿಯಾಗಿರುವವರು ಅಷ್ಟು ಇಷ್ಟು ಕರುಣೆ ಇಟ್ಟವರೆ ಸ್ವಾಮಿ’

ಬನ್ನಿಕುಪ್ಪೆಯ ಎರಡು ಜೀವಗಳುಬನ್ನಿಕುಪ್ಪೆ ಸುತ್ತಾಮುತ್ತಾ ಗದ್ದೆಗಳು ಇರುವುದರಿಂದ ಬೇರೆ ಬಂಜರು ಊರುಗಳಿಗಿಂತ ಈ ಕಡೆ ಕೂಲಿ ಸ್ವಲ್ಪ ಹೆಚ್ಚು ದಿನಗಳು ಸಿಗುತ್ತವೆ. ಬತ್ತ ರಾಗಿ ನಾಟಿ ಕುಯ್ಲಿನ ಕಾಲ ಕೂಲಿ ಸಿಗುವ ದಿನಗಳು. ಇದು ಬಿಟ್ಟರೆ ಬೇಸಿಗೆ ಪೂರ್ತಿ ಕೂಲಿ ಇಲ್ಲದೆ ಇರಬೇಕಾಗುತ್ತದೆ. ಬೇಸಿಗೇಲು ಚೂರು ಪಾರು ಅದು ಇದು ಕೆಲಸ ಸಿಗುವುದಾದರೂ ಅವರು ಕೊಟ್ಟಷ್ಟು ಇವರು ಈಸಿಕೊಂಡಷ್ಟು, ಹನ್ನೆರಡಾಣೆ ಆಗಬಹುದು, ಒಂದು ರುಪಾಯಿ ಆಗಬಹುದು. ಆಗ ಅದಾದರೂ ಸಿಕ್ಕರೆ ಸಾಕು ಎನಿಸುತ್ತದೆ ಅಂದರು. ವರ್ಷ ಪೂರ್ತಿ ಕೂಲಿಯಾದರೂ ಸಿಕ್ಕರೂ ಏನಿಲ್ಲದಿದ್ದರೂ ಊಟವಾಗುತ್ತದಲ್ಲ ಎನ್ನುವ ಸಮಾಧಾನ ಇವರದು. ಆದರೆ ಸತ್ಯ ಇರೋದೇ ಬೇರೆ.

ಇವರಿಗೆ ಈಗ ಜನತಾ ಮನೆ ಸಿಕ್ಕಿದೆ. ಅದಕ್ಕೆ ಗಿಲಾವ್ ಮಾಡಿಸಿಲ್ಲವಾದ್ದರಿಂದ ಇನ್ನೂ ಅಲ್ಲಿಗೆ ಹೋಗಿಲ್ಲ. ಅಲ್ಲಿಗೆ ಹೋದ ಮೇಲೆ ಇವರದೇ ಆದ ಒಂದು ಸ್ವಂತ ಮನೆ ಆದಂತಾಗುತ್ತದೆ. ಕೂಲಿ ಬಿಟ್ಟು ಮತ್ತಾವ ಉಪಕಸುಬನ್ನೂ ಮಾಡದ ಈ ಸಂಸಾರ ಅಲ್ಲಿಗೆ ಹೋಗ ಮೇಲೆ ಕೋಳಿ ಕುರಿ, ಆಡು ಸಾಕಬೇಕು ಅಂದುಕೊಂಡಿರುವವರು. ಈ ಮನೆಯಲ್ಲಿ ಜಾಗವಿಲ್ಲ. ಜೊತೆಗೆ ಬೇರೆಯವರದು. ಹೆಚ್ಚಿಗೆ ನೀರು ಚೆಲ್ಲಿದರೂ ಎಲ್ಲಿ ಬಿಟ್ಟುಹೋಗಿ ಎಂದು ಅನ್ನುತ್ತಾರೋ ಅನ್ನುವ ಭಯದಲ್ಲಿ ವಾಸಿಸುತ್ತಿರುವವರು. ಜನತಾ ಮನೆ ಬಿಟ್ಟರೆ ಇವರಿಗೆ ಜೀತ ವಿಮೋಚನೆಯ ಹಣ ೫೦೦ ರುಪಾಯಿ ಸಿಕ್ಕಿದೆ. ಅದು ಸರಿಯಾದ ಟೈಮಲ್ಲಿ ಬೇಸಿಗೇಲಿ ಸಿಕ್ಕಿದ್ದರಿಂದ ಹೊಟ್ಟೆಗೆ ಬಳಸಿಕೊಂಡರು. ಈ ಜೀತ ವಿಮೋಚನೆ ಸಾಲ ಯಾವ ರೀತಿಯದು ಎಷ್ಟು ಬಡ್ಡಿಯದು ಹೇಗೆ ತೀರಿಸಬೇಕು ಅದಾವುದೂ ಇವರಿಗೆ ತಿಳಿದಿಲ್ಲ. ಇದು ಬಿಟ್ಟರೆ ಇವರಿಗೆ ಮತ್ತಾವ ಸಾಲವೂ ಇಲ್ಲ. ಕೈ ಸಾಲ ಮಾಡಿದರೆ ಯಾವಮುಂಬಿನಲ್ಲಿ ತೀರಿಸಲು ನಮ್ಮ ಕೈಲಿ ಸಾಧ್ಯ ಎಂದು ಪ್ರಶ್ನಿಸಿದರು. ನಿಜ, ಇವರಿಗೆ ಬೇಕಾಗಿರುವುದು ಮುಂಬು.

ದೇವನೂರು ಮಹಾದೇವರ  ಹಳೆಯ ಬರಹಗಳಿಗಾಗಿ ಹುಡುಕುತ್ತಿದ್ದಾಗ ಸಿಕ್ಕ ಬರಹ ]

[ ಬನ್ನಿಕುಪ್ಪೆಯ ಇತ್ತೀಚಿನ ಚಿತ್ರಗಳು-ರಶೀದ್]