ಪಾಶ್ಚಿಮಾತ್ಯ ದೇಶಗಳಲ್ಲಿ ನಾಲ್ಕು ಋತುಗಳು ಕಂಡು ಬರುತ್ತದೆ, ಅದರಲ್ಲೂ ಕೆನಡಾ ದೇಶದಲ್ಲಿ ವರ್ಷದ ಆರು ತಿಂಗಳು ಮಂಜು ಬೀಳುತ್ತಿದ್ದು, ಹಿಮದಿಂದ ಕೂಡಿದ್ದರೂ ನಾಲ್ಕು ಋತುಗಳು ಬಂದು ಹೋಗುತ್ತವೆ. ಇಂತಹ ದೇಶಗಳಲ್ಲಿ ಸ್ಪ್ರಿಂಗ್ ಎನ್ನುವ ಒಂದು ಋತು ಇದೆ, ಅದನ್ನು ವಸಂತ ಕಾಲ ಎನ್ನುವುದು ಸೂಕ್ತ. ಈ ಋತುವಿನ ಸಮಯದಲ್ಲಿ ಬೋಳಾಗಿದ್ದ ಮರಗಳು ಇದ್ದಕ್ಕಿದ್ದಂತೆ ಚಿಗುರೊಡೆಯುತ್ತವೆ, ನೋಡು ನೋಡುತ್ತಿದ್ದಂತೆ ಎಲೆಗಳಿಂದ ಪೂರ್ತಿ ಆವರಿಸಿಕೊಳ್ಳುತ್ತದೆ. ಮಣ್ಣಿನ ಶಕ್ತಿಯೋ, ಜಾಗದ ಮಹಿಮೆಯೋ ಕೇವಲ ತಿಂಗಳಲ್ಲಿ ಸತ್ತೇ ಹೋಗಿದೆ ಎನ್ನುವಂತಹ ಮರಗಳು ಮೈದುಂಬಿ ನಿಂತಿರುತ್ತವೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಬರುವ ಕಾಲಗಳ ಕುರಿತು ಬಗ್ಗೆ ಬರೆದಿದ್ದಾರೆ ಪ್ರಶಾಂತ್‌ ಬೀಚಿ

 

ಆಕಾಶ ಎನ್ನುವ ಪದವೇ ಅಪರಿಮಿತ. ಅಳತೆಗೆ ನಿಲುಕದ್ದು, ಊಹೆಗೆ ಮೀರಿದ್ದು, ಸಾಗಿದರೆ ಸಮುದ್ರ ಮುಗಿಯಬಹುದು ಆಕಾಶವಲ್ಲ. ಅಂಥಹ ಆಕಾಶ ಯಾವ ಬಣ್ಣದ್ದು? ಆಕಾಶದಲ್ಲಿ ಕಾಣಸಿಗುವ ಬಣ್ಣಗಳ ಬಗ್ಗೆ ನಮಗೆ ಅರ್ಥೈಸಲು ವಿಜ್ಞಾನದ ಪ್ರಕಾರ ಸಬೂಬು ಹೇಳಿ ನಂಬಿಸುತ್ತಾರೆ ಎಂದು ನನಗೆ ಅನಿಸುತ್ತದೆ. ಕೆಲವೊಮ್ಮೆ ಆಕಾಶದ ತುಂಬೆಲ್ಲಾ ಬಣ್ಣಗಳನ್ನು ಚೆಲ್ಲಿದ ಹಾಗೆ ಕಾಣಿಸುತ್ತದೆ. ಅದರಲ್ಲಿ ಇಂತಹದೇ ಬಣ್ಣ ಎನ್ನುವ ಹಾಗಿಲ್ಲ, ಬರೀ ಬಣ್ಣ ಅಷ್ಟೆ. ನೋಡಲು ಯಾವುದೋ ಚಿತ್ರಗಾರ ತನ್ನ ತಟ್ಟೆಯಲ್ಲಿದ್ದ ನೀರಿಗೆ ಬಣ್ಣ ಬಣ್ಣದ ಕುಂಚವನ್ನು ಅದ್ದಿದ ರೀತಿ ಕಾಣುತ್ತದೆ. ಎಲ್ಲಾ ಬಣ್ಣಗಳನ್ನು ಕಲಸಿ ಚೆಲ್ಲಿದ ರೀತಿಯಲ್ಲಿ ಆಕಾಶ ಕಾಣುತ್ತಿರುತ್ತದೆ. ಅಂತಹ ಆಕಾಶವನ್ನು ನೋಡುವುದೇ ಒಂದು ಬೆರಗು. ಆಕಾಶ ಯಾವುದೋ ಒಂದು ಬಣ್ಣವಾಗಿರುವುದಕ್ಕಿಂತ ಎಲ್ಲಾ ಬಣ್ಣಗಳ ಮಿಶ್ರಣವಾಗಿದ್ದರೆ ಸೊಗಸಲ್ಲವೆ?

ಕನ್ನಡ ಕವಿಗಳ ಕವಿತೆ ಕೇಳಿದಾಗ ನಮ್ಮ ನಾಡಿನಲ್ಲಿ ಮಾತ್ರ ಇಂತಹ ಸೊಗಸು ಕಾಣುವುದು, ನಮ್ಮ ಭಾಷೆಯಲ್ಲಿ ಮಾತ್ರ ಇಂತಹ ಶಕ್ತಿ ಇರುವುದು ಎಂದು ಅನ್ನಿಸುವುದು ಸಹಜ. ನಮ್ಮ ಭಾಷೆ, ನಮ್ಮ ನಾಡು ನಮಗೆ ಹೆಚ್ಚು. ಬೇರೆ ನಾಡಿನಲ್ಲೂ ಅನೇಕ ವಿಶೇಷತೆಗಳನ್ನು ಕಾಣುತ್ತೇವೆ. ಅದನ್ನು ಸ್ವೀಕರಿಸುವ ಮನೋಭಾವ ನಮಗ್ಯಾಕೆ ಬರುವುದಿಲ್ಲ?

ಪಾಶ್ಚಿಮಾತ್ಯ ದೇಶಗಳಲ್ಲಿ ನಾಲ್ಕು ಋತುಗಳು ಕಂಡು ಬರುತ್ತದೆ, ಅದರಲ್ಲೂ ಕೆನಡಾ ದೇಶದಲ್ಲಿ ವರ್ಷದ ಆರು ತಿಂಗಳು ಮಂಜು ಬೀಳುತ್ತಿದ್ದು, ಹಿಮದಿಂದ ಕೂಡಿದ್ದರೂ ನಾಲ್ಕು ಋತುಗಳು ಬಂದು ಹೋಗುತ್ತವೆ. ಇಂತಹ ದೇಶಗಳಲ್ಲಿ ಸ್ಪ್ರಿಂಗ್ ಎನ್ನುವ ಒಂದು ಋತು ಇದೆ, ಅದನ್ನು ವಸಂತ ಕಾಲ ಎನ್ನುವುದು ಸೂಕ್ತ. ಈ ಋತುವಿನ ಸಮಯದಲ್ಲಿ ಬೋಳಾಗಿದ್ದ ಮರಗಳು ಇದ್ದಕ್ಕಿದ್ದಂತೆ ಚಿಗುರೊಡೆಯುತ್ತವೆ, ನೋಡು ನೋಡುತ್ತಿದ್ದಂತೆ ಎಲೆಗಳಿಂದ ಪೂರ್ತಿ ಆವರಿಸಿಕೊಳ್ಳುತ್ತದೆ. ಮಣ್ಣಿನ ಶಕ್ತಿಯೋ, ಜಾಗದ ಮಹಿಮೆಯೋ ಕೇವಲ ತಿಂಗಳಲ್ಲಿ ಸತ್ತೇ ಹೋಗಿದೆ ಎನ್ನುವಂತಹ ಮರಗಳು ಮೈದುಂಬಿ ನಿಂತಿರುತ್ತವೆ. ಇಷ್ಟೇ ಆಗಿದ್ದರೆ ಸ್ಪ್ರಿಂಗ್ ಸೀಸನ್ ಅಷ್ಟು ಮಹತ್ವ ಪಡೆಯುತ್ತಿರಲಿಲ್ಲ. ಮರದ ತುಂಬೆಲ್ಲಾ ಎಲೆಗಳು ಬಣ್ಣಗಳನ್ನು ಬದಲಾಯಿಸುತ್ತಾ ಹೋಗುತ್ತವೆ, ಕೆಲವು ಮರಗಳು ಹಳದಿ ಎಲೆಗಳನ್ನು ಹೊಂದಿದ್ದರೆ, ಇನ್ನೂ ಕೆಲವು ಕೆಂಪು, ಮತ್ತೆ ಕೆಲವು ನರಳೆ ಹೀಗೆ ನಾನಾ ತರದ ಬಣ್ಣಗಳ ಎಲೆಗಳನ್ನು ಮರಗಳು ಹೊಂದುತ್ತವೆ. ಇನ್ನೂ ಕೆಲವು ಮರಗಳಲ್ಲಿ ಎಲೆಯ ತುದಿಯ ಬಾಗ ಒಂದು ಬಣ್ಣವಾದರೆ ಉಳಿದ ಭಾಗ ಇನ್ನೊಂದು ಬಣ್ಣ ಹೊಂದಿರುತ್ತದೆ. ವರ್ಷದ ಎರಡು ತಿಂಗಳಲ್ಲೆ ಮುಗಿದು ಹೋಗುವ ಈ ಕಾಲವು ಜನರ ಮನಸ್ಸಿಗೆ ವರ್ಷಪೂರ್ತಿಯ ಸಂತಸವನ್ನು ನೀಡುತ್ತದೆ. ಕನ್ನಡದ ವರಕವಿ ಬೇಂದ್ರೆಯವರು ಈ ಬಗೆಯ ವಸಂತ ಋತುವನ್ನು ನೋಡಿದ್ದರೆ ಇನ್ನೆಷ್ಟು ವರ್ಣಿಸುತ್ತಿದ್ದರೊ.

ಆಕಾಶದಲ್ಲಿ ಕಾಣಸಿಗುವ ಬಣ್ಣಗಳ ಬಗ್ಗೆ ನಮಗೆ ಅರ್ಥೈಸಲು ವಿಜ್ಞಾನದ ಪ್ರಕಾರ ಸಬೂಬು ಹೇಳಿ ನಂಬಿಸುತ್ತಾರೆ ಎಂದು ನನಗೆ ಅನಿಸುತ್ತದೆ. ಕೆಲವೊಮ್ಮೆ ಆಕಾಶದ ತುಂಬೆಲ್ಲಾ ಬಣ್ಣಗಳನ್ನು ಚೆಲ್ಲಿದ ಹಾಗೆ ಕಾಣಿಸುತ್ತದೆ. ಅದರಲ್ಲಿ ಇಂತಹದೇ ಬಣ್ಣ ಎನ್ನುವ ಹಾಗಿಲ್ಲ, ಬರೀ ಬಣ್ಣ ಅಷ್ಟೆ. ನೋಡಲು ಯಾವುದೋ ಚಿತ್ರಗಾರ ತನ್ನ ತಟ್ಟೆಯಲ್ಲಿದ್ದ ನೀರಿಗೆ ಬಣ್ಣ ಬಣ್ಣದ ಕುಂಚವನ್ನು ಅದ್ದಿದ ರೀತಿ ಕಾಣುತ್ತದೆ.

ಸ್ಪ್ರಿಂಗ್ ಸೀಸನ್ ನಂತರ ಕಾಣಬರುವುದು ಬೇಸಿಗೆ. ಬೇಸಿಗೆಯ ಶುರುವಿನಲ್ಲೆ ಬಣ್ಣ ಬಣ್ಣದ ಎಲೆಗಳು ಹಸಿರುಬಣ್ಣಕ್ಕೆ ಬದಲಾಗುತ್ತದೆ. ವರ್ಷದ ಆರು ತಿಂಗಳು ಹಿಮದ ಮಧ್ಯ ಕಳೆದ ಕೆನಡಾದ ಜನರಿಗೆ ಬೇಸಿಗೆ ಒಂದು ವರ. ನಾಲ್ಕೈದು ತಿಂಗಳು ಸಿಗುವ ಬೇಸಿಗೆಯನ್ನು ಮುಂದೆಂದೂ ಸಿಗದ ರೀತಿ ಅನುಭವಿಸುತ್ತಾರೆ. ಮನೆಯ ಹಿಂದೆ ಕೈದೋಟ ಬೆಳಸುವುದೇನು, ಮೀನು ಹಿಡಿಯಲು ಹೋಗುವುದೇನು, ಪ್ರವಾಸ ಕೈಗೊಳ್ಳುವುದೇನು ಒಟ್ಟಿನಲ್ಲಿ ಜೀವನದಲ್ಲಿ ಮತ್ತೆಂದೂ ಬೇಸಿಗೆ ನೋಡುವುದಿಲ್ಲೆವೆನ್ನುವಂತೆ ಜೀವಿಸಿಬಿಡುತ್ತಾರೆ. ಬೇಸಿಗೆಯಲ್ಲಿ ಬೆಳಗಿನ ಝಾವ ನಾಲ್ಕಕ್ಕೆ ಬೆಳಕಾದರೆ ಕತ್ತಲಾಗುವುದು ರಾತ್ರಿ ಹತ್ತಕ್ಕೆ. ಇನ್ನೇನು ಬೇಸಿಗೆ ಮುಗಿಯಿತು ಎನ್ನುವಾಗ ಶುರುವಾಗುವುದೇ ಫ಼ಾಲ್ ಸೀಸನ್, ಅದನ್ನು ಶರತ್ಕಾಲ ಎನ್ನಬಹುದು. ಬೇಸಿಗೆಯಲ್ಲಿ ಹಸಿರಿನಿಂದ ತುಂಬಿದ್ದ ಗಿಡ ಮರಗಳು ಎಲೆಗಳನ್ನು ಕಳೆದುಕೊಳ್ಳುತ್ತದೆ. ಚಳಿ ಶುರುವಾಗುವ ಸಮಯ, ಸಣ್ಣ ಸಣ್ಣ ಗಿಡಗಳು ಸತ್ತು ಹೋದರೆ ಮರಗಳು ಎಲೆಗಳನ್ನು ಕಳೆದುಕೊಂಡು ಸಾಯುವಂತೆ ನಿಂತಿರುತ್ತವೆ. ಬರೀ ಕಡ್ಡಿಗಳಿಂದ ಕೂಡಿದ ಶರೀರಕ್ಕೆ ಶಾರೀರವೇ ಇರುವುದಿಲ್ಲ. ಎಲೆಗಳು ಬೀಳುವುದನ್ನೆ ನೋಡಿ ಅದಕ್ಕೆ ಫ಼ಾಲ್ ಸೀಸನ್ ಎಂದು ಹೆಸರಿಟ್ಟಿದ್ದಾರೆ.

ಕೇವಲ ಒಂದು ತಿಂಗಳಿಗಿಂತಾ ಸ್ವಲ್ಪ ಜಾಸ್ತಿ ಇರುವ ಈ ಶರತ್ಕಾಲದ ಹಿಂದೆಯೇ ಚಳಿಗಾಲ ಬಂದು ಬಿಡುತ್ತದೆ. ಮೊದ ಮೊದಲು ಸಣ್ಣದಾಗಿ ಒಂದಂಕಿಯ ವಾತಾವರಣಕ್ಕೆ ಬಂದು ಸಣ್ಣದಾಗಿ ನಡುಗಿಸಿ, ಆಗೊಮ್ಮೆ ಈಗೊಮ್ಮೆ ಚಳಿ ಜಾಸ್ತಿ ಮಾಡುತ್ತಾ ಜನರನ್ನು ಚಳಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಸ್ವಲ್ಪ ಹೊಂದಿಕೊಳ್ಳುತ್ತಿರುವಾಗಲೆ ಮಂಜಿನ ಮಳೆಯನ್ನು ಸುರಿಸಲು ಶುರುಮಾಡುತ್ತದೆ. ಟೆಂಪರೇಚರ್ ಎಷ್ಟಿರಬಹುದೆಂದು ನೋಡಿದರೆ, ಮೈನೆಸ್ ಗೆ ಹೋಗಿರುತ್ತದೆ. ಕೆನಡಾದ ಕೆಲವು ರಾಜ್ಯದಲ್ಲಿ ಮೈನಸ್ ಹತ್ತು ಅಥವ ಇಪ್ಪತ್ತು ಡಿಗ್ರೀಗೆ ಹೋದರೆ, ಇನ್ನು ಕೆಲವು ಕಡೆ ಮೈನಸ್ ನಲವತ್ತು ಅಥವ ಐವತ್ತಕ್ಕೆ ಹೋಗುತ್ತದೆ. ಐದರಿಂದ ಆರು ತಿಂಗಳು ಸಸ್ಯಜೀವಿಗಳಿಗೆ ಜೀವವೇ ಇರುವುದಿಲ್ಲ. ಚಳಿಗಾಲ ಮುಗಿದು ಮತ್ತೆ ಸ್ಪ್ರಿಂಗ್ (ವಸಂತ) ಶುರುವಾಗುತ್ತಿದ್ದಂತೆ ಮತ್ತೆ ಜೀವಕಳೆ ಹುಟ್ಟುತ್ತದೆ. ಮನುಷ್ಯರಾದರೆ ಹೇಗೋ ಹೊಂದಿಕೊಂಡು, ಬೇಕಾದ ವ್ಯವಸ್ಥೆ ಮಾಡಿಕೊಂಡು ಬದುಕುಳಿಯುತ್ತಾರೆ, ಆದರೆ ಸಸ್ಯ ಸಂಕುಲಗಳು ಮರುಜೀವ ಪಡೆಯುವುದೇ ಒಂದು ವಿಸ್ಮಯ.

“ನಮ್ಮ ದೇಶದಲ್ಲಿಲ್ಲದಿರುವುದು ಇಲ್ಲೇನಿದೆ?” ಎಂದು ಹೇಳುತ್ತಿದ್ದವರ ಮಾತು ಕೇಳಿ, ಇದೆಲ್ಲಾ ನೆನಪಾಯಿತು. ನಾವು ಕಣ್ಣು ಮುಚ್ಚಿ ಎಲ್ಲದರಲ್ಲೂ ನಮ್ಮದೇ ಶ್ರೇಷ್ಟ ಎನ್ನುವ ಒಂದು ಕುರುಡು ನಿರ್ಧಾರಕ್ಕೆ ಬಂದು ಬಿಡುತ್ತೇವೆ. ಪ್ರತಿಯೊಂದು ಭೌಗೋಳಿಕ ಭಾಗವೂ ಅದರದ್ದೇ ಮಹತ್ವ ಹೊಂದಿರುತ್ತದೆ ಎಂದು ಒಪ್ಪಿಕೊಳ್ಳದ ಮನಸ್ಥಿತಿಗೆ ತಲುಪಿದರೆ ಬಹಳಷ್ಟನ್ನು ಕಳೆದುಕೊಳ್ಳುತ್ತೇವೆ.