ತಿಂಗಳದ ಒಂದನೇ ವಾರ ಯಾವಗಲೂ ಭಾಳ ಟೆನ್ಶನ್ ವಾರ. ನಳದ ಬಿಲ್ಲ, ಕರೆಂಟ ಬಿಲ್ಲ, ಹಾಲಿಂದ, ಕಿರಾಣಿದ ಎಲ್ಲಾ ಸುಡಗಾಡ ಬಿಲ್ಲ ಬರೋದ ಒಂದನೇ ವಾರದಾಗ. ಹಂಗ ಪ್ರತಿ ಬಿಲ್ಲ ನೋಡಿದಾಗ ಒಮ್ಮೆ ನಾ ಬಿ.ಪಿ ಏರಿಸಿಗೊಂಡ ನಮ್ಮವ್ವಗ ‘ನೋಡಿ ಖರ್ಚ ಮಾಡವಾ, ತಿಳಿತದ ಇಲ್ಲೊ ಮನ್ಯಾಗ ದುಡಿಯೋಂವ ನಾ ಒಬ್ಬನ’ ಅಂತ ಹೇಳೋದು ಪ್ರತಿ ತಿಂಗಳ ನಡದಿರತದ. ಹಂತಾದರಾಗ ಒಂದಿಷ್ಟ ಪೇಮೆಂಟ ರಿಮೈಂಡರ sms ಒಂದನೇ ವಾರದಾಗ ಬರತಾವ, ನಿಂಬದ ಈ ತಿಂಗಳದ credit card due amount ಇಷ್ಟು, ನಿಂಬದ emi due amount ಇಷ್ಟು, your BSNL bill for the month ಇಷ್ಟು ಅಂತ ಒಂದ ಐದಾರ sms ತಿಂಗಳಾ ತಪ್ಪದ ಬರತಾವ. ನಮಗ ಪಗಾರ ಬರೋದ ಹೆಚ್ಚು ಕಡಿಮೆ ಆಗಬಹುದು ಆದ್ರ ಈ ಪೇಮೆಂಟ ರಿಮೈಂಡರ್ sms ಮಾತ್ರ ತಪ್ಪಂಗಿಲ್ಲಾ. ಅಗದಿ ಏನ ನಾವ ಮರತ ಗಿರತೇವ ಅಂತ due date ಮೆನ್ಶನ್ ಮಾಡಿ ಕಳಸಿ ಮತ್ತ ಲಾಸ್ಟಿಗೆ kindly ignore this message if you have already paid ಅಂತ ಬ್ಯಾರೆ ಬರದಿರತಾರ.

ಹಿಂತಾ payment reminder sms ಗದ್ಲದಾಗ ಪ್ರತಿ ತಿಂಗಳ ಒಂದನೇ ವಾರದಾಗ ನಮ್ಮ ಬೀದರ ಬಹಾದ್ದೂರ ದೇಸಾಯಿರದ ಒಂದ sms ಎಂಟ ಕಂತನಾಗ ಬರತದ. ಹಂಗ ಅವರ ಕಳಸೋದ ಒಂದ sms, ಆದ್ರ ಅವರ ಅದನ್ನ ಇಷ್ಟ ದೊಡ್ದದ ಟೈಪ ಮಾಡಿರತಾರಲಾ ಒಂದ ಪೊಸ್ಟ ಕಾರ್ಡ ಮ್ಯಾಟರ್ smsನಾಗ ಕಳಸಿರತಾರ. ಹಿಂಗಾಗಿ ಅದು ಎಂಟ ಕಂತನಾಗ ಬರತದ. ಹಂತಾದ ಏನ ಇವರ ಬರದ sms ಮಾಡಿರ್ತಾರಪಾ ತಿಂಗಳಾ ಅಂದರ, ಅವರಿಗೆ ತಮ್ಮ ಸಮಸ್ತ ಬಂಧು-ಭಗಿನಿಯರಿಗೆ, ಮಿತೃ ವೃಂದಕ್ಕೆ, ಹಿತ ಚಿಂತಕರಿಗೆ ಆ ತಿಂಗಳದಾಗ ಪಂಚಾಂಗ ಪ್ರಕಾರ ಬರೊ ಇಂಪಾರ್ಟೆಂಟ ಹಬ್ಬ ಹುಣ್ಣಿಮೆದ ತಿಥಿ ಕಳಸೊ ಚಟಾ.

೧.ಯಾವತ್ತ ಏಕಾದಶಿ, ವೈಷ್ಣವರದ ಯಾವತ್ತ, ಸ್ಮಾರ್ತರದ ಯಾವತ್ತ. ಕಣ್ವ ಶಾಕಾದವರದ ಇಬ್ಬರದ ನಡಕ.
೨.ಏಕಾದಶಿ ಮರುದಿವಸನ ದ್ವಾದಶಿ. ಮುಂದ ಎರಡ ದಿವಸ ಬಿಟ್ಟ ಚತುರ್ದಶಿ.
೩.ಎಂದ ಸಂಕಷ್ಟಿ, ಎಷ್ಟ ಗಂಟೇಕ್ಕ ಚಂದ್ರೋದಯ, ಹಂಗ ಚಂದ್ರೋದಯ ಆದಮ್ಯಾಲೇನ ಊಟಾ.
೪.ನವರಾತ್ರಿ ಯಾವಾಗಿಂದ, ಎಂದ ಘಟ್ಟಾ ಕೂಡಸಬೇಕು ಎಂದ ಇಳಸಬೇಕು…

ಹಿಂಗೇಲ್ಲಾ ಪ್ರತಿಯೊಂದ ಪಂಚಾಂಗದ ಡಿಟೇಲ್ಸ್ ಪ್ರತಿ ತಿಂಗಳ ಪೋಸ್ಟ ಕಾರ್ಡ ಸೈಜಿಗೆ ಎಡಿಟ ಮಾಡಿ ಆಮ್ಯಾಲೆ ಎಲ್ಲಾರಿಗೂ sms ಮಾಡ್ತಾರ. ಲಾಸ್ಟಿಗೆ ಒಂದ ಯಾರದರ ಎಲ್ಲೇರ ಕೇಳಿದ್ದ ‘quote’ ಇಲ್ಲಾ ‘ಸುಭಾಷಿತ’ ಕನ್ನಡದಾಗ ಟ್ರಾನ್ಸಲೇಟ್ ಮಾಡಿ ಅದನ್ನ ಮತ್ತ ಇಂಗ್ಲೀಷನಾಗ ಟೈಪ ಮಾಡಿ ಹಾಕಿ ತಳದಾಗ ಬೋಲ್ಡಾಗಿ ಕ್ಯಾಪಿಟಲ ಲೆಟರಲೆ B C BAHADDURDESAI BIDAR ಅಂತ ಹಾಕೋತಾರ. ಅಗದಿ ಈ ಪಂಚಾಂಗದಾಗ ಅದನ್ನ ಬರದವರ ತಮ್ಮ ಹೆಸರ ಲಾಸ್ಟ ಪೇಜಿನಾಗ ಹಾಕ್ಕೊಂಡಿರತಾರಲಾ ‘ಪಂಡಿತ ಪ್ರದ್ಯುಮ್ನಾಚಾರ್ಯ ನರಸಿಂಹಾಚಾರ್ಯ ರಾಯಚೂರ, ಸಾಕೀನ- ಹಗರಿ ಬೊಮ್ಮನಹಳ್ಳಿ’ ಅಂತ ಹಂಗ ಇವರು ತಮ್ಮ ಹೆಸರ ಹಾಕ್ಕೊಂಡಿರತಾರ. ಅವರಿಗೆ ಗೊತ್ತ ಇರತದ ನಮಗೆಲ್ಲಾ ಇದ ಅವರದ sms ಅಂತ ಗೊತ್ತಾಗೆದ, ನಮ್ಮ ಫೋನ ಬುಕ್ಕಿನಾಗ ಅವರದ ಹೆಸರ ಅದ ಅಂತ. ಆದರು ಎಲ್ಲರ ನಾವು ಇವರದ ಮೂರ ಮಾರ ಉದ್ದಂದ sms ಓದೋದರಾಗ ಮರತ ಗಿರತೇವಂತ ತಳದಾಗ ಮತ್ತೊಮ್ಮೆ ತಮ್ಮ ಹೆಸರ ಬಿಟ್ಟಿರತಾರ. ಹಂಗ ಆ ತಿಂಗಳ ಯಾವದರ ನ್ಯಾಶನಲ ಫೆಸ್ಟಿವಲ್ ಇದ್ದರ ಅದರ ಶುಭಾಷಯನೂ ಹಾಕಲಿಕ್ಕೆ ಮರೆಂಗಿಲ್ಲ ಮತ್ತ. ಆದರ ಇವರ ಒಂದ sms ಒಳಗು ಲಾಸ್ಟಿಗೆ kindly ignore this message if you are not religious ಅಂತ ಇರಂಗಿಲ್ಲಾ, ಹಂಗ ಫಾಲೋ ಮಾಡ್ರಿ ಅಂತನೂ ಇರಂಗಿಲ್ಲಾ ಆ ಮಾತ ಬ್ಯಾರೆ.

ನಾ ಹೇಳಲಿಕತ್ತಿದ ನಮ್ಮ ಹೃಷಿಕೇಶ ಬಹಾದ್ದೂರ ದೇಸಾಯಿ ಅಲ್ಲ ಮತ್ತ, ಆ ಮಗ್ಗ ಏನ ತಲಿ ಪಂಚಾಂಗ ಗೊತ್ತ, ದಿವಸಾ ಹಿಂದು ಪೇಪರ ನೋಡಿ ಡೇಟ್, ಡೇ ತಿಳ್ಕೋಳೊಂವಾ ಅಂವಾ. ನಾ ಹೇಳಲಿಕತ್ತಿದ್ದು ಅವರ ಪೂಜ್ಯ ತಂದೆಯವರ ಬಗ್ಗೆ. ಪಾಪ, ಇಲ್ಲೆ ಇದ್ದಾಗ ಹೆಂತಾ ಛಂದ ಹುಬ್ಬಳ್ಳಿ-ಹಾನಗಲ್ಲ-ಅಗಡಿ ಅಂತ ಕೈಬಿಟ್ಟ ಊರ-ಊರ ಅಡ್ಯಾಡಕೋತ್ತ ತಮ್ಮ ತಿಳದಾಗ ಒಮ್ಮೆ ಹಬ್ಬ-ಹುಣ್ಣಿಮೆ ಎಲ್ಲೆ ಬೇಕ ಅಲ್ಲೇ ಮಾಡ್ಕೋತ ಆರಾಮ ಇದ್ದರು. ಈ ಮಗಾ ತಂದ ನೌಕರಿ ಬೀದರಗೆ ಟ್ರಾನ್ಸ್ಫರ ತೊಗೊಂಡ ಅವರನ ಅಲ್ಲೇ ಕರಕೊಂಡ ಹೋದಮ್ಯಾಲೆ ಅವರಿಗೆ ಒಂಥರಾ ಫಾರೇನಗೆ ಹೋದಂಗ ಆಗಿ ಬಿಟ್ಟದ. ಅಲ್ಲಾ ಹಂಗs ಮಗನ್ನ ಅವರೇನರ software engineer ಮಾಡಿದ್ರ ಅವರು ಇಷ್ಟೋತ್ತಿಗೆ ಫಾರೇನ್ನಾಗೂ ಕಾಶಿ-ಬದರಿಯಾತ್ರೆ ಮಾಡಿ ಬರತಿದ್ದರ ಖರೆ, ಆದರ ಏನ ಮಾಡೋದ ಅವರ ಹಣೆಬರಹಕ್ಕ ಮಗಾ ಸೈನ್ಸ್ ತೊಗೊಂಡ ಎಕನಾಮಿಕ್ಸನಾಗ ಬಿ.ಎ ಮಾಡಿ ಮುಂದ ಜರ್ನಲಿಸ್ಮ ಮುಗಿಸಿ ಫಾರೇನ ಲಾಂಗ್ವೇಜ ಜರ್ನಲಿಸ್ಟ ಆದ.

ಪಾಪ ದೇಸಾಯರಿಗೆ ಬೀದರಗೆ ಹೋದ ಮ್ಯಾಲೆ ಹಬ್ಬ-ಹುಣ್ಣಿಮೆ ಮರತಂಗ ಆಗೇದೊ ಇಲ್ಲಾ ಅವರ ಅತ್ತಲಾಗ ಹೋದ ಮ್ಯಾಲೆ ಇತ್ತಲಾಗಿನ ಅವರ ಬಳಗದವರು-ಗೆಳ್ಯಾಯರು ಹಬ್ಬ ಹುಣ್ಣಿಮಿ ಮರತಗಿರತಾರಂತ ಅವರ ತಿಳ್ಕೊಂಡಾರೊ ಗೊತ್ತಿಲ್ಲಾ ಒಟ್ಟ ತಿಂಗಳಾ ಪೂರ್ತಿ ಪಂಚಾಂಗದ್ದ ಹಾಯಲೈಟ್ಸ್ sms ಮಾಡಿ ಎಲ್ಲಾರಿಗೂ ಕಳಸೋದ ಮಾತ್ರ ಅವರ ತಪ್ಪಸಂಗಿಲ್ಲಾ. ಮಾಡ್ಲಿ ಬಿಡ್ರಿ ಪುಣ್ಯಾದ ಕೆಲಸ ಮಾಡವಲ್ಲರಾಕ. ಮೊದ್ಲ ರಿಟೈರ್ಡ ಮಾಸ್ತರು, ಇಲ್ಲೆ ಇದ್ದಾಗ ಹಿರೇಮನಷ್ಯಾ ಅಂತ ಒಂದ ಸ್ವಲ್ಪ ಅವರದ-ಇವರದ ಹಿರೇತನ ಮಾಡ್ಯರ ಹೊತ್ತ ಕಳಿತಿದ್ದರು. ಪಾಪ ಅವರಿಗೆ ಅಲ್ಲೆ ಬೀದರಿಗೆ ಹೋದಮ್ಯಾಲೆ ಕಟ್ಟಿ ಹಾಕಿದಂಗ ಆಗಿ ಹೊತ್ತ ಹೋಗಲಾರದಂಗ ಆಗಿರಬೇಕು. ಹೆಂಗಿದ್ದರೂ ಫ್ರೀ sms, ಫ್ರೀ ಟೈಮ, ಎಲ್ಲಾರನೂ ನೆನಸಿ ನೆನಸಿ ಫೋನ ಬುಕ್ಕಿನಾಗ ಹುಡಕಿ- ಹುಡಕಿ sms ಮಾಡ್ತಾರ.
ನಮ್ಮ ಮನ್ಯಾಗ ನಮ್ಮವ್ವ ಮೊದ್ಲ ಎರಡ ಮೂರ ಪಂಚಾಂಗದಾಗ ನೋಡಿ ಹಬ್ಬ ಹುಣ್ಣಿಮೆ ಡಿಸೈಡ ಮಾಡತಿದ್ಲು. ಹಂಗ ತಿಥಿ ಎರಡೇರಡ ಬಂದಾಗ ತನಗ ಎಂದ ಅನಕೂಲ ಆಗ್ತದ ಅಂದ ಮಾಡ್ತಿದ್ದಳು. ಅಕಿ ಇಷ್ಟ ಅನಕೂಲ ಸಿಂಧು ಅಲಾ, ಪ್ರತಿ ಶನಿವಾರ ಒಪ್ಪತ್ತ ಮಾಡೋಕಿ ಅಕಸ್ಮಾತ ಶನಿವಾರ ಯಾರರ ರಾತ್ರಿ ಉಟಕ್ಕ ಕರದ ಬಿಟ್ಟರ ಅಕಿ ತನ್ನ ಒಪ್ಪತ್ತ ಸಹಿತ ಸಂಡೇಕ್ಕ ಪೊಸ್ಟಪೋನ ಮಾಡಿ ಬಿಡೋಕಿ. ಹಿಂಗಾಗಿನ ನಮ್ಮ ಅಜ್ಜಿ ನಮ್ಮವ್ವಗ ‘ಸಿಂಧು’ ಅಂತ ಹೆಸರ ಇಟ್ಟಿರಬೇಕ ಅಂತ ನನಗ ಅನಸ್ತದ. ಆದರ ಯಾವಾಗ ಒಮ್ಮೆ ದೇಸಾಯರದ ಹಬ್ಬ-ಹುಣ್ಣಿಮೆ sms ಅಲಾರಾಮ್ ಸ್ಟಾರ್ಟ ಆತಲಾ ಆವಾಗಿಂದ ನಮ್ಮವ್ವ ಪಂಚಾಂಗ ರೆಫೆರ ಮಾಡೋದ ಬಿಟ್ಟ ಬಿಟ್ಟಳು.

“ದೇಸಾಯರ ಕಳಸ್ಯಾರ ಅಂದರ ಅದ ಕರೆಕ್ಟ ಇರತದ. ಅವರದು ನಂಬದು ಒಂದ ಒಕ್ಕಲಾ. ಅದರಾಗ ಹಾನಗಲ್ಲಾಗ ನಾವು ಅವರು ಅಲ್ಲೇ ದತ್ತಾತ್ರೇಯ ಗುಡಿ ಬಾಲವಾಡಿ ಒಳಗ ಕಲತೇವಿ” ಅಂತ ದೇಸಾಯರ sms ಪ್ರಕಾರ ತಿಂಗಳಾ ಕ್ಯಾಲೆಂಡರನಾಗ ಇದ್ಲಿಲೆ ಡೇಟಗೆ ರೌಂಡ ಮಾರ್ಕ ಹಾಕಿ ಇಟಗೊಂಡ ಬಿಡೋಕಿ. ಹಂಗ ಅಮವಾಸ್ಯೆ ಇದ್ದರು ಇದ್ಲಿನ, ಹುಣ್ಣಿಮೆ ಇದ್ದರು ಇದ್ಲಿನ ಮತ್ತ. ಆದರ ನಮ್ಮಪ್ಪ ಹಂಗ ಸುಮ್ಮನ ಮಂದಿ ಹೇಳಿದ್ದ ತಿಥಿ ಒಪಗೋಳೊ ಪೈಕಿ ಅಲ್ಲಾ. ಅದರಾಗ ಅಂವಾ ಸಾಲಿ ಕಲಿಯೋದ ಬಿಟ್ಟ ಇರೋ ನಾಲ್ಕ ವೇದದೊಳಗ ಎರಡ ವೇದ ಕಲತಂವಾ. ಇನ್ನ ಕನ್ನಡ ಸಾಲಿ ದೇಸಾಯಿ ಮಾಸ್ತರ ಕಳಸಿದ್ದ sms ಪಂಚಾಂಗ ಹೆಂಗ ಒಪಗೋತಾನ. ಒಂದ ಬಿಟ್ಟ ಎರಡ ಪಂಚಾಂಗ ತಿರುವಿ-ತಿರುವಿ ದೇಸಾಯರ smsನಾಗ ಮಿಸ್ಟೇಕ ಹುಡಕೋಂವಾ. ಆದರ ನಮ್ಮವ್ವ ಮಾತ್ರ ನಮ್ಮಪ್ಪಂದ ಮಾತ ಕೇಳಂಗಿಲ್ಲಾ, ಅಕಸ್ಮಾತ ದೇಸಾಯರ ಏನರ ಇಷ್ಟ ದೊಡ್ಡ sms ಟೈಪ ಮಾಡಬೇಕಾರ ಟೈಪಿಂಗ ಮಿಸ್ಟೇಕ ಮಾಡಿ ‘ಪಂಚಮಿ ದಿವಸ ನರಕ ಚತುರ್ದಶಿ’ ಅಂತ ಬರದಿದ್ದರು ಅದನ್ನ ವೆರಿಫೈ ಮಾಡ್ತಿದ್ದಿಲ್ಲಾ, ಅಕಿಗೆ ಅವರ sms ಫೈನಲ. ಹಿಂಗಾಗಿ ಇತ್ತೀಚಿಗೆ ನಮ್ಮ ಮನ್ಯಾಗ ಎಲ್ಲಾ ಹಬ್ಬ- ಹುಣ್ಣೀಮೆ ದೇಸಾಯರ sms ಪ್ರಕಾರನ ಮತ್ತ. ಅವರ sms ಬಂದಮ್ಯಾಲೆ ನಮಗ ಕನಫರ್ಮ ಆಗೋದ ‘ಹಾಂ ಇದ ತಿಂಗಳ ವಿಜಯ ದಶಮಿ’ ಅಂತ. ಅಲ್ಲಿ ತನಕ ನಮಗ ಗೊತ್ತಿದ್ದರು ಗೊತ್ತ ಇಲ್ಲದಂಗ.
ಅಲ್ಲಾ ಈ ದೇಸಾಯರಿಗೆ ನಮ್ಮ ಧರ್ಮ, ಸಂಸ್ಕೃತಿ, ಪದ್ಧತಿ ಬಗ್ಗೆ ಕಾಳಜಿ ಎಷ್ಟ ಕಾಳಜಿ ಅಂತೇನಿ. ಹಂಗ ತಿಂಗಳಿಗೆ ಫ್ರೀ ನೂರ sms ಅವ ಅಂತ ಫಾಲತೂ ಉಪಯೋಗ ಮಾಡಂಗಿಲ್ಲಾ, ಅದನ್ನೂ ಧರ್ಮ ಜಾಗರಣೆಗೆ ಉಪಯೋಗ ಮಾಡ್ತಾರ. ಸುಮ್ಮನ ತಮ್ಮಷ್ಟಕ್ಕ ತಾವ ತಿಳ್ಕೊಂಡ, ತಮಗ ತಿಳದಾಗ ತಮ್ಮೂರಾಗ ಹಬ್ಬ-ಹುಣ್ಣಿಮೆ ಮಾಡ್ಕೊಳಂಗಿಲ್ಲಾ, ಸುಳ್ಳ ಎಲ್ಲಾರಿಗೂ ಕ್ಯಾಲೆಂಡರ ಆಫ ಫೆಸ್ಟಿವಲ್ ಇವೆಂಟ್ಸ್ ಕಳಸಿ ಟೇನ್ಶನ್ ಕೊಡ್ತಾರ. ಅಲ್ಲಾ ಹಂಗ ಅವರ ಅಲ್ಲೇ ಬೀದರದಾಗ ಹಬ್ಬಾ-ಹುಣ್ಣಮಿ ಮಾಡತಾರೊ ಬಿಡ್ತಾರೊ ಆ ದೇವರಿಗೆ ಗೊತ್ತ, ನಾವಂತೂ ಯಾರ ನೋಡಲಿಕ್ಕೆ ಹೋಗಿರಂಗಿಲ್ಲಾ. ಇನ್ನ ನಮಗ sms ಕಳಿಸಿ ಅದನ್ನ ರಿಮೈಂಡ ಮಾಡೋ ಅವಶ್ಯಕತೆ ಏನರಿಪಾ ಇವರಿಗೆ? ನಾವ ಹಂಗ ಒಮ್ಮೊಮ್ಮೆ ಒಂದೊಂದ ಹಬ್ಬ ಹುಣ್ಣಮಿ ತುಟ್ಟಿಕಾಲ ಅಂತ ಹಾರಿಸಿಗೋತ ಹೋಗ್ತಿರ್ತೇವಿ, ಇವರ ನಮಗ ನೆನಪಮಾಡಿ ತ್ರಾಸ ಮಾಡ್ತಾರ. ಹಂಗ ಒಮ್ಮೆ ಹಬ್ಬ ಅದ ಅಂತ ಗೊತ್ತಾದ ಮ್ಯಾಲೆ ಮರತವಿ ಅಂತ ಬ್ಯಾರೆ ಮನಸ್ಸಿನಾಗ ಅನ್ಕೋಳ್ಳಿಕ್ಕೂ ಮನಸ್ಸಿಗೆ ಸಮಾಧಾನ ಆಗಂಗಿಲ್ಲಾ ನೋಡ್ರಿ.

ಮೊನ್ನೆ ಯುಗಾದಿ ವೇಳ್ಯಾದಾಗನೂ ಪ್ರತಿ ತಿಂಗಳ ಬರೋ ಹಂಗ ಇವರದ ಮೆಸೆಜ್ ಬಂದ್ವು, ಮುಂದ ಒಂದ ವಾರ ಬಿಟ್ಟ ಮತ್ತ ಬ್ಯಾರೆ ಸೆಟ್ ಆಫ್ ಮೆಸೆಜ್ ಬಂದ್ವು. ನಾ ಬಹುಶಃ ಲಿಸ್ಟ ಆಫ್ ಫೆಸ್ಟಿವಲ್ಸ್ ಏನರ ದೇಸಾಯರೂ ತಮ್ಮ ಅನಕೂಲದ ಪ್ರಕಾರ ರಿವೈಸ ಮಾಡಿರಬೇಕ ಇಲ್ಲಾ ನಮಗ ಮತ್ತ ರಿಮೈಂಡ ಮಾಡ್ತಿರಬೇಕ ತಡಿ ಅಂತ ನೋಡಿದರ ಆ ಮೆಸೆಜ ಒಳಗ
1- ವೈಶಾಕಮಾಸ, ಶುಕ್ಲ್ ಪಕ್ಷ , ತದಗಿ, ಮಂಗಳವಾರ, ದಿನಾಂಕ ೨೫.೦೪.೨೦೧೨ ಅಪ್ಪನ ಶ್ರಾದ್ಧ
2- ಆಶಾಡಮಾಸ, ಕೃಷ್ಣ ಪಕ್ಷ, ಚತುರ್ಥಿ,ಶನಿವಾರ, ದಿನಾಂಕ ೦೭.೦೭.೨೦೧೨ ಅವ್ವನ ಶ್ರಾದ್ಧ
3- ಅಧಿಕಮಾಸ, ಶುಕ್ಲ್ ಪಕ್ಷ್, ಸಪ್ತಮಿ, ಶುಕ್ರವಾರ ದಿನಾಂಕ ೨೪.೦೮.೨೦೧೨ ದೊಡ್ಡಪ್ಪನ ಶ್ರಾದ್ಧ
ಈ ಶ್ರಾದ್ಧ ಅಧಿಕಮಾಸದಾಗ ಬಂದಿರೋದರಿಂದ ಮತ್ತ ಭಾದ್ರಪದ ಮಾಸ, ಶುಕ್ಲ ಪಕ್ಷ್, ಸಪ್ತಮಿ,ಶನಿವಾರ ದಿನಾಂಕ ೨೨.೦೯.೨೦೧೨ಕ್ಕ ನಿಜದಾಗ ಶ್ರಾದ್ಧ ಮಾಡಬೇಕು.
4- ಪಕ್ಷಮಾಸದಾಗ, ತದಗಿ, ಸೋಮವಾರ, ದಿನಾಂಕ ೦೩.೧೦.೨೦೧೨ ಅಪ್ಪನ ಪಕ್ಷ ಇದ ಮಾಸದಾಗ ಮುಂದ
ಸಪ್ತಮಿ, ಶುಕ್ರವಾರ ದಿನಾಂಕ ೦೭.೧೦.೨೦೧೨ ದೊಡ್ಡಪ್ಪನ ಪಕ್ಷ, ಎರಡು ಬ್ಯಾರೆ ಬ್ಯಾರೆ ಮಾಡಬೇಕು.
5 – ಮುಂದ ಈದ ಮಾಸದಾಗ ನವಮಿ ತಿಥಿ, ರವಿವಾರ, ದಿನಾಂಕ ೦೯.೧೦.೨೦೧೨ ದಿವಸ ಅಬಚಿದ ಅವಿಧಾನವಮಿ,
6- ದಿನಾಂಕ ೧೫.೧೦.೨೦೧೨ ಮಹಾಲಯ ಅಮವಾಸ್ಯೆ. ಇನ್ನ ಉಳಿದ ಅಳಿದ ಎಲ್ಲಾ ನಮ್ಮ ಮನೆತನದ ಹಿರಿಯರ ಪಕ್ಷ್
ಅಂತ ಅವರ ಪೂರ್ವಜರ ಶ್ರಾದ್ಧ ಕರ್ಮಾದಿಗಳ ಲಿಸ್ಟ ಇತ್ತ. ನಾ ಅದನ್ನ ಓದಿ ಗಾಬರಿ ಆದೆ. ಅಲ್ಲಾ ಅವರ ಅಣ್ಣ ತಮ್ಮಂದರು, ಅವರ ಮಕ್ಕಳು ಅವರ ಪೂರ್ವಜರ ಶ್ರಾದ್ಧ ಮಾಡ್ತಾರೋ ಇಲ್ಲೊ ನಮಗಂತೂ ಗೊತ್ತಿಲ್ಲಾ. ಮತ್ತ ನಮಗೇಲ್ಲರ ನೀವೂ ಅವರಜೊತಿ ಇಲ್ಲಾ ಅವರ ಬದ್ಲಿ ಮಾಡ್ರಿ ಅಂತ ಕಳಸ್ಯಾರೇನ ಅನಸ್ತು.

ಅಲ್ಲಾ, ಇಲ್ಲೇ ನಮಗ ಸತ್ತ ನಮ್ಮ ಅಜ್ಜಾ-ಅಜ್ಜಿದ ಶ್ರಾದ್ಧ ಮಾಡೋದ ರಗಡ ಆಗೇದ, ಅದರಾಗ ನಮ್ಮ ಒಬ್ಬಕಿ ಅಜ್ಜಿ (ನಮ್ಮವ್ವನ ಅವ್ವ) ಅಂತೂ ಸತ್ತರ ಮಕ್ಕಳು-ಮೊಮ್ಮಕ್ಕಳು ಶ್ರಾದ್ಧ ಮಾಡೋದ ಗ್ಯಾರಂಟೀ ಇಲ್ಲಾ ಅಂತ ತನ್ನ ಜೀವಾ ಮೂರ ವರ್ಷದಿಂದ ಗಟ್ಟೆ ಹಿಡಕೊಂಡ ಕೂತಾಳ, ಇನ್ನ ಹಿಂತಾದರಾಗ ನಾವು ದೇಸಾಯರ ಪೂರ್ವಜರಿಗೂ ನೀರ ಬಿಡಬೇಕಿನಪಾ ಅಂತ ನಂಗ ಖರೇನ ತಲಿಕೆಡತ. ನಾವ ಹಂಗ ಅವರ ಕಳಸಿದ್ದ ಲಿಸ್ಟ ಫಾಲೋ ಮಾಡ್ತೇವಿ ಅಂತ ಈ ಪರಿ ಮಾಡೋದ ಅಂತ ನಾ ತಲಿ ಕೆಟ್ಟ ಅವರಿಗೆ ಫೋನ ಹಚ್ಚೆ ಬಿಟ್ಟೆ. ಅವರ ಫೊನ ಎತ್ತಿದವರ  “ನಮಸ್ಕಾರ್ರಿಪಾ, ಏನಂತರಿ? ಹೃಷಿ ಮನ್ಯಾಗ ಇಲ್ಲಾ, ಪ್ರೆಸಮೀಟಗೆ ಊಟಕ್ಕ ಹೋಗ್ಯಾನ್ರಿಪಾ” ಅಂದರು.
“ಏ, ಅಂವಾ ಎಲ್ಲರ ಹಾಳಗುಂಡಿ ಹೋಗವಲ್ನಾಕ ತೊಗೊಳ್ರಿ, ನಂಗ ನಿಮ್ಮ ಕಡೆನ ಮಾತಾಡಬೇಕಿತ್ತು” ಅಂದೆ.  ನಾ ಒಂದ ಸ್ವಲ್ಪ ಗರಮ ಆಗಿದ್ದ ನೋಡಿ ಅವರ
“ಯಾಕ ನಂದ ಈ ತಿಂಗಳದ್ದ sms ಲಿಸ್ಟನಾಗ ಏನರ ತಪ್ಪ ಅದ ಏನ್ರೀಪಾ” ಅಂದ್ರು. ಲಿಸ್ಟನಾಗ ಏನ ತಪ್ಪ ಇಲ್ಲಾ, ನೀವು ಲಿಸ್ಟ ಕಳಸೋದ ದೊಡ್ಡ ತಪ್ಪ ಅನ್ನೊವ ಇದ್ದೆ, ಹೋಗಲಿ ಬಿಡ ಅಂತ
“ಏ, ಲಿಸ್ಟ ಬಂದದರಿ ಅದರ ಪ್ರಕಾರನ ನಮ್ಮವ್ವನ್ವು ಮನ್ಯಾಗ ಹಬ್ಬ-ಹುಣ್ಣಮಿ ನಡದಾವ. ನೀವೇನ ಈ ಸರತೆ ನಿಮ್ಮ ಪೈಕಿ ಮಂದಿದ ಶ್ರಾದ್ಧದ ಲಿಸ್ಟು ಕಳಸಿರೇಲಾ, ನಂಬದೇನ ಮನಿನೋ ಏನ ರಾಯರ ಮಠಾನೋ ಕಂಡ-ಕಂಡೋರದ ಶ್ರಾದ್ಧ ಮಾಡಲಿಕ್ಕೆ” ಅಂದೆ.
“ಏ,ಆ sms ನಿಮಗು ಬಂದದೇನ, ಸ್ವಾರಿರಿಪಾ, ನಾ ನಮ್ಮ ಅಣ್ಣ-ತಮ್ಮಂದರಿಗೆ ಯುಗಾದಿ ಆದಮ್ಯಾಲೆ ವರ್ಷಕ್ಕೊಮ್ಮೆ ಆ ವರ್ಷದಾಗಿನ ನಮ್ಮ ಪೂರ್ವಜರ ಶ್ರಾದ್ಧದ್ದ ಲಿಸ್ಟ ಕಳಸತಿರತೇನಿ, ಹಂಗ ಕಳಸಬೇಕಾರ ತಪ್ಪಿ ನಿಮಗು ಬಂದಿರಬೇಕು, ಅದರಾಗ ಆಡೂರ ಅಂದ ಕೂಡಲೇ ಫೊನಬುಕ್ಕಿನಾಗ ನಿಮ್ಮ ಹೆಸರ ಫಸ್ಟ ಬಂದ ಬಿಡ್ತದ, ತಪ್ಪಿ ಬಂದದ ತೊಗೊಳ್ರಿಪಾ” ಅಂತ ಹಾನಗಲ್ ಸ್ಟೈಲದಾಗ ನಕ್ಕರು. ಆದರ ನಾ ಏನ ನಗಲಿಲ್ಲಾ.

ಮುಂದ ನಾ ಒಂದ ಸ್ವಲ್ಪ ಶಾಂತ ಆಗಿ, ಪಾಪ, ದೇಸಾಯರು ಏನೋ ದಕ್ಷಿಣಿ ಇಲ್ಲದ ತಿಂಗಳಿಗೊಮ್ಮೆ ಎಲ್ಲಾ ಹಬ್ಬದ್ದ ಡೇಟ, ತಿಥಿ, ಒಳ್ಳೆ ದಿವಸದ್ದ ಲಿಸ್ಟ ಮಾಡಿ ಕಳಸ್ತಾರ ಯಾಕ ಸುಮ್ಮನ ಇನ್ನ ಸಿಟ್ಟಾಗಿ ಅದನ್ನ ಬಂದ ಮಾಡಿಸಿಗೋಳೋದು. ಮತ್ತ ಅದೇನರ ಬಂದ ಆದರ ನಮ್ಮವ್ವ ನನ್ನ ಬಿಡಂಗೇಲಾ, ಹೆಂಗಿದ್ದರು ಔಟ ಗೋಯಿಂಗ ಮೆಸೆಜ ಅವರದ ಅಲಾ ಅಂತ ಸುಮ್ಮನಾಗಿ
“ಅಲ್ಲರೀ, ನಿಮ್ಮ ಆ ತಿಂಗಳಾ ಕಳಸೊ sms ನಿಮ್ಮ ಮಗಗು ಸ್ವಲ್ಪ ಕಳಸರಿ, ಆ ಮಗಾ ನಿಮ್ಮ ಮನ್ಯಾಗ ಏಕಾದಶಿ ಇದ್ದಾಗ ಮಂದಿ ಮನ್ಯಾಗ ಊಟಾ ಮಾಡಿ ಬಂದಿರತಾನ, ಒಪ್ಪತ್ತ ಇದ್ದಾಗ ಹೊಟೇಲನಾಗ ತಿಂದ ಬಿಟ್ಟಿರತಾನ, ಪಕ್ಷಕ್ಕ ಐದಾನವಮಿಗೆ ಫರಕ ಗೊತ್ತಿಲ್ಲಾ, ಮೊನ್ನೆ ನಮ್ಮ ಅಜ್ಜನ ಐದಾನವಮಿ ಅದ ಅನ್ನಲಿಕತ್ತಿದ್ದಾ, ಅವಂಗ ಐದಾನವಮಿ ಹೆಣ್ಣ ಮಕ್ಕಳದಿಷ್ಟ ಮಾಡತಾರ ಅಂತ ತಿಳಿಸಿ ಹೇಳ್ರಿ” ಅಂದೆ.
“ಏ, ಏನ್ಮಾಡೊದಿರಿಪಾ, ಅಂವಾ ಕೆಲಸಾ ಮಾಡೋದ ಇಷ್ಟ ‘ಹಿಂದು’ದಾಗ, ಅದನ್ನ ಬಿಟ್ಟರ ಬ್ಯಾರೆ ಯಾ ಹಿಂದು ಪದ್ಧತಿನು ಅವಂಗ ಗೊತ್ತಿಲ್ಲಾ, ನಮ್ಮಂದ್ಯಾಗ ತಪ್ಪಿ ಹುಟ್ಟ್ಯಾನ. ಈಗಿನ ಜನರೇಶನ್ ಹುಡುಗರ ಹಿಂಗ. ಹಿಂಗಾಗೆ ನಾ ನಿಮ್ಮಂತಾವರಿಗೆಲ್ಲಾ ಹಬ್ಬ-ಹುಣ್ಣಮಿ, ಶ್ರಾದ್ಧ, ಪಕ್ಷದ್ದ ಡೇಟ ಕಳಸೋದು” ಅಂತ ಭಾಳ ಮನಸಿ ಹಚಗೊಂಡ ಹೇಳಿದ್ರು. ಪಾಪ, ಹಿಂತಾ ರಿಲಿಜಿಯಸ ಮನಷ್ಯಾಗ ಹಂತಾ ಸೆಕ್ಯುಲರ ಮಗಾ ಹುಟ್ಟಬಾರದಿತ್ತು ಅಂತ ನಾನು ಕೆಟ್ಟ ಅನಿಸಿಕೊಂಡ ಫೊನ ಇಟ್ಟೆ.
ಅದೇನ ಆಗಿತ್ತಂದರ ಒಂದ ಸರತೆ ಈ ದೇಸಾಯರ ಅಪ್ಪನ ಶ್ರಾದ್ಧ ಇದ್ದಾಗ, ಅವರ ಗೋವಾ ತಮ್ಮ ಒಂದ ದಿವಸ, ಪುಣಾದ ಅಣ್ಣ ಒಂದ ದಿವಸ, ಇವರ ಒಂದ ದಿವಸ ಅಂತ ಮೂರ ಮಂದಿ ಅಣ್ಣಾ-ತಮ್ಮ ಮೂರ-ಮೂರ ದಿವಸ ಶ್ರಾದ್ಧ ಮಾಡಿದ್ದರಂತ. ಹಿಂಗ ಒಂದ ಶ್ರಾದ್ಧಕ್ಕ ಮೂರ-ಮೂರ ಸರತೆ ತಮ್ಮ ಅಪ್ಪನ್ನ, ಪೂರ್ವಜರನ್ನ ಕರಸೋದ ಸರಿ ಅನಸಂಗಿಲ್ಲಾ, ಮೊದ್ಲ ತುಟ್ಟಿ ಕಾಲ ಅಂತ ಇವರು ಆವಾಗಿಂದ ತಮ್ಮ ಅಣ್ಣ ತಮ್ಮಂದರಿಗೆ ಶ್ರಾದ್ಧದ್ದ ಡೇಟ್ ಅಡ್ವಾನ್ಸ sms ಮಾಡ್ತಿದ್ದರಂತ. ಅದು ತಪ್ಪಿ ನನಗು ಬಂದಿತ್ತು. ಪುಣ್ಯಾ ಅದನ್ನ ನಮ್ಮವ್ವ ನೋಡಿದ್ದಿಲ್ಲಾ ಇಲ್ಲಾಂದರ ‘ಹಿರೇ ಮನಷ್ಯಾರ ತೊಗೊ, ನಾವು ಮಾಡಿದರು ತಪ್ಪೇನಿಲ್ಲಾ’ ಅಂತ ಅವರಿಗೆಲ್ಲಾರಿಗೂ ನೀರ ಬಿಟ್ಟ ಬಿಡತಿದ್ಲೇನೋ!

ಮುಂದಿನ ತಿಂಗಳ ಮತ್ತ sms ಬಂತ, ಆ ಸರತೆ ಹಬ್ಬ-ಹುಣ್ಣಮಿ ಲಿಸ್ಟ ಇಷ್ಟ ಇತ್ತ. ಸಮಾಧಾನ ಆತ. ನಾ ತಿರುಗಿ ಅವರಿಗೆ ಫಸ್ಟ ಟೈಮ್ ಒಂದ ರಿಪ್ಲೈ ಕೊಟ್ಟೆ thanks ಅಂತ. sms ಕಳಸಿದ್ದಕ್ಕಲಾ, ಶ್ರಾದ್ಧ-ಪಕ್ಷದ್ದ ಲಿಸ್ಟ ಅದರ ಜೊತಿಗೆ ಅಟ್ಟ್ಯಾಚ ಮಾಡಲಾರದಕ್ಕ.
ಆದರ ನಂಗ ಒಮ್ಮೊಮ್ಮೆ ಅನಸ್ತದ ಇನ್ನೊಂದ ಸ್ವಲ್ಪ ವರ್ಷಕ್ಕ ಖರೇನ ನಮಗ ಹಬ್ಬಾ-ಹುಣ್ಣಮಿ-ತಿಥಿ ಇವನ್ನೇಲ್ಲಾ ಯಾರರ ರಿಮೈಂಡ ಮಾಡೋ ಕಾಲ ಬರ್ತದ ಏನೋ ಅಂತ, ಈಗ ಹಿಂಗ ಆಗಿರತದಲಾ ನಾ ಮನ್ಯಾಗ ಒಮ್ಮೊಮ್ಮೆ ದಾಡಿ ಮಾಡ್ಕೋಬೇಕ ಅಂತ ರೆಡಿ ಆಗಿ ಗಲ್ಲಕ್ಕ ಸಬಕಾರದ ಬುರಗ ಹಚಗೊಂಡ ಇನ್ನೇನ ಬ್ಲೇಡ್ ಹಚ್ಚ ಬೇಕು ಅನ್ನೋದರಾಗ ನಮ್ಮವ್ವಾ ಅಡರಿಸಿಕೊಂಡ ಅಡಗಿ ಮನ್ಯಾಗಿಂದ ಬಂದ ‘ನಿಂಗ ಬುದ್ಧಿ ಗಿದ್ದಿ ಅದ ಇಲ್ಲೋ, ಇವತ್ತ ಹುಣ್ಣಮಿ, ದಾಡಿ ಮಾಡ್ಕೋಬಾರದು. ತಿಳಿಯಂಗಿಲ್ಲಾ’ ಅಂತ ಬೈಯೋಕಿ, ಕೆಲವೊಮ್ಮೆ ಅಂತೂ ನಾ ಅಕಿ ಬಂದ ಇವತ್ತ ಹಬ್ಬಾ-ಹುಣ್ಣಮಿ ಅಂತ ಹೇಳೋದರಾಗ ಅರ್ಧಾ ಮಿಸಿ ತಕ್ಕೊಂಡ ಬಿಟ್ಟಿರತೇನಿ, ಕಡಿಕೆ ಅಕಿ ತಲಿ ಕೆಟ್ಟ ‘ಏನ್ ಸುಡಗಾಡ ಹುಡುಗರೋ ಏನೋ, ಹಬ್ಬಾ-ಹುಣ್ಣವಿ ಅಂತ ಒಂದು ಗೊತ್ತಾಗಂಗಿಲ್ಲಾ, ಬ್ರಾಹ್ಮರಾಗ ತಪ್ಪಿ ಹುಟ್ಟ್ಯಾವ’ ಅಂತ ನನ್ನ ಮಾರಿಗೆ ದೂರಿಂದ ತಿವದು ಹೋಗೊಕಿ. ಹಿಂತಾ ಕಾಲದಾಗ ದೇಸಾಯರಂತಾ ಹಿರೇಮನಷ್ಯಾರ ನಮ್ಮಂತಾ ಜನರೇಶನಗೆ sms ಕಳಸಿಗೋತ ಇದ್ದರರ ನಾವ ಅಲರ್ಟ್ ಇರತೇವೇನೋ ಅಂತ ಅನಸ್ತದ.

ಕಾಲ-ಕಾಲಮಾನ ಎಲ್ಲಾ ಬದಲಾಗಲಿಕತ್ತದ, ಅದರ ಜೊತಿಗೆ ನಮ್ಮ ಸಂಪ್ರದಾಯ, ಪದ್ಧತಿ, ನಮ್ಮ ನಡುವಳಿಕೆ ಎಲ್ಲಾ ಬದಲಾಗಲಿಕತ್ತಾವ. ಯಾವದನ್ನ ನಾವು ಗ್ರೌಥ್ ಅಂತೇವಿ ಅದನ್ನ ನಮ್ಮ ಹಿರಿಯರು ‘ಹೆಂತಾ ಹಣೇಬರಹಪಾ,ಏನ ಕಾಲ ಬಂತಪಾ’ ಅಂತ ಹಣಿ-ಹಣಿ ಬಡ್ಕೋಳಿಕತ್ತಾರ. ಇವತ್ತ ನಾವ ಇರೋ ಜನರೇಶನ ಟ್ರಾನ್ಸಿಶನ್ ಪಿರಿಯಡ ಒಳಗ ಅದ, ಮುಂದಿನ ಪೀಳಿಗೆಗ ಯಾವ ವ್ಯಾಲ್ಯುಸ್ ಪಾಸ ಮಾಡಬೇಕು ಯಾವದ ಇಲ್ಲಾ ಅನ್ನೋದ ನಮ್ಮ ವಿವೇಚನೆಗೆ ಮತ್ತ ನಮ್ಮ ಜವಾಬ್ದಾರಿಗೆ ಬಿಟ್ಟಿದ್ದ.
ಹಿಂಗಾಗಿ ನಾ ಕಡಿಕೆ ವ್ಯಾಲ್ಯೂಸ ಇಲ್ಲಾಂದರು ಈ ದೇಸಾಯರ smsರ ಮುಂದಿನ ಜನರೇಶನಗೆ ಪಾಸ ಮಾಡಿ ಪುಣ್ಯಾ ಕಟಗೋ ಬೇಕು ಅಂತ ಡಿಸೈಡ ಮಾಡೇನಿ. ನಿಮಗು ಯಾರಿಗರ sms ಪಂಚಾಂಗ ಬೇಕಾರ ಹೇಳ್ರಿ ನಾ ದೇಸಾಯರ sms forward ಮಾಡ್ತೇನಿ ಇಲ್ಲಾ ನಿಮ್ಮ ನಂಬರ ದೇಸಾಯರಿಗೆ ಕೊಡ್ತೇನಿ, ಅಂದ್ರ ಅವರ ತಿಂಗಳಾ – ತಿಂಗಳಾ ತಪ್ಪದ ಕಳಸ್ತಾರ. ಏನಂತೀರಿ?