”ವಾಸ್ತವ ಮಾರ್ಗದ ಜಾಡಿನಲ್ಲಿ ಭೂತ-ವರ್ತಮಾನ, ಪರಂಪರೆ-ಆಧುನಿಕತೆ, ಪುರಾಣ-ಇತಿಹಾಸ, ನಂಬಿಕೆ-ವೈಚಾರಿಕತೆಗಳನ್ನು ಒಟ್ಟಾಗಿ ಪರೀಕ್ಷೆಗೆ ಒಳಪಡಿಸಿರುವುದು ಉಲ್ಲೇಖನೀಯ ಸಂಗತಿ. ನದಿಮೂಲ, ಋಷಿಮೂಲ ಹುಡುಕಬಾರದೆಂಬ ಮಾತಿಗೆ ಜನಾರ್ಧನ ಭಟ್ಟರು ದೈವಮೂಲವನ್ನೂ ಸೇರಿಸಿಬಿಡುತ್ತಾರೆ. ಜನರ ನಂಬಿಕೆಗಳ ಬೇರನ್ನೇ ಅಲುಗಾಡಿಸುವ ಇಂತಹ ವಿಚಾರಗಳು ಓದುಗನನ್ನು ಸಂವಾದಕ್ಕೆ ಆಹ್ವಾನಿಸುತ್ತವೆ.ಜನತೆಯ ಬದುಕಿನ ಜೀವಂತ ಚಟುವಟಿಕೆಗಳನ್ನು ಆಕರಗಳನ್ನಾಗಿ ಬಳಸಿಕೊಂಡು ಸಂಶೋಧನೆ ನಡೆಸುವವರು ಲೋಕವಿರೋಧಿಯಾಗಬಾರದೆಂಬ ನಿಲುವನ್ನು ಈ ಕಾದಂಬರಿ ಪ್ರಕಟಿಸುತ್ತದೆ”
ಬಿ.ಜನಾರ್ದನ ಭಟ್ಟರ ಕಾದಂಬರಿಯ ಕುರಿತು ಡಾ. ಎಚ್.ಎಸ್.ಸತ್ಯನಾರಾಯಣರ ಬರಹ.

 

ಕನ್ನಡದ ಬಹುಮುಖ ಪ್ರತಿಭೆಯ  ಡಾ. ಬಿ. ಜನಾರ್ಧನ ಭಟ್ಟರು ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಕಾದಂಬರಿಕಾರರೆಂದೂ, ಕಥೆಗಾರರೆಂದೂ, ವಿಮರ್ಶಕರೆಂದೂ, ಅಂಕಣಕಾರರೆಂದೂ, ಒಳ್ಳೆಯ ಪ್ರಾಧ್ಯಾಪಕರೆಂದೂ ಪ್ರಸಿದ್ಧರಾಗಿದ್ದಾರೆ.  ಜನಾರ್ಧನ ಭಟ್ಟರು ತಮ್ಮ ‘ಉತ್ತರಾಧಿಕಾರ’ ಎಂಬ ಚೊಚ್ಚಲ ಕಾದಂಬರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದರು. ಇದರೊಂದಿಗೆ ‘ಹಸ್ತಾಂತರ’, ‘ಅನಿಕೇತನ’, ‘ಮೂರುಹೆಜ್ಜೆ’, ‘ಮೂರುಭೂಮಿ’ ಎಂಬ ನಾಲ್ಕು ಕಾದಂಬರಿಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಪ್ರಸ್ತುತ ಇವರ ಹೊಸ ಕಾದಂಬರಿ “ಕಲ್ಲು ಕಂಬವೇರಿದ ಹುಂಬ” ಈ ಸಾಲಿಗೆ ಹೊಸ ಸೇರ್ಪಡೆ.

ಕೇವಲ ಹದಿನೈದು ದಿನಗಳಲ್ಲಿ ಈ ಕಾದಂಬರಿಯನ್ನು ಭಟ್ಟರು ಬರೆದಿದ್ದಾರೆ, ಅಥವಾ ಕಾದಂಬರಿಯೇ ಬರೆಸಿಕೊಂಡಿದೆ! “ನಾಲ್ಕು ಪ್ರಾದೇಶಿಕ ಕಾದಂಬರಿಗಳನ್ನು ಬರೆದ ಮೇಲೆ ಹೊಸ ಬಗೆಯ ಕಾದಂಬರಿಯೊಂದನ್ನು ಬರೆಯಬೇಕು, ರೂಢಿಯಾಗಿಬಿಟ್ಟ ಜಾಡನ್ನು ಬಿಟ್ಟು ಹೊಸದಾರಿಯನ್ನು ಹಿಡಿಯಬೇಕೆನ್ನುವ ತುಡಿತವಿತ್ತು” ಎಂಬುದಾಗಿ ಜನಾರ್ಧನ ಭಟ್ಟರು ಈ ಕಾದಂಬರಿ ರಚನೆಯ ಉದ್ದೇಶವನ್ನು ತಿಳಿಸುತ್ತಾ ಬರೆದುಕೊಂಡಿದ್ದಾರೆ. ಅಲ್ಲದೆ, ಕೆಲವು ಸಮಯದಿಂದ ಮನಸ್ಸಿನಲ್ಲಿ ರೂಪುಗೊಳ್ಳುತ್ತಿದ್ದ ವಸ್ತುವೊಂದು ಈ ಕಾದಂಬರಿಯಾಗಿ ಆಕೃತಿ ಪಡೆಯಲು ತರಂಗದ ‘ಮಿನಿ ಕಾದಂಬರಿ’ ಸ್ಪರ್ಧೆಯ ಆಹ್ವಾನ ಕಾರಣವಾಗಿ, ಹದಿನೈದು ದಿನಗಳಲ್ಲಿ ಭಟ್ಟರು ‘ಕಲ್ಲು ಕಂಬವೇರಿದ ಹುಂಬ’ ಬರೆದರಲ್ಲದೆ, ಪ್ರಥಮ ಬಹುಮಾನವನ್ನೂ ಗಳಿಸಿದರು. ನಿಜವಾಗಿಯೂ ಇದು ರೂಢಿಗತ ಜಾಡಿನಿಂದ ದೂರಸರಿದು ಭಿನ್ನ ಹೊಸದಾರಿಯ ಬರವಣಿಗೆ ಎಂಬುದು ಮೊದಲ ಓದಿಗೇ ಅನುಭವಕ್ಕೆ ಬರುವ ಹೊಸತನದಿಂದ ಕೂಡಿದೆ.

(ಬಿ. ಜನಾರ್ಧನ ಭಟ್)

ಅಪ್ಪಟ ಪ್ರಾದೇಶಿಕ ವಸ್ತು, ಪಾತ್ರಗಳಿಗೆ ಒತ್ತುಕೊಟ್ಟು ಕಥೆ-ಕಾದಂಬರಿಗಳನ್ನು ಬರೆಯುತ್ತ ಬಂದಿರುವ ಭಟ್ಟರು ತಮ್ಮ ಸೃಜನಶೀಲ ಕೃತಿಗಳಲ್ಲಿ ಗ್ರಾಮೀಣ ಜೀವನ ದರ್ಶನವನ್ನು ಸಶಕ್ತವಾಗಿ ಕಲಾತ್ಮಕವಾಗಿ ದಾಖಲಿಸುತ್ತಾರೆ. ಸಾಂದ್ರ ಜೀವನಾನುಭವ, ವ್ಯಾಪಕ ಓದು, ಅಧ್ಯಯನಗಳನ್ನು ಮೈಗೂಡಿಸಿಕೊಂಡು ಲೋಕ ಜೀವನದ ಭಾವಾಲಾಪಗಳನ್ನು ಒಂದು ಶಿಸ್ತಿಗೆ ಒಳಪಡಿಸಿ, ಅವುಗಳನ್ನು ಜೀವನಧರ್ಮವಾಗಿ ಪರಿವರ್ತಿಸಿ ನೋಡಬಲ್ಲ ಸೃಜನಶೀಲ ಮನಸ್ಸು ಬಿ. ಜನಾರ್ಧನ ಭಟ್ ಅವರದ್ದು. ಹೀಗಾಗಿಯೇ ಅವರ ಎಲ್ಲ ಬರವಣಿಗೆಯಲ್ಲೂ ಜೀವನವನ್ನು ಶೋಧಿಸುವ ಉತ್ಸಾಹ ಪುಟಿಯುತ್ತಿರುತ್ತವೆ.

‘ಕಲ್ಲು ಕಂಬವೇರಿದ ಹುಂಬ’ ಮಿನಿ ಕಾದಂಬರಿಯಾಗಿದ್ದರೂ ಬಹುಆಯಾಮವುಳ್ಳ ಕೃತಿಯಾಗಿದೆ. ದೇವಾಲಯ ನಗರದಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎತ್ತರದ ಧ್ವಜಸ್ತಂಭವೊಂದಿದ್ದು ಇದರ ಬಗ್ಗೆ ಈಗಾಗಲೇ ಎರಡು ಸಂಶೋಧನಾ ಲೇಖನಗಳು ಮಂಡಿತವಾಗಿರುತ್ತವೆ. ಮೊದಲ ಸಂಶೋಧನೆಯು ಈ ಧ್ವಜಸ್ಥಂಭವು ಜೈನಪರಂಪರೆಗೆ ಸೇರಿದ್ದೆಂದು ಪ್ರತಿಪಾದಿಸಿದರೆ, ಎರಡನೆಯದು ಶೈವ ಪರಂಪರೆಗೆ ಸೇರಿದ್ದೆಂದು ಪ್ರತಿಪಾದಿಸುತ್ತದೆ. ಇದರ ನಡುವೆ ಮೂರನೆಯ ವಾದವೊಂದು ಹುಟ್ಟಿಕೊಳ್ಳುತ್ತದೆ. ಇದನ್ನು ವಾದ ಎಂದು ಕರೆಯುವುದಕ್ಕಿಂತ ‘ವಿವಾದ’ ಎನ್ನುವುದೇ ಸರಿ! ಈ ಕಂಬದ ಮೇಲೆ ಹುಂಬನೊಬ್ಬ ಕುಣಿದು ಏನನ್ನೋ ಹೇಳಿದ. ಆತನೀಗ ದೈವತ್ವಕ್ಕೇರಿದ್ದಾನೆ” ಎಂಬ ಮೂರನೆಯ ವಾದವು ಹುಟ್ಟಿಕೊಂಡು, ಇದು ಸಮಾಜದ ಸ್ವಾಸ್ಥ್ಯವನ್ನು ಕದಡುವವರೆಗೂ ಹೋಗುತ್ತವೆ. ದೇವಸ್ಥಾನದ ಕಲ್ಲುಕಂಬದ ಮೇಲೆ ನಿಂತು ಕುಣಿದ ಹುಂಬನೇ ಇಂದು ಗೊಡ್ಡಣ್ಣ ದೈವವಾಗಿ ಕಲ್ಲುಪಾಡಿಯಲ್ಲಿ ಆರಾಧನೆಗೊಳ್ಳುತ್ತಿದ್ದಾನೆ. ಲ್ಯಾಲೊಟ್ಟು, ಪಿಂಚಾಡಿಗಳಲ್ಲೂ ಈ ದೈವದ ಗುಡಿಗಳಿವೆ. ಈ ಊರುಗಳ ಜನರಿಗೆ ಈ ದೈವದ ಬಗ್ಗೆ ಕುತೂಹಲ, ಭಕ್ತಿ ಎಲ್ಲವೂ ಇರುವುದರಿಂದ ಗುಡಿಯ ಜೀರ್ಣೋದ್ಧಾರಕ್ಕೂ ಮುಂದಾಗುತ್ತಾರೆ.

‘ಕಲ್ಲು ಕಂಬವೇರಿದ ಹುಂಬ’ ಮಿನಿ ಕಾದಂಬರಿಯಾಗಿದ್ದರೂ ಬಹುಆಯಾಮವುಳ್ಳ ಕೃತಿಯಾಗಿದೆ. ದೇವಾಲಯ ನಗರದಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎತ್ತರದ ಧ್ವಜಸ್ತಂಭವೊಂದಿದ್ದು ಇದರ ಬಗ್ಗೆ ಈಗಾಗಲೇ ಎರಡು ಸಂಶೋಧನಾ ಲೇಖನಗಳು ಮಂಡಿತವಾಗಿರುತ್ತವೆ. ಮೊದಲ ಸಂಶೋಧನೆಯು ಈ ಧ್ವಜಸ್ಥಂಭವು ಜೈನಪರಂಪರೆಗೆ ಸೇರಿದ್ದೆಂದು ಪ್ರತಿಪಾದಿಸಿದರೆ, ಎರಡನೆಯದು ಶೈವ ಪರಂಪರೆಗೆ ಸೇರಿದ್ದೆಂದು ಪ್ರತಿಪಾದಿಸುತ್ತದೆ. ಇದರ ನಡುವೆ ಮೂರನೆಯ ವಾದವೊಂದು ಹುಟ್ಟಿಕೊಳ್ಳುತ್ತದೆ. ಇದನ್ನು ವಾದ ಎಂದು ಕರೆಯುವುದಕ್ಕಿಂತ ‘ವಿವಾದ’ ಎನ್ನುವುದೇ ಸರಿ! ಈ ಕಂಬದ ಮೇಲೆ ಹುಂಬನೊಬ್ಬ ಕುಣಿದು ಏನನ್ನೋ ಹೇಳಿದ. ಆತನೀಗ ದೈವತ್ವಕ್ಕೇರಿದ್ದಾನೆ” ಎಂಬ ಮೂರನೆಯ ವಾದವು ಹುಟ್ಟಿಕೊಂಡು, ಇದು ಸಮಾಜದ ಸ್ವಾಸ್ಥ್ಯವನ್ನು ಕದಡುವವರೆಗೂ ಹೋಗುತ್ತವೆ.

ಈ ಸಂದರ್ಭದಲ್ಲಿ ಬಿ. ಎಸ್. ವಿಡಂಗ ಎಂಬ ಪ್ರಖ್ಯಾತ ಸಂಶೋಧಕ ಮತ್ತು ವಾಗ್ಮಿಯು ಗೊಡ್ಡಣ್ಣ ದೈವದ ಬಗೆಗೆ ಅನೇಕ ಹೊಸಸಂಗತಿಗಳನ್ನು ಶೋಧಿಸಿ ಲೋಕಮುಖಕ್ಕೆ ಪರಿಚಯಿಸುತ್ತಾನೆ. ಮತ್ತೋರ್ವ ಹಿರಿಯ ಜಾನಪದ ಸಂಶೋಧಕನಾದ ದೊಮ್ಮಪ್ಪ ಸುಂಕ್ರಬೈಲ್ ವಿಡಂಗನ ವಾದವನ್ನು ನಿರಾಕರಿಸುವುದಕ್ಕಾಗಿಯೇ ಪತ್ರಿಕಾಗೋಷ್ಠಿ ಕರೆದು ಗೊಡ್ಡಣ್ಣ ದೈವದ ಬಗೆಗೆ ತನ್ನದೇ ಆದ ಸ್ವಾರಸ್ಯಪೂರ್ಣ ವಾದವೊಂದನ್ನು ಮಂಡಿಸುತ್ತಾನೆ. ಬೌದ್ಧಿಕ ವಲಯದಲ್ಲಿರುವ ಗುಣಮಾತ್ಸರ್ಯ, ಜಾತೀಯತೆ, ಅಪಕ್ವ ಸಿದ್ಧಾಂತಪ್ರಿಯತೆ ಮುಂತಾದ ಸಣ್ಣತನಗಳನ್ನು ಕಾದಂಬರಿಕಾರರು ಪರಿಣಾಮಕಾರಿಯಾಗಿ ಚಿತ್ರಿಸುತ್ತಾರೆ. ವಿಡಂಗ ಮಾತನಾಡುತ್ತಿರುವಾಗ ಅಲ್ಲಿ ಹಾಜರಿರಲು ದೂಮಪ್ಪ ಸುಂಕ್ರಬೈಲನ ಅಹಂಕಾರ ಒಪ್ಪುವುದಿಲ್ಲವಾದ ಕಾರಣ ತನ್ನ ಹಿಂಬಾಲಕರಿಂದ ವಿಡಂಗನ ಉಪನ್ಯಾಸವನ್ನು ಧ್ವನಿಮುದ್ರಿಸಿಕೊಳ್ಳುತ್ತಾನೆ. ಇನ್ನೊಂದು ಕಡೆ ಮುಂಬಯಿ ಧಣಿಗೆ ಕೇಳಿಸಲು ಲ್ಯಾಲೊಟ್ಟು ಕುಟ್ಟಪ್ಪನೂ ರೆಕಾರ್ಡ್ ಮಾಡಿಕೊಳ್ಳುತ್ತಾನೆ. ವೈದಿಕ ಧರ್ಮದ ವಿರೋಧಿಗಳೂ ಪರವಾದಿಗಳೂ ವಿಡಂಗ ತನ್ನ ಉಪನ್ಯಾಸದಲ್ಲಿ ಯಾರ ಪರವಾಗಿ ನಿಲ್ಲುತ್ತಾನೆಂದು ನೋಡಲು, ತಮ್ಮ ಪರವಾಗಿದ್ದರೆ ಚಪ್ಪಾಳೆ ತಟ್ಟಿ ಹುರಿದುಂಬಿಸಲು, ವಿರೋಧವಾಗಿದ್ದರೆ ಜನರನ್ನು ಎತ್ತಿಕಟ್ಟಿ ಗಲಭೆಯೆಬ್ಬಿಸಲು ನಿಯೋಜಿತವಾಗಿರುವವರಿಂದಲೇ ಸಭೆ ತುಂಬಿರುತ್ತದೆ. ಈ ನಾಟಕೀಯ ಸನ್ನಿವೇಶವು ಜಾತಿ, ಧರ್ಮ, ದೇವರು ಕುರಿತ ಸಂಶೋಧನೆಗಳಿಗೆ ಯಾವ ದುರ್ಗತಿ ಕಾದಿರುತ್ತದೆ? ನಮಗರಿವಾಗದಂತೆ ಮೂಲಭೂತವಾದಿಗಳ ‘ಷ್ಯಡ್ಯಂತ್ರ’ ಹೇಗೆ ನಮ್ಮ ಸುತ್ತ ಅಪಾಯದ ಬಲೆ ಬೀಸಿ ಕೂತಿರುತ್ತದೆಂಬುದನ್ನು ಕಾದಂಬರಿಕಾರರ ಸೂಕ್ಷ್ಮ ವಿಡಂಬನೆಯೊಂದಿಗೆ ಮೂಡಿಬಂದು, ನಿಗೂಢತೆಯನ್ನು ಹುಟ್ಟುಹಾಕುತ್ತದೆ. ಇಲ್ಲಿಂದ ಕಾದಂಬರಿಯು ಪತ್ತೆದಾರಿಯ ಸ್ವರೂಪ ಗಳಿಸುತ್ತದೆ.

ವಿಡಂಗ ಮತ್ತು ದೂಮಪ್ಪರ ವಿಚಾರಗಳು ಸರಿಯೋ? ತಪ್ಪೋ? ಎಂದು ನಿರ್ಧಾರ ಮಾಡುವ ಗೋಜಿಗೆ ಹೋಗದೆ, ವಿದ್ವಾಂಸ ವಿಡಂಗನ ಲೇಖನದ ಬಲದ ಕಾರಣವಾಗಿ, ವಾದ-ವಿವಾದಗಳೂ ನೆರವಾಗಿ ಕಲ್ಲುಪಾಡಿಯ ಗೊಡ್ಡಣ್ಣ ದೈವದ ಗುಡಿಯ ಜೀರ್ಣೋದ್ಧಾರದ ಕೆಲಸ ಹೂ ಎತ್ತಿದ್ದಷ್ಟು ಹಗುರವಾಗಿ ನಡೆದು ಹೋಗುತ್ತದೆ. ಈಗ ಲ್ಯಾಲೊಟ್ಟುವಿನಲ್ಲೂ ಗೊಡ್ಡಣ್ಣ ದೈವದ ಗುಡಿಯ ಜೀರ್ಣೋದ್ಧಾರವಾಗಬೇಕಿದೆ. ಲ್ಯಾಲೊಟ್ಟುವಿನ ಕುಟ್ಟಪ್ಪ ತನ್ನ ಜಾತಿಗೊಂದು ದೇವರು ಬೇಕೇಬೇಕೆಂಬ ಮನೋಧರ್ಮದವರ ಪ್ರತಿನಿಧಿಯಂತೆ ಇದ್ದಾನೆ. ಇವನಿಗೆ ಇರುವ ಮುರುಕಲು ಹೊಟೇಲಿನಲ್ಲಿ ಬದುಕನ್ನು ಸವೆಸಲು ದಿನದ ಇಪ್ಪತ್ನಾಲ್ಕು ಗಂಟೆ ಹೆಣಗಾಡುತ್ತಿರುವ ಹೆಂಡತಿಗಿಂತಲೂ ಜಾತಿದೇವರ ಜೀರ್ಣೋದ್ಧಾರ ಮುಖ್ಯ. ದೇವರ ಹೆಸರಿನಲ್ಲಿ ತಮ್ಮ ಹೆಸರನ್ನು ಸದಾ ಚಾಲ್ತಿಯಲ್ಲಿಡಲು ಹಪಹಪಿಸುವ ಪ್ರಚಾರಪ್ರಿಯರು, ಹೆಸರಿಗಾಗಿ ಹಣವನ್ನು ನೀರಿನಂತೆ ಚೆಲ್ಲಬಲ್ಲವರು ಕೊಟ್ಟಪ್ಪನಂತಹವನನ್ನು ಕೈಗೊಂಬೆ ಮಾಡಿಕೊಂಡಿದ್ದಾರೆ. ಇವರಿಗೆ ಪತ್ರಿಕೆಗಳ ರಿಪೋರ್ಟ್ ಬಹಳ ಮುಖ್ಯ! ಮುಂಬಯಿ ಧಣಿಗಳ ಆಜ್ಞೆಯಂತೆ ವಿಡಂಗ ಲೇಖನ ಬರೆದರೆ ತಮ್ಮ ಲ್ಯಾಲೊಟ್ಟುವಿನ ಗೊಡ್ಡಣ್ಣ ದೈವದ ದೇವಾಲಯದ ಜೀರ್ಣೋದ್ಧಾರ ಕಾರ್ಯ ಸುಲಭ ಎಂದು ಭಾವಿಸಿದ ಕುಟ್ಟಪ್ಪ ಆ ಕೆಲಸಕ್ಕಾಗಿ ಪರೋಕ್ಷವಾಗಿ ವಿಡಂಗನಿಗೆ ಹಣದ ಆಮಿಷವೊಡ್ಡುತ್ತಾನೆ. ವಿಡಂಗನಿಗೂ ಸಂಶೋಧನಾಸಕ್ತಿಯಂತೆಯೇ ಅದರ ಮೂಲಕ ಬರುವ ಲೌಕಿಕ ಲಾಭಗಳಲ್ಲೂ ಆಸಕ್ತಿಯಿದೆ. ಆತ ಉಪನ್ಯಾಸಕ್ಕೆ ಸಂಭಾವನೆಯ ಕವರ್ ಪಡೆವ ಪರಿ, ಪೆಟ್ರೊಲ್ ಮತ್ತಿತರ ಖರ್ಚನ್ನು ಕುಟ್ಟಪ್ಪನಿಂದ ವಸೂಲಿ ಮಾಡುವ ಜಾಣ್ಮೆ, ಯಾರದೋ ಖರ್ಚಿನಲ್ಲಿ ತನ್ನ ಸಂಶೋಧನೆಯ ಬೇಳೆಬೇಯಿಸಿಕೊಳ್ಳಬೇಕೆಂಬ ಹೀನಬುದ್ಧಿ -ಎಲ್ಲವನ್ನೂ ಕಾದಂಬರಿಕಾರರು ಸೂಕ್ಷ್ಮವಾಗಿ ಕಾಣಿಸುತ್ತಲೇ ನಮ್ಮ ಸುತ್ತಮುತ್ತಲಿರುವ ಇಂತಹ ವಿದ್ವಜನರ ಬಗ್ಗೆ ಪರೋಕ್ಷವಾಗಿ ಚಾಟಿ ಬೀಸುತ್ತಾರೆ.

ಲ್ಯಾಲೊಟ್ಟುವಿನ ಕುಟ್ಟಪ್ಪ ತನ್ನ ಜಾತಿಗೊಂದು ದೇವರು ಬೇಕೇಬೇಕೆಂಬ ಮನೋಧರ್ಮದವರ ಪ್ರತಿನಿಧಿಯಂತೆ ಇದ್ದಾನೆ. ಇವನಿಗೆ ಇರುವ ಮುರುಕಲು ಹೊಟೇಲಿನಲ್ಲಿ ಬದುಕನ್ನು ಸವೆಸಲು ದಿನದ ಇಪ್ಪತ್ನಾಲ್ಕು ಗಂಟೆ ಹೆಣಗಾಡುತ್ತಿರುವ ಹೆಂಡತಿಗಿಂತಲೂ ಜಾತಿದೇವರ ಜೀರ್ಣೋದ್ಧಾರ ಮುಖ್ಯ. ದೇವರ ಹೆಸರಿನಲ್ಲಿ ತಮ್ಮ ಹೆಸರನ್ನು ಸದಾ ಚಾಲ್ತಿಯಲ್ಲಿಡಲು ಹಪಹಪಿಸುವ ಪ್ರಚಾರಪ್ರಿಯರು, ಹೆಸರಿಗಾಗಿ ಹಣವನ್ನು ನೀರಿನಂತೆ ಚೆಲ್ಲಬಲ್ಲವರು ಕೊಟ್ಟಪ್ಪನಂತಹವನನ್ನು ಕೈಗೊಂಬೆ ಮಾಡಿಕೊಂಡಿದ್ದಾರೆ. ಇವರಿಗೆ ಪತ್ರಿಕೆಗಳ ರಿಪೋರ್ಟ್ ಬಹಳ ಮುಖ್ಯ! ಮುಂಬಯಿ ಧಣಿಗಳ ಆಜ್ಞೆಯಂತೆ ವಿಡಂಗ ಲೇಖನ ಬರೆದರೆ ತಮ್ಮ ಲ್ಯಾಲೊಟ್ಟುವಿನ ಗೊಡ್ಡಣ್ಣ ದೈವದ ದೇವಾಲಯದ ಜೀರ್ಣೋದ್ಧಾರ ಕಾರ್ಯ ಸುಲಭ ಎಂದು ಭಾವಿಸಿದ ಕುಟ್ಟಪ್ಪ ಆ ಕೆಲಸಕ್ಕಾಗಿ ಪರೋಕ್ಷವಾಗಿ ವಿಡಂಗನಿಗೆ ಹಣದ ಆಮಿಷವೊಡ್ಡುತ್ತಾನೆ.

ವಿಡಂಗ ಸಂಶೋಧನೆಯ ಭಾಗವಾಗಿ ಪೊರ್ಕಳದ ವಿಟ್ಟು ಎಂಬಾತನನ್ನು ಭೇಟಿ ಮಾಡಿ ಸಂಗ್ರಹಿಸುವ ಮಾಹಿತಿ ಉಳಿದವರ ಪಾಲಿಗೆ ಸ್ಫೋಟಕ ಸಂಗತಿಯಾಗುತ್ತದೆ. ವಿಟ್ಟೂವಿನಂತಹ ವಯೋವೃದ್ಧ ಮುಗ್ಧನನ್ನು ವಿಡಂಗ ತಾನು ತಹಶೀಲ್ದಾರನೆಂದು ನಂಬಿಸಿ, ಮಾಹಿತಿ ಸಂಗ್ರಹಿಸುವುದೂ ಕ್ರೌರ್ಯದ ಇನ್ನೊಂದು ಮುಖವೇ ಆಗಿದೆ. ವಿಟ್ಟು ಹೇಳಿದ ಮಾಹಿತಿ ಏನೆಂದರೆ; ಗೊಡ್ಡಣ್ಣ ದೈವ ಈಶ್ವರ ಗಣವಲ್ಲ. ಕಲ್ಯಾಣಪ್ಪನ ಕಾಟಕಾಯಿಯ ಸಂದರ್ಭದಲ್ಲಿ ಪರಂಗಿಯವರ ಕಡೆಯ ಸೈನಿಕನಾಗಿದ್ದ ಗೊಡ್ಡಣ್ಣ ಇಲ್ಲಿಯೇ ಒಂದು ಮರಕ್ಕೆ ಹತ್ತಿ ಕಾವಲು ಕಾಯುವ ಕೆಲಸ ಮಾಡುತ್ತಿದ್ದ. ಕಲ್ಯಾಣಪ್ಪನ ಕಾಟಕಾಯಿ ಬರುವುದು ಕಂಡುಬಂದರೆ ಓಡಿಹೋಗಿ ಸೇನಾಧಿಕಾರಿಗೆ ವರ್ತಮಾನ ಮುಟ್ಟಿಸಬೇಕಾದ್ದು ಅವನ ಪಾಲಿನ ಕರ್ತವ್ಯ. ಆದರೆ ಕಾಟಿಕಾಯಿಯವರು ಎದುರಿನಿಂದ ಬರದೆ ತೆಂಕಣ ದಿಕ್ಕಿನ ಅಡ್ಡದಾರಿಯಿಂದ ಇತ್ತ ಬಂದವರೆ, ಮರದ ಮೇಲಿದ್ದ ಗೊಡ್ಡಣ್ಣನ ತಲೆಗೆ ಗುರಿಯಿಟ್ಟು ಫಿರಂಗಿಯನ್ನು ಹಾರಿಸುತ್ತಾರೆ. ಅವನ ತಲೆ ತುಂಡಾಗಿ ಹಾರಿ ಈಗ ಗುಡಿಯಿರುವ ಸ್ಥಳದಲ್ಲಿ ಬಿದ್ದಿತಂತೆ -ಎಂದು ವಿಟ್ಟು ತಾನು ಅಜ್ಜನಿಂದ ಕೇಳಿದ್ದ ಕಥೆಯ ರಹಸ್ಯವನ್ನು ಬಿಚ್ಚಿಡುತ್ತಾನೆ. ಕೂಡಲೇ ವಿಡಂಗ ಮದ್ರಾಸಿಗೆ ಹೋಗಿ ಕಲ್ಯಾಣಪ್ಪನ ಕ್ರಾಂತಿಯ ಬಗ್ಗೆ ವಿವರಗಳನ್ನು ಕಲೆಹಾಕುತ್ತಾನೆ. ಅಲ್ಲಿ ಅವನಿಗೆ ವಿಟ್ಟು ಹೇಳಿದ ಸಂಗತಿಗಳಷ್ಟೂ ಸತ್ಯವೆಂದು ತಿಳಿಯುವುದರೊಂದಿಗೆ ಫಿರಂಗಿಯ ಗುಂಡಿನಿಂದ ತಲೆಕತ್ತರಿಸಿ ಸತ್ತುಬಿದ್ದ ವ್ಯಕ್ತಿ ‘ಗೋಡ್ಸನ್’ ಎಂಬ ಕ್ರೈಸ್ತ ಸೈನಿಕನೆಂಬುದೂ ಅರಿವಿಗೆ ಬರುತ್ತದೆ.

ವಿಡಂಗನಿಗೆ ತಾನು ಮೊದಲು ಪ್ರತಿಪಾದಿಸಿದ್ದ ಸಂಶೋಧನೆ ನಿರಾಧಾರವಾದುದೆಂಬ ವಿಷಾದಕ್ಕಿಂತ ದೂಮಪ್ಪ ಸುಂಕ್ರಬೈಲನ ಸಂಶೋಧನೆಯನ್ನು ಸುಳ್ಳು ಮಾಡಿ ತೋರಿಸುವ ಸಂದರ್ಭ ಒದಗಿದಕ್ಕೆ ವಿಲಕ್ಷಣವಾದ ಆನಂದವಾದರೆ, ಕುಟ್ಟಪ್ಪನಿಗೆ ತಮ್ಮ ‘ಗೋವಿಜಾತಿ’ ಬಾಂಧವರ ಆರಾಧ್ಯದೈವವಾದ ಗೊಡ್ಡಣ್ಣ ಭೂತ ತಮ್ಮ ಜಾತಿಯದೇ ಅಲ್ಲ ಎಂಬ ಕಹಿ ಸತ್ಯದ ಅಜೀರ್ಣತೆ ಜೊತೆಗೆ ಗೋವಿ ಜನಾಂಗದ ಅಸ್ಮಿತೆಯ ಪ್ರಶ್ನೆ ಕಾಡುತ್ತದೆ. ಅಂತಿಮವಾಗಿ ತಮ್ಮ ಜನಾಂಗದ ನಂಬಿಕೆ ಒಡೆದು ಚೂರುಚೂರಾದರೆ ಎದುರಾಗುವ ಸಾಮಾಜಿಕ ವಿಘಟನೆ, ದೊಂಬಿಯನ್ನು ವಿಡಂಗನಿಗೆ ಅರ್ಥಮಾಡಿಸುವಲ್ಲಿ ಕುಟ್ಟಪ್ಪ ಯಶಸ್ವಿಯಾಗುತ್ತಾನೆ. ದೂಮಪ್ಪ ಸುಂಕ್ರಬೈಲ್ ಮತ್ತು ವಿಡಂಗ ಇಬ್ಬರೂ ಈ ಸಂಶೋಧನೆಯನ್ನು ಮುಂದುವರೆಸಬಾರದೆಂದು ಆಣೆ ಮಾಡುತ್ತಾರೆ. ವಿಡಂಗ ಸಂಶೋಧಕನಿಗಿರಬೇಕಾದ ಗುಣವನ್ನು ಮುಂದುಮಾಡಿ ತನ್ನ ಸಂಶೋಧನೆಯ ಫಲಿತಗಳನ್ನು ಮರೆಮಾಚುತ್ತಾನೆ.

ಕಾಟಿಕಾಯಿಯವರು ಎದುರಿನಿಂದ ಬರದೆ ತೆಂಕಣ ದಿಕ್ಕಿನ ಅಡ್ಡದಾರಿಯಿಂದ ಇತ್ತ ಬಂದವರೆ, ಮರದ ಮೇಲಿದ್ದ ಗೊಡ್ಡಣ್ಣನ ತಲೆಗೆ ಗುರಿಯಿಟ್ಟು ಫಿರಂಗಿಯನ್ನು ಹಾರಿಸುತ್ತಾರೆ. ಅವನ ತಲೆ ತುಂಡಾಗಿ ಹಾರಿ ಈಗ ಗುಡಿಯಿರುವ ಸ್ಥಳದಲ್ಲಿ ಬಿದ್ದಿತಂತೆ -ಎಂದು ವಿಟ್ಟು ತಾನು ಅಜ್ಜನಿಂದ ಕೇಳಿದ್ದ ಕಥೆಯ ರಹಸ್ಯವನ್ನು ಬಿಚ್ಚಿಡುತ್ತಾನೆ. ಕೂಡಲೇ ವಿಡಂಗ ಮದ್ರಾಸಿಗೆ ಹೋಗಿ ಕಲ್ಯಾಣಪ್ಪನ ಕ್ರಾಂತಿಯ ಬಗ್ಗೆ ವಿವರಗಳನ್ನು ಕಲೆಹಾಕುತ್ತಾನೆ. ಅಲ್ಲಿ ಅವನಿಗೆ ವಿಟ್ಟು ಹೇಳಿದ ಸಂಗತಿಗಳಷ್ಟೂ ಸತ್ಯವೆಂದು ತಿಳಿಯುವುದರೊಂದಿಗೆ ಫಿರಂಗಿಯ ಗುಂಡಿನಿಂದ ತಲೆಕತ್ತರಿಸಿ ಸತ್ತುಬಿದ್ದ ವ್ಯಕ್ತಿ ‘ಗೋಡ್ಸನ್’ ಎಂಬ ಕ್ರೈಸ್ತ ಸೈನಿಕನೆಂಬುದೂ ಅರಿವಿಗೆ ಬರುತ್ತದೆ.

ಜನಾರ್ಧನ ಭಟ್ಟರು  ಬಿಗಿಯಾದ ಬಂಧದಲ್ಲಿ ಈ ಕಾದಂಬರಿಯನ್ನು ಹೆಣೆಯುವಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ವಾಸ್ತವ ಮಾರ್ಗದ ಜಾಡಿನಲ್ಲಿ ಭೂತ-ವರ್ತಮಾನ, ಪರಂಪರೆ-ಆಧುನಿಕತೆ, ಪುರಾಣ-ಇತಿಹಾಸ, ನಂಬಿಕೆ-ವೈಚಾರಿಕತೆಗಳನ್ನು ಒಟ್ಟಾಗಿ ಪರೀಕ್ಷೆಗೆ ಒಳಪಡಿಸಿರುವುದು ಉಲ್ಲೇಖನೀಯ ಸಂಗತಿ. ನದಿಮೂಲ, ಋಷಿಮೂಲ ಹುಡುಕಬಾರದೆಂಬ ಮಾತಿಗೆ ಜನಾರ್ಧನ ಭಟ್ಟರು ದೈವಮೂಲವನ್ನೂ ಸೇರಿಸಿಬಿಡುತ್ತಾರೆ. ಜನರ ನಂಬಿಕೆಗಳ ಬೇರನ್ನೇ ಅಲುಗಾಡಿಸುವ ಇಂತಹ ವಿಚಾರಗಳು ಓದುಗನನ್ನು ಸಂವಾದಕ್ಕೆ ಆಹ್ವಾನಿಸುತ್ತವೆ.

ಸತ್ಯವನ್ನು ಪ್ರಕಟಿಸಬೇಕಾದ್ದು ಸಂಶೋಧಕನ ಕರ್ತವ್ಯ ಎಂಬುದಾಗಿ ಎಂ.ಎಂ. ಕಲಬುರ್ಗಿಯವರು ಹೇಳಿದ್ದಾರೆ. ಅನ್ವೇಷಣಾತ್ಮಕ ಸಂಶೋಧನೆಯಲ್ಲಿ ನಿರತನಾದವನು ವರ್ತಮಾನದ ವ್ಯಕ್ತಿ-ಸಮಾಜದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾನೆ. ಜನತೆಯ ಬದುಕಿನ ಜೀವಂತ ಚಟುವಟಿಕೆಗಳನ್ನು ಆಕರಗಳನ್ನಾಗಿ ಬಳಸಿಕೊಂಡು ಸಂಶೋಧನೆ ನಡೆಸುವವರು ಲೋಕವಿರೋಧಿಯಾಗಬಾರದೆಂಬ ನಿಲುವನ್ನು ಈ ಕಾದಂಬರಿ ಪ್ರಕಟಿಸುತ್ತದೆ. ಆಳ ಮತ್ತು ಸಂಕೀರ್ಣತೆಯ ಗುಣ, ನಿಗೂಢತೆಗೆ ತಕ್ಕ ಬಿಗಿಯಾದ ಭಾಷೆ, ಕಥಾಸಂವಿದಾನದ ಅಚ್ಚುಕಟ್ಟು -ಈ ಮುಂತಾದ ಗುಣಗಳಿಂದ ಉತ್ತಮ ಕಲಾಕೃತಿಯ ಗಾಢ ಅನುಭವವನ್ನು ಜನಾರ್ಧನ ಭಟ್ಟರ ‘ಕಲ್ಲು ಕಂಬವೇರಿದ ಹುಂಬ’ ಕೃತಿ ಓದುಗನಿಗೆ ನೀಡುವಲ್ಲಿ ಸಫಲವಾಗಿದೆ.