ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಕಷ್ಟಗಳು ಬಂದಾಗ ಜನರು ದೇವರನ್ನು ನೆನೆಯುತ್ತಾರೆ. ಆದರೆ ದೇವರು ಎಂಬ ಪರಿಕಲ್ಪನೆಯೇ ಬಹಳ ವಿಸ್ಮಯವಾದುದು. ಮನುಷ್ಯವರ್ಗವು ರೂಪಿಸಿಕೊಂಡಿರುವ ಈ ಪರಿಕಲ್ಪನೆಯಲ್ಲಿ ಎಷ್ಟೊಂದು ವಿರೋಧಾಭಾಸಗಳಿವೆ ! ದೇವರ ಬಗ್ಗೆ, ಅಧ್ಯಾತ್ಮದ ಬಗ್ಗೆ, ಭಕ್ತಿಯ ಬಗ್ಗೆ, ಮನಸ್ಸಿನ ಬಗ್ಗೆ, ಜೀವನದ ಬಗ್ಗೆ ತಿಳಿ ಹೇಳಲು ಬಂದ ಮಹಾನುಭಾವರನ್ನೆಲ್ಲಾ ದೇವರನ್ನಾಗಿ ಮಾಡಿ ಅವರ ನುಡಿಗಳಲ್ಲೆ ಅವರನ್ನು ಸಮಾಧಿ ಮಾಡಿರುವ ಜಗತ್ತು ನಮ್ಮದು. – ದೇವರು –ಮನುಷ್ಯನ ಸಂಬಂಧದ ಬಗ್ಗೆ ಬರೆದಿದ್ದಾರೆ ಪ್ರಶಾಂತ್ ಬೀಚಿ.

 

ಜೀವನದ ದಾರಿಗಳು ನುಣುಪಾಗಿರುವ ಹೈವೆ ತರ ಇರುವುದೇ ಇಲ್ಲ. ಅತೀ ಶ್ರೀಮಂತನ ದಾರಿಯಿರಲಿ ಅಥವಾ ನಿರ್ಗತಿಕನ ದಾರಿಯಿರಲಿ ಜೀವನವೆಂಬುದು ಕಲ್ಲು ಮುಳ್ಳಿನ, ಟಾರು ಕಿತ್ತು ಗುಂಡಿಗಳಾಗಿರುವ, ದಾರಿಯೇ. ಕಾಣದಂತೆ ಹುಲ್ಲು ಬೆಳೆದಿರುವ, ದುರ್ಗಮ ರಸ್ತೆಗಳೆ ಹೊರತು ನುಣುಪಾಗಿ ಇರುವುದೇ ಇಲ್ಲ. ಮಧ್ಯಮ ವರ್ಗದವರ ಜೀವನವಂತೂ ತೇಪೆ ಹಾಕಲಾಗದ ಪರಿಸ್ಥಿತಿ. ಮನುಷ್ಯರ ಜೀವನದಲ್ಲಿ ಕಷ್ಟಗಳು ಬಂದಾಗ ನೆನಪಾಗುವುದೇ ದೇವರು.

ಜೀವನದಲ್ಲಿ ಕಷ್ಟಗಳು ಎದುರಾದಾಗ ಪ್ರತೀ ಜಟಿಲತೆಗೂ ಹಲವಾರು ದಾರಿಗಳು ಕಾಣುತ್ತವೆ, ಯಾವುದನ್ನು ಆರಿಸುವುದು ಯಾವುದನ್ನು ಬಿಡುವುದು ತಿಳಿಯದು. ಇಂಥಹ ದ್ವಂದ್ವದಲ್ಲಿದ್ದಾಗ ಎಲ್ಲರೂ ನೆನೆಯುವುದು ದೇವರನ್ನು. ಸ್ವಲ್ಪ ತಿಳಿಯುತ್ತಾ ಹೋದರೆ ಸಾಮಾನ್ಯರಿಗೆ ದೇವರಲ್ಲೂ ದ್ವಂದ್ವವೇ. ಹಾಗಾಗಿ ದೇವರನ್ನು ಅಗತ್ಯಕ್ಕೆ ಮತ್ತು ಅನುಕೂಲಕ್ಕೆ ತಕ್ಕಂತೆ ಜನರು ಬಳಸಿದ್ದಾರೆ. ಅಧ್ಯಾತ್ಮ, ತತ್ವಜ್ಞಾನಿಗಳಿಂದ ಹಿಡಿದು ಈಗಿನ ಬುದ್ಧಿಜೀವಿಗಳ ತನಕ ದೇವರನ್ನು ತಮ್ಮದೇ ನಿರೂಪಣೆಯಲ್ಲಿ ಹೇಳುತ್ತಾ ಬಂದಿದ್ದಾರೆ. ಎ.ಎನ್.ಮೂರ್ತಿ ರಾವ್ ಅವರು ಮತ್ತು ಡಿ.ವಿ.ಗುಂಡಪ್ಪ ನವರು ದೇವರು ಎನ್ನುವ ಪುಸ್ತಕವನ್ನೇ ಬರೆದು ಓದುಗರಿಗೆ ದೇವರ ಹೆಸರಿನಲ್ಲಿ ನೆಡೆಯುವ ಅನಾಹುತಗಳನ್ನು ತಿಳಿಸಿದ್ದಾರೆ.

ದೇವರ ಬಗ್ಗೆ, ಅಧ್ಯಾತ್ಮದ ಬಗ್ಗೆ, ಭಕ್ತಿಯ ಬಗ್ಗೆ, ಮನಸ್ಸಿನ ಬಗ್ಗೆ, ಜೀವನದ ಬಗ್ಗೆ ತಿಳಿ ಹೇಳಲು ಬಂದ ಮಹಾನುಭಾವರನ್ನೆಲ್ಲಾ ದೇವರನ್ನಾಗಿ ಮಾಡಿ ಅವರ ನುಡಿಗಳಲ್ಲೆ ಅವರನ್ನು ಸಮಾಧಿ ಮಾಡಿರುವ ಜಗತ್ತು ನಮ್ಮದು. ಮಹಮ್ಮದ್ ಪೈಗಂಬರ್, ಜೀವನದ ದಾರಿಯನ್ನು ತಿಳಿಸಿದರೆ, ಅವರನ್ನು ಹಿಂಬಾಲಿಸಿದವರು ತಮ್ಮದೆ ದಾರಿಯನ್ನು ಬೇರ್ಪಡಿಸಿಕೊಂಡರು. ಜೀಸಸ್, ಶಾಂತಿ ನೆಮ್ಮದಿಯ ಪಾಠ ಹೇಳಿ ಎಲ್ಲರೊಂದಿಗೆ ಬದುಕಲು ತಿಳಿಸಿದರೆ, ಅವರನ್ನು ಪಾಲಿಸುವವರು ಎಲ್ಲರಿಂದ ಬೇರ್ಪಟ್ಟು ಇನ್ನೊಂದು ದಾರಿ ಮಾಡಿಕೊಂಡರು, ಹೀಗೆ ಹಿಂದೂ ಧರ್ಮದಲ್ಲಿ ಬಂದ ಎಲ್ಲಾ ಗುರುಗಳನ್ನು ಹಿಂಬಾಲಿಸುವವರು ತಮ್ಮದೇ ಬೇರೆ ಒಳ ಪಂಗಡಗಳನ್ನು ಸ್ಥಾಪಿಸಿಕೊಂಡರು. ಹಲವಾರು ಕವಲುಗಳನ್ನು ಒಂದು ಮಾಡಲು ಮಹಾತ್ಮರು ಬಂದರೆ, ಅವರನ್ನು ಹಿಂಬಾಲಿಸುವವರು ಮತ್ತೊಂದು ಕವಲಾದರು.

(ಬಸವಣ್ಣ)

ಹನ್ನೆರಡನೇ ಶತಮಾನದಲ್ಲಿ ಬಂದಂತ ಶರಣರು ವಚನ ಸಾಹಿತ್ಯದ ಮೂಲಕ ಎಲ್ಲಾ ಜೀವಿಗಳನ್ನು ಒಂದು ಮಾಡುವ ಪ್ರಯತ್ನ ಮಾಡಿದರೆ, ಅವರನ್ನರಿಯದ ಕೆಲವರು ಅರಿವಿಲ್ಲದೆ ಕುರುಹಿಲ್ಲದೆ ಶರಣರನ್ನೆಲ್ಲ ದೇವರನ್ನಾಗಿ ಮಾಡಿ ದೂರ ಮಾಡಿಕೊಂಡರು.
ಅನುಭವ ಮಂಟಪದ ಪೀಠಾಧ್ಯಕ್ಷರಾಗಿದ್ದ ಅಲ್ಲಮ ಪ್ರಭುಗಳು ಹೇಳುವ ಮಾತುಗಳು ಅನೇಕರಿಗೆ ಮೀರಿದ ಜ್ಞಾನವಾಗಿತ್ತು, ಅಂಥಹ ಸಮಯದಲ್ಲಿ ಶರಣರ ವಚನಗಳ ಮೂಲಕ ಸಾಮಾನ್ಯ ರೀತಿಯಲ್ಲಿ ದೇವರ ಬಗೆಗೆ ತಿಳಿವಳಿಕೆ ನೀಡಿದರೂ ಆಚಾರಗಳನ್ನು ಕಣ್ಣು ಮುಚ್ಚಿ ಪಾಲಿಸುವ ಸಂಪ್ರದಾಯವಾದಿಗಳಿಗೆ ಸಹ್ಯವಾಗಲಿಲ್ಲ. ಲಿಂಗವನ್ನೆ ದೇವರೆಂದು, ಲೌಕಿಕವಾಗಿ ಲಿಂಗ ಪೂಜಿಸಿದೊಡೆ ತಮಗೆ ಮೋಕ್ಷ ಸಿಗುವುದೆಂದು ತಿಳಿದಿದ್ದ ಜನರಿಗೆ ಪರಿ ಪರಿಯಾಗಿ ಭಕ್ತಿಯ ಬಗ್ಗೆ ತಿಳಿಸಿದರೂ ಫಲಿಸಲಿಲ್ಲ.

ಎನಗೊಂದು ಲಿಂಗ ನಿನಗೊಂದು ಲಿಂಗ
ಮನೆಗೊಂದು ಲಿಂಗವಾಯಿತ್ತು
ಹೋಯಿತ್ತಲ್ಲ ಭಕ್ತಿ ಜಲವ ಕೂಡಿ!
ಮನ ಮುಟ್ಟದ ಲಿಂಗ ಉಳಿ ಮುಟ್ಟಬಲ್ಲುದೆ ಗುಹೇಶ್ವರ?
-ಅಲ್ಲಮ ಪ್ರಭು

ಅನುಭವ ಮಂಟಪದ ರೂವಾರಿ ಬಸವಣ್ಣ ಕೂಡ ಸಮಾಜದ ಸಮಾನತೆಗೆ ಶ್ರಮಪಟ್ಟರು. ದೇವರನ್ನು ನೆನೆಯುವುದೇ ನಿಮಗೆ ಮುಖ್ಯವಾದರೆ ನಿಮ್ಮ ಕೆಲಸವನ್ನೇ ದೇವರೆನ್ನಿ ಎಂದು “ಕಾಯಕವೇ ಕೈಲಾಸ” ಎಂದು ಸಾರಿದರು. ಪೂಜೆ ಮಾಡಿದರೆ ಮಾತ್ರ ನೆಮ್ಮದಿ ಸಿಗುವುದೆಂದರೆ, ಒಬ್ಬೊಬ್ಬರು ಒಂದೊಂದು ದೇವರನ್ನು ಪೂಜಿಸುವ ಬದಲು ನಿಮ್ಮ ಆತ್ಮವನ್ನೇ ಲಿಂಗವನ್ನಾಗಿ ಮಾಡಿಕೊಂಡು ಆತ್ಮಲಿಂಗದ ಪೂಜೆ ಮಾಡಿ ಎಂದರು. ಹಿಂದಿನಿಂದ ನೆಡೆದುಬಂದ ಪ್ರತೀತಿಯನ್ನು ಪ್ರಶ್ನಿಸದೆ, ಅವಲೋಕಿಸದೆ ಪಾಲಿಸುವ ಸಂಪ್ರದಾಯವಾದಿಗಳ ಮನವೊಲಿಸಿದರು. ಒಂದರ ಮೇಲೊಂದರಂತೆ ವಚನಗಳನ್ನು ಬರೆದು ಪ್ರತಿಯೊಬ್ಬರಿಗೂ ತಿಳಿಸಿದರು.

ದೇವರನ್ನು ಅಗತ್ಯಕ್ಕೆ ಮತ್ತು ಅನುಕೂಲಕ್ಕೆ ತಕ್ಕಂತೆ ಜನರು ಬಳಸಿದ್ದಾರೆ. ಅಧ್ಯಾತ್ಮ, ತತ್ವಜ್ಞಾನಿಗಳಿಂದ ಹಿಡಿದು ಈಗಿನ ಬುದ್ಧಿಜೀವಿಗಳ ತನಕ ದೇವರನ್ನು ತಮ್ಮದೇ ನಿರೂಪಣೆಯಲ್ಲಿ ಹೇಳುತ್ತಾ ಬಂದಿದ್ದಾರೆ.

ನೀರ ಕಂಡಲ್ಲಿ ಮುಳುಗುವರಯ್ಯ!
ಮರವ ಕಂಡಲ್ಲಿ ಸುತ್ತುವರಯ್ಯ!
ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವ
-ಬಸವಣ್ಣ

ಇಪ್ಪತ್ತನೆ ಶತಮಾದಲ್ಲೂ ದೇವರು ಮೈ ಮೇಲೆ ಬಂದು, ಜನರ ಸಂಕಷ್ಟಗಳನ್ನು ಪರಿಹಾರ ಮಾಡುವ ವಿಧಾನಕ್ಕೆ ಅನೇಕ ಬುದ್ದಿಜೀವಿಗಳು ಪ್ರಶ್ನಿಸಿದರು. ಕೆಲವರು ಮಾಟ ಮಂತ್ರಗಳ ಒಳಗುಟ್ಟನ್ನು ರಟ್ಟು ಮಾಡಿ ಕಣ್ಣೆದುರಿಗಿಟ್ಟರೂ ಫಲಿಸಲಿಲ್ಲ. ಕಣ್ಣು ಮುಚ್ಚಿ ದೇವರ ಹೆಸರಿನಲ್ಲಿ ನೆಡೆಯುವ ಎಲ್ಲಾ ಆಚಾರಗಳನ್ನು ಜನ ನಂಬುತ್ತಾ ಹೋದರು.

ಇತ್ತೀಚಿಗೆ ನಮ್ಮನ್ನು ಅಗಲಿದ ಡಾ. ಸಿದ್ದಲಿಂಗಯ್ಯನವರು ತಮ್ಮ ಅನೇಕ ಭಾಷಣಗಳಲ್ಲಿ ದೇವರ ಹೆಸರಿನಲ್ಲಿ ನೆಡೆಯುವ ಅನಾಚಾರಗಳನ್ನು ತಿಳಿಸಿದ್ದಾರೆ. ಮೊದಲೇ ಬಂಡಾಯದ ಬಳಗ; ತುಳಿತದ ನೋವು ಅನುಭವಿಸಿದ ಜೀವ, ದೇವರನ್ನು ನೆನೆದರೂ ಪರಿಹಾರವಾಗದ ಕಷ್ಟಗಳನ್ನು ನೋಡಿ ತಮ್ಮ ಜೀವನವನ್ನು ಅನಾವರಣಗೊಳಿಸಿದ್ದರು. ಆಗಲೇ ಹುಟ್ಟಿದ ಅನೇಕ ಕವಿತೆಗಳಲ್ಲಿ ಒಂದು ತುಣುಕು.

ದೇವಾಲಯಗಳು ಮಾಟದ ಮನೆಗಳು
ಧರ್ಮದ ಗುರುಗಳು ಮಾಂತ್ರಿಕರು
ಕ್ಷೇತ್ರಗಳೆಲ್ಲವೂ ರೋಗಗಳಾ ನೆಲೆ
ಮುಗ್ಧರು ಮೂಢರು ಯಾತ್ರಿಕರು.
-ಡಾ. ಸಿದ್ದಲಿಂಗಯ್ಯ

ಈ ಶತಮಾನದಲ್ಲೂ ದೇವರು ಮೈ ಮೇಲೆ ಬಂದು ಅನೇಕ ಪರಿಹಾರಗಳನ್ನು ಸೂಚಿಸಿದ ಸಂಗತಿಗೆ ನಾನು ಸಾಕ್ಷಿಯಾಗಿದ್ದೇನೆ. ಒಂದು ಸಂಗತಿ ಈ ರೀತಿಯದ್ದಾಗಿತ್ತು.

ಹಳ್ಳಿಯ ಆ ಮನೆಯಲ್ಲಿ ಪ್ರತೀ ಅಮವಾಸ್ಯೆಗೆ ದೇವರನ್ನು ಕರೆಸುವ ಪದ್ದತಿ. ಕೆಲವೊಮ್ಮೆ ದೇವರು ಮನುಷ್ಯನ ಮೇಲೆ ಬರುತ್ತಿದ್ದರು, ಕೆಲವು ಸಾರಿ ಇಲ್ಲ. ಪೂಜಾರಿ ದೇವರಿಗೆ ಪೂಜೆ ಮುಗಿಸಿದ ಮೇಲೆ ಕರ್ಪೂರ ಹಚ್ಚಿ ಬೇಡಿಕೊಳ್ಳಬೇಕು. ದೇವರು ಯಾರ ಮೇಲೆ ಬರುತ್ತಾರೊ, ಆತ ಸ್ನಾನ ಮಾಡಿ ಮಡಿಯಿಂದ ದೇವರ ಮುಂದೆ ಕವಚಿ ಕುಳಿತಿರುತ್ತಾನೆ. ದೇವರು ಅತನ ಮೇಲೆ ದಯಮಾಡಿಸುವಂತೆ ಪೂಜಾರಿಯ ಸಮೇತ ನೆರೆದವರೆಲ್ಲಾ ಬೇಡಿಕೊಳ್ಳುತ್ತಾರೆ. ಕೆಲವು ಬಾರಿ ಕೆಲ ನಿಮಿಷಗಳಲ್ಲೆ ದಯಮಾಡಿಸಿದರೆ ಇನ್ನೂ ಕೆಲವು ಬಾರಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ, ಇನ್ನೂ ಕೆಲವು ಬಾರಿ ದಯಮಾಡಿಸುವುದೇ ಇಲ್ಲ. ಮತ್ತೆ ಮುಂದಿನ ಅಮವಾಸ್ಯೆಗೆ ಕಾಯಬೇಕು.

ಆ ದಿನ ಹಳ್ಳಿಯ ಅನೇಕರು ದೇವರಲ್ಲಿ ಕೇಳಲು ಬಂದಿದ್ದರು. ಪೂಜೆ ಎಲ್ಲಾ ಮುಗಿದ ಮೇಲೆ ದೇವರನ್ನು ದಯಮಾಡಿಸುವಂತೆ ಕೇಳುವ ಪ್ರತೀತಿ. ದೇವರಿಗೆ ಅಡ್ಡವಾಗಿ ಗೋಡೆಗೆ ಒರಗಿ ಮಡಿಯಿಂದ ಕೂತಿದ್ದ ವ್ಯಕ್ತಿಯ ಕೈಯಲ್ಲಿ ಹೊಂಬಾಳೆಯ ಗರಿ ಇತ್ತು. ಪೂಜಾರಿ ಕರ್ಪೂರವನ್ನು ಹಚ್ಚಿ ದೇವರಲ್ಲಿ ಬಿನ್ನವಿಸಿಕೊಂಡ. “ಬೇಗ ದಯಮಾಡಿಸಪ್ಪ, ಕಾಯಿಸಬೇಡ”. ಮೊದಲ ಕರ್ಪೂರ ಮುಗಿದುಹೋಗುತ್ತಿದೆ ಎನ್ನುವುದರೊಳಗೆ ಇನ್ನೊಂದು ಕರ್ಪೂರವನ್ನು ಅದರ ಹತ್ತಿರ ತಳ್ಳಿದ. ಎರಡನೆ ಕರ್ಪೂರ ಹತ್ತಿ ಉರಿಯಲು ಶುರುಮಾಡಿತು, ತಕ್ಷಣ ಕೈಲಿ ಹಿಡಿದ್ದಿದ್ದ ಹೊಂಬಾಳೆಯ ಗರಿ ಚಿಮ್ಮಿ ದೇವರ ಮೂರ್ತಿಯ ಹತ್ತಿರ ಬಿದ್ದಿತು. ನಡುಗಿ ಕುಳಿತ ವ್ಯಕ್ತಿ ಜೋರಾಗಿ ಉಸಿರಾಡಲು ಶುರುಮಾಡಿದ. ಪೂಜಾರಿ ಮತ್ತೊಬ್ಬನ ಸಹಾಯದಿಂದ ದೇವರು ಬಂದ ವ್ಯಕ್ತಿಯನ್ನು ಹಿಡಿದುಕೊಂಡ. ಈಗ ಅವನು ಸಾಕ್ಷಾತ್ “ದೇವರು”. ಎಲ್ಲರೂ ಗಂಭೀರವಾದರು, ಪೂಜಾರಿ ಒಬ್ಬೊಬ್ಬರಾಗಿ ತಮ್ಮ ಕಷ್ಟವನ್ನು ಹೇಳಿಕೊಳ್ಳುವಂತೆ ತಿಳಿಸಿದ. ಮೊದಲಿಗೆ ಕೇಳಲು ಬಂದ ವ್ಯಕ್ತಿ ಈಗಾಗಲೇ ಕಳೆದ ತಿಂಗಳಲ್ಲಿ ತನ್ನ ತಾಪತ್ರಯವನ್ನು ಹೇಳಿಕೊಂಡಿದ್ದ. ಅವನ ತಾಯಿಗೆ ಆರೋಗ್ಯ ಸಮಸ್ಯೆ ಇದ್ದು, ದೇವರು ಸೂಚಿಸಿದ ಔಷದಿ ಸಿಕ್ಕಿರಲಿಲ್ಲ. ಆ ಔಷದಿ ಎಲ್ಲಿಯೂ ಸಿಗುತ್ತಿಲ್ಲ ಎಂದು ಹೇಳಿದ್ದಕ್ಕೆ, ದೇವರು ರಂಗೋಲಿಯನ್ನು ತರಿಸಿ ಅಲ್ಲೆ ಇದ್ದ ಮಣೆಯ ಮೇಲೆ ಹರಡಿ ಕೋಲಿನಿಂದ ತಾಲೋಕು ಕೇಂದ್ರದಲ್ಲಿರುವ ಒಂದು ಔಷದಿ ಅಂಗಡಿಯ ಹೆಸರನ್ನು ಬರೆದರು. ಅದರಂತೆ ಮಾರನೆಯ ದಿನ ಆ ಔಷದಿ ಅಂಗಡಿಯಲ್ಲಿ ವಿಚಾರಿಸಿದಾಗ ಬೇಕಾಗಿದ್ದ ಔಷದ ಸಿಕ್ಕಿತು. ಹೀಗೆ ಅನೇಕ ವಿಧವಿಧವಾಗಿ ದೇವರ ಮತ್ತು ಮನುಷ್ಯರ ಸಮಾಗಮಗಳಿಗೆ ಅನೇಕರು ಸಾಕ್ಷಿಯಾಗಿದ್ದಾರೆ.