ಇವಳ ಮನೆ ಎಲ್ಲಿ? ಎಲ್ಲಿ ಮಲಗುತ್ತಿದ್ದಳು ಎಲ್ಲಿ ಊಟ ಮಾಡುತ್ತಿದ್ದಳು? ಇವಳಿಗೇ ಅಂತ ಕುಟುಂಬ ಇದ್ದಿರಬಹುದಾ? ಈವರೆಗೂ ಗೊತ್ತಿಲ್ಲ. ಆದರೆ ಯಾರಾದರೂ ಕರೆದು ತಿಂಡಿ ಚಹಾ ಕೊಟ್ಟರೆ ಸ್ವೀಕರಿಸುತ್ತಿದ್ದಳು. ಮೆಸ್ಸಿನಲ್ಲಿದ್ದ ಪೇಪರು ಓದಿ ಅದೇನೋ ಗೊಣಗುತ್ತಿದ್ದಳು. ಕದ್ದು ಸಿಗರೇಟು ಸೇದುತ್ತಾಳೆ ಎಂಬ ಗುಸು ಗುಸು ಕೂಡ ಇತ್ತು. ಆದರೆ ನಾವೆಂದೂ ಅವಳು ಸಿಗರೇಟು ಹಚ್ಚಿದ್ದನ್ನು ನೋಡಿರಲಿಲ್ಲ. ಅಂತೂ ಹೇಮಾ ಎಂಬ ಮಾಜೀ ಸುಂದರಿ ಈಗಷ್ಟೇ ಕಾಲೇಜು ಮೆಟ್ಟಿಲು ಹತ್ತಿದ ಹುಡುಗಿಯರಿಗೆ ಯುವತಿಯರಿಗೊಂದು ಭಗ್ನ ಪ್ರೇಮದ ರೂಪಕದಂತಿದ್ದಳು. ಮತ್ತು ಅವಳ ಪಾತ್ರದ ಮೂಲಕ ದೇವರು, ಧರ್ಮದ ನಶೆಯಲ್ಲಿ ತೇಲುತ್ತಿದ್ದ ಸಮಾಜಕ್ಕೊಂದು ಚಾಟಿ ಏಟಿನಂತಹ ಸಂಭಾಷಣೆಗಳ ಮೂಲಕ ನಾಟಕದ ಸೃಜನಾತ್ಮಕತೆಯನ್ನು ಎತ್ತರಕ್ಕೇರಿಸಿದ್ದರು.
ಡಾ. ಲಕ್ಷ್ಮಣ ವಿ. ಎ. ಅಂಕಣ

 

ಈ ಸಂಜೆ ಹಿರಿಯ ಪತ್ರಕರ್ತ ಮಿತ್ರ ದಿಲಾವರ್ ರಾಮದುರ್ಗ ಫೇಸ್ ಬುಕ್ ಪೇಜಿನಲಿ ಬರೆದ ಒಂದು ಸುದ್ದಿ ಓದಿ ಬಹಳ ಶೋಕಿತನಾದೆ. ಸುದ್ದಿಯೇನೆಂದರೆ ಧಾರವಾಡದ ನಿವಾಸಿ ಇಂದುಮತಿ ವಾಜಪೇಯಿ ತೀರಿ ಹೋದಳೆಂಬ ಸುದ್ದಿ. ಹಾಗಂತ ಹೇಳಿದ್ದರೆ ಇದು ಯಾರೋ ಇದ್ದಿರಬಹುದೆಂದು ನಾನೂ ಉದಾಸೀನ ಮಾಡಿ ಮುಂದೆ ಸಾಗಬಹುದಾಗಿತ್ತು, ಆದರೆ ಧಾರವಾಡದ ಚಿಂದಿ ಆಯುವ ಹೇಮಾ ಅರ್ಥಾತ್ ಹೇಮಾಮಾಲಿನಿ ತೀರಿಕೊಂಡಳೆಂದು ತಿಳಿದಾಗ ಬಹಳವೇ ನೋವಾಯಿತು. ಅಲ್ಲದೇ ‘ಅರೆ!! ಇವಳು ಇನ್ನೂ ಬದುಕಿದ್ದಳಾ…?’ ಎಂಬ ಆಶ್ಚರ್ಯ ಕೂಡಾ ಆಯಿತು.

ಈ ಆಶ್ಚರ್ಯ ಕ್ಕೆ ಕಾರಣಗಳೂ ಇವೆ. ಸರಿ ಸುಮಾರು ಎಂಬತ್ತರ ದಶಕದಿಂದ ಎರಡುಸಾವಿರ ಇಸವಿಯವರೆಗೆ ಅಥವಾ ಅದಕ್ಕಿಂತ ಹೆಚ್ಚು ಧಾರವಾಡದಲ್ಲಿ ಓದಿದ ಪ್ರತಿ ವಿದ್ಯಾರ್ಥಿ ಗಳಿಗೂ ಇವಳ ಹೆಸರು ಗೊತ್ತಿರುತ್ತದೆ. ಮತ್ತು ಜೀವನದಲ್ಲಿ ಒಮ್ಮೆ ಯಾದರೂ ಇವಳ ಬಾಯಲ್ಲಿ ಬೈಗುಳ ತಿಂದು ಜನ್ಮ ಪಾವನ ಮಾಡಿಕೊಂಡಿರುತ್ತಾರೆ.

ಯಾರು ಈ ಹೇಮಾ?

ಅಕರಾಳ ವಿಕರಾಳ ಅಸ್ತವ್ಯಸ್ತ ಉಟ್ಟುಕೊಂಡ ಸೀರೆ, ಕೆಲವೊಮ್ಮೆ ಹಳೆಯ ಪ್ಯಾಂಟು ತಲೆಯ ಮೇಲೆ ಚಿಂದಿ ಬಟ್ಟೆಯ ಹೊರೆ, ಕಾಲಲ್ಲಿ ಹರಕು ಹವಾಯಿ ಚಪ್ಪಲಿ ಹಾಕಿಕೊಂಡು ಲಹರಿಗೆ ಬಿದ್ದು ಹಳೆಯ ಮುಕೇಶನ ವಿರಹದ ಹಾಡು ಹೇಳುತ್ತ ತನ್ನ ಪಾಡಿಗೆ ತಾ ಹೇಳುತ್ತ ಹೊರಟಿದ್ದಳೆಂದರೆ ಅದು ಹೇಮಾ, ಅಲಿಯಾಸ್ ಹೇಮಾಮಾಲಿನಿ. ಯಾರಾದ್ರೂ ದಾರಿ ಹೋಕರು ‘ಏ ಹೇಮಾ, ಎಲ್ಲಿ ನಿನ್ನ ಧರ್ಮೇಂದ್ರ?’ ಎಂದರೆ ಮುಗಿಯಿತು ಅವರ ಕತೆ. ಹಾಡುತ್ತಿದ್ದ ಹಾಡು ಅರ್ಧಕ್ಕೇ ನಿಲ್ಲಿಸಿ ಬೈದವನ ಜಾತಿ ಕುಲ ಅವನ ಜನ್ಮ ಜಾಲಾಡಿಸಿ ಸಾಧ್ಯವಾದರೆ ಕಾಲಿನಲ್ಲಿರುವ ಚಪ್ಪಲಿ ಎಸೆದು ಮೋಜು ತೆಗೆದುಕೊಳ್ಳುತ್ತಿದ್ದರು. ಬೈಸಿಕೊಂಡ ಈ ತರಲೆ ಹುಡುಗರ ಗುಂಪು ಅದು ಯಾವಾಗಲೋ ಮರೆಯಾಗಿ ತಮ್ಮತಮ್ಮ ರೂಮುಗಳಲ್ಲಿ ಸೇರಿ, ಕದವಿಕ್ಕಿಕೊಂಡು ಬಿದ್ದು ಬಿದ್ದು ನಗುತ್ತಿದ್ದರು. ಇದೊಂಥರ ವಿಕೃತ ಆನಂದವೆಂದು ಗೊತ್ತಿದ್ದರೂ ಗುಂಪಿನಲ್ಲೊಬ್ಬ ಯಾವನೋ ಒಬ್ಬ ಕೂಗಿದ್ದಕ್ಕೆ ಇಡೀ ಗುಂಪೇ ಚದುರಿ ಚೆಲ್ಲಾಪಿಲ್ಲಿಯಾಗಿ ಕೆಲವೊಮ್ಮೆ ಅತಿರೇಕಕ್ಕೂ ಹೋಗಿ ಜೀವನದಲ್ಲಿ ಕೇಳಬಾರದ ಕೆಟ್ಟ ಭಾಷೆಯ ಬೈಗುಳಗಳನ್ನು ಅಮಾಯಕರು ಕೇಳಬೇಕಿತ್ತು.

ನಿಮಗೆಲ್ಲ ಧಾರವಾಡ ಅಂದ್ರೆ ಸಾಧನಕೇರಿ, ಬೇಂದ್ರೆ ಅಜ್ಜ, ಹಠಮಾರಿ ಮಳೆ, ಕರ್ನಾಟಕ ಕಾಲೇಜಿನ ತಿರುವು, ಪಾವಟೆನಗರದ ಭಯ ಹುಟ್ಟಿಸುವ ಕುರುಚಲು ಕಾಡು, ತುಸು ದೂರದ ಮಾವಿನ ತೋಪುಗಳಿಂದ ಬರುವ ಚಿಗುರು ಘಮ, ಸಪ್ತಾಪುರದ ಮೆಸ್ಸುಗಳು, ಮಿಚಿಗನ್ ಕಂಪೌಂಡಿನ ಮಿರ್ಚಿ ಮಂಡಕ್ಕಿ, ಶಾಲ್ಮಲೆಯ ತಂಪು, ನುಗ್ಗಿಕೇರಿ ಹನುಪ್ಪನ ಗುಡಿ, ಸುಭಾಸ ರಸ್ತೆಯ ಗಲ ಗಲ ಬಾರಾಕೋಟ್ರಿಯ ಕೊನೆಯ ಬಸ್ಸು, ಮಿಶ್ರಾ ಪೇಢೆ ಮತ್ತು ಸಾವಜೀ ಹೋಟೆಲಿನ್ ಮಿಸಳ್ ಭಾಜಿ ಅಷ್ಟೇ ಅಲ್ವ!?

(ಚಿತ್ರ: ದಿಲಾವರ್ ರಾಮದುರ್ಗ)

ಆದರೆ ಇವೆಲ್ಲವೂ ಹಾಡಾಗಿವೆ, ಕತೆಯಾಗಿವೆ, ನೆನಪು ಮಳೆಯಾಗಿ ಮನಸು ಒದ್ದೆಯಾಗಿಸುವ ಕವಿತೆಯಾಗಿವೆ ನಿಜ. ಆದರೆ ಈ ಯಕಶ್ಚಿತ್ ಒಬ್ಬ ಬೀದಿ ಬೀದಿ ಚಿಂದಿ ಆಯುವ ಹೇಮಾಳನ್ನು ಯಾರು ನೆನಪಿಸಿಕೊಂಡಾರೆ ಎಂದುಕೊಂಡಾಗಲೇ ನಮ್ಮ ದಿಲಾವರರು ಆ ಕಾಲಕ್ಕೇ ಹೇಮಾ ನಂತಹ ವಿಕ್ಷಿಪ್ತ ಪಾತ್ರವನ್ನೇ ತಮ್ಮ ನಾಟಕದ ಸೂತ್ರಧಾರಿಣಿಯನ್ನಾಗಿಸಿ ಅಪಾರ ಜನಮನ್ನಣೆ ಗಳಿಸಿದ್ದರೆಂಬುದು ಅವರ ಉತ್ಕೃಷ್ಟ ಸೃಜನಶೀಲ ಮನಸಿಗೆ ಸಾಕ್ಷಿ.

ಪ್ರಖ್ಯಾತ ನಾಟಕಕಾರ ಶೇಕ್ಸಪಿಯರ್ ಒಂದು ಕಡೆ ಕವಿ, ಪ್ರೇಮಿ, ಹುಚ್ಚ ಇವರೆಲ್ಲ ಒಂದೇ ಎಂಬ ಅರ್ಥದಲ್ಲಿ ಹೇಳುತ್ತಾನೆ. ಈ ಹೇಮಾಮಾಲಿನಿ ಎಂಬ ಅನ್ವರ್ಥಕನಾಮ ಬಂದಿದ್ದು ಧರ್ಮೇಂದ್ರ ನಂತಹ ಸ್ಪರದ್ರೂಪಿ ಯುವಕನೊಂದಿಗಿನ ಓಡಾಟದಿಂದ ಅಂತ ಜನ ಆಡಿಕೊಳ್ಳುತ್ತಿದ್ದರು. ಒಂದು ಕಾಲದಲ್ಲಿ ಇಂದುಮತಿ ಎಂಬ ಸುಂದರಿ ಯಾವ ಮಾಯಕದಲ್ಲೋ ಧರ್ಮೇಂದ್ರನಂತಹ ಹುಡುಗನೊಂದಿಗೆ ಪ್ರೇಮ ವೈಫಲ್ಯವಾಗಿ ಇದೇ ಕೊರಗಿನಲ್ಲಿ ಅವಳು ಹುಚ್ಚಿಯಾಗಿದ್ದಾಳೆಂದು ಹೇಳುತ್ತಿದ್ದರು. ಅದಕ್ಕೆ ಪುರಾವೆ ಎಂಬಂತೆ ಯಾರಾದರೂ ರಸ್ತೆಯಲ್ಲಿ ಕಾಲೇಜು ಹುಡುಗ – ಹುಡುಗಿ ಗುಸು ಗುಸು ಮಾತನಾಡುತ್ತ ವೈಯ್ಯಾರ ಮಾಡುತ್ತ ಹೋಗುತ್ತಿದ್ದರೆ ಇವಳು ಉಗ್ರಕಾಳೀಯ ರೂಪ ತಾಳಿ ಅವರಿಗೆ ಬುದ್ದಿ ಹೇಳಿ ಬೈಯ್ಯುತ್ತಿದ್ದಳು.

ಇವಳ ಮನೆ ಎಲ್ಲಿ? ಎಲ್ಲಿ ಮಲಗುತ್ತಿದ್ದಳು ಎಲ್ಲಿ ಊಟ ಮಾಡುತ್ತಿದ್ದಳು? ಇವಳಿಗೇ ಅಂತ ಕುಟುಂಬ ಇದ್ದಿರಬಹುದಾ? ಈವರೆಗೂ ಗೊತ್ತಿಲ್ಲ. ಆದರೆ ಯಾರಾದರೂ ಕರೆದು ತಿಂಡಿ ಚಹಾ ಕೊಟ್ಟರೆ ಸ್ವೀಕರಿಸುತ್ತಿದ್ದಳು. ಮೆಸ್ಸಿನಲ್ಲಿದ್ದ ಪೇಪರು ಓದಿ ಅದೇನೋ ಗೊಣಗುತ್ತಿದ್ದಳು. ಕದ್ದು ಸಿಗರೇಟು ಸೇದುತ್ತಾಳೆ ಎಂಬ ಗುಸು ಗುಸು ಕೂಡ ಇತ್ತು. ಆದರೆ ನಾವೆಂದೂ ಅವಳು ಸಿಗರೇಟು ಹಚ್ಚಿದ್ದನ್ನು ನೋಡಿರಲಿಲ್ಲ. ಅಂತೂ ಹೇಮಾ ಎಂಬ ಮಾಜೀ ಸುಂದರಿ ಈಗಷ್ಟೇ ಕಾಲೇಜು ಮೆಟ್ಟಿಲು ಹತ್ತಿದ ಹುಡುಗಿಯರಿಗೆ ಯುವತಿಯರಿಗೊಂದು ಭಗ್ನ ಪ್ರೇಮದ ರೂಪಕದಂತಿದ್ದಳು. ಮತ್ತು ಅವಳ ಪಾತ್ರದ ಮೂಲಕ ದೇವರು, ಧರ್ಮದ ನಶೆಯಲ್ಲಿ ತೇಲುತ್ತಿದ್ದ ಸಮಾಜಕ್ಕೊಂದು ಚಾಟಿ ಏಟಿನಂತಹ ಸಂಭಾಷಣೆಗಳ ಮೂಲಕ ನಾಟಕದ ಸೃಜನಾತ್ಮಕತೆಯನ್ನು ಎತ್ತರಕ್ಕೇರಿಸಿದ್ದರು.

ಕನ್ನಡ ಕಥಾ ಲೋಕದಲ್ಲಿ ಈ ಹೇಮಾಳ ಹೋಲುವಂತಹ ಕೆಲವೊಂದು ಪಾತ್ರಗಳು ಥಟ್ಟನೇ ನೆನಪಿಗೆ ಬರುತ್ತವೆ. ಕೆ ವಿ ತಿರುಮಲೇಶರು ಬರೆದ ‘ಇಬ್ಬರು ಹುಚ್ಚರು’ ಕತೆಯಲ್ಲಿ ಸದಾಶಿವ ಎಂಬ ಸದ್ಗೃಹಸ್ಥನೊಬ್ಬನಿಗೆ ಹೀಗೆ ಇದ್ದಕ್ಕಿದ್ದಂತೆ ಹುಚ್ಚು ಹಿಡಿಯುತ್ತದೆ. ಸದಾಶಿವನಿಗೊಂದು ಮನೆಯಿತ್ತು. ಬೀಡಿ ಹೊಸೆಯುವ ಹೆಂಡತಿ ಇದ್ದಳು. ಹಿತ್ತಿಲಿನಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಕನ್ನಡ ಶಾಲೆಗೆ ಹೋಗುವ ಮಗನೂ ಬೇಸಿಗೆಯಲ್ಲಿಯೂ ಬತ್ತದ ಸರಕಾರಿ ಬಾವಿಯ ನೀರೂ ಇತ್ತು. ಆದರೆ ಇಷ್ಟು ಸ್ವಾತಂತ್ರ್ಯ ಅವನಿಗೆ ಸಾಕಾಗಲಿಲ್ಲವೇನೋ?

ಈ ಹೇಮಾಮಾಲಿನಿ ಎಂಬ ಅನ್ವರ್ಥಕನಾಮ ಬಂದಿದ್ದು ಧರ್ಮೇಂದ್ರ ನಂತಹ ಸ್ಪರದ್ರೂಪಿ ಯುವಕನೊಂದಿಗಿನ ಓಡಾಟದಿಂದ ಅಂತ ಜನ ಆಡಿಕೊಳ್ಳುತ್ತಿದ್ದರು. ಒಂದು ಕಾಲದಲ್ಲಿ ಇಂದುಮತಿ ಎಂಬ ಸುಂದರಿ ಯಾವ ಮಾಯಕದಲ್ಲೋ ಧರ್ಮೇಂದ್ರನಂತಹ ಹುಡುಗನೊಂದಿಗೆ ಪ್ರೇಮ ವೈಫಲ್ಯವಾಗಿ ಇದೇ ಕೊರಗಿನಲ್ಲಿ ಅವಳು ಹುಚ್ಚಿಯಾಗಿದ್ದಾಳೆಂದು ಹೇಳುತ್ತಿದ್ದರು.

ಹೆಂಡತಿ ಹೊಸೆಯುವ ಬೀಡಿ, ಶೆಟ್ಟರಂಗಡಿಯ ಚಹಾ ಮಿಲಾಯಿಸುವಿಕೆಯಂತಹ ಪುನರಾವರ್ತನೆಯಂತಹ ಕೆಲಸಗಳನ್ನು ನೋಡಿದರೆ ಅವನಿಗೆ ಆಗುತ್ತಿರಲಿಲ್ಲ. ಹೀಗೊಂದು ದಿನ ಶೆಟ್ಟರು ಚಹಾ ಮಿಲಾಯಿಸುವಾಗಲೇ ಅವರ ಮುಖಕೆ ಚಹಾ ಎಸೆದು ಇದ್ದಕ್ಕಿದ್ದಂತೆ ಒಂದು ದಿನ ಅಧಿಕೃತವಾಗಿ ಹುಚ್ಚನ ಪಟ್ಟವೇರಿಸಿಕೊಂಡ. ದಾಡಿ ಮೀಸೆ ಕ್ಷೌರ ಮಾಡದೇ ಕೊಳೆ ಬಟ್ಟೆಗಳನ್ನು ಹಾಕಿಕೊಂಡು ತಲೆಗೆ ಚಿತ್ರ ವಿಚಿತ್ರವಾದ ಬಟ್ಟೆ ಸುತ್ತಿಕೊಂಡು ಜನ ಸೇರುವ ಬಸ್ ನಿಲ್ದಾಣದಲ್ಲಿ ಭಾಷಣ ಬಿಗಿಯುತ್ತಿದ್ದ. ಜನ ಅವನ ಭಾಷಣಗಳಲ್ಲದೇ ಅವನು ಇದ್ದಕ್ಕಿದ್ದಂತೆ ಹುಚ್ಚನಾದ ಅವನ ಅವತಾರವನ್ನು ನೋಡಲು ಸೇರುತ್ತಿದ್ದರು. ಹೆಚ್ಚು ಓದದ ಸದ್ದು ವಿಗೆ ಬಹುಶಃ ಸಾಕ್ರೆಟಿಸ್ ಗೊತ್ತಿರಲಿಕ್ಕಿಲ್ಲ. ಆದರೂ ಅವನು ತನ್ನ ಭಾಷಣದಲ್ಲಿ ಈ ಊರಿಗೆ ಏನು ಬೇಕು? ಈ ದೇಶದ ಉನ್ನತಿ ಹೇಗೆ? ಇಲ್ಲಿ ಪಾಪಿಗಳು ಯಾರು? ಮಹಾಪಾಪಿಗಳು ಯಾರು ಎಂಬುದನ್ನು ಚಿತ್ರದ ಮೂಲಕ ಬಿಡಿಸಿ ತೋರಿಸುತ್ತಿದ್ದ. ಹೀಗೆ ಅಂಗಡಿ ಗೋಡೆಗಳ ಮೇಲೆ ಶಾಲೆ ಗೋಡೆಗಳ ಮೇಲೆ ಅವನು ಬರೆದ ಮಸಿಯ ಚಿತ್ರಗಳು ರಾರಾಜಿಸತೊಡಗಿದವು….

ಹೀಗಿರುವಾಗ ಈ ಊರಿಗೆ ಇನ್ನೊಬ್ಬ ಹುಚ್ಚ ಬಂದು ಈ ಊರಿನವನೇ ಆದ “ಸದ್ದು” ಗೆ ಸ್ಪರ್ಧೆಯೆಂಬಂತೆ ಇನ್ನೊಬ್ಬ ಹುಚ್ಚನ ಮೇಲಾಟ ಕಂಡು ಸಹಿಸಲಾಗದೇ ಅವನನ್ನು ಈ ಊರಿನಿಂದ ಬಿಡಿಸುವ ಪ್ರಯತ್ನ ವಿಫಲವಾಗಿ ತಾನೇ ಈ ಊರು ಬಿಟ್ಟು ಹೋಗಿ ಆರು ತಿಂಗಳ ನಂತರ ವಾಪಸಾದಾಗ ಸದ್ದು ಮತ್ತೆ ಸದಾಶಿವನಾಗಿ ಹುಚ್ಚು ಬಿಟ್ಟವನಾಗುತ್ತಾನೆ. ಅಷ್ಟರಲ್ಲಿ ಆ ಇನ್ನೊಬ್ಬ ಹುಚ್ಚನೂ ಕೂಡ ಈ ಊರು ಬಿಟ್ಟಿರುತ್ತಾನೆ.

ಇದೇ ಹೋಲಿಕೆ ಇರುವ ಇನ್ನೊಂದು ಹುಚ್ಚಿನವನ ಕತೆಯನ್ನು ರವಿ ಬೆಳಗೆರೆಯವರು ಬರೆದಿದ್ದಾರೆ. ‘ಮೈಕು’ ಕಥೆಯ ಹೆಸರು. ಈ ಕಥಾ ನಾಯಕ ಹುಬ್ಬಳ್ಳಿಯ ಬಸ್ ಡಿಪೋದಲ್ಲಿ ಮಾಮೂಲಿ ಗುಮಾಸ್ತ. ಅವನು ಮೈಕಿನಲ್ಲಿ ಬಸ್ಸುಗಳ ಆಗಮನ ನಿರ್ಗಮನ ಧ್ವನಿ ವರ್ಧಕದಲ್ಲಿ ಹೇಳುವ ಕಾಯಕ. ಹೀಗಿರುವಾಗಲೇ ಇವನಿಗೂ ರವಿವಾರದ ಒಂದು ಮಧ್ಯಾನ್ಹ ಇದ್ದಕ್ಕಿದ್ದಂತೆ ಹುಚ್ಚು ಹಿಡಿದವನಂತೆ ಮೈಕಿನಲ್ಲಿ ಒದರುತ್ತ ಕುಳಿತುಕೊಳ್ಳುತ್ತಾನೆ.

“ಅಯ್ಯ ಶಿವಮೊಗ್ಗ ಡಿಪೋದ ಸವದತ್ತಿ ಯಡೆಯೂರು ಬಸ್ಸಿನ ಚಾಲಕರಾದ ವೀರಭದ್ರಯ್ಯನವರೇ ಎಲ್ಲಿದ್ದೀರಿ ಸ್ವಾಮಿ? ಕೈಲಾಸ ವಾಸಿಯಾದಿರೋ ಸುಡುಗಾಡು ಸೇರಿದಿರೋ? ಎಲ್ಲಿದ್ದರೂ ಈ ಕ್ಷಣಕ್ಕೆ ಕಂಟ್ರೋಲ್ ರೂಮಿಗೆ ಬಂದು ನಿಮ್ಮ ಮಾರಿ ಪುಗಶೆಟ್ಟಿ ತೋರಿಸಿ ಹೋಗಿರಿ ವೀರಭದ್ರಯ್ಯನವರೇ”

ಇನ್ನೊಮ್ಮೆ ಅಕ್ಕ ತಂಗಿಯರೇ ಅಣ್ಣ ತಮ್ಮಂದಿರೆ ಶಿರಸಿಗೆ ಹೋಗುವ ಬಸ್ಸು ಈ ದಿನ ಹೊರಡುವುದಿಲ್ಲ, ಆದರೆ ಮಂತ್ರಾಲಯಕೆ ಹೋಗುವ ಬಸ್ಸಿನಲ್ಲಿ ಮಂತ್ರಾಲಯಕ್ಕೆ ಹೋಗಿ ಸ್ವಾಮಿಯ ದರ್ಶನ ಮಾಡಿ ಬರಬೇಕೆಂದೂ, ಮಕ್ಕಳೇ ದೇಶದ ಮಾಣಿಕ್ಯ, ಪೋಲೀಸರೇ ಬಸ್ ಸ್ಟ್ಯಾಂಡಿನ ಮಾಣಿಕ್ಯ, ಜೈ ಹಿಂದ್ ಎಂದು ಕರೆ ಕೊಟ್ಟಾಗ ಜನ ಗೊಳ್ಳೆಂದು ನಗುತ್ತಾರೆ… ಹೀಗೆ ತಮಾಷೆ ಮಾಡುತ್ತ ಮಾಡುತ್ತ ಅವನ ಮಾತುಗಳು ದೇಶದ ಬಗ್ಗೆ ರಾಜಕಾರಣದ ಬಗ್ಗೆ ಬಾಬರೀ ಮಸ್ಜೀದಿಯ ಬಗ್ಗೆ ಹುಬ್ಬಳ್ಳಿಯ ಈದ್ಗಾ ಮೈದಾನದ ಬಗ್ಗೆ ಬಲು ಸತ್ಯವಾದ ಮಾತುಗಳನ್ನಾಡಿ ಜನರನ್ನು ರಂಜಿಸುತ್ತಲೇ ಬೆಚ್ಚಿ ಬೀಳಿಸುವ ಸತ್ಯಗಳನ್ನಾಡುತ್ತಾನೆ.

ಇಲ್ಲಿ ಮೇಲೆ ಹೇಳಿದ ಧಾರವಾಡದ ಹೇಮಾ, ಸದಾಶಿವ ಮತ್ತು ಮೈಕಿನ ವೀರಭದ್ರಯ್ಯ ಮೇಲ್ನೋಟಕ್ಕೆ ಹುಚ್ಚರಂತೆ ಕಂಡರೂ ಹುಚ್ಚನ ವೇಷದಲ್ಲಿ ಸತ್ಯ ಹೇಳುವ ಸಂತರು, ಅವಧೂತರು. ಜನರನ್ನು ರಂಜಿಸುತ್ತಲೇ ಸಮಾಜದ ಕೋರೆಗಳನ್ನು ತಿದ್ದುವ ಅವಧೂತರು. ಚಾರ್ಲಿ ಚಾಪ್ಲಿನ್ ಕೂಡ ಹಿಟ್ಲರ್ ನನ್ನು ಅಣಕಿಸಲು ಜೀವನ ಪೂರ್ತಿ ಅವನ ಅರ್ಧ ಮೀಸೆಯನ್ನೇ ತನ್ನ ಕಲೆಯಾಗಿಸಿಕೊಂಡು ಪ್ರತಿಭಟಿಸಿದ.

ಜಾಣರ ನಾಜೂಕಿನ ಮಾತುಗಳಿಗಿಂತ ಈ ಹುಚ್ಚರ ಮಾತುಗಳಿಗೆ ತೂಕ ಬರುವುದು ಇಂತಹ ನಾಟಕ ಕತೆ ಕವಿತೆಗಳಿಂದಲೇ……