ಬೆಕ್ಕೆಂದ್ರೆ ಅದೊಂದು ಚಿರಂತ ಜೀವನಪ್ರೇಮ

ಕೊಂಚ ಇಬ್ಬನಿ ಹೂ ಮಳೆ
ಮೋಹಕ ಶಿಖೆತುಂಬಿ ಹಿಡಿದಿತು
ಚಿನ್ನದಂತಹ ಬಿಸಿಲಂತು ವನದ ನೆರಳ
ಬಿಡದಂತೆ ಆವರಿಸಿತು
ಮೈಪುಳಕ ತೋಯ್ದು ಎದೆಯುಸಿರನಕಾವಳ
ಗುಳಿನಗೆ ತರಿಸಿತು

ಹಳದಿ ಎಲೆಗಳ ಕಣಿವೆ ಕಾಡು
ಸೂಕ್ಷ್ಮ ಝರಿಜಳ- ಜಳನೆ ಇಳಿದಿತು
ಹಳದಿ ಕನಕಾಂಬರದ ಹೂ
ಹೃದಯ ಕುಣಿವಂತೆ ಪರಿಮಳ ಸುಯ್ದಿಂತು

ಮುಂಜಾನೆ ಮೌನ ತಂಪನು ಅಪ್ಪಿ
ಕಂಗಳ ಬೆಳಕ ಮೂಡಿಸಿತು
ಕಾನುಧ್ಯಾನದ ಧಮನಿಭಾವಗಳ ತುಂಬ
ಕಾಂಡ್ಲ ಸೆರಗ ಜೇಡರ ಬಲೆಚಿತ್ತಾರ ತೂಗಿ
ಮಳೆ ಮಣಿ-ಮಣಿಯ ಹೊಳೆಯಬಟ್ಟಲು ತುಂಬಿತು

ಬೆಳಕಿನ ಬುಟ್ಟಿಯ ಹೊಳಪು
ಬಂಗಾರ ಮಿಶ್ರಿತ ಬೆಳ್ಳನೆ ಬೆಕ್ಕಿನ
ಮೃದುಮುದ್ದು ಹೆಜ್ಜೆಗಳು
ಮನೆ ಗೂಡಿನ ತುಂಬ
ಮಿಯೋ- ಮಿಯೋಸ್ವರವಾದಾಗ

ಗೊಂಬೆ ರೂಪವ ಹೊತ್ತು ಬೆಡಗಿನ ಬಾಲವ
ನಿಮಿರಿಸಿ
ಹಾಲುಕುಡಿಯುವಾಗ ಪ್ರೀತಿಯ ಬೆಕ್ಕು ಎಷ್ಟೊಂದು
ಮುದ್ರೆಕಂಗಳ ತೆರೆದು ಬುದ್ಧನಂತಹ ಮಂದಹಾಸ
ಸುಮ್ಮನೆ ಬೇಟೆಯಾಡದೆ ಕೂತಾಗ ಕಮಲದಳದಂತ ಆಸನ

ಕಂಗಳ ತೆರೆದು ಬಿಟ್ಟಾಗ ಎಷ್ಟೊಂದು
ನೆನಪ ಜ್ಞಾನಯುಗತೆರೆಸಿದ
ಮಹಾಸ್ವರೂಪ ದರ್ಶನ
ಜನ್ಮ ಜನ್ಮ ನೆನಪು
ಶಿಖೆಆದ್ರಿಯ ಚಿನ್ನದ ಮುಗಿಲಲಿ
ಗೊತ್ತಾಗದೆ ನಿಂದಾಗ
ಒಲವ ಪಿಸುಮಾತು
ಮಧುರ ಮಲ್ಲಿಗೆ ಬಳ್ಳಿ ತೂಗಾಡುವಾಗ
ಜಗದ ಮಹಾಯಾತನೆ ಮರೆಸು ಅತಿ ಅಕ್ಕರೆ
ಬೆಕ್ಕು ಸದಾ ಜೊತೆ ಇದ್ದಾಗ
ತುಂಬ ಚಿರಂತ ಜೀವನ ಪ್ರೇಮ

ನಂದಿನಿ ಚುಕ್ಕೇಮನೆ ಹವ್ಯಾಸಿ ಬರಹಗಾರ್ತಿ
ನೀಲಿದ್ವೀಪದ ಕನಸು ಇವರ ಪ್ರಕಟಿತ ಕವನ ಸಂಕಲನ
ಕಲೆ, ಸಂಗೀತ, ಫೋಟೋಗ್ರಫಿ ಮತ್ತು ಚಾರಣ ಇವರ ಹವ್ಯಾಸಗಳು