ರಾಹುಲ ಮತ್ತು ರೈಲು

ಕವಿತೆ ವ್ಯಕ್ತದಿಂದ ಅವ್ಯಕ್ತ
ತಲುಪಿತೆನುವಾಗ
ಮತ್ತೆಮತ್ತೆ ಓದಿ ತೃಪ್ತಿಯಲ್ಲಿ
ಅಪ್ಡೇಟಿಸಿ ಮೂರೇ ನಿಮಿಷಕ್ಕೆ
ನೂರಾದ ವ್ಯೂಸಿಗೆ
ನೆತ್ತಿ ಕತ್ತಿನ ಮೇಲೆ ನಿಲ್ಲದೆ
ಬೀಗಿ
ಡೇರೆಗಳ ನಡುವೆ
ನಾನೊಬ್ಬಳೇ ಗುಲಾಬಿ
ಎಂದು ಬೆರಗಾಗಿ
ರುವಾಗ

ಕೆಸುವಿನೆಲೆ ಮೇಲೊಂದು
ಕಂಬನಿಯ ಬಿಂದುವಿನಂತ ಪದ್ಯ
ಅಕಸ್ಮಾತ್ ಕಣ್ಣಿಗೆ ಬಿತ್ತು
ನಾಲ್ಕೇ ಪದ..
‘ಬುದ್ದ..ವೃದ್ಧಿ.. ಅನ್ನ ಮತ್ತು ನಿನ್ನೆ..’

ಕವಿತೆ ಹೇಳಿಲ್ಲ
ಅವರ ನಾಳೆಗಳ ಕುರಿತು
ಸಿಕ್ಕಿದ್ದ ಹಿಡಿ ಬೆಳಕ
ಹೊದ್ದು ಮಲಗಿದ್ದರು..

ಅದು
ಕೊನೆಯ ಮಾತು
ಕೊನೆಯ ತುತ್ತು
ಕೊನೆಯ ಮುತ್ತು
ಕೊನೆಯ ಆಕಾಶ
ಕೊನೆಯ ನಿದ್ದೆ
ಕೊನೆಯ ಬೆಳದಿಂಗಳು

ಕಾಲು ಬಳಲಿದ ಕೂಸು
ಕನವರಿಕೆಯಲಿ ಕೇಳುತಿದೆ
‘ಇನ್ನೆಷ್ಟು ದೂರವಮ್ಮಾ..?’

ಸುಖದ ಊರಿಗೆ ಸೀಟಿ ಊದಿ
ಬಂದ ರೈಲು
ಕೂಸಿನೆದೆಯಲ್ಲಿ ಉಸುರಿತು
ಉಂಡು ಮಲಗು ಕಂದಾ
ಇನ್ನು ಬರೀ ಸೊನ್ನೆ ಮೈಲು..

ತೃಪ್ತ ಸಿದ್ದಾರ್ಥ ಎದ್ದ ಮಗ್ಗುಲಿಂದ
ವಲ್ಲಿ ಸರಿಮಾಡಿಕೊಂಡಳು ಯಶೋಧರೆ
ಗೆ ಗಾಬರಿ..
ಎಲ್ಲಿ ರಾಹುಲ…
ರಾಹುಲ…ರಾಹುಲ..?
ರೈಲು ಬಂತೇ..ಹೋಯ್ತೇ…ರಾಹುಲ..??