”ಕರೆ ಹಿಡಿದು ಕಪ್ಪಗಾಗಿದ್ದ ಸೂಟ್‌ಕೇಸಿನೊಳಗೆ ಅಸಂಖ್ಯವಾಗಿದ್ದ ಅರ್ಜಿ ಬರೆಯುವ ಕಾಗದಗಳು, ಆದಾಯ, ಜಾತಿ, ಸ್ಥಳ ದೃಡಿಕರಣದ ಅರ್ಜಿ ನಮೂನೆಗಳು. ಬಗೆಬಗೆಯ ಬಣ್ಣದ ಪೆನ್ನುಗಳು, ಇಂಕ್ ಪ್ಯಾಡ್ ಮತ್ತಿತ್ತರ ಸಾಮಾಗ್ರಿಗಳನ್ನು ಕಂಡಾಗ ಕನ್ನಡಕದಾರಿ ತಾಲ್ಲೂಕಾಫೀಸಿನ ಏಳುಸುತ್ತಿನಕೋಟೆಯ ಹೆಬ್ಬಾಗಿನ ಕೀಲಿ ಕೈಯಂತೆ ಕಂಡಿದ್ದ ಮನ್ಯಾತನಿಗೆ. ಯಾರಾದರೂ ಅರ್ಜಿ ಬರೆಸಿಕೊಳ್ಳಲು ಆ ಕನ್ನಡಕದಾರಿಯ ಬಳಿ ಬಂದರೆ ಸೂಟ್‌ಕೇಸಿನ ಒಳಗಿನಿಂದ ಬಿಳಿ ಹಾಳೆಯೊಂದನ್ನು ತೆಗೆದು ಪಕ್ಕದಲ್ಲೆ ಇರುವ ಕುರ್ಚಿಯಲ್ಲಿ ಅರ್ಜಿ ಬರೆಸುವವನನ್ನು ಕುಳಿತುಕೊಳ್ಳಲು ಹೇಳಿ ಅರ್ಜಿ ಬರೆಯಲು ಪ್ರಾರಂಭಿಸುತ್ತಿದ್ದ”
ನಂದೀಶ್ ಬಂಕೇನಹಳ್ಳಿ ಬರೆದ ವಾರದ ಕತೆ

 

‘ಥತ್ ಈ ಬಸ್ಸಿನ್ ದೆಸಿಂದ ಬರ್‌ಕತ್ ಇಲ್ಲ. ಎಲ್ಲರಾ ಹೊಲ್ಟಾಗ್ಲೆ ಇದ್ಕ್ ರೋಗ ಬಂದ್ ಸಾಯಾದ್’ ಎಂದು ಕಾನಳ್ಳಿಯ ಬಸ್‌ಸ್ಟ್ಯಾಂಡಿನ ಮುಂದಿನ ಮೋರಿ ಕಟ್ಟೆಯ ಮೇಲೆ ಕುಳಿತು ಮನ್ಯಾತ ತಾನು ಸೇದುತ್ತಿದ್ದ ಬೀಡಿಗಿಂತ ಹೆಚ್ಚಾಗಿ ತನ್ನ ಅಸಮಾಧಾನದ ಹೊಗೆ ಕಾರುತ್ತಿರುವಾಗಲೇ ಬಸ್ಸು  ಧೂಳೆಬ್ಬಿಸುತ್ತಾ ಬಂದು ಉಫ್ ಎಂದು ಏದುಸಿರು ಬಿಡುತ್ತಾ ಸಶಬ್ದವಾಗಿ ಬಂದು ನಿಂತಿತು.

ಸಂತೆಯ ದಿನವಾದ್ದರಿಂದ ತುಂಬು ಬಸುರಿಯಂತೆ ತೂಯ್ದಾಡುತ್ತಿದ್ದ ಬಸ್ಸನ್ನು ಕಂಡಕೂಡಲೇ ಮನ್ಯಾತನ ಅಸಮಾಧಾನ ಮತ್ತಷ್ಟು ಏರಿತು. ಆದರೂ ಸಾವರಿಸಿಕೊಂಡು ಬಸನ್ನೇರಿ ಕಂಬಿ ಹಿಡಿದು ನಿಂತ ಮನ್ಯಾತ ಪಡುಗೆರೆ ಪ್ಯಾಟಿ ಎನ್ನುತ್ತಾ ತನ್ನ ಜೇಬಿನಲ್ಲಿ ಚಿಲ್ಲರೆ ತಡಕಾಡುವುದಕ್ಕೂ ಬಸ್ಸಿಗೆ ಅಡ್ಡ ಬಂದ ಕರುವನ್ನು ತಪ್ಪಿಸಲು ಡ್ರೈವರ ಬ್ರೇಕ್ ಹಾಕುವುದಕ್ಕೂ ಸರಿಯಾಗಿ, ಮನ್ಯಾತ ಮುಗ್ಗರಿಸಿ ಮುಂದಿದ್ದ ಕಾಲೇಜು ಹುಡುಗರ ಮೇಲೆ ಆಯ ತಪ್ಪುವಂತೆ ಬಿದ್ದವನ್ನೂ ಸಾವರಿಸಿಕೊಂಡ.

ಇನ್ನೆನು ಬಿದ್ದೇ ಹೋದೆ ಎಂದುಕೊಂಡು ಜೇಬಿನಲ್ಲಿ ಚಿಲ್ಲರೆ ಹೊರತೆಗೆದವನು ಕಂಬಿ ಹಿಡಿಯುವ ಗಲಿಬಿಲಿಯಲ್ಲಿ ಚಿಲ್ಲರೆ ಸದ್ದು ಮಾಡುತ್ತಾ ಸುತ್ತ ಚದುರಿ ಬಿದ್ದಿತು. ಬಗ್ಗಿ ಹೆಕ್ಕಿಕೊಳ್ಳಲು ಸಾಧ್ಯವಾಗದಿದ್ದಾಗ ಅವನ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಂತಾಯಿತು. ಆ ವೇಳೆಗೆ ಪಡುಗೆರೆ ಪ್ಯಾಟೆ ಬರಲು ಮನ್ಯಾತ ಎಲ್ಲ ಪ್ರಯಾಣಿಕರು ಇಳಿದ ನಂತರ ಬಿದ್ದಿದ್ದ ಚಿಲ್ಲರೆಯನ್ನು ಜೇಬಿಗಿಳಿಸಿ ಬಸ್ಸಿಳಿದ. ವಾಹನಗಳ ಸದ್ದು, ಜನರ ಮಾತಿನ ಸದ್ದು ಜನಗಳನಗನ್ನು ಕೂಗಿ ಕರೆಯುವ ಆಟೋ ಜೀಪಿನವರ ಸದ್ದು, ಹಣ್ಣು ತರಕಾರಿ ಮಾರುವವರು ಗಿರಾಕಿಗಳನ್ನು ಆಕರ್ಷಿಸಲು ಮಾಡುವ ಸದ್ದು ಎಲ್ಲವೂ ಸೇರಿ ಮನ್ಯಾತನಿಗೆ ತನ್ನ ಅಸಮಾಧಾನ ಹೆಚ್ಚಲು ಮತ್ತೊಂದು ಕಾರಣ ಸಿಕ್ಕಂತಾಯಿತು.

ಸಂತೆಯ ದಿನವಾದ್ದರಿಂದ ತುಂಬು ಬಸುರಿಯಂತೆ ತೂಯ್ದಾಡುತ್ತಿದ್ದ ಬಸ್ಸನ್ನು ಕಂಡಕೂಡಲೇ ಮನ್ಯಾತನ ಅಸಮಾಧಾನ ಮತ್ತಷ್ಟು ಏರಿತು. ಆದರೂ ಸಾವರಿಸಿಕೊಂಡು ಬಸನ್ನೇರಿ ಕಂಬಿ ಹಿಡಿದು ನಿಂತ ಮನ್ಯಾತ ಪಡುಗೆರೆ ಪ್ಯಾಟಿ ಎನ್ನುತ್ತಾ ತನ್ನ ಜೇಬಿನಲ್ಲಿ ಚಿಲ್ಲರೆ ತಡಕಾಡುವುದಕ್ಕೂ ಬಸ್ಸಿಗೆ ಅಡ್ಡ ಬಂದ ಕರುವನ್ನು ತಪ್ಪಿಸಲು ಡ್ರೈವರ ಬ್ರೇಕ್ ಹಾಕುವುದಕ್ಕೂ ಸರಿಯಾಗಿ, ಮನ್ಯಾತ ಮುಗ್ಗರಿಸಿ ಮುಂದಿದ್ದ ಕಾಲೇಜು ಹುಡುಗರ ಮೇಲೆ ಆಯ ತಪ್ಪುವಂತೆ ಬಿದ್ದವನ್ನೂ ಸಾವರಿಸಿಕೊಂಡ.

ತನ್ನ ಅಂಗಿಯ ಜೇಬಿನಲ್ಲಿದ್ದ ಕಾಗದ ಪತ್ರಗಳ ಕಡೆಗೊಮ್ಮೆ ನೋಡಿ ತಾಲ್ಲೂಕಾಫೀಸಿನ ಕಡೆಗೆ ಹೆಜ್ಜೆ ಹಾಕಿದ ಮನ್ಯಾತ. ಕೆಂಪು ಬಣ್ಣ ಹೊಡೆದ ಆ ಸರ್ಕಾರಿ ಕಟ್ಟಡಕ್ಕೆ ಹೊಂದಿಕೊಂಡಂತೇ ಇರುವ ಬ್ಯಾನರ್ ಒಂದರಲ್ಲಿ ನಗುಮೊಗದ ಬರಿಮೈಯ ಗಾಂಧಿ, ಗಾಂಧಿಯ ಮೇಲ್ಭಾಗದಲ್ಲಿ ಗರಿಗರಿಯ ಖಾದಿ ತೊಟ್ಟು ಹತ್ತು ಬೆರಳುಗಳಿಗೆ ಬಗೆಬಗೆಯ ಉಂಗುರ ತೊಟ್ಟು ನಮಸ್ಕಾರ ಬಂಗಿಯಲ್ಲಿರುವ ಮಂತ್ರಿಯೊಬ್ಬರ ಚಿತ್ರದ ಕಡೆಗೊಮ್ಮೆ ನೋಡಿದ. ಈ ಮುಂಚೆ ಬ್ಯಾನರ್ ಇದ್ದ ಜಾಗದಲ್ಲಿ ಟೇಬಲ್ ಒಂದರಲ್ಲಿ ಸೂಟಕೇಸ್ ಇಟ್ಟುಕೊಂಡು ಕುಳಿತುಕೊಳ್ಳುತ್ತಿದ್ದ ಕನ್ನಡಕದಾರಿಯನ್ನು ಹುಡುಕುಗಣ್ಣಿನಿಂದ ನೋಡಿದ. ಅದರೆ ಅವನಾಗಲಿ ಆ ಸೂಟಕೇಸಿನ ಟೇಬಲ್ಲಾಗಲಿ ಕಾಣದಿದ್ದಾಗ ಜಾಗ ಬದಲಿಸಿರಬೇಕೆಂದುಕೊಂಡು ತಾಲ್ಲೂಕಾಫಿಸಿನ ಒಂದು ಸುತ್ತು ಬಂದ.

ಈ ಹಿಂದೆ ಮನ್ಯಾತ ತನ್ನ ಮಕ್ಕಳನ್ನು ಶಾಲೆಗೆ ಸೇರಿಸಲು ಬೇಕಾದ ಆದಾಯ, ಜಾತಿ ಧೃಡಿಕರಣ ಪತ್ರ ಮತ್ತಿತ್ತರ ದಾಖಲೆಗಳನ್ನು ಮಾಡಿಸಿಕೊಳ್ಳಬೇಕಾರೆ ವಾರದ ಸಂತೆಯ ದಿನ ಪಡುಗೆರೆ ಪ್ಯಾಟಿಗೆ ಬರುತ್ತಿದ್ದ ಮನ್ಯಾತ ತಾಲ್ಲೂಕಾಫೀಸಿನ ಕನ್ನಡಕಧಾರಿಯ ಬಳಿ ಹೋಗಿ ಅರ್ಜಿ ಬರೆಸಿ ಹೇಳಿ ಬರುತ್ತಿದ್ದ, ಪೇಟೆಯ ಕೆಲಸಗಳು ಮುಗಿಸಿಕೊಂಡು ಬರುವಷ್ಟರಲ್ಲಿ ಧೃಡಿಕರಣ ಪತ್ರ ರೆಡಿಯಾಗಿರುತ್ತಿತ್ತು. ಆದರೆ ಈಗ ಆ ಸೂಟ್‌ಕೇಸ್ ಇಟ್ಟಿರುತ್ತಿದ್ದ ಟೇಬಲ್ ಆಗಲಿ, ಆ ಕನ್ನಡಕದಾರಿಯಾಗಲಿ ಅಲ್ಲಿ ಕಾಣಸಲಿಲ್ಲ.

ಈ ಹಿಂದೆ ಅದೆಷ್ಟೋ ಬಾರಿ ಎಂಥೆಂತದೋ ಕಾಗದ ಪತ್ರಗಳನ್ನು ಮಾಡಿಸಲು ತಾಲ್ಲೂಕಾಫೀಸಿಗೆ ಬಂದಾಗ ಅಲ್ಲಿನ ಅಧಿಕಾರಿಗಳು ಸಬೂಬು ಹೇಳಿ ಸತಾಯಿಸುತ್ತಿದಾಗ ಅದೇ ಕನ್ನಡಕದಾರಿ ತಾಲ್ಲೂಕಾಫೀಸಿನ ಗೇಟಿನ ಬಳಿ ಚಿಂತಾಕ್ರಾಂತನಾಗಿ ನಿಂತಿದ್ದ ಮನ್ಯಾತನ್ನು ಗಮನಿಸಿ ಹತ್ತಿರ ಕರೆದು ವಿಚಾರಿಸಿ ಇಲ್ಲೆ ಕೂತಿರಿ ಈಗ ಬಂದೇ ಎಂದು ತಾಲ್ಲೂಕಾಫೀಸಿನ ಅರ್ಥವೇ ಆಗದ ಅಕ್ಷಯ ಸುಳಿಯೊಳಗೆ ನುಸುಳಿ ಮನ್ಯಾತನಿಗೆ ಬೇಕಾದ ಕಾಗದ ಪತ್ರಗಳನ್ನು ಮನ್ಯಾತನೆದುರು ತಂದು ಇಟ್ಟಿದ್ದ. ಆ ಕನ್ನಡಕದಾರಿಯು ಇಂತಿಷ್ಟೆ ಹಣ ಕೊಡಿ ಎಂದು ಕೇಳಿದವನಲ್ಲ. ‘ನಮ್ಗೂ ಗೊತ್ತಾಗ್ತದೆ, ಬಡವರ್ಯಾರು, ದುಡ್ಡಿರೋರ್ಯಾರು’  ಎನ್ನುತ್ತಾ ಅರ್ಜಿ ಬರೆದುಕೊಟ್ಟಿದಕ್ಕೆ ಮಾತ್ರ ಚಾಕಾಫಿ ಖರ್ಚಿಗೆ ಮಾತ್ರ ಹಣ ತೆಗೆದುಕೊಳ್ಳುತ್ತಿದ್ದ. ಕಾಗದ ಪತ್ರಗಳು ಬೇಕಾದಾಗ, ರೇಷನ್ ಕಾರ್ಡು, ಚುನಾವಣೆ ಗುರುತಿನ ಚೀಟಿ ಮಾಡಿಸುವಾಗಲೆಲ್ಲಾ ಆ ಕನ್ನಡಕದಾರಿ ಬಳಿಯೇ ಮನ್ಯಾತ ಬರುತ್ತಿದ್ದನಾದರೂ ಅವನ ಹೆಸರು ಮಾತ್ರ ಮನ್ಯಾತನಿಗೆ ಗೊತ್ತಿರಲಿಲ್ಲ. ಕನ್ನಡಕದಾರಿಯ ಬಳಿ ಕೆಲಸ ಮಾಡಿಸಿಕೊಳ್ಳಲು ಬರುವವರೆಲ್ಲರೂ ಸಾರ್ ಎಂದೆ ಕರೆಯುತ್ತಿದ್ದರಿಂದ ಮನ್ಯಾತನೂ ಕೂಡ ಹಾಗೇ ಕರೆಯುತ್ತಿದ್ದ.

ಆ ಕನ್ನಡಕದಾರಿಯು ಇಂತಿಷ್ಟೆ ಹಣ ಕೊಡಿ ಎಂದು ಕೇಳಿದವನಲ್ಲ. ‘ನಮ್ಗೂ ಗೊತ್ತಾಗ್ತದೇ, ಬಡವರ್ಯಾರು, ದುಡ್ಡಿರೋರ್ಯಾರು’  ಎನ್ನುತ್ತಾ ಅರ್ಜಿ ಬರೆದುಕೊಟ್ಟಿದಕ್ಕೆ ಮಾತ್ರ ಚಾಕಾಫಿ ಖರ್ಚಿಗೆ ಮಾತ್ರ ಹಣ ತೆಗೆದುಕೊಳ್ಳುತ್ತಿದ್ದ. ಕಾಗದ ಪತ್ರಗಳು ಬೇಕಾದಾಗ, ರೇಷನ್ ಕಾರ್ಡು, ಚುನಾವಣೆ ಗುರುತಿನ ಚೀಟಿ ಮಾಡಿಸುವಾಗಲೆಲ್ಲಾ ಆ ಕನ್ನಡಕದಾರಿ ಬಳಿಯೇ ಮನ್ಯಾತ ಬರುತ್ತಿದ್ದನಾದರೂ ಅವನ ಹೆಸರು ಮಾತ್ರ ಮನ್ಯಾತನಿಗೆ ಗೊತ್ತಿರಲಿಲ್ಲ.

ಕರೆ ಹಿಡಿದು ಕಪ್ಪಗಾಗಿದ್ದ ಸೂಟ್‌ಕೇಸಿನೊಳಗೆ ಅಸಂಖ್ಯವಾಗಿದ್ದ ಅರ್ಜಿ ಬರೆಯುವ ಕಾಗದಗಳು, ಆದಾಯ, ಜಾತಿ, ಸ್ಥಳ ದೃಡಿಕರಣದ ಅರ್ಜಿ ನಮೂನೆಗಳು. ಬಗೆಬಗೆಯ ಬಣ್ಣದ ಪೆನ್ನುಗಳು, ಇಂಕ್ ಪ್ಯಾಡ್ ಮತ್ತಿತ್ತರ ಸಾಮಾಗ್ರಿಗಳನ್ನು ಕಂಡಾಗ ಕನ್ನಡಕದಾರಿ ಸದಾ ಗೊಂದಲದ ಗೋಜಲುಗೋಜಲಾದ ತಾಲ್ಲೂಕಾಫೀಸಿನ ಏಳುಸುತ್ತಿನಕೋಟೆಯ ಹೆಬ್ಬಾಗಿನ ಕೀಲಿ ಕೈಯಂತೆ ಕಂಡಿದ್ದ ಮನ್ಯಾತನಿಗೆ. ಯಾರಾದರೂ ಅರ್ಜಿ ಬರೆಸಿಕೊಳ್ಳಲು ಆ ಕನ್ನಡಕದಾರಿಯ ಬಳಿ ಬಂದರೆ ಸೂಟ್‌ಕೇಸಿನ ಒಳಗಿನಿಂದ ಬಿಳಿ ಹಾಳೆಯೊಂದನ್ನು ತೆಗೆದು ಸೂಟ್‌ಕೇಸಿನ ಮೇಲಿಟ್ಟು ಪಕ್ಕದಲ್ಲೆ ಇರುವ ಕುರ್ಚಿಯಲ್ಲಿ ಅರ್ಜಿ ಬರೆಸುವವನನ್ನು ಕುಳಿತುಕೊಳ್ಳಲು ಹೇಳಿ ಅರ್ಜಿ ಬರೆಯಲು ಪ್ರಾರಂಭಿಸುತ್ತಿದ್ದ.

ಅಳುಕಿನಿಂದಲೆ ಮನ್ಯಾತ ತಾಲ್ಲೂಕಾಫಿಸಿನೊಳಗೆ ಹೋದಾಗಲ್ಲೆಲ್ಲಾ ಅಲ್ಲಿನ ಅಧಿಕಾರಿಗಳು ಗ್ರಾ.ಪಂ ಯಿಂದ ಬರೆಸಿಕೊಂಡು ಬನ್ನಿ ಅಂತಲೋ, ಒಂದು ತಿಂಗಳು ಬಿಟ್ಟುಕೊಂಡು ಬನ್ನಿ ಅಂಥಲೋ ಹೇಳಿ ತಲೆ ಗೊಂದಲದ ಗೂಡಾಗುವಂತೆ ಮಾಡುತ್ತಿದ್ದರು. ಹಿಂದೊಮ್ಮೆ ರೇಷನ್ ಕಾರ್ಡಿನಲ್ಲಿ ವಾಸಸ್ಥಳ ಬದಲಾವಣೆ ಮಾಡಬೇಕೆಂದು ತಾಲ್ಲೂಕಾಫಿಸಿಗೆ ಬಂದಾಗ ಆಹಾರ ಶಾಖೆಯಲ್ಲಿದ್ದ ಅಧಿಕಾರಿಯೊಬ್ಬ  ‘ನೀವು ಮುಂಚೆ ಇದ್ದ ಗ್ರಾ.ಪಂಯಲ್ಲಿ ಕಂಪ್ಯೂಟರ್‌ನಲ್ಲಿ ನೇಮ್ ಡಿಲೀಟ್ ಮಾಡ್ಸಿ, ಈಗ ನೀವ್ ಇರೋ ಪಂಚಾಯತಿ ಸಿಸ್ಟಮ್‌ನಲ್ಲಿ ನ್ಯೂ ನೇಮ್ ಸೇರ್ಸಿ, ರೆಸಿಡೆಂಟ್ ಸರ್ಟಿಫಿಕೇಟಿಗೆ ಸೆಕ್ರೆಟರಿ ಸೈನ್ ಮಾಡ್ಸಿ ತನ್ನಿ. ಎಲೆಕ್ಷನ್ ಐಡೆಂಟಿ ಕಾರ್ಡ್, ಒಲ್ಡ್ ರೇಷನ್ ಕಾರ್ಡ್, ಕರೆಂಟ್ ಬಿಲ್, ಕಂದಾಯ ರಶೀದಿ, ಆದಾರ್ ಕಾರ್ಡ್ ಜೆರಾಕ್ಸ್ ಆಲ್ ಮೆಂಬರ್‌ದು ಬೇಕು. ಅಷ್ಷನ್ನೂ ಫುಡ್ ಸೆಕ್ಷನ್‌ನಲ್ಲಿ ಕೊಟ್ಟು ಒಂದು ತಿಂಗಳು ಬಿಟ್ಟು’ ಬನ್ನಿ ಎಂದು ದೇವಸ್ಥಾನದಲ್ಲಿ ಅರ್ಚಕರು ಮಂತ್ರ ಹೇಳುವುದಕ್ಕಿಂತಲೂ ವೇಗವಾಗಿ ಹೇಳಿದ್ದ. ಮನ್ಯಾತನಿಗೆ ಏನೊಂದು ಅರ್ಥವಾಗದೆ, ಅಸಂಖ್ಯಾತ ಒಳಸುಳಿಗಳಿರುವ ಚಕ್ರವ್ಯೂಹದೊಳಗೆ ಪ್ರವೇಶಿಸಿದಂತಾಗಿತ್ತು.

ಒಳಗೆ ಹೋಗಲೋ ಬೇಡವೋ ಎಂದು ಅರ್ಧ ಮನಸ್ಸಿನಿಂದಲೆ ತಾಲ್ಲೂಕಾಫೀಸಿನೊಳಗೆ ಹೋದ ಮನ್ಯಾತ ಆಹಾರ ಶಾಖೆ ಎಂದು ಬರೆದಿದ್ದ ಕೊಠಡಿಯೊಳಗೆ ಪ್ರವೇಶಿಸಿದ. ಕಂತೆಕಂತೆಗಳಾಗಿ ಜೋಡಿಸಿಟ್ಟಿದ್ದ ಕಾಗದಪತ್ರಗಳ ರಾಶಿಯ ನಡುವೆ ಒಂದಿಬ್ಬರು ಕಂಪ್ಯೂಟರ್ ಪರದೆಯ ಮುಂದೆ ಕೂತು ಟೈಪಿಸುತ್ತಾ ಕುಳಿತಿದ್ದರು. ಕೊಠಡಿಯ ಹೊರಗೆ ಒಂದಷ್ಟು ಗೊಂದಲದ ಮುಖಗಳು ನಿಂತು, ಕುಳಿತು, ಗೋಡೆಗೊರಗಿ ನಾನಾ ಭಂಗಿಗಳಲ್ಲಿ ಕಾಯುತ್ತಿದ್ದರು. ಮನ್ಯಾತ ಕಂಪ್ಯೂಟರ್ ಮುಂದೆ ಕುಳಿತು ಟೈಪಿಸುತ್ತಿದ್ದವನ ಬಳಿ ಹೋಗಿ ದಾಖಲೆ ಪತ್ರಗಳನ್ನು ಕೊಟ್ಟ. ಅದನ್ನೊಮ್ಮೆ ತಿರುವಿ ಹಾಕಿ ಏನಾದ್ರೂ ಕೆಲ್ಸ ಇದ್ರೆ ಮುಗಿಸ್ಕೊಂಡು ಅರ್ಧ ಗಂಟೆ ಬಿಟ್ಟು ಬನ್ನಿ ಎಂದ ಟೈಪಿಸುತ್ತಾ ಕುಳಿತವ. ಮನ್ಯಾತ ಅದುವರೆಗೂ ಉಳಿದವರು ಕಾಯುತ್ತಾ ನಿಂತಿದ್ದ ಆಹಾರ ಶಾಖೆಯ ಮುಂಭಾಗದಲ್ಲಿ ಕಾಯುತ್ತಾ ನಿಂತ. ತನ್ನ ಎಚ್‌ಎಂಟಿ ವಾಚಿನ ಕಡೆಗೊಮ್ಮೆ ನೋಡಿದ. ಸಮಯ ಯಾಕೋ ನಿಧಾನವಾಗಿ ಸರಿಯುತ್ತಿರುವಂತೆ ಅನಿಸಿತ್ತು ಅವನಿಗೆ. ವಾಚಿನ ಸಮಯಕ್ಕಿಂತಲೂ ೧೨ ವರ್ಷಗಳಿಂದ ತನ್ನ ಕೈಯಲ್ಲಿ ಕಂಗೊಳಿಸುತ್ತಿದ್ದ ಎಚ್‌ಎಂಟಿ ವಾಚನ್ನು ಕಂಡು ಹಿಂದೆ ಅದೆಷ್ಟೋ ಬಾರಿ ಅನಿಸಿದಂತೆ ಎದೆಯಲ್ಲಿ ಖುಷಿಯ ನೆನಪಿನ ಭಾವವೊಂದು ಪಸರಿಸಿದಂತಾಗಿ ತುಟಿಅಂಚಲ್ಲಿ ಕಿರುನಗು ಇಣುಕಿತು.

ಕರೆ ಹಿಡಿದು ಕಪ್ಪಗಾಗಿದ್ದ ಸೂಟ್‌ಕೇಸಿನೊಳಗೆ ಅಸಂಖ್ಯವಾಗಿದ್ದ ಅರ್ಜಿ ಬರೆಯುವ ಕಾಗದಗಳು, ಆದಾಯ, ಜಾತಿ, ಸ್ಥಳ ದೃಡಿಕರಣದ ಅರ್ಜಿ ನಮೂನೆಗಳು. ಬಗೆಬಗೆಯ ಬಣ್ಣದ ಪೆನ್ನುಗಳು, ಇಂಕ್ ಪ್ಯಾಡ್ ಮತ್ತಿತ್ತರ ಸಾಮಾಗ್ರಿಗಳನ್ನು ಕಂಡಾಗ ಕನ್ನಡಕದಾರಿ ಸದಾ ಗೊಂದಲದ ಗೋಜಲುಗೋಜಲಾದ ತಾಲ್ಲೂಕಾಫೀಸಿನ ಏಳುಸುತ್ತಿನಕೋಟೆಯ ಹೆಬ್ಬಾಗಿನ ಕೀಲಿ ಕೈಯಂತೆ ಕಂಡಿದ್ದ ಮನ್ಯಾತನಿಗೆ.

೧೨ ವರ್ಷದ ಹಿಂದೆ ಮೂಡ್ಗೇರಿ ಪ್ಯಾಟೆಯ ಮಾರ್ವಾಡಿ ಅಂಗಡಿಯಲ್ಲಿ ಯಾರೋ ಅಡವಿಟ್ಟು ಬಿಡಿಸದೇ ಉಳಿದ ಎಚ್‌ಎಂಟಿ ವಾಚನ್ನು ಮನ್ಯಾತ ಅಂಟುವಾಳ ಮಾರಿದ ದುಡ್ಡಿನಲ್ಲಿ ಕೊಂಡಿದ್ದ. ಆಗೆಲ್ಲಾ ಚಿನ್ನವನ್ನು ಅಡವಿಡುವಂತೆ ವಾಚನ್ನು ಕೂಡ ಮಾರ್ವಾಡಿ ಅಂಗಡಿಯಲ್ಲಿ ಅಡವಿಡಲಾಗುತ್ತಿತ್ತು. ಅಡವಿಟ್ಟವರು ವಾಚನ್ನು ಬಿಡಿಸಿಕೊಳ್ಳದೇ ಹೋದಾಗ ವಾಚನ್ನು ಮಾರಾಟ ಮಾಡುವ ಕ್ರಮವಿತ್ತು. ಮನ್ಯಾತ ಹಾಗೆ ಕೊಂಡ ಎಚ್‌ಎಂಟಿ ವಾಚು ದಶಕಕ್ಕೂ ಹೆಚ್ಚು ಕಾಲ ಅವನ ಜೊತೆಯಲ್ಲೆ ಮುಂದಡಿ ಇಡುತ್ತಿತ್ತು. ಇಂದಿಗೂ ಇಡುತ್ತಿದೆ.

ಎಚ್‌ಎಂಟಿ ವಾಚಿನ ಜೊತೆಗೆ ಮನ್ಯಾತನಿಗೆ ಪ್ರಿಯವಾದ ಮತ್ತೊಂದು ವಸ್ತು ಫಿಲಿಪ್ಸ್ ರೇಡಿಯೋ. ಅವನ ದಿನ ಪ್ರಾರಂಭವಾಗುವುದು ರೇಡಿಯೋದ ಸದ್ದಿನಿಂದಲೇ. ಇತ್ತೀಚೆಗೆ ದೂರದ ಬೆಂಗಳೂರಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿರುವ ಮಗ ಹಲವು ವರ್ಷದ ಹಿಂದೆ ಮನ್ಯಾತನಿಗೆ ತೆಗೆದುಕೊಟ್ಟ ನೋಕಿಯಾ ಮೊಬೈಲ್ ಜೊತೆಗಾಗಿತ್ತು. ಎಚ್‌ಎಂಟಿ ವಾಚು, ನೋಕಿಯಾ ಮೊಬೈಲ್, ಫಿಲಿಪ್ಸ್ ರೇಡಿಯೋ ಮಾತ್ರ ಗ್ಯಾರಂಟಿ ವಸ್ತುಗಳು ಎನ್ನುವುದು ಮನ್ಯಾತನ ಬಲವಾದ ನಂಬಿಕೆ. ಆದರೆ ಎಚ್‌ಎಂಟಿ, ನೋಕಿಯಾ ಕಂಪನಿಗಳು ಬಾಗಿಲು ಮುಚ್ಚಿ ವರ್ಷಗಳೆ ಕಳೆದಿದೆ ಎನ್ನುವ ವಿಷಯ ಮನ್ಯಾತನಿಗೆ ತಿಳಿದಿರಲಿಲ್ಲ. ತಿಳಿದರೂ ನಂಬುತ್ತಲ್ಲೂ ಇರಲಿಲ್ಲ. ರೇಡಿಯೋಗಳು ಬಳಸುವವರೇ ಇಲ್ಲದೆ ಹಿನ್ನಲೆಗೆ ಸರಿದಿದ್ದರೂ ಮನ್ಯಾತ ತನ್ನ ಮನೆಯ ರೇಡಿಯೋವನ್ನು ಮಾತ್ರ ಕೆಟ್ಟಾಗಲೆಲ್ಲಾ ರೆಡಿ ಮಾಡಿಸಿಕೊಂಡು ಬಂದು ಹಾಡಿಸುತ್ತಿದ್ದ. ಒಂದು ದಿನ ರೇಡಿಯೋ ಇಲ್ಲದಿದ್ದರೇ ಅವತ್ತಿನ ದಿನ ಉತ್ಸಾಹ ಇಲ್ಲದಂತಾಗುತ್ತಿತ್ತು ಅವನಿಗೆ.

ಆಹಾರ ಶಾಖೆಯ ಎದುರು ಕುಳಿತು ಕೆಲ ಸವಿನೆನಪುಗಳಲ್ಲಿ ಮುಳುಗಿ ಹೋಗಿದ್ದ ಮನ್ಯಾತ ಪ್ರತಿಮೆಯಂತೆ ಕುಳಿತು, ನಿಂತು, ಒರಗಿ ಕಾಯುತ್ತಿದ್ದ ಜನರಲ್ಲಿ ಗುಸುಗುಸು ಸದ್ದು , ಚಲನೆ ಕಂಡು ಬಂದಾಗ ನೆನಪಿನ ಸುಖದ ಗುಂಗಿನಿಂದ ಹೊರ ಬಂದು ನೆನಪಿನ ಗಗನದಲ್ಲಿ ತೇಲುತ್ತಿದ್ದ ಮನಸ್ಸನ್ನು ಪರಮ ನಿರ್ಜೀವದ ಜಡತ್ವದ ತಾಲ್ಲೂಕಾಫೀಸಿನ ಆಹಾರ ಶಾಖೆಯ ಮುಂಭಾಗದಲ್ಲಿ ತಂದಿಳಿಸಿದ.

ಮನ್ಯಾತ ಕಂಪ್ಯೂಟರ್ ಮುಂದೆ ಟೈಪಿಸುತ್ತಿದ್ದವನ ಬಳಿ ಹೋಗಿ ಪ್ರಶ್ನಾರ್ಥಕವಾಗಿ ನೋಡಿದ. ಸರ್ವರ್ ಬ್ಯುಸಿ ಇದೆ. ಓಪನ್ ಆಗ್ತಾ ಇಲ್ಲ. ನೀವು ಇವತ್ತು ಹೋಗಿ ನಾಳೆ ಬನ್ನಿ ಎಂದ ಕಂಪ್ಯೂಟರ್ ಮುಂದೆ ಕೂತವ. ಮನ್ಯಾತನಿಗೆ ಇಂಥ ಕೆಲಸಗಳು ಬೇಗ ಆಗುವುದಿಲ್ಲ ಎನ್ನುವ ಅರಿವು ಹಿಂದಿನ ಕೆಲ ಅನುಭವಗಳಿಂದ ಆಗಿದ್ದರಿಂದ ಬೇಸರವೇನೂ ಆಗಲಿಲ್ಲ. ನಿಜವಾಗಿ ಆ ಅರ್ಥವೆ ಆಗದ ಗೊಂದಲಗಳ ಅಕ್ಷಯ ಚಕ್ರವ್ಯೂಹದಿಂದ ಒಮ್ಮೆ ಹೊರಬಂದರೆ ಸಾಕು ಎಂದೆನಿಸಿ ಕಾನಳ್ಳಿಗೆ ಸಾಗಲು ಬಸ್‌ ಸ್ಟ್ಯಾಂಡಿನ ಕಡೆಗೆ ಹೆಜ್ಜೆ ಹಾಕಿದ.

 

(ಕಲೆ: ರೂಪಶ್ರೀ ಕಲ್ಲಿಗನೂರ್)