ಬಳೆ ಮಾರುವ ಮಾದೇವಿ, ಪಾತ್ರೆ ಕೃಷ್ಣಪ್ಪ, ತರಕಾರಿ ಸಿದ್ಧಪ್ಪ ಎಲ್ಲರೂ ಮಾರುಕಟ್ಟೆಯನ್ನು ನಮ್ಮ ಮನೆಯ ಜಗಲಿಗೇ ಹೊತ್ತು ತರುತ್ತಿದ್ದರು ಎಂದು ಅನಿಸುತ್ತಿತ್ತು. ಆದರೆ ಮರುಕ್ಷಣವೇ, ಅಲ್ಲ.. ಇವರೆಲ್ಲ ಸಂವಹನ ಕ್ಷೇತ್ರದ ಪ್ರಮುಖ ಕೊಂಡಿಗಳು ಎಂದೂ ಅನಿಸುತ್ತಿತ್ತು. ಅವರು ಮನೆಯವರೊಡನೆ ಹೇಳಿಕೊಳ್ಳುತ್ತಿದ್ದ ಕಷ್ಟಗಳು, ಅಜ್ಜಿ, ಅಮ್ಮ ಅವರನ್ನು ಮಾತನಾಡಿಸುತ್ತಿದ್ದ ರೀತಿ ನೋಡಿದರೆ ನಂಬಿಕೆ-ಮನುಷ್ಯತ್ವಕ್ಕೆ ಇವರೆಲ್ಲ ಮತ್ತೊಂದು ಹೆಸರು ಎಂದು ಹೇಳಬೇಕನಿಸುತ್ತದೆ. ಅಪರಿಚಿತರ ಅಕ್ಕರೆಯ ಬಗ್ಗೆ ಕೀರ್ತನಾ ಹೆಗಡೆ ಬರೆದ ನವಿರು ಬರಹ ನಿಮ್ಮ ಓದಿಗಾಗಿ ಇಲ್ಲಿದೆ.  

 

ಚೌತಿ ಹಬ್ಬಕ್ಕೆ ಮುಂಚೆ ಗೌರಿ ಬಾಗಿನವನ್ನು ಸಿದ್ಧ ಮಾಡಿ ಇಟ್ಟುಕೊಳ್ಳುವುದು, ನಂತರ ತವರು ಮನೆಗೆ ಹೋದಾಗ ತಾಯಿ, ಅತ್ತಿಗೆಯರಿಗೆ ಬಾಗಿನ ನೀಡುವುದು ಯಾವಾಗಲೂ ನಡೆಸಿಕೊಂಡು ಬಂದ ಸಂಪ್ರದಾಯ, ರೂಢಿ. ಆ ದಿನಗಳಲ್ಲಿ ಬಳೆ ಮಾದೇವಿಯು ಬರುವುದನ್ನೇ ಕಾಯುತ್ತಿದ್ದರು ನಮ್ಮ ಮನೆಯ ಹೆಂಗಳೆಯರು. ಕೆಲವೊಮ್ಮೆ ಈ ಮಾದೇವಿಯು ಬರುವುದಕ್ಕೆ ಮುಂಚೆಯೇ ಬೇರೆ ಗಂಡಸರು ಹೆಂಗಸರು ಬರುತ್ತಿದ್ದುದೂ ಇತ್ತು. ನಾವು ಮಾದೇವಿಯ ಬಳಿ ಬಳೆ ಖರೀದಿ ಮಾಡುತ್ತೇವೆ ಎಂದು ನಮ್ಮ ಮನೆಯವರು ಹೇಳಿದರೆ, ಅವರು ತಾವು ಅವಳ ಸಂಬಂಧಿಕರೇ ಎನ್ನುತ್ತಿದ್ದರು. ಅಕ್ಕನ ಮಗಳು ಎಂದೋ, ಬಾವ ಬಾಮೈದ ಎಂದೋ ಪರಿಚಯಿಸಿಕೊಳ್ಳುವರು. ಹಳ್ಳಿಗರೆಲ್ಲ ಅವರು ಒತ್ತಾಯಿಸುವ ರೀತಿಗೆ, ಮೇಲಾಗಿ ಅವರು ಬಿಸಿಲಿನಲ್ಲಿ ಕಷ್ಟಪಟ್ಟು ಗಂಟು ಮೂಟೆ ಹೊತ್ತು ತರುವುದನ್ನು ಕಂಡು ಏನಾದರೂ ಖರೀದಿಸುತ್ತಿದ್ದರು. ದೂರದಿಂದ, ಮನೆ ಮನೆ ತಿರುಗಿ ದಣಿದು ಬರುತ್ತಿದ್ದ ಅವರಿಗೆ ಆಸರಿಗೆ ಮಜ್ಜಿಗೆಯನ್ನೋ, ಅಥವಾ ಊಟದ ಹೊತ್ತಾಗಿದ್ದರೆ ಊಟ ಬಡಿಸಿದ ನಂತರವೇ ವ್ಯಾಪಾರ.

ಮನೆ ಬಾಗಿಲಿನಲ್ಲಿ ಬಳೆ ಖರೀದಿ ಮಾಡುವುದು, ಅದನ್ನು ನೋಡುವುದೇ ಮಜವಾಗಿರುತ್ತಿತ್ತು. ಬಳೆಗಳ ಜೊತೆಗೆ ಬಣ್ಣ ಬಣ್ಣದ ಪಿನ್ನು, ಕ್ಲಿಪ್ಪು, ಹೇರ್ ಬ್ಯಾಂಡ್, ಬಾಚಣಿಕೆ ಮುಂತಾದ ಹರಗಣವೂ ಇರುತ್ತಿತ್ತು. ಮಕ್ಕಳಿಗೆಲ್ಲ ಇವರು ತರುವ ಬಣ್ಣ ಬಣ್ಣದ ಬಿಂಗಲೀಟಿ ಹೊಳೆಯುವ ವಸ್ತುಗಳ ಮೇಲೆ ಇನ್ನಿಲ್ಲದ ಆಕರ್ಷಣೆ! ಇವರ ಸುತ್ತ ಕೂತು ‘ಆ ಚೀಲದಲ್ಲೇನಿದೆ ಈ ಚೀಲದಲ್ಲೇನಿದೆ’ ಎಂದು ಕೆದಕುತ್ತಾ ಗದ್ದಲವೆಬ್ಬಿಸಿಬಿಡುವರು ಜಗುಲಿಯಲ್ಲಿ.

ಹೊಸ ಬಳೆ ಇಡಿಸಿಕೊಂಡ ಹೆಂಗಳೆಯರ ಸಂಭ್ರಮ ಕೂಡಾ ನೋಡುವಂತಿರುತ್ತಿತ್ತು. ಇನ್ನು ಕೋಟು ಟೋಪಿ ಧರಿಸಿ, ಸಾಂಬಾರ ಪದಾರ್ಥಗಳನ್ನು ಹೊತ್ತು ತರುತ್ತಿದ್ದ ಅಜ್ಜನಿಗೆ ಸಾಂಬಾಜಿ ಎಂದೇ ಹೆಸರಾಗಿಬಿಟ್ಟಿತ್ತು. ಅವನ ನಿಜ ನಾಮಧೇಯ ಅವನಿಗೂ ಪಟ್ ಎಂದು ನೆನಪಾಗುವುದು ಸುಳ್ಳು. ಅಜ್ಜನ ಜೊತೆ ಮೊಮ್ಮಕ್ಕಳ ದಂಡೇ ಬರುತ್ತಿತ್ತು. ಅಜ್ಜನ ಪದಾರ್ಥಗಳನ್ನೆಲ್ಲ ಜಗುಲಿಯ ತುಂಬಾ ಹರವಿಬಿಡುತ್ತಿದ್ದರು. ಅಜ್ಜನ ಟೋಳಿ ಬಂತೆಂದರೆ ಮನೆ ತುಂಬೆಲ್ಲಾ ಲವಂಗ, ಚಕ್ಕೆ, ಸೋಂಪು, ಸಾಂಬಾರದೆಲೆಗಳ ಘಮ ಹರಡಿ ಬಿಡುವುದು.

ಇನ್ನು ಪಾತ್ರೆ ಕೃಷ್ಣಪ್ಪ! ಆತನ ಧ್ವನಿಯಿಂದಲೇ ಊರಿಗೆಲ್ಲಾ ಅವನ ಆಗಮನದ ವಿಚಾರ ತಿಳಿದು ಬಿಡುತ್ತಿತ್ತು. ರಾಗವಾಗಿ ಹೆಸರು ಹಿಡಿದು ಕೂಗುತ್ತಾ ಬರುವವನು ಆತ. ದೈತ್ಯ ದೇಹದ ಕೃಷ್ಣಪ್ಪನು ದೊಡ್ಡ ದೊಡ್ಡ ಪಾತ್ರೆಗಳನ್ನು ತಲೆಯ ಮೇಲೆ ಹೊತ್ತುಕೊಂಡೇ ಮನೆ ಮನೆ ತಿರುಗುತ್ತಿದ್ದನು. ಪಕ್ಕದ ಮನೆಯ ಗಂಗಜ್ಜಿಯನ್ನು ಗಂಗಮ್ಮಾ ಎಂದು ರಾಗವಾಗಿ ಕೂಗುತ್ತಾ ಹೋಗುತ್ತಿದ್ದುದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಈಗಲೂ ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುತ್ತಾನೆ. ಆತನ ಬಳಿ ವಾಹನ ಇದೆ ಈಗ. ಹಳೇ ಹಿತ್ತಾಳೆ, ತಾಮ್ರದ ಪಾತ್ರೆಗಳಿದ್ದರೆ ಕೊಡಿ ಎನ್ನುತ್ತಾನೆ. ಅದರ ಬದಲಿಗೆ ಅಲ್ಯೂಮಿನಿಯಮ್ಮೋ, ಸ್ಟೀಲ್ ಪಾತ್ರೆಯನ್ನೋ ಕೊಡುತ್ತೇನೆ ಎನ್ನುತ್ತಾನೆ. ಮೇಲಿನ ಮೆಟ್ಟಿಲು ಹತ್ತಿ ಬ್ಯಾಟರಿ ಬಿಟ್ಟು ಹುಡುಕಿದರೂ ಹಳೆಯ ಹಿತ್ತಾಳೆ, ತಾಮ್ರದ ಅಮೂಲ್ಯ ವಸ್ತುಗಳು ಕಾಣುವುದಿಲ್ಲ, ಯಾಕೆಂದರೆ ಅವೆಲ್ಲಾ ಮೊದಲೇ ಆತನ ಕೈಸೇರಿಯಾಗಿದೆ. ಅಲ್ಯೂಮಿನಿಯಮ್ಮು, ಸ್ಟೀಲಿನ ಹೊಳಪು, ಅಬ್ಬರದಲ್ಲಿ ಅಮೂಲ್ಯವಾದ ಪಾತ್ರೆಗಳೆಲ್ಲಾ ಮಾಯವಾಗಿಬಿಟ್ಟಿವೆ. ನಂತರದಲ್ಲಿ ಆತನು ಅತ್ಯಾಚಾರ ಕೊಲೆ ಪ್ರಕರಣವೊಂದರಲ್ಲಿ ಸಾಕ್ಷಿ ಹೇಳಿದ್ದ ಎಂದು ಕೇಳಿದ್ದೆ. ಈ ವಿಚಾರದಲ್ಲಿ ಕೃಷ್ಣಪ್ಪ ತುಂಬಾ ಗ್ರೇಟ್ ಎನಿಸುತ್ತದೆ ನನಗೆ. ಯಾಕೆಂದರೆ ಈ ಲೋಕದಲ್ಲಿ ಸತ್ಯದ ಪರ ನಿಲ್ಲುವುದು ಬಹಳ ಕಷ್ಟ!

ಮನೆ ಬಾಗಿಲಿನಲ್ಲಿ ಬಳೆ ಖರೀದಿ ಮಾಡುವುದು, ಅದನ್ನು ನೋಡುವುದೇ ಮಜವಾಗಿರುತ್ತಿತ್ತು. ಬಳೆಗಳ ಜೊತೆಗೆ ಬಣ್ಣ ಬಣ್ಣದ ಪಿನ್ನು, ಕ್ಲಿಪ್ಪು, ಹೇರ್ ಬ್ಯಾಂಡ್, ಬಾಚಣಿಕೆ ಮುಂತಾದ ಹರಗಣವೂ ಇರುತ್ತಿತ್ತು.

ಆಗಾಗ ಬರುತ್ತಿದ್ದ, ತರಕಾರಿ ಹೊತ್ತು ತರುತ್ತಿದ್ದ ಸಿದ್ದಪ್ಪ ಬರದೇ ಬಹಳ ದಿನಗಳಾಗಿಬಿಟ್ಟಿತ್ತು. ಒಮ್ಮೆ ‘ತರಕಾರಿ ಸಿದ್ದಪ್ಪ ಸತ್ಹೋದ್ನಂತೆ’ ಎಂದು ಸುದ್ದಿಯೂ ಹಬ್ಬಿಬಿಟ್ಟಿತ್ತು. ಪಾಪ… ಯಾರು ಅದ್ಹೇಗೆ ಈ ಥರ ಸುದ್ದಿ ಮಾಡಿದರೋ ದೇವರೇ ಬಲ್ಲ. ನಾವು, ಛೇ ಪಾಪ ಹೀಗಾಗಬಾರದಿತ್ತು ಎಂದುಕೊಂಡೆವು. ಕಡೆಗೊಂದು ದಿನ ಶಿರಸಿಯಲ್ಲಿ ಬಸ್ಸಿಗೆ ಕಾಯುತ್ತಿದ್ದ ನನ್ನ ಎದುರೇ ಪ್ರತ್ಯಕ್ಷವಾಗಿಬಿಡಬೇಕೆ ಈ ಸಿದ್ದಪ್ಪ! ನಾನೋ ಗಾಬರಿಯಿಂದ ಇದು ಸಿದ್ದಪ್ಪನೇ ಹೌದೋ ಅಲ್ಲವೋ ಎಂದುಕೊಳ್ಳುತ್ತಿರುವಾಗಲೇ ನನ್ನೆದುರಿಗೇ ಬಂದು ನಿಂತ. ‘ಆರಾಮೇನ್ರಿ ತಂಗಿ, ಅಮ್ಮಾವರು ಚನ್ನಾಗಿದ್ದಾರೇನ್ರೀ’ ಎಂದು ಮೊದಲಿನಂತೇ ವಾತ್ಸಲ್ಯದಿಂದ ಮಾತನಾಡಿಸಿದ. ತನ್ನ ಮಕ್ಕಳೆಲ್ಲ ಒಳ್ಳೆಯ ಉದ್ಯೋಗದಲ್ಲಿರುವುದನ್ನು ಹೇಳಿ ಖುಷಿಪಟ್ಟ. ನನಗೂ ಬಹಳ ಸಂತೋಷವಾಯಿತು. ಇಲ್ಲ ಎಂದುಕೊಂಡಿದ್ದ ಸಿದ್ದಪ್ಪ ಇರುವುದಕ್ಕೂ ಹಾಗೂ ಆತನು ಜೀವನದಲ್ಲಿ ಉನ್ನತಿ ಹೊಂದಿರುವುದನ್ನು, ಖುಷಿಯಾಗಿರುವುದನ್ನು ಕಂಡು.

ಬದುಕಿರುವವರನ್ನು ಅವರ ಸುದ್ದಿಯ ಮೂಲಕವೇ ಸಾಯಿಸಿಬಿಟ್ಟಿದ್ದ ಜನರ ಮೇಲೆ ಸ್ವಲ್ಪ ಕೋಪ ಬಂತು. ಅನಂತರ ನಾನು ಮನೆಗೆ ಹೋಗಿ ವಿಷಯ ತಿಳಿಸಿದೆ. ಎಲ್ಲರಿಗೂ ಆಶ್ಚರ್ಯದ ಜೊತೆಗೆ ಸಮಾಧಾನವಾಯಿತು. ಈ ಸಿದ್ದಪ್ಪ, ಮಾದೇವಿ ಎಲ್ಲಾ, ನನ್ನ ಅಜ್ಜನ ಮನೆಗೂ ಚಿಕ್ಕಮ್ಮನ ಮನೆಗೂ ಹೋಗುತ್ತಿದ್ದುದರಿಂದ ನಮ್ಮ ಬಂಧು ಬಳಗವೆಲ್ಲಾ ಅವರಿಗೂ ಚೆನ್ನಾಗಿ ಪರಿಚಯವಿತ್ತು. ನಮ್ಮ ಮನೆಗೆ ಬಂದಾಗ, ನಿಮ್ಮ ತವರು ಮನೆಗೆ ಹೋಗಿ ಬಂದೆವು ಎಂದು ಅಮ್ಮನ ಬಳಿ ಹೇಳುತ್ತಿದ್ದರು. ಒಂಥರಾ ಆಪ್ತತೆ ಇವರಲ್ಲಿ, ಎಲ್ಲರಿಗೂ. ಅಂದಹಾಗೆ ಒಂದು ವಿಷಯ ಹೇಳಲು ಮರೆತೆ. ಈ ಕೃಷ್ಣಪ್ಪ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾನಂತೆ. ಅವನಿಗೆ ಅರವತ್ತರ ಪ್ರಾಯ. ಹಿಂದಿನ ಬಾರಿ ಬಂದಾಗ ವಿಷಯ ತಿಳಿಸಿದ.

ತನಗೆ ಸಕ್ಕರೆ ಖಾಯಿಲೆ ಇರುವುದಾಗಿಯೂ, ತನ್ನನ್ನು ನೋಡಿಕೊಳ್ಳಲು ಒಂದು ಹೆಣ್ಣು ಜೀವದ ಅವಶ್ಯಕತೆ ಇದೆಯೆಂದೂ ಹೇಳಿದ. ‘ಅನ್ನ ಬೇಯಿಸಾಕ್ಕ, ರೊಟ್ಟಿ ಬಡಿಯಾಕ ಒಬ್ಬಾಕಿ ಬೇಕ್ರೀ’ ಅಂದ. ನಾವೋ ಇದೊಂದು ತರಹದ ಬ್ರೇಕಿಂಗ್ ಹಾಗೂ ಶಾಕಿಂಗ್ ನ್ಯೂಸ್ ಎನ್ನುವಂತೆ ಕಣ್ಣರಳಿಸಿ ಬಾಯ್ಬಾಯಿ ಬಿಟ್ಟು ಕೇಳುತ್ತಿದ್ದೆವು. ಅಷ್ಟರಲ್ಲಿ ನಮ್ಮ ಮನೆ ಕವ್ವಜ್ಜಿಯು ಫುಲ್ ಖುಶಿಯಲ್ಲಿ, ‘ನಮ್ಮಲ್ಲಿ ಒಂದನೇ ಮದುವೆಗೆ ಹೆಣ್ಣು ಸಿಗುತ್ತಿಲ್ಲ, ನಿಂಗೆ ಹ್ಯಾಂಗೆ ಹೆಣ್ಣು ಸಿಕ್ತೋ ಮಾರಾಯಾ!’ ಎಂದು ವಿಚಾರಿಸತೊಡಗಿದ್ದರು. ನಾವು ಈ ಬ್ರೇಕಿಂಗ್ ನ್ಯೂಸನ್ನು ಅಡಿಗೆ ಮನೆಯಲ್ಲಿದ್ದ ಹೆಂಗಸರಿಗೆ, ಪಕ್ಕದ ಮನೆಗೆ ಬಿತ್ತರಿಸಲು ಓಡಿದೆವು.

ಕಣ್ಣಿದ್ದೂ ಕುರುಡಾಗಬೇಡಿ ಎಂದು ಹೇಳುತ್ತಿದ್ದ ಕಾವಿ ಅಂಗಿ ತೊಡುವ ಮನುಷ್ಯನಂತೆ, ಹೊಟ್ಟೆ ಪಾಡಿಗೆ ಮನೆ ಮನೆ ಅಲೆಯುತ್ತಿದ್ದ ಜನರು ಅನೇಕರಿದ್ದರು. ಈಗಲೂ ಇದ್ದಾರೆ. ಸುಳ್ಳೆ ಸುಳ್ಳೆ ವಿದ್ಯಾರ್ಥಿಗಳೆಂದು ಹೇಳಿಕೊಂಡು ಬರುವವರು, ಯಾವುದೋ ಸೋಪು ಕ್ರೀಮುಗಳನ್ನು ಆಯುರ್ವೇದ ಉತ್ಪನ್ನಗಳೆಂದು ನಂಬಿಸುವವರು, ಎಕ್ಸ್‌ಚೇಂಜ್ ಆಫರ್, ಒಂದು ಕುಕ್ಕರ್ ಕೊಂಡರೆ ಒಂದು ಮಿಕ್ಸರ್ ಫ್ರೀ ಎಂದು ಮೋಸ ಮಾಡುವವರು ಅನೇಕರು.

ಊರಲ್ಲೇ ಉಳಿದು ಕಣಜ, ಬುಟ್ಟಿ ಹೆಣೆಯುವವರು ಬರುತ್ತಿದ್ದರು. ಕಂಬಳಿ, ಚಾದರ, ಜಮಖಾನಗಳನ್ನು ಮಾರುವವರೂ ಬಹಳ ಜನ ಬರುತ್ತಾರೆ. ಇವರೆಲ್ಲರೂ ಹೇಳುವುದು ಒಂದೇ ತರಹ! ಹಿಂದಿನ ಮನೆಯಲ್ಲಿ ಅಷ್ಟು ಖರೀದಿ ಮಾಡಿದರು, ಇಷ್ಟು ವ್ಯಾಪಾರ ಮಾಡಿದರು ಎಂದೋ, ಇದು ಈ ದಿನದ ಕೊನೆಯ ಸರಕು; ಉಳಿದಿರುವುದು ಇಷ್ಟೇ; ಅತ್ಯಂತ ಕಡಿಮೆ ಬೆಲೆಗೆ ಕೊಡುತ್ತೇವೆಂದೋ ಒತ್ತಾಯಿಸುತ್ತಾರೆ. ಆಶ್ಚರ್ಯವೆಂದರೆ ಹಳ್ಳಿಗಳಲ್ಲಿ ಸುಮಾರು ಎಲ್ಲಾ ಮನೆಗಳಲ್ಲಿ ಇಂದಿಗೂ ಇವರನ್ನೆಲ್ಲ ಪ್ರೀತಿಯಿಂದ ಊಟ ತಿಂಡಿ ನೀಡಿ ಆದರಿಸುತ್ತಾರೆ. ಅಪರಿಚಿತರಾದರೂ ಸಹ! ಪರಿಚಿತರನ್ನೇ ನಂಬದಿರುವ ಕಾಲದಲ್ಲಿ ಕೂಡಾ!

ತಂಬೂರಿ ಹಿಡಿದು ಹಾಡುತ್ತಾ, ಬರುವವರೂ ಅಪರೂಪ ಈಗ. ತಂಬೂರಿಯವರು ಸಾಮಾನ್ಯವಾಗಿ ಸಂಭಾವನೆಯಾಗಿ ಅಡಿಕೆ ಕೇಳುತ್ತಿದ್ದರು. ಹಬ್ಬದ ನಂತರ ಬರುವ ಹುಲಿ ಕುಣಿತ, ಬಿಂಗಿ ಕುಣಿತದವರೂ ಬಹಳ ಅಪರೂಪವಾಗಿದ್ದಾರೆ. ಅವರು ತಾಳ ಹಿಡಿದು ಕುಣಿಯುವುದ ನೋಡಲು ನಮಗೆಲ್ಲ ಎಷ್ಟು ಸಡಗರವಾಗಿತ್ತು! ಹಾವಾಡಿಗರು, ಗಿಳಿ ಶಾಸ್ತ್ರದವರು ವರ್ಷದಲ್ಲಿ ಸುಮಾರು ಸಲ ಬರುತ್ತಿದ್ದರು. ಜೀವನ ಎಂದರೆ ಏನೆಂದು ಅರಿವೇ ಇಲ್ಲದ ವಯಸ್ಸಿನಲ್ಲಿ, ಗಿಳಿಯ ಹತ್ತಿರ ಕಾರ್ಡು ಹೆಕ್ಕಿಸಿ ನಮ್ಮ ಭವಿಷ್ಯ ತಿಳಿಯುವ ಕುತೂಹಲ ಬೇರೆ! ಸಿಂಗಾರ ಮಾಡಿಸಿಕೊಂಡು ಬರುತ್ತಿದ್ದ ಬಸವಣ್ಣನೂ ಇಲ್ಲ ಈಗ… ಆದರೂ ದಾರಿ ಕಾಯುವುದು ಬಿಟ್ಟಿಲ್ಲ, ಇವರೆಲ್ಲ ಮತ್ತೊಮ್ಮೆ ಬಂದರೂ ಬರಬಹುದೇನೋ ಎಂದು…