ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮೊದಲನೆ ಲಸಿಕೆ ಯಾವುದಿರುತ್ತದೆಯೋ ಎರಡನೆ ಲಸಿಕೆ ಕೂಡ ಅದೇ ಆಗಿರಬೇಕು ಎನ್ನುವ ವರದಿ ಹೊರಬಂದಿದೆ. ಹಾಗೆಂದು ನಾವು ವಿಶ್ವ ಆರೋಗ್ಯ ಸಂಸ್ಥೆಯನ್ನಾದರೂ ಹೇಗೆ ನಂಬುವುದು? ಅವರೂ ಕೂಡ ಅವರೇ ಕೊಟ್ಟ ವರದಿಯನ್ನು ಅನೇಕ ಬಾರಿ ಬದಲಿಸಿದ್ದಾರೆ. ಲಸಿಕೆ ಬಹಳ ಮುಖ್ಯ, ಲಸಿಕೆಯಿಂದ ಮಾತ್ರ ಕೊರೋನ ತಡೆಯುವ ಮಾರ್ಗ ಸಧ್ಯಕ್ಕೆ ಇರುವುದು. ಆದರೆ ಇದನ್ನು ಸರಿಯಾಗಿ, ಅನುಮಾನಕ್ಕೆ ಆಸ್ಪದ ಕೊಡದೆ ಪ್ರಪಂಚದಾದ್ಯಂತ ಒಂದೇ ರೀತಿಯ ನಿರ್ಧಾರದಲ್ಲಿ ತಿಳಿಸಿದ್ದರೆ ಜನರಿಗೆ ನೆಮ್ಮದಿ ಮತ್ತು ನಂಬಿಕೆ ಇರುತ್ತಿತ್ತು.
ಪ್ರಶಾಂತ್‌ ಬೀಚಿ ಅಂಕಣ

 

‘ವೈದ್ಯೋ ನಾರಾಯಣ ಹರಿ’ ಎಂದು ವೈದ್ಯರನ್ನು ಶತಮಾನಗಳಿಂದ ಕರೆಯುತ್ತಾ ಬಂದಿದ್ದೇವೆ, ಹಾಗೆಯೆ ಪ್ರಭುತ್ವ ನಮ್ಮ ಬದುಕನ್ನು ಹಸನಾಗಿಸುತ್ತದೆ ಎನ್ನುವ ನಂಬಿಕೆ ಕೂಡ ಜನರಲ್ಲಿದೆ. ಹಾಗಾಗಿ ಸಣ್ಣ ನೆಗಡಿ, ಜ್ವರ ಬಂದರೂ, ಅದು ತಾನಾಗಿಯೇ ಹೋಗುತ್ತದೆ ಎನ್ನುವ ಭರವಸೆ ಇದ್ದರೂ ವೈದ್ಯರನ್ನು ಕಂಡು ಅವರಿಂದ ಔಷಧಿ ಪಡೆದು ಅದರಿಂದಲೆ ವಾಸಿಯಾಯಿತೆಂದು ವೈದ್ಯರನ್ನು ನೆನೆದು ಮಲಗುತ್ತೇವೆ. ಅದೇ ರೀತಿ ನಮ್ಮನ್ನು ಆಳುವ ಪ್ರಭುತ್ವ, ಅದು ರಾಜ ಪ್ರಭುತ್ವವೆ ಆಗಿರಲಿ, ಪ್ರಜಾಪ್ರಭುತ್ವವೆ ಆಗಿರಲಿ, ಸಮಾಜವನ್ನು ನೋಡಿಕೊಳ್ಳುವ ಜವಾಬ್ದಾರಿಯುತರು ನಮ್ಮನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ ಹಾಗು ಸಮಾಜದ ಒಳಿತಿಗಾಗಿ ಶ್ರಮಿಸುತ್ತಾರೆ ಎಂದು ನಂಬಿ ಬದುಕುತ್ತಿದ್ದೇವೆ. ಇದು ಇಂದು ನಿನ್ನೆಯದಲ್ಲ, ತಲ ತಲಾಂತರದಿಂದ ನಡೆದುಕೊಂಡು ಬಂದಿರುವ ಪ್ರತೀತಿ.

ಕಲಿಯುಗದಲ್ಲಿ ಅಥವ ಇತ್ತೀಚಿನ ದಿನಗಳಲ್ಲಿ ನಮಗೆ ವೈದ್ಯರ ಮೇಲೆ ಅನುಮಾನಗಳು ಸುತ್ತಿಕೊಂಡಿವೆ. ಕೆಲವು ಘಟನೆಗಳಿಂದ ಒಂದೆರಡು ವೈದ್ಯರು ಮಾಡುವ ಅಚಾತುರ್ಯದಿಂದ ಇಡೀ ವೈದ್ಯ ಸಮೂಹವನ್ನೆ ಅನುಮಾನಿಸುವಂತೆ ಮಾಡಿದೆ. ಹಾಗಾಗಿ ವೈದ್ಯೋ ನಾರಾಯಣ ಹರಿ ಎನ್ನುವ ಮಾತು ಕೇವಲ ತುಟಿಯ ಮೇಲಿದೆಯೆ ಹೊರತು ಮನಸ್ಸಿನಲ್ಲಿಲ್ಲ. ಅದಕ್ಕಿಂದ ಹೊಲಸಾಗಿದ್ದು ಪ್ರಭುತ್ವ. ರಾಜಪ್ರಭುತ್ವ ವಿರೋಧಿಸುತ್ತಾ ಪ್ರಪಂಚದ ಬಹುತೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ಜಾರಿಗೆ ಬಂದು ನೂರಾರು ವರ್ಷಗಳಾಗಿವೆ.

ಇತ್ತೀಚೆಗೆ ರಾಜ ಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಬಂದ ದೇಶ ನೇಪಾಳವನ್ನು ಬಹಳ ಹತ್ತಿರದಿಂದ ನೋಡಿದ್ದೇವೆ. ನನ್ನ ಕೆಲವು ಸ್ನೇಹಿತರು ನೇಪಾಳದಲ್ಲಿ ರಾಜ ಪ್ರಭುತ್ವ ಉರುಳಿಸಿ ಪ್ರಜಾಪ್ರಭುತ್ವ ಸ್ಥಾಪಿಸಲು ನಡೆಸಿದ ಅನೇಕ ಹೋರಾಟದ ಬಗ್ಗೆ ತಿಳಿಸಿದ್ದಾರೆ. ಅವರೆಲ್ಲರ ಹೋರಾಟದ ಪರಿಣಾಮವಾಗಿ ಅಲ್ಲಿ ಪ್ರಜಾಪ್ರಭುತ್ವ ಬಂದ ಹತ್ತಾರು ವರುಷಗಳ ನಂತರ ಅವರಿಗೆ ಅರಿವಾಗಿದ್ದು, ಎರಡರಲ್ಲೂ ಏನೂ ಅಂಥಹ ವ್ಯತ್ಯಾಸವಿಲ್ಲ ಎಂದು. ರಾಜರ ಆಡಳಿತದಲ್ಲಿ ರಾಜ ಮನೆತನದ ಅರಾಜಕತೆ ಹೆಮ್ಮರವಾಗಿ ಕಾಡಿದರೆ, ಪ್ರಜಾಪ್ರಭುತ್ವದಲ್ಲಿ ಜನನಾಯಕರ ದುರಾಡಳಿತ ಹೆಮ್ಮಾರಿಯಾಗಿ ಕಾಡಿದೆ. ಜನಸಾಮಾನ್ಯರ ಪಾಲಿಗೆ ಶೋಷಣೆ ಅನುಭವಿಸುವ ಪಾಡು ತಪ್ಪಿದ್ದಲ್ಲ.

ರಾಜಕೀಯವಾಗಿ ಮತ್ತು ವೈದ್ಯಕೀಯವಾಗಿ ನಮ್ಮನ್ನು ಹೈರಾಣಾಗಿಸಿದ ಒಂದು ಸಂಗತಿ ‘ಕೊರೋನ ವೈರಸ್’ (ಕೋವಿಡ್ – ೧೯). ಸುಮಾರು ಕಳೆದ ಎರಡು ವರ್ಷಗಳಿಂದ ಪ್ರಪಂಚದಾದ್ಯಂತ ಎಲ್ಲಾ ಮನುಜರನ್ನು ಕಾಡಿದ ಒಂದು ಸೂಕ್ಷ್ಮ ಜೀವಿ ಕೊರೋನ. ಅದು ಹುಟ್ಟಿದ ರೀತಿ, ಬೆಳೆದ ರೀತಿ ಎಲ್ಲವನ್ನೂ ಬಹುತೇಕ ಎಲ್ಲ ಜನರು ತಿಳಿದಿದ್ದಾರೆ. ಕೊರೋನ ಸೋಂಕಿಗಿಂತ ಜಾಸ್ತಿ ಗೋಜಲು ಮಾಡಿದ ಮತ್ತೊಂದು ಸಂಗತಿ ಎಂದರೆ ಕೊರೊನ ಸೋಂಕು ತಡೆಗೆ ಕಂಡುಹಿಡಿದ ಲಸಿಕೆ. ಒಂದೊಂದು ದೇಶದಲ್ಲಿ ಒಂದೊಂದು ಲಸಿಕೆ, ಯಾವ ಲಸಿಕೆ ಸರಿ, ಯಾವುದು ಸರಿ ಅಲ್ಲ. ಯಾವ ಲಸಿಕೆ ಎಷ್ಟು ಪರಿಣಾಮಕಾರಿ, ಎಂಬುದಾಗಿ ಯಾವುದರ ಬಗ್ಗೆಯೂ ಒಮ್ಮತವಿಲ್ಲ. ವೈಜ್ಞಾನಿಕವಾಗಿ ಕಂಡಂತಹ ಬಹುತೇಕ ಎಲ್ಲ ಅವಿಷ್ಕಾರಕ್ಕೂ ಒಮ್ಮತ ಅಭಿಪ್ರಾಯ ವಿಜ್ಞಾನಿಗಳಲ್ಲಿ ಕಂಡಿದ್ದೇವೆ. ಆದರೆ ಲಸಿಕೆ ವಿಷಯದಲ್ಲಿ ಮಾತ್ರ ವಿಜ್ಞಾನಿಗಳಲ್ಲೂ ಒಮ್ಮತವಿಲ್ಲ, ವೈದ್ಯರಲ್ಲೂ ಒಮ್ಮತವಿಲ್ಲ. ಲಸಿಕೆಯ ತಾಂತ್ರಿಕತೆಯ ಅರಿವಿಲ್ಲದ ಜನಸಾಮಾನ್ಯರಿಗೆ ಅವರ ಊಹೆಗಳೆ ಅವರಿಗೆ ಸರಿ. ಇದರ ಕೆಲವು ಗೋಜಲುಗಳ ಬಗ್ಗೆ ಮುಂದುವರೆದ ದೇಶದಲ್ಲಿ ಆದ ಘಟನೆಗಳು ಹೀಗಿದೆ.

ಪ್ರಪಂಚದ ದೊಡ್ಡಣ್ಣ ಅಮೇರಿಕ, ತನ್ನದೇ ಆದ ಒಂದು ಗತ್ತನ್ನು ಇದರಲ್ಲೂ ತೋರಿಸಿತು. ಅಸ್ಟ್ರಾಜನಿಕ ಎನ್ನುವ ಒಂದು ಲಸಿಕೆಯನ್ನು ಅದು ಉತ್ಪಾದಿಸಿ ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೆ ಸರಬರಾಜು ಮಾಡಿತು. ಅನುಮಾನ ಹುಟ್ಟಿದ್ದು ಎಲ್ಲಿ ಎಂದರೆ, ಅವರೆ ಉತ್ಪಾದಿಸುವ ಲಸಿಕೆ ಅವರ ದೇಶದಲ್ಲಿನ ಪ್ರಜೆಗಳಿಗೆ ಕೊಡಲು ಅನುಮತಿ ನೀಡಲಿಲ್ಲ. ಅಮೇರಿಕಾದಲ್ಲಿ ಫ಼ೈಜರ್ ಮತ್ತು ಮಾಡರ್ನಾ ಕಂಪೆನಿಯೆ ಲಸಿಕೆಗಳನ್ನು ಮಾತ್ರ ನೀಡಲಾಯಿತು.

ವೈದ್ಯೋ ನಾರಾಯಣ ಹರಿ ಎನ್ನುವ ಮಾತು ಕೇವಲ ತುಟಿಯ ಮೇಲಿದೆಯೆ ಹೊರತು ಮನಸ್ಸಿನಲ್ಲಿಲ್ಲ. ಅದಕ್ಕಿಂದ ಹೊಲಸಾಗಿ ವರ್ತಿಸುವುದು ಪ್ರಭುತ್ವ. ರಾಜಪ್ರಭುತ್ವ ವಿರೋಧಿಸುತ್ತಾ ಪ್ರಪಂಚದ ಬಹುತೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ಜಾರಿಗೆ ಬಂದು ನೂರಾರು ವರ್ಷಗಳಾಗಿವೆ. ಆದರೆ ನಂಬಿಕೆಯ ಬೇರು ಗಟ್ಟಿಯಾಗಿಲ್ಲ.

ಅಮೇರಿಕಾಗೆ ಅಂಟಿಕೊಂಡಿರುವ ಕೆನಡದಲ್ಲಿ ಅಸ್ಟ್ರಾಜನಿಕ, ಫ಼ೈಜರ್ ಮತ್ತು ಮಾಡರ್ನಾ ಕೊಡುವುದಾಗಿ ಮೊದಲು ನಿರ್ಧರಿಸಲಾಯಿತು. ಸುಲಭವಾಗಿ ಸಿಕ್ಕ ಅಸ್ಟ್ರಾಜನಿಕ ಲಸಿಕೆಯನ್ನು ಹೆಚ್ಚು ಜನರಿಗೆ ಕೊಡಲು ಶುರುಮಾಡಿದರು. ಕೆಲವು ರಾಜ್ಯಗಳಲ್ಲಿ ಜನರು ಅನುಮಾನಕ್ಕೆ ಎಡೆಮಾಡಿರುವ ಈ ಲಸಿಕೆಯನ್ನು ತೆಗೆದುಕೊಳ್ಳುವುದಿಲ್ಲ ಎಂದು ವಿರೋಧಿಸಿದಾಗ ಆ ರಾಜ್ಯಗಳಲ್ಲಿ ಅಸ್ಟ್ರಾಜನಿಕ ಲಸಿಕೆಯನ್ನು ನಿಲ್ಲಿಸಿದರು. ಉಳಿದ ರಾಜ್ಯಗಳಲ್ಲಿ ಬಹುತೇಕರಿಗೆ ಮೊದಲನೆಯ ಹಂತವಾಗಿ ಇದನ್ನು ಕೊಟ್ಟಿದ್ದರು. ಫ಼ೈಜರ್ ಮತ್ತು ಮಾಡರ್ನಾ ಲಸಿಕೆಗಳು ಸಿಗಲು ಆರಂಭವಾದಾಗ ಅನೇಕರು ಲಸಿಕೆ ತೆಗದುಕೊಳ್ಳಲು ಮುಂದಾದರು. ಎರಡನೆ ಲಸಿಕೆಯನ್ನು ಹನ್ನೆರಡು ವಾರಗಳ ನಂತರ ತೆಗೆದುಕೊಳ್ಳಬೇಕು ಎಂದು ಸರ್ಕಾರಿ ಫರ್ಮಾನು ಹೊರಡಿಸಲಾಯಿತು. ಅದಕ್ಕೆ ಬೇಕಾದ ವೈಜ್ಞಾನಿಕ ಕಾರಣಗಳನ್ನು ಕೊಟ್ಟರು. ಆದರೆ ನಿಜವಾದ ಕಾರಣ ಲಸಿಕೆಯ ಅಭಾವ. ದಿನಕಳೆದಂತೆ ಅಸ್ಟ್ರಾಜನಿಕ ಲಸಿಕೆ ಬಹಳಷ್ಟು ದೊರಕಿತು, ಹಾಗಾಗಿ ಎರಡನೆ ಲಸಿಕೆಯಾಗಿ ಅಸ್ಟ್ರಾಜನಿಕ ಪಡೆಯುವವರು ಹನ್ನೆರಡು ವಾರಗಳ ಬದಲಾಗಿ ಎಂಟು ವಾರಗಳ ನಂತರ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ಸರ್ಕಾರಿ ಫರ್ಮಾನು ಹೊರಡಿಸಿದರು. ಅದಕ್ಕೆ ಬೇಕಾದ ವೈಜ್ಞಾನಿಕ ಕಾರಣ ಕೊಟ್ಟರು. ಇದರ ಪ್ರಕಾರ ಮೊದಲಿಗೆ ಹೇಳಿದ ವೈಜ್ಞಾನಿಕ ಕಾರಣ ಈಗ ಅವೈಜ್ಞಾನಿಕವಾಯಿತು. ಇದರ ಜೊತೆಗೆ ಇನ್ನೊಂದು ಅನಿರೀಕ್ಷಿತ ಬೆಳವಣಿಗೆಯಲ್ಲಿ ಮೊದಲನೆ ಲಸಿಕೆ ಅಸ್ಟ್ರಾಜನಿಕ ತೆಗೆದುಕೊಂಡವರು, ಎರಡನೆ ಲಸಿಕೆಯಾಗಿ ಫ಼ೈಜರ್ ಅಥವ ಮಾಡರ್ನಾ ತೆಗೆದುಕೊಳ್ಳಬಹುದು ಎಂದು ಸಾರಿದರು. ಜನರ ಅಪೇಕ್ಷೆಯ ಮೇರೆಗೆ ಅವರಿಗೆ ಬೇಕಾದ ರೀತಿಯಲ್ಲಿ ಮೊದಲನೆ ಮತ್ತು ಎರಡನೆ ಲಸಿಕೆ ಪಡೆಯಬಹುದು. ಎಂದು ಎಲ್ಲಾ ನಿರ್ಧಾರವನ್ನು ಜನರಿಗೆ ಬಿಟ್ಟರು. ಇದೆಲ್ಲದಕ್ಕು ವೈಜ್ಞಾನಿಕವಾಗಿ ಯಾವುದೇ ತೊಂದರೆ ಇಲ್ಲ ಎಂದು ಅನೇಕ ಪುರಾವೆಗಳನ್ನೂ ನೀಡಿದರು.

ಮೊದಲನೆ ಲಸಿಕೆ ಯಾವುದಿರುತ್ತದೆಯೋ ಎರಡನೆ ಲಸಿಕೆ ಕೂಡ ಅದೇ ಆಗಿರಬೇಕು ಎಂದು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ವರದಿ ಹೊರಬಂದಿದೆ. ಹಾಗೆಂದು ನಾವು ವಿಶ್ವ ಆರೋಗ್ಯ ಸಂಸ್ಥೆಯನ್ನಾದರೂ ಹೇಗೆ ನಂಬುವುದು? ಅವರೂ ಕೂಡ ತಾವೇ ಕೊಟ್ಟ ವರದಿಯನ್ನು ಅನೇಕ ಬಾರಿ ಬದಲಿಸಿದ್ದಾರೆ.

ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಲಸಿಕೆ  ಬಹಳ ಮುಖ್ಯ, ಈ ಲಸಿಕೆಯಿಂದ ಮಾತ್ರ ಕೊರೋನ ತಡೆಯುವ ಮಾರ್ಗ ಸದ್ಯಕ್ಕೆ ಇರುವುದು. ಆದರೆ ಇದನ್ನು ಸರಿಯಾಗಿ, ಅನುಮಾನಕ್ಕೆ ಆಸ್ಪದ ಕೊಡದೆ ಪ್ರಪಂಚದಾದ್ಯಂತ ಒಂದೇ ರೀತಿಯ ನಿರ್ಧಾರದಲ್ಲಿ ತಿಳಿಸಿದ್ದರೆ ಜನರಿಗೆ ನೆಮ್ಮದಿ ಮತ್ತು ನಂಬಿಕೆ ಇರುತ್ತಿತ್ತು. ವಿಜ್ಞಾನ ಕ್ಷೇತ್ರದ ಮತ್ತು ರಾಜಕೀಯ ಕ್ಷೇತ್ರದ ಜನರ ತಪ್ಪು ನಡುವಳಿಕೆಯಿಂದ ಜನಸಾಮಾನ್ಯರ ಬದುಕು ಗೋಜಲಮಯವಾಗುತ್ತದೆ.

ಭಾರತದಲ್ಲಿ ಮಾತ್ರ ಲಸಿಕೆಯ ಗೋಜಲಿದೆ ಎಂದಲ್ಲ, ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲೂ ಇದೇ ರೀತಿಯ ತೊಂದರೆಗಳಿವೆ. ಹಣವಂತ ರಾಷ್ಟ್ರಗಳು ತಮ್ಮದೇ ರೀತಿಯಲ್ಲಿ ನಡೆದುಕೊಂಡರೆ ಬಡ ರಾಷ್ಟ್ರಗಳಲ್ಲಿ ಲಸಿಕೆಯೇ ಇಲ್ಲದಾಗಿದೆ. ರಾಷ್ಟ್ರ ಯಾವುದೇ ಇರಲಿ, ಎಲ್ಲಾ ಜನರ ಜೀವ ಒಂದೆ ತಾನೆ.

ವಿಜ್ಞಾನ ಅನುಮಾನವಾಗಬಾರದು, ಜನರಲ್ಲಿ ಮೂಡುವ ಅನುಮಾನಗಳನ್ನು ನಿವಾರಿಸೋ ಜ್ಞಾನವಾಗಬೇಕು. ಹಾಗೆ ಜನರ ಅಸ್ಥಿರತೆಯನ್ನು ತೊಡೆದುಹಾಕುವಂತಹ ಪ್ರಭುತ್ವ ನಮ್ಮ ಅಸ್ತಿತ್ವವಾಗಬೇಕು.