ಎರಡು ಗಂಟೆಗಳ ನಂತರ ಎದ್ದು ನಿಂತೆ. ಅವಳೂ ಎಚ್ಚರಗೊಂಡಳು. ಬಟ್ಟೆ ಹಾಕಿಕೊಂಡು ತನ್ನ ಶೂ ತೊಟ್ಟಳು. ಆ ಕ್ಷಣ ಏನೊ ಒಂದು ತರಹ ಬೇರೆಯೇ ಅನಿಸಿತ್ತು-ಭಯಂಕರ ಕನಸಿನಂತೆ. ನಾನು ಕೈ ತೊಳೆಯುವ ಬೇಸಿನ್ ಕಡೆ ನಿಂತಿದ್ದೆ. ಎಲೆನ್ ಪಕ್ಕದ ಕೋಣೆಯ ಬಾಗಿಲು ತೆರೆದಳು. ಇಣುಕಿ ನೋಡಿದೆ. ಒಳಗೆ ತೆರೆದ ಕಿಟಕಿಯ ಬೆಳಕು ನನ್ನ ಮೇಲೆ ಬಿತ್ತು. ಕೋಣೆಯ ಮಧ್ಯದಲ್ಲಿ ಒಂದು ಮೇಜಿನ ಮೇಲೆ ಶವ! ಶವಪೆಟ್ಟಿಗೆಯಲ್ಲಿ ಬಿಳಿ ಬಟ್ಟೆಯಲ್ಲಿ ಬಿಳಿ ಗಡ್ಡದ ಒಂದು ಗಂಡಿನಶವ.
ಸೀಮಾ ಸಮತಲ ಬರೆಯುವ ‘ಪುಸ್ತಕ ದಿನಚರಿ’

 

ಸುಮಾರು ವರ್ಷಗಳ ಹಿಂದೆ ಬೆಂಗಳೂರಿನ ಚರ್ಚ್‍ ಸ್ಟ್ರೀಟ್‍ ನಲ್ಲಿರುವ ಬುಕ್‍ ವರ್ಮ್ ಪುಸ್ತಕದಂಗಡಿಯಲ್ಲಿ ತೆಗೆದುಕೊಂಡ ‘ಗ್ರೇಟ್ ಸ್ಟೋರಿಸ್ ಬೈ ನೋಬಲ್ ಪ್ರೈಝ್ ವಿನ್ನರ್ಸ್’ ಈಗಲೂ ನನ್ನ ಇಷ್ಟದ ಪುಸ್ತಕಗಳಲ್ಲಿ ಒಂದು. ಒಟ್ಟು ಇಪ್ಪತ್ತಾರು ಬರಹಗಾರರ ಪ್ರಸಿದ್ಧ ಕತೆಗಳಿವೆ ಅದರಲ್ಲಿ. ಪ್ರತಿಯೊಂದು ಕತೆ ಆಯಾ ಕತೆಗಾರ/ಕತೆಗಾರ್ತಿ ಹಾಗೂ ಅವರ ಕಾಲಘಟ್ಟವನ್ನು ಪ್ರತಿನಿಧಿಸುತ್ತದೆ. ನಾರ್ವೆಯ ನಟ್ ಹ್ಯಾಮ್‍ಸನ್ ಬರೆದ ಕತೆ ‘ದ ಕಾಲ್ ಆಫ್ ಲೈಫ್’ ಅವುಗಳಲ್ಲೊಂದು.

ಜೀವನದ ಕರೆ

ಕೋಪೆನ್‍ ಹಾಗೆನ್‍ ನ ಒಳ ಬಂದರಿನ ಬಳಿ ವೆಸ್ಟರ್‍ವೋಲ್ಡ್ ಎನ್ನುವ ಬೀದಿಯಿದೆ. ಸ್ವಲ್ಪ ಹೊಸದೇ ಆದರೂ ಇಡೀ ರಸ್ತೆ ನಿರ್ಜನ. ಅಲ್ಲಲ್ಲಿ ಮನೆಗಳಿವೆ. ಕೆಲವು ಗ್ಯಾಸ್ ದೀಪಗಳು ಉರಿಯುತ್ತಿರುತ್ತವೆ. ಜನಸಂದಣಿಯಿಲ್ಲದ ಪ್ರದೇಶ. ಈಗಲೂ ಬೇಸಿಗೆಯಲ್ಲಿ ಜನ ಓಡಾಡುವುದು ತುಂಬಾ ವಿರಳ.

ಹೇಳಬೇಕೆಂದರೆ ನಿನ್ನೆ ಒಂದು ಆಶ್ಚರ್ಯಕರವಾದ ಸಂಗತಿ ಜರುಗಿತು. ಆ ಬೀದಿಯಲ್ಲಿ ಆ ಕಡೆಯಿಂದ ಈ ಕಡೆಗೆ ಓಡಾಡುವಾಗ ವಿರುದ್ಧ ದಿಕ್ಕಿನಿಂದ ಓರ್ವ ಮಹಿಳೆ ಬರುವುದನ್ನು ನೋಡಿದೆ. ಅಕ್ಕಪಕ್ಕ ಬೇರೆ ಯಾರೂ ಇರಲಿಲ್ಲ. ದಾರಿದೀಪವಿದ್ದರೂ ಕತ್ತಲೆಯಿತ್ತು. ಎಷ್ಟೆಂದರೆ ಮುಖ ನೋಡಲಾಗದಷ್ಟು. ಯಾರೋ ಇರುತ್ತಾರೆ ಬಿಡು ಅಂತ ನನ್ನ ಪಾಡಿಗೆ ಅವಳನ್ನು ಹಾದುಬಂದೆ.

ರಸ್ತೆಯ ಅಂಚಿಗೆ ಹೋಗಿ ತಿರುಗಿ ವಾಪಸಾದೆ. ಆ ಮಹಿಳೆ ಕೂಡ ತಿರುಗಿ ಬರುವಾಗ ಮತ್ತೊಮ್ಮೆ ಭೇಟಿಯಾದೆ. ಅವಳು ಯಾರಿಗಾದರೂ ಕಾಯುತ್ತಿರಬೇಕು, ಅಂದುಕೊಂಡೆ. ಅದನ್ನು ತಿಳಿದುಕೊಳ್ಳುವ ಕುತೂಹಲ ನನಗೆ. ಇನ್ನೊಂದು ಸಲ ಅವಳನ್ನು ಹಾದುಕೊಂಡೇ ನಡೆದೆ.
ಮೂರನೇಯ ಸಲ ಸಿಕ್ಕಾಗ ನನ್ನ ಟೋಪಿಯನ್ನು ತೆಗೆದು ಮಾತನಾಡಿಸಿದೆ.

“ಗುಡ್ ಈವ್ನಿಂಗ್! ನೀವು ಯಾರಿಗಾದರೂ ಕಾಯ್ತಿದ್ದೀರಾ?”

ಅವಳು ಬೆಚ್ಚಿಬಿದ್ದಳು. ಇಲ್ಲ…. ಅದು… ಹೌದು ಅವಳು ಯಾರಿಗೊ ಕಾಯುತ್ತಿದ್ದಳು.

ಅವಳು ನಿರೀಕ್ಷಿಸುತ್ತಿರುವ ವ್ಯಕ್ತಿ ಬರುವ ತನಕ ನಾನು ಜೊತೆ ಕುಳಿತರೆ ಅವಳು ತಕರಾರು ತೆಗೆದಳೇ?

ಇಲ್ಲ- ತಗಾದೆ ಎತ್ತಲಿಲ್ಲ, ಇನ್ನು ಧನ್ಯವಾದ ಹೇಳಿದಳು. ನಿಜಕ್ಕೆ ಅವಳು ಯಾರನ್ನೂ ಕಾಯುತ್ತಿರಲಿಲ್ಲ ಅಂತ ಆಮೇಲೆ ಹೇಳಿದಳು. ಸುಮ್ಮನೆ ಗಾಳಿ ಸೇವನೆಗೆ ಬಂದಿದ್ದಳಂತೆ- ಅಲ್ಲಿ ಎಷ್ಟೊಂದು ನೀರವತೆ ಇತ್ತು.

ನಾವು ಪಕ್ಕಪಕ್ಕ ಕುಳಿತುಕೊಂಡೆವು. ಅಷ್ಟೇನು ಮಹತ್ವವಲ್ಲದ ವಿಷಯಗಳ ಬಗ್ಗೆ ಮಾತನಾಡಲು ಶುರುಮಾಡಿದೆವು. ನಾನು ನನ್ನ ತೋಳು ಚಾಚಿದೆ.

“ಥ್ಯಾಂಕ್ಸ್, ಬೇಡ,” ಎಂದು ತಲೆ ಅಲ್ಲಾಡಿಸಿದಳು.

ಇಲ್ಲಿ ವಿಹಾರಮಾಡುವಂತಹ ಸುಖವೇನಿಲ್ಲ. ಆ ಕತ್ತಲಲ್ಲಿ ಅವಳ ಮುಖ ಬೇರೆ ಕಾಣುತ್ತಿಲ್ಲ. ಸಮಯ ಎಷ್ಟಾಯಿತೆಂದು ನೋಡಲು ಕೈಗಡಿಯಾರವನ್ನು ಹೊರತೆಗೆದೆ. ಗಡಿಯಾರ ಮೇಲೆತ್ತಿ ಸಮಯ ನೋಡುತ್ತ ಅವಳನ್ನೂ ನೋಡಿದೆ.

“ಒಂಬತ್ತುವರೆ”

ಚಳಿಯಲ್ಲಿ ಹೆಪ್ಪುಗಟ್ಟುವಂತೆ ಅವಳು ನಡುಗಿದಳು. ಈ ಸದಾವಕಾಶವನ್ನು ಬಳಸಿಕೊಂಡೆ.

“ನೀನು ನಡುಗುತ್ತಿದ್ದೀಯ. ನಾವು ಎಲ್ಲಾದ್ರು ಹೋಗಿ ಏನಾದರು ಕುಡೀಬಹುದಲ್ವಾ? ಟಿವೋಲಿ? ಅಥ್ವಾ ನ್ಯಾಷನಲ್ಸ್ ನಲ್ಲಿ?” ಎಂದು ಕೇಳಿದೆ.

“ಆದ್ರೆ ನಿಂಗೆ ಕಾಣಲ್ವಾ? ನಾನು ಎಲ್ಲೂ ಹೋಗೋಕೆ ಆಗಲ್ಲ ಈಗ” ಅವಳು ಉತ್ತರಿಸಿದಳು.

ಆಗ ಮೊದಲ ಬಾರಿ ಗಮನಿಸಿದೆ. ಅವಳು ಒಂದು ಉದ್ದನೆಯ ಕಪ್ಪು ಮುಸುಕು ಹಾಕಿದ್ದಳು. ನನ್ನ ತಪ್ಪಿಗೆ ಕತ್ತಲನ್ನು ಬೈದೆ. ಕ್ಷಮೆ ಯಾಚಿಸಿದೆ. ಕ್ಷಮೆ ಸ್ವೀಕರಿಸಿದ ರೀತಿ ನೋಡಿದರೆ ರಾತ್ರಿ ಸಂಚಾರವನ್ನು ಅಪರೂಪಕ್ಕೆ ಮಾಡುವವಳಂತೆ ಅನಿಸಿತು.

“ನನ್ನ ತೋಳು ಹಿಡಿಯಲ್ವೆ ನೀನು?” ನಂತರ “ಸ್ವಲ್ಪ ಮಟ್ಟಿಗೆ ಬೆಚ್ಚಗಿರಬಹುದು ನೀನು” ಎಂದೆ.
ಆಕೆ ತೋಳು ಹಿಡಿದಳು.

ನಾವಿಬ್ಬರೂ ಹಲವು ತಿರುವುಗಳನ್ನು ದಾಟಿದೆವು. ಮತ್ತೆ ಗಂಟೆಯೆಷ್ಟಾಯಿತು ಎಂದು ನೋಡಲು ಹೇಳಿದಳು.

“ಈಗ ಹತ್ತು” ನಾನೆಂದೆ. “ಎಲ್ಲಿ ಇರೋದು ನೀನು?”

“ಗ್ಯಾಮ್ಲೆ ಕೊನ್ಗೇವ್”

ಅವಳನ್ನು ನಿಲ್ಲಿಸಿದೆ.

“ನಿನ್ನನ್ನು ಮನೆತನಕ ಬಿಟ್ಟುಬರಬಹುದಾ ನಾನು?” ಕೇಳಿದೆ.

(ನಟ್ ಹ್ಯಾಮ್‍ಸನ್)

“ಬೇಡ,” ಅವಳ ಉತ್ತರ. “ಬೇಡ, ನಾನು ನಿನ್ನ ಅಲ್ಲಿಯತನಕ… ಅಂದಹಾಗೆ ನೀನು ಬ್ರೆಡ್‍ ಗೇಡ್‍ ನಲ್ಲಿ ಇರೋದು, ಅಲ್ವಾ?”
“ಅರೆ! ನಿಂಗೆ ಹೇಗೆ ಗೊತ್ತು?” ಆಶ್ಚರ್ಯದಿಂದ ಕೇಳಿದೆ.

“ಓ, ನೀನ್ಯಾರು ಅಂತ ನಂಗೆ ಗೊತ್ತು” ಉತ್ತರಿಸಿದಳು.

ಸ್ವಲ್ಪ ಹೊತ್ತಿನ ಮೌನ.

ತೋಳಲ್ಲಿ ತೋಳು ಬಳಸಿಕೊಂಡು ಬೆಳಕಿರುವ ಬೀದಿಗೆ ನಡೆದೆವು. ಅವಳು ಬಿರಬಿರನೆ ನಡೆದಳು. ಅವಳ ಮುಸುಕು ಹಿಂದೆಯಿಂದ ಹಾರಾಡುತ್ತಿತ್ತು.

“ನಾವೀಗ ಬೇಗಬೇಗ ಹೆಜ್ಜೆ ಹಾಕ್ಬೇಕು” ಅವಸರಿಸಿದಳು.

ಗ್ಯಾಮ್ಲೆ ಕೊನ್ಗೇವ್‍ ನಲ್ಲಿ ಅವಳ ಮನೆಯ ಬಾಗಿಲಿಗೆ ಬಂದಾಗ, ಇಷ್ಟು ದೂರ ಬಿಡಲು ಬಂದಿದ್ದಕ್ಕೆ ಧನ್ಯವಾದ ಹೇಳುತ್ತಾಳೆ ಅನ್ನೋ ತರಹ ನನ್ನತ್ತ ತಿರುಗಿದಳು. ಬಾಗಿಲನ್ನು ಅವಳಿಗಾಗಿ ತೆರೆದೆ. ನಿಧಾನಕ್ಕೆ ಒಳಹೋದಳು. ಭುಜದಿಂದ ಬಾಗಿಲನ್ನು ನೂಕಿಕೊಂಡು ಅವಳನ್ನು ಹಿಂಬಾಲಿಸಿದೆ. ಒಳಹೋದಾಕ್ಷಣ ನನ್ನ ಕೈ ಗಟ್ಟಿಯಾಗಿ ಹಿಡಿದುಕೊಂಡಳು. ನಮ್ಮಿಬ್ಬರಲ್ಲಿ ಯಾರೂ ಮಾತನಾಡಲಿಲ್ಲ.

ಎರಡನೆಯ ಮಹಡಿ ಏರಿ, ಮೂರನೆಯದಕ್ಕೆ ನಿಂತೆವು. ತನ್ನ ಅಪಾರ್ಟ್‍ಮೆಂಟಿನ ಮುಖ್ಯಬಾಗಿಲಿನ ಬೀಗ ತೆಗೆದು ಇನ್ನೊಂದು ಒಳ ಬಾಗಿಲನ್ನು ತೆರೆದಳು. ನನ್ನ ಕೈ ಹಿಡಿದು ಒಳ ನಡೆದಳು. ಅದು ವಿಶಾಲ ಕೋಣೆ. ಗೋಡೆ ಮೇಲಿನ ಗಡಿಯಾರದ ಟಿಕ್‍ಟಾಕ್ ಮಾತ್ರ ಕೇಳಿಸುತ್ತಿತ್ತು. ಒಂದು ಕ್ಷಣ ಸುಮ್ಮನೆ ನಿಂತವಳು ಒಮ್ಮೆಗೆ ಬಾಹುಗಳನ್ನು ಬಾಚಿ ನನ್ನ ಬರಸೆಳೆದು ಕಂಪಿಸುತ್ತ, ಆತುರದಿಂದ ತುಟಿಗೆ ಮುತ್ತಿಕ್ಕಿದಳು. ನೇರ ತುಟಿಗೆ!

“ಕೂತುಕೊಳ್ಳಲ್ವಾ? ಇಲ್ಲಿ ಸೋಫಾ ಇದೆ. ಅಷ್ಟರೊಳಗೆ ನಾನು ದೀಪ ತರ್ತೀನಿ” ಎಂದು ಹೇಳಿಹೋದಳು.
ದೀಪ ಹಚ್ಚಿದಳು.

ಜಕ್ಕೆ ಅವಳು ಯಾರನ್ನೂ ಕಾಯುತ್ತಿರಲಿಲ್ಲ ಅಂತ ಆಮೇಲೆ ಹೇಳಿದಳು. ಸುಮ್ಮನೆ ಗಾಳಿ ಸೇವನೆಗೆ ಬಂದಿದ್ದಳಂತೆ- ಅಲ್ಲಿ ಎಷ್ಟೊಂದು ನೀರವತೆ ಇತ್ತು.

ನಾನು ದಂಗುಬಡಿದು ಕೂತಿದ್ದೆ. ಕುತೂಹಲದೊಂದಿಗೆ. ಸವಿಸ್ತಾರವಾದ, ಪೀಠೋಪಕರಣಗಳಿಂದ ಕೂಡಿದ್ದ ಕೋಣೆ. ಅರ್ಧ ತೆರೆದ ಬಾಗಿಲಿನ ಕೋಣೆಯನ್ನು ದಾಟಿ ಇನ್ನು ಹಲವಾರು ಕೊಠಡಿಗಳಿಗೆ ಹೋಗಬಹುದಿತ್ತು. ಇಲ್ಲಿಗೆ ಯಾಕೆ ಬಂದೆ? ಯಾವ ತರಹದ ವ್ಯಕ್ತಿ ನಾನು ಎಂದು ನನಗೇ ಅರ್ಥಮಾಡಿಕೊಳ್ಳಲಿಕ್ಕೆ ಆಗಿಲ್ಲ.

“ಓಹ್! ಎಷ್ಟು ಚೆನ್ನಾಗಿದೆ ಈ ಕೋಣೆ” ಉದ್ಗಾರದಿಂದ ನಾನೆಂದೆ. “ನೀನು ಇಲ್ಲೇ ಇರೋದ?”

“ಹೌದು, ಇದು ನನ್ನ ಮನೆ”

“ಇದು ನಿನ್ನ ಮನೆಯೇ? ಅಪ್ಪಅಮ್ಮ ಜೊತೆಯಲ್ಲಿ ವಾಸ ಮಾಡೋದಾ?”

“ಓ, ಇಲ್ಲ,” ನಕ್ಕಳು. “ನೀನು ನೋಡೊ ಹಾಗೆ ನಾನೊಬ್ಬ ಮುದಿ ಹೆಂಗಸು!”

ತನ್ನ ಮುಸುಕು ಮತ್ತು ಹೊದಿಕೆಯನ್ನು ತೆಗೆದಳು.

“ನೋಡು! ಏನ್ ಹೇಳ್ದೆ ನಿಂಗೆ!” ತಡಿಯಲಾರದಂತಹ ತುಡಿತದಿಂದ ಇನ್ನೊಮ್ಮೆ ನನ್ನನ್ನ ಬಿಗಿದಪ್ಪಿದಳು.

ಸುಮಾರು ಇಪ್ಪತ್ತೆರಡು ಅಥವಾ ಇಪ್ಪತ್ತಮೂರು ವರ್ಷ ವಯಸ್ಸು ಇರಬಹುದು. ಬಲಗೈಯಲ್ಲಿ ಉಂಗುರ ತೊಟ್ಟಿದ್ದಳು; ಹಾಗಿದ್ದಲ್ಲಿ ಮದುವೆಯಾಗಿದೆ. ಸುಂದರವಾಗಿದ್ದಳೇ? ಇಲ್ಲ. ಮುಖದ ಮೇಲೆ ಮಚ್ಚೆಗಳಿದ್ದವು. ಹುಬ್ಬುಗಳು ಇಲ್ಲವೇ ಇಲ್ಲ ಎಂಬಂತೆ ಇತ್ತು. ಆದರೆ ಜೀವನೋತ್ಸಾಹವಿತ್ತು ಅವಳಲ್ಲಿ. ಬಾಯಿಯಂತೂ ಆಶ್ಚರ್ಯಕರವಾಗಿ ಚೆಂದಾಗಿತ್ತು.

ಅವಳು ಯಾರು? ಗಂಡ ಇದ್ದಲ್ಲಿ ಅವನೆಲ್ಲಿ? ಇದು ಯಾರ ಮನೆ? ಹೀಗೆಲ್ಲ ಎಷ್ಟೊಂದು ಪ್ರಶ್ನೆಗಳಿದ್ದವು ಕೇಳುವುದಕ್ಕೆ. ಆದರೆ ಇನ್ನೇನು ಕೇಳಬೇಕು ಎಂದು ಬಾಯಿ ತೆರೆದರೆ ಸಾಕು ಮತ್ತೊಮ್ಮೆ ಗಟ್ಟಿಯಾಗಿ ಅಪ್ಪುತ್ತಿದ್ದಳು.

“ನನ್ನ ಹೆಸರು ಎಲೆನ್. ಅಂದಹಾಗೆ ನಿಂಗೆ ಕುಡಿಯಲು ಏನಾದರೂ ಬೇಕೇ? ನಾನು ಕರೆಮಾಡಿದರೆ ಇಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ. ಅಲ್ಲಿತನಕ ನೀನು ನನ್ನ ಕೋಣೆಯಲ್ಲಿ ಇರು” ಎಂದಳು.

ಕೋಣೆಯೊಳಗೆ ಹೋದೆ. ಬೆಳಕು ಸ್ವಲ್ಪವೇ ಇತ್ತು. ಎರಡು ಮಂಚಗಳನ್ನು ನೋಡಿದೆ. ಎಲೆನ್ ಕರೆಮಾಡಿ ವೈನ್ ತರಲು ಹೇಳಿದಳು. ಕೆಲಸದಾಕೆ ವೈನ್ ತಂದುಕೊಟ್ಟು ಹೋದದ್ದು ಕೇಳಿಸಿತು. ಕೆಲಸಮಯದ ನಂತರ ಎಲೆನ್ ಬಂದಳು. ಬಾಗಿಲ ಹತ್ತಿರ ನಿಂತಳು. ನಾನು ಒಂದು ಹೆಜ್ಜೆ ಮುಂದಿಟ್ಟೆ. ಅವಳೂ ನನ್ನತ್ತ ಹೆಜ್ಜೆ ಇಟ್ಟಳು.

ಇದು ಕಡೆಯ ರಾತ್ರಿ.
ಮುಂದೇನಾಯಿತು? ಆಹಾ, ತಾಳ್ಮೆ ಇರಲಿ! ಹೇಳಲು ಬಹಳಷ್ಟಿದೆ.

ಬೆಳಿಗ್ಗೆಯ ತಿಳಿ ಬೆಳಕಿನಲ್ಲಿ ಎದ್ದೆ. ಕೋಣೆಯ ಇನ್ನೊಂದು ಬದಿಯ ಪರದೆಯಿಂದ ಸೂರ್ಯನ ಕಿರಣಗಳು ಇಣುಕಿದಂತೆ ಭಾಸವಾಗುತ್ತಿತ್ತು. ಎಲೆನ್ ಕೂಡ ಎದ್ದು ನಸುನಕ್ಕಳು. ಅವಳ ಕೈ ಬೆಳ್ಳಗೆ ಮಕಮಲ್ಲಿನಂತಿದ್ದವು. ಸ್ತನಗಳು ತುಂಬಿದ್ದವು. ಅವಳ ಕಿವಿಯಲ್ಲಿ ಏನೊ ಪಿಸುಗುಟ್ಟಿದೆ. ತನ್ನ ತುಟಿಗಳಿಂದ ನನ್ನ ತುಟಿಗಳನ್ನು ಅತೀ ಮೃದುವಾಗಿ ಚುಂಬಿಸಿದಳು. ದಿನ ನಿಧಾನವಾಗಿ ತಿಳಿಯಾಗಲಾಂಭಿಸಿತು. ಇನ್ನಷ್ಟು ತಿಳಿಯಾಗಿ..

ಎರಡು ಗಂಟೆಗಳ ನಂತರ ಎದ್ದು ನಿಂತೆ. ಅವಳೂ ಎಚ್ಚರಗೊಂಡಳು. ಬಟ್ಟೆ ಹಾಕಿಕೊಂಡು ತನ್ನ ಶೂ ತೊಟ್ಟಳು. ಆ ಕ್ಷಣ ಏನೊ ಒಂದು ತರಹ ಬೇರೆಯೇ ಅನಿಸಿತ್ತು-ಭಯಂಕರ ಕನಸಿನಂತೆ. ನಾನು ಕೈ ತೊಳೆಯುವ ಬೇಸಿನ್ ಕಡೆ ನಿಂತಿದ್ದೆ. ಎಲೆನ್ ಪಕ್ಕದ ಕೋಣೆಯ ಬಾಗಿಲು ತೆರೆದಳು. ಇಣುಕಿ ನೋಡಿದೆ. ಒಳಗೆ ತೆರೆದ ಕಿಟಕಿಯ ಬೆಳಕು ನನ್ನ ಮೇಲೆ ಬಿತ್ತು. ಕೋಣೆಯ ಮಧ್ಯದಲ್ಲಿ ಒಂದು ಮೇಜಿನ ಮೇಲೆ ಶವ! ಶವಪೆಟ್ಟಿಗೆಯಲ್ಲಿ ಬಿಳಿ ಬಟ್ಟೆಯಲ್ಲಿ ಬಿಳಿ ಗಡ್ಡದ ಒಂದು ಗಂಡಿನಶವ. ಹೊದಿಕೆಯೊಳಗಿನಿಂದ ಮೊಣಕಾಲಿನ ಮೂಳೆ ಬಿಗಿಹಿಡಿದ ಮುಷ್ಠಿಯಂತೆ ಎದ್ದು ಕಾಣುತ್ತಿತ್ತು. ಮುಖ ಹಳದಿ ಬಣ್ಣಕ್ಕೆ ತಿರುಗಿ ಇನ್ನಷ್ಟು ಭಯ ಹುಟ್ಟಿಸುವಂತಿತ್ತು. ದಿನಬೆಳಕಿನಲ್ಲಿ ಎಲ್ಲವು ಸ್ಪಷ್ಟವಾಗಿ ಕಂಡಿತು. ಒಂದೂ ಶಬ್ದವೂ ಹೇಳದೆ ಆಚೆಗೆ ತಿರುಗಿದೆ.

ಎಲೆನ್ ಬಂದಾಗ ನಾನು ಬಟ್ಟೆ ತೊಟ್ಟು ಹೊರಡಲು ತಯಾರಾದೆ. ಅವಳು ನನ್ನನ್ನು ಕೆಳ ತನಕ ಬಿಟ್ಟುಬರಲು ಮತ್ತಷ್ಟು ಉಡುಪು ಧರಿಸಿದಳು. ಏನೂ ಹೇಳದೆ ಜೊತೆ ಬರಲು ಸಮ್ಮತಿಸಿದೆ. ಕೆಳಗೆ ಇಳಿದಾಗ ಬೀದಿಗೆ ತೆರೆಯುವ ಬಾಗಿಲ ಹಿಂದೆ ಯಾರ ಕಣ್ಣಿಗೆ ಬೀಳದಂತೆ ಬಚ್ಚಿಟ್ಟುಕೊಂಡಳು.

“ಸರಿ ಹಾಗಿದ್ರೆ, ಗುಡ್‍ ಬೈ” ಪಿಸುಗುಟ್ಟಿದಳು.

“ನಾಳೆ ತನಕ?” ಎಂದೆ ಅವಳನ್ನು ಪರೀಕ್ಷಿಸಲು.

“ಇಲ್ಲ, ನಾಳೆ ಬೇಡ.”

“ಯಾಕೆ ನಾಳೆ ಬೇಡ?”

“ಇಷ್ಟೊಂದು ಪ್ರಶ್ನೆಗಳು ಬೇಡ, ಡಿಯರ್! ಸಂಬಂಧಿಕರೊಬ್ಬರು ತೀರಿಕೊಂಡಿದ್ದಾರೆ, ನಾಳೆ ಅವರ ಅಂತ್ಯಸಂಸ್ಕಾರ ಇದೆ. ಈಗ ಅಲ್ಲಿ- ನಿಂಗೆ ಗೊತ್ತಲ್ಲ”

“ಆದರೆ ನಾಡಿದ್ದು?”

“ಆಯ್ತು, ನಾಡಿದ್ದು. ಇದೇ ಜಾಗದಲ್ಲಿ ನಿಂಗೆ ಸಿಕ್ತೇನೆ. ಸರಿ, ಗುಡ್‍ ಬೈ”

ನಾನು ಹೊರಟೆ.

ಯಾರವಳು? ಮತ್ತೆ ಆ ಹೆಣ? ಅದರ ಮುಷ್ಠಿ ಭದ್ರವಾಗಿತ್ತು. ಬಾಯಿ ಒಂದು ಕಡೆ ಇಳಿಬಿದ್ದಿತ್ತು. ಹೆದರಿಕೆ ಆಗುವಂತಿತ್ತು. ನಾಡಿದ್ದು ನನ್ನ ಬರುವಿಕೆಗೆ ಕಾಯುತ್ತಾಳೆ. ಮತ್ತೆ ನೋಡಬೇಕೇ ಅವಳನ್ನು?

ನಾನು ನೇರ ಬರ್ನಿಯ ಕೆಫೆಗೆ ಹೋಗಿ ಡೈರಕ್ಟರಿ ಕೇಳಿ ಪಡೆದೆ. ನಂಬರ್‍ಗಳನ್ನು ಹುಡುಕಿದೆ. ಗ್ಯಾಮ್ಲೆ ಕೊನ್ಗೇವ್.. ಮತ್ತೆ ಹುಡುಕಿದೆ… ಓಹ್ ಅಲ್ಲಿದೆ ಹೆಸರು-ಎಲೆನ್. ಅಷ್ಟು ಹೊತ್ತಿಗಾಗಲೇ ದಿನಪತ್ರಿಕೆ ಬರುವ ಸಮಯವಾಗಿತ್ತು. ಅಲ್ಲಿಯೇ ಸ್ವಲ್ಪ ಹೊತ್ತು ಕಾದೆ. ಪತ್ರಿಕೆ ಕೈಗೆ ಸಿಕ್ಕಾಗ ಭರ್ರನೆ ಸಾವಿನ ಸುದ್ದಿ ಪ್ರಕಟಿಸುವ ಪುಟವನ್ನು ತೆರೆದೆ. ಅಗೋ ಅಲ್ಲಿತ್ತು ಅವಳ ಹೆಸರು, ಲಿಸ್ಟ್ ನಲ್ಲಿ ಮೊದಲನೆಯದು. ದಪ್ಪ ಅಕ್ಷರಗಳಲ್ಲಿ ಟೈಪ್ ಮಾಡಲಾಗಿತ್ತು: “ಐವತ್ತು ಮೂರು ವರ್ಷದ ನನ್ನ ಪತಿ ದೀರ್ಘ ಅನಾರೋಗ್ಯದಿಂದ ನಿಧನರಾಗಿದ್ದಾರೆ.” ಸಾವಿನ ಪ್ರಕಟಣೆಯ ದಿನಾಂಕ ನಿನ್ನೆಯದು.

ಸುಮಾರು ಹೊತ್ತು ಯೋಚಿಸುತ್ತಾ ಕೂತೆ.

ಒಬ್ಬ ಪುರುಷ ಮದುವೆಯಾಗುತ್ತಾನೆ. ಅವನ ಹೆಂಡತಿ ಅವನಿಗಿಂತ ಮೂವತ್ತು ವರ್ಷ ಸಣ್ಣವಳು. ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಒಂದು ದಿನ ಸಾಯುತ್ತಾನೆ.

ಮತ್ತು ಆ ಎಳೆ ವಿಧವೆ ವಿರಾಮದ ನಿಟ್ಟುಸಿರು ಬಿಡುತ್ತಾಳೆ.