ಎಲ್ಲವನ್ನೂ ಒಂದು ವ್ಯಾಖ್ಯಾನಕ್ಕೆ ಬಗ್ಗಿಸುವುದು, ನಮ್ಮ ಅನುಭವಕ್ಕೆಲ್ಲ ಹೆಸರಿಡುವುದು, ಖಚಿತತೆಗೆ ತಹತಹಿಸುವುದು ಅಥವಾ ಎಲ್ಲದಕ್ಕೂ ಸ್ಥಿರವಾಗಿರುವ ಕಠಿಣವಾಗಿರುವ ಉತ್ತರವೇ ಬೇಕೆಂದು ನಮಗೆ ಅನ್ನಿಸುವುದು, ಬದಲಾಗುತ್ತಿರುವ ಸಮಾಜದ ಅತಂತ್ರತೆಯನ್ನು ನಿಭಾಯಿಸುವ ತಂತ್ರಗಾರಿಕೆ ಇರಬಹುದು. ಹಿಂದಿನದನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ನಮ್ಮ ಅಧಿಕಾರ, ಸ್ಥಾನವನ್ನು ಉಳಿಸಿಕೊಳ್ಳುವ ಬಯಕೆಯಾಗಿಯೂ ಬಂದಿರಬಹುದು. ಆದರೆ ಯಕ್ಷಗಾನದ ಪರಂಪರೆಯೇ ಸ್ವತಂತ್ರ ವಿವರಣೆ-ವ್ಯಾಖ್ಯಾನಗಳಿಗೆ ತೆರೆದುಕೊಂಡದ್ದು.
‘ಯಕ್ಷಾರ್ಥ ಚಿಂತಾಮಣಿ’ ಸರಣಿಯಲ್ಲಿ ಕೃತಿ ಆರ್. ಪುರಪ್ಪೇಮನೆ ಬರಹ.

ಒಬ್ಬ ಪ್ರಸಿದ್ಧ ಯಕ್ಷಗಾನ ವೇಷಧಾರಿ, ತಮ್ಮ ಸಂದರ್ಶನದಲ್ಲಿ, ಮೂಲ ಕತೆಗೆ ಪಕ್ಕಾಗಿ ಪಾತ್ರ ಕಟ್ಟುವುದು ಬಹಳ ಮುಖ್ಯ ಎಂದರು. ಉದಾಹರಣೆಗೆ ಕರ್ಣಪರ್ವ(ಕರ್ಣನ ಕೊನೆಗಾಲದ ಕತೆ) ಪ್ರಸಂಗದಲ್ಲಿ ಮಗನ ಸಾವಿಗಾಗಿ ದುಃಖಿಸುತ್ತಾ ತನ್ನ ಬದುಕೇಕೆ ಹೀಗಾಯಿತು? ಎಂದು ಕರ್ಣ ಒಮ್ಮೆ ಅವಲೋಕನ ಮಾಡಿಕೊಳ್ಳುತ್ತಾನೆ. ಹೆಚ್ಚಿನ ಪ್ರದರ್ಶನಗಳಲ್ಲಿ ಕರ್ಣನ ಪಾತ್ರ ಉದಾತ್ತವಾಗಿ ಚಿತ್ರಿಸಲ್ಪಡುತ್ತದೆ. ಸೂತ ಕುಲದಲ್ಲಿ ಹುಟ್ಟಿ, ಬದುಕಿನುದ್ದಕ್ಕೂ ಪಟ್ಟ ಅವಮಾನಗಳನ್ನು ನೆನಪಿಸಿಕೊಳ್ಳುತ್ತಾನೆ. ಆದರೆ ಈ ಕಲಾವಿದರ ಪ್ರಕಾರ ಹಾಗೆ ಚಿತ್ರಿಸುವುದು ಸರಿಯಲ್ಲ. ಯಾಕೆಂದರೆ ಅವನು ದುಷ್ಟ ಚತುಷ್ಟಯರಲ್ಲೊಬ್ಬ. ಮೂಲದಲ್ಲಿ ಹಾಗೇ ಇರುವುದರಿಂದ ತನಗೇಕೆ ಹೀಗಾಯಿತು ಎಂದು ದುಃಖಿಸುವಾಗ ಅವನು ತನ್ನ ತಪ್ಪುಗಳನ್ನು ನೆನಪಿಸಿಕೊಳ್ಳಬೇಕು. ವಸ್ತ್ರಾಪಹರಣದ ಸಮಯದಲ್ಲಿ ತಾನು ಕೊಟ್ಟ ಉತ್ತೇಜನ, ಸರಿ ತಪ್ಪುಗಳ ವಿಮರ್ಶೆಯಿಲ್ಲದೇ ಭಾರತದುದ್ದಕ್ಕೂ ಕೌರವನಿಗೆ ಕೊಟ್ಟ ಸ್ಥಾನ ಮುಂತಾದವುಗಳನ್ನು ನೆನಪಿಸಿಕೊಳ್ಳಬೇಕು ಎಂದರು. ಜೊತೆಗೇ ಯಕ್ಷಗಾನದ ಕವಿಗಳು ಈಗಾಗಲೇ ಮೂಲ ಪುರಾಣಗಳನ್ನು ಬಹಳಷ್ಟು ಬದಲಿಸಿದ್ದಾರೆ, ಅದು ಸರಿಯಲ್ಲ ಎನ್ನುವ ಮಾತೂ ಬಂದಿತು.

ಯಕ್ಷಗಾನದಲ್ಲಿ ಮತ್ತೆ ಮತ್ತೆ ಈ ಮೂಲ ಕತೆಯ ಅಧಿಕೃತತೆಯ ಪ್ರಶ್ನೆ ಬರುತ್ತಾ ಇರುತ್ತದೆ. ಹೆಚ್ಚಿನ ಪ್ರಸಂಗಗಳಲ್ಲಿ ಎರಡನೇ ವೇಷಧಾರಿಯೆ ಕೌರವ, ಮಾಗಧ, ವಾಲಿ ಮುಂತಾದ ಪಾತ್ರಗಳನ್ನು ಮಾಡುವಷ್ಟು ಅವುಗಳ ಪ್ರಾಮುಖ್ಯತೆ ಯಕ್ಷಗಾನದಲ್ಲಿದೆ. ದೇವರು, ಅಥವಾ ಒಳ್ಳೆಯವರೆನಿಸಿಕೊಂಡ ಪಾತ್ರಗಳ ಸಮರ್ಥನೆ ಸಮಾಜದಲ್ಲಿ ಈಗಾಗಲೇ ಪ್ರಚಲಿತವಿರುವುದರಿಂದಲೇ ಅವರ ವಿರೋಧಿಗಳ ಆಂತರ್ಯ, ಅವರ ಕಾರ್ಯದ ಸಮರ್ಥನೆ ಏನು ಎನ್ನುವುದು ಹೇಳುವುದಕ್ಕಾಗಿಯೇ ಹೀಗೆ ಬೆಳೆದಿದೆಯೇನೊ ಅನ್ನಿಸುವಷ್ಟರ ಮಟ್ಟಿಗೆ ಯಕ್ಷಗಾನದ ರಂಗ ಪಠ್ಯದ ಪರಂಪರೆಯಿದೆ. ಪಾತ್ರ ಕಟ್ಟುವಲ್ಲಿನ ಅರ್ಥಗಾರಿಕೆಯೂ ಹಲವು ರೀತಿಯ (ಮೌಖಿಕ ಮತ್ತು ಬರೆದಿಟ್ಟ)ಆಕರಗಳ ಮೇಲೆಯೇ ನಿಂತಿರುವಾಗ, ಪ್ರತಿದಿನವೂ ಪದ್ಯಗಳ ಆಯ್ಕೆ, ಅವುಗಳ ಅರ್ಥ ನಿತ್ಯನೂತನವಾಗಲೇ ಬೇಕಾದ ಪರಂಪರೆಯೆ ಯಕ್ಷಗಾನದ್ದಾಗಿರುವಾಗ, ಮೂಲ ಪುರಾಣದ ಪ್ರಶ್ನೆ ಬಂದಿರುವುದೇ ಈ ಕಾಲದ ಮಹಿಮೆಯಾಗಿರಬೇಕು!

ಒಂದು ಕತೆ ಹೇಗೆ ಬೆಳೆಯುತ್ತದೆ ಮತ್ತು ಅದು ಹೇಗೆ ಅಧಿಕೃತವಾಗುತ್ತದೆ ಎನ್ನುವುದನ್ನು, ಇನ್ನೊಬ್ಬ ಕಲಾವಿದ ಸ್ನೇಹಿತರೊಡನೆ ನಡೆಯುವ ನಿರಂತರ ಮಾತುಕತೆಯಲ್ಲಿ, ಯಾವ ಉದಾಹರಣೆಗಳ ಮೂಲಕ ಕೊಡಬೇಕೆಂದು ಯೋಚಿಸುತ್ತಾ ಇರುವಾಗಲೇ ಈ ಲೇಖನವನ್ನು ಬರೆಯುವುದಕ್ಕೆ ಸಂದರ್ಭ ಬಂದಿತು. ಪುರಾಣಗಳ ಉದಾಹರಣೆ ಕೊಡುವುದಕ್ಕೆ ಸಮಸ್ಯೆ ಏನೆಂದರೆ ರಾಮಾಯಣವಾಗಲೀ, ಮಹಾಭಾರತದ ಕತೆಯಾಗಲೀ ಮೌಖಿಕವಾಗಿ ಬೆಳೆದ, ಆಮೇಲೆ ಯಾವಾಗಲೋ ಲಿಪಿಯಲ್ಲಿ ಬರೆದ, ಬರೆದಿದ್ದು ಮತ್ತೆ ತಿದ್ದಿ ತೀಡಿದ, ಸಾಮಾಜಿಕ ಸಂದರ್ಭಗಳ ಬಗ್ಗೆ ನಮಗೆ ಹೆಚ್ಚು ನಿಖರವಾಗಿ ಗೊತ್ತಿಲ್ಲದಿರುವುದು.

(ವಿ. ಎಸ್. ಸೂಕ್ತಂಕರರು)

ಆದರೂ ಪುರಾಣದ ಬಗ್ಗೆ ಗೊತ್ತಿರುವಷ್ಟನ್ನು ಹೇಳಬೇಕೆಂದರೆ ಮಹಾಭಾರತವನ್ನು ವಿ. ಎಸ್. ಸೂಕ್ತಂಕರರು 1967ರಲ್ಲಿ, ನಲವತ್ತು ವರ್ಷ ಕೆಲಸ ಮಾಡಿ 1128 ರೀತಿಯ ಮಹಾಭಾರತವನ್ನು ಸಂಗ್ರಹಿಸಿ ಒಂದು ಕ್ರಿಟಿಕಲ್ ಎಡಿಶನ್ ಮಾಡಿಕೊಟ್ಟರು. ಕಾಶ್ಮೀರಿ, ಕಲ್ಕತ್ತಾ, ಉಜ್ಜಯಿನಿ, ಮಧುರೈ, ತ್ರಿವೇಂಡ್ರಮ್, ಭುವನೇಶ್ವರ ಹೀಗೆ ಪ್ರತಿಗಳು ಎಲ್ಲಾ ಕಡೆಯಿಂದ ಅವರಿಗೆ ಸಿಕ್ಕವು. ಕೆಲವೊಂದರಲ್ಲಿ 96 ಸಾವಿರ ಶ್ಲೋಕ, ಕೆಲವೊಂದರಲ್ಲಿ ಒಂದು ಲಕ್ಷ ಶ್ಲೋಕ ಹೀಗೆ, ಬೇರೆ ಬೇರೆ ಇರುವ ಆವೃತ್ತಿಗಳನ್ನು ತೆಗೆದುಕೊಂಡು ಓದಿ, ಒಂದು ಕ್ರಿಟಿಕಲ್ ಎಡಿಶನ್ ಆಗಿ ಹೊರಗೆ ತಂದರು. ಮತ್ತು ಮುನ್ನುಡಿಯಲ್ಲಿ ಇದು ಮಹಾಭಾರತದ 1129 ನೇ ಆವೃತ್ತಿ ಎಂದು ಅವರು ಬರೆದುಕೊಳ್ಳುತ್ತಾರೆ. ಈಗ ನಮಗೆ ಪ್ರಚಲಿತವಾಗಿರುವ ಮೂಲ, ಅಧಿಕೃತ ಎನ್ನುವುದು ಈ ಆವೃತ್ತಿಯೇ. 1128 ಆವೃತ್ತಿಗಳನ್ನು ಸಂಗ್ರಹಿಸಿ ಅದನ್ನು ಸಂಪಾದನೆ ಮಾಡುವಾಗ ಅವರು ಪರಿಗಣಿಸಿದ ಮಾನದಂಡಗಳು, ತೆಗೆದುಕೊಂಡ ನಿರ್ಧಾರಗಳು ವಸಾಹತು ಕಾಲದ ಸಂಶೋಧನಾ ವಿಧಾನವಾದ ಇಂಡಾಲಜಿಯನ್ನು ಆಶ್ರಯಿಸಿದ್ದವು. ಅಂದರೆ ಹೇಗೆ 1128 ಆವೃತ್ತಿಗಳು ಅವರವರ ಕಾಲಕ್ಕೆ, ಪ್ರದೇಶಕ್ಕೆ, ಸಮುದಾಯಕ್ಕೆ ತಕ್ಕಂತೆ ಶ್ಲೋಕಗಳನ್ನು ಸೇರಿಸಿಕೊಳ್ಳುತ್ತಾ ಹೋದವೋ ಹಾಗೆಯೇ ಸೂಕ್ತಂಕರರದ್ದು ನಮ್ಮ ಕಾಲದ್ದು. ಮಹಾಭಾರತವು ಸಮುದಾಯಗಳ, ಜನರ ನಿರಂತರ ಸಂಭಾಷಣೆಯ ಮೂಲಕ ಬೆಳೆಯುತ್ತಾ ಹೋದ ಒಂದು ಪಠ್ಯ. ಪಠ್ಯದೊಂದಿಗಿನ ಮಾತುಕತೆ ಮತ್ತು ಅದರ ನಿರಂತರತೆಯೇ ಅದನ್ನು ಇವತ್ತು ಬದುಕುವ ನಮಗೂ ಪ್ರಸ್ತುತವಾಗಿಸಿದೆ.

ದೇವರು, ಅಥವಾ ಒಳ್ಳೆಯವರೆನಿಸಿಕೊಂಡ ಪಾತ್ರಗಳ ಸಮರ್ಥನೆ ಸಮಾಜದಲ್ಲಿ ಈಗಾಗಲೇ ಪ್ರಚಲಿತವಿರುವುದರಿಂದಲೇ ಅವರ ವಿರೋಧಿಗಳ ಆಂತರ್ಯ, ಅವರ ಕಾರ್ಯದ ಸಮರ್ಥನೆ ಏನು ಎನ್ನುವುದು ಹೇಳುವುದಕ್ಕಾಗಿಯೇ ಹೀಗೆ ಬೆಳೆದಿದೆಯೇನೊ ಅನ್ನಿಸುವಷ್ಟರ ಮಟ್ಟಿಗೆ ಯಕ್ಷಗಾನದ ರಂಗ ಪಠ್ಯದ ಪರಂಪರೆಯಿದೆ.

ಇನ್ನು ರಾಮಾಯಣ ನಾರದನದ್ದೊ, ವಾಲ್ಮೀಕಿಯದೊ ಎನ್ನುವ ಜಿಜ್ಞಾಸೆ ಅಗಾಗ ಕೇಳಿಸುತ್ತಾ ಇರುತ್ತದೆ. ಮೂಲ ಎನ್ನುವುದರಲ್ಲಿ ಬಾಲಕಾಂಡ ಮತ್ತು ಉತ್ತರಕಾಂಡ ಇಲ್ಲವಂತೆ. ಅಗಾಗ ಹಿಂದಿನ ಪಠ್ಯಗಳು ಸಿಗುತ್ತಾ ಇರುತ್ತವೆ. ಯಾರದ್ದು ಮೊದಲು, ಯಾರದ್ದು ಕೊನೆ ಎಂಬ ಉತ್ತರಗಳು ಸುಲಭವಲ್ಲ. ಉದಾಹರಣೆಗೆ ಬಂಗಾಳದಲ್ಲಿ ಇತ್ತೀಚೆಗೆ ಸಿಕ್ಕ 6 ನೇ ಶತಮಾನದ ಪ್ರತಿಯಿಂದ ಇವುಗಳ ಮೇಲೆ ಮತ್ತೆ ಚರ್ಚೆಯಾಗಿದೆ. ಕ್ರಿ.ಪೂ. 4 ಶತಮಾನದಲ್ಲಿ ಸಿಕ್ಕ ವಾಲ್ಮೀಕಿ ಪಠ್ಯ ಮೊದಲಿನದು, 12 ನೇ ಶತಮಾನದ ಕಂಭ ರಾಮಾಯಣ ಎರಡನೆಯದು ಎಂದುಕೊಂಡ ಕಾಲಾನುಕ್ರಮಣಿಕೆಯೇ ಈಗ ಬದಲಾಗಿದೆ. ಈ ಪಠ್ಯದಲ್ಲೂ ಬಾಲಕಾಂಡವಾಗಲಿ, ಉತ್ತರ ಕಾಂಡವಾಗಲಿ ಇಲ್ಲ. ರಾಮ ಸೀತೆಯರು ಅಯೋಧ್ಯೆಗೆ ಬಂದು ಪಟ್ಟವೇರುವಲ್ಲಿ ಕತೆ ಕೊನೆಯಾಗಿದೆ. ಇದರಲ್ಲಿ ದಶರಥನ ಶಾಪದ ಮೂಲಕ ಮಗನನ್ನು ಕಾಡಿಗೆ ಕಳಿಸುವುದಲ್ಲ, ಬದಲಿಗೆ ಶುಕ್ರಾಚಾರ್ಯ ತನ್ನ ಹೆಂಡತಿಯನ್ನು ನಾರಾಯಣ ಕೊಂದಿದ್ದಕ್ಕಾಗಿ ಲಕ್ಷಿ ತಮಗೆ ಕೊಡುವ ಶಾಪದ ಮೂಲಕ ಆರಂಭ. ದೇವತೆಗಳು ಮತ್ತು ರಾಕ್ಷಸರ ಯುದ್ಧದಿಂದ ಸಾಕಾಗಿ ಧರಿತ್ರಿಯು ಲಕ್ಷಿ ಮತ್ತು ನಾರಾಯಣರು ದೂರ ಇರುವಂತೆ ಕೊಟ್ಟ ಮತ್ತೊಂದು ಶಾಪವೂ ಇದೆ. ಇದರಲ್ಲಿ ಸೀತೆ ಮತ್ತು ರಾಮರ ಮದುವೆಯಾಗುವಾಗಿನ ವಯಸ್ಸು, ರಾವಣ ಸೀತೆಯನ್ನು ಅಪಹರಿಸುವಾಗಿನ ವಯಸ್ಸು ಕೂಡ ಇದೆಯಂತೆ. ರಾಮ ಸೀತೆಯರ ಅಗಲಿಕೆಯ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುವ ಈ ರಾಮಾಯಣದಲ್ಲಿ ರಾಮ ಸೀತೆಯರು ಹೆಚ್ಚು ಮಾನವರಂತೆ ಚಿತ್ರಿತರಾಗಿದ್ದಾರೆ. ಆನಂದ ರಾಮಾಯಣ, ಅಧ್ಯಾತ್ಮ ರಾಮಾಯಣ, ಜನಪದ ರಾಮಾಯಣ, ಬರೀ ಹೆಸರುಗಳನ್ನು ಹೇಳುತ್ತಾ ಹೋದರೂ ಅವೇ ಇಡೀ ಲೇಖನ ತುಂಬುವಷ್ಟು ರೀತಿಯ ರಾಮಾಯಣಗಳಿವೆ. ಅಲ್ಲದೆ ರಾಮಾಯಣ ರ‍್ಮಾ, ಕಂಬೋಡಿಯ, ಇಂಡೋನೇಶಿಯ, ಲಾವೊಸ್, ಫಿಲಿಪೈನ್ಸ್, ಥೈಲ್ಯಾಂಡ್ ಮುಂತಾದ ದೇಶಗಳಿಗೂ ಹೋಗಿದೆ. ಅಲ್ಲೆಲ್ಲ ಇನ್ನೂ ಹಲವು ಪ್ರದರ್ಶನ ಪ್ರಕಾರಗಳಲ್ಲಿ ಅವು ಹೊಸದಾಗುತ್ತಲೇ ಇವೆ. ಇವೆಲ್ಲವೂ ನನಗೆ ಸಿಕ್ಕಿದ್ದು ಕೂಡ ಇನ್ನೊಬ್ಬ ವಿದ್ವಾಂಸರಿಂದಲೇ. ಅವರು ಮಹಾಭಾರತದ ಬಗ್ಗೆಯೇ ಬರೆದಿದ್ದಾರೆ. ಅವರೊಮ್ಮೆ ವಿಟ್ಲದಲ್ಲಿ ದಲಿತ ಮಹಿಳೆ ಹೇಳಿದ ತುಳು ರಾಮಾಯಣವನ್ನು ಕೇಳಿದ್ದರಂತೆ.

ಕತೆಯು ಬಾಯಿಂದ ಬಾಯಿಗೆ ಬೆಳೆದು ಅಲ್ಲಲ್ಲಿ ಕೆಲವರು ಅದನ್ನು ತಮ್ಮ ಭಾಷೆಯಲ್ಲಿ ಬರೆದಿದ್ದಾರೆ. ಹಾಗೇ ಬರೆಯುವಾಗಲೇ ಅದನ್ನು ತಮ್ಮದಾಗಿಸಿಕೊಂಡಿದ್ದಾರೆ. ನಮಗೆ ಈಗ ಸಿಗುವುದು ಬರೆದಿಟ್ಟದ್ದು ಮಾತ್ರ. ಅದರಲ್ಲಿ ವಾಲ್ಮೀಕಿಯದೂ ಒಂದು. ವಾಲ್ಮೀಕಿಯ ಹೆಗ್ಗಳಿಕೆ ಇರುವುದು ರಾಮ ಸೀತೆಯ ಕತೆ ಹೇಳಿರುವುದಕ್ಕಿಂತ ಹೆಚ್ಚಾಗಿ ಅದನ್ನು ಸೃಜಿಸಿರುವ ಕಾವ್ಯಶಕ್ತಿಯಲ್ಲಿ.

ಇದು ನಮಗೆ ಪುರಾಣದ ಸ್ವರೂಪದ ಬಗ್ಗೆ ಏನನ್ನು ಹೇಳುತ್ತಿದೆ? ಪುರಾಣವೆನ್ನುವುದು ನಮಗೆ ಒಂದು ಭಾಷೆಯ ಹಾಗೆ ಕಾಣಿಸುತ್ತಿದೆಯಲ್ಲ. ಸಮುದಾಯ ಸೃಷ್ಟಿಸಿದ ಭಾಷೆಯನ್ನೇ ಬಳಸಿಕೊಂಡು ಬರಹಗಾರ ಅಥವಾ ಮಾತುಗಾರ ತನಗೆ ಹೇಳಬೇಕಾದುದನ್ನು ಹೇಳುತ್ತಾನೆ. ಹಾಗೆಯೇ ಇಲ್ಲೆಲ್ಲ ‘ಮೂಲ’ ರಾಮಾಯಣದ ಕೇಂದ್ರದ ಕತೆ, ಸೀಮಿತವಾದುದನ್ನು ಮೀರಿ ಅಸೀಮತೆಯನ್ನೂ, ಅಪಾರತೆಯನ್ನೂ ಪಡೆದು ಮನುಷ್ಯಳ ಮಿತಿ, ಶಕ್ತಿಗಳನ್ನು, ಅವಳ ಸ್ವಭಾವವನ್ನು ಹಲವು ರೀತಿಯಲ್ಲಿ ಪರಿಶೋಧಿಸಿಕೊಳ್ಳುತ್ತಾ ಹೋಗಿದೆ. ಕತೆ ಹೇಳುವುದನ್ನೇ ಕೇಂದ್ರವಾಗಿಸಿಕೊಂಡ ಹಲವು ಪ್ರದರ್ಶನ ಕಲೆಗಳಿರುವ ಭರತ ಖಂಡದಲ್ಲಿ ಮೌಖಿಕವಾದ, ಬರೆದಿಡದ ಪರಂಪರೆಗೆ ಪ್ರಮುಖ ಸ್ಥಾನವಿದೆ. ಇಲ್ಲೆಲ್ಲ ಕತೆ ಒಂದು ಹಂದರ ಅಷ್ಟೆ. ಅದಕ್ಕೆ ಜೀವ ಕೊಡುವವರು ವ್ಯಾಸನೊ, ಕುಮಾರವ್ಯಾಸನೊ, ಪಂಪನೋ ಇರಬಹುದು. ಸಿನಿಮಾ, ನಾಟಕ, ಇತರ ಪ್ರದರ್ಶನ ಕಲೆಗಳು ಅದನ್ನು ಹೇಗೆ ಹೇಳಿವೆ ಅನ್ನುವುದರಲ್ಲೇ ವಿಶಿಷ್ಟತೆ ಇರುವುದು, ಕವಿಶಕ್ತಿ ಇರುವುದು. ಮೂಲ, ಆದ್ದರಿಂದಲೇ ಅಧಿಕೃತ ಅನ್ನಿಸುವುದರ ಮೇಲೆ ಸಂಶೋಧನೆ ನಡೆಯುತ್ತಲೆ ಇರುತ್ತವೆ. ಇನ್ನೊಂದು ಕಾಲಕ್ಕೆ ಇವುಗಳ ಮೇಲೆ ಬೆಳಕು ಚೆಲ್ಲುವ ಇನ್ನಷ್ಟು ವಿಷಯಗಳು ಹೊರಗೆ ಬರಬಹುದು. ಆದರೆ ಇವೆಲ್ಲವನ್ನು ಬಿಟ್ಟೂ ಅಧಿಕೃತತೆಗೆ ಇನ್ನೊಂದು ಬಹುಮುಖ್ಯವಾದ ಪೂರಕ ವಿಷಯ ಇದೆ. ಅದು ಅಧಿಕೃತತೆಗೂ ಅಧಿಕಾರಕ್ಕೂ ಇರುವ ಹತ್ತಿರದ ಸಂಬಂಧ.

ಈಗ ‘ಮೂಲ’ ರಾಮಾಯಣದಲ್ಲಿ ಶ್ರವಣ ಕುಮಾರನ ಕತೆಯಿಲ್ಲ ಅಂದರೆ ಏನರ್ಥ? ಈಗ ನಮಗಂತೂ ಆ ಕತೆಯಿದೆ. ಅದನ್ನು ಯಾರೊ ಹೇಳಿದ್ದು, ಆಮೇಲೆ ಬರೆದಿದ್ದು, ಅಥವಾ ನಾವು ಯಕ್ಷಗಾನದಲ್ಲೊ ಇನ್ನೊಂದು ಪ್ರಕಾರದಲ್ಲೊ ಕೇಳಿ ನಮಗೆಲ್ಲ ಗೊತ್ತಿದೆ. ನನಗೆ ನನ್ನ ಅಜ್ಜಿಯೇ ಹೇಳಿದ್ದಳು. ಹಾಗಾದರೆ ಅಜ್ಜಿಯದು ಅಧಿಕೃತವಲ್ಲ ಅಂತ ನಾವು ಯಾಕೆ ಹೇಳುತ್ತೇವೆ? ಯಾಕೆಂದರೆ ಅಜ್ಜಿಗೆ ಅಧಿಕಾರವಿಲ್ಲ.

ಭಾಷೆ ಮೌಖಿಕವಾಗಿದ್ದಾಗ ಲಿಪಿಯದ್ದು ಅಧಿಕೃತವಾಗುತ್ತದೆ. ಹಲವು ಭಾಷೆ ಮತ್ತು ಲಿಪಿಗಳಿರುವಾಗ ಯಾವುದು ಪ್ರಭುತ್ವ ಮಾನ್ಯ ಮಾಡಿದ ಭಾಷೆ ಎನ್ನುವುದರ ಮೇಲೆ ಅಧಿಕೃತತೆ ನಿಲ್ಲುತ್ತದೆ. ಈಗ ಪ್ರಿಂಟ್ ಬಂದ ಮೇಲೆ, ಅಂದರೆ ಒಂದೇ ಕಾಲಕ್ಕೆ ಹಲವು ಕಾಪಿಗಳನ್ನು ಮಾಡುವುದಕ್ಕಾದಮೇಲೆ, ಅವುಗಳೊಟ್ಟಿಗೆ ವಿತರಣೆಗೆ ಬೇಕಾದ ಜಾಲಗಳು, ಆ ನಿರ್ದಿಷ್ಟ ಭಾಷೆಯಲ್ಲಿರುವ ಅಕ್ಷರಸ್ಥರು ಇತ್ಯಾದಿಗಳ ಮೇಲೆ ಅವು ನಿರ್ಬಂಧಿತವಾಗಿ ಈಗ ಅದೊಂದು ಬಂಡವಾಳ ಸಂಸ್ಸೃತಿಯ ಭಾಗವಾಗಿ ಸಂಕೀರ್ಣ ವಿಷಯವಾಗಿದೆ. ಅದು ಬೇರೆ ವಿಷಯ. ಅಧಿಕಾರಕ್ಕೆ ಮತ್ತು ಅಧಿಕೃತತೆಗೆ ಸಂಬಂಧವಿದ್ದದ್ದರಿಂದಲೇ ಚರಿತ್ರೆಯುದ್ದಕ್ಕೂ ನಾವು ಕೇಳುವ ಹೆಚ್ಚಿನ ಅಧಿಕೃತ ಕತೆಗಳು ರಾಜರದ್ದು. ಕತೆಯು ಒಂದೇ ಆಗಿರುವುದರ ಅಪಾಯವನ್ನು ನಾವು ಮನಗಾಣಬೇಕಿದೆ. ಇಡೀ ಸಮುದಾಯವನ್ನು ಪ್ರತಿನಿಧಿಸುವುದು ಒಂದೇ ಕತೆಯಾದಾಗ ಅದು ರಾಜನದಾಗಿರುತ್ತದೆ ಮತ್ತು ಅಜ್ಜಿಯ ಅನುಭವವನ್ನು ಹೊರಗಿಡುತ್ತದೆ. ಈ ಮೂಲ-ಅಧಿಕೃತಗಳ ಮಧ್ಯೆಯೆ ಸೃಜನಶೀಲ ಕವಿಗಳು, ಕತೆ ಹೇಳುವವರು ರಾಜರಲ್ಲದವರ ಕತೆಯನ್ನೂ ಹೇಳುತ್ತಾರೆ. ಅದು ಅವರ ಕತೆಯಾಗುತ್ತದೆ.

ಯಕ್ಷಗಾನವೂ ಈ ಪುರಾಣದ ಭಾಷೆಯಲ್ಲಿಯೇ ಇದೆ. ಯಕ್ಷಗಾನದ್ದು ಮೌಖಿಕ ಪರಂಪರೆಯೂ ಹೌದು. ನಾವು ಮಾಡುವ ಪ್ರಸಂಗಗಳು 16, 17 ನೇ ಶತಮಾನದಲ್ಲೇ, ಅವು, ನಾವು ಮೂಲ ಎಂದು ಈಗ ಅಂದುಕೊಳ್ಳುವದರಿಂದ ದೂರ ಬಂದಿವೆ ಅಥವಾ ಯಕ್ಷಗಾನದ ಮೂಲವೇ ಹೀಗಿದೆ. ಅದನ್ನು ಬೇರೆ ಮೂಲಗಳಿಂದ ನಾವು ಅಳೆಯಬೇಕಾಗಿಲ್ಲ. ಹಾಗಿದ್ದರೂ ಈಗ ಇಂತಹ ಪ್ರಶ್ನೆಗಳು ಏಳುತ್ತಿರುವುದೇಕೆ? ಎಲ್ಲವನ್ನೂ ಒಂದು ವ್ಯಾಖ್ಯಾನಕ್ಕೆ ಬಗ್ಗಿಸುವುದು, ನಮ್ಮ ಅನುಭವಕ್ಕೆಲ್ಲ ಹೆಸರಿಡುವುದು, ಖಚಿತತೆಗೆ ತಹತಹಿಸುವುದು ಅಥವಾ ಎಲ್ಲದಕ್ಕೂ ಸ್ಥಿರವಾಗಿರುವ ಕಠಿಣವಾಗಿರುವ ಉತ್ತರವೇ ಬೇಕೆಂದು ನಮಗೆ ಅನ್ನಿಸುವುದು, ಬದಲಾಗುತ್ತಿರುವ ಸಮಾಜದ ಅತಂತ್ರತೆಯನ್ನು ನಿಭಾಯಿಸುವ ತಂತ್ರಗಾರಿಕೆ ಇರಬಹುದು. ಹಿಂದಿನದನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ನಮ್ಮ ಅಧಿಕಾರ, ಸ್ಥಾನವನ್ನು ಉಳಿಸಿಕೊಳ್ಳುವ ಬಯಕೆಯಾಗಿಯೂ ಬಂದಿರಬಹುದು. ಆದರೆ ಯಕ್ಷಗಾನದ ಪರಂಪರೆಯೇ ಸ್ವತಂತ್ರ ವಿವರಣೆ-ವ್ಯಾಖ್ಯಾನಗಳಿಗೆ ತೆರೆದುಕೊಂಡದ್ದು. ಮತ್ತು ಹಾಗೆ ತೆರೆದುಕೊಂಡಿರುವುದರಿಂದಲೇ ಅದಕ್ಕೆ ನಮ್ಮ ಇವತ್ತಿನ ಅತಂತ್ರತೆಯ ಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿದೆ.

ನಿಜವಾಗಿಯು ನಮಗೆ ಕತೆ ಬೇಕಿರುವುದು ಯಾಕಾಗಿ? ಕೊನೆಗೆ ಎಲ್ಲವೂ ಮನುಷ್ಯರನ್ನು ಅರ್ಥಮಾಡಿಕೊಳ್ಳುವುದಕ್ಕೆ ತಾನೇ? ತುಳಸಿದಾಸರ ರಾಮಾಯಣದ ಒಂದು ಜನಪ್ರಿಯ ದೋಹೆ ಹೀಗೆ ಹೇಳುತ್ತದೆ: ‘ಹರಿ ಅನಂತ್, ಹರಿ ಕಥಾ ಅನಂತ್ ಕಹನಿ ಸುನಭಿ ಬಹುವಿಧಿ ಸಬ್ ಸಂತ್’. ಇದರ ಅರ್ಥ: ಹರಿಯು ಅನಂತ, ಅವನ ಕಥೆಗಳು ಹಲವು, ಅವನ್ನು ಕೇಳುವವರೂ ಹೇಳುವವರೂ ಬಹುವಿಧ ರೀತಿಯವರು, ಅವರೆಲ್ಲರೂ ಸಂತರೇ. ಅಥವಾ ವಿಕಸನಗೊಂಡಿರುವ, ಪ್ರಭುದ್ಧತೆ ಇರುವ ಮನುಷ್ಯರು ಹರಿಯ ಕಥೆ ಹೇಳುವುದು ಹೀಗೆಯೇ ಎಂದೂ ಅರ್ಥೈಸಿಕೊಳ್ಳಬಹುದು ಅಥವಾ ಇದರ ಅರ್ಥಗಳೂ ಅನಂತವಿರಬಹುದು.