ನನ್ನ ಉದ್ದ ಕೂದಲನ್ನು ಮೂರು ನಾಲ್ಕುದಿಕ್ಕಿನಲ್ಲಿ ಇಳಿಬಿಟ್ಟು ಒಂದೊಂದೇ ಭಾಗವನ್ನು ತಿಕ್ಕಿ ತಿಕ್ಕಿ ಚಂದ ಮಾಡಿ ಸ್ನಾನ ಮಾಡಿಸಿದ ಕೂದಲು ಒಣಗಿದ ಮೇಲೆ ಹಗುಹಗುರಾಗಿ ಇಮ್ಮಡಿಸುತ್ತಿತ್ತು, ಕೆಲವೊಮ್ಮೆ ಈ ಸ್ನಾನದ ನಂತರ ಊಟ ಮಾಡಿ ಪಪ್ಪನ ಕೈಮೇಲೆ ಕಥೆ ಕೇಳುತ್ತ ಮಲಗಿದರೆ ಏಳುತ್ತಿದ್ದುದು ಸಂಜೆ ಆರಕ್ಕೆ. ಅದೊಂದು ದಿನ ಮಧ್ಯಾಹ್ನ ಮಲಗಲು, ನಮಗೆ ಅವಕಾಶ ಇತ್ತಾದರೂ, ನಾವು ತಪ್ಪಿಸಿಕೊಳ್ಳುವ ಎಲ್ಲ ಉಪಾಯ ಮಾಡುತ್ತಿದ್ದೆವು. ಕೂದಲು ಒಣಗಿಸುವ ತಲೆನೋವು ಇನ್ನೊಂದು ಪರಿ, ಸರಿ ಒಣಗಿಸದೆ ಜಡೆ ಕಟ್ಟಿದರೆ ಮೊದಲೇ ಸೈನಸ್ ತುಂಬಿದ ಮೂಗಿನಲ್ಲಿ ಮತ್ತೊಂದು ಪ್ರವಾಹ ಬರುತ್ತಿತ್ತು.
ಅಮಿತಾ ರವಿಕಿರಣ್‌ ಬರಹ ನಿಮ್ಮ ಓದಿಗೆ

ತೊಟ್ಟಿಲಿಗೆ ಹಾಕಿ ಕಿವಿಯಲ್ಲಿ ಮೂರು ಬಾರಿ ಮೆತ್ತನುಸುರಿದ ಹೆಸರು ಅದೆಷ್ಟೇ ಚಂದ ಇರಲಿ, ಬೆಳೆಬೆಳೆಯುತ್ತ ನಮಗೊಂದು ಅಡ್ಡ ಹೆಸರು ನಮ್ಮ ಬಾಹ್ಯ ರೂಪಕ್ಕನುಗುಣವಾಗಿ ಬಿದ್ದೇ ಬಿಡುತ್ತದೆ. ಆ ಅಡ್ಡ ಹೆಸರು ಯಾವ ದಾಖಲೆಗಳಲ್ಲೂ ಇರುವುದಿಲ್ಲ, ಆದರೆ ನಮ್ಮ ಅಸ್ತಿತ್ವದೊಂದಿಗೆ ನಮ್ಮ ಮನಸಲ್ಲೇ ಅಚ್ಚಾಗಿ ಬಿಡುತ್ತದೆ. ಈ ಹೆಸರು ಮನೆಯವರು ಕೊಡುವುದು ಅಪರೂಪ, ನಮ್ಮ ಸುತ್ತಮುತ್ತಲಿನ ಜನರು, ಸ್ನೇಹಿತರು ಆತ್ಮೀಯರೆನಿಸಿದವರೇ ನಮಗೆ ಇದನ್ನು ಯಾವ ಬೇಸರವೂ ಇಲ್ಲದೇ ದಯಪಾಲಿಸುತ್ತಾರೆ.

ಗಿಡ್ಡಕಿದ್ದವರನ್ನ ಕುಳ್ಳಿ, ಬೆಳ್ಳಗಿದ್ದವರನ್ನ ಬಿಳಿ ಜಿರಳೆ, ಎಡಗೈಯ್ಯಿಂದ ಬರೆಯುವವರನ್ನ ರೊಡ್ಡಿ, ಚಿಕ್ಕ ವಯಸ್ಸಲ್ಲಿ ಕನ್ನಡಕ ಹಾಕಿದ್ದರೆ ‘ನಾಕಣ್ಣು’ ಸಣ್ಣಕಿದ್ದರೆ ‘ಬಡಕಿ’ ಹೀಗೆ ಏನೇನೋ. ಬಹಳಷ್ಟು ಸಲ ಈ ಅಡ್ಡ ಹೆಸರುಗಳು ಮನಸನ್ನ ಹಿಡಿ ಮಾಡಿ ಆತ್ಮವಿಶ್ವಾಸವನ್ನೂ ಕುಂದಿಸುತ್ತವೆ.

ನನಗೂ ಇಂಥ ಎರಡು unofficial ಅಡ್ಡಹೆಸರು ಬುದ್ಧಿ ಬಂದಾಗಿನಿಂದ ಅಂಟಿಕೊಂಡೇ ಬಂದಿವೆ.
1. ‘ಉದ್ದ ಕೂದಲ ಹುಡುಗಿ’,
2. ದಪ್ಪ ಆದ ನಂತರ ಡುಮ್ಮಿ.
ಡುಮ್ಮಿ ಹೆಸರು ಅಂಟಿಕೊಂಡ ಮೇಲೆ ಪ್ರಾಯಶಃ ಬೇರಾವ ಹೆಸರೂ ನನ್ನ ಕಿವಿಗೆ ಬೀಳುತ್ತಿರಲಿಲ್ಲ, ಆ ಹೆಸರು ಬಿದ್ದಿದ್ದೆ ತಡ ಜನರಿಗೆ ನನ್ನ ಉದ್ದ ಕೂದಲು ಮರೆತೇ ಹೋಗಿತ್ತು. ಯಾರೂ ಕರೆಯಲಿ ಬಿಡಲಿ ನನಗೆ ಬಾಲ್ಯದಿಂದಲೂ ಉದ್ದ ಕೂದಲಿದ್ದಿದ್ದು ನಿಜ. ಉದ್ದ ಮಾತ್ರವಲ್ಲ, ಅಷ್ಟೇ ದಟ್ಟಕೂದಲು.

ಹುಟ್ಟುವಾಗ ನನಗೆ ಕೆಂಚು ಕೂದಲು ಇತ್ತಂತೆ, ನೋಡಲು ಬೆಳ್ಳಗಿದ್ದೆ ಆ ಕಾರಣದಿಂದ ಯಾವುದೊ ಯುರೋಪಿಯನ್ ಮಗು ಕಂಡಂತಾಗುತ್ತದೆ ಎಂದು ಕಾಂಪ್ಲಿಮೆಂಟ್ ಸಿಕ್ಕಿದ್ದು ಉಂಟಂತೆ. ಇದೆಲ್ಲ ನನಗೆ ನೆನಪಿಲ್ಲವಾದರೂ ನನ್ನ ಸೋದರ ಮಾವಂದಿರು ನನ್ನ ಕೆಂಚಿ ಅಂತ ಕರೆದು ತಮಾಷೆ ಮಾಡಿ, ನಾನು ಚೀರಿ ಅಳುತ್ತಿದ್ದುದು ಮಾತ್ರ ನೆನಪಿದೆ. ಅಂಥ ಕೆಂದು ಉದ್ದ ಜಡೆಯನ್ನು ಸಾಕುವುದು, ಸಂಭಾಳಿಸುವುದು ಸುಲಭದ ಮಾತಾಗಿರಲಿಲ್ಲ.

ಭಾನುವಾರ ಯಾಕಾದರೂ ಬರುತ್ತಪ್ಪಾ ದೇವರೇ ಅಂತ ಅನ್ನಿಸುವ ಕಾಲವೊಂದಿತ್ತು, ಆ ದಿನ ನನಗೂ ನನ್ನ ತಂಗಿಗೂ ತಲೆಸ್ನಾನ ಮಾಡಿಸುತ್ತಿದ್ದರು. ಆ ದಿನ ಸ್ನಾನಕ್ಕೆ ಒಂದೆರಡು ಘಂಟೆ ಮೊದಲು ಅಂಟವಾಳಕಾಯಿ ಕಲ್ಲಲ್ಲಿ ಜಜ್ಜಿ ಬಿಸಿನೀರಲ್ಲಿ ನೆನಸಿ ಇಡಬೇಕಿತ್ತು. ಆ ಅಂಟವಾಳಕಾಯಿ ಒಡೆಯಲು ನಾನು ಯಾವಾಗಲೂ ಕಳ್ಳಬೀಳುತ್ತಿದ್ದೆ, ಅದನ್ನ ಒಡೆಯದೆ ಯಾವ ವಿಧಾನದಿಂದ ಬಳಸಿ ಸ್ನಾನ ಮಾಡಬಹುದು ಎಂದು ಪ್ರಯೋಗ ಮಾಡುತ್ತಿದ್ದೆನಾದರೂ, ಯಾವುದೂ ಯಶಸ್ವಿಯಾಗದೆ ಮತ್ತೆ ಹಳೇ ದೇವರ ಪಾದವೇ ಗತಿ ಎಂದು ಆ ನೀರಿನ ಟಾಂಕಿಯ ಸಂದಿಯಲ್ಲಿ ಇಟ್ಟಿರುತ್ತಿದ್ದ ಆ ಪುಟ್ಟ ಗುಂಡಕಲ್ಲನ್ನು ಎತ್ತಿ ಸಿಟ್ಟಲ್ಲಿ ನೊರೆಕಾಯಿ ಒಡೆದು ಮುಗಿಸುತ್ತಿದ್ದೆ.

ಮೊದಲು ಆ ಅಂಟುವಾಳಕಾಯಿ ನೆನೆಸಿದ ನೀರನ್ನ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ತಲೆಯನ್ನು ಉಜ್ಜುತ್ತಿದ್ದರು, ಒಮ್ಮೆ ಎಣ್ಣೆ, ಪಸೆ ರಾಡಿ ಬಿಟ್ಟುಕೊಳ್ಳಲು ಶುರು ಆಯಿತೆಂದರೆ ಕೂದಲಲ್ಲಿ ಬುರುಗು ಬರಲು ಆರಂಭವಾಗುತ್ತದೆ. ಆಗ ಮೆತ್ತಗೆ ಬಿಸಿ ನೀರು ಸುರಿಯುತ್ತ ಚಂದ ಮಾಡಿ ಅಂಟುವಾಳಕಾಯಿ ನೊರೆಯಲ್ಲಿ ಕೂದಲನ್ನು ನೆನೆಸಿ ಬೆರಳುಗಳಿಂದ ಮೆತ್ತಗೆ ಕೂದಲ ಬುಡಕ್ಕೆ ಹಿತವಾದ ಮಸಾಜ್ ಮಾಡುತ್ತಿದ್ದರು. ಅಜ್ಜಿ, ಅತ್ತೆ, ಪಪ್ಪ, ಕೆಲವೊಮ್ಮೆ ಅಮ್ಮ ಈ ಸ್ನಾನ ಮಾಡಿಸುತ್ತಿದ್ದರು.

ನನ್ನ ಉದ್ದ ಕೂದಲನ್ನು ಮೂರು ನಾಲ್ಕುದಿಕ್ಕಿನಲ್ಲಿ ಇಳಿಬಿಟ್ಟು ಒಂದೊಂದೇ ಭಾಗವನ್ನು ತಿಕ್ಕಿ ತಿಕ್ಕಿ ಚಂದ ಮಾಡಿ ಸ್ನಾನ ಮಾಡಿಸಿದ ಕೂದಲು ಒಣಗಿದ ಮೇಲೆ ಹಗುಹಗುರಾಗಿ ಇಮ್ಮಡಿಸುತ್ತಿತ್ತು, ಕೆಲವೊಮ್ಮೆ ಈ ಸ್ನಾನದ ನಂತರ ಊಟ ಮಾಡಿ ಪಪ್ಪನ ಕೈಮೇಲೆ ಕಥೆ ಕೇಳುತ್ತ ಮಲಗಿದರೆ ಏಳುತ್ತಿದ್ದುದು ಸಂಜೆ ಆರಕ್ಕೆ. ಅದೊಂದು ದಿನ ಮಧ್ಯಾಹ್ನ ಮಲಗಲು, ನಮಗೆ ಅವಕಾಶ ಇತ್ತಾದರೂ, ನಾವು ತಪ್ಪಿಸಿಕೊಳ್ಳುವ ಎಲ್ಲ ಉಪಾಯ ಮಾಡುತ್ತಿದ್ದೆವು.

ಕೂದಲು ಒಣಗಿಸುವ ತಲೆನೋವು ಇನ್ನೊಂದು ಪರಿ, ಸರಿ ಒಣಗಿಸದೆ ಜಡೆ ಕಟ್ಟಿದರೆ ಮೊದಲೇ ಸೈನಸ್ ತುಂಬಿದ ಮೂಗಿನಲ್ಲಿ ಮತ್ತೊಂದು ಪ್ರವಾಹ ಬರುತ್ತಿತ್ತು. ಅದು ಸರಿಯಾಗಲು ಇನ್ನೊಂದು ತಿಂಗಳು. ಈ ಉದ್ದ ಕೂದಲ ದೆಸೆಯಿಂದ ನಾನು ನನ್ನ ತಲೆ ಕಂಡಿದ್ದು ಮೂರೇ ವಿನ್ಯಾಸದ ಜಡೆಗಳನ್ನ.

ಕೂದಲು ಸಿಕ್ಕು ಆಗುವ ಸರ್ವ ಸಾಧ್ಯತೆಗಳು ಇದ್ದಿದ್ದರಿಂದ ಜುಟ್ಟು, pony tail ಸುದ್ದಿಗೆ ನಾನು ಹೋಗ್ತಾ ಇರ್ಲಿಲ್ಲ. ನನಗೆ ನನ್ನ ಸೋದರತ್ತಯೇ ಬಾಚಬೇಕು. ಬಿಗಿಮಾಡಿ (ಬ್ರಹ್ಮಗಂಟು ಚಿತ್ರದ ಸರಿತಾಳ ಜಡೆಗಿಂತ ಕೊಂಚ ಸಡಿಲ) ಒಂದು ಜಡೆ ಹೆಣೆದರೆ ಮರುದಿನ ಅವರೇ ಅದನ್ನ ಬಿಚ್ಚುವ ತನಕ ನಾನು ಜಡೆ ಸುದ್ದಿಗೆ ಹೋಗ್ತಿರ್ಲಿಲ್ಲ. ಅಮ್ಮ ತನ್ನ ಕೆಲಸದ ಮಧ್ಯ ಎಂದಾದರೂ ಬಾಚಲು ಬಂದಳೆಂದರೆ ನನ್ನ ಎದೆ ಢವ ಢವ ಹೊಡೆದುಕೊಳ್ಳುತಿತ್ತು. ಸಿಕ್ಕು ಆದ ಕೂದಲಲ್ಲಿ ಕೆಲವೊಮ್ಮೆ ಹಣಿಗೆ ಸಿಕ್ಕಿ ಹಾಕಿಕೊಂಡರೆ, ನೋವಲ್ಲಿ ನಾನು ಕೂಗಿ ಕಿರಿಕಿರಿ ಮಾಡಿದರೆ, ಹಣಿಗೆಗೆ ಕೈ ಮುಂದೆ ತಂದೆಯೆಂದರೆ ತಲೆ ತೆಗೆದು ಗೋಡೆಗೆ ಕುಟ್ಟಿಬಿಡುತ್ತಿದ್ದಳು.

ನನ್ನ ಮಗಳಿಗೆ ದಿನ ಮಲುಗುವ ಮುನ್ನ ಕಥೆ ಹೇಳಬೇಕು, ನನ್ನ ಓದಿನ ನಿರಂತರತೆಯನ್ನು ಕಾಪಾಡಿದ್ದು ಇದೆ ಅನ್ನಬಹುದು, ಎಲ್ಲೋ ಓದಿದ್ದಕ್ಕೆ, ಕೇಳಿದ್ದಕ್ಕೆ ರೆಕ್ಕೆ ಪುಕ್ಕ ಕಟ್ಟಿ ಆಕೆಯನ್ನು ನಿದ್ದೆಯ ಲೋಕಕ್ಕೆ ಕರೆದೊಯ್ಯುವ ಕಥಾಭಂಡಾರದ ಸ್ಟಾಕ್ ಮುಗಿಯುತ್ತಿದ್ದಾಗ ಒಮ್ಮೊಮ್ಮೆ ನಾನು ಮಗಳಿಗೆ ನನ್ನ ಬಾಲ್ಯದ ಈ ಕಥೆಗಳನ್ನ ಹೇಳುವುದಿದೆ. ಈ ಗೋಡೆಗೆ ತಲೆ ಕುಟ್ಟುವ ಕಥೆ ಕೇಳಿ ನನ್ನ ಮಗಳು ಭಯಕ್ಕೆ ಬಿದ್ದು ಈ ಬಾರಿ ಊರಿಗೆ ಹೋದಾಗ ನನ್ನ ಅಮ್ಮನ ಹತ್ತಿರ ಬಾಚಿಸಿಕೊಳ್ಳಲೇ ಇಲ್ಲ, ಈ ವಿಷಯಕ್ಕೆ ನನ್ನ ಅಮ್ಮ ನನ್ನ ಮೇಲೆ ಫುಲ್ ಸಿಟ್ಟಾಗಿದ್ದಾಳೆ. ಮೊಮ್ಮಕ್ಕಳ ಮುಂದೆ ಅವಳ ಇಮೇಜ್ ಹಾಳು ಮಾಡಿದ್ದಕ್ಕೆ ಆಕೆಗೆ ನನ್ನ ಮೇಲೆ ವಿಪರೀತ ಅಸಮಾಧಾನ.

ಅಂಥ ಚಂದದ ಜಡೆ ಇದ್ದಮೇಲೆ ಹೂ ಮುಡಿಯದೇ ಇದ್ದರೇ? ನನಗೆ ಹೂ ಮುಡಿಯುವುದು ಒಂದು ಸಮಯದ ತನಕ ತುಂಬಾ ಮೆಚ್ಚಿನ ಕೆಲಸ, ಪರಿಮಳದ ಹೂಗಳನ್ನ ಮುಡಿದು, ಮರುದಿನ ಹೆರಳು ಬಿಚ್ಚಿದಾಗ ಅದು ಹೂವಿನಂತೆ ಘಮಗುಡುವುದನ್ನ ಆಘ್ರಾಣಿಸುವುದು ಉತ್ಸುಕತೆ ಕೊಡುವ ಕೆಲಸ. ಚಳಿಗಾಲದ ಸಮಯದಲ್ಲಿ ಯಾರಾದರೂ ಕಾರವಾರ ಕುಮಟೆ ಅಂಕೋಲೆಯ ದಾರಿಯಲ್ಲಿ ಹಾದು ಬಂದ ಸಂಬಂಧಿಗಳು ತರುವ ಆ ಬಕುಳ, ಸುರಗಿ, ಜಾಜಿ ಮುಡಿದಾಗಲಂತೂ ಅದೇನೋ ಹೆಮ್ಮೆ. ನಾಗರ ಪಂಚಮಿ ಹೊತ್ತಿಗೆ ಸಿಗುವ ಕೇದಗಿ, ಮಳೆಗಾಲದ ಆ ಮಲ್ಲಿಗೆ, ಅಜ್ಜಿ ಪ್ರೀತಿಯಿಂದ ಕಟ್ಟಿಕೊಡುತ್ತಿದ್ದ ಕಸ್ತೂರಿ ಜಾಲಿಯ ಚಿಕ್ಕಳಿ, ಮಂದಾರ ಪುಷ್ಪದ ಮಾಲೆ, ಸಂಕ್ರಾಂತಿ ಹೊತ್ತಿಗೆ ಕನಕಾಂಬರ, ಆಡುಸೋಗೆಯ ಹೂ ಹಾಳೆ. ಬೇಸಿಗೆಯ ರಜೆಗೆ ಕರಾವಳಿಯ ಅಜ್ಜಿ ಮನೆಗೆ ಹೋದರೆ ಸಿಗುತ್ತಿದ್ದ ಮಂಗಳೂರು ಮಲ್ಲಿಗೆ ಹೆರಳಿಗೆ ಸಿಕ್ಕಿಸಿದರೆ ಸಂಭ್ರಮವನ್ನೇ ಹೊತ್ತು ನಡೆದಂತೆ ಅನಿಸುತ್ತಿತ್ತು. ನನಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾಗುತ್ತಿದ್ದುದು ಸುಗಂಧಿ ಹೂವು. ಸಂಜೆಯ ಬೆಳದಿಂಗಳಂತೆ ಅರಳುವ ಈ ಸೌಗಂಧಿಕೆ ಅದೆಷ್ಟು ನವಿರು, ಗುರುವಾರ ಭಜನೆಗೆ ಹೋದಾಗ, ಆರತಿ ಮುಗಿದಾಗ ನಾನು ಪ್ರಸಾದಕ್ಕಿಂತ ಹೆಚ್ಚಾಗಿ ಕಾಯುತ್ತಿದ್ದುದು ದೇವರಿಗೆ ಮುಡಿಸಿದ ಸುಗಂಧಿಗಾಗಿ.

ನನ್ನ ಹತ್ತಿರ ಒಂದು ಬಿಳಿಯ ಚೂಡಿದಾರ್ ಇತ್ತು, ಅದನ್ನ ತೊಟ್ಟಾಗ ನನ್ನ ಉದ್ದ ಜಡೆಗೆ ಒಂದು ಸುಗಂಧಿ ಹೂ ಸಿಗಿಸಿಕೊಂಡರೆ ನನ್ನ ನಾನೇ ಸುಗಂಧಿ ಹೂ ಅಂದುಕೊಳ್ಳುತ್ತಿದ್ದೆ. ಹಾಗೊಮ್ಮೆ ಗೆಳತಿಗೆ ಹೇಳಿದಾಗ, ನೀನು ಸುಗಂಧಿಯಲ್ಲ ಚಂಡಹೂ ಅಂದು ಕಿಸಿ ಕಿಸಿ ನಕ್ಕಿದ್ದಳು.

ಜಡೆಯಲ್ಲಿ ಮುಡಿದ ಹೂಗಳು ಬೇಗ ಒಣಗಿದರೆ ಭವಿಷ್ಯತ್ತಿನಲ್ಲಿ ಸಿಗುವ ಅತ್ತೆ ಬಹಳ ಜೋರು ಇರುತ್ತಾರಂತೆ ಹಾಗೆಂದು ಭವಿಷ್ಯ ನುಡಿದ ಚಿಕ್ಕಮ್ಮ, ನನ್ನ ತಲೆಯ ಹೂ ಕಂಡಾಗ, “ನಿನ್ ಕಥೆ ಮುಗೀತು, ನಿಂಗೆ ಜೋರ್ ಅತ್ತೇನೆ ಸಿಗೋದು” ಅಂತ ಹೇಳಿ ಮುಸಿ ಮುಸಿ ನಗುತ್ತಿದ್ದರು. ನನಗೆ ಹೂ ಮುಡಿಯುವ ಇಚ್ಛೆ ಕಡಿಮೆ ಆದದ್ದೇ ಹಾಗೆ ಅನಿಸುತ್ತೆ, ಮುಡಿದ ಹೂಮಾಲೆ ಒಂದೆರಡು ಘಂಟೆಗಳಲ್ಲೇ ಗರಿ ಗರಿ ಹಪ್ಪಳವಾಗುತ್ತಿತ್ತು. ಆಮೇಲೆ ಹೂಗಳು ಗಿಡದಲ್ಲಿದ್ದರೆ ಚಂದ, ತಲೆಯಲ್ಲಲ್ಲ ಅನ್ನುವ ಉದಾತ್ತ ಭಾವ ತಲೆಯೊಳಗೆ ಇಳಿಸಿಕೊಂಡೆ.

*****

ಇಷ್ಟು ದೊಡ್ಡ ಕೂದಲ ರಾಜ್ಯ ಇದ್ದಮೇಲೆ ಪ್ರಜೆಗಳು ಇರದಿದ್ದರೆ? ಅದಕ್ಕೊಂದು ತಲೆ ಅಂತಾರೆಯೇ? ತಲೆತುಂಬ ಬುಚು ಬುಚು ತುಂಬಿಕೊಂಡ ‘ಹೇನುಗಾಲ’ ಕುರಿತು ಬರೆಯದಿದ್ದರೆ ಈ ಬರಹ ಅಪೂರ್ಣ. ನಾನು ಆರನೇ ಕ್ಲಾಸ್ಸಿನಲ್ಲಿ ಇದ್ದೆ ಆಗಲೇ ಅನ್ನಿಸುತ್ತೆ ಅದ್ಯಾವ ಪರಿ ನನ್ನ ತಲೆಯಲ್ಲಿ ಹೇನು ಸೇರಿಕೊಂಡಿದ್ದವೆಂದರೆ, ಸುಮ್ಮನೆ ತಲೆಗೆ ಕೈ ತಾಗಿಸಿದರು ಕೈಗೆ ಅಂಟಿಕೊಳ್ಳುವಷ್ಟು, ಆಟಕ್ಕೆ ಬಿಟ್ಟರೆ ಗೆಳತಿಯರೆಲ್ಲ ಮುಟ್ಟಾಟ, ಕುಂಟಲ್ಪಿ ಬಿಟ್ಟು ನನ್ನ ತಲೆಯಲ್ಲಿ ಹೇನು ಆರಿಸುವ ಕೆಲಸಕ್ಕೆ ಮಂಗಗಳಂತೆ ಕುಳಿತು ಬಿಡುತ್ತಿದ್ದರು.

ಈಗ ಯಾರಾದರೂ ತಲೆಯಲ್ಲಿ ಕೈ ಆಡಿಸಲಿ ಜಡೆ ಹಾಕಲಿ ಬಾಚಲಿ ಅಂತ ಮನಸು ಹಂಬಲಿಸುತ್ತೆ. ಆದರೆ ಆಡುವ ವಯಸ್ಸಿನಲ್ಲಿ ಇದು ಕಿರಿಕಿರಿ ಕೊಡುತ್ತಿದ್ದುದು ನಿಜ. ಹೇನು, ತಲೆ ತುಂಬ ಗಾಯ, ಹುಣ್ಣು, ಕೀವು ವಾಸನೆ, ನನ್ನ ತಲೆಯ ಅವಸ್ಥೆ ನೋಡಿದ ಎಲ್ಲಾರೂ ‘ಒಮ್ಮೆ ತಲೆ ಬೋಳಿಸಿಬಿಡಿ ಆಗಲೇ ಈ ಹೇನಿನ ಕಾಟ ಕಡಿಮೆ ಆಗುವುದು’ ಅಂತ ಉಚಿತ ಸಲಹೆ ಕೊಡುತ್ತಿದ್ದರು. ಅಷ್ಟೊತ್ತಿಗೆ ನನಗೆ ನನ್ನ ಕೂದಲ ಮೇಲೆ ಅತೀ ಪ್ರೀತಿ ಬೆಳೆದಿತ್ತು. ಹುಷಾರಿಲ್ಲ ಅಂದರೆ ಮಕ್ಕಳನ್ನು ಕಾಡಲ್ಲಿ ಬಿಟ್ಟು ಬರ್ತಾರಾ ಇಲ್ಲ ತಾನೇ? ಹಂಗೇನೇ ಈಗ ಹೇನಿರಲಿ ಹುಣ್ಣಾಗಿರಲಿ, ನಾನು ಕೂದಲು ಕತ್ತರಿಸಲ್ಲ ಅಂದು ಅಳುತ್ತ ಹೇಳಿದ್ದೆ, ಮನೆಯಲ್ಲಿ ಎಲ್ಲ ನಗುತ್ತಿದ್ದರು. ನಂತರ ನನ್ನ ಪಪ್ಪ ಗಾಯದ ಸುತ್ತ ಇದ್ದ ಕೂದಲನ್ನು ಕತ್ತರಿಸಿದರು. ಆಗ ನನ್ನ ತಲೆ ಜಾತ್ರೆಪೇಟೆಯಲ್ಲಿ ಸಿಗುವ ಪ್ಲಾಸ್ಟಿಕ್ ಗೊಂಬೆಯ ತಲೆಗೂದಲಿನಂತೆ ಆಗಿತ್ತು. ಬರಿ ಮೇಲಷ್ಟೇ ಕೂದಲು. ಒಳಗೆ ಹೇನು ಹುಣ್ಣುಗಳ ರಾಜ್ಯಭಾರ.

ತಲೆಗೆ ಜೋಳದಹಿಟ್ಟು, ಬೇವಿನ ಎಣ್ಣೆ, ಗ್ಯಾಮೆಕ್ಷನ್, ಸೀಮೆ ಎಣ್ಣೆ, ಯಾರು ಏನ್ ಹೇಳ್ತಾರೋ ಅದನ್ನ ನನ್ನ ತಲೆಗೆ ಮೆತ್ತಲಾಗುತಿತ್ತು. ಅದು ಕೊನೆಯಾಗಿದ್ದು ಮಾತ್ರ ಹೆಗಡೆ ಡಾಕ್ಟ್ರು ಕೊಟ್ಟ ಪೆನಿಸಿಲಿನ್ ಇಂಜೆಕ್ಷನ್‌ನಿಂದ. ಮುಟ್ಟು ಶುರುವಾಗುವ ಹೊತ್ತು ಮದುವೆ ಆಗುವ ಹೊತ್ತು ತಲೆಯಲ್ಲಿ ಹೇನು ಕುಲ ಇರದಿದ್ದರೆ ಇನ್ನೆಂದೂ ಅದು ನಮಗೆ ತೊಂದರೆ ಕೊಡುವುದಿಲ್ಲ ಎಂದು ಜೋಗವ್ವ ಒಬ್ಬಾಕಿ ಅಕ್ಕಿ ನೀಡಿಸಿಕೊಂಡು ನನಗೆ ಭಂಡಾರ ಹಚ್ಚಿ ಹೇಳಿ ಹೋಗಿದ್ದಳು. ಅಂತೆಯೇ ಆಯಿತು ಕೂಡ.

Girl Long Hair Sunset Curls Brunette Woman People

ಅಮ್ಮ ತನ್ನ ಕೆಲಸದ ಮಧ್ಯ ಎಂದಾದರೂ ಬಾಚಲು ಬಂದಳೆಂದರೆ ನನ್ನ ಎದೆ ಢವ ಢವ ಹೊಡೆದುಕೊಳ್ಳುತಿತ್ತು. ಸಿಕ್ಕು ಆದ ಕೂದಲಲ್ಲಿ ಕೆಲವೊಮ್ಮೆ ಹಣಿಗೆ ಸಿಕ್ಕಿ ಹಾಕಿಕೊಂಡರೆ, ನೋವಲ್ಲಿ ನಾನು ಕೂಗಿ ಕಿರಿಕಿರಿ ಮಾಡಿದರೆ, ಹಣಿಗೆಗೆ ಕೈ ಮುಂದೆ ತಂದೆಯೆಂದರೆ ತಲೆ ತೆಗೆದು ಗೋಡೆಗೆ ಕುಟ್ಟಿಬಿಡುತ್ತಿದ್ದಳು.

ಕಾಲೇಜ್ ಹೋಗುವ ಹೊತ್ತಿಗೆ ಅಂಟುವಾಳದ ಸ್ನಾನ ಕಡಿಮೆ ಆಗಿತ್ತು, ಹೇನೂ ಇರಲಿಲ್ಲ. ಗಡಿಬಿಡಿ ಶಾಂಪೂ ಸ್ನಾನ ಜಾಸ್ತಿ ಆಗಿ ಅದೇ ಬೆಟರ್ ಅನ್ನಿಸಿ ತರತರದ ಶ್ಯಾಂಪೂಗಳಿಗೆ ಆತುಕೊಂಡಿದ್ದೆ. ಇಷ್ಟೆಲ್ಲದರ ಮಧ್ಯ ಆಗೀಗ ಕದ್ದು ಮುಚ್ಚಿ ಕೂದಲ ತುದಿ ಕತ್ತಿರಿಸಿದ್ದು ಬಿಟ್ಟರೆ ಯಾವತ್ತೂ ಧೈರ್ಯವಾಗಿ ಹೇರ್ ಕಟ್ ಮಾಡುವ ಧೈರ್ಯ ಬಂದಿರಲಿಲ್ಲ. ಜೊತೆಗೆ ನನಗೆ ಉದ್ದ ಕೂದಲು ಅಭ್ಯಾಸವಾಗಿ ಹೋಗಿತ್ತು.

ಇವ ಸಿಕ್ಕು ನಮ್ಮ ಮದುವೆ ಗೊತ್ತಾದಾಗ, ಒಮ್ಮೆ ಮೆಲ್ಲನೆ ಉಸುರಿದ್ದ ‘ಕೂದಲು ಕತ್ತರಿಸಬೇಡ, ನನಗೆ ನಿನ್ನ ಈ ಉದ್ದ ಜಡೆ ತುಂಬಾ ಇಷ್ಟ’ ಮತ್ತೆ ಕೇಳಬೇಕೆ? ನನ್ನ ಆ ಜಡೆಯಮೇಲೆ ಮತ್ತಷ್ಟು ವ್ಯಾಮೋಹ ಬೆಳೆದಿತ್ತು. ಮದುವೆಯ ದಿನ ದೊಡ್ಡತ್ತೆ ಬಂದು ಚವರಿಯನ್ನ ಸ್ವಲ್ಪ ಮೇಲಿಂದಲೇ ಹಾಕಿ ಹೂವಿನ ಭಾರಕ್ಕೆ ಜಡೆ ಕಿತ್ತು ಬಂದರೆ ಕಷ್ಟ ಎಂದು ಹೇಳಿದಾಗ ಕಾಲು ಗಂಟಿಗಿಂತ ಒಂಚೂರು ಮೇಲೆ ತೂಗುತ್ತಿದ್ದ ನನ್ನ ಜಡೆ ನನ್ನದೇ ಚವರಿಯಲ್ಲ ಅಂದು ಹೇಳುವಾಗ ಅತೀ ಹೆಮ್ಮೆ ಆಗಿತ್ತು.

ಈಗ ಜಡೆಯಲ್ಲದೆ ದೊಡ್ಡ ತುರುಬು ಕಟ್ಟಿಕೊಳ್ಳಲು ನಿಷ್ಣಾತಳಾಗಿದ್ದೆ.

ಮದುವೆ, ಬಸಿರು ಬಾಣಂತನ ಎನ್ನುತ್ತ ಬದುಕು ಬದಲಾಯಿತು. ನಾನೂ ಬದಲಾದೆ, ಬೆಳೆದೆ. ಬದಲಾಗದೆ ನನ್ನೊಂದಿಗೆ ಇದ್ದಿದ್ದು ನನ್ನ ಜಡೆ. ಸುಮ್ಮನೆ ತನ್ನಷ್ಟಕ್ಕೆ ತಾನು ಬೆನ್ನಮೇಲೆ ಬಿದ್ದುಕೊಂಡು, ಯಾವ ಕಾಳಜಿ ತೋರದಿದ್ದರೂ ಬೇಸರ ಮಾಡದೆ ಸುಮ್ಮನೆ ಇರ್ತಿತ್ತು. ಎದೆಕಚ್ಚಿಕೊಂಡ ಮಗು, ಬೆನ್ನಿಗೆ ಅಂಟಿಕೊಂಡ ಜಡೆ ಒಂಥರಾ ಖುಷಿ ಆಗೋದು. ಆಮೇಲೆ ನಾನು ಯುಕೆಗೆ ಬರುವ ಮೊದಲು ಕೂದಲನ್ನ ಒಂಚೂರು ಗಿಡ್ಡ ಮಾಡಿದೆ ಆದರೂ ಅದು ಉದ್ದವೇ!

ಒಂದೆರಡು ವರ್ಷಗಳ ಹಿಂದೆ ನನ್ನ ಫೇಸ್‌ಬುಕ್ ಗೆಳತಿ ರೂಪ ಸತೀಶ ಅವರು ಒಂದು ಫೋಟೋ ಹಾಕಿದ್ದರು. ರೂಪ ಅವರು ನನಗೆ ಇಷ್ಟ ಆಗೋದೇ ಅವರ ಚಂದದ ಉದ್ದ ಕೂದಲು ಮತ್ತು ಮುದ್ದಾದ ನಗುವಿನಿಂದಾಗಿ. ಎಲ್ಲರೂ ಬೇಕು ಬೇಕು ಅಂತ ಬಯಸುವ ಅಷ್ಟು ಚಂದದ ಕೂದಲಿನ ಅರ್ಧಕ್ಕಿಂತ ಹೆಚ್ಚು ಭಾಗವನ್ನ ಅವರು ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಲು ದಾನ ಮಾಡಿದ್ದರು. ಅದನ್ನು ನೋಡಿ ನನಗೆ ನಿಲ್ಲದ ಪ್ರಶ್ನೆಗಳು. ಹೇಗೆ ಅಷ್ಟು ಅನಾಯಾಸವಾಗಿ ನಮ್ಮ ಪರಿಚಯವೇ ಅನ್ನುವಂತಿರುವ ಕೂದಲನ್ನು ಹಾಗೆ ಕತ್ತರಿಸುವುದು? ಅವರಿಗೆ ಮನಸು ಹೇಗೆ ಬಂತು, ಯಾಕೆ ಬಂತು ಅನ್ನುವ ಯೋಚನೆಗಳು. ಅದಕ್ಕೆ ಸರಿಯಾಗಿ ಕೌಸ್ತುಭಾ ಭಾರತೀಪುರ ತಮ್ಮ ವೇಣಿ ದಾನದ ಕುರಿತು ಒಂದು ಚಂದದ ಪೋಸ್ಟ್ ಹಾಕಿದ್ದರು. ಇವೆಲ್ಲ ನನ್ನ ಮನಸ್ಸನ್ನು ಆವರಿಸಿಕೊಂಡಿದ್ದವು.

ಪೆಂಡಮಿಕ್ lockdown ನನ್ನ ಪೂರ್ತಿ ಆಲೋಚನಾ ಶೈಲಿ, ಜೀವನ ಕ್ರಮವನ್ನೇ ಬದಲಿಸಿ ಬಿಟ್ಟಿತ್ತು. ಚಾರಿಟಿ, ದಾನ, ದೇಣಿಗೆ ಯಾವತ್ತೂ ಹಣ ಅಥವಾ ವಸ್ತುವಿನ ರೂಪದಲ್ಲೇ ಇರಬೇಕು ಎಂದೇನಿಲ್ಲ, ಅದು ದೇಹ ದಂಡನೆಯೂ ಆಗಿರಬಹುದು ಅನ್ನುವ ಒಂದು ಸರಳ ಸತ್ಯ ಅರಿವಾಗುತ್ತಲೇ, ಯು.ಕೆ ಯ ಕಾನ್ಸರ್ ರಿಸರ್ಚ್ ಅನ್ನುವ ಸಂಸ್ಥೆ ಪ್ರತಿ ತಿಂಗಳು ಕೊಡುವ ವಾಕಿಂಗ್, ಯೋಗ, ಚಾಲೆಂಜ್‌ಗಳನ್ನ ತೆಗೆದುಕೊಂಡು fundraising ಮಾಡತೊಡಗಿದೆ. ಪರಿಚಿತರಿಬ್ಬರು ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದರು. ಅವರ ನೆನಪು ಅವರು ಬಿಟ್ಟು ಹೋದವರ ದುಃಖ, ಮಡುಗಟ್ಟಿದ ನೋವು ನೆನೆಸಿಕೊಳ್ಳುತ್ತಲೇ ನಾನು ಇನ್ನೂ ಕಸಿವಿಸಿಗೊಳ್ಳುತ್ತಿದ್ದೆ. ಇನ್ನೇನು ಮಾಡಬಹುದು ನಾನು ಅವರಿಗೆ ಸಹಾಯ ಮಾಡಲು? ಅನ್ನುವ ಆಲೋಚನೆ ಬರ್ತಿತ್ತು. ಆಗೆಲ್ಲ ಮತ್ತೆ ರೂಪ ಸತೀಶ್ ಅವರ ಜಡೆ ಅನಾಯಾಸವಾಗಿ ಮನದಲ್ಲಿ ಮಿಂಚಿ ಮಾಯವಾಗುತ್ತಿತ್ತು.

ಎಷ್ಟು ಚಂದದ ಕೂದಲು ಅದು ಹೇಗೆ ಅಷ್ಟು ಗಟ್ಟಿ ನಿರ್ಧಾರ ಮಾಡಿ ಕೂದಲನ್ನ ಕೊಟ್ಟುಬಿಟ್ಟರು? ಆ ಪೋಸ್ಟ್ ನೋಡಿ ಮತ್ತು ಅವರಿಂದ ಸ್ಪೂರ್ತಿ ಪಡೆದು, ಆ ಗಳಿಗೆಯಲ್ಲಿ ನಾನೂ ಕೂದಲು donate ಮಾಡಬೇಕು ಎಂದು ಮನಸಲ್ಲಿ ನಿರ್ಧಾರ ಮಾಡಿದ್ದೆ. ಆದರೆ ಬದುಕಿನುದ್ದಕ್ಕೂ ನನ್ನ ಪರಿಚಯವೇ ಆಗಿರುವ ಉದ್ದ ಕೂದಲನ್ನು ಅದು ಹೇಗೆ ತಗೆಯುವುದು? ಉಗುರು ಕತ್ತರಿಸುವಾಗ, ಹುಬ್ಬು ಒಪ್ಪ ಮಾಡುವಾಗ ಆಗದ ಹಿಂಜರಿಕೆ ಕೂದಲು ಕತ್ತರಿಸುವಾಗ ಯಾಕೆ ನನ್ನ ಆವರಿಸುತ್ತದೆ ಅಂತ ನನಗೆ ನಾನು ಪ್ರಶ್ನೆ ಮಾಡಿಕೊಳ್ಳುತ್ತಿದ್ದೆ. ಹೇಗೂ ಭಾರತಕ್ಕೆ ಹೋಗುವುದಿತ್ತು… ಅಲ್ಲಿಯತನಕ ಕಾದಿಟ್ಟು, ಮನೆಯಲ್ಲಿದ್ದ ಎರಡು ಮದುವೆ ಪೂರೈಸಿ ನನ್ನ ಕೂದಲನ್ನು ಕತ್ತರಿಸಿ ವಿಗ್ ಮಾಡುವ ಸಂಸ್ಥೆಗೆ ಕಳಿಸುವೆ ಅಂದುಕೊಂಡೆ.

ನನ್ನ ನಿರ್ಧಾರಕ್ಕೆ ಎಷ್ಟು ಬದ್ಧಳಾಗಿರುತ್ತೇನೋ ನನಗೆ ಗೊತ್ತಿರಲಿಲ್ಲ. ಹೀಗಾಗಿ ಇದನ್ನ ಮಾಡುವ ಮೊದಲೇ ಎಲ್ಲ ಆಪ್ತರೆಲ್ಲರ ಮುಂದೆ ಹೇಳಿಕೊಂಡೆ. ರೂಪ ಅವರಿಗೆ ಮೆಸೇಜ್ ಮಾಡಿ ವಿವರ ತಿಳಿದುಕೊಂಡೆ. ಮುಂಬೈನ ‘ಮದದ್’ ಎಂಬ ಸಂಸ್ಥೆಗೆ ನನ್ನ ಇಚ್ಛೆ ಅರುಹಿ ಕೂದಲು ಡೊನೇಟ್ ಮಾಡುವ ಎಲ್ಲ ನಿಯಮ ತಿಳಿದುಕೊಂಡೆ. ಕೂದಲು ದಾನ ಮಾಡುವಾಗ ಕನಿಷ್ಠ ಪಕ್ಷ ೧೨ ಇಂಚು ಕೂದಲು ಕೊಡಬೇಕು. ಇಂಚು ಪಟ್ಟಿ ಹಿಡಿದು ನನ್ನ ಕೂದಲು ಎಷ್ಟು ಗಿಡ್ಡ ಆಗಬಹುದು ಅನ್ನುವ ಅಂದಾಜು ಮಾಡತೊಡಗಿದೆ. ಅಸಲಿಗೆ ನನಗೆ ಭಯವಿದ್ದದ್ದು ನಿಜವಾಗಿಯೂ ನಾನು ಈ ನಿರ್ಧಾರಕ್ಕೆ ಬದ್ಧಳಾಗಿರುತ್ತೇನಾ ಅಂತ.

ಪದೇ ಪದೇ ನನ್ನ ಕೂದಲು ಡೊನೇಟ್ ಮಾಡ್ತೀನಿ ಅಂತ ಹೇಳುವುದು ಕೇಳಿ, ಅಮ್ಮ ಪಪ್ಪ ಮೊದಲಿಗೆ ಕೇಳಿದ್ದು ‘ನಿನ್ನ ಗಂಡ ಇದಕ್ಕೆ ಒಪ್ಪಿದ್ದಾನೆಯೇ?’ ಎಂದು. ಏನಾದರೂ ಒಳ್ಳೆ ನಿರ್ಧಾರ ಮಾಡಿದಾಗ ‘ಮಾಡು ನಿನ್ ಜೊತೆ ನಾವಿದ್ದೇವೆ’ ಅನ್ನುವ ಪಪ್ಪಾ ಅಮ್ಮ ಇದ್ಯಾಕೆ ಇಷ್ಟು ಕಸಿವಿಸಿಯಲ್ಲಿ ಈ ಪ್ರಶ್ನೆ ಕೇಳುತ್ತಿದ್ದಾರೆ? ಅನ್ನುವ ಯೋಚನೆ ಕಾಡಿತು. ನನ್ನ ಗಂಡನೂ ಅರೆ ಮನಸಿನಿಂದಲೇ ‘ಹ್ಮಂ’ ಅಂದಿದ್ದರು.

ನನ್ನ ಬಾಲ್ಯಕಾಲದಲ್ಲಿ ಇದ್ದಂತೆ ನನ್ನ ಮಗಳಿಗೂ ನನ್ನಂತೆ ತುಂಬಾ ದಟ್ಟ ಕೂದಲು. ಜುಟ್ಟು ಕಟ್ಟಿಕೊಂಡು ಸುತ್ತುವ ಆಕೆಗೆ ಸಿಕ್ಕುಗಳ ಸರಮಾಲೆ ಬಿಟ್ಟಿಯಾಗಿ ಸಿಗುತ್ತವೆ. ಶಾಲೆಗೆ ಹೊರಡುವ ಹೊತ್ತಲ್ಲಿ ದಿನ ಅಳು ಜಗಳ ಸಿಟ್ಟು, ನನ್ನೊಳಗಿನ ಆಲಸಿ ತಾಯಿ ಆಕೆಗೂ ಈ ಹೇರ್ ಡೊನೇಟ್ ಮಾಡಲು ಒಪ್ಪಿಸುವಲ್ಲಿ ಸಫಲಳಾದಳು. ಆದರೆ ನಾಳೆ ಕೂದಲು ಕತ್ತರಿಸಬೇಕು ಅನ್ನುವ ಹೊತ್ತಲಿ ಕಣ್ಣು ತುಂಬಾ ನೀರು ತುಂಬಿಕೊಂಡು ‘ಅಮ್ಮ I really love my hair’ ಅಂದು ಬಿಕ್ಕಲು ಶುರು ಮಾಡಿದಳು. ನನ್ನ ಬಾಲ್ಯ ಮತ್ತೊಮ್ಮೆ ಕನ್ನಡಿ ಹಿಡಿದು ನಿಂತಿತ್ತು.

ಅಂತೂ ಇಂತೂ ಎಲ್ಲ ಯೋಚನೆ, ಪ್ರಶ್ನೆ, ಮೀರಿ ಜನೇವರಿ ತಿಂಗಳ ನಾಲ್ಕನೇ ತಾರೀಖಿನಂದು ಸರಿ ಸುಮಾರು 30 ವರ್ಷಗಳಿಂದ ನನ್ನ ಅಸ್ತಿತ್ವದ ಭಾಗವೇ ಆಗಿದ್ದ ನನ್ನ ಜಡೆಯ 13.5 ಇಂಚು ಕ್ಯಾನ್ಸರ್ ಪೀಡಿತರಿಗೆ ವಿಗ್ ಆಗಲು ಉಪಯೋಗ ಆಯ್ತು.

ಏನೋ ಕಳೆದುಕೊಂಡಂತೆ ಅನಿಸುತ್ತಿದೆಯಾದರೂ ಪಡೆದುಕೊಂಡ ಆತ್ಮತೃಪ್ತಿ ಮುಂದೆ ಉಳಿದಿದ್ದೆಲ್ಲವೂ ಗೌಣ ಅಲ್ಲವೇ? ಜಡೆ ಅಂದಾಗೆಲ್ಲ ನೆನಪಾಗುವುದು ಡಾ.ಜಿ ಎಸ್ ಶಿವರುದ್ರಪ್ಪನವರ ಜಡೆ ಕವಿತೆ. ಆ ಸಾಲುಗಳೊಂದಿಗೆ ಈ ಬರಹ ಇಲ್ಲಿಗೆ ಮುಗಿಸುತ್ತೇನೆ.

ಜಡೆ

ಲಲನೆಯರ ಬೆನ್ನೆನೆಡೆ
ಹಾವಿನೊಲು ಜೋಲ್ವ ಜಡೆ
ಕಾಳಿಂದಿಯಂತಿಳಿದು, ಕೊರಳೆಡೆಗೆ ಕವಲೊಡೆದು
ಅತ್ತಿತ್ತ ಹರಿದ ಜಡೆ!
ಚೇಳ್ ಕೊಂಡಿಯಂಥ ಜಡೆ,
ಮೋಟು ಜಡೆ, ಚೋಟು ಜಡೆ,
ಚಿಕ್ಕವರ ಚಿನ್ನ ಜಡೆ!
ಎಣ್ಣೆ ಕಾಣದೆ ಹಿಣಿಲು ಹಿಣಿಲಾಗಿ ಹೆಣೆದ ಜಡೆ
ಬೆವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ
ಗಂಟು ಜಡೆ!
ಅಕ್ಕ ತಂಗಿಯ ಮುಡಿಯ
ಹಿಡಿದು ನಾನೆಳೆದಂಥ
ಮಲ್ಲಿಗೆಯ ಕೆಂಪು ಜಡೆ
ಕೇದಗೆಯ ಹೆಣೆದ ಜಡೆ
ಮಾತೃ ಮಮತಾವೃಕ್ಷ ಬಿಟ್ಟ ಬೀಳಲಿನಂತೆ
ಹರಡಿರುವ ತಾಯ ಜಡೆ!
“ಕುರುಕುಲ ಜೀವಾಕರ್ಷಣ ಪರಿಣತ” – ಆ
ಪಾಂಚಾಲಿಯ ಜಡೆ!
ಸೀತೆಯ ಕಣ್ಣೀರೊಳು ಮಿಂದ ಜಡೆ
ಓ ಓ ಈ ಜಡೆಗೆಲ್ಲಿ ಕಡೆ.

ಸಂಜೆಯಲಿ ಹಗಲು ಕೆದರುವ ಕತ್ತಲೆಯ
ಕಾಳ ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ
ಬೆಳಕು ಜಡೆ
ಒಮ್ಮೊಮ್ಮೆ ಮುಗಿಲಲ್ಲಿ ತೇಲುತ್ತ ಬರುವಂಥ
ಬೆಳ್ಳಕ್ಕಿಗಳ ಜಡೆ
ಕೊಂಚೆಗಳ ಜಡೆ
ಮರ ಮರದಿ ಬಳಕುತಿಹ ಹೂಬಿಟ್ಟ ಬಳ್ಳಿ ಜಡೆ!
ಕಾಡ ಬಯಲಿನ ಹಸುರು ಹಸರದಲಿ ಹರಿ ಹರಿದು
ಮುನ್ನಡೆವ ಹೊಳೆಯ ಜಡೆ!
ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ!
ಗಿರಿ ಶಿವನ ಶಿರದಿಂದ ಹಬ್ಬಿ ಹಸರಿಸಿನಿಂದ
ಕಾನನದ ಹಸುರು ಜಡೆ
ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ
ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ
ಹರಡಿರುವ ಮಳೆಯ ಜಡೆ!
ಚಂದ್ರಚೂಡನ
ವ್ಯೋಮಕೇಶನ
ವಿಶ್ವವನೆ ವ್ಯಾಪಿಸುತ ತುಂಬಿರುವ ಜಡೆ
ಗಾನಗಳ ಕಾವ್ಯಗಳ ಶಿಲ್ಪಗಳ ಕಲೆಯ ಜಡೆ
ಎಲ್ಲವೂ ರಮ್ಯವೆಲ್ಲ!
ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ
ಕಾಣದಲ್ಲ!

ಡಾ. ಜಿ ಎಸ್ ಎಸ್