ಇಂದಿನ ರಾಜಕೀಯ ಅಥವಾ ಪ್ರಸ್ತುತ ಜಂಜಾಟಗಳ ಬಗ್ಗೆ ಚರ್ಚಿಸುವುದು ನನ್ನ ಅಳವಿಗೆ ನಿಲುಕುವ ವಿಚಾರ ಅಲ್ಲ. ಹೀಗೆನ್ನಲು ಕಾರಣ, ನಾನೊಬ್ಬ ಹೇಳಿ ಕೇಳಿ ರೈತ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಒಂದು ವರ್ಷ ಮೊದಲು ಹುಟ್ಟಿದವನು ನಾನು. ನನ್ನ ಅಜ್ಜ ದಿವಂಗತ ಕಿನ್ನಿಕಂಬಳ ಬಾಗ್ಲೋಡಿ ರಾಮರಾವ್ ಮಹಾ ದೇಶಭಕ್ತ. ಅವರು ಮಹಾತ್ಮಾ ಗಾಂಧೀಜಿಯವರನ್ನು ಹತ್ತಿರದಿಂದ ನೋಡಿ ಅವರನ್ನು ಅನುಸರಿಸಿದ ವ್ಯಕ್ತಿ. ಹುಟ್ಟಾ ಆಗರ್ಭ ಶ್ರೀಮಂತನಾದರೂ, ತನ್ನ ಲೌಕಿಕ ಸರ್ವಸ್ವವನ್ನೂ ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟಕ್ಕೆ ಧಾರೆ ಎರೆದು, ಅವರನ್ನು ಸದಾ ಅನುಸರಿಸಿದ ಅನುಪಮ ವ್ಯಕ್ತಿ.

ಬ್ರಿಟಿಷರ “ಡಿವೈಡ್ ಅಂಡ್ ರೂಲ್” ಎಂಬ ಪುರಾತನ ನೀತಿಸಂಹಿತೆಯ ಅಡಿಯೇ ನಮಗೆ ಸ್ವಾತಂತ್ರ್ಯ ಸಿಕ್ಕಿತಂತೆ! ದೇಶ ವಿಭಜನೆಯಾದಾಗ  ಹರಿದ ರಕ್ತದ ಕೋಡಿಯನ್ನು ಇನ್ನೂ ಉಭಯದೇಶಗಳ ಹಳೆಯ ತಲೆಗಳು ನೆನಪಿಸಿಕೊಳ್ಳುತ್ತಿವೆ. ಸ್ವಾತಂತ್ರ್ಯಬಂದರೂ, ಮಹಾತ್ಮಾ ಗಾಂಧೀಜಿಯವರ ಕನಸಿನ ರಾಮರಾಜ್ಯ  ಮೂಡಿ ಬರಲೇ ಇಲ್ಲ.

ಆದುದಾಗಿ ಹೋಯಿತು! -ಚರಿತ್ರೆಯನ್ನು ತಿದ್ದಲು ಇಂದು ನಮಗೆ ಸಾಧ್ಯವಿಲ್ಲ.

ನಾನು ಬೆಳೆದು ಬಂದ ರೀತಿಯ ಬಗ್ಗೆ ಎರಡು ಮಾತು ಹೇಳ ಬಯಸುತ್ತೇನೆ.

ನನ್ನ ಅಜ್ಜ ತನ್ನ ಸ್ವಯಾರ್ಜಿತ ಹಣದಿಂದ ಕಟ್ಟಿ ಬೆಳೆಸಿ 1926ನೇ  ಇಸವಿಯಲ್ಲಿ ಸರಕಾರಕ್ಕೆ ಧರ್ಮಾರ್ಥವಾಗಿ ಬಿಟ್ಟುಕೊಟ್ಟ ಕಿನ್ನಿಕಂಬಳ  ಎಂಬ ಕಿರು ಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿ ಬೆಳೆದವನು ನಾನು. ದಾಸ್ಯದ ಶೃಂಕೋಲೆಗಳು ಕಳಚಿಬಿದ್ದು, ನಮ್ಮ ಪ್ರಬಲ ಸ್ವಾತಂತ್ರ್ಯದೇಶ ರೂಪುಗೊಳ್ಳುತ್ತಾ ಇದ್ದ 1951ನೇ ಇಸವಿಯ ಕಾಲದಲ್ಲಿ ನಾನು ಶಾಲೆಯ ಮೊದಲನೇ ತರಗತಿ ಸೇರಿದೆ. ನಮಗೆ ಲಭ್ಯವಿದ್ದ  ಕನ್ನಡ ಮಾಧ್ಯಮದಲ್ಲೇ ಓದಿದೆ.ವಾರಣಾಸಿಯಲ್ಲಿ

ನಮ್ಮ ಶಾಲೆಯಲ್ಲಿ  ಐ.ಎನ್.ಏ.(ಮಾನ್ಯ ಸುಭಾಶ್ಚಂದ್ರ ಬೋಸರ ಇಂಡಿಯನ್ ನ್ಯಾಶನಲ್ ಆರ್ಮಿ)ಯಲ್ಲಿ ಅಧಿಕಾರಿಯಾಗಿದ್ದ ಮಹಾಬಲ ಶೆಟ್ಟರು, ದೇಶಭಕ್ತ ಸತ್ತಾರ್ ಸಾಹೇಬರು, ಕಟ್ಟಾ ಗಾಂಧಿವಾದಿಗಳಾಗಿದ್ದ ಶ್ರೀ ಅಂಬ್ರೋಸ್ ಡಿ’ಸೋಜಾ ಮತ್ತು ಶ್ರೀ ಸದಾಶಿವ ಮಾಸ್ತರ್   ಎಂಬ ಮಹನೀಯರು “ಹೊಸ ದೇಶ ಕಟ್ಟುವ ಮಹದಾಸೆಯಲ್ಲಿ” ನಮಗೆ ಬಹು ಮುತುವರ್ಜಿಯಿಂದ ಪಾಠ ಮಾಡುತ್ತಾ ಇದ್ದರು.

“ಮಾನವೀಯತೆಯೇ ಧರ್ಮ ಮತ್ತು ದೇಶಭಕ್ತಿಯೇ ಪರಮ ಧರ್ಮ” ಎಂದು ನಮ್ಮ ಉಪಾಧ್ಯಾಯರುಗಳು ನಮಗೆ ಬೋಧಿಸುತ್ತಾ ಇದ್ದರು. ನನ್ನ ಪ್ರಾಥಮಿಕ ಶಾಲೆಯ ಸಹಪಾಠಿಗಳಾದ ಗಾಳಿಗಂಡಿ ಅಬ್ದುಲ್ ರಶೀದ್ ಮತ್ತು ಸಿರಿಲ್ ಡಿ‘ಸೋಜಾ ಇಂದಿಗೂ ನನ್ನ ಮಿತ್ರರಾಗಿ  ಉಳಿದಿದ್ದಾರೆ. ಗಾಳಿಗಂಡಿ ರಶೀದ್ ಚಿಕ್ಕಮಗಳೂರಿನ ಕಳಸಾ ಪೇಟೆಯ ಗಣ್ಯ ವ್ಯಾಪಾರಿ. ಸಿರಿಲ್ ಡಿ’ಸೋಜಾ ಇಂದು ಫಾದರ್ ಸಿರಿಲ್ ಎಂಬ ಹೆಸರಿನ ಕ್ಯಾಥೋಲಿಕ್ ಧರ್ಮಗುರು. ಅವರಿಬ್ಬರು ಇಂದಿಗೂ ನನ್ನನ್ನು ಮರೆತಿಲ್ಲ. ನಾವಿಂದಿಗೂ ವರುಷಕ್ಕೆ ಒಂದು ದಿನವಾದರೂ  “ಅಮರ್  ಅಕ್ಬರ್ ಆಂಟೋನಿ” -ಅವರಂತೆ ಭಾತೃ ಭಾವದಿಂದ ಒಟ್ಟಿಗೆ ಸೇರಿ ಹಳೆಯ ದಿನಗಳನ್ನು ಜ್ಞಾಪಿಸಿಕೊಳ್ಳುತ್ತೇವೆ.

ಕ್ಯಾಡೆಟ್ ಕ್ಯಾಪ್ಟನ್ ಪೆಜತ್ತಾಯಇಂದು ಯಾಕೋ ಒಂದು ನೆನಪು ನನ್ನ ಮನದಲ್ಲಿ ಮೂಡುತ್ತಾ ಇದೆ. ನನ್ನ ನೆನಪು 45 ವರುಷಗಳ ಹಿಂದೋಡುತ್ತಾ  ಇದೆ. ಭಾರತೀಯ  ನೌಕಾಪಡೆಯ ಎನ್.ಸಿ.ಸಿ. ದಳದ ಕ್ಯಾಡೇಟ್ ನಾನಾಗಿದ್ದೆ. ಯಾವುದೇ ಕ್ಯಾಂಪ್ ಅಥವಾ ನೌಕೆಯಲ್ಲಿ “ಮಂದಿರ್” -ಅಂದರೆ ಅದು ಸರ್ವಧರ್ಮ ದೇಗುಲ ಎಂದೇ ಅರ್ಥ! ಎಲ್ಲಾ ಧರ್ಮದವರೂ ಒಂದೇ ಜಾಗದಲ್ಲಿ ಪ್ರಾರ್ಥನೆ ಮಾಡುತ್ತಿದ್ದೆವು. ಒಬ್ಬ ಕಮಿಶನ್ಡ್ ಆಫೀಸರ್  ಪ್ರೀಚರ್/ಪುರೋಹಿತ್/ಮೌಲ್ವಿ/ಅರ್ಚಕ -ಎಲ್ಲವೂ ತಾನೇ ಆಗಿ ಕಾರ್ಯ ನಿರ್ವಹಿಸುತ್ತಾ ಇದ್ದರು.

ಸೆಪ್ಟೇಂಬರ್ 25ನೇ ತಾರೀಕು ಅಯೋಧ್ಯಾ ತೀರ್ಪಿನ ನಿರೀಕ್ಷೆಯಲ್ಲಿ ಇರುವಾಗಲೇ ನನ್ನ ಗಣಕದ ಯಾಹೂ. ಕಾಮ್ ಪೋರ್ಟಲಿನಲ್ಲಿ ಒಂದು  ಲೇಖನ ಕಂಡುಬಂತು. ದಯವಿಟ್ಟು ಅದರ ಕೊಂಡಿಯನ್ನು ಪರಾಂಬರಿಸಿರಿ.

ವಿವಾದಿತ ಬಾಬ್ರಿ ಮಸ್ಜಿದ್ ಮತ್ತು ರಾಮ ಜನ್ಮಭೂಮಿಯ ಭಿನ್ನಾಭಿಪ್ರಾಯಗಳು ಬೆಳೆದು ಬಿಸಿಹುಟ್ಟಿಸುತ್ತಿರುವ ಅಯೋಧ್ಯಾ ನಗರದಲ್ಲೇ  ಇಂತಹ ಸರ್ವಧರ್ಮ ದೇಗುಲ ಇದೆಯಂತೆ! ಅಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಖ್, ಪಾರ್ಸಿ, ಬಹಾಯಿ ಎಲ್ಲಾ ಧರ್ಮಗಳವರೂ ಒಟ್ಟು ಸೇರಿ ಅಲ್ಲಿ ಪ್ರಾರ್ಥಿಸುತ್ತಾರಂತೆ!

“ನಾನೂ ಆ ದೇಗುಲಕ್ಕೆ ಸೇರಿದವ!” -ಎಂದಿತು ನನ್ನ ಮನ.

ದೇಶಧರ್ಮವೇ ನಮಗೆ ಮುಖ್ಯ.. ದೇವನೊಬ್ಬ ನಾಮಹಲವು- ಈ  ಮಾತನ್ನು ನಾವೆಲ್ಲರೂ ಪರಿಪಾಲಿಸಿದರೆ ಎಷ್ಟು ಚೆನ್ನ! ಈ ವಿಚಾರ ಇಂದು ಬರೆಯಬೇಕು- ಅಂತ ಅನ್ನಿಸಿತು. ಬರೆದೇ ಬಿಟ್ಟೆ.