ಆ ಹೆಂಗಸು ಯಾವ ಮಾತನ್ನೂ ಆಡದೆ ಸುಮಾರು ಅರ್ಧ ಗಂಟೆ ಹಾಗೆಯೇ ಕುಳಿತಿದ್ದಳು. ಅಕ್ಕನ ಕಾಲಿಗೆ ನಮಸ್ಕಾರ ಮಾಡಿ ‘ಹೋಗಿ ಬರುತ್ತೇನಮ್ಮ’ ಎಂದಳು. ನನ್ನಲ್ಲಿ ಯಾವ ಮಾತನ್ನೂ ಆಡಲಿಲ್ಲ. ಮಗುವನ್ನು ಜೋಯಿಸರ ಕುರ್ಚಿಯ ಎದುರು ಸಾಷ್ಟಾಂಗ ನಮಸ್ಕಾರ ಮಾಡಿಸಿದಳು. ತಾನೂ ಆ ಕುರ್ಚಿಗೆ ನಮಸ್ಕರಿಸಿದಳು. ‘ಬಸ್ಸಿಗೆ ತಡಾವಾಯಿತೋ ಏನೋ’ ಎಂದು ತನ್ನಷ್ಟಕ್ಕೆ ಎಂಬಂತೆ ಅಕ್ಕನಿಗೆ ಮತ್ತೊಮ್ಮೆ ಹೇಳಿ ಅವಸರದಲ್ಲಿ ನಡೆದು ಹೋದಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಬೆಳಗೋಡು ರಮೇಶ ಭಟ್ ಬರೆದ ಕತೆ ಜೋಯಿಸರ ಕುರ್ಚಿ ಈ ಭಾನುವಾರದ ನಿಮ್ಮ ಓದಿಗೆ
ಎರಡೋ ಮೂರೋ ತಲೆಮಾರುಗಳಷ್ಟು ಹಳೆಯ ಆ ಕುರ್ಚಿಯಲ್ಲಿ ಕುಳಿತು ಜೋಯಿಸರು ಒಂದು ಮಾತು ಹೇಳಿದರೆಂದರೆ ಕುಂದಾಪುರದಿಂದ ಶೃಂಗೇರಿವರೆಗಿನ ಆಸ್ತಿಕರಿಗೆಲ್ಲ ಅದೊಂದು ವೇದವಾಕ್ಯವೇ. ಸ್ಥಳ ಪುರಾಣ ಇದ್ದೀತು, ಅವರ ಅಜ್ಜನ ತಪಸ್ಸಿನ ಫಲ ಇದ್ದೀತು, ಅವರ ವಿದ್ವತ್ತಿನ ಫಲಶ್ರುತಿಯಿದ್ದೀತು. ಒಂದು ಹೆಚ್ಚಿಲ್ಲ, ಒಂದು ಕಮ್ಮಿಯಿಲ್ಲ. ಎಂತಹ ತೂಕದ ಮಾತು ಎಂಬ ಕಾರಣಕ್ಕೆ ಜೋಯಿಸರಿಗೆ ಸಲ್ಲುತ್ತಿದ್ದ ಗೌರವದ ಒಂದಿಷ್ಟು ಮಂದಿಯಂತೂ, ಜೋಯಿಸರೇ ಎದುರು ಸಿಕ್ಕಿದರೂ, ‘ಒಂದೆರೆಡು ಮಾತನಾಡಲಿಕ್ಕಿತ್ತು. ನಾಳೆ ಮನೆಯಲ್ಲಿರುತ್ತೀರಲ್ಲ, ಅಲ್ಲೇ ಬರುತ್ತೇವೆ, ಎಂದು ನಿಶ್ಚಯ ಮಾಡಿಕೊಂಡು ಮಾತನಾಡಲಲ್ಲೆ ಹೋಗುತ್ತಿದ್ದರು. ಯಾಕೆಂದರೆ ಅವರಿಗೆ ಆ ಹಳೆಯ ಕುರ್ಚಿಯ ಮೇಲೆ ಕುಳಿತ ಜೋಯಿಸರಷ್ಟೇ ಸಮಾಧನ ಕೊಡುವವರು.
ನಿಜಕ್ಕೂ ಹೇಳಬೇಕೆಂದರೆ ಬೇರೆಲ್ಲರಿಗಿಂತ ಜೋಯಿಸರ ಹೆಂಡತಿಗೆ ಆ ಕುರ್ಚಿಯ ಮೇಲೆ ಅಷ್ಟೊಂದು ನಂಬಿಕೆ. ಜೋಯಿಸರಿಂದ ನಿಮಿತ್ಯ ಕೇಳಿ ಹೋದವರೋ, ಜಾತಕ ತೋರಿಸಿದವರೋ ನಾಲ್ಕು ಒಳ್ಳೆಯ ಮಾತು ಹೇಳಿದರೆ, ‘ಅದೆಲ್ಲ ಹಿರಿಯರ ಪುಣ್ಯ’ ಎಂದು ಹೇಳಿ ಮನಸ್ಸಿನಲ್ಲಿಯೇ ಆ ಕುರ್ಚಿಗೆ ನಮಸ್ಕರಿಸುವ ಮಹಾತಾಯಿ ಅವರು. ಬೇರೆಯವರೇನು ಬಂತು, ಸ್ವತಃ ಜೋಯಿಸರ ಶಿಷ್ಯರೇ, ಜೋಯಿಸರಿಲ್ಲದ ಹೊತ್ತಿನಲ್ಲಿ ಆ ಕುರ್ಚಿಯಲ್ಲಿ ಕುಳಿತರೆ ಅವರು ಕೋಪೋದ್ರಿಕ್ತರಾಗಿ ಎಬ್ಬಿಸಿ ಬಿಡುತ್ತಿದ್ದುದು ಎಲ್ಲರಿಗೂ ತಿಳಿದ ಸಂಗತಿಯೇ. ಜೋಯಿಸರ ಕುರ್ಚಿಯ ಬಗ್ಗೆ ಆ ತಾಯಿಯ ಕಠಿಣವಾದ ನಿಲುವಿಗೆ ಒಂದಿಷ್ಟು ವಿನಾಯಿತಿ ಏನಾದರೂ ಇದ್ದೀತಾದರೆ ಅದು ನನಗೆ ಮಾತ್ರ.
ಆರು ತಿಂಗಳಿಗೋ ವರ್ಷಕ್ಕೋ ಒಮ್ಮೆ ಅಪರೂಪದ ಅತಿಥಿ ನಾನೆಂಬುದಕ್ಕಿಂತ ಆಕೆಯ ಒಡಹುಟ್ಟಿದ ತಮ್ಮನೆಂಬ ಕಾರಣಕ್ಕೆ ಈ ವಿನಾಯಿತಿ ಎನ್ನುವುದು ನನಗೂ ಗೊತ್ತು. ಗುಟ್ಟಿನಲ್ಲಿ ಜೋಯಿಸರಿಗೂ ಗೊತ್ತು.
ಅಪರೂಪದ ಅತಿಥಿಯೆಂದೆನಷ್ಟೆ? ಹಾಗೆ ಅಪರೂಪಕ್ಕೆ ಬಂದಾಗ ಮನೆಯಲ್ಲಿ ಜೋಯಿಸರಿಲ್ಲ ಎಂದಾದರೆ ನಾಲ್ಕು ಕ್ಷಣ ನಾನೂ ಆ ಕುರ್ಚಿಯಲ್ಲಿ ಕುಳಿತುಬಿಡುತ್ತಿದ್ದೆ. ಹಾಗೆ ನಾನು ಕೂತದ್ದು ಗೊತ್ತಾಗುತ್ತಲೇ ಅಕ್ಕ ಅಡಿಗೆ ಮನೆಯಿಂದಲೇ ಕೂಗುತ್ತಿದ್ದಳು ‘ಒಂಕುಂಟಿ ಹಾಗೆ ಅಲ್ಲಿ ಕೂತು ಏನು ಮಾಡುತ್ತಿ, ಇಲ್ಲಿ ಬಾ. ನಿನ್ನ ಹತ್ತಿರ ತುಂಬ ಮಾತಾಡಲಿಕ್ಕಿದೆ’ ಎಂತಲೋ, ‘ಚಾ ತಿಂಡಿ ಏನಾದರೂ ಬೇಕಿದ್ದರೆ ಇಲ್ಲೇ ಬರಬೇಕು. ಅಲ್ಲಿಗಂತೂ ಖಂಡಿತ ತಂದುಕೊಡುವುದಿಲ್ಲ’ ಎಂತಲೋ. ಹಾಗೆ ಕರೆದಾಗ ಎಷ್ಟೋ ಸಲ ಎದ್ದು ಹೋಗುವುದು ಅನಿವಾರ್ಯವೇ ಆಗುತ್ತಿತ್ತು.
ಒಂದೆರಡು ಸಲ ಹೀಗೆ ಜೋಯಿಸರ ಕುರ್ಚಿಯಲ್ಲಿ ಕುಳಿತುಕೊಳ್ಳುವ ಅವಕಾಶ ಸಿಕ್ಕಿದಾಗಲೇ ಮಲೆನಾಡಿನ ಕಡೆಯ ಕೆಲವರಿಗೆ ನಿಮಿತ್ಯ ಹೇಳುವ ಅವಕಾಶ ಕೂಡ ನನಗೆ ಸಿಕ್ಕಿತ್ತು. ನನ್ನ ಮಾತುಗಳೆಂದರೆ ಒಂದು ರೀತಿಯ ಕೌನ್ಸೆಲಿಂಗ್ ಅಷ್ಟೇ. ನನ್ನ ಮಾತುಗಳನ್ನು ಕೇಳಿದ ಎರಡು ಮಂದಿ ಜೋಯಿಸರಲ್ಲಿ ‘ನಿಮ್ಮ ಭಾವ ನೆಂಟ ಪರವಾಗಿಲ್ಲ ಮಾರಾಯ’ ಎಂದರಾದರೂ, ಅಕ್ಕ ಮಾತ್ರ ‘ಆ ಕುರ್ಚಿಯ ಮರ್ಯಾದೆ ತೆಗೆಯಬೇಡ ಮಾರಾಯ’ ಎನ್ನುತ್ತಿದ್ದಳು.
ನನ್ನಕ್ಕ ಅಡುಗೆಯಲ್ಲಿ ಮಹಾಚತುರೆ ಎಂದು ನಾನಿನ್ನೂ ಹೇಳಿಲ್ಲವಷ್ಟೆ? ಬೇರೇನೂ ಬೇಡ, ನಾಲ್ಕು ಬಿಳಿಯ ದಾಸವಾಳದ ಹೂವು ಸಿಕ್ಕರೂ ಸಾಕು, ಆಕೆ ನಳಪಾಕ ಅಟ್ಟು ಬಡಿಸುತ್ತಾಳೆ. ಆ ಊಟದ ಆಸೆಗೇ ಆಗಾಗ ಹೋಗಿ ನಾಲ್ಕು ದಿನ ಅಲ್ಲಿ ಠಿಕಾಣಿ ಹೂಡುತ್ತೇನೆಂದು ನನ್ನಾಕೆಯ ಆರೋಪವೂ ಇದೆ. ಈಕೆ ಮೊದಲ ಹೆರಿಗೆಗೆ ಹೋದಾಗ ಹೀಗೆ ಆಕ್ಷೇಪಿಸುವವರೂ ಇಲ್ಲವೆಂಬ ಧೈರ್ಯಕ್ಕೆ ನಾಲ್ಕು ದಿನ ರಜೆ ಹಾಕಿ ಜೋಯಿಸರ ಮನೆಗೆ ಬಂದೆ. ಯಾವತ್ತಿನ ಹಾಗೆಯೇ ಜೋಯಿಸರು ಶೃಂಗೇರಿಯಲ್ಲಿ. ಸರಿ, ದಿನಾ ಅರ್ಧರ್ಧ ಗಂಟೆ ಅವರ ಕುರ್ಚಿಯಲ್ಲಿ ಕುಳಿತು ಸದ್ದಾಂ ಹುಸೇನನಿಂದ ರಾಜೀವ ಗಾಂಧಿಯವರೆಗೆ ಗೊತ್ತಿದ್ದ ಗೊತ್ತಿಲ್ಲದ ವಿಷಯಗಳನ್ನೆಲ್ಲ ಮಾತಾಡಿದ್ದೂ ಆಯಿತು. ಕೇಳಲಿಕ್ಕೆ ಹೇಗಿದ್ದರೂ ಜೋಯಿಸರ ಶಿಷ್ಯರಿದ್ದಾರೆ.
ನಾನಲ್ಲಿಂದ ಹೊರಡುವ ದಿನ ನಡೆದ ಒಂದು ಚಿಕ್ಕ ಘಟನೆಗೆ ಇಷ್ಟೆಲ್ಲ ಉಪೋದ್ಘಾತ. ಹೊಸನಗರದ ಕಡೆಯ ಹೆಂಗಸೊಬ್ಬರು ಚಿಕ್ಕ ಮಗುವೊಂದನ್ನು ಎತ್ತಿಕೊಂಡು ಬಂದಿದ್ದರು. ಒಂದು ಕಾಲದಲ್ಲಿ ಇದ್ದು ಮಾಡಿದ ಮನೆಯವರೆ, ಈಗ ಸ್ವಲ್ಪ ನಸೀಬು ಖೋತಾ ಆದವರ ಹಾಗೆ ಕಾಣಿಸುತ್ತಿದ್ದರು. ‘ಜೋಯಿಸರಿಲ್ಲ, ಇನ್ನೊಂದು ವಾರ ಬರುವ ಸೂಚನೆಯೂ ಇಲ್ಲ’ ಎನ್ನುವುದನ್ನು ಶಿಷ್ಯೋತ್ತಮರು ತಿಳಿಸುತ್ತಲೇ ಅವರು ‘ಅಯ್ಯೋ ದೇವರೆ’ ಎಂದು ತಲೆಯ ಮೇಲೆ ಕೈಹೊತ್ತು ಕುಳಿತರು.
ನನ್ನ ಪುರಾಣ ಆರಂಭಿಸುವ ಮೊದಲೇ ಅಕ್ಕನಿಂದ ಬುಲಾವು ಬಂತು. ‘ಅವಳ ಹತ್ತಿರ ನೀನೇನೂ ಮಾತಾಡಲಿಕ್ಕೆ ಹೋಗಬೇಡ, ಮಹಾ ಚಂಡಾಲ ಹೆಂಗಸು’ ಎಂದಳು ಅಕ್ಕ. ‘ಚಂಡಾಲರಾ? ನೋಡಿದರೆ ಹಾಗೆ ಕಾಣಿಸುವುದಿಲ್ಲ’ ಎಂದೆ. ಅಕ್ಕ ಕೊಂಚ ಸಿಟ್ಟಿನಿಂದಲೇ ‘ಎಲ್ಲದಕ್ಕೂ ತಮಾಷೆ ಮಾಡಬೇಡ. ಅವಳ ಸ್ವಭಾವ ನಾನು ಹೇಳಿದ್ದು’ ಎಂದಳು.
ನನ್ನ ಮಾತುಗಳೆಂದರೆ ಒಂದು ರೀತಿಯ ಕೌನ್ಸೆಲಿಂಗ್ ಅಷ್ಟೇ. ನನ್ನ ಮಾತುಗಳನ್ನು ಕೇಳಿದ ಎರಡು ಮಂದಿ ಜೋಯಿಸರಲ್ಲಿ ‘ನಿಮ್ಮ ಭಾವ ನೆಂಟ ಪರವಾಗಿಲ್ಲ ಮಾರಾಯ’ ಎಂದರಾದರೂ, ಅಕ್ಕ ಮಾತ್ರ ‘ಆ ಕುರ್ಚಿಯ ಮರ್ಯಾದೆ ತೆಗೆಯಬೇಡ ಮಾರಾಯ’ ಎನ್ನುತ್ತಿದ್ದಳು.
ಆಗಲೇ ಅಕ್ಕನಿಂದ ಈ ಆಗಂತುಕಿಯ ಪ್ರವರ ತಿಳಿಯಿತು. ಘಟ್ಟದ ಮೇಲಿನ ದೊಡ್ಡ ಹೆಗಡೆಯರೊಬ್ಬರ ಎರಡನೆಯ ಹೆಂಡತಿ ಈಕೆ. ಮೊದಲ ಹೆಂಡತಿಯ ಮಗಳೊಬ್ಬಳಿದ್ದು, ಹತ್ತೋ ಹದಿನೈದೋ ವರ್ಷದ ಆ ಹೆಮ್ಮಗುವಿಗೆ ಈಕೆ ನರಕದರ್ಶನ ಮಾಡಿಸುತ್ತಿದ್ದಾಳಂತೆ. ಆ ಹೆಣ್ಣುಮಗು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದಾಳಂತೆ. ಇವಳ ಗ್ರಹಚಾರಕ್ಕೆ ಈಗ ಅಡಿಕೆ ಬೆಲೆಯೂ ಕುಸಿದು ದಾರಿದ್ರ್ಯ ಕಿಟಕಿಯಿಂದ ಇಣುಕುತ್ತಿದೆಯಂತೆ. ‘ಹೆಗಡೇರ ಮೊದಲ ಹೆಂಡತಿ ಅನ್ನಪೂರ್ಣೆ. ‘ಈಕೆ ಚಂಡಾಲಿ’ ಎಂದೂ ಇವಳ ಕಾಲ್ಗುಣದಿಂದ ಹೆಗೆಡೇರ ‘ಅಡಿ ಎರೆಯಿತು’ ಎಂದೂ ಅಕ್ಕ ಹೇಳಿದಳು.
ನನ್ನ ಬಳಿ ಏನೇ ಹೇಳಲಿ, ಅಕ್ಕ ಆ ಹೆಂಗಸಿನ ಹತ್ತಿರ ಮಾತ್ರ ‘ಕಾಲು ತೊಳೆದು ಬನ್ನಿ. ಮಧ್ಯಾಹ್ನದ ಹೊತ್ತು. ಒಂದಿಷ್ಟು ಊಟ ಮಾಡಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಹಿಂದೆ ಹೋಗುವಿರಂತೆ. ಅವರಂತೂ ನಿಮಗೆ ಸಿಗುವುದಿಲ್ಲ’ ಎಂದು ಉಪಚಾರವನ್ನೇ ಮಾಡಿದಳು. ಒತ್ತಾಯ ಮಾಡಿ ಹೊಟ್ಟೆ ತುಂಬ ಉಣಿಸಿಯೂಬಿಟ್ಟಳು.
ಆ ಹೆಂಗಸು ಮಾತ್ರ ಊಟದುದ್ದಕ್ಕೆ ತನ್ನ ಸವತಿಯನ್ನೂ, ಅವಳು ಬಿಟ್ಟು ಹೋದ ದರಿದ್ರದ ಮಗಳನ್ನೂ ಬಾಯಿ ತುಂಬಾ ಶಪಿಸುತ್ತಿದ್ದಳು. ತನ್ನ ಜೊತೆಯಲ್ಲಿ ತಂದಿದ್ದ ಚಿಕ್ಕ ಮಗುವನ್ನು ತೋರಿಸುತ್ತ ‘ಈ ದೇವರ ಮರಿಗಾಗಿ ತಾನಿನ್ನೂ ಬದುಕಿದ್ದೇನೆ’ ಎಂದೂ ಹೇಳಿದಳು. ‘ಜೋಯಿಸರಾದರೂ ದಾರಿ ತೋರುತ್ತಾರೆಂದು ಬಂದರೆ ಅವರೂ ಸಿಗುತ್ತಿಲ್ಲ’ ಎನ್ನುವ ಹೊತ್ತಿಗೆ ಊಟ ಮಗಿಯಿತು.
ಊಟದ ಅನಂತರ ಮತ್ತೊಮ್ಮೆ ರೇಷ್ಮೆಯ ಪಂಚೆಯುಟ್ಟು ಜೋಯಿಸರ ಕುರ್ಚಿಯಲ್ಲಿ ಕುಳಿತೆ. ಜೋಯಿಸರ ಚೀಲದಿಂದ ಲೆಕ್ಕ ಮಾಡಿ ಮೂವತ್ತೊಂದು ಕವಡೆಗಳನ್ನು ತೆಗೆದಿರಿಸಿದೆ. ಆಮೇಲೆ ಆ ಹೆಂಗಸನ್ನು ಕರೆದೆ, ‘ಇಲ್ಲ ಬನ್ನಿಯಮ್ಮ’. ಬಂದರು.
‘ಈ ಕವಡೆಗಳನ್ನು ಸರಿಯಾಗಿ ಎರಡು ಪಾಲುಮಾಡಿ’
‘ಆಯಿತು. ಒಂದು ಉಳಿಯಿತು.’
‘ಪುನಃ ಈ ಕವಡೆಗಳನ್ನು ಮೂರು ಪಾಲು ಮಾಡಿ,
‘ಆಯಿತು. ಈಗಲೂ ಒಂದು ಉಳಿಯಿತು.
‘ಪುನಃ ಈ ಕವಡೆಗಳನ್ನು ಸರಿಯಾಗಿ ನಾಲ್ಕು ಪಾಲು ಮಾಡಿ’
‘ಆಯಿತು, ಈಗ ಒಂದು ಕಡಿಮೆಯಾಗಿದೆ’
‘ನೋಡಿಯಮ್ಮ ಸತ್ಯ ಇಷ್ಟೇ. ನಿಮ್ಮ ಮನೆಯ ಬಾಗಿಲಲ್ಲಿ ಒಂದು ಅತೃಪ್ತಾತ್ಮ ಕುಳಿತಿದೆ…’
ನನ್ನ ಮಾತು ಮಾತು ಮುಗಿಯುವ ಮೊದಲೇ ಆ ಹೆಂಗಸು ಉಮ್ಮತ್ತಳಂತೆ ಕೂಗಿದಳು. ‘ನನಗೆ ಮೊದಲೇ ಗೊತ್ತು. ಆ ಪರದೇಶಿ ಸತ್ತರೂ ನಮ್ಮನ್ನು ಬಿಡುವುದಿಲ್ಲ. ನಮಗೆ ನೆಮ್ಮದಿ ಸಿಗಲೇ ಬಾರದೆಂದು ಅದೊಂದು ಶನಿಯೂ ಸಾಟಿಯಾಗಿದೆ,
ಕವಡೆಗಳನ್ನ ಸರಿಯಾಗಿ ಐದು ಲಾಲು ಮಾಡಿದೆ. ಒಂದು ಜಾಸ್ತಿ ಉಳಿದಿದೆ. ಅದನ್ನೆತ್ತಿ ಅವಳ ಮುಂದಿಟ್ಟು ಮಾತು ಮುಂದುವರಿಸಿದೆ.
‘ಅಮ್ಮ, ನಾನು ಹೇಳುವುದನ್ನು ನಿಧಾನವಾಗಿ ಅರ್ಥಮಾಡಿಕೊಳ್ಳಿ. ನಿಮ್ಮ ಮನೆಯ ಬಾಗಿಲಲ್ಲಿ ಕೂತಿರುವ ಆ ಆತ್ಮ ನಿಮ್ಮ ರಕ್ಷಣೆಗಾಗಿ ಕೂತಿದೆ. ನೀವು ಮನಸ್ಸು ಮಾಡಿದರೆ ನಿಮಗದರಿಂದ ಲಾಭವಿದೆ. ಈ ಒಂಟಿ ಕವಡೆ ಹೇಳುತ್ತಿದೆ. ನೀವು ನಿಮ್ಮ ಮನೆಯಲ್ಲಿ ಬಿಟ್ಟು ಬಂದಿರುವ, ಅಳುತ್ತ ಕುಳಿತಿರುವ ಒಂದು ಹೆಣ್ಣು ಮಗುವಿನ ಕೈಯಲ್ಲಿ ನಿಮ್ಮ ಮನೆಯ, ನಿಮ್ಮ ಈ ಮಗುವಿನ ಮತ್ತು ನಿಮ್ಮೆಲ್ಲರ ಸುಖ-ದುಃಖಗಳ ಕಡಿವಾಣವಿದೆ. ಇವತ್ತಿನಿಂದ ಆ ಮಗುವಿಗೆ ನೀವು ಎಷ್ಟು ಸಂತೋಷ ಕೊಡುತ್ತೀರೋ, ಅದರ ಮೂರು ಪಟ್ಟು ಸುಖ, ಸಂತೋಷ, ಸಂಪತ್ತು, ಸಮೃದ್ಧಿ ನಿಮಗೆಲ್ಲ ಸಿಗುತ್ತೆ.
‘ನೀವು ನಿಜ ಹೇಳುತ್ತೀರಾ?’ ಎಂದರಾಕೆ.
ನನ್ನೆದುರಿಗಿದ್ದ ಎಲ್ಲ ಕವಡೆಗಳನ್ನು ಸರಿಯಾಗಿ ಆರು ಪಾಲು ಮಾಡಿದೆ. ಒಂದು ಜಾಸ್ತಿ ಉಳಿಯಿತು. ಅದನ್ನೂ ಅವಳೆದುರು ತಳ್ಳಿ ಹೇಳಿದೆ.
‘ನೋಡಮ್ಮ. ಇದು ಸಾಕ್ಷಿ. ನನಗೆ ನಿಮ್ಮ ಪರಿಚಯವಿಲ್ಲ. ನಿಮ್ಮ ಹಿಂದು ಮುಂದು ಗೊತ್ತಿಲ್ಲ. ಜೋಯಿಸರ ಈ ಕುರ್ಚಿಯ ಮೇಲೆ ಕುಳಿತಾಗ ಮಾತ್ರ ಕೇಳಿಸುವ, ಈ ಕವಡೆಗಳು ಹೇಳಿದ ಸತ್ಯ ನಿಮಗೆ ಹೇಳಿದ್ದೇನೆ. ನಿಮಗೆ ಸಂತೋಷ ಬೇಕು ಅಂತಿದ್ದರೆ, ನಿಮ್ಮ ಈ ಮಗುವಿಗೆ ಸುಖ ಬೇಕು ಅಂತಿದ್ದರೆ ಅ ಖಜಾನೆಯ ಕೀಲಿಕೈ ನಿಮ್ಮ ಮನೆಯಲ್ಲಿ ದುಃಖಿಯಾಗಿ ಕುಳಿತಿರುವ ಆ ಹೆಣ್ಣುಮಗು. ಅದನ್ನು ಸಂತೋಷದಲ್ಲಿ ಇಡಿ. ಅದಕ್ಕೆ ಸಲ್ಲಬೇಕಾದುದನ್ನು ಕೊಡಿ. ನಿಮ್ಮ ಪಾಲಿಗೆ ಸಲ್ಲಬೇಕಾದುದನ್ನು ನೀವು ನಂಬಿದ ದೇವರು ಕೊಡುತ್ತಾರೆ.’
ಆ ಹೆಂಗಸು ಯಾವ ಮಾತನ್ನೂ ಆಡದೆ ಸುಮಾರು ಅರ್ಧ ಗಂಟೆ ಹಾಗೆಯೇ ಕುಳಿತಿದ್ದಳು. ಅಕ್ಕನ ಕಾಲಿಗೆ ನಮಸ್ಕಾರ ಮಾಡಿ ‘ಹೋಗಿ ಬರುತ್ತೇನಮ್ಮ’ ಎಂದಳು. ನನ್ನಲ್ಲಿ ಯಾವ ಮಾತನ್ನೂ ಆಡಲಿಲ್ಲ. ಮಗುವನ್ನು ಜೋಯಿಸರ ಕುರ್ಚಿಯ ಎದುರು ಸಾಷ್ಟಾಂಗ ನಮಸ್ಕಾರ ಮಾಡಿಸಿದಳು. ತಾನೂ ಆ ಕುರ್ಚಿಗೆ ನಮಸ್ಕರಿಸಿದಳು. ‘ಬಸ್ಸಿಗೆ ತಡಾವಾಯಿತೋ ಏನೋ’ ಎಂದು ತನ್ನಷ್ಟಕ್ಕೆ ಎಂಬಂತೆ ಅಕ್ಕನಿಗೆ ಮತ್ತೊಮ್ಮೆ ಹೇಳಿ ಅವಸರದಲ್ಲಿ ನಡೆದು ಹೋದಳು.
ಈ ಘಟನೆ ನಡೆದ ಕೆಲವೇ ದಿವಸಗಳಲ್ಲಿ ಹೊಟ್ಟೆಪಾಡಿಗೆಂದು ದೇಶಾಂತರ ಹೋದವನು, ಸುಮಾರು ಹನ್ನೆರಡು ವರ್ಷಗಳ ಅನಂತರ ಅಕ್ಕನ ಮಗಳ ಮದುವೆಗೆಂದು ಊರಿಗೆ ಬಂದಾಗ ಮತ್ತೊಂದು ಘಟನೆ ನಡೆಯಿತು. ಕಲ್ಯಾಣ ಈ ಘಟನೆ ನಡೆದ ಕೆಲವೇ ದಿವಸಗಳಲ್ಲಿ ಹೊಟ್ಟೆಪಾಡಿಗೆಂದು ದೇಶಾಂತರ ಹೋದವನು, ಸುಮಾರು ಹನ್ನೆರಡು ವರ್ಷಗಳ ಅನಂತರ ಅಕ್ಕನ ಮಗಳ ಮದುವೆಗೆಂದು ಊರಿಗೆ ಬಂದಾಗ ಮತ್ತೊಂದು ಘಟನೆ ನಡೆಯಿತು. ಕಲ್ಯಾಣ ಮಂಟಪದಲ್ಲಿ ಕೈ ತುಂಬ ಕೆಲಸವಿರುವವರೇ ಅಚೀಚೆ ಓಡುತ್ತಿರುವಾಗ, ಬರಿಗೈಯ ನನಗೇನೆಂದುಕೊಂಡು ಬಾಗಿಲ ಹತ್ತಿರದ ಫ್ಯಾನಿನ ಕೆಳಗೆ ಒಂದು ಕುರ್ಚಿ ಹಾಕಿಕೊಂಡು ಕುಳಿತಿದ್ದೆ. ಆ ಹೊತ್ತು ತುಂಬು ಗರ್ಭಿಣಿಯೊಬ್ಬಳನ್ನು ಜೊತೆಗೆ ಕರೆತಂದ ಅಕ್ಕ, `ಅಲ್ಲಿದ್ದಾನೆ ನೋಡು’, ಎಂದು ನನ್ನನ್ನು ತೋರಿಸಿ ಮತ್ತೆ ರಂಗಸ್ಥಳದ ಕಡೆಗೆ ಧಾವಿಸಿದಳು. ಆ ಹೆಣ್ಣುಮಗಳು ತೀರಾ ಹತ್ತಿರ ಬಂದು `ನನ್ನ ಗುರುತಿದೆಯಾ?’ ಎಂದಳು. ಸಾಕ್ಷಾತ್ ಲಕ್ಷ್ಮಿಯೇ. ಅಷ್ಟು ರೂಪವತಿ. ತುಂಬು ಗರ್ಭಿಣಿ ಬೇರೆ. ಮೈ ತುಂಬ ಚಿನ್ನದ ರಾಶಿ. ಪೂರ್ಣ ನಿರ್ಗತಿಕನಂತಿರುವ ನನ್ನೆದುರು ನಿಂತಿದ್ದಾಳೆ. ಬಗ್ಗಿ ನನ್ನ ಕಾಲುಗಳಿಗೆ ನಮಸ್ಕಾರ ಮಾಡಿದ್ದಾಳೆ. `ಯಾರಮ್ಮ ನೀನು?’ ಎಂದೆ.
ಗದ್ಗದ ಕಂಠದಿಂದ ಆಕೆ ನುಡಿದಳು. `ನೀವು ನನ್ನನ್ನು ಕಾಣಲಿಲ್ಲ. ಆದರೆ ನನ್ನ ಪಾಲಿನ ದೇವರು ನೀವು. ನನ್ನನ್ನು ಕಿತ್ತು ತಿನ್ನುತ್ತಿದ್ದ ನನ್ನ ಕಿರಿಯಬ್ಬೆಗೆ ನೀವೊಮ್ಮೆ ನಿಮಿತ್ಯ ಹೇಳಿದಿರಂತೆ. ನಿಮ್ಮ ಮಾತು ಕೇಳಿ ಬಂದ ದಿವಸದಿಂದ ಅವರು ನನ್ನನ್ನು ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗಿಂತ ಹೆಚ್ಚಾಗಿ ನೋಡಿಕೊಂಡರು. ನನ್ನ ಅದೃಷ್ಟವೋ ಅಥವಾ ನಿಮ್ಮ ಆಶೀರ್ವಾದವೋ, ಆ ನಂತರದ ದಿವಸಗಳಲ್ಲಿ ನನ್ನ ತಂದೆ ಮುಟ್ಟಿದ್ದೆಲ್ಲ ಚಿನ್ನವಾಯಿತು. ಬೆಳೆದುದಕ್ಕೆ ಬೆಲೆ ಬಂತು. ಬಂದ ಭಾಗ್ಯಕ್ಕೆ ನಾನೇ ಕಾರಣ ಎಂದು ಅವರೆಲ್ಲ ತಿಳಿದರು. ಸಾವು ಬರಬಾರದೇ, ಸತ್ತ ಅಮ್ಮ ನನ್ನನ್ನು ಕೊಂಡೊಯ್ಯಬಾರೆದೇ ಎಂದು ಪ್ರತಿದಿನ ಕಣ್ಣೀರು ಕರೆಯುತ್ತಿದ್ದ ನಾನು ಮತ್ತೆ ಯಾವತ್ತೂ ಕಣ್ಣೀರಿಡದ ಹಾಗೆ ನೀವು ಮಾಡಿಬಿಟ್ಟಿರಂತೆ.
ನನ್ನ ಮದುವೆ ನಿಶ್ಚಯವಾದ ಮೇಲೆ ನಿಮ್ಮನ್ನು ಹುಡುಕಿಕೊಂಡು ಜೋಯಿಸರ ಮನೆಗೆ ಹೋದೆ. ನಿಮ್ಮ ಅಕ್ಕ ನನಗೆ ಲಭಿಸಿದ ಭಾಗ್ಯವೆಲ್ಲ ನನ್ನ ಅಮ್ಮನ ಪುಣ್ಯದ ಫಲ ಮಾತ್ರ ಎಂದರು. ನಿಮ್ಮ ಬಗ್ಗೆ ಕೇಳಿದರೆ, ನಿಮಗೆ ನಿಮಿತ್ಯ ಭವಿಷ್ಯ ಏನೂ ಗೊತ್ತಿಲ್ಲ. ಜೋಯಿಸರ ಕುರ್ಚಿಯಲ್ಲಿ ಕುಳಿತು ಸುಳ್ಳು ಹೇಳಿ ನನ್ನ ಕಿರಿಯಬ್ಬೆಯನ್ನು ಮಂಗ ಮಾಡಿಬಿಟ್ಟ ಎಂದರು. ಆದರೆ ನನಗೆ ಮಾತ್ರ ನಂಬಿಕೆ ಬರುತ್ತಿಲ್ಲ. ನನ್ನ ಪಾಲಿನ ದೇವರು ನೀವು.’
ಆಕೆ ಅಳುತ್ತ ಹೇಳಿದಳು `ನಾನು ಅಳದೇ ಹತ್ತಿರ ಹತ್ತಿರ ಹನ್ನೆರಡು ವರ್ಷಗಳೇ ಆಗಿಬಿಟ್ಟಿವೆ.’
ಇದನ್ನೆಲ್ಲ ಕುತೂಹಲದಿಂದ ಕಾಣುತ್ತ ನಿಂತ ನನ್ನ ಮಗಳನ್ನು ಹತ್ತಿರ ಕರೆದು ಅಪ್ಪಿಕೊಂಡು `ನಿಮ್ಮ ಮಗಳೇ ಅಲ್ಲವೇ?’ ಎಂದಳು.
ಮತ್ತೆ ಮೂವತ್ತು ದಾಟಿರದ ಆ ಹೆಣ್ಣುಮಗಳು, ಮುದುಕಿಯರ ಹಾಗೆ ನನ್ನ ಮಗಳ ತಲೆಯ ಮೇಲೆ ತನ್ನೆರಡು ಕೈಗಳನ್ನಿಟ್ಟು `ನಿನ್ನ ತಂದೆಯ ಸತ್ಯ ನಿನ್ನನ್ನು ಕಾಪಾಡಲಿ’ ಎಂದು ಹರಸಿದಳು. ಈಕೆಯೇನಾದರೂ ತಮಾಷೆ ಮಾಡುತ್ತಿದ್ದಾಳೆಯೋ ಎಂದು ನೋಡಿದರೆ, ಆಕೆಯ ಕಣ್ಣಾಲಿಗಳೆರಡೂ ಕಂಬನಿಯ ಕೊಳದಲ್ಲಿ ಮುಳುಗಿಹೋಗಿವೆ.
Bahala sundaravada kathe. Nanu eradu mooru bari odiddanne odide.Ammanigagi kateya print tegedu kotte. Amma saha bahala ishta patru. Namma maneyallu intahude ondu kurchi ittu namma tandeyadu, avaru a kurchiyalli rajana tara kulitu nondavara/ vyajyagalige kiviyaguttiddaddu, hage saantvanada matugalannu aadutidaddu ellavu kan mundhe bandantayitu.
ತುಂಬಾ ಆಪ್ತವಾದ ವಿಷಯ ಇರುವ ಕತೆ. ಚೆನ್ನಾಗಿದೆ