ಹಳೆ ಬೇರಲ್ಲಿ ಹೊಸ ಚಿಗುರನ್ನ ಅರಳಿಸುವ ಕಲೆಯನ್ನ ಕಲಿಬೇಕಾಗಿದೆ. ಬದುಕು ಯಾರೊಬ್ಬರ ಸೊತ್ತೂ ಅಲ್ಲ. ಅದು ನಮ್ಮ ಪರಿಪೂರ್ಣವಾದ ಹಕ್ಕು ಎಂಬ ಗಟ್ಟಿ ನಿಲುವು ಪ್ರತಿ ಹೆಣ್ಣಿನಲ್ಲೂ ನೆಲೆಗೊಂಡಾಗ ಪರಿಹಾರದ ದಾರಿಗಳು ತೆರೆದುಕೊಳ್ಳುತ್ತದೆ. ನಮ್ಮ ಮನೆಯ ತಾಯಿ ಅಜ್ಜಿಯರು ಅಕ್ಕಪಕ್ಕದ ಹೆಣ್ಣುಗಳು ಇದಕ್ಕೆ ಸಾಕ್ಷಿಯಾಗಿ ಈ ಬದುಕನ್ನು ನೀಸಿ ನಮ್ಮನ್ನು ಈಗ ಇಲ್ಲಿ ನಿಲ್ಲಿಸಿ ಹೋಗಿದ್ದಾರೆ. ಹೆಣ್ಣಿದ್ದೆಡೆ ಬದುಕು ತಂತಾನೇ ನಿಲ್ಲುತ್ತೆ ಅನ್ನುವ ಮನಃಸ್ಥಿತಿ ಪ್ರತಿಯೊಬ್ಬರ ತಿಳುವಳಿಕೆಯಲ್ಲೂ ಇದೆ. ಆದರೆ ಆ ಎಚ್ಚರಿಕೆ ಹೆಣ್ಣಿನ ನಡೆಯ ಜೊತೆಗೆ ಸುತ್ತಮುತ್ತಲಿನ ಪರಿಜ್ಞಾನದ ಜೊತೆಗೆ ನಡೆದರೆ, ಎಡವಿದರೂ ಎದ್ದುನಿಲ್ಲುವುದು ಸಾಧ್ಯ ಅಂತ ನನಗನ್ನಿಸುತ್ತದೆ.
ಹೆಚ್. ಆರ್. ಸುಜಾತಾ ತಿರುಗಾಟ ಕಥನ

 

ಮೊನ್ನೆ ಮೊನ್ನೆಯಿನ್ನೂ ತಾಯಂದಿರ ದಿನ ಆಗಿಹೋಗಿದೆ. ತಾಯಂದಿರೆಂದರೆ ಬದುಕನ್ನು ಸಲಹುವ, ಒಳಿತು ಕೆಡಕು ಎರಡನ್ನೂ ತಬ್ಬಿ ನಡೆಯುವ ಗಟ್ಟಿತನ ಎಂದೇ ನನ್ನ ಭಾವನೆ. ತಾಯ್ತನಕ್ಕೆ ಗಂಡು ಹೆಣ್ಣೆಂಬ ಭೇದವಿಲ್ಲ. ಮಹಿಳೆಗೆ ಗಂಡಿನೊಡನೆ ತನ್ನ ಬದುಕನ್ನು ಕಟ್ಟಿಕೊಳ್ಳೋದರ ಜೊತೆಗೆ ಅಸಮಾನತೆಯ ಧೋರಣೆಯನ್ನು ಸಹ ನಿಭಾಯಿಸಬೇಕಾಗಿರುತ್ತೆ. ಅವರಿವರ ಕಾಯುವ ಕಣ್ಗಳನ್ನ ತನ್ನ ಎಚ್ಚರಿಕೆಯಲ್ಲೇ ನಿವಾರಿಸಬೇಕಾಗಿರುತ್ತೆ, ಇದು ನಿಜವಾದರೂ…. ಡಿ.ಆರ್. ನಾಗರಾಜ್ ಅವರ ಮಾತನ್ನು ಗಮನಿಸೋಣ.

“ಜಾತಿಪದ್ಧತಿಯ ಕಾಠಿಣ್ಯ ಎಷ್ಟು ಹಳೆಯದೋ ಅದನ್ನು ಧಿಕ್ಕರಿಸಿ ಮಾನವ ಪ್ರೀತಿಯನ್ನು ಪ್ರತಿಷ್ಠಾಪಿಸುವ ಛಲವೂ ಅಷ್ಟೇ ಹಳೆಯದು” ಇದು ಲಿಂಗ ಧೋರಣೆಗೂ ಅನ್ವಯಿಸುವಂಥ ಮಾತಾಗಿದೆ. ಶೋಷಣೆ ಹಿಂದಿನಿಂದಲೂ ಇಲ್ಲಿವರೆಗೂ ನಡೆದುಕೊಂಡು ಬಂದದ್ದೇ ಆದರೂ ದುರ್ಬಲರ ಪಕ್ಕದಲ್ಲಿ ಅದು ಯಾವಾಗಲೂ ಹೆಜ್ಜೆ ಹಾಕುತ್ತಿರುತ್ತೆ. ಅವಲಂಬನೆಯಿದ್ದಾಗ ತನ್ನ ಪ್ರತಾಪವನ್ನ ತೋರಿಸ್ತಲೂ ಇರುತ್ತೆ. ಹೆಣ್ಣುಮಕ್ಕಳ ವಿಚಾರದಲ್ಲಂತೂ ಅದು ನಿರ್ದಯವಾಗಿರುತ್ತೆ. ಅದಕ್ಕೆ ಅವಳ ದೇಹದ ವಿನ್ಯಾಸವೂ ಕಾರಣವಾಗಿರುತ್ತೆ. ಆಕರ್ಷಣೆಯೂ ಸೇರಿರೋದರಿಂದ ಅದನ್ನು ಹೊಂದುವ ಬಯಕೆ ಕೂಡ ಇದರ ಜೊತೆಯಾಗಿರುತ್ತೆ.

ಆದರೆ, ಈ ದೇಹ ನನ್ನದೇ. ಈ ಮನಸೂ ನನ್ನದೇ ಆಗಿರುವಾಗ ಆಲೋಚನೆಯೂ ನನ್ನದೇ ಆಗಿರಬೇಕಲ್ಲ, ಅನ್ನೋದನ್ನ ಹೆಣ್ಣುಗಳು ಮರೆಯಬಾರದು. ಇದನ್ನು ಹೆಣ್ಣು ಗಂಭೀರವಾಗಿಯೇ ತೆಗೆದುಕೊಳ್ಳಬೇಕಾಗುತ್ತೆ. ಹಾಗೇ ಸಮಾಜವೂ. ಇರುವ ಬದುಕನ್ನು ಸಮಾಧಾನವಾಗಿ ಇಟ್ಟುಕೊಳ್ಳುವಂಥ ಹಾಗೂ ಅನಾಹುತಗಳಿಂದ ಬಿದ್ದ ಬದುಕನ್ನು ಮತ್ತೆ ಕಟ್ಟಿಕೊಳ್ಳುವಂಥ ಧೃಡತೆ ಹೆಣ್ಣಿಗೆ ಅಂತರ್ಗತವಾಗಿ ಬಂದಿರುವ ತಾಕತ್ತು. ಪ್ರಕೃತಿ ಕೊಟ್ಟ ಇಂಥ ಬಲವಾದ ಶಕ್ತಿಯನ್ನ ನಂಬಿ ಶೋಷಣೆ ಅನ್ನದನ್ನ ಕೇವಲ ಪದವನ್ನಾಗಿ ಉಳಿಸುವತ್ತ ನಮ್ಮ ದಾರಿಗಳನ್ನು ನಾವು ಹುಡುಕಿಕೊಳ್ಳಬೇಕಾಗಿದೆ. ತಿಳುವಳಿಕೆ ಹಾಗೂ ಹೊಸ ಬದುಕನ್ನು ಕಟ್ಟಿಕೊಳ್ಳುವ ತಾಳ್ಮೆಯ ಮನಃಸ್ಥಿತಿಯನ್ನು ಇಂದು ಬದುಕಿ ತೋರಿಸಬೇಕಾಗಿದೆ.

ಹಳೆ ಬೇರಲ್ಲಿ ಹೊಸ ಚಿಗುರನ್ನ ಅರಳಿಸುವ ಕಲೆಯನ್ನ ಕಲಿಬೇಕಾಗಿದೆ. ಬದುಕು ಯಾರೊಬ್ಬರ ಸೊತ್ತೂ ಅಲ್ಲ. ಅದು ನಮ್ಮ ಪರಿಪೂರ್ಣವಾದ ಹಕ್ಕು ಎಂಬ ಗಟ್ಟಿ ನಿಲುವು ಪ್ರತಿ ಹೆಣ್ಣಿನಲ್ಲೂ ನೆಲೆಗೊಂಡಾಗ ಪರಿಹಾರದ ದಾರಿಗಳು ತೆರೆದುಕೊಳ್ಳುತ್ತದೆ. ನಮ್ಮ ಮನೆಯ ತಾಯಿ ಅಜ್ಜಿಯರು ಅಕ್ಕಪಕ್ಕದ ಹೆಣ್ಣುಗಳು ಇದಕ್ಕೆ ಸಾಕ್ಷಿಯಾಗಿ ಈ ಬದುಕನ್ನು ನೀಸಿ ನಮ್ಮನ್ನು ಈಗ ಇಲ್ಲಿ ನಿಲ್ಲಿಸಿ ಹೋಗಿದ್ದಾರೆ. ಹೆಣ್ಣಿದ್ದೆಡೆ ಬದುಕು ತಂತಾನೇ ನಿಲ್ಲುತ್ತೆ ಅನ್ನುವ ಮನಃಸ್ಥಿತಿ ಪ್ರತಿಯೊಬ್ಬರ ತಿಳುವಳಿಕೆಯಲ್ಲೂ ಇದೆ. ಆದರೆ ಆ ಎಚ್ಚರಿಕೆ ಹೆಣ್ಣಿನ ನಡೆಯ ಜೊತೆಗೆ ಸುತ್ತಮುತ್ತಲಿನ ಪರಿಜ್ಞಾನದ ಜೊತೆಗೆ ನಡೆದರೆ, ಎಡವಿದರೂ ಎದ್ದುನಿಲ್ಲುವುದು ಸಾಧ್ಯ ಅಂತ ನನಗನ್ನಿಸುತ್ತದೆ.

ಇಲ್ಲಿ ಯಾವುದೂ ಹೊಸತಲ್ಲ.

ಇತಿಹಾಸ, ವರ್ತಮಾನದ ಹೊಸ ಕಾಲನ್ನು ಪಡೆದು ಮತ್ತೆ ಮತ್ತೆ ನಡೆಯುತ್ತಿರುತ್ತೆ. ಇದರ ನಡುವೆ ಜಾಗೃತವಾಗ್ಬೇಕಾಗೋದು ಹೆಣ್ಣುಮಕ್ಕಳ ಆದ್ಯತೆಯೇ ಆಗಿದೆ. ಹಿಂದಿನವರ ಅನುಭವದ ಅರಿವಿನ ಜೊತೆಯಲ್ಲಿ ಶಿಕ್ಷಣ ಹಾಗೂ ಅಕ್ಷರದ ಅರಿವು ಸೇರಿ ಬೆನ್ನೆಲುಬು ಇನ್ನೂ ಗಟ್ಟಿ ಆಗಬೇಕಾಗಿದೆ. ಇದು ಹೆಣ್ಣುಮಕ್ಕಳನ್ನು ಎಚ್ಚರ ತಪ್ಪದಂತೆ ತನ್ನ ಸೂಕ್ಷ್ಮತೆಯಲ್ಲೇ ಕಾಯಬೇಕಾಗಿದೆ. ಶೋಷಣೆಗೆ ಒಳಗಾಗದಂತೆ ಬಲವೂ ಆಗಬೇಕಾಗಿದೆ.

ಇದಕ್ಕೆ ಉದಾಹರಣೆಯಾಗಿ ಇಂದಿಗೂ ನಮ್ಮೂರಿನವರ ಬಾಯಲ್ಲುಳಿದ…. ನನ್ನ ಪಕ್ಕದೂರಿನಲ್ಲಿ ೧೦೦ ವರ್ಷ0ದ ಹಿಂದೆ ಬದುಕಿದ್ದ “ಶಿವಮ್ಮ” ಎಂಬ ಒಬ್ಬ ಹೆಣ್ಣುಮಗಳ ಈ ಚಿಕ್ಕ ಕಥೆಯೊಂದನ್ನು ತಮ್ಮ ಮುಂದಿಡುತ್ತಿದ್ದೇನೆ. ಆ ಕಾಲದ ಆ ಅಜ್ಜಮ್ಮರ ನಡೆ ನಮಗೆ ಇಂದಿಗೂ ಪ್ರಸ್ತುತ ಎಂದು ನನಗನ್ನಿಸುತ್ತದೆ.

ಬದುಕು ಬಿಟ್ಟುಹೋದ ಊರ ನೆನಪಿನಲ್ಲಿ ಉಳಿದುಹೋಗಿರುವ ಕಥೆ…..

ಶಿವಮ್ಮನ ಗಾಡಿ

ಊರ ದಾರೀಲಿ ನಡುಕೊಂಡು ಬರುವಾಗ ಹಣೆಗೆ ಮೂರು ವಿಭೂತಿ ಅಡ್ಡಪಟ್ಟೆ ಹೊಡೆದ ಹುಡುಗ ಸಿಕ್ದ. ಆ ಹುಡುಗನ್ನ ಕೇಳ್ದೆ.
“ಯಾವುರಪ್ಪ”?
“ಸುಗ್ಗನಳ್ಳಿ” ಅಂದ.
“ಯಾರಮನೆ” ಎಂದೆ.
“ಶಿವಮ್ಮರ ಮನೆ” ಅಂದ.

ಇರುವ ಬದುಕನ್ನು ಸಮಾಧಾನವಾಗಿ ಇಟ್ಟುಕೊಳ್ಳುವಂಥ ಹಾಗೂ ಅನಾಹುತಗಳಿಂದ ಬಿದ್ದ ಬದುಕನ್ನು ಮತ್ತೆ ಕಟ್ಟಿಕೊಳ್ಳುವಂಥ ಧೃಡತೆ ಹೆಣ್ಣಿಗೆ ಅಂತರ್ಗತವಾಗಿ ಬಂದಿರುವ ತಾಕತ್ತು. ಪ್ರಕೃತಿ ಕೊಟ್ಟ ಇಂಥ ಬಲವಾದ ಶಕ್ತಿಯನ್ನ ನಂಬಿ ಶೋಷಣೆ ಅನ್ನದನ್ನ ಕೇವಲ ಪದವನ್ನಾಗಿ ಉಳಿಸುವತ್ತ ನಮ್ಮ ದಾರಿಗಳನ್ನು ನಾವು ಹುಡುಕಿಕೊಳ್ಳಬೇಕಾಗಿದೆ.

ನಾನು ಮನೆಗೆ ಬಂದವಳೆ, ಸುಗ್ಗನಳ್ಳಿ ಶಿವಮ್ಮರ ಮನೆ ಅಂದ ಹುಡುಗನ ಸುದ್ದಿ ಹೇಳಿದ್ದೆ ತಡ ನಮ್ಮಪ್ಪನ ಬಾಯಲ್ಲಿ ಮೆಚ್ಚುಗೆ ಮಾತು ಬಂದವು.

“ಅವ್ಳು ಮಗಾ! ಗಟ್ಟಿಗಿತ್ತಿ. ಹೆಣ್ಣು ಅಂದ್ರೆ ಹೆಣ್ಣು, ಛಲಗಾತಿ” ಅಂತ ಅಪ್ಪ, ಅವ್ವ, ಅಣ್ಣ, ಅಜ್ಜಮ್ಮ ಎಲ್ರೂ ತಲಾ ಒಂದಂದ್ ಮಾತಾಡಿ ಅವಳ ವ್ಯಕ್ತಿತ್ವವನ್ನು ಗಟ್ಟಿ ಮಾಡ್ತಾ ಹೋದ್ರು. ಕಾಲ ಯಾವುದಾದರೇನು? ವ್ಯಕ್ತಿತ್ವ ದೊಡ್ಡದು ಅನ್ಸೋಹಂಗೆ ಬಾಳಾಟ ಮಾಡೋದೇ ಹೆಚ್ಚುಗಾರಿಕೆ ಅನ್ನೋ ಮಾತುಕತೆ ಶುರು ಆದ್ವು.

ಶಿವಮ್ಮ ಸುಮಾರು ೧೦೦ ವರ್ಷದ ಹಿಂದೆ ಬಾಳ್ವೆ ಮಾಡ್ದವ್ಳು. ನನ್ನಜ್ಜಯ್ಯನ ಕಾಲದೋಳು. ನನ್ನಜ್ಜಂದ್ರು ಮೂರು ಜನ ಸುತ್ತುಮುತ್ತಕ್ಕೆ ಒಳ್ಳೆ ಹೆಸರು ಇಟ್ಕೊಂಡಿದ್ರು. ನಮ್ಮೂರಿನ ಗದ್ದೆಹಳ್ಳಕ್ಕೆ ಅಂಟಿಕೊಂಡಿದ್ದ ಸುಗ್ಗನಳ್ಳಿಯ ಶಿವಮ್ಮಂಗೆ ನಮ್ಮೂರಲ್ಲಿ ಎಲ್ರೂ ಗೌರವ ಕೊಡೋರು ಹಂಗೇ ಸಲಿಗೇಲೂ ಇರೋರು.

ಶಿವಮ್ಮ ಎತ್ತರಕ್ಕಿದ್ದ ಎಣ್ಣೆಗೆಂಪಿನ ಆಳು. ಹಣೆಮೇಲೆ ಶಿವನ ವಿಭೂತಿ. ಸೊಂಟಕ್ಕೆ ಚಾರಕಾನಿ ಸೀರೆ. ಅದನ್ನ ಎತ್ತಿ, ಕಚ್ಚೆ ಹಾಕ್ಕೊಂಡು ಗೊಬ್ಬೆಸೆರಗನ್ನ ಎದೆಮೇಲೆ ಬಿಗದು ಗದ್ದೆ ಕೆಲ್ಸಕ್ಕೆ ನಿಂತಾ ಅಂದ್ರೆ, ಗದ್ದೆನೆ ನಾಚ್ಕೊಂಡು ಪೈರಾ ತಲೆ ಮೇಲೆ ಹೊತ್ಕೊಂಡು ಬೀಗಿ ಬಿದ್ದುಹೋಗದು. ಅಂಥಾ ಬೇಸಾಯ ಮಾಡೋಳು. ಮದ್ವೇನೆ ಆಗ್ದೆ ತಮ್ಮನ್ನ, ತಮ್ಮನ ಮಕ್ಕಳನ್ನ ಸಾಕಿ ಇಡೀ ಮನೇನೆ ಗಂಡಾಳಂಗೆ ಎತ್ತಿ ನಿಲ್ಲಿಸಿದ್ಲು.

“ಗೆಯ್ಮೆ ಅಂದ್ರೆ ಶಿವಮ್ಮಂದು” ಅಂತ ಹತ್ತೂರಲ್ಲಿ ಅವ್ಳು ಹೆಸರು ವಾಸಿ. ಗದ್ದೆ ಅಡೆ ಕಡಿಯಾಕೆ ಸೀರೆ ಕಚ್ಚೆ ಹಾಕ್ಕಾಂದು ನಿಂತ್ಲು ಅಂದ್ರೆ ಬೆಳಗ್ಗೆ ಬಗ್ಗಿದವಳು ಮಧ್ಯಾನ ತಲೆಯ ಮೇಲೆತ್ತೋಳು. ನೀರು ಸರಾಗವಾಗಿ ಹಾಡು ಹೇಳ್ಕೊಂಡು ಗದ್ದೆ ಕಾವಲಿಲಿ ಹಾದು ಹೋಗೋದು. ಗಂಡಾಳು ಮಾಡೋ ಕೆಲಸ ಇದು ಅನ್ನ ಹಣೆಪಟ್ಟಿನೆ ಅವಳುಗೆ ಗೊತ್ತಿರಲಿಲ್ಲ.

ನಮ್ಮಜ್ಜಯ್ಯಾರು ಮೂರು ಜನೂವೆ, ಏರಿ ಮೇಲೆ ಶಿವಮ್ಮ ಬರತಿರದ ಕಂಡೆ ಅಂದ್ರೆ “ಶಿವಮ್ಮ ಬತ್ತಾವ್ಳೆ, ಗದ್ದೇಲಿ ಅರೆ ಸರೀಯಾಗ ಹೊಡಿರೋ” ಅನ್ನೋರಂತೆ. ಸೊಂಟದ ಮೇಲೆ ಕೈ ಇಟ್ಕೊಂಡು ಬದೀನ್ ಮೇಲೆ ನಿತ್ಕೊಂಡು ನೆಟ್ಟಕಣ್ಣಿಂದಾ…. ಗದ್ದೆ ಈ ಬದಿಂದ ಆ ಬದಿನ ತನಕಾ ಕಣ್ಣಿಂದಲೇ ಅಂಗೇ ಅಳತೆ ಹಾಕೊಳಂತೆ ‘ಗೆರೆ ನೆಟ್ಟಗವ ಇಲ್ವಾ?’ ಅಂತ. ಏನ್ನಾರ…. ವಾರೆಕೋರೆ ಕಾಣತು ಅಂದ್ರೆ “ಲೇ ಮರಗೌಡ, ದೊಡ್ಡಗೌಡ, ಏ ಸೊಮೆಗೌಡ” ಅಂತ ನೇಗ್ಲುಮೇಣಿ ಮೇಲೆ ಕೈಯಿಟ್ಟು ಸರ್ಯಾಗಿ ಬ್ಯಾಸಾಯದ ಗತಿಗಳನ್ನ ತೋರಿ “ಏನ್ ಗಂಡಸರೋ ನೀವು? ಯಾವನಾದರೂ ನೇಗ್ಲು, ಗುದ್ಲಿ ಹಿಡ್ಕೊಂಡು ಬಂದು ನನ್ ಸಮಕ್ಕೆ ಗೆಯ್ರಿ ನೋಡನ” ಅಂತ ಗದರಿದ್ರೂವೆ ಎಲ್ಲಾ ಸುಮ್ಗಾಗೋರಂತೆ. ಯಾಕಂದ್ರೆ ಅವಳ ಬ್ಯಾಸಾಯ ಅಂದ್ರೆ ಅಷ್ಟು ಅಚ್ಚುಕಟ್ಟು.

ದುಡಿಮೆ ಬೆಲೆ ಗೊತ್ತಿರೋ ಅವ್ಳು ಹಂಗೇನೆ ಸೌದೆಗಾಡಿ ಹೊಡ್ಕೊಂಡೋಗಿ ಹಾಸನದ ಮಂಗಳವಾರ ಸಂತೇಲಿ ಮಾರ್ಕೊಂಡು ಬರೋಳಂತೆ. ಎಲ್ಲದ್ಕಿಂತಾ ಇನ್ನು ಹೆಚ್ಚಿನದು ಅವ್ಳ ಕಾಪಿ ಯವಾರ.

ನನ್ನಜ್ಜಯ್ಯ ಸೀತಾನದಿ ದಂಡೆವರಗೂ ದಟ್ಟಕಾಡಲ್ಲಿ ವ್ಯಾಪಾರಕ್ಕೆ ಗಾಡಿ ಕಟ್ಕೊಂಡು ಹೋಗೋದು. ಊರಲ್ಲಿ “ಗಾಡಿ ಅಯ್ಯ” ಅಂತ ಅದಕ್ಕೆ ಹೆಸರು. ಈ ಕಡೆಯಿಂದಾ ಉಪ್ಪು, ಮೆಣಸಿನಕಾಯಿ, ದವಸಧಾನ್ಯ, ಹಿಂಗೆ ಮಲೆಸೀಮೆ ಜನರ ಬೇಡಿಕೆ ಅನ್ನವ ಆಲೂರು ಪೇಟೆಯಿಂದ ತಕೊಂಡು ಹೋಗಿ… ಆ ಕಡೆಯಿಂದಾ ಕಾಫಿ, ಏಲಕ್ಕಿ, ಕಾಳುಮೆಣಸು ಹಿಂಗೆ ಕಾಡಿನ ಉತ್ಪನ್ನ ಅನ್ನೋವನ್ನ ತಂದು ಅದಲಿ ಬದಲಿ ವ್ಯಾಪಾರ ಮಾಡೋರು.

ಶಿವಮ್ಮನು ಹಂಗೇ! ಯಾರ ಹಂಗೂ ಇಲ್ದೇ ಅವಳ ಪ್ರಾಯದ ದಿನಗಳಲ್ಲಿ ದಟ್ಟಕಾನೊಳಗೆ ಗಾಡಿ ಕಟ್ಟಕಂಡು ಹೋಗಿ, ನಮ್ಮಜ್ಜಯ್ಯನ್ನ ತಲೆ ಮೇಲೆ ಹೊಡದಂಗೆ ವ್ಯಾಪಾರ ಮಾಡ್ಕೊಂಡು ಬರೋಳಂತೆ. ಅದರಲ್ಲೂ ಅಲ್ಲಿಂದಾ ಕಾಪಿಬೀಜ ಮೂಟೆಗಟ್ಲೆ ತಂದು ವ್ಯಾಪಾರ ಮಾಡೋದ್ರಲ್ಲಿ ಅವಳ್ದು ಎತ್ತಿದ ಕೈ. ಅಂಥಾ ಪ್ರಾಯದ ದಿವಸದಲ್ಲೂ ಕೂಡಾ, ಯಾರೂ ಅವಳ ಬಗ್ಗೆ ಚಕಾರ ಎತ್ತದಂಗೆ ಇದ್ದೋಳು ಅವಳು.

ಅಂಥ ಗವ್ ಅನ್ನೋ ಕರಿಕಾಡಿನ ದಾರೊಯಲ್ಲಿ ಒಂಟಿಹೆಂಗಸಿನ ಗಾಡಿ ವ್ಯಾಪಾರ ಅದೂ ಆ ಕಾಲ್ದಲ್ಲಿ ಇತ್ತೂ ಅಂದ್ರೆ! ಆಗಿನ ಜನರ ನಂಬಿಕೆ ಅನ್ನೋವು ಹೆಂಗಿದ್ದವು? ಅದರ ನಡುವೆ ಪಾಪ ಹೆಣ್ಹೆಂಗ್ಸು! ಅಂತನ್ನಸ್ಕಳದಂಗೆ ಬದುಕಿದ ಆ ಎದೆಗಾರಿಕೆಯ ಹೆಣ್ತನ ಹೇಗಿತ್ತು?

ನಮ್ಮಜ್ಜಮ್ಮ ಹೇಳ್ತಿದ್ದ ಮಾತು “ಗಾಡಿ ಮೇಲೆ ನಿಂತ್ಕೊಂಡು ಶಿವಮ್ಮ ಎತ್ತಿನ ಹಗ್ಗಾನೂ, ಬಾರುಕೋಲನೂ ಹಿಡ್ಕಂಡು ಗಾಡಿ ಹೊಡ್ಕೊಂಡು ಬರ್ತಿದ್ರೆ, ದೇವರು ಬಂದಂಗ್ ಆಗೋದು. ನಾವು ಗಾಡಿ ಕಣ್ಣಮರೆ ಆಗೋವರಗೂ ಕೈ ಅಡ್ಡ ಇಟ್ಕಂಡು ನೋಡತಿದ್ವಿ.”

ನನ್ನ ದೊಡ್ಡಣ್ಣ ನೋಡಿದ್ದು ಆ ಶಿವಮ್ಮಜ್ಜಿಯನ್ನ ಹಿಂಗೆ “ಅಜ್ಜಯ್ಯನ ಕುಟೆ ಮಾತಾಡಕಂದು ಕುಕ್ಕರಗಾಲಲ್ಲಿ ಕುಂತ್ಕಂದು ಬೀಡಿ ಧಮ್ಮ ಎಂಗೆ ಎಳಯಾದು ಗೊತ್ತಾ? ಆವಮ್ಮ. ನ್ಯಾಯ ತೀರ್ಮಾನ ಮಾಡಕ್ಕೂ ಬರದು ನಮ್ಮೂರಿಗೆ”

ನನ್ನವ್ವ ಹೇಳೋ ಮಾತಿಂದ ಶಿವಮ್ಮನ ಮಾತು ಮುಗಿಯುತ್ತೆ. “ಒಳ್ಳೆ ಲಕ್ಷ್ಮಣವಾದ ಹೆಂಗಸು. ಆ ಹಿರೆ ಜೀವದ ಜೊತೆ ಕುಂತು ಮಾತಾಡುವೆ ಕಣಮಗ ನಾನೂವೆ. ಮಾತು ಏನು ಕಡಕ್ಕಾಗಿರವು ಅಂತೀಯ. ಒಂದಪ ಮಾತು ಆಡುದ ಮ್ಯಾಲೆ ಮುಗೀತು, ಯಾವ ಗಂಡಸೂ ಊರೊಳಗೆ ಉಸ್ರು ಬುಡಂಗೆ ಇರ್ನಿಲ್ಲ”

ನೂರು ವರುಷ ಉಳ್ಳಹೋದ್ರೂವೆ ಸುತ್ತಮುತ್ತಲ ಜನರ ಬಾಯಲ್ಲಿ ಇರೋ ಶಿವಮ್ಮಾರೇ, ನಿಮ್ಗೆ ಹೆಣ್ಮಕ್ಕಳ ನೂರು ಉದ್ಧಂಡ ನಮಸ್ಕಾರ ಕಣಿ. ಬದುಕಿ ಅಳಿದು ಹೋದ ಅವ್ವಂದಿರೇ…ನಿಮಗೆ ನಮ್ಮ ನೂರು ನಮಸ್ಕಾರಗಳು.

ಇಂದು ತವರಿನಲ್ಲಿ ಅಜ್ಜಿ, ಅವ್ವ, ಅಪ್ಪ, ಅಣ್ಣ ಎಲ್ಲರೂ ತೀರಿ ಹೋಗಿದ್ದಾರೆ. ತವರಿನ ಆಧಾರ ಸ್ಥಂಭವಾಗಿದ್ದು ತವರಿನ ತೋಟತುಡಿಕೆ ಹಾಗೂ ಮನೆಯ ಗೆಲುವಾಗಿದ್ದ ಕೊನೆಯ ಅಣ್ಣನೂ ಹೋದ ವರುಷ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾನೆ. ಅವನ ವರ್ಷದ ಕಾರ್ಯಕ್ಕೆ ಮೊನ್ನೆ ಹೋದಾಗ ಅತ್ತಿಗೆ, ಅಣ್ಣನ ಹೆಗಲನ್ನು ಕಳೆದುಕೊಂಡು ಸೊರಗಿದ್ದರೂ ಮನೆ ಮಠ ತೋಟ ತುಡಿಕೆಯನ್ನ ನಿಭಾಯಿಸಿಕೊಂಡು ಹೋಗುತ್ತಿರುವುದನ್ನು ಕಂಡಾಗ ಕೊಂಚ ಸಮಾಧಾನ. ಅವನೆರಡೂ ಹೆಣ್ಣುಮಕ್ಕಳು, ಅಳಿಯ ಅವಳ ಹೆಗಲಾಗಿದ್ದು ಸಹ ನಮ್ಮ ನಿಟ್ಟುಸಿರನ್ನು ಹೊರ ಕೆಡವಿ ಹಗುರಾಗಿಸಿತು.

ಇಡೀ ಕುಟುಂಬದೊಂದಿಗೆ ನಮ್ಮನ್ನು ಬಿಟ್ಟು ನಡೆದುಹೋದ ಹಿರಿಯರೊಂದಿಗೆ ಅಣ್ಣನಿಗೆ ಧೂಪ ಹಾಕುವಾಗ ಅವರೆಲ್ಲರನ್ನು ಕಳೆದುಕೊಂಡ ನೋವಲ್ಲೂ ಸಮಾಧಾನವೊಂದು ಇಂದು ಸುಳಿದು ಹೋಗಿದ್ದು ಸುಳ್ಳಾಗಿರಲಿಲ್ಲ. ಅವನಿಲ್ಲದೆಯೂ ತವರು ಮನೆ ಅವನ ಕಳ್ಳುಬಳ್ಳಿಯನ್ನು ಒಂದಾಗಿಸಿ ಎಲ್ಲವನ್ನೂ ಎಂದಿನಂತೆ ನಿಭಾಯಿಸಿದ್ದು ಈ ಹೆಣ್ಣುಮಕ್ಕಳ ಧೃಢತೆಯಲ್ಲದೆ ಮತ್ತೇನು?

ಕಾಲದ ನಡೆಯ ಜೊತೆಗೆ ನಾವು ನಮ್ಮ ಕಾಲಿನ ಹೆಜ್ಜೆಗಳನ್ನು ಧೃಢವಾಗಿ ಇಡುತ್ತಾ ಸಾಗಲೇಬೇಕು. ಈಗ ಇಂಥ ಹೆಣ್ಣುಮಕ್ಕಳು ಮನೆಮನೆಯಲ್ಲಿ ರೂಪುಗೊಳ್ಳುತ್ತಿದ್ದಾರೆ. ರೂಪುಗೊಳ್ಳಲಿ ಅನ್ನೋ ನಂಬಿಕೆ ನನ್ನದು.