ಅಮ್ಮಾ ಅಂದರೆ…

ಅಮ್ಮಾ ಅಂದರೆ
ಬಾರಿಲ್ಲದ ಲೇಡೀಸ್ ಸೈಕಲ್ಲಿನ ಮೇಲೆ
ಸೀರೆಯಲ್ಲಿ ಕುಳಿತ ಪ್ರತಿಮೆ!
ಹಿಂದಿನ ಕ್ಯಾರಿಯರಿನ ಮೇಲೆ
ಅವಳ ಸೊಂಟ ಹಿಡಿದು ಕೂತ
ನಾನು

ಮಾರ್ಕೆಟ್ ಯಾರ್ಡಿನ
ಮಲೆಯಾಳಿ ಕಾಕಾನ ಅಂಗಡಿಯಲ್ಲಿ
ದಿನಸಿ ಖರೀದಿಸಿ
ಕ್ಯಾರಿಯರಿನಲ್ಲಿ ಪೇರಿಸಿ
ಸೈಕಲ್ಲನ್ನು ತಳ್ಳುವಾಗ
ನಾವಿಬ್ಬರೂ ಒಂದೇ ತುಕಡಿಯ
ಸೈನಿಕರು!

ದೂರದ ಸೀಮೆಯಿಂದ
ಹೊಡೆಸಿಕೊಂಡು ಬಂದ
ನಮ್ಮ ಮನೆಯ ಕರಿ ಎಮ್ಮೆಗೆ
ಬೆಳ್ಳಂಬೆಳಗು ಮುಸುರೆ ಇಕ್ಕಿ
ಹಾಲು ಕರೆಯುವ ಅವಳು
ಅನತಿ ದೂರದ ಹೈವೆ ಹೊಟೇಲಿಗೆ
ಮನೆವಾರ್ತೆ ಹಾಲು ಸುರಿಯುವ ನಾನು
ನಮ್ಮ ಬಡಾವಣೆಯ
ಕಸುಬುದಾರರು!

ಮೂವತ್ತು ವರ್ಷಗಳ ಹಿಂದೆ
ಕೊಂಡ ಗೊಜ್ಜು ನೆಲಕ್ಕೆ
ಒಂದೈವತ್ತು ತೊಗರಿ ಬೀಜ ಬಿತ್ತಿ
ಹುಲುಸಾಗಿ ಒಂದು ಅರ್ಧ ಚೀಲ
ತೊಗರಿ ಬೆಳೆದ ನಾವು
ಸಹಜ ಕೃಷಿಕರು!

ಮನೆಯ ಸುತ್ತಲಿನ ಮಂದಿ
ನಮ್ಮ ಭೂಮಿಯ ಹಿರಿಯಲು ಬಂದಾಗ
ಮಚ್ಚು ಹಿಡಿದ ಅವಳು
ಅವಳ ಬಲಗೈ ನಾನು

ಊರಿನ ಮೈನೆರೆದ ನಮ್ಮ ಪೈಕದ ಹುಡುಗಿಯರಿಗೆ
ಒಳ್ಳೆಯ ಗಂಡು ಹುಡುಕುತ್ತಾ ಅವಳು
ಅವಳ ಸೀರೆ ಸೆರಗಲ್ಲಿ ನಾನು!

ಎಸ್ಸೆಸೆಲ್ಸಿಗೆ ಎಂಬತ್ತು ಅಂಕ ಗಳಿಸಿದಾಗ
ನೀಲಿ ಬಣ್ಣದ ಪಟ್ಟಾಪಟ್ಟಿ ಅಂಗಿ
ಕಪ್ಪು ಬಣ್ಣದ ಪ್ಯಾಂಟನ್ನು ಹೊಲಿಸಿ
ಮುಂದೆ ನಾನು ಡಾಕ್ಟರಾಗಬೇಕೆಂದು ಹೇಳಿದ ಅವಳು
ಆಗದೆ ಹೋದ ನಾನು!