“ಆವಾಗ ಏನ್ರಿ ಒಂದ ಆರ, ಎಂಟ ಕೋಡ ನೀರ ತುಂಬಿದರ ನಮಗ ಒಂದ ದಿವಸಕ್ಕ ರಗಡ ಆಗ್ತಿತ್ತ ಖರೆ ಆದರ ಅಷ್ಟ ತುಂಬಲಿಕ್ಕೆ ನಮಗ ರಗಡ ಆಗ್ತಿತ್ತ. ಅದರಾಗ ಆ ಬೋರ್ ಹೊಡದ ಹೊಡದ ನಮ್ಮ ಕೈಯಂತು ಸೇದತಿದ್ವು. ನಂಗಂತು ಜೀವ ಸಾಕ ಸಾಕಗಿ ಹೋಗ್ತಿತ್ತ. ಅಲ್ಲಾ ನಮ್ಮಪ್ಪಗೂ ಹಂಗ ಅನಸ್ತಿತ್ತ ಖರೆ ಆದರ ಏನ ಮಾಡಬೇಕ ಅವಂದ ಸಂಸಾರ ಅಂವಾ ಮಾಡಬೇಕ. ನಾ ಅಂತೂ ಬೋರ ಹೋಡಿತಿದ್ನೋ ಅದಕ್ಕ ಜೋತ ಬಿಳ್ತಿದ್ನೋ ಆ ದೇವರಿಗೆ ಗೊತ್ತ.” ಪ್ರಶಾಂತ್ ಆಡೂರ ಪ್ರಶಾಂತ್ ಆಡೂರ ಬರೆಯುವ ಹುಬ್ಬಳ್ಳಿ ಪ್ರಹಸನ.

 

ನಿಮಗ ಹಿಂಗ ನಳಾ ಬಂತ ನಳಾ ಅಂತ ಹೆಡ್ಡಿಂಗ್ ನೋಡಿ ಇದೇನಪಾ ಹೆಡ್ಡಿಂಗ್ ಅಂತ ಅನಸಬಹುದು; ಆದರ ಒಂದ ಇಪ್ಪತ್ತ ಇಪ್ಪತ್ತೈದ ವರ್ಷದ ಹಿಂದ ನಮಗ ನಳಾ ಬರೋದು ಅಂದರ ಅವತ್ತಿನ breaking news ಇದ್ದಂಗ ಇತ್ತ. ಈಗೀನ tv ಚಾನೆಲದ್ breaking news ಅಲ್ಲಾ ಮತ್ತ… ಯಾಕಂದರ ಇವತ್ತ tv ಒಳಗ ದಿವಸಕ್ಕ ಹತ್ತ breaking news ಬರ್ತಾವ. ಹಂಗ ನಮ್ಮ ಹುಬ್ಬಳ್ಳಿ ಧಾರವಾಡದೊಳಗ ನಳಾ ಇವತ್ತೂ ಹತ್ತ- ಹನ್ನೇರಡ ದಿವಸಕ್ಕೊಮ್ಮೆ ಬರ್ತಾವ ಆ ಮಾತ ಬ್ಯಾರೆ, ಇನ್ನ ಈ ಬ್ಯಾಸಗಿ ಒಳಗ ಅಂತೂ ಹೇಳಂಗಿಲ್ಲಾ…. ಹಿಂಗಾಗಿ ಇವತ್ತಿಗೂ ನಮ್ಮ ಮನ್ಯಾಗ ನಳಾ ಬಂತು ಅಂದರ ಅದು ನಮ್ಮವ್ವಾ, ನನ್ನ ಹೆಂಡತಿಗೆ breaking news ಇದ್ದಂಗನ.

ಅಲ್ಲಾ, ಆವಾಗ ನಳಾ ಬರೋದ ಇಷ್ಟ ಅಪರೂಪ ಇತ್ತಲಾ, ನಮ್ಮವ್ವಂತೂ ನಳಾ ಬರ್ತದ, ನಳಾ ಬಂತು ಅಂದರ ಮುಗದ ಹೋತ, ಏನ ಅಗದಿ ಮಗಳ ಮದ್ವಿ ಗೊತ್ತಾದೊರಗತೆ ಕುಣಿತಿದ್ಲು. ಅಲ್ಲಾ ಆವಾಗಿನ ಪರಿಸ್ಥಿತಿನ ಹಂಗ ಇರ್ತಿತ್ತ ಬಿಡ್ರಿ.. ನಮ್ಮಜ್ಜಿ ಸಾಯಿ ಬೇಕಾರ ಹುಬ್ಬಳ್ಳ್ಯಾಗ ಸತ್ತರ ನೀರ ಬಿಡಲಿಕ್ಕೂ ನಳಾ ಬರಂಗಿಲ್ಲಾ, ಹತ್ತ ದಿವಸ ಕಾಯಿಬೇಕು ಅಂತ ಶಿರ್ಶಿ ಕಾಕಾನ ಮನಿಗೆ ಹೋಗಿ ಅಲ್ಲೆ ಪಿತ್ರಾರ್ಜಿತ ಭಾವಿ ಅದ ಅಂತ ಆ ಭಾವಿ ನೀರ ಬಿಡಸಗೊಂಡ್ ಸತ್ತಿದ್ಲು …. ಇನ್ನ ಆವಾಗ ಹಂತಾ ಪರಿಸ್ಥಿತಿ ಇತ್ತು ಅಂದಮ್ಯಾಲೆ ನಮ್ಮವ್ವನ್ವು ನಳಾ ಬಂದಾಗೊಮ್ಮೆ ಇಷ್ಟ ಮಾಡೊ ಕೆಲಸ ಅಂತ ಒಂದಿಷ್ಟ ಇರ್ತಿದ್ವು. ನಳಾ ಬರೋ ದಿವಸ ನಮ್ಮವ್ವಂತು
“ರ್ರಿ.. ಇವತ್ತ ನಳಾ ಬರ್ತದ… ಆ ಪ್ಯಾಂಟ ಶರ್ಟ ಬಿಟ್ಟ ಬಿಡ್ರಿ… ಉಳದದ್ದ ಅರಬಿ ಜೊತಿ ಅವನ್ನು ಒಗದ ಹಾಕ್ತೇನಿ” ಅಂತ ಅನ್ನೋದ ನಮ್ಮಪ್ಪ “ಏ, ನಿನ್ನೇರ ಒಗದ್ದ ಹಾಕ್ಕೊಂಡೇನಿ” ಅಂತ ಅನ್ನೋದ ಕಡಿಕೆ ನಮ್ಮವ್ವ ತಲಿಕೆಟ್ಟ ನಳ ಬರೊ ಪುರಸತ್ತ ಇಲ್ಲದ ನಮ್ಮಪ್ಪ ಹಾಕ್ಕೊಂಡಿದ್ದ ಪ್ಯಾಂಟ್ ಶರ್ಟ ಬಿಚ್ಚಿ ಉಳದದ್ದ ಅರಬಿ ಜೊತಿ ತೊಯಿಸಿ ಬಿಡ್ತಿದ್ಲು. ಹಂಗ ಅಂವಾ ಏನರ ಅರಬಿ ತಗಿಲಿಕ್ಕೆ ಮಿಜಿ ಮಿಜಿ ಮಾಡಿದರ ಅವನ್ನ ಹಿಡದ ಅರಬಿ ಸಹಿತ ಬಕೀಟನಾಗ ಹಾಕಿ ತೊಯಿಸಿದರು ತೊಯಿಸಿದ್ಲ… ಇನ್ನ ನಳಾ ಬಂದಾಗೊಮ್ಮೆ ಹಾಸಗಿ- ದುಬಟಿ ಒಗೆಯೋದು, ಜಮಖಾನ- ಚಾದರ ಒಗೆಯೋದು ಇವೆಲ್ಲಾ ನಮ್ಮವ್ವಗ ಕಾಮನ್. ಇನ್ನ ನಳಾ ಬರ್ತದ ಅಂದರ ಸಾಕ, ಹಿತ್ತಾಳಿ- ತಾಮ್ರದ ಕೊಡಾ, ಹಂಡೆ ಇವಕ್ಕೆಲ್ಲಾ ಹುಣಸಿಹಣ್ಣ- ರಂಗೋಲಿ ಹಚ್ಚಿ ತಿಕ್ಕಿ, ನನಗ ನನ್ನ ತಂಗಿಗೆ ತಲಿಗೆ ಇಷ್ಟ ಎಣ್ಣಿ ಬಡದ ಆ ಕೊಡಾ ತಂಬಗಿ ಜೊತಿ ನಮ್ಮನ್ನು ಇಟಗೊಂಡ/ಕರಕೊಂಡ ನಳದ ಮುಂದ ಕೂತ ಬಿಡ್ತಿದ್ಲು.. ಹಂಗ ನಳಾ ಬರೋದರಾಗ ಅವ ಒಣಗಿ ಕಟಕ್ ಆಗಿರ್ತಿದ್ದವು, ನಾವಿಬ್ಬರು ಎಣ್ಣಿ ಒಳಗ ನೆಂದ ಹೋಗಿರ್ತಿದ್ವಿ ಆ ಮಾತ ಬ್ಯಾರೆ. ಮುಂದ ನಳಾ ಬರೋದ ತಡಾ
“ನಳಾ ಬಂತು ಸ್ವಚ್ಛಾಗಿ ಮೈಕೈ ತಿಕ್ಕೊಂಡ ಯರಕೊಂಡ ಸ್ನಾನ ಮಾಡ್ರಿ ಇಬ್ಬರು” ಅಂತ ಒದರೋಕಿ, ಆಜು ಬಾಜುದವರ ಅಕಿ ಮಾತ ಕೇಳಿದರ ನಾವೇನ ದಿವಸಾ ಸ್ವಚ್ಛ ಸ್ನಾನ ಮಾಡಂಗಿಲ್ಲಾ ಅಂತ ತಿಳ್ಕೋಬೇಕ. ಅಲ್ಲಾ, ಹಂಗ ಉಳದದ್ದ ದಿವಸ ಅರ್ಧಾ ಬಕೀಟ್ ನೀರ ತೊಡಿಕೊಟ್ಟ
“ಅಷ್ಟರಾಗ ಮುಗಸರಿ… ಹೂಯ್ಯಿ ಅಂತ ಬಚ್ಚಲಕ್ಕ ನೀರ ಹೋಯ್ದರ ಏನ ಬಂತ… ಹತ್ತ ದಿವಸಕ್ಕೊಮ್ಮೆ ನಳಾ ಬರ್ತದ… ಎರಡ ತಂಬಗಿ ನೀರ ಹಾಕ್ಕೊಂಡ ಸಬಕಾರ ಹಚಗೊಂಡ ಮೂರ ತಂಬಗಿ ನೀರ ಹಾಕ್ಕೊಂಡ ಹೊರಗ ಬರ್ರಿ” ಅಂತ ಹೇಳೋಕಿನೂ ಅಕಿನ.

ಇನ್ನ ನಳಾ ಬಂದಾಗೊಮ್ಮೆ ಹಾಸಗಿ- ದುಬಟಿ ಒಗೆಯೋದು, ಜಮಖಾನ- ಚಾದರ ಒಗೆಯೋದು ಇವೆಲ್ಲಾ ನಮ್ಮವ್ವಗ ಕಾಮನ್. ಇನ್ನ ನಳಾ ಬರ್ತದ ಅಂದರ ಸಾಕ, ಹಿತ್ತಾಳಿ- ತಾಮ್ರದ ಕೊಡಾ, ಹಂಡೆ ಇವಕ್ಕೆಲ್ಲಾ ಹುಣಸಿಹಣ್ಣ- ರಂಗೋಲಿ ಹಚ್ಚಿ ತಿಕ್ಕಿ, ನನಗ ನನ್ನ ತಂಗಿಗೆ ತಲಿಗೆ ಇಷ್ಟ ಎಣ್ಣಿ ಬಡದ ಆ ಕೊಡಾ ತಂಬಗಿ ಜೊತಿ ನಮ್ಮನ್ನು ಇಟಗೊಂಡ/ಕರಕೊಂಡ ನಳದ ಮುಂದ ಕೂತ ಬಿಡ್ತಿದ್ಲು.. ಹಂಗ ನಳಾ ಬರೋದರಾಗ ಅವ ಒಣಗಿ ಕಟಕ್ ಆಗಿರ್ತಿದ್ದವು, ನಾವಿಬ್ಬರು ಎಣ್ಣಿ ಒಳಗ ನೆಂದ ಹೋಗಿರ್ತಿದ್ವಿ ಆ ಮಾತ ಬ್ಯಾರೆ.

ಇನ್ನ ನಳಾ ಬಂದಾಗೊಮ್ಮೆ ದೇವರನ ಬ್ಯಾರೆ ತೊಳೆಯೋದು. ದೇವರಿಗೂ ಅವತ್ತ ಅಭ್ಯಂಗ ಸ್ನಾನ.. ನಳಾ ಬಂದಾಗ ಇಷ್ಟsನ ಮತ್ತ. ಹಿಂಗ ಒಂದs ಎರಡs… ನಮ್ಮವ್ವನ್ವೂ ನೂರಾ ಎಂಟ ಕೆಲಸ ನಳಾ ಬಂದ ದಿವಸ ಇರ್ತಿದ್ವು.
ಅಲ್ಲಾ ಆವಾಗ ನಮ್ಮ ಹುಬ್ಬಳ್ಳಿ-ಧಾರವಾಡ ನಳಾ ಕರೆಕ್ಟ ಪಾಳೆ ಪ್ರಕಾರ ಬಂದರ ಹತ್ತ- ಹನ್ನೆರಡ ದಿವಸಕ್ಕ ಒಂದ ಸಲಾ ಬರ್ತಿತ್ತ. ನಾವ ಆವಾಗ ಜೋಳದ ಓಣಿ ಒಳಗ ಒಂದ ಚಾಳದಾಗ ಇದ್ವಿ, ನಾಲ್ಕ ಮನಿ ನಡಕ ಒಂದ ನಳಾ ಇತ್ತ. ನಮ್ಮ ಚಾಳ ಒಳಗ ಪುಣ್ಯಾಕ್ಕ ನಂಬದ ಒಂದ ಬ್ರಾಹ್ಮರ ಮನಿ, ಹಿಂಗಾಗಿ ಮಡಿ-ಮೈಲಗಿ ಏನ ಇದ್ದರು ನಂಬದೊಂದ. ನಮ್ಮ ಚಾಳ ನಳದ್ದ ನೀರ ಹತ್ತ ದಿವಸ ಗಟ್ಟಲೇ ನಮಗ ಸಾಲ್ತಿದ್ದಿಲ್ಲಾ. ಮ್ಯಾಲೆ ಆವಾಗ ನಮ್ಮ ಕಡೆ ನೀರ ತುಂಬಿ ಇಟಗೊಳಿಕ್ಕೆ ಬ್ಯಾರೇಲ್, ಸಿಂಟೇಕ್ಸ್ ಇದ್ದಿದ್ದಿಲ್ಲಾ. ಅಲ್ಲಾ ಮೂರ ಸಾವಿರ ಲಿಟರ್ ಸಿಂಟೆಕ್ಸ್ ಸೈಜಿಂದ ನಮ್ಮ ಅಡಗಿ ಮನಿ ಇತ್ತ ಇನ್ನ ಹಂತಾದರಾಗ ಡ್ರಮ್, ಬ್ಯಾರೇಲ್ ಎಲ್ಲೆ ಇಡ್ತೀರಿ.

ಇನ್ನ ನಳಾ ಬಂದ ನಾಲ್ಕ ದಿವಸಕ್ಕ ನಮ್ಮ ಮನಿ ನೀರ ಖಾಲಿ ಆಗ್ತಿತ್ತ, ನೀರ ಖಾಲಿ ಆಗೋದ ತಡಾ ನಮ್ಮವ್ವಂದ ಹೊಸಾ ಕಿರಿಕಿರಿ ಶುರು ಆಗ್ತಿತ್ತ, ಅಕಿ ನನಗ ನಮ್ಮಪ್ಪಗ ಮುಂಜಾನೆ ನಾಲ್ಕ ಘಂಟೆಕ್ಕ ಎಬಿಸಿ
“ರ್ರಿ…. ನಡಿರಿ ಬೋರ್ ನೀರ ತರಬೇಕ, ಕುಕ್ಕರ ಇಡಲಿಕ್ಕೆ ನೀರಿಲ್ಲಾ” ಅಂತ ಜೀವಾ ತಿನ್ನಲಿಕ್ಕೆ ಶುರು ಮಾಡ್ತಿದ್ಲು. ನಮಗ ಹತ್ತರ ಇರೋ ಬೋರ್ ಅಂದರ ಬಾಜು ಬೆಂಡಿಗೇರಿ ಓಣಿ ಬೋರ್. ಅದು ಒಂದ ಆರನೂರ ಏಳನೂರ ಮಿಟರ್ ದೂರ ಇತ್ತ. ನಾ ನಮ್ಮವ್ವನ ಕಾಟಕ್ಕ ಥಂಡ್ಯಾಗ ನಡಗಕೋತ ಸ್ಟೀಲಿನ ಸಣ್ಣ ಕೊಡ, ನಮ್ಮಪ್ಪ ಯಾಕರ ಲಗ್ನ ಮಾಡ್ಕೊಂಡ ಸಂಸಾರ ಶುರು ಮಾಡಿದೇಪಾ ಅಂತ ತನ್ನಷ್ಟಕ್ಕ ತಾನ ಶಪಿಸಿಗೋತ ತಾಮ್ರದ್ದ ಇಲ್ಲಾ ಹಿತ್ತಾಳಿ ಕೊಡ ಹೊತಗೊಂಡ ಬೋರಿಗೆ ಹೋಗ್ತಿದ್ವಿ. ಆವಾಗಿನ್ನೂ ಪ್ಲಾಸ್ಟಿಕ್ ಕೊಡ ಇದ್ದಿದ್ದಿಲ್ಲಾ ಮ್ಯಾಲೆ ನಮ್ಮವ್ವಗ ಯಾರೋ ಪ್ಲಾಸ್ಟಿಕ್ ಕೊಡದಾಗಿನ ನೀರ ಕುಡಿಲಿಕ್ಕೆ ದೂರ ಹೋತ ತೊಳ್ಕೋಳಿಕ್ಕೂ ಉಪಯೋಗ ಮಾಡಬಾರದು ಅಂತ ಬ್ಯಾರೆ ಹೇಳಿ ಬಿಟ್ಟಿದ್ದರು. ಹಿಂಗಾಗಿ ನಾವ ನೀರ ತುಂಬೊದ ಸ್ಟೀಲ್, ಹಿತ್ತಾಳಿ ಇಲ್ಲಾ ತಾಮ್ರದ ಕೊಡದಾಗ. ಆ ಕೋಡಾನರ ಹಿಂತಾ ವಜ್ಜಾ ಇದ್ವು ಹೇಳ್ತೇನಿ.. ಅಲ್ಲಾ ನಾ ಹೇಳಲಿಕತ್ತಿದ್ದ ಖಾಲಿ ಕೊಡಾನ ಮತ್ತ… ಯಾ ಕಾಲದ್ವೊ ಏನೋ ಸುಡಗಾಡ ಪಿತ್ರಾರ್ಜಿತ ಆಸ್ಥಿ ಅಂತ ನಮ್ಮ ಮನ್ಯಾಗ ಇದ್ವು. ನಂಗಂತೂ ಆ ಖಾಲಿ ಕೋಡಾನ ಎತ್ತಲಿಕ್ಕೆ ಆಗತಿದ್ದಿಲ್ಲಾ ಇನ್ನ ತುಂಬಿದ ಕೊಡಾ ಮುಗದ ಹೋತ.. ಆಮ್ಯಾಲೆ ನಮ್ಮ ಮನ್ಯಾಗ ಎಲ್ಲಾರೂ ಕಡ್ಡಿ ಪೈಲ್ವಾನರ ಹಿಂಗಾಗಿ ಬೋರ್ ನಿಂದ ನೀರ ತರೋದ ಅಂದರ ಸಾಕ ಸಾಕಾಗಿ ಹೋಗ್ತಿತ್ತು. ಆವಾಗ ಈಗಿನಂಗ ಬಿಸ್ಲೇರಿ ೨೦ ಲಿಟರ್ ಕ್ಯಾನ ಬ್ಯಾರೆ ಸಿಗ್ತಿದ್ದಿಲ್ಲಾ. ಅಲ್ಲಾ ಆವಾಗ ನೀರ ಮಾರಲಿಕ್ಕೆ ಸಿಗತದ ಅಂದರ ಬಾಯಿ ತಗದ ಕೇಳ್ತಿದ್ವಿ ಆ ಮಾತ ಬ್ಯಾರೆ ಹಿಂಗಾಗಿ ನಳಾ ಬರಲಿಲ್ಲಾ ಅಂದರ ಆ ಬೋರ ನೀರ ಗತಿ.

ನಡಿ.. ಇನ್ನ ನೀರ ಖಾಲಿ ಆಗೇದ ಅಂತ ನಮ್ಮವ್ವ ಅಂದ ಮ್ಯಾಲೆ ಬಿಡಲಿಕ್ಕೆ ಬರಂಗಿಲ್ಲಾ. ಮನ್ಯಾಗ ನಮ್ಮ ತಂಗಿನ್ನ ಎಬಿಸಿ ಬಾಗಲ ಕಡೆ ಲಕ್ಷ ಇರಲಿ ಅಂತ ಹೇಳಿ ಮೂರು ಮಂದಿ ನೀರ ತರಲಿಕ್ಕೆ ಬೋರಗೆ ಹೋಗ್ತಿದ್ವಿ.. ಆವಾಗ ಏನ್ರಿ ಒಂದ ಆರ- ಎಂಟ ಕೋಡ ನೀರ ತುಂಬಿದರ ನಮಗ ಒಂದ ದಿವಸಕ್ಕ ರಗಡ ಆಗ್ತಿತ್ತ ಖರೆ ಆದರ ಅಷ್ಟ ತುಂಬಲಿಕ್ಕೆ ನಮಗ ರಗಡ ಆಗ್ತಿತ್ತ. ಅದರಾಗ ಆ ಬೋರ್ ಹೊಡದ ಹೊಡದ ನಮ್ಮ ಕೈಯಂತು ಸೇದತಿದ್ವು. ನಂಗಂತು ಜೀವ ಸಾಕ ಸಾಕಗಿ ಹೋಗ್ತಿತ್ತ. ಅಲ್ಲಾ ನಮ್ಮಪ್ಪಗೂ ಹಂಗ ಅನಸ್ತಿತ್ತ ಖರೆ ಆದರ ಏನ ಮಾಡಬೇಕ ಅವಂದ ಸಂಸಾರ ಅಂವಾ ಮಾಡಬೇಕ. ಅಂವಾ ಮಾಡಿದ್ದ ತಪ್ಪಿಗೆ ನಾನೂ ಬೋರ್ ಹೊಡಿಬೇಕಾಗ್ತಿತ್ತ. ನಾ ಅಂತೂ ಬೋರ ಹೋಡಿತಿದ್ನೋ ಅದಕ್ಕ ಜೋತ ಬಿಳ್ತಿದ್ನೋ ಆ ದೇವರಿಗೆ ಗೊತ್ತ. ಹಿಂಗ ಕಷ್ಟ ಪಟ್ಟ ನೀರ ತುಂಬಿ ತುಂಬಿ ಜೀವನ ಮಾಡಿ ಸಂಸಾರ ಮಾಡ್ತಿದ್ದವಿ ಆವಾಗ. ಇದ ನಾ ಹೇಳೋದ ನಾರ್ಮಲ್ ಡೇಜ್ ಒಳಗಿನ ಕಥಿ.. ಇನ್ನ ಮುಂದ ಶ್ರಾವಣ ಮಾಸದಾಗಿನ ಕಥಿ ಕೇಳ್ರಿ….

ನಾವ ನೀರ ತುಂಬೊದ ಸ್ಟೀಲ್, ಹಿತ್ತಾಳಿ ಇಲ್ಲಾ ತಾಮ್ರದ ಕೊಡದಾಗ. ಆ ಕೋಡಾನರ ಹಿಂತಾ ವಜ್ಜಾ ಇದ್ವು ಹೇಳ್ತೇನಿ.. ಅಲ್ಲಾ ನಾ ಹೇಳಲಿಕತ್ತಿದ್ದ ಖಾಲಿ ಕೊಡಾನ ಮತ್ತ… ಯಾ ಕಾಲದ್ವೊ ಏನೋ ಸುಡಗಾಡ ಪಿತ್ರಾರ್ಜಿತ ಆಸ್ಥಿ ಅಂತ ನಮ್ಮ ಮನ್ಯಾಗ ಇದ್ವು. ನಂಗಂತೂ ಆ ಖಾಲಿ ಕೋಡಾನ ಎತ್ತಲಿಕ್ಕೆ ಆಗತಿದ್ದಿಲ್ಲಾ ಇನ್ನ ತುಂಬಿದ ಕೊಡಾ ಮುಗದ ಹೋತ.. ಆಮ್ಯಾಲೆ ನಮ್ಮ ಮನ್ಯಾಗ ಎಲ್ಲಾರೂ ಕಡ್ಡಿ ಪೈಲ್ವಾನರ ಹಿಂಗಾಗಿ ಬೋರ್ ನಿಂದ ನೀರ ತರೋದ ಅಂದರ ಸಾಕ ಸಾಕಾಗಿ ಹೋಗ್ತಿತ್ತು.

ಇನ್ನ ಶ್ರಾವಣ ಮಾಸ ಬಂತಂದರ ನಮ್ಮವ್ವಗ ಮಿನಿಮಮ್ ನಾಲ್ಕ ಕೊಡಾ ಮಡಿ ನೀರ ಬೇಕಾಗ್ತಿತ್ತ. ಅದು ನಾಲ್ಕ ದಿವಸಕ್ಕ ಮತ್ತ. ಬುಧವಾರ-ಗುರುವಾರ, ಬುಧ-ಬೃಹಸ್ಪತಿ, ಶುಕ್ರವಾರ-ಗೌರಿ, ಶನಿವಾರ, ಸಂಪತ್ ಶನಿವಾರ ಅಂತ ನಾಲ್ಕ ದಿವಸ ಮಡಿಲೇ ಅಡಿಗೆ. ಇನ್ನ ಈ ಮಡಿ ನೀರ ತುಂಬೋದ ಅಂದರ ದೊಡ್ಡ ಜಾತ್ರಿ. ನಮ್ಮಪ್ಪ ಪಾಪ ನಳಾ ಇನ್ನೇನ ಬರ್ತದ ಅಂತ ಗೊರ್ರ್ರ್…. ಗೊರ್ರ ಆವಾಜ ಮಾಡಲಿಕತ್ತು ಅಂದರ ಸ್ನಾನ ಮಾಡಿ ತೊಯಿಸಿದ್ದ ಪಂಜಿ ಉಟಗೊಂಡ ನಡಗಕೋತ ನಳದ ಮುಂದ ನಿಂತ ಬಿಡೊಂವಾ. ನಳಾ ಬರೊದರಾಗ ಕೊಡಾ- ತಪ್ಪೇಲಿ ಏಲ್ಲಾ ನಮ್ಮವ್ವ ತಿಕ್ಕಿ ಇಟ್ಟಿರ್ತಿದ್ದಳು ಅದನ್ನ ನಮ್ಮಪ್ಪ ಗಲಬರಸಿ ನೀರ ತುಂಬಲಿಕ್ಕೆ ಶುರು. ಹಂಗ ಮಡಿಲೇ ಒಂದ ಸ್ಟೀಲಿನ ಟಾಕಿ, ಎರಡ ಸ್ಟೀಲಿನ ಕೊಡಾ ಮ್ಯಾಲೆ ಹಿತ್ತಾಳಿ, ತಾಮ್ರದ ಕೊಡ ಇಷ್ಟ ತುಂಬೊದ ಅಲ್ಲದ ಮೂರ ತಾಮ್ರದ ತಂಬಗಿ, ಎರಡ ತಪ್ಪೇಲಿ, ನಾಲ್ಕ ಥಾಲಿನೂ ತುಂಬಿಸೇನ ನಮ್ಮವ್ವ ಕೈ ತೊಳ್ಕೊತಿದ್ದಳು. ಇನ್ನ ನಮ್ಮ ಮನ್ಯಾಗ ಮಡಿ ಅಂತ ಪಾಪ ನಮ್ಮ ಚಾಳನಾಗ ಇರೋರ ಸುಮ್ಮನ ಇರ್ತಿದ್ದರ ಖರೆ ಆದರ ಯಾವಾಗ ನಮ್ಮವ್ವ ನಾಲ್ಕ ಕೊಡಾ ನೀರ ತುಂಬಲಿಕ್ಕೆ ಎಂಟ ಕೊಡಾ ನೀರ ಹಾಳ ಮಾಡಲಿಕತ್ತಳು ನೋಡ್ರಿ ಆವಾಗ ಅವರಿಗೆ ತಲಿ ಕೆಡಲಿಕತ್ತ. ಯಾಕಂದರ ಇಕಿ ಮೊದ್ಲ ಒಂದ ಎರಡ ಕೊಡ ನೀರ ನಮ್ಮಪ್ಪ ನಳದಿಂದ ಮನಿ ತನಕ ಬರೋ ದಾರಿಗೆ ಸುರಿತಿದ್ಲು. ಆ ತಿಕ್ಕಿದ್ದ ಕೊಡಾ ತೊಳದ ಹತ್ತ ಸರತೆ ಗಲಬರಸಲಿಕ್ಕೆ ಒಂದ ಎರಡ ಕೊಡಾ ನೀರ ಹಾಳ ಮಾಡ್ತಿದ್ಲು… ಮಡಿ ಅಲಾ ಹಿಂಗಾಗಿ ಅಕಿ ಮಾಡಿದ್ದ ಖರೆ. ಕಡಿಗೆ ಚಾಳನಾಗಿನ ಮಂದಿ ಇದನ್ನೇಲ್ಲಾ ತಮ್ಮ ಕಣ್ಣಿಲೇ ನೋಡಲಿಕ್ಕೆ ಆಗಲಾರದ ನಾವ ಮೊದ್ಲ ನೀರ ತುಂಬಕೊಂಡ ಬಿಡ್ತೇವಿ ಆಮ್ಯಾಲೇ ನೀವ ಏನರ ಹಾಳಗುಂಡಿ ಬೀಳ್ರಿ ಅಂತ ತಾವ ಫಸ್ಟ ತುಂಬಲಿಕ್ಕೆ ಹತ್ತರು. ಹಿಂಗ ಅವರೇಲ್ಲಾ ನೀರ ತುಂಬಿದ ಮ್ಯಾಲೆ ನಾವ ನೀರ ತುಂಬಲಿಕ್ಕೆ ಹೊಂಟರ ನಳಾ ಒಮ್ಮೊಮ್ಮೆ ಹೋಗಿ ಬಿಡ್ತಿತ್ತು. ತೊಗೊ ನಮ್ಮವ್ವನ ಮಡಿನೀರ ಅರ್ಧಾ-ಮರ್ಧಾ… ಮುಂದ….. ಮುಂದೇನ.. .ಮಡಿಲೇ ಬೋರ್ ನೀರ ತುಂಬೋದ.

ನಾ, ನಮ್ಮವ್ವಗ “ಅದ ಹೆಂಗ ನಿನ್ನ ಗೌರಿಗೆ ಬೋರಿಂದ ಸವಳ ನೀರ ನಡಿತದ” ಅಂತ ನಾ ಕೇಳಿದರ
“ಅಯ್ಯ.. ಬೋರ ನೀರಿಂದ ಕಟ್ಟಿನ ಸಾರ ಭಾಳ ರುಚಿ ಆಗ್ತದ ತೊಗೊ.. ನಿನಗೇನ ತಲಿ ಗೊತ್ತ” ಅಂತ ನಂಗs ಜೋರ ಮಾಡ್ತಿದ್ಲು.

ತಿಕ್ಕಿದ್ದ ಕೊಡಾ ತೊಳದ ಹತ್ತ ಸರತೆ ಗಲಬರಸಲಿಕ್ಕೆ ಒಂದ ಎರಡ ಕೊಡಾ ನೀರ ಹಾಳ ಮಾಡ್ತಿದ್ಲು… ಮಡಿ ಅಲಾ ಹಿಂಗಾಗಿ ಅಕಿ ಮಾಡಿದ್ದ ಖರೆ. ಕಡಿಗೆ ಚಾಳನಾಗಿನ ಮಂದಿ ಇದನ್ನೇಲ್ಲಾ ತಮ್ಮ ಕಣ್ಣಿಲೇ ನೋಡಲಿಕ್ಕೆ ಆಗಲಾರದ ನಾವ ಮೊದ್ಲ ನೀರ ತುಂಬಕೊಂಡ ಬಿಡ್ತೇವಿ ಆಮ್ಯಾಲೇ ನೀವ ಏನರ ಹಾಳಗುಂಡಿ ಬೀಳ್ರಿ ಅಂತ ತಾವ ಫಸ್ಟ ತುಂಬಲಿಕ್ಕೆ ಹತ್ತರು. ಹಿಂಗ ಅವರೇಲ್ಲಾ ನೀರ ತುಂಬಿದ ಮ್ಯಾಲೆ ನಾವ ನೀರ ತುಂಬಲಿಕ್ಕೆ ಹೊಂಟರ ನಳಾ ಒಮ್ಮೊಮ್ಮೆ ಹೋಗಿ ಬಿಡ್ತಿತ್ತು. ತೊಗೊ ನಮ್ಮವ್ವನ ಮಡಿನೀರ ಅರ್ಧಾ-ಮರ್ಧಾ… ಮುಂದ….. ಮುಂದೇನ.. .ಮಡಿಲೇ ಬೋರ್ ನೀರ ತುಂಬೋದ.

ಇನ್ನ ಬೋರ್ ಮಡಿ ನೀರಿಂದ ಒಂದ ದೊಡ್ಡ ಕಸರತ್.. ಮೊದ್ಲ ಒಂದ ಎರಡ ಕೊಡಾ ಬೋರ ಹೊಡದ ಪೂರ್ತಿ ಬೋರ ತೊಳಿಯೋದು ಆಮ್ಯಾಲೆ ಮಡಿ ನೀರ ತುಂಬೋದ. ನಾವ ಮಡಿನೀರ ತುಂಬೊ ಮಟಾ ಬ್ಯಾರೆ ಯಾರೂ ಬೋರ್ ನೀರ ತುಂಬಂಗಿಲ್ಲಾ… ಆಜು ಬಾಜು ಮಂದಿನೂ ಛಲೋ ಇದ್ದರ ಬಿಡ್ರಿ… ನಾವ ವದ್ದೀಲೇ ಮಡಿ ನೀರ ತುಂಬತೇವಿ ಅಂದರ ದೂರ ನಿಂತ ಮಜಾ ನೋಡ್ತಿದ್ದರ ಹೊರತು.. ಏ ನಮ್ಮ ಪಾಳೆ ಅಂತ ನಡಕ ನಡಕ ತಮ್ಮ ಕೊಡಾ ತುರಕತಿದ್ದಿಲ್ಲಾ. ಇನ್ನ ಹಂತಾವರ ಇದ್ದದ್ದಕ್ಕ ನಮ್ಮವ್ವನಂತಾವರದ ಮಡಿ ಆವಾಗ ಜೋರ ನಡಿತಿತ್ತ.

ಹೋಗಲಿ ಬಿಡ್ರಿ. ಹಿಂಗ ನಮ್ಮ ಆಗಿನ ಕಾಲದ ನೀರಿನ ಪರಿಸ್ಥಿತಿ ಬಗ್ಗೆ ಎಷ್ಟ ಬರದರು ಕಡಿಮಿನ. ಇನ್ನ ಅದರಾಗ ಸರ್ಕಾರಿ ನಳದ್ದಂತು ಕೇಳೊ ಹಂಗ ಇಲ್ಲಾ ಫಜೀತಿ. ಇಡೀ ಓಣಿ ಮಂದಿ ಮುಂಜಾನೆ ಎಂಟ ಗಂಟೆಕ್ಕ ನಳಾ ಬರ್ತದ ಅಂದರ ನಾಲ್ಕ ಗಂಟೆಕ್ಕ ತಮ್ಮ ತಮ್ಮ ಕೊಡಾ ಇಟ್ಟ ಪಾಳೆ ಹಚ್ಚತಿದ್ದರು. ಒಬ್ಬೊಬ್ಬರದ ಒಂದೊಂದ ಲೈನ, ಆಮ್ಯಾಲೆ ಜಗಳ, ಬಾಯಿ ಬಂದಂಗ ಉತ್ತರ ಕರ್ನಾಟಕದ ಬೈಗಳ, ಹೆಣ್ಣಮಕ್ಕಳ ಬೈಗಳಂತೂ ಅಗದಿ ಕೇಳೊ ಹಂಗ ಇರ್ತಿದ್ದವು. ಹೆಂಗಸರ ಅನ್ನಂಗಿಲ್ಲಾ ಗಂಡಸರ ಅನ್ನಂಗಿಲ್ಲಾ. ಆಹಾಃ.. ಹಂಗ ಆ ಬೈಗಳಾ ಹಿಡಿಲಿಕ್ಕೆ ಬರ್ತಿದ್ದರ ಹಂಡೆ ಗಟ್ಟಲೇ ತುಂಬಕೊ ಬಹುದಿತ್ತ ಆ ಮಾತ ಬ್ಯಾರೆ. ಅವನೌನ ಹೋಗಲಿ ಬಿಡ್ರಿ. ಹಂತಾ ಓಣ್ಯಾಗ ಹುಟ್ಟಿ ಬೆಳದದ್ದಕ್ಕ ಇವನೌನ ಇವತ್ತ ನನ್ನ ಭಾಷಾ ಹಿಂಗ ಆಗಿದ್ದ.

ಆಮ್ಯಾಲೆ ಬರ ಬರತ ನಳಾ ಸಣ್ಣ ಬರತದ ಅಂತ ಮನಿ ಮುಂದ ನಳದ ಪೈಪ ಹಾದಲ್ಲೇ ತೆಗ್ಗ ತಗದ ಒಂದ ಗುಂಡಿ ಮಾಡಿ ಅದರಾಗ ತಂಬಗಿ ಇಟ್ಟ ಕೊಡಕ್ಕ ತುಂಬತಿದ್ದವಿ. ಒಂದಿಷ್ಟ ತೆಗ್ಗ ಇಷ್ಟ ಕೆಳಗ ಇರತಿದ್ವಲಾ. ಇನ್ನೊಂದ ಎರಡ ಫೂಟ ತೆಗ್ಗ ತಗದರ ಭೂಮ್ಯಾಗಿನ ನೀರ ಹತ್ತತಿತ್ತ. ಇನ್ನ ಕೆಲವಂದ ಕಡೆ ಡ್ರೇನೇಜ್ ಲೈನ ಬಾಜುಕ ನಳದ ಲೈನ, ಆ ಡ್ರೇನೇಜ್ ಪೈಪ ಲೇವಲ್ ಕಿಂತಾ ಕೆಳಗ ಹೋಗಿ ನಮ್ಮಂತಾವರ ಮಡಿ ನೀರ ತುಂಬೋದು. ಅಲ್ಲಾ ನಳದ್ದು, ನೀರಿಂದು ಎಷ್ಟ ಅನಾನೂಕೂಲ ಇರಲಿ ನಮ್ಮ ಸಂಪ್ರದಾಯ, ಧರ್ಮ ಎಂದೂ ಮರಿ ಬಾರದ ನೋಡ್ರಿ.

ಇಡೀ ಓಣಿ ಮಂದಿ ಮುಂಜಾನೆ ಎಂಟ ಗಂಟೆಕ್ಕ ನಳಾ ಬರ್ತದ ಅಂದರ ನಾಲ್ಕ ಗಂಟೆಕ್ಕ ತಮ್ಮ ತಮ್ಮ ಕೊಡಾ ಇಟ್ಟ ಪಾಳೆ ಹಚ್ಚತಿದ್ದರು. ಒಬ್ಬೊಬ್ಬರದ ಒಂದೊಂದ ಲೈನ, ಆಮ್ಯಾಲೆ ಜಗಳ, ಬಾಯಿ ಬಂದಂಗ ಉತ್ತರ ಕರ್ನಾಟಕದ ಬೈಗಳ, ಹೆಣ್ಣಮಕ್ಕಳ ಬೈಗಳಂತೂ ಅಗದಿ ಕೇಳೊ ಹಂಗ ಇರ್ತಿದ್ದವು. ಹೆಂಗಸರ ಅನ್ನಂಗಿಲ್ಲಾ ಗಂಡಸರ ಅನ್ನಂಗಿಲ್ಲಾ. ಆಹಾಃ.. ಹಂಗ ಆ ಬೈಗಳಾ ಹಿಡಿಲಿಕ್ಕೆ ಬರ್ತಿದ್ದರ ಹಂಡೆ ಗಟ್ಟಲೇ ತುಂಬಕೊ ಬಹುದಿತ್ತ ಆ ಮಾತ ಬ್ಯಾರೆ.

ಆದರ ಇವತ್ತ ಪರಿಸ್ಥಿತಿ ಬದಲಾಗೇದ. ಅಂದರ ನಳಾ ಏನ ದಿವಸಾ ಬರತದ ಅಂತ ಇಲ್ಲಾ, ನಾ ಇರೋ ಏರಿಯಾದಾಗಂತೂ ಇವತ್ತಿಗೂ ಹತ್ತ ದಿವಸಕ್ಕೊಮ್ಮೆ ನಳಾ ಬರತದ, ಅದ ನನ್ನ ಹಣೇಬರಹ ಬಿಡ್ರಿ. ಆದರ ಹಂಗ ನಳಾ ಬರಲಿಲ್ಲಾ ಅಂದರ ಬೋರ್ ಹೋಡಿಯೋದ ಬಂದ ಆಗೇದ, ಟ್ಯಾಂಕರ್ ತರಿಸಿ ನೀರ ಹಾಕಿಸ್ಗೊಳ್ಳಷ್ಟು ಸಂಪತ್ತ ಇವತ್ತ ನಮ್ಮವ್ವನ ಗೌರಿ ನನಗ ಕೊಟ್ಟಾಳ. ಹಂಗ ವಯಸ್ಸಾತು ಅಂತ ನಮ್ಮವ್ವನ ಮಡಿ ಏನ ಕಡಿಮಿ ಆಗಿಲ್ಲಾ, ಇವತ್ತೂ ಮಡಿ ನೀರ ತುಂಬತೇವಿ ಆದರ ಈಗ ಪ್ಲಾಸ್ಟಿಕ್ ಕೊಡಾ ನಡಿತದ. ಇನ್ನೇನ ಸ್ವಲ್ಪ ದಿವಸಕ್ಕ ಬಿಸ್ಲೇರಿನೂ ಮಡಿಲೇ ಬಂದರು ಬರಬಹುದು ಬಿಡ್ರಿ. ಕಾಲಾಯ ತಸ್ಮೈಯ ನಮಃ ಅಂತ ಅನ್ಕೊಂಡ ಜೀವನ ದೂಡಿಸಿಕೊಂಡ ಹೊಂಟೇವಿ.

ಹಂಗ ಈ ನಳದ ಬಗ್ಗೆ ಬರಕೋತ ಕೂತರ ಟೈಮ ಹೋಗಿದ್ದ ಗೊತ್ತಾಗಂಗಿಲ್ಲಾ, ಒಳಗ ನನ್ನ ಹೆಂಡತಿ ಒದರಲಿಕತ್ತಾಳ ಅಗಳೆ ನಳಾ ಬಂದಾಗ ನನ್ನ ಹೆಂಡತಿ “ರ್ರೀ…ನಳಾ ಬಂದದ… ನೀರ ಮ್ಯಾಲೆ ಏರಸರಿ.. ಒಂದರ ಮನಿ ಕೆಲಸಾ ಮಾಡ್ರಿ.. ಅಲ್ಲೇ ಹತ್ತ ನಿಮಿಷ ನಿಂತ ಬಟನ್ ಬಂದ ಮಾಡೇ ಮ್ಯಾಲೆ ಬರ್ರಿ” ಅಂತ ಒದರಿದ್ಲು, ನಾ ಪಂಪ್ ಚಲು ಮಾಡಿ ನಿಮಗ ಒಂದಿಷ್ಟ ಹಳೇ ಕಥಿ ಹೇಳ್ಕೋತ ಕೂತೆ… ಮ್ಯಾಲೇ ಟ್ಯಾಂಕ್ ತುಂಬಿ ಹರಿಲಿಕತ್ತೊ ಏನೋ…

“ಮೊದ್ಲ ನೀರಿಲ್ಲಾ… ಬ್ಯಾಸ್ಗಿ ಬ್ಯಾರೆ. ಪಂಪ್ ಚಲೂ ಮಾಡಿ ಆ ಸುಡಗಾಡ ಮೋಬೈಲ ಹಿಡ್ಕೊಂಡ ಖಬರ ಇಲ್ಲದ ಕೂತ ಹಿಂಗ ನೀರ ತುಂಬಿ ಹರಸಿದ್ರ ಹೆಂಗ” ಅಂತ ಈಗ ನನ್ನ ಹೆಂಡತಿ ಶುರು ಮಾಡ್ತಾಳ ನೋಡ್ರಿ…..

 

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

”ನಮ್ಮ ಮನೆಯವರು ಬಚ್ಚಲದಾಗ ಗುಳಗಿ ತೊಗೊತಾರ”: ಪ್ರಶಾಂತ ಆಡೂರ ಬರೆದ ಇನ್ನೊಂದು ಹುಬ್ಬಳ್ಳಿ ಪ್ರಹಸನ ಓದಲು ಇಲ್ಲಿ ಕ್ಲಿಕ್ ಮಾಡಿ.