ಮಧ್ಯಾಹ್ನ ಒಂದು ಘಂಟೆಗೇ ತಾನು ಮನೆಯಲ್ಲಿ ಮಾಡಬಹುದಾದ ಎಲ್ಲ ಕೆಲಸಗಳೂ ಮುಗಿದು ಮತ್ತೆಲ್ಲ ಮನಸ್ಸಿಗೆ ಕಿರಿಕಿರಿಯಾಗ ಹತ್ತಿತ್ತು. ನಾಲ್ಕು ದಿನ ದಾವಣಗೆರೆಗೆ ಹೋಗಿ ಮಗಳೊಟ್ಟಿಗೆ ಇದ್ದು ಬರೋಣವೆನಿಸುತ್ತಿತ್ತು. ಆದರೆ ಶಂಭಣ್ಣನನ್ನು ಬಿಟ್ಟು ಎಲ್ಲಿಯೂ ಹೋಗುವಂತಿರಲಿಲ್ಲ. ಮಗಳೂ ವಾರ ವಾರ ಬರುವವಳಲ್ಲ. ಅವಳಿಗೆ ಭಾನುವಾರ ರಜಾದಿನಗಳು ಇದ್ದಾಗಲೇ ಜೋರು ವ್ಯಾಪಾರ. ಇನ್ನು ಆಚೀಚೆ ಎರಡು ಹೆಂಗಸರೊಟ್ಟಿಗೆ ಹರಟೆ – ಮಾತು – ಒಡನಾಟ ಮಾಡೋಣವೆಂದರೆ, ಒಬ್ಬರ ವ್ಯವಹಾರವಾದರೂ ಚೊಕ್ಕಟವಾಗಿದೆಯೇ? ಒಂದು ದಿನ ಮಾತಾಡಿಸಿದರೆ ಸಾಕು, “ಅಕ್ಕ ಒಂದೈನೂರು ರೂಪಾಯಿ ಬೇಕಿತ್ತು, ಸೋಮವಾರ ವಾಪಸ್ ಕೊಡ್ತೇನೆ”.
ನವೀನ ಗಣಪತಿ ಬರೆದ ಈ ಭಾನುವಾರದ ಕತೆ “ಧನಲಕ್ಷ್ಮಿ”

ಹೆಸರಿಗೆ ಧನಲಕ್ಷ್ಮಿ. ಮಲಗುವ ಮಂಚದ ಸಿಂಗಲ್ ಬೆಡ್ಡಿನ ಮೇಲೆ ಚಿಲ್ಲರೆ ದುಡ್ಡುಗಳನ್ನೆಲ್ಲ ಹರಡಿಕೊಂಡು ಕುಳಿತಿದ್ದಳು. ರಾತ್ರಿ ಹನ್ನೊಂದು ಘಂಟೆ. ಇನ್ನೂ ಊಟಕ್ಕೆ ಅಡುಗೆಯೂ ಆಗಿರಲಿಲ್ಲ. ಹಸಿವಿನ ಪರಿವೆಯೇ ಇರಲಿಲ್ಲ ಅವಳಿಗೆ. ಆವತ್ತಿನ ಅಂಗಡಿಯ ಒಟ್ಟೂ ವ್ಯಾಪಾರದ ಮೊತ್ತ ಅದು. ಐನೂರು ಎರಡು ಸಾವಿರಗಳ ಕಂತೆ ಕಂತೆ ನೋಟುಗಳು. ಹತ್ತು ಐವತ್ತುಗಳ ಬಿಡಿ ಬಿಡಿ ಮುಕ್ಕಾದ ಮಡಚಿದ ಅವೆಷ್ಟೋ ನೋಟುಗಳು. ಆವತ್ತು ಅದೇನಾಗಿತ್ತೋ ಗೊತ್ತಿಲ್ಲ, ಶುಕ್ರವಾರದ ವ್ಯಾಪಾರ ಹೂಂ… ಎನ್ನುವಷ್ಟು ಆಗಿತ್ತು.

ಇತ್ತೀಚೆಗೆ ಧನಲಕ್ಷ್ಮಿಗೆ ಅದೊಂದು ಹವ್ಯಾಸವೇ ಆಗಿ ಹೋಗಿತ್ತು. ಅದೂ ಅತಿಯಾದರೆ ಅದಕ್ಕೆ ಗೀಳು ಎಂದು ಹೆಸರು. ಅದೇ ಆಗಿತ್ತು! ಒಂಬತ್ತುವರೆ ಹತ್ತು ಘಂಟೆಗೆ ಅಂಗಡಿ ಮುಚ್ಚಿ ತನ್ನ ಪಿಟಾರೆನ್ನುವ ಸ್ಕೂಟಿಯಲ್ಲಿ ಮನೆಗೆ ಬರುವಾಗ ಹತ್ತೊ ಹತ್ತೂವರೆಯೋ ಆದರೆ, ಸ್ವಲ್ಪ ಶಾಸ್ತ್ರಕ್ಕೆ ಕೈ ಕಾಲು ತೊಳೆದು ಮಂಚ ಹತ್ತಿದರೆ ಮತ್ತೆ ಒಂದು ಒಂದೂವರೆ ತಾಸು ಹಣ ಎಣಿಸುವುದೇ ಕಾಯಕ. ಒಂದಿಡೀ ದಿನದ ವ್ಯಾಪಾರವನ್ನು ಕೈತುಂಬ ತುಂಬಿಕೊಂಡು ಮತ್ತೆ ಮತ್ತೆ ನೋಟುಗಳನ್ನು ಸೊಗೆ ಸೊಗೆದು ಸಾಲಿಕೆ ಮಾಡಿ, ವರ್ಗೀಕರಿಸಿ ಇಟ್ಟುಕೊಂಡಷ್ಟೂ ಅವಳಿಗೆ ತೃಪ್ತಿಯಿಲ್ಲ. ನಿತ್ಯ ಇದೊಂದು ಅತಿ ರೋಮಾಂಚಕ ಸಮಯ. ಕೌತುಕದ ಆಟ ಅವಳ ಪಾಲಿಗೆ.

ಅಕ್ಕಿ ಕಾಳು ಬೇಳೆಯಂಥಹ ದಿನಸಿಗಳಲ್ಲದೇ ಸೋಪು, ಪೌಡರು, ಊದುಬತ್ತಿ, ಲಿಪ್ ಸ್ಟಿಕ್, ಟಿಶ್ಯೂ ಪೇಪರ್, ಸಾನಿಟರಿ ನ್ಯಾಪ್‌ಕಿನ್ ಗಳು, ಸಿಗರೇಟು, ಬೆಂಕಿಪೊಟ್ಟಣಗಳಿಂದ ಬಾರ್ಬಿ ಡಾಲ್‌ಗಳವರೆಗೆ ಎಲ್ಲವನ್ನೂ ತುಂಬಿಕೊಂಡಿದ್ದಳು ತನ್ನ ಅಂಗಡಿಯ ಒಳಗೆ. “ಎಚ್ ಬಿ ಸೂಪರ್ ಮಾರ್ಕೆಟ್” ಹತ್ತು ಬೈ ಹತ್ತು ಅಳತೆಯ ದೊಡ್ಡ ಡಿಜಿಟಲ್ ಬೋರ್ಡನ್ನು ಆಸ್ಥೆಯಿಂದ ಹಾಕಿಸಿದ್ದಳು. ಮನೆ ಕೆಲಸಗಳನ್ನೆಲ್ಲ ಮಧ್ಯಾಹ್ನವೇ ಮುಗಿಸಿ ಧನಲಕ್ಷ್ಮಿಯ ಸಾಮೀಪ್ಯಕ್ಕೆ ಹಾತೊರೆಯುತ್ತಿದ್ದ ಹರಟೆಗೆ, ಸಣ್ಣ ಪುಟ್ಟ ಸಹಾಯಕ್ಕೆ ಒದಗಿ ಬರುತ್ತಿದ್ದ ರಿಟೈಯರ್ಡ್ ಎಸ್ಸೈ ಗೀತಕ್ಕ, ಎಚ್ ಬಿ ಸೂಪರ್ ಮಾರ್ಕೆಟ್ ಎಂದರೆ ಹಸಿ ಬಿಸಿ ಸೂಪರ್ ಮಾರ್ಕೆಟ್ ಲೇ ಎಂದು ತಮಾಷೆ ಮಾಡುತ್ತಿದ್ದಳು.

ಯಾರೋ ಹೇಳಿದರೆಂದು ಜಗತ್ತಿನ ಉತ್ಕೃಷ್ಟ ಚಾಕಲೇಟ್ ಗಳನ್ನೆಲ್ಲ ಅಂಗಡಿಯಲ್ಲಿ ತುಂಬಿಸಿ ವ್ಯಾಪಾರ ಮಾಡಬೇಕೆನಿಸಿತು ಧನಲಕ್ಷ್ಮಿಗೆ. ಪ್ಯೂಸ್, ಪೈವ್ ಸ್ಟಾರ್, ಕ್ಯಾಡ್ ಬರೀಸ್ ಗಳಿಂದ ಹಿಡಿದು ಸ್ನೀಕರ್ಸ್, ಕಿಸಸ್, ಕಿಟ್ ಕ್ಯಾಟ್, ಹರ್ಷೀಸ್, ಟೋಬಲ್ ರೋನ್ ಗಳ ವರೆಗೆ ಗುಡ್ಡೆ ಗುಡ್ಡೆ ಚಾಕಲೇಟುಗಳನ್ನು ತರಿಸಿ ಅವುಗಳನ್ನೆಲ್ಲ ಕ್ಯಾಶ್ ಕೌಂಟರಿನ ರ್ಯಾಕಿಗೆ ಒಪ್ಪವಾಗಿ ಜೋಡಿಸಿಟ್ಟಿದ್ದಳು. ಇನ್ಯಾರೋ ಪ್ಲಾಸ್ಟಿಕ್ ಕುಕ್ ವೇರ್ ಗಳು ಮನೆ ಬಳಕೆಯ ಪ್ಲಾಸ್ಟಿಕ್ ಐಟಂಗಳನ್ನು ಇಡು ಎಂದರು.

ಅವೂ ಹಾಗೇ ಉತ್ಕೃಷ್ಟ ಬ್ರಾಂಡ್ ಗಳೇ ಬೇಕಲ್ಲವೇ? ಸೈನೋರಾವೇರ್, ಸ್ಕಾಚ್ ಬ್ರೈಟ್, ಗಾಲಾ, ಏಮ್ ಆರ್, ಸೆಲ್ಲೋ, ನೀಲೋ, ಸಮೃದ್ಧಿ, ಯೆಲ್ಲೋ ಲೀಫ್, ಪೀಕಾಕ್ – ಹೀಗೆ ಏನಿವೆ ಏನಿಲ್ಲ ಎಲ್ಲವೂ 20X10 ಜಾಗದೊಳಗೆ ಒಪ್ಪವಾಗಿ ಲದ್ದಿ ಲದ್ದಿಯಾಗಿ ಬಿದ್ದವು. ಅಡುಗೆ ಮನೆಯ ಕಟ್ಟೆಯೊರೆಸುವ ಮೈಕ್ರೋ ಪೈಬರ್ ಬಟ್ಟೆ, ಗಾಲಾದ ಕಸಬರಿಗೆ, ಕಸ ಎತ್ತುವ ಮರಗಳು, ನೆಲ ಒರೆಸುವ ಥರ ಥರದ ಮೊಪ್ ಗಳು, ನಿಜಾಮರ ಕಾಲದವೋ ಎನ್ನಿಸುವ ವಿಚಿತ್ರ ಆಂಟಿಕ್ ಶೈಲಿಯ ತಂಬಿಗೆಗಳು, ಬಣ್ಣ ಬಣ್ಣದ ಬೇರೆ ಬೇರೆ ಅಳತೆಯ ಟಬ್ಬುಗಳು, ಬಚ್ಚಲ ಮನೆಯನ್ನು ತಿಕ್ಕುವ ಸ್ಕ್ರಬ್ಬುಗಳು, ಸೋಪಿಡುವ ಸಣ್ಣ ಡಬ್ಬಿಗಳು, ಬೆನ್ನುಜ್ಜುವ ಬೆಳ್ಟುಗಳು, ಇನ್ನೂ ಏನೇನೋ!

ಬಿಲ್ಡಿಂಗ್ ಓನರ್ ಕೆಂಪಂಗಿ ಸಿದ್ಧ ದಿನವೂ ಒಂದು ಭೇಟಿ ಕೊಡುತ್ತಿದ್ದ. ಅದೇ ಬಿಲ್ಡಿಂಗಿನ ಹಿಂಭಾಗವೇ ಅವನ ಮನೆಯಿತ್ತು. ಹಿಂದೆ ಮನೆ ಮುಂದೆ ಎರಡು ಮಳಿಗೆಗಳನ್ನು ಬಾಡಿಗೆಗೆ ಕೊಟ್ಟಿದ್ದ. ಈ ಒಂಟಿ ಹುಡುಗಿ ಅದೇನೇನೋ ತಂದು ರಾಶಿ ಹಾಕಿ ವ್ಯಾಪಾರ ಮಾಡುತ್ತಾಳಲ್ಲ ಎನ್ನುವ ಕುತೂಹಲ ಅವನಿಗೆ. ಮಗ ಸೂಪರ್ ಮಾರ್ಕೆಟ್ ಅಂದರೆ ರಾವಣನ ಹೊಟ್ಟೆ ಹುಷಾರಾಗಿ ವ್ಯಾಪಾರ ಮಾಡು ಎನ್ನುತ್ತಿದ್ದ ಧನಲಕ್ಷ್ಮಿಗೆ.

ಮುದ್ದುಲಕ್ಷ್ಮಿಗೆ ಸುಮಾರು ನಲವತ್ತೈದು ನಲವತ್ತಾರು ವರ್ಷ ಪ್ರಾಯ. ಧನಲಕ್ಷ್ಮಿ – ಒಬ್ಬಳೇ ಮಗಳು. ಮಗಳನ್ನು ಇಪ್ಪತ್ತೊಂದನೇ ಶತಮಾನದ ಆಗು ಹೋಗುಗಳಿಗೆ ಒಡ್ಡಿ ಬೆಳೆಸಬೇಕು ಎನ್ನುವುದೇ ಹಠವಿತ್ತು ತಾಯಿಗೆ. ಗಂಡ ಶಂಭಣ್ಣ ಪಾರ್ಶ್ವವಾಯುವಾಗಿ ಹಾಸಿಗೆ ಹಿಡಿಯುವ ಮೊದಲೂ ಸಂಸಾರದ ತಾಪತ್ರಯಗಳ ಬಗೆಗೆ ಹೆಚ್ಚು ತಲೆ ಕೆಡಿಸಿಕೊಂಡವನಲ್ಲ. ರೈಸ್ ಮಿಲ್‌ನಲ್ಲಿ ಮ್ಯಾನೇಜರನಾಗಿದ್ದ ಶಂಭಣ್ಣ ಸಾಕಷ್ಟು ಕಮಿಶನ್ ಗಳನ್ನು ಹೊಡೆಯುತ್ತಿದ್ದ. ಹೊಟ್ಟೆ ಬಟ್ಟೆಗೆ ಎಂದೂ ಸಮಸ್ಯೆಯಾಗದೇ ತಂದೆಯ ಕಾಲದಿಂದ ಆನಗೋಡಿನಲ್ಲಿ ಬಂದ ಚಿಕ್ಕ ಮನೆಯನ್ನು ಒಪ್ಪವಾಗಿ ಇಟ್ಟುಕೊಂಡು ಸಂಸಾರ ನಡೆಸುತ್ತಿದ್ದ. ಮುದ್ದು ಲಕ್ಷ್ಮಿಯೂ ಹಾಗೆ ಶಂಭಣ್ಣ ಖರ್ಚೆಲ್ಲ ಮಿಕ್ಕಿ ಕೊಡುತ್ತಿದ್ದ ಸಾವಿರ – ಐನೂರು ರೂಪಾಯಿಗಳನ್ನು ಚೀಟಿಗಳಲ್ಲಿ ತೊಡಗಿಸಿ ಆರೆಂಟು ವರ್ಷಗಳಲ್ಲಿ ನಾಲ್ಕೈದು ಲಕ್ಷ ಗಳನ್ನು ಕೂಡಿಸಿದ್ದಳು. ಮುದ್ದು ಲಕ್ಷ್ಮಿಯದ್ದು ಚೊಕ್ಕ ವ್ಯವಹಾರ. ಬೆಳಿಗ್ಗೆ ಆರು ಘಂಟೆಗೆ ಎದ್ದು ಎಲ್ಲ ಮನೆಯ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಿದ್ದಳು. ಅಕ್ಕ ಪಕ್ಕದವರ ಹತ್ತಿರವೂ ಬೇಕಷ್ಟೇ ಮಾತು. ತನ್ನ ಮನೆಗೆಲಸಗಳು ಒಂದೈದು ನಿಮಿಷ ತಡವಾಗುತ್ತೆಂದರೂ ಸಹಿಸದಷ್ಟು ಶಿಸ್ತು. ಯಾರಾದರೂ ಹೊತ್ತಲ್ಲದ ಹೊತ್ತಲ್ಲಿ ಅತಿಥಿ ಅಥವಾ ನೆಂಟರ ನೆಪದಲ್ಲಿ ಬಂದರೆ, ಒಂದು ಕಪ್ ಕಾಫಿ ಟೀಯನ್ನೂ ಕೊಡದೆ ಹಾಗೇ ಒಂದೇ ನಿಮಿಷದಲ್ಲಿ ಸಾಗ ಹಾಕಿ ಬಿಡುತ್ತಿದ್ದಳು.

ಮುದ್ದುಲಕ್ಷ್ಮಿಗೆ ಇತ್ತೀಚೆಗೆ ಕೆಲವು ದಿನಗಳಿಂದ ವಿಪರೀತ ಆತಂಕ. ಕುಂತಲ್ಲಿ ನಿಂತಲ್ಲಿ ನೆಮ್ಮದಿಯಿಲ್ಲವಾಗಿತ್ತು. ಯಾಕೆ ಯಾಕೆಂದು ಕೇಳಿಕೊಂಡರೂ ಉತ್ತರ ಸಿಗುತ್ತಿರಲಿಲ್ಲ.

ಮಗಳು ಧನಲಕ್ಷ್ಮಿ ದಾವಣಗೆರೆಗೆ ಸೇರಿ ಸೂಪರ್ ಮಾರ್ಕೆಟ್ ನಡೆಸುತ್ತ ಹತ್ತಿರ ಹತ್ತಿರ ಒಂದೂವರೆ ವರ್ಷವಾಗುತ್ತ ಬಂದಿತ್ತು. ಶಂಭಣ್ಣ ಹಾಸಿಗೆ ಹಿಡಿದೂ ಸುಮಾರು ಅಷ್ಟೇ ಸಮಯವಾಗಿತ್ತು. ಶಂಭಣ್ಣನನ್ನು ಬೆಳಿಗ್ಗೆ ಹತ್ತೂ ಹತ್ತುವರೆಗೆ ಬಚ್ಚಲಿಗೆ ನಡೆಸಿಕೊಂಡು ಹೋಗಿ ನೀರಲ್ಲಿ ಅದ್ದಿ ತೆಗೆದರೆ ಸ್ನಾನ ಮುಗಿಯಿತು. ಹನ್ನೆರಡು ಎನ್ನುವಷ್ಟರಲ್ಲಿ ಬಾಯಿಗೆ ಒಂದಷ್ಟು ಗಂಜಿ ಸುರಿದರೂ ಅವನು ಪಿಟಿಕ್ಕೆನ್ನುವವನಲ್ಲ. ಅಡಿಗೆ ಆಸೆಗಳು ಇಂಥದೇ ಬೇಕು ಎನ್ನುವವನಲ್ಲ. ಕೂಡಿಟ್ಟ ಆರೆಂಟು ಲಕ್ಷ ರೂಪಾಯಿಗಳ ಎಫ್ ಡಿ ಯಿಂದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಲ್ಲಿ ಬರುವ ಬಡ್ಡಿಯಲ್ಲಿ ಖರ್ಚಿಗೆ ಬೇಕಾದಷ್ಟು ಆಗುತ್ತಿತ್ತು. ಇನ್ನು ಮಗಳಿಗೆ ಅಂತ ಎರಡು ಮೂರು ಲಕ್ಷ ರೂಪಾಯಿಗಳನ್ನು ಕೊಟ್ಟಾಗಿದೆ. ಅವಳೀಗ ಸ್ವಯಂ ಉದ್ಯೋಗಿ, entrepreneur!

ಮಧ್ಯಾಹ್ನ ಒಂದು ಘಂಟೆಗೇ ತಾನು ಮನೆಯಲ್ಲಿ ಮಾಡಬಹುದಾದ ಎಲ್ಲ ಕೆಲಸಗಳೂ ಮುಗಿದು ಮತ್ತೆಲ್ಲ ಮನಸ್ಸಿಗೆ ಕಿರಿಕಿರಿಯಾಗ ಹತ್ತಿತ್ತು. ನಾಲ್ಕು ದಿನ ದಾವಣಗೆರೆಗೆ ಹೋಗಿ ಮಗಳೊಟ್ಟಿಗೆ ಇದ್ದು ಬರೋಣವೆನಿಸುತ್ತಿತ್ತು. ಆದರೆ ಶಂಭಣ್ಣನನ್ನು ಬಿಟ್ಟು ಎಲ್ಲಿಯೂ ಹೋಗುವಂತಿರಲಿಲ್ಲ. ಮಗಳೂ ವಾರ ವಾರ ಬರುವವಳಲ್ಲ. ಅವಳಿಗೆ ಭಾನುವಾರ ರಜಾದಿನಗಳು ಇದ್ದಾಗಲೇ ಜೋರು ವ್ಯಾಪಾರ. ಇನ್ನು ಆಚೀಚೆ ಎರಡು ಹೆಂಗಸರೊಟ್ಟಿಗೆ ಹರಟೆ – ಮಾತು – ಒಡನಾಟ ಮಾಡೋಣವೆಂದರೆ, ಒಬ್ಬರ ವ್ಯವಹಾರವಾದರೂ ಚೊಕ್ಕಟವಾಗಿದೆಯೇ? ಒಂದು ದಿನ ಮಾತಾಡಿಸಿದರೆ ಸಾಕು, “ಅಕ್ಕ ಒಂದೈನೂರು ರೂಪಾಯಿ ಬೇಕಿತ್ತು, ಸೋಮವಾರ ವಾಪಸ್ ಕೊಡ್ತೇನೆ”. ದುಡ್ಡಿನ ಸಾಲಗಳ ಎಡವಟ್ಟಿಗೆ ಎಂದೂ ಸಿಕ್ಕಿಕೊಂಡವಳಲ್ಲ ಮುದ್ದುಲಕ್ಷ್ಮಿ. ಹಾಗಾಗಿ ಬೇಸರ ಕಳೆದುಕೊಳ್ಳುವುದಕ್ಕೆ ದಿನದ ಎರಡು ಮೂರು ತಾಸು ಏನು ಮಾಡಬೇಕೋ ತಿಳಿಯುತ್ತಿರಲಿಲ್ಲ. ಅಷ್ಟು ಸಂಡಿಗೆ ಹಪ್ಪಳ ಮಾಡಿದರೆ ಹೇಗೆ? ಹೊಸದೊಂದು ವಿಚಾರ ಬಂತು. ಹೋಮ್ ಮೇಡ್ ಎಂದು ಪಟ್ಟಿ ಅಂಟಿಸಿ ಮಗಳ ಅಂಗಡಿಯಲ್ಲೇ ಮಾರಿದರೂ, ಬಂದಷ್ಟೂ ಲಾಭವಲ್ಲವೇ?

ಗೋಪಿ ಬಂದವನು ಅರ್ಧ ಘಂಟೆ ಯಾದರೂ ಹೋಗಲೊಲ್ಲ. ನಾಲ್ಕು ರ್ಯಾಕುಗಳ ಅಡ್ಡ ಸಾಲು ಮತ್ತು ಸುತ್ತ ಗೋಡೆಗಳಿಗೆ ಹೊಂದಿಕೊಂಡಿದ್ದ ನಾಲ್ಕು ಎತ್ತರದ ರ್ಯಾಕುಗಳು. ಪೇರಿಸಿಟ್ಟ ಸಾಮಾನುಗಳನ್ನು ನೋಡುವುದೇ ಹಬ್ಬವೆಂಬಂತೆ ಸುತ್ತ ನೋಡುತ್ತಲೇ ಇದ್ದ. ಬಗೆ ಬಗೆಯ ಬಿಸ್ಕಿಟ್ ಗಳು, ಬಗೆಬಗೆಯ ಚಾಕಲೇಟುಗಳು – ಬ್ರ್ಯಾಂಡ್ ಗಳನ್ನು, ಪ್ರೈಸ್, ಇತ್ಯಾದಿ ವಿವರ ಗಳನ್ನು ನೋಡಿದ್ದೇ ನೋಡಿದ್ದು. ಪರ್ಪ್ಯೂಮು, ಡಿಯೋಗಳ ಡಬ್ಬಿಗಳನ್ನು ತಿಕ್ಕಿ ತಿಕ್ಕಿ ನೋಡುತ್ತಿದ್ದ. ಕೊನೆಗೂ ಕೊಂಡಿದ್ದೆಷ್ಟು ಎಂದರೆ ಇನ್ನೂರು ರೂಪಾಯಿಗಳ ಒಂದು ಕ್ಯಾಡ್ಬರೀಸ್ ಚಾಕಲೇಟು. ಕ್ಯಾಶ್ ಕೌಂಟರಿನಲ್ಲಿ ಧನಲಕ್ಷ್ಮಿಯೇ ಇದ್ದಳು. ತೀರ ಪರಿಚಿತನಾಗಿದ್ದವನಂತೆ ಮಾತಾಡಿದ. ಇಲ್ಲಿಯೇ ಅವರಗೆರೆಯವನು. ಹೋಂಡಾ ಆಕ್ಟಿವಾದಲ್ಲಿ ಬಂದಿದ್ದ. ಯಾವುದೋ ಅಪರೂಪದ ಸ್ಪರ್ಶವಾದಂತಾಯಿತು. ಏನೋ ಪ್ರಭಾವವೊಂದನ್ನು ಬಿಟ್ಟು ಹೋಗಿದ್ದ. ಪಿ ಬಿ ರೋಡ್ ನಲ್ಲಿದ್ದ ರಿಲಾಯನ್ಸ್ ಸೂಪರ್ ಮಾರ್ಕೆಟ್‌ನಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿದ್ದ. ಹೆಚ್ಚೇನೂ ಹರಟದೇ ದಡಬಡಾಯಿಸಿ ಹೊರಟೇಬಿಟ್ಟ.

ಅದೇ ಬಿಲ್ಡಿಂಗಿನ ಹಿಂಭಾಗವೇ ಅವನ ಮನೆಯಿತ್ತು. ಹಿಂದೆ ಮನೆ ಮುಂದೆ ಎರಡು ಮಳಿಗೆಗಳನ್ನು ಬಾಡಿಗೆಗೆ ಕೊಟ್ಟಿದ್ದ. ಈ ಒಂಟಿ ಹುಡುಗಿ ಅದೇನೇನೋ ತಂದು ರಾಶಿ ಹಾಕಿ ವ್ಯಾಪಾರ ಮಾಡುತ್ತಾಳಲ್ಲ ಎನ್ನುವ ಕುತೂಹಲ ಅವನಿಗೆ. ಮಗ ಸೂಪರ್ ಮಾರ್ಕೆಟ್ ಅಂದರೆ ರಾವಣನ ಹೊಟ್ಟೆ ಹುಷಾರಾಗಿ ವ್ಯಾಪಾರ ಮಾಡು ಎನ್ನುತ್ತಿದ್ದ ಧನಲಕ್ಷ್ಮಿಗೆ.

ತಿಂಗಳೂ ಕಳೆದಿರಲಿಲ್ಲ. ಸಂಜೆ ಆರೆಂದರೆ ಗೋಪಿ ಸೂಪರ್ ಮಾರ್ಕೆಟ್ ನಲ್ಲಿರುತ್ತಿದ್ದ. ಧನಲಕ್ಷ್ಮಿಯೂ ಅವನೊಡನೆ ಸಲಿಗೆಯಿಂದ ಚರ್ಚಿಸತೊಡಗಿದ್ದಳು. ರಿಲಾಯನ್ಸ್ ನವರೂ ಸಣ್ಣ ಅಂಗಡಿಗಳಿಗೆ ಹೋಲ್ ಸೇಲ್ ದರದಲ್ಲಿ ದಿನಸಿ ಸಾಮಾನುಗಳನ್ನು ಕೊಡುವುದಕ್ಕೆ ಪ್ರಾರಂಭಿಸಿದ್ದರು. ಗೋಪಿ ಪರಿಚಯವಾದ ಮೊದಲ ವಾರದಲ್ಲೇ ತಡ ರಾತ್ರಿಯವರೆಗೆ ಕೂತು ಧನಲಕ್ಷ್ಮಿಯ ಪರ್ಚೇಸ್ ಬಿಲ್ ಗಳನ್ನು ನೋಡಿದ್ದ. ಡೀಲರ್ ಗಳಿಂದ ಕೊಂಡರೆ ಸಿಗುವ ಲಾಭದ ಅಂಶಕ್ಕೂ ರಿಲಾಯನ್ಸ್ ನಿಂದ ಕೊಂಡರೆ ಸಿಗುವ ಲಾಭದ ಅಂಶಕ್ಕೂ ನಿರ್ಧಿಷ್ಟ ಲೆಕ್ಕಾಚಾರಗಳನ್ನು ಹಾಕಿದ್ದ. ಅಲ್ಲದೇ ರಿಲಾಯನ್ಸ್ ನಿಂದ ಆಫರ್ ದರಗಳಲ್ಲಿ ಅಗ್ಗವಾಗಿ ಸಿಗುವ ಎಲ್ಲಾ ಸಾಮಾನುಗಳ ಪಟ್ಟಿಯನ್ನೂ ಬರೆದು ಕೊಟ್ಟಿದ್ದ. ಧನಲಕ್ಷ್ಮಿಯ ಉತ್ಸಾಹ ನೂರ್ಮಡಿಸಿತ್ತು. ಒಬ್ಬಳೇ ಕೂಡಿಸಿ, ಕಳೆದು, ಒಪ್ಪವಾಗಿ ಜೋಡಿಸಿ, ಬರುವ ಹೋಗುವವರಲ್ಲಿ ವ್ಯವಹರಿಸಿ ಕೆಲ ತಿಂಗಳುಗಳಲ್ಲಿ ನೀರಸವೆನಿಸಿ ಮಂಕಾಗಿದ್ದಳು. ಗೋಪಿಯ ಒಡನಾಟ ಅವಳ ವ್ಯಾಪಾರಕ್ಕೊಂದು ಹೊಸ ಹೊಳಪು ಕೊಟ್ಟಿತ್ತು. ವ್ಯಾಪಾರಿಗಳಿಗೂ ಅಧಿಕ ಲಾಭವೇ ಬೇಕು ತಾನೆ?

ಸಂಜೆಯಾದರೆ ಸಾಕು ಇಬ್ಬರೂ ಸೂಪರ್ ಮಾರ್ಕೆಟ್ ನ ಕ್ಯಾಶ್ ಕೌಂಟರಿನಲ್ಲಿ ಕೈ ಕೈ ಚಾಚಿಕೊಂಡು ಗಹನವಾದ ಮಾತು ಕಥೆ ಚರ್ಚೆಯಲ್ಲಿ ತೊಡಗಿರುತ್ತಿದ್ದರು. ರಾಜಣ್ಣನೆಂಬ ವಯಸ್ಕನೊಬ್ಬ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ದೊಡ್ಡ ಚೀಲಗಳನ್ನು ಎತ್ತಿಕೊಡುವುದರಿಂದ ಹಿಡಿದು ಚಿಲ್ಲರೆ ಸಾಮಾನುಗಳನ್ನು ಅಳೆದು ತೂಗಿ ಕಟ್ಟಿ ಕೊಡುವ ಎಲ್ಲ ಕೆಲಸಗಳನ್ನೂ ಅವನೇ ಮಾಡುತ್ತಿದ್ದ.

ಗೋಪಿಯ ಮೇಲೊಂದು ಲಘುವಾದ ಕವನವನ್ನು ಬರೆದಿದ್ದಳು ಧನಲಕ್ಷ್ಮಿ. ಆವತ್ತು ಬೆಳಿಗ್ಗೆ ಆರು ಘಂಟೆಗೆ ಬರುವೆನೆಂದಿದ್ದ ಗೋಪಿ. ಇಬ್ಬರೂ ಜೊತೆಗೂಡಿ ಹೊಸದುರ್ಗದ ಬಳಿಯ ಗುಡ್ಡಗಳನ್ನು ಸುತ್ತುವ ಸಾಹಸವನ್ನು ಮಾಡುವವರಿದ್ದರು. ಆಗಲೇ ಸಮಯವಾಗಿತ್ತು, ಆದರೆ ಧನಲಕ್ಷ್ಮಿ ಬರೆದ ಕವನದ ಹಾಳೆಯೇ ಸಿಗದಾಗಿತ್ತು. ಮಲಗುವ ಮಂಚದ ಕೆಳಗೆಲ್ಲ ಹುಡುಕಿದಳು. ಹಿಂದಿನ ರಾತ್ರಿ ಬರೆದಿಟ್ಟುಕೊಂಡ ಕವನ – ತಲೆಯಲ್ಲಿ ಒಂದು ಶಬ್ದವೂ ನೆನಪಿರಲಿಲ್ಲ. ಗುಡ್ಡದ ತುತ್ತ ತುದಿಯಲ್ಲಿ ಕೂತು ಗೋಪಿಗೆ ಓದಿ ಹೇಳಬೇಕೆಂದು ಕೊಂಡಿದ್ದಳು. ಈ ಗುಡ್ಡಗಳಷ್ಟೇ ಅಪರೂಪ ನೀನು ಎನ್ನುವ ಧ್ವನಿಯಲ್ಲಿ ಬರೆದ ಕವನ ಆರೆಂಟು ಸಾಲುಗಳಲ್ಲಿ ಕೊನೆಯಾಗಿತ್ತು. ಬ್ಯಾಗಿನ ಜಿಪ್ಪುಗಳನ್ನೆಲ್ಲ ತೆಗೆದು ಹಾಕಿ ಮತ್ತೆ ಮತ್ತೆ ಹುಡುಕಿದಳು. ಹಾಸಿಗೆಯ ಕೆಳಗೆ, ಹಾಸಿನ ಒಳಗೆ, ದಿಂಬಿನ ಅಡಿಗೆ ಎಲ್ಲೆಲ್ಲಿಯೂ ಹುಡುಕಿದ್ದೇ ಹುಡುಕಿದ್ದು. ನವೆಂಬರಿನ ಬೆಳಗಿನ ಚುಮು ಚುಮು ಛಳಿಯಲ್ಲೂ ಸಣ್ಣನೆಯ ಬೆವರ ಹನಿಗಳು ಮುಖದ ತುಂಬೆಲ್ಲ ಜಿನುಗಿದವು. ಸಿಗಲೊಲ್ಲದ ಕಾಗದದ ಚೂರಿಗಾಗಿ ಮೈಯೆಲ್ಲ ಪರಚಿಕೊಳ್ಳುವಂತಾಯಿತು.

ಅಂತೂ ಗೋಪಿ ಬಂದೇ ಬಿಟ್ಟ. ಏಳು ಘಂಟೆಯಾಗಿತ್ತು. ತುಂಬ ತಡವಾಯಿತೆಂದು ಇಬ್ಬರೂ ಹೊರಟರು. ಒಂದು ಹದಿನೈದು ಕಿಲೋಮೀಟರುಗಳಷ್ಟು ದೂರ ಸಾಗಿದ ಮೇಲೆ, ಅನ್ನನಾಳಗಳೆಲ್ಲ ತೆರೆದುಕೊಂಡವು, ಹಸಿವು ಸಂಕಟವಾಯಿತು. ಅಲ್ಲಿಯೇ ಆನಗೋಡಿನಲ್ಲಿ ಇಬ್ಬರೂ ಇಡ್ಲಿ ವಡೆಗಳನ್ನು ತಿಂದು ಚಹಾ ಕುಡಿದು ಬೈಕ್ ಏರಿ ಹೊಳಲ್ಕೆರೆ ರಸ್ತೆಯ ಗುಂಟ ಸಾಗಿದರು. ಹೊಳಲ್ಕೆರೆಯಿಂದ ಒಂದಿಪ್ಪತ್ತು ಕಿ.ಮಿ ಹೊಸದುರ್ಗ ರಸ್ತೆಯಲ್ಲಿ ಸಾಗಿ ಅಲ್ಲಿಯೇ ರಸ್ತೆಯ ಪಕ್ಕದ ಮರದ ಕೆಳಗೆ ಬೈಕ್ ನಿಲ್ಲಿಸಿದ ಗೋಪಿ.

ಎಡ ಭಾಗದ ದೈತ್ಯ ಉಬ್ಬು ಗುಪ್ಪೆಯಂತಿರುವ ಗುಡ್ದಗಳು ಛಳಿಗಾಲದ ತಿಳಿ ಬಿಸಿಲಿಗೆ ಬೆನ್ನು ಕಾಯಿಸಿಕೊಳ್ಳುತ್ತಿದ್ದವು. ಹೀಗೆ ಎಡದಿಂದ ಬಲಕ್ಕೆ ನೋಡಿದರೆ ಕಣ್ಣಿನ ದೃಷ್ಟಿ ಸಾಗುವವರೆಗೂ ಗುಡ್ಡಗಳು. ಹಾವಿನ ಬಳುಕುವ ಬೆನ್ನುಗಳಂತೆ ಸಾಗುವ ಸಾಲು ಸಾಲು ಗುಡ್ಡಗಳನ್ನು ಹತ್ತಿರದಿಂದ ಹೋಗಿ ತಬ್ಬಿಕೊಂಡು ಬಿಡಬೇಕೆನಿಸುತ್ತಿತ್ತು.

ಅಂತೂ ಇಂತೂ ಉತ್ಸಾಹದ ಪರಮಾವಧಿಯಲ್ಲಿ ಒಂದು ಗುಡ್ಡದ ತುದಿಯನ್ನು ಮುಟ್ಟಿದಾಗ ಸೂರ್ಯ ನೆತ್ತಿಗೆ ಬಂದಿದ್ದ. ಸಣ್ಣ ನುಣುಪು ಕಲ್ಲುಗಳು, ಅಲ್ಲಲ್ಲಿ ನೆಟ್ಟ ಪಟ್ಟಿಯಂತೆ ಬೆಳೆದ ನೆಲ ಮಟ್ಟದ ಹಸಿರು ಹುಲ್ಲು ಸಾಲುಗಳು, ಸುಂಯ್ ಎಂದು ಬೀಸುತ್ತಿದ್ದ ಒಣ ಗಾಳಿ, ಬಕ್ಕೆ ಗಿಡದ ಪೊದೆಗಳು, ಪಿಂಂಂ ಗಿಡದ ಮಟ್ಟಿಗಳು ಅಲ್ಲೊಂದು ಇಲ್ಲೊಂದು ಹಾರುತ್ತಿದ್ದ ಚಿಟ್ಟೆಗಳು, ಹೆಸರೇ ಇಲ್ಲದೇ ಹರೆಯುತ್ತಿದ್ದ, ಹಾರುತ್ತಿದ್ದ ಹುಳ ಕೀಟಗಳು. ಸ್ವಲ್ಪವೂ ಆಯಾಸವೆನಿಸದೇ ಅರ್ಧ ಗುಡ್ಡ ಹತ್ತುತ್ತಲೇ ಸ್ವಲ್ಪ ನೀರು ಕುಡಿದು ಕುಳಿತು ಸುತ್ತಣ ದೃಶ್ಯವನ್ನೆಲ್ಲ ಒಮ್ಮೆ ನೋಡೋಣವೆನಿಸಿತು. ದೀರ್ಘ ಬೆಟ್ಟಗಳ ಸಾಲು ಎದುರು ಬದಿಯೂ ಹಾಸಿ ಹೊದ್ದು ಎದ್ದು ನಿಂತಿದ್ದವು.

ಆವತ್ತಿಗಾಗಲೇ ನವೆಂಬರ್ ಹದಿನೆಂಟನೇ ತರೀಖು. ಬೆಳಿಗ್ಗೆ ಎಂಟು ಘಂಟೆ ಹೊಡೆದಿತ್ತು. ಇನ್ನೂ ಹೊದ್ದು ಮಲಗಿದ್ದಳು ಧನಲಕ್ಷ್ಮಿ. ಏಳುವುದೇ ಬೇಡ, ಯಾಕಾದರೂ ಬೆಳಗಾಯಿತೋ ಗೊತ್ತಿಲ್ಲ. ಕಿಟಕಿಯಿಂದ ಚೆಲ್ಲಿ ಬರುತ್ತಿದ್ದ ಬೆಳಕನ್ನೂ ನೋಡುವುದು ಬೇಡವೆನಿಸಿ ತಲೆಯವರೆಗೂ ಹೊದಿಕೆಯನ್ನು ಮುಚ್ಚಿಕೊಂಡು ಮತ್ತೆ ಮತ್ತೆ ಮಗ್ಗುಲುಗಳನ್ನು ಬದಲಿಸುತ್ತಾ ಮಲಗಿದಳು. ಒಮ್ಮೆ ಕೈ ಕಾಲುಗಳನ್ನು ಮುದುಡಿಸಿ ಮತ್ತೊಮ್ಮೆ ಸೆಟೆಯಿಸಿ ಅಂತೂ ಇಂತೂ ಎರಡು ತಾಸು ಹೊರಳಾಡಿದಳು. ನಿದ್ದೆಯ ಮಂಪರೂ ಉಳಿದಿರಲಿಲ್ಲ. ಶಾಪಿನ ಬಾಡಿಗೆ ಕೊಡಬೇಕು. ಅದು ಅಕ್ಟೋಬರ್ ತಿಂಗಳ ಬಾಡಿಗೆ. ಕೆಂಪಂಗಿ ಸಿದ್ಧ ಆಗಲೇ ಮೂರ್ನಾಲ್ಕು ಸಾರ್ತಿ ಬಾಡಿಗೆ ಕೇಳಿದ್ದ. ಹನ್ನೊಂದು ಸಾವಿರ ರೂಪಾಯಿಗಳನ್ನು ಹೊಂದಿಸಿ ಕೊಡಬೇಕಿತ್ತು. ದುಡ್ಡನ್ನು ಹೊಂದಿಸುವುದೇ ಬಹಳ ಕಷ್ಟವಾಗಿತ್ತು. ಅಂಗಡಿಗೆ ಎಷ್ಟೇ ಸಾಮಾನುಗಳನ್ನು ಹಾಕಿಸಿದರೂ ಕಡಿಮೆ. ಯಾವ ಜಾಗವೂ ಖಾಲಿ ಖಾಲಿ ಎನಿಸಬಾರದು. ಮೂಲೆ ಮೂಲೆಯೂ ತುಂಬಿರಬೇಕು. ಅಂದರೆ ಕೊಳ್ಳುವವನಿಗೂ ಸಮೃದ್ಧಿಯೆನಿಸಿ ಮತ್ತೆ ಮತ್ತೆ ಅಂಗಡಿಗೆ ಬರಬೇಕೆನಿಸುತ್ತದೆ.

ನಿದ್ದೆಯ ಕನವರಿಕೆಗಳಲ್ಲೂ ಮೂರ್ನಾಲ್ಕು ಸಾರ್ತಿ ಗೋಪಿ ಬಂದು ಹೋಗಿದ್ದ. ಯಾಕೋ ಇನ್ನೂ ಮನಸ್ಸಿಗೆ ಗಾಢವಾಗಿ ಆವರಿಸಿಕೊಂಡಿರಲಿಲ್ಲ. ಆದರೂ ಇನ್ನೂ ಹೇಗೆ ಏನು ಎಂದು ನೋಡುವ ಕುತೂಹಲವಿತ್ತು. ಹೊಸದುರ್ಗದ ಗುಡ್ಡಗಳಿಗೆ ಹೋದಾಗಲೂ ಅಷ್ಟೇ. ಬೇಕಂತಲೇ ಮೈ ಕೈಗಳಿಗೆ ತಾಗಿಸುವ ಚಪಲಚನ್ನಿಗನೇನೂ ಆಗಿರಲಿಲ್ಲ. ಬೇಕಷ್ಟೇ ಮಾತು. ಅದರಲ್ಲೂ ಗುಡ್ಡಗಳ ನೋಟ ಕಣ್ಣಿಗೆ ಬಿದ್ದೊಡನೆಯೇ ಮೌನಕ್ಕೆ ಶರಣಾಗಿದ್ದ. ಗುಡ್ಡದ ತುದಿಯನ್ನೇರಿದಾಗಲೆಲ್ಲ ಸಿಕ್ಕ ಚಿಕ್ಕ ಬಂಡೆ ಮರಗಳಿಗೆ ಬೆನ್ನು ತಾಗಿಸಿ ಹತ್ತು ಹದಿನೈದು ನಿಮಿಷ ಆಕಾಶವನ್ನೇ ದಿಟ್ಟಿಸಿ ನೋಡುತ್ತ ಕುಳಿತುಬಿಡುತ್ತಿದ್ದ. ಹಿಂತಿರುಗಿ ಬರುವಾಗಲೂ ಅಷ್ಟೇ ಎಷ್ಟೋ ದಿನಗಳಿಂದ ನಿರೀಕ್ಷಿಸಿದ್ದ ಅಪರೂಪದ ವಸ್ತುವೊಂದು ತನಗೆ ಸಿಕ್ಕಿದೆಯೇನೋ ಎನ್ನುವ ಸಮಾಧಾನದ ಭಾವದಲ್ಲಿ ಇನ್ನೂ ಎಳೆಯಾಗಿ ತಿಳಿಯಾಗಿ ಮಾತನಾಡಿದ್ದ.

ಸ್ನಾನ ಮಾಡುವಾಗಲೆಲ್ಲ ಧನಲಕ್ಷ್ಮಿ ಅದನ್ನೇ ಯೋಚಿಸುತ್ತಿದ್ದಳು. ಬೇರೆ ದಾರಿಯಿರಲಿಲ್ಲ. ಗೋಪಿಯನ್ನೇ ಕೇಳಿದರಾಯಿತು. ಹತ್ತು ಹನ್ನೊಂದು ಸಾವಿರಕ್ಕೆ ಇಲ್ಲವೆಂದು ಹೇಳುವ ಸಾಧ್ಯತೆ ಕಡಿಮೆ. ನಾಲ್ಕಾರು ಸಾರ್ತಿ ಕೇಳೋಣ ಬೇಡ – ಕೇಳೋಣ ಬೇಡವೆನ್ನಿಸಿತು. ಅಲ್ಲಿಗೇ ಘಂಟೆ ಹನ್ನೊಂದು. ಇನ್ನೇನು ಸೂರ್ಯ ನೆತ್ತಿಗೇ ಬಂದು ಬಿಡುತ್ತಾನೆ. ಬೆಳಗಿನ ಹೊಟ್ಟೆ ಹಸಿವಿನ ಸಂಕಟ ಮುಗಿಯುವುದರೊಳಗೆ ನೋಡ ನೋಡುತ್ತ ಊಟದ ಸಮಯ ವಾಗಿಬಿಡುತ್ತದೆ. ತಕ್ಷಣಕ್ಕೆ ಒಂದು ನಿರ್ಧಾರಕ್ಕೆ ಬರಬೇಕಿತ್ತು. ಕೆಂಪಂಗಿ ಸಿದ್ಧ ಇವತ್ತು ಬಿಡುವವನಲ್ಲ. ಅವನು ಎಷ್ಟು ಹೊತ್ತಿಗೂ ಕಾಲ್ ಮಾಡಿಯಾನು. ಹೊಲಸೆನಿಸುತ್ತದೆ. ಅವನಿಗೆ ಕೊಡಬೇಕಾದ್ದನ್ನು ಕೊಟ್ಟ ಹೊರತು ಅಂಗಡಿಯ ಕಡೆಗೆ ಸುಳಿಯಲು ಮನಸ್ಸು ಬಾರದು. ಏನು ಮಾಡೋಣವೆಂಬ ಚಿಂತೆ. ಚಿಂತೆಯ ಮೇಲೆ ಚಿಂತೆ, ಈಜಿಪ್ಟಿನ ಪಿರಮಿಡ್ಡುಗಳಂತೆ ಕಂಡವು. ಇನ್ನೊಂದು ವಾರ ಹೋದರೆ ಚಂದ್ರಣ್ಣ ಇಪ್ಪತ್ತು ಸಾವಿರ ಹಿಂತಿರುಗಿಸುತ್ತೇನೆಂದು ಹೇಳಿದ್ದಾನೆ. ಅಡುಗೆಯ ಕಾಂಟ್ರಾಕ್ಟರ್ ಗಳದ್ದು ವಿಚಿತ್ರ ವ್ಯವಹಾರ. ಎಲ್ಲಿಯೂ ಕೈಗೆ ಸಿಗಲಾರರು. ಹೇಳಿದ ದಿನದಿಂದ ನಾಲ್ಕೈದು ದಿನ ಆಚೀಚೆ, ಅಂತೂ ದುಡ್ಡು ಬರುತ್ತಿತ್ತು. ಇಪ್ಪತ್ತು ಬರುತ್ತದೆಂದು ನೂರಕ್ಕೆ ನೂರು ಖಾತರಿ ಇಲ್ಲದಿದ್ದರೂ ಹದಿನೈದಂತೂ ಕೊಟ್ಟಾನು. ಮತ್ತೆ ಇಪ್ಪತ್ತು ಸಾವಿರದ ಸಾಮಾನುಗಳನ್ನು ಲಿಸ್ಟ್ ಮಾಡಿ ತೆಗೆದುಕೊಂಡೂ ಹೋದಾನು. ಅಂತೂ ಇನ್ನೊಂದು ವಾರದಲ್ಲಿ ಹನ್ನೊಂದು ಸಾವಿರದ ಮೇಲಂತೂ ದುಡ್ಡು ಸಿಗುವುದು ಗ್ಯಾರಂಟಿ.

ಹಾಗಂದುಕೊಂಡವಳು, ಅದೇ ಸಮಾಧಾನವನ್ನು ಗೋಪಿಗೆ ಹೇಳಿ ಹನ್ನೊಂದು ಸಾವಿರ ರೂಪಾಯಿಗಳು ಸಿಗಬಹುದೇ? ಎಂದು ಟೆಕ್ಸ್ಟ್ ಮೆಸೇಜ್ ಹಾಕಿದಳು. ಏನೋ ಹಿಂಜರಿತ, ಬೆರಳ ತುದಿಗಳು ಬೆವರಿ ಮೊಬೈಲ್ ನ ಟಚ್ಚೂ ಕೊಸರಿ ಕೊಸರಿ ಅಂತೂ ಸೆಂಡ್ ಆಯಿತು.

ಗೋಪಿಯ ಸುಳಿವೇ ಇರಲಿಲ್ಲ. ಯೆಸ್ – ನೋ ಯಾವ ರಿಪ್ಲೈ ಯೂ ಇರಲಿಲ್ಲ. ಧನಲಕ್ಷ್ಮಿಗೆ ಹೇಳ ತೀರದ ಕಸಿವಿಸಿ ಸಂಜೆಯವರೆಗೂ ಇತ್ತು. ಎಲ್ಲಿಯಾದರೂ ಫೋನ್ ಪೇ ಮಾಡಿದ್ದಾನೋ ಏನೋ? ಒಟ್ಟೂ ಅಲ್ಲದಿದ್ದರೂ ಐದಾರು ಸಾವಿರ ರೂಪಾಯಿಗಳನ್ನಾದರೂ ಕಳಿಸಿದ್ದಾನೋ ಏನೋ? ಫೋನ್ ಪೇ ಬ್ಯಾಲೆನ್ಸ್ ಅನ್ನು ಮತ್ತೆ ಮತ್ತೆ ನೋಡಿಕೊಂಡಳು. ಇಲ್ಲ. ಅಷ್ಟರಲ್ಲೇ ಸಿದ್ಧ ಮೂರು ಸಾರ್ತಿ ಕಾಲ್ ಮಾಡಿದ್ದ. ಸಂಜೆ ಆರರ ವೇಳೆಗೆ ಅಂತೂ ಇಂತೂ ಒಂದು ನಿರ್ಧಾರಕ್ಕೆ ಬಂದಳು ಧನಲಕ್ಷ್ಮಿ. ಬೆಳಗ್ಗಿನಿಂದ ಅಂಗಡಿಯ ಕಡೆಗೂ ಸುಳಿದಿರಲಿಲ್ಲ. ಸಿದ್ಧನ ಕಾಲ್ ಗಳನ್ನೂ ಸ್ವೀಕರಿಸಿರಲಿಲ್ಲ. ನೇರವಾಗಿ ಸಿದ್ಧನ ಮನೆಗೇ ಹೋದಳು. ಸಿದ್ಧನ ಹೆಂಡತಿಯೇ ಬಾಗಿಲು ತೆಗೆದಳು. ಸಿದ್ಧನೂ ಮನೆಯಲ್ಲಿದ್ದ. ಕೈ ಮುಗಿದು ಕೇಳಿದಳು. ಮುಂದಿನ ವಾರ ಬಾಡಿಗೆ ಕೊಡುತ್ತೇನೆಂದು. ಅನಿವಾರ್ಯವಾದ ವಿನೀತ ಭಾವ ಅವಳನ್ನು ಕುಗ್ಗಿಸಿ ಇನ್ನಿಲ್ಲದಂತೆ ಸಣ್ಣವಳನ್ನಾಗಿಸಿತ್ತು.

ಸರಿ ಸುಮಾರು ಅದೇ ತಿಂಗಳ ಕೊನೆಯ ದಿನಗಳಲ್ಲಿ ಗೋಪಿಯ ಬಗ್ಗೆ ಸುದ್ದಿ ಬಂತು. ಗೋಪಿ ಶಿರಸಿಯ ಹಳ್ಳಿಯೊಂದರ ಸಾವಿತ್ರಕ್ಕನೆಂಬವಳ ಮನೆಯಲ್ಲಿ ಮೂರು ದಿನ ತಂಗಿದ್ದನಂತೆ. ದಿನವೂ ಸೂರ್ಯೋದಯ ಸೂರ್ಯಾಸ್ತಗಳನ್ನು ತದೇಕವಾಗಿ ನೋಡುತ್ತಿದ್ದನಂತೆ. ಮತ್ತದೇ ಗುಡ್ಡಗಳು, ಏರು ಇಳಿ ಬೆಟ್ಟಗಳ ಸಾಲುಗಳನ್ನು ನೋಡುತ್ತ, ತೋಟ ಕಾನುಗಳನ್ನೆಲ್ಲ ತಿರು ತಿರುಗಿ ಬರುತ್ತಿದ್ದನಂತೆ. ಬಿಸಿ ಬಿಸಿ ಹಂಡೆಯ ನೀರನ್ನು ತಳ ಹರಿಯುವವರೆಗೂ ಮಿಂದು, ಅನ್ನ ಪಳದ್ಯಗಳನ್ನು ಉಂಡು, ಕುಟ್ಟಜ್ಜನೆಂಬ ಸಾಧುವೊಬ್ಬನ ಸ್ನೇಹವನ್ನೂ ಸಂಪಾದಿಸಿಕೊಂಡು ದಾವಣಗೆರೆಗೆ ಹಿಂತಿರುಗಿದ್ದನಂತೆ.

ಸುದ್ದಿಯನ್ನು ಕೇಳಿದ ಧನಲಕ್ಷ್ಮಿಯ ಮುಖದಲ್ಲೊಂದು ತೀಕ್ಷ್ಣ ನಗೆ ತುಂಬ ಹೊತ್ತು ಇದ್ದು ಮಾಯವಾಗಬೇಕೇ!