ಒಂದೇ ಒಂದು ರಾತ್ರಿ ನೀನು ಬಾಗಿಲನ್ನು ತೆರೆದುಬಿಡು
ರಾತ್ರಿಗಳಿರುವುದೇತಕ್ಕೇ? ಒಂದು ಸಲ ಅರ್ಥವನ್ನು ತಿಳಿಸಿಬಿಡು
ವ್ಯರ್ಥವಾಗಿ ಹೋದ ಎಲ್ಲ ರಾತ್ರಿಗಳ ನೆನಪಿನ ಹಾವಳಿ ಎದ್ದಿದೆ
ಈ ರಾತ್ರಿ ಅದಕ್ಕೊಂದು ಸಾಂತ್ವನದ ಕತೆಯನ್ನು ಮುಟ್ಟಿಸಿಬಿಡು
ಕತ್ತಲಾಗುವುದು ತಡವಾದರೂ ಬೆಳಕನ್ನು ದೂರುತ್ತೇನೆ
ರಾತ್ರಿಯಾಗುತ್ತಿದ್ದಂತೆಯೇ ಮನ್ಮಥನನ್ನು ಆಲಂಗಿಸಿಬಿಡು
ಮೈತುಂಬ ಅಮಲಿದ್ದರೂ ದಾರಿಯನ್ನೆಂದೂ ತಪ್ಪಿಲ್ಲ
ತುಟಿಗೆತುಟಿಯೊತ್ತಿ ಅಮಲಿನ ಗುಂಗನ್ನು ಹೆಚ್ಚಿಸಿಬಿಡು
ಹಾಸಿಗೆಯ ಮೇಲೆ ಸಾವಿರಾರು ಹೂಗಳು ಬೆತ್ತಲೆ ಮಲಗಿವೆ
ಮೈಮನಸ್ಸು ಮರೆಸುವಷ್ಟು ಸುಗಂಧವನ್ನು ಒರೆಸಿಬಿಡು
ಮಾದಕದ ಗಾಳಿ ನಮ್ಮನ್ನು ಹಿತವಾಗಿ ತಬ್ಬುತ್ತಲಿದೆ
ಮೈಗೆ ಮೈಸೋಕಿಸಿ ಬೆಚ್ಚನೆಯ ಸ್ಪರ್ಶವನ್ನು ತಾಕಿಸಿಬಿಡು