ವಿಲೋಮ ಚಿತ್ರ
ಚಿತ್ರ-1
ಚಲನೆಯ ಪಾದಗಳ ತಳುಕಿಗೆ
ನಾಡಿಪೂರ ಮಿಡಿನಾಗರ ನರ್ತನ
ಸೃಷ್ಠಿಕೋಲು ಪಟ್ಟಾಭಿಯಾಗಿ
ಶಿಖರಸಂಚಾರಿ ಧೀರನಾದಂತೆ
ಕಂಠದ ಉಸಿರು ಹಾವು-ಏಣಿಯಾಟದ ಸರಳದಾಳ
ಏರಿಳಿಯುವ ಏಣಿಕೆ ಗೊಂಚಲಲಿ
ನೋವು ಸುಖದ ಸೆರೆಯಾಳು.
ಹತ್ತುವ ಏಣಿ ಹತ್ತಿ
ಮುಗಿಲಿಗೆ ಮುತ್ತಿಡುವಾಗ
ಸೃಷ್ಠಿ ಮೂಲವ ಬೆನ್ನತ್ತದಿರು,
ಮೂಲ ಮೀನ ಹೆಜ್ಜೆಯ ಒಲವಿನ ಕಲೆ.
ಮುತ್ತು ಚಿತ್ತಿಯ ಮಾಡಾಗಿ ಮೋಡಕಟ್ಟಲಿ
ಕಟ್ಟೆಯೊಡೆದ ಹನಿ ಕಡಲಾಗಿ ಒಡಲು ಸೇರಲಿ
ಕುಡಿಕೆಯೊಳಗೆ ಫಲದ ಬೀಜ ಮಿಡಿಯಲಿ
ಕುಡಿ ಮಿಡಿಯಾಗಿ, ಮೈಯೆಲ್ಲಾ ಕಾಯಾಗಿ
ಕಾಯದ ತುಂಬಾ ಹೂ ಅರಳಲಿ.
ಚಿತ್ರ -2
ಚಲನೆಯ ಪಾದಗಳ ತಳುಕಿಗೆ
ನರಪೂರ ವಿಷದ ಸಂಚಾರಿ ಹಾವು
ಮೈಯೆಲ್ಲಾ ಕಾವು ಬಾವು.
ಆಯ್ಕೆ ಅಂಡಾಣು ಸೃಷ್ಠಿ ನಳಿಕೆಯ ದೊರೆಯಾಗಿ
ಮೂಲದ ಕೆಂಡ ಊದುವ ಊದುಬುರುಕಿಯಾಗಿ
ಉರಿಯ ಕಿಚ್ಚಿಟ್ಟರೆ ಪಿಂಡವೊಂದು ವ್ಯರ್ಥದಾತುಗಳ ಕೊಚ್ಚಿ.
ಭೋಗಕಾಮದ ಬೇರು ಮಿದುಳ ಹಬ್ಬಿದರೆ
ತಲೆಯ ತುಂಬಾ ಪಿತ್ತದ ಅಣಬೆ
ಭೋಪರಾಕಿನ ಬರುವಾತು ರುಜುವಾತುಗಳಾದರೆ
ಬಚ್ಚಲಿಗೂ ಕೆಚ್ಚಲಿನ ಯೋಗ.
ಉರುಳು ಚಕ್ರದೊಳಗೆ ಸೃಷ್ಠಿಗುಲಾಮಿಯ
ನಿತ್ಯ ಅತ್ಯಾಚಾರ ಮೊಗ್ಗಿನ ಮೇಲಾದರೆ
ಬರಿಯ ರಕುತ ಚಿಮ್ಮಿಸುವ ಆಟ ಮೇಲಾಟವಾದರೆ
ಅರಳುವ ದಳಕೆ ಪರಿಮಳವೆಲ್ಲಿ?