ಹೀಗೆ ನಡೆಯಬೇಕು

ನಾವಿಬ್ಬರೂ ಕೈ-ಕೈ ಹಿಡಿದು
ಹೀಗೆ ನಡೆಯಬೇಕಲ್ಲ!
ಶಿವಶಿವೆಯರು ನಮ್ಮ
ನೋಡಲೆಂದು ಇಳೆಗಿಳಿದು ಬರಬೇಕು
ಕೃಷ್ಣ-ರಾಧೆಯರು ತುಸು ಅಸೂಯೆಪಡಬೇಕು

ನಾವಿಬ್ಬರೂ ಕೈ-ಕೈ ಹಿಡಿದು
ಹೀಗೆ ನಡೆಯಬೇಕಲ್ಲ
ಆ ರೂಮಿ ಇದ್ದಾನೆ ನೋಡು!
ಜಲಾಲುದ್ದೀನು
ಅವ ನಮ್ಮ ಬಗೆಯ ಬಣ್ಣಿಸೆ
ಹೊಸ ಪದಗಳು ಸಿಗದೆ ಕೈ-ಕೈ ಹಿಸುಕಿಕೊಳ್ಳಬೇಕು
ಕಾಳಿದಾಸ ಮತ್ತೊಂದು
ಮೇಘದೂತಕ್ಕೆ ಅಣಿಯಾಗಬೇಕು

ನಾವಿಬ್ಬರೂ ಕೈ-ಕೈ ಹಿಡಿದು ಹೀಗೆ ನಡೆಯಬೇಕಲ್ಲ
ಈ ಭೂಮಿ ಆ ಬಾನಿಗಿದು
ಸಾಧ್ಯವಾಗದ್ದಕ್ಕೆ ಕನಲಿ ಕರುಬಬೇಕು
ಉರಿದುರಿದೇ ಒಬ್ಬಂಟಿ ತಿರುಗುತ್ತ
ಆಯು ಕಳೆದ ಸೂರ್ಯ
ಪಶ್ಚಾತ್ತಾಪದಲಿ ಸಮುದ್ರಕೆ ಬಿದ್ದು ಸಾಯಲೆತ್ನಿಸಬೇಕು

ನಾವಿಬ್ಬರೂ ಕೈ-ಕೈ ಹಿಡಿದು
ಹೀಗೆ ನಡೆಯಬೇಕಲ್ಲ!
ಇಳಿವ ಮಳೆಗೂ, ಇಳೆಯ ಪುಳಕಕೂ
ಹೊಸ ವ್ಯಾಖ್ಯಾನ ಸಿಕ್ಕು
ಝುಮ್ಮೆನೆ ಒಲವು
ಹಸಿರೊಡೆಯಬೇಕು
ಸೋತ ರೆಕ್ಕೆ, ಬತ್ತಿದ ಕಂಗಳು
ಬರಡೆದ್ದ ಎದೆಗಳಲ್ಲಿ
ತೇವ ಜಿನುಗಿ
ಪ್ರೇಮವೆಂಬ ಸಂಜೀವಿನಿಯ ಸಾಕ್ಷೀಕರಿಸಬೇಕು

ನಾವಿಬ್ಬರೂ ಕೈ-ಕೈ ಹಿಡಿದು
ಹೀಗೆ ನಡೆಯಬೇಕಲ್ಲ
ಪ್ರೇಮದಲಿ ಸತ್ತವರಿಗಾಗಿ
ಎಚ್ಚೆತ್ತು ಮಿಡಿಯಬೇಕು ಮತ್ತಾ
ದೇವರು ಕಣ್ಣೀರು ಹಾಕಬೇಕು
ಕೈಯೊಳಗಿನ ಪಾಶ ಬಿಸುಟು
ಕೊಲುವ ಕಾಯಕದ ಕಾಲನು
ಗುಲಾಬಿ ಹಿಡಿದು ಹೊರಡಬೇಕು.

ನಾಗರಾಜ ಬಸರಕೋಡ ಬೇನಾಳ ಮೂಲತಃ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕು ಬೇನಾಳ ಗ್ರಾಮದವರು.
ಪ್ರಸ್ತುತ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯಲ್ಲಿ ನಿರ್ವಾಹಕರಾಗಿ ನಿರ್ವಹಿಸುತ್ತಿದ್ದಾರೆ.
“ಎದೆಯ ಬೋಧಿ ಚಿಗುರು” ಇವರ ಪ್ರಕಟಿತ ಕವನ ಸಂಕಲನ. ಎರಡನೇ ಕವನ ಸಂಕಲನ ಅಚ್ಚಿನಲ್ಲಿದೆ.