ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲಾ

ಎಷ್ಟು ಸವರಿದರೂ ಮತ್ತೆ ಮತ್ತೆ ಮುಟ್ಟಬೇಕೆನ್ನಿಸುವ
ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲ
ಅಕ್ಷರಗಳು ನನ್ನೊಳಗಿನ ಆತ್ಮದಂತೆ ಹರಿದಾಡುತ್ತವೆ.

ಆತನ ತುಟಿಗಳ ಮೇಲೆ ಬೆರಳಾಡಿಸಿದಾಗೆಲ್ಲ
ಅನೂಹ್ಯವಾದ ಬೆಸುಗೆ
ಕರುಳ ಕೊಂಡಿಯಂತೆ ಒಳಗೊಳಗೆ ಬಲಿಯುತ್ತದೆ.
ನನ್ನೊಳಗಿನ ಆತ್ಮದಕುರುಡುಕರಗಿ ಹೋಗಲೆಂದು
ಆತನ ಪತ್ರಕ್ಕೆ ಮಾತ್ರರುಜು ಹಾಕಿದೆ.

ಸತ್ಯಕ್ಕೂ ಸುಳ್ಳಿಗೂ ನಡುವಿನ ಪಟ
ಕಳೆದು ಕಪ್ಪುಕಲೆಗಳು ಎದ್ದುಬಿದ್ದು ಹೊರಳಾಡಿ
ಶುದ್ಧ ಮಣ್ಣಿನೆದೆಗಳು ಬರಸೆಳೆದು
ತಬ್ಬಿಕೊಂಡವು. ಲೋಕದ ಜಂಜಾಟಗಳಿಗೆ
ಆರ್ತನಾದಗೈವ ಅಕ್ಷರಗಳಿಲ್ಲ ಈಗ

ನೀಲಾಕಾಶದ ನಿರಭ್ರತೆಯ ಹೊಟ್ಟೆ ಸೀಳಿ
ಮಿಂಚಿನಕಣವೊಂದು ಆಳಕ್ಕೆ ಗರ್ಭದೊಳಗೆ
ಹೊಕ್ಕಿದ್ದೇತಡ, ನೆಲ ಮುಗಿಲನ್ನು
ಮೋಹಿಸುತ್ತಾ ಎದೆತೆರೆದು ಕಣ್ಣರಳಿಸಿತು.
ಈ ದಾರಿಯ ಸೊಬಗಿನಲ್ಲಿ ಕಣ್ಸೆಳೆಯುವ
ಬಿಸಿಲು-ಬೆಳದಿಂಗಳು, ಹಸಿರು-ಕೆಸರು
ಎಲ್ಲವನ್ನೂಇನ್ನಿಲ್ಲದಂತೆ ಪ್ರೀತಿಸುತ್ತಾ,
ಎರಡೂ ತೆಕ್ಕೆಗಳಲ್ಲಿ ಬರಸೆಳೆದುಕೊಂಡು ಮುದ್ದಿಸುತ್ತಿದ್ದೇನೆ.

ಬಿಚ್ಚು ಮನಸ್ಸಿನಂತೆ ದೇಹದ ಬಿಚ್ಚು ಕೂಡಾ ಆಪ್ತವಾದಂತೆ
ಅವನೂ ನಾನು ಕ್ಷಣಕ್ಷಣವೂ ಬಿಡದೇ
ಆವರಿಸಿಕೊಳ್ಳುತ್ತಲೇ, ನೆಲದ ಹಸಿ ಚಿಗುರನ್ನು
ಜಗವೊಪ್ಪುವ ಪದಗಳಿಂದ ಹಿಡಿದು
ಮತ್ತದನ್ನು ಸುರವಿ ಹರವುದನುಕಲಿತಿದ್ದೇನೆ.
ಆತನ ಕೈಸಂದಿನೊಳಗೆ ಬೆರಳು ತೂರಿಸಿಕೊಂಡೇ
ದೇಹ ಮೀರಿದ ಪ್ರೇಮದ ಠೇವಣಿಇಟ್ಟಿದ್ದು
ಮೊನ್ನೆ ಮೊನ್ನೆಯಷ್ಟೇ ನಗದಾಗಿದೆ.
ಈಗ ನಾನು ಅವನೂ ಕೂಡಿಯೇ ಮನೆ ಕಟ್ಟುತ್ತಿದ್ದೇವೆ.

ಗೋಡೆ

ಗೋಡೆಗಟ್ಟಿಯಿದ್ದರೆ ಎಷ್ಟು ಬೇಕಾದರೂ
ಯಾವಾಗ ಬೇಕಾದರೂಬಣ್ಣ
ಬಳಿಯಬಹುದು
ಅಮ್ಮನ ಬುದ್ದಿವಾದ.
ಅದೇಕೋ ಅಕ್ಕ ಅಸಹಾಯಕಳಾಗಿ
ಕುಸಿದು ಕೂತಿದ್ದಾಳೆ.
ಚೊಚ್ಚಿಲ ಹೆರಿಗೆ ಶಿವನ ಪಾದ ಸೇರಿದೆಕಂದ.

ಹಸಿಗೋಡೆಗೆ ಬಣ್ಣ ನಿಲ್ಲದು
ಅಪ್ಪ ಆಗಾಗ ಉಚ್ಚರಿಸುತ್ತಿದ್ದ.
ಇದನ್ನು ಕೇಳಿದ ದಿನವೆಲ್ಲ
ಏರುಯೌವನದಅಣ್ಣಕೊತಕೊತ
ಕುದಿಯುವಎಣ್ಣೆಯಾಗುತ್ತಿದ್ದ.

ಗೋಡೆಯಾಗಬೇಡ
ನನ್ನ ಮತ್ತವಳ ಮದ್ಯೆ
ಸ್ನೇಹಿತನ ಮಾತುಕಿವಿಯಲ್ಲಿ ಪದೇ ಪದೇ
ಮಾರ್ದನಿಸುತ್ತದೆ.
ಇಂದಿಗೂ ಅರ್ಥವಾಗಿಲ್ಲ.

ಗೋಡೆಗೆ ಹಸಿಯಿರುವಾಗಲೇ
ನೀರುಕ್ಕಿಸಿದರೆ ತಾಳಿಕೆ ಬಾಳಿಕೆ.
ಹರೆಯದಲ್ಲಿ ಕಷ್ಟಗಳು ಬಲಹೆಚ್ಚಿಸುತ್ತವೆ
ಗಟ್ಟಿಮಾಡುತ್ತ ಮೀನಖಂಡಗಳ.
ಇಳಿವಯಸ್ಸಿನ ಹಿರಿಯ
ಹಳಹಳಿಸಿ ನುಡಿಯುತ್ತಿದ್ದಾನೆ.

ಅಲ್ಲೆಲ್ಲ ವಿಕೃತ ಮನಸ್ಸಿನ ಕನ್ನಡಿಗಳೇ
ರಾರಾಜಿಸುತ್ತಿವೆಗೋಡೆತುಂಬಾ.
ಮೇಲಕ್ಕೆ ದೊಡ್ಡದಾಗಿ ಬರೆದಿದೆ.
ಹೆಣ್ಣುಮಕ್ಕಳ ಶೌಚಾಲಯ.

ಮೊನ್ನೆ ಮೊನ್ನೆಆಕೆಯಗಂಡ ಸತ್ತ
ಚಾವಣಿ ಹಾರಿದ ಮಣ್ಣಿನಗೋಡೆ
ಬಿರುಗಾಳಿ ಮಳೆಗೆ ನಾಲ್ಕೆ ದಿನದಲ್ಲಿ
ನೆಲಕಚ್ಚಿತು.

ಭದ್ರಗೋಡೆಗಳ ನಡುವೆ
ಕಿರುಬಾಗಿಲ ಸಂದಿಯಿಂದಇಣುಕುತ್ತಾ
ಆಕೆ ದಾರಿ ಕಾಯುತ್ತಾಳೆ.
ಆತಊರೂರು ಸುತ್ತುತ್ತಾ
ಹಕ್ಕಿಯಂತೆ ಸ್ವಚ್ಛಂದ.
ಗೋಡೆ ಮಾತ್ರಆಕೆಯ ಅಹವಾಲು ಆಲಿಸಿಕೊಳ್ಳುತ್ತದೆ

 

ನಾಗರೇಖಾ ಗಾಂವಕರ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.
‘ಏಣಿ’, ‘ಪದಗಳೊಂದಿಗೆ ನಾನು (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ (ಪರಿಚಯಾತ್ಮಕ ಲೇಖನಗಳ ಅಂಕಣ ಬರಹ)

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)