ಪೂರ್ವಕಾಲದಲ್ಲಿ ಅಗ್ರಹಾರವಾಗಿದ್ದ ನಾಗಲಾಪುರ ಗ್ರಾಮದ ನಡುವೆ ಇರುವ ಕೇಶವ ದೇಗುಲವಾಗಲಿ ಹೊರವಲಯದಲ್ಲಿರುವ ಕೇದಾರೇಶ್ವರ ದೇಗುಲವಾಗಲಿ ಪೂರ್ಣಪ್ರಮಾಣದ ಶಿಲ್ಪಕಲಾಸಂಪನ್ನವಾದ ಗುಡಿಗಳೇನೂ ಅಲ್ಲ. ಕುಸಿತದ ಅಪಾಯದಲ್ಲಿದ್ದು ಪುರಾತತ್ವ ಇಲಾಖೆಯ ಸಮರ್ಥ ಮಾರ್ಗದರ್ಶನದಲ್ಲಿ ಪುನರ್ಜೋಡಣೆಗೊಂಡು ಸುಸ್ವರೂಪ ತಾಳಿರುವ ಈ ಎರಡೂ ಗುಡಿಗಳಿಗೆ ಶಿಖರಗಳಿಲ್ಲ. ನಕ್ಷತ್ರಾಕಾರದ ಜಗತಿಯ ಮೇಲೆ ಕಟ್ಟಡವನ್ನು ನಿರ್ಮಿಸಿದೆ. ಎರಡೂ ದೇವಾಲಯಗಳ ಹೊರಗೋಡೆಯ ಕೆಲವೆಡೆ ಸಾಲುಪಟ್ಟಿಕೆಗಳೂ, ಭಿತ್ತಿಶಿಲ್ಪಗಳೂ ಕಂಡುಬಂದರೆ ಇನ್ನು ಕೆಲಭಾಗಗಳಲ್ಲಿ ಶಿಲ್ಪವೇನೂ ಇಲ್ಲದೆ ಕಲ್ಲುಗೋಡೆಯನ್ನು ಹಾಗೆಯೇ ಉಳಿಸಲಾಗಿದೆ. ಹೊಯ್ಸಳ ಆಳ್ವಿಕೆಯ ಅನುಸರಣೆಯಂತೆ ಕೇದಾರೇಶ್ವರ ಗುಡಿಯ ಸನಿಹ ನಿರ್ಮಿಸಲಾದ ವಿಶಾಲವಾದ ಕೆರೆ ಈಗಲೂ ಸುಸ್ಥಿತಿಯಲ್ಲಿದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಎಪ್ಪತ್ತೊಂದನೆಯ ಕಂತು

 

ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ಕುಣಿಗಲ್ ನಂತರ ತುರುವೇಕೆರೆಯತ್ತ ಬಲಕ್ಕೆ ತಿರುಗುವ ರಸ್ತೆಯಲ್ಲಿ ಸಾಗಿದರೆ ಮಾಯಸಂದ್ರ ತಲುಪಬಹುದು. ಇಲ್ಲಿಂದ ತುರುವೇಕೆರೆಯತ್ತ ಹೋಗುವ ದಾರಿಯಲ್ಲೇ ಅನತಿ ದೂರದಲ್ಲಿ ನಾಗಲಾಪುರ ಗ್ರಾಮಕ್ಕೆ ಹೊರಳುವ ರಸ್ತೆ ಸಿಗುವುದು. ಮಾಯಸಂದ್ರದಿಂದ ಮುತ್ತುಗದಹಳ್ಳಿ ಮಾರ್ಗವಾಗಿ ಎಂಟು ಕಿ.ಮೀ.ದೂರದಲ್ಲಿರುವ ಈ ನಾಗಲಾಪುರದಲ್ಲಿ ಹೊಯ್ಸಳರ ಕಾಲದ ಎರಡು ವಿಶಿಷ್ಟ ಗುಡಿಗಳನ್ನು ನೀವು ನೋಡಬಹುದು- ಕೇದಾರೇಶ್ವರ ಹಾಗೂ ಚನ್ನಕೇಶವ.

ಕ್ರಿ.ಶ. 1235ರಿಂದ ಐವತ್ತಕ್ಕೂ ಹೆಚ್ಚು ವರ್ಷ ರಾಜ್ಯಭಾರ ಮಾಡಿದ ಹೊಯ್ಸಳ ಅರಸ ಮೂರನೆಯ ಸೋಮೇಶ್ವರನ ಕಾಲದಲ್ಲಿ ಕಟ್ಟಲಾದ ದೇಗುಲಗಳಿವು. ಇದೇ ಅವಧಿಯಲ್ಲಿ (1245-1260) ನಿರ್ಮಾಣಗೊಂಡ ನುಗ್ಗೇಹಳ್ಳಿ ಹಾಗೂ ಜಾವಗಲ್ಲಿನ ದೇಗುಲಗಳಷ್ಟು ಶಿಲ್ಪಶ್ರೀಮಂತಿಕೆಯೇನೂ ನಾಗಲಾಪುರದ ಗುಡಿಗಳಲ್ಲಿ ಕಾಣುವುದಿಲ್ಲ, ನಿಜ. ಆದರೆ, ಶಿಲ್ಪಶಾಸ್ತ್ರದಲ್ಲಿ ನುರಿತವರ ಅಧೀನದಲ್ಲಿ ಶಿಷ್ಯರಾಗಿದ್ದ ಹಲವರು ನಿರಂತರ ಅಭ್ಯಾಸ ಮಾಡುತ್ತ ಕೆತ್ತಿರಬಹುದಾದ ಅನೇಕ ಶಿಲ್ಪಗಳನ್ನು ಇಲ್ಲಿಯ ಗುಡಿಗಳಲ್ಲಿ ಕಾಣಬಹುದು.

ಪೂರ್ವಕಾಲದಲ್ಲಿ ಅಗ್ರಹಾರವಾಗಿದ್ದ ನಾಗಲಾಪುರ ಗ್ರಾಮದ ನಡುವೆ ಇರುವ ಕೇಶವ ದೇಗುಲವಾಗಲಿ ಹೊರವಲಯದಲ್ಲಿರುವ ಕೇದಾರೇಶ್ವರ ದೇಗುಲವಾಗಲಿ ಪೂರ್ಣಪ್ರಮಾಣದ ಶಿಲ್ಪಕಲಾಸಂಪನ್ನವಾದ ಗುಡಿಗಳೇನೂ ಅಲ್ಲ. ಕುಸಿತದ ಅಪಾಯದಲ್ಲಿದ್ದು ಪುರಾತತ್ವ ಇಲಾಖೆಯ ಸಮರ್ಥ ಮಾರ್ಗದರ್ಶನದಲ್ಲಿ ಪುನರ್ಜೋಡಣೆಗೊಂಡು ಸುಸ್ವರೂಪ ತಾಳಿರುವ ಈ ಎರಡೂ ಗುಡಿಗಳಿಗೆ ಶಿಖರಗಳಿಲ್ಲ. ನಕ್ಷತ್ರಾಕಾರದ ಜಗತಿಯ ಮೇಲೆ ಕಟ್ಟಡವನ್ನು ನಿರ್ಮಿಸಿದೆ. ಎರಡೂ ದೇವಾಲಯಗಳ ಹೊರಗೋಡೆಯ ಕೆಲವೆಡೆ ಸಾಲುಪಟ್ಟಿಕೆಗಳೂ, ಭಿತ್ತಿಶಿಲ್ಪಗಳೂ ಕಂಡುಬಂದರೆ ಇನ್ನು ಕೆಲಭಾಗಗಳಲ್ಲಿ ಶಿಲ್ಪವೇನೂ ಇಲ್ಲದೆ ಕಲ್ಲುಗೋಡೆಯನ್ನು ಹಾಗೆಯೇ ಉಳಿಸಲಾಗಿದೆ. ಹೊಯ್ಸಳ ಆಳ್ವಿಕೆಯ ಅನುಸರಣೆಯಂತೆ ಕೇದಾರೇಶ್ವರ ಗುಡಿಯ ಸನಿಹ ನಿರ್ಮಿಸಲಾದ ವಿಶಾಲವಾದ ಕೆರೆ ಈಗಲೂ ಸುಸ್ಥಿತಿಯಲ್ಲಿದೆ.

ಚನ್ನಕೇಶವಗುಡಿಯ ಬಾಗಿಲ ಅಕ್ಕಪಕ್ಕ ಕಲ್ಲುಗೋಡೆ ಮಾತ್ರವೇ ಉಳಿದಿದ್ದು ಪೂರ್ವದಲ್ಲಿದ್ದಿರಬಹುದಾದ ಶಿಲ್ಪಗಳೇನೂ ಕಾಣವು. ಆದರೆ ದೇಗುಲದ ಪ್ರದಕ್ಷಿಣೆಗೆ ಹೊರಟರೆ, ಎಡಬದಿಯಿಂದ ಸಾಲುಪಟ್ಟಿಕೆಗಳೂ ಶಿಲ್ಪಗಳೂ ಇದಿರಾಗುತ್ತವೆ. ಸಾಲುಪಟ್ಟಿಕೆಗಳಲ್ಲಿ ಕೆಳಗಿನಿಂದ ಅನುಕ್ರಮವಾಗಿ ಆನೆ, ಕುದುರೆಸವಾರರು, ಹೂಬಳ್ಳಿಗಳು, ಮಕರ ಹಾಗೂ ಹಂಸಗಳು ಕಾಣುತ್ತವೆ. ಪುರಾಣಕಥೆಗಳನ್ನು ಚಿತ್ರಿಸುವ ಸಲುವಾಗಿ ಖಾಲಿಬಿಟ್ಟ ನಾಲ್ಕನೆಯ ಪಟ್ಟಿ ಹಾಗೆಯೇ ಉಳಿದಿದೆ.

ಭಿತ್ತಿಶಿಲ್ಪಗಳಲ್ಲಿ ಮುಖ್ಯವಾಗಿ ನಾಟ್ಯ ಗಣಪತಿ, ವಿಷ್ಣುವಿನ ವಿವಿಧ ರೂಪಗಳು, ಯೋಗಾನರಸಿಂಹ, ಗೋವರ್ಧನಧಾರಿ ಕೃಷ್ಣ, ಐರಾವತವನ್ನೇರಿದ ಇಂದ್ರ ಪಾರಿಜಾತವನ್ನು ಒಯ್ಯುವ ಕೃಷ್ಣ ಸತ್ಯಭಾಮೆಯರನ್ನು ಬೆನ್ನಟ್ಟುವುದು, ನಾಟ್ಯ ಸರಸ್ವತಿ, ಸ್ಥಾನಕ (ನಿಂತ ಭಂಗಿಯಲ್ಲಿರುವ) ಬ್ರಹ್ಮ, ಯೋಗ ನಾರಾಯಣ ಹಾಗೂ ಆಸೀನ ಹಯಗ್ರೀವ ಮೂರ್ತಿಗಳನ್ನು ನೋಡಬಹುದು. ಪ್ರಸಿದ್ಧ ಹೊಯ್ಸಳ ದೇಗುಲಗಳ ಶಿಲ್ಪಗಳಲ್ಲಿ ಕಾಣುವ ಕೆತ್ತನೆಯ ಸೊಗಸು, ಸೂಕ್ಷ್ಮ ವಿವರಗಳನ್ನು ಒಳಗೊಂಡಿಲ್ಲವಾದರೂ ಉತ್ತಮ ಅಭ್ಯಾಸಮಾದರಿಗಳಂತೆ ಈ ಶಿಲ್ಪಗಳು ಗೋಚರಿಸುತ್ತವೆ.

ಲಕ್ಷ್ಮೀನಾರಾಯಣರನ್ನು ಹೊತ್ತ ಗರುಡ, ಹಿರಣ್ಯಕಶಿಪುವನ್ನು ಸಂಹರಿಸುತ್ತಿರುವ ನರಸಿಂಹ ಹಾಗೂ ಮಹಿಷ ಮರ್ದಿನಿಯರ ಶಿಲ್ಪಗಳೂ ಇಲ್ಲಿವೆ. ದೇವಾಲಯದೊಳಗೆ ನವರಂಗದಲ್ಲಿರುವ ಭುವನೇಶ್ವರಿಯ ವಿವಿಧ ವಿನ್ಯಾಸಗಳು ಸೊಗಸಾಗಿವೆ. ಚನ್ನಕೇಶವನ ದೇವಾಲಯವೆಂಬ ಹೆಸರಿದ್ದರೂ ಒಳಗುಡಿಯಲ್ಲಿರುವ ಪ್ರತಿಮೆ ಕೇಶವನದಲ್ಲ. ಶಂಖಚಕ್ರಧಾರಿಯಾಗಿ ಬಲಗೈಯನ್ನು ವರದಹಸ್ತರೂಪದಲ್ಲೂ ಎಡಗೈಯನ್ನು ಸೊಂಟದ ಪಕ್ಕದಲ್ಲೂ ಇರಿಸಿಕೊಂಡು ನಿಂತಿರುವ ವೆಂಕಟೇಶನ ವಿಗ್ರಹವನ್ನು ಇಲ್ಲಿ ಕಾಣಬಹುದು. ಮುಂಚೆ ಇದ್ದಿರಬಹುದಾದ ಕೇಶವನ ವಿಗ್ರಹಕ್ಕೆ ಬದಲಾಗಿ ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಈ ವೆಂಕಟೇಶನ ಪ್ರತಿಮೆಯನ್ನು ಸ್ಥಾಪಿಸಿರಬೇಕೆಂದು ಊಹಿಸಲಾಗಿದೆ.

ಕೇದಾರೇಶ್ವರ ದೇಗುಲದ ಭಿತ್ತಿಶಿಲ್ಪಗಳು, ನಕ್ಷತ್ರಾಕಾರದ ಜಗತಿ ಎಲ್ಲದರ ವಿನ್ಯಾಸವೂ ಕೇಶವದೇಗುಲದಂತೆಯೇ. ಒಳಗುಡಿಯಲ್ಲಿ ನವರಂಗದ ಭುವನೇಶ್ವರಿಯ ಚೆಲುವಾದ ವಿನ್ಯಾಸಗಳು ಸುಸ್ಥಿತಿಯಲ್ಲಿವೆ. ಅಷ್ಟದಿಕ್ಪಾಲಕರಿರುವ ನಡುಭಾಗದ ಭುವನೇಶ್ವರಿ ಆಕರ್ಷಕ. ಒಂದೆಡೆ ಸೂರ್ಯನ ಪ್ರತಿಮೆಯನ್ನು ಇರಿಸಿದೆ. ಗರ್ಭಗುಡಿಯಲ್ಲಿ ಪಾಣಿಪೀಠದ ವಿಸ್ತೀರ್ಣಕ್ಕೆ ಹೋಲಿಸಿದರೆ ಚಿಕ್ಕದಾದ ಪ್ರಾಚೀನ ಶಿವಲಿಂಗವಿದೆ.

(ಫೋಟೋಗಳು: ಲೇಖಕರವು)

ಇಲ್ಲಿಯೂ ದೇವಾಲಯದ ಸುತ್ತ ಒಂದು ದಿಕ್ಕಿನ ಗೋಡೆಯನ್ನು ಹೊರತುಪಡಿಸಿದಂತೆ ಕೆಳಗೆ ಆರು ಸಾಲಿನ ಪಟ್ಟಿಕೆಗಳಿವೆ. ಗೋಡೆಯ ಮೇಲಿನ ವಿಗ್ರಹಗಳ ಪೈಕಿ ಬಹುತೇಕ ಸರಳಕೆತ್ತನೆಯ ಶಿಲ್ಪಗಳು.. ಕೆಲವು ಅಪೂರ್ಣವಾಗಿಯೇ ಇವೆ. ಮಹಿಷ ಮರ್ದಿನಿ, ಕಬ್ಬುಬಿಲ್ಲು ಹಿಡಿದ ಮನ್ಮಥ, ವಿಷಕನ್ಯೆ ಮತ್ತವಳ ಸಹಚರ ಮಾಂತ್ರಿಕ, ಶಿವನ ವಿವಿಧ ರೂಪಗಳು, ಆಸೀನ ಸರಸ್ವತಿ, ನಾಟ್ಯಶಿವೆ, ಮಹಿಷಮರ್ದಿನಿ, ಆಸೀನ ಗಣಪತಿ, ಕಾಲಭೈರವ, ಸ್ಥಾನಕ ಬ್ರಹ್ಮ, ಮತ್ಸ್ಯವನ್ನು ಭೇದಿಸುತ್ತಿರುವ ಅರ್ಜುನ, ಗಜಾಸುರ ಸಂಹಾರ ಮೊದಲಾದ ಶಿಲ್ಪಗಳು ಗಮನಸೆಳೆಯುವಂತಿವೆ. ತಂತಮ್ಮ ವಾಹನಗಳನ್ನೇರಿದ ವಿವಿಧ ದಿಕ್ಪಾಲಕರನ್ನು ಶಿಲ್ಪಗಳಲ್ಲಿ ಮೂಡಿಸಿರುವುದು ಇಲ್ಲಿಯ ವಿಶೇಷ.

ತುಮಕೂರು ಜಿಲ್ಲೆಗೆ ಸೇರಿದ ನಾಗಲಾಪುರಕ್ಕೆ ಬರುವವರು ಸನಿಹದ ತುರುವೇಕೆರೆ, ನೊಣವಿನಕೆರೆಗಳಲ್ಲದೆ ಮಂಡ್ಯಜಿಲ್ಲೆಯ ವ್ಯಾಪ್ತಿಗೆ ಬರುವ ಬೆಳ್ಳೂರು, ಆದಿಚುಂಚನಗಿರಿ, ಆರಣಿ, ದೊಡ್ಡ ಜಟಕ, ದಡಗ ಮೊದಲಾದ ಸ್ಥಳಗಳಲ್ಲಿರುವ ಪುರಾತನ ದೇಗುಲಗಳನ್ನೂ ನೋಡಿ ಬರಲು ಅವಕಾಶವಿದೆ.