ಮಹಾರಾಜ ಕಾಲೇಜಿನ ಭವ್ಯ ಕಟ್ಟಡದಲ್ಲಿ ತಿರುಗಾಡಿ, ತರಗತಿಯ ಕೊಠಡಿಗಳಲ್ಲಿ ಕುಳಿತು ವಿದ್ಯಾರ್ಥಿಯಾಗಿ ಒಂದಿಷ್ಟು ಅನುಭವ ಪಡೆದಮೇಲೆ, ಬೇರಾವ ಕಾಲೇಜೂ ಇದರ ಭವ್ಯತೆಗೆ ಸಮನಲ್ಲ ಎನಿಸಿದರೆ ತಪ್ಪಿಲ್ಲ. ಈ ಕಾಲೇಜಿನ ಇತಿಹಾಸ, ಅಧ್ಯಾಪಕ ಪರಂಪರೆ ಅತ್ಯುನ್ನತ ದರ್ಜೆಯದು. ನಾವು ಓದುವ ಕಾಲಕ್ಕೆ ಕೆಳಮುಖವಾಗಿ ಸಾಗತೊಡಗಿದ್ದ ಈ ಪರಂಪರೆಯ ಮಟ್ಟ ಇದೀಗ ಎಲ್ಲಿಗೆ ಮುಟ್ಟಿದೆಯೋ ತಿಳಿಯದು’
ನಿವೃತ್ತ ಅಧ್ಯಾಪಕ ಟಿ.ಎಸ್. ಗೋಪಾಲ್ ಅವರ ‘ಅಧ್ಯಾಪನದ ಅವಾಂತರಗಳು’ ಪ್ರಬಂಧ ಸಂಕಲನದಿಂದ ಆಯ್ದ ಒಂದು ಲೇಖನ.

ಮಹಾರಾಜದಲ್ಲಿ ನಾನು ಓದಿದ್ದು 1970-73ರ ಅವಧಿ. ಅದಕ್ಕೆ ಮೊದಲು, 1969ರಲ್ಲಿ ಯುವರಾಜದಲ್ಲಿ ಪಿಯುಸಿ ವಿಜ್ಞಾನ ಆಯ್ಕೆಮಾಡಿಕೊಂಡು ಓದುವಾಗ, ಮಹಾರಾಜ ಕಟ್ಟಡವನ್ನು ದಾಟಿಕೊಂಡೇ ಹೋಗಬೇಕು. ಆಗೆಲ್ಲ ನನ್ನ ಕಾಲೇಜು ಮಹಾರಾಜದ ಎದುರು ತೀರಾ ಚಿಕ್ಕ ಕಟ್ಟಡದ ಹಾಗೆ ಕಾಣುವುದು. ಯುವರಾಜದ ಮಕ್ಕಳೋ ಪ್ರಯೋಗಾಲಯದ ವಾಸನೆ ಬಿಟ್ಟು ಬೇರೇನನ್ನೂ ಅರಿಯರು. ವಿಜ್ಞಾನ ವಿಷಯಗಳಿಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ಸಂಬಂಧವೇ ಇಲ್ಲವೆಂದು ಅವರೆಲ್ಲ ತಿಳಿದಿದ್ದಂತೆ ಕಾಣುವುದು. ಮಹಾರಾಜಾ ಕಾಲೇಜಿನ ಮಕ್ಕಳಿಗೂ ಯುವರಾಜದವರನ್ನು ಕಂಡರೆ ತಿರಸ್ಕಾರವೇ ಇದ್ದಿರಬೇಕು. ವಿಜ್ಞಾನಿಯ ಸೋಗುಹಾಕಿದ ಕೈಯೆಣ್ಣೆ ಮುಖದವರು, ಒಂದೇ ಚಳುವಳಿಗೂ ಕೈಹಚ್ಚದವರು, ಕೂಗಾಟ ಬಡಿದಾಟವೇ ತಿಳಿಯದ ಅನಾಗರಿಕರು ಎಂದೆಲ್ಲ ಅವರ ಮನಸ್ಸಿನಲ್ಲಿರಬೇಕು.

ಭೌತಶಾಸ್ತ್ರದ ತರಗತಿಯಲ್ಲಿ ಗೋಡೆಯುದ್ದಕ್ಕೂ ಹರಡಿದ ಬೋರ್ಡಿನ ಮೇಲೆ ಏನೇನೋ ಬರೆಯುತ್ತಾ ಮೃಗಾಲಯದ ಹುಲಿಯಂತೆ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ತಿರುಗುವ ಶಿವಶಂಕರರ ಪಾಠವನ್ನು ಗಂಭೀರವಾಗಿ ಕೇಳುವ ಸೋಗುಹಾಕಿದ ನಮಗೆ ಇದ್ದಕ್ಕಿದ್ದಂತೆ ಪಕ್ಕದ ಮಹಾರಾಜನಿಂದ ಶಿಳ್ಳೆ, ಕೂಗು, ಧಿಕ್ಕಾರಗಳ ಮೊಳಗು ಕೇಳಿಬರುವುದು. ಈ ಆರ್ಭಟ ಯಾರಿಗೂ ಹೊಸತಲ್ಲ. ಮೊದಮೊದಲು ಈ ಸದ್ದು ಕೇಳಿಸುವಾಗ ನಮ್ಮ ಅಂತರಾಳದಲ್ಲಿ ಆಸೆಯ ಕಿರಣವೊಂದು ಮಿನುಗುವುದು. ಮಹಾರಾಜದ ಧೀರರು ತಮ್ಮ ಪ್ರತಿಭಟನೆಯನ್ನು ವಿಸ್ತರಿಸಿ ತಮ್ಮ ಸಾಧುಸೋದರರಾದ ನಮ್ಮನ್ನೂ ತರಗತಿಯ ಸೆರೆಯಿಂದ ಮುಕ್ತಗೊಳಿಸಿಯಾರೆಂದು ಕಾಯುತ್ತಿದ್ದರೆ, ನಮ್ಮ ಸಮೀಪದಲ್ಲೇ ಮೊಳಗುವ ಕೂಗಾಟ ಸಿಳ್ಳೆಗಳು ಕ್ರಮೇಣ ಒಂದೊಂದೇ ಡೆಸಿಬಲ್ಲು ಕಡಿಮೆಯಾಗುತ್ತ ದೂರವಾಗುವುವು. ಅಪರಾಹ್ನ ವಿಚಾರಿಸುವಾಗ ಚಳುವಳಿಗಾರರೆಲ್ಲ ಮಹಾರಾಣಿ ಕಾಲೇಜಿನತ್ತ ತೆರಳಿದರೆಂದು ತಿಳಿದುಬರುವುದು. ಪ್ರಾರಂಭದಲ್ಲಿ ನಿರಾಶೆಗೊಳ್ಳುತ್ತಿದ್ದ ನಮ್ಮನ್ನು (ಬಹುಶಃ) ಜಿ.ಹೆಚ್.ನಾಯಕರು ಸಂತೈಸಿದ್ದರು. ಅವರು ಕೊಟ್ಟ ವಿವರಣೆ: ಮಹಾರಾಜದವರು ಕಲ್ಲುಬೀರಿ ಕಿಟಕಿಗಾಜುಗಳನ್ನೊಡೆದು ಲಕ್ಷ್ಯವನ್ನು ಭೇದಿಸಿದ ಮೇಲೆ ಸ್ವಯಂವರದ ನಿರೀಕ್ಷೆಯಿಂದ ಮಹಾರಾಣಿ ಕಾಲೇಜಿಗೆ ಹೋಗುತ್ತಾರೆಯೇ ಹೊರತು ಬರೀ ಹುಡುಗರೇ ತುಂಬಿರುವ ಯುವರಾಜಕ್ಕೆ ಯಾಕೆ ಬಂದಾರು? (ಆಗ ಯುವರಾಜದಲ್ಲಿ ಕೋ-ಎಜುಕೇಶನ್ ಇರಲಿಲ್ಲ. ಮಹಾರಾಜದಲ್ಲೂ ಕೈ ಬೆರಳೆಣಿಕೆಯಷ್ಟೇ ಹುಡುಗಿಯರು.) (ಮುಂದೆ ಶಿಕ್ಷಣ ಸಚಿವರಾದ) ಸೋಮಶೇಖರ್ ಎಂಬಾತನ ನೇತೃತ್ವದಲ್ಲಿ ಇಂಗ್ಲೀಷ್ ಉಪನ್ಯಾಸಕಿಯೊಬ್ಬರ ವಿರುದ್ಧ ನಡೆದ ಚಿಕ್ಕ ಪ್ರತಿಭಟನೆ, ಆಗ ಅಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ರಾಮದಾಸ್ ಅವರ ಸಮಜಾಯಿಷಿ, ಇಂತಹ ಒಂದೆರಡು ಘಟನೆಗಳು ಅಸ್ಪಷ್ಟವಾಗಿ ನೆನಪಿವೆ, ಅಷ್ಟೆ.

ಟಿ.ಎಸ್. ಗೋಪಾಲ್

ಪಿಯುಸಿ ವಿಜ್ಞಾನ ಓದಿ ಬಿ.ಎಸ್.ಸಿ.ಗೆ ಸೇರಿಕೊಂಡ ಹುಡುಗನೊಬ್ಬ 15-20 ದಿನ ಕಳೆದು ಕನ್ನಡ-ಸಂಸ್ಕೃತ ಓದಲು ಮಹಾರಾಜ ಕಾಲೇಜಿಗೆ ಸೇರುತ್ತಾನೆಂದರೆ ಒಪ್ಪತಕ್ಕ ವಿಷಯವೇ? ಕಾಲೇಜು ಕಛೇರಿಯಿಂದ ಆಕ್ಷೇಪಣೆ ಬಂದಮೇಲೆ, ಮಹಾರಾಜದಲ್ಲೇ ಕನ್ನಡ-ಸಂಸ್ಕೃತ ಮೇಜರ್ ತೆಗೆದುಕೊಂಡು ಓದುತ್ತಿದ್ದ ನನ್ನ ಸೋದರಿಯಿಂದ ವಿಷಯ ತಿಳಿದುಕೊಂಡ ಅನೇಕ ಕನ್ನಡಾಭಿಮಾನಿ ವಿದ್ಯಾರ್ಥಿಗಳು ನನ್ನ ಪರವಾಗಿ ವಾದಿಸತೊಡಗಿದರು. ಕನ್ನಡಕ್ಕಾಗಿ ಕೈಯೆತ್ತಿ ಕಲ್ಪವೃಕ್ಷವನ್ನು ನೆಟ್ಟುಕೊಂಡ ಉಪಕುಲಪತಿಯೇ ಇರುವಾಗ ಕನ್ನಡ ವ್ಯಾಸಂಗಕ್ಕೆ ಅಡಚಣೆಯಾಗಬಾರದಲ್ಲ! ದೇವನೂರು ಮಹಾದೇವ ಆಗ ಎರಡನೆ ಬಿ.ಎ ವಿದ್ಯಾರ್ಥಿ. ನಾನು ಯಾರೆಂದು ಆತನಿಗೆ ಗೊತ್ತಿರದಿದ್ದರೂ ನನಗೆ ಸೀಟು ಕೊಡಿಸಲೇಬೇಕೆಂದು ಉಮ್ಮರಬ್ಬ ಎಂಬ ಇನ್ನೊಬ್ಬ ಮಿತ್ರನೊಡನೆ ಪ್ರಿನ್ಸಿಪಾಲ್ ತೋಟಪ್ಪ, ಅಡ್ಮಿನಿಸ್ಟ್ರೇಟರ್ ಶಂಕರಲಿಂಗೇಗೌಡರ ಹತ್ತಿರ ಹೋಗಿ ಬಲವಾಗಿ ವಾದಿಸಿದರು. ಪರಿಣಾಮ, ನಾನು ಯುವರಾಜದಲ್ಲಿ ಕಟ್ಟಿದ ಫೀಸನ್ನೇ ಮಹಾರಾಜಕ್ಕೆ ವರ್ಗಾಯಿಸಿಕೊಂಡು, ಕನ್ನಡ-ಸಂಸ್ಕೃತ ವಿದ್ಯಾರ್ಥಿಯಾಗಿ ಬಿ.ಎ.ಗೆ ಸೇರಲು ಅನುಮತಿ ಸಿಕ್ಕಿತು. ಕನ್ನಡ ಉಳಿಸಲು ಉಟ್ಟು ಓರಾಟಗಾರರ ನಡುವೆ ಇನ್ನೊಬ್ಬ ಸೇರಿಕೊಳ್ಳುವುದಕ್ಕೆ ದೇವನೂರು, ಉಮ್ಮರಬ್ಬ ಕಾರಣರಾದರು! ಏಳನೇ ತರಗತಿ ಆದಮೇಲೆ ಕನ್ನಡವನ್ನು ದ್ವಿತೀಯ ಭಾಷೆಯಾಗಿಯೂ ಓದದೆ ಇದ್ದ ನಾನು ವಿಜ್ಞಾನ ಅಧ್ಯಯನಕ್ಕೆ ಬೇಸರಿಸಿಯೋ ಕುಟುಂಬದ ಕನ್ನಡ ಪರಂಪರೆಯನ್ನು ಮುಂದುವರೆಸುವ ತವಕದಿಂದಲೋ ಆ ಕಾಲಕ್ಕೆ ಕನ್ನಡ ಸಾಹಿತ್ಯದ ಬಗೆಗಿದ್ದ ಮೋಹದ ಅಲೆಗೆ ಮಾರುಹೋಗಿಯೋ ಅಂತೂ ಮಹಾರಾಜಕ್ಕೆ ಬಂದು ಸೇರಿದೆ.

ನನ್ನ ತಾಯಿ ಆಂಧ್ರಪ್ರದೇಶದ ಕುಪ್ಪಂ ಕಡೆಯವರು. ತಾಯಿ ಓದಿ ಕಲಿತದ್ದು ತೆಲುಗು, ಮನೆಮಾತು ತಮಿಳು. ನಾನು ಹುಟ್ಟುವ ಹೊತ್ತಿಗೆ ತಾಯಿ – ಸೀತಮ್ಮ, ಚೆನ್ನಾಗಿ ಕನ್ನಡ ಕಲಿತಿದ್ದರು. ನನಗೆ ಪ್ರಾರಂಭಿಕ ಕನ್ನಡ ಹೇಳಿಕೊಟ್ಟಿದ್ದೂ ತಾಯಿಯೇ. ನನ್ನ ತಂದೆ ಶ್ರೀನಿವಾಸಾಚಾರ್ಯರು ಮೈಸೂರಿನವರೇ. ಅವರ ಪೂರ್ವಜರು ಮೈಸೂರು ಜಿಲ್ಲೆಯ ಸೋಮನಾಥಪುರ ಬಳಿಯ ಶ್ರೀರಂಗರಾಜಪುರದವರು. ನನ್ನ ತಾತ ಶ್ರೀನಿವಾಸ ರಂಗಾಚಾರ್ಯರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಲ್ಲಿ ಆಸ್ಥಾನ ವಿದ್ವಾಂಸರಾಗಿದ್ದು ಮೈಸೂರು ಗೌರ್ನಮೆಂಟ್ ಟೀಚರ್ಸ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದರು. ಮೈಸೂರು ಒಡೆಯರ್ ವಂಶದ ದೊರೆಗಳ ಹಿರಿಮೆಯನ್ನು ಸಾರುವ ‘ಮೈಸೂರು ಮೆಯ್ಸಿರಿ’ ಎಂಬ ಕೃತಿಯನ್ನು ಹಳಗನ್ನಡದಲ್ಲಿ ರಚಿಸಿ ಕೀರ್ತಿಪಡೆದಿದ್ದರು. ಆಗ ಅರಮನೆಯಲ್ಲಿ ಸಂಗೀತ ವಿದ್ವಾಂಸರಾಗಿದ್ದ ಯಾರೋ ಒಬ್ಬಿಬ್ಬರು ನನ್ನ ತಾತನವರಿಂದ ಹಾಡುಗಳನ್ನು ಬರೆಸಿಕೊಂಡು ತಮ್ಮ ಕೃತಿಗಳೆಂದು ಪ್ರಚುರಪಡಿಸಿಕೊಂಡಿದ್ದುಂಟು. ಅಂಥದೊಂದು ಕೃತಿ ರೇಡಿಯೋದಲ್ಲಿ ಪ್ರಸಾರವಾಗುವಾಗ “ಇದು ನಿಮ್ಮ ತಾತ ಬರೆದಿದ್ದು” ಎಂದು ಹಿರಿಯರು ಹೇಳುತ್ತಿದ್ದುದು ನೆನಪಿದೆ. ನಮ್ಮ ತಾತನ ಗಂಡುಮಕ್ಕಳೆಲ್ಲ ಪಂಡಿತರೇ. ನನ್ನ ತಂದೆ ಹಾಸನ, ಶಿವಮೊಗ್ಗ, ಮೈಸೂರು ಮೊದಲಾದೆಡೆ ಪ್ರೌಢಶಾಲೆಗಳಲ್ಲಿ ಕನ್ನಡ ಪಂಡಿತರಾಗಿ ಸೇವೆ ಸಲ್ಲಿಸಿದ್ದರು. ನನ್ನ ಚಿಕ್ಕಪ್ಪಂದಿರು ರಘುನಾಥಾಚಾರ್ಯರು ಬೆಂಗಳೂರಿನಲ್ಲಿ ಕನ್ನಡ ಪಂಡಿತರಾಗಿದ್ದರೆ, ಇನ್ನೊಬ್ಬ ಚಿಕ್ಕಪ್ಪ ಸುದರ್ಶನಾಚಾರ್ಯರು ಮೈಸೂರು ಮಹಾಜನ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದವರು. ಮಹಾರಾಜ ಕಾಲೇಜಿಗೆ ನಾನು ಮಣ್ಣು ಹೊತ್ತದ್ದಕ್ಕೆ ಈ ಪರಂಪರೆ ಒಂದು ಕಾರಣವಾಗಿದ್ದಿರಬೇಕು. ಶಬ್ದಮಣಿ ದರ್ಪಣ ನನಗೆ ಪ್ರಿಯವಾಗುವುದಕ್ಕೆ ಪಂಡಿತರ ಮನೆಯ ಗಾಳಿಯೇ ಕಾರಣವಿರಬಹುದು.

ಇನ್ನೊಂದು ಕಾರಣ ನನ್ನ ಸೋದರಿ ಕಾಂತಾಮಣಿ. ಮುಂದೆ ನಾನು ಆರಿಸಿಕೊಂಡ ಸಂಸ್ಕೃತ-ಕನ್ನಡ-ಪ್ರಾಕೃತಗಳನ್ನೇ ಮೊದಲಿಗೆ ಆರಿಸಿಕೊಂಡು ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದುದು. ಈಕೆ ಬಿ.ಎ. ನಂತರ ಶಾರದಾ ವಿಲಾಸದಲ್ಲಿ ಬಿ.ಎಡ್. ಮುಗಿಸಿ ಚಾಮುಂಡಿಪುರದ ಸೇಂಟ್ ಮೇರಿಸ್ ಕಾನ್ವೆಂಟ್ ನಲ್ಲಿ ಹೆಚ್ಚುಕಡಿಮೆ 40 ವರ್ಷ ಕನ್ನಡ ಶಿಕ್ಷಕಿಯಾಗಿ ಸೇವೆಸಲ್ಲಿಸಿದರು. ಕಳೆದ ವರ್ಷ ಆಕೆ ನಿವೃತ್ತಿಯಾದಾಗ ನಡೆದ ಬೀಳ್ಕೊಡುಗೆ ಸಮಾರಂಭ ಇಡೀ ದಿನದ ಕಾರ್ಯಕ್ರಮವಾಗಿದ್ದು ಪೂರ್ಣಕುಂಭ ಸ್ವಾಗತ, ಬ್ಯಾಂಡ್ ಮೆರವಣಿಗೆ, ಹಾರತುರಾಯಿ, ಉಡುಗೊರೆ, ಊಟ, ಫಾದರ್ ಮತ್ತಿತರರ ಆಶೀರ್ವಚನ, ಪ್ರಾರ್ಥನೆ -ಬಹುಶಃ ಇನ್ನೆಲ್ಲೂ ಯಾವ ಒಬ್ಬ ಶಿಕ್ಷಕಸಾಮಾನ್ಯನಿಗೂ ದೊರೆತಿರಲಾರದು.

ಮಹಾರಾಜ ಕಾಲೇಜು ದೊಡ್ಡ ಸಮುದ್ರವೆಂದು ತಿಳಿಯಲು ಬಹುದಿನ ಬೇಕಾಗಲಿಲ್ಲ. ಅದೆಷ್ಟು ಅಧ್ಯಯನ ವಿಷಯಗಳ ಕಾಂಬಿನೇಷನ್! ಟೈಂ-ಟೇಬಲ್ ಗೆ ಘರ್ಷಣೆಯಾಗದಂತೆ ಯಾವ ಮೂರು ವಿಷಯಗಳನ್ನು ಬೇಕಾದರೂ ಆರಿಸಿಕೊಳ್ಳಬಹುದಾಗಿತ್ತು. ನನ್ನ ಐಚ್ಚಿಕ ವಿಷಯಗಳನ್ನು ಆಯ್ಕೆಮಾಡಿಕೊಂಡಿದ್ದವನು ಇಡೀ ಕಾಲೇಜಿಗೆ ನಾನೊಬ್ಬನೇ! ಕನ್ನಡ-ಸಂಸ್ಕೃತ ಮೇಜರ್, ಪಾಲಿ-ಪ್ರಾಕೃತ ಮೈನರ್. ಎಂ.ಎ ಮುಗಿಸಿದ ಮೇಲೆ ಐ.ಎ.ಎಸ್ ಮಾಡಬಹುದೆಂದು ನನಗೆ ಸಲಹೆಕೊಟ್ಟವರೊಬ್ಬರು ಬಿ.ಎ.ಗೆ ನಾನು ಆಯ್ಕೆಮಾಡಿದ ವಿಷಯಗಳನ್ನು ವಿಚಾರಿಸಿ ತಲೆ ಚಚ್ಚಿಕೊಂಡರು. ‘ಮೂರುನಾಲ್ಕು ಭಾಷೆಗಳನ್ನೇ ಆಯ್ಕೆಮಾಡಿಕೊಂಡಿದ್ದೀಯಲ್ಲ, ಐ.ಎ.ಎಸ್ ಗೆ ಒಂದು ಭಾಷೆಮಾತ್ರ ಆರಿಸಿಕೊಳ್ಳಬಹುದು. ಇತಿಹಾಸ, ಅರ್ಥಶಾಸ್ತ್ರ ಇದ್ಯಾವುದನ್ನು ಓದಬೇಕಾದರೂ ಅಆಇಈಯಿಂದಲೇ ಶುರುಮಾಡಬೇಕಲ್ಲ! ಮೊದಲೇ ಯಾರದ್ದಾದರೂ ಸಲಹೆ ತೆಗೆದುಕೊಳ್ಳಬಾರದಿತ್ತೇ? ’ ಎಂದು ಟೀಕಿಸಿದರು. ಈ ಆಯ್ಕೆಯ ಬಗೆಗಿನ ಟೀಕೆ ಐದು ವರ್ಷ ಕಳೆದ ನಂತರ ಬಂದುದರಿಂದ, ಕೊರಗಿ ಪ್ರಯೋಜನವಿಲ್ಲವೆಂದು ಸುಮ್ಮನಾದೆ.

ಸಂಸ್ಕೃತ ಮೇಜರ್ ಗೆ ಮೂವರು ಹುಡುಗಿಯರು, ಐದಾರು ಹುಡುಗರು. ಪಾಲಿ-ಪ್ರಾಕೃತ ಮೈನರ್ ವಿಷಯಕ್ಕೆ ನನ್ನನ್ನೂ ಸೇರಿಸಿ ಮೂವರು, ಕನ್ನಡ ಮೇಜರಿಗಂತೂ ಅಸಾಧ್ಯ ಜನಸಂದಣಿ. ಎರಡು ಸೆಕ್ಷನ್ ಇತ್ತೋ ಏನೋ ನೆನಪಿಲ್ಲ. ಇತರ ವಿಷಯಗಳನ್ನು ಆಯ್ಕೆಮಾಡಿಕೊಂಡಿದ್ದ ಹಲವರು ಪ್ರಥಮ ಭಾಷೆ ಸಂಸ್ಕೃತಕ್ಕೂ ಇಂಗ್ಲೀಷ್ ದ್ವಿತೀಯ ಭಾಷೆಗೂ ನಮ್ಮ ಜೊತೆಗೂಡುವರು. ಬಿಎ ಓದುವ ಮಕ್ಕಳಿಗೆ ಜನರಲ್ ಸೈನ್ಸ್ ಎಂಬ ಪೇಪರ್ ಬೇರೆ. ಈ ವಿಷಯಕ್ಕೆ ಪಾಠ ಮಾಡಲು ಯುವರಾಜದಿಂದ ಬರುತ್ತಿದ್ದ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರೊ ಅಂಥಾ ಯುವರಾಜದಿಂದ ಈ ಲೌಕಿಕಕ್ಕೆ ವಲಸೆ ಬಂದ ನನ್ನನ್ನು ನೋಡಿ ಆಶ್ಚರ್ಯಪಟ್ಟರು. ಅದೇ ವರ್ಷ ಪ್ರಾರಂಭವಾಗಿದ್ದ ಕ್ರಿಮಿನಾಲಜಿ ವಿಷಯವನ್ನು ಪಾಠಮಾಡಲು ಟ್ರಿಮ್ ಆಗಿದ್ದ ಪೋಲಿಸ್ ಅಧಿಕಾರಿಯೊಬ್ಬರು ಬರುತ್ತಿದ್ದುದು ನಮಗೆಲ್ಲ ಕೆಲ ದಿನ ಅಚ್ಚರಿಯ ವಿಷಯವಾಗಿತ್ತು. ಆ ದಿನಗಳ ನನ್ನ ಗೆಳೆಯ ಅರ್ಕೇಶ್ ಈ ವಿಷಯವನ್ನು ಆಯ್ದುಕೊಂಡಿದ್ದವರಲ್ಲಿ ಒಬ್ಬ. ಈತ ಮುಂದೆ ಡಿವೈಎಸ್ಪಿ ಆದುದಲ್ಲದೆ ವೀರಪ್ಪನ್ ನಿಗ್ರಹ ಪಡೆಯ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದರು.

ವಿಜ್ಞಾನ ವಿಷಯಗಳ ಗೋಜಲಿನಿಂದ ಪಾರಾಗಿ ನನಗಿಷ್ಟದ ಭಾಷಾ ವಿಷಯಗಳ ಕಲಿಕೆ ಸಂತೋಷವನ್ನೇ ತಂದಿತು. ಆಮ್ಲ ರಾಸಾಯನಿಕಗಳ ಗೂಡಾಗಿದ್ದ ಯುವರಾಜ ಕಾಲೇಜಿಗಿಂತ ಮಹಾರಾಜದ ಸುಳಿಗಾಳಿ ಹಿತವಾಯಿತು. ಯುವರಾಜದಿಂದ ಮಹಾರಾಜಕ್ಕೆ ವಲಸೆ ಬಂದವನು ನಾನೊಬ್ಬನೇ ಅಲ್ಲ, ಕನ್ನಡ ವಿಭಾಗಕ್ಕೆ ಜಿ.ಹೆಚ್.ನಾಯಕರೂ ಇಂಗ್ಲೀಷ್ ವಿಭಾಗಕ್ಕೆ ಎಸ್. ಅನಂತನಾರಾಯಣರೂ ಅಲ್ಲಿಂದಿಲ್ಲಿಗೆ ಬಂದು ನನ್ನಂಥವರಿಗೆ ಸಂತೋಷ ತಂದರು. ಹಿಂದೆ, ಜಂಬೂಸವಾರಿಯ ದಿನ ಅಂಬಾರಿಯಲ್ಲಿ ಮಹಾರಾಜರು ಬರುವಾಗ ರಸ್ತೆಯುದ್ದಕ್ಕೂ ಅಡ್ಡಬಿದ್ದು ನಮಸ್ಕರಿಸುತ್ತಿದ್ದ ಪ್ರಜೆಗಳಲ್ಲಿ ನನ್ನ ಅಜ್ಜಿಯೂ ಒಬ್ಬರಾಗಿದ್ದರು. ಅದೇ ಮಹಾರಾಜರ ಮಗ ನಮ್ಮ ಕಾಲೇಜಿನಲ್ಲೇ ನಮಗಿಂತ ಒಂದು ವರ್ಷ ದೊಡ್ಡ ಕ್ಲಾಸಿನಲ್ಲಿ ಓದುತ್ತಿರುವರೆಂದು ತಿಳಿದಾಗ ಸಂತೋಷಪಟ್ಟ ಅಜ್ಜಿಗೆ, ಯುವರಾಜರು ನಮಗೆಲ್ಲ ಕಾಲೇಜು ಕ್ಯಾಂಟೀನಿನಲ್ಲಿ ಒಂದು ದಿನ ಮಸಾಲೆದೋಸೆ, ಕಾಫಿ ಕೊಡಿಸಿದರೆಂದು ತಿಳಿದಾಗ ಏಕೋ ಮುಖ ಪೆಚ್ಚಾಯಿತು.

ಕಳೆದ ವರ್ಷ ಆಕೆ ನಿವೃತ್ತಿಯಾದಾಗ ನಡೆದ ಬೀಳ್ಕೊಡುಗೆ ಸಮಾರಂಭ ಇಡೀ ದಿನದ ಕಾರ್ಯಕ್ರಮವಾಗಿದ್ದು ಪೂರ್ಣಕುಂಭ ಸ್ವಾಗತ, ಬ್ಯಾಂಡ್ ಮೆರವಣಿಗೆ, ಹಾರತುರಾಯಿ, ಉಡುಗೊರೆ, ಊಟ, ಫಾದರ್ ಮತ್ತಿತರರ ಆಶೀರ್ವಚನ, ಪ್ರಾರ್ಥನೆ -ಬಹುಶಃ ಇನ್ನೆಲ್ಲೂ ಯಾವ ಒಬ್ಬ ಶಿಕ್ಷಕಸಾಮಾನ್ಯನಿಗೂ ದೊರೆತಿರಲಾರದು.

ಜಪಾನಿನಲ್ಲಿ ನಡೆದ ಎಕ್ಸ್ ಪೋ-70 ವಸ್ತುಪ್ರದರ್ಶನಕ್ಕೆ ಸರ್ಕಾರಿ ಖರ್ಚಿನಲ್ಲಿ ಯಾರು ಯಾರನ್ನೋ ಕರೆದೊಯ್ಯುತ್ತಿದ್ದಾರೆ ಎಂಬ ವಿಷಯ ಚರ್ಚಾಸ್ಪದವಾಗಿ ಚಳುವಳಿಗೆ ಎಡೆಗೊಟ್ಟಿತು. ಇಂಥ ಸುಸಂದರ್ಭಕ್ಕೆ ಕಾಯುತ್ತಿದ್ದ ಮಹಾರಾಜ ಕಾಲೇಜು ಚಳುವಳಿಗೆ ಅದ್ಭುತವಾಗಿ ಸ್ಪಂದಿಸಿತು. ಕಾಲೇಜು ಹುಡುಗರು ಧಿಕ್ಕಾರ ಕೂಗಿ, ಕ್ಲಾಸು ತಪ್ಪಿಸಿ ಹೋಗುವಾಗ ನಾನೇನೂ ಅವರೊಟ್ಟಿಗೆ ಹೋಗುತ್ತಿರಲಿಲ್ಲವಾದರೂ ಯುವರಾಜ ಕಾಲೇಜನ್ನು ಅವರು ನಿರ್ಲಕ್ಷಿಸುವುದಕ್ಕೆ ಈಗ ನನ್ನದೇನೂ ಅಭ್ಯಂತರವಿರಲಿಲ್ಲ. ಎಷ್ಟೋ ದಿನ ತರಗತಿಗಳು ನಡೆಯಲೇ ಇಲ್ಲ. ಈ ಪ್ರವಾಸಕ್ಕೆ ಆಯ್ಕೆಯಾಗಿ ಹೋದವರಲ್ಲಿ (ಮುಂದೆ ನಮ್ಮ ಕನ್ನಡ ಅಧ್ಯಾಪಕರಾದ) ಕೆ. ಅನಂತರಾಮು ಹಾಗೂ ನಮ್ಮ ಕಾಲೇಜಿನ ವಿದ್ಯಾರ್ಥಿ ಉಮ್ಮರಬ್ಬ ಇದ್ದರು ಎಂದು ಕೇಳಿದ್ದೆ. ಮಹಾರಾಜ ಕಾಲೇಜಿನ ನಮ್ಮ ಅಧ್ಯಾಪಕರೆಲ್ಲ ವಿದ್ಯಾರ್ಥಿಗಳ ಬಗೆಗೆ ತುಂಬ ಪ್ರೀತಿಯುಳ್ಳವರು. ಮೈಸೂರಿನ ಗುರುಪರಂಪರೆಯ ಘನತೆಗೆ ತಕ್ಕಂತೆ ಇದ್ದವರು. ಅವರಲ್ಲಿ ಪ್ರತಿಯೊಬ್ಬರ ಪಾಠಪ್ರವಚನಗಳೂ ವಿಶಿಷ್ಟವಾದವು.

(ರೇಖಾಚಿತ್ರಗಳು:ಜಿ.ಎಸ್.ನಾಗನಾಥ್)

ಮೋಹನ ತರಂಗಿಣಿ ಬೋಧಿಸುತ್ತಿದ್ದ ನಂಜುಂಡಯ್ಯನವರ ಪಾಠದ ವಿಶೇಷವೆಂದರೆ ನಿರಂತರವಾದ ಸಮಾನಾರ್ಥಪದಗಳ ಬಳಕೆ. “ಜ್ಞಾನಿಗಳಾದ, ದೈವಜ್ಞರಾದ ಶ್ರೇಷ್ಠರಾದ ನಾರದಮಹರ್ಷಿಗಳು, ನಾರದಮಹಾಮುನಿಗಳು ಅಂತರಿಕ್ಷದಿಂದ, ಗಗನದಿಂದ, ಆಕಾಶದಿಂದ ಧರೆಗೆ, ಭೂಮಿಗೆ, ಈ ಲೋಕಕ್ಕೆ ಅವರೋಹಿಸಿದರು, ಇಳಿದು ಬಂದರು…” ಹೀಗೆ ಅವರ ಮಾತಿನ ವೈಖರಿ ಸಾಗುವುದು. ನಮ್ಮ ತರಗತಿಯ ಕೊನೆಯ ಬೆಂಚಿನಲ್ಲಿ ಕುಳಿತಿರುತ್ತಿದ್ದ ಮಿತ್ರ ಗೋಪಾಲಕೃಷ್ಣನಿಗೆ ನಿದ್ರೆ ತಡೆಯಲಾಗದು. ಅವನು ತೂಕಡಿಸುವುದನ್ನು ಕಂಡ ನಂಜುಂಡಯ್ಯನವರು “ನಾರದ ಮಹರ್ಷಿಗಳು ಮುನಿಗಳು ಆಗಮಿಸಿದರೂ ಚಿತ್ತೈಸಿದರೂ ಇವರಿಗೆ ಎಚ್ಚರವಾಗದು, ಜಾಗೃತಿಯಾಗದು” ಎನ್ನುವರು. ಉಳಿದವರು ಜೋರಾಗಿ ನಗುವಾಗ ಗೋಪಾಲಕೃಷ್ಣ ಕಷ್ಟಪಟ್ಟು ಕಣ್ತೆರೆಯುವನು.
ಸುಜನಾ (ಎಸ್. ನಾರಾಯಣ ಶೆಟ್ಟಿ) ಎಂದಕೂಡಲೇ ಬಿಳಿಯ ಜುಬ್ಬಾ, ಪೈಜಾಮಗಳ ಸರಳ ಉಡುಪಿನ ಹಸನ್ಮುಖಿ ವ್ಯಕ್ತಿತ್ವ ಎದುರಾಗುವುದು. ಅವರು ತರಗತಿಗೆ ತಡವಾಗಿ ಬರುತ್ತಿದ್ದುದು ಹೌದು. ಸ್ವಲ್ಪಹೊತ್ತು ಕಾದು ಇನ್ನು ಅವರು ಬರಲಿಕ್ಕಿಲ್ಲವೆಂದು ನಾವು ಮೆಟ್ಟಲಿಳಿಯುವಷ್ಟರಲ್ಲಿ ಎಲ್ಲಿಂದಲೋ ಪ್ರತ್ಯಕ್ಷರಾಗಿ ನಮ್ಮೆಲ್ಲರನ್ನೂ ಕೈಬಾಚಿ ತಳ್ಳಿಕೊಂಡು ಕೊಠಡಿಯತ್ತ ಎಳೆದೊಯ್ಯುತ್ತಿದ್ದರು.. ಮೊದಲ ವರ್ಷ ಬೇಂದ್ರೆಯವರ ಬಾಹತ್ತರ ಕವನಸಂಕಲನ ಬೋಧನೆ. ‘ಪಾತರಗಿತ್ತಿ ಪಕ್ಕ’ ಪದ್ಯವನ್ನು ಓದುವಾಗ ಅವರ ಓದಿನಲ್ಲೇ ಚಿಟ್ಟೆ ಹಾರಿ ಬಂದಂತೆ ಭಾಸವಾಗಬೇಕು. ಉಳಿದವರು ನೆನಪಿಸಿಕೊಳ್ಳದ ಒಂದು ಸಂಗತಿ ಎಂದರೆ ಸುಜನಾ ಅವರ ಲಕ್ಷ್ಯಭೇದ. ವಿದ್ಯಾರ್ಥಿಗಳಲ್ಲಿ ಯಾರದಾದರೂ ಗಮನ ಪಾಠದ ಕಡೆಗಿಲ್ಲವೆಂದು ತೋರಿದಾಕ್ಷಣ ಬಾಣ ಬಿಡುವರು. ಈ ಬಾಣ ಸೀಮೆಸುಣ್ಣದ ಒಂದು ಚಿಕ್ಕ ತುಂಡು. ಅವರು ಎಸೆದ ಸೀಮೆಸುಣ್ಣ ಗುರಿ ತಪ್ಪದೆ ಅವರು ಬಯಸಿದಲ್ಲಿಗೆ ತಾಗುವುದು. ಅದು ಹುಡುಗನ ತಲೆಯೋ ಮುಖವೋ. ಒಮ್ಮೆ ನಾನು ಮುಂದಿನ ಬೆಂಚಿನಲ್ಲಿದ್ದವನು ಪುಸ್ತಕದಿಂದ ಜಾರಿ ಬಿದ್ದ ಟಿಪ್ಪಣಿಯ ಹಾಳೆಯನ್ನು ಎತ್ತಿಕೊಳ್ಳಲು ಬಾಗಿದಾಗ ನನ್ನ ಚಾಚಿದ ಕೈಬೆರಳಿಗೇ ತಾಗುವಂತೆ ಸುಜನಾ ಬಾಣಬಿಟ್ಟಿದ್ದರು. ಇದು ಸಮೀಪದ್ದಾದ್ದರಿಂದ ವಿಶೇಷವಲ್ಲ ಎನಿಸಬಹುದು. ಕೊನೇ ಬೆಂಚಿನ ವಿದ್ಯಾರ್ಥಿಯೊಬ್ಬ ಆಕಳಿಸುವಾಗ ಇವರು ಎಸೆದ ಸೀಮೆಸುಣ್ಣದ ತುಂಡು ಆತನ ಗಂಟಲಿಗೇ ತಲುಪಿ ಖೊಕ್ ಖೊಕ್ ಎಂದು ಸದ್ದುಮಾಡಿದಾಗಲೇ ನಾವೆಲ್ಲ ತಿರುಗಿನೋಡಿದ್ದು!

ವ್ಯಕ್ತಿಗಳ ಹಿರಿತನವಾಗಲಿ ಯೋಗ್ಯತೆಯಾಗಲಿ ಗೊತ್ತಿಲ್ಲದ ಹುಡುಗುತನದಿಂದ ಇಂಥ ಘಟನೆಗಳು ನಡೆದಿರಬಹುದು ಅಷ್ಟೆ. ನಾನೇ ಮಾಡಿದ ಒಂದು ತಪ್ಪು ಹೇಳುತ್ತೇನೆ: ಸಂಸ್ಕೃತ ವಿಭಾಗದ ಎದುರು ದಿಕ್ಕಿಗೆ ಬಹುಶಃ ಜೂನಿಯರ್ ಬಿ.ಎ. ಸಭಾಂಗಣದತ್ತ ಸಾಗುವ ಓಣಿಯಲ್ಲಿ ಕನ್ನಡ ವಿಭಾಗದ ಕೊಠಡಿ ಇದೆ. ಸಂಸ್ಕೃತದ ವಿದ್ಯಾರ್ಥಿಗಳು ಕಡಿಮೆಯಾದ್ದರಿಂದ ತರಗತಿಗಳು ಸಂಸ್ಕೃತ ವಿಭಾಗದ ಮುಖ್ಯಸ್ಥರ ಕೊಠಡಿಯಲ್ಲೇ ನಡೆಯುತ್ತವೆ. ಕನ್ನಡ ವಿಭಾಗವೋ ಸಮುದ್ರ. ಹೀಗಾಗಿ ಈ ವಿಭಾಗದ ಕೊಠಡಿ ಸದಾ ಖಾಲಿ. ಮುಖ್ಯಸ್ಥರೂ ಇತ್ತ ಸುಳಿಯುವುದು ಕಡಿಮೆ. ಸುಜನಾ ಅವರೇ ಮುಖ್ಯಸ್ಥರು. ಅವರು ಈ ಕೊಠಡಿಯಲ್ಲಿ ಕುಳಿತದ್ದು ಕಂಡೇ ಇಲ್ಲ ಎನ್ನುವಷ್ಟು ಅಪರೂಪ. ಕೊಠಡಿ ಖಾಲಿಯಿರುವುದರಿಂದಲೂ ನಾವು ಕನ್ನಡ ವಿಭಾಗದವರೇ ಆಗಿದ್ದುದರಿಂದಲೂ ನಾವು ಕೆಲವರು ಸ್ನೇಹಿತರು ಆಗಾಗ ಈ ಕೊಠಡಿಯಲ್ಲಿ ಕುಳಿತು ನೋಟ್ಸ್ ಬರೆದುಕೊಳ್ಳುತ್ತಿದ್ದುದು ರೂಢಿ. ಒಮ್ಮೆ ನಾನೊಬ್ಬನೇ ಕುರ್ಚಿಯಲ್ಲಿ ಕುಳಿತುಕೊಂಡು ಏನೋ ಬರೆಯುತ್ತಿದ್ದೆ. ಧುತ್ತೆಂದು ಸುಜನಾ ಪ್ರತ್ಯಕ್ಷರಾದರು. ಮುಖ್ಯಸ್ಥರ ಕುರ್ಚಿಯಲ್ಲಿ ಕುಳಿತ ನನ್ನನ್ನು ನೋಡಿ ಅವರಿಗೆ ಆಶ್ಚರ್ಯವೂ ಆಗಿರಬೇಕು. ನನ್ನನ್ನು ಬಹುವಚನದಲ್ಲೇ ಮಾತನಾಡಿಸುತ್ತಾ ಇಲ್ಲಿ ನೋಡಿ ಎಂದು ಸುತ್ತ ಗೋಡೆಗಳ ಮೇಲಿದ್ದ ಸಮೂಹಚಿತ್ರಗಳ ಕಡೆಗೆ ಕೈತೋರಿದರು. ಬಿಎಂಶ್ರೀಯವರಿಂದ ಕುವೆಂಪುವರೆಗೆ, ಕೃಷ್ಣಶಾಸ್ತ್ರಿಗಳಿಂದ ಡಿಎಲ್ಎನ್ ವರೆಗೆ ಘಟಾನುಘಟಿಗಳೆಲ್ಲ ಈ ಕೊಠಡಿಯ ಈ ಕುರ್ಚಿಯನ್ನು ಅಲಂಕರಿಸಿದ್ದಾರೆ. ಹೀಗಿರುವಾಗ ಇದರಲ್ಲಿ ಕುಳಿತುಕೊಳ್ಳುವುದಕ್ಕೆ ನನಗೂ ಹೆದರಿಕೆಯೇ. ನೀವು ದಯವಿಟ್ಟು ಎದುರುಬದಿಯ ಕುರ್ಚಿಯಲ್ಲಿ ಕುಳಿತು ಓದಿ ಬರೆಯಿರಿ. ಈ ಕುರ್ಚಿಯಲ್ಲಿ ಬೇಡ ಎಂದು ಬಹು ಸೌಮ್ಯವಾಗಿ ಹೇಳಿದರು. ನನ್ನಲ್ಲಿ ಅಪರಾಧ ಭಾವನೆಯೇನೂ ಮೂಡಲಿಲ್ಲ, ಆದರೆ ಸ್ಥಾನ ಮರ್ಯಾದೆಯನ್ನು ಗೌರವಿಸುವುದನ್ನು ಮರೆತದ್ದಕ್ಕೆ ನಾಚಿಕೆಯಾದಂತಾಯಿತು. “ಸಾರಿ ಸರ್ ” ಎನ್ನುತ್ತ ಎದ್ದು ಕೊಠಡಿಯಿಂದ ಹೊರಟೆ. ನೀವು ಕೊಠಡಿಯಿಂದ ಹೋಗಬೇಕಾಗಿಲ್ಲ. ಬನ್ನಿ, ಇಲ್ಲಿ ಕುಳಿತುಕೊಳ್ಳಿ ಎನ್ನುತ್ತ ಬಲವಂತವಾಗಿ ಎದುರಿನ ಕುರ್ಚಿಯಲ್ಲಿ ಕೂರಿಸಿದರು.

ರಾಘವೇಂದ್ರರಾಯರು ವಿದ್ಯಾರ್ಥಿಗಳಿಗೆ ವ್ಯಾಕರಣ ವಿಷಯದಲ್ಲಿ ಪ್ರೀತಿಯುಂಟುಮಾಡಲು ಶ್ರಮಪಟ್ಟು ಬೋಧಿಸುವರು. ನನ್ನ ಪೂರಕ ವ್ಯಾಸಂಗಕ್ಕೆ ಬೇಕಾದ ಪುಸ್ತಕಗಳನ್ನು ಅವರ ಮನೆಯ ದೊಡ್ಡ ಕಪಾಟಿನಿಂದ ಯಾವಾಗ ಬೇಕಾದರೂ ಆರಿಸಿಕೊಳ್ಳುವುದಕ್ಕೆ ನನಗೆ ಸ್ವಾತಂತ್ರ್ಯ ಕೊಟ್ಟುಬಿಟ್ಟಿದ್ದರು. ರಾಘವೇಂದ್ರರಾವ್, ಅನಂತರಾಮು, ಜಿ.ಹೆಚ್. ನಾಯಕ್ ಎಲ್ಲರೂ ಬಹು ನಿಷ್ಠಾವಂತ ಅಧ್ಯಾಪಕರು. ಮಹಾರಾಜದ ಪೂರ್ವಪರಂಪರೆಗೆ ತಕ್ಕಂಥವರು.

ನಾನು ಬಿ.ಎ.ಗೆ ಸೇರಿಕೊಂಡ ವರ್ಷ(1970) ಶ್ರೀಕೃಷ್ಣ ಆಲನಹಳ್ಳಿ ಅಂತಿಮ ಎಂ.ಎ. ತರಗತಿಯಲ್ಲಿದ್ದರೋ ಏನೋ. ಅವರೂ ದೇವನೂರರೂ ಗೀತಾ ರಸ್ತೆಯ ತುದಿಯ ಮನೆಯೊಂದರ ಮುಂಭಾಗದ ಒಂಟಿಕೊಠಡಿಯಲ್ಲಿ ಇದ್ದರು. ಈ ಮನೆ ಸಂಸ್ಕೃತ ಪ್ರಾಧ್ಯಾಪಕ ಚಕ್ರವರ್ತಿಯವರದೆಂದು ಜ್ಞಾಪಕ. ಆಲನಹಳ್ಳಿಯವರು ಪ್ರಜಾವಾಣಿ ಮತ್ತಿತರ ಪತ್ರಿಕೆಗಳಲ್ಲೂ ವಿಶೇಷಾಂಕಗಳಲ್ಲೂ ಆಗಲೇ ಹಲವಾರು ಕಥೆಗಳನ್ನು ಬರೆದು ಹೆಸರುಪಡೆದಿದ್ದರು. 1971ರ ವೇಳೆಗೆ ಮಹಾರಾಜದಲ್ಲಿ ಅಧ್ಯಾಪಕರಾಗಿ ಕಾಣಿಸಿಕೊಂಡ ಆಲನಹಳ್ಳಿಗೆ ನನ್ನ ಬಗೆಗೆ ಏನೋ ಪ್ರೀತಿ. ಅವರು ಬರೆದ ಕಾಡು ಪುಸ್ತಕವನ್ನು ಎರಡು ರೂಪಾಯಿ ಕೊಟ್ಟು ನಾವೆಲ್ಲ ಕೊಂಡುಕೊಂಡಿದ್ದೆವು. ನನಗೆ ಕೊಟ್ಟ ಪುಸ್ತಕಕ್ಕೆ ಸಹಿಮಾಡಿ ಕೊಟ್ಟಿದ್ದರು. ಕಾಲೇಜು ಮಕ್ಕಳಿಗೆ ತಾನು ಬರೆದ ಪುಸ್ತಕ ಮಾರಾಟ ಮಾಡುತ್ತಾನೆ ಎಂಬ ಆಕ್ಷೇಪಕ್ಕೂ (ಬಹುಶಃ ಸಹೋದ್ಯೋಗಿಗಳಿಂದ) ಗುರಿಯಾದರು.

ಸಾಹಿತ್ಯಚರಿತ್ರೆ ಪಾಠಮಾಡುತ್ತಿದ್ದ ಆಲನಹಳ್ಳಿ ಆರು ತಿಂಗಳು ಕಳೆದರೂ ಪಂಪ, ಬಸವಣ್ಣನನ್ನು ದಾಟಿ ಮುಂದೆ ಬಂದಿರಲಿಲ್ಲ. ಶ್ರೇಷ್ಠ ಸಾಹಿತ್ಯವನ್ನು ಓದಿ ಅರ್ಥಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಮನದಟ್ಟು ಮಾಡಿಸಲು ಆಲನಹಳ್ಳಿಯ ಪ್ರಯತ್ನ ಮೆಚ್ಚುವಂಥದು. ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದರೆ ರಂಜನೆಯಲ್ಲದೆ ಗಂಜಳ ಬಿಡದಣ್ಣಾ ಎಂದು ಆಲನಹಳ್ಳಿ ಓದುತ್ತಿದ್ದ ಪರಿ ಈಗಲೂ ಕಿವಿಗೆ ಕೇಳುವಂತಿದೆ. ಒಮ್ಮೆ ರಾವಬಹಾದ್ದೂರರನ್ನು ಕರೆತಂದು ತರಗತಿಯಲ್ಲಿ ಸಂವಾದ ನಡೆಸಿದ್ದೂ ಉಂಟು. ಆದರೆ ಪೋರ್ಷನ್ ಮುಗಿಸುತ್ತಿಲ್ಲ, ಪುಸ್ತಕ ಮಾರುತ್ತಾರೆ, ಕಾಲೇಜು ಮಕ್ಕಳೊಡನೆ ಹರಟುತ್ತಾ (ಸಿಗರೇಟು ಸೇದುತ್ತಾ) ನಿಂತಿರುತ್ತಾರೆ – ಇಂಥ ಅನೇಕ ಪುಕಾರುಗಳು ಪ್ರಿನ್ಸಿಪಾಲರಿಗೂ(ಉಪಕುಲಪತಿಗಳಿಗೂ) ತಲುಪುತ್ತಲೇ ಇದ್ದವು. ಇದೆಲ್ಲಕ್ಕಿಂತ ದೊಡ್ಡ ಸಮಸ್ಯೆಗೆ ಆಲನಹಳ್ಳಿಯನ್ನು ಸಿಲುಕಿಸಿದ ಪ್ರಸಂಗವೆಂದರೆ ನಮ್ಮದೇ ತರಗತಿಯಲ್ಲೊಮ್ಮೆ ಜಗದ್ಗುರುಗಳ ಪಾದಪೂಜೆಯನ್ನು ಟೀಕಿಸಿದ್ದು. “ಎಲ್ಲೆಲ್ಲಿ ಅದೇನೇನು ತುಳಿದುಕೊಂಡು ಬಂದಿರ್ತಾರೋ ಸ್ವಾಮೀಜಿಗಳು, ಅವರ ಪಾದ ತೊಳೆದು ತೀರ್ಥ ಅಂತ ತೊಗೊಳ್ತಾರೆ” ಎಂದು ಆಲನಹಳ್ಳಿ ಹೇಳಿದ್ದೇ ತಡ, ಒಂದು ಗುಂಪಿನ ವಿದ್ಯಾರ್ಥಿಗಳೆಲ್ಲ ಅವರ ಹೇಳಿಕೆಯನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡಿಬಿಟ್ಟರು. ಪ್ರಿನ್ಸಿಪಾಲರವರೆಗೂ ದೂರುಹೋಯಿತು. ಆಲನಹಳ್ಳಿ ಕ್ಷಮಾಪಣೆ ಕೇಳಬೇಕು ಎನ್ನುವುದು ಆ ಗುಂಪಿನ ವಾದ. ಕೆಲವುದಿನಗಳೇನೋ ಆ ಗುಂಪಿನವರಿಲ್ಲದೆಯೇ ಆಲನಹಳ್ಳಿಯ ತರಗತಿಗಳು ನಡೆದವು. ಆಮೇಲೆ ವಿಷಾದ ವ್ಯಕ್ತಪಡಿಸಿಯೋ ಏನೋ ಈ ಗಲಾಟೆ ಕೊನೆಗೊಂಡಿರಬೇಕು. ಆಲನಹಳ್ಳಿಗಂತೂ ತುಂಬ ಬೇಸರವಾಗಿತ್ತು. ಆಗಾಗ “ಶುದ್ಧ ಅನಾರೋಗ್ಯಕರ ಪರಿಸರ ”ಎಂದು ಹೇಳುತ್ತಿದ್ದರು. ಆಲನಹಳ್ಳಿ ಪ್ರತಿಭಾವಂತ. ನಾನು ಮಹಾರಾಜ ಬಿಟ್ಟ ಮೇಲೆ ಮತ್ತೆ ಅವರ ಭೇಟಿಯಾಗಲಿಲ್ಲ. ಅವರ ಅಕಾಲಿಕ ಮರಣದಿಂದ ಬಹುಬೇಸರವಾಯಿತು. ಆಗಾಗ ಕೆಳತುಟಿಯ ಮೇಲೆ ನಾಲಗೆ ಚಾಚುವ, ಬಲಗೈ ಮಣಿಕಟ್ಟು ತಿರುಗಿಸುವ, ಹಸನ್ಮುಖದ ಆಲನಹಳ್ಳಿ ಉಳಿದೆಲ್ಲ ಅಧ್ಯಾಪಕರಿಗಿಂತ ಹೆಚ್ಚಾಗಿ ಮನದಲ್ಲಿ ಮೂಡುತ್ತಾರೆ. ಆತ ಸಹಿಮಾಡಿಕೊಟ್ಟ ಕಾಡು ಪುಸ್ತಕ ಇನ್ನೂ ನನ್ನಲ್ಲಿದೆ.

ಸಂಸ್ಕೃತ ವಿಭಾಗಕ್ಕೆ ಎಸ್.ವಿ. ಶ್ರೀನಿವಾಸ ರಾಘವಾಚಾರ್ ಮುಖ್ಯಸ್ಥರು. ಸದಾ ನಗುಮುಖದ ಶ್ರೀಯುತರನ್ನು ವಿಭಾಗದ ಮಕ್ಕಳೆಲ್ಲ ತಾತ ಎನ್ನುತ್ತಿದ್ದಂತೆ ನೆನಪು. ಟೋಪಿ, ಗುಂಡಿ ತೆರೆದ ಕೋಟು, ಶೂ, ಕೈಯಲ್ಲೊಂದು ಚರ್ಮದ ಚೀಲ. ಅವರ ಕುರ್ಚಿಯ ಪಕ್ಕದಲ್ಲೊಂದು ಅಲ್ಮೇರಾ, ಸದಾ ಬಾಗಿಲು ಕಚ್ಚಿಕೊಂಡಿರುತ್ತಿತ್ತು. ಬಲಗಾಲಿಂದ ಒಂದು ಬಾಗಿಲನ್ನು ಒದ್ದು ಇನ್ನೊಂದನ್ನು ಎಳೆದು ತೆಗೆಯಬೇಕು. ಆಚಾರ್ಯರ ಪಾದಾಘಾತದಿಂದ ಅಲ್ಮೇರಾದ ಬಾಗಿಲ ಬುಡ ಬಣ್ಣ ಕಳೆದುಕೊಂಡು ಕಲೆ ಮೂಡಿತ್ತು.  ಸಂಸ್ಕೃತ ವಿದ್ಯಾರ್ಥಿಗಳೆಲ್ಲ ಬಹುಪ್ರೀತಿಯಿಂದ ಮೆಚ್ಚಿಕೊಳ್ಳುವ ಉಪಾಧ್ಯಾಯರೆಂದರೆ ವಸಂತರಾಜ್ ಅವರೇ. ಅತ್ಯಂತ ಸರಳಜೀವಿ, ಹಸನ್ಮುಖಿ. ನಿರರ್ಗಳವಾದ ವಾಚನವೈಖರಿ, ಎಲ್ಲಿಯೂ ತಪ್ಪದ ಮಾತಿನ ಓಟ. ಯಾವುದೇ ಪದ್ಯದ ಅರ್ಥವಿರಲಿ, ಮುದ್ರಾರಾಕ್ಷಸ, ಶಾಕುಂತಲಾ ನಾಟಕವಿರಲಿ, ವೇದಾಂತಸಾರವಿರಲಿ, ವಸಂತರಾಜರ ಪಾಠ ಒಮ್ಮೆ ಕೇಳಿದವರು ಮರೆಯುವ ಹಾಗೇ ಇಲ್ಲ.

ಬಿಎಂಶ್ರೀಯವರಿಂದ ಕುವೆಂಪುವರೆಗೆ, ಕೃಷ್ಣಶಾಸ್ತ್ರಿಗಳಿಂದ ಡಿಎಲ್ಎನ್ ವರೆಗೆ ಘಟಾನುಘಟಿಗಳೆಲ್ಲ ಈ ಕೊಠಡಿಯ ಈ ಕುರ್ಚಿಯನ್ನು ಅಲಂಕರಿಸಿದ್ದಾರೆ. ಹೀಗಿರುವಾಗ ಇದರಲ್ಲಿ ಕುಳಿತುಕೊಳ್ಳುವುದಕ್ಕೆ ನನಗೂ ಹೆದರಿಕೆಯೇ. ನೀವು ದಯವಿಟ್ಟು ಎದುರುಬದಿಯ ಕುರ್ಚಿಯಲ್ಲಿ ಕುಳಿತು ಓದಿ ಬರೆಯಿರಿ. ಈ ಕುರ್ಚಿಯಲ್ಲಿ ಬೇಡ ಎಂದು ಬಹು ಸೌಮ್ಯವಾಗಿ ಹೇಳಿದರು.

ಮಹಾಂತ ದೇವರು, ರಾಮಸ್ವಾಮಿ- ಸಂಸ್ಕೃತ ಬೋಧಿಸುವ ಇನ್ನಿಬ್ಬರು ಗುರುಗಳು. ರಾಮಸ್ವಾಮಿಗಳು ತರಗತಿಗೆ ಬಂದು ಕುಳಿತರೆಂದರೆ ದಿನಕ್ಕೊಮ್ಮೆಯಾದರೂ ತಮ್ಮೆದುರಿಗಿನ ಚಿತ್ರದಲ್ಲಿ ಶೋಭಿಸುವ ಪೋರ. ಹಿರಿಯಣ್ಣನವರಿಗೆ ಕೈಮುಗಿದು ಗ್ರೇಟ್ ಮ್ಯಾನ್ ಎನ್ನುವರು. ಹಿರಿಯಣ್ಣನವರ ಯೋಗ್ಯತೆಯರಿಯದ ನಮಗೆಲ್ಲ ರಾಮಸ್ವಾಮಿಗಳ ಗ್ರೇಏಏಟ್ ಮ್ಯಾನ್ ಎನ್ನುವ ರಾಗ ವಿನೋದವಾಗಿ ಕೇಳುವುದು. ಹೀಗಿರುವಾಗೊಮ್ಮೆ ರಾಮಸ್ವಾಮಿಗಳು ತರಗತಿಗೆ ಬಂದು ಪಾಠ ಶುರುಮಾಡುತ್ತಿದ್ದಂತೆ ದಿಸ್ ಸ್ಕಾಲರ್ ಹಿರಿಯಣ್ಣಾ… ಎನ್ನುತ್ತ ಭಾವಚಿತ್ರದ ಕಡೆಗೆ ತಲೆಯೆತ್ತಿದವರೇ ಮೂಕ ನಿಶ್ಚಲರಾಗಿಬಿಟ್ಟರು. ಅವರ ಕಣ್ಣುಗಳಿಂದ ಧಾರಾಕಾರವಾಗಿ ನೀರು ಹರಿಯತೊಡಗಿತು. ಇದೇನೆಂದು ನೋಡುವಾಗ ಯಾರೋ ಕುಚೇಷ್ಟೆಗೆ ಚಿತ್ರದ ಮಹನೀಯರ ಹಣೆಗೆ ನಾಮ ಎಳೆದಿದ್ದರು. ಕೂಡಲೇ ಒಬ್ಬರು ಎದ್ದು ಅದನ್ನು ಒರೆಸಿ ರಾಮಸ್ವಾಮಿಗಳ ಕ್ಷಮೆ ಯಾಚಿಸಿದ್ದಾಯಿತು. ಅಲ್ಲಿಂದ ಮುಂದೆ ರಾಮಸ್ವಾಮಿಗಳು ನಮ್ಮ ತರಗತಿಯಲ್ಲಿ ಚಿತ್ರಫಲಕದತ್ತ ನೋಡಲೂ ಇಲ್ಲವೆಂದು ತೋರುತ್ತದೆ.

ಮೈಲಾರಿರಾಯರ ಇಂಗ್ಲೀಷ್ ಪಾಠ ನನಗೆ ಲಭ್ಯವಾಗದಿರುವುದಕ್ಕೆ ನನ್ನ ಬೇಸರ ಇಂದಿಗೂ ತೀರಿಲ್ಲ. ಸೀನಿಯರ್ ಬಿ.ಎ. ಹಾಲಿನಲ್ಲಿ ಕುಳಿತು ಮೈಲಾರಿರಾಯರ ಪಾಠ ಕೇಳುವುದಕ್ಕಾಗಿಯೇ ನಾನು ಮತ್ತೆ ವಿದ್ಯಾರ್ಥಿಯಾಗುವುದಕ್ಕೆ ಸಿದ್ಧನಿದ್ದೇನೆ. ಹ್ಯಾಮ್ಲೆಟ್ ನಾಟಕದಲ್ಲಿ ಅವನ ತಂದೆ ಪಿಶಾಚಿಯಾಗಿ ಬರುವುದನ್ನು ರಾಯರು ತಲೆಕೆದರಿಕೊಂಡು ಅಭಿನಯಿಸುವ ರೀತಿಯನ್ನು ನನ್ನ ಸ್ನೇಹಿತರು ಮಿಮಿಕ್ರಿಯೋಪಾದಿಯಲ್ಲಿ ವರ್ಣಿಸುವಾಗ ನನ್ನ ಹೊಟ್ಟೆಯುರಿ ಹೇಳತೀರದು. ಸಂಸ್ಕೃತ ಮೇಜರ್ನ ನನ್ನ ಸಹಪಾಠಿಯೊಬ್ಬ ಕಟ್ಟಾ ಶ್ರೀವೈಷ್ಣವ. ತೆಂಗಲೆ ಸಂಪ್ರದಾಯದ ನಾಮ, ಜುಟ್ಟು, ಶುಭ್ರಬಿಳಿ ಶರಟುಪಂಚೆಗಳಿಂದ ಯಾವಾಗಲೂ ಶೋಭಿಸುವ ಸಜ್ಜನ. ಈತನ ಹೆಸರು ಇಳೈಯವಿಲ್ಲಿ ಜಗ್ಗು ಶೆಲ್ವಪಿಳ್ಳೈ. ಮೈಲಾರಿರಾಯರಿಗೆ ಇವನು ಹೇಗೆ ಗಂಟುಬಿದ್ದನೋ ತಿಳಿಯದು. ನಾವು ಯಾವುದೋ ಕ್ಲಾಸ್ ಮುಗಿಸಿ ಕಾರಿಡಾರಿನಲ್ಲಿ ಹೋಗುವಾಗ ಇನ್ಯಾವುದೋ ಕಿಟಕಿಯಿಂದ ರಾಯರು ನೆಗೆದು ಬರುವರು. ಇವನ ಜುಟ್ಟಿನ ಮೇಲೆ ತಮ್ಮ ಕೈಯಲಿದ್ದ ಹಾಜರಿಪುಸ್ತಕದಿಂದ ಒಮ್ಮೆ ಮೊಟಕಿ ಏನೋ ಪಿಳ್ಳೆ ಎನ್ನುವರು. ನನ್ನ ಗೆಳೆಯನಿಗೆ ರಾಯರ ಮೊಟಕುವಿಕೆಯಿಂದ ಬೇಸರವಾಗುತ್ತಿತ್ತೋ ಇಲ್ಲವೋ. ಆದರೆ ತನ್ನ ಹೆಸರನ್ನು ಹ್ರಸ್ವಗೊಳಿಸಿ ಪಿಳ್ಳೆ ಎನ್ನುತ್ತಾರಲ್ಲ ಎಂಬ ಚಿಂತೆ. ಒಂದುಸಲ ಹೇಳಿಯೂಬಿಟ್ಟ, “ನನ್ನ ಹೆಸರು ಪಿಳ್ಳೆ ಅಲ್ಲ ಸರ್.” ಮುಂದೆ ಸಾಗುತ್ತಿದ್ದ ಅವರು ಹಿಂತಿರುಗಿ “ಮತ್ತೆ?” ಎಂದರು. ಇವನು ತನ್ನ ಪೂರ್ಣ ಹೆಸರು ಹೇಳಿದ. “ಅಷ್ಟೆಲ್ಲ ಉದ್ದವಾಗಿ ಹೇಳಕ್ಕಾಗಲ್ಲ, ನೀನು ಪಿಳ್ಳೇನೆ”ಎಂದು ಹೊರಟೇಹೋದರು.

(ಮೇಜರ್) ರಾಮಸ್ವಾಮಿಗಳಿಗೆ ಪಾಠದ ಮಧ್ಯ ಏನಾದರೂ ಶೃಂಗಾರ ರಸಾಸ್ವಾದವಿರಲೇಬೇಕು. ಸ್ನೇಕ್ ಪದ್ಯಕ್ಕೆ ಯಾವುದೇ ಸಂಬಂಧವಿರದೇ ಇದ್ದರೂ ಆಡಂ ಮತ್ತು ಈವ್ ಕಥೆ ಹೇಳಲೇಬೇಕು. ರಾಮಸ್ವಾಮಿಗಳ ಪಾಠದಲ್ಲಿ ನಗೆಹನಿಗಳಿಂದಲೇ ನಾವು ಸಂತೋಷಪಟ್ಟುಕೊಳ್ಳಬೇಕಾಗಿತ್ತು, ಅಷ್ಟೇ. ಸ್ವಲ್ಪ ವಯಸ್ಕರಿಗೆ ಮಾತ್ರ ಎನ್ನಬಹುದಾದ ಜೋಕು ಹೇಳುವಾಗ (ಇಂಗ್ಲೀಷ್ ಕ್ಲಾಸಿಗೆ ನಮ್ಮ ಸೆಕ್ಷನ್ನಲ್ಲಿ ಹುಡುಗಿಯರು ಯಾರೂ ಇರಲಿಲ್ಲ ಎಂದು ನೆನಪು) ನನ್ನತ್ತ ತಿರುಗಿ “ಗೋಪಾಲ, ನೀನು ನಗಬೇಡ, ನೀನಿನ್ನೂ ಚಿಕ್ಕವನು” ಎನ್ನುತ್ತಿದ್ದರು. ( ಮೊದಲ ಬಿ.ಎ. ಸೇರುವಾಗ ನನ್ನ ವಯಸ್ಸು ಹದಿನೈದು ತಲುಪಿರಲಿಲ್ಲ). ಇನ್ನು ಸಿ.ಡಿ.ಗೋವಿಂದರಾಯರತ್ತ ವಿನೋದವೆಂಬುದು ಹತ್ತಿರವೂ ಸುಳಿಯದು. ಸೈಲಾಸ್ ಮಾರ್ನರ್ ಕಾದಂಬರಿಯನ್ನು ಅವರು ಓದುತ್ತಿದ್ದಾಗಲೂ ಅದೇ ಗಾಂಭೀರ್ಯ. ಈಗಲೂ ಸೈಲಾಸ್ ಮಾರ್ನರ್ ನೆನಪಾಗುವಾಗ ಕಾದಂಬರಿಯ ಮುಖ್ಯಪಾತ್ರವಾಗಿ ಗೋವಿಂದರಾಯರೇ ನನಗೆ ಕಾಣಿಸುತ್ತಾರೆ. ಎಸ್. ಅನಂತನಾರಾಯಣ ಇಂಗ್ಲೀಷ್ ತರಗತಿಗಳಿಗೆ ಸಾಕಷ್ಟು ಕನ್ನಡ ಜೀವ ತುಂಬುತ್ತಿದ್ದರು. ಪಾಠದ ನಡುನಡುವೆ ಲಾವಣಿ, ಜನಪದ ಸಾಹಿತ್ಯದ ತುಣುಕುಗಳನ್ನು ಹೇಳಿ ರಂಜಿಸುವರು.

ಇಂಗ್ಲಿಷಿನ ರಾಮಸ್ವಾಮಿಯವರಿಗೆ ತದ್ವಿರುದ್ಧ ನಮ್ಮ ಸಂಸ್ಕೃತದ ಮಹಾಂತದೇವರು. ಸಂಸ್ಕೃತದಲ್ಲಿ ಶೃಂಗಾರವೇ ಪ್ರಧಾನ. ಹೆಣ್ಣಿನ ವರ್ಣನೆ ಬಂದೇ ಬರುವುದು. ಆ ಸಾಲು ಓದಿದಾಕ್ಷಣ ಇವರಿಗೆ ಕೆಮ್ಮು ಕಾಣಿಸಿಕೊಳ್ಳುವುದು. “ಅರ್ಥವಾಯಿತಲ್ಲ” ಎಂದೇನೋ ಹೇಳಿ ಮುಂದಿನ ಪದ್ಯಕ್ಕೆ ಸಾಗುವರು. ಮೇಜರ್ ವಿದ್ಯಾರ್ಥಿಗಳೇನೋ ಸುಮ್ಮನಿದ್ದುಬಿಡುವರು. ಸಂಸ್ಕೃತ ಭಾಷೆಯನ್ನು ದ್ವಿತೀಯ ಭಾಷಾವಿಷಯವಾಗಿ ಆರಿಸಿಕೊಂಡಿರುವ ಘಾಟಿ ಹುಡುಗರು ಸುಮ್ಮನಿದ್ದಾರೆಯೇ? “ನಾಲ್ಕನೇ ಪದ್ಯದ ಎರಡನೇ ಸಾಲಿನ ಅರ್ಥ ಹೇಳಿಲ್ಲ ಸಾರ್”ಎನ್ನುವರು. ದೇವರು ಪುನಃ ಕೆಮ್ಮಿ “ಕೆಲವು ವಿಷಯ ವಿವರಿಸಲೇಬೇಕೆಂದೇನೂ ಇಲ್ಲ” ಎಂದೋ ಏನೋ ಹೇಳಿ ಸುಮ್ಮನಾಗಿಸಲು ಯತ್ನಿಸುವರು. ಮಹಾಂತ ದೇವರು ಎಷ್ಟು ಸಲ ಕೆಮ್ಮಿದರು, ಇಂಗ್ಲೀಷ್ ಪುಟ್ಟಸ್ವಾಮಿಗೌಡರು ಅದೆಷ್ಟು ಸಲ ಐ ಮೀನ್ ಎಂದರು ಈ ಎಲ್ಲ ಅಂಕಿ ಅಂಶಗಳನ್ನು ಸಹಪಾಠಿ ಸುಬ್ರಮಣ್ಯ ಪ್ರತಿದಿನ ಬರೆದಿಡುವನು.

ಚುನಾವಣೆಗಳು ಮಹಾರಾಜದ ಇತಿಹಾಸದ ಅವಿನಾಭಾಗ. ಕರಪತ್ರಗಳೇನು, ಪ್ರಚಾರದ ಅಬ್ಬರವೇನು,ಇನ್ನೊಂದು ಜಾತಿಯವರನ್ನು ಹುಡುಕಿ ಹೊಡೆಯುವುದೇನು.. ಇವೆಲ್ಲ ಬರಿಯ ವಿನೋದದಂತೆ ತೋರಿದರೂ ಇವತ್ತು ಪುನರಾವಲೋಕನ ಮಾಡುವಾಗ ನಮಗ್ಯಾರಿಗೂ ಗೊತ್ತಿಲ್ಲದ ಸತ್ಯವೊಂದು ಇದರ ಹಿನ್ನೆಲೆಯಲ್ಲಿ ಹುದುಗಿರುವಂತೆ ತೋರುತ್ತದೆ. ಇಲ್ಲಿನ ಮುಖಂಡತ್ವ ವಹಿಸಿದ ಅನೇಕರು ವಿಶ್ವವಿದ್ಯಾಲಯದ ಉನ್ನತ ಹುದ್ದೆಗಳಲ್ಲಿ ಶೋಭಿಸಿರುವುದು ಪಟ್ಟಿಯಿಂದ ತಿಳಿಯುತ್ತದೆ. ತಮ್ಮ ಭವಿಷ್ಯನಿರ್ಮಾಣಕ್ಕೆ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದವರನ್ನು ಸದಾ ಸಂಪರ್ಕದಲ್ಲಿ ಇಟ್ಟುಕೊಂಡಿರಲು ವಿದ್ಯಾರ್ಥಿಸಂಘ ಇವರಿಗೆಲ್ಲ ನೆಪವಾಗಿದ್ದಂತೆ ಈಗ ನಿಚ್ಚಳವಾಗಿ ಕಾಣುತ್ತಿದೆ. ಕಾಲೇಜಿನಲ್ಲಿ ಓದುವಾಗಲೇ ಕೆಲವರಿಗೆ ಪ್ರಾಧ್ಯಾಪಕ ಹುದ್ದೆ ನಿಶ್ಚಿತವಾದಂತೆಯೂ ಕಂಡುಬರುತ್ತದೆ. ನನ್ನ ಮನೆಗೆ ನೋಟ್ಸಿಗಾಗಿ ಬರುತ್ತಿದ್ದ ಗೋವಿಂದಯ್ಯ ಎಂಬ ಸಹಪಾಠಿ ನನ್ನ ತಾಯಿಯೊಡನೆ, “ಅಮ್ಮಾ, ನಿಮ್ಮ ಮಗ ರ್ಯಾಂಕ್ ಬರುವುದು ನಿಶ್ಚಿತ. ಆದರೆ ಅವನಿಗೆ ಯೂನಿವರ್ಸಿಟಿ ಕೆಲಸ ಕೊಡುವುದಿಲ್ಲ. ನಾನು ಸೆಕೆಂಡ್ ಕ್ಲಾಸ್ ಬಂದೇನು, ಆದ್ರೆ ಪ್ರೊಫೆಸರ್ ಆಗಿ ಕೂತ್ಕೊಳ್ಳೋದು ನಾನೇ, ಇರೋ ವಿಶ್ಯ ಹೇಳ್ದೆ, ಬೇಜಾರು ಮಾಡ್ಕೋಬೇಡಿ” ಎಂದಿದ್ದ. ಅವನು ಪ್ರೊಫೆಸರ್ ಆದದ್ದೂ ನನಗೆ ರ್ಯಾಂಕ್ ಬಂದಷ್ಟೇ ಸತ್ಯ ಸಂಗತಿ.

ನನ್ನ ನಾಟಕಾಭಿನಯದ ವಿಷಯ ಹೇಳಿ ಈ ಕಥೆ ಮುಗಿಸುತ್ತೇನೆ. ಮೂರನೇ ವರ್ಷ ಬಿ.ಎ.ದಲ್ಲಿದ್ದ ನರೇಂದ್ರಸಿಂಹನ ನೇತೃತ್ವದಲ್ಲಿ ದಾಶರಥಿ ದೀಕ್ಷಿತರ ಅಳಿಯ ದೇವರು ನಾಟಕ ಅಭ್ಯಾಸಕ್ಕೆ ತೊಡಗಿದೆವು. ನರೇಂದ್ರಸಿಂಹ ಒಳ್ಳೇ ವಾಗ್ಮಿ, ನಟ, ಸಜ್ಜನ. ಆತ ಖಯಾಲಿಯಲ್ಲಿ ಬಿಟ್ಟಿದ್ದ ಗಡ್ಡಮೀಸೆಗಳ ಜೊತೆಗೆ, ಕೆಲವು ಕಾಲ ತಲೆಯಲ್ಲಿ ಪಂಜಾಬೀ ಮುಂಡಾಸು ಹೊತ್ತು ಎಷ್ಟೋ ಜನ ಈ ಅಪ್ಪಟ ಕನ್ನಡಿಗನನ್ನು ನರೇಂದ್ರಸಿಂಗ್ ಎಂದೇ ಭಾವಿಸುವಂತಾಗಿತ್ತು, ನರೇಂದ್ರಸಿಂಹನ ಜೊತೆಗೆ ವೆಂಕಟಪತಿ, ಭಾಸ್ಕರ ಇವರೆಲ್ಲ ನಾಟಕದ ಅಳಿಯಂದಿರು. ಸುಬ್ಬರಾಜೇ ಗೌಡ ಮಾವನಾಗಿದ್ದರೆ, ಸತ್ಯನಾರಾಯಣ ಮಗಳ ಪಾತ್ರದಲ್ಲೂ ನಾನು ಭಾವಮೈದುನನ ಪಾತ್ರದಲ್ಲೂ ಶೋಭಿಸಿದೆವು. ಎತ್ತರ ಗಾತ್ರಗಳಲ್ಲೂ ವಯಸ್ಸಿನಲ್ಲೂ ತುಂಬ ಚಿಕ್ಕವನಾದ್ದರಿಂದ ನನ್ನನ್ನು ಈ ಪಾತ್ರಕ್ಕೆ ಆಯ್ಕೆಮಾಡಲಾಗಿತ್ತು ಅಷ್ಟೇ. ಸೀನಿಯರ್ ಬಿ.ಎ. ಹಾಲ್ ನಲ್ಲಿ ನಮ್ಮ ನಾಟಕದ ರಿಹರ್ಸಲ್ ನೋಡಲು ಇಂಗ್ಲೀಷ್ ಪ್ರಾಧ್ಯಾಪಕರೂ ಹೆಸರಾಂತ ರಂಗತಜ್ಞರೂ ಆದ ಪೋರ. ಗುರುರಾಜರಾಯರು ಬಂದಿದ್ದರು. ಅಪ್ಪ ಸುಬ್ಬರಾಜೇಗೌಡ ನಾನು ಸರಿಯಾಗಿ ಓದುತ್ತಿಲ್ಲವೆಂದು ಬೈದು ಕಿವಿ ಹಿಂಡುವ ದೃಶ್ಯ ರಾಯರಿಗೆ ನೈಜವಾಗಿ ಕಾಣಿಸಲಿಲ್ಲ. “ಸುಮ್ನೆ ಮುಟ್ಟಿದ ಹಾಗೆ ಮಾಡಬೇಡ್ರಿ, ಕೃತಕವಾಗಿ ಕಾಣುತ್ತೆ ”ಅಂದವರೇ ತಾವೇ ನನ್ನನ್ನು ಶಿಕ್ಷಿಸುವ ಅಭಿನಯಕ್ಕೆ ಮುಂದಾಗಿಬಿಟ್ಟರು! ಜೋರಾಗಿ ಕಿರುಚಿಕೊಳ್ಳುವಷ್ಟು ಕಿವಿ ನೋವಾಯಿತು. ಮಾರನೆಯ ದಿನ ಬಂದ ಇನ್ಯಾರೋ ಅಧ್ಯಾಪಕರು ಗುರುರಾಜರಾಯರು ರಿಹರ್ಸಲ್ ಮಾಡಿಸಿದ ಮೇಲೆ ನಿಮ್ಮ ನಾಟಕ ಚೆನ್ನಾಗಿಯೇ ಬರುತ್ತೆ ಬಿಡಿ ಎಂದರು. ನಾನು ಕಿವಿಯನ್ನೊಮ್ಮೆ ಮುಟ್ಟಿ ನೋಡಿಕೊಂಡೆ. ಪುಣ್ಯಕ್ಕೆ ರಾಯರು ಪದೇ ಪದೇ ಬರಲಿಲ್ಲ. ಕಾಲೇಜು ಯುವಮೇಳದಲ್ಲೋ ಏನೋ ನಾವು ಪ್ರದರ್ಶಿಸಿದ ನಾಟಕಕ್ಕೆ ಬಹುಮಾನ ಬಂದಿತು. ಮಯಸೂರಿನ ಟೌನ್ ಹಾಲಿನಲ್ಲಿ ತುಂಬಿದ ಪ್ರೇಕ್ಷಕವೃಂದ ನಮ್ಮ ನಾಟಕವನ್ನು ಮೆಚ್ಚಿಕೊಂಡಿತು. ಬೆಂಗಳೂರಿಗೂ ನಮ್ಮ ತಂಡ ಪಯಣ ಬೆಳೆಸಿ ಉಲ್ಲಾಳ್ ಷೀಲ್ಡ್ ಗೆದ್ದುತಂದಿತು.

ಮಹಾರಾಜ ಕಾಲೇಜಿನ ಭವ್ಯ ಕಟ್ಟಡದಲ್ಲಿ ತಿರುಗಾಡಿ, ತರಗತಿಯ ಕೊಠಡಿಗಳಲ್ಲಿ ಕುಳಿತು ವಿದ್ಯಾರ್ಥಿಯಾಗಿ ಒಂದಿಷ್ಟು ಅನುಭವ ಪಡೆದಮೇಲೆ, ಬೇರಾವ ಕಾಲೇಜೂ ಇದರ ಭವ್ಯತೆಗೆ ಸಮನಲ್ಲ ಎನಿಸಿದರೆ ತಪ್ಪಿಲ್ಲ. ಈ ಕಾಲೇಜಿನ ಇತಿಹಾಸ, ಅಧ್ಯಾಪಕ ಪರಂಪರೆ ಅತ್ಯುನ್ನತ ದರ್ಜೆಯದು. ನಾವು ಓದುವ ಕಾಲಕ್ಕೆ ಕೆಳಮುಖವಾಗಿ ಸಾಗತೊಡಗಿದ್ದ ಈ ಪರಂಪರೆಯ ಮಟ್ಟ ಇದೀಗ ಎಲ್ಲಿಗೆ ಮುಟ್ಟಿದೆಯೋ ತಿಳಿಯದು. ಏಕೆಂದರೆ, ಸಿಡಿಎನ್ ಅವರಿಗೆ ಉಪಕುಲಪತಿ ಪದವಿಯನ್ನೂ, ಎಸ್. ಅನಂತನಾರಾಯಣರಿಗೆ ಪಿ.ಹೆಚ್ ಡಿಯನ್ನೂ, ಮೈಲಾರಿರಾಯರಿಗೆ ಕಡೇ ಪಕ್ಷ ರೀಡರ್ ಹುದ್ದೆಯನ್ನೂ ಕೊಡದ ವಿಶ್ವವಿದ್ಯಾನಿಲಯ ಆ ಕಾಲಕ್ಕೇ ತನ್ನ ಭವಿಷ್ಯದ ಬಣ್ಣಗಳನ್ನು ಪ್ರದರ್ಶಿಸಲಾರಂಭಿಸಿತ್ತು.


ಮಹಾರಾಜದಲ್ಲಿ ಓದಿದ್ದಕ್ಕೆ ನನಗೆ ಬೇಕಾದಷ್ಟು ಲಾಭವಾಗಿದೆ ಮಹಾರಾಯರೆ. ಬಿಎ ಪ್ರಥಮ ರ್ಯಾಂಕ್ ಬಂತು, ಚಿನ್ನದ ಪದಕಗಳು ಬಂದವು. ಅಷ್ಟೇ ಎಂದುಕೊಂಡಿರೇನು? ಯೂನಿವರ್ಸಿಟಿಯಲ್ಲಿ ಕೆಲಸ ಸಿಗದಿದ್ದರೇನಂತೆ? ನಾನು ಮಹಾರಾಜ ಬಿಟ್ಟ ಎಷ್ಟೋ ವರ್ಷಗಳ ನಂತರ, ಪ್ರೊಫೆಸರ್ ಶ್ರೀನಿವಾಸ ರಾಘವಾಚಾರ್ಯರ ನಿಧನವಾದ ಎಷ್ಟೋ ವರ್ಷಗಳ ಬಳಿಕ… ಅವರ ಮೊಮ್ಮಗಳು, ನನ್ನ ಮಗನ ಕೈಹಿಡಿದು ಗೃಹಲಕ್ಷ್ಮಿಯಾಗಿದ್ದಾಳೆ. ಮೊಮ್ಮಗಳು ಮೈತ್ರಿ ಮನೆ ತುಂಬ ಬೀಸಣಿಗೆ ಗಾಳಿ ಸುಳಿದಾಡಿಸುತ್ತಿದ್ದಾಳೆ.

(ರೇಖಾಚಿತ್ರಗಳು:ಜಿ.ಎಸ್.ನಾಗನಾಥ್)
(ಟಿ.ಎಸ್. ಗೋಪಾಲ್ ಅವರ ‘ಅಧ್ಯಾಪನದ ಅವಾಂತರಗಳು’ ಪ್ರಬಂಧ ಸಂಕಲನದಿಂದ ಆಯ್ದ ಲೇಖನ. ಪ್ರಕಾಶಕರು: ಹೆಮ್ಮರ ಪ್ರಕಾಶನ, ಬೆಂಗಳೂರು. (ಮೊಬೈಲ್:೯೫೧೩೪೧೮೪೧೮) ಬೆಲೆ: ಎಂಬತ್ತು ರೂಪಾಯಿಗಳು)