ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಕಾನ್ಸ್‌ಟೇಬಲ್ಗೆ ರೈಫಲ್ಹಿಡಿದು ನಿಲ್ಲಲು ಸೂಚಿಸಿದೆ. ಮೊಬೈಲ್ ಫೋನಿನಲ್ಲಿ ತಹಶೀಲ್ದಾರರನ್ನು ಸಂಪಕಿಸಲು ನೋಡಿದೆ. ಶಿರಸ್ತೆದಾರ್ ಸಿಂಪಿಗೇರ್ ಸಿಕ್ಕ. ಎಲೆಕ್ಷನ್ ಡ್ಯೂಟಿಯಿಂದ ವಿನಾಯ್ತಿ ಕೇಳಿದ್ದಕ್ಕೆ ಬೇಕೆಂತಲೆ ನನ್ನನ್ನ ಈ ತರ್ಲೆಊರಿಗೆ ಪ್ರಿಸೈಡಿಂಗ್ ಆಫೀಸರ್ ಮಾಡಿಹಾಕಿಸಿದ್ದ ಮಹಾಶಯ ಅವ. ಪರಿಸ್ಥಿತಿ ವಿವರಿಸಿ ಹೆಚ್ಚೂಕಡಿಮೆ ಆದರೆ ಎಲೆಕ್ಷನ್ ರದ್ದುಮಾಡಬೇಕಾಗುತ್ತದೆ ಎಂದು ತಿಳಿಸಿದೆ. ಅರ್ಧಗಂಟೆಯಲ್ಲಿ ಪೋಲೀಸ್ ಜೀಪು ಬಂದಿತು. ಅದರಲ್ಲೆ ನ್ಯಾಮತಿಗೆ ಹೋಗಿ ಐವತ್ತು ರೊಟ್ಟಿ ಕಟ್ಟಿಸಿಕೊಂಡು ದೊಡ್ಡದೊಂದು ಕಲ್ಲಂಗಡಿ ಹಣ್ಣು ಹಿಡಿದುಕೊಂಡು ಬಂದೆ.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಬಿದರಹಳ್ಳಿ ನರಸಿಂಹಮೂರ್ತಿ ಬರೆದ ಕತೆ ‘ಹಗೇವು’

 

ಆ ರಾಜಕೀಯದ ಕತ್ತಲಲ್ಲಿ ಆವಜ್ಜಿ ಬೆಳಕಿನ ಬೀಜವನ್ನು ಜೋಪಾನವಾಗಿಟ್ಟ ಪುಟ್ಟ ಲಾಟೀನು ಹಿಡಿದುಕೊಂಡು ಬಂದಳು. ಕಲ್ಲುರಸ್ತೆಯಲ್ಲಿ ಕಟಗುಟ್ಟುತ್ತ ಬಂದ ಅವಳ ಕೈಗೋಲು ಮೆಲ್ಲಗೆ ಶಾಲೆಯ ಮೆಟ್ಟಿಲು ಹತ್ತಿ ನನ್ನ ಬಳಿಗೇ ಬಂದು ನಿಂತು. ಲಾಟೀನಿನ ದೀಪದ ಪಾಪೆ ತನ್ನ ಬೆಚ್ಚನೆ ಬೆಳಕಿನಿಂದ ನನ್ನ ಕಣ್ಣು ಕೆನ್ನೆ ಸವರಿತು. ಡವಗುಡುತ್ತಿದ್ದ ನನ್ನ ಎದೆಬಡಿತ ಸಮಸ್ಥಿತಿಗೆ ಬಂದಿತು. ಲಾಟೀನು ಕಂತಿತು.

ಆವಜ್ಜಿ ಬಡಕಲಾಟಿಯಾಗಿದ್ದರೂ ಅವಳ ಕಡ್ಡಿಕೈಕಾಲುಗಳಲ್ಲಿ ಅದ್ಯಾವುದೊ ಆದಿಶಕ್ತಿ ಗತ್ತುಗಾರಿಕೆ ಇದ್ದಂತಿತ್ತು. ಮಾಗಿ ಬಾಗಿದ ಕತ್ತನ್ನು ಇನ್ನಷ್ಟು ಬಗ್ಗಿ “ಅದ್ಯಾರಪ ತಮಾ ವನ್ನಾಳಿಂದ ಬಂದಿರದು ಎಲ್ಲಾಕ್ಷನ್ ಮಾಡಕೇಂತ?” ಅಂದಳು. “ನಾನೆ” ಎಂದು ಎದ್ದುನಿಂತೆ. “ಅಲ್ತಮಾ ಊರಿಗ್ಬಂದೋನು ನೀರ್‍ಕುಡಿಯಲ್ಲಾಂದ್ರೆ ಹೆಂಗಾದಾತು ಹೇಳು? ಇಡಿ ಊರಿಗೇ ಶಾಪ ತಟ್ಟಾಕಿಲ್ಲ? ಹಂಗೆಲ್ಲ ಹಟಾ ಮಾಡ್ಬಾರ್ದಪಾ. ಈಗ ನಡಿ ನನ್ಕುಟಾ” ಎಂದು ನನ್ನ ಕೈಹಿಡಿದುಕೊಂಡಳು. ನನಗೆ ಹಿಡತಿಭಿಡತಿಯಾಗಿ ನಮ್ಮ ಪೋಲಿಂಗ್ ಪಾರ್ಟಿಯವರ ಕಡೆ ನೋಡಿದೆ. ಗಾಬರಿ ಗುಮಾನಿ ತುಂಬಿಕೊಂಡಿದ್ದ ಅವರ ಮುಖಗಳು ಹೋಗಬೇಡ ಎಂದು ಕಣ್ಸನ್ನೆ ಮಾಡಿದವು.

(ಬಿದರಹಳ್ಳಿ ನರಸಿಂಹಮೂರ್ತಿ)

ಆದರೆ ನಾನು ಕಿಂದರಿಜೋಗಿಯ ಕಿನ್ನರಿನಾದಕ್ಕೆ ಮರುಳಾದ ಮಗುವಾಗಿದ್ದೆ. ಆವಜ್ಜಿಯ ಹೊಕ್ಕಳುಬಳ್ಳಿಯ ಕರೆ, ವಶೀಕರಣ ಮಾಡಿಕೊಂಡುಬಿಟ್ಟಿದ್ದವು. ಕೈಲಿದ್ ಬ್ಯಾಲೆಟ್ ಪೇಪರ್ ಬಂಡಲ್ಲನ್ನು ರೈಫಲ್‌ದಾರ್ ಕಾನ್ಸ್‌ಟೇಬಲ್‌ನ ವಶಕ್ಕೆ ಕೊಟ್ಟು “ಐದು ನಿಮಿಷದಲ್ಲಿ ಬರ್ತೀನಿ” ಎಂದು ಹೇಳಿ ಆವಜ್ಜಿಯ ಹಿಂದೆ ಹೊರಟೆ. ಶಾಲೆಯ ಉಣಗೋಲು ದಾಟಿದ ಆವಜ್ಜಿ ಒಂದು ಹೆಜ್ಜೆ ನಿಂತು ಸುತ್ತೂರಲು ಹೆಪ್ಪುಗಟ್ಟಿದ್ದ ಕತ್ತಲ ಮುಖಗಳಿಗೆ ಲಾಟೀನು ತೋರಿಸುತ್ತ “ಇಕಾ ಈ ಸಾಲಿ ಗುಡಿ ಒಳಾಕೆ ಯಾಕೌರೋರು. ಪಾಂಡೋರು. ದೆವ್ಗಣಾ. ದೇವ್ಗಣ ಯಾರೂ ಕಾಲಿಡಂಗಿಲ್ಲ. ನಮಮ್ ಸೂಲ್ದ ರಾಮಪ್ಪನ್ ಆಣೈತಿ” ಎಂದು ತಾಕೀತು ಮಾಡಿದಳು. ಕಲ್ಲಾಗಿ ಕುಂತು ಘೇರಾಯಿಸಿದ್ದ ಕೆಂಚಿ ಕೊಪ್ಪದ ಮಂದಿ ಕತ್ತಲಲ್ಲೆ ಕರಗಿಹೋದರು.

ಆವಜ್ಜಿಯ ಮಾಯಾಪಾಶ ನನ್ನನ್ನು ಹಳ್ಳಿಯ ಹೊರಗೆ ಹೊಂಡದ ದಂಡೆಯ ಮೇಲಿದ್ದ ಒಂಟಿ ಗುಡಿಸಲ ಮುಂದೆ ತಂದು ನಿಲ್ಲಿಸಿತು. “ಇವ್ನೆ ಸೂಲ್ದರಾಮಪ್ಪ” ಅಂದಳು ಆವಜ್ಜಿ. ಕುಕ್ಕುರುಕೂತು ಒಳಗೆ ಇಣುಕಿದೆ. ಮಿಣಮಿಣ ಉರಿಯುತ್ತಲಿದ್ದ ಹರಳೆಣ್ಣೆದೀಪದ ಬೆಳಕಲ್ಲಿ ಅರಿಶಿಣ-ಕುಂಕುಮ ಬಳಿದುಕೊಂಡ ಕರಿಜಿಡ್ಡಿನ ಮೋಟುಗಲ್ಲು ಕಂಡಿತು. ಪಕ್ಕದಲ್ಲಿ ಹಳೆ ತ್ರಿಶೂಲ ನೆಲದಲ್ಲಿ ಊರಿಕೊಂಡಿತ್ತು. ಫಕ್ಕನೆ ಗುಡಿಸಲ ಮಾಡು ನನ್ನ ಗಮನ ಸೆಳೆಯಿತು. ಅದು ಹುಲ್ಲು ಮಾಡಲ್ಲ. ಕಣಗಿಗಳ ಮಾಡು. ತೆಳ್ಳನೆ ಉದ್ದನೆ ಕೋಲು ಕಣಗಿಗಳನ್ನು ಮೂರೂ ಕಡೆಗಳಿಂದ ಪೇರಿಸಿಟ್ಟ ಪಿರಮಿಡ್ಡು ಅದು ಎಂಬುದು ಅರವಾಗಿ ಬೆನ್ನು ಹುರಿ ಛಳಕ್ ಎಂದಿತು. “ಇದೇನಿಂಗೆ ಕಣಗಿಗಳನ್ನು ಜೋಡಿಸಿಟ್ಟಾರಲ್ಲ” ಎಂದು, ಅನುಮಾನದರಾಗ ಎಳೆದೆ. “ಇವೂ ತರ್ರೋದ ಕಟಿಗಿಗಳು. ಮೈತುಂಬಾ ಮುಳ್ಳಿರೊತಾವು. ಇಲ್ಲೆ ಗುಡ್ದಾಗೆ ಸಿಕ್ತಾವೆ. ಇದ್ರಾಗೆ ಹೊಡ್ರುದೆ ಬೆನ್ನಾಗ್ಳ ಚರ್ಮಾ ಕಿತ್ತಿ ರಗ್ತ ಮಾಂವ್ಸ ಹೊರೀಕ್ ಬರ್ತಾವೆ” ಅಂದಳು. ಇವತ್ತಿಗೆ ನನ್ನಕತೆ ಮುಗೀತು ಅನ್ನಿಸಿ ಸಣ್ಣಗೆ ಬೆವರತೊಡಗಿದೆ. “ಹಿಂದುಕ್ಕೆಲ್ಲ ಈ ಊರ್‍ಮಂದಿ ಮಾತ್ಮಾತಿಗೆ ಇಂತಾ ಮುಳ್ಕಣಗಿ ಹಿಡಕೊಂಡ್ ಹೊಡ್ದಾಡ್ತಿದ್ರು ಆಹ್ವಡ್ದಾಟ ನಿಲ್ಸಿ ನಮ್ ಸೂಲ್ದರಾಮಪ್ಪ ಭಾರಿ ಪುಣ್ಣೇವ್ ಕಟಗಂಡ” ಅಂದಳು. ಈ ಮಾತಿಗೆ ಈ ಜೀವ ಸ್ವಲ್ಪ ಹಗುರಾಯಿತು.

“ಬಾ ತಮಾ, ತಗಾ ಈ ಶಂಕ್ರಗಂಡ. ಉಣ್ಣು. ಇಕಾ ಈ ಶಿವ್ದಾನ ಕುಡಿ” ಎಂದು ಗಂಗಾಳ ಮತ್ತು ವಾಟಗದ ಮೇಲೆ ಮುಚ್ಚಿದ್ದ ಬಟ್ಟೆ ತೆಗೆದಳು. ಹಸಿದ ಹೊಟ್ಟೆ ಕೈಯನ್ನು ಚಾಚಿತು. ‘ಆದರೆ ನಿಗೂಢ ತಾಂತ್ರಿಕಯೊಬ್ಬಳ ಭೀಕರ ಕಣ್ಣಟ್ಟಿಗೆ ನೀನು ಬಲಿಯಾಗುತ್ತಿಲ್ಲವಷ್ಟೆ?’ ಎಂದು ನನ್ನೊಳಗಿನ ನಾಗರಿಕ ಪ್ರಜ್ಞೆ ಕೆಣಕಿತು. ನಾನು ದಿಙ್ಮೂಢನಾಗಿ ಕೂತದ್ದನ್ನು ನೋಡಿ ವಜ್ಜಿ “ಉಣ್ಣಾಕೆ ಚೌಕಾಶಿ ಮಾಡಬ್ಯಾಡ ಶಿವ. ಉಂಡು ಊರಿಗೆ ಒಳ್ಳೇದಾಗ್ಲೀಂತ ಹರ್ಸು” ಎಂದು ನನ್ನ ತಲೆ ಸವರಿದಳು. ಕಣ್ಣು ತೇವಗೊಂಡವು. ಅವಳ ಕಣ್ಣಲ್ಲಿ ಕಣ್ಣಿಟ್ಟು ಅವಳ ಒಳಗನ್ನು ನೋಡಿದೆ, ಅವಳು ಮೂಲ ಮಾನವಿಯಾಗಿ, ಎಲ್ಲ ಮಾನವರ ತಾಯಾಗಿ ಗೋಚರಿಸಿದಳು. ‘ನಂಬಿಕಿ ಬಿತ್ತಿದರೆ ನಂಬಿಕಿ ಬೆಳಿತತಿ. ಅಪನಂಬಿಕಿ ಬಿತ್ತಿದರೆ ಅಪನಂಬಿಕೆ ಬೆಳಿತತಿ’ ಎಂದು ಅವಳ ಜೀವರತ್ನ ಪಿಸುಗುಟ್ಟಿ ಹೇಳಿತು. ನಾನು ಗಬಗಬ ಉಣ್ಣತೊಡಗಿದೆ. ಅವಳು ಶಮಕಗಂಡ ಎಂದದ್ದು ಜ್ವಾಳದ ನುಚ್ಚಿನಂಬಲಿ. ಶಿವದಾನ ಎಂದದ್ದು ತಣ್ಣನೆಯ ಮಜ್ಜಿಗೆ. ಜೀವ ಸಂಭಾಳಿಸುವ ಆಹಾರದ್ರವ್ಯಗಳಿಗೆ ನಮ್ಮ ಜಾನಪದೀಯರು ಎಂತಾ ಆನುಭಾವಿಕ ಹೆಸರುಗಳನ್ನು ಹಚ್ಚಿದ್ದಾರಲ್ಲ ಎಂದು ಬೆರಗಾಗುವಷ್ಟರಲ್ಲೆ ನನ್ನ ಹೊಟ್ಟೆ ತಣಿದು, ಎದೆಯಲ್ಲಿ ಹಿತಭಾವ ಅರಳಿತು. ದೇವರನ್ನೂ ಮನುಷ್ಯರನ್ನಾಗಿಸುವ, ಮನುಷ್ಯರನ್ನೆ ದೇವರನ್ನಾಗಿಸುವ ನಮ್ಮ ಹಳ್ಳಿಗರ ಮುಗ್ಧತೆ ಒಂದು ಕಡೆ. ದೇವರನ್ನು ಹರಾಜುಹಾಕಿ ಮನುಷ್ಯರನ್ನೆಲ್ಲ ದೆವ್ವಗಳನ್ನಾಗಿಸುವ ನಗರಕೇಂದ್ರಿತ ರಾಜಕಾರಣದ ಧೂರ್ತತೆ ಇನ್ನೊಂದು ಕಡೆ. ಇವೆರಡರಲ್ಲಿ ಯಾವುದು ಅಳಿಯುತ್ತದೆ, ಯಾವುದು ಉಳಿಯುತ್ತದೆ ಎಂದು ಹೇಳುವುದು ಕಷ್ಟ ಎನ್ನಿಸಿ ನನ್ನೊಳಗಿನ ಹಿತಭಾವಕ್ಕೆ ಕೊಂಚ ವಿಷಾದದ ಛಾಯೆ ಬೆರೆತಿತು.

ಮಧ್ಯಾಹ್ನ ನಡೆದ ಘಟನೆಯ ರೀಲು ಸ್ಪೀಡಾಗಿ ಕಣ್ಣಮುಂದೆ ಬಿಚ್ಚಿಕೊಂಡಿತು. ಪೋಲೀಸ್ ಜೀಪಿನಲ್ಲಿ ನಮ್ಮ ಪೋಲಿಂಗ್ ಪಾರ್ಟಿಯನ್ನು ತಂದು ಈ ಕೆಂಚಿಕೊಪ್ಪದ ಪ್ರಾಥಮಿಕ ಶಾಲೆಯಲ್ಲಿ ಇಳಿಸಿದರು. ಎಲೆಕ್ಷನ್ನಿನ ಗಂಟುಮೂಟೆ ಇಳಿಸುತ್ತಿದ್ದಂತೆ ಗಮಗಮಾಡಿಸುತ್ತ ತೂರಾಡುವ ನಾಕುಮಂದಿ ಬಂದರು. “ನಡ್ರಿಸಾ ಊಟಾಮುಗಿಸ್ಕಂಡ್ ಬರೋರಂತೆ” ಅಂದರು. “ಹೊರಗಿರ್ರಿ. ಆಮೇಲೆ ಬರ್ತೀವಿ” ಅಂದೆ. “ರಾತ್ರಿನಾಗೆ ಕುರಿಕಡ್ಸನೊ. ಏನ್ ಕೋಳಿಮಾಡ್ಸನೊ” ಅಂದ ಒಬ್ಬ. ನನಗೆ ಪಿತ್ಥ ನೆತ್ತಿಗೇರಿತು. “ನಾವೇನ್ ನಿಮ್ಮೂರಿನ ಬೀಗ್ರಾ ಬಿಜ್ರಾ? ನಮ್ಗೆ ಸರ್ಕಾರ ದುಡ್ಡುಕೊಟ್ಟಿದೆ. ನಮ್ಮೂಟದ ಏರ್ಪಾಟು ನಾವೇ ಮಾಡ್ಕೋತೀವಿ. ನಡೀರಿ ಹೊರಗೆ” ಅಂದೆ. “ನಮ್ಮೂರಾಗ್ ಅದಲ್ಲ ನಡಿಯಾಕಿಲ್ಲ ಬಿಡ್ರಿ” ಅಂದರು. “ನೀವು ಹಾಕಿದ್ದುಂಡು ನೀವು ಹೇಳಿದಂಗೆ ಕೇಳ್ಲಿಕ್ಕೆ ನಾವೂ ತಯಾರಿಲ್ಲ” ಅಂದೆ. ನಮ್ಮ ಪೋಲಿಂಗ್ ಪಾರ್ಟಿಯ ಮೇಸ್ಟರುಗಳು “ಸಾರ್ ಸಾರ್…..” ಎಂದು ನನ್ನನ್ನು ತಡೆಯ ಬಂದರು. “ನೀವೆಲ್ಲ ಸುಮ್ಮಗಿರಿ” ಎಂದು ಗದರಿಸಿಬಿಟ್ಟೆ. “ನಾಳೆ ಅಧೆಂಗೆ ಎಲೆಕ್ಷನ್ ಮಾಡ್ಕಂತಿರೊ ನೋಡ್ಕಂತೀವಿ” ಎನ್ನುತ್ತ ಒಬ್ಬ ಸಿನಿಮಾ ರೌಡಿ ಥರ ಹೆಗಲ ಟವೆಲ್ ಜಗ್ಗಿಕೊಳ್ಳುತ್ತ ನಿಂತ. ನನ್ನ ಸಿಟ್ಟು ಮಿತಿಮೀರಿತು. “ಮೊದ್ಲು ಹೊರಗೆ ಹೋಗ್ರಿ. ಏನ್ ಮಾಡಬೇಕು ಅನ್ನೋದು ನನಗೆ ಗೊತ್ತಿದೆ” ಎಂದು ಕಿರುಚಿದೆ. ಕೊಂದು ತಿಂದುಬಿಡುವಂತೆ ನೋಡುತ್ತ ಹೊರಗೆ ನಡೆದರು.

ಒಬ್ಬ ಹೋಟೆಲಿನವನನ್ನು ಕರೆಸಿ ಊಟದ ರೇಟು ಗೊತ್ತು ಮಾಡಿ ಎರಡೂದಿನ ಸಪ್ಲೇ ಮಾಡಲು ಆರ್ಡರ್ ಕೊಟ್ಟೆ. ಅರ್ಧಗಂಟೆಯಲ್ಲಿ ಊಟ ತರುತ್ತೇನೆಂದು ಹೋದವ ಒಂದು ಗಂಟೆಯಾದರೂ ಪತ್ತೆಯಿಲ್ಲ. ಅವನನ್ನು ಬೆದರಿಸಿ ಬಸ್ಸು ಹತ್ತಿಸಿದರೆಂದು ತಿಳಿಯಿತು. ಅಷ್ಟರಲ್ಲಿ ಊರಮಂದಿ ಎಲ್ಲ ಶಾಲೆಯ ಮುಂಭಾಗದ ಊರಂಗಳದಲ್ಲಿ ಘೇರಾಯಿಸತೊಡಗಿದರು. “ನಮ್ ಕೆಂಚೀಕೊಪ್ಪುದ್ ಜನಾ ಎದ್ರೂಂದ್ರೆ ಕೆಂಜ್ಗಕೆಂಜ್ಗಾ ಎದ್ಹಂಗೆ” ಎಂದರು. ನಮ್ಮ ಪೋಲಿಂಗ್ ಆಫೀಸರ್‍ಗಳು ಕಂಗಾಲಾದರು. ಅವರ ಹಸಿದ ಮುಖಗಳನ್ನು ನೋಡಿ ಅಪರಾಧಿ ಪ್ರಜ್ಞೆ ನನ್ನನ್ನು ಕಾಡತೊಡಗಿತು. ಎದುರಂಗಡಿಯಿಂದ ಒಂದು ಬಾಳೆಗೊನೆ ಕೊಂಡುತರಲು ಜವಾನನ್ನು ಅಟ್ಟಿದೆ. ತಟ್ಟನೆ ಅಂಗಡಿ ಮುಚ್ಚಿಸಿದರು. “ಒಂದ್‌ಹನಿ ನೀರ್ ಕೊಡಾಕಿಲ್ಲಾ ನೀರು” ಎಂದು ಕೂಗಿದರು. “ಅಧೆಂಗ್ ಎಲಕ್ಸನ್ ಮಾಡ್ಕಂತನೋ ನೋಡೆ ಬಿಡನ ಬರ್ರೆಲೆ” ಎಂದು ಎಗರಾಡಿದು. ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಕಾನ್ಸ್‌ಟೇಬಲ್ಗೆ ರೈಫಲ್ಹಿಡಿದು ನಿಲ್ಲಲು ಸೂಚಿಸಿದೆ. ಮೊಬೈಲ್ ಫೋನಿನಲ್ಲಿ ತಹಶೀಲ್ದಾರರನ್ನು ಸಂಪಕಿಸಲು ನೋಡಿದೆ. ಶಿರಸ್ತೆದಾರ್ ಸಿಂಪಿಗೇರ್ ಸಿಕ್ಕ. ಎಲೆಕ್ಷನ್ ಡ್ಯೂಟಿಯಿಂದ ವಿನಾಯ್ತಿ ಕೇಳಿದ್ದಕ್ಕೆ ಬೇಕೆಂತಲೆ ನನ್ನನ್ನ ಈ ತರ್ಲೆಊರಿಗೆ ಪ್ರಿಸೈಡಿಂಗ್ ಆಫೀಸರ್ ಮಾಡಿಹಾಕಿಸಿದ್ದ ಮಹಾಶಯ ಅವ. ಪರಿಸ್ಥಿತಿ ವಿವರಿಸಿ ಹೆಚ್ಚೂಕಡಿಮೆ ಆದರೆ ಎಲೆಕ್ಷನ್ ರದ್ದುಮಾಡಬೇಕಾಗುತ್ತದೆ ಎಂದು ತಿಳಿಸಿದೆ. ಅರ್ಧಗಂಟೆಯಲ್ಲಿ ಪೋಲೀಸ್ ಜೀಪು ಬಂದಿತು. ಅದರಲ್ಲೆ ನ್ಯಾಮತಿಗೆ ಹೋಗಿ ಐವತ್ತು ರೊಟ್ಟಿ ಕಟ್ಟಿಸಿಕೊಂಡು ದೊಡ್ಡದೊಂದು ಕಲ್ಲಂಗಡಿ ಹಣ್ಣು ಹಿಡಿದುಕೊಂಡು ಬಂದೆ. ಬರುವಾಗ ದಾರಿಯಲ್ಲಿದ್ದ ಆರುಂಡಿ ಗೌಡರ ಮನೆಯಲ್ಲಿ ಕೊಡಪಾನ ಇಸ್ಕೊಂಡು ನೀರನ್ನೂ ತಂದುಬಿಟ್ಟೆ. ಕೆಂಚಿಕೊಪ್ಪದವರ ಹೊಟ್ಟೆಯಲ್ಲಿ ಕೆಂಡ ಸುರಿದಂತಾಯಿತು. ತೂರಾಬಾರಾ ಬಯ್ಯತೊಡಗಿದರು. ನನಗೆ ಗತಿಕಾಣಿಸುತ್ತೇವೆಂದರು. ಬೂತಿನ ಒಳಗಡೆ ನುಗ್ಗಿಬರುತ್ತಿರುವಂತೆ ಜನಸಮುದ್ರದ ಅಲೆಗಳು ತುಯ್ದಾಡತೊಡಗಿದವು. ಒಂದು ಜೀಪಿನ ಪೋಲೀಸರು ಯಾತಕ್ಕೂ ಸಾಲದೆನಿಸಿತು. ಎಲ್ಲಕಡೆ ವಯರ್ಲೆಸ್ ಮೆಸೇಜ್‌ಗಳು ಹಾರಿಹೋದವು. ಸಂಜೆಹೊತ್ತಿಗೆ ದೊಡ್ಡ ನೀಲಿವ್ಯಾನಿನಲ್ಲಿ ರಿಸರ್ವ್ ಪೋಲೀಸ್ ಪಡೆ ಬಂದಿಳಿಯಿತು. ಪರಿಸ್ಥಿತಿಗೆ ಉಸಿರುಕಟ್ಟಿತು. ಕೆಂಗಣ್ಣಮಂದಿ ಬಾವಿಕಟ್ಟೆ ಮನೆಕಟ್ಟೆ ಚಾವಣಿ ಮೈದಾನ ಎಲ್ಲಂದರಲ್ಲಿ ಕೂತು ಕೆಕ್ಕರಿಸಿದರು. ಒಳಗಿನ ಎದೆಗುದಿಯನ್ನು ನಿಯಂತ್ರಿಸುತ್ತ ನಿರ್ವಿಣ್ಣರಾದ ಪೋಲಿಂಗ್ ಆಫೀಸರ್‌ಗಳಿಗೆ ಧೈರ್ಯತುಂಬುತ್ತ ಬೂತನ್ನು ಸಜ್ಜುಗೊಳಿಸತೊಡಗಿದೆ.

ಪಕ್ಕದಲ್ಲಿ ಹಳೆ ತ್ರಿಶೂಲ ನೆಲದಲ್ಲಿ ಊರಿಕೊಂಡಿತ್ತು. ಫಕ್ಕನೆ ಗುಡಿಸಲ ಮಾಡು ನನ್ನ ಗಮನ ಸೆಳೆಯಿತು. ಅದು ಹುಲ್ಲು ಮಾಡಲ್ಲ. ಕಣಗಿಗಳ ಮಾಡು. ತೆಳ್ಳನೆ ಉದ್ದನೆ ಕೋಲು ಕಣಗಿಗಳನ್ನು ಮೂರೂ ಕಡೆಗಳಿಂದ ಪೇರಿಸಿಟ್ಟ ಪಿರಮಿಡ್ಡು ಅದು ಎಂಬುದು ಅರವಾಗಿ ಬೆನ್ನು ಹುರಿ ಛಳಕ್ ಎಂದಿತು.

ಅವರ ಗಂಟಲಲ್ಲಿ ರೊಟ್ಟಿಗಳು ಸರಿಯಾಗಿ ಇಳಿಯಲಿಲ್ಲ. ಅಷ್ಟರಲ್ಲಿ ಫಕ್ಕನೆ ಕರೆಂಟ್ ಹೋಯಿತು. ಪೋಲಿಸರು ಗುಮಾನಿಯಿಂದ ಶಾಲೆಯ ಸುತ್ತಲೂ ಕವರ್ರಾಗಿ ಕಾದರು. ನಾನು ಕಟ್ಟೆಮೇಲೆ ಬಂದು ಕೂತಿದ್ದೆ. ಆಕಾಶದಲ್ಲಿ ಅನಿಶ್ಚತತೆಯ ಮೋಡ ಕವಿದಿತ್ತು. ಅದೇ ಹೊತ್ತಿಗೆ ಬಂದದ್ದು ಈ ಲಾಟೀನಿನ ಆವಜ್ಜಿ.

ಆವಜ್ಜಿ ಗಂಗಾಳ ವಾಟಗ ತೊಳೆದು ಬೋರಲು ಹಾಕಿದಳು. ಆ ಮೋಟುಗಲ್ಲ ಮುಂದೆ ಕೂತು ಕೈಮುಗಿದು, ಬೊಗಸೆಯನ್ನು ತರ್ರೋ ಕಟಿಗೆಗಳ ಚಾವಣಿ ಕಡೆಗೆತ್ತಿ ಸೈಲೆಂಟಾಗಿ ಶೂಲದರಾಮಪ್ಪನ ಕೂಡ ಅದೇನೊ ಮಾತಾಡಿದಳು.

ನಂತರ ಎಲೆಅಡಿಕೆ ಸಂಚಿಯನ್ನು ನನ್ನ ಮುಂದೆ ಬಿಚ್ಚಿಟ್ಟು, “ಎಲಡ್ಕಿಹಾಕ್ಕ ತಮಾ” ಎಂದಳು. ನಾನು ಒಂದೆಲೆ ಎತ್ತಿಕೊಂಡು ಸುಣ್ಣಹಚ್ಚತೊಡಗಿದೆ. ಅವಳು ಅರ್ಧ ಒಣಾ ಎಲೆ ಹರಿದುಕೊಂಡು. ಹೆಬ್ಬೆರಳ ಉಗುರಿಂದ ಡಬ್ಬಿಯ ಸುಣ್ಣ ಎಬ್ಬಿಕೊಂಡು ಬಾಯಿಗಿಟ್ಟುಕೊಂಡು. ಎಡಅಂಗೈಯಲ್ಲಿ ಹೊಗೆಸೊಪ್ಪು ತೀಡಿ ಅದೆ ಹುಡಿಯನ್ನು ಬಾಯಿಗೆ ವಕ್ಕೊಂಡು ಜಗಿಯತೊಡಗಿದಳು.

“ಈ ಶೂಲದ ರಾಮಪ್ಪ ಯಾವ ಕಾಲದೋನಜ್ಜಿ?” ಎಂದು ಕೇಳಿದೆ. ಆವಜ್ಜಿ ಒಂದುಕ್ಷಣ ಹರಳೆಣ್ಣೆ ದೀಪದ ಕುಡಿಯನ್ನೆ ನೋಡುತ್ತ, ತನ್ನ ದೃಷ್ಟಿಯೆ ಅದರಲ್ಲಿ ಐಕ್ಯವಾದಂತೆ ಕೂತಳು. ಅವಳ ತಲೆಯಲ್ಲಿದ್ದ ತಲತಲಾಂತರ ನೆನಪಿನ ಬುತ್ತಿಯ ಗಂಟು ಮೆಲ್ಲಗೆ ಬಿಚ್ಚಿಕೊಂಡು ಗಮಗಮಾಡಿಸಿತು.

“ನಮ್ ಸೂಲ್ದರಾಮಪ್ಪಾ ಭೋ ಹಿಂದಿನ್ ಕಾಲ್ದೋನು. ನಮ್ತಾತನ ತಾತಾನ ಮುತ್ತಾತ ಏಳಡಿ ಕಟ್ಟಿಸ್ತು ಆಳು ಮಾ ನಂಬಿಕಸ್ತ. ಜೀಂವಕ್ಕೆ ಜೀಂವಾ ಕ್ವಡೋಂತೋನು. ಅದ್ಕಂಡೇ ಬೆಳಗುತ್ತಿ ಅರುಸ್ರು ಅವ್ನ ಹೆಸ್ರಿಗೆ ಉಂಬ್ಳ ಜಮೀನು ಬರ್ದು ಬೆಳ್ಳಿಬಂಗಾರ ಕ್ವಟ್ಟು ಅವ್ನ ಜೀಂವಾನ ಸೂಲಕ್ಕೆ ಅರ್‍ಪ್ಣೆ ಮಾಡಿಸಿದ್ರು. ಅವ್ರೇನಾದ್ರೂವಾ ಯುದ್ಧಕೋಬಕೂಂತಾದ್ರೆ ಮೊದೂಲ್ ಸುರ್ವಿಗೆ ನಮ್ರಾಮಪ್ಪ ಸೂಲದಮ್ಯಾಲೆ ಬಿದ್ದು ಪ್ರಾಣಕ್ವಡಬಕು. ಈ ಬಲಿಂದ ರಣಭೈರೊದೇವ್ರಿಗೆ ತೃಪ್ತಿ ಆಗಿ ಅವ್ನು ಅರುಸ್ರಪ್ರಾಣಾ ಕಾಯ್ಬಕು. ಹಿಂಗೆ ಉಂಬ್ಳಹಾಕಿಶ್ಗಂಡು ನ್ಯಾಲಿಗಿಮಾತು ಕ್ವಟ್ಟೋರಿಗೆ ನ್ಯಾಮ್ತಿ ಸೀಮ್ಯಾಗೆ ಲೆಂಕ್ರು ಅಂತಿದ್ರೂಂತ ನಮಜ್ಜಿ ಏಳ್ತಿತ್ತು.

“ಸೂಲ್ದರಾಮಪ್ಪ ಈ ವಂಡದ್ ದಂಡಿಮ್ಯಾಗೆ ಒಂದು ಚೂಪ್ನೆಸೂಲ ನೆಟ್ಟು ಅದನ್ನೆ ನೋಡ್ತ ಮೂಕಬಸುವನಂಗೆ ಕುಂತುಬಿಡ್ತಿದ್ನಂತೆ ಹಗ್ಲೆಲ್ಲ. ಒಂದೊಂದಪಾ ರಾತ್ರಿಡಿ ತಬ್ಸುಮಾಡ್ತಿದ್ನಂತೆ. ಅವುನ ತಬ್ಸಿನಿಂದ ಅರುಸ್ರ ಪುಣ್ಣೇವ್ಹೆಚ್ಚಿ ಯಾ ಯುದ್ದನೂ ಆಗ್ಲಿಲ್ಲಂತೆ. ಬಾಳ ವರ್ಸ.

“ಉಂಬ್ಳಿಜಮೀನ್ನೆಲ್ಲ ಅವನೆಂಡ್ತಿ ಬನವ್ವನೆ ವೈನಾಗಿ ಬ್ಯಾಸಾಯ ಮಾಡುಸ್ತಿದ್ಳಂತೆ. ಗಂಡ ಸನ್ನೇಸಿ ಆಬುಟ್ನಲ್ಲಾ ಅನ್ನೊ ನೋವು ಮರ್ತು ಬೂಮ್ತಾಯಿ ಸೇವೆ ಮಾಡ್ತ ಸವ್ಕಣಾಕೆ ಹತ್ತಿದ್ಳಂತೆ. ಬೂಮ್ತಾಯಿ ಹೆಣ್ಮಗಳ ಕಷ್ಟಾನ ಕಣ್ಬುಟ್ಟು ನೋಡಿದ್ಳಂತೆ. ಸರಿ ಬೇಕಾದಂಗ ಬೆಳಿಬಂತಂತೆ. ಬನವ್ವ ಸುಗ್ಗೀಕಾಲಕ್ಕೆ ಕಣದಾಗೆ ಕಾಳಿನರಾಶಿ ಒಟ್ಟಿಸಿ ಆಳುಕಾಳು ಎಲ್ಲಾರ್ನು ಸೇರಿಶಿಗಂಡು ಪೂಜಿಮಾಡಿ ದಾಸೋಘಾ ಮಾಡುಸ್ತಿದ್ಳಂತೆ. ಹೊಟ್ಟೆಬಿರಯ ಉಣುಸ್ತಿದ್ಳಂತೆ. ಉಂಡೋರು ಇಕಿ ಮಂತ್ಯಾನ ಬೆಳಿಲಪ್ಪಾ ಶಿವಾ ಅಂತ ಹರುಸ್ತಿದ್ರಂತೆ. ಬನವ್ವ ಮೊರಮೊರಗಟ್ಳೆ ಕಾಳ್ನ ಬಡವ್ರುಬಗ್ರಿಗೆ, ರಟ್ಟೆಮುರ್ದು ದುಡುದೋರಿಗೆಲ್ಲ ದಾನಾ ಮಾಡ್ತಿದ್ಳಂತೆ. ‘ಬನವ್ವಾಂದ್ರೆ ದಾನವ್ವಾಂತ’ ಅಂತ ಊರಜನಾ ಏಳ್ತಿದ್ರಂತೆ. ಹಿಂಗಾಗಿ ವರ್ಷೇವರ್ಷೇ ಹುಲ್ಸು ಹೆಚ್ಚಾಕ್ಕಂತಾ ಹೋತಂತೆ. ಬಿಳಿಜ್ವಾಳದ ಗೊಂಡೇ ಮುತ್ತಿನಂತಾ ಫಸ್ಲು ಪಸಂದಾಗಿ ಬರಾಕೆ ಹತ್ತಿತಂತೆ. ಗಾಡಿಗಾಡಿ ತಂದು ತುಂಬ್ಶಿದ್ರೆ ಬಸಣ್ಣದೇವ್ರ ಗುಡಿತಾವಿರೊ ಇಪ್ಪತ್ತೈದು ಹಗೇವೂ ತುಂಬಿಹೋಗ್ತಿದ್ವಂತೆ… ಹಗೇವಂದ್ರೆ ಗೊತ್ತೈತನೂ?”

ನನಗೆ ಗೊತ್ತಿದರೂ ಅವಳ ಬಾಯಿಂದ ಇನ್ನೊಮ್ಮೆ ಕೇಳಬೇಕೆನ್ನಿಸಿ. ಗೊತ್ತಿಲ್ಲ ಅನ್ನುವಂತೆ ತುಟಿಯುಬ್ಬಿಸಿ ತಲೆಯಾಡಿಸಿದೆ. ಅವಳು ವರ್ಣಿಸಿದಳು; “ಹಗೇವು ಅಂತಂದ್ರೆ ನೆಲ್ದಿಡ್ಲಾಗೆ ತೋಡಿರೊ ಗುಡಾಣದಂತಾ ಗುಂಡಿ. ನಮ್ ಕೆಂಚಿಕ್ವಪ್ಪ, ಅರುಬ್ಗಟ್ಟಿ, ಫಲ್ನಳ್ಳಿ ಇಂತಾ ಒಣೇಸೀಮ್ಯಾಗೆ ಯಂತಾ ಮಳಿಗಾಲ್ದಾಗೂ ನೆಲ್ದ ಒಡ್ಡಿಗೆ ಹಸಿಹಿಡಿಯದುಲ್ಲ, ಮ್ಯಾಕೆ ಕೆಸುರಾದ್ರೂವ ಒಳಾಕೆ ಒಂದನಿ ನೀರಿಳಿಯಲ್ಲ. ಅದ್ಕಂಡೇ ಗುಡಾಣು ಗಾತ್ರದ ಗುಂಡಿ ತೋಡಿ ಒಳಮೈಗೆ ಅಂಟಿಸಿದಂಗೆ ಸೊಪ್ಪೆದಿಂಡ್ ಸುತ್ತಿಡತಾರೆ. ಕಾಳ್‌ಸುರ್ದು, ದಬ್ಗಲ್ ಹೇರಿ, ಬಾಯಿ ಮೆತ್ತಿಟ್ರಪಾಂದ್ರೆ ವರ್ಷಗಟ್ಲೆ ಏನೇನೂ ಆಗ್ದಂಗೆ ವೈನಾಗಿರ್ತತಿ. ನೆಲ್ದ ಒಡ್ಲಾಗಿನ್ ಕಾವು ಕಾಳ್ನ ಬೆಚ್ಚಗೆ ಕಾಪಾಡ್ತೆತ್ತಿ. ಮುಗ್ಗಾಗ್ದಂಗೆ, ಕ್ವಳೀದಂಗೆ ಜ್ವಾಪಾನಾ ಮಾಡ್ತತಿ. ಅದ್ರ ಬಾಯ್ ಮಚ್ಚಿ ಮಣ್ಣುಸಗ್ಣಿ ಸಾರೊಸಿಬಿಟ್ರಪಾಂದ್ರೆ ಹಗೇವು ಎಲ್ಲದಾವೂಂತ ಯಾ ಭಾಂಚೋದಿಗು ಗ್ವತ್ತಾಗಲ್ವ. ಒಂದೊಂದ್ ಹಗೇವಿನಾಗೆ ಎರ್ಡೆರ್ಡು ಮೂರ್ಮೂರು ಖಂಡ್ಗ ಕಾಳು ಹಿಡುಸ್ತತಿ. ನಮ್ ಒಣೇಶೀಮೇರಿಗೆ ಈ ಹಗೇವು ಒಂದ್ ವರದಾನಿದ್ದಂಗೆ,”

ನಮ್ಮ ಜನಪದರಿಗೆ, ಇರುವ ಪರಿಸರದ ಅರಿವು, ಯಾವುದನ್ನೆ ಆಗಲಿ ಕ್ಲುಪ್ತವಾಗಿ ಕಣ್ಣಿಗೆ ಕಟ್ಟುವಂತೆ ಬಣ್ಣಿಸುವ ಅವರ ದೇಸಿಶೈಲಿ. ಆಪ್ತಹಿತೈಷಿಗಳಂತೆ ವರ್ತಿಸುವ ಅವರ ನಡೆನುಡಿ ಇವುಗಳಿಗೆ ನಾನು ಮಾರುಹೋಗಿದ್ದೇನೆ. ಅವರ ಬದುಕಿನ ವಿವೇಕ ನನ್ನ ಬದುಕಿಗೆ ದಾರಿದೀಪವಾಗಿದೆ. ತನ್ನದೆ ಲಹರಿಯಲ್ಲಿ ಮಾತಾಡುತ್ತ ನನ್ನೆದುರು ಕೂತಿದ್ದ ಆವಜ್ಜಿ ನಮ್ಮ ಜಾನಪದಲೋಕದ ಅಮರಕೋಶದಂತೆ ಕಂಡಳು. ನಾನು ಬೆಪ್ಪನಂತೆ ಕೂತಿದ್ದೆ.

ನಗುತ್ತ, ಇನ್ನೊಮ್ಮೆ ಹೊಗೆಸೊಪ್ಪನ್ನು ಅಂಗೈಯಲ್ಲಿ ತೀಡಿಕೊಳ್ಳುತ್ತ ಗ್ರಾಮೀಣರ ಗತ್ತಿನಲ್ಲಿ ಕಾಮೆಂಟು ಮಾಡಿದಳು. “ನಿಮ್ ವನ್ನಾಳಿ ಪ್ಯಾಟೇರಿಗೆ ಹಗೇವಂದ್ರೆ ಗೊತ್ತುಲ್ಲ.” ಅನ್ಯಾಕ್ರಮಣದ ವಿರುದ್ಧ ಸಾಂಸ್ಕೃತಿಕ ನಾಡಬಾಂಬು ಎಸೆಯುತ್ತಿರುವ ಕ್ರಾಂತಿಕಾರಿಣಿಯಂತೆ ಕಂಗೊಳಿಸಿದಳು ಆವಜ್ಜಿ.

ಈ ಉಪಕತೆಯಿಂದ ಮತ್ತೆ ಮೂಲಕತೆಗೆ ಅವಳ ಗಮನ ಸೆಳೆಯಲೆಂದು ಕೇಳಿದೆ. “ಆ ರಾಮಪ್ಪ ಬನವ್ವಗೆ ಮಕ್ಕಳು ಇರ್ಲಿಲ್ವ?”

“ಇದ್ರು ಇದ್ರು, ನಾಕ್ ಮಂದಿ ಗಂಡುಸ್ ಮಕ್ಳಿದ್ರು. ಆದ್ರೆ ಒಬ್ರೂವ ಅಪ್ಪಾ ಅವ್ವನೊಷ್ಟ ಸಂಬಾವಿತ್ರಲ್ಲ. ಎಲ್ಲ ಕೌರೋರ ಕುಲ್ದೋವ್ರು” ಎಂದು ನೆನಪಿನಾಳದ ನಿಟ್ಟುಸಿರುಬಿಟ್ಟಳು. ವಿಷಾದ ರಾಗಕ್ಕೆ ಗಂಟಲನ್ನು ಒಗ್ಗಿಸಿಕೊಳ್ಳುತ್ತ ಹೇಳಿದಳು; “ಹಿಡುದ್ ಮುಟ್ಟಿದ್ದುಕ್ಕೆಲ್ಲ ಹ್ವಡದಾಟ. ತಮ್ತಮ್ಮೊಳ್ಗೆ ನ್ಯಾಯಾ ತಕ್ಕಣಾದು, ಕುಡ್ಡು ಪಾಲ್ಟಿಪಕ್ಸಾ ಮಾಡ್ಕಣದು, ಗುಡ್ಡಾಹತ್ತಿ ತರ್ರೋದ ಕಟ್ಟಿ ಕಟ್ಕಂಬರದು, ಹೆಣಬೀಳ ಹ್ವಡ್ದಾಡದು, ಇಷ್ಟೆ. ಒಗ್ಗಟ್ಟಾಗಿ ದುಡೀತಿದ್ದ ಆಳ್ ಮಕ್ಕಿಗೆಲ್ಲ ಚಾಡಿಚುಚ್ಕೊಟ್ಟು ಅವರೂ ಹ್ವಡದಾಟಕ್ಕೆ ಹಚ್ಚಿದ್ರು. ಸುಮ್ ಸುಮ್ನೆ ಒಡ್ಡುಬಿತ್ತಿದ್ರು, ದಿನಾಬೆಳಗ್ಗೆದ್ದೆ ಜಗ್ಳತಂಟಿ, ಕಣಗಿಯುದ್ದ ಅಪ್ಪಾ ಅವ್ವಗೆ ಸಾಕ್ ಸಾಕಾಗಿ ಹೋತು… ಬನವ್ವ ಕಣ್ಣಾಗೆ ನೀರ್ತಂದ್ಕಂಡು ಊರೋಂಗೆ ಏಳ್ತಿದ್ದು ‘ಮಕ್ಕು ಚೆಂದಾಗಿರ್ಬುಕೂದ್ರೆ ಅಪ್ಪಾಅವ್ವಾ ಆಸ್ತಿಮಾಡಿಡಬಾರದೂ’ ಅಂತ ಸೂಲ್ದರಾಮಪ್ಪ ಎದಿಗೆ ಸೂಲ ಹಾಕಿದೊಷ್ಟೆ ನೊವ್ವಾತು. ಅರಸ್ರ ಯುದ್ದಾ ತಪ್ಪಿ ತನ್ ವಂಶ್ಯಾನಕ್ಕೆ ಯುದ್ಧಗಂಟ್ಟಿತ್ತಲ್ಲಾ ಅಂತ ವಿಲಿವಿಲಿ ಒದ್ದಾಡಿದ.

“ಬನವ್ನೆ ಬ್ಯಾಸಾಯದ ಉಸ್ತ್ವಾರಿ ನೋಡ್ತಿದ್ದಾಗ ಇಪ್ಪತ್ತೈದು ಹಗೇವೂ ತುಂಬ್ತಿದ್ವಲ್ಲ… ಆಕಿ ಮಕ್ಕು ವಯಸ್ಸಿಗೆ ಬಂದಮ್ಯಾಲೆ ಅಣ್ತಮ್ಮಂದ್ರೊಳಗೆ ಹಗೆತನಾ. ವಾರ್ಗಿತ್ತೇರೊಳಗೆ ಹ್ವಾಕಿ ಕತಿ ಶುರ್ವಾತು. ಸಾಲುದ್ದಕ್ಕೆ ದುಡಿಯೋ ಆಳುಮಕ್ಳಮ್ಯಾಲೆ ದರ್ಪಾ ದಿಮಾಕು ಮಿತಿ ಮೀರ್ತು. ಬೂಮ್ತಾಯಿಗೆ ಇವರ ಮ್ಯಾಕೆ ಬ್ಯಾಸರಾತು… ಹಿಂಗಾಗಿ ಹಗೇವು ಖಾಲಿ ಬೀಳಾಕೆ ಹತ್ತಿದ್ವು ಒಂದೊರ್ಷ ಇಪ್ಪತ್ಮುರು ಹಗೇವಿಗೆ ಕಾಳುಬಿದ್ರೆ ಇನ್ನೊಂದ್ವರ್ಷ ಬರಿ ಇಪ್ಪತ್ತೊಂದ್ ಹಗೇವು ತುಂಬಿದ್ದವು. ಬರ್ತಾಬರ್ತಾ ಹದ್ನೇಳು ಹದ್ನಾರು ಹಗೇವಿಗಿಳೀತು. ಬೂಮ್ತಾಯಿ ಸಿಟ್ಟಾಗ್ಯಾಳೆ ಅಂದ್ರು… ಆಳಮಕ್ಕು ಮೈಮುರ್ದ ದುಡಿಯಲ್ಲಾಂದ್ರು … ಯಾರೊ ಕಾಳು ಕದೀತಾರೆ ಅಂದ್ರು.

“ಮುಂದೊಂದ್ವರ್ಷ ಮಳಿಬೆಳಿ ಎಲ್ಲ ಚೆಂದಾಗಿದ್ರೂವ ಬರಿ ಹದಿನೆಂಟು ಹಗೇವಿಗೆ ಕಾಳುಬಿದ್ದು ಅಣ್ಣಮ್ಮಂದ್ರೆಲ್ಲ ಆಳ್ಗುಳ ಮ್ಯಾಲೆ ಉರುದ್ ಬಿದ್ರು.. ಯಾರೊ ಇಬ್ರು ಆಳ್ಕಕ್ಳು ಸೇರಿ ಅರ್ದಾಚೀಲಾ ಕಾಳು ಎಗರ್ಸಿದಾರೆ ಅನ್ನೊ ಗುಮಾನಿ ಮ್ಯಾಲೆ ಅವರ್ನ ಹಿಡ್ಶಿತರ್ಶಿ ಕಂಬಕ್ಕಟ್ಟಿ. ತರ್ರೋದ ಕಣಗಿಂದ ಥಳ್ಸಾಕತ್ತಿದ್ರು… ಜನಾ ಸೇರ್ತು. ತಮ್ತಮ್ಮ ಆಳುಮಕ್ಕಿಗೆ ಚುರ್ಕುಮುಟ್ಟೀಂತ ಅಕ್ಕಪಕ್ಕದ ರೈತ್ರೂ ಕಣ್ಗಿ ತಂದು ಇವರಿಬ್ರಿಗೆ ಬಿಗಿಯಾಕೆ ಹತ್ತಿದ್ರು, ಆಳುಮಕ್ಕು ಆಕಾಶಕ್ಕೆ ಕೇಳೊ ಹಂಗೆ ಕೂಕ್ಕಂಡ್ರು. ಅವರ ಮೈಕೈ ಕೆತ್ತಿ ರಗ್ತ ಹರೀತು. ಕಣ್ಣುಕಿವಿ ತರಚಿಹೋದ್ವು. ಬುಲ್ಡೆ ತೂತುಬಿದ್ವು.. ಅಷ್ಟೊತ್ತಿಗೆ ಯಾರೊ ಹೋಗಿ ಹ್ವಂದ್ದಂಡಿಂದ ಸೂಲ್ದರಾಮಪ್ಪುನ್ನು ಕರ್ಕಂಬಂದ್ರು, ಅವ್ನು ಬಂದೋನೆ ಆ ಆಳಮಕ್ಳ ಗತಿನೋಡಿ ಕೆಂಡಾದ. ಅವ್ರಿಬ್ರನ್ನೂ ತನ್ನ ಬಡುಕ್ಲ ಎದಿಗೊತ್ಕಂಡು ಕೂಗಿದ “ಬರ್ರೋ ಬರ್ರಿ ಮೊದ್ಲು ನನ್ನ ಬುಲ್ಡೀ ಒಡೀರಿ” ಅಂತ. ಎಲ್ಲಾರ ಕೈಯಾಗಿದ್ದ ಕಣ್ಗಿಗುಳು ಯಾಕೊ ಹಿಂಜರುದ್ವು. ಅಲ್ಲಿರೋದ್ ಸರಿಯಲ್ಲಾಂತ ರಾಮಪ್ಪ ಆ ಆಳುಮಕ್ಳನ್ನು ಹ್ವಂಡದ್ದಿಂಡೀಗ್ ಕರ್ಕಂಬಂದ. ಕಣಗಿ ಹಿಡುದ ಜನಾ ಹಿಂದುಟ್ಲೆ ಬಂತು. ಬನವ್ವ ನಶೀಪುಡಿ ಅರಿಶಿನ ತಂದು ತೂತ್ ಬಿದ್ದ ಗಾಯ್ಗಳಿಗೆ ತುಂಬಿದ್ಳು. ಆಳ್ಗಳ ಮಕಾಮುಶ್ಣ ಒರಿಶಿದ್ಳು, ಕುಡಿಯಾಕೆ ನೀರ್ ಕೊಟ್ಳು.

“ಹಿರೇ ಮಗ ಅರಚಿದ, “ಅವರ್ನ ಬಿಟ್ಕೊಡ್ರಿ, ಕಳ್‌ ನನ್‌ಮಕ್ಳು ಕಾಳು ಕದ್ದಾರೆ” ಅಂತ. ರಾಮಪ್ಪ ಮೆಲ್ಲಗೆ ಕಣ್ಣೆತಿ ಮಕ್ಳನ್ ನೋಡಿ “ಇವ್ರು ದುಡಿಯೊ ಆಳ್ಮಕ್ಳು. ಇವ್ರೆ ನನ್ ನಿಜವಾದ ಮಕ್ಳು.. ಬೂಮ್ತಾಯಿ ಕ್ವಟ್ಟ ಕಾಳಿನಮ್ಯಾಲೆ ಇವ್ರ ಹಕ್ಕೈತಿ” ಅಂತ ಜೋರಾಗಿ ಗುಳಿ ಇಟ್ಟರೆ ಸಾಕೆ? ಕಿರುಚಿದ. “ಹಂಗಾರೆ ನಾವ್ಯಾರೂ ನಿನ್‌ಮಕ್ಳು ಅಲ್ಲನು?” ಅಂದ ಕೊನಿಮಗ. “ಅಲ್ಲ ಹೋಗ್ರಲೇ” ಅಂದ್ಬುಟ್ಟ ರಾಮಪ್ಪ. ಮಕ್ಳೆಲ್ಲ ಮೆತ್ಗಾದ್ರು, ಬನವ್ವ ಶೆರಗಿನಾಗೆ ಅತ್ಲು. ಈ ಮಂತ್ಯಾನದ ಕತಿಕಂಡು ಊರಜನೆಲ್ಲ ಮೂಗಿನ ಮ್ಯಾಲೆ ಬೆಳ್ಳಿಟ್ಗಂಡ್ತು. ಆಳುಮಕ್ಕೆಲ್ಲ ಕಣ್ ಕಣ್ ಬಿಟ್ಟು ರಾಮಪ್ಪುನ್ನೆ ನೋಡ್ತಿದ್ರು.

“ಸೂಲ್ದರಾಮಪ್ಪ ನಿರ್ಧಾರದ ಮಾತು ಹೇಳ್ದ. “ಇಗಾ ಇನ್‌ಮ್ಯಾಗೆ ನಿಮ್ ಕೈಯಾಗಿರೊ ಈ ಕಣಿಗ್ಗುಳು ಮನಿಹೊಸ್ಲದಾಟಿ ಒಳೀಕ್ ಹೋಗಂಗಿಲ್ಲ. ಹ್ವಡ್ದಾಟಕ್ಕೇಂತ ಯಾರೂ ತರ್ರೋದಕಟ್ಟಿ ಕಡ್ಕಂಬರಂಗಿಲ್ಲ. ತರ್ರಿಲ್ಲಿ. ಎಲ್ಲಾರು ನಿಮ್‌ನಿಮ್ ಕಣ್ಗಿತಂದು ಇಲ್ಲಿ ಒಟ್ರಿ ದುಂಡಗೆ. ನಿಮ್ ಎದಿಯಾಗ್ಳ ಹಸಿಹಸಿ ಸಿಟ್ನೆಲ್ಲ ಸುಟ್ಟಾಕ್ರಿ ಹೊಂದಿಕಂಡು ಬಾಳೋದು ಕಲೀರಿ” ಅಂದ. ಅವ್ನಮಕ್ಳು ಕೇರಿ ಮಂದಿ ಎಲ್ಲ ಅನುಮಾನುಸ್ತ ನಿಂತ್ರು. “ಕಣಿಗ್ಗುಳ್ನ ತಂದಿಲ್ಲಿ ಒಟ್ತಿರೋ, ಇಲ್ಲಾ ಈ ಸೂಲಕ್ಕೆ ಎದಿಹಚ್ಚಿ ನಿಮ್ಕಣ್ಮುಂದೇ ಪ್ರಾಣತಕ್ಕಳ್ಳೋ? ಅಂತ ಅಲವತ್ಗಂಡು ಗುಡುಗಿದ. ಜನಾ ಎಲ್ಲಾ ಗಾಬರ್ಯಾತು. ಸರಸರ ಕಣ್ಗಿಗುಳು ಅವ್ನಕಣ್ಮುಂದೆ ದುಂಡೆಗೆ ರಾಶಿಬೀಳಾಕೆ ಹತ್ತಿದ್ದು. ಅವ್ನ ಮಕ್ಳೂ ವರ್ಮಾಕರ್ಮಾ ಮಾಡ್ತ ಕಣ್ಗಿ ಎಸ್ತು ಜಾಗಾ ಕಾಲಿ ಮಾಡಿದ್ರು.. ಅವತ್ನಿಂದ ಇವತ್ತಿನವರ್ಗೂ ಈ ಊರಾಗೆ ಯಾರೂ ತರ್ರೋದಕಣ್ಗಿ ಹಿಡ್ದು ಹ್ವಡ್ದಾಡಿಲ್ಲ …” ಎನ್ನುತ್ತ ವಜ್ಜಿ ನಿಲ್ಲಿಸಿದಳು.

ಭಾವಪೂರ್ಣ ಮೌನ ನಮ್ಮನ್ನು ಆವರಿಸಿತು. ಇದು ಕತೆಯೊ. ಇತಿಹಾಸವೊ, ಅಥವಾ ಪುರಾಣವೊ ಎಂದು ನನಗೆ ನಾನೆ ಕೇಳಿಕೊಂಡೆ. ಉತ್ತರ ಸಿಗಲಿಲ್ಲ. ಕತೆ ಕೇಳುವಾಗ ಬರಿ ಕಚಗುಳಿ ಇಟ್ಟರೆ ಸಾಕೆ? ಅಥವಾ ಒಂದಿಷ್ಟಾದರೂ ಗಟ್ಟಿಯಾದ ಪರಿಣಾಮ ಬೀರಬೇಕೆ? ಕತೆ ನಮ್ಮೆದೆಯಲ್ಲಿ ನೆಟ್ಟುಹೋಗುವ ಭಾವನೆಗಳು, ಅವು ನಮ್ಮ ಮುಂದಿನ ಬದುಕಿನ ಮೇಲೆ ಬೀರುವ ಸೂಕ್ಷ್ಮರೀತಿಯ ಪ್ರಭಾವ ಇವುಗಳಿಂದ ಕತೆಯ ಯೋಗ್ಯತೆ ನಿರ್ಧಾರವಾಗಬೇಕಲ್ಲವೆ? ಇನ್ನೂ ಏನೇನೊ ಪ್ರಶ್ನೆಗಳನ್ನು ಕೇಳಲು ಹವಣಿಸುತ್ತದ್ದ ನನ್ನೊಳಗಿನ ವಿಮರ್ಶಕನನ್ನು ತಡೆದರು ಪೋಲಿಸ್ ಪೇದೆಗಳು.

“ಸರುಹೊತ್ತಾದರೂ ಬರ್ಲಿಲ್ಲ ಸಾಹೇಬರು, ನೋಡ್ಕಂಬರ್ರಿ ಅಂದ್ರು ಅದಕ್ಕೆ ಬಂದಿವಿ ಸಾರ್ …” ಅಂದ ಒಬ್ಬ ಪೇದೆ, ಬೀಡಿ ಬಿಸಾಡುತ್ತ.

“ಓಹೊ ನಿಮ್ ಸಾಯೇಬ್ರನ್ನ ಈ ಮುದ್ಕ್ಕಿ ಮಾಯಾ ಮಾಡ್ಬುಟ್ಟಾಳೂಂತ ಹೆದ್ರಿಕಂಡ್ರೇನೊ” ಅನ್ನುತ್ತ, ತನ್ನ ಕರಿಗಟ್ಟಿದ ಹಲ್ಲು ತೋರಿಸುತ್ತ ನಕ್ಕಳು ಆವಜ್ಜಿ. “ಹಂಗೇನಿಲ್ಲಾ” ಅಂದ ಇನ್ನೊಬ್ಬ ಪೀಸಿ, ಸದ್ಯ ಇವನಿಗೇನೂ ಆಗಿವಲ್ಲ ಎಂದು ಸಮಾಧಾನಪಡುತ್ತ.

“ಆಳುಮಕ್ಕಳು ಜ್ವಾಳಾ ಕದಿಯೋದು ನಿಲ್ಲಿಸಿದರಾ?” ಅಂದೆ. ಅಲ್ಲೆ ನಿಂತ ಕತೆಯ ದೋಣಿ ಮುಂದೆ ಹೋಗಿ ದಡಮುಟ್ಟಲಿ ಎಂದು ಹುಟ್ಟು ಮೀಟುವ ಹಾಗೆ. ಆವಜ್ಜಿ ಮತ್ತೆ ಹಳೆಯ ನೆನಪಿನ ಮಡುವಿನ ಕಡೆ ನೋಡುತ್ತ ಹೇಳಿದಳು: “ಮಾರ್ನೆವರ್ಸ ಮತ್ತ ಬನಜ್ಜಿನೆ ಬ್ಯಾಸಾಯ ವೈವಾಟು ವೈಸಿಕಂಡ್ಳು. ಕೈಲಾಗದಿದ್ರು ಹ್ವಲ ಎಲ್ಲ ಸುತ್ತಿ ಬರ್ತಿದು. ಒಕ್ಲುಮಕ್ಕನ್ನ ಒಡ್ಲಮಕ್ಳಗಿಂತ ಹೆಚ್ಚಿನ ಪ್ರೀತಿಂದ ಕಾಣ್ತಿದ್ಳು… ಮಕ್ಳು ಬಿಟ್ಟಿದ್ ರಾಶಿಪೂಜೆ, ದಾಸೋಘಾ. ದಾನಾದರ್ಮಾ ಮತ್ತೆ ಸುರೂ ಮಾಡಿದ್ಳು… ತಗಾ ಮತ್ತೆ ಆ ಸಲ ಇಪ್ಪತ್ಮೂರು ಹಗೇವು ತುಂಬಿದ್ವು, ಹಗೆತನಾ ಬಿಟ್ರೆ ಹಗೇವು ತುಂಬ್ತಾವೆ ಅಂತಂದ್ಳು. ಎಲ್ಲಾರು ಇದೆಂತಾ ಪವಾಡಾ ಅಂದ್ರು .. ಪವಾಡ ನೋಡಾಕೆ ಹೋಬ್ಯಾಡ್ರಿ, ಪವಾಡದ ಹಿಂದಿರೋ ಒಳಮರ್ಮ ಅರ್ತುಗೊಳ್ರಿ… ಕೈಬಿಟ್ಟು ಕ್ವಡೋ ಬುದ್ಧಿ ಬೆಳಿಸ್ಕಂಡೆ ಕಳ್ಕಣಾ ಹೆದ್ರಿಕೀನೆ ಇರಲ್ಲ ಅಂತಂದ್ಳು.

“ತಿರುಗಿ ಮಾರ್ನೆ ವರ್ಷಾ ಬೆಳ್ಗುತ್ತಿ ಅರುಸ್ರ ಮ್ಯಾಲೆ ಯಾರೋ ದಂಡೆತ್ತಿ ಬಂದ್ರು. ಯುದ್ಧ ಶುರ್ವಾಕತಿ ಅನ್ನಾ ಸುದ್ದೀ ಕೇಳಿದ್ದೆ ಮುದ್ಕ-ಸೂಲ್ದರಾಮಪ್ಪ ಸೂಲ್ದಮ್ಯಾಲೆ ಹಾರಿ ಪ್ರಾಣಾಕ್ವಟ್ಟುಟ್ಟ. ಹಳೆ ತರ್ರೋದಕಟ್ಗಿಗಳ ಸಿದ್ಗಿಮಾಡಿ ರುದ್ರುಬೂಮಿಗೊಯ್ದು ಹೆಣಾಹೂತ್ರು. ಹ್ವಸಾ ತರೋದಕಟಿಗಿ ತಂದು ಸೂಲ್ದರಾಮಪ್ಪನಗುಡಿ ಮಾಡಿದ್ರು … ಹಿಂಗೆ ಮನ್ಸಾ ಇದ್ದೋನು ದೇವ್ರಾದ.”

ಕಣ್ಣೆದುರೇ ಕಳೆದುಹೋದಂತಿದ್ದ ಲಾಟೀನನ್ನು ಕೈಗೆತ್ತಿಕೊಂಡು ಆವಜ್ಜಿ ನನ್ನನ್ನು ಬೀಳ್ಕೊಟ್ಟಳು. “ಭಾಳ ಹೊತ್ತಾಗೇತಿ. ಹ್ವಂಡು ತಮಾ. ನಮ್ ಸೂಲ್ದರಾಮಪ್ಪುನ್ ಆಸಿರ್ವಾದ ನಿನ್‍ಮ್ಯಾಲೈತಿ. ಚಿಂತಿ ಮಾಡಬ್ಯಾಡ” ಅಂದಳು. ಆ ಲಾಟೀನಿನ ಬೆಳಕು ನನ್ನ ಮೈಮನಸ್ಸಿಗೆ ಅಂಟಿಕೊಂಡಂತೆ ಹಿಂಬಾಲಿಸಿತು. ಎಂಥ ರಾಜಕೀಯದ ಕತ್ತಲನ್ನೂ ಭೇಧಿಸಬಲ್ಲೆನೆಂಬ ವಿಶ್ವಾಸ ಒಳಗೆ ಉರಿಯುತ್ತಿತ್ತು. ಪೋಲೀಸರ ಜೊತೆಗೆ ಶಾಲೆಗೆ ಬಂದೆ.

ಮರುದಿನ ಎಲ್ಲಾ ಕಡೆಯಿಂದ ವಿಶೇಷ ಚುನಾವಣಾಧಿಕಾರಿಗಳು ನಮ್ಮ ಅತಿಸೂಕ್ಷ್ಮ ಮತಗಟ್ಟೆಗೆ ಬಂದರು. ಪೊಲೀಸರ ಎರಡು ವ್ಯಾನು ಮೂರು ಜೀಪು ಬಂದುನಿಂತವು. ನಯಾಪೈಸೆಯ ತರಲೆ ಇಲ್ಲದಂತೆ ನಿಶ್ಯಬ್ದವಾಗಿ ಮತದಾನ ನಡೆಯಿತು. ನಮ್ಮ ಪೋಲೀಗ್ ಆಫಸರ್‍ಗಳ ಮುಖಗಳಲ್ಲಿ ಸಮಾಧಾನ ಅರಳಿತು. ಕೆಲವು ಓಟುದಾರರು ಮಾತ್ರ ಕೆಕ್ಕರಿಸಿ ನೋಡುತ್ತ ಓಟು ಹಾಕಿ ಹೋದರು. ಬ್ಯಾಲೆಟ್ ಬಾಕ್ಸುಗಳು ಪುಟ್ಟ ಹಗೇವಿನಂತೆ, ಓಟುಗಳೇ ಕಾಳುಗಳಂತೆ ಭಾಸವಾದವು. ಇಡಿ ಚುನಾವಣೆಯೆ ಒಂದು ಮಹಾ ಹಗೇವು ಎನ್ನಿಸಿತು. ಓಟಿನ ಕಾಳುಗಳ ಕುಲಗೆಡದಂತೆ, ಕೊಳೆತು ನಾರದಂತೆ, ಹಸನಾಗಿದ್ದು ಒಂದು ಸಾಮಾಜಿಕ ಸುವ್ಯವಸ್ಥೆಗೆ ನಾಂದಿ ಹಾಡುವ ದಿನ ಬಂದೀತೆ ಎಂದು ಕೇಳಿಕೊಂಡೆ. ಎದುರಿನ ಗೋಡೆಯ ಮೇಲಿದ್ದ ಭಾರತದ ನಕ್ಷೆ ನಕ್ಕಿತು. “ನೋಡು ನಾನೆ ಒಂದು ಭಾರಿ ಹಗೇವು. ನನ್ನ ಒಡಲಲ್ಲಿರೊ ಈ ತಲೆಗಳೆಲ್ಲ ಜೀವಂತ ಕಾಳುಗಳೆ. ಆದರೆ ಇವಕ್ಕೆ ಮತಾಂಧತೆಯ ಹಸಿ, ಸೊಲಬಗಳ ಉಗ್ರತೆ. ಕೆಲಸಗಳ್ಳತನದ ಮುಗ್ಗಲು, ದುರಾಸೆಯ ಕೊಳೆತ ಎಲ್ಲ ಮುತ್ತಿಕೊಂಡಿವೆ. ಶಕ್ತಿರಾಜಕಾರಣದ ಉಬ್ಬುಗುಚ್ಚಿನಲ್ಲಿ ನಾನು ಬೆಂದುಹೋಗಿದ್ದೇನೆ” ಎಂದಿತು. ಅಷ್ಟರಲ್ಲಿ ಯಾರೊ ನನ್ನಗಲ್ಲ ಸವರಿದರು.

ಗಾಬರಿಯಾಗಿ ವಾಸ್ತವಕ್ಕೆ ಜಿಗಿದೆ. ಆವಜ್ಜಿ ತನ್ನ ಒರಟು ಬೆರಳುಗಳಿಂದ ನನ್ನ ಗಲ್ಲ ಸವರಿ ಬೆರಳುಗಳನ್ನ ತನ್ನ ತುಟಿಗೊತ್ತಿಕೊಂಡು ಮುದ್ದು ವ್ಯಕ್ತಪಡಿಸಿದಳು. ಓಟುಹಾಕಲು ಬಂದ ಅವಳು ಎಲ್ಲೊ ಲಹರಿಯಲ್ಲಿದ್ದ ನನ್ನನ್ನು ಕಂಡು ಮರುಕ ಪ್ರೀತಿಗಳಿಂದ ಮುದ್ದಿಸಿದ್ದಳು. ವಿಶೇಷ ಚುನಾವಣಾಧಿಕಾರಿಗಳು ನನ್ನನ್ನ ಬಡಪಾಯಿ ಎಂಬಂತೆ ನೋಡಿದರು. ನನಗೆ ಮಾತ್ರ ಎಲೆಕ್ಷನ್ನು ಸುಸೂತ್ರವಾಗಿ ನಡೆದದ್ದು ಆವಜ್ಜಿಯ ಅಂತಃಶ್ಶಕ್ತಿಯಿಂದಲೆ ಎಂದು ಗ್ಯಾರಂಟಿಯಾಗಿತ್ತು. ಸಂಜೆ ಐದು ಗಂಟೆ ಸರಿಯಾಗಿ ಬ್ಯಾಲೆಟ್ ಬಾಕ್ಸ್ ಸೀಲ್ ಮಾಡಿಕೊಂಡು, ಮುಂದೆ ಮೂರು ಜೀಪು, ಹಿಂದೆ ಎರಡು ಪೋಲಿಸ್ ವ್ಯಾನುಗಳ ಮೆರವಣಿಗೆಯಲ್ಲಿ ಹೊನ್ನಾಳಿಗೆ ಬಂದೆವು. ಐದು ನೂರಕ್ಕೂ ಮಿಕ್ಕು ಖಾಲಿ ಬ್ಯಾಲೆಟ್ ಪೇಪರ್ಸ್ ವಾಪಸ್ತಂದು, ಕೆಂಚಿಕೊಪ್ಪದ ಇತಿಹಾಸದಲ್ಲಿ ನಾನು ಹೊಸದಾಖಲೆ ನಿರ್ಮಿಸಿದ ಕೀರ್ತಿ ಬಾದ್ಯಸ್ಥನಾಗಿದ್ದೆ.

ಕೆಂಚಿಕೊಪ್ಪದ ಜನ ತಹಶೀಲ್ದಾರರನ್ನು ಘೇರಾವೊ ಮಾಡಿ ನನ್ನಂಥ ತರ್ಲೆಯನ್ನ ಅವರೂರಿಗೆ ಕಳಿಸಿದ್ದಕ್ಕೆ ತಕರಾರು ತೆಗೆದಿದ್ದರು. ಅವರು ಶಿರಸ್ತೇದಾರನನ್ನು ಕರೆಸಿ ಛೀಮಾರಿ ಹಾಕುತ್ತಿದ್ದರು. ಅವನಿಟ್ಟ ಭೇತಾಳ ಅವನನ್ನೆ ತಿಂದಿತ್ತು.

ಆದರೆ ಆವಜ್ಜಿ ಶಾಂತಿರಾಜಕಾರಣದ ಸಂತಳಂತೆ ನನ್ನ ಒಳಗೇ ನೆಲೆಸಿಬಿಟ್ಟಿದ್ದಳು. ಅವಳ ಲಾಟೀನಿನ ಬೆಳಕಿನ ಬೀಜ ಇಗೊ ನನ್ನ ಎದೆಯಲ್ಲಿ ಊರಿಕೊಂಡಿದೆ.