ನನಗೆ ಯಾಕೋ ಅತೃಪ್ತಿ. ಅಗಸಿ ಬಾಗ್ಲನ್ನು ನೆನಸಿಕೊಂಡಂತೆಲ್ಲಾ ನನ್ನ ಎದೆ ಇನ್ನೂ ಹಿಗ್ಗಿ ನನ್ನ ಕಲ್ಪನೆಗಳು ತಮ್ಮ ಬೇಲಿ ದಾಟಿದಂತೆನಿಸಿ ಪುಟಿದೇಳುತ್ತಿದ್ದೆ. ಮೊದಲ ಬಾರಿ ಕಡಲನ್ನು ಕಂಡಾಗ, ಕುತೂಹಲದಿಂದ ಬಾನಗಲನ್ನು ವೀಕ್ಷಿಸಿದಾಗ ಉಂಟಾಗಿದ್ದ ಅನುಭವ ಇಲ್ಲೂ ಒಡಮೂಡಿತು. ನಮ್ಮೂರು ಪಟ್ಟಣವಾದರೂ ಆಸಂಗಿ ಎಂಬ ಹಳ್ಳಿ ಅದಕ್ಕೆ ಅಂಟಿಕೊಂಡೇ ಇದೆ.
‘ನಾನು ಮೆಚ್ಚಿದ ನನ್ನ ಕಥೆʼಯ ಸರಣಿಯಲ್ಲಿ ಆನಂದ ಈ. ಕುಂಚನೂರ ಬರೆದ ಕಥೆ ‘ಆಸಂಗಿ ಅಗಸಿ ಬಾಗ್ಲು’

 

`ಸರ್, ಅಗಸಿ ಬಾಗಲ ಅಂದ್ರ ಏನ್ರಿ? ಅಗಸಿಗೂ ಇದಕ್ಕೂ ಏನು ಸಂಬಂಧ?’ ನನ್ನ ಇಡೀ ಕುತೂಹಲವನ್ನು ಒಂದೇ ಓಘಕ್ಕೆ ಧ್ವನಿಯಾಗಿಸಿದ್ದೆ. ಈ ರೀತಿಯ ಪ್ರಶ್ನೆಗಳನ್ನು ಕೇಳಿ ಪರಿಹರಿಸಿಕೊಳ್ಳುತ್ತಿದ್ದದು ನಮ್ಮೂರಲ್ಲಿ ಬರೀ ಅವರೊಂದಿಗೆ ಮಾತ್ರ. ಪ್ರಾಥಮಿಕದಿಂದಲೂ ನನ್ನ ಎಷ್ಟೋ ಪ್ರಶ್ನೆಗಳಿಗೆ ಈ ನಮ್ಮ ಮಾಸ್ತರರು ಉತ್ತರಿಸಿದ್ದಾರೆ. ಇಲ್ಲದಿದ್ದರೆ ಎಲ್ಲಾ ಪ್ರಶ್ನೆಗಳನ್ನು ಹೊತ್ತುಕೊಂಡು, ಉತ್ತರ ಕಾಣದೇ ತಿರುಕನಾಗಿ ಬಿಡುತ್ತಿದ್ದೆ.

`ಅಗಸಿ ಬಾಗ್ಲಾ ತುಗೊಂಡ್ ನೀ ಏನ ಮಾಡಾಂವಾ? ಅದರಾಗೇನೈತಿ ಅಂಥಾದ್ದು? ನಿಮ್ಮ ಮನ್ಯಾಗೊಂದ ಹೆಂಗ ತೊಲಬಾಗ್ಲಾ ಅಂತ ಇರತೈತೊ ಹಂಗ, ಊರಿಗೂ ಒಂದ ಬಾಗಲ ಇರತೈತಪಾ’. ಮೊದಲನೆ ಸರ್ತಿ ಮಾಸ್ತರರು ಉದಾಸೀನತೆಯಿಂದ ಉತ್ತರಿಸಿದ್ದರು.

`ಅಲ್ರೀ, ಸರ್, ಊರ ಅಷ್ಟೊಂದ ದೊಡ್ಡದಿರತೈತಿ, ಅದಕ್ಕ ಅದ್ಹೆಂಗ ಬಾಗ್ಲಾ ಕುಂಡಸ್ತಾರು? ಮತ್ತ ನಮ್ಮೂರಾಗ ಎಲ್ಲೈತಿ ಅಂಥಾದ್ದು?’ ಆದ್ರೂ ಕೆದಕಿದೆ.

`ನೋಡ ತಮ್ಮಾ, ಮೊದಲ ಊರುಗೋಳು ಸಣ್ಣೂ ಇರುತಿದ್ದು. ಪ್ರತಿಯೊಂದ ಊರನ್ನೂ ಅದರ್ದ ಆದ ಒಂದು ವ್ಯವಸ್ಥೆಯೊಳಗ ಇಡೂದಕ್ಕಾಗ್ಲಿ ಅಥವಾ ಕಳ್ಳಕಾಕರ ಬರಬಾರ್ದಂತ್ಲೋ, ಹಿಂಗ ಏನೋ ಊರಿಗೆ ರಕ್ಷಣೆಯಿರ್ಲಿ ಅಂತ್ಹೇಳಿ, ಅಗಸಿ ಬಾಗ್ಲಾ ಕಟ್ಟತಿದ್ರ. ಒಂದ ಊರಂದ್ರ ಅಲ್ಲಿ ತನಕ ಇರತೈತಿ ಅಂತ ತೋರ್ಸಾಕೂ ಇರ್ತಿತ್ತ. ಇಲ್ಲಾ ಅಂದ್ರ ಊರಿಂದ ಯಾರ್ಯನರೆ ಬಹಿಷ್ಕಾರ…’ ತಡವರಿಸಿದರು, ಒಂದು ಗುಟುಕು ನೀರು ಕುಡಿದು ಮತ್ತೆ ಶುರುವಿಟ್ಟರು, `ಹ್ಞೂ.. ಬಹಿಷ್ಕಾರ ಹಾಕಿದ್ರಂದ್ರ ಅವ್ರು ಆ ಬಾಗ್ಲಾ ದಾಟಿ ಒಳಗ ಬರಬಾರದಂಗ ಮಾಡ್‍ತಿದ್ರು. ಇದೆಲ್ಲ ಭಾಳ ಹಳೀ ಮಾತ. ಈಗ ಅವೆಲ್ಲಾ ಎಲ್ಲೆದಾವು?’

`ಅಂದ್ರ, ನಮ್ಮಂತಾ ಈಗಿನ ಹುಡುಗುರು ಅದನ್ನ ನೋಡಬೇಕಂದ್ರ ಆಗೂದಿಲ್ಲನ್ರಿ ಸರ್.. ಆದ್ರ ನನಗ ನೋಡಬೇಕಂತ ಭಾಳ ಆಸೆ ಆಗೇತ್ರಿ’. ಈ ವಯಸ್ಸಿಗೆ ಇದೊಂಥರಾ ಹುಚ್ಚು ಇವನಿಗೆ ಅಂದಿರಬೇಕು ಮಾಸ್ತರರು. ಆಷ್ಟೊತ್ತಿಗಾಗಲೇ ನನ್ನ ತೆಲೆಯಲ್ಲಿ ಒಂದು ಅಸ್ಪಷ್ಟ ಅಗಸಿ ಬಾಗ್ಲು ನಿರ್ಮಾಣವಾಗುತ್ತಿತ್ತು. ಅದರ ಗಾತ್ರ, ಹರವು, ಗುಣ ಎಲ್ಲವೂ ನನ್ನ ತೆಲೆಕೆದಕುತ್ತಿದ್ದವು. ಕ್ಷಣದಲ್ಲೇ ಅದೊಂದು ದೈತ್ಯಾಕಾರದ ಬಾಗಿಲಿನಂತಾಗಿ ಅದರ ಹೊರತು ನನಗೇನೂ ಕಾಣದ ಸ್ಥಿತಿ ತಲುಪಿದ್ದೆ.

`ಲೇ ತಮ್ಮಾ, ನೀ ಸೈನ್ಸ್ ಓದಾಂವ ಹೌದಿಲ್ಲೋ, ಇದೆಲ್ಲಾ ನಿನಗ್ಯಾಕ? ಅಷ್ಟೂ ಮೀರಿ ನೋಡಬೇಕನಸಿದ್ರ ಇಲ್ಲೇ ಆಸಂಗಿಯೊಳಗೊಂದ ಅಗಸಿ ಬಾಗ್ಲಾ ಐತಿ. ನೋಡಕೊಂಡ್ ಬಾ’. ಹೊರಗಿನ ವಾತಾವರಣ ಥಣ್ಣಗಿದ್ರೂ ಮಾಸ್ತರರಿಗೆ ಸೆಕೆಯಾದಂತೆನಿಸಿ, ಟವಲಿನಿಂದ ಗಾಳಿ ಬೀಸಿಕೊಳ್ಳುತ್ತಿದ್ದರು.

ನನಗೆ ಯಾಕೋ ಅತೃಪ್ತಿ. ಅಗಸಿ ಬಾಗ್ಲನ್ನು ನೆನಸಿಕೊಂಡಂತೆಲ್ಲಾ ನನ್ನ ಎದೆ ಇನ್ನೂ ಹಿಗ್ಗಿ ನನ್ನ ಕಲ್ಪನೆಗಳು ತಮ್ಮ ಬೇಲಿ ದಾಟಿದಂತೆನಿಸಿ ಪುಟಿದೇಳುತ್ತಿದ್ದೆ. ಮೊದಲ ಬಾರಿ ಕಡಲನ್ನು ಕಂಡಾಗ, ಕುತೂಹಲದಿಂದ ಬಾನಗಲನ್ನು ವೀಕ್ಷಿಸಿದಾಗ ಉಂಟಾಗಿದ್ದ ಅನುಭವ ಇಲ್ಲೂ ಒಡಮೂಡಿತು. ನಮ್ಮೂರು ಪಟ್ಟಣವಾದರೂ ಆಸಂಗಿ ಎಂಬ ಹಳ್ಳಿ ಅದಕ್ಕೆ ಅಂಟಿಕೊಂಡೇ ಇದೆ. ನಾನು ಮೆಟ್ರಿಕ್‍ ವರೆಗೆ ನಮ್ಮೂರಲ್ಲೇ ಓದಿದ್ದು. ಆಗಾಗ ಆಸಂಗಿಗೆ ಬಂದು ಹೋಗಿದ್ದರೂ ಎಂದೂ ಅಗಸಿ ಬಾಗ್ಲನ್ನೇ ನೋಡಿರಲಿಲ್ಲ. ಈಗ ಪಿ.ಯು.ಸಿ. ಧಾರವಾಡಕ್ಕೆ ಸೇರಿ ನಾಲ್ಕೈದು ತಿಂಗಳಾಗಿವೆ. ಇದು ಇತ್ತೀಚೆಗೆ ನನ್ನನ್ನು ಕಾಡುತ್ತಿದ್ದ ವಿಲಕ್ಷಣ ಕುತೂಹಲ. ಈ ಕುತೂಹಲಕ್ಕೀಗ ಯಾವ ಗುರಿಯೂ, ಗುರುವೂ ಇಲ್ಲ. ಎಲ್ಲ ನಾನೇ ಆಗಬೇಕು. ನನಗೀಗ ಇರುವುದು ಎರಡೇ ದಿನ ರಜ. ಅಷ್ಟರಲ್ಲಿ ಒಂದು ಸಲ ಅಗಸಿ ಬಾಗಿಲ ದರ್ಶನ ಮಾಡಲೇಬೇಕೆನಿಸಿತು.

ಬೆಳಿಗ್ಗೆ ಸೂರ್ಯ ಹುಟ್ಟೋಕೂ ಮುಂಚೆ ಎದ್ದೆ. ರಾತ್ರಿಯಿಂದ ತೆಲೆಯಲ್ಲಿ ತುಂಬಿಕೊಂಡಿದ್ದ ಎಲ್ಲಾ ವಿಚಾರಗಳನ್ನು ಹೆಕ್ಕಿತೆಗೆಯುವಂತೆ ಹಕ್ಕಿಗಳು ಚಿಲಿಪಿಲಿಗೈಯುತಿದ್ದವು. ಹಾಗೆ ಬೆಳಿಗ್ಗೆ ಬೇಗ ಏಳುವುದು ಎಷ್ಟೊಂದು ಹಿತಕರ! ನಾನು ಹೊರಟಿದ್ದನ್ನು ಕಂಡು ಅಪ್ಪ ಒಮ್ಮೆ ವಾರೆನೋಟ ಬೀರಿದ್ದ. ಆದರೂ ಹೋದೆ. ಆ ಕಡೆಯಿಂದ ಹಾಲು ಮಾರುವವನೊಬ್ಬ ಎದುರಾಗಿ ಕೇಳಿದೆ, `ಇಲ್ಲಿ ಅಗಸಿ ಬಾಗ್ಲಾ ಎಲ್ಲಿ ಬರತೈತ್ರಿ?`. ವಿಚಿತ್ರ ಅಂದ್ರೆ ಏನು ಅಂತ ಇಷ್ಟು ವರ್ಷದ ಮೇಲೆ ಈಗ ಅವನ ಅನುಭವಕ್ಕೆ ಬಂದಿರಬೇಕು, ಒಮ್ಮೆ ನಖಶಿಖಾಂತ ಕಣ್ಣಾಡಿಸಿ, `ಆ…ಲ್ಲೇ ಗಣಪತಿ ಗುಡಿ ಕಾಣತೈತ್ಲ, ಅದರ ಮುಂದಿಂದ’ ಎಂದು ಸೈಕಲ್ಲೇರಿ ಹೋಗಿದ್ದ. ನಡೆದುಕೊಂಡು ಬಂದವ ಈಗ ಓಡತೊಡಗಿದೆ. ಗುಡಿಯಲ್ಲಿದ್ದ ಗಣೇಶನನ್ನೂ ಲೆಕ್ಕಿಸದೆ ಹೋಗಿ ನಿಂತೆ. ಛೇ, ಎಂಥ ಆಘಾತ! ಚೀನಾದ ಮಹಾ ಗೋಡೆಯಂತೆ ನನ್ನ ಕಲ್ಪನೆಗಳಲ್ಲಿ ಹರವಿಕೊಂಡಿದ್ದ ಅಗಸಿ ಬಾಗ್ಲು ಈಗ ನೋಡಿದರೆ ತೀರಾ ಅಂದ್ರೆ ತೀರಾ ಚಿಕ್ಕದಾಗಿತ್ತು. ಜೀವ ಸಣ್ಣಗಾಯಿತು. ಗರ್ಭ ಗುಡಿಯಂತೆ ಬಾಗಿಲು ಹೊಂದಿದ್ದ ಅದರ ಬಾಹುಗಳು ಹೆಚ್ಚೆಂದರೂ ಹತ್ತು ಮೀಟರ್ ದಾಟಿರಲಿಲ್ಲ, ಅಷ್ಟು ಎತ್ತರವೂ ಇರಲಿಲ್ಲ. ಅಲ್ಲಲ್ಲಿ ಸಣ್ಣ ಕಿಂಡಿಗಳಿದ್ದವು. `ಶತ್ರುಗಳೇನಾದ್ರೂ ದಾಳಿ ಮಾಡಿದ್ರ ಆ ಕಿಂಡಿಯೊಳಗ ಬಂದೂಕ ಇಟ್ಟ ಗುಂಡ ಹಾರಸ್ತಿದ್ರಂತ’ ಮಾಸ್ತರರು ಹೇಳಿದ್ದು ನೆನಪಾಯಿತು. ಅಲ್ಲಿಂದ ಒಳಗೆ ಮಾತ್ರ ಊರು ಅಂತಿರಲಿಲ್ಲ.

ಈಗ ಈ ಕಡೆನೂ ಕೆಲವು ಮನೆಗಳಾಗಿವೆ. ಅಲ್ಲಿಂದ ಊರೊಳಗೆ ಹೋಗುವುದಕ್ಕೆ ಮೆಟ್ಟಿಲಿವೆ. ಅಂದಾಜು ಒಂದು ನೂರು ವರ್ಷದ ಹಿಂದಿನದಿರಬಹುದೆಂದು ಲೆಖ್ಖ ಹಾಕಿದೆ. ಈ ಕಡೆ ಬಲ ಕಂಕುಳಲ್ಲಿ ಒಂದು ದೊಡ್ಡ ಆಲದ ಮರ ಇದೆ. ನನಗೆ ಅಲ್ಲಿ ನಿಲ್ಲಲು ಸಂಕೋಚವೆನಿಸಿ, ಆಲದ ಮರದ ಕಟ್ಟೆಯ ಮೇಲೆ ಕುಳಿತು ಆ ಗೋಡೆಯನ್ನೇ ನೋಡುತ್ತಿದ್ದೆ. ಪಕ್ಕದಲ್ಲಿ ವಯಸ್ಸಾದ ಒಂದಿಬ್ಬರು ಬೀಡಿ ಸೇದುತ್ತ ದೇಶಾವಾರಿ ಹರಟುತ್ತಿದ್ದರು. ಇನ್ನಿಬ್ಬರು ಚರಿಗೆ ಹಿಡಿದುಕೊಂಡು ಬಯಲು ಕಡೆಗೆ ಹೋದರು. ಅವರ ಮಾತುಗಳನ್ನೇ ಜಾಗರೂಕತೆಯಿಂದ ಆಲಿಸುತ್ತಿದ್ದ ನನಗೆ ನಿರಾಶೆಯಾಯಿತು. ಅವರ ಯಾವ ಮಾತಲ್ಲೂ ಅಗಸಿ ಬಾಗ್ಲು ಹಾಯಲೇ ಇಲ್ಲ. ಬಹುಶಃ ಅಲ್ಲಿರುವ ಯಾರಿಗೂ ಅದರ ಬಗ್ಗೆ ಕಾಳಜಿಯೇ ಇಲ್ಲ ಎನಿಸಿ ಪೆಚ್ಚಾಯಿತು. ಆದರೂ ಅಗಸಿ ಬಾಗಿಲಿನ ಹಿನ್ನಲೆ ಏನು? ನಾವು ಧಾನ್ಯವೆಂದು ಉಪಯೋಗಿಸುವ ಅಗಸಿಗೂ ಇದಕ್ಕೂ ಏನು ಸಂಬಂಧ? ಬಾಗಿಲು ಇಷ್ಟು ಚಿಕ್ಕದಿದ್ದರೂ ಇದರ ಬೇರುಗಳು ಎಲ್ಲಿಯವರೆಗೆ ಹೋಗಿವೆ, ನೋಡಲೇಬೇಕು.

ಅವತ್ತು ಅತಿ ನಿರಾಶೆಯಿಂದ ವಾಪಸ್ಸಾದೆ. ನನ್ನ ಸ್ನೇಹಿತ ಬಳಗದಲ್ಲಿ ಕೆಲವರು ಆಸಂಗಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅಲ್ಲಿಗೆ ಪಿಗ್ಮಿ ತುಂಬಿಕೊಳ್ಳುವುದಕ್ಕೊ, ಬ್ಯಾಂಕ್ ಸಾಲದ ವಸೂಲಾತಿಗೋ ಹೀಗೆ ಏನೇನಕ್ಕೊ ಹೋಗುವುದು ನೆನಪಾಗಿ ಅವರನ್ನು ವಿಚಾರಿಸಿದೆ. ಅದು ಅವರಿಗೂ ಅಜೀರ್ಣ ಎನಿಸಿರಬೇಕು, `ಖೊಕ್’ ಎಂದು ನಕ್ಕಿದ್ದರು. ಆದರೂ ಅವರಿಗೆ ಎಚ್ಚರಿಸಿದ್ದೆ, `ಲೇ ಮಕ್ಳಾ, ನಾ ಧಾರವಾಡಕ್ಕ ಹೋದ್ರು ಸೈತ ಆಸಂಗಿ ಬಗ್ಗೆ ಅಥವಾ ಅಗಸಿ ಬಾಗ್ಲ ಬಗ್ಗೆ ಏನರೆ ಸುದ್ದಿ ಗೊತ್ತಾತಂದ್ರ ಫಟ್ನ ನನಗ ತಿಳಸಬೇಕ. ದೋಸ್ತಾಗಿ ಇಷ್ಟೂ ಮಾಡ್ಲಿಲ್ಲಂದ್ರ ಹೆಂಗ…?’ ಅಂತ ಅವರ ಮನ ಕಲುಕಿದಕ್ಕೆ, `ಆತ ಹೋಗಪಾ ಮಾರಾಯಾ’ ಎಂದು ಹರಸಿ ಕಳುಹಿಸಿದ್ದರು.

ಈಗ ನಾನು ಧಾರವಾಡಕ್ಕೆ ಬಂದು ಒಂದೆರಡು ತಿಂಗಳಾಗಿರಬೇಕು, ನನ್ನ ಚಡ್ಡಿ ದೋಸ್ತ್ ಮಲ್ಲುನಿಂದ ಒಂದು ಅನಿರೀಕ್ಷಿತ ಪತ್ರ ಬಂತು! ಕುಶಲೋಪರಿಯ ಪ್ರಸ್ತಾವಣೆಯೊಂದಿಗೆ ಆತ ಆಸಂಗಿಯ ಒಂದು ಸಂಗತಿಯನ್ನೂ ಬರೆದು ಕಳಿಸಿದ್ದ. ನನ್ನ ಉತ್ಸಾಹ ನೂರ್ಮಡಿಯಾಗಿ ಓದತೊಡಗಿದೆ:

.. ಮೊನ್ನೆ ಶುಕ್ರವಾರ ನಮ್ಮ ಆಸಂಗಿ ಗೌಡ್ರ ಗಂಗವ್ವಾಯಿ ತೀರ್ಕೊಂಡ್ ಸುದ್ದಿ ಕೇಳಿ ಮಣ್ಣ ಕೊಡಾಕ ಹೋಗಿದ್ನಿ. ಅಲ್ಲಿ ಯಾರ ಬಾಯಾಗ ನೋಡಿದ್ರೂ ಬರೇ ಗೌಡ್ರ ಗಂಗವ್ವಾಯಿ ಗೊಟಕ್ ಅಂದ್ಲು ಅಂತಾನ ಮಾತಾಡ್ತಿದ್ರ. ನನಗ ಸಿಟ್ಟ ಬಂತ. ಪಾಪ, ಅಷ್ಟೊಂದ ವಯಸ್ಸಾದವ್ರು (ಅಂದಾಜು 104 ಇರಬಹುದಂತ ಅಲ್ಲಿದ್ದಾವ್ರು ಮಾತಾಡ್ತಿದ್ರ), ಅದ್ರಾಗೂ ಗೌಡ್ರ ಮುದಿಕಿ ಅಂದ್ರ ಒಂದೀಟರೆ ಮರ್ಯಾದೆ ಬ್ಯಾಡಾ? ಒಬ್ಬ ಮನಷ್ಯಾನ ಇರೂತನಕ ಬೈದ್ರೂ ಸೈತ, ಹ್ವಾದಮ್ಯಾಲರೆ ಒಂದ್ನಾಕ ಛಲೊ ಮಾತಾಡ್ತೀವ. ಅಂಥಾ ಯಾವ ಮಾತೂ ನನಗಲ್ಲಿ ಕೇಳಸ್ಲಿಲ್ಲ. ಅಷ್ಟ್ರೊಳಗ ನಮ್ಮ ಪಿಗ್ಮಿ ಖಾತೆದಾರ ರಾಯಪ್ಪ ಸಿಕ್ಕ. ಅಂವನ ಸೈಡಿಗೆ ಕರ್ಕೊಂಡ ಹೋಗಿ ಚಹಾ ಕುಡಿಸ್ಕೋಂತ ಕೇಳಿದಾಗ ಅಂವ ಎಲ್ಲಾ ಹೇಳಿದ, ‘ಈ ಮುದಿಕಿ ಇರೂತನಕ ಯಾರ್ನೂ ಛೆಂದಂಗಿ ಇರಾಕ ಬಿಡ್ಲಿಲ್ಲ. ಇಕಿ ಕಾಟಕ್ಕ ಮುದಕ ಗೌಡ ಪಾಪ, ಲಗೂನ ಸತ್ತ ಹ್ವಾದ. ಇಕಿ ಬಾಯಿ.. ಅಬ್ಬಬ್ಬಾ ಬೊಂಬಾಯಿ ಅದ! ಅಕಿ ಬಾಯಾಗ ಬೈಗುಳ ಥಕ ಥಕ ಅಂತ ಕುಣೀತಿದ್ದು. ಅಕಿ ಕಣ್ಣ ಮುಂದ ಯಾರೂ ಸರ..ಳ ಹೋಗತಿದ್ದಿಲ್ಲ. ತಮ್ಮ ಮನ್ಯಾಗಿನ ಎಲ್ಲಾರ ಕೆಲಸಕ್ಕನೂ ಈ ಗಂಗವ್ವಾಯಿ ಬೈಗುಳ ಸೋಬಾನೆ ಪದ ಹಾಡ್ಲಿಲ್ಲಾಂದ್ರ ಕೆಲಸ ಸಾಂಗೋಪವಾಗಿ ನಡೀತಿದ್ದಿಲ್ಲ. ಅಕಿ ಮುಂದ ಯಾ ಕೆಲಸಾನೂ ನಿರ್ಲಕ್ಷವಾಗಿ ನಡ್ಯೂವಂಗಿರ್ಲಿಲ್ಲ. ಅದು, ತನ್ನ ಸೊಸಿ ಅಂಗಳಕ್ಕ ನೀರ ಹಾಕುದಿರ್ಲಿ, ಹೆಂಡಿ ಸಾರ್ಸೂದಿರ್ಲಿ, ಆಳುಗಳು ದನಗೊಳಿಗೆ ಮೇವು ಮಾಡೂದಿರ್ಲಿ, ಹಾಲ ಕರಿಯೂದಿರ್ಲಿ, ಮಗನ ವ್ಯವಹಾರನ ಇರ್ಲಿ, ಏನ ಆದ್ರೂ ಅದು ಚೊಕ್ಕವಾಗಿರ್ಬೇಕ, ಅಥವ ಅದ ಚೊಕ್ಕನ ಇದ್ರೂ ಅದ ತನ್ನ ಅಧಿಕಾರದಿಂದ ನಡ್ಯಾಕ್ಹತ್ತೇತಿ ಅಂತ ಅನಸ್ಬೇಕ. ಏನ ಲೌಡಿ, ಏನ ರಂಡಿ, ಏನೋ ಭಾಡ್ಯಾ, ಕುಡಸಾಲ್ಯಾ, ಪಡಶ್ಯಾಂಟ ನನ ಹ್ಞಾಟ್ಯಾ, ಯಾಕ ಹಾದರಗಿತ್ತೀ.. ಇಂಥಾ ಬೈಗುಳದ ದೊಡ್ಡ ಭಂಡಾರನ ತನ್ನ ಬಾಯಾಗ ತುಂಬ್ಕೊಂಡಿದ್ಲ. ಹೊರಕಡಿಗಿ ಹೊಂಟ್ರೂ ಬೈಯೂದ.. ಹೊರಗ ಕುಂತ್ರು ಬೈಯೂದ.. ಹಿಂಗ..’

‘ಏನಂದಗತ್ತ..?’ ಎಂದು ಅಚಾನಕ್ಕಾಗಿ ಬಂದ ಶಿವಯ್ಯ ಸ್ವಾಮಿ ನಡು ಬಾಯಿ ಹಾಕಿ ರಾಯಪ್ಪನ ಮಾತ ತಡದ. ಬಡಕ, ಉದ್ದಕ ಕೋಲ ಮುಖಾ ಮಾಡ್ಕೊಂಡಿದ್ದ ಶಿವಯ್ಯ ಸ್ವಾಮಿ ಮಾತಾಡೂದ ಹಂಗ. ಮಾತಮಾತಿಗೂ ‘ಮಾಡಂದಗತ್ತ, ಹೋಗಂದಗತ್ತ, ಬಾರಂದಗತ್ತ.. ಹಿಂಗ ಮಾತಿನ ಕಡೀಕ ‘ಗತ್ತ’ ಸೇರಸ್ತಿದ್ದ. ತನ್ನ ಆಕಾರಕ್ಕ ಗತ್ತಿಲ್ಲದಿದ್ರೂ ಮಾತ್ನ್ಯಾಗ ಮಾತ್ರ ಗತ್ತನ್ನ ಗುತಿಗಿ ಹಿಡದವ್ರಂಗ ಮಾತಾಡಾಂವ. ‘ಇನ್ನೂ ಹೆಣಾ ಎತ್ತಿಲ್ಲ. ಈ ಬಿಸಲಾಗ ತೆಲಿ ಕೆಟ್ಟ ಖಾರಬ್ಯಾಳಿ ಆಗೇತಿ, ಅದಕ್ಕ ಛಾ ಕುಡೀನು ಅಂತ್ಹೇಳಿ ಬನ್ನಿ’ ಅಂತ ತಾನೂ ನಮ್ಮ ಜೋಡಿ ಕುಂತ. ರಾಯಪ್ಪ ಮುದಿಕಿ ಗುಣಗಾನ ಮಾಡಾಕ್ಹತ್ತಿದ್ದ ಗೊತ್ತಾಗಿ ಸ್ವಾಮಿ ತಾನೂ ಸುರುಮಾಡಿದ, ‘ನೀವೇನ ಹೇಳ್ರಿ, ಮುದಿಕಿ ಇರೂತನಕ ಅಷ್ಟೆಲ್ಲ ಬೈಯ್ದ್ರೂನು ತನ್ನ ಜೀವಮಾನದಾಗ ಮಾಡಿದ್ದ ಒಂದ ಛಲೊ ಕೆಲಸಾ ಅಂದ್ರ ಈ ಅಗಸಿ ಬಾಗಲ್ದ’. ಅಷ್ಟೊತ್ತನಕ ರಾಯಪ್ಪನ ಮಾತ ಕೇಳಿ ಸುಸ್ತಾಗಿದ್ನಿ. ಈಗ ಶಿವಯ್ಯ ಸ್ವಾಮಿ ಹೇಳಿದ್ದ ಮಾತ ನನ್ನ ಬಡದೆಬ್ಬಿಸಿತ. ಚಾ ಕಪ್ಪ ತೆಳಗಿಟ್ಟ ಮುಖಾ ಮುಂದಮಾಡಿ ಕೇಳಿದ್ನಿ, ‘ಏನ ಮಾಡಿದ್ಲು?’. ‘ಏನೋಪಾ, ಈ ಊರಿಗಿ ಅಗಸಿ ಬಾಗ್ಲಾ ಉಳ್ಯಾಕ ಇಕಿನ ಕಾರ್ಣಂತ ಹೇಳತಾರ. ಆದ್ರ ಅದರ ಹಿಂದಿನ ಹಕೀಕತ್ತ ನನಗೂ ಗೊತ್ತಿಲ್ಲ’. ಸ್ವಾಮಿ ಕಡ್ಡಿ ತುಂಡಮಾಡಿದ್ಹಂಗ ಮಾತಾಡಿದ.

ಇಷ್ಟಪಾ ನನಗ ಗೊತ್ತಾಗಿದ್ದ. ಅದರ ಬಗ್ಗೆ ಕೇಳೂವಂಥ ಸಂದರ್ಭ ಅಲ್ಲಿರ್ಲಿಲ್ಲ. ಆಮ್ಯಾಲ ತಾಸ ಹೊತ್ತೇರೂಕಿತ ಮೊದಲ ಮುದಿಕಿ ಮಣ್ಣ ಮಾಡಿ ಬಂದೀವ. ನೋಡೂಣು, ಮತ್ತೇನರೆ ಗೊತ್ತಾದ್ರ ಹೇಳ್ತನ.

ಇಂತಿ ನಿನ್ನ,
ಮಲ್ಲು

ಮಲ್ಲೂನ ಪತ್ರ ಖುಷಿಯೊಂದಿಗೆ ನಿರಾಶೆಯನ್ನೂ ಹುಟ್ಟಿಸಿತು. ಅಗಸಿ ಬಾಗ್ಲು ಚಿದಂಬರ ರಹಸ್ಯದಂತೆ ಕಂಡು ಬಂದು ಅದನ್ನು ಭೇದಿಸುವುದೆ ನನಗೆ ಸವಾಲೆನಿಸಿತು. ಅದು ಸವಾಲಷ್ಟೇ ಎನಿಸದೆ ಅದರಿಂದ ನಾನು ಏಳ್ಗೆ ಹೊಂದುವ, ಹೆಸರುವಾಸಿಯಾಗುವ ಎಲ್ಲ ಲಕ್ಷಣಗಳೂ ಗೋಚರಿಸಿದುವು. ನನ್ನ (ಅಲ್ಪ) ಮತಿಗೆ ಕಂಡಂತೆ ಸುತ್ತ ಎಲ್ಲೂ ಅಗಸಿ ಬಾಗಿಲುಗಳಿಲ್ಲ. ಎಲ್ಲ ಒಂದೋ ವಿನಾಶಹೊಂದಿವೆ, ಇಲ್ಲಾ ಅನಿವಾರ್ಯವಾಗಿ ನೆಲಕ್ಕುರುಳಿಸಲ್ಪಟ್ಟಿವೆ. ಅದೂ ಅಲ್ಲದೆ ಈಗ ನಾನು ಓದಿರೋ ಯಾವ ಪುಸ್ತಕದಲ್ಲೂ ಅದರ ಬಗೆಗೆ ಪ್ರಸ್ತಾಪಗಳಿಲ್ಲ. ಅದರ ಬಗ್ಗೆ ಯಾರೂ ಅಧ್ಯಯನ ಅಥವ ಸಂಶೋಧನೆ ಮಾಡಿದ್ದಾರಂತನೂ ನನಗೆ ಅನಿಸುವುದಿಲ್ಲ. ಬಹುಶಃ ಈಗ ನಾನೇನಾದ್ರೂ ಈ ವಿಷಯದ ಬಗ್ಗೆ ಅಧ್ಯಯನ ಕೈಗೊಂಡು ಯಶಸ್ವಿಯಾದರೆ ಆಗ ನಾನೇ ಪ್ರಥಮ ವ್ಯಕ್ತಿ ಎನಿಸುತ್ತೇನೆ. ಆಗ ನನಗೆಷ್ಟು ಕೀರ್ತಿ, ಆದರ, ಸನ್ಮಾನಗಳು ಅರಸಿಕೊಂಡು ಬರುತ್ತವೆ?! ಎಲ್ಲರೂ ನನ್ನ ಹೊಗಳುತ್ತಾರೆ!.. ಹೀಗೆ ಮನಸು ಏನೇನೋ ಲೆಕ್ಕಾಚಾರದಲ್ಲಿ ಮುಳುಗಿತು. ಅಗಸಿ ಬಾಗಿಲಿನ ರಹಸ್ಯವನ್ನು ನಿಧಾನವಾಗಿ ಭೇದಿಸುತ್ತಿರುವಂತೆ ಮನಸು ಪುಳಕಗೊಂಡಿತ್ತು.

ನಾನು ಓದುತ್ತಿದ್ದ ಧಾರವಾಡದ ಕರ್ನಾಟಕ ಕಾಲೇಜಿನ ಲೈಬ್ರರಿಯಲ್ಲಿ ನನ್ನ ಕೈಗೆ ಎಟುಕುವ ಕೆಲವು ಪುಸ್ತಕಗಳನ್ನು ಹರವಿಕೊಂಡು ನೋಡಿದೆ. ಅವು ಯಾವ ಸಹಾಯವನ್ನೂ ಮಾಡಲಿಲ್ಲ. ಅವರಿವರನ್ನು ಈ ಕುರಿತಾಗಿ ಪ್ರಶ್ನಿಸಿದ್ದು ಕೈಹಿಡಿಯಲಿಲ್ಲ. ‘ಬಡ್ಡಿ ಮಗಂದು! ಈ ಕುತೂಹಲವನ್ನ ಹೆಂಗಾದ್ರು ಮಾಡಿ ಹತ್ತಿಕ್ಕಬೇಕಲಾ!’ ಕೈ ಗುದ್ದಿಕೊಂಡೆ. ಈಗ ತಾನೇ ಸೈನ್ಸ್ ವಿಷಯದಲ್ಲಿ ಕಾಲಿಟ್ಟಿದ್ದ ನನಗೆ ಅಲ್ಲಿ ಓದುತ್ತಿದ್ದ ಟ್ರಿಗ್ನಾಮೆಟ್ರಿ, ವೆಕ್ಟರ್ಸ್, ಸೆಲ್ ಬಯಾಲಜಿ, ರಿಫ್ಲೆಕ್ಶನ್, ವೆಲಾಸಿಟಿ, ಅಂಡ್ ಸ್ಪೀಡ್, ಫಿಸಿಕಲ್ ಕೆಮಿಸ್ಟ್ರಿ ಇವೆಲ್ಲ ಜಾಳು ಜಾಳಾಗಿ ಕಂಡು ಯಾವುದರಲ್ಲೂ ಜೀವವಿಲ್ಲ ಎನಿಸಿತು. ಸಧ್ಯಕ್ಕೆ ಜೀವಂತವಾಗಿ ನನ್ನ ಉದ್ಧಾರಮಾಡುವ ಒಂದೇ ವಿಷಯ: ಅಗಸಿ ಬಾಗ್ಲು!

‘ರೊಯ್ಣಿ ಮಳೀಗೆ ಓಣೆಲ್ಲಾ ಜ್ವಾಳಂತ’. ಹ್ಮ.. ಅಂಥದೊಂದು ರೋಹಿಣಿ ಮಳೆ ಹಿಡಕೊಂಡಿತ್ತು ಆಗ. ನನ್ನ ಅರ್ಧವಾರ್ಷಿಕ ಪರೀಕ್ಷೆ ಮುಗಿದು ಮತ್ತೆ ಊರಿಗೆ ಬಂದು ನನ್ನ ‘ರಿಸರ್ಚ್’ ಶುರುಮಾಡುವ ಅವಕಾಶ ಒದಗಿತ್ತು. ನನ್ನ ಕುತೂಹಲದ ಕಥೆಗೆ ತಿರುವು ಸಿಕ್ಕಿದ್ದೂ ಆಗಲೇ. ಅದೂ ಕರಿಗಂಬಳಿ ಸಿದ್ಧ ಎಂಬ ‘ಗಾಡ್ ಫಾದರ್’ ರೂಪದಲ್ಲಿ! ಒಂದಿನ ಸಂಜೆ 4ರ ಸಮಯದಲ್ಲಿ ನನ್ನ ಕನಸಿನ ಬಾಗಿಲಿನತ್ತ ಹೋದಾಗ ಅದೇ ದೊಡ್ಡ ಆಲದ ಮರದ ಕೆಳಗೆ ಈ ಕರಿಗಂಬಳಿ ಸಿದ್ಧ ಕುಳಿತಿದ್ದ. ಪೈಲ್ವಾನನಂತಹ ದೇಹ, ದಪ್ಪ ಮೀಸೆ, ಸೊಂಟದಿಂದ ಕೆಳಗೆ ಧೋತ್ರ ಉಟ್ಟುಕೊಂಡಿದ್ದ. ಮೇಲಿನ ಕರಿಮೈಗೆ ಸುತ್ತಿಕೊಂಡಿದ್ದು ಕರಿಗಂಬಳಿ ಒಂದೇ! ನನ್ನನ್ನು ನೋಡಿದವನೇ ಒಮ್ಮೆ ಪ್ರಶ್ನಾರ್ಥಕವಾಗಿ ಕಣ್ಣು ಮಿಟುಕಿಸಿದ್ದ. ಸಲಿಗೆ ಬೆಳೆಯಿತು, ಹತ್ತಿರ ಹೋಗಿ ಕೂತೆ. ‘ಏನಪಾ?’ ಅಂದ. ‘ನಮ್ಮ ಸಾಲ್ಯಾಗ ಅಗಸಿ ಬಾಗಲ ಬಗ್ಗೆ ಹೇಳಾಕ್ಹತ್ತಿದ್ರು, ಅದಕ್ಕ, ನೋಡೂಣು ಅಂತ ಬನ್ನಿ. ನಿಮಗೇನರೆ ಇದರ ಬಗ್ಗೆ ಗೊತ್ತೈತ್ಯಾ?’ ಮರುಪ್ರಶ್ನೆ ಹಾಕಿದೆ.

ಈ ವಯಸ್ಸಿಗೆ ಇದೊಂಥರಾ ಹುಚ್ಚು ಇವನಿಗೆ ಅಂದಿರಬೇಕು ಮಾಸ್ತರರು. ಆಷ್ಟೊತ್ತಿಗಾಗಲೇ ನನ್ನ ತೆಲೆಯಲ್ಲಿ ಒಂದು ಅಸ್ಪಷ್ಟ ಅಗಸಿ ಬಾಗ್ಲು ನಿರ್ಮಾಣವಾಗುತ್ತಿತ್ತು. ಅದರ ಗಾತ್ರ, ಹರವು, ಗುಣ ಎಲ್ಲವೂ ನನ್ನ ತೆಲೆಕೆದಕುತ್ತಿದ್ದವು.

ಆಹಾ, ಇಷ್ಟು ವರ್ಷದ ಮೇಲೆ ತನ್ನ ಹಳೆಯ ಕಥೆಯನೆಲ್ಲ ಆಲಿಸುವ ಸಶಕ್ತ ಶ್ರೋತೃವೊಬ್ಬ ಸಿಕ್ಕಿದ್ದಕ್ಕೆ ಸಂತಸಪಟ್ಟ ಸಿದ್ಧ, ಆ… ಎಂದು ತನ್ನ ಎದೆಗೂಡಿನ ಆಳದಲ್ಲಿ ಹುದುಗಿರಬಹುದಾದ ಕಫವನೆಲ್ಲ ಉಸಿರು ಬಿಗಿಹಿಡಿದು ಎಳೆದು ತೆಗೆದು ತೊಪ್ಪಿಟ್ಟು, ಗಂಟಲು ಸರಿ ಮಾಡಿಕೊಂಡವರಂತೆ ಶುರುವಿಟ್ಟನು, ‘ನಾ ಆಗ ಸಣ್ಣಾಂವ. ನಮ್ಮಪ್ಪ ಈ ಅಗಸಿ ಬಾಗಲ ಹಿಂದ, ಒಂದ ಸಣ್ಣ ಗುಡಸ್ಲಾ ಕಟ್ಗೊಂಡ, ಇಲ್ಲಿ ಏನೇನ ನಡೀತೈತಿ ಎಲ್ಲಾಕೂ ಸಾಕ್ಷಿ ಆಗಿ ಇದ್ದ. ಇದನ್ನ ಕಟ್ಟಿದ್ದು ನಮ್ಮ ಮಾರುತಿ ಮೇಸ್ತ್ರಿ ಮುತ್ಯಾ ಅಂತ ಹೇಳ್ತಾರ. ಅದಕ್ಕ, ಇನ್ನೂ ಗಟ್ಟಿಮುಟ್ಟಾಗಿ ಹೆಂಗೈತಿ ನೋಡು’. ಒಂದ್ಸಲ ಅದರೆಡೆಗೆ ಕಣ್ಣು ಹಾಯಿಸಿದೆ, ಮತ್ತೆ ಮುಂದುವರೆದ, ‘ನಮ್ಮಪ್ಪ ನನಗಿಂತ ದೊಡ್ಡ ಪೈಲವಾನ. ಯಾಂವ ನನಮಗಗೂ ಅಂಜತಿದ್ದಿಲ್ಲ. ಎಂಥೆಂಥಾ ಕಳ್ಳಕಾಕರ್ನೆಲ್ಲಾ ಹಿಡದಾನ. ಊರಹೊರಗ ನಡ್ಯೂವಂಥ ಎಷ್ಟೆಷ್ಟೋ ಹೊಲಗೇರಿ ಕೆಲಸಗೋಳ್ನ ಬಂದ್ ಮಾಡ್ಸ್ಯಾನ. ಇನ್ನ, ಅವ್ನ ಮಗಾ ನಾ, ಬಿಟ್ಟಿನೇನ? ತಮ್ಮಾ, ನಿನಗ ಹೇಳಬೇಕಂದ್ರ ಇತ್ತೀಚ್ಗೆ ಇಲ್ಲಿ ಅದೆಂಥಾದೊ ಮಟಕಾ, ಅಂದರ-ಬಾಹರ ಅಂತಾರಲ್ಲಾ ಅವೆಲ್ಲಾ ನಡೀತಿದ್ದು. ಆ ಕಳ್ಳ ಸೂಳಿಮಕ್ಕಳ್ನ ಒದ್ದ ಓಡ್ಸೇನಿ. ಇನ್ನೊಂದಿನ, ನಡೂರಾತ್ರ್ಯಾಗ ಊರಹೊರಗ ಚರಿಗಿ ತುಗೊಂಡ ಬಂದ ತಳವಾರ ಮುತ್ತವ್ವನ ಯಾಂವೋ ತಾಯ್ಗಂಡ ಸೂಳಿಮಗ ಕೆಡ್ಸಾಕ ನೋಡಿದ್ದ. ಹೆಡಕಿನ ಮ್ಯಾಲ ಒಂದ ಕೊಟ್ನಿ ನೋಡ, ಕುಂಯ್ಯಾಡಿಸ್ಕೋತ ಹ್ವಾದಾಂವ ಇಕಾಡಿ ಮಖಾ ಮಾಡಿ ಉಚ್ಚಿ ಸೈತ ಹೋದಿಲ್ಲ! ಅದಕ್ಕ, ಗೌಡ್ರ ನನಗ ಈ ಕರಿಕಂಬ್ಳಿ ಮತ್ತ ಶ್ರೀಶೈಲದ ಬಡಿಗಿ ಬಳುವಳಿ ಅಂತ ಕೊಟ್ರ. ಅವತ್ತಿಂದ ನನ್ನ ಹೆಸರ ಹಿಂದ ಕರಿಗಂಬಳಿ ಕೂಡ್ಕೋತ’ ಬೀಗಿದ ಸಿದ್ಧಪ್ಪ. ಅವನ ಪ್ರಕಾರ ಅಗಸಿ ಬಾಗಿಲಿನ ಇತಿಹಾಸ ಎಂದರೆ ತನ್ನ ಪರಾಕ್ರಮಗಳು! ‘ನನ್ನ ಛಲೋ ದೋಸ್ತಂದ್ರ ಹೋಳಿಗಿ ಮಲ್ಲಯ್ಯ, ಪೈಲ್ವಾನ್ ಮಲ್ಲಯ್ಯಂತನೂ ಕರೀತಾರ. ಅಂವ್ದ ಒಂದ ಗರಡಿ ಮನೀನೂ ಐತಿ. ದೊಡ್ಡ ಆಳ ಅದ’.

‘ಹೋಳಿಗಿ ಅವ್ನ ಅಡ್ಡೆಸರನ ಮುತ್ಯಾ?’

‘ಹ್ಹೆ.. ಹ್ಹೆ.. ಇಲ್ಲಪಾ’ ಕರಿಹಲ್ಲು ಪ್ರದರ್ಶಿಸಿ ಹೇಳಿದ, ‘ಅಂವಾ ಹೋಳಿಗಿ ತಿನ್ನೂದ್ರಾಗ ಎತ್ತಿದ ಕೈ. ವರ್ಸ, ನಮ್ಮ ಬಸವಣ್ಣ ದೇವ್ರ ಜಾತ್ರ್ಯಾಗ ಹೋಳಿಗಿ ತಿನ್ನೂ ಸ್ಪರ್ಧಾ ಇಟ್ರ ಇವತ್ತಿನತನಕಾನೂ ಇಂವ್ನ ಮೀರ್ಸಿದಾಂವ ಸುತ್ತೂರೊಳಗ ಯಾಂವೂ ಇಲ್ಲ. ಒಂದ ಸಲಕ್ಕ 25 ರಿಂದ 30 ಹೋಳಿಗಿ ತಿಂತಾನ!..’.

ಮಾತು ಎಲ್ಲೆಲ್ಲಿಗೋ ಹೊರಟಿತ್ತು. ಊದೂದ ಕೊಟ್ಟ ಬಾರ್ಸೂದ ತುಗೊಂಡಂಗಾಗಿತ್ತ ನನ್ನ ಪರಿಸ್ಥಿತಿ. ಆಸಂಗಿಯ ಇಂಥ ವಿಚಿತ್ರ ವ್ಯಕ್ತಿತ್ವಗಳು ರೋಮಾಂಚನವನುಂಟುಮಾಡುತಿದ್ದುದೇನೋ ನಿಜ, ಆದರೆ ಅವು ಅಗಸಿ ಬಾಗ್ಲಿಂದ ವಿಮುಖ ಹೊಂದುತ್ತಿರುವುದನ್ನು ಮನಗಂಡು, ‘ಮುತ್ಯಾ, ಅದನೆಲ್ಲಾ ಬಿಡ, ಮೊನ್ನೆ ಗೌಡ್ರ ಗಂಗವ್ವಾಯಿ ಸತ್ಲಂತಲ್ಲಾ, ಅಕಿ ಪುಣ್ಯದಿಂದನ ಈ ಅಗಸಿ ಬಾಗ್ಲ ಉಳಕೊಂಡತಿ ಅಂತ ಹೇಳ್ತಾರಲ್ಲಾ? ಅದೇನಂತ ಹೇಳ..’ ಅಂಗಲಾಚಿದೆ. ಸಿದ್ಧಪ್ಪ ಸ್ವಲ್ಪ ಬೇಜಾರಾದ್ರೂ ನನ್ನ ದೈನ್ಯತೆಗೆ ಕರಗಿ ಇನ್ನೇನು ಮಾತು ಮುಂದುವರೆಸಬೇಕು ಎನ್ನುವಷ್ಟರಲ್ಲಿ ಸಂಪಗಾರ ಪರಪ್ಪ, ‘ಏನ ಸಿದ್ಧಣ್ಣ, ಛಲೊ ಅದಿ?’ ಅಂತ ಪೀಠಿಕೆ ಹಾಕಿ, ‘ಏನೋಪಾ, ಆ ಕಡೆ ಮೂಲ್ಯಾಗ ಅಗಸಿ ಬಾಗಲ ಗತಿ ಏನಾಗೇತಿ ನೋಡ. ಮನ್ನೀ ಮಳಿಗೆ ಎಲ್ಲಾ ಕಿತಗೊಂಡ ಬರಾಕ್ಹತ್ತೇತಿ’.

‘ಅದೇನಿಲ್ಲ ಬಿಡ ಪರಪ್ಪ, ಮಾರುತಿಗೆ ಹೇಳೇನಿ. ನಾಳೆ ಆಳಗೋಳ್ನ ಕರ್ಕೊಂಡ ಬಂದ ಸುದ್ದ ಮಾಡ್ತನಂತ ಹೇಳ್ಯಾನ’. ಅಂದ ಸಿದ್ಧ.

‘ಹಂಗಾದ್ರ ಆತ ಬಿಡ, ಮಾರುತಿ ಹೇಳ್ಯಾನಂದ್ರ ಅಂವ ಛಲೋನ ಮಾಡ್ತಾನ. ತನ್ನ ಮನಿ ಬೇಕಾದ್ರ ಹೆಂಗರೆ ಕಟ್ಗೋತಾನ. ಆದ್ರ ಇದನ್ನ ಮಾತ್ರ ಛೆಂದಂಗೆ ಕಟ್ಟತಾನ. ಆತ ಬಿಡ, ನಾ ಬರ್ತನ’ ಅಂತ್ಹೇಳಿ ನನ್ನೊಮ್ಮೆ ವಾರೆಗಣ್ಣಿಂದ ನೋಡಿ ಕಾಲುಕಿತ್ತಿದ್ದ.

‘ಮಾರುತಿ ಮೇಸ್ತ್ರಿಗೆ ಈ ಬಾಗಲ ಚಾಕರಿ ಮಾಡೂದಂದ್ರ ದೇವ್ರ ಹರಿಕಿ ತೀರ್ಸಿದಂಗ’. ಸಿದ್ಧಪ್ಪ ಹೇಳುವಾಗ ಮೇಸ್ತ್ರಿ ಬಗ್ಗೆ ಗೌರವ ಭಾವನೆ ಮೂಡಿತು. ‘ಆಗಳೆ ಏನೋ ಕೇಳಿದ್ಯಲ್ಲೊ ತಮ್ಮಾ ನೀ.. ಹ್ಞಾ, ಗಂಗವ್ವಾಯಿ ಬಗ್ಗೆ ಹೌದಿಲ್ಲೊ.. ಹ್ಞಾ, ಹೇಳತನ ಕೇಳ..’ ನಾನೂ ಹೌದೆಂದು ತಲೆ ಅಲ್ಲಾಡಿಸಿದೆ.

‘ಗಂಗವ್ವಾಯಿ ಅಂದ್ರ ಆಸಂಗಿ ಊರಿಗೆ ಬೇಲಿ ಇದ್ದಂಗ. ಊರಾಗ ಏನ ನಡದ್ರೂ ಅಕಿ ಮಧ್ಯಸ್ಥಿಕೆ ಇರತಿತ್ತ. ಆದ್ರ ಭಾಳ ಮಂದಿಗೆ ಅಕಿನ ಕಂಡ್ರ ಇರಸ-ಮುರಸ. ಬರೇ ಬೈತಾಳಂತ ಅಕಿನ ಯಾರೂ ತಡವಾಕ ಹೋಗ್ತಿದ್ದಿಲ್ಲ. ಬೈದ ಹೇಳಾವ್ರು ಛಲೋದಕ ಹೇಳ್ತಾರಂತ. ಹಂಗ ಮುದಿಕಿ ಬೈತಿದ್ರೂ ಅದರಿಂದ ಯಾರಿಗೂ ಏನೂ ಕೆಡಕಾಗಿಲ್ಲ. ಛಲೋನ ಆಗೇತಿ. ಕಂಡ ಕಂಡ ಸೂಳ್ಯಾರ ಸಂಗ ಮಾಡಿ ಅಕಿ ಗಂಡ–ದೊಡ್ಡ ಗೌಡ ಸತ್ತಹ್ವಾದ. ಆದ್ರ ಊರ ಮಂದಿ ಹೇಳೂದ ಬ್ಯಾರೆ, ಅಕಿ ಹೊಲಸ ಬಾಯಿಗೆ ಬ್ಯಾಸತ್ತ ಸತ್ತಹ್ವಾದಾ ಅಂತ ಹೇಳ್ತಾರ. ಈಗೊಂದ ವರ್ಸದ ಹಿಂದ ಆ ಕಡೆಮನಿ ಸಂಗಪ್ಪನ ಮಗಳ್ನ ಯಾಂವೋ ಹರಿಜನ್ರ ಹುಡುಗ ಕೆಡಿಸಿ ಕೈಕೊಟ್ಟಿದ್ದ. ಆಗ ಇದ ಮುದಿಕಿನ ಎಲ್ಲಾ ಹಿರ್ಯಾರ್ನೂ ಕೂಡಿಸಿ ಇಬ್ರಿಗೂ ಮದಿವಿ ಮಾಡ್ಸಿದ್ಲ..’.

‘ಅಯ್ಯೋ ಮುತ್ಯಾ.. ಅದನೆಲ್ಲಾ ಬಿಡ, ಈ ಅಗಸಿ ಬಾಗ್ಲಾ ಅಕಿಯಿಂದನ ಉಳದೈತೆತ್ತ ಹೇಳ್ತಾರ್ಲಾ, ಅದನ ಹೇಳ..’ ನನ್ನ ಧೋರಣೆ ಕಂಡು ಹುಬ್ಬೇರಿಸಿ, ಕಣ್ಕಿಸಿದು ನೋಡಿದ ಸಿದ್ದಪ್ಪ ಮತ್ತೆ ಮುಂದುವರೆಸಿದ, ‘ಗಂಗವ್ವಾಯಿಗೆ ಸಣ್ಣ ವಯಸಿನ್ಯಾಗ ಮದಿವಿ ಮಾಡಿದ್ರ. ಅಕಿಗೆ ತನ್ನ ಗಂಡನ ಕಂಡ್ರ ಭಾಳ ಪ್ರೀತಿ. ಅಂವ ನೋಡಾಕ ಸುರಸುಂದರ ಅಂತ ಊರವ್ರೆಲ್ಲಾ ಹೊಗಳ್ತಿದ್ರ. ಅದಕ್ಕ ಅಕಿಗೆ ದೊಡ್ಡ ಗೌಡಂದ್ರ ಚಂದ್ರನ ತುಂಡ ನೋಡಿಧಾಂಗ ಅನಸ್ತಿತ್ತ. ಅಂವ ಎಲ್ಲಿ ಹ್ವಾದ್ರೂ ತಾನೂ ಬೆನ್ನತ್ತಿ ಹೋಗ್ತಿದ್ಲ. ಅಂವನ ಕೆಲಸಾ ಎಲ್ಲಾ ಕಣ್ಣಾರೆ ನೋಡಿ ಖುಷಿ ಪಡ್ತಿದ್ಲ. ಈ ಅಗಸಿ ಬಾಗಲ ಗುದ್ಲಿ ಪೂಜೆ ಮಾಡಿ ಅದನ ಈ ಆಕಾರಕ್ಕ ತಂದ ನಿಲ್ಸಿದಾವ್ನು ಇದ ಗೌಡನ. ಅಷ್ಟ ಅಲ್ಲ, ಈ ಕಾರ್ಯಕ್ರಮಕ್ಕ ಸಾಂಗ್ಲಿ ಸಂಸ್ಥಾನದ ದಿವಾನ್ರನ ಕರಿಸಿದ್ದ, ಊರಿಗೆಲ್ಲಾ ಹೋಳಿಗಿ ಊಟಾ ಹಾಕ್ಸಿದ್ದ! ಆಗ ನಮ್ಮ ದೇಶದ ತುಂಬ ಚಳವಳಿನು ಜೋರ ಇದ್ದು. ಮಂಗ್ಯಾನ ಮಾರಿ ಬ್ರಿಟಿಸ್ರೂ ಇದರ ಮ್ಯಾಲ ಒಂದ ಕಣ್ಣ ಇಟ್ಟಿದ್ರ. ಆದ್ರ ಅವ್ರ ಕೈಲೆ ಈ ಅಗಸಿ ಬಾಗ್ಲಿನ ಒಂದ ಹಿಟ್ಟಂಗಿನೂ ಎತ್ತಾಕಾಗ್ಲಿಲ್ಲ. ಮುಂದ ಸ್ವಾತಂತ್ರ್ಯ ಬತ್ತು, ದೇಶೆಲ್ಲಾ ಒಂದಾತು. ಎಲ್ಲಾರೂ ನಮ್ದು-ತಮ್ದು ಅಂತ್ಹೇಳಿ ತಮ್ಮ ತಮ್ಮ ಊರಗೋಳ, ರಾಜ್ಯಗೋಳ್ನ ಬ್ಯಾರೆ ಮಾಡ್ಕೊಂಡ್ರು.

ಈಗೊಂದ್ ಮೂವತ್ತ ವರ್ಸದ ಹಿಂದ ನೋಡ, ಊರಗೋಳು ದೊಡ್ಡು ಆಗಾಕ್ಹತ್ತಿದ್ದು. ಆಗ ಸರ್ಕಾರದಾವ್ರು ಊರ ವಾಡಾಸು ಸಮಂದ ಅಗಸಿ ಬಾಗ್ಲಾ ಒಡದ ಅಲ್ಲಿ ನೆಲಾ ಎಲ್ಲಾ ಭಾಗಾ ಮಾಡಿ ಮಾರತಾರಂತ ಆಜ್ಞಾ ಮಾಡಿದ್ರ. ಇದರ ಬದ್ದಲ ಗೌಡ್ರ ಮನೀಗೂ ಒಂದ ಪತ್ರ ಹೋಗಿತ್ತ. ಆಗ ಗೌಡ ಪಂಚಾಯ್ತಿ ಕೂಡಿಸಿ, ‘ನೋಡ್ರ್ಯಪಾ, ಸರ್ಕಾರದಾವ್ರು ಇಲ್ಲೀ ಜಾಗಾ ತಮ್ಮ ವಶಕ್ಕ ತುಗೊಂಡಾರು. ಅಲ್ಲೇನೋ ಅವ್ರ ಮನಿ ಕಟ್ಟಿಸಿಕೊಡಾಕ ಉಪಯೋಗ ಮಾಡ್ತಾರಂತ. ಅದಕ್ಕ ಈ ಅಗಸಿ ಬಾಗ್ಲಾ, ಆ ದೊಡ್ಡ ಬಾಂವಿ, ಈ ಸಿದ್ಧನ ಗುಡಸ್ಲಾ ಎಲ್ಲಾ ಮುಟ್ಟಗೋಲ ಹಾಕೋತಾರಂತ. ಅವ್ರ ಈ ರೀತಿ ಹೇಳಿದ್ದಕ್ಕ ನಮಗ ಏನೂ ಮಾಡಾಕ ಬರಾಂಗಿಲ್ಲ. ಅವ್ರಿಗೆ ನಿಮ್ಮ ಸಹಕಾರ ಬೇಕ’. ಸರ್ಕಾರದಾವ್ರು ಹೇಳ್ಯಾರು, ಈಗ ಗೌಡ್ರೂ ಹೇಳಾಕತ್ಯಾರು ಇನ್ನ ನಮ್ದೇನ ಆಟಾ ಅಂತ ಎಲ್ಲಾರೂ ‘ಹ್ಞೂ’ ಅಂತ ಗೋಣ ಹಾಕಿದ. ತನ್ನ ಮಗನ ಆಸೆಬುರುಕತನ ಗೊತ್ತಿದ್ದ ಮುದಿಕಿ ಅದೆಲ್ಲಿದ್ಲೋ, ಕಚ್ಚಿ ಹಾಕೊಂಡ ಓಡಿ ಬಂದʼ.

‘ಏನೋ, ಭಂಡ ಸೂಳಿ ಮಕ್ಕಳ್ರ್ಯಾ, ಗೌಡ ಹೇಳಿದ್ದಕ್ಕ ಸುಮ್ನ ತೆಲಿ ಅಳಗ್ಯಾಡಿಸಿದ್ರ ಆತನ? ಅಂವ ಸರ್ಕಾದಿಂದ ರೊಕ್ಕಾ ತಿಂದಾನ. ನಿಮಗೆಲ್ಲಾ ಮೋಸಾ ಮಾಡಾಕತ್ಯಾನ. ಆರ ದುಡ್ಡ ಕೊಟ್ರ ಅತ್ತಿ ಕಡೆ ಮೂರ ದುಡ್ಡ ಕೊಟ್ರ ಸೊಸಿ ಕಡೆ ಅನ್ನೂ ಇಂಥವ್ನ ನಂಬಬ್ಯಾಡ್ರಿ. ಅಗಸಿ ಬಾಗ್ಲಾ, ಬಾಂವಿ ನಮ್ಮ ಊರಿನ ಆಸ್ತಿಗೋಳ ಅವ. ಅವಕ್ಕ ಅದ್ಯಾವ ಕುಡಸಾಲ್ಯಾ ಬಂದ ಕೈ ಹಚ್ಚತಾನ ನಾನೂ ನೋಡತನ..’ ಮುದಿಕಿ ಮಾತ ಕೇಳಿ ಮಂದಿ ನಡು ಗದ್ಲ ಸುರುಆತ.

‘ಇನ್ನೂ ಏನ ವಿಚಾರ ಮಾಡಾಕತ್ತೇರ್ಯೋ, ಊರ ತುಂಬ ದೊಡ್ಡ ದೊಡ್ಡ ಪೈಲ್ವಾನ್ರ ಅದಿರ್ಲ್ಯಾ, ಎದಿ ಸೆಟಿಸಿ ಕೆಳಾಕಾಗುದಿಲ್ಲನ ನಿಮಗ?.. ಇಲ್ಲಾಂದ್ರ ಕೈಗಿ ಬಳಿ ಹಾಕೊಂಡ ನಿಮ್ಮ ಹೇಂತ್ಯಾರ ಸೆರಗ ಹಿಡ್ಕೊಂಡ ಮನಿಗಿ ಹೋಗ್ರಿ. ಊರ ತುಂಬ ನಿಮ್ಮಂಥಾ ಪಡಪೋಶಿಗೋಳಿದ್ರ ಊರ ಉದ್ಧಾರ ಆದಂಗ..’ ಮುದಿಕಿ ಇಷ್ಟ ಹೇಳಬೇಕಾದ್ರ ನಮ್ಮ ಹೋಳಿಗಿ ಮಲ್ಲಯ್ಯಗ ಸಿಟ್ಟ ಬಂದ, ‘ನಿಂದ್ರಸ್ಬೆ ಸಾಕ, ನಾವೇನ ಹಡಬೀಗೆ ಹುಟ್ಟಿದಾವ್ರಲ್ಲ. ನಮಗೂ ಕಾಳಜಿ ಐತಿ. ಏನೋ ಗೌಡ್ರ ಹೇಳ್ಯಾರಂತ ಸುಮ್ನ ಇದ್ದೀವು. ಅವ್ರ ಇಂಥಾ ಹೇಲತಿನ್ನೂ ಕೆಲ್ಸಾ ಮಾಡ್ಯಾರಂದ್ರ ನಾವೆಂಗ ಸುಮ್ಮಿರಾಕಾಗ್ತೈತಿ? ಬರ್ಲಿ, ಅದ್ಯಾಂವ ಬರ್ತಾನೋ ನಾನೂ ನೋಡ್ತನ. ಇಲ್ಲಿಂದ ಒಂದ ಸಣ್ಣ ಕಲ್ಲ ಎತ್ತಾಕ ಬಂದ್ರೂ ಅವ್ರ ಕಳ್ಳ ಕಿತ್ತ ತಗೀತನ..’ ಅಂದಿದ್ದಕ್ಕ ಎಲ್ಲಾರೂ ಅಂವಗ ದನಿಗೂಡ್ಸಿದ್ರ. ಗೌಡ ಯಾವಾಗೋ ಅಲ್ಲಿಂದ ಜಾಗಾ ಖಾಲಿ ಮಾಡಿ ಮನಿಗೆ ಹೋಗಿದ್ದ. ಇದಾದ ಒಂದ ವಾರಕ್ಕ ಸರ್ಕಾರದವ್ರ ಕಳ್ಸಿದ್ದ ಗೌಂಡ್ಯಾಗೋಳ ಬಂದ ನೆಲಾ ಹಡ್ಡಾಕ ಸುರುಮಾಡಿದ್ರ. ಆಗ ಗಂಗವ್ವಾಯಿ ಎಲ್ಲಾರ್ನು ಕೂಡಿಸ್ಕೊಂಡ ಬಂದ ದೊಡ್ಡ ಜಗಳಾನ ಮಾಡಿದ್ಲ.

ಮುಂದ ತಲಾಟಿ, ತಾಶೀಲ್ದಾರ, ಅವರ ಮ್ಯಾಲಿನ ಅಧಿಕಾರಿಗೋಳು ಎಲ್ಲಾ ಬಂದ್ರೂ ಯಾರಿಗೂ ಅದನ ಮುಟ್ಟಿಸಿಕೊಡ್ಲಿಲ್ಲ. ಹೊಡದಾಟ, ಬಡದಾಟನೂ ಆದು. ‘ನಮ್ಮನ ಮದಲ ಮಣ್ಣ ಮಾಡಿ, ನಮ್ಮ ಗೋರಿ ಮ್ಯಾಲ ನಿಮ್ಮ ಮನಿ ಕಟ್ಗೋರಿ’ ಅಂತ ಮುದಿಕಿ ಪಟ್ಟ ಹಿಡ್ಕೊಂಡ ಕುಂತ್ಲ. ಇಷ್ಟೆಲ್ಲಾ ರಾಮಾಯ್ಣಾ ಆದ ಮ್ಯಾಲ ಸರ್ಕಾರದಾವ್ರು ಒಪ್ಗೊಂಡ ಅಗಸಿ ಬಾಗಲ ಕಡೆಯಿಂದ ಜಾಗಾ ಬಿಟ್ಟ ಈ ಕಡೆ ಎಲ್ಲಾ ಜಾಗಾ ಮನಿಮಾಡ್ಕೊಳ್ಳಾಕ ಬಿಟ್ಟಾರ..’ ಸುತ್ತಲೂ ಕೈ ತೋರಿಸಿದ ಸಿದ್ಧಪ್ಪ, ‘ಆದ್ರ ಈಗ ಅವೆಲ್ಲಾ ಹಳೀ ಮಾತ. ಮುದಿಕಿನೂ ಹೋತು, ಇನ್ನ ಅಂಥಾ ಮಂದಿನೂ ಯಾರಿಲ್ಲ. ಇನ್ನ ಈ ಅಗಸಿ ಬಾಗ್ಲಾ ರಾತೋ ರಾತ್ರಿ ಇಲ್ಲದಾಂಗ ಮಾಡಿದ್ರೂ ಮಾಡಿದ್ರ! ಏನೂ ಹೇಳಾಕಬರಾಂಗಿಲ್ಲ..’ ತನ್ನ ಕಳಕಳಿ ವ್ಯಕ್ತಪಡಿಸಿದ. ಸಿದ್ದಪ್ಪನ ಮಾತಿನಲ್ಲಿ ಪರವಶನಾಗಿದ್ದೆ. ಕ್ರಾಂತಿಕಾರಿ ಗಂಗವ್ವಾಯಿ ಯಾವ ಕಿತ್ತೂರು ಚೆನ್ನಮ್ಮನಿಗೂ ಕಮ್ಮಿ ಇಲ್ಲ ಎನಿಸಿತು.

ಟಿ.ವಿಯಲ್ಲಿ ಬರುತ್ತಿದ್ದ ರಾಮಾಯಣವನ್ನು ವೀಕ್ಷಿಸುತ್ತಿದ್ದ ಬೆರಗುಗಣ್ಣು ಈಗ ಗಂಗವ್ವಾಯಿ ಕಥೆ ಕೇಳುತ್ತಿದ್ದಂತೆ ಅದೇ ಚಿತ್ರ ಕಣ್ಮುಂದೆ ಬಂದು ಹೊಸ ಲೋಕವನ್ನೇ ತೆರೆದಿಟ್ಟಿತು. ಮನಸಾರೆ ವಿಜೃಂಭಣೆಯ ಸಂಭ್ರಮವೊಂದನ್ನು ಅನುಭವಿಸಿದ ಖುಷಿ. ಇಂದಿನ ದಿನ ನನ್ನ ಬದುಕಿಗೆ ಮಹಾಪರ್ವವನ್ನು ಗಳಿಸಿಕೊಟ್ಟ ಸುದಿನ, ಇದನ್ನು ಜೀವಮಾನವೆಲ್ಲಾ ಮರೆಯಬಾರದೆನಿಸಿತು. ಅಷ್ಟರಲ್ಲಿ ತುಂತುರು ಹನಿಯತೊಡಗಿತು. ಸಿದ್ಧಪ್ಪ ನನ್ನನ್ನು ಎಚ್ಚರಿಸಿ, ‘ಏ ತಮಾ, ಸಾಕ ಹೋಗ. ಮಳಿ ಸುರುಆತ’ ಎಂದು ತಾನೂ ಎದ್ದು ಹೋದ. ನನ್ನ ಈ ಸಂಭ್ರದೊಂದಿಗೆ ಮುತ್ತಿನ ಮಳೆಯ ಹನಿಗಳು ಬೆರೆಯುತ್ತಿರುವಂತೆ ನನ್ನಲ್ಲಿ ಪರಮಾನಂದದ ಜುಗಲ್ ಬಂದಿ ಶುರುವಾಯಿತು. ಮಳೆಯ ಒಂದೂ ಹನಿಯನ್ನು ವ್ಯರ್ಥಮಾಡದೆ ಎಲ್ಲವನ್ನೂ ಕಣ್ಮುಚ್ಚಿ ಅನುಭವಿಸುತ್ತ ಮನೆಗೆ ಬಂದೆ.

2.

ಇಷ್ಟೆಲ್ಲ ಮಾಹಿತಿ ಕಲೆಹಾಕುತ್ತಲೆ ನನ್ನ ಮನಸು ಕುಣಿದಾಡತೊಡಗಿತ್ತು. ಅಲ್ಲಿ ಇಲ್ಲಿ ಚದುರಿದಂತೆ ಸಂಗ್ರಹಿಸಿದ್ದ ಮಾಹಿತಿಯನೆಲ್ಲ ಈಗ ‘ಆಸಂಗಿ ಅಗಸಿ ಬಾಗ್ಲು’ ಎಂಬ ಸುಂದರ ಕೊಲಾಜ್ ನನ್ನ ಮೈನವಿರೇಳಿಸಿತು. ಆ ಬಾಗಿಲು ಅಷ್ಟು ಚಿಕ್ಕದಿದ್ದರೂ ಅದಕ್ಕೆ ಅಲ್ಲಿಯ ಜನರೊಂದಿಗೆ ಬೆಳೆದಿದ್ದ ಅವಿನಾಭಾವ ಸಂಬಂಧ, ಅದರ ಸುತ್ತ ನಡೆದ ರೋಮಾಂಚಕ ಘಟನೆಗಳು, ನನ್ನ ಹೊಸ ಪ್ರಪಂಚದ ಕಣ್ಣಿಗೆ ಕಂಡ ವಿಚಿತ್ರ ವ್ಯಕ್ತಿತ್ವಗಳು, ಯಾವ ವಿಜಯನಗರ ಅಥವ ರೋಮ್ ಸಾಮ್ರಾಜ್ಯಗಳ ಐತಿಹ್ಯಕ್ಕೆ ಕಡಿಮೆ ಇಲ್ಲ ಎನಿಸಿತು. ನನ್ನ ಸಂಶೋಧನೆಗೆ ಭದ್ರ ತಳಪಾಯ ದೊರೆತಿತ್ತು. ಇಷ್ಟೇ ಅಲ್ಲ, ಇನ್ನೂ ಅಧ್ಯಯನ ಮಾಡಬೇಕಾಗಿದ್ದು ಸಾಕಷ್ಟಿದೆ.. ನನಗೆ ನಾನೇ ಸಮಾಧಾನ ಹೇಳಿಕೊಂಡೆ.

ಈ ವಿಜಯೋತ್ಸಾಹವನ್ನು ನಮ್ಮ ಮಾಸ್ತರರಿಗೆ ಹೇಳಿದ್ರೆ ಎಷ್ಟು ಸಂತಸಪಟ್ಟಾರು! ಅವತ್ತು, ನಾನು ಸೈನ್ಸ್ ವಿದ್ಯಾರ್ಥಿ, ನನಗ್ಯಾಕೆ ಇವೆಲ್ಲ ಅಂತ ಉದಾಸೀನ ತೋರಿಸಿದ್ರು. ಈಗ ನಾನು ಕಷ್ಟಪಟ್ಟು ಸಂಗ್ರಹಿಸಿದ ಈ ಮಾಹಿತಿ ಹಾಗೂ ನನ್ನ ಮುಂದಿನ ಅಧ್ಯಯನದ ವಿಚಾರ ಹೇಳಿದರೆ ಅಕ್ಷರಶಃ ಕುಣಿದೇಬಿಟ್ಟಾರು! ಮನಸು ಚಂಚಲಗೊಂಡಿದ್ದರೂ ಗೆದ್ದ ಸಂಭ್ರಮದಲ್ಲಿ ಧೃಡವಾಗಿತ್ತು. ಇದರ ಜೊತೆ ನನ್ನ ಮನೆಯವರೂ ಎಷ್ಟು ಖುಷಿಪಟ್ಟಾರು! ಯಾಕೆಂದರೆ ಇಷ್ಟು ದೂರ ಓದೋಕೆ ಹೋಗಿರೋನು ನಮ್ಮ ಮನೆತೆನದಲ್ಲಿ ನಾನೇ ಮೊದಲಿಗ. ನಾನೇನಾದ್ರೂ ಇಂಥ ಸಾಹಸಕ್ಕೆ ಕೈಹಾಕಿ ಯಶಸ್ವಿಯೆನಿಸಿಕೊಂಡರೆ ನನ್ನನ್ನ ತಲೆಮೇಲೇ ಹೊತ್ತುಕೊಂಡು ತಿರುಗುತ್ತಾರೆ!

ಓಡುತ್ತ ಮಾಸ್ತರರ ಮನೆಗೆ ಬಂದೆ. ಥಟ್ ಅಂತ ಬ್ರೇಕ್ ಬಿದ್ದಿತು ನನ್ನ ಧಾವಂತಕ್ಕೆ, ಮಾಸ್ತರರು ಮಗಳ ಮನೆಗೆ ಅಂತ ಒಂದು ವಾರ ಹುಬ್ಬಳ್ಳಿಗೆ ಹೋಗಿದ್ದರು. ‘ಛೆ!’ ಚಡಪಡಿಕೆ ಶುರುವಾಯಿತು. ಈ ಮಧ್ಯೆ ಅಪ್ಪ ಕೊಟ್ಟಿದ್ದ ಹೊಸ ಡೈರಿಯಲ್ಲಿ ನನ್ನ ಸಾಹಸಗಳನೆಲ್ಲ ನನ್ನದೇ ಆದ ಅರ್ಥಪ್ರಪಂಚಕ್ಕೆ ಹಿಗ್ಗಿಸಿಕೊಂಡು ಬರೆಯತೊಡಗಿದ್ದೆ. ಮುಂದೆ ಮಾಸ್ತರರು ಬಂದದ್ದು ಗೊತ್ತಾಗಿ ದೌಡಾಯಿಸಿ ಸೈಕಲ್ ಏರಿ ಹೋದೆ. ಪಡಸಾಲೆಯಲ್ಲಿ ಕಾಣಲಿಲ್ಲ. ‘ಸರ್’ ಅಂತ ಕೂಗಬೇಕು, ಅಷ್ಟರಲ್ಲಿ ಅವರು ಹೆಂಡತಿಯ ಜೊತೆ ಜಗಳವಾಡುತ್ತಿದ್ದುದು ಮೆಲ್ಲಗೆ ಕೇಳಿಸುತ್ತಿತ್ತು. ಛೇ! ಯಾಕೋ ನನ್ನ ಟೈಮೇ ಸರಿಯಿಲ್ಲ ಅಂತ ಪೆಚ್ಚಾಯಿತು. ನನ್ನ ಕಂಡವರೆ ಅದೇ ಮುನಿಸಿನಲ್ಲಿ ಹೊರಗೆ ಬಂದು, ‘ಬಾಪ್ಪಾ, ಯಾವಾಗ ಬಂದಿ ಧಾರವಾಡದಿಂದ?’ ಇಷ್ಟೊತ್ತು ಏನೂ ನಡೆದೇ ಇಲ್ಲ ಎನ್ನುವಂತೆ ನನ್ನ ಮುಂದೆ ತಮ್ಮ ಕಲಹ ತೋರಿಸಿಕೊಳ್ಳಬಾರದೆಂದು ನಿರ್ಲಿಪ್ತವಾಗಿ ಪ್ರಶ್ನಿಸಿದರು.

‘ಬಂದ ಒಂದ ವಾರ ಆತ್ರಿ. ನಿಮ್ಮ ಸಮಂದ ಕಾಯಾಕತ್ತಿದ್ನಿ’.

‘ಹ್ಮು.. ಹೇಳ, ಏನಾತು?’
ಸಂದರ್ಭದ ಅರಿವಿದ್ದರೂ ನನ್ನ ಮಾತಿಂದ ಅವರ ಮನಸಿಗೆ ಸಂತೋಷವಾಗಬಹುದೆಂದೆನಿಸಿ, ‘ಏನಿಲ್ರಿ ಸರ, ಅಗಸಿ ಬಾಗಲ ಬಗ್ಗೆ ಅವತ್ತ ನಿಮ್ಮನ್ನ ಕೇಳಿದ್ನ್ಯಲ್ಲಾ, ಈಗೊಂದ ಎರಡ ತಿಂಗಳಿಂದ ಅವರಿವರ ಕಡೆ, ಅಷ್ಟ ಯಾಕ್ರಿ, ಖುದ್ದಾಗಿ ನಾನ ಹೋಗಿ ಎಲ್ಲಾ ತಿಳ್ಕೊಂಡ ಬಂದನ್ರಿ..’

(ಆನಂದ ಈ. ಕುಂಚನೂರ)

‘ಫಟಾರ್’ ಅಂತ ನನ್ನ ಕೆನ್ನೆಗೆ ಬಿದ್ದ ಏಟು ಸಿಡಿಲೆರಗಿದಂತಾಗಿ ಕುಸಿದುಬಿಟ್ಟೆ! ಮಾಸ್ತರರು ಕೆಂಡಾಮಂಡಲವಾಗಿದ್ದರು. ‘ಎಷ್ಟ ಸಲ ಹೇಳಬೇಕ ನಿನಗ? ಈ ಊರ ಉಸಾಬರಿ ಬಿಟ್ಟ ಛೆಂದಂಗೆ ಓದಂದ್ರ ಏನ ಮಾಡಾಕತ್ತೇದಿ? ಇದನ ಕಲ್ಯಾಕ ಧಾರವಾಡಕ್ಕ ಸೈನ್ಸ್ ಓದಾಕ ಹೋಗೇದಿ?’ ಮಾಸ್ತರರು ಬೆಂಕಿ ಉಗುಳುತ್ತಿದ್ದರು. ಮಾಸ್ತರರ ಈ ಪ್ರತಿಕ್ರಿಯೆಯನ್ನು ಕನಸಲ್ಲೂ ಊಹಿಸಿರಲಿಲ್ಲ. ನನ್ನ ಮುಖ ಕೆಂಪಾಗಿ ಊದಿಕೊಂಡಿತು. ಕಣ್ಣೀರು ತಾನಾಗೇ ಕಪಾಳಗುಂಟ ಹರಿಯುತ್ತಿತ್ತು.

ಹತ್ತು ನಿಮಿಷದ ಮೌನಾಚರಣೆಯ ನಂತರ ಮಾಸ್ತರರು ಹತ್ತಿರ ಬಂದು ಕೂತರು. ಹೆಗಲ ಮೇಲೆ ಕೈಹಾಕಿ, ‘ನೋಡ ತಮ್ಮಾ, ಸಿಟ್ಟಿನ್ಯಾಗ ನಿನಗ ಹೊಡದ್ನಿ. ಮನಸಿಗಿ ಹಚ್ಗೋಬ್ಯಾಡ. ನಾ ಹೇಳಿದ್ದು ನಿನ್ನ ಒಳ್ಳೇದಕನ. ಇಷ್ಟ ದಿನಾ ನೀ ಏನ ಕೇಳಿದ್ರೂ ಇಲ್ಲ ಅಂತ ಹೇಳಿಲ್ಲ. ಆದ್ರ ಈ ಆಸಂಗಿ ಬಾಗ್ಲಂದ್ರ ನನ್ನ ಮೈಯೆಲ್ಲಾ ಉರಿತೈತಿ. ಎಲ್ಲಿಲ್ಲದ ಸಿಟ್ಟ ಬರ್ತೈತಿ. ಆ ಆಸಂಗಿ ಬಾಗ್ಲಾ..’ ಮಾಸ್ತರ ಕಣ್ಣು ತುಂಬಿ ಬಂದವು.

‘ಯಾಕ್ರಿ ಸರ್, ಏನಾತ್ರಿ?’ ಅವರ ಕಣ್ಣೀರಿಗೆ ಜೊತೆಯಾಗಿ ನುಡಿದೆ.

‘ಹೋಗ್ಲಿ ಬಿಡಪಾ, ಅದೊಂದ್ ದೊಡ್ಡ ಕಥಿ, ಅದನ್ನ ಹೇಳಿದ್ರ ಈಗೇನಾಗೂದೈತಿ?’ ಮತ್ತೆ ನನ್ನನ್ನು ಮೊಟಕುಗೊಳಿಸಲು ಹವಣಿಸುತ್ತಿದ್ದರು.

‘ಇರಲ್ರಿ ಸರ್, ನೀವ್ ಅದೇನಂತ ಇವತ್ತ ಹೇಳಬೇಕ್ರಿ. ನೀವ ಹೇಳೂತನ ನಾ ಇಲ್ಲಿಂದ ಹೋಗಾಂಗಿಲ್ಲ!’ ಪಟ್ಟು ಹಿಡಿದೆ. ಕಪಾಳಮೋಕ್ಷದ ಪ್ರತಿಫಲ ಬೇಡುವವನಂತೆ ಮಾಸ್ತರರಿಗೆ ಆಜ್ಞೆ ಮಾಡಿದ್ದೆ.

‘ಆಗ ನಾನು ಎಂ.ಎ. ಬಿ.ಎಡ್. ಮುಗಿಸಿ ಆಸಂಗಿ ಊರಿನ ಸರ್ಕಾರಿ ಸಾಲಿಗೆ ಮಾಸ್ತರ ಆಗಿ ಹೋಗಿದ್ನಿ. ಸಾಲ್ಯಂದ್ರ ಸಾಲಿ ಅಲ್ಲ ಅದ, ಪಡಸಾಲಿ. ಹಾಜರಿ ಪುಸ್ತಕದಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯಾ 40 ರಿಂದ 50. ಆದ್ರ ಬರ್ತಿದ್ದಿದ್ದು 10, 12 ಅಷ್ಟ. ಆಗ ನನಗಿನ್ನೂ ಬಿಸಿರಕ್ತ. ನನ್ನ ಆದರ್ಶ, ನನ್ನ ತತ್ವಗೋಳು ಯಾವಾಗ್ಲೂ ನನ್ನನ್ನ ಪ್ರಶ್ನೆಮಾಡ್ತಿದ್ದು. ಅದರಿಂದ ವಿಮುಖ ಆಗಬಾರ್ದಂಗ ತೆಲ್ಯಾಗ ಕುಣೀತಿದ್ದು. ಅವರಿವರ ಕಾದಂಬರಿ, ಸಿನಿಮಾ ನೋಡಿ ನನಗೂ ಅದ, ತೆಲಿಗೇರಿತ್ತ. ಶಿಕ್ಷಣದ ಗಂಧ ಗಾಳಿ ಗೊತ್ತಿರಲಾರ್ದ ಆ ಊರಾಗ ನಾನೂ ಏನರೆ ಸಾಧನೆ ಮಾಡಬಹುದು ಅನಿಸ್ತು. ಆಗ ಸಣ್ಣಂಗೆ ಎಲ್ಲಾರ್ನೂ ಮೊದಲ ಪರಿಚಯ ಮಾಡ್ಕೊಳ್ಳಾಕ್ಹತ್ತಿನಿ. ಅವರ್ನ ನನ್ನ ಕಡೆ ಎಳಕೊಂಡ, ಮಾತ್ನ್ಯಾಗ ಅವರ್ನ ತಮ್ಮ ಮಕ್ಕಳ್ನ ಸಾಲಿಗಿ ಕಳ್ಸೂವಂಗ ಮಾಡಾಕತ್ನಿ. ಇದರಿಂದ ಸ್ವಲ್ಪ ಹುಡುಗುರು ಸಾಲಿಗಿ ಬರುವಂಗಾದ್ರ. ಆದ್ರ ಗೌಡ್ರ ಮನ್ಯಾಗಿನ ಐದಾರ ಹುಡುಗುರು ಒಟ್ಟ ಬರ್ತಿದ್ದಿಲ್ಲ. ಅಲ್ಲ್ಯೂ ಹೋಗಿ ಕೇಳಿದ್ನಿ. ಮದಲಿದ್ದ ಮಾಸ್ತರೇನೋ ಹೇತರಾಡಿ ಮಾಡಿ ಹೋಗಿದ್ದಂತ. ಅದಕ್ಕ ಆ ಗೌಡಗ ಸಾಲಿ ಮಾಸ್ತರರ ಮ್ಯಾಲ ನಂಬಿಕಿನ ಇದ್ದಿದ್ದಿಲ್ಲ. ಇನ್ನ ಈ ಹುಡುಗುರರೆ ಏನ ಕಲತ ಗುಡ್ಡಾ ಕಡದ ಗ್ವಾಡಿ ಕಟ್ಟಾವ್ರದಾರು, ಅಂತ್ಹೇಳಿ ಎಲ್ಲಾರ್ನೂ ಮನ್ಯಾಗ ಇಟಗೊಂಡಿದ್ದ. ನನಗ, ಅಂವ್ಗ ಇದರ ಬದ್ದಲ ದೊಡ್ಡ ಚರ್ಚೇನ ನಡೀತ. ನಾನೂ ಎಲ್ಲಾ ಥರ ತಿಳಿಸಿ ಹೇಳಿದ್ನಿ. ಹಿಂಗ ಒಂದ ನಾಲ್ಕೈದ ಸಲ ಅವರ ಮನಿಗಿ ಎಡತಾಕಿದ್ನಿ.

ಅಷ್ಟರಾಗ ಗೌಡನ ತಂಗಿ ನನ್ನ ತುಡಗ್ಲೆ ನೋಡಾಕ ಸುರುಮಾಡಿದ್ಲ. ದಿನಾ ಆ ಹುಡುಗುರ್ನ ಸಾಲಿಗಿ ಬಿಟ್ಟ ಬರ್ತನಂತ ನೆವಾ ಹೇಳಿ ಬಂದ ನನ್ನ ನೋಡ್ಕೋತ ನಿಂತಬಿಡ್ತಿದ್ಲ. ಇದ ನನಗ ಗೊತ್ತಾದ್ರೂ ಸುಮ್ನ ಇದ್ನಿ. ಗೊತ್ತಿತ್ತ, ಇದೇನರೆ ಮುಂದವರದ್ರ ನನಗ ಉಳಿಗಾಲ ಇಲ್ಲಂತ. ಆದ್ರ ಇದರ ವಾಸನಿ ಜಲ್ದಿ ಗೌಡನ ಮೂಗಿಗೆ ಬಡಿತ. ಅವ್ನೂ ಅಕಿನ ದಿನಾ ತಡ್ಯಾಕ ನೋಡ್ತಿದ್ದ. ಅಕಿಗೆ ಎಲ್ಲಿಂದ ಧೈರ್ಯ ಬತ್ತೋ ಏನೊ, ಒಂದಿನ ನನ್ನ ಅಡ್ಡ ಹಾಕಿ ಕೇಳಿಬಿಟ್ಲ, ‘ನಮ್ಮಣ್ಣ ನನ್ನ ಯಾಂವೋ ಹೆಣ್ಣಬೋಳ್ಯಾಗ ಕಟ್ಟಾಕ ನಿಂತಾನ. ನನಗ ನಿಮ್ಮ್ಯಾಲ ಮನಸ ಐತಿ. ನೀವ ನನ್ನ ಮದಿವಿ ಆಗಬೇಕ..’. ಇದರ ಭವಿಷ್ಯ ಗೊತ್ತಿದ್ದ ನಾ ಸಮಾಧಾನ್ಲೆ ಅಕಿಗೆ ಇದೆಲ್ಲಾ ಆಗೂದಿಲ್ಲಂತ ಹೇಳಿ ಕಳಿಸಿದ್ನಿ. ಅಕಿಗೆ ಏನ ತಿಳಿತೊ ಏನೋ ರಾತೋ ರಾತ್ರಿ ತಮ್ಮ ತ್ವಾಟದಾಗಿನ ಬಾಂವಿಗೆ ಬಿದ್ಲ! ಹಂಗ ಏನೂ ಹೇಳ್ದ, ಕೇಳ್ದ ಇಕಿ ಜಿಂವಾ ಕೊಟ್ಟಿದ್ದಕ್ಕ ಮಾಸ್ತರನ ಕಾರಣ ಅಂತ್ಹೇಳಿ ಗೌಡಗ ಗೊತ್ತಾತ..’. ನಮ್ಮ ಮಾಸ್ತರರಿಗೆ ಇಂಥಾದ್ದೊಂದು ಭಯಾನಕ ಹಿನ್ನೆಲೆ ಇದ್ದುದನ್ನು ಕೇಳುತ್ತಲೇ ನನಗೆ ಅವರ ಮೇಲಿನ ಅಭಿಮಾನ, ಗೌರವಗಳು ಇಮ್ಮಡಿಯಾದವು. ‘ಮುಂದೇನಾತ್ರಿ?’ ಈಗ ಕಣ್ಣೀರು ಕರಗಿ ಕಣ್ಣಗಲಿಸಿ ಕೇಳಿದೆ.

‘ಮುಂದೇನಾಕ್ಕತಿ?.. ಪಂಚಾಯ್ತಿ ಕೂಡ್ಸಿದ್ರು. ಇದರಾಗ ನಂದೇನೂ ತಪ್ಪಿಲ್ಲ ಅಂತಂದ್ರೂ ಇಲ್ಲಾ, ಇದೆಲ್ಲಾ ನಿಂದ ಕಿತಾಪತಿ. ಆ ಹುಡಿಗಿ ತೆಲಿ ಕೆಡಿಸಿ ಅಕಿ ಬಾಳೇ ಹಾಳ ಮಾಡಿದಿ ಅಂತ್ಹೇಳಿ ನನ್ನ ಅಪರಾಧಿ ಮಾಡಿದ್ರ. ನೀ ನೋಡಿ ಬಂದ್ಯಲ್ಲ ಅಗಸಿ ಬಾಗ್ಲಾ, ಅದರ ಹಿಂದ ಒಂದ ಕಂಬಕ್ಕ ಕಟ್ಟಿ ನನ್ನ ಬಡದ್ರ. ಮುಂದ ಅಲ್ಲಿಂದನ ನನಗ ಬಹಿಷ್ಕಾರ ಹಾಕಿದ್ರು. ನನ್ನ ಕನಸಗೋಳಿಗೆಲ್ಲ ಬೆಂಕಿ ಬಿದ್ದ ಭವಿಷ್ಯದ ಸವಾಲಗೋಳ ಏನದಾವು ಅಂತ್ಹೇಳಿ ತಿಳಿಲಾರ್ದ ಹೊರಬಿದ್ನಿ. ಬರಬೇಕಾದ್ರ ಹಿಂದ ತಿರಗಿ ನೋಡಿದ್ನಿ, ಅಗಸಿ ಬಾಗಲದ ಆ ಚೌಕಟ್ಟಿನೊಳಗ ಎಲ್ಲಾ ಮಂದಿ ನನ್ನ ನೋಡಿ ನಗತಿದ್ರು, ಅಣಗಸ್ತಿದ್ರು, ಕೆಲವೊಬ್ರ ಮಣ್ಣ ತೂರಿದ್ರು.. ಆ ಘಟನೆ ನೆನಿಸ್ಕೊಂಡ್ರ ಈಗೂ ನನ್ನ ಕಾಲ ಪಾತಾಳಕ್ಕ ಎಳದಾಂಗ ಅನಸ್ತಾವ.. ಎದ್ಯಾಗ ಕಿಚ್ಚ ಹಚ್ಚಿದಂಗಾಗತೈತಿ..’. ಮಾಸ್ತರರು ಅಕ್ಷರಶಃ ಅಳೋಕೆ ಶುರುಮಾಡಿದ್ರು. ನನ್ನ ಮಾಸ್ತರರು ಎಂಥ ಮುಗ್ಧರು, ಪ್ರಾಮಾಣಿಕರು, ನನ್ನ ಬೌದ್ಧಿಕ ಹಾಗೂ ಭಾವನಾ ಪ್ರಪಂಚದ ಮಹಾಗುರುಗಳು. ಅಂಥವರಿಗೆ ಈ ಗತಿನಾ? ನನ್ನ ಕಣ್ಣ ತುಂಬಾ ವಿಶಾಲವಾಗಿ ಹರವಿಕೊಂಡಿದ್ದ ಅಗಸಿ ಬಾಗ್ಲು ಈಗ ಸೂಜಿ, ಅಲ್ಲ ಅದರ ಮೊನೆಯಷ್ಟು ಚಿಕ್ಕದೆನಿಸಿ ನನ್ನ ಕಣ್ಣಿಂದ ಇಳಿದುಹೋಯಿತು. ಬಹುಶಃ ಈಗ ಅಗಸಿ ಬಾಗಿಲ ಹಿಂದೆ ಸೂರ್ಯ ಮುಳುಗುತ್ತಿದ್ದಾನೆ. ದಿನವೂ ಮುಳುಗುತ್ತಾನೆ.