ನಮ್ಮ ಗ್ರಾಮೀಣ ಕತೆಗಾರರಿಗೆ ದೇವರು ಒಂದು ಮುಖ್ಯ ಸೌಕರ್ಯವಾಗಿ ಕಂಡಿದ್ದರೆ, ನಗರ ಕತೆಗಾರರಿಗೆ ಶಾಸ್ತ್ರೀಯ ಪರಿಜ್ಞಾನ ಸೌಕರ್ಯವಾಗಿ ಕಂಡಿದೆ. ಈ ಎರಡೂ ಸಂಪರ್ಕ ಅನುಕೂಲತೆಯಿಂದ ಅತ್ತಿಂದಲಿತ್ತ ಇತ್ತಿಂದಲತ್ತ ಪ್ರವಹಿಸಿರುವುದುಂಟು. ಇಂತಹ ಕಥೆಗಳಲ್ಲಿ ಅಸ್ತಿತ್ವದ ಪ್ರಶ್ನೆಗಳು, ಉತ್ತರಗಳು ಇವೆ. ಕಥನ ಶಿಲ್ಪದಲ್ಲಿ ಇವನ್ನು ಕಾಣಬಹುದು. ಗ್ರಾಮೀಣ ದೇವರುಗಳು ಆಚರಣೆಗಳು ನಂಬಿಕೆಯ ಮೂಲಕ ನಿಲ್ಲುತ್ತವೆ. ವೈಚಾರಿಕತೆಯಲ್ಲಿ ಅವು ಪ್ರತಿಮೆಯೋ ಸಂಕೇತವೂ ಆಗಿ ನಿಲ್ಲುವ ರೀತಿಯನ್ನು ಕನ್ನಡ ನಾಟಕ ಪರಂಪರೆಯಲ್ಲಿ ಮುಖ್ಯವಾಗಿ ಹಾಗೂ ಕಥನ ಪರಂಪರೆಯಲ್ಲಿ ಗಮನಾರ್ಹವಾಗಿ ಕಾಣುತ್ತೇವೆ.
ಇತ್ತೀಚೆಗೆ ಬಿಡುಗಡೆಯಾದ ʼನಾನು ಮೆಚ್ಚಿದ ನನ್ನ ಕಥೆʼ, ನಾಲ್ಕು ಸಂಪುಟಗಳ ಪುಸ್ತಕಕ್ಕೆ ಸಂಪಾದಕರಾದ ಸ.ರಘುನಾಥ ಹಾಗೂ ಆರ್‌. ವಿಜಯರಾಘವನ್‌ ಬರೆದ ಸಂಪಾದಕೀಯ ನಿಮ್ಮ ಓದಿಗೆ

ಒಗ್ಗೂಡಿಸುವ ಕಾರ್ಯದಲ್ಲಿ

ಸರಿಸುಮಾರು ಒಂದುನೂರ ಇಪ್ಪತ್ತೈದು ವರ್ಷಗಳ ಇತಿಹಾಸವನ್ನು ಕನ್ನಡ ಸಣ್ಣ ಕಥೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಖಲಿಸಿಕೊಳ್ಳಲಿದೆ. ದಾಖಲಿಸಿಕೊಳ್ಳಲಿದೆ ಎಂಬ ಮುಂದಾಗುವ ಸೂಚನೆಯ ಮಾತೇಕೆಂದರೆ 21ನೇ ಈ ಶತಮಾನದ ಎರಡನೇ ದಶಕದ ಕೊನೆಕೊನೆಯ ವರ್ಷಗಳವರೆಗಿನ ಸಾಹಿತ್ಯ ಚರಿತ್ರೆ ಬರೆಯುವುದಾಗಬೇಕಿದೆ. ಕನ್ನಡ ಆಧುನಿಕ ಸಣ್ಣಕಥೆ ಪ್ರಾರಂಭವಾದ 20ನೇ ಶತಮಾನಕ್ಕೆ ವರ್ತಮಾನದ ಕೊಂಡಿ ಬೆಸೆದು ಒಂದೂವರೆ ದಶಕ ದಾಟಿದೆ. ಕೊಂಡಿ ಬೆಸೆದುಕೊಂಡಿರುವುದನ್ನೇ ಆಧುನಿಕ ಕನ್ನಡ ಸಣ್ಣ ಕಥಾ ಪ್ರವಾಹವೆಂದು ಪರಿಭಾವಿಸಿದರೂ ಆ ಪ್ರವಾಹ ಕಾಲವಾಹಿನಿಯು ಮುಂದುವರಿಯುತ್ತಲೇ ಇರುವ ಹರಿವಾಗಿದೆ. ಈ ಹರಿವನ್ನು ಗುರುತಿಸಲು ಸಾಹಿತ್ಯಕ ಕಾಲ ಕನ್ನಡ ವಿಮರ್ಶೆಯನ್ನು ಕೂಗಿ ಕರೆಯುತ್ತಿದೆ. ಈ ಮಹತ್ಕಾರ್ಯ ಯಾರಿಂದ ನೆರವೇರಲಿದೆ ಎಂಬುದಕ್ಕೂ ಈ ಕಾಲ ಕಾಯುತ್ತಿದೆ.

ಈ ಕಾಯುವಿಕೆಗೆ ಕಾರಣ ಪರಸ್ಪರರ ಓದಿನಲ್ಲಿ ನಿರ್ಮಾಣವಾಗಿರುವ ಆಳ ಕಂದರ. ಈ ಸನ್ನಿವೇಶದಲ್ಲಿ ಇದು ಬಹುದೊಡ್ಡದೂ ಅಗತ್ಯವಾದುದೂ ಆದ ಕೆಲಸವಾಗಿದೆ.

(ಸ. ರಘುನಾಥ)

ಕನ್ನಡ ನವೋದಯ, ಪ್ರಗತಿಶೀಲ, ನವ್ಯ ಸಾಹಿತ್ಯಗಳ ಕಾಲಘಟ್ಟದಲ್ಲಿ ಬಂದ ಕತೆಗಾರರ ಸಂಖ್ಯೆಯ ಹಲವುಪಟ್ಟು ಅಧಿಕ ಕತೆಗಾರರು ಬಂಡಾಯ–ದಲಿತ ಸಾಹಿತ್ಯೋದಯ ಕಾಲದಲ್ಲಿ ಹುಟ್ಟಿಬಂದರು. ತುರ್ತು ಪರಿಸ್ಥಿತಿಯ ಅಂತ್ಯದ ಬಳಿಕ ಆದ ಭಾರತ ವಿಮೋಚನೆಯ ನಂತರವಂತೂ ಕನ್ನಡ ಸಾಹಿತ್ಯದ ತುಂಬ ಸರಳುಗಳು, ಬೂಟುಕಾಲುಗಳು ತುಂಬಿಹೋದವು. ಇಂಥ ಅಸೂಕ್ಷ್ಮ ಕಸುಬುಗಾರಿಕೆಯು ಬಂಡಾಯ-ದಲಿತ ಚಳವಳಿಗಳಲ್ಲಿ ಕೂಡಾ ಮುಂದುವರಿದುದನ್ನುನಾವು ಗಮನಿಸಬಹುದು. ಆದರೆ ಈ ಅಭಿವ್ಯಕ್ತಿಯ ಪ್ರಕ್ಷುಬ್ಧತೆಯ ನಡುವೆಯೂ ಕನ್ನಡದಲ್ಲಿ ಈ ಸರಣಿಗೆ ವಿರುದ್ಧವಾದ ಕತೆಗಳು ಸೃಷ್ಟಿಯಾದವು.

ಲಿಂಗಬೇಧ, ಜಾತಿಬೇಧ, ಅಂತಸ್ತಿನ ಬೇಧಗಳನ್ನು ಹಿನ್ನೆಲೆಯಾಗಿಟ್ಟು ಬರೆದುಕೊಂಡು ಬಂದ ಕತೆಗಾರರು ಅದನ್ನೊಂದು ಯುಗವೆಂದು ಹೆಸರಿಸಬಹುದಾದಷ್ಟು ಕಥೆಗಳನ್ನು ರಚಿಸಿದ್ದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಲ್ಲಗಳೆಯಲಾಗದ ವಿದ್ಯಮಾನ. ಇದರಿಂದ ಹೊಸ ಕತೆಗಾರರ ಅಭಿವ್ಯಕ್ತಿಗೆ ಅವಕಾಶ ದೊರೆತು ಸಣ್ಣ ಕಥೆಗಳ ಲೋಕ ವಿಸ್ತರಿಸಿಕೊಳ್ಳಲು ಕಾರಣವಾಯಿತು.

ಯಾವೆಲ್ಲ ಭಾಷೆಗಳು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಜೀವಂತ ಹರಿವನ್ನು ಉಳಿಸಿಕೊಂಡಿರುತ್ತದೆಯೋ ಆ ಎಲ್ಲಭಾಷೆಗಳಲ್ಲಿಯೂ ಇದು ಸಂಭವವೇ ಆದುದು. ಇದು ಕನ್ನಡಕ್ಕಷ್ಟೇ ಸೀಮಿತವಾದುದಲ್ಲ.

ಕಾವ್ಯದಲ್ಲಿ ಉಕ್ಕಿ ಹೊನಲಾಗಿ ಹರಿದ ನವೋದಯ ಕತೆಗಾರಿಕೆಯಲ್ಲೂ ಬಹು ಮುಖ್ಯ ನದಿಯಾಗಬಹುದೆಂಬ ನಿರೀಕ್ಷೆಯಲ್ಲಿರುವಾಗಲೇ ತನ್ನ ಏರುಗತಿಯನ್ನು ತಗ್ಗಿಸಿಕೊಳ್ಳುತ್ತ ಹೋಗಿ ಪ್ರಗತಿಶೀಲ ಮಳೆಗಾಲದ ಉಪನದಿಯಾಗಿ ಸೇರಿಕೊಂಡು ಹರಿಯಿತು. ಆಗ ಹುಟ್ಟಿದ ನವ್ಯವು ಒಂದು ಸ್ವತಂತ್ರ ನದಿಯಾಗಿ ಹರಿಯುತ್ತ ಬಂದಿದೆ. ನವ್ಯೋತ್ತರವೆಂಬ ಹೆಸರಿನ ದೋಣಿಯಲ್ಲಿ ಈ ಎಲ್ಲದರ ಯಾನ ಮುಂದುವರೆದರೂ ಇದೇ ಅಭಿಧಾನದ ಮುಂದುವರಿಕೆಯಾಗಲಿಲ್ಲ. ಬದಲಿಗೆ ಅದು ಈವರೆಗಿನ ಕಥನ ಪರಂಪರೆಯ ಎಲ್ಲ ಸತ್ತ್ವವನ್ನೂ ಅರಗಿಸಿಕೊಂಡು ಬೆಳೆಯುತ್ತಲಿದೆ.

ಹೀಗೆ ಚಳವಳಿಗಳ ಪ್ರವಾಹದ ಸೆಳವು ಕುಗ್ಗುತ್ತ ಹೋದಂತೆಲ್ಲ ಸಾಹಿತ್ಯ ಹೊಸದಿಕ್ಕನ್ನು ಕಂಡುಕೊಳ್ಳಲು ಹುಡುಕಾಟ ನಡೆಸುತ್ತದೆ. ಹೀಗೆ ವಿದ್ಯಮಾನಗಳು ಘಟಿಸುತ್ತಿದ್ದಾಗ ಜಾಗತೀಕರಣದ ಬಿರುಗಾಳಿ ಬೀಸಿ ಬಂದಿತು. ಚದುರಿದ ಆಲೋಚನೆಗಳನ್ನು ಇದು ವ್ಯಾಪಾರೀಕರಣಗೊಳಿಸಿತು. ವಾದ, ಸಿದ್ಧಾಂತಗಳಿಗೆ ಧ್ವನಿಕೊಡುತ್ತಿದ್ದ ಅಕ್ಷರವನ್ನು ಕಾಂಚಾಣದ ಝಣತ್ಕಾರ ತನ್ನದಾಗಿಸಿಕೊಂಡಿತು. ಅಕ್ಷರ ಮಾರಾಟಕ್ಕೆ ನಾವು ಸಿದ್ಧರಾದೆವು. ಕೃಷಿಯೂ ಸೇರಿದಂತೆ ಸಾಹಿತ್ಯವೂ ವಾಣಿಜ್ಯೀಕರಣಕ್ಕೆ ಒಳಗಾದುದೂ ಉಂಟು. ಕೆಲವು ಬರಹಗಾರರನ್ನು ಹೊರತುಪಡಿಸಿದರೆ ಅನೇಕರು ಈ ಪರಿಣಾಮದಿಂದ ಹೊರಬರುವ ಪ್ರಯತ್ನದಲ್ಲಿ ಹುಡುಕಿಕೊಂಡುದು ‘ಇಸಂ’ಗಳ ಆಚೆಗೆ ಇರುವ ಸ್ವಾತಂತ್ರ್ಯವನ್ನು. ಹೊಸ ತಲೆಮಾರಿನ ಕತೆಗಾರರಿಗೂ ಇದು ಮಾರ್ಗವಾಯಿತು. ಸ್ವತಂತ್ರ ಮನೋಭಾವಕ್ಕೆ ದಕ್ಕಿದ ಜಾಗತೀಕರಣದ ಅನುಭವ, ಭಿನ್ನ ಸಾಮಾಜಿಕ ಪ್ರಜ್ಞೆ, ಗ್ರಹಿಕೆಯ ತೆಕ್ಕೆಗೆ ಬಂದ ರಾಜಕೀಯ, ಸಾಮಾಜಿಕ, ಆರ್ಥಿಕ ಜೀವವಿಧಾನಗಳು, ಶಿಕ್ಷಣ ಕಟ್ಟಿತಂದ ಜ್ಞಾನ-ವಿಜ್ಞಾನ ಇವರಲ್ಲಿ ವಿಶ್ವಪ್ರಜ್ಞೆಯನ್ನು ವಿಸ್ತರಿಸಿತಷ್ಟೇ ಅಲ್ಲ, ಪಶ್ಚಿಮದ ಪ್ರಭಾವದ ಎಲ್ಲ ಖಾಸಗೀ ಅನುಭವಗಳಿಗೂ ಮಾತು ದೊರೆಯಲಾರಂಭಿಸಿತು. ಮಾತಿಗಿದ್ದ ಮುಜುಗುರ ಕಡಿಮೆಯಾಯಿತು. ಈ ಎಲ್ಲ ಅರಿವನ್ನು ಈ ತಲೆಮಾರಿನ ಲೇಖಕರು ದಕ್ಕಿಸಿಕೊಳ್ಳುತ್ತ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳತೊಡಗಿದರು. ಕತೆಗಾರರಿಗೆ ಇದು ಶಕ್ತಿದ್ರವ್ಯವಾಯಿತು. ಇಂದು ಕನ್ನಡ ಸಣ್ಣ ಕಥೆಯೆಂದರೆ ಕತೆಗಾರನ ಬದುಕು ಮತ್ತು ಜಗತ್ತಿನ ಜೀವ ನೆಲೆಗಳ ಹುಡುಕಾಟ ಹಾಗು ಮೌಲ್ಯಗಳ ಪ್ರತಿಪಾದನೆ. ಇದಕ್ಕೆ ಉರವಲು ಸ್ವತಂತ್ರ ಮನೋಭಾವ, ಮುಕ್ತತೆ, ಹಾಗು ಅಭಿವ್ಯಕ್ತಿಯ ಲವಲವಿಕೆ. ಇದರೊಟ್ಟಿಗೆ ಕಂಡುಬರುವುದೆಂದರೆ ದೇವನೂರ ಮಹದೇವರು ಹೇಳಿದ ‘ನೆಲಕ್ಕೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಕರ ಎಂದಿಗೂ ವ್ಯರ್ಥವಲ್ಲ’ ಎಂಬ ನುಡಿಯಲ್ಲಿ ಸಾಮಾನ್ಯವೆನಿಸುವ, ಆದರೆ ಚಿಂತನೆಯಲ್ಲಿ ಅಸಾಮಾನ್ಯವೆನಿಸುವ ಅರಿವಿನಲ್ಲಿನ ನಂಬಿಕೆ.

ಬೇಂದ್ರೆ ಹೇಳಿದಂತೆ ಕನ್ನಡ ಕಾವ್ಯ ಹುಟ್ಟಿದ್ದು ‘ನಲ್’ಧಾತುವಿನಿಂದ ಎಂಬುದು ಸತ್ಯ. ಇದು ಕನ್ನಡ ಸಣ್ಣ ಕಥೆಗಳಿಗೂ ಅನ್ವಯವಾಗುವ ಮಾತು. ಮಾಸ್ತಿಯವರ ಸಣ್ಣ ಕಥೆಗಳು ಈ ಮಾತನ್ನು ಸಮರ್ಥಿಸುತ್ತವೆ. ಅವರು ತೋರಿದ ಕಥನ ಸೌಖ್ಯವನ್ನು ಇಂದಿನ ಕಥೆಗಳಲ್ಲಿಯೂ ಮುಂದುವರಿಕೆಯಾಗಿ ಕಾಣುತ್ತೇವೆ. ಬದುಕಿನ ಹಿತವನ್ನೇ ಯುವ ಕತೆಗಾರರ ಕಥೆಗಳಲ್ಲಿ ಕಾಣುತ್ತೇವೆ. ಹಿತವೆಂಬುದರಲ್ಲಿ ಸಮಾನತೆಯೂ ಇದ್ದುದ್ದೇ. ಸೌಖ್ಯ ಮತ್ತು ಹಿತಕ್ಕೆ ಲಿಂಗ ಭೇದವಿಲ್ಲ. ಇದು ಸಮಾನತೆಯ ಬೀಜಸಾರ. ವ್ಯಷ್ಟಿ, ಸಮಷ್ಟಿಗಳೆರಡರಲ್ಲಿಯೂ ಇದು ಇದ್ದುದೇ. ಇದು ಮೂಲವಾಗಿ ಅಂದಿಂದಿನ ಕಥೆಗಳಲ್ಲಿ ವ್ಯಕ್ತಿಗತವಾದುದು ಸಾಮಾಜಿಕವೂ ಆಗಿ ಪರಿಣಮಿಸುತ್ತಿದೆ. ಇಂತಹ ಕಥೆಗಳು ಈ ಸಂಕಲನದಲ್ಲಿವೆ.

ಕಾವ್ಯ, ಕಥೆ, ಕಾದಂಬರಿ, ನಾಟಕ, ಹೀಗೆ ವಿಭಾಗಿಸುವುದಕ್ಕಿಂತ ಒಟ್ಟು ಸಾಹಿತ್ಯ ಸೃಜನಗೊಳ್ಳುವುದು ಲೇಖಕನಿಂದಲೇ ಆದರೂ ಅದು ಜನಜೀವನದ್ದು. ಅದು ‘ನನಗಾಗಿ’ ಎಂದರೆ ಅದಕ್ಕೆ ಕಾಲದಲ್ಲಿ ಜೀವನ ಇರದು. ಇದನ್ನು ಕನ್ನಡ ಕತೆಗಾರರು ಬಲ್ಲವರಾಗಿದ್ದಾರೆ. ವಚನಕಾರರು ಹೆಚ್ಚಿಗೆ ಬಳಕೆಗೆ ತಂದ ‘ಹದುಳತನ’ದ ಹಂಬಲವನ್ನು ನಮ್ಮ ಕತೆಗಾರರು ಬಿಟ್ಟುಕೊಟ್ಟಿದ್ದಿಲ್ಲ. ಇದು ಏಕಕಾಲದಲ್ಲಿ ವೈಯಕ್ತಿಕವೂ ಹೌದು, ಸಾಮಾಜಿಕವೂ ಹೌದು. ಇದು ಕನ್ನಡಕತೆಗಾರರು ಕಂಡುಕೊಂಡಿರುವ ನೆಲೆ. ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಕತೆಗಾರರು ಈ ನೆಲೆಯಲ್ಲಿಯೇ ಕಥೆ ಕಟ್ಟುಗಾರಿಕೆಯನ್ನು ತೋರಿದ್ದಾರೆ. ಈ ನೆಲೆಯಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್, ಮುಂತಾದವರ ಚಿಂತನೆಗಳನ್ನು ಅಷ್ಟೇ ಅಲ್ಲ, ಹೊಸ ಚಿಂತನೆಯನ್ನೂ, ಸ್ತ್ರೀವಾದದಂತಹ ಬೀಜಗಳನ್ನೂ ಉಳಿಸಿಕೊಂಡಿದ್ದಾರೆ.

ಮಾನವೀಯತೆ, ಅದರೊಂದಿಗಿನ ಸಂಬಂಧಗಳನ್ನು ಕನ್ನಡ ಸಾಹಿತ್ಯ ಬಹುದೊಡ್ಡದಾಗಿ ಸ್ವೀಕರಿಸಿದ್ದು ಹೊಸ ಸಂಗತಿಯೇನಲ್ಲ. ಆದರೆ ಅದು ನವೋದಯದ ಆದರ್ಶಯುಗದಿಂದ ಇಂದಿಗೂ ಮುಂದುವರೆದಿದೆ. ಮುಂಬರಿಯುವ ಲಕ್ಷಣಗಳು ಈ ಅತ್ಯಾಧುನಿಕ ಕಾಲದಲ್ಲಿಯೂ ಕಂಡುಬರುತ್ತಿದೆ. ಅಂದರೆ ಇದು ಸಾರ್ವಕಾಲಿಕ ಮೌಲ್ಯವೆಂದು ಕನ್ನಡ ಸಾಹಿತ್ಯಲೋಕ ಸರ್ವಾಂಗೀಕಾರವಾಗಿ ಸ್ವೀಕರಿಸಿದೆ. ಇದರ ನಿರಂತರ ನೋಟವಿರುವುದು ವಿಶ್ವಮಾನವತೆಯಲ್ಲಿ ಎಂಬುದು ಈ ಕಾಲ ಘಟ್ಟದ ಕತೆಗಾರರಲ್ಲಿಯೂ ಕಂಡುಬರುತ್ತಿದೆ.

ಮೊದಲ ಜಾಗತಿಕ ಯುದ್ಧ ಈ ತಿಳಿಯನ್ನು ಕಲಕಿತು. ಎರಡನೇ ವಿಶ್ವಸಮರ ಈ ಭಾವಮೌಲ್ಯವನ್ನು ಹಿಂಸಿಸಿತು. ಆದರೆ ಕನ್ನಡವೂ ಒಳಗೊಂಡ ಲೋಕಸಾಹಿತ್ಯ ಆ ಆತಂಕ ಹಾಗು ಹಿಂಸೆಗಳನ್ನು ಮೆಟ್ಟಿ ಮಾನವೀಯತೆಯನ್ನು ಸ್ಥಾಪಿಸಿತು. ಯುದ್ಧ ಬದುಕಲ್ಲ. ಅದು ಮಾನವೀಯತೆಯ ಹಿಂಸಕ ಎಂಬುದನ್ನು ಯುದ್ಧರಾಜಕೀಯದ ಮನಸ್ಸಿನಲ್ಲಿ ಕನ್ನಡ ಕಥನ ಪರಂಪರೆ ನಾಟಿತು ಎಂದು ಎದೆತಟ್ಟಿ ಸಾರಲಾಗದು. ಆದರೂ ತನ್ನ ಮಿತಿಯಲ್ಲಿ ಅದು ಶಾಂತಿಯುತ ಜೀವನದತ್ತ ಜಗತ್ತು ಮುಖ ಮಾಡುವಂತೆ ಪ್ರಯತ್ನ ಮಾಡಿತು. ಈ ಶಾಂತಿಪ್ರಿಯತೆಯ ಅಮೃತವಾಹಿನಿ ಆ ಈ ಕಾಲದ ಕನ್ನಡ ಸಣ್ಣಕಥೆಗಳ ಮೂಲಕವೂ ಹರಿಯುತ್ತಲೇ ಇದೆ.

ನವ್ಯವು ಒಂದು ಸ್ವತಂತ್ರ ನದಿಯಾಗಿ ಹರಿಯುತ್ತ ಬಂದಿದೆ. ನವ್ಯೋತ್ತರವೆಂಬ ಹೆಸರಿನ ದೋಣಿಯಲ್ಲಿ ಈ ಎಲ್ಲದರ ಯಾನ ಮುಂದುವರೆದರೂ ಇದೇ ಅಭಿಧಾನದ ಮುಂದುವರಿಕೆಯಾಗಲಿಲ್ಲ. ಬದಲಿಗೆ ಅದು ಈವರೆಗಿನ ಕಥನ ಪರಂಪರೆಯ ಎಲ್ಲ ಸತ್ತ್ವವನ್ನೂ ಅರಗಿಸಿಕೊಂಡು ಬೆಳೆಯುತ್ತಲಿದೆ.

‘ನಾನು ಮೆಚ್ಚಿದ ನನ್ನ ಕಥೆ’ಯಲ್ಲಿರುವ ಕಥೆಗಳನ್ನು ಗ್ರಾಫ್‍ ನ ಮೇಲೆ ತೋರಿಸುವುದಾದರೆ ಮೂಡುವ ಆ ರೇಖೆ ಕಥಾ ಪ್ರಕ್ರಿಯೆಯಲ್ಲಿ ಕನ್ನಡ ನುಡಿ ಸಾಧಿಸುತ್ತಿರುವ ವಿಕಾಸವನ್ನು ತೋರಿಸುತ್ತದೆ. ಅದರಲ್ಲಿ ಅದು ದೇಶಕಾಲ ಪರಿಸ್ಥಿತಿಗಳನ್ನು ಕಾಲಕಾಲಕ್ಕೆ ಪ್ರತಿಬಿಂಬಿಸುವುದನ್ನು ಕಾಣುತ್ತೇವೆ. ಕತೆಗಾರರು ತಮ್ಮ ಕಥನದಲ್ಲಿ ಸಾಧಿಸಿದ ಹಾಗು ಸಾಧಿಸುತ್ತಿರುವ ವಿಕಾಸವೂ ಅಲ್ಲಿ ಕಾಣದಿರದು. ತನ್ನ ಯಾವ ಕಥೆ ಮೆಚ್ಚುಗೆಯ ಮೂಲಕ ತನ್ನನ್ನು ಪ್ರತಿನಿಧಿಸುತ್ತದೆ ಎಂದು ಕತೆಗಾರರು ತಿಳಿದಿರುವುದರಿಂದ ಆ ಕಥೆ ತನ್ನ ಪ್ರಾತಿನಿಧಿಕ ಕಥೆಯಾಗಿಯೂ ಕಂಡಿರುವ ಸಾಧ್ಯತೆಯಿದೆ. ಅಥವಾ ಈ ಮೂಲಕ ತನ್ನ ಪ್ರಾತಿನಿಧಿಕ ಕಥೆಯಾಗಬಹುದಾದ ಕಥೆಯತ್ತ ಸಾಗಲು ಇದು ಪ್ರೇರಕವಾದರೂ ಹೆಚ್ಚಲ್ಲ. ಅಂದರೆ ಈ ಮೂಲಕ ತನ್ನ ಕಥನ ವಿಕಾಸವನ್ನು ಕಂಡುಕೊಳ್ಳಬಹುದಾಗಿದೆ. ಹೇಗಾದರೂ ಕನ್ನಡ ಕಥಾ ಲೋಕಕ್ಕೆ ಲಾಭವೇ.

ನಮ್ಮ ಗ್ರಾಮೀಣ ಕತೆಗಾರರಿಗೆ ದೇವರು ಒಂದು ಮುಖ್ಯ ಸೌಕರ್ಯವಾಗಿ ಕಂಡಿದ್ದರೆ, ನಗರ ಕತೆಗಾರರಿಗೆ ಶಾಸ್ತ್ರೀಯ ಪರಿಜ್ಞಾನ ಸೌಕರ್ಯವಾಗಿ ಕಂಡಿದೆ. ಈ ಎರಡೂ ಸಂಪರ್ಕ ಅನುಕೂಲತೆಯಿಂದ ಅತ್ತಿಂದಲಿತ್ತ ಇತ್ತಿಂದಲತ್ತ ಪ್ರವಹಿಸಿರುವುದುಂಟು. ಇಂತಹ ಕಥೆಗಳಲ್ಲಿ ಅಸ್ತಿತ್ವದ ಪ್ರಶ್ನೆಗಳು, ಉತ್ತರಗಳು ಇವೆ. ಕಥನ ಶಿಲ್ಪದಲ್ಲಿ ಇವನ್ನು ಕಾಣಬಹುದು. ಗ್ರಾಮೀಣ ದೇವರುಗಳು ಆಚರಣೆಗಳು ನಂಬಿಕೆಯ ಮೂಲಕ ನಿಲ್ಲುತ್ತವೆ. ವೈಚಾರಿಕತೆಯಲ್ಲಿ ಅವು ಪ್ರತಿಮೆಯೋ ಸಂಕೇತವೂ ಆಗಿ ನಿಲ್ಲುವ ರೀತಿಯನ್ನು ಕನ್ನಡ ನಾಟಕ ಪರಂಪರೆಯಲ್ಲಿ ಮುಖ್ಯವಾಗಿ ಹಾಗೂ ಕಥನ ಪರಂಪರೆಯಲ್ಲಿ ಗಮನಾರ್ಹವಾಗಿ ಕಾಣುತ್ತೇವೆ. ಇದಕ್ಕೆ ಮಗ್ಗುಲಿನಲ್ಲಿ ಬರುವ ಚಿಂತನೆಗಳು ಕಥೆಗಳ ವೈವಿಧ್ಯತೆಗೆ ಕಾರಣವಾಗುವುದನ್ನು ಅಲ್ಲಗಳೆಯುವ ಹಾಗಿಲ್ಲ.

ಗ್ರಾಮೀಣ ದೈವ ಹಾಗು ವಿಜ್ಞಾನ ಆಧಾರವೇ ಆಗುತ್ತ ಸಾಗಿವೆ. ಇಂದಿನ ಬೆಳೆ ಬಾಚುವ ಸಂಸ್ಕೃತಿಗೂ ಗ್ರಾಮೀಣ ಕೃಷಿ ಸಂಸ್ಕೃತಿಗೂ ನಡುವಿನ ಭಿನ್ನತೆ ಇರುವುದು ಇಲ್ಲಿಯೇ. ಇದನ್ನು ಕಥೆಗಳು ಸ್ಪಷ್ಟವಾಗಿ ಗುರುತಿಸುತ್ತವೆ.

ಜಾಗತೀಕರಣ ಪೂರ್ವದ ಹಾಗು ನಂತರ ಹುಟ್ಟಿಕೊಂಡ ಆಧುನಿಕ ಸಿದ್ಧಾಂತ, ವಾದ ಇಂತಹವುಗಳು ಎತ್ತುವ ಪ್ರಶ್ನೆಗಳು ಮತ್ತು ಮೂಲ ಸಂಸ್ಕೃತಿ ಹಾಗು ಸ್ಮೃತಿಗಳು ಎತ್ತುವ ಪ್ರಶ್ನೆಗಳು ಭಿನ್ನ ನೆಲೆಗಳಿಂದ ಬಂದವು. ಉತ್ತರಗಳೂ ಅಷ್ಟೇ. ಇವು ಸಮನ್ವಯಗೊಳ್ಳುವುದು ಸಾಮಾಜಿಕ ಸೌಖ್ಯದ ಆಕಾಂಕ್ಷೆಗಳಲ್ಲಿ. ಅಂದರೆ ಕಥೆಗಳು ಯಾವ ವಾದ, ಚಳವಳಿಯ ಮಾರ್ಗದ್ದೇ ಆಗಿರಲಿ ಅದು ಸಮಾನತೆಯ ಜೀವಪರ ನೆಲೆಯಲ್ಲಿ ಪರಸ್ಪರ ಬೆಂಬಲಿತವಾಗಿ ನಿಲ್ಲುತ್ತವೆ ಎಂಬುದಕ್ಕೆ ಅನೇಕ ರುಜುವಾತುಗಳು ಇಲ್ಲಿ ಸಂಕಲಿತವಾಗಿರುವ ಕಥೆಗಳಲ್ಲಿವೆ.

ಮಹಿಳೆಯರು, ಆದಿವಾಸಿ-ಅಲೆಮಾರಿ-ಜನಾಂಗದವರು, ಕೆಳಮಧ್ಯಮ ವರ್ಗದವರು ಶಿಕ್ಷಣದ ಮೂಲಕ, ಇಲ್ಲವೆ ಬೇರೆಯದಾದ ಜ್ಞಾನಾವರಣದ ಮೂಲಕ ಆಧುನಿಕತೆಯತ್ತ ತಮ್ಮ ಬದುಕು ಮತ್ತು ಆಲೋಚನೆಗಳನ್ನು ಕೊಂಡೊಯ್ಯುತ್ತಿದ್ದಾರೆ. ಇಲ್ಲಿನ ಜೀವನಾನುಭವಗಳನ್ನು ಹೇಳಿಕೊಳ್ಳುವ ಕಥೆಗಳಲ್ಲಿ ಜಾನಪದ, ಗ್ರಾಂಥಿಕ, ಈ ಎರಡರ ನಡುವಿನ ಶೈಲಿಗಳನ್ನು ಸಮನ್ವಯಿಸಿಕೊಂಡು ಕಥನಿಸುವುದು ಕನ್ನಡ ಕಥೆಗಳ ವೈಶಿಷ್ಟ್ಯವೆಂದು ಗುರುತಿಸಲು ಅನುಕೂಲ ಮಾಡಿಕೊಡುತ್ತಿವೆ. ಇದನ್ನು ಸಾಂಸ್ಕೃತಿಕ ಸಮನ್ವಯವೆಂದು ಹೇಳಬಹುದೆ ಎಂಬುದು ಆಲೋಚಿಸಬೇಕಾದ, ಚರ್ಚಿಸಬೇಕಾದ ವಿಚಾರ. ಇದಕ್ಕೆ ಈ ಸಂಕಲನ ಒಂದಿಷ್ಟಾದರೂ ನೆರವಾದುದಾದರೆ ಆ ಮಟ್ಟಿಗಿನ ಸಫಲತೆ ಇಲ್ಲಿನದೆಂದು ಭಾವಿಸುತ್ತೇವೆ.

ಸ್ತ್ರೀವಾದ, ಸ್ತ್ರೀಸಂವೇದನೆ, ಮಹಿಳಾ ಸಾಹಿತ್ಯ(ಕಥೆ) ಎಂಬ ವಾದಗಳು ಇರುವುದಾದರೂ ಕತೆಯಾಗಿ(ಸಾಹಿತ್ಯವಾಗಿ) ಪರಿಭಾವಿಸಿದಾಗ ಅವು ಕಥೆಗಳೇ ಹೊರತು ಮತ್ತೊಂದಲ್ಲ. ಪುರುಷ ಸಂವೇದನೆ ಮಹಿಳೆಯರಲ್ಲಿಯೂ ಸ್ತ್ರೀ ಸಂವೇದನೆ ಪುರುಷರಲ್ಲಿಯೂ ಇದ್ದುದೆ ಆಗಿದೆ. ತನ್ನ ಹೆಸರನ್ನು ಗೌಪ್ಯಮಾಡಿ, ಹೆಣ್ಣಿನ ಹೆಸರಿನಲ್ಲಿ ಬರೆದಾಗ ಅಥವಾ ಹೆಣ್ಣು ಗಂಡಸಿನ ಹೆಸರಿನಲ್ಲಿ ಬರೆದಾಗ ಕಂಡ ಸಂವೇದನೆಯು ಹೆಸರು ಪ್ರಕಟವಾದಾಗ ಬದಲಾಗುವುದಾದರೂ ಹೇಗೆ? ಅವಕಾಶ, ಅನುಕೂಲ, ವಿಮರ್ಶೆ ಇಂಥವಲ್ಲಿ ಸಂಪೂರ್ಣ ಸಮಾನತೆ ಇರಬೇಕಷ್ಟೆ. ಇದಂತೂ ನಮ್ಮ ಮಹಿಳಾ ಕತೆಗಾರರರಿಗೆ ಇಂತಹ ಮಾತಿನ ಯಾವ ರಿಯಾಯತಿಗಳ ಅಗತ್ಯವೂ ಇಲ್ಲವೆಂಬುದು ಈ ಸಂಕಲನದ ಕಥೆಗಳು ಗಟ್ಟಿಯಾಗಿ ಸಾರುತ್ತವೆ.

ಕನ್ನಡ ಆಧುನಿಕ ಹಾಗು ಅದರ ಪೂರ್ವ ಕಥಾ ಪರಂಪರೆ ಹಾಗು ಕಥನ ಸಂಸ್ಕಾರಗಳನ್ನು ನಮ್ಮ ಕಥೆಗಾರರು ಮೈಗೂಡಿಸಿಕೊಂಡಿದ್ದಾರೆ ಎಂಬುದಕ್ಕೆ ಇಲ್ಲಿನ ಬಹುತೇಕ ಕತೆಗಾರರ ಕಥೆಗಳು ಪ್ರತ್ಯಕ್ಷ ಸಾಕ್ಷಿಗಳಾಗಿ ನಿಲ್ಲುತ್ತವೆ. ಈ ಪರಂಪರೆಯ ಅರಿವು ಮತ್ತು ಸಂಸ್ಕಾರ ಇತ್ತೀಚಿನ ಕತೆಗಾರರಲ್ಲಿ ಕುಡಿಯೊಡೆಯುತ್ತಿರುವುದನ್ನು ಅವರ ಕಥೆಗಳು ತೋರಿಸಿಕೊಡುತ್ತಿವೆ.

ಈಹೊತ್ತಿನಲ್ಲಿ ಉತ್ತರ ಕರ್ನಾಟಕದ ಪ್ರಾಂತ್ಯದಲ್ಲಿ ಕಥಾ ಪ್ರಕಾರದಲ್ಲಿ ಅದ್ಭುತ ಬೆಳೆವಣಿಗೆ ಆಗುತ್ತಿರುವುದನ್ನು ಅಲ್ಲಿನ ಕತೆಗಾರರ ಕಥೆಗಳ ಮೂಲಕ ಗುರುತಿಸಬಹುದು. ಇಲ್ಲಿನ ಬಹಳಷ್ಟು ಕಥೆಗಾರರ ಕಥೆಗಳಲ್ಲಿ ಸಾಮಾಜಿಕ ಮತ್ತು ವೈಚಾರಿಕ ಸಂಘರ್ಷ ಹೆಚ್ಚಿಗೆ ಕಂಡುಬರುತ್ತದೆ. ಇಲ್ಲಿನ ಕಥೆಗಳಲ್ಲಿ ಅವು ವ್ಯಾಪಕವಾಗಿ ವ್ಯಕ್ತವಾಗಲು ಹಿನ್ನೆಲೆಯಾಗಿರುವ ರಾಜಕೀಯ ಹಾಗು ಅವಕಾಶಗಳಿಂದ ವಂಚಿತವಾಗಿರುವುದು ಮುಖ್ಯ ಕಾರಣವಾಗಿದೆ ಮತ್ತು ಅಲ್ಲಿನ ರೂಢಿಗತ ನಂಬಿಕೆಗಳು ಅಚಲವಾಗಿರುವುದೇ ಆಗಿದೆ. ಪರಿವರ್ತನೆಯ ಗಾಳಿಗೆ ಆ ಸಂಸ್ಕೃತಿ ಪ್ರತಿರೋಧವನ್ನು ಒಡ್ಡುತ್ತಿರುವುದನ್ನೂ, ಆ ಪ್ರತಿರೋಧದ ಕೋಟೆಯನ್ನು ಒಡೆಯಲು ಹೊಸ ಕಥೆಗಾರರು ಯತ್ನಿಸುತ್ತಿರುವುದನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು.

(ಆರ್‌. ವಿಜಯರಾಘವನ್)

ಹಾಗೆ ನೋಡಿದರೆ ರಾಜಧಾನಿಯ ಸೆರಗಿಗೆ ಬರುವ ಪ್ರದೇಶಗಳೂ ಒಂದಲ್ಲ ಒಂದು ರೀತಿಯ ಅವಕಾಶ ವಂಚಿತವೇ ಆಗಿವೆ. ಇವುಗಳ ಎಡಬಲಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಇದನ್ನೇ ಆಧರಿಸಿ ಇಲ್ಲಿ ಕಥೆಗಳು ಸಂಕಲಗೊಂಡಿದ್ದಿಲ್ಲ. ಇಲ್ಲಿ ಪ್ರಾಂತ್ಯವಾರು ವಿಂಗಡನೆಯೂ ಇಲ್ಲ. ಕಾರಣಗಳೇನೇ ಇದ್ದರೂ ಕನ್ನಡ ನಾಡಿನ ಮತ್ತು ಹೊರಗಿನ ಪ್ರದೇಶವಾಸಿಗಳು ಬರೆದ ಕಥೆಗಳು ಕನ್ನಡ ಕಥೆಗಳೇ ಹೊರತು ಬೇರೆಯಲ್ಲ. ಪ್ರತಿಯೊಬ್ಬ ಕತೆಗಾರನೂ ಮೂಲತಃ ಕನ್ನಡ ಕತೆಗಾರನೇ. ಹಾಗೆ ಅವರ ಕಥೆಗಳೆಲ್ಲ ಕನ್ನಡ ಕಥೆಗಳೇ. ಇಲ್ಲಿನವೆಲ್ಲ ಮೊದಲಿಗೆ ಕನ್ನಡ ಕುಲದ ಜೀವನ ಹಾಗು ಸಂಸ್ಕೃತಿಯ ಕಥೆಗಳು. ಆ ಭಾವವೇ ವಿಸ್ತರಿಸಿ ಇಲ್ಲಿರುವ ಹಾಗು ಇವರು ಬರೆಯುವ ಕಥೆಗಳೆಲ್ಲ ಭಾರತೀಯ ಕಥೆಗಳೇ ಆಗಿವೆ. ಕಾಸರಗೋಡಿನಿಂದ ಮುಂಬೈವರೆಗೆ ಬರೆದ ಕಥೆಗಳಲ್ಲಿನ ವೈವಿಧ್ಯ, ಭಾಷಾ ಭಿನ್ನತೆ ನಿಜಕ್ಕೂ ಅಧ್ಯಯನ ಯೋಗ್ಯವಾದದ್ದು. ಹಾಗೆಯೇ ಕೋಲಾರದಿಂದ ಬೀದರಿನವರೆಗೆ ಹಬ್ಬಿದ ಕಥೆಗಾರರಿಂದ ಬಂದ ಕತೆಗಳೂ. ಉತ್ತರ ಕರ್ನಾಟಕದಲ್ಲಿ ಕಥಾ ಸಾಹಿತ್ಯದ ಸೃಷ್ಟಿ ದಕ್ಷಿಣಕ್ಕಿಂತ ಹುಲುಸಾಗಿದೆ. ಹೊಸಬರ ಸಂಖ್ಯೆ ಗಣನೀಯವಾಗಿದೆ. ಜಾಗತೀಕರಣದ ವಿವೇಚನೆ ದಕ್ಷಿಣದಲ್ಲಿ ಜಾಸ್ತಿ. ಕರಾವಳಿಯ ಭಾಗದಲ್ಲಿನ ಕತೆಗಳು ಬದುಕನ್ನು ಕುರಿತು, ಪಲ್ಲಟಗಳ ಕುರಿತು ಚಿಂತಿಸಿವೆ. ಒಟ್ಟಿನಲ್ಲಿ ಈ ಎಲ್ಲ ಕತೆಗಳೂ ಒಂದಿಲ್ಲೊಂದು ಬಗೆ ಇವತ್ತಿನ ಕತೆಗಳೇ ಆಗಿವೆ.

******

‘ನಾನು ಮೆಚ್ಚಿದ ನನ್ನ ಕಥೆ’ ಯೋಜನೆ ರೂಪಗೊಂಡಾಗ ಮಹಿಳೆಯರ ಕಥೆಗಳನ್ನು ಪ್ರತ್ಯೇಕ ವಿಭಾಗವಾಗಿ ಸೇರಿಸಬೇಕೆಂದುಕೊಂಡುದುಂಟು. ಅವರ ಕಥೆಗಳನ್ನು ಓದಿದಾಗ ಹೀಗೆ ಯೋಚಿಸಿದ್ದಕ್ಕೆ ಸಂಕೋಚವಾಯಿತು. ಅವು ಕನ್ನಡದ ಕಥೆಗಳೇ ಆಗಿರುವಾಗ, ಕತೆಗಾರರ ಹೆಸರು ಇರುವಾಗ ಮತ್ತೆ ಅದಕ್ಕೊಂದು ಹಣೆಪಟ್ಟಿ ನೀಡುವುದು ಕೆಲಸವಿಲ್ಲದ ಕೆಲಸ ಅನ್ನಿಸಿತು. ಓದುಗರು ಅವನ್ನು ಕಥೆಯೆಂದೇ ಓದಬೇಕು ಎಂಬ ಕಾರಣದಿಂದ ಆ ಆಲೋಚನೆಯನ್ನು ದೂರ ತಳ್ಳಿದೆವು. ಒಟ್ಟೊಟ್ಟಿಗೆ ಓದುತ್ತ ಓದುಗರು ಇಂಥ ಸಂವೇದನೆಗಳನ್ನು ಹುಡುಕಿಕೊಳ್ಳಲಿ. ನಾವೇ ಏಕೆ ಬೆರಳಿಟ್ಟು ತೋರಿಸಬೇಕು? ಇವರೇ ಬೇರೆ ಎಂದು ತೋರಿಸಿಕೊಡಬೇಕು? ಸಮ, ಸಮಾನತೆಯೆಂದರೆ ಒಟ್ಟು ಎಂದಲ್ಲವೆ? ನಮ್ಮ ಈ ಅನಿಸಿಕೆ ಅನೇಕರಿಗಾದರೂ ಒಪ್ಪಿಗೆಯಾದೀತು.

ಈ ಪ್ರಯತ್ನದಲ್ಲಿ ನಾವೇನೂ ಸಲೀಸು ಕಂಡುದಿಲ್ಲ. ಇಂಥ ಪ್ರಯತ್ನದ ಹಿಂದಿನ ಸಂಪಾದಕರಿಗೆ ಆದ ಅನುಭವ, ತೊಡರುಗಳೇ ಕೊಂಚ ಎಡಬಲವಾಗಿ ನಮಗೂ ಆದುದೇ ಆಗಿದೆ. ತಮ್ಮ ಕಥೆ ತಮಗೇ ಏಕೆ ಮೆಚ್ಚುಗೆಯಾಯಿತು ಎಂದು 200-250 ಪದಗಳ ಮಿತಿಯಲ್ಲಿ ಬರೆದುಕೊಡುವ ಕಡ್ಡಾಯ ಒತ್ತಡವನ್ನು ಹೇರಿದ್ದೆವು. ಇದು ಅನೇಕರಿಗೆ ಇಕ್ಕಟ್ಟು ಉಂಟು ಮಾಡಿತು. ತಮ್ಮದಲ್ಲದ ಕಥೆಗಳಿಗೆ ಅಭಿಪ್ರಾಯ, ವಿಮರ್ಶೆ, ಇತ್ಯಾದಿಗಳನ್ನು ಕೊಡಬಲ್ಲವರು ತಮ್ಮದೇ ಕಥೆ ಕುರಿತು ಬರೆಯಲು ಒದ್ದಾಡಿದರು. ಅನೇಕ ಕತೆಗಾರರು, ಕಥೆ ಏಕೆ ಮೆಚ್ಚುಗೆಯಾಯಿತು ಎಂದು ಬರೆಯಲು ಮನಸ್ಸು ಮತ್ತು ಪೆನ್ನು ಸಹಕರಿಸದ ಹಿಂಸೆ ಅನುಭವಿಸಿದರು. ಬರೆಯಲೇ ಆಗದವರು ತಮ್ಮ ಅಳಲನ್ನು ಹೇಳಿಕೊಂಡರು. ಇದು ದೊಡ್ಡ ಸವಾಲಾಗುತ್ತದೆ ಎಂದು ಮೊದಲಿಗೆ ಅನ್ನಿಸಿದ್ದೇ ಇಲ್ಲ. ಕಥೆ ಬರೆಯುವುದಕ್ಕಿಂತಲೂ ಇದು ಸವಾಲಿನದಾಗಿ ನಿಂತುದು ಅನುಭವಕ್ಕೆ ಬಂದರೂ ಕತೆಗಾರರು ಸವಾಲನ್ನು ಸ್ವೀಕರಿಸಲಿ ಎಂದೇ ಬಯಸಿದೆವು. ಕತೆಗಾರರು ನಮ್ಮ ಈ ಬಯಕೆಯನ್ನು ಸಾಕಷ್ಟು ಈಡೇರಿಸಿದ್ದಾರೆ.

ಈ ಪ್ರಯತ್ನದಲ್ಲಿ ಮೂರು ತಲೆಮಾರಿನ ಲೇಖಕರು ನಮ್ಮ ಸಂಪರ್ಕಕ್ಕೆ ಬಂದರು. ಇವರಲ್ಲಿ ಕೆಲವರು ತಮ್ಮ ಭಾವನೆ, ಕಷ್ಟ, ಅಭಿಪ್ರಾಯಗಳನ್ನು ಹಂಚಿಕೊಂಡರು. ಪರಿಚಯ, ಸ್ನೇಹ, ಆತ್ಮೀಯತೆಯೂ ಉಂಟಾಯಿತು. ಕರ್ನಾಟಕದ ಹೊರಗೆ ನೆಲೆಸಿದ ಕತೆಗಾರರು ನಮ್ಮ ಪಕ್ಕದಲ್ಲಿಯೇ ಇರುವ ಅನುಭವವಾಯಿತು. ನಮ್ಮ ಕತೆಗಾರರ ಗೆಳೆತನದ ನಗುಮೊಗ ಅವರ ಫೋನು ಸಂಭಾಷಣೆಗಳಲ್ಲಿ, ಮೆಸೇಜುಗಳಲ್ಲಿ ಕಂಡಿತು. ಇದೂ ಸಂಪಾದಕರ ಭಾಗ್ಯವೇ ಅಲ್ಲವೆ! ಇದಕ್ಕೆ ಜೊತೆಯಾದ ಇನ್ನೊಂದು ಭಾಗ್ಯವೆಂದರೆ ಇಷ್ಟೂ ಕಥೆಗಳನ್ನು ಓದುವಂತಾದುದು. ಈ ಎಲ್ಲ ಕತೆಗಾರರಿಗೆ ನಾವು ಕೃತಜ್ಞರು.

ಈ ಅದೃಷ್ಟಕ್ಕೆ ಕಾರಣ ನಿವೇದಿತ ಪ್ರಕಾಶನದ ಆತ್ಮೀಯ ಗೆಳೆಯ ಶ್ರೀ ಉಮೇಶ್ ನಾಗಮಂಗಲ ಅವರು. ನಾವು ಈ ಯೋಜನೆಯ ಪ್ರಸ್ತಾಪ ಮಾಡಿದಾಗ ಹಿಂದು ಮುಂದು ಯೋಚಿಸದೆ ಪ್ರಕಟಿಸಲು ಒಪ್ಪಿದರು. ಅವರು ಆಡಿದ್ದು, ‘ನೀವು ಕಥೆಗಳನ್ನು ಸಂಪಾದಿಸಿ ಕೊಡಿ. ಎಷ್ಟೇ ಸಂಪುಟಗಳಾಗಲಿ ಪ್ರಕಟಿಸೋಣ’ ಎಂಬ ಒಂದೇ ಮಾತು. ಈ ಮಾತು ನಮ್ಮಿಂದ ಈ ಮಹತ್ವದ ಕೆಲಸ ಮಾಡಿಸಿತು. ನಮ್ಮ ಕತೆಗಾರರು ಸ್ಪಂದಿಸಿದ ರೀತಿಯೂ ಅದ್ಭುತವಾದುದು. ಆದರೆ ಯಾವ ಕಾರಣವೋ ಏನೋ ಕಥೆ ಕಳುಹಿಸಲು ಒಪ್ಪಿದವರಲ್ಲಿ ಸುಮಾರು ಮಂದಿ ಕಥೆ ಕಳಿಸಲೇ ಇಲ್ಲ. ಇಂಥ ಕೊರತೆ ಎಲ್ಲ ಕಾಲದ ಸಂಪಾದಕರನ್ನೂ ಕಾಡುವುದೆ ಆಗಿದೆ. ಆದರೂ ನಮ್ಮ ಈ ಪ್ರಯತ್ನ ವಿಫಲವಲ್ಲವೆಂಬ ಭಾವನೆ ನಮ್ಮದು.

ಈ ಸಂಕಲನಕ್ಕೆ ಮುಖಪುಟ ರಚಿಸಿದ ಯುವಮಿತ್ರ ಅಜಿತ್‍ಕೌಂಡಿನ್ಯ, ನಮ್ಮೊಡನೆ ಸಹಕರಿಸಿದ ಡಿ.ಜಿ.ಮಲ್ಲಿಕಾರ್ಜುನ, ಅಜಯ್ ವರ್ಮ ಅಲ್ಲೂರಿ, ಒಂದು ರೀತಿಯಲ್ಲಿ ಅಜ್ಞಾತರೆನಿಸಿಕೊಂಡ ಕತೆಗಾರರನ್ನು ನಮ್ಮ ಸಂಪರ್ಕಕ್ಕೆ ತಂದ, ಅಂತಹವರಿಂದ ನಮಗೆ ಕಥೆಗಳು ಸಿಗುವಂತೆ ಮಾಡಿದ ಡಾ.ನಾ.ಮೊಗಸಾಲೆ, ಸುಬ್ರಾಯ ಚೊಕ್ಕಾಡಿ, ರಂಗನಾಥ ಆರನಕಟ್ಟೆ, ಅಕ್ಷತಾ ಹುಂಚದಕಟ್ಟೆ ಮುಂತಾದವರನ್ನು ಮತ್ತು ನಮ್ಮೆಲ್ಲ ಕತೆಗಾರರ ಓದುಗರನ್ನು ಸಹೃದಯತೆಯಿಂದ ನೆನೆಯುತ್ತೇವೆ.

ಸ. ರಘುನಾಥ, ಆರ್. ವಿಜಯರಾಘವನ್
ಸಂಪಾದಕರು

 

(ಕೃತಿ: ನಾನು ಮೆಚ್ಚಿದ ನನ್ನ ಕಥೆʼ(ನಾಲ್ಕು ಸಂಪುಟಗಳು), ಸಂಪಾದಕರು: ಸ. ರಘುನಾಥ, ಆರ್.‌ ವಿಜಯರಾಘವನ್‌, ಪ್ರಕಾಶಕರು: ನಿವೇದಿತ ಪ್ರಕಾಶನ, ಬೆಲೆ: 2000/-(ನಾಲ್ಕು ಸಂಪುಟಗಳಿಗೆ)