‘ಆ ಆಕಳುಗಳ ಹಿಂಡಿನಲ್ಲಿ ಗಂಗಾ ಎಂಬ ಆಕಳು ಇತ್ತು. ಅದು ನನ್ನನ್ನು ತಾಯಿಯಂತೆ ಪ್ರೀತಿಸುತ್ತಿತ್ತು. ನಾನು ಗೆಳೆಯರ ಜೊತೆ ಓಡಾಡುತ್ತ ಹಸಿವಾದಾಗ ಗಂಗಾ ಬಳಿ ಹೋಗುತ್ತಿದ್ದೆ. ನನ್ನನ್ನು ನೋಡಿದ ತಕ್ಷಣ ಅದು ಕಕ್ಕುಲತೆಯಿಂದ ಧ್ವನಿ ತೆಗೆಯುತ್ತಿತ್ತು. ನಾನು ಹೋಗಿ ಅದರ ಬಾಯಿ ಮುಂದೆ ಕೂಡುತ್ತಿದ್ದೆ. ಅದು ಬಹಳ ಪ್ರೀತಿಯಿಂದ ನನ್ನ ತಲೆ ನೆಕ್ಕುತ್ತಿತ್ತು. ನಂತರ ನೇರವಾಗಿ ಮೊಲೆಗೆ ಬಾಯಿ ಹಚ್ಚಿ ಹಾಲು ಕುಡಿಯುತ್ತಿದ್ದೆ. ನಾನು ಹಾಲು ಕುಡಿಯಲು ಹೋದಾಗಲೆಲ್ಲ ಅದು ತೊರೆ ಬಿಡುತ್ತಿತ್ತು’ 

“ನೆನಪಾದಾಗಲೆಲ್ಲ” -ಹಿರಿಯ ಪತ್ರಕರ್ತ, ಲೇಖಕ ರಂಜಾನ್ ದರ್ಗಾ ಅವರ ಜೀವನದ ಪುಟಗಳು ಇನ್ನು ಮುಂದೆ ವಾರಕ್ಕೊಮ್ಮೆ.

ಮೊನ್ನೆ ಭಾನುವಾರ, ಜೂನ್ ಇಪ್ಪತ್ತು ಫಾದರ್ಸ್ ಡೇ. ಅಂದಿಗೆ ನಾನು ಎಪ್ಪತ್ತು ವರ್ಷಗಳ ಮುಗಿಸಿ ಎಪ್ಪತ್ತೊಂದನೇ ವರ್ಷಕ್ಕೆ ಕಾಲಿಟ್ಟಿರುವೆ. ಕಾಲ ಯಾವಾಗ ಕರೆಯುವುದೋ ಗೊತ್ತಿಲ್ಲ. ನನ್ನ ತಂದೆಯ ಬಗ್ಗೆ ಬರೆಯಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು. ಅಬ್ದುಲ್ ರಶೀದ್ ‘ಕೆಂಡಸಂಪಿಗೆ’ಗಾಗಿ ನನ್ನ ನೆನಪುಗಳ ಕುರಿತು ಬರೆಯಲು ತಿಳಿಸಿದರು. ಎಲ್ಲಿಂದ ಪ್ರಾರಂಭಿಸಬೇಕೆಂಬ ಯೋಚನೆಯಾಯಿತು. ನೆನಪುಗಳು ಕಿಕ್ಕಿರಿದು ತುಂಬಿದವು. “ನೆನಪಾದಾಗಲೆಲ್ಲ” ಎಂಬ ಶೀರ್ಷಿಕೆಯ ಅಡಿ ಬರೆಯ ಬಯಸಿದೆ. ಇದಕ್ಕೆ ಕಾಲಗಣನೆಯ ಹಂಗಿರುವುದಿಲ್ಲ. ಇಲ್ಲಿ ಘಟನೆಗಳೇ ಮುಖ್ಯವಾಗುತ್ತವೆ. ಆ ಪ್ರಸಂಗಗಳು ನೆನಪಾದಾಗಲೆಲ್ಲ ಬರೆಯುವುದು ಸುಲಭವಾಗುತ್ತದೆ. ಅಲ್ಲದೆ ಅವು ತಮ್ಮದೇ ಆದ ಸರಣಿಯನ್ನು ಸೃಷ್ಟಿಸುತ್ತವೆ.

ಸದ್ಯ ನನ್ನ ನಿರಕ್ಷರಿ ತಂದೆಯ ನೆನಪುಗಳಿಂದಲೇ ಆರಂಭಿಸ ಬಯಸುವೆ. ಆದರೆ ಅದಕ್ಕೆ ದೀರ್ಘವಾದ ಹಿನ್ನಲೆ ಒದಗಿಸುವುದು ಅನಿವಾರ್ಯವಾಗಿದೆ.

ನನ್ನ ತಂದೆಯ ಹೆಸರು ಅಬ್ದುಲ್ ಕರೀಂ. ಅಬ್ದುಲ್ ಸಾಹೇಬ ಎಂದು ಕರೆಯುತ್ತಿದ್ದರು. ನನ್ನ ಶಾಲೆಯ ಹೆಸರಿನಲ್ಲಿ ಅವರ ಹೆಸರು ಅಬ್ದುಲ್‍ಸಾ ಆಯಿತು. ನನ್ನ ತಂದೆ ಸತ್ಯಸಂಧರಾಗಿದ್ದರು. ಅವರು ಜನಿಸಿದ್ದು ವಿಜಾಪುರದ (ಇಂದಿನ ವಿಜಯಪುರ) ಬಳಿಯ (ಖಾಜಾ ಅಮೀನ) ದರ್ಗಾದಲ್ಲಿ. ಆ ಹಳ್ಳಿಯ ಹೆಸರೇ ನಮ್ಮ ಅಡ್ಡಹೆಸರಾಗಿದೆ. ಅವರು 18 ವರ್ಷದವರಿದ್ದಾಗ ಮಧ್ಯಾಹ್ನದಲ್ಲಿ ಮನೆಗೆ ಬಂದು ‘ಹಸಿವಾಗಿದೆ ಊಟ ಕೊಡು’ ಎಂದು ಅಕ್ಕನಿಗೆ ಹೇಳಿದರಂತೆ. ಆಗ ಆಕೆ ‘ದುಡಿದು ಬಂದವರ ಹಾಗೆ ಕೇಳುತ್ತಿರುವೆಯಲ್ಲಾ’ ಎಂದು ಹೇಳಿದ್ದಕ್ಕೆ ಅವರು ಮನೆಯ ಒಳಗೆ ಹೋಗದೆ ವಿಜಾಪುರಕ್ಕೆ ಬಂದು ಹಮಾಲಿ ಮಾಡತೊಡಗಿದರು. ನಂತರ ಅವರು ಆ ಮನೆಗೆ ಹೋಗಲೇ ಇಲ್ಲ!

ನನ್ನ ತಾಯಿ ಕಾಸಿಂಬಿ ವಿಜಾಪುರದಿಂದ 10 ಮೈಲಿಗಳಷ್ಟು ದೂರವಿರುವ ಅಲ್ಲೀಬಾದಿ (ಅಲಿಯಾಬಾದ) ಊರಿವಳು. ಅವಳಿಗೆ ಆಶಾಬಿ, ಆಶಾಮಾ ಎಂದೂ ಕರೆಯುತ್ತಿದ್ದರು. ಅಲ್ಲೀಬಾದಿ ಜನ ಬಂದರೆ ಗುಲ್ಲವ್ವ ಎಂದು ಕರೆಯುತ್ತಿದ್ದರು. ಬಹುಶಃ ಆ ಹೆಸರಿನ ಮೂಲ ಗುಲ್ ಇರಬಹುದು. ಅವಳಿಗೆ ಅಮೀನ್ ಎಂಬ ಅಣ್ಣನೂ ಬಾಬು ಎಂಬ ತಮ್ಮನೂ ಇದ್ದರು. ನಾನು ಒಂದೂವರೆ ವರ್ಷದವನಿದ್ದಾಗ ಅಮೀನ್ ಮಾಮಾ ಕರುಳುಬೇನೆಯಿಂದ ತೀರಿಕೊಂಡ ಎಂದು ಹೇಳುತ್ತಾರೆ. ಆತ ಸಾತ್ವಿಕ ಪುರುಷನಾಗಿದ್ದ. ‘ಅಂಥವನನ್ನು ಬುತ್ತಿ ಕಟ್ಟಿಕೊಂಡು ಹುಡುಕಾಡುತ್ತ ಹೋಗಬೇಕು’ ಎಂದು ಅಲ್ಲಿಬಾದಿಯ ಒಬ್ಬ ಹಿರಿಯ ಹೇಳಿದ್ದನ್ನು ಕೇಳಿದ್ದೇನೆ.

ಆ ಕಾಲದಲ್ಲಿ ಅಂದರೆ 68 ವರ್ಷಗಳ ಹಿಂದೆ ಬಡವರು ಫೋಟೊ ತೆಗೆಸಿಕೊಳ್ಳುವುದು ಸಾಮಾನ್ಯ ಮಾತಾಗಿರಲಿಲ್ಲ. ಆತ ನನ್ನ ಫೋಟೊ ತೆಗೆಸಿದ್ದ. ಆ ಫೋಟೊ ಕಳೆದುಕೊಂಡಿದ್ದಕ್ಕೆ ಇಂದಿಗೂ ಬೇಸರವಿದೆ. ಅದೊಂದು ಕಲಾತ್ಮಕ ಫೋಟೊ. ಎಂಥ ಕಲಾತ್ಮಕ ಎಂದು ಈಗ ಅನಿಸಬಹುದು. ಆದರೆ ಆ ಕಾಲದಲ್ಲಿ ಒಂದು ಫೋಟೊ ತೆಗೆಯುವುದರ ಹಿಂದಿನ ಮನಸ್ಸು ಹೇಗೆ ಕೆಲಸ ಮಾಡುತ್ತಿತ್ತು ಎಂಬುದರ ಕುರಿತು ಹೇಳಬೇಕಿದೆ. ಆಗ ನನಗೆ ಬೂಟು, ಸಾಕ್ಸ್, ಇಸ್ತ್ರಿ ಮಾಡಿದ ಚಡ್ಡಿ. ವಿ.ಐ.ಪಿ. ತರದ ತೋಳಿಲ್ಲದ ಬನಿಯನ್ ಚಡ್ಡಿಯಲ್ಲಿ ಸಿಗಿಸಿ ಬೆಲ್ಟ್ ಹಾಕಲಾಗಿತ್ತು. ಕೈಗೆ ಬೆಳ್ಳಿಯ ಕಡಗ. ಆ ಕಡಗಗಳಿಗೆ ಮಲ್ಲಿಗೆ ಹಾರ ಜೋತುಬಿಡಲಾಗಿತ್ತು. ಪಕ್ಕದಲ್ಲಿ ಮೂರ್ಕಾಲಿನ ಸ್ಟೂಲ್. ಅದನ್ನು ಕಸೂತಿಯಿಂದ ತಯಾರಿಸಿದ ಸುಂದರ ಟೇಬಲ್ ಕ್ಲಾಥ್‍ನಿಂದ ಸಿಂಗರಿಸಲಾಗಿತ್ತು. ಅದರ ಮೇಲೆ ಹೂವು ತುಂಬಿದ ಹೂದಾನಿ. ಹಿಂದೆ ಮುರಗಿ ಮುರಗಿಯಾದ ಬಟ್ಟೆಯನ್ನು ಇಳಿಬಿಡಲಾಗಿತ್ತು. ಈ ಎಲ್ಲವುಗಳ ಮಧ್ಯೆ ನಾನೊಬ್ಬ ಆರೋಗ್ಯವಂತ ಮಗುವಾಗಿದ್ದೆ ಎಂದು ಸೂಚಿಸುವ ಮೈಕಟ್ಟು. ಹೀಗೆ ಎಲ್ಲ ನೆನಪಾಗುತ್ತಿವೆ. ಆ ನನ್ನ ಸೋದರ ಮಾವ ನನ್ನನ್ನು ಎಷ್ಟೊಂದು ಗಾಢವಾಗಿ ಪ್ರೀತಿಸಿರಬಹುದು ಎಂಬುದು ನೆನಪಾದಾಗಲೆಲ್ಲ ನೋವೊಂದು ಮಿಡಿದು ಹೋಗುತ್ತದೆ. ಆತ ನಿಧನವಾದ ದಿನ ಮೊಹರಂ ಇತ್ತಂತೆ. ಹೀಗಾಗಿ ನಮ್ಮ ಮನೆಯಲ್ಲಿ ಎಂದೂ ಮೋಹರಂ ಆಚರಿಸಲಿಲ್ಲ.

14 ವರ್ಷದ ನನ್ನ ತಾಯಿಯನ್ನು  ನನ್ನ ತಂದೆ ನೋಡಲು ಬರುವ ದಿನ ಆಕೆ ಅಜ್ಜಿಯೊಬ್ಬಳ ಜೊತೆ ಬಾವಿಯಿಂದ ಮಣ್ಣಿನ ಕೊಡದಲ್ಲಿ ನೀರು ತರುತ್ತಿದ್ದಳು. ನನ್ನ ತಂದೆ ಬರುವುದನ್ನು ನೋಡಿದ ಆ ಅಜ್ಜಿ ‘ನಿನ್ನನ್ನು ನೋಡಲು ಬರುತ್ತಿದ್ದಾರೆ’ ಎಂದು ಹೇಳಿದ ತಕ್ಷಣ ನನ್ನ ತಾಯಿ ಮಣ್ಣಿನ ಕೊಡವನ್ನು ಒಗೆದು ಓಡುತ್ತ ಮನೆಗೆ ಬಂದು ಸೇರಿದಳಂತೆ. ಹಾಗೆಂದು ಅವಳೇ ನನಗೆ ಹೇಳಿದ್ದಳು.

ಮದುವೆಯಾದ ನಂತರ ನನ್ನ ತಂದೆ ವಿಜಾಪುರದ ಒಡ್ಡರ ಓಣಿಯ ಬಳಿ ಇರುವ ಸದಿ (ಕೂಲಿಕಾರರ) ಓಣಿಯಲ್ಲಿ ಮನೆ ಮಾಡಿದ್ದರು ಎಂದು ನನ್ನ ತಾಯಿ ನನಗೆ ಹೇಳಿದ್ದಳು.

ನಾನು ವಿಜಾಪುರದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಇದ್ದಾಗ ನನ್ನ ತಾಯಿಯ ಜೊತೆ ಬಜಾರಕ್ಕೆ ಹೋಗಿದ್ದೆ. ಆಗ ಅಲ್ಲೀಬಾದಿಯಿಂದ ಸಂತೆಗೆ ಬಂದ ಒಬ್ಬ ಬಿಳಿಗೂದಲಿನ ಕಪ್ಪುಬಣ್ಣದ ತೆಳ್ಳನೆಯ ಅಜ್ಜಿ ನನ್ನ ನೋಡಿ ಪ್ರೀತಿಯಿಂದ ತಲೆ ಸವರಿದಳು. ಆಗ ನನ್ನ ತಾಯಿ ಹೇಳಿದಳು ‘ಈ ಅವ್ವನೇ ನಿನ್ನನ್ನು ಭೂಮಿಗೆ ತಂದವಳು’ ಎಂದು ಹೇಳಿದರು. ಇಂಥ ಸೂಲಗಿತ್ತಿ ತಾಯಂದಿರಿಂದಲೇ ಹಳ್ಳಿಯಲ್ಲಿ ಅದೆಷ್ಟೋ ಹೆರಿಗೆಗಳಾಗುತ್ತಿದ್ದವು. ಹೆರಿಗೆ ಮಾಡಿಸುವುದೊಂದೇ ಅವರಿಗೆ ಸಿಗುವ ತೃಪ್ತಿ. ಅಲ್ಲಿ ಹಣಕ್ಕೆ ಬೆಲೆಯೇ ಇಲ್ಲ. ಬೆಲೆ ಇದ್ದದ್ದು ಜೀವಕ್ಕೆ ಮಾತ್ರ.

ನನಗಿಂತ ಮೊದಲು ಹೆಣ್ಣು ಮಗುವೊಂದು ಜನಿಸಿತ್ತು. ಅದು ಚಿಕ್ಕದಿದ್ದಾಗಲೇ ತೀರಿಕೊಂಡಿತಂತೆ. ನನ್ನ ತಾಯಿ ಆಗಾಗ ನೆನಪಿಸಿಕೊಂಡು ಅಳುತ್ತಿದ್ದ ನೆನಪು.

(ತಾಯಿ ತಂದೆ)

ನನ್ನ ತಾಯಿ ತಂದೆ ನನಗೆ ಗೊತ್ತಾಗಿದ್ದು ಸುಮಾರು ನಾಲ್ಕು ವರ್ಷಗಳ ನಂತರ. ಅಲ್ಲಿಯವರೆಗೆ ನಾನು ನನ್ನ ತಾಯಿಯ ತಾಯಿ ಲಾಲಬಿ ಜೊತೆ ಅಲ್ಲೀಬಾದಿಯಲ್ಲೇ ಬೆಳೆದೆ. ಬಹುಶಃ ನನ್ನ ತಾಯಿ ಹೆರಿಗೆಯ ನಂತರ ಒಂದು ವರ್ಷದೊಳಗೆ ನನ್ನನ್ನು ನನ್ನ ಅಜ್ಜಿಯ ಬಳಿ ಬಿಟ್ಟಿರಬಹುದು. ಹಾಗೆ ಹೇಳುವುದಕ್ಕಿಂತಲೂ ನನ್ನ ಅಜ್ಜಿ ಮತ್ತು ಸೋದರಮಾವಂದಿರ ಒತ್ತಾಸೆಯಿಂದ ಅಲ್ಲಿ ಬಿಟ್ಟಿರಬಹುದು. ನಾನು ನನ್ನ ಅಜ್ಜನನ್ನು ನೋಡಿಲ್ಲ. ಆತ ಆ ಹಳ್ಳಿಯಲ್ಲಿನ ಗಾವಟಿ ಶಾಲೆಯ ಕನ್ನಡ ಮಾಸ್ತರರಾಗಿದ್ದರಂತೆ. ಬಹುಶಃ ಚಾವಡಿಯಲ್ಲಿ ಆ ಏಕೋಪಾಧ್ಯಾಯ ಶಾಲೆ ನಡೆಯುತ್ತಿರಬಹುದು. ಗಾವಟಿ ಮಾಸ್ತರರಿಗೆ ಸಂಬಳ ಇರಲಿಲ್ಲ. ಹಳ್ಳಿಯ ಜನ ತಮಗೆ ತಿಳಿದಷ್ಟು ಜೋಳ ಕಾಳು ಕೊಡುತ್ತಿದ್ದರೆಂದು ತೋರುತ್ತದೆ.

ನನ್ನ ಅಜ್ಜನಿಗೆ ಕಾನೂನಿನ ಜ್ಞಾನವಿದ್ದುದರಿಂದ ಆತ ಹಳ್ಳಿಯಲ್ಲಿ ಜನಪ್ರಿಯನಾಗಿದ್ದ. ಆ ಹಳ್ಳಿಯಲ್ಲಿ ನಾವಿದ್ದ ಮನೆ ಮೂರಂಕಣದ ಮೇಲುಮುದ್ದೆಯ ಮನೆಯಾಗಿತ್ತು. ಮಳೆಗಾಲದಲ್ಲಿ ಮಾಳಿಗೆ ಮೇಲೆ ಮಣ್ಣು ಇರುವುದರಿಂದ ಹುಲುಸಾಗಿ ಹುಲ್ಲು ಬೆಳೆಯುತ್ತಿತ್ತು. ಮುಂದೆ ದುಂಡನೆಯ ಹುಣಸೆ ಮರ ಇತ್ತು. ಅದು ಅಷ್ಟೇನೂ ಎತ್ತರ ಇರಲಿಲ್ಲ. ಮನೆಯ ಮಾಳಿಗೆಗಿಂತ ಸ್ವಲ್ಪ ಎತ್ತರವಾಗಿತ್ತು. ಒಂದು ದಿನ ಮುಸಿಯ ಬಂದು ಕುಳಿತಿತ್ತು. ಅದರ ಕಣ್ಣಲ್ಲಿ ನೀರು ತುಂಬಿತ್ತು. ನನ್ನ ಅಜ್ಜಿ ಅದಕ್ಕೆ ಗಂಗಾಳದಲ್ಲಿ ನೀರು ಕೊಟ್ಟಳು. ಅದು ಕುಡಿಯಿತು. ಒಂದು ಈರುಳ್ಳಿಯನ್ನು ಕೊಟ್ಟಳು ಅದು ತಿಂದಿತು. ಬಹಳ ಹೊತ್ತು ಅಲ್ಲೇ ಕುಳಿತು ನಂತರ ಹೊರಟು ಹೋಯಿತು. ಅದೇಕೆ ಅಳುತ್ತಿತ್ತು ಎಂದು ಅಜ್ಜಿಗೆ ಕೇಳಿದೆ. ಆಗ ಮಾವಿನ ಮರಕ್ಕೆ ಹೂ ಬಿಡುವ ಸಮಯ. ಈ ಮಂಗ ಮುಸಿಯಗಳು ಆ ಹೂ ತಿನ್ನುವ ಕಾರಣದಿಂದ ತೋಟಿಗರು ಅವುಗಳನ್ನು ಹೊಡೆದು ಓಡಿಸುತ್ತಿದ್ದರು. ಅದನ್ನೆಲ್ಲ ಅಜ್ಜಿ ವಿವರಿಸಿದಳು.

ನಾನು ಒಂದೂವರೆ ವರ್ಷದವನಿದ್ದಾಗ ಅಮೀನ್ ಮಾಮಾ ಕರುಳುಬೇನೆಯಿಂದ ತೀರಿಕೊಂಡ ಎಂದು ಹೇಳುತ್ತಾರೆ. ಆತ ಸಾತ್ವಿಕ ಪುರುಷನಾಗಿದ್ದ. ‘ಅಂಥವನನ್ನು ಬುತ್ತಿ ಕಟ್ಟಿಕೊಂಡು ಹುಡುಕಾಡುತ್ತ ಹೋಗಬೇಕು’ ಎಂದು ಅಲ್ಲಿಬಾದಿಯ ಒಬ್ಬ ಹಿರಿಯ ಹೇಳಿದ್ದನ್ನು ಕೇಳಿದ್ದೇನೆ.

ಆ ಮೂರಂಕಣ ಮನೆಯಲ್ಲಿ ಒಂದು ಮೂಲೆಯಲ್ಲಿ ಒಲೆ ಇತ್ತು. ಬಾಗಿಲಿಗೆ ನೇರವಾಗಿ ಒಂದು ದೊಡ್ಡ ಮಣ್ಣಿನ ಹರವಿ ಇತ್ತು. ಅದರ ಮೇಲೆ ಕಟ್ಟಿಗೆಯ ಹಲಗೆಯನ್ನು ಮುಚ್ಚಳವಾಗಿ ಬಳಸಲಾಗಿತ್ತು. ಅದು ನನ್ನ ಅಜ್ಜ ಕಾಗದಪತ್ರಗಳನ್ನುಇಡುವ ಸುರಕ್ಷಿತ ಸ್ಥಳವಾಗಿತ್ತು. ನನಗೆ ಆ ಹರವಿಯ ಬಗ್ಗೆ ಎಲ್ಲಿಲ್ಲದ ಕುತೂಹಲ. ಒಳಗೆಲ್ಲ ಕೋರ್ಟಿನ ಬಾಂಡ್ ಪೇಪರ್ ಮುಂತಾದ ದಾಖಲೆಗಳು ತುಂಬಿದ್ದವು. ಅವುಗಳು ನನ್ನಲ್ಲಿ ಆಶ್ಚರ್ಯವನ್ನುಂಟು ಮಾಡುತ್ತಿದ್ದವು. ಮಸಿಕುಡಿಕೆಯಲ್ಲಿ ಅದ್ದಿ ಬರೆಯುವ ಟಾಕಿನಿಂದ ಅಕ್ಷರಗಳು ರಾರಾಜಿಸುತ್ತಿದ್ದವು. ಮೇಲ್ಗಡೆ ಹಸಿರು ಬಣ್ಣದ ಸರ್ಕಾರಿ ಸಂಕೇತವಿರುವ ಛಾಪಾಕಾಗದದಲ್ಲಿ ಯಾರ ಯಾರ ಆಸ್ತಿಯ ವಿವರಗಳಿದ್ದವೊ! ಆಗ ನಾನು ಮೂರು ವರ್ಷದವನಿರಬೇಕು. ಅಕ್ಷರ ಜ್ಞಾನ ಎಳ್ಳಷ್ಟೂ ಇರಲಿಲ್ಲ. ನನ್ನ ಅಜ್ಜ ಇದ್ದಿದ್ದರೆ ಕಲಿಸುತ್ತಿದ್ದನೇನೋ.

ಆಗ ಬ್ರಿಟಿಷ್ ರಾಜ್ಯ. ಒಂದು ಸಲ ಒಬ್ಬ ಪೊಲೀಸ್ ಅನುಮತಿ ಇಲ್ಲದೆ ಹಳ್ಳಿಗೆ ಬಂದನಂತೆ. ಆಗ ನನ್ನ ಅಜ್ಜ ಯಾರ ಅನುಮತಿ ತೆಗೆದುಕೊಂಡು ಹಳ್ಳಿಯಲ್ಲಿ ಕಾಲಿಟ್ಟಿರುವಿ ನಿನ್ನ ಮೇಲೆ ಕೇಸ್ ಹಾಕುವೆ ಎಂದು ಗದರಿಸಿದರಂತೆ. ಆತ ಅಂಜಿ ಭರಭರನೇ ವಾಪಸ್ ಹೋಗಿದ್ದು ಆ ಹಳ್ಳಿಗರ ಮನದಲ್ಲಿ ನನ್ನ ಅಜ್ಜನ ಬಗ್ಗೆ ಅಪಾರ ಗೌರವ ಮೂಡಿರಬಹುದು.

ನನ್ನ ಅಜ್ಜಿ ಇದ್ದ ಮನೆ ಸ್ವಂತದ್ದಾಗಿರಲಿಲ್ಲ. ಯಾರೋ ಹಾಗೇ ಇರಲು ಕೊಟ್ಟಿದ್ದರು. ಮುಂದೆ ದೊಡ್ಡದಾದ ಪ್ರಾಂಗಣವಿತ್ತು. ಅಲ್ಲಿ ನನ್ನ ಅಜ್ಜಿ ಏಳೆಂಟು ಆಕಳುಗಳನ್ನು ಸಾಕಿದ್ದಳು. ನಾನು ನನ್ನ ಬಾಬು ಮಾಮಾನ ಜೊತೆ ದನ ಕಾಯಲು ಹೋಗುತ್ತಿದ್ದೆ. ಬಯಲಲ್ಲಿ ಸಿಂಪಿಗನ ಹುಲ್ಲು ನನಗಿಷ್ಟವಾಗುತ್ತಿತ್ತು. ಅದರ ತುದಿಯಲ್ಲಿ ಹೆಲಿಕಾಪ್ಟರ್ ಫ್ಯಾನಿನ ಹಾಗೆ ನಾಲ್ಕೈದು ಎಸಳುಗಳು ಇರುತ್ತಿದ್ದವು. ಮಣ್ಣಿನ ಗುಂಪಿ ಮಾಡಿ ಆ ಎಸಳುಗಳ ಕಡ್ಡಿಯನ್ನು ಅದರಲ್ಲಿ ತುರುಕಿ ನೀರು ಹಾಕಿದಾಗ ಅದು ತಿರುಗುತ್ತಿತ್ತು. ಬಯಲ ಮಧ್ಯೆ ಒಂದು ಅತಿಸಣ್ಣ ಹಳ್ಳ ಹರಿಯುತ್ತಿತ್ತು. ಅದರಲ್ಲಿ ನೀರು ನನ್ನ ಮೊಣಕಾಲಿಗಿಂತಲೂ ಕಡಿಮೆ ಇರುತ್ತಿತ್ತು. ಅದರಲ್ಲಿನ ಮೀನುಗಳಲ್ಲಿ ಒಂದು ಡೋಕ್ ಮೀನು ಸ್ವಲ್ಪ ದೊಡ್ಡದಾಗಿತ್ತು. ಅದನ್ನು ಹಿಡಿಯುವ ತವಕ. ಆದರೆ ಭಯ. ಹೀಗಾಗಿ ಕೊನೆಯವರೆಗೂ ಹಿಡಿಯಲಾಗಲಿಲ್ಲ. ಅಲ್ಲೊಂದು ಹಾಳಾದ ಐತಿಹಾಸಿಕ ಕಟ್ಟಡವಿತ್ತು. ಅದರ ಕಲ್ಲನ್ನು ಕೆಲವರು ಒಯ್ಯುತ್ತಿದ್ದ ನೆನಪು. ಕೆಲವೊಂದು ಕಡೆ ದಟ್ಟವಾದ ಹಸಿರು ಹುಲ್ಲಿನ ಮಧ್ಯೆ ಬುರ್ಲಿಗಳು ಮೊಟ್ಟೆ ಇಡುವುದನ್ನು ನೋಡುವುದಕ್ಕಾಗಿ ಹುಡುಕಾಟವಾಗುತ್ತಿತ್ತು. ಕೆಲವೊಂದು ಸಲ ಮೊಟ್ಟೆಯ ಮೇಲೆ ಕುಳಿತ ಬುರ್ಲಿಗಳು ನನ್ನ ಸಪ್ಪಳಕ್ಕೆ ಹಾರಿ ಹೋಗುತ್ತಿದ್ದವು. ನನ್ನ ಮಾವ ದನಗಳಿಗಾಗಿ ಹುಲ್ಲನ್ನು ಕೊಯ್ದು ಗುಂಪು ಹಾಕುತ್ತಿದ್ದರು. ಆ ಹುಲ್ಲಿನ ವಾಸನೆ ಮನಸ್ಸಿಗೆ ಉಲ್ಲಾಸ ನೀಡುತ್ತಿತ್ತು.

ನನ್ನ ಅಜ್ಜಿ ಮತ್ತು ಬಾಬು ಮಾಮಾ ಹಾಲು ಮಾರಿ ಜೀವನ ಸಾಗಿಸುತ್ತಿದ್ದರು.

ನಾನು ಅಜ್ಜಿಯ ಮನೆಯಲ್ಲಿ ಹಾಲುಂಡು ಬೆಳೆದವನು. ಹಾಲು ಕುಡಿಯುವಾಗ ನನಗೆ ಒಂದೇ ಸಮಸ್ಯೆ ಕಾಡುತ್ತಿತ್ತು. ಅದೇನೆಂದರೆ ಹಾಲು ಕುಡಿದ ಮೇಲೆ ನನ್ನ ಅಜ್ಜಿ ಒಂದು ಚಿಟಿಕೆ ಖಾರವನ್ನು ನನ್ನ ಬಾಯಿಗೆ ಇಡುತ್ತಿದ್ದಳು. ನಾನು ಅನೇಕ ಸಲ ಹಾಲು ಕುಡಿದ ಮೇಲೆ ಓಡಿ ಹೋಗುತ್ತಿದ್ದೆ. ಅವಳು ಖಾರದ ಚಿಟಿಕೆಯನ್ನು ಹಿಡಿದುಕೊಂಡು ಬೆನ್ನುಹತ್ತಿ ಬರುತ್ತಿದ್ದಳು.

ಆ ಆಕಳುಗಳ ಹಿಂಡಿನಲ್ಲಿ ಗಂಗಾ ಎಂಬ ಆಕಳು ಇತ್ತು. ಅದು ನನ್ನನ್ನು ತಾಯಿಯಂತೆ ಪ್ರೀತಿಸುತ್ತಿತ್ತು. ನಾನು ಗೆಳೆಯರ ಜೊತೆ ಓಡಾಡುತ್ತ ಹಸಿವಾದಾಗ ಗಂಗಾ ಬಳಿ ಹೋಗುತ್ತಿದ್ದೆ. ನನ್ನನ್ನು ನೋಡಿದ ತಕ್ಷಣ ಅದು ಕಕ್ಕುಲತೆಯಿಂದ ಧ್ವನಿ ತೆಗೆಯುತ್ತಿತ್ತು. ನಾನು ಹೋಗಿ ಅದರ ಬಾಯಿ ಮುಂದೆ ಕೂಡುತ್ತಿದ್ದೆ. ಅದು ಬಹಳ ಪ್ರೀತಿಯಿಂದ ನನ್ನ ತಲೆ ನೆಕ್ಕುತ್ತಿತ್ತು. ನಂತರ ನೇರವಾಗಿ ಮೊಲೆಗೆ ಬಾಯಿ ಹಚ್ಚಿ ಹಾಲು ಕುಡಿಯುತ್ತಿದ್ದೆ. ನಾನು ಹಾಲು ಕುಡಿಯಲು ಹೋದಾಗಲೆಲ್ಲ ಅದು ತೊರೆ ಬಿಡುತ್ತಿತ್ತು!

ನಮ್ಮ ಹಸುಗಳಿಂದ ಪ್ರತಿದಿನ ಎರಡು ಕೊಡದಷ್ಟು ಹಾಲು ಶೇಖರಣೆಯಾಗುತ್ತಿತ್ತು. ಸೈಕಲ್ ಕ್ಯಾರಿಯರ್‍ಗೆ ಎರಡೂ ಕಡೆ ಕೊಡಗಳನ್ನು ಬಾಬು ಮಾಮಾ ಹಗ್ಗದಿಂದ ಬಿಗಿಯುತ್ತಿದ್ದ. ಹಾಲು ತುಳುಕುದಂತೆ ಅಮರಿ ಕಂಟಿಯ ಕಡ್ಡಿಗಳ ಸೂಡನ್ನು ಕೊಡಗಳ ಬಾಯಿಗೆ ತುರುಕುತ್ತಿದ್ದರು. ಆ ಸೂಡಿನಿಂದ ಹಾಲು ಕೆಡುತ್ತಿರಲಿಲ್ಲ. ಬಾಬು ಮಾಮಾ ಜೊತೆ ಆತನ ಇತರ ಗೆಳೆಯರು ಸೇರಿ ಹತ್ತು ಮೈಲಿ ಸೈಕಲ್ ಸವಾರಿ ಮಾಡುತ್ತ ವಿಜಾಪುರದ ಚಹಾದ ಅಂಗಡಿಗಳಿಗೆ ಹಾಲು ಮಾರಿ ಬರುತ್ತಿದ್ದರು. ಹೀಗೆ ಹಾಲು ಒಯ್ಯುವಾಗ ಒಬ್ಬಾತ ಸೈಕಲ್ ಮೇಲಿಂದ ಬಿದ್ದು ಕಾಲಿಗೆ ಗಾಯ ಮಾಡಿಕೊಂಡ. ನಿಷ್ಕಾಳಜಿಯಿಂದ ಕಾಲಿಗೆ ಗ್ಯಾಂಗರಿನ್ ಆಯಿತು. ವಿಜಾಪುರ ಸರ್ಕಾರಿ ಆಸ್ಪತ್ರೆಗೆ ಹಾಕಿದರು. ಅಸ್ಪತ್ರೆಯ ವಾಸನೆ ಆತನಿಗೆ ಹಿಡಿಸಲಿಲ್ಲ. ವೈದ್ಯರು ಕಾಲು ಕಟ್ ಮಾಡುವುದು ಅನಿವಾರ್ಯ ಎಂದರು. ಆತ ಅದಕ್ಕೊಪ್ಪದೆ ಅಲ್ಲೀಬಾದಿಗೆ ಬಂದ. ಶರೀರ ಊನ ಮಾಡಿಕೊಂಡು ಬದುಕಲೇನು ಎಂದು ಹೇಳಿ ಆಪರೇಷನ್ ಮಾಡಿಕೊಳ್ಳದೆ ಸತ್ತೇ ಹೋದ!

(ಮುಂದುವರಿಯುವುದು)